ಮಹಾವಿಭೂತಿಯೊಳ್ ಕೂಡಿ ಸಂಗ್ರಾಮಮಂ ನೋಡುತ್ತಮಿರೆ ಮತ್ತಶನಿವೇಗಂ ಕುಂಆರನಂ ಕಂಡು ಕ್ರೋಧಾಗ್ನಿ ಪೆರ್ಚಿ ಎನ್ನ ಮಗನಂ ಕೊಂದೊನಂ ಬೇಗಂ ಮೃತ್ಯುರಾಜನಂ ಕಾಣ್ಬಂತಿರೆ ಮಾೞ್ಪೆನೆಂದು ಮುಳಿದು ಮಸಗಿ ಬರ್ಪೊನಂ ಕುಮಾರಂ ಕಂಡಾಗಡೆ ಬಾಣಾಸನುಸ್ತನಾಗಿ ಆರ್ದಚಂದ್ರಮೆಂಬ ಸರದಿಂದಾತನ ತಲೆಯಂ ಮೊಕ್ಕನೆವೋಗೆಚ್ಚಂ ಅದು ಜ್ವಲನ್ಮಣಿಮಕುಟ ಕುಂಡಲಂಗಳಿಂದೊಪ್ಪುತ್ತಿರ್ದುದು ವಿದ್ಯುತ್ಕಪಾಲಂಬೊಲ್ ನೆಲದೊಳ್ ಬಿೞ್ದತ್ತಾಗಳಾ ತಲೆಯಂ ಮಱುವಕ್ಕದರ್ ಕಂಡು ಕೆಲರಂಜಿ ತ್ರಸ್ತಾಭಿಭೂತರಾಗಿಯೋಡಿ ಕೆಲರ್ ಶರಣೆಮದು ಕುಮಾರನ ಕಾಲ್ಗೆಱಗಿ ಪುಲ್ಲಂ ಕರ್ಚಿ ಪೊಡೆವಟ್ಟರಾ ಕುಮಾರನುಮಾಗಳಬೈಘೋಷಣೆಯಂ ಪೊಯ್ದಿಯವರ್ಗ್ಗಭಯದಾನವಮಂ ಕೊಟ್ಟನಾಗಳ್ ಪೋಗಿ ಪೊೞಲಂ ಪೊಕ್ಕು ಪ್ರಶಸ್ತ ದಿನ ವಾರ ನಕ್ಷತ್ರ ಹೋರಾಮುಹೂರ್ತ ಲಗ್ನದೊಳ್ ತನ್ನ ಮಕ್ಕಳ್ ಚಂದ್ರಮತಿ ಚಂದ್ರಶ್ರೀ ಚಂದ್ರಲೇಖೆ ಶಶಿಕಾಂತೆ ಮನೋಹಾರಿಣಿ ಹರಿಣಾಂಕೆ ಕಮಲಮುಖಿ ಪ್ರುದರ್ಶನೆಯೆಂದಿವರ್ ಮೊದಲಾಗೊಡೆಯ ನೂರ್ವರ್ ಕನ್ನೆಯರ್ಕ್ಕಳಂ ಪಾಣೀಗ್ರಹಣಪುರಸ್ಸರಂ ಕೊಟ್ಟನಂತಾ ನೂರ್ವರ್ ಕನ್ನೆಯರ್ಕ್ಕಳುಂ

ಛತ್ರ (ಕೊಡೆ), ಚಾಮರ(ಚೌರಿ), ನವಿಲಗರಿಯ ಕೊಡೆ, ಪಾಳಿಧ್ವಜ, (ಹಾರ, ವಸ್ತ್ರ, ನವಿಲು, ಕಮಲ, ಹಂಸೆ, ಮೀನ, ಸಿಂಹ, ವೃಷಭ, ಆನೆ, ಚಕ್ರ – ಈ ಲಾಂಛನಗಳುಳ್ಳ ಬಾವುಟಗಳ ವ್ಯೂಹ), ಪತಾಕೆ – ಮುಂತಾದ ಮಹಾ ವೈಭವದಿಮದ ಕೂಡಿ ಯುದ್ದವನ್ನು ನೋಡುತ್ತ ಇದ್ದನು. ಆ ಮೇಲೆ ಆಶನಿವೇಗನು ಕುಮಾರನನ್ನು ಕಂಡಾಗ ಕೋಪವೆಂಬ ಬೆಂಕಿ ಹೆಚ್ಚಾಗಿ “ನನ್ನ ಮಗನನ್ನು ಕೊಂದವನನ್ನು ಬೇಗನೆ ಮರಣದ ರಾಜನನ್ನು ಕಾಣುವ ಹಾಗೆ ಮಾಡುವೆನು* ಎಂದು ಕೋಪೋದ್ರೇಕಗೊಂಡು ಬರುತ್ತಿದ್ದನು. ಅವನನ್ನು ಕುಮಾರನು ಕಂಡೊಡನೆಯೇ ಬಿಲ್ಲನ್ನು ಹಿಡಿದು ಆರ್ಧಚಂದ್ರವೆಂಬ ಬಾಣದಿಂದ ಆತನ ತಲೆಯನ್ನು ಮೊಕ್ಕೆಂದು ಕತ್ತರಿಸಿ ಹೊಗುವಂತೆ ಹೊಡೆದನು. ಆ ತಲೆ ಹೊಳೆಯುವ ರತ್ನಗಳ ಕಿರೀಟಕುಂಡಲಗಳಿಂದ ಶೋಭಿಸುತ್ತಿದ್ದುದು ಮಿಂಚಿನ ತಲೆಬುರುಡೆಯೋ ಎಂಬಂತೆ ನೆಲದ ಮೆಲೆ ಬಿದ್ದಿತು ಆಗ ಆ ತಲೆಯನ್ನು ಪ್ರತಿಪಕ್ಷದವರು ಕಂಡರು. ಅವರಲ್ಲಿ ಕೆಲವರು ಹೆದರಿ, ಭಯದಿಂದ ಹೊಡೆಯಲ್ಪಟ್ಟವರಾಗಿ ಓಡಿದರು. ಕೆಲವರು ‘ಶರಣು’ ಎಂದು ಕುಮಾರನ ಕಾಲಿಗೆರಗಿದರು, ಕೆಲವರು ಹುಲ್ಲನ್ನು ಕಚ್ಚಿ ಸಾಷ್ಟಾಂಗವಂದನೆ ಮಾಡಿದರು. ಆಗ ಕುಮಾರನು ಆಭಯಘೋಷಣೆಯನ್ನು ಹೊಡೆಸಿ ಅವರಿಗೆಲ್ಲ ಅಭಯಧಾನವನ್ನಿತ್ತನು. ಆಗ ಚಂದ್ರವೇಗನು ಯುದ್ದರಂಗವನ್ನು ಪೂಜಿಸಿ ದೊಡ್ಡ ವೈಭವದಿಂದ ಕುಮಾರನನ್ನು ಕೂಡಿಕೊಂಡು ಹೋಗಿ ಪಟ್ಟಣವನ್ನು ಹೊಕ್ಕು ಒಳ್ಳೆಯ ದಿನ ವಾರ ನಕ್ಷತ್ರ ಹೋರಾ ಮುಹೂರ್ತ ಲಗ್ನದಲ್ಲಿ ತನ್ನ ಮಕ್ಕಳಾದ ಚಂದ್ರಮತಿ ಚಂದ್ರಶ್ರೀ ಚಂದ್ರಲೇಖೆ ಶಶಿಕಾಂತೆ ಮನೋಹಾರಿಣಿ ಹರಿಣಾಂಕೆ ಕಮಲಮುಖಿ ಪ್ರಿಯದರ್ಶನೆ – ಎಂದು ಇವರೇ ಮೊದಲಾಗಿರುವ ನೂರು ಮಂದಿ ಕನ್ಯೆಯರನ್ನು ಪಾಣಿಗ್ರಹಣಪೂರ್ವಕನಾಗಿ ಕೊಟ್ಟನು. ಅಂತು ಆ ನೂರು ಮಂದಿ ಕನ್ಯೆಯರೂ ಹಿಂದಿನ ಬೇರೆ ವಿದ್ಯಾಧರಯುವತಿಯರು –

ಮುನ್ನಿನ ಖೇಚರಿಯರ್ಕ್ಕಳುಂ ಪೆಱವುಮೆಂದಿವರೊಳ್ ಕೂಡಿ ಕುಮಾರಂ ವಿದ್ಯಾಧರಶ್ರೇಣಿಯೊಳ್ ಸುಖಮನನುಭವಿಸತ್ತಿರ್ಪ್ಪನ್ನೆಗಂ ಮತ್ತೊಂದುದಿವಸಂ ಚಂದ್ರವೇಗಂ ಸಿದ್ದಕೂಟಕ್ಕೆ ವಂದನಾಭಕ್ತಿಗೆ ವೋಗಿ ದೇವನನರ್ಚಿಸಿ ವಂದಿಸಿ ಸುಮಾಳಿಗಳೆಂಬವಜ್ಞಾನಿಗಳಪ್ಪ ಚಾರಣಸಿರಿಯರಂ ಗುರುಭಕ್ತಿಗೆಯ್ದು ವಂದಿಸಿ ಧರ್ಮಮಂ ಕೇಳ್ದು ತದನಂತರಮಿಚಿತೆಂದು ಐಟಾರಾ ಸನತ್ಕುಮಾರಂಗಂ ಸಿತಯಕ್ಷಂಗಂ ವೈರಸಂಬಂಧಕ್ಕೆ ಕಾರಣಮೇನೆಂದು ಬೆಸಗೊಂಡೊಡೆ ಭಟಾರರುಂ ತತ್ಸಂಬಂಯಪ್ಪ ಸಿತಯಕ್ಷಂಗಂ ವೈರಸಂಬಂಧಕ್ಕೆ ಕಾರಣಮೇನೆಂದು ಬೆಸಗೊಂಡೊಡೆ ಭಟಾರರುಂ ತತ್ಸಂಬಂಯಪ್ಪ ಕಥೆಯನಿಂತೆಮದು ಪೇೞಲ್ ತೊಡಗಿದರ್ ಈ ಜಂಬೂದ್ವೀಪದ ಭರತಕ್ಷೇತ್ರದೊಳ್ ಮಗಧೆಯೆಂಬುದು ನಾಡಲ್ಲಿ ಕಾಂಚನಮೆಂಬುದು ಪೊೞಲದನಾಳ್ರ್ವೆಂ ಪ್ರತಿಮುಖನೆಂಬರಂನಷ್ಟಶತಮಂತಪುರಕ್ಕಪನಾಗಿ ಕಾಲಂ ಸಲೆ ಮತ್ತಾ ಪೊೞಲೊಳ್ ನಾಗಚಂದ್ರನೆಂಬೋಂ ಸಾರ್ಥಾಪತಿಯಾತನ ಭಾರ್ಯೆ ವಿಷಗಣುಶ್ರೀಯೆಂಬೊಳತ್ತಂತ ರೂಪಲಾವನ್ಯ ಸೌಭಾಗ್ಯ ಕಾಂತಿ ಭಾವ ವಿಳಾಸ ವಿಭ್ರಮಂಗಳಿಂ ಕೂಡಿದೊಳೊಂದು ದಿವಸಂ ಅರಸನುದ್ಯಾನವನಕ್ಕೆ ಪೋಗುತ್ತಂ ಪ್ರಾಸಾದದೊಳಿರ್ದ ದೇವಾಂಗನಾಸನ್ನಿಭೆಯಪ್ಪಳಂ ಕಂಡು ಕಾಮಶರಂಗಳಿಂ ಜರ್ಝರಿತಹೃದಯನಾಗಿ ಮಂತ್ರಪ್ರಯೋಗದಿಂದಂ ವಿಷ್ಣುಶ್ರೀಯನೊಳಕೊಂಡ ನಾಕೆಯುಮಾತಂಗಗ್ರವಲ್ಲಭೆಯಾಗಿ ಸಲ್ವೊಳಂ ಸಮಸ್ತಮಂತಃಪುರಮಾಕೆಗೆ ಮುಳಿಯಿತ್ತಿರ್ಕುಮೊಂದು ದಿವಸಂ ಸಾರ್ವಭೌಮನೆಂಬ ಪಟ್ಟವರ್ಧನಗಜಂ ಸೊರ್ಕಿ ಮಸಗಿ ಕಟ್ಟುಗಳೆಲ್ಲಮಂ ಪಱದು

ಎಲ್ಲರನ್ನು ಕೂಡಿಕೊಂಡು ಸನತ್ಕುಮಾರನು ವಿದ್ಯಾಧರರ ಸಾಲಿನಲ್ಲಿದ್ದು ಸುಖವನ್ನು ಅನುಭವಿಸುತ್ತ ಇದ್ದನು. ಹೀಗಿರಲು, ಮತ್ತೊಂದು ದಿವಸ ಚಂದ್ರವೇಗನು ಸಿದ್ದರಿರತಕ್ಕ ಪರ್ವತಶಿಖರಕ್ಕೆ ವಂದನೆಯ ಭಕ್ತಿಗೋಸ್ಕರ ಹೋದನು. ಅಲ್ಲಿ ದೇವರನು ಪೂಜಿಸಿ, ನಮಸ್ಕರಿಸಿ ಸುಮಾಳಿಗಳೆಂಬ ಅವಜ್ಞಾನಿಗಳಾದ ಚಾರಣಋಷಿಗಳಲ್ಲಿ ಗುರುಭಕ್ತಿಯನ್ನು ಆಚರಿಸಿ ಅವರನ್ನು ವಂದಿಸಿ ಧರ್ಮೋಪದೇಶಗಳನ್ನು ಕೇಳಿದನು. ಅನಂತರ ಹೀಗೆಂದನು – “ಪೂಜ್ಯರೇ ಸನತ್ಕುಮಾರನಿಗೂ ಸಿತಯಕ್ಷನಿಗೂ ದ್ವೇಷಸಂಬಂಧಕ್ಕೆ ಕಾರಣವೇನು? * ಎಂದು ಕೇಳಲು ಸ್ವಾಮಿಗಳು ಅದಕ್ಕೆ ಸಂಬಂಸಿದ ಕಥೆಯನ್ನು ಹೀಗೆ ಹೇಳತೊಡಗಿದರು. ಈ ಜಂಬೂದ್ವೀಪದ ಭರತಕ್ಷೇತ್ರದಲ್ಲಿ ಮಗಧೆಯೆಂಬ ನಾಡಿನಲ್ಲಿ ಕಾಂಚನವೆಂಬ ಪಟ್ಟಣವಿದೆ. ಅದನ್ನು ಪ್ರತಿಮುಖನೆಂಬ ರಾಜನು ಆಳುತ್ತಿದ್ದನು. ಅವನು ಎಂಟನೂರು ಅಂತಃಪುರ ಸ್ತ್ರೀಯರಿಗೆ ಒಡೆಯನಾಗಿದ್ದನು. ಹೀಗೆ ಕಾಲ ಕಳೆಯಿತು. ಆಮೇಲೆ, ಆ ಪಟ್ಟಣದಲ್ಲಿ ನಾಗಚಂದ್ರನೆಂಬ ವ್ಯಾಪಾರಿಯಿದ್ದನು. ಅವನು ಸಾರ್ಥಾಪತಿಯಾಗಿದ್ದನು. (ಊರಿಂದುರಿಗೆ ಹೋಗಿ ಸರಕುಗಳನ್ನು ಮಾರುವವರ ಶ್ರೇಣಿಗೆ ಒಡೆಯ). ಅವನ ಪತ್ನಿಯಾದ ವಿಷ್ಣುಶ್ರೀಯೆಂಬವಳು ಅತಿಶಯ ರೂಪ, ಲಾವಣ್ಯ, ಸೌಭಾಗ್ಯ, ಕಾಂತಿ, ಹಾವ, ಭಾವ, ವಿಲಾಸ, ವಿಭ್ರಮಗಳಿಂದ ಕೂಡಿದವಳು. ಒಂದು ದಿನ ರಾಜನು ಉದ್ಯಾನಕ್ಕೆ ಹೋಗುವಾಗ ದೊಡ್ಡ ಮನೆಯಲ್ಲಿ ಇದ್ದ ದೇವತಾಸ್ತ್ರೀಯಂತಿದ್ದ ಆಕೆಯನ್ನು ಕಂಡನು. ಕಾಮನ ಬಾಣಗಳಿಂದ ನುಜ್ಜುಗುಜ್ಜಾದ ಮನುಸುಳ್ಳವನಾಗಿ ಮಂತ್ರಶಕ್ತಿಯನ್ನು ಉಪಯೋಗಿಸಿ ವಿಷ್ಣುಶ್ರೀಯನ್ನು ವಶಪಡಿಸಿಕೊಂಡನು. ಆಕೆ ಅವನಿಗೆ ಇತರರಿಗಿಂತ ಮೇಲಿನ ಹೆಂಡತಿಯಾಗಿ ನಡೆಯುತ್ತಿದ್ದಳು. ರಾಜನ ಅಂತಃಪುರದವರೆಲ್ಲ ಅಕೆಯ ಮೇಲೆ ಸಿಟ್ಟಿನಿಂದಿದ್ದರು. ಒಂದು ದಿವಸ ಸಾರ್ವಭೌಮ ಎಂಬ ಪಟ್ಟದಾನೆ ಸೊಕ್ಕಿ ಉದ್ರೇಕಗೊಂಡು

ಹತತವಿತಕೋಳಾಹಳಮೆೞೆದು ಪೊೞಲೆಲ್ಲಮಂ ಕೊಲ್ವುದನರಸಂ ಕೇಳ್ದಾನೆಯಂ ಕಟ್ಟಿಸಲೆಂದು ಪೋದನನ್ನೆಗಮಿತ್ತ ಅನಿಬರರಸಿಯರ್ಕಳ್ ನೆರೆದು ವಿಷಪ್ರಯೋಗದಿಂದಂ ಕೊಂದಾರುಮಱಯದಂತಿರೆ ಶ್ಮಶಾನದೊಳೀಡಾಡಿದೊರನ್ನೆಗಮರಸನುಮಾನೆಯುಮಂ ಕಟ್ಟಿಸಿ ಬಂದರಸಿಯಂ ಕಾಣದೆಲ್ಲರ್ದಳೆಂದು ಬೆಸಗೊಂಡೆಡೆ ಸತ್ತಳೆಂಬಾ ಮಾತಂ ಕೇಳ್ದು ಮೂರ್ಛಿತನಾಗಿ ಕಟ್ಟಿಸಿ ಬಂದಂರಸಿಯಂ ಮಹಾದುಃಖಂಗೆಯ್ದು ಶ್ಮಶಾನಕ್ಕಾಕೆಯ ದೇಹಮಂ ನೋಡಲೆಂದು ಪೋಗಿಯದಱ ಬೀಭತ್ಸಮಂ ಕಂಡಾದಮಾನುಂ ಪೇಸಿ ಶರೀರವೈರಾಗ್ಯಮನೊಡೆಯಾಗಿ ಅನ್ಯಾಯದಿಂ ಪರಸ್ತ್ರೀಹರಣಂ ಗೆಯ್ದೆಂ ಮಹಾಪಾತಕನೆನೆಂದು ತನ್ನ ತಾನಾದಮಾನುಂ ನಿಂದಿಸಿ ವಿಮಳವಾಹನೆಂಬ ಪಿರಿಯ ಮಗಂಗೆ ರಾಜ್ಯ ಪಟ್ಟಂಗಟ್ಟಿ ಸುವ್ರತೆರೆಂಬಾಚಾರ್ಯರ ಪಕ್ಕದೆ ದೀಕ್ಷೆಯಂ ಕೈಕೊಂಡು ಪಲಕಾಲಂ ತಪಂಗೆಯ್ದು ಸಮಾಮರಣದಿಂ ಮುಡಿಪಿ ಪ್ರಾಣತಕಲ್ಪದೊಳಿರ್ಪ್ಪತ್ತು ಸಾಗರೋಪಮಾಯುವ್ಯಸ್ಥಿತಿಯ ನೊಡೆಯೊಂ ಪ್ರತೀಂದ್ರನಾಗಿ ಪುಟ್ಟಿ ದೇವಲೋಕದ ದಿವ್ಯಸುಖಮಂ ಪಲಕಾಲಮನುಭವಿಸಿ ಬಮದಿಲ್ಲಿ ಜಂಬೂದ್ವೀಪದ ಭರತಕ್ಷೇತ್ರದೊಳ್ ಮಗಧೆಯೆಂಬುದು ನಾಡಲ್ಲಿ ಕನಕಮೆಂಬುದು ಪೊೞಲದನಾಳ್ವೊಂ ಹರಿವಾಹನನೆಂಬರಸಂ ಮತ್ತಮಾ ಪೊೞಲೊಳ್ ರಾಜಶ್ರೇಷ್ಠಿ ಅರ್ಹದ್ದಾಸನೆಂಬೊನಾತನ ಭಾರ್ಯೆ

ಕಟ್ಟುಗಳನ್ನೆಲ್ಲ ಕಡಿದುಕೊಂಡು ಯದ್ವಾತದ್ವಾ ಗದ್ದಲವನ್ನುಂಟುಮಾಡಿ ಎಳೆದುಕೊಂಡು ಪಟ್ಟಣದಲ್ಲೆಲ್ಲಾ ಸಿಕ್ಕಿಸಿಕ್ಕಿದವರನ್ನು ಕೊಲ್ಲತೊಡಗಿದತು. ರಾಜನು ಇದನ್ನು ಕೇಳಿ ಆನೆಯನ್ನು ಹಿಡಿದು ಬಂಸುವುದಕ್ಕಾಗಿ ಹೋದನು. ಆ ವೇಳೆಯಲ್ಲಿ ಇತ್ತ ಆಂತಃಪುರದ ಅಷ್ಷೊಂದು ಮಂದಿ ಅರಸಿಯರು ಒಟ್ಟುಗೋಡಿ ವಿಷ್ಣುಶ್ರೀಯನ್ನು ವಿಷಪ್ರಯೋಗದಿಂದ ಕೊಂದು ಯಾರೊಬ್ಬರೂ ತಿಳಿಯದ ಹಾಗೆ ಶ್ಮಶಾನದಲ್ಲಿ ಬಿಸಾಡಿದರು. ಅಷ್ಟರಲ್ಲಿ ರಾಜನು ಆನೆಯನ್ನು ಕಟ್ಟಿಸಿ ಹಿಂದಕ್ಕೆ ಬಂದು ರಾಣಿಯನ್ನು ಕಾಣದೆ, ಆಕೆ ಎಲ್ಲಿದ್ದಾಳೆ?’ ಎಂದು ಕೇಳಿದನು. ‘ಸತ್ತಳು’ ಎಂಬ ಸುದ್ದಿಯನ್ನು ಕೇಳಿ ಮೂರ್ಛೆಹೋದನು. ಹೆಚ್ಚು ಹೊತ್ತಿನ ಮೇಲೆ ಎಚ್ಚರಗೊಂಡು ಮಹಾದುಃಖವನ್ನು ತಾಳುತ್ತ ಆಕೆಯ ಶರೀರವನ್ನು ನೋಡುವುದಕ್ಕಾಗಿ ರುದ್ರಭೂಮಿಗೆ ಹೋದನು. ಅಲ್ಲಿ ಜುಗುಪ್ಸೆಯನ್ನುಂಟುಮಾಡುವ ಹೆಣದ ರೂಪವನ್ನು ಕಂಡು ಅತಿಶಯವಾಗಿ ಹೇಸಿಕೆ ಪಟ್ಟು ದೇಹದ ಮೇಲೆ ವೈರಾಗ್ಯವುಳ್ಳವನಾದನು. “ಅನ್ಯಾಯದಿಂದ ಬೇರೆಯವರ ಹೆಂಡಿತಿಯನ್ನು ಅಪಹರಣ ಮಾಡಿದೆನು, ಮಹಾಪಾಪಿಯಾಗಿರುವೆನು* ಎಂದು ತನ್ನನ್ನು ತಾನು ಅತ್ಯಂತವಾಗಿ ಹಳಿದುಕೊಂಡನು, ಆಮೇಲೆ ವಿಮಳವಾಹನನೆಂಬ ಹಿರಿಯ ಮಗನಿಗೆ ರಾಜ್ಯಪಟ್ಟವನ್ನು ಕಟ್ಟಿ ಸುವ್ರತರೆಂಬ ಆಚಾರ್ಯರ ಬಳಿಯಲ್ಲಿ ಜೈನದೀಕ್ಷೆಯನ್ನು ಸ್ವೀಕರಿಸಿದನು. ಹಲವು ಕಾಲದವರೆಗೆ ತಪಸ್ಸನ್ನು ಆಚರಿಸಿ ಸಮಾಮರಣದಿಂದ ಸತ್ತು ಪ್ರಾಣತವೆಂಬ ಸ್ವರ್ಗದಲ್ಲಿ ಇಪ್ಪತ್ತು ಸಾಗರವನ್ನು ಹೋಲುವ ದೀರ್ಘಕಾಲದ ಆಯುಷ್ಯವುಳ್ಳ ಪ್ರತಿದೇವೇಂದ್ರನಾಗಿ ಹುಟ್ಟಿದನು. ಹಲವು ಕಾಲ ದೇವಲೋಕದ ಸುಖವನ್ನನುಭವಿಸಿ ಬಂದನು – ಎಲ್ಲಿ ಜಂಬೂದ್ವೀಪದ ಭರತಕ್ಷೇತ್ರದಲ್ಲಿ ಮಗಧೆಯೆಂಬ ನಾಡಿನ ಕನಕಪುರವನ್ನು ಆಳುವ ಹರಿವಾಹನನೆಂಬ ರಾಜನಿದ್ದನು. ಅನಂತರ, ಅದೇ ಪಟ್ಟಣದಲ್ಲಿ ರಾಜಶ್ರೇಷ್ಠಿಯಾಗಿ ಅರ್ಹದ್ದಾಸನೆಂಬವನಿದ್ದನು. ಅವನ ಹೆಂಡತಿ ಜಿನದತ್ತೆ. ಆ ಇಬ್ಬರಿಗೆ ಜಿನವರ್ಮನೆಂಬ ಮಗನಾಗಿ (ಆ ಪ್ರತಿಮುಖನಾಗಿದ್ದವದು) ಹುಟ್ಟಿದನು. ಜಿನವರ್ಮನು ಹೆಚ್ಚಾದ ರೂಪ –

ಜಿನದತ್ತೆಯೆಂಬೊಳಾ ಇರ್ವ್ವರ್ಗಂ ಮಗಂ ಜಿನವರ್ಮನೆಂಬೊನಾಗಿ ಪುಟ್ಟಿ ರೂಪ ಲಾವಣ್ಯ ಸೌಭಾಗ್ಯ ಕಾಂತಿತ್ವದಿಂದಾದಮಾನುಂ ನೆಱೆದೊನಾಗಿ ಇಂತು ಕಾಲಂ ಮಲೆ ಅರ್ಹದ್ವಾಸಂಗೇನಾನುವೊಂದು ಕಾರಣದಿಂದಂ ವೈರಾಗ್ಯಮಾಗಿ ಜಿನವರ್ಮಂಗೆ ರಾಜಶ್ರೇಷ್ಠಿಪದಮಂ ಕೊಟ್ಟು ಶಿವಗುಪ್ತಾಚಾರ್ಯರ ಪಕ್ಕದೆ ದೀಕ್ಷೆಯಂ ಕೈಕೊಂಡು ತಪಂಗೈಯ್ದುಮೋಕ್ಷಕ್ಕೆ ವೋದನ್ ಮತ್ತಿತ್ತ ಜಿನವರ್ಮನುಂ ಪಲವುಂ ಜಿನಾಲಯಂಗಳಂ ಮಾಡಿಸಿ ದಾನಶ್ರೀಯೆಂಬ ಪೂಜೆ ಶಿಲೋಪವಾಸಮೆಂದಿಂತು ಚತುರ್ವಿಧಮಪ್ಪ ಶ್ರಾವಕಧರ್ಮದೊಳಗ್ಗಳನಾಗಿ ನೆಗೞುತ್ತಮಿಂತು ಪಲಕಾಲಂ ಸಲೆ ಮತ್ತಾ ಮುನ್ನಿನ ಭವದ ನಾಗಚಂದ್ರನೆಂಬೊಂ ಸಾರ್ಥಾಪತಿ ವಿಷ್ಣು ತನ್ನ ಭಾರ್ಯೆಯ ವಿಯೋಗಂ ಕಾರಣವಾಗಿ ಆರ್ತಧ್ಯಾನದಿಂ ಸತ್ತು ತಿರ್ಯಙ್ನರಕಾದಿಗಳೊಳ್ ಪಲಕಾಲಂ ತೊೞಲ್ದೀ ಭರತಕ್ಷೇತ್ರದೊಳ್ ಕಪಿಲನೆಂಬ ಪಾರ್ವ್ವಂಗಂ ಗಂಗೆಯೆಂಬ ಪಾರ್ವ್ವಂತಿಗಂ ಭಾರದ್ವಾಜನೆಂಬ ಮಗನಾಗಿ ಪುಟ್ಟಿ ಕನಕದಂಡಿಯೆಂಬ ಪರಿವ್ರಾಜಕಂಗೆ ಶಿಷ್ಯನಾಗಿ ನಾನಾದೇಶಂಗಳಂ ವಿಹಾರಿಸುತ್ತಂ ಕನಕಪುರಕ್ಕೆ ವಂದು ಮಾಸೋಪವಾಂಗೆಯ್ಯುತ್ತಂ ಮಹಾತಪಸ್ವಿಯಾಗಿ ನೆಗೞುತ್ತಿರೆ ತತ್ಪುರಾಪಂ ಹರಿವಾಹನನೆಂಬರಸಂ ಕಂಡಾದಮಾನುಮಾ ತಪಸ್ವಿಗೆ ಭಕ್ತನಾಗಿ ಬೆಸಕೆಯ್ಯೆ ಕಾಲಂ ಸಲೆ ಮತ್ತೊಂದು ದಿವಸಮರಸ ನೊಡನೆ ಜಿನವರ್ಮನಾ ಪರಿವ್ರಾಜಕನ ನಿವಾಸಕ್ಕೆ ವೋದೊಡೆ ಜಿನವರ್ಮನಂ ಕಂಡು ಪೂರ್ವವೈರಸಂಬಂಧದಿಂದಾದ ಕ್ರೋಧಾಗ್ನಿ ಪೆರ್ಚಿ ಮಱುಗುತ್ತಿರ್ದ್ದ ಮನಮನ್ರೆಡಯ ತಪಸ್ವಿಯನರಸನಿಂತೆಂದಂ ನೀಮಮ್ಮ ಮನೆಯೊಳ್ ಪಾರಿಸಲ್ವೇಳ್ಟುದೆಂದು ಪ್ರಾರ್ಥಿಸಿದೊಡಾತನಿಂತೆಂದಂ ಒಂದು ಪಾಂಗಿನೊಳ್ ನಿಮ್ಮ ಮನೆಯೊಳ್ ಪಾರಿಸುವೆನೀ ಜಿನವರ್ಮನ ಬೆನ್ನೊಳಡಿಯಿಲ್ಲದ ತಳಿಗೆಯನಿಟ್ಟು ಬಿಸಿಯ ತುಯ್ಯಲನುಣ್ಬುದೆನ

ಲಾವಣ್ಯ – ಸೌಭಾಗ್ಯ – ತೇಜಸ್ಸುಗಳಿಂದ ಕೂಡಿದ್ದನು. ಹೀಗೆಯೇ ಕಾಲಕಳೆಯಲು ಅರ್ಹದ್ದಾಸನಿಗೆ ಏನೋ ಒಂದು ಕಾರಣದಿಂದ ವೈರಾಗ್ಯವುಂಟಾಯಿತು. ಅವನು ಜಿನವರ್ಮನಿಗೆ ರಾಜಶ್ರೇಷ್ಠಿ ಪದವಿಯನ್ನು ಕೊಟ್ಟು ಶಿವಗುಪ್ತಾಚಾರ್ಯರ ಬಳಿಯಲ್ಲಿ ದೀಕ್ಷೆಯನ್ನು ಸ್ವೀಕರಿಸಿ ತಪಸ್ಸನ್ನು ಮಾಡಿ ಮೋಕ್ಷಕ್ಕೆ ಹೋದನು. ಆಮೇಲೆ ಇತ್ತ ಜಿನವರ್ಮನ ಹಲವು ಜಿನಾಲಯಗಳನ್ನು ಮಾಡಿಸಿ ದಾನ, ಪೂಜೆ, ಶೀಲ, ಉಪವಾಸ, ಎಂಬ ನಾಲ್ಕು ವಿಧದ ಶ್ರಾವಕಧರ್ಮದಲ್ಲಿ (ಜೈನಗೃಹಸ್ಥಧರ್ಮದಲ್ಲಿ) ಶ್ರೇಷ್ಠನಾಗಿ ಆಚರಿಸುತ್ತ ಹೀಗೆಯೇ ಹಲವು ಕಾಲ ಕಳೆಯಿತು. ಆಮೇಲೆ, ಆ ಹಿಂದಿನ ಜನ್ಮದ ನಾಗಚಂದ್ರನೆಂಬ ವರ್ತಕನು ವಿಷ್ಣುಶ್ರೀಯೆಂಬ ತನ್ನ ಹೆಂಡತಿಯ ಅಗಲಿಕೆಯ ಕಾರಣದಿಂದ ಆರ್ತಧ್ಯಾನದಿಂದ ಸತ್ತು ಪ್ರಾಣಿಪಕ್ಷಿಜನ್ಮಗಳಲ್ಲಿಯೂ ನರಕಗಳಲ್ಲಿಯೂ ಹಲವು ಕಾಲ ಸುತ್ತಾಡಿ ಈ ಭರತಕ್ಷೇತ್ರದಲ್ಲಿ ಕಪಿಲನೆಂಬ ಬ್ರಾಹ್ಮಣನಿಗೂ ಗಂಗೆಯೆಂಬ ಬ್ರಾಹ್ಮಣಿತಿಗೂ ಭಾರಧ್ವಜನೆಂಬ ಮಗನಾಗಿ ಹುಟ್ಟಿದನು. ಅವನು ಕನಕದಂಡಿಯೆಂಬ ಸಂನ್ಯಾಸಿಗೆ ಶಿಷ್ಯನಾಗಿ ಹಲವಾರು ದೇಶಗಳನ್ನು ಸಂಚಾರಮಾಡುತ್ತ ಕನಕಪುರಕ್ಕೆ ಬಂದು ಒಂದು ತಿಂಗಳ ಉಪವಾಸವನ್ನು ಮಾಡುತ್ತ ದೊಡ್ಡ ತಪಸ್ವಿಯಾಗಿ ಆಚರಿಸುತ್ತಿದ್ದನು. ಆ ಪಟ್ಟಣದ ಹರಿವಾಹನನೆಂಬ ರಾಜನು ಕಂಡು ಆ ತಪಸ್ವಿಗೆ ವಿಶೇಷ ಭಕ್ತನಾಗಿ ಸೇವೆಮಾಡುತ್ತಿದ್ದನು. ಕಾಲಕಳೆಯಲು ಮತ್ತೊಂದು ದಿನ ಜಿನವರ್ಮನು ಅರಸನೊಂದಿಗೆ

ಆ ಸಂನ್ನಯಾಸಿಯ ವಾಸಸ್ಥಳಕ್ಕೆ ಹೋದನು. ಆಗ ತಪಸ್ವಿಯು ಜಿನವರ್ಮವನನ್ನು ಕಂಡು ಪೂರ್ವಜನ್ಮದ ವೈರದಿಂದ ಸಿಟ್ಟೆಂಬ ಬೆಂಕೆ ಹೆಚ್ಚಾಗಿ, ಕುದಿಯುವ ಮನಸುಳ್ಳವನಾಗಿದ್ದನು. ಅಂತಹ ತಪಸ್ವಿಯನ್ನು

ಗೞಯೀ ಪಾಂಗಿನೊಳೆನ್ನನೂಡಲಾರ್ಪೊಡುಣ್ವಿನಲ್ಲದಾಗಳುಣ್ಣೆನೆಂದು ಪೇೞ್ದೊಡೆ ಕೇಳ್ದಚ್ಚಿಗನಾದರಸನಂ ಜಿನವರ್ಮಂ ಕಂಡಿಂತೆಂದಂ ದೇವಾ ತಪಸ್ವಿಗಾವ ಪಾಂಗಿನೊಳ್ ಮೆಚ್ಚು ಮೆಚ್ಚಿದ ಪಾಂಗಿನೊಳುಣ್ಗೆಂದೊಡಂಬಟ್ಟನಾಗಳಾ ಗರ್ಭಸುಖಿಯ ಬೆನ್ನೊಳ್ ಪಿರಿಯ ಪರಿಯಾಣಮನಿಟ್ಟದಂ ತೆಕ್ಕನೆ ತೀವಿ ಬಡ್ಡಿಸಿದೊಡೆ ಕುದಿಯುತ್ತಿರ್ದ್ದ ತುಯ್ಯಲಂ ತಣ್ಣಿತ್ತಾಗಿಯಾಱುವನ್ನೆಗಂ ಪಾರುತ್ತಿರ್ದ್ದು ನೀಡುಂ ಬೇಗಮುಂಡು ಸಮೆದ ಬೞಕ್ಕೆ ತಳಿಗೆಯನೆತ್ತಿದೊಡಾ ತಳಿಗೆಯೊಡನೆ ಬೆನ್ನತೊವಲೆಲ್ಲಮೆರ್ದುಪೋದುದನರಸಂ ಕಂಡೀತಂ ತಪಸ್ವಿಯಲ್ಲಂ ರಾಕ್ಷಸಂ ಪಂಚಮಹಾಪಾತಕನನೀ ಪೊೞಲೊಳಿರಲೀಯದಟ್ಟಿ ಕಳೆಯಿಮೆಂದು ನೃಪತಿ ಮುಳಿದೊಡೆ ಜಿನವರ್ಮಂ ತಪಸ್ವಿಗೆ ಮುಳಿಯಲ್ವೇಡೆಂದು ಬಾರಿಸಿ ಈತಂಗೇನುಂ ದೋಷಮಿಲ್ಲೆನ್ನ ಪೂರ್ವಕೃತಕರ್ಮಫಳವಿಪಾಕಮೆಂದು ನೃಪತಿಗೆ ಪೇೞ್ದು ಪರಿವ್ರಾಜಕಂಗೆ ನಿಶ್ಯಲ್ಯಂಗೆಯ್ದರಸನುಮಂ ಸ್ವಜನ ಪರಿಜನ ಬಂಧುವರ್ಗಮುಮಂ ಬಿಡಿಸಿ ಶ್ರೀವರ್ಮರೆಂಬಾಚಾರ್ಯರ ಪಕ್ಕದೆ ದೀಕ್ಷೆಯಂ ಕೈಕೊಂಡು ಮಹಿಷಗಿರಿಯೆಂಬ ಪರ್ವತದೊಳೀ ಪುಣ್ ತೀರ್ವನ್ನೆಗಂ ಕೈಯನೆತ್ತಕೊಳ್ಳೆನೆಂದು ಕಾಯೋತ್ಸರ್ಗದಿಂ ನಿಂದೊನಂ ಗೃಧ್ರವಾಯಸಾದಿಗಳ್ ಪುಣ್ಣಂ ತೋಡಿ ತಿನೆ ಮೇರುಪರ್ವತಂಬೊಲಚಳಿತಧೈರ್ಯನಾಗೊಂದು ತಿಂಗಳ್ವರೆಗಂ ಸೈರಿಸಿ

ಕುರಿತು ರಾಜನು – “ನೀವು ನಮ್ಮ ಮನೆಯ ಊಟವನ್ನು ಸ್ವೀಕರಿಸಬೇಕು* ಎಂದು ಪ್ರಾರ್ಥಿಸಿದನು. ಆಗ ಅವನು ಹೀಗೆಂದನು – “ಒಂದು ರೀತಿಯಲ್ಲಿ ನಿಮ್ಮ ಮನೆಯಲ್ಲಿ ಊಟಮಾಡುವೆನು – ಈ ಜಿನವರ್ಮನ ಬೆನ್ನಿನ ಮೇಲೆ ಅಡಿಯಿಲ್ಲದ ತಟ್ಟೆಯನ್ನಿಟ್ಟು ಬಿಸಿ ಪಾಯಸವನ್ನು ಉಣ್ಣುವುದು ನನಗೆ ಪ್ರೀತಿ ಈ ರೀತಿಯಲ್ಲಿ ನನಗೆ ಬಡಿಸುವುದಾದರೆ ಊಟಮಾಡುವೆನು, ಅದಲ್ಲವಾದರೆ ಉಣ್ಣೆನು* – ಎಂದು ಹೇಳಿದಾಗ ಕೇಳಿ ವ್ಯಥಿತನಾದ ಅರಸನನ್ನು ಜಿನವರ್ಮನು ಕಂಡು ಹೀಗೆಂದನು. – “ದೇವಾ, ಸಂನ್ಯಾಸಿಗೆ ಯಾವರೀತಿ ಮೆಚ್ಚುಗೆಯೋ ಅಂತಹ ಮೆಚ್ಚಿನ ರೀತಿಯಲ್ಲಿಯೇ ಉಣ್ಣಲಿ* ಎಂದು ಒಪ್ಪಿದನು. ಆಗ ಜನ್ಮಸುಖಿಯಾದ ಅವನ ಬೆನ್ನ ಮೇಲೆ ದೊಡ್ಡ ಹರಿವಾಣವನ್ನಿಟ್ಟು, ಕುದಿಯುವ ಪಾಯಸವನ್ನು ಅದು ಭರ್ತಿಯಾಗಿ ತುಂಬುವಂತೆ ಬಡಿಸಲು ಅದು ತಣ್ಣಗೆ ಆರುವ ತನಕವೂ ನಿರೀಕ್ಷಿಸುತ್ತಿದ್ದು ಬಹಳ ಬೇಗ ಊಟಮಾಡಿ ಮುಗಿದ ಮೇಲೆ ತಟ್ಟೆಯನ್ನು ಎತ್ತಿದಾಗ ಆ ತಟ್ಟೆಯೊಂದಿಗೆ ಬೆನ್ನ ಚರ್ಮವೆಲ್ಲಾ ಎದ್ದುಹೋದುದನ್ನು ರಾಜನು ಕಂಡನು. “ಇವನು ಸಂನ್ಯಾಸಿಯಲ್ಲ ರಾಕ್ಷಸನು. ಪಂಚಮಹಾಪಾಪಮಾಡಿದವನು. ಇವನನ್ನು ಈ ಪಟ್ಟಣದಲ್ಲಿ ಇರಲಿಕ್ಕೆ ಬಿಡದೆ ಓಡಿಸಿಬಿಡಿ! * ಎಂದು ರಾಜನು ಕೋಪದಿಂದ ನುಡಿದನು ಆಗ ಜಿನವರ್ಮನು – “ತಪಸ್ವಿಯ ಮೇಲೆ ಕೋಪಿಸಬೇಡ* ಎಂದು ಅವನನ್ನು ತಡೆದು “ಇವನಿಗೆ ಏನೊಂದು ದೋಷವಿಲ್ಲ, ನಾನು ಹಿಂದೆ ಮಾಡಿದ ಕರ್ಮದ ಫಲದ ಪಕ್ವತೆಯಿದು* ಎಂದು ರಾಜನಿಗೆ ಹೇಳಿ, ಸಂನ್ಯಾಸಿಗೆ ತೊಂದರೆಯಾಗದಂತೆ ಮಾಡಿ, ರಾಜನನ್ನೂ ಸ್ವಜನರನ್ನೂ ಸೇವಕರನ್ನೂ, ಬಂಧುವರ್ಗವನ್ನೂ ಬಿಡಿಸಿದನು. ಆಮೇಲೆ ಶ್ರೀವರ್ಮರೆಂಬ ಆಚಾರ್ಯರ ಬಳಿಯಲ್ಲಿ ದೀಕ್ಷೆಯನ್ನು ಸ್ವೀಕರಿಸಿ, ಮಹಿಷಗಿರಿ ಎಂಬ ಪರ್ವತದಲ್ಲಿ “ಈ ಬೆನ್ನಿನ ಹುಣ್ಣು ಗುಣವಾಗುವವರೆಗೂ ಕೈಯನ್ನು ಎತ್ತಿಕೊಳ್ಳುವುದಿಲ್ಲ* ಎಂದು ದೇಹತ್ಯಾಗಕ್ಕಾಗಿ ನಿಂತುಕೊಂಡನು. ಹದ್ದು ಕಾಗೆಗಳು ಅವನ ಹುಣ್ಣನ್ನು ತೋಡಿತಿನ್ನುತ್ತಿರಲು, ಅವನು ಮೇರುಪರ್ವತದಂತೆ ಅಲುಗಾಡದಂತಹ ಧೈರ್ಯವುಳ್ಳವನಾಗಿ

ಸಮಾಮರಣದಿಂ ಮುಡಿಪಿಯಚ್ಯುತೇಂದ್ರನಾಗಿ ಪುಟ್ಟಿಯಲ್ಲಿಯ ದೇವಲೋಕದ ದಿವ್ಯಸುಖಮಂ ಪಲಕಾಲಮನುಭವಿಸಿ ಬಂದಿಲ್ಲಿ ಸನತ್ಕುಮಾರನಾದಾ ಪರಿವ್ರಾಜಕನುಮಾಯಚ್ಯುತೇಂದ್ರಂಗೆ ವಾಹನದೇವನಾದೊನಲ್ಲಿಂ ಬೞ ಬಂದಿಲ್ಲಿ ಚತುರ್ಗತಿ ಸಂಸಾದೊಳ್ ನೀಡುಂ ತೊೞಲ್ದಂಜನಗಿರಿಯೆಂಬ ಪರ್ವತದ ತಟದೊಳ್ ತಾಪಸಾಶ್ರಮದೊಳ್ ವಸಿಷ್ಠನೆಮಬ ತಾಪಸಂಗಂ ಘೂಕೆಯೆಂಬ ತಾಪಸಿಗಂ ಬಕನೆಂಬೊಂ ಮಗನಾಗಿ ಪುಟ್ಟಿ ತಾಪಸತಪಮಂ ಕೈಕೊಂಡು ನೆಗೞ್ದು ಮಡಿದು ಸಿತಯಕ್ಷನಾದನೆಂದಿಂತಿರ್ವ್ವರ ಪೂರ್ವಭವೈರಸಂಬಂಯಪ್ಪ ಕಥೆಯಂ ಸವಿಸ್ತರಮಾಗಿ ಸುಮಾಳಿಗಳೆಂಬವಜ್ವಾನಿಗಳಪ್ಪ ಚಾರಣರಿಸಿಯರ್ ಪೇೞೆ ಎನ್ನ ಸ್ವಾಮಿಯಪ್ಪ ಖಚರೇಂದ್ರಂ ಕೇಳ್ದಾದಮಾನುಂ ಸಂತುಷ್ಟಚಿತ್ತನಾಗಿ ಭಟಾರರಂ ಬಂದಿಸಿ ತನ್ನ ಪೊೞಲ್ಗೆವೋದನ್ ಎಂದಿಂತು ಕಥಾಸಂಬಂಧಮೆಲ್ಲಮಂ ಕಮಳಮತಿಯೆಂಬ ಖೇಚರವಿಳಾಸಿನಿ ಸನತ್ಕುಮಾರಂ ಪೇೞವೇೞ್ದೊಡೆ ಮಹೇಂದ್ರಸಿಂಹರಿಗೆ ಪೇೞ್ದೊಳಾ ಅವಸರದೊಳ್ ಕುಮಾರಂ ನಿದ್ರಾಸುಖವಿಮುಕ್ತನಾದೊಡಾತನ ಸಮೀಪಕ್ಕೆ ಮಹೇಂದ್ರಸಿಂಹಂ ಪೋಗಿ ಇಂತೆಂದಂ ನಿನ್ನ ವಿಯೋಗದೊಳಪ್ಪ ದುಃಖದಿಂದಂ ವಿಶ್ವಸೇನಮಹಾರಾಜನುಂ ಸಹದೇವಿ ಮಹಾದೇವಿ ಮೊದಲಾಗೊಡೆಯವರ್ಗ್ಗಳ್ಗೆಲ್ಲಂ ಪ್ರಾಣಸಂದೇಹಮಾಗಿರ್ಕ್ಕುಮದಱಂ ನಿಮ್ಮ ಪೊೞಲ್ಗೆ ಪೋಗಲ್ವೇೞ್ಕುಮೆಂದು ಪೇೞ್ದೊಡಾತನುಮಂತೆಗೆಯ್ವೆನೆಂದು ತಮ್ಮ ಮಾವಂಗಳಂ ಬಿಡಿಸಿ ವಿಚಿತ್ರಮಪ್ಪ ರಥಗಜತುರಗ

ಒಂದು ತಿಂಗಳವರೆಗೂ ಸಹಿಸಿದನು. ಆಮೇಲೆ ಸಮಾಮರಣದಿಂದ ಸತ್ತು ಅಚ್ಯುತ ಎಂಬ ಸ್ವರ್ಗದಲ್ಲಿ ಇಪ್ಪತ್ತೆರಡುಸಾಗರದಷ್ಟು ಆಯುಷ್ಯವುಳ್ಳವನಾಗಿ ಅಚ್ಯುತೇಂದ್ರನಾಗಿ ಹುಟ್ಟಿದನು. ಅಲ್ಲಿಯ ದೇವಲೋಕದ ದಿವ್ಯವಾದ ಸುಳವನ್ನು ಹಲವು ಕಾಲ ಅನುಭವಿಸಿ ಮತ್ತೆ ಇಲ್ಲಿಗೆ ಬಂದು ಸನತ್ಕುಮಾರನಾದನು. ಆ ಸಂನ್ಯಾಸಿ ಆ ಅಚ್ಯುತೇಂದ್ರನಿಗೆ ವಾಹನದೇವತೆಯಾಗಿದ್ದನು. ಅವನು ಅಲ್ಲಿಂದ ಕೆಳಕ್ಕೆ ಜಾರಿ ಬಂದು ಇಲ್ಲಿ ನಾಲ್ಕು ಗತಿಗಳುಳ್ಳ ಈ ಪ್ರಪಂಚದಲ್ಲಿ ಬಹಳ ಕಾಲ ಸುತ್ತಿ ಅಂಜನಗಿರಿಯೆಂಬ ಪರ್ವತದ ತಪ್ಪಲಿನ ಋಷಿಯಾಶ್ರಮದಲ್ಲಿ ವಸಿಷ್ಠನೆಂಬ ಋಷಿಗೂ ಘೂಕೆಯೆಂಬ ಋಷ್ಯಾಂಗನೆಗೂ ಬಕನೆಂಬ ಮಗನಾಗಿ ಹುಟ್ಟಿದನು. ಅವನು ಋಷಿಯಂತೆ ತಪಸ್ಸನ್ನು ಆಚರಿಸಿ ಸತ್ತು ಸಿತಯಕ್ಷನಾದನು. ಹೀಗೆ ಇಬ್ಬರ ಪೂರ್ವಜನ್ಮದ ದ್ವೇಷಕ್ಕೆ ಸಂಬಂಸಿದ ಕಥೆಯನ್ನು ಸುಮಾಳಿ ಎಂಬ ತ್ರಿಕಾಲಜ್ಞಾನಿಗಳಾದ ಚಾರಣಋಷಿಗಳು ವಿಸ್ತಾರವಾಗಿ ಹೇಳಿದರು. ಆಗ ನನ್ನ ಸ್ವಾಮಿಯಾದ ವಿದ್ಯಾಧರರಾಜನು ಕೇಳಿ ಅತ್ಯಂತ ಸಂತೋಷಗೊಂಡ ಮನಸ್ಸಿನವನಾಗಿ ಋಷಿಗಳಿಗೆ ನಮಸ್ಕರಿಸಿ ತನ್ನ ಪಟ್ಟಣಕ್ಕೆ ತೆರಳಿದನು. ಸನತ್ಕುಮಾರನು ಹೇಳಲು ಸೂಚಿಸಿದ ಪ್ರಕಾರ ಕಮಳಮತಿಯೆಂಬ ವಿದ್ಯಾಧರಸ್ತ್ರಿಯು ಮಹೇಂದ್ರಸಿಂಹನಿಗೆ ಈ ರೀತಿಯಾಗಿ ಕಥೆಯ ಸಂಬಂಧವನ್ನೆಲ್ಲಾ ಹೇಳಿದಳು. ಆ ಸಂದರ್ಭದಲ್ಲಿ ಸನತ್ಕುಮಾರನು ನಿದ್ರೆಯ ಸುಖದಿಂದ ಬಿಡುಗಡೆ ( ಎಚ್ಚರ) ಗೊಳ್ಳಲು ಅವನ ಬಳಿಗೆ ಮಹೇಂದ್ರಸಿಂಹನು ಹೋಗಿ ಹೀಗೆಂದನು – “ನಿನ್ನ ಅಗಲಿಕೆಯಿಂದಾದ ದುಃಖದಿಂದ ವಿಶ್ವಸೇನಮಹಾರಾಜನೂ ಸಹದೇವಿ ಮಹಾರಾಣಿ ಮುಂತಾಗಿರುವವರೆಲ್ಲ ಜೀವಿಸಿರುವುದೇ ಸಂಶಯವೆಂಬ ಸ್ಥಿತಿಯಲ್ಲಿದ್ದಾರೆ. ಆದುದರಿಂದ ನಿಮ್ಮ ಪಟ್ಟಣಕ್ಕೆ ಈಗ ಹೋಗಬೇಕಾಗಿದೆ* ಎನ್ನಲು ಸನತ್ಕುಮಾರನು “ಹಾಗೆಯೇ ಮಾಡುವೆನು* ಎಂದು ತನ್ನ ಮಾವನನ್ನು ಆಗಲಲು ಅಪ್ಪಣೆ ಪಡೆದನು.

ಗರುಡ ಕಳಹಂಸ ಮಯೂರ ಮಕರ ಸಿಂಹ ವಿಮಾನಾರೂಢರ್ಕ್ಕಳಪ್ಪ ವಿದ್ಯಾಧರರ್ಕ್ಕಳುಮಪ್ಪ ಸಹಸ್ರ ಸಂಖ್ಯಾ ಪ್ರಮಾಣಮಪ್ಪರಸಿಯರ್ಕ್ಕಳುಂಬೆರಸು ಮಹಾವಿಭೂತಿಯಿಂದಂ ಬಂದು ಹಸ್ತಿನಾಪುರಮಂ ಪೊಕ್ಕನಿಬರುಂ ವಿಶ್ವಸೇನಮಹಾರಾಜಂಗಂ ಸಹದೇವಿಮಹಾದೇವಿಗಂ ಸಾಷ್ಟಾಂಗಮೆಱಗಿ ಪೊಡೆವಟ್ಟು ಅವರಾಶೀರ್ವಚನಸಹಸ್ರಂಗಳನಾಂತು ಕೊಂಡು ಸುಖದಿಂದರೆ ಸನತ್ಕುಮಾರಂಗೆ ಚಕ್ರಂ ಪುಟ್ಟಿ ಸಕಳ ಚಕ್ರವರ್ತಿಯಾಗಿ ಭೋಗೋಪಭೋಗಂಗಳೆಂಬ ಮಹಾಸಮುದ್ರದೊಳ್ ಪಲಕಾಲಂ ಕ್ರೀಡಿಸುತ್ತಿರ್ಪ್ಪನ್ನೆಗಂ ಮತ್ತೊಂದು ದಿವಸಂ ಸೌಧರ್ಮಕಲ್ಪದೊಳಾ ಸೌಧರ್ಮೇಂದ್ರಂ ತನ್ನ ದೇವಸಭೆಯ ನಡುವೆ ಸಿಂಹಾಸನಮಸ್ತಕಸ್ಥಿತಂದೇವರ್ಕ್ಕಳಿಂ ದೇವರ್ಕ್ಕಳಿಂ ಪರಿವೇಷ್ಟಿತನಾಗಿ ಸೌಧಮಿನಿಯೆಂಬ ನಾಟಕಮಂ ನೋಡುತ್ತಿರ್ಪ್ಪನ್ನೆಗಂ ಈಶಾನಕಲ್ಪದಿಂದಂ ಸಹೋತ್ಪನ್ನಸಂಗಮದೇವಂ ಬಂದು ಸೌಧರ್ಮೇಂದ್ರನ ಸಭೆಯನವಯವದಿಂ ಪೊಕ್ಕಿರ್ದಾಗಳಾ ಸಭೆಯೊಳಿರ್ದ್ದ ದೇವರ್ಕಳ ರೂಪುಂ ತೇಜಮುಂ ಲಾವಣ್ಯಮುಮೆಲ್ಲಮಂ ಮಾಸಿಸಿ ತನ್ನ ತೇಜಮೆಯಗ್ಗಳಮಾಗಿರ್ದ್ದೊಡೆಂತು ಚಂದ್ರನುದಯಂಗೆಯ್ದಾಗಳ್ ಗ್ರಹನಕ್ಷತ್ರತಾರೆಗಳ ತೇಜಂ ಕುಂದುಗುಮಂತೆಲ್ಲರ ತೇಜಮುಮಂ ಕುಂದಿಸಿ ತಾನೆಯಗ್ಗಳಮಾಗೆ ಬೇಳಗುತ್ತಿರ್ದೊನಂ ದೇವರ್ಕ್ಕಳೆಲ್ಲಂ ವಿಸ್ಮಯಂಬಟ್ಟು ನೋಡಿ ಸೌಧರ್ಮೇಂದ್ರನಿಂತೆಂದು ಬೆಸಗೊಂಡರ್ ಸ್ವಾಮಿ ಈ ಸಂಗಮನೆಂಬ ದೇವನತಿಶಯಮಪ್ಪ ರೂಪುಂ ಲಾವಣ್ಯಮುಂ ತೇಜಮುಂ ದ್ವಾದಶಾದಿತ್ಯರ್ಕ್ಕಳೊರ್ಮೊದಲೆ ಉದಯಂಗೆಯ್ದಂತೆ ಬೆಳಗಿಪ್ಪುದೇ ಕಾರಣದಿಂದಾದುದೆಂದು ಬೆಸಗೊಂಡೊಡಿಂತೆಂದು ಸೌದರ್ಮೇಂದ್ರಂ ಪೇೞಲ್ ತೊಡಂಗಿದನ್ ಈತಂ ಮುನ್ನಿನ ಭವದೊಳ್