ಆಶ್ಚರ್ಯಕರವಾದ ರಥ, ಆನೆ, ಕುದುರೆ, ಗರುಡ, ಹಂಸ, ನವಿಲು, ಮೊಸಳೆ, ಸಿಂಹ ವಿಮಾನ – ಮುಂತಾದುವುಗಳಲ್ಲಿ ಕುಳಿತ ವಿದ್ಯಾಧರರನ್ನೂ ಎಂಟು ಸಾವಿರ ಸಂಖ್ಯೆಯ ಗಣನೆಯುಳ್ಳ ರಾಣಿಯರನ್ನೂ ಕೂಡಿಕೊಂಡು ಮಹಾ ವೈಭವದಿಂದ ಬಂದು ಹಸ್ತಿನಾಪುರವನ್ನು ಪ್ರವೇಶಿಸಿದನು. ಅವರೆಲ್ಲರೂ ವಿಶ್ವಸೇನಮಹಾರಾಜನಿಗೂ ಸಹದೇವಿ ಮಹಾರಾಜ್ಞಿಗೂ ಸಾಷ್ಟಾಂಗ ವಂದನೆಯನ್ನು ಮಾಡಿ ಅವರಿಂದ ಲಕ್ಷಗಟ್ಟಳೆಯ ಆಶೀರ್ವಾದಗಳನ್ನು ಸ್ವೀಕರಿಸಿಕೊಂಡು ಸುಖದಿಂದಿದ್ದನು, ಹೀಗಿರಲು ಅವನ ಅಯುಧಾಗಾರದಲ್ಲಿ ಒಂದು ಚಕ್ರ ಉದ್ಭವಿಸಿತು. ಅವನು ಸಮಸ್ತ ಭೂಮಂಡಲಕ್ಕೂ ಒಡೆಯನಾದ ಸಾರ್ವಭೌಮನಾಗಿ ಬೋಗ ಉಪಭೋಗಗಳೆಂಬ ದೊಡ್ಡ ಸಮುದ್ರದಲ್ಲಿ ಹಲವು ಕಾಲ ಆಡುತ್ತ ಇದ್ದನು. ಆ ಮೇಲೆ, ಒಂದಿ ದಿವಸ ಸೌಧರ್ಮವೆಂಬ ಸ್ವರ್ಗದಲ್ಲಿ ಸೌಧರ್ಮೇಂದ್ರನು ತನ್ನ ದೇವತೆಗಳ ಸಭೆಯ ಮಧ್ಯದಲ್ಲಿ ಸಿಂಹಾಸನದ ಮೇಲೆ ಕುಳಿತು ದೇವತೆಗಳಿಂದ ಸುತ್ತುವರಿಯಲ್ಪಟ್ಟವನಾಗಿ ಸೌದಾಮಿನಿ ಎಂಬ ನಾಟಕವನ್ನು ನೋಡುತ್ತಿದ್ದನು. ಆಗ ಈಶಾನ್ಯ ಎಂಬ ಸ್ವರ್ಗದಿಂದ ತನ್ನ ಸಂಗಡವೇ ಹುಟ್ಟಿದ ಸಂಗಮದೇವನು ಬಂದು ಸೌಧರ್ಮೇಂದ್ರನ ಸಭೆಯನ್ನು ಸುಲಭವಾಗಿ ಪ್ರವೇಶಿಸಿದನು. ಆಗ ಆ ಸಭೆಯಲ್ಲಿದ್ದ ದೇವತೆಗಳ ರೂಪ, ಕಾಂತಿ, ಸೌಂದರ್ಯವೆಲ್ಲವನ್ನೂ ಮಸುಕಾಗಿ ಕಾಣಿಸುವ ತನ್ನಕಾಂತಿಯೇ ಆತಿಶಯವಾಗಿ ಕಾಣಿಸುತ್ತಿದ್ದು, ಚಂದ್ರನು ಮೂಡಿಕೊಂಡು ಬಂದಾಗ ಗ್ರ್ರಹ ನಕ್ಷತ್ತ ತಾರೆಗಳ ಕಾಂತಿ ಹೇಗೆ ಕುಗ್ಗಿದುದಾಗಿ ಕಾಣುವುದೋ ಹಾಗೆಯೇ ಸಂಗಮದೇವನ ಕಾಂತಿ ಇತರ ಎಲ್ಲರ ಕಾಂತಿಯನ್ನು ಕುಂದಿಸಿ ತನ್ನದೇ ಹೆಚ್ಚಾಗಿ ಕಾಣುತ್ತಿತ್ತು. ಈ ರೀತಿ ಬೆಳಗುತ್ತಿದ್ದವನನ್ನು ದೇವತೆಗಳೆಲ್ಲ ಆಶ್ಚರ್ಯಪಟ್ಟು ನೋಡಿ, ಸೌಧರ್ಮೇಂದ್ರನನ್ನು

ಈ ಜಂಬೂದ್ವೀಪದ ಪೂರ್ವವಿದೇಹದೊಳ್ ಸೀತೆಯೆಂಬ ತೊಱೆಯ ಬಡಗಣದೆಸೆಯೊಳ್ ಪುಷ್ಕಾಳಾವತಿಯೆಂಬುದು ನಾಡಲ್ಲಿ ಪುಂಡರೀಕಿಣಿಯೆಂಬುದು ಪೊೞಲದನಾಳ್ಪೊಂ ಸಕಲ ಚಕ್ರವರ್ತಿ ವಿಮಳವಾಹನನೆಂಬರಸನಾತನ ಮಹಾದೇವಿ ವಿಮಳಮತಿಯೆಂಬೊಳಾ ಇವ್ವರ್ಗ್ಗಂ ಪುಟ್ಟಿದೊಂ ಮಗಂ ಕ್ಷೀರಕುಮಾರನೆಂಬೊನಾತಂ ವೈರಾಗ್ಯಮನೊಡೆಯನಾಗಿ ತಪಂಬಡಲ್ಲೆಂದು ಬಗೆದಿರ್ದೊಡೆ ತಾಯ್ ತಪಂಗಡಲೀಯದೆನಿತಾನುಂ ತೆಱದಿಂ ನುಡಿದು ತಗುಳ್ದೊಡೆ ತಾಯ ವಚನಮನತಿಕ್ರಮಿಸಲಾಱದೆ ಮನೆಯೊಳಿರ್ದ್ದಂತೆ ಬ್ರಹ್ಮಚರ್ಯಂ ಮೊದಲಗೊಡೆಯ ಬ್ರತಂಗಳಂ ಪ್ರತಿಪಾಳಿಸಿ ಆಚಾಮ್ಲವರ್ಧನಮೆಂಬ ನೋಂಪಿಯಂ ಪನ್ನೆರಡು ವರ್ಷಂಬರಂ ನೋಂತು ಸಮಾಮರಣದಿಂದಂ ಮುಡಿಪೆ ಇಂತಪ್ಪ ರೂಪುಂ ತೇಜಮುಂ ಲಾವಣ್ಯಮುಮದಱಂದೀತಂಗಾದುದೆಂದು ಸೌಧರ್ಮೇಂದ್ರಂ ಪೇೞ್ದೊಡೆ ಮತ್ತಂ ದೇವರ್ಕ್ಕಳಿಂತೆಂದು ಬೆಸಗೊಂಡರ್ ಸ್ವಾಮಿ ಈತನಂತಪ್ಪ ರೂಪುಂ ತೇಜಮುಂ ಲಾವಣ್ಯಮುಮನೊಡೆಯರ್ ಪೆಱರಾರಾನುಮೊಳರೆ ಎಂದು ಬೆಸಗೊಂಡೊಡೆ ಸೌಧರ್ಮೇಂದ್ರನೆಂದನೊಳನ್ ಹಸತ್ತಿನಾಪುರದೊಳ್ ಕುರುವಂಶದಾತಂ ಸನತ್ಕುಮಾರನೆಂಬೊಂ ಚಕ್ರವರ್ತಿಯಾತಂ ದೇವರ್ಕಳ ರೂಪುಂ ಲಾವಣ್ಯಮುಂ ತೇಜಮುಮನೊಡೆಯನಾದಮಾನುಮಗ್ಗಳಮೆಂದು ಪೇಳ್ದೊಡೆ ಇಂದ್ರನ ಮಾತಂ ನಂಬದೆ ವಿಜಯ ವೈಜಯಂತರೆಂಬರಿರ್ವರ್ ದೇವರ್ಕಳ್ ಪಾರ್ವರ ರೂಪಂ ಕೈಕೊಂಡು ಹಸ್ತಿನಾಪುರಕ್ಕೆ ಸನತ್ಕುಮಾರಚಕ್ರವರ್ತಿಯ ರೂಪಂ ನೋಡಲೆಂದು ಬಂದು ಬಾಗಿಲೊಳಿರ್ದ್ದ ಪಡಿಯಱರನೆಂದರ್ –

ಹೀಗೆ ಕೇಳಿದರು – “ಪ್ರಭೂ, ಈ ಸಂಗಮದೇವನ ಹೆಚ್ಚಾದ ರೂಪವೂ ಸೌಂದರ್ಯಕಾಂತಿಯೂ ಹನ್ನೆರಡು ಸೂರ್ಯರು ಏಕಕಾಲದಲ್ಲಿ ಉದಯಸಿದ ಹಾಗೆ ಬೆಳಕು ಕೊಡುವುದಕ್ಕೆ ಕಾರಣವೇನು ?* ಎಂದು ದೇವತೆಗಳು ಕೇಳಲು, ಸೌಧಮೇಂದ್ರನು ಈ ರೀತಿ ಹೇಳತೊಡಗಿದನು – – ಈತನು ಹಿಂದಿನ ಜನ್ಮದಲ್ಲಿ ಕ್ಷೀರಕುಮಾರನಾಗಿದ್ದನು. ಈ ಜಂಬೂದ್ವೀಪದ ಪೂರ್ವವಿದೇಹದಲ್ಲಿ ಸೀತಾನದಿಯ ಉತ್ತರ ದಿಕ್ಕಿನಲ್ಲಿ ಪುಷ್ಕಳಾವತಿ ಎಂಬ ನಾಡಿದೆ. ಅಲ್ಲಿ ಪುಂಡರೀಕಿಣಿಯೆಂಬ ಪಟ್ಟಣವನ್ನು ಇಡೀ ಭೂಮಂಡಲಕ್ಕೆ ಒಡೆಯನಾದ ವಿಮಳವಾಹನನೆಂಬ ರಾಜನು ಆಳುತ್ತಿದ್ದನು. ಅವನ ಮಹಾರಾಣಿ ವಿಮಳಮತಿಎಂಬವಳು ಆ ದಂಪತಿಗಳಿಗೆ ಕ್ಷೀರಕುಮಾರನೆಂಬವನು ಮಗನು. ಅವನು ವೈರಾಗ್ಯವಂತನಾಗಿ ತಪಸ್ಸು ಮಾಡಬೇಕೆಂದು ಬಗೆದನು. ಆದರೆ ಅವನ ತಾಯಿ ಅವನನ್ನು ತಪಸ್ಸಿಗೆ ಹೋಗಲು ಬಿಡದೆ, ಎಷ್ಟೋ ರೀತಿಯಿಂದ ನುಡಿದು ಒತ್ತಾಯ ಪಡಿಸಿದಳು. ಕ್ಷೀರಕುಮಾರನು ತಾಯಿಯ ಮಾತನ್ನು ಮೀರಲಾರದೆ ಮನೆಯಲ್ಲಿದ್ದುಕೊಂಡೇ ಬ್ರಹ್ಮಚರ್ಯ ಮುಂತಾಗಿರುವ ವ್ರತಗಳನ್ನು ನಡೆಸಿಕೊಂಡು ಆಚಾಮ್ಲವರ್ಧನ ಎಂಬ ವ್ರತವನ್ನು ಹನ್ನೆರಡು ವರ್ಷಗಳವರೆಗೆ ನಡೆಸಿಕೊಂಡು ಬಂದು ಸಮಾಮರಣದಿಂದ ಸತ್ತುಹೋದನು. ಅದರಿಂದಲೇ ಈತನಿಗೆ ಇಂತಹ ರೂಪವೂ ಕಾಂತಿಯೂ ಸೌಂದರ್ಯವೂ ಆಗಿವೆ – ಎಂದು ಸೌಧರ್ಮೇಂದ್ರನು ಹೇಳಿದನು. ಅನಂತರ ದೇವತೆಗಳು ಹೀಗೆ ಕೇಳಿದರು . – “ಪ್ರಭೂ, ಈ ಸಂಗಮದೇವನಂತಹ ರೂಪವೂ ಕಾಂತಿಯೂ ಸೌಂದರ್ಯವೂ ಉಳ್ಳವರು ಬೇರೆ ಯಾರಾದರೂ ಇರುವರೆ ? * ಎಂದು ಕೇಳಲು ಸೌಧರ್ಮೇಂದ್ರನು ಹೇಳಿದನು. “ಇರುವನು. ಹಸ್ತಿನಾಪುರದಲ್ಲಿ ಕುರುವಂಶದವನಾದ ಸನತ್ಕುಮಾರನೆಂಬ ಚಕ್ರವರ್ತಿ ಇರುವನು. ಅವನ ದೇವತೆಗಳ ರೂಪ. ಸೌಂದರ್ಯ, ಕಾಂತಿಗಳನ್ನು ಉಳ್ಳವನು.

ನಿಮ್ಮರಸಂಗಿಂತೆಂದು ಪೇೞಂ ಗೆಂಟಱಂ ಬಂದೆವು ನಿಮ್ಮ ರೂಪನೞವಟ್ಟು ನೋಡಲ್ಲೆಂದೊಡವರುಂ ಪೋಗಿ ತಮ್ಮರಸಂಗಱಪಿದೊಡೆ ಅರಸನನುಮತದಿಂದವರರಮನೆಯಂ ಪೊಕ್ಕರಸನ ಸಾರೆವೋಗಿ ನೋೞ್ಪಾಗಳರಸಂ ಸುಗಂಧತೈಲದಿಂ ಮೆಯ್ಯನಭಂಗನಂಗೆಯ್ದು ಮಜ್ಜನಂಬುಗಲೆಂದಿರ್ದ್ದವಸರದೊಳ್ ದೇವರ್ಕ್ಕಳ್ ಸನತ್ಕುಮಾರ ಚಕ್ರವರ್ತಿಯ ರೂಪಂ ತೊಟ್ಟು ನಖಾಗ್ರಂಬರೆಗಗ್ರದಿಂ ತೊಟ್ಟು ವಾಳಾಗ್ರಂಬರೆಗಂ ಏಱೆಯುಮಿೞಯೆಯುಂ ನೀಡು ಭಾವಿಸಿ ನೋಡಿ ಚೋದ್ಯಂಬಟ್ಟಿಂತು ರೂಪುಂ ತೇಜಮುಂ ಗಾಡಿಯುಂ ಯೌವನಮುಂ ದೇವರ್ಕ್ಕಳ್ಗಮಿಲ್ಲೆಂದು ಚಕ್ರವರ್ತಿಯ ರೂಪಂ ಪೊೞ್ದೊಡರಸನಿಂತೆಂದಂ ನೀಮಾರ್ಗ್ಗೇನೆಂಬಿರೆಲ್ಲಿಂ ಬಂದಿರೆಂದು ಬೆಸಗೊಂಡೊಡವರೆಂದರ್ ದೇವಲೋಕದಿಂ ಬಂದೆವು ದೇವರ್ಕಳೆವು ಸೌಧರ್ಮಕಲ್ಪದೊಳ್ ದೇವರ್ಕಳ ಸಭೆಯ ನಡುವೆ ಸೌಧರ್ಮೇಂದ್ರಂ ನಿಮ್ಮ ರೂಪನಾದಮಾನುಂ ನಚ್ಚಿ ಬಣ್ಣಿಸಿದೊಡಿಂದ್ರನ ಮಾತಂ ನಂಬದೆ ನಿಮ್ಮಂ ನೋಡಲ್ ಬಂದೆಮಿಂದ್ರನ ವ್ಯಾವರ್ಣಿಸುವುದರ್ಕ್ಕಗ್ಗಳಮೆ ನಿಮ್ಮ ರೂಪುಂ ಯೌವನಮುಂ ಲಾವಣ್ಯಮುಮಂ ಕಂಡೆಮೆಂದು ಪೇಳ್ದಾಮಿನ್ನೆಮ್ಮ ದೇವಲೋಕಕ್ಕೆ ಪೋಪೆಮೆಂದೊಡರಸಂ ಮನಂ

ಅವರಿಗಿಂತಲೂ ಅತ್ಯತಿಶಯನಾಗಿ ಶ್ರೇಷ್ಠನಾದವನು* ಎಂದು ಹೇಳಿದನು. ಇಂದ್ರನು ಹೇಳಿದ ಮಾತನ್ನು ನಂಬದೆ, ವಿಜಯ ಮತ್ತು ವ್ಶೆಜಯಂತ ಎಂಬ ಇಬ್ಬರು ದೇವತೆಗಳು ಬ್ರಾಹ್ಮಣರ ರೂಪವನ್ನು ತಾಳಿದರು. ಸನತ್ಕುಮಾರಚಕ್ರವರ್ತಿಯ ರೂಪವನ್ನು ನೋಡುವುದಕ್ಕಾಗಿ ಹಸ್ತಿನಾಪುರಕ್ಕೆ ಬಂದರು. ಅವರು ಬಾಗಿಲಿನಲ್ಲಿದ್ದ ದ್ವಾರಪಾಲಕರೊಡನೆ ಹೀಗೆಂದರು – “ನಿಮ್ಮ ರಾಜನಿಗೆ ಈ ರೀತಿಯಾಗಿ ತಿಳಿಸಿ – ನಿಮ್ಮ ರೂಪವನ್ನು ಆಸಕ್ತಿಯಿಂದ ನೋಡುವುದಕ್ಕಾಗಿ ನಾವು ದೂರದಿಂದ ಬಂದಿದ್ದೇವೆ* ಹೀಗೆ ಹೇಳಲು ಪ್ರತೀಹಾರರು ಒಳಗೆ ಹೋಗಿ ಅರಸನಿಗೆ ತಿಳಿಸಿದರು. ರಾಜನ ಅಪ್ಪಣೆಯಂತೆ ಆ ದೇವತೆಗಳು ಅರಮನೆಯೊಳಗೆ ಹೋದರು. ಅರಸನ ಸಮೀಪಕ್ಕೆ ಹೋಗಿ ನೋಡುವಾಗ, ಅರಸನು ಸುವಾಸಿತವಾದ ತೈಲವನ್ನು ಮೈಗೆ ಲೇಪಿಸಿದ್ದನು. ಸ್ನಾನಕ್ಕೆ ಹೋಗಲು ಸಿದ್ದನಾಗಿದ್ದನು, ಈ ಸಂದರ್ಭದಲ್ಲಿ ದೇವತೆಗಳು ಸನತ್ಕುಮಾರಚಕ್ರರ್ವತಿಯ ರೂಪವನ್ನು ತಲೆಯ ಕೂದಲ ತುದಿಯಿಂದ ಹಿಡಿದು ಕಾಲ ಹೆಬ್ಬೆರಳಿನ ಉಗುರ ತುದಿಯವರೆಗೂ ಏರುವಂತೆಯೂ ಇಳಿಯುವಂತೆಯೂ ಅತಿಶಯವಾಗಿ ಭಾವಿಸಿ ನೋಡಿದರು. ಆಶ್ಚರ್ಯಪಟ್ಟು “ಈ ರೀತಿಯ ರೂಪ, ಕಾಂತಿ,ಚೆಲುವು, ಯೌವನಗಳು ದೇವತೆಗಳಿಗೂ ಇಲ್ಲ* ಎಂದು ಸನತ್ಕುಮಾರ ಚಕ್ರವರ್ತಿಯ ರೂಪವನ್ನು ಹೊಗಳಿದರು. ಆಗ ಅರಸನು “ನೀವು ಯಾರು ? ಏನು ಹೇಳಲಿರುವಿರಿ? ಎಲ್ಲಿಂದ ಬಂದಿರಿ ? * ಎಂದು ಕೇಳಲು ಅವರು ಹೀಗೆಂದರು – “ನಾವು ದೇವಲೋಕದಿಂದ ಬಂದಿದ್ದೇವೆ, ದೇವತೆಗಳಾಗಿದ್ದೇವೆ. ಸೌಧರ್ಮವೆಂಬ ಸ್ವರ್ಗದಲ್ಲಿ ಸೌಧರ್ಮೇಂದ್ರನು ದೇವತೆಗಳ ಸಭೆಯ ನಡುವೆ ನಿಮ್ಮ ರೂಪನ್ನು ಅತಿಶಯವಾಗಿ ನಂಬಿ ವರ್ಣಿಸಿದಾಗ ನಾವು ಇಂದ್ರನ ಮಾತನ್ನು ನಂಬದೆ ನಿಮ್ಮನ್ನು ನೋಡುವುದಕ್ಕಾಗಿ ಬಂದಿದ್ದೇವೆ. ಇಂದ್ರನು ವರ್ಣಿಸಿದುದಕ್ಕಿಂತ ಶ್ರೇಷ್ಠವಾಗಿ ನಾವು ನಿಮ್ಮ ರೂಪ – ಯೌವನ – ಸೌಂದರ್ಯಗಳನ್ನು ಕಂಡೆವು* – ಎಂದು ಹೇಳಿ “ನಾವು ಇನ್ನು ನಮ್ಮ ದೇವಲೋಕಕ್ಕೆ ಹೋಗುವೆವು*

ಪೆರ್ಚಿ ತನ್ನೊಳ್ ತನ್ನ ರೂಪಂ ನೆಚ್ಚಿ ಕಿಱದು ಬೇಗಂ ಮಾಣಿಮಭ್ಯಂಗನಂಗೆಯ್ದ ರೂಪಂ ಕಂಡಿರಿಂ ಮಜ್ಜನಂಬೊಕ್ಕು ಪಸದನಂಗೊಂಡಿರ್ದ ರೂಪಂ ನೋಡಿ ಪೋಗಿಮೆಂದರಸಂ ನುಡಿದೊಡಂತೆ ಗೆಯ್ದೆಮೆಂದು ದೇವರ್ಕಳಿರ್ದ್ದೊಡರಸನುಂ ಮಜ್ಜನಂಬೊಕ್ಕು ಬೇಗಂ ಸರ್ವಾಭರಣಭೂಸಿತನಾಗಿ ಆಸ್ಥಾನಮಂಟಪದೊಳ್ ಸಿಂಹಾಸನಮಸ್ತಕಸ್ಥಿತನಾಗಿ ಸಾಮಂತಮಹಸಾಮಂತರ್ ಮೂವತ್ತಿರ್ಛಾಸಿರ್ವರ್ ಮಕುಟಬದ್ಧರ್ಕ್ಕಳುಂ ವಿದ್ಯಾಧರರರ್ಕ್ಕಳುಂ ಯಕ್ಷದೇವರ್ಕ್ಕಳುಂ ಬಳಸಿಯುಮಿರ್ದೊಲಗಿಸೆ ಮೂವತ್ತೆರಡುಂ ಚಾಮರಂಗಳಿಕ್ಕೆ ಸೌಧರ್ಮೇಂದ್ರನಿಪ್ಪಂತಿರ್ದು ದೇವರ್ಕಳ್ಗೆ ಬೞಯಟ್ಟಿ ಬರಿಸಿ ನೋಡಿ ಮಿನ್ನೆನ್ನ ರೂಪನೆಂದು ತನ್ನಂ ತೋಱದೊಡೆ ದೇವರ್ಕಳ್ ನೋಡಿ ವಿಸ್ಮಯಂಬಟ್ಟಿದೇಂ ಚೋದ್ಯಮೋ

ಶ್ಲೋ|| ಅನೇಕ ರಾಗಸಂಕಿರ್ಣಂ ಘನಲಗ್ನಮಪಿ ಕ್ಷಣಾತ್
ಮಾನುಷಂ ಯೌವನಂ ಕಷ್ಟಂ ನಶ್ಯತೀಂದ್ರಧನುರ್ಯಥಾ ||

ಎಂದೀ ಕ್ಷಣಮಾತ್ರದೊಳೆ ಮನುಷ್ಯರ ರೂಪುಂ ಗಾಡಿಯುಂ ಚೆಲ್ವುಂ ತೇಜಮುಂ ಯೌವನಮುಂ ಕುಂದಿತ್ತೆನೆ ಚಕ್ರವರ್ತಿಯೆಂದನೆನ್ನ ರೂಪಂ ಮುನ್ನ ನೀಮೆ ಪೊಗೞರೀಗಳೇಕೆ ಪೞದಪ್ಪಿರೆನೆ ದೇವರೆಂದರ್ ಕೇಳರಸಾ ದೇವರ್ಕಳ ತೇಜಮುಂ ಲಾವಣ್ಯಮುಂ ಪುಟ್ಟಿದ ಪ್ರಥಮಸಮಯದಿಂ ತೊಟ್ಟು ಪೆರ್ಚುತ್ತುಂ ಪೋಕುಮಾಯುಷ್ಯದ ನಡುವರೆಗಮಲ್ಲಿಂದತ್ತ ಕುಂದುತ್ತ ಪೋಕುಮಾಯುಷ್ಯಾಂತಂಬರೆಗಂ ಮತ್ತಾಮುಂ ನಿಮ್ಮ ರೂಪಂ ಯೌವನಭರದೊಳಿರ್ದ್ದುದುಮಂ ಕಂಡೆಮೀಗಳಾಯುಷ್ಯಮುಂ ತೇಜಮುಂ ರೂಪುಂ ಲಾವಣ್ಯಮುಂ ಯೌವನಮುಂ ಕಿಱದು ಕುಂದಿದುದಂ ಕಂಡೆಮೆನೆ ಚಕ್ರವರ್ತಿ ನೀಮೆಂತಱದಿರೆಂದು

ಎಂದರು. ಆಗ ರಾಜನು ಮನಸ್ಸಿನಲ್ಲಿ ಹಿಗ್ಗಿದನು. ತನ್ನ ರೂಪದ ಹಿರಿಮೆಯನ್ನು ತನ್ನಲ್ಲೇ ನಂಬಿ – “ಸ್ವಲ್ಪ ಹೊತ್ತು ತಡೆಯಿರಿ. ಮೈಗೆ ತೈಲ ಹಚ್ಚಿದ ರೂಪವನ್ನು ಕಂಡಿದ್ದೀರಿ. ಸ್ನಾನಮಾಡಿ ಅಲಂಕರಿಸಿಕೊಂಡ ರೂಪವನ್ನು ನೋಡಿದ ನಂತರ ಹೋಗಿ* ಎಂದು ಅರಸನು ಹೇಳಿದನು. ‘ಹಾಗೆಯೇ ಮಾಡುವೆವು* ಎಂದು ನುಡಿದು ದೇವತೆಗಳು ನಿಂತುಕೊಂಡರು. ಉಜನು ಸ್ನಾನವನ್ನು ಮಾಡಿ ಬೇಗನೆ ಎಲ್ಲಾ ಆಭರಣಗಳಿಂದ ಸಿಂಗರಿಸಿಕೊಂದನು. ಆಸ್ಥಾನದ ಮಂಟಪದಲ್ಲಿ ಸಿಂಹಾಸನದ ಮೇಲೆ ಕುಳಿತುಕೊಂಡನು. ಸಾಮಂತರೂ ಮಹಾಸಾಮಂತರೂ ಮೂವತ್ತೆರಡು ಸಾವಿರ ಕಿರೀಟಧಾರಿಗಳಾದ ರಾಜರೂ ವಿದ್ಯಾಧರರೂ ಯಕ್ಷರೂ ದೇವತೆಗಳೂ ಆವರಿಸಿಕೊಂಡಿದ್ದ ಸಭೆಯಲ್ಲಿ ಸೇರಿದ್ದರು. ಮೂವತ್ತೆರಡು ಚಾಮರಗಳನ್ನು ಬೀಸುತ್ತಿರಲು ಸನತ್ಕುಮಾರನು ಸೌಧರ್ಮೇಂದ್ರನ ಹಾಗೆ ವೈಭವದಿಂದ ಇದ್ದು ದೇವತೆಗಳಿಗೆ ದೂತರನ್ನು ಕಳುಹಿಸಿ ಬರಮಾಡಿದನು. “ಇನ್ನೂ ನನ್ನ ರೂಪವನ್ನು ನೋಡಿ”ಎಂದು ಅವರಿಗೆ ತನ್ನನ್ನು ತೋರಿಸಿದನು. ಆಗ ಅವರು ಸನತ್ಕುಮಾರನನ್ನು ನೋಡಿ ಆಶ್ಚರ್ಯಪಟ್ಟರು. “ಇದೇನು ಆಶ್ಚರ್ಯವೋ ! (ಕ್ಲೇಶಕರವಾದ ಮನುಷ್ಯನ ಯೌವನವು ಹಲವಾರು ಪ್ರೀತಿ ಸಂಬಂಧಗಳಿಂದ ಕೂಡಿದ್ದರೂ ಗಟ್ಟಿಯಾಗಿಹೊಂದಿಕೊಂಡಿದ್ದರೂ, ಮಳೆಬಿಲ್ಲಿನ ಹಾಗೆ, ಅದು ಹಲವಾರು ಬಣ್ಣಗಳಿಂದ ತುಂಬಿದ್ದರೂ ಮೋಡಕ್ಕೆ ಅಂಟಿಕೊಂಡಿದ್ದರೂ ಹೇಗೆ ನಾಶವಾಗುವುದೋ ಹಾಗೆಯೇ ಕ್ಷಣದಲ್ಲಿ ನಾಶವಾಗುತ್ತದೆ.) ಕ್ಷಣದಲ್ಲೇ ಮನುಷ್ಯರ ರೂಪವೂ, ಸೌಂದರ್ಯವೂ ಸೊಬಗೂ ಕಾಂತಿಯೂ ಯೌವನವೂ ಕುಂದುತ್ತದೆ.* ಎಂದು ಹೇಳಲು ಚಕ್ರವರ್ತಿಯು “ನನ್ನ

ಬೆಸಗೊಂಡೊಡೆ ದೆವರ್ಕ್ಕಳೆಂದರೆಮಗವಜ್ಞಾನಮುಂಟಪ್ಪುದಱಂದೆವು ಮನುಷ್ಯರ್ಗಱಯಲಾಗದೆಂದೊಂದು ದೋಣಿಕೊಂಡಮಂ ತರಿಸಿ ನೀರಂ ತೆಕ್ಕನೆ ತೀವಿಯಾದಱೊಳಗೆ ಚವ್ಮರಿಯನರ್ದ್ದಿ ತೆಗೆದು ಬಳಸಿಯಂ ಬೀಸಿದಾಗಳ್ ಸಭೆಯೊಳಿರ್ದ ಮಾನಸರ ಮೇಗೆಲ್ಲಂ ನೀರ್ ಪನಿತುದಂ ತೋಱೆ ದೇವರೆಂದರ್ ಪೇೞಮೀ ಚಮರಿಯೊಳ್ ತಗುಳ್ದು ಬಿಯಮಾದನಿತು ನೀರಂ ಕೊಂಡದೊಳ್ ಕುಂದಿದುದಂ ತೋಱಮೆಂದೊಡವರುಮಱಯದಿರ್ದ್ದೊಡೆಂತಿದಂ ನೀಮಱಯಲಾಗದಂತೆ ಮಾನಸರಾಯುಷ್ಯಮುಂ ತೇಜಮುಂ ಲಾವಣ್ಯಮುಂ ಯೌವನಮುಂ ಪ್ರತಿಸಮಯಂ ಕುಂದುತಿರ್ಕುಮಾ ವೀಚಿಮರಣಮಂ ನಿಮಗಱಯಲಾಗದೆಂದು ಪೇೞ್ದು ಹೇತು ದೃಷ್ಪಾಂತರಂಗಳಿಂದಂ ಪ್ರತ್ಯಕ್ಷಮಂ ತೋಱ ಚಕ್ರವರ್ತಿಯಂ ನಂಬೆ ನುಡಿದು ದೇವರ್ಕ್ಕಳ್ ತಮ್ಮ ಸೌಧರ್ಮಕಲ್ಪಕ್ಕೆ ವೋದರ್ ಮತ್ತಿತ್ತ ಸನತ್ಕುಮಾರಚಕ್ರವರ್ತಿಗದುವೆ ನಿರ್ವೇಗಕ್ಕೆ ಕಾರಣಮಾಗಿ ಶರೀರಭೋಗಕ್ಕೆ ಪೇಸಿ ಇಂತೆಂದು ಮನದೊಳ್ ಬಗೆಗುಂ

ರೂಪವನ್ನು ಮೊದಲು ನೀವೇ ಹೊಗಳಿದಿರಿ, ಈಗ ಯಾಕೆ ನಿಂದಿಸುತ್ತೀರಿ?* ಎಂದು ಕೇಳಿದನು. ಅದಕ್ಕೆ ಅವರು – “ದೆವತೆಗಳ ಅರಸನೇ, ಕೇಳು. ಮನುಷ್ಯರ ಕಾಂತಿ ಸೌದಂರ್ಯಗಳು ಜನನದ ಮೊದಲ ಸಮಯದಿಂದ ಪ್ರಾರಂಭವಾಗಿ ಆಯುಷ್ಯದ ನಡುವಿನವರೆಗೆ ಹೆಚ್ಚುತ್ತ ಹೋಗುತ್ತದೆ. ಅಲ್ಲಿಂದ ನಂತರ ಆಯುಷ್ಯದ ಕೊನೆವರೆಗೆ ಕಡಮೆಯಾಗುತ್ತ ಹೊಗುತ್ತವೆ. ನಾವು ಯೌವನದ ಭರದಲ್ಲಿದ್ದ ನಿಮ್ಮ ರೂಪವನ್ನು ಕಂಡೆವು. ಈಗ ಅಯುಷ್ಯವೂ ಕಾಂತಿಯೂ ರೂಪವೂ ಸೌಂದರ್ಯವೂ ಯೌವನವೂ ತುಸು ಕಡಮೆಯಾದುದನ್ನು ಕಂಡಿದ್ದೇವೆ* ಎಂದರು. “ನೀವು ಹೆಗೆ ತಿಳಿದುಕೊಂಡಿರಿ? * ಎಂದು ಚಕ್ರವರ್ತಿ ಕೇಳಿದನು. ಆಗ ದೇವತೆಗಳು – “ನಮಗೆ ಅವಜ್ಞಾನ (ತ್ರಿಕಲಜ್ಞಾನ)ವಿರುವುದರಿಂದ ತಿಳಿದಿದ್ದೇವೆ. ಮನುಷ್ಯರಿಗೆ ಇದನ್ನು ತಿಳಿಯಲು ಸಾಧ್ಯವಿಲ್ಲ* ಎಂದರು. ಆ ಮೇಲೆ ಒಂದು ದ್ರೋಣಿ ಕುಂಡವನ್ನು (ದೊನ್ನೆಯಂತಹ ಹರವಿಯನ್ನು)ತರಿಸಿ, ಅದರಲ್ಲಿ ನೀರನ್ನು ಭರ್ತಿಮಾಡಿ ತುಂಬಿಸಿ ಅದರೊಳಗೆ ಚಾಮರವನ್ನು ಅದ್ದಿ ತೆಗೆದು ಸುತ್ತಲೂ ಬೀಸಿದರು. ಆಗ ಸಭೆಯಲ್ಲಿದ್ದ ಮನುಷ್ಯರ ಮೇಲೆಲ್ಲ ನೀರು ಹನಿಗಳಾಗಿ ಬಿದ್ದುದನ್ನು ತೋರಿಸಿ ದೇವತೆಗಳು ಹೀಗೆಂದರು – “ಈ ಚಾಮರದಲ್ಲಿ ಸೇರಿಕೊಂಡು ವ್ಯಯವಾದುದು ಎಷ್ಟು ನೀರು ಎಂಬುದನ್ನು ಹರವಿಯಲ್ಲಿ ಕಡಮೆಯಾದುದನ್ನು ತೋರಿಸಿ* ಎನ್ನಲು ಅವರು ತಿಳಿಯದವರಾಗಿದ್ದರು. “ಇದನ್ನು ಹೇಗೆ ನೀವು ತಿಳಿಯಲಾರಿರೋ ಹಾಗೆಯೇ ಮನುಷ್ಯರ ಆಯುಷ್ಯವೂ ಕಾಂತಿ ಸೌಂದರ್ಯ ಯೌವನಗಳೂ ಪ್ರತಿಯೊಂದು ಹೊತ್ತಿನಲ್ಲೂ ಕುಂದಿಹೋಗುತ್ತಿರುವುದು. ಆ ಅಲೆಯ ಸಾವನ್ನು (ಕ್ಷಿಪ್ರಮರಣವನ್ನು) ನಿಮಗೆ ತಿಳಿಯಲು ಸಾಧ್ಯವಿಲ್ಲ* ಎಂದು ಆ ದೇವತೆಗಳು ಹೇಳಿ ಕಾರಣಗಳಿಂದಲೂ ದೃಷ್ಟಾಂತಗಳಿಂದಲೂ ಸಂಗತಿಯನ್ನು ಕಣ್ಣೆದುರಿನಲ್ಲಿ ಕಾಣಿಸಿ, ಚಕ್ರವರ್ತಿ ನಂಬುವ ಹಾಗೆ ಹೇಳಿ, ತಮ್ಮ ಸೌಧರ್ಮಸ್ವರ್ಗಕ್ಕೆ ತೆರಳಿದರು. ಆಮೇಲೆ, ಇತ್ತ ಸನತ್ಕುಮಾರಮಹಾರಾಜನಿಗೆ ಅದೇ ಘಟನೆ ವೈರಾಗ್ಯಕ್ಕೆ ಕಾರಣವಾಯಿತು. ಅವನು ದೇಹಸುಖಕ್ಕೆ ಅಸಹ್ಯಪಟ್ಟು ಮನಸ್ಸಿನಲ್ಲಿ ಹೀಗೆ ಭಾವಿಸಿದನು. (ರೂಪ, ಪ್ರಾಯ. ಆಯುಸ್ಸು, ಇಂದ್ರಿಯಗೋಚರವಿಷಯಗಳು,

ವೃತ್ತ ||         ರೂಪಂ ಯೌವನಮಾಯುರಕ್ಷವಿಷಯಾ ಭೋಗೋಪಭೋಗಾ ವಪುಃ
ವೀರ್ಯಂ ಸ್ಪೇಷ್ಟಸಮಾಗಮೋ ವಸುಮತಿಸ್ಸೌಭಾಗ್ಯ ಭಾಗ್ಯಾದಯಃ
ನೋ ನಿತ್ಯಾಃ ಸುಟಮಾತ್ಮನಸ್ಸಮುದಿತ ಜ್ಞಾನೇಕ್ಷಣಾಭ್ಯಾಮೃತೇ
ಶೇಷಾ ಇತ್ಯನುಚಿಂತಯುಂತು ಸುಯಃ ಸರ್ವೇ ಸದಾ – ನಿತ್ತತಾಂ

ಶ್ಲೋಕ || ಆದೌ ಜನ್ಮಜರಾರೋಗೌ ಮಧ್ಯೇಷ್ಯಂತೇ ಖಳಾಂತಕಃ
ಇತಿ ಚಕ್ರೈಕ ಸಂಭ್ರಾಂತಿರ್ಜಂತೋರ್ಮಧ್ಯೇ ಭವಾರ್ಣವಂ

ಎಂದಿಂತು ವೈರಾಗ್ಯಮಂ ಭಾವಿಸಿ ವಿಜಯಕುಮಾರನೆಂಬ ಪಿರಿಯ ಮನೆಗೆ ಮಗಂಗೆ ರಾಜ್ಯಪಟ್ಟಂಗಟ್ಟಿ ಪರಿವಾರಕ್ಕೆಲ್ಲಂ ನಿಶ್ಯಲ್ಯನಾಗಿ ಬಾಹ್ಯಾಭ್ಯಂತರಪರಿಗ್ರಹಂಗಳೆಲ್ಲಮಂ ತೊಱೆದು ಪಲಂಬರ್ ಮಕುಟಬದ್ಧರ್ಕಳಪ್ಪರಸುಮಕ್ಕಳ್ವೆರಸು ವಿನಯಂಧರಭಟಾರರ ಪಕ್ಕದೆ ತಪಂಬಟ್ಟು ದೀಕ್ಷೋಪವಾಸ ತ್ರಿರಾತ್ರಂಗೆಯ್ದು ಶರೀರಸಂಧಾರಣನಿಮಿತ್ತಂ ಚರಿಗೆವೊಕ್ಕೊಡೊರ್ವಳ್ ಬಡಬಿರ್ದಿನಿಱಸಿ ಪ್ರಥಮ ದಿವಸದೊಳೆ ಪಾರಕಿನ ಕೂೞುಮವರೆಯುಮೆಣ್ಣಿಯುಮಾಡಿನಳೆಯುಮಂ ಬಡ್ಡಿಸಿ ದೊಡದನಮೃತಮನುಣ್ಬಂತುಂಡು ಮತ್ತಂ ತ್ರಿರಾತ್ರಕ್ಕೆ ಪಚ್ಚಖ್ಖಾಣಂಗೊಂಡರಾ ಕಾಲದಿ ತೊಟ್ಟಾಹಾರದೊಳಪ್ಪ ದೊಷದಿಂದಂ ಕಚ್ಛುಜರಖಾಸ ಸೋಸೋ ಭತ್ತಚ್ಛದಿ ಅಚ್ಛಿಕುಚ್ಛಿದುಕ್ಖಾಣಿ ಎಂದಿವು ಮೊದಲಾಗೊಡೆಯವೇೞುನೂಱು ಬ್ಯಾಗಳಂ ನೂಱುವರುಷಂಬರಂ ಒಳ್ಳಿತ್ತಾಗೆ ಸೈರಿಸಿ

ಸುಖಾನುಭವಗಳು, ದೇಹ, ಶಕ್ತಿ, ತನ್ನ ಪ್ರೀತಿಯವರ ಸಹವಾಸ ಭೂಮಿ (ರಾಜ್ಯಾಕಾರ), ಸೊಬಗು ಐಶ್ವರ್ಯಗಳು, ಶಾಶ್ವತಗಳಲ್ಲ. ಹೀಗೆ ಉಳಿದ ಎಲ್ಲಾ ಬುದ್ಧಿವಂತರು (ಜ್ಞಾನಿಗಳು) ತಮ್ಮಲ್ಲಿ ಸರಿಯಾಗಿ ಮೂಡಿದ ಜ್ಞಾನವೆಂಬ ಕಣ್ಣುಗಳಿಂದ ಸರಿಯಾಗಿ ಅನಿತ್ಯವೆಂಬುದನ್ನು ಸ್ಪಷ್ಟವಾಗಿ ಯೋಚಿಸಲಿ.) (ಮೊತ್ತ ಮೊದಲು ಜನಿಸುವುದು, ನಡುವೆ ಮುಪ್ಪು ಮತ್ತು ರೋಗಗಳು. ಮತ್ತು ಕೊನೆಯಲ್ಲಿ ಕೆಟ್ಟವನಾದ ಯಮನು, ಈ ರೀತಿಯಾಗಿ ಹುಟ್ಟುಸಾವುಗಳೆಂಬ ಪರಂಪರೆಯ ಸಮುದ್ರವು (ಭವಸಾಗರವು) ಜೀವಿಗಳ ನಡುವೆ ಚಕ್ರಾಕಾರದಲ್ಲಿ ತಿರುಗುತ್ತ ಇರುತ್ತದೆ.) ಎಂದು ಈ ರೀತಿಯಾಗಿ ಸನತ್ಕುಮಾರನು ವೈರಾಗ್ಯವನ್ನು ಯೋಚಿಸಿ ವಿಜಯಕುಮಾರನೆಂಬ ಹಿರಿಯ ಮಗನಿಗೆ ಅರಸುತನವನ್ನು ಕೊಟ್ಟು ಪರಿಹಾರಕ್ಕೆಲ್ಲ ತೊಂದರೆಯಿಲ್ಲದಂತೆ ಮಾಡಿ, ಒಳಗಿನ ಮತ್ತು ಹೊರಗಿನ ಪರಿಗ್ರಹಗಳನ್ನೆಲ್ಲ ಬಿಟ್ಟು ಹಲವರು ರಾಜರನ್ನು ರಾಜಕುಮಾರರನ್ನು ಮಾಡಿ ವಿನಯಂಧರಸ್ವಾಮಿಗಳ ಬಳಿಯಲ್ಲಿ ತಪಸ್ಸನ್ನು ಸ್ವೀಕರಿಸಿ ಮೂರು ರಾತ್ರಿ ದೀಕ್ಷೆಯ ಉಪವಾಸವನ್ನು ಮಾಡಿ ದೇಹಧಾರಣೆಗಾಗಿ ಭಿಕ್ಷಾಟನಕ್ಕೆ ಹೋದನು. ಆ ಸಂದರ್ಭದಲ್ಲಿ ಓರ್ವ ಬಡ ಮುದುಕಿ ಅವನನ್ನು ಪಾರಣೆಗಾಗಿ ನಿಲ್ಲಿಸಿ, ಹಾರಕದ ಅಕ್ಕಿಯ ಅನ್ನವನ್ನೂ ಅವರೆಕಾಯಿ ಹುಳಿಯನ್ನೂ ಎಣ್ಣೆಯನ್ನೂ ಆಡಿನ ಮಜ್ಜಿಗೆಯನ್ನೂ ಬಡಿಸಿದಳು. ಸನತ್ಕುಮಾರಋಷಿ ಅಮೃತವನ್ನು ಉಣ್ಣುವ ಹಾಗೆ ಅದನ್ನು ಉಂಡು, ಆ ಮೇಲೆ ಮೂರುರಾತ್ರಿಗಳ ಮಟ್ಟಿಗೆ ಆಹಾರನಿವೃತ್ತಿಯ ಪ್ರತಿಜ್ಞೆಯನ್ನು ಸ್ವೀಕರಿಸಿದರು. ಅಂದಿನಿಂದ ತೊಡಗಿ ಆಹಾರದಲ್ಲಿ ಆದ ದೋಷದಿಂದ ಕಜ್ಜಿ, ಜ್ವರ, ಕೆಮ್ಮು, ಉಬ್ಬಸ, ಅತಿಸಾರ, ಕಣ್ಣುನೋವು – ಹೊಟ್ಟನೋವುಗಳು ಎಂದು ಇವೇ ಮೊದಲಾದ ಏಳು ನೂರು ರೋಗಗಳನ್ನು ನೂರುವರ್ಷಗಳವರೆಗೆ ಚೆನ್ನಾಗಿ ಸಹಿಸಿ ಅತ್ಯಂತ ಭಯಂಕರವಾದ ದೀಪ್ತತಪ, ಮಹಾತಪ,

ಉಗ್ರೋಗ್ರತಪದಿಂ ದೀಪ್ತತಪಂ ಮಹಾತಪಂ ಘೋರತಪಮೆಂದಿವು ಮೊದಲಾಗೊಡೆಯ ತಪಂಗಳಂ ಗೆಯ್ಯೆ ತಪದ ಮಹಾತ್ಮ್ಯದಿಂದಂ ಅಮೋಷ ಖೇಳೋಷ ಜವೋಷ ವಿಪ್ಪೋಷ ಸರ್ವೋಷಯೆಂಬಿವು ಮೊದಲಾಗೊಡೆಯ ಋದ್ಧಿಗಳ್ ಪುಟ್ಟಿದೊಡಂ ವ್ಯಾಗೆ ತಕ್ಕ ಪ್ರತೀಕಾರಮಂ ಮಾಡದಿಂತು ಫೋರವೀರ ತಪಶ್ಚರಣಂಗೆಯ್ಯೆ ಮತ್ತೊಂದು ದಿವಸಂ ಸೌಧರ್ಮೇಂದ್ರಂ ತನ್ನ ಸಭೆಯೊಳ್ ಸಿಂಹಾಸನಮಸ್ತಕಸ್ಥಿತನಾಗಿ ಧರ್ಮಶ್ರವಣಾನಂತರಂ ರಿಸಿಯರ್ಕಳ ಗುಣಂಗಳಂ ವ್ಯಾವರ್ಣಿಸುತ್ತಿರ್ದು ಸನತ್ಕುಮಾರರಿಸಿಯ ಗುಣಗಣಮನಾದಮಾನುಂ ಕೈಕೊಂಡಿಂತೆಂದು ಪೇೞಲ್ ತಗುಳ್ದೊನ್ ವಾತಪಿತ್ತಶ್ಲೇಷ್ಮ ಶ್ವಾಸ ಖಾಸ ಜರಾರುಚಿ ಛರ್ದ್ಯತಿಸಾರಾಕ್ಷಿ ಕುಕ್ಷಿವೇದನಾಸೋಟಕಂ ಪಿಟಕಂ ಶೂಲ ಭಗಂದರಂ ಕುಷ್ಠ ಕ್ಷಯ ಗಂಡ ಶಿರೋವೇದನೆ ಮೊದಲಾಗೊಡೆಯವೇೞುನೂಱು ವ್ಯಾಗಳೊರ್ಮೊದಲೆ ಮೆಯ್ಯೊಳ್ ಪುಟ್ಟಿದೊಡಂ ತಾಮುಂ ಋದ್ಧಿಸಂಪನ್ನರಾಗಿಯುಂ ವ್ಯಾಗೆ ತಕ್ಕ ಪ್ರತೀಕಾರಂಗೆಯ್ಯದೆ ನೂಱುವರುಷಂಬರೆಗಂ ಒಳ್ಳಿತ್ತಾಗಿ ಸೈರಿಸಿ ತಪಂಗೆಯ್ದಪ್ಪರೆಂದು ಸೌಧರ್ಮೇಂದ್ರಂ ಪೊಗೞ್ದೊಡೆ ಕೇಳ್ದು ಮುನ್ನೆ ಬಂದ ದೇವರ್ಕಳಿರ್ವರುಂ ವೈದ್ಯರ ರೂಪಿನೊಳ್ ಮರ್ದುಗಳಂ ಪಸುಂಬೆಯೊಳ್ ತೆಕ್ಕನೆ ತೀವಿ ಪರೀಕ್ಷಿಸಲ್ಕೆಂದು ಸಾರವಂದು ವಂದಿಸಿ ರೂಪಿನೊಳ್ ಮರ್ದುಗಳಂ ಪಸುಂಬೆಯೊಳ್ ತೆಕ್ಕನೆ ತೀವಿ ಪರೀಕ್ಷಿಸಲ್ಕೆಂದು ಸಾರೆವಂದು ವಂದಿಸಿ ಇಂತೆಂದರ್ ಭಟಾರಾ ನಿಮ್ಮ ಮೆಯ್ಯ ಕುತ್ತಂಗಳೆಲ್ಲಮಂ ಮರ್ದಂ ಮಾಡಿ ಕಿಡಿಸಲ್ ನೆಱೆವೆವು ಮರ್ದಂ ಮಾಡುವುದನೊಡಂಬಡವೇೞ್ಕು ಮೆಂದೊಡೆ ಭಟ್ಟಾರರುಂ ಮೋನಂಗೊಂಡು ನುಡಿಯದೆ ಕೆಮ್ಮಗಿರ್ದೊಡೆ ಪಿರಿದುಂ ಬೇಗಮಿರ್ದೆೞ್ದುಪೋಗಿ ಮಱುದಿವಸಂ ಮಗುೞ್ದು ಬಂದಿಂತೆಂದರ್ ಭಟಾರಾ ವೈದ್ಯಶಾಸ್ತ್ರದೊಳಾದಮಾನುಂ ಕುಶಲರೆ

ಘೋರತಪ ಎಂದಿವೇ ಮೊಲಾಗುಳ್ಳ ತಪಸ್ಸುಗಳನ್ನು ಮಾಡಿದರು. ತಪಸ್ಸಿನ ಮಹತ್ವದಿಂದ ಅವರಿಗೆ ಆಮೋಷ, ಖೇಳೋಷ, ವಿಪ್ಪೋಷ, ಸರ್ವೋಷ – ಎಂಬಿವೇ ಮುಂತಾಗಿರುವ ಸಿದ್ಧಿ ಸಂಪತ್ತುಗಳು (ದಿವ್ಯಶಕ್ತಿಗಳು) ಉಂಟಾದವು. ಆದರೂ ರೋಗಕ್ಕೆ ತಕ್ಕುದಾದ ಪರಿಹಾರೋಪಾಯಗಳು (ದಿವ್ಯಶಕಿಗಳು) ಉಂಟಾದವು. ಆದರೂ ರೋಗಕ್ಕೆ ತಕ್ಕುದಾದ ಪರಿಹಾರೋಪಾಯವನ್ನು (ಚಿಕಿತ್ಸೆಯನ್ನು) ಮಾಡದೆ, ಈ ರೀತಿಯಾಗಿ ಉಗ್ರರೀತಿಯ ವೀರತ್ವದ ತಪಸ್ಸನ್ನು ಮಾಡಿದರು. ಆಮೇಲೆ, ಒಂದು ದಿವಸ ಸೌಧಮೇಂದ್ರನು ತನ್ನ ಸಭೆಯಲ್ಲಿ ಸಿಂಹಾಸನದ ಮೇಲೆ ಮಂಡಿಸಿದ್ದು ಧರ್ಮವಿಚಾರವನ್ನು ಕೇಳಿದ ನಂತರ ಋಷಿಗಳ ಗುಣಗಳನ್ನು ವಿಶೇಷವಾಗಿ ವರ್ಣಿಸುತ್ತಿದ್ದನು. ಆ ಸಂದರ್ಭದಲ್ಲಿ ಸನತ್ಕುಮಾರಋಷಿಗಳ ಗುಣಗಳ ಸಮೂಹವನ್ನು ವಿಶೇಷವಾಗಿ ವರ್ಣಿಸಲು ಉದ್ಯುಕ್ತನಾಗಿ ಈ ರೀತಿಯಾಗಿ ಹೇಳತೊಡಗಿದನು. – “ಸನತ್ಕುಮಾರ ಋಷಿಗಳು ತಮ್ಮ ಶರೀರದಲ್ಲಿ ವಾತ(ವಾಯು), ಪಿತ್ತ, ಕಫ, ಕೆಮ್ಮು, ಮುಪ್ಪು, ಬಾಯಿರುಚಿಯಿಲ್ಲದಿರುವುದು, ವಾಂತಿ, ಭೇದಿ, ಕಣ್ಣುನೋವು, ಹೊಟ್ಟೆನೋವು, ಬಾವು, ಕುರು, ನೋವು, ಮೂಲವ್ಯಾ, ಕುಷ್ಠ, ಕ್ಷಯ, ಗಂಡಮಾಲೆ, ತಲೆಸಿಡಿತ – ಮುಂತಾಗಿರುವ ಏಳುನೂರು ರೋಗಗಳು ಒಮ್ಮೆಗೇ ಉಂಟಾದರೂ ತಾವೂ ಆ ರೀತಿ ತಪಸ್ಸಿದ್ಧಿ ಸಂಪತ್ತಿನಿಂದ ಕೂಡಿದವರಾಗಿದ್ದರೂ ರೋಗಕ್ಕೆ ತಕ್ಕುದಾದ ಚಿಕಿತ್ಸೆಯನ್ನು ಮಾಡದೆ, ನೂರುವರ್ಷಗಳವರೆಗೆ ಚೆನ್ನಾಗಿ ಸಹಿಸಿಕೊಂಡು ತಪಸ್ಸು ಮಾಡುತ್ತಿದ್ದಾರೆ* ಎಂದು ಸೌಧರ್ಮೇಂದ್ರನು ಹೊಗಳಿದನು. ಇದನ್ನು ಕೇಳಿ ಹಿಂದೆ ಒಮ್ಮೆ ಬಂದಿದ್ದ ದೇವತೆಗಳಿಬ್ಬರೂ ವೈದ್ಯರ ರೂಪದಲ್ಲಿ ಔಷಗಳನ್ನು ಹಸುಬೆ ಚೀಲದಲ್ಲಿ ಭರ್ತಿಯಾಗಿ ತುಂಬಿಸಿಕೊಂಡು ಪರೀಕ್ಷಿಸುವ ಉದ್ದೇಶದಿಂದ ಸಮೀಪಕ್ಕೆ

ಮುಂ ಗ್ರ್ರಂಥಾರ್ಥಸ್ವರೂಪದಿಂದೆಲ್ಲಾ ಕುಶಲರೆಮುಂ ಕರ್ಮಜ್ಞರೆಮುಂ ಮರ್ದುಗಳುಮಭಿನವಂಗಳಾದಮೊಳ್ಳಿದವಿರ್ದುವುಂ ನಿಮ್ಮ ಮೆಯ್ಯ ಕುತ್ತಂಗಳೆಲ್ಲಮನೇೞು ದಿವಸದಿಂದೊಳಗೆ ಕಿಡಿಸಿ ನೀರೋಗಮಪ್ಪಂತಿರೆ ಮಾಡುವೆವು ಬೞಕ್ಕೇನುಂ ಸಂಕ್ಲೇಸಮಿಲ್ಲದೆ ತಪಂಗೆಯ್ಯಿಮೆಂದೊಡೆ ಭಟಾರರವರೊಡನೆ ನುಡಿವಾಗಳುಗುೞ ಸೀಕರಂಗಳ್ ತಮ್ಮ ಮುಂಗೆಯ್ಯ ಮೇಗೆ ಬಿೞ್ದೊಡೆ ಬೆರಲಿಂ ಸೀಂಟಿ ತೋಱದಾಯೆಡೆ ಸುವರ್ಣಾಯಮಾನವಾಗಿ ತೊಳಗುತ್ತಿರ್ದ ಮೆಯ್ಯ ತೇಜಮುಮಂ ದೇವರ್ಕ್ಕಳ್ ವಿಸ್ಮಯಂಬಟ್ಟು ನೋಡುತ್ತಿರೆ ಭಟಾರರಿಂತೆಂದರೆಮಗೆ ಮರ್ದು ಬಾೞ್ತೆಯಪ್ಪೊಡೆಮಗಾಮೆ ವ್ಮರ್ದಂ ಬಲ್ಲೆಮೆಮಗದು ಬಾೞ್ತೆಯಲ್ತು ನೀಮುಂ ಜಾತಿಜರಾ ಮರಣಂಗಳೆಂಬೆಮ್ಮ ಕುತ್ತಮಂ ಕಿಡಿಸಲಾರ್ಪೊಡಾ ಮರ್ದನೊಡಂಬಡುವೆಮುೞದಾವ ಮರ್ದುಮನೊಡಂಬಡುವೆಮಲ್ಲೆಮೆಂದೊಡೆ ದೇವರ್ಕಳುಮಿಂತೆಂದರ್ ಜಾತಿ ಜರಾಮರಣಂಗಳೆಂಬ ಕುತ್ತಮಂ ಕಿಡಿಸಲ್ಕಾಮಾಱೆಮಾ ಕುತ್ತಮಾ ಕಿಡಿಸಲ್ಕೆ ಭಟಾರಾ ನೀಮೆ ಸಮರ್ಥರಿರ್ ಪರಮ ವೈದ್ಯರಿರದರ್ಕ್ಕೆಂದು ಮತ್ತಂ ದೇವರ್ಕಳೆಂದರ್ ಭಟಾರಾ ಸೌಧರ್ಮೇಂದ್ರಂ ನಿಮ್ಮ ತಪದೊಳಪ್ಪ

ಬಂದು ನಮಸ್ಕರಿಸಿ ಹೀಗೆಂದರು “ಪೂಜ್ಯರೇ, ನಿಮ್ಮ ದೇಹದ ರೋಗಗಳೆಲ್ಲವನ್ನೂ ಔಷಧ ಮಾಡಿ ಪರಿಹರಿಸಲು ನಾವು ಸಮರ್ಥರಾಗಿದ್ದೇವೆ. ಮದ್ದು ಮಾಡಲು ನೀವು ಒಪ್ಪಬೇಕು. * ಹೀಗೆ ಹೇಳಿದಾಗ ಋಷಿಗಳು ಮೌನವನ್ನು ತಾಳಿ, ಮಾತಾಡದೆ ಸುಮ್ಮನಿರಲು, ಬಹಳ ಹೊತ್ತು ಇದ್ದು ಎದ್ದುಹೋದರು. ಮರುದಿವಸ ಆ ದೇವತೆಗಳು ಮರಳಿ ಬಂದು ಹೀಗೆಂದರು – “ಪೂಜ್ಯರೇ, ನಾವು ವೈದ್ಯಶಾಸ್ತ್ರದಲ್ಲಿ ಅತ್ಯಂತ ಪ್ರವೀಣರಾಗಿದ್ದೇವೆ, ಮತ್ತು ವೈದ್ಯಗ್ರಂಥಗಳ ಅರ್ಥವನ್ನು ತಿಳಿದು ಕುಶಲರಾಗಿದ್ದೇವೆ. ಕಾರ್ಯವನ್ನು ಬಲ್ಲವರೂ ಆಗಿದ್ದೇವೆ. ಮದ್ದುಗಳು ಹೊಸತಾಗಿವೆ, ಬಹಳ ಒಳ್ಳೆಯವಾಗಿವೆ. ನಿಮ್ಮ ಶರೀರದ ಎಲ್ಲ ರೋಗಗಳನ್ನು ಏಳುದಿವಸಗಳೊಳಗೆ ಗುಣಪಡಿಸಿ ರೋಗವೇ ಇಲ್ಲದವರನ್ನಾಗಿ ಮಾಡುವೆವು. ಆಮೇಲೆ ಏನೊಂದೂ ಕಷ್ಡವಿಲ್ಲದೆ ತಪಸ್ಸನ್ನು ಮಾಡಿ* ಎಂದು ಹೇಳಿದರು. ಹೀಗೆ ಹೇಳಿದಾಗ ಋಷಿಗಳು ಅವರೊಂದಿಗೆ ಮಾತಾಡುವಾಗ ಎಂಜಲಿನ ತುಂತುರು ಹನಿಗಳು ಅವರ ಮುಂಗೈಯ ಮೇಲೆ ಬೀಳಲು, ಅವನ್ನು ಬೆರಲಿನಿಂದ ತೊಡೆದರು. ಆಗ ಕಾಣಿಸಿದ ಆ ಸ್ಥಳ ಚಿನ್ನದ ಬಣ್ಣದಂತಾಗಿ ಹೊಳೆಯುತ್ತಿತ್ತು. ಅಂತಹ ಋಷಿಗಳು ಅವರೊಡನೆ ಹೀಗೆಂದರು – “ನಮಗೆ ಮದ್ದಿನಿಂದ ಉಪಯೋಗವಾಗುವುದಾದರೆ ನಮಗೆ ಬೇಕಾದ ಮದ್ದು ನಮಗೇ ಗೊತ್ತಿದೆ. ನಮಗದು ಪ್ರಯೋಜನವಿಲ್ಲ. ನೀವು ಹುಟ್ಟು – ಮುಪ್ಪು – ಸಾವುಗಳೆಂಬ ನಮ್ಮ ರೋಗವನ್ನು ಪರಿಹಾರಮಾಡಬಲ್ಲವರಾದರೆ ಆ ಮದ್ದನ್ನು ಮಾಡಲು ಒಪ್ಪುತ್ತೇವೆ. ಇನ್ನುಳಿದ ಯಾವ ಮದ್ದನ್ನು ಮಾಡುವುದಕ್ಕೂ ಒಪ್ಪುದಿಲ್ಲ* ಎಂದರು. ಅದಕ್ಕೆ ದೇವತೆಗಳು – “ಪೂಜ್ಯರೇ, ಹುಟ್ಟು – ಮುಪ್ಪು – ಸಾವುಗಳೆಂಬ ರೋಗಗಳನ್ನು ಪರಿಹಾರ ಮಾಡಲು ನಾವು ಸಮರ್ಥರಲ್ಲ. ಆ ರೋಗವನ್ನು ವಾಸಿಮಾಡಲು ನೀವೇ ಸಮರ್ಥರು. ಅದಕ್ಕೆ ನೀವು ಅತಿ ಶ್ರೇಷ್ಠ ವೈದೈರಾಗಿರುವಿರಿ* ಎಂದರು. ಆಮೇಲೆ ದೇವತೆಗಳು ಹೀಗೆಂದರು – “ಋಷಿಗಳೇ, ಸೌಧರ್ಮೇಂದ್ರನು ನಿಮ್ಮ ತಪಸ್ಸಿನಿಂದಾದ ಗುಣಗಳನ್ನೂ (ಸಿದ್ಧಿ ಸಂಪತ್ತಗಳನ್ನೂ) ರೋಗಗಳನ್ನು ಸಹಿಸಿಕೊಂಡು ಮಾಡುವ

ಗುಣಗಳುಮಂ ವ್ಯಾಗಳಂ ಸೈರಿಸಿ ನೆಗೞ್ವ ನೆಗೞ್ತೆಯುಮಂ ದೇವರ್ಕಳ ಸಭೆಯ ನಡುವೆಯಾದಮಾನುಂ ಕೈಕೊಂಡು ಪೊಗೞ್ದೊಡಾಮಿಂದ್ರನ ಮಾತಂ ನಂಬದೆ ನಿಮ್ಮಂ ಪರೀಕ್ಷಿಸಲ್ಕೆಂದು ಬಂದೆವು ಸೌಧರ್ಮೇಂದ್ರನ ಪೊಗೞ್ದುದೇನುಂ ತಪ್ಪೊಲ್ಲೆಂದು ನುಡಿದು ಗುಣಂಗೊಂಡು ಮಗುೞ್ದು ವಂದಿಸಿ ಮರ್ದುಗಳೆಲ್ಲಮನೊಂದು ಪೞವಾವಿಯೊಳ್ ಪೊಯ್ದು ದೇವರ್ಕಳ್ ತಮ್ಮ ದೇವಲೋಕಕ್ಕೆ ವೋದೊರಾ ಮರ್ದಿನ ಬಾವಿಯ ನೀರಂ ಮಿಂದರ್ಗ್ಗೆಲ್ಲಂ ಕುತ್ತಂಗಳ್ ಕಿಡುವುವಾದವು ಸನತ್ಕುಮಾರಭಟಾರರುಮೇೞುನೂಱುಂ ವ್ಯಾಗಳಂ ನೂಱುವರುಷಂಬರೆಗಂ ಸೈರಿಸಿ ಘೋರವೀರ ತಪಶ್ಚರಣಂಗೆಯ್ದು ಆಲದ ಮರದ ಕೆೞಗೆ ಸಂನ್ಯಸನಂಗೆಯ್ದು ಸಮಾಮರಣದಿಂ ಮುಡಿಪಿ ಮಿಕ್ಕ ರತ್ನತ್ರಯಂಗಳಂ ಸಾಸಿ ಸನತ್ಕುಮಾರಕಲ್ಪದೊಳ್ ಏೞು ಸಾಗರೋಪಮಾಯುಷ್ಯಸ್ಥಿತಿಯನೊಡೆಯೊನಿಂದ್ರನಾಗಿ ಪುಟ್ಟಿದೊಂ ಮತ್ತಾರಾಧಕರಪ್ಪ ಭವ್ಯರ್ಕಳೆಲ್ಲಂ ಸನತ್ಕುಮಾರಭಟಾರರಂ ಮನದೊಳ್ ಬಗೆದು ವ್ಯಾಗಳೊಳಪ್ಪ ವೇದನೆಗಳುಮಂ ಪಸಿವುಂ ನೀರೞ್ದೆ ಮೊದಲಾಗೊಡೆಯ ಬಾಧೆಯುಮಂ ಸೈರಿಸಿ ದೇವರಂ ಧ್ಯಾನಿಸುತ್ತಂ ಪಂಚನಮಸ್ಕಾರಮಂ ಮನದೊಳುಚ್ಚರಿಸುತ್ತಂ ಮಿಕ್ಕ ದರ್ಶನ ಜ್ಞಾನ ಚಾರಿತ್ರಮಗಳಂ ಸಾಸಿ ಸ್ವರ್ಗಾಪವರ್ಗಸುಖಂಗಳನೆಯ್ದುಗೆ

ಕಾರ್ಯಗಳನ್ನೂ ದೇವತೆಗಳ ಸಭಾಮಧ್ಯದಲ್ಲಿ ಅತಿಶಯವಾಗಿ ಹೇಳಲು ಉದ್ಯೋಗಿಸಿ, ಹೊಗಳಿದರು. ಆಗ ನಾವು ಇಂದ್ರನ ಮಾತನ್ನು ನಂಬದೆ ನಿಮ್ಮನ್ನು ಪರೀಕ್ಷಿಸಿ ತಿಳಿಯುವುದಕ್ಕಾಗಿ ಬಂದಿರುತ್ತೇವೆ. ಸೌಧರ್ಮೇಂದ್ರನು ಹೊಗಳಿದುದರಲ್ಲಿ ಏನೂ ತಪ್ಪಿಲ್ಲ* ಎಂದು ಹೇಳಿದರು. ಋಷಿಗಳ ಗುಣವನ್ನು ಅನುಗ್ರಹಿಸಿಕೊಂಡು ಪುನಃ ನಮಸ್ಕರಿಸಿ ಮದ್ದುಗಳನ್ನೆಲ್ಲ ಒಂದು ಹಳೆಯ ಬಾವಿಯೊಳಗೆ ಹೊಯ್ದು, ಆ ದೇವತೆಗಳು ತಮ್ಮ ದೇವಲೋಕಕ್ಕೆ ತೆರಳಿದರು. ಆ ಮದ್ದಿನ ಬಾವಿಯ ನೀರಿನಲ್ಲಿ ಸ್ನಾನ ಮಾಡಿದವರಿಗೆಲ್ಲ ರೋಗಗಳು ಪರಿಹಾರಗೊಳ್ಳುವವಾದವು. ಸನತ್ಕುಮಾರಋಷಿಗಳು ಏಳುನೂರು ಬಗೆಯ ರೋಗಗಳನ್ನು ನೂರು ವರ್ಷಗಳವರೆಗೂ ಸಹಿಸಿಕೊಂಡು ಉಗ್ರವೂ ಶಕ್ತಶಾಲಿಯೂ ಆದ ತಪಸ್ಸನ್ನು ಆಚರಿಸಿ ಆಲದ ಮರದ ಕೆಳಗೆ ಸಂನ್ಯಾಸವನ್ನು ಸ್ವೀಕರಿಸಿ ಸಮಾಮರಣದಿಂದ ತೀರಿಹೋಗಿ, ಸಮ್ಯಗ್ದರ್ಶನ, ಸಮ್ಯಗ್ಞಾನ, ಸಮ್ಯಕ್ಚಾರಿತ್ರಗಳೆಂಬ ಶ್ರೇಷ್ಠವಾದ ರತ್ನತ್ರಯವನ್ನು ಪಡೆದು ಸನತ್ಕುಮಾರ ಎಂಬ ಸ್ವರ್ಗದಲ್ಲಿ ಏಳು ಸಾಗರಕ್ಕೆ ಸಮಾನವಾದ ಆಯುಷ್ಯವನ್ನು ಉಳ್ಳ ಇಂದ್ರನಾಗಿ ಜನಿಸಿದನು. ಆರಾಧನೆ ಮಾಡತಕ್ಕವರಾದ ಭವ್ಯ(ಮೊಕ್ಷಾಪೇಕ್ಷಿ) ಜನರೆಲ್ಲರೂ ಸನತ್ಕುಮಾರಋಷಿಗಳನ್ನು ಮನಸ್ಸಿನಲ್ಲಿ ಧ್ಯಾನಿಸಿಕೊಂಡು ರೋಗಗಳು ಬಂದಾಗ ಉಂಟಾಗುವ ನೋವುಗಳನ್ನು ಹಸಿವು ಬಾಯಾರಿಕೆ ಮುಂತಾಗಿರುವ ತೊಂದರೆಯನ್ನೂ ಸಹಿಸಿ ದೇವರನ್ನು ಧ್ಯಾನಮಾಡುತ್ತ ಅರ್ಹಂತರು, ಸಿದ್ಧರು, ಆಚಾರ್ಯರು, ಉಪಾಧ್ಯಾಯರು, ಸಾಧುಗಳು – ಎಂಬ ಪಂಚಪರಮೇಷ್ಠಿಗಳಿಗೆ ಮಾಡುವ ಪಂಚನಮಸ್ಕಾರದ ಮಂತ್ರವನ್ನು ಮನಸ್ಸಿನಲ್ಲಿಯೇ ಉಚ್ಚಾರಣೆ ಮಾಡುತ್ತ ಶ್ರೇಷ್ಠವಾದ ದರ್ಶನ – ಜ್ಞಾನ – ಚಾರಿತ್ರಗಳೆಂಬ ಮೂರು ರತ್ನಗಳನ್ನು ಪಡೆದು ಸ್ವರ್ಗ – ಮೋಕ್ಷಗಳ ಸುಖಗಳನ್ನು ಪಡೆಯಲಿ.