ಗೆಳೆಯರ ಜೊತೆ ಹರಟೆ ಅನಿವಾರ್ಯವಾಗಿ ಈಚಿನ ಸಾಹಿತ್ಯದ ಕಡೆ ಹರಿಯುತ್ತದೆ. ಎಲ್ಲರೂ ಸ್ವತಃ ಲೇಖಕರು; ತಮ್ಮ ಬಗ್ಗೆ ತೀವ್ರ ಅತೃಪ್ತರು. ಬೇರೆಯವರ ಕೃತಿಗಳು ಮೆಚ್ಚಿಗೆಯಾದರೂ ಸ್ವತಃ ಕಸುಬುಗಾರರಾದ್ದರಿಂದ ಇವರಿಗೆ ಕಾಣಿಸುತ್ತವೆ.

ಇನ್ನೊಬ್ಬರ ಬಗ್ಗೆ ಮಾಡುವ ಟೀಕೆ ಸ್ವಂತದ ಕೊರತೆಗಳ ವಿಮರ್ಶೆ ಆಗುತ್ತದೆ; ಅಥವಾ ತಾನೇ ಈ ಕೃತಿಯನ್ನು ಬರೆದಿದ್ದರೆ ಹೇಗೆ ಬರೆಯುತ್ತಿದ್ದೆ ಎನ್ನುವ ವ್ಯಾಖ್ಯಾನವಾಗುತ್ತದೆ. ಅಥವಾ ಇನ್ನೊಬ್ಬರ ಕೃತಿಗಳಲಿ ಚೆನ್ನಾಗಿರುವುದನ್ನು ಮೆಚ್ಚಿ ಆಡುವ ಮಾತು, ಈ ಅಂಶ ತನ್ನ ಕೃತಿಗಳಲ್ಲೂ ಇರುವ ಗುಣ ಎಂಬುದನ್ನು ಪರೋಕ್ಷವಾಗಿ ಹೇಳಿಕೊಂಡಂತಾಗುತ್ತದೆ.

ಸಾಮಾನ್ಯವಾಗಿ ಈಚೆಗೆ ಗೆಳೆಯರ ನಡುವೆ ಎಲ್ಲೆಲ್ಲೊ ಚರ್ಚೆಗೆ ಬರುವ ವ್ಯಕ್ತಿಗಳು: ಅಡಿಗ, ಲಂಕೇಶ್, ಗಿರೀಶ್, ಪಾಟೀಲ್, ಕಂಬಾರ, ತಿರುಮಲೇಶ್, ಮತ್ತೆ ಪತ್ರಿಗಳಲ್ಲೆಲ್ಲ ತುಂಡು ಸಾಲುಗಳಲ್ಲಿ ತೋಡಿಕೊಳ್ಳುತ್ತಿರುವ ಸ್ವಂತ ಮುಖವಿರದ ನೂರಾರು ಮಂದಿ ತರುಣರು. ಯಾಕೆ ನಮ್ಮ ವಾರಿಗೆಯ ಲೇಖಕರ ನಂತರ ಜೀವಂತವಾದ ಒಂದು ಹೊಸ ಜನಾಂಗ ಹುಟ್ಟಲೇ ಇಲ್ಲ? ಆಲನಹಳ್ಳಿ, ಗೋಪಿ ಮತ್ತು ಗಾಂಡಲೀನದ ಲಕ್ಷ್ಮಣರಾವ್, ‘ಸಾಕ್ಷಿ’ಯಲ್ಲಿ ಈಚೆಗೆ ಕಥೆ ಪ್ರಕಟಿಸಿದ ರಾಮಚಂದ್ರದೇವ ತುಂಬ ಸ್ವಾರಸ್ಯವಾಗಿ ಬರೆಯುತ್ತಾರೆ ನಿಜ; ಆದರೆ ಏನು ಹೊಸದನ್ನೂ ಇವರು ಹೇಳುವಂತೆ ಕಾಣಿಸುವುದಿಲ್ಲವಲ್ಲ ಎಂದು ಉದ್ಗಾರವೇಳುತ್ತದೆ. ಈಗಿನ್ನೂ ಬರೆಯುತ್ತಿರುವವರ ಬಗ್ಗೆ ತೀರ್ಮಾನಿಸೋದು ಅವಸರ ಮಾಡಿದಂತಾಗುತ್ತದೆ ಎಂದು ಒಬ್ಬರಿಗೊಬ್ಬರು ಅಂದುಕೊಳ್ಳುತ್ತೇವೆ. ಹಳ್ಳಿಯ ಅನುಭವಗಳನ್ನು ಚೆನ್ನಾಗಿ ಬರೆದಷ್ಟು ಆಲನಹಳ್ಳಿ ನಗರದ ಅನುಭವವನ್ನು ಯಾಕೆ ಬರೆಯುವುದಿಲ್ಲ? ಬಾಲ್ಯದ ಅನುಭವದ ಕ್ಯಾಪಿಟಲ್ ಎಷ್ಟು ದಿನ ಉಳಿದೀತು? ಲಕ್ಷ್ಮಣರಾವ್ ಪೋಲಿ ಮಾತು, ವೈಯಕ್ತಿಕ ವ್ಯಾಕುಲದಲ್ಲೇ ತೃಪ್ತರಾಗಿಬಿಡುತ್ತಾರೊ? ಸಾಂಸ್ಕೃತಿಕವಾಗಿ ಮಹತ್ವದ್ದಾಗಬಲ್ಲ ಬರವಣಿಗೆಗೆ ಬೇಕಾದ ಕಳಕಳಿ ಯಾಕೆ ಯಾರಲ್ಲೂ ಕಾಣಿಸುವುದಿಲ್ಲ? -ಎಂದು ಮಾತು ಮತ್ತೆ ಬೆಳೆಯುತ್ತದೆ.

ಕಂಬಾರ, ಲಂಕೇಶ್, ಗಿರೀಶ್, ಪಾಟೀಲ, ತಿರುಮಲೇಶ್ – ಈ ಕಡೆ ಮಾತು ಹೊರಳಿದ್ದೆ ಪರಿಚಿತ ವಿಮರ್ಶಾತತ್ವಗಳೆಲ್ಲ ಸಾಲದೆನ್ನಿಸಿ ಹಾಗೂ ಹೌದು ಹೀಗೂ ಹೌದು ಮಾತುಗಳು ಪ್ರಾರಂಭವಾಗುತ್ತವೆ. ಈ ದಶಕದ ಅತ್ಯುತ್ತಮ ಪದ್ಯಗಳನ್ನು ಬರೆದವರೂ ಅಡಿಗರಲ್ಲವೆ? ಅವರ ಅತ್ಯಂತ ವೈಯಕ್ತಿಕ ಕಾಳಜಿಗಳೆಲ್ಲವೂ ಸಾಂಸ್ಕೃತಿಕ ಕಾಳಜಿಗಳೂ ಆಗುತ್ತವಲ್ಲವೆ? ಗದ್ಯ ಬರೆಯುವಾಗ, ಭಾಷಣ ಮಾಡುವಾಗ, ಜನಸಂಘ ಸೇರಿ ಚುನಾವಣೆಗೆ ನಿಂತಾಗ ಇವರು ಎಷ್ಟು ಸರಳವಾಗಿ ನಡೆದುಕೊಂಡರೂ ಪತ್ರಿಕಾ ಲೇಖನಗಳಲ್ಲಿ ‘ಬೇರೆ ದಿಕ್ಕೇ ಇಲ್ಲ ಇದು ಮಾತ್ರ ಸತ್ಯ’ ಎನ್ನುಸುವಂತಹ ಒಂದೇ ಧಾಟಿಗೆ ಒಂದೇ ನಿಲುವಿಗೆ ಒಂದೇ ಮಾತಿಗೆ ಸಿಕ್ಕಿಬಿದ್ದಂತೆ ಕಂಡರೂ ಪದ್ಯದಲ್ಲಿ ಮಾತ್ರ ಹೇಗೆ ತನ್ನನ್ನೇ ತಾನು ಮೀರುತ್ತಾರೆ ಎಂದು ಆಶ್ಚರ್ಯವಾಗುತ್ತದೆ. “ಹನುಮದ್ವಿಕಾಸಕ್ಕೆ ಇಲ್ಲ ಎಲ್ಲೆ” ಎಂದು ಕೊನೆಯಾಗುವ ‘ವರ್ಧಮಾನ’ ಈಚಿನ ಅತ್ಯುತ್ತಮ ಪದ್ಯವಲ್ಲವೆ? ಏಕಕಾಲದಲ್ಲಿ ಚಿರಸತ್ಯವನ್ನೂ ಸಮಕಾಲೀನತೆಯನ್ನೂ ಒಳಗೊಳ್ಳುವಂತೆ ಬರೆಯುತ್ತಾರಲ್ಲವೆ? ವಯಸ್ಸಾದ ಪ್ರಬುದ್ಧ ಅಡಿಗರು ಕನ್ಸರ್ವೇಟಿವ್ ಧೋರಣೆಗೆ, ಯಥಾಸ್ಥಿತಿವಾದಕ್ಕೆ ಜಗ್ಗುತ್ತಿದ್ದರೂ ಈ ಲೋಕದ ವಾಸ್ತವತೆಗಳೇ ಚಿರಸತ್ಯಗಳು, ಬದುಕಿನ ಸಾಧ್ಯತೆ ಇಷ್ಟೇ ಎಂದು ಹೇಳುತ್ತಿರುವಾಗಲೂ ಇದಕ್ಕೆ ವಿರಿದ್ಧವಾದ ಭಾವುಕತೆ, ಕನಸು, ಅನುಭಾವ ಎಲ್ಲೆ ಮೀರುವ ಚಡಪಡಗಳಿಗೂ ಎಷ್ಟು ಅದ್ಭುತವಾಗಿ ಅವರ ಕವನಗಳಲ್ಲಿ ತೆರೆದುಕೊಂಡು ಬಿಡುತ್ತಾರಲ್ಲವೆ? ಪ್ರಜಾವಾಣಿಯಲ್ಲಿ ಪ್ರಕಟವಾದ ‘ಅಜ್ಜನೆಟ್ಟಾಲ’ ಈ ದೀಪಾವಳಿಯ ಅತ್ಯುತ್ತಮ ಕವನವಲ್ಲವೆ? ಆಲ ಮೇಲಕ್ಕೇರುತ್ತೆ, ಆದರೆ ಹೆಚ್ಚು ಏರಲಾರದೆ ಕೆಳಗಿಳಿಯುತ್ತೆ. ಏಳುಬೀಳಿನ ಈ ಅಧೋಗತಿಯಲ್ಲಿ ಕಲಿಕೆಯಲ್ಲಿ ನೆರಳಾಗುತ್ತೆ; ಬಾಲ್ಯದ ‘ಒಂದು ದಿವಸಕ್ಕೇನೆ ಎಷ್ಟು ಅಬ್ದ’ ಎನ್ನುವ ಅಚ್ಚರಿಯ ನೆನಪಾಗುತ್ತೆ; ರಾತ್ರೆ ಕನಸಿನಲ್ಲಿ ಎಲ್ಲಿಲ್ಲೊ ಹೋಗಿ ಹಗಲಾದೊಡನೆ “ಯಥಾಪ್ರಕಾರ ವಾಸ್ತವ ಕನಸು | ಸೊಂಡಿಲಾಡಿಸಿ ಮುಜುರೆ ಮಾಡಿ ನಿಲ್ಲುವ ದೊಡ್ಡ | ಹಸುರು ಗುಡ್ಡ”ವಾಗುತ್ತೆ; ಪರಂಪರೆಗೆ ಸಾಂಕೇತಿಕ ಕ್ಲೀಶೆಯಾದ್ದು ಬಾಲ್ಯದ ನೆನಪಿನ ನಿಜವಾದ ಆಲದ ಮರವಾಗಿ, ಈ ಮೂಲಕ ಪರಂಪರೆಯನ್ನು ಕುರಿತ ಆಲೋಚನೆಗೆ ಮತ್ತೆ ಆತ್ಮೀಯ ಪ್ರತಿಮೆಯಾಗಿ ಕವನದೊಳಗೆ “ಮೇಲುಮೇಲಕ್ಕಲ್ಲಿ ಕೆಳಕೆಳಕ್ಕೆ ಇಲ್ಲಿ ಏಕಕಾಲಕ್ಕೆ” ಬೆಳೆಯುತ್ತ, ‘ತುದಿ ಬುಡಗಳನ್ನೊಂದುಗೂಡಿಸುವ’ ಅವಶ್ಯಕತೆಯನ್ನು ಕಲುಸುತ್ತ ಎಷ್ಟು ಸಮೃದ್ಧವಾಗುತ್ತದೆಂಬುದನ್ನು ಕಂಡಾಗ ಅಡಿಗರ ಬಗ್ಗೆ ತುಂಬ ಕೃತಜ್ಞರಾಗುತ್ತೇವೆ. ಸಂಸ್ಕೃತ ಸಮಾಸ ಪದಗಳಲ್ಲಿ, ಅತಿ ಬಿಗಿಯಾದ ಲಯದಲ್ಲಿ ಇಕ್ಕಟ್ಟಿಗೆ ಸಿಕ್ಕಿ ಇವರ ಈಚಿನ ಕವನಗಳು ಉಸಿರಾಡದೇ ಹೋದಾವು ಎಂಬ ಅನುಮಾನವನ್ನು ‘ಅಜ್ಜ ನೆಟ್ಟಾಲ’ ನಿವಾರಿಸುತ್ತೆ. ಈ ಪದ್ಯ ಅಲ್ಲಲ್ಲಿ ಸಡಿಲವಾಯಿತೇನೊ, ಎರಡನೆ ಭಾಗ ಅನವಶ್ಯಕವಾಗಿ ಬೆಳೆಯಿತೇನೊ ಇತ್ಯಾದಿ ಅನುಮಾನಗಳು ಎದ್ದರೂ ಈಚಿನ ಅತ್ಯುತ್ತಮ ಕವನ ಇದು ಎನ್ನಿಸುತ್ತೆ. ಆದರೆ ಹಿಂದೆ ಹೇಳಿದ್ದೆಲ್ಲವುದಕ್ಕಿಂತಲೂ ಹೆಚ್ಚಿನದೇನನ್ನು ಅಡಿಗರಿಲ್ಲಿ ಹೇಳಿದ್ದಾರೆ? ಹೇಳಿದ್ದಾರೆಯೆ? ಎಂಬುದನ್ನು ಯೋಚಿಸುವುದೂ ಅಗತ್ಯವೆನ್ನಿಸುತ್ತೆ.

ದೀಪಾವಳಿ ಸಂಚಿಕೆಯ ಪ್ರಜಾವಣಿಯಲ್ಲಿ ತೇಜಸ್ವಿ ಬರೆದ ಮಾತುಗಳು ತೀರಾ ಅವಸರದವು; ನವ್ಯ ವಿಮರ್ಶೆಗೆ ಅನ್ಯಾಯ ಮಾಡುವಂಥವು. ‘ಆಡುಮಾತಲ್ಲೆ’ ಬರೆಯಬೇಕೆಂದು ಯಾರೂ ಹೇಳಿಲ್ಲ. ಯಾವ ಉತ್ತಮ ನವ್ಯ ಕವಿಯೂ ಬರಿ ‘ಆಡುಮಾತಲ್ಲಿ’ ಬರೆಯುತ್ತಿಲ್ಲ. ನಮ್ಮ ಭಾಷೆಯ ಎಲ್ಲ ಸಾಧ್ಯತೆಗಳನ್ನೂ ದುಡಿಸಿಕೊಂಡು ಬರೆಯುತ್ತಿರುವ ಲೇಖಕರು ಅಡಿಗರು. ಅಡಿಗರ ಕಾವ್ಯದಲ್ಲಿ  ದುಡಿಯುವ ಸಂಸ್ಕೃತಕ್ಕೂ ಕುವೆಂಪು ಕಾವ್ಯದಲ್ಲಿ ಭಾವುಕತೆಯ ತೋರುಗಾಣಿಕೆಯಾಗುವ ಸಂಸ್ಕೃತಕ್ಕೂ ಇರುವ ಅಂತರವನ್ನು ವಿಮರ್ಶಕ ಗಮನಿಸದೇ ಇರುವುದು ಸಾಧ್ಯವೆ? ಐತಿಹಾಸಿಕವಾಗಿ ಕುವೆಂಪು, ಬಿ.ಎಂ.ಶ್ರೀ., ಪು.ತಿ.ನ., ಯಾಕೆ ಮುಖ್ಯವೆಂಬುದು ನವ್ಯರಿಗೆ ತಿಳಿಯುದಿಲ್ಲವೆನ್ನುವುದು ತಪ್ಪು ಮಾತು. ಕುವೆಂಪು ಕಾದಂಬರಿಗಳ ಅತ್ಯುತ್ತಮ ವಿಮರ್ಶೆ ಬಂದಿರುವುದೂ ನವ್ಯರಿಂದ. ಜಿ.ಹೆಚ್. ನಾಯಕರು ಅದೇ ಸಂಚಿಕೆಯಲ್ಲಿ ಹೇಳಿದಂತೆ ‘ವ್ಯಕ್ತಿಯ ಅನುಭವ ಮತ್ತು ಸನ್ನಿವೇಶ ಸತ್ಯದಲ್ಲಿ ಜೀವನದ ಅರ್ಥವನ್ನು ನಿರಪೇಕ್ಷವಾಗಿ ಶೋಧಿಸಬೇಕೆಂಬ’ ನವ್ಯರ ತಿಳುವಳಿಕೆಯೇ ಇವರ ವಿಮರ್ಶೆಯನ್ನು ನಿರ್ದೇಶಿಸುತ್ತಿರುವುದು.

ಇವನು ಮಾಧ್ವ ಆದ್ದರಿಂದ ಇವನು ಹೀಗೆ ಬರೆಯುತ್ತಾರೆನೆನ್ನುವುದು ಬೈಗುಳದ ಮಾತು ಅಥವಾ ತುಂಟತನದ ಮಾತು. ತೇಜಸ್ವಿ ಈ ಧಾಟಿಗೆ ಇಳಿದಿರುವುದು ಆಶ್ಚರ್ಯ; ಅನವಶ್ಯಕ. ನವ್ಯರು ‘ಆಡುಮಾತಿನ ಲಯ’ದಲ್ಲಿ ಬರೆಯಬೇಕೆಂದು ಹೇಳಿದ್ದಾರೆಯೆ ಹೊರತು ‘ಬರಿ ಆಡುಮಾತಲ್ಲೆ’ ಬರೆಯಬೇಕೆಂದು ಎಲ್ಲೂ ಹೇಳಿಲ್ಲವೆಂದು ತೇಜಸ್ವಿಯಂತಹ ಪ್ರತಿಭಾವಂತ ಲೇಖಕರು ಗ್ರಹಿಸದೇ ಇರುವುದು ಇನ್ನೂ ದೊಡ್ಡ ಆಶ್ಚರ್ಯ. ಬರಿ ಆಡುಮಾತಲ್ಲೆ ಬರೆಯುತ್ತಿದ್ದವರು ನವೋದಯ ಕಾಲದ ಕೆಲವು ಲೇಖಕರೇ ವಿನಾ ನವ್ಯರಲ್ಲ. ರಾಜರತ್ನಂ ಮಾಡಿದಂತಹ ಪ್ರಯೋಗವನ್ನು ನವ್ಯರಾರೂ ಸೀರಿಯಸ್ಸಾಗಿ ಮಾಡಲು ಹೊರಟಿಲ್ಲ.

ಆಡುಮಾತಿನ ಸತ್ಯವನ್ನೂ ಗ್ರಾಂಥಿಕ ಭಾಷೆಯ ಸಂಭಾವ್ಯತೆಯನ್ನೂ ಏಕಕಾಲದಲ್ಲಿ ಒಳಗೊಂಡ, ಅಚ್ಚಗನ್ನಡದಲ್ಲಿ ಮೂರ್ತವಾದದ್ದರ ಜೊತೆಗೆ ಈ ಅನುಭವವನ್ನು ಅಮೂರ್ತ ವಿಚಾರಕ್ಕೆ ಒಯ್ಯಲು ಅವಶ್ಯವಾದ ಸಂಸ್ಕೃತದಲ್ಲಿ ಹೊಲಿದ ನಿಜವಾದ ಕನ್ನಡ ನಮಗೆ ಸಿಗುವುದು ನವ್ಯಸಾಹಿತ್ಯದ ಭಾಷೆಯಲ್ಲಿ ಅಲ್ಲವೆ? (ಇಂಗ್ಲಿಷಲ್ಲಿ ಆಂಗ್ಲೋಸ್ಯಾಕ್ಸನ್ ಮೂಲದ ಪದಗಳು ಮತ್ತು ಲ್ಯಾಟಿನ್ ಹೀಗೇ ಹೊಲಿದುಕೊಳ್ಳುತ್ತವೆ.) ನಾವು ಈಗ ಸೃಷ್ಟಿಸುತ್ತಿರುವ ಕೃತಿಗಳಲ್ಲಿ ಮೂರ್ತ ವಿವರಗಳಿಗೆ ಜೀವಾಳವಾಗುವ ಅಚ್ಚಗನ್ನಡ, ಪ್ರಬುದ್ಧ ವೈಚಾರಿಕತೆಗೆ ಅವಶ್ಯವಾದ ಸಂಸ್ಕೃತ, ವಚನಕಾರರಲ್ಲಿ ಬೇರಿರುವ ಮಾತು ಲಯಗಳು – ‘ಎಲ್ಲವೂ ಜೀವಂತವಾಗಿ ದುಡಿಯುತ್ತಿದ್ದವೆಂಬುದನ್ನು ಗಮನಿಸದೇ ತೇಜಸ್ವಿ ನಮ್ಮ ಲೇಖಕರಲ್ಲಿ ಎಷ್ಟು ಜನ ಮಾಧ್ವರೆಂಬ ರಿಸರ್ಚ್ ಮಾಡಿದ್ದಾರೆ. ಗರುಡ ಪುರಾಣದ ಪ್ರತಿಮೆಗಳನ್ನು ಎತ್ತಿಕೊಂಡು ಬರೆದ ಕವಿ ಮಾಧ್ವರೆ? ಮಾಧ್ವರು ಮಾತ್ರ ಗರುಡಪುರಾಣ ನಂಬುವರೆ? ತೇಜಸ್ವಿ ಈ ಬಗೆಯ ರಿಸರ್ಚ್ ಮಾಡುವುದರ ಬದಲು ತಾವೇ ಸೃಷ್ಟ್ಯಾತ್ಮಕವಾಗಿ ಬರೆಯುವುದು ಒಳ್ಳೆಯದು. ಯಾಕೆಂದರೆ ಪ್ರತಿಭಾವಂತರಾದ ತೇಜಸ್ವಿ ಸ್ವತಃ ಬರೆದಾಗ ನವ್ಯಮಾರ್ಗದಲ್ಲೇ ಬರೆಯುತ್ತಾರೆ.

ನವ್ಯ ಸಾಹಿತ್ಯದ ಕೊರತೆಗಳೇನು ಎನ್ನುವುದು ನಮ್ಮ ಲೇಖಕರಿಗೆ ಸ್ಪಷ್ಟವಾಗಿ, ಒಬ್ಬರನ್ನೊಬ್ಬರು ಹರಿದುಕೊಳ್ಳುವಷ್ಟು ನಿರ್ದಯವಾಗಿ ಗೊತ್ತಿದೆ ಎನ್ನುವ ನನ್ನ ಹಿಂದಿನ ಮಾತುಗಳಿಗೆ ಮತ್ತೆ ಬರುತ್ತೇನೆ. ತಲೆದೂಗಿಸುವ ಬರೆಯೋದೇ ಮುಖ್ಯವಾದರೆ ಕಂಬಾರರನ್ನು ಮೀರಿಸುವವರು ಯಾರಿದ್ದಾರೆ? ಬೇಂದ್ರೆ ಸಹ ಕೈ ಹಾಕದ ಜಾನಪದ ಲಯ, ಭಾಷೆ, ಅದರ ಗತ್ತು ಗಮ್ಮತ್ತು ಇವರಿಗೆ ದಕ್ಕಿದೆ. ಜಾನಪದ ರೀತಿಯಲ್ಲಿ ಬರೆದು ಎಲ್ಲರಿಗೂ ಪ್ರಯರಾಗಿ, ಆದರೆ ಅದರಿಂದ ಅತೃಪ್ತರಾಗಿ, ಸಮಕಾಲೀನ ಸಂವೇದನೆಯನ್ನು ತನ್ನ ಸಾಹಿತ್ಯ ನಿರ್ವಹಿಸಬೇಕೆಂದು ರಾಮಾನುಜನ್ನರಿಂದ ಕಲಿಯಬೇಕಾದ್ದನ್ನು ಕಲಿತು ಏಕಾಗ್ರತೆಯಿಂದ ತನ್ನನ್ನು ತಾನು ಸದಾ ತಿದ್ದಿಕೊಳ್ಳುತ್ತ ಸಿದ್ಧಪಡಿಸಿಕೊಳ್ಳುತ್ತ ಇರುವ ಲೇಖಕರು ಇವರು. ಆದರೂ ನಮಗೆ ಇವರಿಂದ ತೃಪ್ತಿಯಿಲ್ಲ. ಯಾಕೆ ಇನ್ನೂ ಮೆಟಫರ‍್ನಲ್ಲೆ ಸಿಕ್ಕಿಬಿದ್ದಿದ್ದಾರಲ್ಲ? ತನ್ನದೇ ಆದ ಹೊಸದೇನನ್ನೂ ಹೇಳುತ್ತಿಲ್ಲವಲ್ಲ? ಸಾಂಸ್ಕೃತಿಕವಾಗಿ ಮಹತ್ವವಾಗಬಲ್ಲ ಕೃತಿ ಬರೆದಿಲ್ಲವಲ್ಲ? ತಾತ್ವಿಕವಾಗಿ ಇವರು ಅನುಭವವನ್ನು ಗ್ರಹಿಸುವ ಗೋಜಿಗೆ ಹೋಗದಿರುವುದರಿಂದ ಹೀಗೆ ಮೆಟಫರ‍್ನಲ್ಲಿ, ಅಲಂಕಾರದಲ್ಲಿ ಸಿಕ್ಕಿಬಿದ್ದಿದ್ದಾರೆಯೇ? ಅದ್ಭುತವಾದದ್ದನ್ನು ಸಾಧಿಸುವ ಶಕ್ತಿಯಿದ್ದೂ ಇವರು ಬೆಳೆಯದೆ ನಿಂತರೆ? ಹೀಗೆ ಮಾತಾಡುವಾಗಲೂ ಎಚ್ಚರ ತಪ್ಪಬಾರದು, ಯಾಕೆಂದರೆ ಬುದ್ಧಿ ಬೆಳೆಯಬಹುದು; ತಾತ್ವಿಕ ಗ್ರಹಣ ಚೂಪಾಗಬಹುದು; ಆದರೆ ಬರವಣಿಗೆಯಲ್ಲಿ ಮಾಂತ್ರಿಕತೆ ಇಲ್ಲದೇ ಹೋದರೆ ಎಲ್ಲವೂ ಸಪ್ಪೆಯಾಗುತ್ತೆ. ಅಂಥವರ ಬಗ್ಗೆ ಮಾತನಾಡೊ ಏನು ಪ್ರಯೋಜನ ? ಬರೆದದ್ದನ್ನು ಸಾಹಿತ್ಯವನ್ನಾಗಿ ಮಾಡಬಲ್ಲ ಮ್ಯಾಜಿಕ್ ಇಲ್ಲದವನು ಎಷ್ಟು ಬೆಳೆದರೂ ಬೆಳೆದದ್ದು ಉಪಯೋಗಕ್ಕೆ ಬಂದಂತಲ್ಲ. ತನ್ನ ಬೆಳವಣಿಗೆಯನ್ನೆಲ್ಲ ಈ ಮ್ಯಾಜಿಕ್‍ನಲ್ಲಿ ಹಿಡಿದುಕೊಡುತ್ತ, ತನ್ನನ್ನೆ ತಾನು ಬರವಣಿಗೆಯ ಕ್ರಿಯೆಯಲ್ಲಿ ಮೀರುತ್ತ ಹೋಗುವುದನ್ನೆ ನಾವು ಬಯಸುವುದು. ‌

ತಾತ್ವಿಕವಾಗಿ ನಾವು ಈಗೊಂದು ಕ್ರೈಸಿಸ್‍ನಲ್ಲಿ ಬದುಕುತ್ತಿದ್ದೇವೆ. ನವೋದಯ ಕಾಲದ ಲೇಖಕರಲ್ಲಿ ಕೆಲವರು ತಮಗೊಂದು ವಿಶಿಶ್ಟ ವ್ಯಕ್ತಿತ್ವವಿಲ್ಲದಿದ್ದರೂ ಇದೆಯೆಂದು, ತಮ್ಮ ಆವರಣದ ಮೌಲ್ಯ ತನಗೆ ನಿಜವೆಂದು ಅನ್ನಿಸದಿದ್ದರೂ ಅನ್ನಿಸಿದೆಯೆಂದು ಭ್ರಮಿಸಿ  ಬರೆಯುತ್ತಿದ್ದರು. ಈಗಿನವರಲ್ಲಿ  ನೋಡಿದರೆ ಯಾವ ಮೌಲ್ಯವೂ ನಿಜವಲ್ಲವೆಂದು, ತಮಗೆ ವ್ಯಕ್ತಿತ್ವವೇ ಇಲ್ಲವೆಂದು, ಆತ್ಮಾವಹೇಳನೆಯಲ್ಲಿ ತಾನೊಂದು ಹುಳುವಿದ್ದಂತೆ ಎಂದು ಹಿಗ್ಗುತ್ತ ಬರೆಯುವವರೇ ಹೆಚ್ಚಾಗಿದ್ದಾರೆ. ಭಾವುಕತೆಯಲ್ಲಿ ಮೇಘತಲ್ಲೀನನಾಗುವುದು ಹಿಂದೆ ಪ್ಯಾಶನ್ನಾಗಿದ್ದಂತೆ, ಆತ್ಮಾವಹೇಳನವೂ ಎಲ್ಲರೂ ಜಡವಾಗಿ ಒಪ್ಪಿಕೊಳ್ಳುವ ಈಗಿನ ಸಾಹಿತ್ಯ ಸಾಮಗ್ರಿಯಾಗಬಹುದು. ಯುರೋಪಿನ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಯಾರೋ ಮಧ್ಯರಾತ್ರೆ ಬಾಗಿಲು ತಟ್ಟಿ ಎಬ್ಬಿಸಿ, ಎಲ್ಲಿಗೋ ಕರೆದುಕೊಂಡು ಹೋಗಿ, ಆಪಾದನೆ ಹೊರಿಸಿ ಕೊಲ್ಲುತ್ತಿದ್ದ ದುಃಸ್ವಪ್ನದಂತಹ ಅನುಭವಗಳಾಗಿವೆ. ತಾವೇ ಪಾಪಿಗಳಿರಬಹುದೆಂದು ಎದೆಗುಂದಿ ತಬ್ಬಲಿಗಳಾಗಿದ್ದು ಇಡೀ ಜನಾಂಗದ ಅನುಭವದಲ್ಲಿ ಬೇರುಬಿಟ್ಟ ಸಾಹಿತ್ಯದ ಕೃತಿಗಳು- ಪಿಂಟರ್, ಕಾಫ್ಕ, ಕಮೂರ ಕೃತಿಗಳು-ನಮ್ಮವರಿಗೆ ಫಾರ್ಮುಲಾ ಆಗಿಬಿಟ್ಟರೆ ಹೇಗೆ? ಬರೆಯುವುದಕ್ಕೆ ಕಲಿಯುತ್ತಿರುವ ಎಲ್ಲರೂ ಲಂಕೇಶರ ‘ತೆರೆಗಳು’ ಎನ್ನುವ ನಾಟಕದ ಕಾಪಿಯನ್ನೆ ಎತ್ತುತ್ತ ಹೋದರೆ ನಾಟಕದ ಭವಿಷ್ಯ ಏನು ಎಂದು ಸಂದೇಹವಾಗುವುದು ಸಹಜ.

ಈ ಸಂದರ್ಭದಲ್ಲಿ ಪಾಟೀಲರ ‘ಕೊಡೆಗಳು’, ‘ಟಿಂಗರ ಬುಡ್ಡಣ್ಣ’ ತಮ್ಮ ಲಿರಿಕಲ್ ಗುಣದಿಂದ ನಮ್ಮಿಂದ ಹೆಚ್ಚನ್ನು ಬಯಸದೆ ಮೆಚ್ಚಿಸುವ ಸುಖಕರವಾದ ಮಾತಿನ ಮಾಂತ್ರಿಕತೆಯಿಂದ, ಮಾತು ಇನ್ನೂ ಸತ್ತಿಲ್ಲ ನಮ್ಮ ಗಮನ ಸೆಳೆಯಲು ಸುಳ್ಳು ಸುಳ್ಳೆ ಪ್ರವಾದಿಗಳಂತೆ ಲೇಖಕ ವೇಷ ಕಟ್ಟಬೇಕಿಲ್ಲ ಎಂದು ಸಮಾಧಾನ ಕೊಡುವ ತಮ್ಮ ಲಾಲಿತ್ಯದಿಂದ ತುಂಬ ಸಂತೋಷ ಕೊಡುತ್ತವೆ. ಏನು ಪಾಟೀಲರು ಯಾವ ಕಥೆಯನ್ನಾದರೂ ಲಿರಿಕಲ್ ಆಗಿ ಬರೆದುಬಿಡುತ್ತಾರೆ? ಸೀಳಿಕೊಂಡು ಬರುವುದಿಲ್ಲ? ಜೀವನದ ಬೇರು ಅಲುಗುವಂತೆ ಬರೆಯುವುದಿಲ್ಲ? ಬೆಳೇಯುವುದಿಲ್ಲ? ಎಂದೂ ಗೆಳೆಯರು ಟೀಕಿಸುತ್ತಾರೆ. ಆದರೆ ಇಂತಹ ಪ್ರಶ್ನೆಗಳು ಅಪ್ರಕೃತವಲ್ಲವೆ; ಎಲ್ಲ ಗೋಳಿಗೂ ಮೊದಲು ಎಲ್ಲ ಗೋಳಿಗೂ ನಂತರ ಅಥವಾ ಗೋಳಿಗೂ ಮಿಕ್ಕು ಉಳಿಯುವ ಕಾಮಿಡಿಯೇ ಪಾಟೀಲರ ವಸ್ತುವಿರಬಹುದಲ್ಲವೆ ಎಂದೂ ಅನ್ನಿಸುತ್ತದೆ. ಟ್ರಾಜೆಡಿ ನಮ್ಮ ಜೀವನದ ಬೇರನ್ನು ಅಲುಗಾಡಿಸುತ್ತದೆ; ನಮ್ಮ ವಿಶಿಷ್ಟತನದ ಅಹಂಕಾರದ ಗೋಡೆಗಳನ್ನು ಒಡೆಯುತ್ತದೆ; ಆದರೆ ಕಾಮೆಡಿ ನಮ್ಮ ವಿಶಿಷ್ಟ ಅಹಮ್ಮಿನ ಮೇಲೇ ತನ್ನ ಬಿಡಾರ ಹೂಡುತ್ತದೆ. ಇದು ಏಟ್ಸನ ವ್ಯಾಖ್ಯಾನ. ಪಾಟೀಲರು ನಮ್ಮ ಜಾನಪದದ ಸೊಗಸುಗಳನ್ನೆಲ್ಲ ದೋಚಿ ಇಂತಹ ಕಾಮೆಡಿ ರಚಿಸುತ್ತಿರಬಹುದಲ್ಲವೆ?

ನಿಜವಾದ ಮಹತ್ವಾಕಾಂಕ್ಷೆಯ ನಮ್ಮ ನಾಟಕಕಾರರೆಂದರೆ ಗಿರೀಶ್ ಕಾರ್ನಾಡ. ಇವರು ಅಲ್ ಇಂಡಿಯಾ ನಾಟಕಕಾರರೆಂದು ತುಂಬ ಮೆಚ್ಚಿಕೆಯಲ್ಲಿ ಆದರೆ ಸ್ವಲ್ಪ ವ್ಯಂಗ್ಯದಲ್ಲಿ ನಮ್ಮ ಲೇಖಕರು ಮಾತಾಡಿಕೊಳ್ಳುತ್ತಾರೆ. ಪಾಟೀಲ ಮತ್ತು ಕಂಬಾರರ ನಾಟಕಗಳು  ಭಾಷಾಂತರದಲ್ಲಿ ಉಳಿಯಲಾರವು; ಗಿರೀಶರ ನಾಟಕಗಳಿಗೆ ಭಾಷಾಂತರದಿಂದ ನಷ್ಟವಿಲ್ಲ, ನಿಜ. ಆದರೆ ತಾತ್ವಿಕವಾಗಿ ಗ್ರಹಿಸಿದ್ದನ್ನು ಅತ್ಯಂತ ವೈಯಕ್ತಿಕವಾಗಿ ಮಾಡಬಲ್ಲ ಜರೂರಿನ ಲೇಖಕ ಗಿರೀಶ್. ‘ತುಘಲಕ್’ ಪ್ರಾಯಶಃ ಕನ್ನಡದ ಅತ್ಯುತ್ತಮ ನಾಟಕ. ಎಷ್ಟು ವಿಶ್ಲೇಷಿಸಿದರೂ ಅದರ ಆಚೆಗೆ ತುಘಲಕ್ ಉಳಿಯುತ್ತಾನೆ; ನಾಟಕದ ಎಲ್ಲ ಘಟನೆಗಳಲ್ಲೂ ಎಲ್ಲ ಪಾತ್ರಗಳಲ್ಲೂ ತನ್ನನ್ನು ಹಂಚಿಕೊಂಡೂ ಸಂಪೂರ್ಣ ಅರ್ಥವಾಗದಂತೆ ಮಿಕ್ಕುತ್ತಾನೆ. ಆದರೆ ಗಿರೀಶ್ ಬರೆದ ಹಯವದನ ಹೇಗಿದೆ? ಒಬ್ಬರಿಗೊಬ್ಬರು ಕುತೂಹಲದಿಂದ ಕೇಳಿಕೊಳ್ಳುವ ಪ್ರಶ್ನೆಯಿದು. ಎಷ್ಟು ಪೊಯೆಟಿಕ್ ಆಗಿ ಇದೇರಿ! ರಂಗದ ಮೇಲೆ ತುಂಬ ಯಶಸ್ವಿಯಾಗಬಹುದು ಅಲ್ಲವೆ? ಆ ಹೆಣ್ಣಿನ ಪಾತ್ರ, ಗಂಡನ ಅಸೂಯೆ, ಗಾಡಿ ಪ್ರಯಾಣಕ್ಕೆ ಮುಂಚೆ ಅವರ ಮಾತು-ನಡತೆ, ತಲೆ ಅದಲು ಬದಲು ಮಾಡಿಕೊಂಡ ಮೇಲೂ ಕೊನೆಗೆ ಕಪಿಲ ದೇವದತ್ತರು ಮೊದಲಿನಂತೆಯೇ ಆಗಿಬಿಡೋದು, ಬೊಂಬೆಗಳ ಉಪಯೋಗ, ಕಾಳಿಯ ಆಕಳಿಕೆ, ಒಟ್ಟಿನಲ್ಲಿ ವಿನೋದದ ಧೋರಣೆಯಲ್ಲೆ ಎಷ್ಟೊಂದು ಸೀರಿಯಸ್ಸಾದ ವಸ್ತುವಿನ ಮಂಡನೆ-ಇವು ಎಲ್ಲರೂ ಮೆಚ್ಚುವ ವಿಷಯಗಳು. ಆದರೆ ಗಿರೀಶ್ ತನ್ನನ್ನು ತಾನು ಕೊಟ್ಟುಕೊಳ್ಳುವುದಿಲ್ಲ ಅಲ್ಲವೆ? ಯಯಾತಿ, ತುಘಲಕ್ ನಾಟಕಗಳ  ತುರ್ತು ಇಲ್ಲಿ ಇಲ್ಲ ಅಲ್ಲವೆ? ನಾಟಕ ಕ್ಲೈವರ್ ಅಯಿತು ಎಂದು ಅನಿಸಲಿಲ್ಲವೆ? – ಹೀಗೆ ಅತೃಪ್ತಿ ಹೊಗೆಯಾಡಲು ಶುರುವಾಗುತ್ತದೆ.

ತುಂಬ ಅತೃಪ್ತಿಯಿಂದ ಸದಾ ಚಡಪಡಿಸುತ್ತ, ಕೃತಿಯಿಂದ ಕೃತಿಗೆ ಬೆಳೆಯುತ್ತ, ಅತ್ಯಂತ ಸಮಕಾಲೀನನಾಗಿರುವ ಲೇಖಕ ಲಂಕೇಶ್, ನಾನು ತುಂಬ ಜಗಳವಾಡಿರುವುದು, ಮುಂದೆಯೂ ಅಡಬಹುದಾದ್ದು ಇವರ ಹತ್ತಿರ. ಆದರೆ ನಾನು ತುಂಬ ಕೃತಜ್ಞನಾಗಿರೋದು ಕನ್ನಡದಲ್ಲಿ ಕಾರಂತ ಅಡಿಗರ ಕೃತಿಗಳನ್ನು ಬಿಟ್ಟರೆ ಇವರ ಕೃತಿಗಳಿಗೇನೆ. ಆದರೂ ಏನೇನೋ ಜಗಳಗಳಿವೆ ನಮ್ಮ ಇಬ್ಬರ ನಡುವೆ. ನಿಮ್ಮ ಕಥೆಗಳಷ್ಟು ನಿಮ್ಮ ನಾಟಕಗಳು ನಿಜವಾಗಲ್ಲ ಎಂದಿದ್ದೇನೆ. ನಿಮ್ಮ ಮೊದಲನೇ ಸಂಕಲನದ ಕಥೆಗಳು ಎರಡನೇ ಸಂಕಲನದವುಗಳಿಗಿಂತ, ಖಂಡಿತಾ ಅಡಿಗರು ಮೆಚ್ಚುವ ‘ರೊಟ್ಟಿ’ಗಿಂತ ಚೆನ್ನಾಗಿವೆ ಎಂದಿದ್ದೇನೆ. ಆದರೆ ಮನುಷ್ಯನ ವರ್ತನೆಯನ್ನು ಅತ್ಯಂತ ನೈತಿಕವಾಗಿ ನೋಡಿ, ಭಾಷೆಯಲ್ಲಿ ಎಲ್ಲೂ ಸುಳ್ಳಾಗದೆ, ಆಕರ್ಷಕ ತತ್ವಗಳಿಗೆ ಮೋಸಹೋಗದೆ ನಿಮಗೆ ಕಂಡದ್ದನ್ನು ಅತ್ಯಂತ ಜೀವಂತವಾಗಿ ವ್ಯಂಜಿಸುವ ಲೆಖಕ ಎಂದೂ ಹೇಳಿದ್ದೇನೆ.

ಇವರ ಎಲ್ಲ ಕೃತಿಗಳ ಹಿಂದೆ ಇರುವ ಒಂದು ಬಗೆಯ ಮನಸ್ಸಿನ ಪ್ರಕ್ರಿಯೆ, ಇವರನ್ನು ವಸ್ತುವಿನ ಜೊತೆ ಅತ್ಯಂತ ಜರೂರಿನಲ್ಲಿ ತೊಡಗಿಸುವ ಪ್ರಕ್ರಿಯೆ-ನನಗೆ ತುಂಬ ಕುತೂಹಲದ ವಿಷಯ. ಉದಾಹರಣೆಗೆ ಅವರ ಕೆಲವು ಕಥೆಗಳನ್ನು ನೋಡೋಣ. (ನಾನು ನ