ನಿನ್ನೆ ಶ್ರೀ ಕಿಷನ್ ಪಟ್ನಾಯಕ್ ಲೋಹಿಯಾವಾದ ಮಂಡಿಸುತ್ತ ವಿಶ್ಲೇಷಿಸಿದ ನಾಲ್ಕು ಗುಂಪಿನಲ್ಲಿ ಒಂದು ಗುಂಪಿಗೆ ನಾನು ಸೇರಿದವನು. ಆಸ್ತಿ, ಜಾತಿ, ಇಂಗ್ಲಿಷ್ ವಿದ್ಯೆ ಈ ಮೂರರಲ್ಲಿ ಯಾವುದೊಂದಿದ್ದರೂ ಸಾಲದು. ಆದರೆ ಮೂರೂ ಇದ್ದವನು ಅಖಿಲ ಭಾರತ ರಂಗದ ಆಳುವ ವರ್ಗಕ್ಕೆ ಸೇರಿದವನಾಗುತ್ತಾನೆ ಎಂದರು. ಎಷ್ಟೇ ಉತ್ತಮ ಜಾತಿಗೆ ಸೇರಿದವನೆಂಬ ಹೆಮ್ಮೆಯಿದ್ದರೂ ಸಹ ಇಂಗ್ಲಿಷ್ ವಿದ್ಯೆ ಮತ್ತು ಆಸ್ತಿಯಿಲ್ಲದ ಮಡಿವಂತ ಬ್ರಾಹ್ಮಣ ನಿಜವಾಗಿಯೂ ಹಿಂದುಳಿದವನೇ ಆಗಿ ಉಳಿಯುತ್ತಾನೆ. ತಾನಿರುವ ಅಗ್ರಹಾರ ಅಥವಾ ಮೊಹಲ್ಲಾ ಬಿಟ್ಟು ಈತ ಕದಲಲಾರ. ಸತ್ತಮೇಲೆ ಸದ್ಗತಿಗಾಗಿ ಕಾಶಿಗೋ ರಾಮೇಶ್ವರಕ್ಕೋ ಹೋಗಬೇಕೆಂಬ ಕನಸು ಕಾಣುವ ಈತನನ್ನು ತೀರಾ ಅಪಾಯಕಾರಿಯೆಂದು ಕಾಣುವುದು ಹಾಸ್ಯಾಸ್ಪದ. ತನ್ನ ಮಡಿವಂತಿಕೆ ಈ ಕಾಲದಲ್ಲಿ  ತನ್ನನ್ನು ಬಂಧನದಲ್ಲಿಡುತ್ತದೆಂದು ತಿಳಿಯಲಾರದ ಈತ ಕ್ರಮೇಣ ಹಾಸ್ಯಾಸ್ಪದನಾದ ಪಳೆಯಳಿಕೆಯಾಗುತ್ತಿದ್ದಾನೆ. ಆದರೆ ಆಸ್ತಿ, ಜಾತಿ, ಇಂಗ್ಲಿಷ್ ವಿದ್ಯೆಗಳಲ್ಲಿ ಯಾವುದಾದರೂ ಎರಡು ಇದ್ದವನು ಇಂದು ಇಂಡಿಯಾದಲ್ಲಿ ಬಹುಬೇಗ ಮೇಲಕ್ಕೆ ಬರಬಲ್ಲ ಸಾಧ್ಯತೆಗಳಿವೆ. ಜಾತಿ ಮತ್ತು ಇಂಗ್ಲಿಷ್ ವಿದ್ಯೆಯ ಬಲದಿಂದ ಆಸ್ತಿಯ ಗಳಿಕೆಯೂ ಸಾಧ್ಯವೆಂದು ಪಟ್ನಾಯಕ್ ಹೇಳಿದ್ದು ಸರಿ. ನನ್ನ ತಾಯಿಯ ತಂದೆ  ತಿರುಪೆ ಮಾಡುತ್ತಿದ್ದರು. ನನ್ನ ತಂದೆಯೂ ತಿರುಪೆ ಮಾಡುತ್ತಿದ್ದರು. ಬ್ರಾಹ್ಮಣರು ಮಾಡುವ ತಿರುಪೆಗೂ ಸಂಸ್ಕೃತ ಶಬ್ದವಿದೆ. ಇದನ್ನು ಸಂಭಾವನೆ ಎನ್ನುವ ಘನವಾದ ಶಬ್ದದಿಂದ ಕರೆಯುತ್ತಾರೆ. ಆದರೆ ನನ್ನ ತಂದೆ ಸಂಭಾವನೆ ಬ್ರಾಹ್ಮಣನಾಗಲಿಲ್ಲ. ಪೂಜಾರಿಯಾಗಿದ್ದ ಹುಡುಗ ಕದ್ದು ಮುಚ್ಚಿ ಸ್ವಂಯಭೋಧಿನಿಯ ಮೂಲಕ ಮತ್ತು ಪೂಜೆ ಮಾಡಿಸಲೆಂದು ಹಳ್ಳಿಯ ದೇವಸ್ಥಾನಕ್ಕೆ ಬರುತ್ತಿದ್ದ ವಿದ್ಯಾವಂತ ಪಟ್ಟಣಿಗರ ಸಹವಾಸದ ಮೂಲಕ ಅವರ ತಂದೆಗೆ ತಿಳಿಯದಂತೆ ಮೈಲಿಗೆಯಾದ ಇಂಗ್ಲಿಷ್ನ್ನು ಕಲಿತು ಕಳ್ಳತನದಲ್ಲೇ ಕೆಲವು ಪರೀಕ್ಷೆಗಳಿಗೆ ಕೂತು ಪಾಸು ಮಾಡಿ, ಇಡೀ ಭಾರತ ಸಂಚರಿಸಿ, ಅನೇಕ ರೀತಿಯ ಉದ್ಯೋಗಗಳಲ್ಲಿದ್ದು ಕೊನೆಯಲ್ಲಿ ಹಳ್ಳಿ ಸೇರಿದರು. ಕೆಲವು ಕಾಲ ಶಾನುಭೋಗರೂ ಆಗಿದ್ದರು  ಆಗಲೂ ಅಜ್ಜನಿಗೆ ತಿರುಪೆಯ ಚಟ ಬಿಟ್ಟಿರಲಿಲ್ಲ. ಯುದ್ಧಕಾಲದ ಕಷ್ಟ, ಬಡತನ, ಲೌಕಿಕ ಮನೋಧರ್ಮದ ನನ್ನ ತಂದೆಯನ್ನು ಅರ್ಥಮಾಡಿಕೊಳ್ಳದ ಅಜ್ಜ, ತಾನು ಬ್ರಾಹ್ಮಣನೆಂಬ ಹೆಮ್ಮೆಯಿದ್ದೂ ಬ್ರಾಹ್ಮಣೇತರರ ನಡುವೆ ಆಳವಾದ ಸಂಬಂಧಗಳನ್ನಿಟ್ಟುಕೊಂಡಿದ್ದ ನಿಷ್ಠುರವಾದಿಯಾದ ಅಪ್ಪ-ಇವೆಲ್ಲ ನನ್ನ ಬಾಲ್ಯದ ನೆನಪುಗಳು. ಮಡಿವಂತನಾದ ಬ್ರಾಹ್ಮಣ ನಿಜವಾಗೂ ಹಿಂದುಳಿದವನು. ಕಿಷನ್ ಪಟ್ನಾಯಕ್ ಹೇಳಿದಂತೆ ಅವ್ನು ಅಡಿಗೆ ಭಟ್ಟನಾಗಿಯೋ ಪೂಜಾರಿಯಾಗಿಯೋ ಉಳಿದೇಬಿಡುತ್ತಾನೆ. ನಾನು ಬಡವನೆಂಬ ವರ್ಗಪ್ರಜ್ಞೆಯಿಲ್ಲದಿದ್ದಲ್ಲಿ ನಾನೂ ಒಬ್ಬ ಪೂಜಾರಿಯಾಗಿರುತ್ತಿದ್ದೆನೆಂದು ಕಾಣುತ್ತದೆ. ಆದರೆ ಈ ಮಡಿವಂತಿಕೆಯಿಂದ ನಾನು ಹರಿದು ಹೊರಬಂದೆ. ಅದಕ್ಕೆ ನನ್ನ ತಂದೆಯೂ ಕಾರಣ. ಆದರೆ ತಾನೇ ಸ್ವತಃ ಮಡಿವಂತಿಕೆಯಿಂದ ಹರಿದು ಬಂದು, ಕ್ರಾಪು ಬಿಟ್ಟು, ದೇಶಾದ್ಯಂತ ಸಂಚರಿಸಿದ್ದ ನನ್ನ ಅಪ್ಪಿನಿಗೂ ನಾನು ಬ್ರಾಹ್ಮಣಿಕೆಯಿಂದ ಅವರಿಗಿಂತಲೂ ಮುಂದೆ ಹೋಗಿ ಹರಿದುಕೊಂಡ ರೀತಿ ಭಯವನ್ನೂ ನೋವನ್ನೂ ಉಂಟುಮಾಡಿದವು. ಆದರೆ ಕೊನೆಗೆ ಒಪ್ಪಿಕೊಂಡರು. ಬ್ರಾಹ್ಮಣೇತರರ ಮನೆಯಲ್ಲಿ ನನ್ನ ಜೊತೆ ಊಟ ಮಾಡುವಷ್ಟು ಧೈರ್ಯ ಮಾಡಿದರು. ಆದರೆ ಬೇರೆ ಊರಿಗೆ ಹೋದಾಗ ಈ ಧೈರ್ಯ ಮಾಡಿದ್ದು. ನಮ್ಮೂರಲ್ಲಿ ಶೂದ್ರ ಮನೆಯಲ್ಲಿ ಊಟ ಮಾಡುವಷ್ಟು ಅವರಿಗೆ ಕಷ್ಟವಾಗುತ್ತಿತ್ತೋ ಏನೊ. ಈಗ ನನ್ನ ಮಕ್ಕಳಿಗೆ ಜಾತಿಯೊಲ್ಲ. ಆದರೂ ಅವರು ನನ್ನಿಂದಾಗಿ ವಿಶೇಷ ಸವಲತ್ತುಗಳನ್ನು ಪಡೆದ ಮಕ್ಕಳೆಂದು ನನಗೆ ಗೊತ್ತು. ನನಗೆ ವಿದ್ಯೆ ಅಧಿಕಾರಗಳು ಇಲ್ಲದಿದ್ದಲ್ಲಿ ಜಾತಿಯನ್ನು ಬಿಡುವುದೂ ಪ್ರಾಯಶಃ ಅಸಾಧ್ಯವಾಗಿತ್ತಿತ್ತೆಂದೂ ನನಗೆ ಗೊತ್ತು.

ಯಾಕೆ, ಈ ಮೂರು ತಲೆಮಾರುಗಳು ನನ್ನ ಕತೆಯನ್ನು ನನಗೆ ಹೇಳಬೇಕೆನ್ನಿಸಿದೆ? ನನಗೆ ಬ್ರಾಹ್ಮಣಿಕೆಯ ಅನುಭವವೂ ಇದೆ; ಬಡತನದ ಅನುಭವವೂ ಇದೆ. ಮೈಸೂರಿನಲ್ಲಿ ಕಾಲೇಜಿನಲ್ಲಿ ಓದುತ್ತಿರುವ ಹರಿಜನ ವಿದ್ಯಾರ್ಥಿಯೊಬ್ಬನಿಗೆ ಈಗ ಎರಡು ಹೊತ್ತು ಊಟವಾದರೂ ಸಿಕ್ಕೀತು. ಅದರೆ ವಿದ್ಯಾರ್ಥಿಯಾಗಿದ್ದಾಗ ನನಗೆ ಸದಾ ಹಸಿದಿರುತ್ತಿದ್ದ ಅರೆಹೊಟ್ಟಿ ದಿನಗಳ ನೆನಪೂ ಈಗಲೂ ಇದ್. ಮಾನವಂತನಾದ ನಾನು ಅವಮಾನದಿಂದ ಬೇಯುತ್ತಿದ್ದ ದಿನಗಳು ಅವು. ಒಂದು ದಿನ ಯಾರಿಂದಲೋ ಹತ್ತು ರೂಪಯಿಗಳನ್ನು ಬೇಡಿ ತರಲೇಬೇಕಾಯಿತು. ರೂಮಿಗೆ ಬರುವಷ್ಟರಲ್ಲಿ ನಾನು ಕೈಯಲ್ಲಿ ಹಿಡಿದಿದ್ದ ಈ ನೋಟನ್ನು ನನಗೆ ಅರಿವಿಲ್ಲದಂತೆ ಚೂರುಚೂರು ಮಾಡಿದ್ದೆ.

ಆದರೆ ಈಗ ನಾನು ಹಿಂದಿನ ಬವಣೆಯಲ್ಲಿಲ್ಲ. ನನ್ನ ಪರಿಸ್ಥಿತಿಯಿಂದಲೇ ಪ್ರಾರಂಭಿಸಿದ್ದ ಒಬ್ಬ ಹರಿಜನ ಹುಡುಗನಿಗೆ ನಾನು ಈಗ ಇರುವ ಸ್ಥಿತಿಯನ್ನು ಮುಟ್ಟುವುದು ಆಗುತ್ತಿರಲಿಲ್ಲ. ಆದರೆ ನನ್ನ ಬಂಧುವರ್ಗ ಈಗಲೂ ಬಡವರಾಗಿ ಉಳಿದಿದ್ದಾರೆಂಬ ಪ್ರಜ್ಞೆ ನನಗಿದೆ. ಮಡಿವಂತಿಕೆ ಬಿಡದೇ ಬ್ರಾಹ್ಮಣ ಮುಂದೆ ಬರಲಾರ; ಆದರೆ ಮೇಲೆ ಮುಂದುವರಿಯಲು ಅಗತ್ಯವಾದ ಅಪೇಕ್ಷೆ, ಸ್ಥೈರ್ಯ, ಆತ್ಮನಂಬಿಕೆ ಅವನಿಗಿರುತ್ತವೆ.

ಮಡಿವಂತ ಬ್ರಾಹ್ಮಣ ಎಷ್ಟು ಹಾಸ್ಯಾಸ್ಪದನಾದ ಗೊಡ್ಡಾಗಿರುತ್ತಾನೆ ಎಂಬುದಕ್ಕೆ ಉದಾಹರಣೆಯೊಂದನ್ನು ಕೊಡುತ್ತೇನೆ. ನಾನು ಚಿಕ್ಕವನಿದ್ದಾಗ ಅತ್ಯಂತ ಕ್ಷುದ್ರಸ್ಥಿತಿಯಲ್ಲಿರುವ ಅವಿದ್ಯಾವಂತ ಬ್ರಾಹ್ಮಣನೂ ಒಕ್ಕಲಿಗ ಜಾತಿಯಲ್ಲಿ ಹುಟ್ಟಿದ ಕವಿಯೊಬ್ಬರಿಗೆ ಉಪನಿಷತ್ತು ಅರ್ಥವಾಗುವ ಸಾಧ್ಯವೆ ಎಂದು ಅನುಮಾನಿಸುತ್ತಿದ್ದುದನ್ನು ನಾನು ನೋಡಿದ್ದೇನೆ. ಪಾಪದ ಬ್ರಾಹ್ಮಣ. ಈಗ ಇದು ತಮಾಷೆಯೆನ್ನಿಸುತ್ತದೆ. ಆದರೆ ಗೊಡ್ಡು ಬ್ರಾಹ್ಮಣನಿಗಿಂತ ನೌಕರಿಯಲ್ಲಿರುವ ಘಾಟಿ ಬ್ರಾಹ್ಮಣ ಹೆಚ್ಚು ಅಪಾಯಕಾರಿ. ಈಗ ಒಕ್ಕಲಿಗರು ಅಧಿಕಾರದಲ್ಲಿದ್ದಾರೆ ಎಂದು ತಿಳಿದ ಬ್ರಾಹ್ಮಣ ಒಕ್ಕಲಿಗ ಕವಿಯ ಕಾವ್ಯವನ್ನು ಒಳಗೊಳಗೇ ನಿಂದಿಸಿದರೂ ಬಹಿರಂಗವಾಗಿ ಮಾತ್ರ ಹೊಗಳುತ್ತಾನೆ. ಯಾವುದು ಲಾಭದಾಯಕ ಎನ್ನುವ ಕಡೆ ಸದಾ ಅವನ ಕಣ್ಣಿರುತ್ತದೆ. ಹಾಗೆಯೇ ಜಾಣನಾದ ಒಕ್ಕಲಿಗ ಮತ್ತು ಲಿಂಗಾಯುತ ಅಧಿಕಾರದಲ್ಲಿರುವ ಬ್ರಾಹ್ಮನನನ್ನು ಅನುಸರಿಸುತ್ತಾನೆ. ಜಾತೀಯವಾದ ತಾಳಬಹುದಾದ ರೂಪಗಳು ಹಲವು; ಮಾಯರೂಪಿಯಾದ ರಾಕ್ಷಸನಂತೆ ಈ ಜಾತಿ ಭಾವನೆ. ಈ ಪರಿಸರದಲ್ಲಿ ಶುದ್ಧವಾದ ಮಾತು, ಶುದ್ಧವಾದ ಕ್ರಿಯೆ ಜಾತಿ ಬಿಟ್ಟವರಿಗೂ ಸಾಧ್ಯವೇ ಇಲ್ಲವೇನೋ ಎಂದು ನನಗೆ ಭಯವಾಗತ್ತದೆ. ನಾನು ಈಚೆಗೆ ಸಂದರ್ಶನವೊಂದರಲ್ಲಿ ತೇಜಸ್ವಿಯ ಕಥೆಗಳನ್ನು ಮೆಚ್ಚಿ ಮಾತಾಡಿದ್ದು ಪ್ರಕಟವಾಯಿತು. ಅದರ ಬಗ್ಗೆ ಈ ಸಾರಿ ಒಂದುಕಾಗದ ಅಚ್ಚಾಗಿದೆ. ಅದರಲ್ಲಿ ನಾನು ತೇಜಸ್ವಿ ಬಗ್ಗೆ ಆಡಿದ ಮಾತು “ಒಡೆದಾಳುವ” ಬ್ರಾಹ್ಮಣ ಬುದ್ಧಿಯನ್ನು ತೋರಿಸುತ್ತದೆ ಎಮ್ಬ ಮಾತಿದೆ. ಇದಕ್ಕೆ ಹಿಂದಿ ಲೇಖಕ ಮಿತ್ರರೊಬ್ಬರು ನಾನು ಅಖಿಲ ಭಾರತ ಪೆನ್ ಸಮ್ಮೇಳನಕ್ಕೆ ಮುಕ್ತಾಯ ಭಾಷಣ ಮಾಡಲು ಹೋಗುವುದು ಸಾಧ್ಯವಾದ್ದು ನಾನು ಬ್ರಾಹ್ಮಣನಾದ್ದರಿಂದ ಎಂದರು. ಹೀಗೆ ಮಾತಾಡುವ ಮಿತ್ರರಿಗೆ ತಾವು ಪಡೆದ ನೌಕರಿ ಮತ್ತು ಸವಲತ್ತುಗಳು ಸಹ ತಮ್ಮ ಜಾತಿ ಮತ್ತು ಆಸ್ತಿಗಳ ಬಲದಿಂದ ದಕ್ಕಿದವು ಎಂಬ ಪ್ರಜ್ಞೆಯಿಲ್ಲದಿರುವುದು ನಿಜಕ್ಕೂ ಶೋಚನೀಯ ಸಂಗತಿ. ಏನೇ ಇರಲಿ, ನನ್ನ ಮಟ್ಟಿಗೆ ಹೇಳುವುದಾದರೆ, ಇಂಥ ಟೀಕೆ ಬಂದಾಗ ನನಗೆ ಭಯವಾಗುತ್ತದೆ. ಇದು ನಿಜವೆ ಎಂದು ಕ್ಷಣ ಅನುಮಾನವೂ ಆಗಿ, ಮರುಕ್ಷಣವೇ ಈ ಜಾತಿಯ ಚೌಕಟ್ಟಿನಿಂದ ಬಿಡಿಸಿಕೊಳ್ಳಲು ಇನ್ನೂ ಏನೇನು ಮಾಡಬೇಕೆಂದು ತಿಳಿಯದೆ ಕಂಗಲಾಗುತ್ತೇನೆ. ಬ್ರಾಹ್ಮಣೇತರರನ್ನು ಮೆಚ್ಚಿದರೂ ಬ್ರಾಹ್ಮಣ ಬುದ್ಧಿ, ಬೈದರೂ ಬ್ರಾಹ್ಮಣ ಬುದ್ಧಿ-ಅಂದರೆ ಈ ಆವರಣದಲ್ಲಿ ಯಾವುದು ಸತ್ಯ, ಯಾವುದು ಅಲ್ಲ ಎಂಬ ನಿಷ್ಪಕ್ಷಪಾತ ಧೋರಣೆ ಸಾಂಸ್ಕೃತಿಕ ಕ್ಷೇತ್ರದಲ್ಲೂ ಸಾಧ್ಯವೇ ಇಲ್ಲವೇ? ನನಗಿರುವ ಇನ್ನೂ ದೊಡ್ಡ ದಿಗಿಲೆಂದರೆ ಇಂಥ ಅಪವಾದಗಳನ್ನು ಖಂಡಿಸುವ ಭರದಲ್ಲಿ ನಾನೂ ಪೆತ್ತೆಯಾಗದಂತೆ ಬ್ರಾಹ್ಮಣವಾದಿಯಾಗಿಬಿಡಬಹುದು.

ನನಗೆ ಗೊತ್ತು; ಈ ಪ್ರಶ್ನೆಗಳು ಅಷ್ಟು ಮುಖ್ಯವಲ್ಲ. ಜಾತಿಪದ್ಧತಿಯಿಂದಾಗಿ ಇಡೀ ದೇಶದ ಬಹುಪಾಲಿ ಜನ ಹಿಂದುಳಿದಿರುವುದರಿಂದ ಭಾರತವೇ ಹಿಂದುಳಿದುಬಿಟ್ಟಿದೆ. ಇದನ್ನು ನಿವಾರಿಸುವ ಯತ್ನದಲ್ಲಿ ಕೆಲವು ಅತಿರೇಕಗಳಾದರೂ ಚಿಂತೆಯಿಲ್ಲ; ಆದರೆ ಬ್ರಾಹ್ಮಣರಂತಾದ ಕೆಲವರ ಹಿತಸಾಧನೆ ಸಾಧ್ಯವಿಲ್ಲ-ನಿಜ ಆದರೆ ನನಗಿರುವ ಮುಖ್ಯ ಅನುಮಾನ ಇದು; ಈ ಜಾತಿ ವಿನಾಶದ ಪ್ರಶ್ನೆಯನ್ನು ನೌಕರ ವರ್ಗದ ನಡುವೆ ಮಾತ್ರ ಎತ್ತುವುದರಿಂದ ಪ್ರಯೋಜನವಿಲ್ಲ. ಜಾತಿ ವಿನಾಶ ಎಂದರೆ ಒಂದೊಂದು ಊರಿನಲ್ಲಿ ಒಂದೊಂದು ಅರ್ಥವಾಗುತ್ತದೆ. ಈ ಮೈಸೂರಿನ ಸೆಂಟಿನರಿ ಹಾಲಿನಲ್ಲಿ ಜಾತಿ ವಿನಾಶ ಎಂದರೆ ಒಕ್ಕಲಿಗರನ್ನು ವಿರೋಧಿಸಿ ಎಂದು ಅರ್ಥವಾಗುತ್ತದೆ; ವಿಧಾನಸೌಧದಲ್ಲಿ ಬ್ರಾಹ್ಮಣ ವಿರೋಧ ಎಂದು ಅರ್ಥವಾಗುತ್ತದೆ. ಅಲ್ಲದೆ ಈಗಾಗಲೇ ಮುಂದುವರಿದ ಲಿಂಗಾಯುತರು, ಒಕ್ಕಲಿಗರು, ಬ್ರಾಹ್ಮಣರು ಜಾತಿ ವಿರೋಧವನ್ನು ತಮ್ಮ ಹಿತಕ್ಕೆ ತಕ್ಕಂತೆ ಅನ್ವಯಿಸಿಕೊಂಡು ಲಾಭ ಮಾಡಿಕೊಳ್ಳುತ್ತಾರೆ. ಯಾಕೆಂದರೆ ಜಾತಿಯನ್ನು ಕೂಡಲೇ ಕ್ಯಾಶ್ ಮಾಡಿಕೊಳ್ಳಬಲ್ಲವರು ನೌಕರಿಯಲ್ಲಿರುವ ಜನ. ಸುಖವಾದಾಗ ಜಾತಿ ಬೇಕು; ಕಷ್ಟವಾದಾಗ ಬೇಡ ಎನ್ನುವರು ಇವರು. ಈಚೆಗೆ ವಿಧಾನಸೌಧದಲ್ಲಿ ಕೆಲಸದಲ್ಲಿರುವ ಮಹಿಳೆ ನನಗೊಂದು ಕಾಗದ ಬರೆದಿದ್ದಳು. ತನ್ನ ಇಲಾಖೆಯ ಮುಖ್ಯಸ್ಥ ಹರಿಜನನಾದ್ದರಿಂದ ಅವಳ ಪಾಲಿಗೆ ಜಾತೀಯತೆಯೆಂದರೆ ಈ ಹರಿಜನನ ಸ್ವಜಾತಿ ಅಭಿಮಾನವಾಗಿ ಕಂಡಿತು.

ಬುದ್ಧಿವಂತರ ಮನಸ್ಸಿಗಿರುವ ದ್ರೋಹದ ಸಾಧ್ಯತೆ ಅಗಾಧವಾದ್ದು. ಬ್ರಾಹ್ಮಣನಿಗೆ ಈಗಿರುವ ಸ್ಥಿತಿಯಾಲ್ಲಿ ಏಕಕಾಲದಲ್ಲಿ ಯೋಗ್ಯತಾವಾದಿಯೂ ಜಾತೀಯವಾದಿಯೂ ಆಗಿರುವುದು ಸಾಧ್ಯ. ಯೋಗ್ಯತೆ ಇರುವವನಿಗೆ ಮಾತ್ರ ಉನ್ನತ ಸ್ಥಾನಗಳು ಕೊಡಬೇಕೆಂಬ ವಾದ ಹೆಚ್ಚು ಜನ ವಿದ್ಯಾವಂತರನ್ನು ಪಡೆದ ಜಾತಿಗೆ ಲಾಭದಾಯಕವಾದ ವಾದವಾಗುತ್ತದೆ. ಅಂದರೆ ಯೋಗ್ಯತೆಯನ್ನು ಡಿಗ್ರಿಯಲ್ಲಿ ಅಳೆಯುವ ಈ ದೇಶದಲ್ಲಿ ಈ ಯೋಗ್ಯತಾವಾದ ಒಕ್ಕಲಿಗರಿಗೂ ಲಿಂಗಾಯತರಿಗೂ ಲಾಭದಾಯಕವಾಗುವುದು ಕೂಡ ಸಾಧ್ಯ. ಮೊದಲನೇ ತಲೆಮಾರಿನಲ್ಲಿ ವಿದ್ಯಾವಂತರಾದ ಒಕ್ಕಲಿಗ ಲಿಂಗಾಯತರಿಗೂ ಈಗ ಅವರ ಮಕ್ಕಳಿಗೂ ವ್ಯತ್ಯಾಸವಿದೆ. ಅವರ ಮಕ್ಕಳು ನವಬ್ರಾಹ್ಮಣರಾಗಿದ್ದರೆ. ಯೋಗ್ಯತೆಯೆಂದರೆ ಅವರಿಗೆ ಲಾಭವಿದೆ; ಜಾತಿಯೆಂದರೂ ಅವರಿಗೆ ಲಾಭವಿದೆ: ಆದ್ದರಿಂದ ಜಾತಿ ವಿನಾಶದ ಬಗ್ಗೆ ಮಾತಾಡುವ ನಾವು ಎಚ್ಚರಿಕೆಯಿಂದಿರುವುದು ಅವಶ್ಯ. ಈ ತನಕ ಒಳಗೇ ಕೆಲಸ ಮಾಡುತ್ತಿದ್ದ ಸಂಶಯಗಳೆಲ್ಲ ಈಗ , ಜಾತಿಯ ಬಗ್ಗೆ ನೇರವಾಗಿ ಮಾತಾಡುವುದು ಸಾಧ್ಯವೆಂದು ನಾವು ತೋರಿಸಿದೊಡನೆಯೇ ಹೊರಬರುತ್ತವೆಂಬುದನ್ನು ನಾವು ನೆನಪಿನಲ್ಲಿಡಬೇಕು.

ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಪ್ರತಿಯೊಂದು ಸಂಸ್ಥಾನದಲ್ಲೂ ಹೆಚ್ಚು ಕಡಿಮೆ ಬ್ರಾಹ್ಮಣ ಮುಖ್ಯಮಂತ್ರಿಗಳಿದ್ದರು. ನಂತರ ಆ ಅಧಿಕಾರ ಒಕ್ಕಲಿಗ ಲಿಂಗಾಯುತರಂತಹ ಅರೆ ಹಿಂದುಳಿದ ಮಧ್ಯವರ್ತಿ ಜಾತಿಗಳ ಕೈಗೆ ಹೋಯಿತು. ಇವರು ಇನಾಂ ರದ್ದತಿ ಮಾಡಿದರು. ಅಂದರೆ ಬ್ರಾಹ್ಮಣನ ಸವಲತ್ತುಗಳನ್ನು ತಮ್ಮ ಜಾತಿಯ ಜನರ ಕೈಸೇರುವಷ್ಟು ಪ್ರಗತಿಯ ಹೆಜ್ಜೆಯನ್ನು ಇವರು ಇಟ್ಟರು. ಆದರೆ ಇವರಿಗೆ ಸಂಪೂರ್ಣ ಪ್ರಗತಿಪರವಾದ ಭೂಶಾಸನ ತರುವುದು ಸಾಧ್ಯವಾಗಲಿಲ್ಲ. ಈಗ ಮೈನಾರಿಟಿ ಜಾತಿಯವರಿಗೆ ತಾವು ಅಧಿಕಾರಕ್ಕೆ ಬಂದಿದ್ದೇವೆಂಬ ಭ್ರಮೆ ಇದೆ: ಒಕ್ಕಲಿಗ, ಲಿಂಗಾಯತರಿಗೆ ತಮ್ಮ ಕೈಯಿಂದ ಅಧಿಕಾರ ತಪ್ಪಿತೆಂಬ ಸಿಟ್ಟಿದೆ. ಆದರೂ ಈ ಜಾತಿಗಳ ಕೈಯಲ್ಲಿ  ರಾಜಕೀಯ ಶಕ್ತಿ ಇನ್ನೂ ಯ್ಳಿದಿದೆಯಾದ್ದರಿಂದ ಹಲ್ಲುಗಳನ್ನು ಕಳೆದುಕೊಂಡ  ಭೂಶಾಸನ ಜಾರಿಗೆ ಬರುತ್ತಿದೆ. ಕೊನೆಯ ಪಕ್ಷ  ಇಷ್ಟಾದರೂ ಸಾಧ್ಯವಾದ್ದು ಒಕ್ಕಲಿಗ, ಲಿಂಗಾಯುತರಲ್ಲದ, ಆದರೆ ಹಿಂದುಳಿದ ಕೆಲವು ಮೈನಾರಿಟಿ ವರ್ಗಗಳ ಜನರಿಗೆ ತಮಗೆ ಅಧಿಕಾರ ಸಿಕ್ಕಿದೆಯೆಂಬ ಭ್ರಾಂತಿಯಾದರೂ ಇರುವುದರಿಂದ. ಆದರೆ ನನಗೊಂದು ಪ್ರಶ್ನೆ ಕೇಳಬೇಕೆನಿಸುತ್ತದೆ: ನಮ್ಮ ಕಂದಾಯ ಮಂತ್ರಿ ಬಸವಲಿಂಗಪ್ಪನವರಾಗಿದ್ದರೆ? ಅವರಿಗೆ ಭೂಮಿಹೀನ ರೈತ ಕಾರ್ಮಿಕರ ದೃಷ್ಟಿಯಿಂದ ಭೂಶಾಸನ ತರುವ ರಾಜಕೀಯ ಶಕ್ತಿಯಿದ್ದಿದ್ದರೆ? ಮನೆ ಕಟ್ಟಿಕೊಡುವ ದಾನ ಧರ್ಮದ ಇಲಾಖೆಯಲ್ಲದೆ ಆರ್ಥಿಕ ಬದಲಾವಣೆ ಮಾಡಬಲ್ಲ ಜವಾಬ್ದಾರಿ ಹರಿಜನನ ಮೇಲಿದ್ದರೆ? – ಏನಾಗಬಹುದಿತ್ತು ಯೋಚಿಸಿ. ಅದರೆ ಅಂಥ ಮೂಲಭೂತ ಬದಲಾವಣೆ ಇ ಪರಿಸರದಲ್ಲಿ ಈ ರಾಜಕೀಯ ಪಕ್ಷಗಳಿಗೆ ಸಾಧ್ಯವಿಲ್ಲ. ಪ್ರತಿ ಸಮಾಜವೂ ತನಗೆ ಸಾಧ್ಯವಿದ್ದಷ್ಟನ್ನು ಮಾತ್ರ ಕೈಗೂಡಿಸಿಕೊಳ್ಳುತ್ತದೆ ಎಂದು ಮಾರ್ಕ್ಸ್ ಹೇಳುತ್ತಾನೆ. ಇದನ್ನೆಲ್ಲ ನನಗೆ ಹೇಳಬೇಕೆನ್ನಿಸಲು ಕಾರಣ: ಈ ಜಾತಿ ವಿನಾಶದ ಮಾತನ್ನು ಬ್ರಾಹ್ಮಣರಾಗಲಿ, ಒಕ್ಕಲಿಗರಾಗಲಿ, ಲಿಂಗಾಯುತರಾಗಲಿ-ಅದೂ ನೌಕರಿಯಲ್ಲಿರುವ ಈ ಜನರು ತಮ್ಮ ತಮ್ಮ ಹಿತಕ್ಕೆ ಮಾತ್ರ ಉಪಯೋಗಿಸಿಕೊಂಡಾರು ಎಂಬುದು.

ಆದರೆ ಈ ಮೂರು ಜನಾಂಗಗಳೂ ಖಂಡಿತ ಕೆಲವು ವೇಳೆ ಒಟ್ಟಾಗುತ್ತಾರೆ. ನೌಕರಿಯಲ್ಲಿ ನೀವು ಕಂಡಿರುವ ವಿಷಯ ಇದು. ಲಿಂಗಾಯತರು ಅಧಿಕಾದಲ್ಲಿದ್ದಾಗ ಬ್ರಾಹ್ಮಣ, ಒಕ್ಕಲಿಗ ಒಟ್ಟಾಗುತ್ತಾನೆ. ಒಕ್ಕಲಿಗ ಅಧಿಕಾರದಲ್ಲಿದ್ದಾಗ ಉಳಿದೆರಡು ಜಾತಿ ಒಟ್ಟಾಗತ್ತವೆ. ಈಚೆಗೆ ನಾನು ಮಂಡ್ಯದಲ್ಲಿ ಒಂದು ಮದುವೆಗೆ  ಹೋದಾಗ ಬ್ರಾಹ್ಮಣರ ತಲೆಗಳ ಮೇಲಿರುದಕ್ಕಿಂತ ಹೆಚ್ಚು ಜುಟ್ಟುಗಳು ಗೌಡರ ತಲೆಯ ಮೇಲೆ ಇವೆಯೆಂಬುದನ್ನು ಕಂಡೆ. ಬ್ರಾಹ್ಮಣರ ಧರ್ಮವನ್ನು ಮುಂದುವರಿಸುವವರು ಒಕ್ಕಲಿಗರೇ ಎಂಬ ಅನುಮಾನ ನನಗಿದೆ. ಇರಲಿ, ಸಾಮಾನ್ಯವಾಗಿ ಈ ಮೂರು ಜಾತಿಗಳೂ ಹರಿಜನರ ವಿರುದ್ಧ ಎಲ್ಲ ಸವರ್ಣೀಯರೂ ಒಟ್ಟಾಗತ್ತಾರೆ. ಹಜಾಮ ಎನ್ನುವ ಶಬ್ದ ಉಪಯೋಗಿಸಿದೊಡನೆಯೇ ಈ ಸಭೆ ನಕ್ಕಿದ್ದನ್ನು ನಿನ್ನೆ ನಾನು ಗಮನಿಸಿದೆ. ಈ ಅಲ್ಪ ಸಂಖ್ಯಾತರನ್ನು ಕೇಳುವವರು ಯಾರು? ಇ ಜನ ಬ್ರಾಹ್ಮಣರಂತೆಯೇ ಅಖಿಲ ಭಾರತ ಜಾತಿಗಳು. ಇವರುಒಟ್ಟಾಗುವುದು ಯಾವಾಗ?

“ಲಿಂಗಾಯತರಿಗೆ ಜಾತೀಯವಾದಿಗಳಾಗೋ ಅಧಿಕಾರ ಶೇಕಡಾ ೫೦ ಇದೆ ಅನ್ನಬಹುದು. ಯಾಕೇಂದ್ರೆ ಇನ್ನೂ ಹಿಂದುಳಿದವ್ರು ಅವರ ಜಾತೀಲಿ ಇದಾರೆ. ಒಕ್ಕಲಿಗರಿಗೆ ಶೇಕಡಾ ೭೦ ಭಾಗ ಜಾತೀವಾದಿಗಳಾಗೋ ಅಧಿಕಾರ ಇದೆ ಅನ್ನಬಹುದೇನೋ. ಬ್ರಾಹ್ಮಣರಿಗಂತೂ ಶೇಕಡಾ ನೂರಕ್ಕೆ ನೂರು ಜಾತಿವಾದಿಗಳಾಗೋ ಅಧಿಕಾರ ಇಲ್ಲ. ಹಾಗೇನೇ ಶೇಕಡಾ ನೂರಕ್ಕೆ ನೂರು ಜಾತಿವಾದಿಗಳಾಗೋ ಅಧಿಕಾರ ಇರೋದೂಂದ್ರೆ ಹೊಲಿಯರಿಗೆ ಮಾತ್ರ.” ನಾನೇ ಹಿಂದೆ ಬರೆದ ಈ ಮಾತುಗಳನ್ನು ಉದ್ಧರಿಸುತ್ತಿದ್ದೇನೆ; ಕ್ಷಮಿಸಿ ಆದರೆ ಸಮಸ್ಯೆಯಿರೋದು ಇಲ್ಲೆ ಎಂದು ನನಗನ್ನಿಸುತ್ತಿದೆ. ಅಮೂರ್ತವಾಗಿ ಇಂಥ ವಿಷಯಗಳನ್ನೆಲ್ಲ ಹೇಳುವುದು ತಪ್ಪಾದ್ದರಿಂದ ಒಂದೇ ಒಂದು ನಿರ್ಧಾರವನ್ನು ನಿಮ್ಮೆದುರು ಮಂಡಿಸಲು ನಾನು ಬಯಸುತ್ತೇನೆ.

ಈ ಜಾತಿ ವಿನಾಶ ಸಮ್ಮೇಳನದಲ್ಲಿ ಭಾಗವಹಿಸುತ್ತಿರುವ ನಾವು ಬಹಳ ಮಂದಿ ಯೂನಿವರ್ಸಿಟಿ ಜನರು. ಆದ್ದರಿಂದ ನಮಗೇ ಅನ್ವಯಿಸುವಂತೆ ಒಂದು ನಿರ್ಧಾರ ಮಾಡೋಣ. ನಮ್ಮಲ್ಲೀಗ ಮೂರು ವಿಶ್ವವಿದ್ಯಾಲಯಗಳಿವೆ. ಈ ಮೂರು ವಿಶ್ವವಿದ್ಯಲಯಗಳ ಅತ್ಯುಚ್ಛಸ್ಥಾನವಾದ ಕುಲಪತಿ ಹುದ್ದೆಗೆ ಬ್ರಾಹ್ಮಣರಾಗಲೀ ಒಕ್ಕಲಿಗರಾಗಲೀ ಲಿಂಗಾಯತರಾಗಲೀ ನೇಮಕವಾಗಕೂಡದು. ಯಾಕೆಂದರೆ ಈ ಮೂರು ವರ್ಗದ ಜನರೂ ಯೋಗ್ಯತೆಯ ಹೆಸರಿನಲ್ಲಿ ತಾವೇ ಮುಂದುವರಿಯಬಲ್ಲಷ್ಟು ಜಾನರಾಗಿಬಿಟ್ಟಿದ್ದಾರೆ. ತಮ್ಮ ತಮ್ಮವರಿಗೆ ಕೆಲಸ ಕೊಡಬೇಕೆಂದರೆ ಈ ಜಾತಿಗಳಲ್ಲಿ ಸಾಕಷ್ಟು ಜನರೂ ಸಿಗುತ್ತಾರೆ. ಆದರೆ ನಿಜವಾಗಿಯೂ ತುಂಬ ಹಿಂದುಳಿದ ಜಾತಿಗಳಾದ ಹರಿಜನರು, ಕ್ಷೌರಿಕರು ಇತ್ಯಾದಿ ಜಾತಿಗಳಲ್ಲಿ ಓದಿ ಮುಂದುವರಿದವರೇ ಕಡಿಮೆ. Favouritism ಮಾಡಬೇಕೆಂದರೂ ಅವಕಾಶವಿಲ್ಲದಷ್ಟು ಹಿಂದುಳಿದ ಜನ ಇವರು. ನಮ್ಮ ವಿಶ್ವವಿದ್ಯಾಲಯಗಳಲ್ಲಿ ಹರಿಜನ ಕುಲಪತಿಯಿದ್ದರೆ ಸದ್ಯದಲ್ಲಿ ಹರಿಜನರನ್ನು ಎಲ್ಲ ಇಲಾಖೆಗಳಲ್ಲಿ ತುಂಬುವುದು ಅವರಿಗೆ ಖಂಡಿತ ಸಾಧ್ಯವಿಲ್ಲ; ಅಷ್ಟು ಮಂದಿ ಹರಿಜನ ವಿದ್ಯಾವಂತರೇ ಇಲ್ಲ. ನಿಜವಾಗಿ ಹಿಂದುಳಿದವರೆಂದರೆ, ಜಾತಿ ಪದ್ಧತಿಯ ಎಲ್ಲ ನೋವನ್ನು ಅನುಭವಿಸಿದವರೆಂದರೆ ಈ ಜನರು. ಆದ್ದರಿಂದ ಈ ಸಂದರ್ಭದಲ್ಲಿ ನಾವು ಮಾದಬಹುದದ ತೀರ್ಮಾನವೆಂದರೆ ಈ ಜಾತಿ ವಿನಾಶಕ್ಕೆ ಹೊರಟ ನಾವು ಮೂರೂ ಯೂನಿವರ್ಸಿಟಿಗಳಲ್ಲೂ ನಿಜವಾಗಿ ಹಿಂದುಳಿದ ಪರಿಶಿಷ್ಟ ವರ್ಗಗಳವರನ್ನು ಕುಲಪತಿಗಳಾಗಿ ನೆಮಕ ಮಾಡಬೇಕೆಂದು ಸರಕಾರವನ್ನು ಒತ್ತಾಯಪಡಿಸುವುದು.

ನನಗೆ ಗೊತ್ತು: ಇದು ಕೂಡ ಬರಿ ಸಂಕೇತವಾಗಿಬಿಡತ್ತೆ. ಅದೇ ಈ ದೇಶದ ದುರಂತ. ಆದರೆ ಹೀಗೆ ನೇಮಿಸುವುದರ ಜೊತೆಗೇ ವರ್ಗಗಳನ್ನು ನಾನು ನಾಶಮಾಡದಿದ್ದಲ್ಲಿ ಈ ಹರಿಜನರ ನಡುವೆಯೂ ಈಗ ಒಕ್ಕಲಿಗ ಲಿಂಗಾಯತರಲ್ಲಾದಂತೆ ನವಬ್ರಾಹ್ಮಣ ಜನಾಂಗವೊಂದು ಸೃಷ್ಟಿಯಾದೀತು.

ಬರಿ ಧಾರ್ಮಿಕ ಪ್ರಶ್ನೆಯನ್ನಾಗಿ ಜಾತಿ ವ್ಯವಸ್ಥೆಯನ್ನು ನೋಡಿದಾಗ ಸುಲಭವಾಗಿ ಬ್ರಾಹ್ಮಣ ಬ್ರಾಹ್ಮಣೇತರ ಎಂದು ಮಾತಾಡಬಹುದು. ಸಮ್ಮೇಳನದಲ್ಲಿ ಮಾತಾಡಿದ ಪ್ರಮುಖರೊಬ್ಬರು ಬ್ರಾಹ್ಮಣರೇ ಏಕೆ ಪುರೋಹಿತರಾಗಬೇಕು. ಬ್ರಾಹ್ಮಣೇತರರೂ ಯಾಕಾಗಬಾರದೂ ಎಂದರು. ಪುರೋಹಿತ ವೃತ್ತಿಯೇ ಅಸಂಬಂದ್ಧವೆಂದು ಕಾಣುವವನಿಗೆ ಬ್ರಾಹ್ಮಣರ ವಿರುದ್ಧದ ಈ ಧಾರ್ಮಿಕ ಹೋರಾಟ ಕ್ರಮೇಣ ಅಸಂಗತವೆನ್ನಿಸುತ್ತ ಹೋಗುತ್ತದೆ. ಬುದ್ಧಿವಂತರಾದ ಎಷ್ಟು ಬ್ರಾಹ್ಮಣ ಯುವಕರು ಈಗ ಪುರೀಹಿತರಾಗಲು ತಯಾರಿದ್ದಾರೆ? ಧಾರ್ಮಿಕವಾಗಿ ಬ್ರಾಹ್ಮಣ, ಬ್ರಾಹ್ಮಣೇತರ ಎನ್ನುವುದು ವಿರೋಧವಿರುವ  ವಿಂಗಡಣೆಯಾಗಿ ಕಂಡರೂ ಸವಲತ್ತುಗಳ ದೃಷ್ಟಿಯಿಂದ ನೋಡಿದಾಗ ಸಮಸ್ಯೆ ಸಂಕೀರ್ಣವಾಗುತ್ತದೆ. ಬ್ರಾಹ್ಮಣರಂತೆಯೇ ಒಕ್ಕಲಿಗ ಲಿಂಗಾಯುತರು ಕರ್ನಾಟಕದಲ್ಲಿ, ರೆಡ್ಡಿಗಳು ಆಂಧ್ರದಲ್ಲಿ, ನಾಯರುಗಳು ಕೇರಳದಲ್ಲಿ ವಿಶೇಷ ಸವಲತ್ತುಗಳನ್ನು ಪಡೆದ ಜಾತಿಗಳಾಗಿವೆ. ಆದ್ದರಿಂದ ಈ ಜಾತಿಗಳು ಬ್ರಾಹ್ಮಣರ ವಿರುದ್ಧ ಮಾಡುವ ಚಳುವಳಿ ಉಳಿದ ಹಿಂದುಳಿದ ವರ್ಗಗಳ ಹಿತವನ್ನೂ ಸಾಧಿಸಬಲ್ಲುದೆಂಬ ಭರವಸೆಗೆ ಈಗ ಎಡೆಯಿಲ್ಲವಾಗಿದೆ. ಕಾರಣ ಜಾತಿಯ ಪ್ರಶ್ನೆಯನ್ನು ಧರ್ಮದ ಪ್ರಶ್ನೆಯಿಂದಾಗಿ ಮಾತ್ರ ನೋಡದೆ ವಿಶೇಷ ಸವಲತ್ತುಗಳ ಪ್ರಶ್ನೆಯೆಂದೂ ತಿಳಿಯುವುದು ಈಗ ಜಾತಿಪದ್ಧತಿಯ ವಿರುದ್ಧದ ಹೋರಾಟದಲ್ಲಿ ತೀರ ಅವಶ್ಯವಾದ್ದು.

ಟಿಪ್ಪಣಿ: ಸಮ್ಮೇಳನವನ್ನು ಏರ್ಪಡಿಸಿದವರಲ್ಲಿ ಒಬ್ಬರು ಈ ನನ್ನ ಭಾಷಣವನ್ನು ಒಪ್ಪಲಿಲ್ಲವೆಂಬುದು ಆಮೇಲೆ ತಿಳಿಯಿತು. ಇದರ ಅರ್ಥ: ಜಾತಿ ವಿನಾಶವಾಗಬೇಕೆನ್ನುವವರಲ್ಲಿ ಕೆಲವರು ತಮ್ಮ ಜಾತಿಯ ವಿಷಯ ಬಂದಾಗ ಹಿಂದೆಗೆಯಬಹುದು ಎಂಬುದು. ಉದಾಹರಣೆಗೆ: ರಾಜಕೀಯವಾಗಿಯಾದರೂ ಶಕ್ತಿಹೀನವಾಗುತ್ತಿರುವ ಬ್ರಾಹ್ಮಣ ಮಠಗಳನ್ನು ಟೀಕಿಸಿದಷ್ಟೇ ಉಗ್ರವಾಗಿ, ರಾಜಕೀಯವಾಗಿ ತುಂಬ ಶಕ್ತಿಯುತವಾಗಿರುವ ಲಿಂಗಾಯತ ಮಠಗಳನ್ನು ಆ ಜಾತಿಗೆ ಸೇರಿದವರು ವಿರೋಧಿಸಲು ಹಿಂಜರಿಯುತ್ತಾರೆ. ಜಾತಿ ವಿರೋಧ ಸುಲಭವಾದ ದೋರಂಎಯಾಗಿಬಿಡಬಾರದೆಂಬುದೇ ನನ್ನ ಮಾತಿನ ಉದ್ದೇಶ. ಎಲ್ಲ ಮಠಗಳೂ ನಿರ್ನಾಮವಾಗಬೇಕೆನ್ನುವವರು ಲಿಂಗಾಯತ ಸ್ವಾಮಿಗಳ ರಾಜಕೀಯ ಪ್ರಭಾವದ ವಿರಿದ್ಧ ಹೋರಾಡುವುದು ಈಗ ಅತ್ಯವಶ್ಯ.

-ಮೈಸೂರಿನಲ್ಲಿ ನಡೆದ ಜಾತಿವಿವಾದ ಸಮ್ಮೇಳನದಲ್ಲಿ ಮಾಡಿದ ಭಾಷಣ
ಸೆಪ್ಟೆಂಬರ್   ೨೬, ೧೯೭೩