ನವ್ಯಕಾವ್ಯದ ತಾತ್ವಿಕ ಹಿನ್ನೆಲೆ – ಯಾವುದೆಂಬುದನ್ನು ಸಾಹಿತ್ಯಾಭ್ಯಾಸಕ್ಕೆ ಉಪಯೋಗವಾಗುವಂತೆ ಚರ್ಚಿಸುವುದು ತೊಡಕಿನ ವಿಷಯ. ಯಾಕೆಂದರೆ ಸುಲಭವಾದ ರೀತಿಯಲ್ಲೂ ಈ ವಿಷಯದ ಬಗ್ಗೆ ಬರೆಯುವುದು ಸಾಧ್ಯ. ಎಲಿಯಟ್ ಕಾವ್ಯದಿಂದ ಪ್ರೇರಿತವಾಗಿ ನಾವು ಪಡೆದುಕೊಂಡ ತತ್ವಗಳು ಮುಖ್ಯವಾಗಿ ಯಾವುವು ಎಂಬುದು ಈಗ ಯಾರಿಗೆ ತಿಳಿಯದ ವಿಷಯ? ಎಲಿಯಟ್ ಕಾವ್ಯದ ಹಿಂದಿರುವ ತತ್ವಗಳು ಪ್ರಾರಂಭದಲ್ಲಿ ಅಡಿಗರು ಬರೆದ ನವ್ಯಕಾವ್ಯದ ಮನೋಧರ್ಮವನ್ನು ರೂಪಿಸಲು ಸಹಾಯ ಮಾಡಿದವು. ಅಡಿಗರಿಗೆ ತಮ್ಮ ಅನುಭವವನ್ನೇ ಹೊಸ ಕಣ್ಣಿನಿಂದ ಎಲಿಯಟ್ಟನ ಮೂಲಕ ನೋಡುವುದು ಸಾಧ್ಯವಾಯಿತು. ಭಾವನಾವಶರಾಗಿ ಮನುಷ್ಯತ್ವದ ತೊಡಕುಗಳನ್ನು ನಾವು ಮೀರಿ ನಿಲ್ಲುವ ಮೂಹೂರ್ತಗಳು ಕ್ಷಣಿಕವಲ್ಲವೆ ಎಂಬ ಕೊರಗು ಅವರ ಹಿಂದಿನ ಕಾವ್ಯದಲ್ಲಿಯೇ ಇತ್ತು. ಎಲಿಯೆಟ್ಟನ ಕಾವ್ಯದ ಹಿಂದಿರುವ ಕ್ಲಾಸಿಕಲ್ ಮತ್ತು ಧಾರ್ಮಿಕ ಧೋರಣೆ ಅಡಿಗರಿಗೆ ಹೆಚ್ಚು ಎಚ್ಚರದಿಂದ ತಮ್ಮ ಕೊರಗನ್ನು ಪರೀಕ್ಷಿಸಲು ನೆರವಾಯಿತು. ಹಾಗೆಯೇ, ಆರ್ಷದೃಷ್ಟಿಯಲ್ಲಿ ಬೇರೂರಿದ ಸಂವೇದನೆ ಅವರದ್ದಾದ್ದರಿಂದ ವ್ರತ, ನಿಯಮ, ನಿಷ್ಠೆಯ ಜೀವನದ ಮೂಲಕ ಬದುಕನ್ನು ಹದಗೊಳಿಸುತ್ತಾ ಹೋಗುವುದೊಂದೇ ಮನುಷ್ಯನಿಗೆ ಸರಿಯಾದ ಮಾರ್ಗ ಎನ್ನುವ ಎಲೆಯಟ್ ಕಾವ್ಯದ ತತ್ವವೂ ಕೂಡ ತಮ್ಮ ಸ್ವಂತ ಅನುಭವಕ್ಕೆ ಅತ್ಯಂತ ನೈಸರ್ಗೀಕವಾದ ರೀತಿಯಲ್ಲಿ ಹೊಂದಿಸಿಕೊಂಡು ಸಹಾಯ ಮಾಡಿತು. ಧೋರಣೆ ಅವರ ಸ್ವಾನುಭವವನ್ನು ರೂಪಿಸಿಕೊಳ್ಳಲು ನೆರವಾದ ಹಾಗೆಯೇ ನೆಹರೂ ಯುಗದ ಭಾರತೀಯ ರಾಜಕಾರಣದ ಸುಳ್ಳು ಭಂಗಿಗಳನ್ನೂ ಪೊಳ್ಳು ಆದರ್ಶಪ್ರಿಯತೆಯನ್ನೂ ತಮ್ಮ ಕಾವ್ಯದಲ್ಲಿ ಸಾಂಕೇತಿಕವಾಗಿ ಟೀಕಿಸಲು ಉಪಯುಕ್ತವಾದ ತತ್ವವಾಯಿತು. ಹೀಗೆ ತಮ್ಮ ಅನುಭವದ ಎಲ್ಲಾ ಅಂಶಗಳನ್ನು ಒಂದೇ ಪೋಕಸ್ಸಿಗೆ ತರುವುದು ಅಡಿಗರಿಗೆ ತಮ್ಮ ತಾತ್ವಿಕತೆಯಿಂದಾಗಿ ಸಾಧ್ಯವಾಯಿತೆಂಬುದು ಅತ್ಯಂತ ಮುಖ್ಯವಾದ ವಿಷಯ.

‘ಮೇಜರ್’ ಎನ್ನಬಹುದಾದ ಸಾಹಿತ್ಯಕ್ಕೂ ‘ಮೈನರ್’ ಎಂದು ನಾವು ಕರೆಯುವ ಸಾಹಿತ್ಯಕ್ಕೂ ಮುಖ್ಯವಾಗಿರುವ ವ್ಯತ್ಯಾಸ ಇದು ಎಂದು ನನಗನ್ನಿಸುತ್ತದೆ:‘ಮೇಜರ್’ ಕವಿಗೆ ತತ್ವಗಳಲ್ಲಿ ಅತ್ಯಂತ ತೀವ್ರವಾದ ಆಸಕ್ತಿಯಿರುವುದರಿಂದ ತನ್ನ ಸಮಸ್ತ ಅನುಭವವನ್ನೂ ಅವನು ಒಂದು ಸಮಗ್ರಶಿಲ್ಪವಾಗಿ ಕೊಡಲು ಸದಾ ಪ್ರಯತ್ನಿಸುತ್ತಿರುತ್ತಾನೆ. ಅಮೂರ್ತ ತತ್ವಗಳೆಂದರೆ ಇವನು ಹೆದರುವುದಿಲ್ಲ. ತತ್ವಗಳು ಇವನ ಕಾವ್ಯದ ಕ್ಷೇತ್ರವನ್ನು ಇನ್ನಷ್ಟು ಬಿಗಿಯಾಗಿಸುತ್ತವೆಯೇ ಹೊರತು  ಸಡಿಲಿಸುವುದಿಲ್ಲ. ಆದರೆ ‘ಮೈನರ್’ ಕವಿ ತತ್ವಗಳೆಂದರೆ ಸಂಕೋಚಪಡುತ್ತಾನೆ;ಬರಿ ಅನುಭವವನ್ನೇ ಮಂಡಿಸುವುದರಲ್ಲಿ ತೃಪ್ತನಾಗುತ್ತಾನೆ. ಈಚೆಗೆ ಬರುತ್ತಿರುವ ನವ್ಯಕಾವ್ಯ  ತೀರ ಸರಳವಾಗಿರುವುದಕ್ಕೆ ಕಾರಣ ಈ ಕವಿಗಳಿಗೆ ತಾತ್ವಿಕ ಕಾಳಜಿ ಇಲ್ಲದಿರುವುದು;ಅಥವಾ ಸೊಗಸಾಗಿ ಚೊಕ್ಕವಾಗಿ ಕಲಾತ್ಮಕವಾಗಿ ಬರೆಯಬೇಕೆಂಬ ಧೋರಣೆ ಇವರ ಬರವಣಿಗೆಗೆ ಯಾವ ತೊಡಕುಗಳನ್ನೂ ತರಗೊಡದಂತೆ ಸಲೀಸು ಮಾಡಿರುವುದು.

ಕಾವ್ಯರಚನೆ ಬರಿಯ ವಾಗ್ಝರಿಯಾಗಿ ಪರಿಣಮಿಸದೆ ಅನುಭವಕ್ಕೆ ಸಹಸ್ಪಂದಿಯಾದ ಭಾಷೆಯನ್ನು ಉಪಯೋಗಿಸುವ ಕಸಬುಗಾರಿಕೆಯಾದದ್ದು ನವ್ಯಕಾವ್ಯದ ಮುಖ್ಯ ಲಕ್ಷಣ ಎನ್ನುವುದಾದರೆ ಅಡಿಗರಲ್ಲಿ ತಾತ್ವಿಕ ಒತ್ತಡದಿಂದ ಬಂದ ಈ ಕಸುಬುಗಾರಿಕೆಗೂ ತಾತ್ವಿಕ ಒತ್ತಡವಿಲ್ಲದ ಸೊಗಸುಗಾರಿಕೆಯ ಈಚಿನ ಕಾವ್ಯದ ಕಸುಬುಗಾರಿಕೆಗೂ ನಡುವೆ ಇರುವ ವ್ಯತ್ಯಾಸ ಬಹಳ ಮುಖ್ಯವಾದುದು. ಇದನ್ನು ನಾವು ಗಮನಿಸುವ ಕ್ರಮದಲ್ಲಿ ತಾತ್ವಿಕ ಹಿನ್ನೆಲೆಯ ಅವಶ್ಯಕತೆಯನ್ನು ಚರ್ಚಿಸಿದಾಗ ಸಾಹಿತ್ಯ ವಿಮರ್ಶೆಗೆ ಲಾಭವಿದೆ. ಅದಲ್ಲದೆ ಅಡಿಗರ ಕಾವ್ಯದ ಹಿಂದೆ ಎಲಿಯಟ್ ಇದ್ದಾನೆ ಎಂದು ಹೇಳಿ ಎಲಿಯಟ್ ಪ್ರೇರಿತ ತತ್ವಗಳನ್ನು ವಿವರಿಸುವುದು ಅಥವಾ ಕಂಬಾರ, ಲಂಕೇಶ, ಪಾಟೀಲ, ಶರ್ಮ, ತಿರುಮಲೇಶ ಇತ್ಯಾದಿ ಕವಿಗಳ ಹಿಂದೆ ಅಸ್ತಿತ್ವವಾದದ ಪ್ರಭಾವವಿದೆ ಎಂದು ಗುರುತಿಸಿ ಆ ವಾದದ ಬಗ್ಗೆ ಇನ್ನೊಂದಿಷ್ಟು ಪುಟಗಳನ್ನು ಬರೆಯುವುದು ಯಾವ ಉಪಯೋಗವೂ ಇಲ್ಲದೇ ಹೋಗುತ್ತದೆ.

ಪೊಗದಸ್ತಾದ ಚರ್ಚೆಗೆ ಅವಕಾಶ ಮಾಡಿಕೊಡಲೆಂದು ತಾತ್ವಿಕ ಹಿನ್ನೆಲೆಯನ್ನು ಕುರಿತು ಇನ್ನೊಂದು ದೃಷ್ಟಿಕೋನದಿಂದ ಚರ್ಚಿಸುವುದೂ ಸಾಧ್ಯ. ನಮ್ಮ ಕವಿಗಳು ಪಾಶ್ಚಾತ್ಯ ತತ್ವಗಳಿಂದ ಪ್ರಭಾವಿತರಾಗಿ ಅನುಕರಣಶೀಲರಾಗುತ್ತಿದ್ದಾರೆ. ಭಾರತೀಯ ಪರಂಪರೆಯಲ್ಲಿಯೇ ಯಥೇಚ್ಛ ತತ್ವಗಳು ಸಿಗುವುದಿಲ್ಲವೆ? -ಇದು ಎಲ್ಲಾ ಸೆಮಿನಾರ್‍ಗಳಲ್ಲಿಯೂ ಅತ್ಯಂತ ಖಾರವಾಗಿ, ಆದರೆ ನಿಷ್ಪ್ರಯೋಜಕವಾಗಿ ಚರ್ಚಿಸಲ್ಪಡುವ ವಿಷಯ. ಯಾವುದು ಬೇಕಾದರೂ ಅನುಕರಣೆಯಾಗಬಹುದು. ನಿನ್ನೆಯ ಹಾಗೆಯೆ ಇವತ್ತು ಬರೆಯುವುದು ಕೂಡ ನನ್ನನ್ನೇ ನಾನು ಅನುಸರಿಸಿಕೊಂಡಂತೆ ಆಗಬಹುದು. ಪುರಾತನ ಭಾರತೀಯ ತತ್ವಗಳಿಂದಾಗಲೀ ಅಧುನಿಕ ಪಾಶ್ಚಾತ್ಯ ತತ್ವಗಳಿಂದಾಗಲೀ ಗೊಡ್ಡಾದ ರೀತಿಯಿಂದ ಪ್ರಭಾವಿತರಾಗುವುದು ಒಂದೇ ವಿಧದ ಅನುಕರಣಶೀಲತೆ ಎಂಬುದನ್ನು ನಾವು ಸಾಮಾನ್ಯವಾಗಿ ಮರೆಯುತ್ತೇವೆ. ಭಾರತೀಯವಾದ್ದು ಅಪ್ರಯತ್ನವಾಗಿ ದಕ್ಕುವ ಅಪ್ಪನ ಆಸ್ತಿಯಿಂದ ಎನ್ನುವ ಭ್ರಮೆಯೋ ಅಥವಾ ನಾವು ಭಾರತೀಯರಾದ್ದರಿಂದ ಪ್ರಾಚೀನ ಭಾರತದ ತತ್ವಗಳು ಬದಲಾಗುತ್ತಿರುವ ಈ ಯಂತ್ರ ಯುಗದಲ್ಲೂ ನಮಗೆ ಪಾಶ್ಚಾತ್ಯ ತತ್ವಗಳಿಗಿಂತಲೂ ಹತ್ತಿರ ಎನ್ನುವ ತಪ್ಪು ಕಲ್ಪನೆಯೋ ಈ ರೀತಿಯಾಗಿ ನಮ್ಮನ್ನು ಮಾತನಾಡಿಸುತ್ತದೆ. ಯಾವ ತತ್ವವನ್ನೇ ಆಗಲಿ, ಇವತ್ತಿನ ಪರಿಸರದಲ್ಲಿ ನಿಜಮಾಡಿಕೊಳ್ಳಬೇಕಾದ ಅಗತ್ಯದಿಂದ ತಪ್ಪಿಸಿಕೊಳ್ಳುವುದು ಅಸಾಧ್ಯವಲ್ಲವೆ? ಒಬ್ಬ ಕವಿಯ ಅನುಭವಕ್ಕೆ ಅರವಿಂದ ರಾಮಕೃಷ್ಣರಿಗಿಂತ, ಮಾರ್ಕ್ಸ್ ಕಮೂ ಅವರು ಏಕೆ ಹತ್ತಿರದವರಾಗಬಹುದು?

ಆದರೂ ಈ ವಿಷಯದಲ್ಲಿ ಒಂದು ಮಾತನ್ನು ಆಡುವ ಚಪಲ ನನಗಿದೆ.

ಈಚೆಗೆ ನವ್ಯಕಾವ್ಯ ಬರೆಯುತ್ತಿರುವ ಬಹಳ ಮಂದಿ ತರುಣರು ಹೆಚ್ಚಾಗಿ ಇಂಗ್ಲಿಷ್ ಸಾಹಿತ್ಯದಿಂದ ಪ್ರಭಾವಿತರಾದವರು. ನಾವು ಬಹಳ ಮಂದಿ ಇಂಗ್ಲಿಷ್ ಉಪಾಧ್ಯಾಯರು. ಬಡ್ತಿ ಗ್ಯಾರಂಟಿಯಾದ ನೌಕರಿ, ಮಧ್ಯಮ ವರ್ಗದ ಜೀವನ, ಇಂಗ್ಲಿಷ್ ಸಾಹಿತ್ಯದ ಕಲಿಕೆಯಿಂದ ದಕ್ಕಿಸಿಕೊಂಡ ಕೆಲವು ತತ್ವಗಳು, ಮಧ್ಯ ವಯಸ್ಸಿಗೆ ಕಾಲಿಡುವುದಕ್ಕೆ ಮುಂಚೆ ಅಥವಾ ಮದುವೆಗೆ ಮುಂಚೆ ಎಲ್ಲರಿಗೂ ಸಹಜವಾದ ಕೆಲವು ಅಡಾಲಸೆಂಟ್ ಉತ್ಪಾತಗಳು-ಇಷ್ಟು ಕ್ಯಪಿಟಲ್‍ನಿಂದ ನಾವೆಲ್ಲರು ಬರೆಯಲಿಕ್ಕೆ ಹೊರಡುತ್ತೇವೆ. ಇಂಗ್ಲಿಷ್ ಸಾಹಿತ್ಯ ಮಾತ್ರದಿಂದ ಪ್ರಭಾವಿತರಾದ ನಾವು ಕೆಲವೊಮ್ಮೆ ಎಷ್ಟು ದಡ್ಡರಂತೆ ವರ್ತಿಸುತ್ತೇವೆಂದರೆ, ಇಂಗ್ಲಿಷ್ ಜನಾಂಗಕ್ಕೆ ಅತ್ಯಂತ ಸಹಜವಾದ ಮನೋಧರ್ಮ ನಮಗೂ ಸಹಜವಾದದ್ದು ಎಂದು ಭಾವಿಸುವಷ್ಟು ಅಮೂರ್ತವಾದ ತತ್ವಗಳಿಂದ ತೀರ ಉತ್ಸುಕರಾಗಿ ತಲೆಕೆಡಿಸಿಕೊಳ್ಳುವುದು ನಾಗರಿಕವಾದ ಮಾರ್ಗವಲ್ಲ ಎಂಬರ್ಥ ಬರುವ ಮಾತನ್ನು ವಾಲ್ಟರ್ ಫೇಟರ್ ಒಂದು ಕಡೆ ಆಡಿದ್ದಾನೆ. ಯಾವತ್ತೂ ಪ್ರಾಪಂಚಿಕ ವಾಸ್ತವತೆಯನ್ನು ಮರೆಯದಿರುವುದು, ಅತಿಗೆ ಹೋಗದಂತೆ ವಿವೇಕಶಾಲಿಗಳಾಗಿರುವುದು ಇಂಗ್ಲಿಷ್ ಮನೋಧರ್ಮಕ್ಕೆ ಅತ್ಯಂತ ಸಹಜವಾದ ಗುಣಗಳು. ನಮ್ಮ ಲೇಖಕರಲ್ಲೆಲ್ಲಾ ಮಾಸ್ತಿಯವರು ಮಾತ್ರ ಸಹಜವಾಗಿ ಈ ಮನೋಧರ್ಮದವರು. ಆದರೆ ರಷ್ಯನ್ ಲೇಖಕರ ಮರ್ಜಿಯೇ ಬೇರೆ. ಡಾಸ್ಟೋವಸ್ಕಿ  ಸೈಬೀರಿಯಾದಿಂದ ತನ್ನ ಅಣ್ಣನಿಗೆ ಬರೆದ ಒಂದು ಕಾಗದದಲ್ಲಿ ಹೀಗೆ ಹೇಳುತ್ತಾನೆ: “ಹೆಗಲ್‍ನ ಪುಸ್ತಕವನ್ನು ಕೂಡಲೇ ಕಳಿಸು, ನನ್ನ ಇಡೀ ಜೀವನ ಅದರ ಮೇಲೆ ನಿಂತಿದೆ. “ ಜಾನ್ ಸ್ಟೂಅರ್ಟ್‍ಮಿಲ್‍ನ ಶಿಷ್ಯನೊಬ್ಬ ಬರೆದ ಪುಸ್ತಕವೊಂದರಿಂದ ಡಾಸ್ಟೋವಸ್ಕಿ ತುಂಬ ಕ್ರುದ್ಧ್ನಾಗಿ “Notes from tha underground” ಎನ್ನುವ ಕೃತಿಯನ್ನು ರಚಿಸಿದ. ಸ್ವಹಿತಸಾಧನೆ ಮನುಷ್ಯನಿಗೆ ಸಹಜವಾದ ಧರ್ಮ್; ಇದನ್ನು ಸಾಧಿಸಲು ಮನುಷ್ಯ ಅನಿವಾರ್ಯವಾಗಿ ವಿವೇಕಶಾಲಿಯಾಗಬೇಕಾಗುತ್ತದೆ ಎನ್ನುವ ತತ್ವವನ್ನು ಅಲ್ಲಗಳೆಯುವುದೇ ಈ ಕೃತಿಯ ಹಿಂದಿರುವ ಉದ್ದೇಶವಾಯಿತು. ತಾತ್ವಕ ಪ್ರತಿಪಾದನೆಗೆಂದೇ ಬರೆದ ಕೃತಿಗಳೂ ಅತ್ಯುತ್ತಮ ಸಾಹಿತ್ಯಕೃತಿಗಳಾದ ಇನ್ನೆಷ್ಟೋ ಉದಾಹರಣೆಗಳಿವೆ. ಇದನ್ನು ನಾನು ಹೇಳಲು ಕಾರಣ ಭಾರತೀಯ ಲೇಖಕರಾದ ನಾವು ಇಂಗ್ಲಿಷರಿಂದ ಮಾತ್ರವಲ್ಲದೆ ಬೇರೆ ಜನಾಂಗಗಳಿಂದಲೂ ಕಲಿಯಬಹುದಾದ್ದು ಬಹಳವಿದೆ  ಎಂಬುದು. ತತ್ವಗಳನ್ನು ಸಲೀಸಾಗಿ ಪದ್ಯಕ್ಕಿಳಿಸಿಬಿಡುತ್ತಿದ್ದ ನಮ್ಮ ಹಿಂದಿನ ಲೇಖಕರನ್ನು ವಿರೋಧಿಸುವ ಭರದಲ್ಲಿ ನಾವು ಅಮೂರ್ತ ತತ್ವಗಳಿಂದ ತಲೆಕೆಡಿಸಿಕೊಳ್ಳುವುದೇ ಅಪಾಯಕಾರಿ ಎನ್ನುವ ಇನ್ನೊಂದು ತಪ್ಪನ್ನು ಮಾಡುತ್ತಿರಬಹುದೆಂಬ ಸಂಶಯ ನನಗಿದೆ.

ತನ್ನ ಅನುಭವದ ಮೇಲೆ ಹತೋಟಿಯುಳ್ಳ ಲೇಖಕ ತತ್ವಗಳಿಗೆ ಹೀಗೆ ಹೆದರಬೇಕಾದ್ದಿಲ್ಲ. ಎಲ್ಲಾ ತತ್ವಗಳನ್ನು ಉಪಕರಣಗಳಾಗಿ ಉಪಯೋಗಿಸಿಕೊಳ್ಳಬಲ್ಲ ಧೈರ್ಯ ಅವನಿಗಿರುತ್ತದೆ. ಲೋಕಾಯುತ ಮಾರ್ಗದ ತತ್ವಜ್ಞಾನಿಗಳನ್ನು ಆಳವಾಗಿ ಅಭ್ಯಾಸಮಾಡಿ ಲೋಕಾಯುತ ಪ್ರತಿಪಾದನೆಯನ್ನೇ ತಮ್ಮ ಬದುಕಿನ ಮುಖ್ಯ ಉದ್ದೇಶವಾಗಿ ಮಾಡಿಕೊಂಡ ಪೂನಾದ ಕನ್ನಡಿಗರೊಬ್ಬರು, “ನಿಮ್ಮ ನವ್ಯ ಕವಿಗಳಿಗೆ ಏಕೆ ಲೋಕಾಯತದ ಪರಿಚಯವೇ ಇಲ್ಲ? ಒಂದು ಕಾಲದಲ್ಲಿ ಬೆಳಗಾಂ ಲೋಕಾಯುತಕ್ಕೆ ಪ್ರಸಿದ್ಧವಾದ ಪಟ್ಟಣವಾಗಿದ್ದಿತಂತೆ” ಎಂದು ಹೇಳಿದಾಗ ನನಗೆ ನಾಚಿಕೆಯಾಯಿತು. ಬರಿಯ ಇಂಗ್ಲಿಷ್ ಸಾಹಿತ್ಯದ ಅಭ್ಯಾಸದಿಂದಾಗಿ ನಾವೆಲ್ಲರೂ ಒಂದೇ ರೀತಿಯಲ್ಲಿ ಬರೆಯುವ ಒಂದೇ ರಿತಿಯಲ್ಲಿ ಯೋಚಿಸುವ ಒಂದೇ ಬಗೆಯ ಮಾತಾಡುವ ಜನರಾಗುತ್ತಿದ್ದೇವೆ ಎನ್ನುವ ಭಯ ನನಗಿರುವುದರಿಂದ ಹೀಗೆ ಮಾತು ಬೆಳೆಸಿದ್ದೇನೆ. ತತ್ವಗಳನ್ನು ಪ್ರೇಮದಷ್ಟು ತೀವ್ರವಾಗಿ ಭಾವಿಸಬಲ್ಲ ಭಾರತೀಯ ಲೇಖಕನಿಗೆ ಈಗ ಮಾತ್ರ ಮಾರ್ಕ್ಸ್ ವಾದ, ಲೋಹಿಯಾ, ಗಾಂಧಿ, ಉಪನಿಷತ್ತು, ಲೋಕಾಯುತ ಎಲ್ಲವೂ ಪ್ರಪಂಚವನ್ನು ಅರಿಯುವ ಅತ್ಯಂತ ಅವಶ್ಯವಾದ ಸಾಧನಗಳಾಗಬಹುದು.

ನವ್ಯಕಾವ್ಯದ ತಾತ್ವಿಕ ಹಿನ್ನೆಲೆಯನ್ನು ಕುರಿತು ಮಾತಾಡುವುದು ಯಾಕೆ ಕಷ್ಟ ಎನ್ನುವುದಕ್ಕೆ ಇನ್ನೊಂದು ಕಾರಣವಿದೆ. ಒಂದು ಕೃತಿಯ ಹಿಂದಿರುವ ತತ್ವ ಎಷ್ಟು ನಿಜವಾದ್ದು ಎನ್ನುವುದನ್ನು ತತ್ವಶಾಸ್ತ್ರದ ಶಿಸ್ತಿನಿಂದ ಚರ್ಚಿಸುವುದು ನಮಗೆ ಸಾಧ್ಯವೂ ಇಲ್ಲ; ಪ್ರಯೋಜನವೂ ಇಲ್ಲ. ಗಾರ್ಕಿಗೆ ಬರೆದ ಒಂದು ಕಾಗದದಲ್ಲಿ ಲೆನಿನ್, ಮಾರ್ಕ್ಸ್ ವಾದದಂತೆ ಆದರ್ಶವಾದವೂ ಉತ್ತಮ ಸಾಹಿತ್ಯ ಕೃತಿಯನ್ನು ಸೃಷ್ಟಿಸಲು ಸಹಾಯವಗಬಲ್ಲದು ಎಂದು ಹೇಳಿರುವುದು ಲಿನಿನ್‍ನಂಥ ತತ್ವನಿಷ್ಠ ವ್ಯಕ್ತಿ ಹೇಳಿದ ಮಾತೆಂದು ಗಮನಾರ್ಹವಾಗಿವೆ. ಸಾಹಿತ್ಯದ ಒಳಗೆ ನಿಂತು ಕೆಲಸ ಮಾಡುವ ತತ್ವಗಳ ಮಹತ್ವವಿರುವುದು, ಎಷ್ಟು ವಿಸ್ತಾರವಾದ ಅನುಭವಗಳನ್ನು ಒಂದು ಫೋಕಸ್ಸಿಗೆ ತರಲು ಈ ತತ್ವಗಳು ಲೇಖಕನಿಗೆ ಸಹಾಯಕ್ಕೆ ಬರುತ್ತವೆ ಎನ್ನುವುದರ ಮೇಲೆ. ಸಾಹಿತಿಯ ದ್ರವ್ಯ ಜೀವನದ ಅನುಭವ; ಆದರೆ ಈ ಅನುಭವಕ್ಕೆ ಒಂದು ಅರ್ಥವನ್ನು ಕಲ್ಪಿಸುವುದು ಸಾಹಿತಿಯ ತಾತ್ವಿಕ ದೃಷ್ಟಿಕೋನ. ಆದರೆ ಯಾವ ತತ್ವವೇ ಆಗಲಿ ಲೇಖಕನ ಎಲ್ಲಾ ಅನುಭವದ ಎಲ್ಲಾ ಮುಖಗಳನ್ನು ಒಳಪಡಿಸಿಕೊಳ್ಳಬೇಕಾದಲ್ಲಿ ತನ್ನ ಶಾಸ್ತ್ರೀಯ ಶುದ್ಧಿಯನ್ನು ಕಳೆದುಕೊಳ್ಳಬೇಕಾಗಬಹುದು; ತನಗೆ ವಿರುದ್ಧವಾದ ತತ್ವದ ಜತೆ ಒಡನಾಡಬೇಕಾಗಬಹುದು. ಅಡಿಗರ ಕಾವ್ಯದಲ್ಲಿ ವಿರುದ್ಧ ದಿಕ್ಕುಗಳಲ್ಲಿ ಸೆಳೆಯುವ ಅಂಶಗಳನ್ನು ಕೂಡುಕೊಂಡು ತತ್ವದ ಕಣ್ಣಿನಿಂದ ಅನುಭವದ ಶೋಧನೆ, ಅನುಭವದ ಬೆಳಕಿನ ತತ್ವದ ಪರೀಕ್ಷೆ ಪರಸ್ಪರ ನಡೆಯುವ ಕ್ರಮ ಇದಕ್ಕೆ ಅತ್ಯುತ್ತಮ ಉದಾಹರಣೆ, ಈ ಬಗ್ಗೆ ನಾನು ಅಡಿಗರ ಮೇಲೆ ಬರೆದಿರುವ ವಿಮರ್ಶೆಯಲ್ಲಿ ಸಾಕಷ್ಟು ಧೀರ್ಘವಾಗಿ ಚರ್ಚಿಸಿದ್ದೇನೆ.

ನಮ್ಮ ಕವಿಸಮ್ಮೇಳನದಲ್ಲಿ ಈಚಿನ ಕವನಗಳನ್ನು ಕೇಳಿಸಿಕೊಳ್ಳುವಾಗ ಸಾಮಾನ್ಯವಾಗಿ ಒಂದು ಪ್ರಶ್ನೆ ನನ್ನನ್ನು ಭಾಧಿಸಿದೆ. ಯಾಕೆ ಐರನಿಯಿಲ್ಲದ ಕವನಗಳು ನಮಗೆ ಹಿಡಿಸುವುದೇ ಇಲ್ಲ? ಗಂಭೀರವಾದ ಧಾಟಿಯಲ್ಲಿ ಬರೆದ ಪದ್ಯಗಳು ನಮಗೆ ಕೃತಕವೆನಿಸುತ್ತವೆ-ಯಾಕೆ? ನನ್ನ ವಾರಿಗೆಯವರಿಗೆಲ್ಲ ಇದು ಸಾಮಾನ್ಯವಾದ ಅನುಭವವೆಂದು ನಾನು ಇದನ್ನು ತಿಳಿದಿದ್ದೇನೆ. ಉತ್ಸಾಹದ ಧಾಟಿ ನಿಲುವುಗಳಿಂದ ನಮ್ಮ ಸಮಕಾಲೀನ. ಸತ್ಯವನ್ನು ಅರಿಯುವುದು ಅಸಾಧ್ಯವೆಂದು ನಾವು ತಿಳಿದಂತಿದೆ. ಹಿಂದಿನ ತಲೆಮಾರಿನ ಲೇಖಕರಿಗೆ ಅಭ್ಯಾಸಗತವಾದ ಭಾವಾತಿರೇಕತೆಯ ನಿಲುವಿಗೆ ವಿರೋಧವಾಗಿ ಈ ಭಾವನೆ ಹುಟ್ಟಿರಬಹುದು. ಸ್ವಂತದ ಭಾವನೆ ತೀವ್ರವಾದಷ್ಟು ಅದನ್ನು ಘೋಷಿಸುವ ವಿಷಯದಲ್ಲಿ ನಾಚಿಕೆಯಿರಬೇಕು; ವಕ್ರತೆ, ಐರನಿಗಳಲ್ಲದೆ ನೇರವಾಗಿ ಯಾವ ಭಾವನೆಗಳನ್ನೂ ಹೇಳಕೂಡದು ಎಂಬ ನಮ್ಮ ನಿಲುವು ಕಾವ್ಯದ ವ್ಯಂಜಕತೆಯನ್ನು ಹೆಚ್ಚಿಸುವ ಉಪಾಯ ಮಾತ್ರ ಎಂದು ನಾನು ತಿಳಿದಿಲ್ಲ. ಇದರ ಹಿಂದೆ ಒಂದು ತತ್ವ (ಪ್ರಾಯಶಃ ಸ್ವತಃ ಕವಿಗಳೇ ಸಂಪೂರ್ಣ ಗ್ರಹಿಸದೇ ಇರಬಹುದಾದ ತತ್ವ) ಇರಬಹುದೆಂದು ನಾನು ಭಾವಿಸುತ್ತೇನೆ. (ಲಘುವಾಗಿ ಈಚೆಗೆ ಬರೆಯುತ್ತಿರುವ ಕವಿಗಳಿಗೆ ತತ್ವಗಳಲ್ಲಿ ಆಸಕ್ತಿಯಿಲ್ಲವೆಂದು ಈ ಹಿಂದೆ ಹೇಳಿದೆ, ನಿಜ. ಈ ರೀತಿಯ ಕಾವ್ಯದ ಹಿಂದೆ ಅನುದ್ದಿಷ್ಟವಾಗಿಯಾದರೂ ಜೀವನದ ಬಗ್ಗೆ ಯಾವುದೋ ಒಂದು ತಾತ್ವಿಕ ಕಲ್ಪನೆ ಮೂಡುತ್ತದೆಂಬುದನ್ನು ಮರೆಯಕೂಡದು. ಈ ದೃಷ್ಟಿ ಯಾವುದೆಂಬುದನ್ನು ಮನಃಪೂರ್ವಕವಾಗಿ ಗ್ರಹಿಸಿಕೊಳ್ಳುವುದು ನಮ್ಮ ಈಚಿನ ಕವಿಗಳಿಗೆ ಅವಶ್ಯವಾದ ಶಿಸ್ತಾಗಬಹುದು.) ಅನುಭವಿಸುತ್ತಿರುವ ಮನಸ್ಸು ಯಾವ ನಿರ್ಣಯಕ್ಕೂ ಬರಲಾರದು; ಇದಕ್ಕೆ ಕಾರಣ ತನ್ನನ್ನು ತಾನೇ ಪರೀಕ್ಷಿಸಿಕೊಳ್ಳಲು ತೊಡಗಿದ ಮನಸ್ಸು ಮುಕ್ತಾಯವಿಲ್ಲದ ಪ್ರವಾಹದ ರೀತಿಯದು, ಮೂಲತಃ ಅಜ್ಞಾತ ಸ್ವರೂಪದ್ದು ಎಂದು ನಾವು ತಿಳಿಯುದರಿಂದ ಯಾವುದೇ ಒಂದು ಧಾಟಿಗೆ-ನೇರವಾದ ಧಾಟಿಗೆ-ಎಂದು ಮನಸ್ಸಿನ ಲಹರಿಗಳನ್ನು ಒಗ್ಗಿಸಿಕೊಳ್ಳಲು ನಾವು ತಯಾರಿಲ್ಲವೆಂದು ನನಗೆ ಅನಿಸುತ್ತದೆ. ಮನುಷ್ಯನ ಮನಸ್ಸಿನ ಸ್ವರೂಪದ ಬಗ್ಗೆ ನಮ್ಮ ತಾತ್ವಿಕ ತಿಳುವಳಿಕೆಯಲ್ಲಿ ಆದ ಬದಲಾವಣೆಯೇ, ಹೀಗೆ ಜೀವನದ ಸ್ವರೂಪದ ಬಗ್ಗೆ ನಿರ್ಣಾಯಕವಾಗಿ ಹೇಳುವ ತತ್ವಗಳನ್ನು ನವ್ಯ ಲೇಖಕರು ತ್ಯಜಿಸಿ ಬರೆಯುವಂತೆ ಮಾಡಿರಬಹುದೆಂದು ನನ್ನ ಊಹೆ. ಗಂಭೀರವಾದ ಧಾಟಿ ನಿರ್ಣಯದ ಜವಾಬ್ದಾರಿಯನ್ನು ಕವಿಯ ಮೇಲೆ ಹೊರಿಸುತ್ತದಾದ್ದರಿಂದ, ತನ್ನೊಳಗೆ ತಾನೆ ಗುದ್ದಾದುವ ರೀತಿಯನ್ನು ವ್ಯಕ್ತಪಡಿಸಲಾರದ್ದರಿಂದ, ನಾವು ಅಂತಹ ಕವನಗಳನ್ನು ಅನುಮಾನದಿಂದ ನೋಡುತ್ತೇವೆ. (ಉದಾಹರಣೆಗೆ ಈಚೆಗೆ ನಡೆದ ಸಾಹಿತ್ಯ ಸಮ್ಮೇಳನದಲ್ಲಿ, ಸಮ್ಮೇಳನದ ಅಂಗವಾದ ಕವಿಸಮ್ಮೇಳನದಲ್ಲಿ ಕಂಬಾರ, ನಾಡಿಗ, ಚನ್ನಯ್ಯ, ತೇಜಸ್ವಿ ಇತ್ಯಾದಿ ಯುವಕ ಕವಿಗಳು ಓದಿದ ಕವನಗಳಲ್ಲಿ ಸಾಮಾನ್ಯವಾಗಿದ್ದ ಅಂಶವೆಂದರೆ, ಐರನಿ, ಹಾಸ್ಯ, ವಿಡಂಬನೆ ಇತ್ಯಾದಿ ಧಾಟಿಯನ್ನು ವಕ್ರವಾಗಿಸುವ ವಿಧಾನಗಳು. ಈ ಕವನದಲ್ಲಿ ಸ್ವಾರಸ್ಯ ನೇರವಾದ ಪ್ರಕೃತಿ, ದೇಶಪ್ರೇಮಗಳು ಗೀತೆಗಳಲ್ಲಿ ಇರಲಿಲ್ಲ.)

ಯಾವ ತತ್ವವೂ ಮನುಷ್ಯನ ಅನುಭವವನ್ನು ಸಮಗ್ರವಾಗಿ ಹಿಡಿಯಲಾರದು, ವಿವರಿಸಲಾರದು ಎನ್ನುವ ನವ್ಯಕಾವ್ಯದ ಈ ತತ್ವ-ಇದು ಕೂಡ ತತ್ವವೆ-ಹೇಳಿಕೆಯಾಗುವಂತಹ ವಾಕ್ಯರಚನಾಕ್ರಮವನ್ನು, ಉತ್ಕರ್ಷವನ್ನು ಮಾತ್ರ ವ್ಯಕ್ತಪಡಿಸುವ ಲಯಗಳನ್ನು ಬಿಟ್ಟು ಬರೆಯುವಂತೆ ಮಾಡಿದೆ ಎಂದು ನನಗೆ ಅನ್ನಿಸುತ್ತದೆ. ನವ್ಯ ಕಾವ್ಯದ ಅತ್ಯುತ್ತಮ ಕವನಗಳು ತತ್ವಗಳನ್ನು ಬಳಸುವುದೇ ಇಲ್ಲವೆಂದು ನನ್ನ ವಾದವಲ್ಲ. ಅನುಭವದ ಹಂತಗಳನ್ನು ಪರೀಕ್ಷಿಸಲು ತತ್ವಗಳು ಬರುತ್ತವೆ. ಆದರೆ ಅಮೂರ್ತ ತತ್ವಗಳು ಅನುಭವವನ್ನು ಬಿಚ್ಚುವ ಸಾಧನಗಳಾಗಿ ಬಳಸಲ್ಪಡುತ್ತವೆಯೇ ವಿನಾ ನಿರ್ಣಾಯಕ ಹೇಳಿಕೆಗಳಾಗಿ ಬರುವುದಿಲ್ಲ.

ಪಾರಮಾರ್ಥಿಕ ತತ್ವಗಳು ಮಾತ್ರ ನಿಜವಾದ ತತ್ವಗಳು ಎಂಬ ಕಲ್ಪನೆ ಭಾರತೀಯರಾದ ನಮ್ಮೆಲ್ಲರ ಮನಸ್ಸಲ್ಲೂ ಇರುತ್ತದೆ. ಅಂದರೆ ಮನುಷ್ಯನ ಅನುಭವದ ಉದಾತ್ತ ಅಂಶಗಳನ್ನುಇ ಮಾತ್ರ ವಿವರಿಸಬಲ್ಲ ತತ್ವಗಳು ನಿಜವಾದ ತತ್ವಗಳು ಎನ್ನುವ ಸಾಮಾನ್ಯ ಕಲ್ಪನೆ ನಮ್ಮೆಲ್ಲರಿಗೂ ಇದೆ. ಆದರೆ ಮನುಷ್ಯ ಸ್ವಭಾವ ತುಂಬಾ ಜಟಿಲವಾದದ್ದು ಎಂದು ತಿಳಿದವರು ವಿರುದ್ಧ ದಿಕ್ಕುಗಳಲ್ಲಿ ತುಯ್ಯುವ ಮನಸ್ಸನ್ನು ವಿವರಿಸಬಲ್ಲಂತಹ ತತ್ವಗಳನ್ನು ಮಾತ್ರ ಸ್ವೀಕರಿಸಿ, ಭಾರತೀಯ ಸಾಮಾನ್ಯವಾಗಿ ಯಾವುದನ್ನು ಮಾತ್ರ ತತ್ವವೆಂದು ತಿಳಿಯುತ್ತಾನೋ (ಅಂತಿಮ ಅವಸ್ಥೆಯನ್ನು ವಿವರಿಸುವ ತತ್ವಗಳು ಇವು) ಅಂಥವನ್ನು ತಿರಸ್ಕರಿಸಿ ಬರೆಯುತ್ತಾನೆ. ಆದ್ದರಿಂದ ನವ್ಯಕಾವ್ಯದ ಹಿಂದೆ ತಾತ್ವಿಕ ತಿಳುವಳಿಕೆಯೇ ಇಲ್ಲ ಎನ್ನುವ ಭಾವನೆ ಭಾರತೀಯ ಪರಂಪರೆಯಿಂದ ಪ್ರೇರಿತರಾದವರಿಗೆ ಉಂಟಾಗುವುದು ಸಹಜ. ಸಾಹಿತ್ಯದ ಪರಮಪ್ರಯೋಜನ ಪಾರಮಾರ್ಥಿಕವಾದುದು ಎನ್ನುವ ವೇದಾಂತಿಯ ನಿಲುವನ್ನು ನವ್ಯಕವಿ ಕಣ್ಣುಮುಚ್ಚಿ ಒಪ್ಪುವುದಿಲ್ಲ. ಆದ್ದರಿಂದ ಮನುಷ್ಯ ಜೀವನದ ಪರಮೋದ್ದೇಶ ಪಾರಮಾರ್ಥಿಕವಾದ್ದು ಎನ್ನುವ ತತ್ವಗಳನ್ನು ಮಾತ್ರ ಪ್ರತಿಪಾದನಾತ್ಮಕವಾಗಿ ಬಳಸಲು ಅವನು ಇಚ್ಛಿಸುವುದಿಲ್ಲ. ವೇದವ್ಯಾಸರ ಭಾರತ ಮತ್ತು ಪುರಾಣ ಕಥೆಗಳು-ಇವನ್ನು ಬಿಟ್ಟರೆ, ಭಾರತೀಯ ಸಾಹಿತ್ಯದ ಹಿಂದೆ ಮನುಷ್ಯ ಸ್ವಭಾವದ ಬಗ್ಗೆ ಸರಳವಾದ ಧೋರಣೆ ಇದೆ. ಪಾಶ್ಚಾತ್ಯ ಸಾಹಿತ್ಯದ ಶೇಕ್ಸ್ ಪಿಯರ್, ಡಾಸ್ಟೊವಸ್ಕಿ, ಕಾಫ್ಕ, ಕಮೂರಂತಹ ಲೇಖಕರು ನಿರ್ಭಯವಾಗಿ ನೋಡುವ ಪಾತಾಳಗಳು ನಮ್ಮ ಸಾಹಿತ್ಯದಲ್ಲಿ ಸಿಗುವುದಿಲ್ಲ. ಸ್ವಭಾವದಲ್ಲಿ ಉದಾತ್ತವಾದ್ದು ಮತ್ತು ಇದಕ್ಕೆ ತೀರ ವಿರೋಧವಾದ ಹೀನತೆ ಎರಡೇ ನಮ್ಮ ಪಾರಮಾರ್ಥಿಕ ತತ್ವಗಳಿಗೆ ಕಾಣುವುದರಿಂದ ಈ ತತ್ವಗಳು ಸದ್ಯಕ್ಕೆ ನವ್ಯಕಾವ್ಯಕ್ಕೆ ವರ್ಜ್ಯವಾಗಬೇಕಾಯಿತು ಎನ್ನಿಸುತ್ತದೆ. (ಈ ಮಾತುಗಳನ್ನು ಹೇಳುವಾಗ ನನ್ನ ಕಣ್ಣೆದುರಿಗಿರುವುದು ಕನ್ನಡದಲ್ಲಿ ಬಂದ ಅತ್ಯುತ್ತಮ ನವ್ಯ ಕವನಗಳು.)

ಸುಲಭವಾದ ತೀರ್ಮಾನಗಳಲ್ಲಿ ಕೊನೆಗೊಳ್ಳದಂತೆ ಅನುಭವದ ಸಮಗ್ರ ಶೋಧನೆಯನ್ನು ನಡೆಸಲು ಮನುಷ್ಯನ ಅಂತಿಮ ಘಟ್ಟಗಳನ್ನು ಕುರಿತು ಹೇಳುವ ಪಾರಮಾರ್ಥಿಕ ತತ್ವಗಳ ಬದಲು ಅವನ ಅಸ್ತಿತ್ವವನ್ನು ಅರಿಯಲು ಸಹಾಯವಾಗಬಲ್ಲ ತತ್ವಗಳನ್ನು ಸೂಕ್ಷ್ಮ ಉಪಕರಣಗಳಂತೆ ನವ್ಯಕವಿ ಬಳಸುತ್ತಾನೆ-ಎಂದ ಹಾಗಾಯಿತು. “ಇದಮಿತ್ಥಂ” ಎಂದು ಹೇಳುವ ಅವಸರವಿಲ್ಲದ, ಮನಸ್ಸಿನ ವ್ಯಾಪಾರದ ಬಗ್ಗೆ ಕುತೂಹಲವೇ ಪ್ರಮುಖವಾದ ನವ್ಯಕಾವ್ಯದ ಮಾರ್ಗಕ್ಕೆ ಜೀವನವನ್ನು ಯಾವುದೋ ಒಂದು ಉದ್ದೇಶಕ್ಕೆ ಮಾತ್ರ ಕಟ್ಟಿಹಾಕಿ ಅದಕ್ಕೆ ಹೊರತಾದ ಸತ್ಯಗಳನ್ನು ಕ್ಷುಲ್ಲಕವೆಂದು ಕಾಣುವ ಜೀವನದೃಷ್ಟಿ ಸರಳೀಕರಣವಾಗಿ ಕಾಣುತ್ತದೆ. ಎಲ್ಲ ಪರಿಸ್ಥಿತಿಯನ್ನೂ ಒಂದಕ್ಕಿಂತ ಹೆಚ್ಚಾದ ದೃಷ್ಟಿಗಳಿಂದ ನೋಡಬಹುದು. ಯಾವ ಸತ್ಯವೂ ಅನುಭವಿಸುವವನಿಗೆ ಹೇಗೆ ಕಾಣುತ್ತದೆ ಎಂಬುದೇ ಮುಖ್ಯವಾಗುತ್ತದೆ. ಈ ದೃಷ್ಟಿಗೆ, ಅನುಭವದಲ್ಲಿ ವಸ್ತುವನ್ನು ಗ್ರಹಿಸುವ ರೀತಿಯಲ್ಲಿ ಇಬ್ಬಂದಿತನ ಸಾಧ್ಯವೆಂದು ತೋರುವುದರಿಂದ ಭಾಷೆಯ ಬಳಕೆಯೂ ಈ ದ್ವಂದ್ವಗಳನ್ನು ಹೊಳೆಯಿಸಬಲ್ಲ ವಕ್ರತನದ್ದಾಗಬೇಕಾಗುತ್ತದೆ.

ಕಾವ್ಯದಲ್ಲಿ ಧ್ವನಿಶಕ್ತಿ ಅವಶ್ಯಕತೆ ಬರುವುದು ಮೂರ್ತಸ್ವರೂಪದ ಪ್ರಪಂಚದ ಅನುಭವವನ್ನು ಮೀರಿ ನಿಂತ Transcen dental ಆದ ಅನುಭವ ಇರುವ ಲೇಖಕನಿಗೆ-ಅಲ್ಲವೆ? ಈ ಪ್ರಪಂಚದ ಅನುಭವದಲ್ಲಿ ಮಾತ್ರ ಆಸಕ್ತವಾದ ದೃಷ್ಟಿಗೆ, (ಅಥವಾ ಇಂದ್ರಿಯಗಳಿಂದ ಗ್ರಹಿಸುವ ಈ ಪ್ರಪಂಚ ಮಾತ್ರ ನಿಜವೆನ್ನಿಸುವ ದೃಷ್ಟಿಗೆ, ಅಂದರೆ ಅತೀಂದ್ರಿಯ ಅನುಭವವನ್ನು ನಿರಾಕರಿಸಿದ ಲೋಕದೃಷ್ಟಿಗೆ) ಈ ಧ್ವನಿಶಕ್ತಿಯುಳ್ಳ ಕಾವ್ಯ ಅಗತ್ಯವಾಗುತ್ತದೆಯೇ ಎನ್ನುವ ಪ್ರಶ್ನೆ ನನ್ನನ್ನು ಅನೇಕ ಸಾರಿ ಬಾಧಿಸಿದೆ. ಅಡಿಗರನ್ನು ಬಿಟ್ಟರೆ ಉಳಿದವರು ಈ ಪ್ರಪಂಚದ ಸ್ವರೂಪವನ್ನು ವರ್ಣಿಸುವುದರಲ್ಲಿ ಮಾತ್ರ ಆಸಕ್ತವಾಗಿರುವುದರಿಂದ ಅವರ ಕಾವ್ಯ ಧ್ವನಿಶಕ್ತಿಯನ್ನು ಪಡೆದುಕೊಳ್ಳುವುದಿಲ್ಲ. (ರಾಮಾನುಜನ್ ಇವರಲ್ಲಿ ಪ್ರಮುಖರು) . ಇಂದ್ರಿಯಗಳು ಗ್ರಹಿಸುವ ಪ್ರಪಂಚಮಾತ್ರ ನಿಜವಾದದ್ದು ಎನ್ನುವ ತತ್ವವನ್ನು ನೆಚ್ಚಿದ ಕವಿಗೆ ಮಾತಿನಲ್ಲಿ ಮಾತಿಗೆ ಅತೀತವಾದ್ದನ್ನು ಮೂಡಿಸುವ ಪ್ರಯತ್ನದಿಂದ ಹುಟ್ಟುವ ಧ್ವನಿ ಅನಗತ್ಯವೆಂಬುದು ನನ್ನ ಮಾತಿನ ತಾತ್ಪರ್ಯ. ಸಾಮಾಜಿಕ ಮನುಷ್ಯನ ಅನುಭವದಲ್ಲಿ ಮಾತ್ರ ಆಸಕ್ತವಾಗಿದ್ದ ಹದಿನೆಂಟನೆ ಶತಮಾನದ ಆಂಗ್ಲ ಕಾವ್ಯ ಮುಖ್ಯವಾಗಿ ಗದ್ಯ ಸಂವೇದನೆಯುಳ್ಳದ್ದು. ಆದರೆ ಕಣ್ಣಿನಿಂದ ನೋಡಿದ್ದು ಮಾತ್ರ ನಿಜವಲ್ಲ, ಕಣ್ಣಿನ ಮುಖಾಂತರ ನೋಡಿದಾಗ ಕಾಣುವ ಇನ್ನೊಂದು ಪ್ರಪಂಚವಿದೆ-ಎಂದು ಅತ್ಯಂತ ವೈಯಕ್ತಿಕವಾದ ಕಾಣ್ಕೆಯಿಂದ ಬರೆದ ಬ್ಲೇಕ್‍ಗೆ ಮಾತ್ರ ಸ್ಪಷ್ಟತೆ, ಅಚ್ಚುಕಟ್ಟು ಇತ್ಯಾದಿ ಗದ್ಯ ಗುಣಗಳು ಕಾವ್ಯದಲ್ಲಿ ಸಾಲದೇ ಹೋಯಿತು. ಗೂಢವಾಗಿ ಬರೆಯುವುದು ಬೇಕಾಯಿತು. ನಮ್ಮ ನವ್ಯಕವಿಗಳ ನಡುವೆ ಅಡಿಗರೊಬ್ಬರಿಗೆ ಮಾತ್ರ ಅತೀಂದ್ರಿಯವಾದ ಅನುಭವಗಳಿಗೆ ಕೈಚಾಚುವ ಅವಶ್ಯಕತೆಯಿದೆ ಎಂದು ನನಗೆ ಅನ್ನಿಸುತ್ತದೆ. ಉಳಿದವರು ತಮ್ಮ ಗಾಢವಾದ ಅನ್ನಿಸಿಕೆಗಳಿಗೆ-ಉದಾಹರಣೆಗೆ ಕಂಬಾರ, ಲಂಕೇಶ, ಪಾಟೀಲ, ತೀಜಸ್ವಿಯಂಥವರು-ಕವನವನ್ನು ಮಾಧ್ಯಮವಾಗಿ ಬಳಸುತ್ತಿಲ್ಲ ಎನ್ನುವುದು ಗಮನಿಸಬೇಕಾದ್ದು. ನಮ್ಮ ಈಗಿನ ಅತ್ಯುತ್ತಮ ಕಾವ್ಯ ಲಂಕೇಶ, ಚಿತ್ತಾಲರಂಥವರು ಬರೆಯುತ್ತಿರುವ ಗದ್ಯದಲ್ಲಿ ಬಂದಿದೆಯೇ ಹೊರತು ಪದ್ಯದಲ್ಲಿ ಬಂದಿಲ್ಲ. ಲಂಕೇಶ ತಮ್ಮ ಕಥೆಗಳಲ್ಲಿ ಕಾದಂಬರಿಯಲ್ಲಿ ಬಿಚ್ಚಿಕೊಂಡಷ್ಟನ್ನು ಪದ್ಯದಲ್ಲಿ ಬಿಚ್ಚಿಕೊಳ್ಳುವುದಿಲ್ಲ. ಪಾಟೀಲರ ಬಗ್ಗೆಯೂ ಪ್ರಾಯಶಃ ಇದು ನಿಜ. ಕಾವ್ಯದ ಸ್ವರೂಪದ ಬಗ್ಗೆ ನಮ್ಮ ಭಾವನೆ ಸಂಕುಚಿತವಾಗುತ್ತ ಬಂದಿರುವುದರಿಂದಲೋ ‘ಮೈನರ್’ ಕಾವ್ಯಕ್ಕೆ ಮಾತ್ರ ಯೋಗ್ಯವಾದ ಐರನಿ ವ್ಯಂಗ್ಯ, ಕಿಲಾಡಿತನಗಳು ಎಲ್ಲ ಕಾವ್ಯದ ಗುಣವೆಂದು ನಾವು ಭಾವಿಸಿರುವುದರಿಂದಲೋ* ಅಂತೂ ಕಾವ್ಯ ಮಾಧ್ಯಮ ಈಚೆಗೆ ತನ್ನ ಗ್ರಹಣಶಕ್ತಿ ಕಳೆದುಕೊಂಡು ಸಪ್ಪೆಯಾಗಿದೆ ಎಂದು ನನಗೆ ಅನ್ನಿಸುತ್ತದೆ. ತತ್ವಗಳ ಹಿನ್ನೆಲೆಯಲ್ಲಿ ನಮ್ಮ ಅನುಭವದ ಜೊತೆ ಗುದ್ದಾಡುವ ದೃಶ್ಯದ ಬದಲು ಈಗಿನ ನವ್ಯ ಕವನಗಳಲ್ಲಿ ನಾವು ಕಾಣುವುದು ಸಣ್ಣ ಅನುಭವದ ಸ್ವಾರಸ್ಯಪೂರ್ಣವಾದ ಮಂಡನೆಯನ್ನು ಮಾತ್ರ. ವಿಕಾರವಶವಾಗುವ ಧೋರಣೆಯಲ್ಲಿ “ಅಡಾಲಸೆಂಟ್” ವಯಸ್ಸಿನ ಪರಿತಾಮಗಲನ್ನು ಮೂಡಿಸುವಷ್ಟರಲ್ಲಿ ತೊಡಗಿದ ಕಾವ್ಯ ಓದಲು ಚೆನ್ನಾಗಿರುತ್ತದೆ, ಆದರೆ ನಮ್ಮನ್ನು ಆಳವಾಗಿ ಕಲಕುವ ಶಕ್ತಿ ಪಡೆದಿರುವುದಿಲ್ಲ.

ಒಟ್ಟಿನಲ್ಲಿ ನಾನು ಎತ್ತಬೇಕೆಂದಿರುವ ಪ್ರಶ್ನೆಗಳು ಇವು:

೧. ಐರನಿಯಿಂದ ಕಾವ್ಯ ನಮಗೆ ಏಕೆ ಸಪ್ಪೆ ಎನಿಸುತ್ತದೆ? ಗಂಭೀರವಾದ ಧಾಟಿಯಲ್ಲಿ ಬರೆದದ್ದು ಎಕೆ ಕೃತಕವೆನಿಸುತ್ತದೆ? ಇದು ಬರೀ ನಮ್ಮ ವಿಕೃತ ಅನ್ನಿಸಿಸಿಕೆಯೊ, ನಿಜವೊ? ಇದಕ್ಕೆ ಕಾರಣ ನಮ್ಮ ಇಂದಿನ ಸಾಂಸ್ಕೃತಿಕ ಪರಿಸರವೋ ಜನತೆಯ ಜೊತೆ ತಮ್ಮ ಕೊಂಡಿಗಳನ್ನು ನಿಜವಾಗಿಯೊ ಸುಳ್ಳಾಗಿಯೋ ಅಂತೂ sophisticated  ಆಗುತ್ತಿರುವ ಮಧ್ಯಮ ವರ್ಗದ ಈಚಿನ ಕವಿಗಳ ಅನಿವಾರ್ಯ ಪಾದೊ? ಅಥವಾ ಗಂಭೀರವಾಗಿ ಬರೆಯುತ್ತಿರುವವರೆಲ್ಲ ಒಂದಲ್ಲ ಒಂದು establishment ಸೇರಿದವರಾದ್ದರಿಂದ ಅನುಭವವನ್ನು ಕೇರಿ ಹೆಕ್ಕಿ ತುಂಬಿದ ಸಭೆಗೆ ಗ್ರಾಹ್ಯವಾದ್ದನ್ನು ಮಾತ್ರ ಕೊಡುವ ಕಪಟಿಗಳೊ? ಆದ್ದರಿಂದ ಕಪಟಿಗಳಿಗಿಂತ ಈ ಕಿಲಾಡಿ ಕವಿಗಳೇ ಹೆಚ್ಚು ಜೀವಂತರಾದವರು ಎಂದು ನಾವು ಸಂತೃಪ್ತಿಯಿಂದ ಕೂರುವುದು ಸಾಧ್ಯವೊ? ಸಾಧುವೊ?

೨. ಗಾಂಭೀರ್ಯ, ಕಿಲಾಡಿತನ ಈ ಎರಡು ಅತಿಗಳಿಗೆ ನಾವಿಲ್ಲ ಏಕೆ ಈಗ ಸಿಕ್ಕಿಬಿದ್ದಿದ್ದೇವೆ? ಹಾಗೆಯೇ ಏಕೆ ಈಗ ಚರ್ಚಿಸುತ್ತಿದ್ದೇವೆ?

೩. ಚಾತುರ್ಯವೇ ಪ್ರಧಾನವಾದ ಕಾವ್ಯ ಹಿಂದೂ ಒಂದು ತಾತ್ವಿಕ ತಿಳುವಳಿಕೆಯಲ್ಲವೆ? ಈ ತತ್ವವನ್ನು ಕವಿಗಳು ಮನಃಪೂರ್ವಕವಾಗಿ ಗ್ರಹಿಸಿದಲ್ಲಿ ಅವರು ಬರೆಯುವ ಕಾವ್ಯಕ್ಕೆ ಒಳ್ಳೆಯದಾಗಬಹುದಲ್ಲವೆ? ಫ್ಯಾಶನ್ನಿಗಾಗಿ ಹಾಗೆ ಬರೆಯದೆ, ನಾನು ಜೀವನವನ್ನು ಬಗೆಯುವುದೇ ಹೀಗೆ ಎಂದು ಹೇಳಲು ಕವಿ ತಯ್ಯಾರಿದ್ದರೆ ಅವನು ಬೆಳೆಯುವುದು, ಬದಲಾಗುವುದು, ಜವಾಬ್ದಾರಿಯುತ ಸಂವಾದಿಯಾಗುವುದು ಸಾಧ್ಯವಲ್ಲವೆ?

೪. ತಾತ್ವಿಕತೆಯೂ ಪ್ರೇಮದಷ್ಟೇ ಕಾಮದಷ್ಟೇ ತೀವ್ರ ಸಂವೇದನೆಯಾದಲ್ಲಿ ನಮ್ಮ ಸಾಹಿತ್ಯ ಜೀವನದ ಜೊತೆ ಇನ್ನಷ್ಟು ತೀವ್ರವಾದ, ಅರ್ಥಪೂರ್ಣವಾದ ಲೇವಾದೇವಿ ನಡೆಸಬಹುದಲ್ಲವೇ? ಆದ್ದರಿಂದ ಇಂಗ್ಲಿಷ್ ಸಾಹಿತ್ಯವನ್ನು ಮಾತ್ರ ಮಾದರಿಯಾಗಿಟ್ಟುಕೊಳ್ಳುವುದನ್ನು ನಾವೆಲ್ಲ ಬಿಡುವುದು ಒಳಿತಲ್ಲವೆ? **

* ‘ಅಕ್ಷರ ಹೊಸ ಕಾವ್ಯ’ದ ಮುನ್ನುಡಿಯಲ್ಲಿ ಲಂಕೇಶರು ಈ ತಪ್ಪು ಮಾಡಿದ್ದಾರೆಂದು ನನ್ನ ಭಾವನೆ.

** ೧೯೭೧ ಮಾರ್ಚ್ ಕೊನೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗ ನಡೆಸಿದ ಸೆಮಿನಾರ್‍ಗಾಗಿ ಮಾಡಿಕೊಂಡ ಟಿಪ್ಪಣಿಗಳು.