ಸಂದರ್ಭ: ಸಿಮಿನಾರ್ ಒಂದರಲ್ಲಿ ಚರ್ಚೆ. ಅದೇ ಮಾತುಗಳಲ್ಲಿ ಅದೇ ವಿಚಾರದ ಮಂಥನ: ಯಾಕೆ ನಮಗೆ ಪಾಶ್ಚಾತ್ಯ ವಿಚಾರವೆ ಮಾದರಿಯಾಗಬೇಕು? ನಾವು ಹೊಸದಾಗಿ ಭಾರತೀಯವಾಗಿ ಚಿಂತಿಸಲಾರೆವೆ? ಬರೆಯಾಲಾರೆವೆ? ಆಂಗ್ಲ ವಿದ್ಯಾಭ್ಯಾಸದಿಂದ ಪ್ರಚೋದಿತರಾದ ನಾವು ಅನುಕರಣಕ್ಕಿಂತ ಹೊರತಾಗಿ ಬೇರೆ ಏನೂ ಸೃಷ್ಟಿಸಲಾರೆವೆ? ಹಿಂದುಳಿದ ದೇಶದ ನಾವು ಕೀಳೆಂಬ ಭಾವನೆ ಇದಕ್ಕೆ ಕಾರಣವೇ?

ಚರ್ಚೆ ನಡೆಯುತ್ತಿದ್ದುದು ಇಂಗ್ಲಿಷ್ ಭಾಷೆಯಲ್ಲಿ ವಿದ್ಯಾಭ್ಯಾಸ ಪಡೆದವರ ನಡುವೆ. ಸಾಹಿತ್ಯದ ಚರ್ಚೆಗೆ ನಾವು ಎಳೆದು ತರುತ್ತಿದ್ದ ಉದಾಹರಣೆಗಳಲ್ಲಿ ಹತ್ತು ವರ್ಷಗಳ ಹಿಂದಿನದಕ್ಕಿಂತ ಸ್ವಲ್ಪ ವ್ಯತ್ಯಾಸಗಳಿದ್ದವು. ಎಲಿಯಟ್, ಪೌಂಡರ ಬದಲಾಗಿ ಕಮೂ, ಕಾಫ್ಕ್, ನಮಗೆ ಹೊಳೆಯುತ್ತಿದ್ದ ಮಾದರಿ ಐರೋಪ್ಯ ಸಾಹಿತ್ಯ ಪ್ರಭಾವವನ್ನು ನುಂಗಿ ಮೀರಿ ತಮ್ಮದೇ ಆದ ಕೃತಿಗಳನ್ನು ಸೃಷ್ಟಿಸಿದೆ ರಷ್ಯನ್ ದಾಸ್ತೊವಸ್ಕಿ ಮತ್ತು ಟಾಲ್‍ಸ್ಟಾಯ್. ಮರಾಠಿ, ಕನ್ನಡ, ಹಿಂದಿ, ಬಂಗಾಳಿ ಲೇಖಕರಿದ್ದ ಈ ಸಭೆಯಲ್ಲಿ ಹೀಗೆ ಚರ್ಚೆ ನಡೆಯುತ್ತಿದ್ದಾಗ ಕಲಾವಿದ ಮಿತ್ರರೊಬ್ಬರು ತಮ್ಮ ಅನುಭವದಿಂದ ಒಂದು ಘಟನೆಯನ್ನು ವಿವರಿಸಿ ವಾದ ಮಾಡಿದರು.

ಅವರು ಏನು ಹೇಳಿದರೆಂಬುದನ್ನು ವಿವರಿಸುವುದಕ್ಕಿಂತ ಮುಂಚೆ ಅವರು ಹೇಗೆ ಕಾಣಿಸುತ್ತದ್ದರೆಂಬುದನ್ನು ಹೇಳುವುದು ಅವಶ್ಯ. ಬಂಗಾಳಿ ಮತ್ತು ಒಬ್ಬ ಹಿಂದಿ ಲೇಖಕ ಮಿತ್ರರು ಜುಬ್ಬ ಕಚ್ಚೆ ಪಂಚೆಯನ್ನು ಧರಿಸಿದ್ದರು. ಹಿಂದಿ ನವ್ಯ ಲೇಖಕ, ನಾನು ಮತ್ತು ಮರಾಠಿ ಲೆಖಕ ಮಿತ್ರ ಜುಬ್ಬ ಪ್ಯಾಂಟ್ ತೊಟ್ಟಿದ್ದೆವು. ಎಲ್ಲರ ತಲೆಗೂದಲೂ ಸಾಮಾನ್ಯವಾಗಿ ಉದ್ದವಾಗಿತ್ತೆಂದೇ ಹೇಳಬಹುದು. ಕಲಾವಿದ ಮಿತ್ರರು ಮಾತ್ರ ಕತ್ತಿನ ತನಕ ಇಳಿಬಿಟ್ಟ ಉದ್ದ ಕೂದಲು. , ಕತ್ತರಿಸದೆ ಎದೆ ತನಕ ಬೆಳೆದ ನೀಳವಾದ ಗಡ್ಡ, ಖಾದಿ ಮುಂಡು ಪಂಜೆ, ಜುಬ್ಬಗಳಿಂದಾಗಿ ನಮಗೆಲ್ಲರಿಗಿಂತಲೂ ಹೆಚ್ಚಾಗಿ ಭಾರತೀಯರಂತೆ ಕಾಣುತ್ತಿದ್ದರು. ಅವರು ಕಾಣಿಸುತ್ತಿದ್ದ ರೀತಿಯೇ ಅವರ ಮಾತಿಗೊಂದು ಆರ್ತತೆಯನ್ನು ತರುವಂತಿತ್ತು. ಅಲ್ಲದೆ ಭಾರತೀಯ ಚೆತ್ರಕಾರರ ನಡುವೆ ಅವರು ಸೃಷ್ಟಿಸಿದ ಕೆಲವು ಕೃತಿಗಳು ಹೊಸದೊಂದು ಪಂಥಕ್ಕೆ ಪ್ರೇರಕವಾಗಿದ್ದರಿಂದ ಅವರ ಮಾತಿಗೆ ನಮ್ಮಲ್ಲಿ ತುಂಬ ಬೆಲೆಯಿತ್ತು.

ಅವರಿಗಿಂತ ಮೊದಲು ನಾನೇನು ಹೇಳಿದ್ದೆನೆಂಬುದನ್ನೂ ಇಲ್ಲಿ ಸೂಕ್ಷ್ಮವಾಗಿ ವಿವರಿಸಬಹುದೇನೋ. ನಮ್ಮ ಲೇಖಕರ ನಡುವೆ ಕೆಲವರು ‘ಒಳಗಿನವರು’, ಕೆಲವರು ‘ಹೊರಗಿನವರು’. ‘ಒಳಗಿನವರು’ ಜುಟ್ಟು ಬಿಟ್ಟರಬಹುದಾದು; ನಾಮವನ್ನೊ ವಿಭೂತಿಯನ್ನೊ ಕುಂಕುಮವನ್ನೊ ಧರಿಸಬಹುದು; ಕವಳ ಹಾಕುವವರಾಗಿರಬಹುದು. ಸಾಮಾನ್ಯವಾಗಿ ಇವರು ಹಳ್ಳಿಯ ಜನ. ಅಂತೂ ಇವರು ಯಾವುದೋ ಒಂದು ಪ್ರದೇಶಕ್ಕೋ ಪಂಗಡಕ್ಕೋ ಸೇರಿದವರೆಂಬುದು, ಇಂಗ್ಲಿಷ್ ಗೊತ್ತಿದ್ದರೂ ಅದು ಅಪ್ರಸ್ತುತವೆಂಬಂತೆ ಬರೆಯಬಲ್ಲರೆಂಬುದು ಮುಖ್ಯ. ಇಂಥ ಒಳಗಿನವರಾದ ಲೇಖಕರೆಂದರೆ ಬೇಂದ್ರೆ, ಜ್. ಬ್. , ಮಾಸ್ತಿ, ರಾವಬಹದ್ದೂರರರಂಥವರು. ಇನ್ನು ಹೊರಗಿನವರನ್ನು ಅವರ ಮಾತು, ತರ್ಕ ವಿಚಾರಸರಣಿ, ಪೋಷಾಕುಗಳಲ್ಲೆ ಯಾವ ಸಾಹಿತ್ಯ ಸಭೆಯಲ್ಲಾದರೂ ಗುರುತಿಸಬಹುದು. ಹಳ್ಳಿಯ ಮನುಷ್ಯನಾದ ಪರಮಹಂಸರಿಗೆ ವಿವೇಕಾನಂದರು ಇಂಗ್ಲಿಷ್ ಮಾತಾಡಬಲ್ಲರೆಂದು, ಅಂಥವರೊಬ್ಬರು ತನ್ನ ಶಿಷ್ಯನೆಂದು ಹೆಮ್ಮೆಯಿತ್ತಂತೆ. ನಮ್ಮ ಇತಿಹಾಸದಲ್ಲಿ ಇಂಥ ಸಂಬಂಧ ಅರ್ಥಪೂರ್ಣವಾದ್ದು. ‘ಒಳಗಿನವರಾದ’ ನಮ್ಮ ಲೇಖಕರಿಗೆ ಆಂಗ್ಲ ವಿದ್ಯೆ ಪಡೆದ ‘ಹೊರಗಿನವರಾದ’ ಪ್ರಯೋಗಶೀಲ ಲೇಖಕರೆಂದರೆ ಮೆಚ್ಚುಗೆ; ಹಾಗೆಯೇ ಈ ನೆಲದಲ್ಲಿ ಆಳವಾಗಿ ಬೇರುಬಿಟ್ಟ ‘ಒಳಗಿನ’ ಲೇಖಕರೆಂದರೆ ‘ಹೊರಗಿನ’ ಲೇಖಕರಾದವರಿಗೆ ವಿಶೇಷವಾದ ಬೆರಗು. (ಪರಸ್ಪರ ಅನುಮಾನ ಕೂಡ ಇಲ್ಲವೆಂದಲ್ಲ.) ಪ್ರಾಯಶಃ ಅವರಿಗೆ ಇವರಂತಾಗಲು, ಇವರಿಗೆ ಅವರಂತಾಗಲು ಇಷ್ಟ; ಒನ್ನರಿಗೊಬ್ಬರು ಪೂರಕವಾಗಿಯೇ ಈ ತನಕ ನಮ್ಮ ಸಾಹಿತ್ಯ ಸಂಪ್ರದಾಯವನ್ನು ಹೆಣೆಯುತ್ತಿದ್ದಾರೆ. ಕುವೆಂಪು, ವಿ. ಸೀ. , ಅಡಿಗ, ಕಾರಂತ-ಈ ಎಲ್ಲ ಲೇಖಕರಲ್ಲೂ ಭಾರತೀಯ ಪಾಶ್ಚಿಮಾತ್ಯ ಹೆಣಿಗೆಯಿದೆ. ವಾದಕ್ಕೆಂದು ‘ಹೊರಗಿನವ’, ‘ಒಳಗಿನವ’ ಎಂದು ವಿಂಗಡಿಸಿದರೂ ಎರಡರಲ್ಲಿ ಯಾವುದೋ ಒಂದು ಅಂಶ ಕೆಲವರಲ್ಲಿ ಹೆಚ್ಚೆನಿಸಿದರೂ ಎಲ್ಲರೂ ನಮ್ಮ ಭಾಷೆಯಲ್ಲಿ ಬರೆಯುವವರಾದ್ದರಿಂದ, ಭಾಷೆಯ ಜಾಯಮಾನದ ಅನಿವಾರ್ಯತೆಯಿಂದಾಗಿಯಾದರೂ ಒಂದಕ್ಕೊಂದು ಹೆಣೆಯದ ಲೇಖಕನೇ ಇಲ್ಲ. ಕೆಲವು ‘ಒಳಗಿನ ಲೇಖಕರು’ ತಮ್ಮ ಅನುಭವದಿಂದ ನೇರವಾಗಿ ಬಂದ ಒಂದು ಅಪ್ಪಟ ಕೃತಿಯನ್ನು ಮಾತ್ರ ರಚಿಸುತ್ತಾರೆ. ಈ ದೃಷ್ಟಿಯಿಂದ ಇವರು ಹೊರಗಿನವರಷ್ಟು ಇನ್‍ವೆಂಟಿವ್ ಅಲ್ಲ ಎನ್ನಿಸಬಹುದು. ನನ್ನ ತಲೆಮಾರಿನ ಲೇಖಕರು ಗ್ರಾಮಾಯಣದಂಥ ಕೃತಿಯನ್ನು ಸೃಷ್ಟಿಸಲಾರರೆಂಬುದನ್ನೂ ಮನಸ್ಸಿನಲ್ಲಿಟ್ಟುಕೊಂಡು ಹೇಳುವ ಮಾತಿದು…

ಇತ್ಯಾದಿ ನನ್ನ ವಿಚಾರಲಹರಿಯ ನಡುವೆ ಕಲಾವಿದ ಮಿತ್ರರು ವಿವರಿಸಿದ ಘಟನೆ ನನ್ನನ್ನು ಅಳವಾಗಿ ಕಲಕಿತು. ಈ ಮಿತ್ರರು ತುಂಬಾ ತೀವ್ರವಾಗಿ ಅಕರ್ಷಕವಾಗಿ ಮಾತಡಬಲ್ಲರು. ಅವರು ಹೇಳಿದ್ದನ್ನು ನಾನು ಒರಟಾಗಿ ಮಂಡಿಸಬಲ್ಲೆ ಅಷ್ಟೆ.

ಜಾನಪದ ಕಲೆಯನ್ನು ಅಭ್ಯಾಸ ಮಾಡಲು ಈ ಮಿತ್ರರು ಉತ್ತರ ಭಾರತದ ಹಳ್ಳಿಗಳಲ್ಲಿ ಸಂಚರಿಸುತ್ತಿದ್ದಾಗ ಇವರಿಗೊಂದು ಅನುಭವವವಾಯಿತು. ನಿರ್ಜನ ಪ್ರದೇಶದಲ್ಲೊಂದು ಗುಡಿಸಲು. ಕ್ಯಾಮರಾವನ್ನು ಹೆಗಲಿಗೆ ಇಳಿಬಿಟ್ಟ ನಡೆದು ಹೋಗುತ್ತಿದ್ದಾಗ ಗುಡಿಸಲಿನ ಒಳಗೆ ಕುಂಕುಮ ಹಚ್ಚಿಟ್ಟ ಒಂದು ಕಲ್ಲನ್ನು ಕಂಡು ಇವರು ಆಕರ್ಷಿತರಾದರು. ಅದರ ಫೋಟೋ ತೆಗೆದುಕೊಳ್ಳಬೇಕೆನ್ನಿಸಿತು. ಆದರೆ ಒಳಗೆ ಸಾಕಷ್ಟು ಬೆಳಕಿರಲಿಲ್ಲ. ಗುಡಿಸಲಿನ ಯಜಮಾನನಾದ ರೈತ ಹೊರಗೆ ಕೂತಿದ್ದ. ಅವನು ಪೂಜಿಸುವ ಕಲ್ಲನ್ನು ಬೆಳಕಿನ ತರಲಿ ಸಾಧ್ಯವೆ ಎಮ್ದು ಅನುಮಾನಿಸುತ್ತ ಕೇಳಿದರು. ರೈತ ಕೂಡಲೇ ಒಪ್ಪಿದ. ನನ್ನ ಮಿತ್ರರು ಫೋಟೋ ಹಿಡಿದಾದ ಮೇಲೆ ಅವನ ದೇವರಿಗೆ ಮೈಲಿಗೆಯಾಯಿತೆ ಎಂದು ಹೇಳಿ ಕ್ಷಮೆಯಾಚಿಸಿದರು. ಅದಕ್ಕೆ ರೈತ ಕೊಟ್ಟ ಉತ್ತರದಿಂದ ಅವರಿಗೆ ಆಶ್ಚರ್ಯವಾಯಿತು. “ಪರವಾಗಿಲ್ಲ, ಇನ್ನೊಂದು ಕಲ್ಲನ್ನು ತಂದು ಕುಂಕುಮ ಹಚ್ಚಿಟ್ಟರೆ ಆಯಿತು” ಎಂದು ಅವನು ಹೇಳಿದ. ತಾನು ಕುಂಕುಮ ಹಚ್ಚುವ ಯಾವ ಕಲ್ಲಾದರೂ ತನ್ನ ದೈವವಾಗುತ್ತದೆಂಬ ಅವನ ವಿಶ್ವಾಸದಿಂದ ನನ್ನ ಕಲಾವಿದ ಮಿತ್ರರು ಬೆರಗಾದರೂ. ಈ ರೈತನಲ್ಲಿ ಅವರು ಕಂಡ ಅತ್ಮನಿಷ್ಠತೆ ಭಾರತೀಯ ವೈಚಾರಿಕತೆಗೂ ಸೃಷ್ಟಾತ್ಮಕತೆಗೂ ಮೂಲಭೂತವಾದದ್ದೆಂದು ಅವರಿಗನ್ನಿಸಿತು.

ನಾನು ಮುಂಚಿ ತಿಳಿಸಿದಂತೆ ಆವತ್ತಿನ ಸಂದರ್ಭದಲ್ಲಿ ಈ ಘಟನೆ ನಮೆಗೆಲ್ಲಾ ಅರ್ಥಪೂರ್ಣವಾಗಿ ಕಂಡಿತು. ಕಮೂ, ಸಾರ್ತ್ರ್, ಕಾಫ್ಕ ಲೂಕಾಚ್ಸ್ (Lukacs) , ದಾಸ್ತೊವಸ್ಕಿಗಳನ್ನು ಉದಾಹರಣೆಯಾಗಿ ಎಳೆದು ತಂದಿದ್ದ ಗೊಂದಲದಲ್ಲಿ ಮುಂಡು ಪಂಚೆಯುಟ್ಟ ಶ್ರೇಷ್ಟ ಕಲಾವಿದರೊಬ್ಬರು ನಮ್ಮೆದುರು ನಿಲ್ಲಿಸಿದ ಈ ಸರಳ ವಿಶ್ವಾಸದ ರೈತ ನಮಗೆ ಅಥೆಂಟಿಕ್ ಭಾರತೀಯನಾಗಿ ಕಂಡ. ಈ ರೈತನನ್ನು ಮೂಢನಂಬಿಕೆಯವನೆಂದು ಜರಿಯುವುದು ಸಾಧ್ಯವೆ? ಪಾಶ್ಚಿಮಾತ್ಯರಿಂದ ಪ್ರಭಾವಿತರಾದ ನಾವು ಉಪಯೋಗಿಸುವ ‘ಮೂಢನಂಬಿಕೆ’ ಎನ್ನುವ ಪದವೇ ಇಲ್ಲಿ ರೈತನ ಲೋಕದೃಷ್ಟಿಗೆ ಅಪ್ರಸ್ತುತ. ಅವನಿಗೆ ಯಾವ ಕಲ್ಲೂ ದೇವರಲ್ಲ; ತಾನು ಕುಂಕುಮವಿಡುವ ಯಾವ ಕಲ್ಲಾದರೂ ದೇವರು. ಅವನ ಹೊರಪ್ರಪಂಚಕ್ಕೂ ಒಳಪ್ರಪಂಚಕ್ಕೂ ನಡುವೆ ಬಿರುಕಿಲ್ಲ. ದೈನಂದಿನ ದುಡಿಮೆಯಲ್ಲಿ ಪಂಚೇಂದ್ರಿಯಗಳೂ ಮಗ್ನವಾಗಿರುವ ಅವನ ಮನಸ್ಸನ್ನು ಜೀವನಕ್ಕೆ ಅರ್ಥವಿದೆಯೇ ಎನ್ನುವ ಪ್ರಶ್ನೆ ಬಾಧಿಸುವುದಿಲ್ಲ. ಇಂಥ ರೈತನೊಬ್ಬನ ಆಲೋಚನಾಕ್ರಮದ ಆಕೃತಿಯನ್ನು ತಿಳಿಯಲಾರದ ನಾವು ನಿಜವಾದ ಭಾರತೀಯ ಲೇಖಕರಾಗಲಾರೆವು. ಪಾಶ್ಚಿಮಾತ್ಯ ಯೋಚನಾಕ್ರಮ, ಗ್ರಹಣ ವಿಧಾನಗಳಿಂದ ಮುಕ್ತರಾಗದ ಹೊರತು ಈ ರೈತನ ಮನಸ್ಸು ಹೇಗೆ ಕೆಲಸ ಮಾಡುತ್ತದೆಂದು ನಾವು ತಿಳಿಯಲಾರೆವು. ರಷ್ಯದ ಪ್ರಾಣಶಕ್ತಿಯನ್ನು ಟಾಲ್‍ಸ್ಟಾಯ್ ಮತ್ತು ದಾಸ್ತೊವಸ್ಕಿ ತಿಳಿದ ಹಾಗೆ ಭಾರತವನ್ನು ನಾವು ತಿಳಿಯಲಾರದೆ ಅನುಕರಣಶೀಲರಾಗಿರುವುದಕ್ಕೆ ಪಶ್ಚಿಮದಿಂದ ನಾವು ಎರವಲು ಪಡೆದ ತತ್ವಗಳ ಆಕಾರಗಳ ಅಂಚಿನಲ್ಲಿ ನಮ್ಮ ಮನಸ್ಸು ಸುತ್ತಾಡುವುದು ಕಾರಣವಿರಬಹುದು. ನಮ್ಮ ವೈಚಾರಿಕತೆಯ, ಸೃಷ್ಟ್ಯಾತ್ಮಕತೆಯ ಪ್ರೇರಣೆಯ ಕೇಂದ್ರವೇ ಬದಲಾಗಬೇಕು. ಅವಶ್ಯವಾದಲ್ಲಿ ನಾವು ಅತಾರ್ಕಿಕವಾಗಿ ಯೋಚಿಸುವ ಧೈರ್ಯ ಮಾಡಬೇಕು. ಪಾಶ್ಚಿಮಾತ್ಯ ಸಂಸ್ಕೃತಿ ಹಿಂದೆ ವೈಜ್ಞಾನಿಕ ಲಿಬರಲ್ ಧೋರಣೆಯಾಗಿ, ಈಗ ಮಾರ್ಕ್ಸ್ ವಾದವಾಗಿ ನಮ್ಮ ಮನಸ್ಸನ್ನು ವಶಪಡಿಸಿಕೊಳ್ಳಲು ಹೊಂಚುತ್ತಿದೆ. ಆದ್ದರಿಂದ ಪ್ರಿಮಿಟಿವ್ ಗಿರಿಜನರ ಸಂಸ್ಕೃತಿ, ರೈತನ ಆಲೋಚನಾಕ್ರಮ ನಾವು ಮತ್ತೆ ಜೀವಂತರಾಗಲು ಅವಶ್ಯಕ.

ಕಲಾವಿದ ಮಿತ್ರರ ವಾದ ತೀವ್ರವಾಗಿತ್ತು, ಆಕರ್ಷಕವಾಗಿತ್ತು, ಇಂಥ ಪ್ರೇರಣೆ ಅವರ ಸ್ವಂತ ಸೃಷ್ಟಿಯಲ್ಲೂ ಕೆಲಸ ಮಾಡುವುದರಿಂದ ಅಧಿಕೃತವಾಗಿತ್ತು. ನನ್ನ ವಿಚಾರ ಇಂಥ ಸಂದರ್ಭದಲ್ಲಿ ತುಂಬ ಗೊಂದಲಕ್ಕೊಳಗಾಗುತ್ತದೆ. ಗಾಂಧಿಯೇ ನೆಹರೂಗೆ ಯಾಕೆ ಮಾರುಹೋದರು? ನಮ್ಮ ಟೆಕ್ನಾಲಜಿ ಯುರೋಪಿನದಕ್ಕಿಂತ ಯಾಕೆ ಬೇರೆಯಾಗಿಲ್ಲ? ಇಂಗ್ಲಿಷ್ ಮಾಧ್ಯಮವನ್ನು ನಮಗಿನ್ನೂ ಯಾಕೆ ಬಿಡಲು ಇಷ್ಟವಿಲ್ಲ? ನಮ್ಮ ಲೇಖಕರಿಗೆಲ್ಲ ಆಳವಾದ ಪ್ರೇರಣೆಗಳು ಬರುತ್ತಿರುವುದು ಐರೋಪ್ಯ ಸಂಸ್ಕೃತಿಯಿಂದಲೇ ಅಲ್ಲವೆ? ಈ ಕಲಾವಿದರ ಮಕ್ಕಳಾಗಲಿ ನಮ್ಮ ಮಕ್ಕಳಾಗಲಿ ರೈತರಿಂದ ಕಲ್ಲಿಗೆ ಕುಂಕುಮವಿಟ್ಟು ಅದನ್ನು ದೈವಮಾಡುವ ವಿಶ್ವಾಸದವರು ಆಗುವುದಿಲ್ಲ. ಈ ಕಲಾವಿದರೇ ಸ್ವತಃ ತನ್ನ ಅತ್ಯಗತ್ಯ ಭಾವನೆಯಷ್ಟೆ ಸಾಕೆಂಬುವವರು ಅಲ್ಲ; ಚಿತ್ರದಲ್ಲಿ ತಮ್ಮ ಭಾವನೆ ಉಳಿದವರ ಕಣ್ಣಿಗೂ ಕಾಣಬಲ್ಲಂತೆ ಆವಿಷ್ಕರಿಸಬೇಕೆನ್ನುವರು. ಐರೋಪ್ಯ ಸಂಸ್ಕೃತಿ ನಿಜವಾಗಿಯೂ ನಮ್ಮದಕ್ಕಿಂತ ಈಗ ಹೆಚ್ಚು ಸತ್ವಪೂರ್ಣವಾಗಿರಬಹುದೆ? ಆದರೆ ಹೀಗೆನ್ನಿಸುತ್ತಿದ್ದ ರಷ್ಯನ್ ಸಂದರ್ಭದಲ್ಲೂ ಟಾಲ್‍ಸ್ಟಾಯ್, ದಾಸ್ತೊವಸ್ಕಿ ಹುಟ್ಟಲಿಲ್ಲವೆ?

ನಮ್ಮ ಸಾಹಿತ್ಯ ಸಂಸ್ಕೃತಿಗಳ ಚರ್ಚೆಯಲ್ಲೆಲ್ಲ ಒಂದು ವಿಷಯ ಈಚೆಗೆ ನನಗೆ ಸ್ಪಷ್ಟವಾಗುತ್ತಿದೆ. ನಮ್ಮ ವರ್ಗದಲ್ಲಿ ನಮಗೆ ನಂಬಿಕೆ ಕಳೆದುಹೋಗುತ್ತಿದೆ. ಕಾರಂತರ ತಲೆಮಾರಿನವರಿಗೆ ತಮ್ಮ ಭಾವನೆಗಳಲ್ಲಿ ನಂಬಿಕೆಯಿತ್ತು; ತಮ್ಮ ವಿಚಾರ ಭಾವನಾ ಕ್ರಮಗಳು ಎಲ್ಲರಿಗೂ ಅರ್ಥಪೂರ್ಣವಾಗಬಲ್ಲ ಮೌಲ್ಯಗಳನ್ನು ಸೃಷ್ಟಿಸಬಲ್ಲವೆಂಬ ವಿಶ್ವಾಸ ಅವರಿಗಿತ್ತು. ನಮಗೆ ಆ ಆತ್ಮವಿಶ್ವಾಸವಿಲ್ಲ. ನಮ್ಮ್ ವ್ಯಕ್ತಿತ್ವ ಅಧಿಕೃತವಲ್ಲವೆಂದು ನಾವು ತಿಳಿದಿದ್ದೇವೆ. ನಾವು ಸೇರಿರುವ ‘ಬೂರ್ಜ್ವಾವರ್ಗ’ ನಮಗೆ ಅವಹೇಳನದ ಶಬ್ದವಾಗಿದೆ; ಉದಾಹರಣೆಗೆ ನಾವು ಬೂರ್ಜ್ವಾ ವರ್ಗದವರಾದರೂ ಅದನ್ನು ಮುಚ್ಚಿಡಲು ನಾವು ತೊಡುವ ಬೊಹಿಮಿಯನ್ (Bohemian) ಉಡುಪು ನೋಡಿ. ಆದರೆ ನಮ್ಮ ಹಿಂದಿನವರು ತಮ್ಮ ವರ್ಗದ ಹಿತಸಾಧನೆಯೂ ಇಡೀ ದೇಶದ ಹಿತಸಾಧನೆಯೂ ಒಂದೇ ಎಂದು ತಿಳಿದವರಾಗಿದ್ದರು. ರಾಜಾರಾಮ ಮೋಹನರಾಯ್‍ನಿಂದ ಹಿಡಿದು ನಲವತ್ತರ ದಶಕದ ನಮ್ಮ ಅಗ್ರ ರಾಜಕಾರಣಿಗಳವರೆಗೆ, ಸಾಹಿತಿಗಳಲ್ಲೂ ಕೂಡ ಇಂಥ ಭಾವನೆ ದಟ್ಟವಾಗಿ ಕಾಣಿಸುತ್ತಿತ್ತು. ಈಗ ಮಾತ್ರ ನಮಗೆ ನಾವು ಸೇರಿರುವ ‘ಬೂರ್ಜ್ವಾ’ ವರ್ಗ ನಾಚಿಕೆಯ ಸಂಗತಿಯಾಗಿದೆ. ಆದ್ದರಿಂದ ನಾವೊಂದು ಗೊಂದಲದಲ್ಲಿ ಸಿಕ್ಕಿಬಿದ್ದಿದ್ದೇವೆ. ಹೀಗೆನ್ನಿಸುವುದು ಸರಿಯೆಂದೂ ನಾನು ಹೇಳುತ್ತಿಲ್ಲ; ತಪ್ಪೆಂದೂ ವಾದಿಸುತ್ತಿಲ್ಲ. ಆದರೆ ಅಂಥ ಅಪನಂಬಿಕೆ ನಮಗೆ ಬಂದಿದೆ; ಅದಕ್ಕೆ ನೆಹರೂ ಯುಗದ ರಾಜಕೀಯ ಆರ್ಥಿಕ ವಾಸ್ತವಗಳಿಂದ ನಾವು ಪಡೆದ ವಿಶೇಷ ಲಾಭಗಳೂ ಕಾರಣವಿರಬಹುದು ಎಂಬುದನ್ನು ಒಪ್ಪಿಕೊಳ್ಳುವುದು ಅಗತ್ಯ. ಆದ್ದರಿಂದ ನಮ್ಮಲ್ಲಿ ಸೂಕ್ಷ್ಮಜ್ಞರಾದವರಿಗೆ ಈಚೆಗೆ ತೀವ್ರವಾಗಿ ಅನ್ನಿಸುವ ಭಾವನೆಯೆಂದರೆ ಸ್ವಂತದ ಬಗ್ಗೆ ಅವಮಾನ; ನಮ್ಮ ಒಳಭಾವನೆಗಳ ಅರ್ಥದ ವ್ಯಾಪಕತೆಯ ಬಗ್ಗೆ ತೀವ್ರ ಸಂಶಯ. ಇಂಥ ಮನಸ್ಥಿತಿಯಲ್ಲಿರುವ ನಾವು  ಒಂದೋ ಅಬ್ಸರ್ಡ್‍‍ನ ಹಿಂಬಾಲಕರಾಗುತ್ತೇವೆ; ಅಥವಾ ಯಾವ ಕಲ್ಲಿಗಾದರೂ ಕುಂಕುಮ ಹಚ್ಚಿ ಪೂಜಿಸುವ ರೈತನನ್ನು ಅತ್ಯಂತ ಅಧಿಕೃತ ಭಾರತೀಯನೆಂದು ಕಾಣುತ್ತೇವೆ. ಕಮೂ, ಕಾಫ್ಕ ಅಥವಾ ರೈತ-ಎಲ್ಲವೂ ನೆಲೆಯಿಲ್ಲದ ಮನಸ್ಸು ಆರಿಸಿಕೊಳ್ಳುವ ಮುಖವಾಡಗಳಾಗುತ್ತವೆ-ಅಷ್ಟೆ.

ನಮ್ಮ ಬರವಣಿಗೆಯ ಕ್ರಮದಲ್ಲೂ ಈ ಗೊಂದಲದಿಂದಾಗಿ ನಮ್ಮ ಧೋರಣೆಗಳು ಪ್ರತಿಕ್ರಿಯಾತ್ಮಕವಾಗಿ ಆಗಾಗ ಬದಲಾಗುವುದನ್ನು ನಾವು ಕಾಣಬಹುದು. ಉದಾಹರಣೆಗೆ ನಮ್ಮ ಕಥೆ ಕಾದಂಬರಿಗಳನ್ನು ತೆಗೆದುಕೊಳ್ಳೋಣ. ಕೆಲವು ವರ್ಷಗಳ ಹಿಂದೆ ನಾವು ಸಿಂಬೆ ಸುತ್ತಿ ಅಂತರ್ಮುಖವಾಗಿ ಕೂತ ನಮ್ಮ ಒಳಜೀವನದ ಬಗ್ಗೆಯೇ ಬರೆಯಲು ಶುರುಮಾಡಿದೆವು. ಎಲ್ಲ ತರುಣ ಲೇಖಕರ ನಾಯಕನೂ ಅಂತರ್ಮುಖಿ ನಾಯಕನಾದ. ಪ್ರಜ್ಜಾವಾಹಿನಿ ತಂತ್ರವಿಲ್ಲದ ಬರವಣಿಗೆಯೇ ಕಡಿಮೆಯಾಯಿತು. ಬಾಹ್ಯಪ್ರಪಂಚದ ನೇರ ವರ್ಣನೆ, ಸರ್ವಸಾಕ್ಷಿತ್ವದ ನಿರೂಪಣಾ ವಿಧಾನ ಕಥೆ ಕಾದಂಬರಿಗಳಿಂದ ಮಾಯವಾದವು. ಇದಕ್ಕೆ ಕಾರಣ: ನಮಗೆ ನಮ್ಮೊಳಗೆ ಕಾಣಿಸುತ್ತಿರುವುದು ಮಾತ್ರ ಹೆಚ್ಚು ನಿಜ, ಹೊರಗಿನದಲ್ಲ ಎಂದು ವಾದಿಸಿದೆವು. ಈಗ ಈ ಅಂತರ್ಮುಖಿ ಪ್ರಜ್ಞಾವಾಹಿನಿಯ ವಿರುದ್ಧ ತೀವ್ರ ಪ್ರತಿಕ್ರಿಯೆ ಹುಟ್ಟುತ್ತಿದೆ. ಮಾಸ್ತಿ, ಕಾರಂತ, ಕುವೆಂಪು ಮಾರ್ಗದ ತೇಜಸ್ವಿಯವರ ಕಥೆ ಹೇಳುವ ಶೈಲಿ ನಮಗೆ ಆಕರ್ಷಕವಾಗಿ ಕಾಣಿಸುತ್ತದೆ. ಅಂತರ್ಮುಖವಾದ ಬರವಣಿಗೆಯೇ ತಪ್ಪು, ಮನಸ್ಸಿನ ವಿಶ್ಲೇಷಣೆಯೇ ಅನಾರೋಗ್ಯಕರ ಎಂಬ ವಾದದ ಅತಿಗೂ ನಮ್ಮಲ್ಲಿ ಕೆಲವರಿಗೆ ಹೋಗಬೇಕೆನ್ನಿಸುತ್ತದೆ. ಆದರೆ ಹೊರಗೆ ಕಾಣಿಸುವುದೇ ನಿಜವೆನ್ನುವುದಾಗಲೀ ಒಳಗೆನ್ನಿಸುವುದು ಮಾತ್ರ ಸ್ವಂತಕ್ಕೆ ಪರಿಮಿತವಾದ ನಿಜವೆನ್ನುವುದಾಗಲೀ ಇಡಿ ಸಮಾಜದ ಜೊತೆ ತನ್ನ ಸಂಬಂಧದ ಬಗ್ಗೆ, ತನ್ನ ಅನಿಸಿಕೆಯ ಸರ್ವವ್ಯಾಪಕವಾಗಬಲ್ಲ ಅರ್ಥಪೂರ್ಣತೆಯ ಬಗ್ಗೆ ನಂಬಿಕೆ ಕಳೆದುಹೋದದ್ದರ ಲಕ್ಷಣವಲ್ಲದೆ ಮತ್ತಿನ್ನೇನು?

ನನ್ನ ವಾದ ಎಲ್ಲೋ ಹರಿಯುತ್ತಿದ್ದಂತೆ ಕಂಡರೂ ನಾನು ಪ್ರಾರಂಭದಲ್ಲಿ ಹೇಳಹೊರಟಿದ್ದಕ್ಕೂ ಇದಕ್ಕೂ ಸಂಬಂಧವಿದೆ ಎಂದು ನಾನು ತಿಳಿದಿದ್ದೇನೆ. ನನ್ನ ಮನಸ್ಸಿನ ಈ ಗೊಂದಲಗಳ ನಡುವೆ ನನ್ನ ಕಲಾವಿದ ಮಿತ್ರರನ್ನು ಒಂದು ಪ್ರಶ್ನೆ ಕೇಳಬೇಕೆಂದು ನನಗನ್ನಿಸಿತು. ಪಾಶ್ಚಿಮಾತ್ಯ ಪ್ರಭಾವಕ್ಕೊಳಗಾದ ನಮ್ಮ ಬೂರ್ಜ್ವಾ ವರ್ಗದ ಅಧಿಕೃತನವನ್ನು ನಾವು ಅನುಮಾನಿಸುತ್ತೇವೆ; ಆದರೆ ರೈತ ಅಧಿಕೃತ ವ್ಯಕ್ತಿಯಾಗಿ ನಮಗೆ ಕಾಣುತ್ತಾನೆ. ಹೀಗೆ ಒಂದೋ ಪಾಶ್ಚಿಮಾತ್ಯ ಉದಾಹರಣೆಗಳ ಬೆನ್ನುಹತ್ತಿ ಅಥವಾ ಜಾನಪದ ನಡವಳಿಕೆಯ ರೈತನನ್ನು ಮಾದರಿಯಾಗಿಟ್ಟುಕೊಂಡು ನಾವು ಯಾಕೆ ವಿಚಾರಿಸುತ್ತೇವೆಂಬುದೇ ಮುಖ್ಯ ಪ್ರಶ್ನೆ ಈ ರೈತನನ್ನು ಭಾರತದ ಮಾದರಿಯಾಗಿ ಕಾಣುವ ಮನಸ್ಸೂ ಪ್ರತಿಕ್ರಿಯೆಯಲ್ಲಿ ತನ್ನ ವಾಸ್ತವವನ್ನು ಅಲ್ಲಗಳೆಯಲು ಯತ್ನಿಸುವ ಪಾಶ್ಚಿಮಾತ್ಯ ಅನುಕರಣಶೀಲ ಮನಸ್ಸೇ ಯಾಕಿರಬಾರದು? ನಾವು ನಮ್ಮ ದೇಶದ ಇಡೀ ಸತ್ಯದ ಜೊತೆ ತೊಡಗಲೆಂದು ಹೂಡುವ ಈ ಉಪಾಯಗಳು-ಸರಳ ರೈತ ಪೋಷಕ ಧೋರಣೆ, ವೈದಿಕತೆ, ಅರವಿಂದ ಅಧ್ಯಾತ್ಮಿಕತೆ ಇತ್ಯಾದಿಗಳು-ಅಪ್ರಯೋಜಕವಾಗುತ್ತವೆಂಬ ಅನುಮಾನ ನನಗೆ. ಪಾಶ್ಚಿಮಾತ್ಯ ವಿಚಾರ, ಜೀವನಕ್ರಮಗಳಿಂದ ಪ್ರಭಾವಿತರಾದ ನಮ್ಮಲ್ಲಿರುವ ಸಾಚಾ ಮೋಸಗಳು ನಮಗೆ ಕಾಣಿಸುವಂತೆ ಪರಂಪರಾನುಗತ ಜೀವನ ರೈತನ ಸಾಚಾ ಮೋಸಗಳು ನಮಗೆ ಯಾಕೆ ಕಾಣಿಸುವುದಿಲ್ಲ?

ಆದರೆ ಇದನ್ನು ಕಾಣಬಲ್ಲ ಭಾರತೀಯರು ನಮ್ಮಲ್ಲಿದ್ದರು. ನಮ್ಮ ಪರಂಪರೆಯನ್ನು ಸೃಷ್ಟಿಸಿದ ಹೊಯ್ದಾಟಗಳನ್ನು ಮರೆತು ನಾವು ಬಾರತೀಯತೆಯನ್ನು ಕುರಿತು ವಿಚಾರಿಸುವ ತಪ್ಪು ಮಾಡುತ್ತೇವೆ. ತುಕಾರಾಂ, ಕಬೀರ ಅಥವಾ ಬಸವ ಈ ರೈತನ ಬಗ್ಗೆ ಏನು ಯೋಚಿಸಬಹುದಿತ್ತು? ಪರಂಪರಾನುಗತ ಶ್ರದ್ಧೆಯ ಅವನ ಭಾವನೆ ಮತ್ತು ವಿಚಾರದ ಕ್ರಮವನ್ನೂ ಇವರು ಪ್ರಶ್ನಿಸಬಹುದಿತ್ತು. ಯಾವ ಕಲ್ಪನ್ನಾದರೂ ಪೂಜಿಸುವ ಈ ರೈತ ಕೂಡ ತೀವ್ರತೆ ಕಳೆದುಕೊಂಡ ಭೋಳೆಯಾಗಿ ಕಂಡು ಇವರು ಸಿಟ್ಟಿಗೇಳಬಹುದಿತ್ತು. ಆದರೆ ಇವರಿಗೆ ರೈತನ ಜೊತೆಗೂ ಜಗಳವಿದ್ದಂತೆ ನಮಗೆ ಯಾಕೆ ಇಲ್ಲ? ಈ ಪ್ರಶ್ನೆಯನ್ನು ನಾವು ಕೇಳಿಕೊಳ್ಳುವ ಆರ್ತತೆಯಲ್ಲಿ, ಕೇಳಬೇಕಾಗಿ ಬರುವ ಸಾಂಸ್ಕೃತಿಕ ಜರೂರಿನಲ್ಲಿ, ಅಂದರೆ ನಮ್ಮ ವಿಚಾರಕ್ಕೂ ದೇಶದ ವಾಸ್ತವ ಸ್ಥಿತಿಗೂ ಇರುವ ಸಂಬಂಧಗಳನ್ನು ಕಾಣುವ ಅಗತ್ಯದಲ್ಲಿ ನಾವು ನಿಜವಾದ ಭಾರತೀಯ ಲೇಖಕರಾಗುವ ಸಾಧ್ಯತೆಯಿದೆಯೆಂದು ಹೇಳಬಹುದು.

ಇಂಥ ಪ್ರೇರಣೆ ಈಗಾಗಲೇ ನಮ್ಮ ಕೆಲವು ಲೇಖಕರ ಬರವಣಿಗೆಯಲ್ಲಿ ಕೆಲಸ ಮಾಡುತ್ತಿರುವುದನ್ನು ಕಾಣಬಹುದು. ನಮ್ಮ ಸೃಷ್ಟಾತ್ಮಕತೆಗೆ ಹೊಸ ಕೇಂದ್ರವನ್ನು ತರುವ ಹೊಸ ಕಾಳಜಿ ಬೇಕೆಂಬ ಅತೃಪ್ತಿಯಂತೂ ಅನೇಕ ಭಾರತೀಯ  ಲೇಖಕರಲ್ಲಿ ಕಾಣುತ್ತಿರುವುದು ಆಶಾದಾಯಕ ಚಿಹ್ನೆಯಾಗಿದೆ. ವಿದ್ಯಾವಂತ ಬರಹಗಾರ ಒಂದು ಕಡೆ, ನಿರಕ್ಷರನಾದ ಭಾರತದ  ಸಾಮಾನ್ಯ ಮನುಷ್ಯ ಒಂದು ಕಡೆ-ಪರಸ್ಪರ ಸಂಬಂಧವಿಲ್ಲದೆ ಇಬ್ಬರೂ ಬಡವಾಗಿದ್ದಾರೆ ಎಂಬುದು ಈ ಅತೃಪ್ತಿಗೆ ಕಾರಣ. ತನ್ನಲ್ಲಿ ಪ್ರಾರಂಭವಾಗಿ ತನ್ನಲ್ಲೆ ಕೊನೆಯಾಗುವ ವಿದ್ಯಾವಂತನ ವೈಚಾರಿಕ ದೊಂಬರಾಟ, ಸಹಸ್ರಾರು ವರ್ಷಗಳಿಂದ ಏಕರೀತಿಯಲ್ಲಿ ಬದುಕುತ್ತಿರುವ ನಿರಕ್ಷರನ ಸತ್ತ ರೀತಿಯ ಸಾತತ್ಯ-ಎರ‍ಡೂ ಸಂಬಂಧವಿಲ್ಲದೆ, ಒಟ್ಟು ಚಲನೆಗೆ ಕಾರಣವಾಗದೆ, ಮೌಲ್ಯಗಳಾಗದೆ ಹೋಗಿವೆ. ರೈತನಿಗೆ ಅರ್ಥವಾಗುವಂತೆ ಲೇಖಕ ಸರಳವಾಗಿ ಬರೆಯಬೇಕೆಂಬುದು ನನ್ನ ವಾದದ ತಾತ್ಪರ್ಯವಲ್ಲ. ನಾವು ಬರೆದದ್ದನ್ನು ಓದುವುದು ಕೂಡ ಸಾಧ್ಯವಿಲ್ಲದ ಸ್ಥಿತಿಯಲ್ಲಿ ಅವನಿದ್ದಾನೆ. ಓಟಿಗಾಗಿ ಅವನನ್ನು ಬಳಸಿಕೊಳ್ಳುವ ರಾಜಕೀಯ ತತ್ವಗಳು ಕೂಡ ಅವನ ಜೊತೆ ನಮ್ಮ ಸಂಬಂಧಗಳನ್ನು ಎರ್ಪಡಿಸಲಾರವು. ಬೇರೆ ವರ್ಗಕ್ಕೆ ಸೇರಿದ ಬರಹಗಾರರಾದ ನಮಗೆ ನಮ್ಮ ಅನಿಸಿಕೆಗಳಲ್ಲಿ ನಂಬಿಕೆ ಮತ್ತು ತೀವ್ರತೆಗಳನ್ನು ಉಂಟುಮಾಡುವಂತಹ ಸೃಷ್ಟಿಯ ಹೊಸ ಪ್ರೇರಣೆಗಳಿಗೆ ಅಗತ್ಯವಾದ ಬೇರೆ ವೈಚಾರಿಕ ಕ್ರಮಗಳನ್ನು ನಮ್ಮ ಮನಸ್ಸು ರೂಢಿಸಿಕೊಳ್ಳುತ್ತ ಹೋಗಬೇಕು-ಸದ್ಯದ ಸ್ಥಿತಿಯಲ್ಲಿ, ಇಷ್ಟನ್ನು ಮಾತ್ರ ಈಗ ಹೇಳಬಹುದೇನೋ?

– ಈ ಲೇಖನ ಅಕ್ಟೋಬರ್ ೧೯೭೩ರಲ್ಲಿ ಬರೆದದ್ದು