೧೯೭೪ರಲ್ಲಿ ಮೊದಲು ಪ್ರಕಟವಾದ ನನ್ನ ‘ಸನ್ನಿವೇಶ’ ಎನ್ನುವ ಪುಸ್ತಕ ಮತ್ತೆ ಪ್ರಕಟವಾಗುತ್ತಿದೆ. ಇದಕ್ಕೆ ಕಾರಣವಾದವರು ಅಭಿನವದ ರವಿಕುಮಾರ್ ಮತ್ತು ಅವರ ಗೆಳೆಯರು.

ಮತ್ತೆ ಈ ಪುಸ್ತಕದ ಪರಿವಿಡಿಯನ್ನು ನೋಡಿದಾಗ ನಾನು ಹಿಂಜರಿಯದಂತೆ ಕೆಲವು ವಿಷಯಗಳನ್ನು ೧೯೭೪ರ ಸುಮಾರಿನಲ್ಲಿಯೇ ಯೋಚಿಸಿದ್ದೆನೆಂಬುದು ನನ್ನಲ್ಲೊಂದು ಕೃತಾರ್ಥಭಾವವನ್ನು ಮೂಡಿಸಿದೆ. ಸಾಂಸ್ಕೃತಿಕ ಪ್ರಶ್ನೆಗಳನ್ನು ಎತ್ತುವ ಕ್ರಮಗಳನ್ನು ಈ ಪುಸ್ತಕದಲ್ಲಿ ಹುಡುಕಿದ್ದೇನೆ. ಹೀಗೆ ಪುಸ್ತಕ ಪ್ರಕಟಣೆಯ ಮೂಲಕ ಮರುಜೀವ ಪಡೆಯುವುದು ಲೇಖಕನಾಗಿ ನನಗೆ ಹೆಮ್ಮೆಯನ್ನು ತಂದಿದೆ. ಈ ಪುಸ್ತಕದಲ್ಲಿ ಇರುವುದು ನಾನು ಮಾತ್ರವಲ್ಲ; ಗಿರೀಶ್ ಕಾರ್ನಾಡ್, ಶಾಂತವೇರಿ ಗೋಪಾಲಗೌಡರಂಥವರೂ ಇರುವಂಥ ಪುಸ್ತಕ ಇದು. ನನ್ನ ಬಹಳಷ್ಟು ಸ್ನೇಹಿತರಿಗೆ ಅಕ್ಷರಜ್ಞಾನ ಮತ್ತು ಪ್ರಜ್ಞೆ ಆ ಕಾಲದಲ್ಲಿಯೇ ಮುಖ್ಯವಾಗಿ ಕಂಡಿದೆ. ಜಾತಿವಿನಾಶದ ಬಗ್ಗೆ ನಾನು ಎತ್ತಿದ ವಿಚಾರಗಳು ಈ ಪುಸ್ತಕದಲ್ಲಿ ಪ್ರಥಮವಾಗಿ ಬೆಳಕು ಕಂಡಿದ್ದನ್ನು ಕಾಣಬಹುದು. ಆದ್ದರಿಂದ ಈ ಕಾಲಕ್ಕೂ ಇಂಥ ಪುಸ್ತಕ ಒದಗುವಂತೆ ಮಾಡಿರುವ ರವಿಕುಮಾರರನ್ನು ಪ್ರೀತಿಯಿಂದ ನೆನೆಯುತ್ತೇನೆ.

ಅಕ್ಷರ ವಿನ್ಯಾಸ ಮಾಡಿದ ಶ್ರೀಧರ್ ಅವರನ್ನು, ಅರ್ಥಪೂರ್ಣ ಮುಖಪುಟ ವಿನ್ಯಾಸಗೊಳಿಸಿದ ದೇವರಾಜ್ ಅವರನ್ನು, ಅಚ್ಚಿನ ಮನೆಯ ಹೂವಪ್ಪ ಅವರನ್ನು ಈ ಸಂದರ್ಭದಲ್ಲಿ ನೆನೆಯುತ್ತೇನೆ.

೧೪-೧೧-೨೦೦೯

ಯುಆರ್ಅನಂತಮೂರ್ತಿ

ಬೆಂಗಳೂರು