ಈ ದಿನದ ಸಭೆಯಲ್ಲಿ ಉಳಿದ ಭಾಷಣಕಾರರು ಸ್ವಾತಂತ್ರ್ಯೋತ್ತರ ಕನ್ನಡ ಸಾಹಿತ್ಯದ ಸಾಧನೆ ಬಗ್ಗೆ ಮಾತಾಡಿದ್ದಾರೆ. ಆದರೆ ನಾನು ನಿಮ್ಮ ಅನುಮತಿಯಿಂದ ವಿಷಯವನ್ನು ಇನ್ನೊಂದು ದೃಷ್ಟಿಯಿಂದ ನೋಡಲು ಪ್ರಯತ್ನಿಸುತ್ತೇನೆ. ಸ್ವಾತಂತ್ರ್ಯೋತ್ತರ  ಕನ್ನಡ ಸಾಹಿತ್ಯದ ಬಗ್ಗೆ ಮಾತಾಡುವಾಗ ಸಾಮನ್ಯವಾಗಿ ಎಲ್ಲರೂ ಈ ಸಾಹಿತ್ಯದ ಮೇಲೆ ಆಗಿರುವ ಪಶ್ಚಿಮದ ಪ್ರಭಾವದ ಪ್ರಶ್ನೆಯನ್ನು ಎನ್ನುತ್ತಾರೆ. ಇಂಥ ಪ್ರಭಾವಕ್ಕೆ ಒಳಗಾದ ಲೇಖಕರಲ್ಲಿ ನಾನೂ ಒಬ್ಬನಾದ್ದರಿಂದ ಈ ಬಗ್ಗೆ ನನ್ನ ಅನಿಸಿಕೆಗಳನ್ನು ನಿಮ್ಮೆದುರಿಗಿಡುವುದು ಅಪ್ರಸ್ತುತವಾಗಲಾರದೆಂಬ ಭರವಸೆ ನನಗಿದೆ. ಭಾರತದಲ್ಲಿ ಈಗ ಸೃಷ್ಟಿಯಲ್ಲಿ ಮನಸ್ಸು ಎದುರಿಸಬೇಕಾದ ಪ್ರಶ್ನೆಗಳಲ್ಲಿ ಇದು ಮುಖ್ಯವೆಂದು ನಾನು ಭಾವಿಸುದರಿಂದ ನನ್ನ ವಿಚಾರಗಳು ಅಲ್ಲಲ್ಲಿ ಅಸ್ಪಷ್ಟವಿದ್ದರೂ ನಾನು ಈ ವಿಚಾರದಲ್ಲಿ ಯೋಚಿಸುವ ಕ್ರಮವನ್ನೇ-ಅವರ ಎಲ್ಲ ಅನುಮಾನ ಗೊಂದಲಗಳ ಸಹಿತ-ನಿಮ್ಮೊಡನೆ ಹಂಚಿಕೊಳ್ಳುವುದು ನನಗೆ ಅಗತ್ಯವೆನಿಸಿವೆ.

ಕನ್ನಡ ಸಾಹಿತ್ಯದ ಭಾಷೆಗೆ ಸಾವಿರ ವರ್ಷದ ಇತಿಹಾಸವಿರಬಹುದು. ಆದರೆ ಈಗ ಬರೆಯುವ ಲೇಖಕನ ಒದಗಿಬರುವ ಭಾಷೆಯ ಚಲಾವಣೆ ಮುವ್ವತ್ತೊ, ನಲ್ವತ್ತೊ ವರ್ಷಗಳದ್ದಾಗಿರುತ್ತದೆ ಇಲ್ಲೂ ಕೂಡ ಭಾವನೆಗೆ ಮೈಕೊಡುವ ಸಾಹಿತ್ಯ ಸೃಷ್ಟಿಯ ಸಂದರ್ಭದಲ್ಲಿ ಕೃತಿಯಿಂದ ಕೃತಿಗೆ ಭಾಷೆಯ ಹುಡುಕಾಟ ನಡೆಯುತ್ತಲೇ ಇರಬೇಕಾಗುತ್ತದೆ. ಆಂಗ್ಲ ಸಾಹಿತ್ಯದಿಂದ ಪ್ರಚೋದಿತನಾದ ಲೇಖಕ ಕನ್ನಡ ಭಾಷೆಯನ್ನು ಬಳಸಲು ನಿಶ್ಚಯ ಮಾಡಿದಾಗ ನೈತಿಕ ಆಯ್ಕೆಯೊಂದನ್ನು ಮಾಡಿಕೊಂಡಂತೆ. ಇನ್ನೂ ನಮ್ಮ ಭಾಷೆಯ ಅನುಭವವಾಗದ ಈ ವಿಚಾರಗಳನ್ನು ನಮ್ಮ ಭಾಷೆಯ ಅನುಭವವೇ ಆಗಿ ಮಾಡಿದಾಗ ಲೇಖಕನ ನೈತಿಕ ಆಯ್ಕೆ ಒಂದು ದೃಷ್ಟಿಯಲ್ಲಿ ಆತ್ಮೀಯವಾಗಿ ಪ್ರತಿಕ್ರಿಯಿಸಿದ ಆಗಿ ಮಾಡಿದಾಗ ಲೇಖಕನ ನೈತಿಕ ಆಯ್ಕೆ ಒಂದು ದೃಷ್ಟಿಯಲ್ಲಿ ಸಫಲವಾದಂತೆ. ಸಂಸ್ಕೃತ ಭಾಷೆಯಲ್ಲಿರುವ ಅಪನಿಷತ್ತಿನ ವಿಚಾರ ತಮ್ಮ ಪರಿಸರಕ್ಕೆ ಆತ್ಮೀಯವಾಗಿ ಪ್ರತಿಕ್ರಿಯಿಸಿದ ವಚನಕಾರರಿಗೆ ‘ಬಯಲು’ ಎನ್ನುವಂಥ ಶಬ್ದಗಳಾಗಿ ಫಲಕೊಟ್ಟಿತು. ಈ ಪ್ರತಿಕ್ರಿಯೆಯನ್ನು ಹಿಂದೆ ಸಂಸ್ಕೃತ ಮತ್ತು ಕನ್ನಡ, ಈಗ ಇಂಗ್ಲಿಷ್ ಮತ್ತು ಕನ್ನಡ ಸಂಬಂಧಗಳಲ್ಲಿ ಸಾಹಿತ್ಯ ಚರಿತ್ರೆಯ ಉದ್ದಕ್ಕೂ ಕಾಣುತ್ತೇವೆ.

ಭಾಷೆಗೆ ಸಾವಿರ ವರ್ಷದ ಇತಿಹಾಸವಿದ್ದರೂ ಚಾಲ್ತಿಯಲ್ಲಿರುವ ಭಾಷೆ ಕೆಲವು ದಶಕಗಳದ್ದು ಎಂದು ಮೇಲೆ ಹೇಳಿದೆ. ಪ್ರತಿ ಲೇಖಕನ ಸ್ವಂತದ ಭಾಷೆ ಇನ್ನೂ ಇಕ್ಕಟ್ಟಿನಲ್ಲಿ ಫಲಿಸಿದ್ದು ಎನ್ನಬಹುದು: ಲೇಖಕರಾಗಿ ನಾವು ಬಳಸುವ ಭಾಷೆ-ನಮ್ಮ ಅನುಭವಗಳನ್ನು ಸೂಕ್ಷ್ಮವಾಗಿ ಸೂಚಿಸುವ ಒಳಗಿನ ಭಾಷೆ-ನಾವು ಬಾಲ್ಯದೆಸೆಯಿಂದಲೂ ಬೆಳೆಯುತ್ತ ಹೋಗುವಾಗ ದಕ್ಕಿಸಿಕೊಂಡದ್ದಾಗಿರುತ್ತದೆ. ಸಾಹಿತ್ಯದ ಮಾಂತ್ರಿಕ ಶಕ್ತಿಯಿರುವುದು ಅನುಭವದ ಹೊಸ ಮುಖಗಳನ್ನು ಕಾಣುವುದರಲ್ಲಿ; ಒಂದು ವಿಶಿಷ್ಟ ಅನುಭವವನ್ನು ನಿಜವಾಗಿಸುತ್ತ ಅದರಾಚಿನದನ್ನೂ ಧ್ವನಿಸುವುದರಲ್ಲಿ;ಮೂಕವೂ ಅಮೂರ್ತವೂ ಆಗಿ ಉಳಿದಿರುವ ವಲಯಗಳಿಗೆ ಚಾಚುತ್ತ ಅವನ್ನು ಅನುಭವಕ್ಕೆ ಬರುವ ಭಾಷೆಯಾಗಿ ವಶಪಡಿಸಿಕೊಳ್ಳುವುದರಲ್ಲಿ ಎನ್ನಬಹುದು.

ನಮ್ಮನ್ನು ಬೆರಗಾಗಿಸುವ ಕೃತಿಗಳಿಗೆ ಈ ಗುಣವಿರುತ್ತದೆ. ತನ್ನ ಬದುಕಿನ ಕೆಲವು ದಶಕಗಳ ಅವಧಿಯಲ್ಲಿ ಅನುಭವಕ್ಕೆ ಬಂದ ಭಾಷೆಯ ಇಕ್ಕಟ್ಟಿನಲ್ಲೂ ಸಹಸ್ರ ವರ್ಷದ ಇತಿಹಾಸವಿರುವ ಭಾಷೆಯನ್ನು ಇದು ಈಗಿನದು ಎನ್ನುವಂತೆ ಫಲಿಸಿಕೊಳ್ಳಬಲ್ಲ ಲೇಖಕ ತನ್ನ ಕೃತಿಯಲ್ಲಿ ಈ ಗುಣವನ್ನು ಪಡೆಯಬಲ್ಲ ಎನ್ನಬಹುದು. ಭಾಷೆಯ ಸಾತತ್ಯ  ಸಾಧಿಸುವುದು ಹೀಗೆ; ಪರಂಪರೆ ಸಜೀವ ಸ್ಮೃತಿಯಾಗುವುದು ಹೀಗೆ-ಅಂದರೆ ಪಂಪ, ಕುಮಾರಸ್ವಾಮಿ, ವಚನಕಾರರು ಇವತ್ತಿನ ಲೇಖಕನಿಗೆ ತನ್ನ ಸದ್ಯದ ಭಾಷೆಯಲ್ಲಿ ನೆಯ್ಗೆಯಾಗಿ ಬಂದಾಗ ಪರಂಪರೆಯನ್ನು  ಸಜೀವವಾಗಿ ಸ್ವೀಕರಿಸುವ, ಜೊತೆಗೇ ಅನುಭವದ ಹೊಸ ವಲಯಗಳನ್ನು ದಕ್ಕಿಸಿಕೊಳ್ಳುತ್ತ ಹೋಗುವ ಸಾಹಿತ್ಯಕ್ರಿಯೆ ಸಾಧ್ಯವಾಗುವುದು. ಇದು ಸತ್ತದ್ದಕ್ಕೆ ಮತ್ತೆ ಪ್ರಾಣ ತುಂಬುವ ಕೆಲಸವಲ್ಲ. ಹಳೆಯದು ಈಗಲೂ ನನಗೆ ನಿಜ ಎಂದು ಯಾರು ಪ್ರಸ್ತುತ ಅನುಭವದ ಒತ್ತಡಗಳಲ್ಲಿ ಕಂಡುಕೊಳ್ಳುತ್ತಾನೊ ಅಂಥ ಲೇಖಕ ಮಾತ್ರ ಮಾಡಬಲ್ಲ ಕೆಲಸ. ಪಾಶ್ಚಾತ್ಯ ವಿಚಾರವಾಗಲೀ, ಭಾರತೀಯ ವಿಚಾರವಾಗಲೀ ಹೀಗೆ ಕನ್ನಡ ಭಾಷೆಯ ಅನುಭವವಾಗಿಯೇ ಸೃಷ್ಟಿಯಾದಾಗ ಯಾವುದು ನಮ್ಮದು, ಯಾವುದು ಬರಿ ಎರವಲು ಪಡೆದದ್ದು ಎಂಬ ಪ್ರಶ್ನೆ ಅಪ್ರಸ್ತುತವಾಗುತ್ತದೆ. ಅಂತಹ ಸೃಷ್ಟಿಶೀಲ ಲೇಖಕನ ಮನಸ್ಸಿನ ಹಸಿವು ಮತ್ತು ಅರಗಿಸಿಕೊಂಡು ರಕ್ತಮಾಡಿಕೊಳ್ಳಬಲ್ಲ ಶಕ್ತಿ ಅಗಾಧವಾದದ್ದಾಗಿರುತ್ತದೆ. ಅಂಥವನ  ಮನಸ್ಸಿನಲ್ಲಿ ಪಂಪನ ಜೊತೆ ಶೇಕ್ಸ್‌ಪಿಯರ್, ಟಾಲ್‍ಸ್ಟಾಯ್, ದಾಸ್ತೊವಸ್ತಿಕಮೂ ಎಲ್ಲರೂ ಇರುತ್ತಾರೆ-ವರ್ತಮಾನವಾಗಿ ಇರುತ್ತಾರೆ.

ಮೇಲಿನ ಮಾತುಗಳು ಆದರ್ಶವಾಗಿ ನಿಜ. ಆದರೆ ಸ್ವಾತಂತ್ರ್ಯೋತ್ತರ ಕನ್ನಡದಲ್ಲಿ ಪಾಶ್ಚಾತ್ಯ ಸಾಹಿತ್ಯದ ಪ್ರಭಾವದ ಪ್ರಶ್ನೆಯನ್ನು ಬಗೆಹರಿಸದಂತೆ ಆಗುವುದಿಲ್ಲವೆಂಬುದು ನನಗೆ ಗೊತ್ತಿದೆ. ಯಾವ ಎರಡು ಸಾಹಿತ್ಯಗಳ ನಡುವೆಯಾದರೂ ಮುಖ್ಯವಾಗಿ ಮೂರು ಬಗೆಯ ಸಂಬಂಧ ಸಾಧ್ಯವೆಂದು ಹೇಳಬಹುದು: ಒಂದು, ಯಜಮಾನ-ಗುಲಾಮರ ನಡುವಿನ ಸಂಬಂಧ; ಎರಡು, ಸಮಾನಸ್ಕರ ಸಂಬಂಧ; ಮೂರು, ಮುಂದುವರಿದ ದೇಶಕ್ಕೂ ಮುಂದುವರಿಯುತ್ತಿರುವ ದೇಶಕ್ಕೂ ನಡುವೆ ಇರುವ ಸಂಬಂಧ. ಮೊದಲನೆಯ ಸಂಬಂಧದಲ್ಲಿ ಯಜಮಾನ ತನ್ನ ಸಂಸ್ಕೃತಿಯನ್ನು ಗುಲಾಮನ ಮೇಲೆ ಸಂಪೂರ್ಣ ಹೇರುತ್ತಾನೆ. ಅಮೆರಿಕಾದ ಐರೋಪ್ಯರು ನೀಗ್ರೋಗಳ ಮೇಲೆ ಇಂಥಹ ಸಂಬಂಧವನ್ನು ಹೇರಿದರು. ಎರಡನೆಯ ಬಗೆಯ ಸಂಬಂಧಕ್ಕೆ ಅತ್ಯುತ್ತಮ ಉದಾಹರಣೆ ಇಂಗ್ಲಿಷ್-ಫ್ರೆಂಚರ ನಡುವಿನದು. ಇಬ್ಬರೂ ಸಮಾನಸ್ಕರಾಗಿದ್ದರೂ ಸಹ ಫ್ರೆಂಚ್ ಇತಿಹಾಸಕಾರನೊಬ್ಬ ಇಂಗ್ಲಿಷ್ ಸಾಹಿತ್ಯದ ಮುನ್ನೂರು ವರ್ಷಗಳ ಇತಿಹಾಸವನ್ನು ಬರೆದಲ್ಲಿ ಪ್ರತಿಯೊಬ್ಬ ಇಂಗ್ಲಿಷ್ ಲೇಖಕನ ಬೆನ್ನ ಹಿಂದೆಯೂ ಫ್ರೆಂಚ್ ಲೇಖಕನೊಬ್ಬನನ್ನು ಕಾಣುವುದು ಸಹಜ. ಆದರೆ ಅದೇ ಚರಿತ್ರೆಯನ್ನು ಒಬ್ಬ ಅನ್ಯ ಇತಿಹಾಸಕಾರ ಬರೆದಾಗ ಹೇಗೆ ಫ್ರೆಂಚ್ ಸಾಹಿತ್ಯದ ಪ್ರೇರಣೆ ಇಂಗ್ಲಿಷ್ ಭಾಷೆಯ ಅನುಭವವಾಗುವ ಪ್ರಕ್ರಿಯೆಯಲ್ಲಿ ತನ್ನ ನೆಲದ್ದೇ ಆಯಿತೆಂದು ಬರೆಯುತ್ತಾನೆ.

ಮೂರನೆಯ ಬಗೆಯ ಸಂಬಂಧ ಮೇಲಿನ ಎರಡಕ್ಕಿಂತ ಭಿನ್ನವಾದದ್ದು ಮತ್ತು ಜಟಿಲವಾದದ್ದು. ಯುರೋಪ್ ಮತ್ತು ಭಾರತದ ನಡುವಿನ ಸಂಬಂಧ ಮುಂದುವರಿದ ದೇಶಕ್ಕೂ ಮುಂದುವರಿಯುತ್ತಿರುವ ದೇಶಕ್ಕೂ ನಡುವೆ ಇರುವ ಸಂಬಂಧ. ‘ಪಾಶ್ಚಾತ್ಯ’ ಮತ್ತು ‘ಪೌರ್ವಾತ್ಯ’ ಎಂಬ ಶಬ್ದಗಳ ಮೂಲಕ ಈ ಸಂಬಂಧವನ್ನು ನಾನು ಗುರುತಿಸದೇ ಇರಲು ಕಾರಣವಿದೆ: ಏಕೆಂದರೆ ಹೀಗೆ ಗುರುತಿಸುವ ಮನಸ್ಸು ಈತನಕ ತೀರಾ ಸರಳವಾಗಿ ಯೋಚಿಸದೆ; ಒಂದೋ ಗೊಡ್ಡು ಭಾರತೀಯತೆಗೆ ಅಥವಾ ಅನುಕರಣಶೀಲತೆಗೆ ಕಾರಣವಾಗಿದೆ. ಪಾಶ್ಚಾತ್ಯ, ಪೌರ್ವಾತ್ಯ ಸಂಸ್ಕೃತಿಗಳು ಒಂದಕ್ಕೊಂದು ಸಂಬಂಧವಿಲ್ಲದಂತೆ ಬೇರೆಯಾದವು ಎನ್ನುವ ನಿಲುವಿನಿಂದ ಹುಟ್ಟುವ ವಿಚಾರಗಳೆಲ್ಲ ನಮಗೆ ಚಿರಪರಿಚಿತ. ನಾನು ಭಾರತೀಯನಾದ ಮಾತ್ರಕ್ಕೆ ಬಾಣನ ಕಾದಂಬರಿಗಿಂತ ಟಾಲ್‍ಸ್ಟಾಯ್‍ನ ಕೃತಿ ಹೆಚ್ಚು ಪ್ರಿಯವಾಗುವುದು ಅಪರಾಧ ಎನ್ನುವ ಆಲೋಚನಾ ಕ್ರಮವನ್ನು ನಾನು ಒಪ್ಪಿಕೊಳ್ಳಲಾರೆ. ಹಾಗೆಯೇ ಪಾಶ್ಚಿಮಾತ್ಯ ಸಾಹಿತ್ಯ ಎಷ್ಟು ಕೃತಿಗಳನ್ನು ಪಡೆದಿದ್ದರೂ ಸಹ ಕಾರಂತರ ಕಾದಂಬರಿಗಳು, ಮಾಸ್ತಿಯವರ ಕಥೆಗಳು, ಬೇಂದ್ರೆ , ಅಡಿಗರ ಕವನಗಳು-ಈ ಪರಿಸರದಲ್ಲಿ ಬದುಕುವ ನನಗೆ ಹೆಚ್ಚು ಅಗತ್ಯವಾದವು ಎಂಬುದನ್ನು ಗುರುತಿಸುವಾಗಲೂ, ಕನ್ನಡಿಗನಾದ ನನಗೆ ಕಾರಂತ, ಅಡಿಗರಂತಹವರು ನನ್ನ ಸಂವೇದನೆಯನ್ನು ಆತ್ಮೀಯವಾಗಿ ಮುಟ್ಟುವವರಾದ್ದರಿಂದ ನಾನು ಹೇಳಲು ಬಯಸುತ್ತೇನೆ. ಜಗತ್ತಿನ ಸಾಹಿತ್ಯದಲ್ಲಿ ಯಾವುದು ಶ್ರೇಷ್ಠ ಎಂಬುದನ್ನು ಇವರಿಗಿಂತ ಶ್ರೇಷ್ಠರಾದ ಬೇರೆ ಭಾಷೆಯ ಲೇಖಕರಿಗಿಂತಲೂ ನನಗೆ ಇವರು ಹೆಚ್ಚು ಅಗತ್ಯವಾದವರು ಎಂಬ ಸತ್ಯವನ್ನು ನಾನು ಒಪ್ಪಿ ಹೇಳುತ್ತಿದ್ದೇನೆ, ಅಷ್ಟೆ.

ಮುಂದುವರಿದವರಾದ ಐರೋಪ್ಯರ ಜತೆ ಹಿಂದುಳಿದ ನಮ್ಮ ಸಂಬಂಧ ಜಟಿಲವಾದದ್ದು ಎಂದೆ. ನಮಗೆ ಆತ್ಮನಂಬಿಕೆ ಕಡಿಮೆಯಾದ್ದರಿಂದ, ಕೆಲವು ವೇಳೆ ಅರ್ಥಪೂರ್ಣವಾದ ಪರಕೀಯ ಪ್ರಭಾವಕ್ಕೂ ನಾವು ಹೆದರುತ್ತೇವೆ; ಅಥವಾ ನಮ್ಮ ಅಗತ್ಯಗಳೇನೆಂಬ ಪ್ರಜ್ಞೆ ಇಲ್ಲದಂತೆ ಕಣ್ಣೆದುರಿಗಿರುವ ವಾಸ್ತವ ಕೂಡ ಕಾಣದಷ್ಟು ನಾವು ಪಾಶ್ಚಿಮಾತ್ಯರನ್ನು ಅನುಕರಿಸುತ್ತೇವೆ. ನಮ್ಮ ಸಂಸ್ಕೃತಿ ದೊಡ್ದದೆಂಬ ಜಂಬ ಅಥವಾ ನಾವು ಕೀಳೆಂಬ ಸಂಕೋಚ ಎರಡೂ ಒಂದೇ ಬಗೆಯ ಮನಸ್ಸಿನಿಂದ ಬಂದವು. ಮುಂದುವರಿದ ಯುರೋಪಿನ ಜತೆ ನಾವು ಸಮಾನಸ್ಕರ ಸಂಬಂಧವನ್ನು ಪಡೆಯಲು ಯಾವ ರೀತಿಯ ಮನಸ್ಸಿನವರಾಗಬೇಕು ಎಂಬುದೇ ನಾನು ಇವತ್ತು ಹುಡುಕಲು ಪ್ರಯತ್ನಿಸುವ ಪ್ರಶ್ನೆಯಾಗಿದೆ.

ಲೋಹಿಯಾ ಒಂದು ಕಡೆ ಭಾರತೀಯರಲ್ಲಿ ಮೂರು ಬಗೆಯ ಜನರನ್ನು ಗುರುತಿಸಿದ್ದಾರೆ: ಹಿಂದೆ ನೋಡುವವರು; ಅಕ್ಕಪಕ್ಕ ನೋಡುವವರು ಮತ್ತು ಮುಂದೆ ನೋಡುವವರು. ಹಿಂದೆ ನೋದುವವರಿಗೆ ನಮ್ಮ ಪ್ರಾಚೀನ ಸಂಸ್ಕೃತಿಯ ಪುನರುಜ್ಜೀವನದಲ್ಲಿ ನಮ್ಮ ಸಮಸ್ಯೆಗಳೆಲ್ಲದರ ಪರಿಹಾರವಿದೆಯೆಂಬ ಭ್ರಮೆ ಇರುತ್ತದೆ. ಅಕ್ಕಪಕ್ಕ ನೋಡುವಾತ  ಈಗ ಅಮೆರಿಕಾದಂತಾಗಲು ಹಂಬಲಿಸುತ್ತಾನೆ; ಮತ್ತೆ ರಷ್ಯದಂತಾಗಲು ಬಯಸುತ್ತಾನೆ. ಯಾವಾಗಲೂ ಐರೋಪ್ಯ ರಾಷ್ಟ್ರಗಳ ಹಿರಿಮೆಗೆ ಬಾಯ್ಬಿಡುತ್ತಾನೆ. ನೆಹರೂ ಭಾರತ ಹೀಗೆ ಅಕ್ಕಪಕ್ಕ ನೋಡುತ್ತಿದ್ದ ಭಾರತ. ಆದರೆ ಗಗನ ಯಾತ್ರಿಗಳು ಮತ್ತು ಗುಲ್ಬರ್ಗ-ಬಿಜಾಪುರಗಳ ಹಸಿದ ಜನರೂ ಒಂದೇ ಶತಮಾನದ ಪರಸ್ಪರ ಸಂಬಂಧವಿರುವ ಘಟನೆಗಳು ಎಂದು ಕಾಣುವಾತ ಮುನ್ನೋಟದವನೂ ಆಗಿರಬೇಕಾಗುತ್ತದೆ. ಈ ಬಗೆಯ ಮನುಷ್ಯ ಹೊಸ ರಾಜಕೀಯ ವ್ಯವಸ್ಥೆಗಾಗಿ, ಹೊಸ ಟೆಕ್ನಾಲಜಿಗಾಗಿ, ಹೊಸ ಸಾಹಿತ್ಯಕ್ಕಾಗಿ ಪ್ರಯತ್ನಿಸುವ ಸೃಷ್ಟಿಶೀಲನಾಗಿರುತ್ತಾನೆ. ಇಂಥವನ ಮನಸ್ಸಿಗೆ ಬಿಜಾಪುರದ ಕ್ಷಾಮ, ಫ್ರೆಂಚ್ ಸಾಹಿತ್ಯದ ಹೊಸ ಪ್ರಯೋಗ ಒಂದು ಕಡೆ ದಾರಿದ್ರ್ಯಕ್ಕೂ ಇನ್ನೊಂದು ಕಡೆ ಉಜ್ವಲ ಪ್ರಯೋಗಕ್ಕೂ ಕಾರಣವಾದ ವಿಜ್ಞಾನ, ಸೂಟು ತೊಟ್ಟು ಇಂಗ್ಲಿಷ್ ಮಾತನ್ನಾಡುವ ಈ ತನ್ನ ಜೀವನದ ಬೇರುಗಳನ್ನು ಅಲ್ಲಾಡಿಸಬಲ್ಲ ಪ್ರಾಚೀನ ಕಬೀರ, ವಚನಕಾರರು ಈ ಎಲ್ಲವೂ ಎಲ್ಲರೂ ಸಮಕಾಲೀನವಾಗಿ ಕಾಣುತ್ತವೆ. ಪ್ರಾಚ್ಯ, ಪಾಶ್ಚಿಮಾತ್ಯ, ಎಲ್ಲವನ್ನೂ ಪ್ರಸ್ತುತವೆಂದು ಕಾಣುವ ಇಂಥ ಲೇಖಕ ಪಂಪನ ಬಿಗಿ ಭಾಷೆಯನ್ನೂ, ವಚನಕಾರರ ಉರಿಯುವ ಮಾತುಗಳನ್ನೂ, ನಮ್ಮ ನಿರಕ್ಷರಸ್ಥರಾದ ಗ್ರಾಮ್ಯ ಜನರ ನುಡಿಕಟ್ಟನ್ನೂ, ಮುಂದುವರಿದ ದೇಶದ ಹೊಸ ಪ್ರಚೋದನೆಯನ್ನೂ ವರ್ತಮಾನ ಸಂದರ್ಭದ ಭಾಷೆಯಾಗಿ ಮಾಡುತ್ತಾನೆ.

ನಾನು ಈಚೆಗೆ ಜಪಾನ್ ದೇಶದ ಹೊಸ ಬರಹದ ಇಂಗ್ಲಿಷ್ ಭಾಷಾಂತರವನ್ನು ಓದುತ್ತಿದ್ದೆ. ಮುಂದುವರಿದ ದೇಶವಾದ ಜಪಾನ್ ಕೂಡ ಎಷ್ಟೊಂದು ಐರೋಪ್ಯ ಸಾಹಿತ್ಯವನ್ನು ಅವಲಂಬಿಸಿದೆ ಎಂಬುದನ್ನು ನೋಡಿದಾಗ ನಮ್ಮ ನವ್ಯ ಸಾಹಿತ್ಯದ ಬೆಳವಣಿಗೆಯ ಬಗ್ಗೆ ಚಿಂತಿಸುವಂತಾಯಿತು. ಜಪಾನಿಯರು ತಮ್ಮ ಸಂಸ್ಕೃತಿಯನ್ನು ಬಿಟ್ಟವರಲ್ಲವಂತೆ. ಆದರೂ ಸಹ ಅವರು ಅಕ್ಕಪಕ್ಕ ನೋಡುತ್ತಾ ಮುಂದುವರಿವವರಾದ್ದರಿಂದ, ತಮ್ಮ ವಿಶಿಷ್ಟತೆಯನ್ನು ಮ್ಯೂಸಿಯಂ ವಸ್ತುವಿನಂತೆ ಉಳಿಸಿಕೊಂಡು ಬಂದ ಜನರು ಎಂದು ನನಗನ್ನಿಸಿತು. ನಿಜವಾಗಿಯೂ ಅವರು ಆಗಿರುವುದು ಅಮೆರಿಕನ್ನರಂತೆ. ಆದ್ದರಿಂದ ಅವರ ಸಾಹಿತ್ಯ ಕೂಡ ಆ ಬಗೆಯದೇ ಆಗಿದೆ. ಈಚೆಗೆ ಯೆಹೂದಿ ಮೆನುಹಿನ್ನರು ಭಾರತದಲ್ಲಿ ಒಂದು ಭಾಷಣವನ್ನು ಮಾಡಿದರು. ಆ ಭಾಷಣದಲ್ಲಿ ಭಾರತೀಯರು ಹೊಸ ಬಗೆಯ ಟೆಕ್ನಾಲಜಿಯನ್ನು ಸೃಷ್ಟಿಸಿ ಹೊಸದೊಂದು ನಾಗರಿಕತೆಯನ್ನೇ ರೂಪಿಸಿಕೊಳ್ಳಬೇಕೆಂದು ಅತ್ಯಂತ ತೀವ್ರವಾಗಿ, ಆರ್ತರಾಗಿ ವಾದಿಸಿದರು. ಭಾರತದ ಇಚ್ಛಾಶಕ್ತಿ ಮೆನುಹಿನ್ನರ ವಾದದ ದಿಕ್ಕಿನಲ್ಲಿ ಹರಿಯಬಲ್ಲುದಾದರೆ ನಮ್ಮ ಸಾಹಿತ್ಯವೂ ಅನನ್ಯವಾದೀತು.

ಈ ತನಕ ಹೇಳಿದ್ದನ್ನು ಸ್ವಾತಂತ್ರ್ಯೋತ್ತರ ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಮತ್ತಷ್ಟು ಸ್ಪಷ್ಟಪಡಿಸಿಕೊಳ್ಳಲು ಪ್ರಯತ್ನಿಸೋಣ. ನಮ್ಮ ಮನಸ್ಸು ಕೇವಲ ನಿರ್ದಿಷ್ಟ ದಿಕ್ಕುಗಳಲ್ಲಿ ಸಾಮಾನ್ಯವಾಗಿ ಹರಿಯುತ್ತದೆಂಬುದನ್ನು ಗುರುತಿಸಬಹುದು; ಪಾಶ್ಚಾತ್ಯ ಪ್ರಭಾವಕ್ಕೆ ಪ್ರತಿಕ್ರಿಯಿಸುವ ಮನಸ್ಸು ಓರಿಯಂಟಲಿಸ್ಟ್ ಆಗಿರಬಹುದು; ಇಂಥ ಹಿನ್ನೋಟದ ಮನಸ್ಸು ನಮ್ಮ ಪುರಾತನ ಸಂಸ್ಕೃತಿಯಲ್ಲೇ ಭಾರತೀಯತೆಯ ಸಾರವೆಲ್ಲ ಅಡಗಿದೆಯೆಂದು ತಿಳಿಯುತ್ತದೆ. (“ಪುರೋಹಿತರ ನಂಬಿ ಪಶ್ಚಿಮ ಬುದ್ಧಿಯಾದೆವೋ” – ‘ಭೂತ’) ಪಾಶ್ಚಾತ್ಯ ಅನುಕರಣಶೀಲತೆ ಮುಂಭಾಗವಾದರೆ ಅಂಥದೇ ಪ್ರವೃತ್ತಿಯ ಹಿಂಭಾಗ ಇದೆನ್ನಬಹುದು – ಓರಿಯಂಟಲಿಸಂ ಪಾಶ್ಚಾತ್ಯ ವಿಚಾರ ಕೂಡ. ತನ್ನ ಪರಿಸರಕ್ಕೆ ಜೀವಂತವಾಗಿ ಮಿಡಿದ ಯಾಜ್ಞವಲ್ಕ್ಯ ಓರಿಯಂಟಲಿಸ್ಟ್ ಆಗಿರಲಿಲ್ಲ. ಇವತ್ತಿನ ಸತ್ಯಕ್ಕೆ ಅವನ ಕಡೆ ಮುಖ ಮಾಡುವ ನಾವು ಓರಿಯಂಟಲಿಸ್ಟ್‌ರಾಗುತ್ತೇವೆ. ನಾವು ಪಾಲಿಸಬೇಕಾದ ಆದರ್ಶಗಳೆಲ್ಲ ಪ್ರಾಚೀನ ಭಾರತದಲ್ಲಿ ಸಿದ್ಧವಾಗಿದೆ ಎಂದು ತಿಳಿಯುವ ಈ ಮನಸ್ಸು ತೋರಿಕೆಗೆ ಭಾರತೀಯವಾಗಿ ಕಂಡರೂ ಓರಿಯಂಟಲಿಸ್ಟ್ ಧೋರಣೆ ಪಾಶ್ಚಾತ್ಯ ಪ್ರಭಾವದಿಂದಲೇ ಪ್ರಚೋದಿತವಾದ್ದೆಂಬುದನ್ನೂ ನಮ್ಮ ಹಿಂದಿನ ಋಷಿಗಳಿಗೆ ತಮ್ಮ ಭಾರತೀಯತೆಯೇ ಒಂದು ವಿಶಿಷ್ಟ ಮೌಲ್ಯವಾಗಿರಲಿಲ್ಲವೆಂಬುದನ್ನೂ ಮರೆಯುತ್ತದೆ. ಈ ಓರಿಯಂಟಲಿಸ್ಟ್ ಧೋರಣೆಗೆ ತದ್ವಿರುದ್ಧವಾದ ಪಾಶ್ಚಾತ್ಯ ಅನುಕರಣಶೀಲತೆ ಎಲ್ಲ ಪಾಶ್ಚಿಮಾತ್ಯ ಪ್ರಯೋಗಗಳಿಗೂ ಬಾಯಿತೆರೆದು ಕಾದಿರುತ್ತದೆ. ಇವರಿಗೆ ನಮ್ಮ ಭಾಷೆಯ ಒಂದು ಕೃತಿ ಒಳ್ಳೆಯದೆನ್ನಿಸಲು ಈ ಥರದ ಒಂದು ಕೃತಿಯನ್ನು ನಾವು ಪಾಶ್ಚಾತ್ಯ ಭಾಷೆಯಲ್ಲಿ ಕಾಣಬೇಕು; ಇದು ಚೆನ್ನಾಗಿಲ್ಲವೆನ್ನುವುದಕ್ಕೂ ಅಲ್ಲಿನ ಒಂದು ಮಾದರಿ ಬೇಕು.

ನಮ್ಮೆಲ್ಲ ಲೇಖಕರನ್ನು ಅಳೆಯಲು ಪಾಶ್ಚಿಮಾತ್ಯ ದೇಶಗಳ ಅಲ್ಪ ಯೋಗ್ಯತೆಯ ಲೇಖಕರೂ ಇವರಿಗೆ ಮಾದರಿಗಳಾಗಿಬಿಡುತ್ತಾರೆ. ನಮ್ಮೊಲ್ಲೊಬ್ಬ ದೊಡ್ಡ ಲೇಖಕನಿದ್ದರೂ ಹಾಗೆಂದು ಅವನನ್ನು ಗುರುತಿಸಲಾಗದಷ್ಟು ಪಶ್ಚಿಮಕ್ಕೆ ಜೋತುಬಿದ್ದವರು ನಮ್ಮಲ್ಲಿದ್ದಾರೆ. ಎಲ್ಲ ಮಾನದಂಡಗಳೂ ಒಂದೋ ಪ್ರಾಚೀನ ಭಾರತದಲ್ಲಿ ಸಿದ್ಧವಾಗಿವೆ. ಅಥವಾ ಯುರೋಪಿನಲ್ಲಿ ಸಿದ್ಧವಾಗಿವೆ ಎಂದು ತಿಳಿಯುವ ಈ ಎರಡೂ ಪ್ರವೃತ್ತಿಗಳೂ ಸೃಷ್ಟಿಶೀಲತೆಗೆ ವಿರೋಧವಾದವು. ಇದು ದಾಸ್ತೋವಸ್ಕಿಯಂತಿಲ್ಲ, ಕಮೂನಂತಿಲ್ಲ, ಲಾರೆನ್ಸ್ ನಂತಿಲ್ಲ ಅಥವಾ ನಮ್ಮ ಪ್ರಾಚೀನ ಪರಂಪರೆಗೆ ತಕ್ಕುದಾಗಿಲ್ಲ ಎನ್ನುವ ಮಾತುಗಳೆಲ್ಲ ಎದುರುಗಿರುವ ಕೃತಿಯ ಜೊತೆ ಸಂಬಂಧವನ್ನು ಪಡೆಯಲಾರದ ಸೃಷ್ಟಿಶೀಲತೆಗೆ ವಿರೋಧಿಯಾದ ಮನಸ್ಸಿನದಾಗಿರುತ್ತದೆ. ಇಂಗ್ಲಿಷ್ ಅಧ್ಯಾಪಕನೊಬ್ಬ ಬಂಕಿಮಚಂದ್ರರನ್ನೂ ವಾಲ್ಟ‌ರ್ಸ್ಕಾಟ್‍ನನ್ನೂ ಹೋಲಿಸಿದ್ದನ್ನು ಬಂಗಾಳಿ ವಿಮರ್ಶಕಳೊಬ್ಬಳು ಕೇಳಿ, ಸಿಟ್ಟಾಗಿ ಸ್ಕಾಟ್‍ಗಿಂತ ಬಂಕಿಮಚಂದ್ರರೇ ದೊಡ್ಡ ಲೇಖಕರೆಂದಾಗ ನನಗೆ ಸಂತೋಷವಾದ್ದನ್ನು ಇಲ್ಲಿ ನೆನೆಯುತ್ತೇನೆ. ಮಾಸ್ತಿ, ಕಾರಂತ, ಕುವೆಂಪು, ಅಡಿಗ ನಮ್ಮ ಈಚಿನ ಕೆಲವು ಲೇಖಕರೂ ಸಹ ಪ್ರಸಿದ್ಧಿ ಪಡೆದ ಎಷ್ಟೋ ಆಂಗ್ಲ ಲೇಖಕರಿಗಿಂತ ಉತ್ತಮರಿರಬಹುದೆಂಬುದನ್ನು ಯೋಚಿಸುವುದೂ ಕೂಡ ನಮ್ಮ ಕೆಲವು ವಿಮರ್ಶಕರಿಗೆ ಅಸಾಧ್ಯ. ಓರಿಯಂಟಲಿಸಂ ಮತ್ತು ಪಶ್ಚಿಮಪ್ರಿಯತೆ – ಈ ಎರಡೂ ಧೋರಣೆಗಳೂ ಹೀಗೆ ನಮ್ಮನ್ನು ನಮ್ಮ ಸೃಷ್ಟಿ ಸಂದರ್ಭದಲ್ಲಿ ಸಂಪೂರ್ಣ ತೊಡಗದಂತೆ ಮಾಡುತ್ತವೆ. ವಿಮರ್ಶೆಯಲ್ಲಿಯಂತೆಯೇ, ಈ ಎರಡು ರೀತಿಯ ಮನಸ್ಸುಗಳು ಸಾಹಿತ್ಯವನ್ನು ಸೃಷ್ಟಿಸಿದಾಗ ಕೂಡ ಈ ಕೃತಿಗಳು ನಮ್ಮ ಬದುಕಿನ ವಾಸ್ತವದಿಂದ ವಂಚಿತವಾಗಿ ದುರ್ಬಲವಾಗಿರುತ್ತವೆ. ಆದರೆ ಈ ಎರಡು ರೀತಿಯ ಮನಸ್ಸುಗಳಿಗೂ ತಾವೆಷ್ಟು ಸರಳವೆಂಬುದು ತಿಳಿಯುವುದಿಲ್ಲ. ಭಾರತೀಯವಾದಿ ಈ ನೆಲದಲ್ಲಿ ಅನೇಕ ಲೋಕದೃಷ್ಟಿಗಳು ಘರ್ಷಿಸಿದ್ದುವೆಂಬುದನ್ನು ಮರೆಯುತ್ತಾನೆ; ಹಾಗೆಯೇ ಪಶ್ಚಿಮಪ್ರಿಯ ಪಾಶ್ಚಾತ್ಯ ದೇಶಗಳಿಗಿಂತ ಈಗ ಭಾರತದಲ್ಲಿ ಸಾಹಿತ್ಯ ಹೆಚ್ಚು ಪರಿಣಾಮಕಾರಿಯಾಗಿದೆ, ಆದ್ದರಿಂದ ಸಾಮಾಜಿಕವಾಗಿ ಅರ್ಥಪೂರ್ಣವಾದ ಸವಾಲುಗಳನ್ನು ಎದುರಿಸುತ್ತದೆ ಎಂಬ ಸತ್ಯವನ್ನು ಮನಗಾಣದವನಾಗುತ್ತಾನೆ. ನಮ್ಮ ಲೇಖಕರು ನಮ್ಮ ಜನಜೀವನದ ಮೇಲೆ ಮಾಡುತ್ತಿರುವ ಪರಿಣಾಮದ ದೃಷ್ಟಿಯಿಂದ ಸಮಕಾಲೀನ ಐರೋಪ್ಯ ರಾಷ್ಟ್ರಗಳಿಗಿಂತ ಭಾರತದಲ್ಲೆ ಸಾಹಿತ್ಯ ಹೆಚ್ಚು ಪ್ರಭಾವಶಾಲಿಯಾಗಿದೆ ಎಂದು ನನ್ನ ಭಾವನೆ. ಪಾಶ್ಚಿಮಾತ್ಯರು ಸಾಹಿತ್ಯದ ಯುಗ ಕಳೆದು ಟೆಲಿವಿಷನ್ ಯುಗದಲ್ಲಿದ್ದಾರೆ; ಭಾಷೆ ಅಷ್ಟು ಮುಖ್ಯವಾದ ಸಂವಹನ ಮಾಧ್ಯಮವಾಗಿ ಅವರಿಗೆ ಉಳಿದಿಲ್ಲ.

ನಮ್ಮ ಮನಸ್ಸು ತಾಳುವ ಓರಿಯಂಟಲಿಸ್ಟ್ ಮತ್ತು ಪಶ್ಚಿಮಪ್ರಿಯ ಧೋರಣೆಗಳಂತೆಯೇ, ಈ ಎರಡಕ್ಕಿಂತಲೂ ಸೂಕ್ಷ್ಮವಾದ ಇನ್ನೊಂದು ಬಗೆಯ ಮನಸ್ಸಿನ ಪ್ರಕ್ರಿಯೆಯಿದೆ. ಮುಂದುವರೆದ ದೇಶ, ಹಿಂದುಳಿದ ದೇಶಗಳ ಸಂಬಂಧಗಳಲ್ಲಿ ಹುಟ್ಟಿಕೊಳ್ಳಬಹುದಾದ ಮನಸ್ಸಿನ ವಿಕೃತಿಗಳು ಹಲವು. ನಮ್ಮಲ್ಲಿ ಸೂಕ್ಷ್ಮಮತಿಗಳಾದವರು ಮುಂದುವರಿದ ರಾಷ್ಟ್ರಗಳಲ್ಲಿ ನಾವು ಮೆಚ್ಚುವ ಕೃತಿಗಳನ್ನು ಮಾದರಿಯಾಗಿಟ್ಟುಕೊಂಡು ಅದಕ್ಕೆ ತದ್ರೂಪವಾದ ಕೃತಿಗಳನ್ನು ಭಾರತೀಯ ಪರಿಕರಗಳನ್ನು ಆಯ್ದು ಸೃಷ್ಟಿಸುತ್ತೇವೆ. ಯಕ್ಷಗಾನ, ಜಾನಪದ, ಪುರಾಣ ಪ್ರತಿಮೆಗಳು, ಉಪನಿಷತ್ತು, ಗ್ರಾಮ ಜೀವನ ಎಲ್ಲ ಪರಿಕರಗಳೂ ಇರುತ್ತವೆ;

ಆದರೆ ಸೃಷ್ಟಿಯಾದ ಕೃತಿ ಯಾವುದೋ ಪಾಶ್ಚಿಮಾತ್ಯ ಕೃತಿಯನ್ನು ಹೋಲುತ್ತಿರುತ್ತದೆ. ಅಂದರೆ ಇಂಥ ಮನಸ್ಸಿನ ಸೃಷ್ಟಿಪ್ರಕ್ರಿಯೆ ಒಂದು ನಿಶ್ಚಿತ ಚೌಕಟ್ಟಿನಲ್ಲೆ ಕೆಲಸಮಾಡುತ್ತದೆ ಎಂದ ಹಾಗಾಯಿತು. ಭಾರತೀಯವಾಗಲು ಪ್ರಯತ್ನಿಸುವ ನವ್ಯರಲ್ಲಿ ನಾವು ಕೆಲವರು ಇಂಥ ಕೃತಿಗಳನ್ನು ಬರೆದಿದ್ದೇವೆ ಎಂದು ನನ್ನ ಭಾವನೆ. ಈ ಮೂರು ರೀತಿಯ ಜಾಡುಗಳಿಗೂ ಸಿಕ್ಕಿಬೀಳಬಾರದೆಂದು ಪ್ರಯತ್ನಿಸುವ ನನಗೆ ಮುಖ್ಯವಾಗಿ ಕೇರಳದ ಬಷೀರರ ‘ಪಾತುಮ್ಮನ ಆಡು’, ಸ್ವಲ್ಪಮಟ್ಟಿಗೆ ತೇಜಸ್ವಿಯವರ ಈಚಿನ ಕೆಲವು ಕತೆಗಳು (ಅಬಚೂರಿನ ಪೋಸ್ಟಾಫೀಸು, ಅವನತಿ, ಕುಬಿ ಮತ್ತು ಇಯಾಲ) ಆರೋಗ್ಯದಿಂದ ಕೂಡಿದ ಭಾರತೀಯ ಬರವಣಿಗೆ ಎನ್ನಿಸಿದ್ದಿದೆ. ಪಾಶ್ಚಾತ್ಯ ಸಾಹಿತ್ಯವನ್ನು ಅತಿಯಾಗಿ ಮೆಚ್ಚಿಕೊಂಡವನು ನೋಡಲು ಅಲಕ್ಷಿಸಬಹುದಾದ್ದನ್ನು ಗಮನಿಸುವ ಎಚ್ಚರ ಪಡೆದ ಬಷೀರರ ಬರವಣಿಗೆಯಂತೂ ನನಗೆ ನಮ್ಮಲ್ಲಿ ಪ್ರತಿಯೊಬ್ಬನೂ ಓದಿ ಚರ್ಚಿಸಬೇಕಾದ್ದು ಎನ್ನಿಸಿದೆ. ತೇಜಸ್ವಿ ಇನ್ನೂ ಅಂತಹ ಆಂತರಿಕ ಒತ್ತಡಗಳಿಂದ ಬರೆದಿಲ್ಲ; ತೀರ ಕಷ್ಟವಾದ್ದನ್ನು ನಿರ್ವಹಿಸಿದ್ದಾರೆ ಎನ್ನಿಸುವುದಿಲ್ಲ. ಅಕ್ಕಪಕ್ಕ ನೋಡದೆ, ಹಿಂದೆಯೂ ನೋಡದೆ ತನ್ನ ಪರಿಸರಕ್ಕೆ ಸ್ಪಂದಿಸಬಲ್ಲ ಮನಸ್ಸಿನ ಹುಡುಕಾಟದಲ್ಲಿ ನಾವು ಮೆಚ್ಚಬಹುದಾದ ಕೆಲವು ಲೇಖಕರಾದರೂ ನಮ್ಮ ಹಿರಿಯರಲ್ಲಿದ್ದಾರೆ ಎನ್ನಿಸುತ್ತದೆ. ಕನ್ನಡದಲ್ಲಿ ನವ್ಯ ಸಾಹಿತ್ಯದ ಚಳುವಳಿಯೂ ಕೂಡ ಅನುಕರಣಶೀಲ ಪ್ರಯೋಗಗಳಲ್ಲೇ ತೃಪ್ತಿಪಡದೆ ಲೇಖಕನ ಅನುಭವ ಮತ್ತು ಆವರಣಗಳನ್ನು ಸತ್ವಪೂರ್ಣವಾಗಿ ಒಳಗೊಳ್ಳಬಲ್ಲಂತಹ ಹುಡುಕಾಟದಲ್ಲಿ ಈಚೆಗೆ ತೊಡಗಿದೆಯೆಂಬುದು ಒತ್ತಿನಲ್ಲಿ ಕನ್ನಡದ ಪರಂಪರೆ ಯಾವಗಲೂ ಹೇಗೆ ತನ್ನ ಆರೋಗ್ಯ ಕಾಪಾಡಿಕೊಂಡಿದೆ ಎಂಬುದಕ್ಕೂ ದ್ಯೋತಕ.

ಒಟ್ಟು ಕನ್ನಡ ಸಾಹಿತ್ಯದ ಬಗ್ಗೆಯೇ ನಾನು ಒಂದು ವಿಚಾರವನ್ನು ನಿಮ್ಮ ಮುಂದಿಡಲು ಬಯಸುತ್ತೇನೆ. ಈಗ ನಾನು ಹೇಳಬೇಕೆಂದಿರುವುದಕ್ಕೂ ಈ ತನಕ ಚರ್ಚೆಸಿದ್ದಕ್ಕೂ ಇರುವ ಸೂಕ್ಷ್ಮ ಸಂಬಂಧನನ್ನು ನಾನು ಬೆಳೆಸಲು ಹೋಗುವುದಿಲ್ಲ. ವಿದ್ಯಾವಂತರ ಭಾಷೆ ಹಿಂದೆ ಸಂಸ್ಕೃತವಾಗಿತ್ತು; ಈಗ ಇಂಗ್ಲಿಷ್ ಆಗಿದೆ. ಈ ಭಾಷೆಗಳಿಂದಾಗಿ ನಮ್ಮ ಮನಸ್ಸು ಈ ತನಕ ಸಾಹಿತ್ಯದಲ್ಲಿ ಅನುಭವವನ್ನು ಸ್ವೀಕರಿಸುವ ಸಂವಹಿಸುವ ಕ್ರಮಕ್ಕೇ ಸಂಬಂಧಪಟ್ಟ ವಿಚಾರ ನನ್ನದು.

ಸಾಹಿತ್ಯವನ್ನು ಓದಬಲ್ಲ ಸುಶಿಕ್ಷಿತ ಜನ ನಮ್ಮಲ್ಲಿ ಯಾವತ್ತೂ ಅಲ್ಪಸಂಖ್ಯಾತರೇ ಎನ್ನಬಹುದು. ಪಂಪನ ಕಾಲದಲ್ಲಿ ಅವನು ಬರೆದದ್ದನ್ನು ಓದಬಲ್ಲವರು ಪ್ರಾಯಶಃ ಸಂಸ್ಕೃತ ಸಾಹಿತ್ಯವನ್ನೂ ಓದಿ ತಿಳಿಯಬಲ್ಲವರಾಗಿದ್ದ ಜನರಿರಬೇಕು. ಓದುಗ ಕೃತಿಯಿಂದ ಏನನ್ನು ಅಪೇಕ್ಷಿಸುತ್ತಾನೆಂಬುದು ನಮ್ಮ ಕೃತಿರಚನೆಯ ಸಂದರ್ಭದಲ್ಲೂ ಸೂಕ್ಷ್ಮವಾಗಿ ಕೆಲಸ ಮಾಡುತ್ತದೆ ಎಂಬುದು ಎಲ್ಲ ಲೇಖಕರಿಗೂ ತಿಳಿದಿರುತ್ತದೆ. ಓದುಗನಿಗೆ ಪ್ರಿಯವಾಗುವಂತೆ ಲೇಖಕ ಬರೆಯುತ್ತಾನೆ ಎಂದು ನಾನು ಹೇಳುತ್ತಿಲ್ಲ. ಸಾಹಿತ್ಯಕೃತಿ ಒದುಗನ ಪ್ರಜ್ಞೆಯಲ್ಲಿ ಫಲಿಸಬೇಕಾದ ಕಾರಣದಿಂದ ಸೃಷ್ಟಿಯ ಸ್ವರೂಪ, ದಿಕ್ಕುಗಳು  ಓದುಗನ ಅಪೇಕ್ಷೆಗಳನ್ನು ಕಡೆಗಣಿಸಲಾರವು ಎಂದು ನನ್ನ ವಾದ. ಅಂದರೆ ಪಂಪನ ಕೃತಿರಚನೆಯ ಸಂದರ್ಭಕ್ಕೆ ಸಂಸ್ಕೃತ ಸಾಹಿತ್ಯದ ಅಭ್ಯಾಸದಿಂದ ಪರಿಷ್ಕೃತವಾದ ಓದುಗರ ಅಪೇಕ್ಷೆಯ ಚೌಕಟ್ಟು ಇತ್ತು ಎನ್ನಬಹುದು. ಈ ಚೌಕಟ್ಟಿನ ಒಳಗೇ ಪಂಪ ತನ್ನತನವನ್ನೂ ಕನ್ನಡತನವನ್ನೂ ಫಲಿಸಿಕೊಂಡ. ಈಗಲೂ ಸಹ ಸಾಹಿತ್ಯವನ್ನು ಓದುವ ಜನ ತುಂಬ ಕಡಿಮೆಯೇ ಆಗಿ ಉಳಿದಿದ್ದಾರೆ; ಒಬ್ಬ ಆದರ್ಶ ಓದುಗನ ಅಪೇಕ್ಷೆ ನಮ್ಮ ಕೃತಿನಿರ್ಮಾಣದ ಪ್ರಕ್ರಿಯೆಯನ್ನು ಸ್ವಲ್ಪಮಟ್ಟಿಗಾದರೂ ನಿರ್ಧರಿಸುವುದು ನಿಜವಾದ್ದರಿಂದ ನಮ್ಮ ಕೃತಿರಚನೆಗೆ ಈಗಿನ ಕನ್ನಡ ಓದುಗ ಸಂಸ್ಕೃತದ ಜೊತೆಗೆ ಐರೋಪ್ಯ ಸಾಹಿತ್ಯದಿಂದ ಪರಿಷ್ಕೃತವಾದ ತನ್ನ ಮನಸ್ಸಿನ ಅಪೇಕ್ಷೆಗಳ ಚೌಕಟ್ಟನ್ನು ಒದಗಿಸುತ್ತಾನೆ. ಆದ್ದರಿಂದ ಓದಲೆಂದು ಬರೆಯಲ್ಪಟ್ಟ ಕನ್ನಡ ಸಾಹಿತ್ಯಕ್ಕೆ ಹೀಗೆ ಒಂದೋ ಸಂಸ್ಕೃತದ ಅಥವಾ ಐರೋಪ್ಯ ಮತ್ತು ಸಂಸ್ಕೃತ  ಸಾಹಿತ್ಯದ ಚೌಕಟ್ಟು ಮೊದಲಿನಿಂದಲೂ ಇದ್ದೇ ಇದೆ. ನಮ್ಮ ಅತ್ಯಂತ ಆಳವಾದ ಅನುಭವಗಳನ್ನೂ ಈ ಚೌಕಟ್ಟುಗಳ ಒಳಗೆ ನಾವು ಫಲಿಸಿಕೊಳ್ಳುತ್ತೇವೆಂದು ನಾನು ಹೇಳುತ್ತಿರುವಾಗಲೂ ಈ ಓದುಗ ಅಪೇಕ್ಷೆಯ ಚೌಕಟ್ಟುಗಳನ್ನು ಪ್ರತಿಭಾವಂತ ಲೇಖಕರೆಲ್ಲರೂ ಪಂಪನ ಕಾಲದಿಂದಲೂ ಹಿಗ್ಗಿಸುತ್ತ ಬಂದಿದ್ದಾರೆಂಬುದೂ ನನ್ನ ಗಮನದಲ್ಲಿದೆ. ಆದರೂ ಶಿಷ್ಟ ಸಾಹಿತ್ಯಕ್ಕೆ ಲೇಖಕ-ವಿದ್ಯಾವಂತ ಓದುಗ ಸಂಬಂಧದ ಚೌಕಟ್ಟಿದೆಯೆಂಬುದೇ ನನ್ನ ಮುಖ್ಯ ವಾದ. ಓದುವವರ ಸಂಖ್ಯೆ ಹೆಚ್ಚಾದಾಗ ಕಾದಂಬರಿ ಪ್ರಕಾರ ಹುಟ್ಟಿತು, ಮಹಿಳೆಯರು ಕಾದಂಬರಿಗಳನ್ನು ಓದುವುದರಿಂದ ಪಾತ್ರಗಳಾಗಿಯೂ ಅವರು ಕಾದಂಬರಿಗಳಲ್ಲಿ ಮುಖ್ಯರಾದರು, ಅವರ ಅನುಭವ ಶೋಧಿತವಾಯಿತು-ಇತ್ಯಾದಿ ಸಂಗತಿಗಳು ಓದುಗರ ಅಪೇಕ್ಷೆಗೂ ಕೃತಿಯ ಸ್ವರೂಪಕ್ಕೂ ಇರುವ ಸಂಬಂಧವನ್ನು ಸಮರ್ಥಿಸುತ್ತವೆ. ಸಾಮಾನ್ಯ ಲೇಖಕ ಓದುಗನ ಅಪೇಕ್ಷೆಯಿಂದ ಬಂಧಿತನಾಗುತ್ತಾನೆ. ಆದರೆ ಪ್ರತಿಭಾಶಾಲಿ ಈ ಅಪೇಕ್ಷೆಯನ್ನು ಹಿಗ್ಗಿಸುತ್ತಾನೆ- ಅಂತೂ ಇಬ್ಬರಿಗೂ ಅಪೇಕ್ಷೆಯ ಚೌಕಟ್ಟಂತೂ ಇದೆ.

ಆದರೆ ಕನ್ನಡದಲ್ಲಿ ಮತ್ತು ಭಾರತದ ಇತರ ಭಾಷೆಗಳಲ್ಲಿ ಈ ಸುಶಿಕ್ಷಿತ ಓದುಗ ಅಪೇಕ್ಷೆಗಳ ಚೌಕಟ್ಟಿನಿಂದ ಹರಿದುಕೊಂಡು ಬಂದ ಸಾಹಿತ್ಯವೂ ಇದೆ. ಶಿಷ್ಟಸಾಹಿತ್ಯಕ್ಕೂ ಈ ಸಾಹಿತ್ಯಕ್ಕೂ ವಸ್ತುವಿನಲ್ಲಿ ಮಾತ್ರವಲ್ಲದೆ ಕಲೆಯ ಶರೀರದಲ್ಲೂ ಇರುವ ವ್ಯತ್ಯಾಸ ಅತ್ಯಂತ ಗಮನಾರ್ಹವಾದದ್ದು. ಪಂಪನಿಗೆ ಮತ್ತು ನಮಗೆ ಕೃತಿರಚನೆಯ ಸಂದರ್ಭದಲ್ಲೆ ಭಾರತದ ನಿರಕ್ಷಕರಾದ ಅಸಂಖ್ಯ ಜನರು ಇಲ್ಲ; ಅವರು ವಸ್ತುವಾಗಬಹುದು-ಆದರೆ ನಾವು ಬರೆದಿದ್ದನ್ನು ಓದುವ ಜನರಾಗಿ, ತಮ್ಮ ಅಪೇಕ್ಷೆಯನ್ನು ಕೃತಿನಿರ್ಮಾಣದ ಸಂದರ್ಭದಲ್ಲೆ ನಮಗೆ ಒಡ್ಡಿದವರಾಗಿ ನಮ್ಮೆದುರು ಅವರು ಇರುವುದಿಲ್ಲ. ಕಬೀರ ಮತ್ತು ವಚನಕಾರರಂಥವರಿಗೆ ಮಾತ್ರ ಈ ಅಶಿಕ್ಷಿತ ಜನರೂ ತಮ್ಮ ಮನಸ್ಸಿನ ಅಪೇಕ್ಷೆಗಳನ್ನೂ ಒಪ್ಪಿಕೊಂಡವರಾಗಿ ಅವರ ಕೃತಿನಿರ್ಮಾಣದ ಸಂದರ್ಭದಲ್ಲೇ ಇದ್ದರು. ಆದ್ದರಿಂದ ಶಿಷ್ಟ ಸಾಹಿತ್ಯಕ್ಕೂ, ಇವರು ನಿರ್ಮಿಸಿದ ಸಾಹಿತ್ಯಕ್ಕೂ ನಡುವೆ ಸೃಷ್ಟಿಯ ಪ್ರಕ್ರಿಯೆಯಲ್ಲಿ ಅತ್ಯಂತ ಸೂಕ್ಶ್ಮ ಬದಲಾವಣೆಗಳಾಗುವುದನ್ನು ನಾವು ಗಮನಿಸಬಹುದು. ಓದಲೆಂದು ಬರೆದ ಸಾಹಿತ್ಯಕ್ಕೂ, ಕೇಳಲೆಂದು ಬರೆದ ಸಾಹಿತ್ಯಕ್ಕೂ ಇರುವ  ಅಂತರ-ನಾನು ಮೊದಲೇ ಸೂಚಿಸಿದಂತೆ-ವಸ್ತುವಿನ ಆಯ್ಕೆ ಮಾತ್ರದಲ್ಲಿಲ್ಲ, ಕೃತಿಯ ಕಲಾತ್ಮಕ ಶರೀರದಲ್ಲೂ ಇದೆಯೆಂಬುದನ್ನು ಸುಶಿಕ್ಷಿತ ಓದುಗನ ಅಪೇಕ್ಷೆಯ ಚೌಕಟ್ಟಿಂದ ಕವಿ ಮುಕ್ತನಾಗಿ ಅಶಿಕ್ಷಿತನನ್ನು ನಿಕಟ ಸಂಬಂಧದ ಶ್ರೋತೃವಾಗಿ ಪಡೆಯಲು ಸಾಧ್ಯವಾದ ಸಂದರ್ಭವೆ ಕಾರಣ. ಕೇಳಲೆಂದು ಹುಟ್ಟಿದ ಈ ಸಾಹಿತ್ಯವನ್ನು ಓದಲು ಬಾರದ ಎಲ್ಲರೂ ಕೇಳಿದರೂ ಇಲ್ಲವೋ ಎಂಬುದು ಅಪ್ರಸ್ತುತ; ಆದರೆ ಕವಿಗೆ ಸೃಷ್ಟಿ ಪ್ರಕ್ರಿಯೆಯಲ್ಲೆ ಅಂಥವರ ಸಂಭವನೀಯ ಶ್ರೋತೃತ್ವದ ಭರವಸೆಯಾದರೂ ಇತ್ತೆಂಬುದು ನಿಜ. ಆದರೆ ಓದಲೆಂದು ಸಾಹಿತ್ಯ ಸೃಷ್ಟಿಸುವ ನಮಗೆ ಈ ಅಸಂಖ್ಯಾತ ನಿರಕ್ಷರರಾದ ಭಾರತದ ಜನ ಯಾವ ಕಾಲಕ್ಕೇ ಆದರೂ ನಮ್ಮ ಕೃತಿಗಳಿಗೆ ಒಡ್ಡಿಕೊಳ್ಳುವ ಮನಸ್ಸುಗಳು ಆಗಬಲ್ಲವೆಂಬುದನ್ನು ಊಹಿಸುವುದೂ ಕೂಡ ಕಷ್ಟ. ಪ್ರಗತಿಶೀಲ ಭಂಗಿಗಳಲ್ಲಿ ಈ ಜನರನ್ನು ವಸ್ತುವಾಗಿ ಮಾಡಿ ಕೃತಿ ರಚಿಸುವವರು ಅರಿಯದ ಒಂದು ವಿಷಯವಿದೆ: ಅದು, ಈ ಜನರು ಕವಿಗೆ ನಿಕಟ ಸಂಬಂಧದ ಶ್ರೋತೃಗಳಾದಾಗ ಮಾತ್ರ ಸಾಹಿತ್ಯದ ಕಲಾತ್ಮಕ ಸ್ವರೂಪವೂ ಬದಲಾಗುತ್ತೆಂಬುದು; ಈ ಸಾಹಿತ್ಯ ವಚನಕಾರರಲ್ಲಿಯಂತೆ ಶಿಷ್ಟ ಸಾಹಿತ್ಯಕ್ಕಿಂತಲೂ ಹೆಚ್ಚು ಸಂಕೀರ್ಣವೂ ಗಾಢವೂ ಸಾಕೇಂತಿಕ ಶಕ್ತಿಯುಳ್ಳದ್ದೂ ಆಗಬಲ್ಲುದೆಂಬುದು.

ಆದರೆ, ಜನತೆಯನ್ನು ಮಾಸ್ (Mass) ಎಂದು ತಿಳಿಯುವಾತ ಸಾಹಿತ್ಯ ಸರಳವಾಗಬೇಕೆಂದು ಜನಪ್ರಿಯವಾಗಬೇಕೆಂದು ಯೋಚಿಸುತ್ತಾನೆ; ಆದರೆ ಕಬೀರ, ತುಕಾರಾಂ, ವಚನಕಾರರಂಥವರಿಗೆ ಜನ ನಿಕಟ ಸಂಪರ್ಕದ ಶ್ರೋತೃಗಳಾದ್ದರಿಂದ ಅವರ ಸಾಹಿತ್ಯ ಸ್ವರೂಪವೇ ಬೇರೊಂದು ಬಗೆಯ ದಟ್ಟತೆ, ತೀವ್ರತೆಗಳನ್ನು ಪಡೆದುಬಿಡುತ್ತದೆ.

ಓದುವುದಕ್ಕೆಂದು ಬರೆಯದೆ ಕೇಳುವುದಕ್ಕೆಂದು ಬಂದ ಈ ಸಾಹಿತ್ಯದಲ್ಲಿ ಹೊಸ ತುರ್ತುಗಳು ಜೀವಂತವಾಗಿ ನಮ್ಮ ಸಾಹಿತ್ಯದೊಳಕ್ಕೆ ಬಂದವು. ವಸ್ತುವಿನ ವ್ಯಾಪ್ತಿಯಲ್ಲಲ್ಲದೆ ಲಯ, ಸಂಕೇತ, ಪ್ರತೀಕ, ಭಾಷಾಪ್ರಯೋಗ-ಈ ಎಲ್ಲದರಲ್ಲೂ ಅತ್ಯಂತ ಮಹತ್ವದ ಬದಲಾವಣೆಗಳು ಸುಶಿಕ್ಷಿತ ಓದುಗ ಪ್ರಜ್ಞೆಯ ಚೌಕಟ್ಟು ತಪ್ಪಿದೊಡನೆಯೇ ಸಂಭವಿಸಿದ ಆಶ್ಚರ್ಯವನ್ನು ನಾವು ತೀವ್ರವಾಗಿ ವಿಶ್ಲೇಷಿಸಬೇಕು. ಓದಬಲ್ಲವರು ಅಲ್ಪಸಂಖ್ಯಾತರಾದ ಈ ದೇಶದಲ್ಲಿ ಓದಿಸಿಕೊಳ್ಳುವುದಕ್ಕಿರುವ ವೃತ್ತವಲಯದಿಂದ, ವಾಚನಕ್ಕೆ ಹಿತವಾದ ಭಾಮಿನಿ ಷತ್ಪದಿ, ವಚನದ ಲಯಗಳಿಗೆ ಕಾವ್ಯ ಬದಲಾದಂತೆ ಕಾವ್ಯದ ಒಳಶರೀರದಲ್ಲೂ ಏನೇನು ಬದಲಾಯಿತೆಂಬುದು, ಕಾವ್ಯದ ಭಾಷೆ ಜನರ ಭಾಷೆಗೆ ಎಷ್ಟು ಹತ್ತಿರವಾಗುತ್ತ ಹೋಯಿತೆಂಬುದು ಸೂಕ್ಷ್ಮ ಅಭ್ಯಾಸಕ್ಕೆ ಅರ್ಹವಾದ ಸಂಗತಿಯಾಗಿದೆ.

ಹಿಂದೆ ಸಂಸ್ಕೃತ ಮತ್ತು ಈಗ ಐರೋಪ್ಯ ಸಾಹಿತ್ಯದಿಂದ ಪ್ರಭಾವಿತವಾದ ಕನ್ನಡ ಲೇಖಕನ ಮನಸ್ಸು ಹೇಗೆ ಅನನ್ಯತೆಯನ್ನು ಸಾಧಿಸಿಕೊಳ್ಳಬಲ್ಲುದೆಂಬ ನನ್ನ ವಿಚಾರದಲ್ಲಿ ನಿಕಟ ಶ್ರೋತೃ ಸಂಬಂಧದಿಂದಾಗಿ ಶಿಕ್ಷಿತ ಓದುಗ ಪ್ರಜ್ಞೆಯ ಚೌಕಟ್ಟಿನಿಂದ ಮುಕ್ತರಾದ ಕಬೀರ ಮತ್ತು ವಚನಕಾರರಂಥವರನ್ನೂ ನಾನು ಅನುಕರಣಾರ್ಹ ಮಾದರಿಗಳಾಗಿ ನಿಮ್ಮೆದುರು ಇಡುತ್ತಿಲ್ಲವೆಂಬುದನ್ನು ದಯಮಾಡಿ ಗ್ರಹಿಸಬೇಕು! ಅಂಥ ಒಂದು ಕ್ರಾಂತಿಕಾರಿ ಸಂದರ್ಭ ನಮ್ಮ ಲೇಖಕರಿಗೆ ಸದ್ಯದಲ್ಲಿ ಒದಗಿಸಬಹುದೆಂಬ ಕನಸನ್ನು ನಾನು ಕಂಡಿಲ್ಲ; ನಮ್ಮ ಅನೇಕ ಪ್ರತಿಭಾವಂತ ಲೇಖಕರಿಗೂ ಕಬೀರ ಮತ್ತು ವಚನಕಾರರಿಗಿದ್ದ ರೀತಿಯ ತುರ್ತು ಅಗತ್ಯಗಳು ಇರುವಂತೆ ಕಾಣುವುದಿಲ್ಲ. ನಮ್ಮ ಕೃತಿರಚನಾ ಸಂದರ್ಭದ ಮಿತಿಗಳನ್ನು ನಮ್ಮ ಸಂದರ್ಭಕ್ಕೆ ವಿಶಿಷ್ಟವಾದ ಜರೂರುಗಳನ್ನು ಅರಿಯುವುದು ಈ ಅನನ್ಯತೆಯ ಹುಡುಕಾಟದಲ್ಲಿ ಅಗತ್ಯವೆಂಬುದೇ ನನ್ನ ವಾದದ ತಿರುಳು. ನನ್ನ ಬಗೆಯ ಯೋಚನೆ ಪರಿಸ್ಥಿತೆಯನ್ನು ಅರಿಯುವ ನಿಷ್ಠುರತೆಯಾಗುವ ಬದಲು ಪ್ರಗತಿಶೀಲ ಭಂಗಿ ತಾಳಿ ಭಾವಾತಿರೇಕದ ಬರವಣಿಗೆಯಲ್ಲಿ ನಿರಕ್ಷಕರನ್ನು ಹೀರೋ ಮಾಡುವ ಪ್ರವೃತ್ತಿಯಾದೀತೆಂಬ ಅಪಾಯದ ಕಲ್ಪನೆ ನನಗಿರುವುದರಿಂದ ಈ ಮಾತನ್ನು ಒತ್ತಿ ಹೇಳುತ್ತೇನೆ. ಅಕ್ಷರ ಬಲ್ಲ ಸಾಮಾನ್ಯ ಜನಕ್ಕೆಂದು ಉದ್ದೇಶಪೂರ್ವಕವಾಗಿ ಬರೆಯುವವರು ಮಾರುಕಟ್ಟೆಯ ಅಪೇಕ್ಷೆಯ ಚೌಕಟ್ಟಿನೊಳಗೆ ಸಿಕ್ಕುಬೀಳಬಹುದು; ಹಾಗೆಯೇ ಭಾರತದ ಸುಶಿಕ್ಷಿತ ಲೇಖಕನ ಅನನ್ಯತೆಯ ಹುಡುಕಾಟಕ್ಕೂ ಮಿತಿಗಳಿರುತ್ತವೆ. ಆದ್ದರಿಂದ ಈ ಸಂದರ್ಭದಲ್ಲಿ ನಮ್ಮನ್ನು ನಾವು ಮೀರುವುದು ಪ್ರಾಯಶಃ ನಾವೇ ಶ್ರೋತೃವಾದಾಗ. ಇದೂ ಕೂಡ ಆದರ್ಶವಾಗಿಯೂ ಸಾಧ್ಯವಿಲ್ಲವೆಂದು ನನಗೆ ಗೊತ್ತು. ಆದರೆ ಇಡೀ ಪರಿಸರದ ಬಗ್ಗೆ ಆರ್ತನಾಗಿ ಯೋಚಿಸಬಲ್ಲ ಲೇಖಕ ಅಂಥ ಪ್ರಯತ್ನ ಮಾಡಿದಾಗೆಲ್ಲ ನಮ್ಮ ಕಾಲದ ಸಾಹಿತ್ಯ ಹೊಸ ಮೈಯನ್ನು ತಿರುಳನ್ನೂ ಪಡೆದುಕೊಳ್ಳಬೇಕಾಗಿ ಬಂದಿದೆ ಎಂಬುದನ್ನು ನಾವು ಕಡೆಗಣಿಸುವಂತಿಲ್ಲ.

—-
* ಮಾನಸಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯ ಸೆಮಿನಾರ್ನಲ್ಲಿ ಸ್ವಾತಂತ್ರ್ಯೋತ್ತರ ಕನ್ನಡ ಸಾಹಿತ್ಯದ ಬಗ್ಗೆ ನನ್ನ ಅನಿಸಿಕೆಗಳುಎಂಬ ವಿಷಯವಾಗಿ ಮಾಡಿದ ಭಾಷಣ.