ನಮ್ಮ ಪ್ರತಿಭಟನೆಗಳು ಸಾಮಾನ್ಯವಾಗಿ ಹೇಗೆ ಕೊನೆಗೊಳ್ಳುತ್ತವೆ? ಬ್ರಟನ್ನಿನ ಅಥವಾ ಅಮೆರಿಕದ ಅಥವಾ ದೆಹಲಿಯ ವಿಶ್ವವಿದ್ಯಾನಿಲಯದ ಕ್ಯಾಂಪಸ್ಸುಗಳಲ್ಲಿ ನಾವು ಭೇಟಿ ಮಾಡುವ ಬಹಳಷ್ಟು ಜನ ಭಾರತೀಯ ವಿದ್ಯಾರ್ಥಿಗಳು ಉಗ್ರವಾದಿ ಕಮ್ಯೂನಿಷ್ಟರಾಗಿರುತ್ತಾರೆ. ದೂರದಿಂದ ನೋಡಿದಾಗ ಅವನಿಗೆ ಕ್ರಾಂತಿಯೊಂದೇ ಭಾರತದ ಸಮಸ್ಯೆಗಳಿಗೆ ಉತ್ತರವಾಗಿ ಕಾಣಿಸುತ್ತದೆ. ಆದರೆ ಅದೇ ವಿದ್ಯಾರ್ಥಿ ಭಾರತಕ್ಕೆ ಹಿಂದಿರುಗಿ ಉದ್ಯೋಗ ಹಿಡಿದ ಮೇಲೆ ಪರಂಪರಾಗತ ವಿಚಾರಧಾರೆಯ ಅವನ ಸಂಸಾರ, ಪರಿಸರ ಅವನನ್ನು ಒಳಗೆ ಸೆಳೆದುಕೊಳ್ಳುತ್ತದೆ; ಅಥವಾ ಇವನೇ ತಾನಾಗಿ ಒಳಪಡುತ್ತಾನೆ.

ಭಾರತದಲ್ಲಿ ಬೂರ್ಜ್ವಾ ಒಬ್ಬನ ಸಿಟ್ಟು ಅವನಿನ್ನೂ ವಿಶೇಷ ಸೌಲಭ್ಯಗಳನ್ನು ಆಯಾಚಿತವಾಗಿ ಪಡೆಯುವ ವರ್ಗಕ್ಕೆ ಸೇರಿದವನಾದ್ದರಿಂದ ನಿಜವಾದದ್ದಲ್ಲ. ಹದಿನೈದು ವರ್ಷಗಳ ಹಿಂದೆ ಒಬ್ಬ ಕಾಲೇಜು ಅಧ್ಯಾಪಕನಿಗೆ ಸಿಗುತ್ತಿದ್ದುದು ನೂರು ರೂಪಾಯಿ ಮತ್ತು ಬಹಳ ಸಣ್ಣ ಮೊತ್ತದ ತುಟ್ಟಿಭುತ್ಯ. ಈಗ ಅದು ಕಮ್ಮಿಯಾದರೂ ನಾಲ್ಕರಷ್ಟು ಹೆಚ್ಚಾಗಿದೆ. ಆದರೆ ಮೈಸೂರಿನ ಒಬ್ಬ ಟಾಂಗಾವಾಲ ಬಾಡಿಗೆಯನ್ನು ದ್ವಿಗುಣಗೊಳಿಸಿಕೊಳ್ಳಲು ಪ್ರತಿನಿತ್ಯ ಚೌಕಾಸಿ ಮಾಡಬೇಕು. ಕ್ಷೌರಿಕ ವರ್ಗದ ಸಂಪಾದನೆಯಂತೂ-ಅವರು ಕುಶಲಕರ್ಮಿಗಳೂ ಸಂಗೀತಗಾರರೂ ಆಗಿದ್ದರೂ ಸಹ-ಎರಡರಷ್ಟು ಕೂಡ ಹೆಚ್ಚಾಗಿಲ್ಲ. ಸ್ವಂತಾನುಭವದಲ್ಲಿ ಬೇರುಗಳಿಲ್ಲದ, ಅವ್ಯಕ್ತದಲ್ಲಷ್ಟೇ ಅನುಭವಿಸಿದ ನಮ್ಮ ಸಿಟ್ಟು ಎಷ್ಟು ನಿಜವಾಗುವುದು ಸಾಧ್ಯ? ನೆಹರೂಯುಗ ಮತ್ತು ಇಂದಿರಾ ಯುಗ ಎರಡೂ ಮಧ್ಯಮವರ್ಗಗಳ ಬಗ್ಗೆ ಬಹಳ ಉದಾರವಾಗಿ ನಡೆದುಕೊಂಡಿವೆ; ಮತ್ತು ನಮ್ಮ ಲೇಖಕರು, ರಾಜಕಾರಣಿಗಳು, ಅಧ್ಯಾಪಕರು ಬಂದಿರುವುದು ಈ ಮಧ್ಯಮ ವರ್ಗದಿಂದ. ಹೀಗಾಗಿ ನಮ್ಮ ಪ್ರತಿಭಟನೆ ಮತ್ತು ಸಿಟ್ಟು ಒಂದೋ ರೊಮ್ಯಾಂಟಿಕ್ ಲೋಲುಪತೆಯಾಗುತ್ತದೆ; ಇಲ್ಲವೇನಾವು ಪಟ್ಟಭದ್ರರನ್ನು ಹೆದರಿಸಿ ನಮ್ಮ ಬೆಲೆಯೇರಿಸಿಕೊಳ್ಳಲು ಉಪಯೋಗಿಸುವ ಬಹುಸೂಕ್ಷ್ಮ ತಂತ್ರಗಳಾಗುತ್ತವೆ.

ಅಂದರೆ ನಾನು ಹೇಳುತ್ತಿರುವುದರ ಅರ್ಥ ಪರದೇಶದಲ್ಲಿದ್ದಾಗ ಅಥವಾ ಭಾರತದಲ್ಲೇ ಯಾವುದಾದರೂ ಶ್ರೀಮಂತ ಕಾಲೇಜಿನಲ್ಲಿ ಓದುತ್ತಿರುವಾಗ ಭಾರತೀಯ ವಿದ್ಯಾರ್ಥಿಗೆ ಬರುವ ಸಿಟ್ಟು ಅಪ್ರಾಮಾಣಿಕವದದ್ದು ಅಥವಾ ಸುಳ್ಳು ಎಂದಲ್ಲ; ಇದು ಅವನನ್ನು ಎಲ್ಲಿಗೂ ಮುಟ್ಟಿಸುವುದಿಲ್ಲ ಎಂದು. ಭಾರತದ ಮಟ್ಟಿಗೆ ಒಂದು ಭಯಾನಕ ಸತ್ಯವೆಂದರೆ ಪರದೇಶದಲ್ಲಿದ್ದಾಗ ನಮ್ಮನ್ನು ಗೊಂದಲಗೊಳಿಸುವ ವಾಸ್ತವಗಳಿಗೆ ನಾವು ಭಾರತದಲ್ಲಿ ನೆಲೆಯೂರಿದ ಮೇಲೆ ಒಗಿಹೋಗುತ್ತವೆ. ಡಾಸ್ಟವಸ್ಕಿ ತನ್ನ ಕಾದಂಬರಿಗಳಲ್ಲಿ ಚಿತ್ರಿಸುವಷ್ಟು ಆಳವಾಗಿ ಬಡತನವನ್ನು ಚಿತ್ರಿಸುವ ಕಾದಂಬರಿಗಳು ಕನ್ನಡದಲ್ಲಿ ಬಹು ಕಡಿಮೆ. ಭಾರತೀಯ ಲೇಖಕ ತನ್ನೆದುರೇ ಕಾಣುವ ಭಯಾನಕತೆಯ ಸತ್ಯ ಸ್ವರೂಪಕ್ಕೆ ಜಡವಾಗಿದ್ದಾನೆ. ನಾವು ಪ್ರತಿಕ್ರಿಯೆ ವ್ಯಕ್ತಪಡಿಸುವುದು ಅಸ್ಪಷ್ಟಗಳಲ್ಲಿ; ವಿಶೇಷಣಗಳ ಸರಮಾಲೆಯಲ್ಲಿ ಅಥವಾ ದೆಹಲಿಯ ಇಂಪೀರಿಯಲ್ ಹೋಟೆಲ್‍ನ ಏರ‍್ಕಂಡೀಷನ್ಡ್ ಬಾಲ್ ರೂಮಿನಲ್ಲಿ ಕುಳಿತು ಸಾಹಿತ್ಯದ ಕಾಲ ಮುಗಿದುಹೋಗಿದೆ ಎಂದು ಅಪ್ಪಣೆಕೊಡಿಸಿದೆ ಭಾರತೀಯಾಂಗ್ಲ ಲೇಖಕರೊಬ್ಬರಹಾಗೆ ರೆಟರಿಕ್ಕಿನ ಗತ್ತಿನಲ್ಲಿ ಅಥವಾ ನ್ಯಾಷನಲ್ ಬುಕ್ ಟ್ರಸ್ಟಿನವರು ಏರ್ಪಡಿಸಿದ್ದ ಒಂದು ಸಭೆಯಲ್ಲಿ ತಾವು ಸಮಾಜವಾದ, ದೇಶದ ಏಕತೆ ಇತ್ಯಾದಿಗಳಲ್ಲಿ ನಂಬಿಕೆಯುಳ್ಳವರೆಂದು ಹೇಳುತ್ತಾ (ಒಬ್ಬರು ಮಂತ್ರಿಗಳು ಅಲ್ಲಿ ಉಪಸ್ಥಿತರಿದ್ದರು) ತಾವು ಸಾಮಾಜಿಕ ಅನ್ಯಾಯವನ್ನು ಖಂಡಿಸಿ ಬರೆದ ಒಂದು ಕಾದಂಬರಿ ಏಳುಸಾವಿರದ ಐನೂರು ರೂಪಾಯಿಗಳ ಬಹುಮಾನ-ತೆರಿಗೆ ವಿನಾಯ್ತಿ ಸಮೇತ (ಅವರದ್ದೇ ಮಾತು) -ಪಡೆಯಿತೆಂದು ಪರಿಚಯ ಮಾಡಿಕೊಂಡ ಒಬ್ಬ ಜನಪ್ರಿಯ ತಮಿಳು ಲೇಖಕರ ಹಾಗೆ. ಈ ವ್ಯಕ್ತಿ ಹಾಗೆ ಪರಿಚಯ ಮಾಡಿಕೊಂಡಾಗ ತಾನು ಮಾರಾಟಕ್ಕಿದ್ದೇನೆ ಎಂದು ಪಟ್ಟಭದ್ರರೆದುರು ಜಾಹೀರು ಮಾಡಿಕೊಳ್ಳುತ್ತಿದ್ದಾನೆಂದು ಯಾರಿಗಾದರೂ ತಿಳಿಯುವಂತಿತ್ತು.

ಮದ್ಯಮವರ್ಗದ ಒಬ್ಬ ಲೇಖಕ ಪ್ರತಿಭಟನೆಯ ಸಾಹಿತ್ಯ ಬರೆಯುವುದು ಸಾಧ್ಯವೇ ಎಂಬ ಆತಂಕ ನನಗಿದೆ. ನಮ್ಮಲ್ಲಿ ಹೆಚ್ಚಿನವರು ಮಾಡಬಹುದಾದ್ದೆಂದರೆ ನಮ್ಮ ಓದುಗರಿಗೆ-ಇವರೂ ಮಧ್ಯಮ ವರ್ಗದವರೇ ಆಗಿರುತ್ತಾರೆ-ತಮ್ಮ ಸ್ಥಿತಿಯ ಬಗ್ಗೆ ಸ್ವಲ್ಪವಾದರೂ ನಾಚಿಕೆಯುಂಟಾಗುವ ಅಪಮಾನದ ಸಾಹಿತ್ಯ ಬರೆಯುವುದು. ನಾವು ಮಾಡಬಬಹುದಾದ ಅತ್ಯುತ್ತಮ ಕೆಲಸವೆಂದರೆ ನಮ್ಮ ಆತ್ಮವಂಚನೆಯನ್ನು, ನಮ್ಮ ಮಾತಿಗೂ ಕ್ರಿಯೆಗೂ ಇರುವ ಕಂದಕವನ್ನು, ನಮಗೂ ಇಲ್ಲಿನ ಬಡಜನರಿಗೂ ಇರುವ ಸಾಮಾನ್ಯ ಅದೃಷ್ಟದ ಬಗ್ಗೆ ನಮ್ಮ ನಿರ್ಲಕ್ಷತೆಯನ್ನು ಆಳವಾಗಿ ಕೆದಕಿ ಬರೆಯುವುದು. ನಾವು ಸಾಚಾ ಆಗುವುದು ನಮ್ಮ ಮಿತಿಗಳ ಬಗ್ಗೆ ಹೆಚ್ಚು ಹೆಚ್ಚು ಜಾಗೃತರಾಗುತ್ತಾ ಹೋದಾಗ-ನಮ್ಮ ಮಿತಿಗಳ ಬಗ್ಗೆ ಜಾಗೃತರಾಗುವುದೂ ಕೂಡ. ಸಾಚಾ ಆದ ಪ್ರತಿಭಟನೆಯ ಸಾಹಿತ್ಯವನ್ನು ಬರೆಯಲು ಸಾಧ್ಯವಾಗುವುದು ಬ್ಲೇಕ್ ಮತ್ತು ಲಾರೆನ್ಸ್ ನಂಥ ಲೇಖಕರಿಗೆ. ಇವರು ದಾರ್ಶನಿಕರೂ ಹೌದು ಎಂಬುದನ್ನು ನೆನಪಿನಲ್ಲಿಡಬೇಕು. ಲಾರೆನ್ಸ್ ಮತ್ತು ಬ್ಲೇಕ್ ನಾವು ಈಗ ಎನಾಗಿದ್ದೇವೆ ಎನ್ನುವ ವಾಸ್ತವವನ್ನು ಮತ್ತು ಏನಾಗಬೆಕು ಎನ್ನುವ ಸಾಧ್ಯತೆಯನ್ನು ಒಟ್ಟೀಗೆ ಗ್ರಹಿಸಿ ಹಿಡಿದಿಟ್ಟವರು. ನಾವು ಏನಾಗಿದ್ದೇವೆ ಎಂಬುದರ ಬಗ್ಗೆ ಮಾತ್ರ ಹೇಳುವ ಸಾಹಿತ್ಯ ಡಾಕ್ಯುಮೆಂಟರಿಯಾಗುತ್ತದೆ; ಏನಾಗಬೇಕು ಎನ್ನುವುದರ ಬಗ್ಗೆ ಮಾತ್ರ ಬರೆದಾಗ ಅದು ಪ್ರಚಾರದ ರೆಟರಿಕ್ಕಾಗುತ್ತದೆ. ನಿಜವಾದ ಲೇಖಕ ವಾಸ್ತವ ಮತ್ತು ಆದರ್ಶಗಳ ಡಯಲೆಕ್ಟಿಕ್ಕನ್ನು ಒಟ್ಟೀಗೆ ಗ್ರಹಿಸಿ ಹಿಡಿಯುವುದು ಸಾಧ್ಯವಾಗಬೇಕು. ಆಗ ಮಾತ್ರ ಅದು ನಿಜವಾಗಬಲ್ಲದು.

ನಾವು ಬೌದ್ಧಿಕ ಮಟ್ಟದಲ್ಲಿ ಮಾತ್ರ ಗ್ರಹಿಸಿದ್ದು ಸಾಚಾ ಸಾಹಿತ್ಯವನ್ನು ಕೊಡುವುದು ಸಾಧ್ಯವಿಲ್ಲ; ಭಾರತೀಯಾಂಗ್ಲ ಕವಿಯೊಬ್ಬರು ಉಳಿದ ಲೇಖಕರ ಮುಂದೆ ಸಾಹಿತ್ಯವನ್ನು ಬಿಟ್ಟು ನಿಜವಾದ ಪ್ರತಿಭಟನೆಯಲ್ಲಿ ತೊಡಗಿ ಎಂದು ಸ್ಫೂರ್ತಿಯುತವಾದ ಭಾಷಣ ಕೊಡುತ್ತಿದ್ದಾಗ ಯಾರೊಬ್ಬರೂ ಅವರನ್ನು ನಿಮಗೆ ಭಾರತೀಯರಲ್ಲಿ ನಿಜವಾಗಿಯೂ ಆಸಕ್ತಿಯಿರುವುದಾದರೆ ಭಾರತೀಯ ಭಾಷೆಯಲ್ಲಿ ಬರೆದು ಜನರನ್ನು ಕ್ರಿಯೆಗೆ ಎಚ್ಚರಿಸುವಲ್ಲಿ ಯಾಕೆ ತೊಡಗಬಾರದು ಎಂದು ಯಾಕೆ ಕೇಳಲಿಲ್ಲವೆಂದು ನನಗೆ ಅನ್ನಿಸಿತು. ಹೆಚ್ಚಿನ ಎಲ್ಲರೂ ಅವರ ರೆಟರಿಕ್ಕನ್ನು ಮೆಚ್ಚುತ್ತಾ ಕೂತಿದ್ದರು; ಒಂದಿಬ್ಬರು ಕಮಲಾದಾಸಳಂಥ ಕವಿಯ ಪದ್ಯಗಳನ್ನು ಅಷ್ಟು ಬೇಗ ತೆಗೆದುಹಾಕುವಂತಿಲ್ಲವೆಂದು ಸಣ್ಣ ಧ್ವನಿಯಲ್ಲಿ ಪ್ರತಿಭಟಿಸಿದರು. ಯಾವುದೋ ಅಸ್ಪಷ್ಟ ಆದರ್ಶಕ್ಕೆ ನಮ್ಮನ್ನು ಕೊಟ್ಟುಕೊಂಡಾಗ ನಾವು ಯೋಚಿಸುವ ಮತ್ತು ಅಭಿವ್ಯಕ್ತಿಸುವ ಕ್ರಮದಲ್ಲಿ ಕೃತಕತೆ ತಲೆದೋರುತ್ತದೆ. ಬಸವಣ್ಣ, ಅಕ್ಕ, ಕಬೀರರಂಥ ಅನುಭಾವಿ ಕವಿಗಳ ಕಾವ್ಯದಲ್ಲಿ ನನಗೆ ಪ್ರಾಮಾಣಿಕವಾದ ಪ್ರತಿಭಟನೆಯ ಸಾಹಿತ್ಯ ಸಿಕ್ಕುತ್ತದೆ. ಈಗಲೂ ಕೂಡಾ ಸಾಮಾನ್ಯ ಜನರು ನಮ್ಮ ಸದ್ಯದ ಸಮಾಜದ ಹುಳುಕುಗಳನ್ನು ಈ ಕವಿಗಳಿಂದ ತಾವು ಪಡೆದ ಮೌಲ್ಯಮಾಪನದಿಂದ ಕಂಡುಕೊಳ್ಳುತ್ತಾರೆ. ಅದೇ ವೈಚಾರಿಕರ ಪ್ರತಿಭಟನೆ ಅವ್ಯಕ್ತವಾಗಿಯೂ ಅಸ್ಪಷ್ಟವಾಗಿಯೂ ಉಳಿದುಕೊಂಡಿದೆ.

ನಮ್ಮ ಸಾಮಾಜಿಕ ಪ್ರತಿಭಟನೆಗಳು ಆಳವಾದದ್ದರಿಂದ ಅದು ತಾತ್ವಿಕ ಆಯಾಮಗಳನ್ನು ಪಡೆದುಕೊಳ್ಳುತ್ತದೆ. ಹಾಗೆಯೇ ಯಾವುದೇ ತಾತ್ವಿಕವಾದ ಪ್ರತಿಭಟನೆಗೂ ಅದು ಜೀವನದಲ್ಲಿ ಬೇರುಬಿಟ್ಟಿದ್ದರೆ, ಸಾಮಾಜಿಕ, ಆರ್ಥಿಕ ತಳಹದಿಗಳು ಇರಬೇಕಾಗುತ್ತದೆ. ಭಾರತೀಯ ಸಾಹಿತ್ಯರಂಗದಲ್ಲಿ ಯಾವ ರೀತಿಯ ಪ್ರತಿಭಟನೆ ಅಗತ್ಯ ಮತ್ತು ನಿಜ ಎನ್ನುವುದರ ಬಗ್ಗೆ ಮಾರ್ಕ್ಸ್ ವಾದಿಗಳಿಗೂ ನವ್ಯಪಂಥದವರಿಗೂ ಸುಳ್ಳು ಚರ್ಚೆ ನಡೆಯುತ್ತಿರುವುದರಿಂದ ಈ ಮಾತನ್ನು ಹೇಳುತ್ತಿದ್ದೇನೆ.

ಸೃಷ್ಟಿಶೀಲ ಸಾಹಿತ್ಯ ಮುಖ್ಯವಾಗಿ ಯೋಚಿಸುವುದಕ್ಕೆ ನೀಡುವ ಅಹ್ವಾನ; ಅದು ನಮ್ಮನ್ನು ಕ್ರಾಂತಿಕಾರಿ ರಾಜಕೀಯ ಕ್ರಿಯೆಗೆ ಉದ್ದೇಪಿಸುವಂಥದಲ್ಲ. ಲೆನಿನ್ ಹಾಗೆ ಕ್ರಿಯೆಯಲ್ಲಿ ತೊಡಗುವುದು ಸಾಧ್ಯವಿದ್ದರೆ ಸೃಷ್ಟಿಶೀಲ ಸಾಹಿತ್ಯ ರಚಿಸುವುದನ್ನು ಆರಿಸಬೇಕಾಗಿಲ್ಲ. ಒಂದು ಸ್ಲೋಗನ್ ಪದ್ಯಕ್ಕಿಂತ ಹೆಚ್ಚು ಪರಿಣಾಮಕಾರಿ ಆಯುಧವಾಗಿರಬಹುದು. ಒಳ್ಳೆಯ ಪ್ರತಿಭಟನೆಯ ಬರವಣಿಗೆ ಒಳ್ಳೆಯ ಸಾಹಿತ್ಯವಾಗಬೇಕೆಂದಿಲ್ಲ. ನನಗೆ ನನ್ನ ಸಮಾಜದ ಕೆಡಕುಗಳಿಂದ ನಿಜವಾಗಿ ಸಿಟ್ಟು ಬಂದಿದ್ದರೆ ಸಾಹಿತ್ಯಕ್ಕಿಂತ ಹೊರತಾದ ಉಳಿದ ವಿಧಾನಗಳ ಮೂಲಕ ಪರಿಣಾಮಕಾರಿಯಾಗಿ ನಾನು ಕ್ರಿಯೆಯಲ್ಲಿ ತೊಡಗಲೇಬೇಕಾಗಬಹುದು. ನನ್ನ ಅಸ್ತಿತ್ವ ಸಾಮಾಜಿಕ ಕೆಡುಕುಗಳ ಬಗ್ಗೆ ಮತ್ತು ಅದರ ವಿರುದ್ಧ ಹೋರಾಡುವ ಅಗತ್ಯದ ಬಗ್ಗೆ ಪೂರ್ಣಎಚ್ಚೆತ್ತಿದ್ದರೆ ನನ್ನ ಸೃಷ್ಟಿಶೀಲ ಬರವಣಿಗೆಯಲ್ಲಿ-ಅದು ಪ್ರೇಮಗೀತವೇ ಆಗಿದ್ದರೂ-ಕ್ರಾಂತಿಕಾರಿ ಸಾಮಾಜಿಕ ಪ್ರಜ್ಞೆ ಮೂಡಿಬಹುದು. ಆದರೆ ಒಬ್ಬ ಕ್ರಾಂತಿಕಾರಿ ರಾಜಕಾರಣಿ ತನ್ನ ಕ್ಷೇತ್ರದಲ್ಲಿ ಸಾಧಿಸುವಷ್ಟು ತತ್‍ಕ್ಷಣದ ಪರಿಣಾಮವನ್ನು ನನ್ನ ಬರವಣಿಗೆ ಮಾಡದೆ ಇರಬಹುದು. ಅಥವಾ ನಾನು ಬರೆಯುತ್ತಿರುವುದು ಜನರ ಭಾವಿಸುವ ಮತ್ತು ಕ್ರಿಯೆಯ ಕ್ರಮವನ್ನು ಬದಲಾಯಿಸಬಹುದಾದ್ದರಿಂದ ಭವಿಷ್ಯತ್ತಿನಲ್ಲಿ ಅದು ರಾಜಕಾರಣಿಯ ಕ್ರಿಯೆಗಿಂತ ಹೆಚ್ಚು ಪರಿಣಾಮಕಾರಿಯಾಗಲೂಬಹುದು. ಆದರೆ ಸಾಹಿತ್ಯ ಅದನ್ನು ಮಡುವುದು ಅದು ಸಾಹಿತ್ಯವಾಗಿದ್ದಾಗ ಮಾತ್ರ; ಅಂದರೆ ಯೋಚನೆಗೆ ಆಹ್ವಾನವಾಗಿದ್ದಾಗ; ಕ್ರಿಯೆಗೆ ಕರೆಯುವ ರೆಟರಿಕ್ಕಿನ ಅಬ್ಬರವಲ್ಲದೆ ಹೋದಾಗ.

ಇಂಗ್ಲಿಷ್ Weekly Round Table, June , ೧೯೭೨ರಲ್ಲಿ ಪ್ರಕಟವಾದ ಇಂಗ್ಲಿಷ್ ಲೇಖನದ ಕನ್ನಡಾನುವಾದ. ಅನುವಾದ: ರಾಮಚಂದ್ರದೇವ.