ಬೈಗಾಗುತ್ತಿತ್ತು. ಕಾರ್ಮುಗಿಲಿನ ಕರ್ವೆಳಗಿನೊಡನೆ ಸಂಗಮವಾಗುತ್ತಿದ್ದ ಕಗ್ಗತ್ತಲೆಯು ಮುಂಗಪ್ಪು ಮಲೆನಾಡಿನ ಬೆಟ್ಟಗಳ ಮೇಲೆ ಮೆಲ್ಲಮೆಲ್ಲನೆ ಕವಿಯುತ್ತಿತ್ತು. ಎಡಬಿಡದೆ ಸುರಿವ ಮಳೆಯ ಮಂಜಿನಾವರಣದಲ್ಲಿ ಕಾಡು, ಬೆಟ್ಟ, ತೋಟ, ಗದ್ದೆ. ಎಲ್ಲವೂ ಕನಸಿನಲ್ಲಿ ಕರುವಿಟ್ಟ ಚಿತ್ರಗಳ ತೆರದಿ ಮೌನವಾಗಿದ್ದುವು. ಕಾಲವು ಯಾರೂ ಅರಿಯದ ಯಾವುದೋ ಒಂದು ಮಹಾರಹಸ್ಯದಂತಿತ್ತು. ಸುತ್ತಲೂ ಪಸರಿಸಿದ ಎತ್ತರವಾದ ಗಿರಿವನಗಳ ನಡುವೆ ಇರುವ ಕೆರೆಯೂರ ಕಣಿವೆಯಲ್ಲಿ ಸಣ್ಣದಾದ ಹುಲ್ಲಿನ ಮನೆಯೊಂದು, ಬೇಟೆನಾಯಿಗಳ ಕೈಗೆ ಸಿಕ್ಕದೆ ತಪ್ಪಿಸಿಕೊಂಡು ಪೊದೆಯಲ್ಲಿ ಅಡಗಿದ ಮೊಲದಂತೆ, ಮರಗಳ ಗುಂಪಿನ ನಡುವೆ ತಲೆಮರಸಿಕೊಂಡಿತ್ತು.

ಹಳೆಪೈಕದ ರಂಗ ದಿನವೆಲ್ಲಾ ಗದ್ದೆಯ ಅಂಚು ಕೆತ್ತಿ, ಬಳಲಿ, ಹೆಗಲ ಮೇಲೆ ಹಾರೆ ಹಾಕಿಕೊಂಡು ತನ್ನ ಮನೆಗೆ ಬಂದ. ಅವನ ಹೆಂಡತಿ, ನಾಗಿ, ಗಂಡ ಮನೆಗೆ ಬಂದಕೂಡಲೆ ಕೈಕಾಲು ತೊಳಕೊಳ್ಳುವುದಕ್ಕೆ ಬಿಸಿನೀರು ಸಿದ್ಧಪಡಿಸಿದಳು. ರಂಗ ಕಂಬಳಿಕೊಪ್ಪೆ ತೆಗೆದು ಹರಡಿ, ಕೈಕಾಲು ತೊಳೆಗುಕೊಂಡು ಮುರುವಿನ ಒಲೆಯಲ್ಲಿ ಬೆಂಕಿ ಕಾಯಿಸಿಕೊಂಡ. ಅವನ ಮಗ ಸೇಸ ತಾನು ಸುಟ್ಟು ಇಟ್ಟಿದ್ದ ಹಲಸಿನ ಬಿತ್ತಗಳನ್ನು ತಂದುಕೊಟ್ಟ. ರಂಗ ಅವುಗಳನ್ನು ಒಂದೊಂದಾಗಿ ಸುಲಿದು ತಿಂದ.

ರಂಗನದು ಬಡ ಸಂಸಾರ. ಅವನ ವಾಸಕ್ಕೆ ಸಣ್ಣ ವಾಸಕ್ಕೆ ಸಣ್ಣ ಹುಲ್ಲುಮನೆ; ನಾಲ್ಕೈದು ಅಂಕಣದ್ದು. ಅವನಿಗೆ ಏಳೆಂಟು ಕಾಲ್ನಡೆಗಳಿವೆ. ಅವನ ಜಮೀನು ಸ್ವಂತದ್ದಲ್ಲ; ಗಡಿಗುತ್ತಿಗೆ ಮಾಡಿಕೊಂಡು ಒಕ್ಕಲಸಾಗು ಮಾಡುತ್ತಾನೆ. ಆದರೂ ಹೊಟ್ಟೆಗೆ ಬಟ್ಟೆಗೆ ತಕ್ಕಮಟ್ಟಿಗೆ ದುಡಿದುಕೊಂಡು ನೆಮ್ಮದಿಯಾಗಿದ್ದಾನೆ. ಸಾಹುಕಾರರಲ್ಲಿ ಸ್ವಲ್ಪ ಸಾಲವಿದೆ. ಅದೂ ಅವನು ಲಗ್ನವಾಗುವಾಗ ಹೆಣ್ಣಿಗೆ ಕೊಟ್ಟ ತೆರದ ಹಣವಂತೆ.

ಅವನಿಗೆ ನೆರೆಹೊರೆಯವರು ಯಾರೂ ಹತ್ತಿರ ಇಲ್ಲ. ಸುಮಾರು ಮೂರು ಮೈಲಿಗಳ ಆಚೆ ಒಂದು ಬೆಟ್ಟ ದಾಟಿದರೆ ಅಲ್ಲಿ ಚೌಕಿಮನೆ ಎಂಬ ಮತ್ತೊಂದು ಮನೆಯಿದೆ. ಮಳೆಗಾಲದಲ್ಲಂತೂ ಒಬ್ಬರಿಗೊಬ್ಬರಿಗೆ ಸಂಪರ್ಕವೇ ಇರುವುದಿಲ್ಲ. ಏಕೆಂದರೆ ಗೊಂಡಾರಣ್ಯದ ನಡುವೆ ಕಾಲುದಾರಿಯಲ್ಲಿ ಜಿಗಣೆಗಳ ಕಾಟದಲ್ಲಿ ದುಷ್ಟಮೃಗಗಳ ತೊಂದರೆಯಲ್ಲಿ ಊರಿಂದೂರಿಗೆ ಹೋಗುವುದೇ ಪ್ರಯಾಸ. ಆದರೆ ಅಲ್ಲಿಯವರೆಗೆ ಆ ವಿಧವಾದ ಏಕಾಂತವಾಸ ಅಭ್ಯಾಸವಾಗಿ ಹೋಗಿದೆ. ಆದ್ದರಿಂದ ಅವರಿಗೆ ಅಷ್ಟು ಬೇಸರ ಕಾಣುವುದಿಲ್ಲ.

ಗಂಡಹೆಂಡರಿಗೆ ಏನೇನೋ ಮಾತುಕತೆಗಳಾದುವು. ಸ್ವಲ್ಪ ಹೊತ್ತಿನ ಮೇಲೆ ಕತ್ತಲಾಯಿತು. ಸೇಸ ಚಿಮನಿದೀಪ (ಸೀಮೆ ಎಣ್ಣೆಯ ಬುಡ್ಡಿ ದೀಪ) ಹೊತ್ತಿಸಿ ತಂದ. ಚಿಮನಿ ದೀಪವೆಂದರೆ ಮಲೆನಾಡಿನಲ್ಲಿರುವ ಬಡವರಿಗೆ ಭಾಗ್ಯವಂತರ ಭೊಗವಸ್ತುವೆಂದೇ ಭಾವನೆ. ಅವರು ಅದನ್ನು ಸುಮ್ಮನೆ ಉರಿಸುವುದೇ ಇಲ್ಲ. ಊಟಮಾಡುವಾಗ ಮಾತ್ರ ಹೊತ್ತಿಸುತ್ತಾರೆ. ಮಿಕ್ಕ ಸಮಯದಲ್ಲಿ ಬೆಂಕಿಯ ಬೆಳಕೇ ದೀಪ.

ನಾಗಿ ಹಸಿದು ಗಂಡನಿಗೆ ಬಳ್ಳೆ ಹಾಕಿದಳು. ರಂಗ ಅಡಿಗೆ ಮನೆಯ ಒಲೆಯ ಬಳಿ ಕುಳಿತುಕೊಂಡ. ಸೇಸನೂ ಅಪ್ಪನ ಬಳಿಯೇ ಕುಳಿತುಕೊಂಡ. ಏಕೆಂದರೆ ಅಪ್ಪನ ಎಲೆಯಲ್ಲಿಯೇ ಊಟಮಾಡುವುದು ಅವನಿಗೆ ವಾಡಿಕೆ. ರೊಟ್ಟಿ, ಮೀನುಪಲ್ಯ, ಎಲ್ಲಾ ಬಳ್ಳೆಗೆ ಬಂದುವು. ಚೆನ್ನಾಗಿ ನುಣ್ಣಗೆ ಕೆತ್ತಿ ಲೋಟದಂತೆ ಮಾಡಿದ ತೆಂಗಿನ ಕರಟದಲ್ಲಿ ಒಳ್ಳೆ ಸೊಗಸಾದ ಬಗನಿಯ ಕಳ್ಳು ಬೇರೆ ಇತ್ತು. ದುಡಿದು ಬಳಲಿ ಹಸಿದ ರಂಗನಿಗೆ ಅವುಗಳೆಲ್ಲಾ ಮೃಷ್ಟಾನ್ನಕಿಂತಲೂ ಹಿತವಾಗಿ, ಅದನ್ನು ಏಳಿಸುವಂತಿದ್ದುವು! ರಂಗ ಇನ್ನೂ ಊಟ ಮಾಡಲು ಎಲೆಗೆ ಕೈಹಾಕಿರಲಿಲ್ಲ. ಸೇಸ ಮಾತ್ರ ಎರಡು ತುತ್ತು ಇಳಿಸಿಬಿಟ್ಟಿದ್ದ. ಅಷ್ಟರಲ್ಲಿ ಸುರಿವ ಮಳೆವ ಕರೆಕರೆಯ ಗಡಿಬಿಡಿಯನ್ನು ಭೇದಿಸಿಕೊಂಡು ಕೊಟ್ಟಿಗೆಯಿಂದ ಒಂದು ಎಮ್ಮೆಯ ಎಳಗರುವಿನ ಕೂಗು ಕೇಳಿಬಂತು. ರೈತನಿಗೆ ಕಾಲ್ನಡೆಗಳ ಜೀವಾಳ. ಅವನು ಅವುಗಳ ಸುಖವನ್ನು ತನ್ನ ಸುಖಕ್ಕಿಂತಲೂ ಹೆಚ್ಚಾಗಿ ಬಯಸುತ್ತಾನೆ. ಅವುಗಳಿಗಾಗಿ ಅನ್ನ ನೀರನ್ನಾದರೂ ತೊರೆದು ಕೆಲಸ ಮಡುತ್ತಾನೆ.

ರಂಗ “ಅದ್ಯಾಕೆ ಎಮ್ಮೆಕರು ಕೂಗ್ತದಲ್ಲಾ?” ಎಂದು ತನ್ನ ಸೇಸನ ಕಡೆ ನೋಡಿ “ಎಲ್ಲಾ ಕೊಟ್ಟಿಗೆಗೆ ಬಂದುವೇನೋ? ಹುಲಿಕಾಟ ಬೇರೆ ಹೆಚ್ಚಾಗಿದೆ. ಚೌಕಿಮನೆಯಲ್ಲಿ ನಾಲ್ಕು ದನ ಹೋದುವಂತೆ” ಎಂದನು.

ಸೇಸ “ಸೊಟ್ಟಕೋಡೆಮ್ಮೆ ಬರಲೇ ಇಲ್ಲ. ಅದಕ್ಕೇ ಎಳಗರು ಕೂಗ್ತದೆ” ಎಂದ. ರಂಗ ಹೆಂಡತಿಯ ಕಡೆ ನೋಡಿದ.

ಅವಳು “ಹೌದು. ನಾನು ಇಲ್ಲೆಲ್ಲಾ ಸುತ್ತಮುತ್ತ ಹುಡುಕಿದೆ; ಎಲ್ಲೂ ಕಾಣಲಿಲ್ಲ. ಅದರ ಕರುವಿಗೆ ಬೇರೆ ಏನೋ ಕಾಯಿಲೆ. ಮಲಗಿದಲ್ಲಿಂದ ಏಳೋದಿಲ್ಲ. ಏನು ಕೊಟ್ಟರೂ ತಿನ್ನೋದಿಲ್ಲ.” ಎಂದಳು.

ರಂಗ ಕನಿಕರದಿಂದ ಕೂಡಿದ ಕೋಪದಿಂದ ಹೆಂಡತಿಯನ್ನು ಬಯ್ಯುತ್ತಾ ಮೇಲೆದ್ದು ಒಂದು ದೊಂದಿ (ಅಡಕೆ ಮರವನ್ನು ಸಿಗಿದು ಮಾಡಿದ ಪಂಜು) ಹೊತ್ತಿಸಿಕೊಂಡು ಕೊಟ್ಟಿಗೆಗೆ ಹೋದ. ಸೇಸ ನಾಗಿಯರಿಗೆ ಏನೂ ತೋರದೆ ಸುಮ್ಮನೆ ಅವನ ಹಿಂದೆಯೆ ಹೋದರು. ಒಲೆಯ ಮೂಲೆಯಲ್ಲಿದ್ದ ಬೆಕ್ಕು ಎಡೆಗೆ ಬಾಯಿ ಹಾಕಿತು.

ಮಲೆ ಸುರಿಯುತ್ತಲೇ ಇತ್ತು. ಬೆಳಕನ್ನು ಕಂಡ ಕೂಡಲೆ ಹಿತ್ತಲ ಕಡೆ ಮಲಗಿದ್ದ ಎರಡು ಕಂತ್ರಿ ನಾಯಿಗಳು ಬಗುಳಿದವು. ರಂಗ ಅವನ್ನು ಬೆದರಿಸಿ ಕೊಟ್ಟಿಗೆಗೆ ಹೋದ. ಅಲ್ಲಿ ಕೆಲವು ದನಿಗಳು ಮಲಗಿ ಮೆಲುಕು ಹಾಕುತ್ತಿದ್ದುವು. ಮತ್ತೆ ಕೆಲವು ನಿಂತುಕೊಂಡೇ ಮೆಲುಕುಹಾಕುತ್ತಿದ್ದುವು. ತಾಯಿಯಗಲಿದ ಎಮ್ಮೆಕರು ಮಾತ್ರ ಒಂದು ಮೂಲೆಯಲ್ಲಿ ಕೊರಗಿ ಕೊರಗಿ ಆಗಾಗ್ಗೆ ಕೂಗುತ್ತಿತ್ತು. ರಂಗನಿಗೆ ಆ ಭಯಂಕರವಾದ ನಿಬಿಡಾಂಧಕಾರದಲ್ಲಿ, ಆ ಬಲ್ಸರಿಯ ಹೋರಾಟದಲ್ಲಿ, ಆ ದೊಂದಿಯ ಮಸುಕಾದ ಬೆಳಕಿನಲ್ಲಿ ಆ ಎಳೆಗರುವಿನ ಮಾತೃವಿಯೋಗದುಃಖ ಎದೆಯ ಮೇಲೆ ಭಾರವಾದ ಕಲ್ಲಿನಂತೆ ಕೂತುಬಿಟ್ಟಿತು. ಒಂದು ಸಾರಿ ಅವನಿಗೆ ಹುಲಿಯ ನೆನಪಾಗಿ ಬೆಚ್ಚಿಬಿದ್ದ. ಎಲ್ಲಾದರೂ ಆ ಎಮ್ಮೆ ಹುಲಿಯ ಪಾಲಾಗಿದ್ದರೆ ಎಳೆಗರುವಿನ ಗತಿಯೇನು? ಎಂಬ ಯೋಚನೆ ಬಲವಾಗಿ ಪೀಡಿಸತೊಡಗಿತು. ಹಿಂತಿರುಗಿ ಹೆಂಡತಿಗೆ ಸ್ವಲ್ಪ ಹಾಲು ತರುವಂತೆ ಹೇಳಿದ. ಆಕೆ ಹಾಗೆಯೆ ಮಾಡಿದಳು. ನೊಳಗ (ವಾಟೆಯಿಂದ ಮಾಡಿದ ಬಳಲೆ)ದಲ್ಲಿ ಹಾಲು ಹಾಕಿ ಕರುವಿಗೆ ಕುಡಿಸಲು ಯತ್ನಿಸಿದ. ಆದರೆ ಅವನ ಪ್ರಯತ್ನವೆಲ್ಲ ನೀರಿನಲ್ಲಿ ಹೋಮ ಮಾಡಿದಹಾಗಾಯಿತು. ಕರು ಒಂದು ತೊಟ್ಟು ಹಾಲನ್ನೂ ಕುಡಿಯಲಿಲ್ಲ. ಮುಂದೇನು ಮಾಡಬೇಕೆಂದು ಸ್ವಲ್ಪ ಯೋಚಿಸಿ, ಎಮ್ಮೆಯನ್ನು ಆಗಲೇ ಹುಡುಕಬೇಕೆಂದು ಮನಸ್ಸು ಮಾಡಿದ. ಅವನ ಹೆಂಡತಿ ನಾಳೆ ಬೆಳಗಿನ ಜಾವ ಹುಡುಕಿದರಾಯ್ತು ಎಂದಳು. ಊಟಮಾಡಿಯಾದರೂ ಹೋಗಿ ಎಂದಳು. ರಂಗ ಅದಾವುದನ್ನೂ ಗಣನೆಗೆ ತಾರದೆ ಕಂಬಳಿ ಕೊಪ್ಪೆಹಾಕಿ, ದೊಂದಿ ಹಿಡಿದು, ತನ್ನೆರಡು ನಾಯಿಗಳನ್ನು ಕರೆದು, ಕೈಯಲ್ಲೊಂದು ಕತ್ತಿ ತೆಗೆದುಕೊಂಡು ಹೊರಟ. ಅವನು ಹೊರಟುಹೋದ ಮೇಲೆ ನಾಗಿ ಆ ಹಳ್ಳಿಯ ಭೂತನಿಗೆ ಮೂರು ಕಾಸು ಸುಳಿದಿಟ್ಟು, ಎಮ್ಮೆ ಸಿಕ್ಕಿದರೆ ಒಂದು ಕೋಳಿ ಕೊಡುವುದಾಗಿ ಹರಕೆ ಹೊತ್ತುಕೊಂಡಳು.

ರಂಗ ಹೋದಮೇಲೆ ಅವಳು ಸೇಸನೂ ಊಟಮಾಡಿ ಬಹಳ ಹೊತ್ತು ಕಾದರು. ಆದರೆ ರಂಗ ಬರಲೇ ಇಲ್ಲ. ನಡುರಾತ್ರಿಯಾಯಿತು. ಆದರೂ ಸುಳಿವಿಲ್ಲ; ಮಲಗಿ ನಿದ್ರಿಸಿದರು.

ಮನೆಯಿಂದ ಹೊರಟ ರಂಗ ಬಹುದೂರ ಹೋಗಿ ಸುತ್ತಲೂ ಅರಸಿದನು. ಎಮ್ಮೆಯ ಕುರುಹು ಕೂಡ ದೊರಕಲಿಲ್ಲ. ಎಲ್ಲಿಯಾದರೂ ಚಿಗುರು ಪಯಿರಿನ ತುಡುವಿನಿಂದ ಗದ್ದೆಗೆ ಹೋಗಿದೆಯೇನೋ ಎಂದು ಯೋಚಿಸಿ ಅಲ್ಲಿಗೂ ಹೋಗಿ ನೋಡಿದ. ಮಳೆ ಬಲವಾಗಿ ಸುರಿಯುತ್ತಿದ್ದುದರಿಂದ ದೊಂದಿ ಉರಿಯುವುದೇ ಕಷ್ಟವಾಗಿತ್ತು. ಒಂದುಸಾರಿ ನಂದಿಹೋಗುವುದು, ಮತ್ತೊಂದುಸಾರಿ ಚೆನ್ನಾಗಿ ಹಿಂದಕ್ಕೂ ಮುಂದಕ್ಕೂ ಬೀಸಲು ಮಸುಕಾಗಿ ಉರಿಯುವುದು, ಹೀಗಾಗುತ್ತಿತ್ತು. ಗದ್ದೆಗೆ ಹೋದಾಗ, ದೂರ ಕತ್ತಲೆಯಲ್ಲಿ ನಾಯಿಗಳು ಬಗುಳಿದುವು. ರಂಗ ಎಮ್ಮೆಯನ್ನೇ ಕಂಡು ಕೂಗುವುದೆಂದು ಭ್ರಮಿಸಿ ಓಡಿ ನೋಡಲು ಪಯಿರನ್ನು ಹಾಳು ಮಾಡಲು ಬಂದಿದ್ದ ಒಂಟಿಗ ಹಂದಿಯೊಂದು ಹೂಂಕರಿಸುತ್ತಾ ಪರಾರಿಯಾಯಿತು. ನಿರಾಶೆಯಿಂದ ಹಿಂತಿರುಗಿ ಚೌಕಿಮನೆಯ ಕಡೆಗೆ ಹೋದ. ಕಾಡು ಬೆಟ್ಟಗಳನ್ನು ದಾಟುವುದು ಬಹಳ ಕಷ್ಟವಾಯಿತು. ಜಿಗಣೆಗಳು ಅವನ ಕಾಲು ತುಂಬಾ ಮುತ್ತಿ ನೆತ್ತರು ಹೀರಿದುವು. ಕೈಲಾದಷ್ಟು ಜಿಗಣೆಗಳನ್ನು ಕಿತ್ತು ಹಾಕುತ್ತಾ ಚೌಕಿಮನೆಗೆ ಬಳಿಸಾರಿದನು. ಅಲ್ಲಿ ಎಲ್ಲರೂ ಗಾಢನಿದ್ದೆಯಲ್ಲಿದ್ದರು. ಇವನ ನಾಯಿಗಳಿಗೂ ಅವರ ನಾಯಿಗಳಿಗೂ ಬಹಳ ಕತ್ತಾಟವಾಗಿ ಆ ಗಲಭೆ ಸುಬ್ಬೇನಾಯ್ಕರನ್ನು ಎಬ್ಬಿಸಿತು. ಅಷ್ಟು ಹೊತ್ತಿಗೆ ರಂಗನೂ ಅವರನ್ನು ಗಟ್ಟಿಯಾಗಿ ಕೂಗಿ ಕರೆದ. ಅವರು ಎದ್ದು ಗಾಬರಿಯಿಂದ ಬಾಗಿಲು ತೆರೆದರು. ತೆರೆಯುವುದಕ್ಕೆ ಮುನ್ನವೇ ಇವನ ಪರಿಚಯವನ್ನು ಇವನ ಕೇಳಿಕೊಂಡಿದ್ದರು. ಏಕೆಂದರೆ ದೆವ್ವಗಳೂ ಹಾಗೆ ರಾತ್ರಿ ಬಂದು ಕರೆಯುವುದುಂಟಂತೆ. ದೆವ್ವವಲ್ಲವೆಂದು ನಿರ್ಧರವಾದ ಮೇಲೆಯೇ ಅವರು ಬಾಗಿಲು ತೆರೆದದ್ದು!

“ಏನೋ! ಈ ನಡುರಾತ್ರಿಯಲ್ಲಿ?”

ಯಾರೋ ಸತ್ತಿರಬೇಕೆಂದೇ ಅವರ ಭಾವನೆ!

ರಂಗ “ಏನೂ ಇಲ್ಲ. ಎಮ್ಮೆ ಹುಡುಕಿಕೊಂಡು ಬಂದೆ. ಇತ್ತಕಡೆ ಎಲ್ಲಿಯಾದರೂ ಬಂದಿತ್ತೆ? ಮೊನ್ನೆತಾನೆ ಕರುಹಾಕಿದೆ. ಅದಕ್ಕೂ ಏನೋ ಕಾಯಿಲೆ” ಎಂದ.

ಸುಬ್ಬೇನಾಯ್ಕರು “ಅಯ್ಯೋ! ನಿನ್ನ ಹುಚ್ಚು ಹಾಳಾಗ! ನಿನಗೇನು ಗ್ರಹಚಾರ ಹಿಡಿದಿದೆಯೋ ಏನೋ! ಈ ರಾತ್ರಿ ಎಮ್ಮೆ ಹುಡುಕಿಕೊಂಡು ದೆವ್ವ ತಿರುಗಿದ ಹಾಗೆ ತಿರುಗುವುದಕ್ಕೆ? ಯಾವ ಗಳಿಗೆ ಹೇಗಿರುತ್ತೆ! ರಣಪಿಶಾಚ ತಿರುಗುವ ಕಾಲ. ನಿನಗೇನೊ ಶನಿ ಅಮರಿದೆ” ಎಂದರು.

ರಂಗನನ್ನು ಒಳಗೆ ಕರೆದು ಒಂದು ‘ಎಲೆಯಡಿಕೆ’ ಕೊಟ್ಟರು. ರಂಗ ಎಲೆ ಹಾಕಿಕೊಳ್ಳುತ್ತಾ “ಎಮ್ಮೆ ಇಲ್ಲಿ ಬಂದಿತ್ತೆ?” ಎಂದ.

“ಎಂಥಾ ಎಮ್ಮೆ ಹೇಳು!”

“ಕೋಡು ಸೊಟ್ಟ; ಹಣೆ ಮೇಲೆ ದಾಸ.”

“ನೋಡು, ಮಧ್ಯಾಹ್ನದ ಹೊತ್ತು, ಒಂದೆಮ್ಮೆ ನಮ್ಮ ಅಗೋಡಿಗೆ ಬಂದಿತ್ತಂತೆ. ನಮ್ಮ ರಾಮು ಅಟ್ಟಿದಾ ಅಂತಾ ಕಾಣ್ತದೆ” ಹೀಗೆಂದವರು “ರಾಮು! ರಾಮು!” ಎಂದು ಕೂಗಿದರು. ರಾಮು ಮೈಮುರಿಯುತ್ತಾ “ಹುಂ” ಎಂದ.

“ಆ ಎಮ್ಮೆ ಅಟ್ಟಿದ್ರಲ್ಲಾ, ಎತ್ತ ಮೊಗ ಹೋಯ್ತೇ?” ಎಂದರು ಸುಬ್ಬೇನಾಯ್ಕರು.

ರಾಮು “ಕೀರಣಕೇರಿ ಕಡೆ ಹೋಯ್ತಪ್ಪಾ” ಎಂದವರು ಗೊರಕೆ ಹೊಡೆಯಲು ಆರಂಭಿಸಿದ.

ರಂಗ ಅಲ್ಲಿಂದ ಹೊರಟು ಕೀರಣಕೇರಿಯ ಕಡೆಗೆ ಹೋದ. ಅವನು ದಾರಿಯುದ್ದಕ್ಕೂ ಎಮ್ಮೆ ಹುಡುಕುತ್ತಾ ಅಲ್ಲಿಗೆ ಹೋಗುವುದರೊಳಗಾಗಿ ಬೆಳಗಾಯಿತು.

ಕೀರಣಕೇರಿ ಶಂಕರ ಶಾಸ್ತ್ರಿ ಪ್ರಸಿದ್ಧ ಜೋಯಿಸರು. ಸುತ್ತಮುತ್ತಲಿನ ಊರಿನಲ್ಲಿ ಯಾರಿಗೆ ರೋಗ ಬಂದರೂ ಮೊದಲು ಶಾಸ್ತ್ರಿ ಬಳಿಗೆ ಹೋಗಿ ‘ನಿಮಿತ್ತ’ ನೋಡಿಸುತ್ತಾರೆ. ಅವರು ಕಾಯಿಲೆಗೆ ಕೆಂಪುಚೌಡಿಯ ಕಾಟ, ಮಾರಿಯ ತೊಂದರೆ, ಪಂಜ್ರೊಳ್ಳಿಯ ಕಾಟ, ಹಲಸಿನ ಮರದ ಭೂತದ ಹೊಡೆತ ಮೊದಲಾದ ಸೂಕ್ಷ್ಮ ಕಾರಣಗಳನ್ನು ಹುಡುಕಿ, ಅದಕ್ಕೆ ಪರಿಹಾರವಾಗಿ ಕೊಳಿಯನ್ನಾಗಲಿ ಕುರಿಯನ್ನಾಗಲಿ ಕೊಡಬೇಕೆಂದೂ, ಬ್ರಾಹ್ಮಣರಿಗೆ ದಾನಕೊಡಬೇಕೆಂದು ಹೇಳಿ ಕಳುಹಿಸುವರು. ಶಂಕರಶಾಸ್ತ್ರಿಗಳ ನಿಮಿತ್ತದಿಂದ ರೋಗ ಗುಣವಾಗದ ರೋಗಿ ಮರಣೋನ್ಮುಖವಾದಾಗ ಆಸ್ಪತ್ರೆಗೆ ಓಡುತ್ತಾರೆ. ಪ್ರಾಣ ಹೋದರೆ ಡಾಕ್ಟರ ಮೇಲೆ ಭಾರ, ದೂರು, ದನಕರುಗಳು ಮಾಯವಾದರೂ ಅವರ ನಿಮಿತ್ತವೇ ಪ್ರಮಾಣ.

ಶಂಕರಶಾಸ್ತ್ರಿಗಳು ಹಾಸಿಗೆಯಿಂದೆದ್ದು ಅಂಗಲದಲ್ಲಿದ್ದ ತುಳಸಿಕಟ್ಟೆಗೆ ಕೈಮುಗಿಯುವುದಕ್ಕಾಗಿ ಜಗಲಿಗೆ ಬಂದಾಗ ರಂಗ ಅಲ್ಲಿ ಕೂತಿದ್ದವನು ಎದ್ದು ನಮ್ರತೆಯಿಂದ ನಮಸ್ಕಾರ ಮಾಡಿದ.

“ಏನು ಬಂದಿಯೊ ಇಷ್ಟು ಮುಂಜಾನೆ?” ಎಂದರು ಶಾಸ್ತ್ರಿಗಳು.

“ನನ್ನೆಮ್ಮೆಯೊಂದು ಎಲ್ಲಿ ಹೋಯ್ತೊ ಏನೊ! ಮೊನ್ನೆ ಕರು ಹಾಕಿದ್ದು. ಎಳಗರು ಗೋಳಾಡ್ತಿದೆ. ಅದಕ್ಕೇ ನಿಮಿತ್ತ ಕೇಳಿಸೋಣ ಅಂತಾ ಬಂದೆ” ಎಂದ ರಂಗ.

“ಏನೋ ಬರೀ ಕೈಲಿ ಬಂದುಬಿಟ್ಟೆಯಲ್ಲಾ? ಹಣ್ಣು ತರಕಾರಿ ಏನೂ ಇಲ್ಲವೇನೋ?”

“ಮನೆಯಿಂದ ಬರಲಿಲ್ಲ, ಸ್ವಾಮಿ. ನಿನ್ನೆ ರಾತ್ರಿಯೆಲ್ಲಾ ಎಮ್ಮೆ ಹುಡುಕಿದೆ. ಊಟ ಕೂಡ ಮಾಡಿಲ್ಲ.”

“ನಿಮಗೇನು! ಈಗಿನ ಕಾಲದವರಿಗೆ ಭಯ ಭಕ್ತಿ ನಯ ನಡತೆ ಒಂದೂ ಇಲ್ಲ. ಸರದಾರರಂತೆ ಕೈಬೀಸಿಕೊಂಡು ಬಂದುಬಿಡುತ್ತೀರಿ. ಹಿಂದೆ ನಮ್ಮ ಮನೆಯ ಮೆಟ್ಟಲು ಹತ್ತಬೇಕಾದರೆ ಏನಾದರೂ ಕೈಗಾಣಿಕೆ ತಂದೇ ತರುತ್ತಿದರು.”

“ನಾಳೆ ಅಥವಾ ನಾಡಿದ್ದು ಏನಾದರೂ ತಂದು ಕೊಡ್ತೀನಿ. ಏನಾದರೂ ಮಾಡಿ ಇವತ್ತು ನಿಮಿತ್ತ ನೋಡಿ.”

ಶಾಸ್ತ್ರಿಗಳು ಒಂದು ಅಗಲವಾದ ಮಣೆಯನ್ನು ತಂದು ಅದರ ಮೇಲೆ ಸ್ವಲ್ಪ ಅಕ್ಕಿಯ ಕಾಳು ಹಾಕಿಕೊಂಡು ಬಹಳ ಹೊತ್ತು ಭಾಗವಿಭಾಗ ಮಾಡಿದರು. ಕಡೆಗೆ ಹಾರೈಕೆಯಿಂದ ಕುಳಿತಿದ್ದ ರಂಗನ ಕಡೆ ತಿರುಗಿದರು.

“ನಿಮ್ಮ ಕಡೆ ಹುಲಿಕಾಟ ಇದೆಯೇನೋ?”

ರಂಗನ ಎದೆ ಡಬಡಬ ಎಂದು ಬಡಿದುಕೊಳ್ಳಲಾರಂಭಿಸಿತು.

“ಹೌದು, ಮೊನ್ನೆ ಚೌಕಿಮನೆಯ ನಾಲ್ಕು ದನಗಳು ಹೋದುವು.”

“ಏನೋ ನೋಡಪ್ಪಾ: ಒಂದು ಕೆಂಪು ಚೌಡಿಯ ಕಾಟ. ಅಂತು ಬದುಕಿರಬಹುದು” ಎಂದರು ಶಾಸ್ತ್ರಿಗಳು.

ಕೆಲವು ಸಾರಿ ನಿಮಿತ್ತಗಾರರು “ಜೀವ ಆಡುತ್ತಿದೆ” ಎಂದು ಹೇಳುವರು. ಒಂದುವೇಳೆ ದನ ಸತ್ತು ಕೊಳೆತು ಹುಳು ಹಿಡಿದಿದ್ದರೂ, ಅದರ ಮೇಲೆ ಜೀವವಿದ್ದ ಕ್ರಿಮಿಗಳು ಇರುವುದರಿಂದ ನಿಮಿತ್ತದಲ್ಲಿ “ಜೀವ ಆಡುತ್ತಿದೆ” ಎಂದು ಗೊತ್ತಾಯಿತು ಎಂದು ಹೇಳಿ ತಪ್ಪಿಸಿಕೊಳ್ಳುತ್ತಾರೆ.

ಶಾಸ್ತ್ರಿಗಳ ಮಾತು ಕೇಳಿ ರಂಗನಿಗೆ ಸ್ವಲ್ಪ ಧೈರ್ಯ ಉಂಟಾಯಿತು. ಅವರಿಗೆ ನಮಸ್ಕಾರಮಾಡಿ ಅಲ್ಲಿಂದ ಹೊರಟನು. ಅವರ ಮನೆಯ ಗಡಿಯನ್ನು ದಾಟಿ ಇಪ್ಪತ್ತು ಮೂವತ್ತು ಮಾರು ಹೋಗುವಷ್ಟರಲ್ಲಿಯೆ ನಾಲೂರು ನಾಗಣ್ಣಗೌಡರ ಮನೆಯಲ್ಲಿ ಕೆಲಸಕ್ಕಿದ್ದ ಸುಬ್ಬ ಎದುರಾಗಿ ಬಹಳ ವೇಗದಿಂದ ಬರುತ್ತಿದ್ದ.

ರಂಗನನ್ನು ಕಂಡೊಡನೆ ನಿಂತು “ಎಲ್ಲಿಗೆ ಹೋಗಿದ್ದೆಯೋ ಇಷ್ಟು ಹೊತ್ತಾರೆ?” ಎಂದನು.

“ನನ್ನೆಮ್ಮೆಯೊಂದು ಎಲ್ಲಿ ಹೋಯ್ತೋ ಏನೋ. ರಾತ್ರಿಯೆಲ್ಲಾ ಹುಡುಕಿದೆ, ಸಿಕ್ಕಲಿಲ್ಲ. ಅದಕ್ಕೆ ನಿಮಿತ್ತ ನೋಡಿಸೋಕೆ ಬಂದಿದ್ದೆ. ನಿಮ್ಮ ಕಡೆ ಎಲ್ಲಾದರೂ ಬಂದಿದೆಯೇನು ಮಾರಾಯ?”

“ಹೌದು ಒಂದೆಮ್ಮೆ ಬಂದದೆಯಪ್ಪಾ. ಗೌಡರ ಕೊಟ್ಟಿಗೆಯಲ್ಲಿ ಕಟ್ಟಿದ್ದಾರೆ; ದೊಡ್ಡಿಗೆ ಹೊಡೆಯುತ್ತಾರಂತೆ. ನಿನ್ನ ಗದ್ದೆಯನ್ನೆಲ್ಲಾ ಮೇದು ಬಹಳ ನಷ್ಟಮಾಡಿದೆ?”

“ಸೊಟ್ಟ ಕೋಡಿನ ಎಮ್ಮೆ? ಹಣೆ ಮೇಲೆ ದಾಸ?”

“ನಾನೂ ಸರಿಯಾಗಿ ನೋಡಿಲ್ಲಪ್ಪಾ. ನಮ್ಮ ಗಡಿಬಿಡಿಯೇ ನಮಗೆ. ಗೌಡರ ಕಿರಿಮಗ ವಾಸಯ್ಯಗೆ ಪೂರಾ ಕಾಯಿಲೆ. ಏನು ಉಳಿಯೋದೆ ನಂಬಿಕೆಯಿಲ್ಲ. ಅದಕ್ಕೇ ನಿಮಿತ್ತ ನೋಡಿಸುವುದಕ್ಕೆ ಶಾಸ್ತ್ರಿಗಳಿಗೆ ಚೀಟಿ ಕೊಟ್ಟು ನನ್ನ ಕಳಿಸಿದ್ದಾರೆ.”

ಸುಬ್ಬ ಬೇಗಬೇಗನೆ ಹೋದ. ರಂಗ ತನ್ನ ಎಮ್ಮೆಯನ್ನು ಎಲ್ಲಿ ದೊಡ್ಡಿಗೆ ಹೊಡೆಯಿಸುತ್ತಾರೆಯೋ ಎಂದು ಚಿಂತಿಸುತ್ತಾ ನಾಲೂರಿಗೆ ಹೋದ. ತನ್ನ ಎಮ್ಮೆಯನ್ನು ಕಟ್ಟಿಕೊಂಡಿದ್ದಾರೆ ಎಂದೂ, ಅದು ಸುಮ್ಮನೆ ಹಾಲು ಕೊಡದೆ ಒದೆಯುತ್ತಿದ್ದುದರಿಂದ ಹಿಂದಿನ ಎರಡು ಕಾಲುಗಳನ್ನೂ ಕಟ್ಟಿ ಹಾಲು ಕರೆದರೆಂದೂ ನಾಲೂರಿಗೆ ಹೋದ ರಂಗನಿಗೆ ಗೊತ್ತಾಯಿತು. ನಾಗಣ್ಣಗೌಡರು ಸಾಹುಕಾರರು, ಪಟೇಲರು. ಆದ್ದರಿಂದ ಬಡ ರಂಗನು ಒಂದು ಪಡಿ ಮಾತನ್ನೂ ಆಡಲಿಲ್ಲ. ಆಡಲು ಧೈರ್ಯವೂ ಇರಲಿಲ್ಲ.

ನಾಲೂರು ನಾಗಣ್ಣಗೌಡರ ಮನೆಗೆ ವಾಸುವಿನ ಕಾಯಿಲೆ ನೋಡುವುದಕ್ಕೆ ಬಹಳ ಜನ ನಂಟರು ಬಂದಿದ್ದರು. ಮನೆಯಲ್ಲಿ ತುಂಬಾ ಗಲಿಬಿಲಿ. ಅವರ ಹಿರಿಯ ಮಗ ಓಬಯ್ಯಗೌಡರಿಗೆ ಬಹಳ ಓಡಾಟ. ನಾಗಣ್ಣಗೌಡರು ಮಗನ ಹಾಸಿಗೆಯ ಬಳಿ ಕುಳಿತು ತಲೆಯಮೇಲೆ ಕೈಹೊತ್ತುಕೊಂಡು ಕೊರಗುತ್ತಿದ್ದರು. ವಾಸು ಏಳೆಂಟು ವರ್ಷದ ಹುಡುಗ. ಅವನಲ್ಲಿ ಎಲ್ಲರಿಗೂ ಪ್ರೀತಿ. ಅವನಿಂದ ಮನೆತನ ಬೆಳೆಯುವುದೆಂದು ಎಲ್ಲರಿಗೂ ಹಾರೈಕೆ. ಈಗ ಅದೆಲ್ಲಾ ಸಿಡಿದೊಡೆದು ಕನಸಿನಂತಾಗುವ ಕಾಲ. ಎಲ್ಲರಿಗೂ ಉದ್ವೇಗ. ಯಾರಲ್ಲಿಯೂ ಶಾಂತಿಯ ಸುಳಿವೇ ಇರಲಿಲ್ಲ.

ರಂಗ ಮನೆಗೆ ಹೋಗಿ ಕಿರುಜಗಲಿಯ ಮೇಲೆ ಕುಳಿತಿದ್ದ ಬಡಜನರ ಗುಂಪಿನಲ್ಲಿ ಕುಳಿತುಕೊಂಡ. ಜಗಲಿಯಮೇಲೆ ವಾಸು ಮಲಗಿದ್ದ. ಸುತ್ತಲೂ ನಂಟರ ಗುಂಪು. ವಾಸು ಆಗಾಗ್ಗೆ ಬಾಯಲ್ಲಿ ಏನೇನೋ ಹೇಳುವುದು, ತನ್ನ ಸತ್ತ ತಾಯಿಯನ್ನು ಕರೆಯುವುದು, ಹೀಗೆ ಮಾಡುತ್ತಿದ್ದನು. ಅಲ್ಲಿ ಕುಳಿತು ಇದನ್ನೆಲ್ಲಾ ನೋಡುತ್ತಿದ್ದ ರಂಗನಿಗೆ ಘೋರಾಂಧಕಾರದಲ್ಲಿ ತಾಯಿಯನ್ನು ನೆನೆದು ಕೂಗುತ್ತಿದ್ದ ಬಡ ಎಮ್ಮೆಯ ಕರುವಿನ ನೆನಪಾಯಿತು. ಅವನ ಕಣ್ಣೆದುರಿನಲ್ಲಿ ಆ ಮೂಗು ಪ್ರಾಣಿಯ ಕನಿಕರಣೀಯವಾದ ಚಿತ್ರ ಮಿಂಚಿತು. ಅದರ ಆರ್ತನಾದವೂ ಎಲ್ಲಿಯೋ ಬಹು ದೂರದಲ್ಲಿ ಕೇಳಿಸಿದ ಹಾಗಾಯಿತು. ಅವನ ಮನಸ್ಸಿಗೆ ತನ್ನೆದುರಿನಲ್ಲಿದ್ದ ದುಃಖದ ಚಿತ್ರಕ್ಕೂ, ತಾನು ಹಿಂದಿನ ರಾತ್ರಿ ತನ್ನ ಕೊಟ್ಟಿಗೆಯಲ್ಲಿ ಕಂಡ ಚಿತ್ರಕ್ಕೂ ಯಾವ ವ್ಯತ್ಯಾಸವೂ ಇಲ್ಲವೆಂದು ತೋರಿತು. ಅವನ ಕಣ್ಣಿನಲ್ಲಿ ನೀರು ತುಂಬಿತು. ಅಲ್ಲಿದ್ದವರ ಶೋಕವೆಲ್ಲಾ ಒಂದು ಜೀವದ ಯಾತನೆಗಾಗಿತ್ತು. ರಂಗನದು ಮಾತ್ರ ಎರಡು ಜೀವಗಳ ನೋವಾಗಿತ್ತು.

ಓಬಯ್ಯಗೌಡರು ಹೊರಗೆ ಹೋಗುವ ಸಮಯವನ್ನೇ ಕಾದು ರಂಗ ತನನ ಎಮ್ಮೆಯನ್ನು ಬಿಟ್ಟುಕೊಡಬೇಕೆಂದು ಅವರನ್ನು ಬೇಡಿಕೊಂಡ. ಅವರು ಸಿಡುಕಿನಿಂದ ದೊಡ್ಡಿಗೆ ಹೊಡೆಯಿಸುತ್ತೇನೆಂದು ಗರ್ಜಿಸಿದರು. ರಂಗ ಅದರ ಎಳೆಗರು ಸಾಯುತ್ತಿದೆಯೆಂದು ಕಣ್ಣಿನಲ್ಲಿ ನೀರುತಂದ. ಓಬಯ್ಯಗೌಡರು ಸ್ವಲ್ಪವೂ ಎದೆಗರಗಲಿಲ್ಲ. ಪೈರನ್ನು ಮೇಯಿಸಿದ ತಪ್ಪಿಗಾಗಿ ಶಿಕ್ಷೆಯನ್ನು ಅನುಭವಿಸಬೇಕೆಂದು ಹೇಳಿಬಿಟ್ಟರು. ರಂಗ ಅಷ್ಟಕ್ಕೆ ಬಿಡಲಿಲ್ಲ. ಇನ್ನು ಮುಂದೆ ಎಮ್ಮೆಯನ್ನು ಹಾಗೆ ಬಾಡುವುದಿಲ್ಲವೆಂದೂ, ತನ್ನಿಂದ ತಪ್ಪಾಯಿತೆಂದೂ ಬಹಳವಾಗಿ ಮೊರೆಯಿಟ್ಟ. ಓಬಯ್ಯಗೌಡರಿಗೆ ತಾಳ್ಮೆತಪ್ಪಿ ಗಟ್ಟಿಯಾಗಿ ಬೈದು ಗದರಿಸತೊಡಗಿದರು.

ಇವರ ಗಲಾಟೆ ನಾಗಣ್ಣಗೌಡರಿಗೂ ಕೇಳಿಸಿತು. ಅವರು ರಂಗನನ್ನು ಕರೆದು ಕೇಳಿದರು.

ರಂಗ ಎಲ್ಲವನ್ನೂ ವಿಶದವಾಗಿ ಹೇಳಿದ. ನಾಗಣ್ಣಗೌಡರು ಸಾಯುತ್ತಿರುವ ಎಳಗರುವಿನ ಸಮಾಚಾರವನ್ನು ಕೇಳಿ ತನ್ನ ಮಗನ ಕಡೆ ನೋಡಿ ಕಂಬನಿಗರೆದರು.

ವಾಸು ಇದ್ದಕಿದ್ದ ಹಾಗೆ “ಪಾಪ, ಎಳೆಗರು! ಎಮ್ಮೆ ಹೊಡಕೊಂಡು ಹೋಗೋ ನೀನು, ರಂಗಾ” ಎಂದ.

ರಂಗ “ಆಗಲಿ ನನ್ನೊಡನೆಯ! ನನ್ನ ದೇವರು!” ಎಂದು ಕಣ್ಣೀರು ಸುರಿಸಿ, ಮನದಲ್ಲಿಯೆ “ದೇವರೇ ಇವರನ್ನು ಉಳಿಸು” ಎಂದುಕೊಂಡ.

ನಾಗಣ್ಣಗೌಡರು ಆಳೊಬ್ಬನಿಗೆ “ಇವನೆಮ್ಮೆ ತೋರಿಸೋ; ಹೊಡಕೊಂಡು ಹೋಗಲಿ” ಎಂದು ವಾತ್ಸಲ್ಯಪೂರಿತವಾದ ದನಿಯಿಂದ ನುಡಿದರು.

ರಂಗ ಹೊರಡುವಾಗಲೆ ಜೋಯಿಸರ ಮನೆಗೆ ಹೋಗಿದ್ದ ಸುಬ್ಬ ಬಂದು, ಅವರು ಮಂತ್ರಿಸಿಕೊಟ್ಟ ವಿಭೂತಿಯನ್ನು ನಾಗಣ್ಣಗೌಡರ ಕೈಲಿ ಕೊಟ್ಟ. ಗೌಡರು ಅದನ್ನು ವಾಸುವಿನ ಹಣೆಗೆ ಹಚ್ಚಿ, ಬಾಯಿಗೂ ಸ್ವಲ್ಪ ಹಾಕಿದರು. ರಂಗನು ಗೌಡರಿಗೆ ನಮಸ್ಕಾರ ಮಾಡಿ, ವಾಸೂಗೂ ಮನಸ್ಸಿನಲ್ಲಿಯೆ ಪುಜ್ಯಬುದ್ದಿಯಿಂದ ವಂದಿಸಿ, ತನ್ನೆಮ್ಮೆ ಹೊಡೆದುಕೊಂಡು ಹೊರಟ. ಎಮ್ಮೆಯೂ ಕರುವನ್ನು ನೆನೆದುಕೊಂಡು ಕೆರೆಯೂರಿಗೆ ಬೇಗ ಬೇಗನೆ ಹೊರಟಿತು. ರಂಗನು ಹಸಿವೆಯಿಂದ ಬಳಲಿ ಬೆಂಡಾಗಿದ್ದರೂ ಏನೋ ಒಂದು ಸಂತೋಷ ಅವನ ಎದೆಯಲ್ಲಿ ಸುಳಿದಾಡಿತು.

ರಂಗನು ಎಮ್ಮೆಯೊಡನೆ ತನ್ನೂರಿಗೆ ಹೋಗುವುದರೊಳಗಾಗಿ ನಡು ಹಗಲಾಗಿತ್ತು. ಎಮ್ಮೆಯನ್ನು ಕೊಟ್ಟಿಗೆಗೆ ಅಟ್ಟಿಕೊಂಡು ಹೋಗಿ ಕಟ್ಟಿದನು. ಕರು ಮೂಲೆಯಲ್ಲಿ ಬಿದ್ದಿತ್ತು. ಉಸಿರಾಡುವುದರಿಂದ ಮಾತ್ರವೆ ಅದಕ್ಕೆ ಅದಕ್ಕೆ ಜೀವವಿದೆ ಎಂದು ತೋರಿತು. ಕಣ್ಣು ಬಿಳುಪೇರಿದ್ದುವು. ಕರುವನ್ನು ಮೆಲಗೆ ಎತ್ತಿಕೊಂಡು ಬಂದು ಮೊಲೆಯುಣ್ಣುವಂತೆ ಮಾಡಿದನು, ಕರುವಿಗೆ ನಿಲ್ಲುವ ತ್ರಾಣವಿರಲಿಲ್ಲ. ಅದು ಏನನ್ನೂ ತಿಂದಿಲ್ಲವೆಂದು ನಾಗಿಯೂ ಹೇಳಿದಳು. ಕರುವನ್ನು ಹಿಡಿದು ಕೊಂಡಿದ್ದಾಗ ಎರಡು ಮೂರಾವರ್ತಿ ಮೊಲೆಯನ್ನು ಚಪ್ಪರಿಸಿತು. ರಂಗ ಕೈಬಿಟ್ಟ ಕೂಡಲೆ ದೊಪ್ಪನೆ ಕೆಳಗೆ ಬಿದ್ದುಬಿಟ್ಟಿತು. ಎಮ್ಮೆ ಅದನ್ನು ಮೂಸಿ ನೆಕ್ಕಿತು.

ಅದೇ ಸಮಯದಲ್ಲಿ ನಾಲೂರು ನಾಗಣ್ಣಗೌಡರು ಮಗನ ಹಣೆಯ ಮೇಲೆ ಮರುಕದಿಂದ ಕೈಯ್ಯಾಡುತ್ತಿದ್ದವರು ಜ್ವರ ಇಳಿದುದನ್ನು ನೋಡಿ ಆಶ್ಚರ್ಯದಿಂದ ಹಿಗ್ಗಿ ಅಲ್ಲಿದ್ದವರಿಗೆ ಹೇಳಿದರು.

“ನೋಡಿದರೋ ನಮ್ಮ ಜೋಯಿಸರ ವಿಭೂತಿ ಮಹಿಮೆ? ಹುಡುಗಗೆ ಜ್ವರ ಬಿಟ್ಟೇ ಹೋಗದೆ!”

ದೂರದ ಕೆರೆಯೂರಿನಲ್ಲಿ ತನ್ನ ಮುದ್ದು ಕರುವನ್ನು ಮೂಸಿ ನೆಕ್ಕುತ್ತಿದ್ದ ಮೂಗುಪ್ರಾಣಿಯ ಆನಂದದ ಆಶೀರ್ವಾದವಿಭೂತಿ ಅದನ್ನಾಲಿಸಿ ಶ್ರೀಮನ್ಮೂಕವಾಗಿತ್ತು!