ಗೋಪಾಲಯ್ಯ, ಮಾಧವರಾಯರು, ನಾನು, ಮುವರೂ ಮನೆಯ ಚಾವಡಿಯಲ್ಲಿ ಕೂತುಕೊಂಡು ಮಾತಾಡುತ್ತಿದ್ದೆವು. ಕ್ಯಾಲಿಫೋರ್ನಿಯದ ವಿದ್ಯಾಭ್ಯಾಸ ಪದ್ಧತಿ, ಅಮೇರಿಕದ ಐಶ್ವರ್ಯ, ಭಾರತೀಯರ ಗೋಳು, ಆಧುನಿಕರ ನಾಗರಿಕತೆ-ಮೊದಲಾದ ವಿಚಾರಗಳು  ಒಂದನ್ನೊಂದು ಹಿಂಬಾಲಿಸಿ ಕ್ರಮವಾಗಿ ಅಳಿಸಿಹೋದುವು, ನೀರಿನ ಮೇಲೆ ಬರೆದ ಚಿತ್ರಗಳಂತೆ.

ಇದ್ದಕಿದ್ದ ಹಾಗೆ “ಎಲ್ಲಿ, ಆ ಕತೆ ಹೇಳಿ!” ಎಂದರು ಗೋಪಾಲಯ್ಯ ಮಾಧವರಾಯರನ್ನು ಕುರಿತು.

“ಯಾವ ಕತೆ?” ಎಂದರು ಮಾಧವರಾಯರು.

“ಅದೇ, ಆ ‘ಆರಾಣೆ ಮೂರುಕಾಸಿ’ನ ಕತೆ; ಅಂದು ನೀವು ಹೇಳಿದ್ದಿರಲ್ಲ ನನಗೆ.” ನನ್ನ ಕಡೆಗೆ ಕೈತೋರಿಸಿ “ಇವರು ನಿಮ್ಮ ಬಾಯಿಂದಲೆ ಕೇಳಬೇಕಂತಪ್ಪಾ ಅದನ್ನು; ಹೇಳಿ. ಎಷ್ಟಂದರೂ ಕತೆಗಾರರು. ಒಂದು ಕತೆಗೆ ಸಾಮಗ್ರಿಯಾದರೂ ದೊರಕಬಹುದು” ಎಂದರು ಗೋಪಾಲಯ್ಯ.

ಮಾಧವರಾಯರು ಅಂದರೆ ನಮಗೆಲ್ಲಾ ತುಂಬ ಸಲಿಗೆ. ನಮಗೆ ಮಾತ್ರವೇ ಅಲ್ಲ, ಅವರಲ್ಲಿ ಎಲ್ಲರಿಗೂ ಸಲಿಗೆ. ಅವರು ವಿದ್ಯಾಭ್ಯಾಸದ ಇಲಾಖೆಯಲ್ಲಿ ಉನ್ನತ ಪದವಿಯಲ್ಲಿರುವವರು. ಆದರೂ ಬಹಳ ಸರಳಸ್ವಭಾವ ಅವರದು. ಎಂತಹ ಗಂಭೀರಮುಖದವನಾದರೂ ಅವರೊಡನೆ ಸೇರಿದರೆ ಅಳ್ಳೆಬಿರಿಯುವಯನಕ ನಗದೆ ಇರಲಾರ. ಈ ‘ಆರಾಣೆ ಮೂರುಕಾಸಿ’ನ ಕತೆ ಅವರ ಜೀವಮಾನದಲ್ಲಿ ಜರುಗಿದ್ದು. ಅತ್ಯಾಶ್ಚರ್ಯಕರವಾದ ಆ ಸಂಗತಿ ನಡೆದ ಮೇಲೆ ನಮ್ಮ ಅಧೀನದ್ದಲ್ಲದ ದೈವೇಚ್ಛೆಯಲ್ಲಿ ಅವರಿಗೆ ಬಹಳ ನಂಬಿಕೆ ಹುಟ್ಟಿತಂತೆ. ಕತೆ ಹೇಳುತ್ತಾ  ಹೇಳುತ್ತಾ ಎಷ್ಟೋ ವಿಚಾರ ಹೇಳಿದರು. ಎಷ್ಟೋ ನೀತಿಗಳನ್ನೂ ಮನಸ್ಸಿನ ಗುಟ್ಟುಗಳನ್ನೂ ಹೊರಗೆಡಹಿದರು. ಆದರೆ ಅವುಗಳೆಲ್ಲ ಬಹು ಬೆಲೆಯುಳ್ಳವುಗಳಾದರೂ ಅಪ್ರಸ್ತುತವೆಂದು ನಡುವೆ ಸೇರಿಸದೆ ಬಿಡಬೇಕಾಯಿತು. ಮಾಧವರಾಯರು ಹೇಳಿದರು:

ಆ ಕತೆಗೆ ತಳಹದಿ ಸಿಪಾಯಿ ದಂಗೆಯ ಕಾಲ. ನನಗೆ ಸರಿಯಾಗಿ ನೆನಪಿಲ್ಲ. ಆದರೂ ಮುಖ್ಯ ವಿಷಯಗಳನ್ನೆಲ್ಲ ಬಿಡದೆ ಹೇಳುತ್ತೇನೆ. ನಮ್ಮ ತಾತ ಹೈದರಾಬಾದು ಸಂಸ್ಥಾನದಲ್ಲಿ ಕರ್ನೂಲು ನವಾಬರ ಕೈಕೆಳಗೆ ಅಧಿಕಾರಿಗಳಾಗಿದ್ದರಂತೆ. ನವಾಬರ ಜಹಗೀರಿಯಲ್ಲಿಯೆ ಬಹಳ ಜಮೀನು ಸಂಪಾದನೆ ಮಾಡಿದ್ದರಂತೆ. ನಮ್ಮ ಮನೆತನಕ್ಕೂ ನವಾಬರ ಮನೆತನಕ್ಕೂ ತುಂಬಾ ಕೇವಲ. ನವಾಬರಾದರೂ ಜಾತಿಯಲ್ಲಿ ಸಂಪೂರ್ಣವಾಗಿ ಮಹಮ್ಮದೀಯರಲ್ಲ. ಹಿಂದೂ ಮಹಮ್ಮದೀಯ ಮತಗಳಿಗೆ ಮಧ್ಯಮತದವರು. ಅವರಿಗೆ ‘ಸಿಂಗ’ ಎಂಬುದು ಮನೆತನದ ಬಿರುದು.

ನವಾಬರ ಮನೆತನಕ್ಕೆ ಕರ್ನೂಲಿನಲ್ಲಿ ಅನೇಕ ಶ್ರೀಮಂತರು ಸಾಲ ಕೊಟ್ಟಿದ್ದರು. ನಮ್ಮ ತಂದೆಯೂ ಸಾಲ ಕೊಟ್ಟಿದ್ದರು. ಎಷ್ಟು ಕೊಟ್ಟಿದ್ದರು ಏನು ಎಂಬುದಕ್ಕೆ ದಾಖಲೆಗಳೇನೂ ಇಲ್ಲ. ಅಂತೂ ಸುಮಾರು ನಾಲ್ವತ್ತು ಸಾವಿರ ರೂಪಾಯಿಗಳಷ್ಟು ಎಂದು ವದಂತಿ.

ನನಗೆ ಹನ್ನೊಂದು ವರ್ಷವಾಗಿತ್ತು. ಆಗ ನಮ್ಮ ತಂದೆ ತೀರಿಕೊಂಡರು. ಅವರು ಹೋದಮೇಲೆ ನಮ್ಮ ಮನೆತನಕ್ಕೆ ತುಂಬಾ ಕಷ್ಟಕಾಲ ಒದಗಿತು. ನಾನು ಹೇಗೆ ವಿದ್ಯಾಭ್ಯಾಸ ಮಾಡಿದೆ. ಹೇಗೆ ಈ ಉನ್ನತ ಪದವಿಗೆ ಬಂದೆ, ಎಂಬ ವಿಚಾರಗಳು ಈಗ ಬೇಡ. ಈ ಕತೆಗೆ ಅವು ಅವಶ್ಯಕವೂ ಇಲ್ಲ.

ಆಗಲೇ ಸರ್ಕಾರದ ಬದಲಾವಣೆಯ ಗಲಿಬಿಲಿ ಬಂದ್ದು. ಈಸ್ಟ ಇಂಡಿಯಾ ಕಂಪೆನಿ ಬ್ರಿಟಿಷ್ ಸರ್ಕಾರಕ್ಕೆ ಸರ್ವ ಹಕ್ಕನ್ನೂ ವಹಿಸಿತು. ಆಗ ಹೈದರಾಬಾದು ಸಂಸ್ಥಾನಕ್ಕೆ ಸೇರಿದ್ದ ಕೆಲವು ಪ್ರಾಂತಗಳು ಬ್ರಿಟಿಷ್ ಸರ್ಕಾರಕ್ಕೆ ಕೊಡಲ್ಪಟ್ಟುವು. ದತ್ತಮಂಡಲವೆಂದು ಕರೆಯಲ್ಪಡುವ ಆ ಪ್ರಾಂತಗಳಲ್ಲಿ ಕರ್ನೂಲು ಒಂದು. ಅಂದರೆ ನವಾಬರ ಜಹಗೀರಿಯೂ ಇಂಗ್ಲೀಷರ ಆಡಳಿತಕ್ಕೆ ಎಳೆಯಲ್ಪಟ್ಟಿತು.

ಹೀಗಿರಲು ಈ ಕತೆ ನಡೆಯಲು ಸಹಾಯಮಾಡಿದ ಒಂದು ಸಂಗತಿ ಜರುಗಿತು. ಗೌರ್ನಮೆಂಟಿನವರು ಕರ್ನೂಲಿನಲ್ಲಿ ಯಾವುದೋ ಒಂದೂ ಆಫೀಸಿಗಾಗಿ ಸ್ವಲ್ಪ ಜಾಗವನ್ನು ನವಾಬನಿಂದ ಕೇಳಿದರು. ಆ ಸ್ಥಳವನ್ನು ಪಡೆಯಬೇಕೆಂದು ಕರ್ನೂಲಿನಲ್ಲಿ ಅನೇಕರಿಗೆ ಕುತೂಹಲವಿತ್ತು. ಸರ್ಕಾರದ ಪರವಾಗಿ ಕೆಲಸ ಮಾಡುತ್ತಿದ್ದ ಒಬ್ಬ ವಕೀಲನೂ ನವಾಬನಿಂದ ಹಿಂದೆಯೇ ಆ ಸ್ಥಳವನ್ನು ಬೆಲೆಗೆ ಕೇಳಿದ್ದನು. ನವಾಬನು ಬುದ್ಧಿಯಲ್ಲಿ ಸ್ವಲ್ಪ ಚುರುಕಿಲ್ಲದವನೆಂದು ತಿಳಿದ ಆ ವಕೀಲನು ಆ ಭೂಮಿಯನ್ನು ಎರಡು ಸಾವಿರ ರೂಪಾಯಿಗಳಿಗೆ ಎಗರಿಸಬೇಕೆಂದು ಕಾದಿದ್ದನು. ಆದರೆ ಸರಕಾರದವರು ಆ ಸ್ಥಳವನ್ನು ಹದಿನೈದು ಸಾವಿರ ರೂಪಾಯಿಗಳಿಗೆ ಕೇಳಿದರು. ನವಾಬನು ಕೊಡಲು ಒಪ್ಪಿದನು. ವಕೀಲನಿಗೆ ಅವನ ಮೇಲೆ ದ್ವೇಷ ಹುಟ್ಟಿತು.

ನವಾಬನ ಭೂಮಿಯನ್ನು ಸರ್ಕಾರದವರು ತೆಗೆದುಕೊಳ್ಳಬೇಕಾದರೆ ಕರಾರು ಆಗಬೇಕಷ್ಟೆ. ಅದಕ್ಕಾಗಿ ನವಾಬನ ಮನೆತನದ ದಾಖಲೆ ಪತ್ರಗಳನ್ನು ಸರ್ಕಾರದವರು ತೆಗೆದುಕೊಂಡು, ಕಾನೂನಿಗೆ ಸರಿಯಾದ ಕರಾರನ್ನು ತಯಾರುಮಾಡಲೋಸುಗ, ನವಾಬನ ದ್ವೇಷಿಯಾದ ವಕೀಲನ ಕೈಲಿ ಕೊಟ್ಟರು. ಆ ವಕೀಲನು ದಾಖಲೆಗಳನ್ನು ನೋಡುತ್ತಾ ಇರುವಾಗ ಆಗಿನ ನವಾಬನು ಹಿಂದಿನ ನವಾಬನ ಧರ್ಮಪತ್ನಿಯ ಮಗನಲ್ಲ ಎಂಬುದನ್ನು ತಿಳಿದನು. ತನಗೆ ಮುಯ್ಯಿ ತೀರಿಸಿಕೊಳ್ಳಲು ತಕ್ಕ ಸಮಯ ದೊರಕಿತೆಂದು ತಿಳಿದು, ಅವನು ಆಗಿನ ನವಾಬನು ಜಹಗೀರಿಗೆ ಬಾಧ್ಯಸ್ಥನಲ್ಲವೆಂದು ಸರ್ಕಾರಕ್ಕೆ ತಿಳಿಸಿದನು. ಕೂಡಲೆ ಸರ್ಕಾರವು ಸಮಸ್ತ ಜಹಗಿರಿಯನ್ನೂ ಅದರ ಐಶ್ವರ್ಯದೊಡನೆ ನವಾಬನಿಂದ ಕಿತ್ತುಕೊಂಡಿತು. ಅಲ್ಲದೆ ಅದಕ್ಕೆ ಬಾಧ್ಯಸ್ಥರಿದ್ದರೆ ಅದನ್ನು ಕೋರ್ಟು ಮುಖಾಂತರ ಅವರು ಸಾಧಿಸಿ ಜಹಗಿರಿಯನ್ನು ಪಡೆಯಬೇಕೆಂದು ತೀರ್ಮಾನಮಾಡಿ ನೋಟೀಸು ಕೊಟ್ಟಿತು. ಲಕ್ಷಾಧಿಕಾರಿಯಾದ ನವಾಬನು ಕಣ್ಣು ಮುಚ್ಚಿ ಬಿಡುವುದರಲ್ಲಿಯೆ ಭಿಕ್ಷಾಧಿಕಾರಿಯಾದನು.

ಅತನು ಮೋಟಾರುಗಾಡಿಯಲ್ಲಿಯೂ ಅಂದರೆ ಸಾರೋಟುಗಳಲ್ಲಿಯೂ ಕುಳಿತುಕೊಂಡು ಹಾರಾಡುತ್ತಿದ್ದ ವೈಭವವನ್ನು ನಾನೇ ಕಣ್ಣಾರೆ ಕಂಡಿದ್ದೆ. ಆತನು ಐಶ್ವರ್ಯದಲ್ಲಿ ಮುಳುಗಿ ತೇಲುವುದನ್ನು ನೋಡಿ ವಿಸ್ಮಯಪಡುತ್ತಿದೆ. ಅಂಥ ಸಿಂಗನಿಗೆ ಈಗ ತನ್ನ ಘೋಷಾ ಹೆಂಡತಿಯೊಡನೆಯೂ ಮಕ್ಕಳೊಡನೆಯೂ ಬೀದಿಗಳಲ್ಲಿ ಬೇಡುವ ಕಾಲ ಬಂತು. ಅವನ ಗೆಳೆಯರೆಲ್ಲರೂ ಸಂಪತ್ತಿನೊಂದಿಗೇ ತೊಲಗಿದರು. ತಾನೇ ಹಿಂದೆ ಆಳುತ್ತಿದ್ದ ಕರ್ನೂಲಿನಲ್ಲಿ ಅವನಿಗೆ ಗಂಜಿ ದೊರಕುವುದು ಕೂಡ ಕಠಿನವಾಯಿತು. ಮಲಗುವುದಕ್ಕೆ ತಾವಿಲ್ಲ; ಹೊದೆಯುವುದಕ್ಕೆ ಸರಿಯಾದ ಬಟ್ಟೆಯಿಲ್ಲ. ಬಂದಿತನಿಗೆ ಈ ದುರವಸ್ಥೆ.

ಜಹಗಿರಿಯಲ್ಲಿ ಜಮೀನುದಾರರಾಗಿದ್ದವರೆಲ್ಲರೂ ಸರ್ಕಾರಕ್ಕೆ ಅರ್ಜಿ ಹಾಕಿಕೊಂಡು ತಮ್ಮ ತಮ್ಮ ಹಕ್ಕನ್ನು ಸ್ಥಿರಪಡಿಸಿಕೊಂಡು. ಆದರೆ ಜಹಗಿರಿದಾರನಾದ ನವಾಬನಿಗೆ ಮಾತ್ರ ಅದರ ಹಕ್ಕೆ ತಪ್ಪಿತು. ಇನ್ನು ನಮ್ಮ ತಂದೆ ಅವನಿಗೆ ಕೊಟ್ಟ ಸಾಲವಾದರೂ ಬರುವುದು  ಹೇಗೆ? ನಾನಂತೂ ಹುಡುಗ; ನನಗೇನು ಗೊತ್ತು? ಮನೆಯವರು ಕೊಟ್ಟ ಸಾಲದ ಆಸೆ ಬಿಟ್ಟರು. ಲೆಕ್ಕಪತ್ರ ಸಿಕ್ಕದೆ ಸಾವಿರದ ಚಿಲ್ಲರೆ ರೂಪಾಯಿಗಳಿಗೆ ಮಾತ್ರ ಸರ್ಕಾರವು ಹೊಣೆಯಾಯಿತು.

ಹೀಗಿರಲು ನವಾಬನಿಗೆ ಸ್ನೇಹಿತನಾಗಿದ್ದ ಒಬ್ಬ ಪುಣ್ಯಾತ್ಮನಾದ ವಕೀಲನು ಸಹಾಯಮಾಡುವುದಾಗಿ ಒಪ್ಪಿಕೊಂಡು ಸರ್ಕಾರಕ್ಕೆ ನವಾಬನ ಪರವಾಗಿ ಅರ್ಜಿ ಹಾಕಿದನು. ಅದು ಕೋರ್ಟಿನಲ್ಲಿ ನವಾಬನಿಗೆ ವಿರೋಧವಾಗಿ ತೀರ್ಪವಾಯಿತು. ಪುನಃ ಮೇಲಿನ ಕೋರ್ಟಿಗೆ ಅಪೀಲು ಮಾಡಿದರು. ಹೀಗೆ ಕೋರ್ಟಿನಿಂದ ಕೋರ್ಟಿಗೆ ಅಲೆಯತೊಡಗಿದರು.

ಹತ್ತು ಹನ್ನೆರಡು ವರ್ಷಗಳು ಸರಿದುಹೋದುವು. ನಾನು ಮದರಾಸಿನಲ್ಲಿ ಎಂ.ಎ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ, ಬೆಂಗಳೂರಿಗೆ ಬಂದೆ. ಅಲ್ಲಿ ವಿದ್ಯಾಭ್ಯಾಸದ ಇಲಾಖೆಯಲ್ಲಿ ತಿಂಗಳಿಗೆ ಒಂದು ನೂರು ರೂಪಾಯಿಗಳ ನೌಕರಿ ಲಭಿಸಿತು. ನಾನು ಭಾರವಹಿಸಿದ್ದ ಒಬ್ಬ ಸಂಸಾರಿಯಾದೆ.

ಇಲ್ಲಿಂದ ಈ ಕಥೆಯ ಹೊಸ ಅಧ್ಯಾಯ ಪ್ರಾರಂಭವಾಗುತ್ತದೆ. ನಾನು ಕಾಯಾರ್ಥವಾಗಿ ಒಂದು ದಿನ ಕರ್ನೂಲಿಗೆ ಹೋದೆ. ಅಲ್ಲಿ ಒಬ್ಬ ಲಾಯರ ಹತ್ತಿರ ಏನೋ ಕೆಲಸವಿತ್ತು. ನಾನು ಅವರ ಆಫೀಸಿನಲ್ಲಿ ಕುಳಿತಿದ್ದೆ. ಅಷ್ಟು ಹೊತ್ತಿಗೆ ಭಿಕ್ಕುಕನೊಬ್ಬನು ಒಳಗೆ ಬಂದ. ಅವನು ಉಟ್ಟಿದ್ದ ಚಿಂದಿಬಟ್ಟೆಗಳಿಂದ ಅಲ್ಲದೆ ಬೇರೆ ಯಾವುದರಿಂದಲೂ ಅವನು ಭಿಕ್ಷುಕನೆಂದು ಬಗೆಯಲಾಗುತ್ತಿರಲಿಲ್ಲ. ಮೊದಲು ನಾನು ತಿರುಕನೊಬ್ಬನು ತಿರುಪೆಗಾಗಿ ಬಂದನೆಂದು ಆಲೋಚಿಸಿದೆ. ಆದರೆ ಅವನು ಅಲ್ಲಿಯೇ ಕುಳಿತುದನ್ನು ಕಂಡು ವಕೀಲರಿಗೂ ಭಿಕ್ಷುಕರಿಗೂ ಮತ್ತೇನು ಸಂಬಂಧವುಂಟು ಎಂದು ವಿಸ್ಮಿತನಾದೆ. ಮತ್ತೆ, ಭಿಕ್ಷುಕನಾದರೇನು ಅವನಿಗೂ ಕೋರ್ಟಿನ ಕೆಲಸವಿಬಾರದೇಕೆ ಎಂದಂದುಕೊಂಡೆ.

ಶಂಕರರಾಯರು (ಆ ವಕೀಲರ ಹೆಸರು) ಮಾತಾಡುತ್ತಾ ಆ ಭಿಕ್ಷುಕನನ್ನು ತೋರಿಸಿ “ಅವರಾರು? ನಿಮಗೆ ಗೊತ್ತೆ?” ಎಂದರು.

“ಗೊತ್ತಿಲ್ಲ” ಎಂದೆ. ಒಳಗೊಳಗೆ ನನಗೇಕೆ ಭಿಕ್ಷುಕನ ಪರಿಚಯ ಎಂದುಕೊಂಡಿರಬಹುದು.

“ಕರ್ನೂಲ ಜಹಗಿರಿಯ ನವಾಬ್‌ಸಿಂಗರು” ಎಂದರು.

ನಾನು ಭಿಕ್ಷುಕನನ್ನೇ ನೋಡುತ್ತಾ ಮೂಕನಾಗಿ ಕುಳಿತೆ. ಹಿಂದೆ ನಡೆದುದೆಲ್ಲಾ ಮತ್ತೆ ಮನಸ್ಸಿನಲ್ಲಿ ಮಿಂಚಿತು. ಅವನ ಈ ದುರ್ಗತಿಯ ವೇಷವನ್ನು ನೋಡಲಾರದೆ ಹೋದೆ.

ಶಂಕರರಾಯರು ಪುನಃ “ನೋಡಿ, ಅವರ ಪರವಾಗಿ ಎಷ್ಟೋ ಕೋರ್ಟುಗಳಲ್ಲಿ ಹೊಡೆದಾಡಿದ್ದಾಯ್ತು. ಇನ್ನು ಪ್ರೀವಿಕೌನ್ಸಿಲ್ ಒಂದು ಬಾಕಿಯಿದೆ. ಅಲ್ಲಿಯೂ ಅರ್ಜಿ ಹಾಕಿ ನೋಡಬೇಕೆಂದು ಅವರ ಆಸೆ. ಆದರೆ ಅದಕ್ಕೆ ಎಂಟುನೂರೈವತ್ತು ರೂಪಾಯಿ ಖರ್ಚುಬೇಕಾಗಿದೆ. ಎಲ್ಲಾ ಅಚ್ಚುಹಾಕಿಸಿ ಕಳುಹಿಸಬೇಕು. ಅವರಿಗೆ ಯಾರೂ ಸಹಾಯಕರಿಲ್ಲ. ಏನು ಮಾಡಬೇಕೋ ನನಗೆ ಬೇರೆ ತೋರುವುದಿಲ್ಲ.

ನಾನೇನು ಸ್ವಾಭಾವಿಕವಾಗಿ ಧರ್ಮಿಷ್ಠನಲ್ಲ. ನನ್ನ ಹೃದಯ ಬಹಳ ಮೃದು ಎಂಬ ಹೆಮ್ಮೆಯೂ ನನಗೆ ಸಲ್ಲದು. ಆದ್ದರಿಂದ ಶಂಕರರಾಯರು ಹೇಳಿದ್ದನ್ನೆಲ್ಲಾ ಕೇಳಿ “ಅಯ್ಯೋ ಪಾಪ!” ಎಂದನೇ ಹೊರತು, ಸಹಾಯ ಮಾಡಬೇಕೆಂಬ ಚಿಂತೆಯೇ ಹುಟ್ಟಲಿಲ್ಲ.

ಶಂಕರರಾಯರು ಹೇಳಿ ಮುಗಿಸಲು ಭಿಕ್ಷುಕನಾಗಿದ್ದ ನವಾಬ್‌ಸಿಂಗನು ಬಹಳ ದೈನ್ಯದಿಂದ ಹೇಳತೊಡಗಿದನು: “ಸ್ವಾಮಿ, ನಿಮ್ಮ ಮನೆತನಕ್ಕೂ ನಮ್ಮ ಮನೆತನಕ್ಕೂ ಬಹಳ ಸ್ನೇಹ. ನೀವು ಮಕ್ಕಳಾಗಿದ್ದಾಗ ನನ್ನನ್ನು ದೇವರು ಉತ್ತಮಸ್ಥಿತಿಯಲ್ಲಿಟ್ಟಿದ್ದ. ನೀವು ನನ್ನನ್ನು ಮರೆತಿರಬಹುದು. ನಾನು ಕಾಸಿಲ್ಲದವನಾದೆ. ಆದರೂ ನನಗಿನ್ನೂ ನಿಮ್ಮ ನೆನಪಿದೆ. ನನ್ನ ಹೆಂಡತಿ ಮಕ್ಕಳಿಗೆ ಉಡಲು ಬಟ್ಟೆಯಿಲ್ಲ; ಉಣಲು ಅನ್ನವಿಲ್ಲ; ಮಲಗಲು ತಾವಿಲ್ಲ. ಭಿಕ್ಷೆಯಿಂದ ಕಾಲಹರಣ ಮಾಡುತ್ತಿದ್ದೇನೆ. ನೀವು ಇರುವಲ್ಲಿಗಾದರೂ ಕರೆದುಕೊಂಡು ಹೋಗಿ. ನೀವು ಹೇಳಿದ ಕೆಲಸ ಮಾಡುತ್ತೇವೆ. ನಮಗೆ ಹೊಟ್ಟೆಗಿಷ್ಟು ಹಾಕಿದರೆ ಸಾಕು.”

ನನ್ನ ಅವಸ್ಥೆಯನ್ನು ನೀವೇ ಊಹಿಸಿಕೊಳ್ಳಿ. ಯಾರ ಕೈಕೆಳಗೆ ನನ್ನ ತಂದೆ ತಾತಂದಿರು ಇದ್ದು ಅಧಿಕಾರ ನಡೆಸಿದರೋ ಅವನೇ ನನ್ನ ಮುಂದೆ ಹೀಗೆ ಬೇಡಿದರೆ ಮನಸ್ಸಿಗೆ ಹೇಗಾಗಬೇಕು? ಶಂಕರರಾಯರಾಗಲಿ ನವಾಬ್ ಸಿಂಗನಾಗಲಿ ಧನಸಹಾಯ ಕೇಳಲಿಲ್ಲ. ಸ್ವಾಭಾವಿಕವಾಗಿ ನಾನು  ಹಾಗೆಲ್ಲಾ ಭಾವಪರವಶನಾಗಿ ಧರ್ಮಮಾಡುವವನೂ ಅಲ್ಲ. ನನ್ನ ಜೇಬಿನಿಂದ ಚೆಕ್ಕು ಪುಸ್ತಕ ತೆಗೆದು ನವಾಬನನ್ನು ಕುರಿತು “ಪ್ರೀವಿಕೌನ್ಸಿಲಿಗೆ ಅರ್ಜಿ ಹಾಕುವುದಕ್ಕೆ ಎಷ್ಟು ಹಣಬೇಕು?” ಎಂದೆ.

ಅವನು “ಸ್ವಾಮಿ, ಎಂಟನೂರೈವತ್ತು!” ಎಂದ.

ಕೂಡಲೆ ನಾನು ಮದರಾಸಿನಲ್ಲಿರುವ ಒಂದು ಬ್ಯಾಂಕಿಗೆ ಎಂಟುನೂರೈವತ್ತು ರೂಪಾಯಿಗಳ ಚೆಕ್ಕು ಒಂದನ್ನು ಬರೆದು ಸಿಂಗನ ಕೈಲಿ ಕೊಟ್ಟೆ. ಏತಕ್ಕೆ ಹಾಗೆ ಮಾಡಿದೆನೋ ನನಗೆ ಬೇರೆ ತಿಳಿಯದು. ನಿಶ್ಚಯವಾಗಿಯೂ ನನ್ನ ಸ್ವಂತ ಪರಾರ್ಥಬುದ್ದಿಯಿಂದ ಮಾತ್ರ ಮಾಡಿದ್ದಲ್ಲ. ಅವನು ಕರ್ನೂಲಿನಲ್ಲಿ ಕಾಸೂ ಹುಟ್ಟದ ತಿರುಕ. ನಾನು ನೂರು ರೂಪಾಯಿ ಸಂಬಳದ ಚುಂಗಡಿ ನೌಕರ. ಮದರಾಸಿನ ಆ ಬ್ಯಾಂಕಿನಲ್ಲಿರುವ ನನ್ನ ಲೆಖ್ಖ ನೂರೈವತ್ತೇ ರೂಪಾಯಿ. ಅಂತೂ ಕಾರ್ಯ ಮುಗಿದುಹೋಯಿತು.

ಸಿಂಗ್ ಮರುದಿನವೇ ಮದರಾಸಿನಗೆ ಹೋಗಿ ಪ್ರೀವಿಕೌನ್ಸಿಲ್ಲಿಗೆ ಅಪೀಲು ಮಾಡುವೆನೆಂದು ಹೇಳಿ ಹೊರಟುಹೋದನು.

ಆ ಸುದ್ಧಿ ಊರಿನಲೆಲ್ಲ ಹಬ್ಬಿತು. ಎಲ್ಲರೂ ನನ್ನನ್ನು ಹುಚ್ಚನೆಂದು ಬಯ್ಯತೊಡಗಿದರು. ಕೆಲವರು “ನಿಮ್ಮ ತಂದೆ ಅವನಿಗೆ ನಾಲ್ವತ್ತು ಸಾವಿರ ಕೊಟ್ಟು ಕಳೆದುಕೊಂಡಿದ್ದಾರೆ. ಕೈಯಲ್ಲಿ ಕಾಸಿಲ್ಲದ ತಿರುಕನಿಗೆ ಯಾರಾದರೂ ಎಂಟುನೂರೈವತ್ತು ರೂಪಾಯಿ ಏಕಾಏಕಿ ಹಿಂದುಮುಂದು ನೋಡದೆ ಕೊಡುವುದುಂಟೇ? ಅದಾದರೂ ಹಿಂದಕ್ಕೆ ಬರುವ ಗಂಟೇ?” ಎಂದರು. ಹಿರಿಯರಾದ ಕೆಲವರು, ನಾನು ಬರಿಯ ಅನುಭವವಿಲ್ಲದ ಹುಡುಗನೆಂದೂ, ಇಂದು ಸಿಂಗನು ಭಿಕ್ಷುಕನಾಗಿದ್ದಾನೆ, ನಾಳೆ ನಾನು ಭಿಕ್ಷುಕನಾಗುವೆನೆಂದೂ, ಬಾಯಿಗೆ ಬಂದಂತೆ ಅಂದರು. ನನಗೂ ಅವರು ಹೇಳಿದ್ದೆಲ್ಲ ಸರಿ ಎಂದು ತೊರಿತು. ಅಯ್ಯೋ ನಾನೇಕೆ ಚಿಕ್ಕು ಕೊಟ್ಟೆ? ಎಂಬ ಪಶ್ಚಾತ್ತಾಪವೂ ಉಂಟಾಯಿತು. ನಾನಾದರೂ ದೊಡ್ಡ ಹೆಣಗಾರನೆ? ಅದಿರಲಿ, ನಾನು ದುಡಿಯುವುದು ನನ್ನ ಸಂಸಾರಕ್ಕೇ ಸಾಲದು. ಮತ್ತೂ ಕೊಟ್ಟ ದುಡ್ಡನ್ನು ವಾಪಸು ತೆಗೆದುಕೊಳ್ಳುವುದಕ್ಕೆ ಬದಲಾಗಿ, ಪತ್ರ ಕರಾರು ಏನೂ ಇಲ್ಲದೆ ತಿರುಕನೊಬ್ಬನಿಗೆ ಹಣ ಕೊಡುವುದುಂಟೆ? ನನ್ನ ಮನಸ್ಸಿನಲ್ಲಿ ಶಾಂತಿ ತೊಲಗಿತು. ನಾನು ಮಾಡಿದ್ದು ಅಕಾರ್ಯವೆಂದು ಚಿಂತಿಸತೊಡಗಿದೆ. ಒಂದು ಸಾರಿ, ಪುನಃ ಸಿಂಗನ ಹತ್ತಿರ ಹೋಗಿ ಚಿಕ್ಕನ್ನು ವಾಪಸು ಕೊಡು ಎಂದು ಕೇಳಿಬರಲೇ ಎಂದು ಮನಸ್ಸಾಯಿತು. ಅಷ್ಟರಲ್ಲೇ ಬ್ಯಾಂಕಿನಲ್ಲಿ ನನಗಿದ್ದುದು ನೂರೈವತ್ತೇ ರೂಪಾಯಿಗಳು, ಆದ್ದರಿಂದ ಆ ಚೆಕ್ಕು ನಿಷ್ಪ್ರಯೋಜನೆ ಎಂದು ಸಮಾಧಾನವಾಯಿತು.

ಮರುದಿನ ನಾನು ಬೆಂಗಳೂರಿಗೆ ಹೊರಟೆ. ಅವನು ಮದರಾಸಿಗೆ ಹೊರಟ. ಇಬ್ಬರೂ ಗುಂತಕಲ್ಲಿತನಕ ಒಂದೇ ಗಾಡಿಯಲ್ಲಿ ಬಂದೆವು. ನಿಜಸ್ಥಿತಿಯನ್ನು ಹೇಳಿ, ಕೊಟ್ಟ ಚೆಕ್ಕನ್ನು ಹಿಂದಕ್ಕೆ ತೆಗೆದುಕೊಳ್ಳಲೂ ಇಲ್ಲ. ಅವನು ಮದರಾಸಿಗೂ ನಾನು ಬೆಂಗಳೂರಿಗೂ ಕವಲೊಡೆದೆವು.

ಗಾಡಿಯಲ್ಲಿ ನಾನೊಬ್ಬನೇ ಕುಳಿತಿರಲು ಚಿಂತೆಗೆ ಪ್ರಾರಂಭವಾಯಿತು. ಜೊತೆಗೆ ಮತ್ತೊಂದು ಭೀತಿಯೂ ಬಂತು. ಏನೆಂದರೆ, ಬ್ಯಾಂಕಿನಲ್ಲಿ ಹಣವಿಲ್ಲದೆ ನಾನು ಚೆಕಕು ಕೊಟ್ಟಿದ್ದೇನೆ. ನಾನೆಲ್ಲಿ ಅಪರಾಧಿಯಾಗುವೆನೊ? ಏನು ಶಿಕ್ಷೆಯಾಗುವುದೋ? ನನ್ನ ಸರ್ಕಾರಿ ನೌಕರಿಗೆ ಎಲ್ಲಿ ತೊಂದರೆ ಬರುವುದೊ? ನನಗೆಲ್ಲಿ ಮಾನಭಂಗವಾಗುವುದೊ? ಎಂದು. ಈ ಭೀತಿ ಬರಬರುತ್ತಾ ಬಲವಾಯಿತು.

ರೈಲು ಬೆಂಗಳೂರಿಗೆ ಬಂತು. ನಾನು ಮುಂದೆ ಬರಬಹುದಾದ ಕಷ್ಟಗಳನ್ನು ನಿವಾರಿಸುವುದಕ್ಕೆ, ಒಂದು ಸೊಸೈಟಿಯಿಂದ ಏಳುನೂರು ಸಾಲ ತೆಗದು ಮದರಾಸಿನ ಆ ಬ್ಯಾಂಕಿಗೆ ಕಳುಹಿಸಿದೆ. ಇದೂ ಕೂಡ ನನ್ನ ಸ್ವಂತ ಮರ್ಯಾದೆಯನ್ನು ಕಾಪಾಡಿಕೊಳ್ಳುವುದಕ್ಕೆ ಮಾಡಿದ ಕೆಲಸ. ನವಾಬ್‌ಸಿಂಗನ ಶುಭಾಶುಭಗಳ ವಿಚಾರವೇ ನನ್ನ ಮನಸ್ಸಿಗೆ ಹೊಳೆಯಲಿಲ್ಲ. ಇಷ್ಟು ಮಾಡಿದ ಮೇಲೆ ನನಗೆ ಕೊಟ್ಟ ಹಣದ ಚಿಂತೆ ಹಿಡಿಯಿತು. ಏನು ಮಾಡಿದರೆ ಹಣ ಹಿಂದಕ್ಕೆ ಬರುವುದೆಂದು ಆಲೋಚನೆ ಮಾಡಿದೆ. ಆ ವಕೀಲನೂ ಸಿಂಗನೂ ಇಬ್ಬರೂ ಸೇರಿ ನನ್ನನ್ನು ಬಲಾತ್ಕರಿಸಿ ಎಂಟುನೂರೈವತ್ತು ರೂಪಾಯಿಗಳ ಚೆಕ್ಕು ಬರೆಯಿಸಿಕೊಂಡರು ಎಂದು ಕೇಸುಹಾಕಲೇ ಎಂದು ಯೋಚಿಸಿದೆ. ಆದರೆ ಸಾಕ್ಷಿಗಳಾರೂ ಇಲ್ಲ, ಅದಕ್ಕೇ ಸುಮ್ಮನಾದೆ. ಅಂತೂ ನನ್ನೊಳಗೆ ನಾನೇ ಏನೇನೋ ವಿಧವಾದ ಸಮಾಧಾನಗಳನ್ನು ಕಲ್ಪಸಿಕೊಂಡು ಮನಸ್ಸಿನ ಬಾಧೆಯನ್ನು ನಿಲ್ಲಿಸಿದೆ. ಮನಸ್ಸಿನ ಕಾಟದ ಜೊತೆಗೆ ಮನೆಯವರ ಕರ್ಕಶದ ನುಡಿಗಳ ಕಾಟ ಬೇರೆ. ಅಂತೂ ಕಾಲ ಕಳೆಯಿತು.

 

ಎರಡು ವರ್ಷಗಳಾದ ಮೇಲೆ ನನಗೆ ಮೈಸೂರಿಗೆ ವರ್ಗವಾಯಿತು. ನನ್ನ ಸಂಬಳವೂ ಹೆಚ್ಚಿತು. ನಾನು ಭಾಗ್ಯವಂತರ ಗುಂಪಿಗೆ ಸೇರುವವನಾದೆ. ಒಂದು ದಿನ, ಯಾವುದೋ ಒಂದು ವಿದ್ಯಾಭ್ಯಾಸದ ಇಲಾಖೆಯ ಕೆಲಸದ ಸಲುವಾಗಿ ನಾನು ಮದರಾಸಿಗೆ ಹೋಗಬೇಕಾಗಿ ಹೋಗಬೇಕಾಗಿ ಬಂತು. ರೈಲು ಹತ್ತಿ ಹೊರಟೆ, ಗುಂತಕಲ್ಲಿನ ಮಾರ್ಗವಾಗಿ, ರೈಲು  ಗುಂತಕಲ್ಲಿನ ಸ್ಟೇಷನ್ನಿನಲ್ಲಿ ನಿಂತಿತ್ತು. ಸೆಕೆಂಡ್ ಕ್ಸಾಸಿನಲ್ಲಿ ಕುಳಿತು, ಬೂಟ್ಸು, ಷರಾಯಿ, ನೆಕ್‌ಟೈ, ಪೇಟ-ಇವುಗಳಿಂದ ವಿರಾಜಿಸುತ್ತಿದ್ದ ನನಗೆ ಏನೋ ಒಂದು ಹೆಮ್ಮೆ. ಪ್ಲಾಟ್ ಫಾರಂನಲ್ಲಿ ತಿರುಗಾಡುತ್ತಿದ್ದೆ. ತಿರುಕನೊಬ್ಬನು ಬಂದು ಸಲಾಂ ಮಾಡಿದನು, ನೋಡುವುದರಲ್ಲಿ ಅಬನೇ ನವಾಬ್‌ಸಿಂಗ್‌!

ನನಗೆ ಹಿಂದೆ ನಡೆದ ಸಂಗತಿಗಳೆಲ್ಲ ಎಲ್ಲೊ ದೂರ ಹೋದುವು. ಅವನು ನನ್ನ ಸಾಲಗಾರ ಎಂಬ ಯೋಚನೆಯೇ ಬರಲಿಲ್ಲ. ನನಗೆ ಅವನ ನವಾಬತನವಲ್ಲದೆ ತಿರುಕತನ ನೆನಪಿಗೆ ಬರಲೇ ಇಲ್ಲ. ಆದ್ದರಿಂದ ಬಹಳ ಸಲಿಗೆಯಿಂದ “ಏನೋ ಸಿಂಗ್‌, ಕೇಸು ಏನಾಯಿತೋ?” ಅಂದೆ.

ಅವನು ಬಹಳ ದೀನ ಸ್ವರದಿಂದ “ಅದರ ಆಸೆಯೇ ನನಗಿಲ್ಲ. ಬಹಳ ಹಸಿವಾಗಿದೆ!” ಎಂದನು. ನಾನು ಅವನೊಡನೆ ಸರಿಸಮಾನಂತೆ ನುಡಿದರೆ ಅವನು ತಿರುಕನಂತೆಯೇ ಮಾತಾಡಿಬಿಟ್ಟ! ನನಗೆ ಬಹಳ ಸಂಕೋಚವಾಯಿತು. ಅವನನ್ನು ಕರೆದುಕೊಂಡು ಹೋಗಿ ಸ್ಟೇಷನ್ನಿನ ಹೋಟೆಲಿನಲ್ಲಿ ಆರಾಣೆ ಕೊಟ್ಟು ಚೆನ್ನಾಗಿ ಊಟ ಹಾಕಿಸಿದೆ. ಅದೂ ಕೂಡ, ನಾನು ದುಡ್ಡಿವನು ಎಂಬ ಹೆಮ್ಮೆಯಿಂದ ಊಟ ಹಾಕಿಸಿದನೇ ಹೊರತು, ಅವನು ಹೊಟ್ಟೆಗಿಲ್ಲದವನು ಎಂಬ ಮರುಕದಿಂದಲ್ಲ. ನಾವೆಲ್ಲಾ ಪರೋಪಕಾರ ಮಾಡುವುದು ಶೇಕಡ ತೊಂಬತ್ತೊಂಬತ್ತರಷ್ಟು ನಮ್ಮ ಹೆಮ್ಮೆಗಾಗಿಯೇ ಹೊರತು ಪರರ ಉಪಕಾರಕ್ಕಾಗಿ ಅಲ್ಲ.

ಊಟ ಪೂರೈಸಿದ ಮೇಲೆ ಅವನು ತನ್ನ ಗೋಳನ್ನೆಲ್ಲ ಹೇಳಿಕೊಂಡನು. ದೂರದಲ್ಲಿ ಅವನ ಐದು ಜನ ಮಕ್ಕಳು, ಘೋಷಾ ಹಾಕಿಕೊಂಡಿದ್ದ ಹೆಂಡತಿ ನಿಂತಿದ್ದರು. ಇದನ್ನೆಲ್ಲಾ ನೋಡಿ ನನಗೊಂದೂ ಬಗೆ ಹರಿಯಲಿಲ್ಲ. ಎಂತಹ ಮನೆತನ ಎಂತಹ ಗತಿಗೆ ಇಳಿಯಿತು ಎಂದುಕೊಂಡೆ.

ಇನ್ನೇನು ರೈಲು ಹೊರಡಬೇಕು. ನವಾಬ್‌ಸಿಂಗನು ನಾನು ಕೂತಿದ್ದ ಗಾಡಿಗೆ ಬಂದು “ಸ್ವಾಮಿ, ಒಂದು ಮೂರು ಕಾಸು ಕೊಡಿ, ಮಕ್ಕಳಿಗೆ ಕಡಲೆ ತೆಗೆದುಕೊಡುತ್ತೇನೆ” ಎಂದು ಮಾರುದ್ದ ದೇಹವನ್ನು ಗೇಣುದ್ದ ಮಾಡಿಕೊಂಡನು.

ನಾನು “ಅಯ್ಯೋ? ಅದಕ್ಕೆಲ್ಲ ಹೀಗೆ ಕೇಳೋದೇನೋ? ತೆಗೆದುಕೋ?” ಎಂದು ಮೂರುಕಾಸನ್ನು ಜೇಬಿನಿಂದ ತೆಗೆದುಕೊಟ್ಟೆ. ಅದನ್ನು ಕೂಡ ಭಿಕ್ಷುಕನಿಗೆ ದಾನಿ ಕೊಡುವಂತೆ ಕೊಡಲಿಲ್ಲ.

ರೈಲು ಗುಂತಕಲ್ಲನ್ನು ಬಿಟ್ಟು ಮುಂಬರಿತು ನವಾಬ್‌ಸಿಂಗ್‌ನನ್ನು ನೋಡುತ್ತಾ ಇದ್ದೆ. ರೈಲು ದೂರದೂರ ಸರಿದಹಾಗೆಲ್ಲಾ ಸಿಂಗನು ಮರೆಯಾಗಿ ಆರಾಣೆ ಮೂರು ಕಾಸು ಆದನು.

ಕೆಲವು ತಿಂಗಳ ಹಿಂದೆ ಒಂದು ದಿನ ಮನೆಯಲ್ಲಿ ಸಂಸಾರದೊಂದಿಗೆ ಮಾತಾಡುತ್ತಾ ಕುಳಿತಿದ್ದೆ. ರತ್ನ, ಕಿಟ್ಟಿ ಎಲ್ಲಾ ಅಲ್ಲೇ ಕುಳಿತು ಆಟ ಆಡುತ್ತಿದ್ದರು. ನಾನು ಕೊಟ್ಟ ಎಂಟೂನೂರೈವತ್ತು ರೂಪಾಯಿ ಆರಾಣೆ ಮೂರು ಕಾಸು ನನ್ನನ್ನೇನು ಬಡತನಕ್ಕೆ ತರಲಿಲ್ಲ. ಅದಕ್ಕೆ ಬದಲಾಗಿ ನನ್ನ ಭಾಗ್ಯವು ಹೆಚ್ಚುತ್ತಲೇ ಬಂತು. ಅಷ್ಟು ಹಣವನ್ನು ಕೊಟ್ಟದ್ದು ಪರೋಪಕಾರಕ್ಕೆ ಎಂದು ಭಗವಂತನೆದುರು ನಾನು ಹೇಳಲಾರೆ. ಸುಮ್ಮನೆ ಆತ್ಮವಂಚನೆ ಮಾಡಿಕೊಳ್ಳುವುದರಿಂದ ದೇವರನ್ನು ವಂಚಿಸುವುದಕ್ಕೆ ಆಗುತ್ತದೆಯೇ? ನಾನು ಮೊದಲು ಎಂಟುನೂರೈವತ್ತು ರೂಪಾಯಿ ಕೊಟ್ಟದ್ದು ನಿಜವಾಗಿಯೂ ನನ್ನಿಚ್ಛೆಯಿಂದಲ್ಲ. ಆರಾಣೆ ಊಟ ಹಾಕಿಸಿದ್ದು ಹೆಮ್ಮೆಯಿಂದ. ಮೂರುಕಾಸು ಕೊಟ್ಟದ್ದು ಅವನನ್ನು ತೊಲಗಿಸುವುದಕ್ಕೆ. ಕೊಟ್ಟದ್ದು ಹಿಂದಕ್ಕೆ ಬರುತ್ತದೆ ಎಂಬ ಆಸೆಯೇ ಇಲ್ಲದಿದ್ದುದರಿಂದ ಆಗಲೇ ಅದು ಮನಸ್ಸಿನಿಂದ ದೂರವಾಗುತ್ತಿತ್ತು.

ಹೊರಗಡೆ ಯಾರೋ ಬಂದಂತಾಯಿತು.

“ಕಿಟ್ಟಾ, ಬಾಗಿಲು ತೆರೆಯೋ!” ಎಂದೆ.

ಕಿಟ್ಟ ಎದ್ದು ಬಾಗಿಲು ತೆರೆದ. ಟಪಾಲಿನವನು ಒಂದು ತಂತೀ ಸಮಾಚಾರದ ಕವರನ್ನು ಕೈಗೆ ಕೊಟ್ಟನು. ಒಡೆದು ನೋಡಲು ಈ ರೀತಿ ಇತ್ತು. “ಜಯ-ಪ್ರೀತಿ ಕೌನ್ಸಿಲ್‌ನಿಮ್ಮ ಹಣ ಎಲ್ಲಾ ವಾಪಸ್ಸು ಬರುತ್ತಿದ್ದೆ-ಸಿಂಗ್‌.”

ಅದೂ ತಿಲಿಯಲಾರದ ಇಂಗ್ಲೀಷು. ಅದನ್ನು ಓದಿದ ನನಗೆ ಜುಗುಪ್ಸೆ ಹುಟ್ಟಿತು. ಎಲ್ಲೋ ಹನ್ನೆರಡಾಣೆ ಸಿಕ್ಕಿತು, ಸುಮ್ಮನೆ ಟೆಲಿಗ್ರಾಂ ಕೊಟ್ಟಿದ್ದಾನೆ. ಹುಚ್ಚ ಎಂದುಕೊಂಡೆ. ಆದರೆ ಯಾವುದೋ ಒಂದು ದೂರದಾಸೆ ಮನಸ್ಸಿನಲ್ಲಿ ಇನ್ನೂ, ಕತ್ತಲಲ್ಲಿ ಬಹುದೂರ ಉರಿಯುವ ಹಣತೆಯ ದೀಪದಂತೆ, ಮಿನುಗುತ್ತಿತ್ತು.

ಮರುದಿನ “ಹಿಂದೂ” ಪತ್ರಿಕೆಯಲ್ಲಿ ನಿಜಾಂಶ ಗೊತ್ತಾಯಿತು. ಇಪ್ಪತ್ತು ವರುಷಗಳಿಂದ ತಿರುಪೆ ಬೇಡುತ್ತಿದ್ದವನು ಪುನಃ ಲಕ್ಷಾಧಿಕಾಯಾದನೆಂದು ನನಗೆ ಸಂತೋಷವಾಯಿತು. ಏತಕ್ಕೋ ನಾನರಿಯೆ. ಸಿಂಗನ ಬಾಳಿಗೆ ಬೆಳಕು ಬಂತಲ್ಲಾ, ಅವನ ಹೆಂಡಿರು ಮಕ್ಕಳ ಉದ್ಧಾರವಾಯಿತಲ್ಲಾ ಎಂದು ಮಾತ್ರ ನಾನು ಹೇಳಲಾರೆ. ಬಹುಶಃ ನಾನು ಕೊಟ್ಟ ಹಣ ಹಿಂದಕ್ಕೆ ಬರಬಹುದು ಎಂಬ ದೂರಾಸೆಯಿಂದ ಇರಬಹುದು.

ಕೂಡಲೆ ನನಗೆ ಕಾಗದಗಳು ಬರತೊಡಗಿದವು. ಸಿಂಗನ ಮೇಲೆ ದಾವಾಹಾಕಬೇಕೆಂದೂ, ಹಿರಿಯರು ಕೊಟ್ಟಿದ್ದ ಹಣವನ್ನೆಲ್ಲಾ ಮರಳಿ ಪಡೆಯಬೇಕೆಂದೂ ಉಪದೇಶ ಮಾಡತೊಡಗಿದರು. ನಾನು ಮಾತ್ರ ಅವಸರ ಪಡದೆ ಕಾದೆ.

ಸರಳಹೃದಯನಾದ ನವಾಬ್‌ಸಿಂಗನು ನನಗೆ ಸಮಾಚಾರ ಕೊಟ್ಟದ್ದು ವಕೀಲ ಶಂಕರರಾಯರಿಗೆ ತಿಳಿಯಬಂತು. ಅವರು ಅವನನ್ನು ಬಹಳವಾಗಿ ಬೈದು ಗಾಬರಿಪಡಿಸಿದರು: ಅವರನ್ನು ಕೇಳದೇ ವರ್ತಮಾನ ಕೊಟ್ಟದ್ದು ತಪ್ಪು ಎಂದು. ಮುಗ್ಧನಾದ ನವಾಬನು ಆಮೇಲೆ ಶಂಕರರಾಯರ ಹೆದರಿಕೆಯಿಂದ ಕಾಗದ ಬರೆಯಲೇ ಇಲ್ಲ. ನನಗೆ ಬಂದ ದುಡ್ಡು ಬರಿದಾಯಿತೋ ಏನೋ ಎಂದು ಸಂದೇಹ ಉಂಟಾಯಿತು. ಆದರೆ ಏತಕ್ಕೋ ಏನೋ ಮುಂದುವರಿಯದೆ ಸುಮ್ಮನಾದೆ.

ಕೆಲವು ತಿಂಗಳ ಹಿಂದೆ ನವಾಬನಿಂದ ನನಗೊಂದು ಕಾಗದ ಬಂತು. ಅದರಲ್ಲಿ ನನ್ನನ್ನು ಅಲ್ಲಿಗೆ ಬರುವಂತೆ ಬರೆದಿತ್ತು. ನಾನೂ ಹೋದೆ. ನನ್ನನ್ನು ಬಹಳ ಮರ್ಯಾದೆಯಿಂದ ಎದುರುಗೊಂಡು, ನನ್ನ ಊಟ ಉಪಚಾರಗಳಿಗೆ ಬೇಕಾದ ಸಲಕರಣೆಗಳನ್ನು ಒದಗಿಸಿದನು. ಎಲ್ಲಾ ಪೂರೈಸಿದ ಮೇಲೆ, ನವಾಬನು ನನ್ನ ಮುಂದೆ ಎಂಟುನೂರೈವತ್ತು ರೂಪಾಯಿ, ಆರಾಣೆ ಮೂರು ಕಾಸುಗಳನ್ನು ನಗದಾಗಿ ತಂದಿಟ್ಟು “ತಮ್ಮಿಂದ ನನ್ನ ಮನೆತನ ಉಳಿಯಿತು. ಎಂಟುನೂರೈವತ್ತು ರೂಪಾಯಿಗಳು ತಾವು ಅಪೀಲಿನ ಖರ್ಚಿಗಾಗಿ ಕೊಟ್ಟದ್ದು. ದಯವಿಟ್ಟು ಸ್ವೀಕರಿಸಬೇಕು.” ಎಂದನು.

ನನಗೆ ಏನು ಮಾಡಬೇಕೋ ಗೊತ್ತಾಗದೆ ಸುಮ್ಮನೆ ನೋಡುತ್ತಾ ಕುಳಿತೆ. ರೂಪಾಯಿ ನನಗೆ ಬೇಕಾಗಿರಲಿಲ್ಲ ಎಂದಲ್ಲ. ಇನ್ನೂ ಏನೇನೋ ಆಲೋಚನೆಗಳು ಬಂದುವು.

ನನಗೆ ಕೊಡುವ ಹಣವನ್ನೆಲ್ಲಾ ಇಷ್ಟರಲ್ಲಿಯೇ ಮುಗಿಸಿಬಿಡುವನೆ? ಬಾಕಿ ಹಣದ ವಿಚಾರ ಕೇಳಲೆ? ಬಿಡಲೆ? ನಾನು ಇಷ್ಟನ್ನೇ ತೆಗೆದುಕೊಂಡರೆ ನನ್ನ ನಂಟರಿಷ್ಟರು ಏನೆಂದಾರು?- ಇವೇ ಮೊದಲಾದ ಚಿಂತೆಗಳು ಒಂದಾದ ಮೇಲೊಂದು ಬಂದುವು. ಆದರೆ ನಾನು ಯಾವ ಮಾತನ್ನೂ ಆಡಲಿಲ್ಲ. ಯಾರೋ ನನ್ನ ನಾಲಗೆಯನ್ನು ಹಿಡಿದಿದ್ದರು. ಕಡೆಗೆ ಎಂಟುನೂರೈವತ್ತು ರೂಪಾಯಿಗಳನ್ನು ಎಣಿಸಿ ತೆಗೆದುಕೊಂಡೆ.

ಉಳಿದ ಆರಾಣೆ ಮೂರು ಕಾಸನ್ನು ನೋಡಿ ‘ಇದಾವ ಹಣ?’ ಎಂದೆ.

ಸಿಂಗ್: “ತಾವು ಗುಂತಕಲ್‌ಸ್ಟೇಷನ್ನಿನಲ್ಲಿ ನಾನು ಹೊಟ್ಟೆಗಿಲ್ಲದೆ ಇದ್ದಾಗ ಊಟ ಹಾಕಿಸಿದ್ದರೆ ಬಾಬತು ಆರಾಣೆ. ಆಮೇಲೆ ನನ್ನ ಮಕ್ಕಳಿಗೆ ತಿಂಡಿಗಾಗಿ ತಾವು ಕೊಟ್ಟಿದ್ದು ಮೂರು ಕಾಸು.”

ನಾವು ದಾರಿಯೆಡೆಯಲ್ಲಿ ಭಿಕ್ಷಹಾಕಿದ ಲೆಖ್ಖ ನೆನಪಿಡಲು ಆಗುತ್ತದೆಯೇ? ನಾನಾ ಭಾವಗಳಿಂದ ನನ್ನ ಮನಸ್ಸು ಅಲ್ಲೋಲ ಕಲ್ಲೋಲವಾಯಿತು. ಮರುಮಾತಾಡದೆ ಆರಾಣೆ ಮೂರು ಕಾಸನ್ನು ತೆಗೆದುಕೊಂಡೆ.

ಅಷ್ಟು ಹೊತ್ತಿಗೆ ಶಂಕರರಾಯರೂ ಅಲ್ಲಿಗೆ ಬಂದರು. ನವಾಬನೂ ಅವನೂ ಏನೋ ಗುಟ್ಟು ಮಾತಾಡಲು ಒಳಗೆ ಹೋದರು. ನನ್ನ ಎದೆ ಮಾತ್ರ ಮಗುವಿನೆದೆಯಾಯ್ತು. ಇವೆಲ್ಲಾ ಯಾರು ಮಾಡಿಸುವ ಕೆಲಸ ಎಂದುಕೊಂಡೆ. ಮಹತ್ತಾದುದನ್ನೊ ಅತ್ಯಂತ ಸುಂದರವಾದುದನ್ನೊ ಪವಿತ್ರವಾದುದನ್ನೊ ನೋಡಿದಾಗ ಅನಿರ್ವಚನೀಯವಾದ ಭಾವದಿಂದ ಪ್ರೇರಿತವಾಗಿ ನಮ್ಮ ಹೃದಯದ ಅಂತರಾಳದಿಂದ ಉಕ್ಕುವ, ಹೆಸರಿಗೆ ಸಿಕ್ಕದ, ಒಂದು ದಿವ್ಯಾನುಭವ ನನ್ನ ಜೀವ ಸರ್ವಸ್ವವನ್ನೂ ತುಂಬಿಬಿಟ್ಟಿತು.

ಸ್ವಲ್ಪ ಹೊತ್ತಿನಮೇಲೆ ನವಾಬನು ಹೊರಗೆ ಬಂದು, ಒಂದು ಕಾರಾರು ಪತ್ರವನ್ನು ನನ್ನ ಕೈಲಿಟ್ಟು “ಸ್ವಾಮಿ, ಬಹುಕಾಲದಿಂದಲೂ ನಮ್ಮ ಮನೆತನಕ್ಕೂ ನಿಮ್ಮ ಮನೆತನಕ್ಕೂ ಲೇವಾದೇವಿ ನಡೆದು ಬಂದಿದೆ. ಆದರೆ ಈಗ ಯಾವ ದಾಖಲೆಗಳೂ ಇಲ್ಲ. ತಮಗೆ  ನಾನೆಷ್ಟು ಕೊಡಬೇಕೊ ಏನೋ ತಿಳಿಯದು. ಈ ಪತ್ರದಲ್ಲಿ ತಮಗೆ ಹನ್ನರಡು ಸಾವಿರ ರೂಪಾಯಿ ಕೊಡುತ್ತೇನೆಂದು ಬರೆದಿದೆ. ಅಲ್ಲದೆ ಶೇಕಡ ನಾಲ್ಕಾನೆಯಂತೆ ಮೊಬಗಲನ್ನು ಸಲ್ಲಿಸುವವರೆಗೂ ಬಡ್ಡಿ ಕೊಡುವನೆಂದು ಬರೆದಿದೆ. ನನಗಿನ್ನೂ ಕೈಲಿ ಹಣ ಬಂದಿಲ್ಲ. ಬರುವ ತಿಂಗಳು ಬಂಗಲೆಗಳನ್ನು ಮಾರಬೇಕೆಂದಿರುವೆನು….” ಎಂದು ಮೊದಲಾಗಿ ಹೇಳಿದನು. ಆತನ ಭಾಷಣ ಶಂಕರರಾಯರಿಂದ ಸಿದ್ಧಮಾಡಲ್ಪಟ್ಟದ್ದು ಎಂಬುದೇನೋ ನನಗೆ ಚೆನ್ನಾಗಿ ಗೊತ್ತಾಯಿತು. ಆದರೆ ನನಗೆ ಏನು ಹೇಳಲೂ ಬಾಯೇ ಬರಲಿಲ್ಲ. ನಡೆದ ಸಂಗತಿಗಳೆಲ್ಲಾ ನನಗೆ ಮಹದಾಶ್ಚರ್ಯಗಳಾಗಿ ಕಂಡುಬಂದವು. ನಾನು ವಿಸ್ಮಯ ಮೂಕನಾದೆ.

ಈಗ ಪ್ರತಿ ತಿಂಗಳಿಗೆ ಸರಿಯಾಗಿ ಬಡ್ಡಿ ಬರುತ್ತದೆ. ಯಾವ ಇಚ್ಛೆ ಮೊದಲು ನನ್ನನ್ನು ಪ್ರೇರೇಪಿಸಿತೋ ಅದರ ಮೇಲೆಯೆ ಭಾರ ಹಾಕಿ ನಿಶ್ಚಿಂತನಾಗಿದ್ದೇನೆ. ನನ್ನ ಗೆಳೆಯರೊಬ್ಬರು ಈ ಕತೆ ಕೇಳಿ “ಅಯ್ಯೋ ನೀವು ಮಾಡಿದ ಕೆಲಸ ತಪ್ಪು. ಇನ್ನೂ ಸ್ವಲ್ಪ ಪ್ರಯತ್ನ ಮಾಡಿದ್ದರೆ ಅವನಿಂದ ನಾಲ್ವತ್ತು ಸಾವಿರ ರೂಪಾಯಿಗಳನ್ನೂ ವಸೂಲ್ಮಾಡಬಹುದಾಗಿತ್ತು” ಎಂದರು. ಮತ್ತೆ ಕೆಲವರು ನವಾಬನು ಠಕ್ಕನೆಂದೂ ಮೋಸಗಾರನೆಂದೂ ಎಂಟುನೂರೈವತ್ತು ರೂಪಾಯಿ ಕೊಟ್ಟು ನನ್ನನ್ನು ಮರುಳು ಮಾಡಿರುವನೆಂದೂ ಹೇಳುತ್ತಿರುವರು. ಅವರೆಲ್ಲಾ ನನ್ನ ಆಪ್ತರೇ ಹೌದು.

ಮಾಧವರಾಯರು ಕತೆ ಹೇಳಿ ಮುಗಿಸಿದ ಮೇಲೆ ನಾವೆಲ್ಲಾ ನಿಟ್ಟುಸಿರುಬಿಟ್ಟೆವು. ನಮಗೆ ಮಾಧವರಾಯರನ್ನು ಹೊಗಳಬೇಕೋ ನವಾಬನನ್ನು ಹೊಗಳಬೇಕೋ ಗೊತ್ತಾಗಲಿಲ್ಲ. ಮಾಧವರಾಯರೇನೋ ತಾವು ಮಾಡಿದ ಕಾರ್ಯವೆಲ್ಲ ಸ್ವಾರ್ಥಕ್ಕಾಗಿ ಎಂದು ಹೇಳಿಬಿಟ್ಟರು. ನವಾಬನಾದರೊ ಏನೂ ತಿಳಿಯದ ಸರಳಹೃದಯನಾದರೂ ಶಂಕರರಾಯರಂಥಾ ಜನರು ಯುಕ್ತಿ ಬೋಧಿಸಿದರೆ ಅಂತೆಯೆ ಹಿಂಜರಿಯುವವನಲ್ಲ. ಅಂತೂ ಸಮಸ್ಯೆಯನ್ನು ಭೇದಿಸಲು ನಮ್ಮಿಂದಾಗಲಿಲ್ಲ.

“ಕೆಲವು ಕಾರ್ಯಗಳನ್ನು ನಾವೆ ಮಾಡುವೆವಾದರೂ ಮಾಡಿಸುವುದು ನಮ್ಮಿಚ್ಛೆಯಲ್ಲ” ಎಂದರು ಮಾಧವರಾಯರು.

ಅಷ್ಟು ಹೊತ್ತಿಗೆ ಬಿಸಿಲೇರಿ ಊಟದ ಸಮಯವಾಗಿತ್ತು. ಮಾಧವರಾಯರು ಆಫೀಸಿಗೆ ಹೋಗಲು ಹೊತ್ತಾಗುವುದೆಂದು ಹೇಳಿ ಎದ್ದು ಹೋದರು.