ಆಷಾಢಮಾಸ. ಸುಮಾರು ರಾತ್ರಿ ಎಂಟು ಗಂಟೆ ಸಮಯ. ಕಗ್ಗತ್ತಲು ಕಣ್ಣು ತಿವಿಯುವಂತಿತ್ತು. ಜಡಿಮಳೆ ಜಿರೆಂದು ಕರೆಕರೆ ಹುಟ್ಟಿಸುತ್ತಿತ್ತು. ಸುಬ್ಬಣ್ಣಗೌಡರು ಜಗಲಿಯಲ್ಲಿ ಒಂದು ಜಮಖಾನದ ಮೇಲೆ ಕುಳಿತು ಲ್ಯಾಂಪಿನ ಬೆಳಕಿನಲ್ಲಿ ಮನೆಯ ಲೆಕ್ಕಪತ್ರ ನೋಡುತ್ತಿದ್ದರು.

ಲಿಂಗ ಹೊರಗಿನಿಂದ ಕೈಲೊಂದು ಲಾಟೀನು ಹಿಡಿದುಕೊಂಡು ಬಂದು “ಅಯ್ಯಾ, ಹೊಳೇ ನೀರು ಏಳನೇ ಮೆಟ್ಟಲಿಗೇರಿದೆ” ಎಂದ.

ಸುಬ್ಬಣ್ಣಗೌಡರು ಗಾಬರಿಯಿಂದ ತಟಕ್ಕನೆ ಎದ್ದು “ಎಲ್ಲಿ, ನೊಡೋಣ ಬಾ” ಎಂದು ಕಂಬಳಿ ಕೊಪ್ಪೆ ಹಾಕಿಕೊಂಡು ಹೊರಟರು.

ಇಬ್ಬರೂ ಹೊಳೆಗೆ ಹೋಗಿ ಐದಾರು ಮೆಟ್ಟಿಲು ಇಳಿದು ನಿಂತರು. ನೊರೆಯೆದ್ದ ಕೆಂಬಣ್ಣದ ತೆರೆಗಳು ಅವರ ಕಾಲಿಗೆ ಬಂದು ಬಡಿಯುತ್ತಿದ್ದುವು. ತುಂಗಾನದಿಯ ಪ್ರವಾಹ ಉಕ್ಕಿಯುಕ್ಕಿ ನೊರೆನೊರೆಯಾಗಿ ಭೋರೆಂದು ಹರಿಯುತ್ತಿತ್ತು. ಲಾಟೀನಿನ ಬೆಳಕಿನಲ್ಲಿ ಅಲೆಗಳು ಪಳಪಳ ಮಿಂಚುತ್ತಿದ್ದುವು. ಮಳೆ ನಿರಂತರವಾಗಿ ಸುರಿಯುತ್ತಲೇ ಇತ್ತು. ಅವರು ಅಲ್ಲಿ ನಿಂತಹಾಗೆಯೆ ಆರನೆಯ ಮೆಟ್ಟಲಿಗೆ ನೀರೇರಿ ಮುಚ್ಚಿತು.

ಐದನೆಯ ಮೆಟ್ಟಲಿಗೆ ಹತ್ತಿ ನಿಂತರು.

ಸುಬ್ಬಣ್ಣಗೌಡರು ಲಿಂಗನ ಕಡೆ ತಿರುಗಿ “ನಿನ್ನೆ ಎಲ್ಲಿಯವರೆಗೆ ಏರಿತ್ತೋ ನೀರು?” ಎಂದರು.

“ನಿನ್ನೆ ಇಷ್ಟು ನೀರು ಬಂದಿರಲಿಲ್ಲ. ಎಂಟನೆಯ ಮೆಟ್ಟಲಲ್ಲಿಯೇ ಇತ್ತು. ಆದರೂ ನಿನ್ನೆ ಕೆರೆಹಳ್ಳಿಯೆಲ್ಲಾ ಕೊಚ್ಚಿಕೊಂಡು ಹೋಯಿತಂತೆ. ಕೆಳಮನೆ ರಂಗಪ್ಪಗೌಡರ ಮಗ ರಾಮು ಸಿಕ್ಕಲೇ ಇಲ್ಲವಂತೆ. ಬಹಳ ಅನಾಹುತ ಆಯಿತಂತೆ” ಎಂದ ಲಿಂಗ.

ಗೌಡರ ಮುಖವು ಭಯದ ಚಿಹ್ನೆ ತೋರಿ ಗಂಭೀರವಾಯಿತು. “ಇಂದು ಮೇಲ್ಮಳೆ ಹೇಗಿದೆಯಂತೆ? ನಿನಗೇನಾದರೂ ಗೊತ್ತೇ?” ಎಂದು ಕೇಳಿ ಕಗ್ಗತ್ತಲಿನ ಕಡೆ ಕುರುಡಾಗಿ ನಿಟ್ಟಿಸುತ್ತಾ ನಿಂತರು.

“ಮೇಲ್ಮಳೆ ಬಹಳ ಜೋರಾಗಿದೆಯಂತೆ. ಶೃಂಗೇರಿ ಆ ಕಡೆಯಂತೂ ಒಂದು ನಿಮಿಷ ಬಿಡದೆ ಹೊಡೆಯುತ್ತಿದೆಯಂತೆ” ಎಂದು ಹೇಳಿ, ಲಿಂಗನು ಲಾಟೀನಿನ ಬೆಳಕಿನಲ್ಲಿ ಕೆಳಗೆ ನೋಡಿ “ಅಯ್ಯಾ, ಇಲ್ಲಿ ನೋಡಿ! ನೀರು ಐದನೆ ಮೆಟ್ಟಿಲಿಗೇರುತ್ತಾ ಇದೆ” ಎಂದ. ಗೌಡರು ಕೆಳಗೆ ನೋಡಿ, ಎದೆ ನಡುಗಿ, ಮುಖ ಕಪ್ಪಾಗಿ, ಸ್ವಲ್ಪ ಪೆಚ್ಚಾದರು.

ಇಬ್ಬರೂ ಹಿಂತಿರುಗಿ ಮನೆಯೊಳಗೆ ಹೋದರು. ಗೌಡರು ಕಂಬಳಿ ತೆಗೆದು ಹಾಕಿ, ಬಿಸಿನೀರಿನಲ್ಲಿ ಕಾಲು ತೊಳೆದುಕೊಂಡು, ಜಮಖಾನದ ಮೇಲೆ ಕುಳಿತು, ಕೈಗಳನ್ನು ಹಿಂದಕ್ಕೆ ಹಾಕಿ, ಅವುಗಳ ಮೇಲೆ ಒರಗಿಕೊಂಡು ಆಲೋಚನಾಪರರಾದರು. ಲಿಂಗನು ಲಾಟೀನಿನ ದೀಪವನ್ನು ಸಣ್ಣಗೆ ಮಾಡಿ, ಕಂಬಳಿ ಕೊಡವಿ, ಗಳುವಿನ ಮೇಲೆ ಹರಡಿ, ಅಡಿಗೆಮನೆಯೊಳಗೆ ಹೋದನು.

ಸುಬ್ಬಣ್ಣಗೌಡರ ಹೆಂಡತಿ ನಾಗಮ್ಮ “ಅದೇನು ಲಿಂಗ? ಲಾಟೀನು ತೆಗೆದುಕೊಂಡು ಹೊರಗೆ ಹೋಗಿದ್ದರಲ್ಲಾ. ಹೊಳೆ ಬಹಳ ಬಂದಿದೆಯೇನು?” ಎಂದರು. ಸುಬ್ಬಣ್ಣಗೌಡರ ಹನ್ನೆರಡು ವರ್ಷದ ಮಗ ತಿಮ್ಮು, ಎಂಟು ವರ್ಷದ ಮಗಳು ಸೀತೆ, ಇಬ್ಬರೂ ಊಟಕ್ಕೆ ಕುಳಿತಿದ್ದರು. ಹೊಳೆ ಏರುವ ಮಾತು ಕೇಳಿ, ಉಣ್ಣುವುದನ್ನು ಬಿಟ್ಟು, ತೆರೆದ ಬಾಯಿ ಮುಚ್ಚದೆ, ತೆರೆದ ರೆಪ್ಪೆ ಹಾಕದೆ, ಇಟ್ಟ ಕೈ ತೆಗೆಯದೆ ನಾಗಮ್ಮ ಲಿಂಗ ಇವರ ಸಂಭಾಷಣೆ ಕೇಳುತ್ತಾ ಕುಳಿತರು.

“ಹೌದಮ್ಮಾ, ಹೊಳೆ ಯದ್ದೂತದ್ದೂ ಏರುತ್ತಾ ಇದೆ. ಅದರಲ್ಲಿಯೂ ಮೇಲ್ಮಳೆಯೂ ಇಪರೀತವಂತೆ. ನಿನ್ನೆಯೇ ಕೆರೆಹಳ್ಳಿಯೆಲ್ಲಾ ತೇಲಿ ಹೋಯಿತಂತೆ. ಪಾಪ! ಆ ಕೆಳಮನೆ ರಂಗಪ್ಪಗೌಡರ ರಾಮು ಇನ್ನೂ ಸಿಕ್ಕಿಲ್ಲವಂತೆ!”

ನಾಗಮ್ಮ ಊಟಕ್ಕೆ ಕುಳಿತ ಮಕ್ಕಳ ಕಡೆ ನೋಡಿದರು. ಏಕೆ ನೋಡಿದರೋ ಯಾರಿಗೆ ಗೊತ್ತು? ಅವರು ಉಣದೆ ಕುಳಿತಿದ್ದುದನ್ನು ನೋಡಿ ತಾವೇ ಹೋಗಿ ಅವರ ಹತ್ತಿರ ಕುಳಿತುಕೊಂಡು ಉಣ್ಣಿಸತೊಡಗಿದರು.

ಸೀತೆ ತುತ್ತು ತಿನ್ನುತ್ತಾ “ಅಮ್ಮಾ, ರಾಮು ಏನಾದ?” ಎಂದಳು.

ನಾಗಮ್ಮ “ಏನೂ ಆಗಲಿಲ್ಲ. ನೀ ಉಣ್ಣು ಸುಮ್ಮನೆ”

ತಿಮ್ಮು “ಏನಮ್ಮಾ ಅದು ಲಿಂಗ ಹೇಳಿದ್ದು?” ಎಂದ.

ನಾಗಮ್ಮ “ಏನಿಲ್ಲ ಮಗೂ, ಹೊಳೆಯಲ್ಲಿ ನೀರು ಏರುತ್ತಿದೆಯಂತೆ, ಅಷ್ಟೇ. ನೀನು ಊಟಮಾಡು” ಎಂದರು. ಲಿಂಗನ ಕಡೆ ನೋಡಿ “ಅಷ್ಟೇ! ಅಲ್ಲವೇನೊ ಲಿಂಗ?” ಎಂದರು.

ಲಿಂಗ ತಲೆದೂಗಿ ಸಮ್ಮತಿಸಿ “ಅಷ್ಟೇ, ಇನ್ನೇನು! ‘ನೀವು ಉಣ್ಣಿ’ ತಿಮ್ಮಯ್ಯ” ಎಂದ.

ಸುಬ್ಬಣ್ಣಗೌಡರು ಜಗಲಿಯಿಂದ “ಲಿಂಗಾ!” ಎಂದು ಕರೆದರು. ಲಿಂಗನಿಗೆ ಕಿವಿ ಕೊಂಚ ಮಂದ; ಕೇಳಿಸಲಿಲ್ಲ. ಮತ್ತೆ ಕರೆದರು. ಆಗ ನಾಗಮ್ಮ “ಏ ಲಿಂಗ! ಹೊರಗೆ ಕರೆಯುತ್ತಾರೋ! ಹೋಗೋ!” ಎಂದರು. ಲಿಂಗನು ತಟಕ್ಕನೆ ಎದ್ದು ತನ್ನ ಚೊಟ್ಟಕಾಲು ಓರೆಯಾಗಿ ಹಾಕುತ್ತಾ ಹೋದ. ಪಾಪ! ಅವನ ಬಲಗಾಲು ಎಡಗಾಲಿಗಿಂತ ತುಸು ಮೋಟ ಮತ್ತು ಸಣ್ಣ.

ಲಿಂಗನು ಜಗಲಿಗೆ ಹೋಗಿ ಕೇಳಿದನು “ಯಾಕಯ್ಯಾ ಕರೆದದ್ದು?”

ಗೌಡರು ಎಂದರು “ಹೋಗಿ ನೋಡಿಕೊಂಡು ಬಾ. ನೀರು ಈಗೆಷ್ಟು ಏರಿದೆ?”

ಲಿಂಗನು ಲಾಟೀನಿನ ಬತ್ತಿ ಏರಿಸಿ, ದೀಪ ದೊಡ್ಡದು ಮಾಡಿ, ಕಂಬಳಿ ಕೊಪ್ಪೆ ಹಾಕಿಕೊಂಡು ಹೊಳೆಯ ಕಡೆ ಹೋದನು. ಅವನು ಹೋದ ಸ್ವಲ್ಪ ಹೊತ್ತಿನಲ್ಲಿಯೆ ಗೌಡರು “ನಾಗಾ!” ಎಂದು ಕೂಗಿದರು. ಎಂಟು ವರ್ಷದ ಹುಡುಗನೊಬ್ಬನು ಮುರಬೇಯಿಸುವ ಒಲೆಯ ಕಡೆಯಿಂದ ಓಡಿ ಬಂದು, ಮುಂಡಿಗೆಯ ಮರೆಯಲ್ಲಿ ನಿಂತು “ಏನ್ರಯ್ಯಾ?” ಎಂದ.

ಗೌಡರು “ದನ ಎಲ್ಲಾ ಕಟ್ಟಿದ್ದೀರೇನೋ?” ಎಂದರು.

“ಹೌದ್ರಯ್ಯ ಎಲ್ಲಾ ಕಟ್ಟಿದ್ದೇವೆ. ತುಂಗೆದನ ಪುಟ್ಟಗುಡ್ಡ ಯಲ್ಡು ಮಾತ್ರ ಕೊಟ್ಟಿಗೆಗೆ ಬರಲೇ ಇಲ್ಲ.”

“ಹೋಗಲಿ ಬಿಡು!” ಎಂದು ಗೌಡರು ದಿಂಬಿನಮೇಲೆ ಒರಗಿಕೊಂಡರು. ನಾಗ ಮೆಲ್ಲಗೆ ಚಳಿಕಾಯಿಸಲು ಮುರುವಿನ ಒಲೆಗೆ ಜಾರಿದ.

ಅಷ್ಟು ಹೊತ್ತಿಗೆ ಹೊಳೆಗೆ ಹೋಗಿದ್ದ ಲಿಂಗ ಬಂದ. ಗೌಡರು “ನೀರೇರಿದೆಯೇನೊ?” ಎಂದು ಕೇಳಿದರು.

ಲಿಂಗ ಲಾಟೀನು ಕೆಳಗಿಳಿಸಿ, ಕಂಬಳಿ ಕೊಡವುತ್ತಾ “ನಾಲ್ಕನೆ ಮಟ್ಟಿಲಿಗೆ ಮುಟ್ಟ ಮುಟ್ಟ ಬಂದದೆ”

“ಹಾಗಾದರೆ ಕೊಟ್ಟಿಗೆಗೆ ಹೋಗಿ ದನಗಳ ಕೊರಳಕಣ್ಣಿ ಎಲ್ಲಾ ಬಿಚ್ಚಿ ಬಾ” ಎಂದು ಗೌಡರು ಚಿಂತಿಸುತ್ತಾ ಕೂತರು.

ಲಿಂಗ ತನ್ನ ಮಗ ನಾಗನನ್ನೂ ಕರೆದುಕೊಂಡು ಕೊಟ್ಟಿಗೆಗೆ ಹೋದ. ಅಷ್ಟುಹೊತ್ತಿಗೆ ನಾಗಮ್ಮ ನೀರು ತಂದಿಟ್ಟು “ಬಳ್ಳೆಹಾಕಿದೆ” ಎಂದರು. ಸುಬ್ಬಣ್ಣಗೌಡರು ಎದ್ದು ತಂಬಿಗೆ ತೆಗೆದುಕೊಂಡು ಬಾಯಿ ಮುಕ್ಕಳಿಸಿ ಊಟಕ್ಕೆ ಹೋದರು. ತಿಮ್ಮು ಸೀತೆ ಇಬ್ಬರೂ ಹೊರಗೆ ಬಂದು ಜಗಲಿಯ ಮೇಲಿನ ಲ್ಯಾಂಪಿನ ಬೆಳಕಿನಲ್ಲಿ ಮಕ್ಕಳಹರಟೆ ಹೊಡೆಯುತ್ತಿದ್ದರು. ತುಸು ಹೊತ್ತಿನಲ್ಲಿ ಲಿಂಗನೂ ಅವನ ನಾಗನೂ ಕೊಟ್ಟಿಗೆಯಿಂದ ಬಂದು ಕಾಲು ತೊಳೆದುಕೊಂಡು ಜಗಲಿಯ ಕೆಸರಲಿಗೆಯ ಮೇಲೆ ಕೂತರು. ಲಿಂಗ, ನಾಗ ಇವರೊಡನೆ ತಿಮ್ಮು, ಸೀತೆ ಇಬ್ಬರಿಗೂ ತುಂಬಾ ಸಲಿಗೆ.

ತಿಮ್ಮು “ಲಿಂಗಾ, ಹೊಳೆ ಪೂರಾ ಏರಿದೆಯೇನೋ?” ಎಂದು ಕೇಳಿದ.

ಲಿಂಗನ ಹತ್ತಿರ ಕುಳಿತಿದ್ದ ಸೀತೆ ಇವರ ಸಂಭಾಷಣೆಗೆ ಗಮನ ಕೊಡಲೆ ಇಲ್ಲ. ಅವಳ ಮನಸ್ಸು ಇನ್ನೇತರ ಮೇಲೋ ಹೋಗಿತ್ತು. ಒಂದು ಸಲ ಲಿಂಗನ ಕಾಲುಗಂಟುಗಳ ಕಡೆ ನೋಡುತ್ತಿದ್ದಳು; ಒಂದು ಸಲ ಕೈಗಂಟುಗಳ ಕಡೆ ನೋಡುತ್ತಿದ್ದಳು; ಸೋಜಿಗವಾಯಿತು.

ಕಡೆಗೆ ನಾಚಿಕೆಗಿಂತ ಕುತೂಹಲ ಹೆಚ್ಚಾಗಲು “ಲಿಂಗ, ಇದೇನು ಕಲೆಗಳೋ, ನಿನ್ನ ಕಾಲ್ಗಂಟಿನಲ್ಲಿ ಕೈಗಂಟಿನಲ್ಲಿ” ಎಂದು ಕೇಳಿದಳು.

ಲಿಂಗನ ಮುಖ ಇದ್ದಕಿದ್ದ ಹಾಗೆ ಬಾಡಿತು. ಬಾಯಿಂದ ಮಾತೆ ಹೊರಡಲಿಲ್ಲ. ಕಣ್ಣಿನಲ್ಲಿ ನೀರೂ ತುಂಬಿತು. ಮರುಕೊಳಿಸಿದ ಹಿಂದಿನ ದುಃಖ ತಡೆದುಕೊಂಡು ದೈನ್ಯದಿಂದ “ಅದೆಲ್ಲಾ ಕಟ್ಕೊಂಡು ನಿಮಗೇಕೆ, ಸೀತಮ್ಮಾ?” ಎಂದ.

ತಿಮ್ಮುಗೆ ಲಿಂಗನ ಆ ಸ್ಥಿತಿ ನೋಡಿ ಕನಿಕರದೊಂದಿಗೆ ಅಚ್ಚರಿಯೂ ಆಯಿತು. ಸೀತೆಗೆ ಬದಲಾಗಿ ಅವನೆ, “ಲಿಂಗಾ, ಸಂಕೋಚವೇಕೊ, ನಮ್ಮೊಡನೆ ಹೇಳಬಾರದೆ?” ಎಂದ.

“ಹೇಳದೆ ಏನು ತಿಮ್ಮಯ್ಯ ನಿಮ್ಮೊಡನೆ? ಇವು ಜೈಲಿನಲ್ಲಿ ಕೋಳಹಾಕಿದ್ದ ಗುರುತು.”

ಲಿಂಗನಂಥ ಮುಗ್ಧನಿಗೆ ಜೈಲಾದುದನ್ನು ಕೇಳಿ ತಿಮ್ಮುವಿಗೆ ಹೂವಿನಂಥ ಎದೆಗೆ ಸಿಡಿಲು ಬಡಿದಂತಾಗಿ “ಏನು? ನಿನಗೂ ಜೈಲೆ? ಯಾವ ಪುಣ್ಯಾತ್ಮನಪ್ಪಾ ನಿನಗೂ ಜೈಲು ಮಾಡಿದವನು?” ಎಂದು ಕೇಳಿದ.

“ನಾನು ಮೊದಲು ಮಾವಿನಹಲ್ಲಿ ರಂಗೇನಾಯ್ಕರ ಮನೇಲಿದ್ದೆ ಕೆಲಸಕ್ಕೆ. ಅಲ್ಲೇ ಐದಾರು ವರ್ಷ ಜೀತಮಾಡಿದೆ. ತಿಮ್ಮಯ್ಯ. ಏನು ಮಾಡೋದು. ಯಾರ್ಯಾರ ಜೊತೆಯಲ್ಲೋ ಸೇರಿಕೊಂಡು ಕಳ್ಳು ಕುಡಿಯೋದು ಕಲಿತೆ. ಒಂದು ದಿನ ಬೈಗಿನ ಹೊತ್ತು; ಕಳ್ಳು ಕುಡಿದೆ, ತಲೆಗೇರಿತು. ಕಳ್ಳಿನವನು ಏನು ಸೇರಿಸಿದ್ದನೋ ಅದಕ್ಕೆ, ಅಮಲು ಬರಲಿ. ದಾರೀಲಿ ಬರ್ತಾ ಇದ್ದೆ. ರಂಗೇನಾಯ್ಕರ ಮಗ ಶೇಷನಾಯ್ಕ ಅಂತ ಇದಾರೆ. ಅವರಿಗೂ ಕುಡಿದು ತಲೆಗೆ ಅಮಲೇರಿತ್ತು. ಎಲ್ಲಿಂದಲೋ ಹಿಂದಿನಿಂದ ಬಂದು ಬಾಯಿಗೆ ಬಂದಂತೆ ಬೈದರು. ನನಗೂ ಕುಡಿದ ಮತ್ತಿನಲ್ಲಿ  ಒಡೇರ ಮಕ್ಕಳು ಅಂತ ಗೊತ್ತಾಗಲಿಲ್ಲ. ಬಾಯಿಗೆ ಬಂದಂತೆ ಬೈದೆ. ಆಮೇಲೆ ಇಬ್ಬರಿಗೂ ಮಾರಾಮಾರಾಯಾಗಿ ಅವರಿಗೆ ಪೂರಾ ಪೆಟ್ಟಾಯ್ತು. ನನ್ನ ಮೇಲೆ ಪಿರ್ಯಾದು ಕೊಟ್ಟರು. ನಾನು ಬಡವ, ಅದರಿಂದ ಜೈಲಾಯ್ತು.”

ಕಡೆಯ ಎರಡು ಮಾತು ಹೇಳುವಾಗ ಅವನ ಕಂಠ ಗದ್ಗದವಾಯಿತು. ಕಣ್ಣಿನಲ್ಲಿ ನೀರುಕ್ಕಿ ಮಕ್ಕಳಂತೆ ಬಿಕ್ಕಿಬಿಕ್ಕಿ ಅತ್ತ. ಅದನ್ನು ನೋಡಿ ಅವನ ಮಗ ನಾಗನೂ ಆಳುತ್ತಿದ್ದ. ಸೀತೆಯ ಕಣ್ಣಿನಲ್ಲಿಯೂ ನೀರು ತುಳುಕಾಡುತ್ತಿತ್ತು. ತಿಮ್ಮು ಏನನ್ನೋ ಯೋಚಿಸುತ್ತ ಕುಳಿತಿದ್ದ. ಲಿಂಗನ ಎದೆಯೆಲ್ಲ ಸ್ವಲ್ಪ ತಣಿತ ಮೇಲೆ, ತಿಮಮು ಮಕ್ಕಾಳಾಡುವ ಮುದ್ದು ಮಾತಿನಿಂದ “ಲಿಂಗಾ, ನಿನಗೆ ಜೈಲಿನಲ್ಲಿ ತುಂಬಾ ಕಷ್ಟ ಕೊಟ್ಟರೆ?” ಎಂದು ಕೇಳಿದ.

“ತಿಮ್ಮಯ್ಯಾ. ಈಗ ಅದನ್ನೆಲ್ಲ ಹೇಳಿ ನೆನೆದುಕೊಂಡು ಅತ್ತರೆ ಏನು ಬಂದ ಹಾಗಾಯ್ತು? ನಾನು ಜೈಲಿನಿಂದ ಬರಬೇಕಾದರೆ ನನ್ನ ಹೆಂಡತಿ ತೀರಿಕೊಂಡಿದ್ದಳು. ನನ್ನ ಮಗ ಪರದೇಶಿಯಾಗಿ ಯಾರ್ಯಾರ ಕೈಗೆಲ್ಲಾ ಹಾರೈಸಿಕೊಂಡು ಅಲೆದುಕೊಂಡಿದ್ದ.”

“ಹಾಗಾದರೆ ಎಷ್ಟು ವರ್ಷ ಜೈಲಿನಲ್ಲಿದ್ದೆಯೋ, ಲಿಂಗ?”

“ಎರಡು ವರ್ಷ, ತಿಮ್ಮಯ್ಯಾ, ಎರಡು ವರ್ಷ! ಅದರ ಮೇಲಾದರೂ ಸುಖ ಅಂತೀರೋ! ಅದೂ ಇಲ್ಲ. ನಂಟರಿಷ್ಟರೆಲ್ಲ ನನ್ನ ದೂರ ಮಾಡಿದರು. ಜೈಲಿಗೆ ಹೋಗಿ ಬೆಂದವನೆಂದು. ಮಗಳನ್ನು ಕಟ್ಟಿಕೊಂಡು ಅಲೆದೂ ಅಲೆದೂ ಸುಟ್ಟು ಸುಣ್ಣಾಗಿದ್ದೆ. ಕಡೆಗೆ ಯಾರೋ ಶಿವನೂರು ಸುಬ್ಬಣ್ಣ ಗೌಡರಲ್ಲಿಗೆ ಹೋಗು ಎಂದರು. ಇಲ್ಲಿಗೆ ಬಂದೆ. ಮಾರಾಯರು, ನಿಮ್ಮ ತಂದೆ, ಅನ್ನ ಬಟ್ಟೆ ಕೊಟ್ಟು ಸತ್ತುಹೋದವನ ಬದುಕಿಸಿದರು.

ಲಿಂಗ ತನ್ನ ಕತೆ ಹೇಳಿ ಮುಗಿಸಲು, ತಿಮ್ಮು ನಿಟ್ಟುಸಿರು ಬಿಟ್ಟು, “ಲಿಂಗಾ, ನೀನಿನ್ನು ನಮ್ಮನೆ ಬಿಟ್ಟು ಹೋಗಲೇ ಬೇಡ. ನಾಗನೂ ಹಾಂಗೇ.” ಎಂದ.

“ಆಗಲಿ ನನ್ನೊಡೆಯ, ಹಾಂಗೇ ಆಗಲಿ.”

ಸಿಡಿಲು, ಗುಡುಗು, ಮಿಂಚು, ಗಾಳಿ, ಮಳೆ-ಇವುಗಳಿಂದ ರಾತ್ರಿ ಹುಚ್ಚೆದ್ದ ಭೈರವಿಯಾಗಿತ್ತು. ಮನೆಯಲ್ಲಿ ಎಲ್ಲರೂ ಮಲಗಿದ್ದರು. ಲಿಂಗ ಸುಬ್ಬಣ್ಣಗೌಡರು ಇಬ್ಬರೇ ಎಚ್ಚರವಾಗಿ ಜಗಲಿಯ ಮೇಲೆ ಕುಳಿತಿದ್ದರು. ಇಬ್ಬರೂ ಆಗಾಗ್ಗೆ ಹೋಗಿ ಹೊಳೆ ನೋಡಿಕೊಂಡು ಬರುತ್ತಿದ್ದರು. ಕೆರೆಯ ನೀರು ಬೇಗ ಬೇಗ ಏರುತ್ತಿತ್ತು.

“ಲಿಂಗಾ, ದೋಣಿ ಎಲ್ಲಿ ಕಟ್ಟಿದ್ದೀಯೆ? ಮನೆ ಬಿಡಬೇಕಾಗಿ ಬರಬಹುದು.”

ಲಿಂಗ ಸ್ವಲ್ಪ ಗಾಬರಿಯಾಗಿ “ಆ ಹುಳಿ ಮಾವಿನಮರದ ಬೇರಿಗೆ ಕಟ್ಟಿದ್ದೆ! ನೀರೇರೀತೋ ಏನೋ? ಅಲ್ಲಿಗೆ ಹೋಗುವುದಕ್ಕೆ ಆಗುತ್ತೋ ಇಲ್ಲವೋ? ಎಂದು ಹೇಳುತ್ತಾ ಲಾಟೀನು ತೆಗೆದುಕೊಂಡು ಹೊರಗೆ ಓಡಿದ. ಸುಬ್ಬಣ್ಣಗೌಡರೂ ಅವನ ಹಿಂದೆಯೇ ಓಡಿದರು. ಹೋಗಿ ನೋಡಲು ಲಿಂಗ ಊಹಿಸಿದಂತೆಯೇ ಆಗಿತ್ತು. ನೆರೆ ಮಾವಿನಮರದ ಬುಡವನ್ನು ಮುಚ್ಚಿಬಿಟ್ಟಿತ್ತು. ಇಬ್ಬರಿಗೂ ಸ್ವಲ್ಪ ಹೊತ್ತು ಏನೊ ತೋರಲಿಲ್ಲ. ಸುಮ್ಮನೆ ಹೊಳೆಯ ಕಡೆ ನೋಡುತ್ತಾ ನಿಂತರು. ಅಷ್ಟರಲ್ಲಿಯೆ ಮನಯೆ ಹಿಂದುಗಡೆ ಏನೋ ಬಿದ್ದ ಹಾಗೆ ದೊಡ್ಡ ಶಬ್ಧವಾಯಿತು. ಇಬ್ಬರಿಗೂ  ಅಲ್ಲಿಗೆ ಓಡಿದರು. ಹಿತ್ತಲಕಡೆ ಗೋಡೆ ಬಿದ್ದು ನೀರು ಅಂಗಳಕ್ಕೆ ನುಗ್ಗುತ್ತಿತ್ತು. ಇನ್ನು ಕಾಲಹರಣ ಮಾಡಿದರೆ ಸರ್ವನಾಶವೆಂದು ಗೌಡರಿಗೆ ತೋರಿತು.

ಕೋಣೆ ಕೋಣೆಗೆ ನುಗ್ಗಿ ಮನೆಯವರನ್ನೆಲ್ಲ ಎಬ್ಬಿಸಿದರು. ಅವರೆಲ್ಲ ಅರೆ ನಿದ್ದೆಯಲ್ಲಿ ಗಾಬರಿಯಿಂದ ಜಗಲಿಗೆ ನುಗ್ಗಿದರು. ಗೌಡರು ಅವರಿಗೆ ಗಾಬರಿಪಡಬೇಡಿರೆಂದು ಸಮಾಧಾನ ಹೇಳಿ ಲಿಂಗನಿಗಾಗಿ ಸುತ್ತಲೂ ನೋಡಿದನು. ಲಿಂಗ ಅಲ್ಲಿರಲಿಲ್ಲ. “ಲಿಂಗಾ! ಲಿಂಗಾ! ಎಂದು ಕೂಗಿದರು. ಉತ್ತರ ಬರಲಿಲ್ಲ. ಅಷ್ಟು ಹೊತ್ತಿಗೆ ಪ್ರಚಂಡವಾಗಿ ಗಾಳಿ ಬೀಸತೊಡಗಿತು. ಹುಚ್ಚೆದ್ದು ಸರಿ ಸುರಿಯಿತು. ಹೊರ ಅಂಗಳದಲ್ಲಿದ್ದ ತೆಂಗಿನಮರ ಮುರಿದು ಮನೆಗೆ ಹೊದಿಸಿದ ಸತುವಿನ ತಗಡುಗಳ ಮೇಲೆ ಬಿದ್ದು, ಬಹು ದೊಡ್ಡ ಶಬ್ದವಾಯಿತು. ತಿಮ್ಮು, ಸೀತೆ, ನಾಗ ಮೂವರು ಕಿಟ್ಟನೆ ಕಿರಿಚಿಕೊಂಡರು. ನಾಗಮ್ಮನವರೂ “ದೇವರೇ” ಎನ್ನುತ್ತಿದ್ದರು. ಗೌಡರು ಅವರಿಗೆಲ್ಲ ಧೈರ್ಯ ಹೇಳಿ, ಲಿಂಗನನ್ನು ಹುಡುಕಿಕೊಂಡು ಕರೆಯುತ್ತಾ ಓಡಿದರು. ಹೋಗಿ ನೋಡಲು ಲಿಂಗ ಮಾವಿನಮರ ಬುಡ ಸೇರಿ ದೋಣಿ ಬಿಚ್ಚುತ್ತಿದ್ದ. ಮನೆಯ ಬೆಳಕಂಡಿಗೆ ಒಂದು ಕತ್ತದ ಮಿಣಿ ಕಟ್ಟಿ, ಅದನ್ನು ಹಿಡಿದು ಅದರ ಸಹಾಯದಿಂದ ಮಾವಿನ ಮರದ ಬುಡಕ್ಕೆ ಸೇರಿದ್ದ. ತುಸು ಹೊತ್ತಿನಲ್ಲಿಯೆ ದೋಣಿ ಬಿಚ್ಚಿ. ಅದರೊಳಗೆ ದಾಟಿದ. ಬೆಳಕಂಡಿಗೆ ಬಿಗಿದ ಹುರಿಯನ್ನು ಮಾತ್ರ ಕೈಯಲ್ಲಿಯೇ ಹಿಡಿದುಕೊಂಡಿದ್ದ.

ಗಾಳಿಯ ಅಬ್ಬರದಲ್ಲಿ ಲಿಂಗ ಗೌಡರನ್ನು ಕುರಿತು “ಅಯ್ಯಾ, ಹಗ್ಗ ಹಿಡಿದು ಎಳೆಯಿರಿ” ಎಂದು ಗಟ್ಟಿಯಾಗಿ ಕೂಗಿದ. ಗೌಡರೂ ಹಾಗೆಯೆ ಮಾಡಿದರು. ದೋಣಿ ದಡ ಸೇರಿತು. ಅಷ್ಟರಲ್ಲಿ ಒಳಂಗಳದಿಂದ ಏಳೆಂಟು ಜನ ಕಿಟ್ಟನೆ ಚೀತ್ಕರಿಸಿದಂತಾಯಿತು.

ಗೌಡರು “ಲಿಂಗಾ, ದೋಣಿ ಬಾಗಿಲಿಗೆ ತೆಗೆದುಕೊಂಡು ಬಾ! ಬೇಗ!” ಎಂದು ಹೇಳಿ ಒಳಗೆ ನುಗ್ಗಿದರು. ಹೆಬ್ಬಾಗಿಲು ದಾಟುವುದರೊಳಗಾಗಿಯೆ ಕೆಲಸದ ಹೆಂಗಸು ಸೋಮಕ್ಕ ಬಾಯಿ ಕಳೆದುಕೊಂಡು ಕಣ್ಕಣ್ಣು ಬಿಟ್ಟುಕೊಂಡು ಏದುತ್ತಾ ಓಡಿಬಂದಳು.

ಗೌಡರನ್ನು ಕಂಡೊಡನೆ ಸೋಮಕ್ಕ ಕೂಗಿದಳು: “ಉಪ್ಪರಿಗೆ ಗೋಡೆ ಬಿದ್ದು ಹೋಯ್ತು! ಜಗಲಿಗೆ ನೀರೇರ್ತಾ ಇದೆ.”

ಗೌಡರು ಜಗಲಿಗೆ ಬಂದು “ನೀವೆಲ್ಲಾ ಹೆಬ್ಬಾಗಿಲಿಗೆ ಓಡಿ!ಬೇಗ!” ಲಿಂಗ ದೋಣಿ ತರ್ತಾನೆ! ಏ, ನಾಗಾ, ನೀನಿಲ್ಲಿ ಬಾರೊ” ಎಂದರು. ನಾಗ ಗೌಡರ ಸಂಗಡ ಹೋದ.

ನಾಗಮ್ಮ, ತಿಮ್ಮು, ಸೀತೆ, ಲೋಕಮ್ಮ, ಸೋಮಕ್ಕನ ಮಗಳು ದಾಸಮ್ಮ, ಎಲ್ಲರೂ ಹೆಬ್ಬಾಗಿಲಿಗೆ ಓಡಿದರು. ಸೋಮಕ್ಕ ಮಾತ್ರ ಮಾಣಿಗೆ ಕೋಣೆಯಲ್ಲಿ ತಾನು ಇಟ್ಟಿದ್ದ “ಪುಟ್ಟ ಗಂಟು” ತರಲು ಓಡಿದವಳು ಹಿಂದಕ್ಕೆ ಬರಲೇ ಇಲ್ಲ. ಗೌಡರು ಜಗಲಿಯ ಮೇಲಿದ್ದ ತಮ್ಮ ದೊಡ್ಡ ಬೀರಿನ ಬಾಗಿಲು ತೆಗೆದು ಎರಡು ಪೆಟ್ಟಿಗೆಗಳನ್ನು ಈಚೆಗೆ ತೆಗೆದಿಟ್ಟು; ಬೀರಿನ ಬಾಗಿಲು ಹಾಕಿ ಬೀಗ ಹಾಕಿದರು. ಅಲ್ಲಿದ್ದ ಕಬ್ಬಿಣದ ಸಂದುಕದ ಬಾಗಿಲನ್ನೂ ತೆರೆದರು. ಆದರೆ ಮತ್ತೇನನ್ನೋ ಯೋಚಿಸಿ ಅದನ್ನು ಪುನಃ ಹಾಗೆಯೆ ಮುಚ್ಚಿ ಬೀಗ ಹಾಕಿದರು.

“ನಾಗಾ, ಈ ಪೆಟ್ಟಿಗೆ ಹೊತ್ತುಕೊಳ್ಳೊ” ಎಂದರು. ನಾಗ ಒಂದು ಹೊತ್ತುಕೊಂಡ; ಗೌಡರು ಮತ್ತೊಂದು ಹೊತ್ತುಕೊಂಡರು. ಲಿಂಗ ಎಲ್ಲರನ್ನೂ ದೋಣಿಗೆ ಹತ್ತಿಸಿ ಅದರ ತುದಿ ಹಿಡಿದುಕೊಂಡು ನಿಂತಿದ್ದ. ಗೌಡರು ಓಡಿ ಬಂದು ಎರಡು ಪೆಟ್ಟಿಗೆಗಳನ್ನು ದೋಣಿಯೊಳಗಿಟ್ಟು, ನಾಗನನ್ನೂ ಎತ್ತಿ ದೋಣಿಗೆ ಹಾಕಿ, ತಾವೂ ಒಳಗೆ ದಾಟಿ, ಲಿಂಗನಿಗೆ ದೋಣಿ ಹತ್ತುವಂತೆ ಹೇಳಿ, ಒಂದು ಹುಟ್ಟು ತೆಗೆದುಕೊಂಡು ದೋಣಿಯ ತುದಿಯಲ್ಲಿ ಕುಳಿತರು. ಅಷ್ಟು ಹೊತ್ತಿಗೆ ಸೀತೆ ನಾಗಮ್ಮನವರನ್ನು ಕುರಿತು “ಅವ್ವಾ ಸೋಮಕ್ಕೆಲ್ಲಿ?” ಎಂದು ಕೇಳಿದಳು. ಆಗಲೆ ಮನೆ ಮುರಿದು ಬಿದ್ದಂತಾಗಿ ಏನೋ ಒಂದು ಚೀತ್ಕಾರದ ಧ್ವನಿಯೂ ಕೇಳಿಬಂದಿತು. ಸೋಮಕ್ಕನ ಆಸೆಯನ್ನು ಅವಳ ಮಗಳು ದಾಸಮ್ಮ ಕೂಡ ಬಿಟ್ಟಳು.

ದೋಣಿ ಬಹಳ ಸಣ್ಣದು. ಐದಾರು ಜನರು ಕೂರುವಂತಾದ್ದು. ತುಂಬದ ನೆರೆಯಲ್ಲಂತೂ ಇಬ್ಬರೇ ಸರಿ. ಆಗಲೇ ಅದರೊಳಗೆ ಏಳು ಜನರಿದ್ದರು. ಸಾಲದಿದ್ದಕ್ಕೆ ಜೊತೆಗೆ ಎರಡು ಪೆಟ್ಟಿಗೆ ಬೇರೆ; ಲಿಂಗನಿಗೆ ಜಾಗವೇ ತೋರದೆ, ಬಗೆಯೇ ಹರಿಯದೆ ಸುಮ್ಮನೆ ನಿಂತು ದೋಣಿ ಸುರಕ್ಷಿತವಾಗಿ ದಡ ಸೇರುವುದೇ ಎಂದು ಚಿಂತಿಸುತ್ತಿದ್ದ.

ಲಿಮಗ ತಡಮಾಡಿದ್ದನ್ನು ಕಂಡು ಗೌಡರು “ಲಿಂಗಾ, ಹೊತ್ತೇಕೋ? ಹತ್ತೋ!” ಎಂದು ಕಳವಳದಿಂದ ಕೂಗಿ ಗದರಿಸಿದರು.

ಲಿಂಗ “ಅಯ್ಯಾ, ಜಾಗವೇ ಇಲ್ಲವಲ್ಲ. ಈಗಾಗಲೇ ದೋಣಿಗೆ ಭಾರ ಹೆಚ್ಚಾಗಿದೆ. ನಾನೂ ಕೂತರೆ ದೋಣಿ ದಡ ಕಾಣುವ ಬಗೆ?” ಎಂದ.

“ಹಾಗಾದರೆ ಈಗ ಮಾಡೋದೇನೊ? ಏನಾದರೂ ಆಗಲಿ ಹತ್ತು. ದೇವರು ಮಾಡಿಸಿದ್ದಾಯಿತು” ಎನ್ನುತ್ತಾ ಗೌಡರು ನದಿಯ ಕಡೆ ನೋಡಿದರು. ಅವರ ಮೈ ಸ್ವಲ್ಪ ನಡುಗಿತು.

ಲಿಂಗ “ಹಾಗಾದರೆ ಅಯ್ಯಾ, ಒಂದು ಕೆಲಸ ಮಾಡಿ; ನೀವೆಲ್ಲಾ ದಡ ಸೇರಿದ ಮೇಲೆ ದೋಣಿ ಕೊಟ್ಟು ಯಾರನ್ನಾದರೂ ಕಳ್ಸಿ. ಅಲ್ಲೀತನಕ ನಾ ಇಲ್ಲೇ ಇರ್ತೇನೆ. ನಿಮಗೇನೂ ಭಯ ಬೇಡಿ” ಎಂದ.

ಗೌಡರಿಗೆ ಸಿಟ್ಟು ಬಂತು. ಲಿಂಗನಿಗೆ ದೋಣಿ ಹತ್ತುವಂತೆ ಗಟ್ಟಿಯಾಗಿ ಕೂಗಿ ಅಪ್ಪಣೆ ಮಾಡಿದರು. ಲಿಂಗ ಮರುಮಾತಾಡದೆ ದೋಣಿಯ ಮತ್ತೊಂದು ತುದಿಯಲ್ಲಿ ಹುಟ್ಟು ಹಿಡಿದು ಕುಳಿತ. ಗೌಡರು ತಮ್ಮ ತೋಟಾಕೋವಿಯಿಂದ ಹತ್ತು ಹನ್ನೆರಡು ಬೆದರುಗುಂಡು ಹಾರಿಸಿದರು.

ದೋಣಿ ಹೊರಟಿತು. ಆ ಗಾಳಿ, ಆ ಮಳೆ, ಆ ಕತ್ತಲು ಇವುಗಳ ನಡುವೇ ಬಂದೂಕಿನ ‘ಢಂ ಢಂ’ ಶಬ್ದಗಳು ಗಂಭೀರವಾಗಿ ಹೊರಟು ಮಲೆನಾಡಿನ ಬೆಟ್ಟಗುಡ್ಡಗಳಿಂದ ಗಂಭೀರವಾಗಿ ಮರುದನಿಯಾದುವು, ದೂರದ ಹಳ್ಳಿಗಳಲ್ಲಿದ್ದ ಜನರು ಎಚ್ಚತ್ತು ಗುಂಡಿನ ಶಬ್ದಗಳನ್ನು ಕೇಳಿ ಬೆರಗಾದರು.

ಶಿವನೂರಿಗೆ ಎರಡು ಮೈಲಿ ದೂರದಲ್ಲಿದ್ದ ನುಗ್ಗೇಹಳ್ಳಿಯಲ್ಲಿ ಮನೆಯ ಜಗಲಿಯ ಮೇಲೆ ಮಲಗಿದ್ದ ರಾಮೇಗೌಡರಿಗೂ ಅವರ ತಮ್ಮ ಸಿದ್ಧೇಗೌಡರಿಗೂ ಈಡಿನ ಶಬ್ದ ಕೇಳಿ ಎಚ್ಚರವಾಗಿ ಬೆರಗಿನಿಂದ ಎದ್ದು ಕುಳಿತರು.

ಸಿದ್ಧೇಗೌಡರು ರಾಮೇಗೌಡರನ್ನು ಕುರಿತು “ಅಣ್ಣಾ, ಅದೇನೋ ಈಡು ಕೇಳಿಸಿದುವಲ್ಲ?” ಎಂದರು.

ರಾಮೇಗೌಡರು “ಎತ್ತ ಮುಖದಿಂದ ಕೇಳಿಸಿದುವೋ?” ಎಂದರು.

“ಕೆಮ್ಮಣ್ಣುಬ್ಬಿನ ಕಡೆಯಿಂದ ಅಂತ ಕಾಣ್ತದಪ್ಪಾ.”

“ಅಲ್ಲಾ ನೋಡಿ, ನಂಗೇಕೋ ಸ್ವಲ್ಪ ಸಂಶಯಾನೆ. ಶಿವನೂರಿನ ಕಡೆಯಿಂದ ಕೇಳಿಸಿದ ಹಾಂಗಾಯ್ತು.

“ಏನೋ ಸಂಗತಿ ಇರಬೇಕಪ್ಪಾ. ಏನಾದ್ರಾಗಲಿ. ನಾಲ್ಕೈದು ಜನ ಕರಕೊಂಡು ಹೋಗೋಣ.”

ಸಿದ್ಧೇಗೌಡರು ಅವಸರದಿಂದ ಲಾಟೀನು ಹೊತ್ತಿಸಿದರು. ರಾಮೇಗೌಡರು ಮೂಲೆ ಹಿಡಿದು ಮಲಗಿ ಕೊರೆಯುತ್ತಿದ್ದ ರಂಗನನ್ನು ಎಬ್ಬಿಸಿ, ನಾಲ್ಕೈದು ಜನ ಗಟ್ಟದ ಕೆಳಗಿನವರನ್ನು ಕರೆತರುವಂತೆ ಹೇಳಿದರು.

“ರಾಮಾ! ರಾಮಾ!” ಎಂದು ಹೆಂಗಸರುಮಕ್ಕಳ ಗೋಳಾಟ ಪ್ರವಾಹದ ಅಲೆಗಳ ಸೆಳವಿನ ನಡುವೆ ಸಿಕ್ಕಿ ಏಳುತ್ತಾ ಬೀಳುತ್ತ ತೇಲುವ ದೋಣಿಯಿಂದ ಹೊರಟು ಗಾಳಿಯ ಭೋರಾಟದಲ್ಲಿ ಸೇರುತ್ತಿತ್ತು. ಸುಬ್ಬಣ್ಣಗೌಡರು, ಲಿಂಗ ಇಬ್ಬರೂ ಎದೆಗೆಡದೆ ಹುಟ್ಟು ಹಾಕುತ್ತಿದ್ದರು. ದೋಣಿಯ ನಡುವೆ ಇದ್ದ ಲಾಟೀನಿನ ಬೆಳಕು, ಕಗ್ಗತ್ತಲೆಗೆ ಹೆದರಿ ಮೂಲೆ ಸೇರೀತೋ ಏನೋ ಹಾಗೆ, ತನ್ನ ಸುತ್ತಲೂ ಒಂದಡಿಯ ಜಾಗವನ್ನು ಮಾತ್ರ ಬೆಳಗುತ್ತಿದ್ದಿತು. ಭಾರದಿಂದ ದೋಣಿ ಈಗಲೋ  ಆಗಲೋ ಮುಳುಗುವಂತೆ ತೋರುತ್ತಿತ್ತು.

ಗೌಡರು ದೋಣಿಯಲ್ಲಿದ್ದ ಎರಡು ಬೆಲೆಯುಳ್ಳ ಪೆಟ್ಟಿಗೆಗಳನ್ನೂ ತೆಗೆದು ಹೊಳೆಗೆ ಎಸೆದರು. ಆದರೂ ಭಾರ ಕಡಿಮೆಯಾಗಲಿಲ್ಲ. ಎಷ್ಟು ಹೇಳಿದರೂ ಕೇಳದೆ ಹೆಂಗಸರು ಮಕ್ಕಳು “ರಾಮಾ, ರಾಮಾ” ಎಂದು ಕೂಗಿ ಗೋಳಾಡುವುದನ್ನು ಬಿಡಲೇ ಇಲ್ಲ. ದಿಕ್ಕು ಕೆಟ್ಟ ಹುಚ್ಚನಂತೆ ದೋಣಿ ಅಲೆಯತೊಡಗಿತು. ಒಂದು ಸಾರಿ ಅದು ಮುಳುಗುವಂತಾಗಿ ಸ್ವಲ್ಪ ನೀರು ಒಳಗೆ ನುಗ್ಗಿತು. ಮತ್ತೆ “ರಾಮಾ ರಾಮಾ” ಎಂದು ಬೊಬ್ಬೆ ಹಾಕಿದರು.

ಹುಟ್ಟು ಹಾಕುತ್ತಲಿದ್ದ ಲಿಂಗನು ಹೆಂಗಸರು ಮಕ್ಕಳ ಗೋಳನ್ನು ಕಂಡು ಎದೆ ಮರುಗಿದನು. ದೋಣಿ ಭಾರದಿಂದ ಮುಳುಗುವುದು ಖಂಡಿತವೆಂದೇ ಅವನು ನಿಶ್ಚಯಿಸಿದನು. ಭಾರವನ್ನು ಕಡಮೆ ಮಾಡುವ ದಾರಿಯನ್ನು ಯೋಚಿಸಿದನು; ಬಗೆಯೇ ಹರಿಯಲಿಲ್ಲ. ಸ್ವಲ್ಪ ಹೊತ್ತಿನ ಮೇಲೆ ಇದ್ದಕಿದ್ದ ಹಾಗೆ ಅವನ ಮುಖ ಗಂಭೀರವಾಯಿತು. ಹುಟ್ಟುಹಾಕುವುದನ್ನು ನಿಲ್ಲಿಸಿದ. ಸುತ್ತಲೂ ನೋಡಿದ. ಮಳೆಯ ಭರದಲ್ಲಿ ಒಬ್ಬರಿಗೊಬ್ಬರು ಕಾಣುತ್ತಲೇ ಇರಲಿಲ್ಲ. ಕಾಣುವಹಾಗಿದ್ದರೂ ಯಾರೂ ನೋಡುವ ಸ್ಥಿತಿಯಲ್ಲಿರಲಿಲ್ಲ. ತಾನು ಹೊಳೆಗೆ ಹಾರಿದರೆ ಭಾರ ಕಡಿಮೆಯಾಗಿ, ಸುರಕ್ಷಿತವಾಗಿ ದೋಣಿ ದಡಕ್ಕೆ ಹೋಗುವುದೆಂದು ಹಾರೈಸಿದ. ತನ್ನನ್ನು ಲೋಕವೆಲ್ಲ ಕಳ್ಳನೆಂದು ದೂರಮಾಡಿದಾಗ, ಅನ್ನ  ಬಟ್ಟೆ ಕೊಟ್ಟು ಸಾಕಿದವರ ಬಳಗವನ್ನು ಹೇಗಾದರೂ ಉಳುಹಬೇಕೆಂದು ಮಹಾಲೋಚನೆ ಮಾಡಿದ. ಹುಟ್ಟನ್ನು ದೋಣಿಯ ಒಳಗಿಟ್ಟು ಹೊಳೆಗೆ ಹಾರಲು ಸಿದ್ಧನಾದ.

ಇನ್ನೇನು ಹಾರಬೇಕು! ಅಷ್ಟರಲ್ಲಿಯೆ ತನ್ನ ಮಗನ ನೆನಪಾಯಿತು. ಎದೆ ನಡುಗಿ ಹಿಂಜರಿಯಿತು. ಹಾಗೆಯೆ ನಿಂತ.

ಅಷ್ಟರಲ್ಲಿಯೆ ದೋಣಿ ಮುಳುಗುವಂತಾಗಿ “ರಾಮ! ರಾಮ!! ಅಯ್ಯೋ!” ಎಂದು ಕೂಗಿಕೊಂಡರು.

ಲಿಂಗ ಬಿಸುಸುಯ್ದ. ಎಲ್ಲರೂ ಇದ್ದಂತೆಯೇ ದೋಣಿ ದಡವನ್ನು ಸೇರಬಾರದೇಕೆ? ಎಂದು ಯೋಚಿಸಿದ. ಮತ್ತೆ, ಅದು ಆತ್ಮವಂಚನೆಯ ಆಲೋಚನೆ ಎಂದು ತಿಳಿದ.

“ಅಯ್ಯೋ!” ಎಂದು ಮತ್ತೆ ರೋದಿಸಿದರು.

ಲಿಂಗ ಹಿಂದುಮುಂದು ನೋಡದೆ “ರಾಮ! ರಾಮ!!” ಎಂದುಕೊಂಡು ಹೊಳೆಗೆ ಹಾರಿದ.

ಅವನು ಹಾರಿದ್ದು ಆ ಕಗ್ಗತ್ತಲಲ್ಲಿ, ಆ ಗಾಳಿ ಮಳೆ ಹೊಳೆಗಳ ಭೋರಾಟದಲ್ಲಿ, ಯಾರಿಗೂ ತಿಳಿಯಲಿಲ್ಲ. ದೋಣಿಯ ಭಾರ ಕಡಮೆಯಾಗಿ ಮೊದಲಿಗಿಂತಲೂ ಸ್ವಲ್ಪ ಸರಾಗವಾಗಿ  ಹೋಗತೊಡಗಿತು.

ಗೌಡರು “ಲಿಂಗಾ, ದೋಣಿ ಸ್ವಲ್ಪ ಸರಾಗವಾಗಿ ಹೋಗುತ್ತದೆಯೋ ಭಗವಂತನ ದಯೆಯಿಂದ” ಎಂದರು. ಲಿಂಗನ ದಯೆಯೂ ಜೊತೆಗೆ ಸೇರಿತ್ತೆಂದು ಅವರಿಗೆ ತಿಳಿದಿರಲಿಲ್ಲ.

ಅಷ್ಟರಲ್ಲಿ ಹೆಂಗಸರು ಮಕ್ಕಳೆಲ್ಲ “ದೀಪ! ದೀಪ!” ಎಂದು ಕೂಗಿದರು. ಸುಬ್ಬಣ್ಣಗೌಡರು ತಿರುಗಿ ನೋಡಲು, ಬಿಳಿಯಾದ ಹೊಳೆಯ ದಡದಲ್ಲಿ ಐದಾರು ದೀಪಗಳು ಕಂಡುಬಂದವು. ದೀಪದ ಬೆಳಕಿನಲ್ಲಿ ಹತ್ತು ಹದಿನೈದು ಜನರು ಸುಳಿದಾಡುತ್ತಿದ್ದುದನ್ನೂ ಕಂಡರು. ಅಂಚಿನಿಂದ ನಾಲ್ಕೈದು ಬಂದೂಕಿನ ಶಬ್ದಗಳೂ ಕೇಳಿಸಿದುವು. ಮೆಲ್ಲಮೆಲ್ಲನೆ ತೇಲುತ್ತಾ ದೋಣಿ ದಡ ಮುಟ್ಟಿತು.

ನುಗ್ಗೇಹಳ್ಳಿಯ ರಾಮೇಗೌಡರೂ ಸಿದ್ದೇಗೌಡರೂ ಓಡಿಬಂದು ಹೆಂಗಸರು ಮಕ್ಕಳನ್ನೆಲ್ಲಾ ಎಚ್ಚರಿಕೆಯಿಂದ ದೋಣಿಯಿಂದ ಇಳಿಸಿದರು. ಸುಬ್ಬಣ್ಣಗೌಡರು ಉಸ್ಸೆಂದು ಇಳಿದರು. ಎಲ್ಲರಿಗೂ ದಡ ಸೇರಿದೆವಲ್ಲಾ ಬದುಕಿದೆವಲ್ಲಾ ಎಂಬುದೊಂದೇ ಯೋಚನೆ. ಆ ಆನಂದದ ಸಡಗರದಲ್ಲಿ ಲಿಂಗನ ನೆನಪು ಆಗದಿದ್ದುದು ಏನೂ ಅತಿಶಯವಲ್ಲ. ಆದರೆ ನಾಗ ಮಾತ್ರ ಅಳುತ್ತಿದ್ದ. ಅದನ್ನು ನೊಡಿ ನುಗ್ಗೇಹಳ್ಳಿಯ ಸಿದ್ದೇಗೌಡರು “ಯಾಕಪ್ಪಾ ಅಳ್ತೀಯೇ? ಏನಾಯ್ತೇ?” ಎಂದು ಕೇಳಿದರು.

ಅವನು ಬಿಕ್ಕಿಬಿಕ್ಕಿ ಅಳುತ್ತ “ಅಪ್ಪ!” ಎಂದ.

ಸುಬ್ಬಣ್ಣಗೌಡರು “ಏನದು, ಸಿದ್ದೇಗೌಡ್ರೆ?” ಎಂದರು.

“ಈ ಹುಡುಗ ಅಪ್ಪಾ ಎಂದು ಅಳ್ತಾನೆ!”

ಸುಬ್ಬಣ್ಣಗೌಡರ ಮುಖ ಬೆಳ್ಳಗಾಗಿ ತಟಕ್ಕನೆ ಎದ್ದುನಿಂತು “ಲಿಂಗಾ! ಲಿಂಗಾ!” ಎಂದು ಕರೆದರು. ಕಾಡಿನಿಂದ “ಲಿಂಗಾ! ಲಿಂಗಾ!” ಎಂದು ಮರುದನಿಯಾಯಿತು. ಲಿಂಗ ಎಲ್ಲಯೂ ಕಾಣಲಿಲ್ಲ. ದೋಣಿಗೆ ಓಡಿದರು. ಅಲ್ಲಿಯೂ ಇರಲಿಲ್ಲ. ಘೋರವಾದ ಕಗ್ಗತ್ತಲನ್ನು ಹೊದೆದುಕೊಂಡು ಗಂಭೀರವಾಗಿಯೂ ಭೀಕರವಾಗಿಯೂ ವಿಶಾಲವಾಗಿಯೂ ಹರಿಯುವ ಕ್ರೂರ ನದಿಯನ್ನು ದಿಟ್ಟಿಸಿ ನೋಡಿದರು. ಅವರ ಎದೆ ನಡುಗಿತು. ಕಣ್ಣೀರು ಸುರಿಯಿತು. “ಲಿಂಗಾ! ಲಿಂಗಾ!!” ಎಂದು ರೋದಿಸಿದರು. ನಾಗನೂ ಬಿದ್ದು ಬಿದ್ದು ಅಳುತ್ತಿದ್ದನು. ತಿಮ್ಮು ಸೀತೆ ಇಬ್ಬರೂ ಅಳಲಾರಂಭಿಸಿದರು.

“ನಮ್ಮ ಮನೆಯ ಒಂದು ಬೆಳಕೇ ಹೋಯಿತು” ಎಂದು ಸುಬ್ಬಣ್ಣಗೌಡರು ಅಲ್ಲಿದ್ದವರೊಡನೆ ಹೇಳಿಕೊಂಡು ಗೋಳಿಟ್ಟರು. ಲಿಂಗನ ಆಕಸ್ಮಿಕವಾದ ಅನಿರೀಕ್ಷಿತ ಮರಣಕ್ಕಾಗಿ ಎಲ್ಲರೂ ಶೋಕಿಸಿದರು. ಗೌಡರು ನಾಗನನ್ನು ಬಹಳವಾಗಿ ಸಂತೈಸಿದರೂ ಅವನು ಅಳುವುದನ್ನೂ “ಅಪ್ಪಾ! ಅಪ್ಪಾ!” ಎಂದು ಕರೆಯುವುದನ್ನೂ ಬಿಡಲೇ ಇಲ್ಲ.

ಲಿಂಗ ಹೊಳೆಯ ಪಾಲಾದುದು ಹೇಗೆ ಎಂಬುದು ಮಾತ್ರ ಒಬ್ಬರಿಗೂ ಬಗೆಹರಿಯಲಿಲ್ಲ. ಸುಬ್ಬಣ್ಣಗೌಡರೂ ಲಿಂಗನ ಸುಳಿವು ಎಲ್ಲಾದರೂ ಕಾಣಬಹುದೋ ಎಂಬ ಆಸೆಯಿಂದ ದಡವನ್ನೆಲ್ಲಾ ಹುಡುಕಲು ಕೆಲವು ಆಳುಗಳನ್ನು ಕಳುಹಿಸಿದರು.

ರಾಮೇಗೌಡರು ಎಲ್ಲರನ್ನೂ ನುಗ್ಗೇಹಳ್ಳಿಗೆ ಬರುವಂತೆ ಪ್ರಾರ್ಥಿಸಿದರು.

ದಾರಿಯಲ್ಲಿ ಲಿಂಗನು ಹಠಾತ್ತಾಗಿ ಮರೆಯಾದ ವಿಚಾರವನ್ನೇ ಪ್ರಸ್ತಾಪಿಸಿ ವಿಸ್ಮಯ ಪಡುತ್ತಾ ಸ್ವಲ್ಪ ಹೊತ್ತಿನಲ್ಲಿಯೇ ಎಲ್ಲರೂ ನುಗ್ಗೇಹಳ್ಳಿಗೆ ಸೇರಿದರು.

ಬೆಳಗಾಯಿತು. ಮಳೆ ಇನ್ನೂ ನಿಂತಿರಲಿಲ್ಲ. ರಾತ್ರಿಯ ಗಡಿಬಿಡಿಯಿಂದ ಬಳಲಿ ಬೆಂಡಾದ ಸುಬ್ಬಣ್ಣಗೌಡರು ಹಾಸಗೆಯ ಮೇಲೆ ಮಲಗಿಕೊಂಡು ರಾಮೇಗೌಡರು ಸಿದ್ಧೇಗೌಡರೊಡನೆ ಹಿಂದಿನ ರಾತ್ರಿ ನಡೆದ ಸಂಗತಿಗಳನ್ನು ಕುರಿತು ಮಾತಾಡುತ್ತಿದ್ದರು. ಅವರಿಗೆ ಸ್ವಲ್ಪ ದೂರದಲ್ಲಿ, ಆಳುತ್ತಿದ್ದ ನಾಗನನ್ನು ತಿಮ್ಮು ಸೀತೆ ಇಬ್ಬರೂ ಸಮಾಧಾನಪಡಿಸುತ್ತಿದ್ದರು.

ಸೀತೆ “ಅಳಬೇಡ, ನಾಗ: ಅಪ್ಪ ಬರ್ತಾನೆ” ಎಂದು ಅವನ ಕಣ್ಣೀರು ಒರೆಸಿದಳು.

ನಾಗ ಬಿಕ್ಕಿ ಬಿಕ್ಕಿ ಅತ್ತ. ತಿಮ್ಮು “ಲಿಂಗ ಬರ್ತಾನೋ ನಾಗ” ಅಳೋದ್ಯಾಕೋ? ಸುಮ್ಮನಿರೊ” ಎಂದು ಸಂತೈಸುತ್ತಿದ್ದ.

ಅಷ್ಟರಲ್ಲಿ ಹೊರಂಗಳದಲ್ಲಿ ಏನೋ ಗದ್ದಲವಗಿ “ಲಿಂಗ ಬಂದಾ! ಲಿಂಗ!” ಎಂಬ ಕೂಗು ಕೇಳಿಸಿತು.

ಸುಬ್ಬಣ್ಣಗೌಡರು ಎದ್ದು ಹೊರಗೆ ಓಡಿದರು. ರಾಮೇಗೌಡರು ಮೊದಲಾದವರು ಅವರ ಹಿಂದೆಯೆ ನುಗ್ಗಿದರು. ತಿಮ್ಮು ಸೀತೆ ಇಬ್ಬರೂ ನಾಗನನ್ನು ಎಳೆದುಕೊಂಡು ಅಲ್ಲಿಗೆ ಓಡಿದರು. ವಾಸ್ತವವಾಗಿಯೂ ಲಿಂಗ ಬಂದಿದ್ದ! ನಾಗ “ಅಪ್ಪಾ” ಎಂದು ಓಡಿಹೋಗಿ ಅವನನ್ನು ತಬ್ಬಿಕೊಂಡ. ಲಿಂಗನ ಬಟ್ಟೆ ಬರಿಯೆಲ್ಲಾ ಒದ್ದೆಯಾಗಿ ಮೈಯೆಲ್ಲಾ ಕೆಸರಾಗಿತ್ತು. ಬಹಳ ಬಳಲಿ ಕಂಗೆಟ್ಟು ನಡುಗುತ್ತಿದ್ದ ಅವನನ್ನು ಒಳಗೆ ಕರೆದುಕೊಂಡು ಹೋಗಿ, ಬೇರೆ ಬಟ್ಟೆ ಉಡಿಸಿ, ಕಾಫಿ ತಿಂಡಿ ಕೊಟ್ಟು, ಬೆಚ್ಚಗೆ ಮಲಗಿಸಿದರು.

ಆಮೇಲೆ ಸುಬ್ಬಣ್ಣಗೌಡರು ಅವನ ಹಾಸಗೆ ಬಳಿ ಕುಳಿತು “ಲಿಂಗ, ಇದೇನು ಸಮಾಚಾರ?” ಎಂದರು.

ಲಿಂಗ ಕಿರುದನಿಯಿಂದ “ಹುಟ್ಟುಹಾಕುತ್ತಾ ಇದ್ದೆ. ಒಂದುಸಲ ದೋಣಿ ಮೇಲೆಕೆಳಕಾಗಲಿಲ್ಲವೇ? ಆಗ ಮುಗ್ಗುರಿಸಿ ಹೊಳೆಗೆ ಬಿದ್ದೆ. ದೋಣಿ ಹಿಡಿಯುವಷ್ಟರಲ್ಲಿಯೇ ಮುಂದಕ್ಕೆ ಹೋಯಿತು. ನಾನು ಸ್ವಲ್ಪದೂರ ಈಜಿಕೊಂಡು ತೇಲಿಕೊಂಡು ಹೋದೆ. ಏನೋ ನನ್ನ ಅದೃಷ್ಟದಿಂದ ಕಾಲಿಗೆ ದಿಣ್ಣೆ ಸಿಕ್ಕಿತು. ನಿಂತೆ. ಸೊಂಟದವರೆಗೂ ನೀರಿತ್ತು. ಹಾಗೇ ನಿಮತಿದ್ದೆ. ಬೆಳಗಾದಮೇಲೆ ಹೊಳೆ ಇಳಿಯಿತು. ಏನೋ ನಿಮ್ಮನ್ನದ ಋಣ ಇನ್ನೂ ಇತ್ತು.”

ಅದಕ್ಕೆ ಗೌಡರು “ಅಲ್ಲೋ, ಹುಟ್ಟುಹಾಕುತ್ತಿದ್ದವನು ಮುಗ್ಗುರಿಸಿ ಬಿದ್ದರೆ ಹುಟ್ಟು ದೋಣಿಗೆ ಬರುವುದು ಹೇಗೋ?”

“ಏನೋ ಅಯ್ಯಾ, ದೇವರಿಗೇ ಗೊತ್ತು!”

ಮಧ್ಯಾಹ್ನ ಊಟ ಆದಮೇಲೆ ತಿಮ್ಮು ಸೀತೆ ಇಬ್ಬರೂ ನಾನು ಮೊದಲು ಹೇಳಿದ್ದು, ತಾನು ಮೊದಲು ಹೇಳಿದ್ದು ಎಂದು ಚರ್ಚೆಮಾಡುತ್ತಿದ್ದರು.

ನಾಗಮ್ಮ ಅಲ್ಲಿಗೆ ಬಮದು “ಏನ್ರೋ ಅದೂ?” ಎಂದರು.

ತಿಮ್ಮು “ಮೊದಲು ನಾನು ಹೇಳಿದ್ದಮ್ಮ, ಲಿಂಗ ಬರ್ತಾನೆ ಅಂತಾ” ಎಂದನು.

ಸೀತೆ “ಇಲ್ಲಮ್ಮ! ತಿಮ್ಮಣ್ಣಯ್ಯ ಬರೀ ಸುಳ್ಳ! ನಾನೇ ಮೊದಲು ಹೇಳಿದ್ದು. ಬೇಕಾದರೆ ನಾಗನ್ನೇ ಕೇಳಮ್ಮ.”

“ಯಾರಾದರೂ ಹೇಳಿದ್ದಾಗಲಿ! ಅಂತೂ ಲಿಂಗ ಬಂದನಲ್ಲ. ಅಷ್ಟೇ ಸಾಕು!” ಎಂದು ಹೇಳಿ ನಾಗಮ್ಮ ಒಳಗೆ ಹೋದರು.