ಕೆಲವು ದಿನಗಳ ಹಿಂದೆ ನನ್ನ ಗೆಳೆಯರೊಬ್ಬರ ಮನೆಗೆ ಹೋಗಿದ್ದೆ. ಪುಣ್ಯವಶದಿಂದ ಆ ದಿನ ಅವರ ಮನೆಯಲ್ಲಿ ಏನೋ ವಿಶೇಷ. ಅವರು ಸ್ವಲ್ಪ ದುಡ್ಡಿನವರು. ಹೋಳಿಗೆ ಮೊದಲಾದ ಬಗೆಬಗೆಯ ಭಕ್ಷ್ಯಗಳನ್ನು ಮಾಡಿಸಿದ್ದರು. ತಿಂಡಿಯೆಂದರೆ ನನಗೆ ಸ್ವಲ್ಪ ಹಾಗೆಹಾಗೆಯೇ-ಹತ್ತಿರದ ಸಂಬಂಧ!

ಎಲ್ಲರೂ ಊಟಕ್ಕೆ ಕುಳಿತಿದ್ದೆವು, ಮೊದಲು ಪಾಯಸ ಬಂತು! ’ಎಲ್ಲರೂ ಊಟ ಮಾಡಬಹುದು’ ಎಂಬ ಸಂಪ್ರದಾಯದ ಅಪ್ಪಣೆಯಾಯಿತು. ಪಾಯಸ ಸುರಿಯುವುದಕ್ಕೆ ಕೈಕೊಟ್ಟೆವು, ಆ ಭೋರಾಟವನ್ನೇನೆಂದು ಹೇಳಲಿ! ಆ ಸವಿಯಾದ ಪಾಯಸ ಸುರಿಯುವ ಗಲಿಬಿಲಿಯಲ್ಲಿ ಮರ್ಯಾದೆಯನ್ನು ಕೂಡ ಮರೆತು ಬಿಡುತ್ತೇವೆ! ನಿಶ್ಯಬ್ದವಾಗಿ ಊಟ ಮಾಡಬೇಕೆಂದು ನಮ್ಮ ತಲೆಗೆ ಬಂದರಲ್ಲವೆ? ಆದರೆ ನನಗೊಂದು ದೊಡ್ಡ ಸಂದೇಹವಿತ್ತು; ಅದು ಮಾತ್ರ ನಿವೃತ್ತಿಯಾಯಿತು. ಅದಾವುದೆಂದರೆ, ಈ ಬ್ರಹ್ಮಾಂಡದಲ್ಲಿ ಸಕಲವೂ ಲಯಬದ್ಧವಾದುದೆಂದು ತತ್ವಶಾಸ್ತ್ರದಲ್ಲಿ ಓದಿದ್ದೆನು. ಎಷ್ಟೋ ಹುಡುಕಿದ್ದೆನು. ನಿದರ್ಶನವಾವುದೂ ಸಿಕ್ಕಿಯೇ ಇರಲಿಲ್ಲ. ಅಂದು ಸಿಕ್ಕಿತು. ಅಷ್ಟೊಂದು ಜನ ಪಾಯಸ ಸುರಿಯುವುದರಲ್ಲಿ ಒಂದು ವಿಧವಾದ ಛಂದಸ್ಸಿರುವುದೆಂದು ಚೆನ್ನಾಗಿ ಮನಗಂಡೆ!

ಅದು ಹಾಗಿರಲಿ; ಇನ್ನೊಂದರ ವಿಷಯವಾಗಿ ನನಗೂ ಇತರರಿಗೂ ತುಂಬಾ ವಾದವಿವಾದಗಳು ನಡೆದಿರುತ್ತವೆ. ’ಎಲ್ಲರೂ ಊಟ ಮಾಡಬಹುದು’ ಎಂಬ ಸಂಪ್ರದಾಯದ ಅಪ್ಪಣೆ! ಈ ವಿಚಾರದಲ್ಲಿ ನನ್ನ ಅಭಿಪ್ರಾಯಗಳೂ ಇತರರ ಅಭಿಪ್ರಾಯಗಳಿಗೂ ತುಂಬಾ ಪ್ರಭೇದ. ಇದೇ ನನ್ನ ತೀರ್ಪು: ಆ ಸಂಪ್ರದಾಯದ ಅಪ್ಪಣೆ ಅನಾವಶ್ಯಕವಾದುದೂ ಅಲ್ಲದೆ ನಿಷ್ಪ್ರಯೋಜಕ. ಅದನ್ನು ಅಜ್ಜಂದಿರ ಅಧಿಕ್ಯವೆಂದರೂ ಎನ್ನಬಹುದು. ಎಲೆಯಮೇಲೆ ಪದಾರ್ಥವನ್ನು ಬಡಿಸಿದಮೇಲೆ ಊಟಮಾಡಬಹುದೆಂದೇ ಅರ್ಥವಾಗಲಿಲ್ಲವೆ? ಆದರೆ ಕೆಲವರು ಹೀಗೆಂದು ಆಕ್ಷೇಪಿಸಬಹುದು: ಬಹಳ ಜನಗಳು ಕುಳಿತಾಗ ಎಲ್ಲರಿಗೂ ಒಂದೇ ಸಲ ಬಡಿಸಲಾಗುವುದಿಲ್ಲ; ಆಗ ಒಬ್ಬರು ತಿನ್ನುವುದು ಮತ್ತೊಬ್ಬರು ನೋಡುವುದು ಗೌರವಕ್ಕೆ ಕಡಮೆ; ಆದ್ದರಿಂದ ಎಲ್ಲರಿಗೂ ಬಡಿಸಿದಮೇಲೆ ಅಪ್ಪಣೆ ಕೊಡುವುದು ಸಕಾರಣವಾದ ಸಂಪ್ರದಾಯ ಎಂದು. ಇದಕ್ಕೆ ನಾನು ಹೇಳುವುದು ಇಷ್ಟೆ. ನಾವೇನು ಮಠಗಳಲ್ಲಿ ತಿಂದು ತೇಗುವ ಜಡದೇಹಿಗಳೂ ಸೋಮಾರಿಗಳೂ ಖಂಡಿತವಾಗಿಯೂ ಅಲ್ಲ. ಉದರಪೋಷಣೆಯೊಂದೇ ನಮ್ಮ ಪುರುಷಾರ್ಥವಲ್ಲ. ಇದು ಕೆಲಸದ ಕಾಲ! ಎಲ್ಲರಿಗೂ ಬಡಿಸುವತನಕ ಕುಳಿತರೆ ಎಷ್ಟೋ ಕಾಲಹರಣವಾಗುತ್ತದೆ. ಆಮೇಲೆ ಎಲ್ಲರೂ ಉಂಡು ಪೂರೈಸುವತನಕ ಕುಳಿತರೆ ಸೂರ್ಯಾಸ್ತಮಯವಾಗುವುದೇ ಸರಿ! ಆದ್ದರಿಂದ ಇದೇ ನನ್ನ ಸಿದ್ಧಾಂತ: ಈ ಸಂಪ್ರದಾಯ ಸಮಾಜ ಏಳಿಗೆಗೆ ಸರ್ವ ವಿಧದಲ್ಲಿಯೂ ಹಾನಿಕರವಾದುದು! ಇದು ನನ್ನ ಸ್ವಂತ ಅಭಿಪ್ರಾಯ. ನಿಮಗೆ ಸರಿಯಾಗಿ ಕಂಡರೆ ಒಪ್ಪಿ; ಇಲ್ಲದಿದ್ದರೆ ಬಿಡಿ.

ಪಾಯಸ ಪೂರೈಸಿದ ಬಳಿಕ ಹೋಳಿಗೆ ತಂದರು. ಎಲ್ಲರಿಗೂ ಬಡಿಸಿದನು. ನನ್ನ ಗೆಳೆಯರಿಗೆ ಮಾತ್ರ ಬಡಿಸಲೇ ಇಲ್ಲ. ನನಗೆ ತುಂಬಾ ಆಶ್ಚರ್ಯವೂ ದುಃಖವೂ ಉಂಟಾಯಿತು. ಅದರ ರಹಸ್ಯವನ್ನು ತಿಳಿಯಬೇಕೆಂಬ ಕುತೂಹಲವುಂಟಾಯಿತು. ಆದರೆ ಅಷ್ಟು ಜನರ ಮಧ್ಯೆ ಅದನ್ನು ಕೇಳುವುದು ಹೇಗೆ? ಅಂತೂ ಕಡೆಗೆ ಕುತೂಹಲ ದಾಕ್ಷಿಣ್ಯವನ್ನು ಮೀರಿತು.

ನನ್ನ ಗೆಳೆಯರನ್ನು ಕುರಿತು “ಅದೇನು ನೀವು ಹೋಳಿಗೆ ತಿನ್ನುವುದಿಲ್ಲವೆ?” ಎಂದೆ. ಅವರು ಸ್ವಲ್ಪ ನಕ್ಕರು. ಅವರ ತಮ್ಮಂದಿರೂ ನಗಲಾರಂಭಿಸಿದರು. ನಾನು ಮಾತ್ರ ಬೆಪ್ಪು ಬೆರಗಾದೆ.

“ಓಹೋ ನಿಮಗೆ ಆ ಸಮಾಚಾರ ಗೊತ್ತಿಲ್ಲ?” ಎಂದು ಅವರ ತಮ್ಮಂದಿರು ನನ್ನನ್ನು ಕುರಿತು ಪ್ರಶ್ನೆಮಾಡಿದರು.

“ಇಲ್ಲ!” ಎಂದೆ.

“ಅದು ಹುಡುಕಾಟದ ಪ್ರತಿಜ್ಞೆ” ಎಂದರು.

“ಅದೊಂದು ದೊಡ್ಡ ಪುರಾಣ, ಊಟವಾದಮೇಲೆ ಹೇಳುತ್ತೇನೆ.”

ಅವರೆಲ್ಲಾ ತೀರ್ಥಹಳ್ಳಿಯ ಪಾಠಶಾಲೆಯಲ್ಲಿ ಓದುತ್ತಿದ್ದಾಗ ಒಂದು ‘ತಮಾಷೆ’ ನಡೆಯಿತಂತೆ. ನನ್ನ ಗೆಳೆಯರು ತುಂಬಾ ‘ತಿಂಡಿಪೋತ’ರಾಗಿದ್ದರಂತೆ. ಒಂದು ದಿನ ಶನಿವಾರ, ಬೆಳಿಗ್ಗೆ ಕ್ಲಾಸು. ‘ಹಬ್ಬ ಹೋದರೂ ಹೋಳಿಗೆ ಹೋಗುವುದಿಲ್ಲ; ಹೋಳಿಗೆ ಹೋದರೂ ಹೋಳಿಗೆ ಕಾವಲಿ ಹೋಗುವುದಿಲ್ಲ’ ಎಂಬ ಗಾದೆಯುಂಟಷ್ಟೆ? ಅದರಂತೆ ಅವರ ಮನೆಯಲ್ಲಿ ಹಬ್ಬ ಮುಗಿದಿದ್ದರೂ ಹೋಳಿಗೆ ಇನ್ನೂ ಇದ್ದಿತು. ಶಾಲೆಗೆ ಹೋಗುವಾಗ ನನ್ನ ಮಿತ್ರರು ಎರಡು ಜೇಬಿನ ತುಂಬಾ ಹೋಳಿಗೆ ಭರ್ತಿಮಾಡಿದರು.

ದೊಡ್ಡವರಿಗೆ ಅಂಗಿ ಹೊಲಿಸಿಕೊಡುವುದು ದಂಡಕ್ಕೆ; ಅದರಲ್ಲಿಯೂ ಅವರ ಕೋಟುಗಳಿಗೆ ಜೇಬು ಇಡುವುದು ನಿಷ್ಪ್ರಯೋಜಕವಾದ ಅನ್ಯಾಯ. ಹುಡುಗರಾದರೆ ಜೇಬುಗಳಿಂದ ಸಂಪೂರ್ಣ ಪ್ರಯೋಜನವನ್ನು ಹೊಂದಿಯೇ ಹೊಂದುತ್ತಾರೆ. ದೊಡ್ಡವರ ಜೇಬುಗಳೆಲ್ಲ ಅಲಂಕಾರದ ಜೇಬುಗಳು!

ನಿಜವಾದ ಕರ್ಮಯೋಗಿಗಳೆಂದರೆ ಬಾಲಕರ ಜೇಬುಗಳು. ಅವುಗಳಿಗೆ ಪಕ್ಷಪಾತ ಎಂಬುದೇ ಇಲ್ಲ! ಭಗವದ್ಗೀತೆಯಲ್ಲಿ ಶ್ರೀ ಕೃಷ್ಣಪರಮಾತ್ಮನು ಬೋಧಿಸಿದಂತೆ ನಡೆದುಕೊಳ್ಳುತ್ತವೆ. ‘ಇದು ಕಲ್ಲು,’ ‘ಇದು ಚಿನ್ನ’ ಎಂಬ ಪ್ರಭೇದಗಳನ್ನು ಗಣನೆಗೆ ತರುವುದೇ ಇಲ್ಲ. ಹೆಜ್ಜೇನು. ಹುಡುಗರ ಜೇಬೇ ಒಂದು ಸಣ್ಣ ಬ್ರಹ್ಮಾಂಡವೆಂದರೂ ಅತಿಶಯೋಕ್ತಿಯಾಗಲಾರದು. ಅರ್ವವೂ ಅಲ್ಲಿಯೇ ಐಕ್ಯ! ಎಣ್ಣೆಪದಾರ್ಥವಾಗಲಿ, ಪೆಪ್ಪರಮೆಂಟಾಗಲಿ, ಕಲ್ಲಾಗಲಿ, ಹಣ್ಣಾಗಲಿ, ಮಣ್ಣಾಗಲಿ, ಬಳಪವಾಗಲಿ, ಚೂರಿಯಾಗಲಿ- ಎಲ್ಲಕ್ಕೂ ಸಮದೃಷ್ಟಿಯಿಂದ ಉಪಚಾರ ಸಲ್ಲುತ್ತದೆ. ಕೆಲವುಸಾರಿ ಬಾಲಕರ ಕೈಚೇಷ್ಟೆಯ ದೆಸೆಯಿಂದ ಚೇಳು, ಜಿರಲೆ, ಚಿಟ್ಟೆ ಮೊದಲಾದ ಅನಾಥ ಜೀವ ಜಂತುಗಳಿಗೂ ಜೇಬಿನ ಆಶ್ರಯ ಲಭಿಸುವುದುಂಟು!

ನನ್ನ ಸ್ನೇಹಿತರು ಶಾಲೆಗೆ ಹೋಗಿ ಗಂಟೆ ಹೊಡೆಯುವ ತನಕ ಆದಷ್ಟನ್ನು ಮುಕ್ಕಿದರು. ಯಾರೋ ಇಬ್ಬರು ಮೂವರು ಹುಡುಗರು ಕೇಳಿದರಂತೆ. ಆದರೆ ಅವರಿಗೆ ಒಂದು ಚೂರನ್ನೂ ಕೊಡಲಿಲ್ಲ. ನಿರಾಶವಾದ ಆ ಹುಡುಗರು ಇವರನ್ನು ಮೇಷ್ಟರ ಕೈಲಿ ಸಿಕ್ಕಿಸಬೇಕೆಂದು ನಿರ್ಧಾರಮಾಡಿದರು. ಪಾಪ! ಇವರಿಗೇನು ಗೊತ್ತು? ಗೊತ್ತಾಗಿದ್ದರೆ ಹೋಳಿಗೆಯನ್ನೆಲ್ಲಾ ಹೊರಗೆ ಎಸೆದಾದರೂ ಬರುತ್ತಿದ್ದರು, ಆಗ ಆ ಹುಡುಗರಿಗೆ ಪಜೀತಿಗಿಟ್ಟುಕೊಳ್ಳುತ್ತಿತ್ತು.

ಗುಂಡಪ್ಪ ಮೇಷ್ಟರು ಬಂದರು. ಗದ್ದಲವೆಲ್ಲ ನಿಂತುಹೋಯಿತು. ಹುಡುಗರೆಲ್ಲ ಬೇಗಬೇಗನೆ ತಮ್ಮ ಜಾಗ ಸೇರಿಕೊಂಡರು. ಮೇಷ್ಟರು ಬಂದವರೇ ಬೆತ್ತವನ್ನು ಮೇಜಿಗೆ ಎರಡು ಮೂರು ಸಾರಿ ಬಡಿದು ಅದನ್ನು ಸಂಭೋಧಿಸಿ ‘ಈ ದಿನ ನಿನಗೆ ಹೋಳಿಹಬ್ಬ’ ಎಂದರು. ಹುಡುಗರ ಮುಖವೆಲ್ಲ ಗಾಬರಿಯಿಂದ ವಿವರ್ಣವಾಯಿತು. ಗುಂಡಪ್ಪಮೇಷ್ಟರೆಂದರೆ ಪ್ರತ್ಯಕ್ಷ ಯಮ! ಅವರಿಗೆ ಮಕ್ಕಳು ಮರಿ ಯಾರೂ ಇರಲಿಲ್ಲವೆಂದೇ ತೋರುತ್ತದೆ. ಹುಡುಗರಿಗೆ ಹೊಡೆಯುವುದೆಂದರೆ ಅವರಿಗೆ ಜೀವನದ ಅತ್ಯಂತಿಕ ಸುಖ! ಅವರಿಗೆ ತಿಳಿದಿದ್ದ ವಿದ್ಯೆಯೂ ಅಷ್ಟರಲ್ಲಿಯೇ ಇತ್ತು. ಅದರಲ್ಲಿಯೂ ಅಕ್ಷರ ವಿದ್ಯೆಗಿಂತಲೂ ಅವರು ಮರ್ದನ ವಿದ್ಯೆಯಲ್ಲಿಯ ಪ್ರವೀಣರಾಗಿದ್ದರು. ಪಾಪ! ಅವರ ವಿಷಯವಾಗಿ ಕನಿಕರಪಡಬೇಕೇ ಹೊರತು ಕೋಪಮಾಡಬಾರದು.

ಮೇಷ್ಟರು ತರಗತಿಯನ್ನು ಸಂಬೋಧಿಸಿ “ಏನ್ರೋ, ಯಾರಾದರೂ ಧರ್ಮಿಷ್ಠರು ಇದಕ್ಕೆ ತಿಂಡಿಗಿಂಡಿ ಕೊಡುತ್ತೀರಾ? ಬೆತ್ತಕ್ಕೆ ಬಹಳ ಹಸಿವೆಯಾಗಿದೆಯಂತೆ” ಎಂದು ರೂಪಲಂಕಾರವಾಗಿ ನುಡಿದರು.

ನನ್ನ ಸ್ನೇಹಿತರ ಮೇಲೆ ಹೊಟ್ಟೆ ಕಿಚ್ಚಿಟ್ಟಿದ್ದ ಹುಡುಗರಲ್ಲಿ ಒಬ್ಬನು-ಶುದ್ದ ಬೆಪ್ಪುತಕ್ಕಡಿ!-ಮೇಷ್ಟರ ಅಭಿಪ್ರಾಯಗಳನ್ನು ತಿಳಿಯದೆ ಎದ್ದು ನಿಂತು “ಸಾರ್, ಇವನ ಹತ್ತಿರ ಇದೆ” ಎಂದು ನನ್ನ ಗೆಳೆಯರ ಕಡೆಗೆ ಕೈ ತೋರಿಸಿದನು.

ಗುಂಡಪ್ಪನವರಿಗೆ ಅಷ್ಟೇ ಬೇಕಾಗಿದ್ದುದು. ನನ್ನ ಸ್ನೇಹಿತರನ್ನು ವಿಚಾರಿಸಲೇ ಇಲ್ಲ. ಚಾಡಿ ಹೇಳಿದವನನ್ನು ಎಳೆದುಕೊಂಡು ಹೋಗಿ ಚೆನ್ನಾಗಿ ಹೊಡೆದು ‘ಫರಂಗಿಮಣೆ’ ಅಥವಾ ‘ಕುರ್ಚಿ’ ಕೂರಿಸಿದರು. ಇಷ್ಟೆಲ್ಲ ನಡೆಯುತ್ತಿದ್ದಾಗ ನನ್ನ ಮಿತ್ರರ ಮನಸ್ಸಿನಲ್ಲಿ ಏನೇನೋ ಆಲೋಚನೆಗಳು ಬಂದುವು. ಮೇಷ್ಟರು ಕ್ಲಾಸಿಗೆ ತಿಂಡಿ ತಂದವರಿಗೆ ‘ದ್ವಾದಶ ಪೂಜೆ’ಯಾಗುತ್ತದೆಂದು ಸಾರಿಸಾರಿ ಹೇಳಿದ್ದರು. (‘ದ್ವಾದಶಪೂಜೆ’ ಎಂಬುದು ಗುಂಡಪ್ಪನವರ ಪರಿಭಾಷೆ. ಅದರ ತಾತ್ಪರ್ಯವೇನೆಂದರೆ ಹನ್ನೆರಡು ಏಟು ಬೀಳುವುದು ಎಂದು!) ಈಗ ತನ್ನ ಹತ್ತಿರ ತಿಂಡಿಯಿದೆಯೆಂದು ಹುಡುಗನು ಹೇಳಿಬಿಟ್ಟಿದ್ದಾನೆ. ಮೇಷ್ಟರು ಜೇಬು ‘ಜಡ್ತಿ’ ಮಾಡದೆ ಬಿಡುವುದಿಲ್ಲ. ಅವರ ಕೈಗೆ ಸಿಕ್ಕಿದರೆ ಉಳಿಗಾಲವೇ ಇಲ್ಲ. ಹೋಳಿಗೆಯನ್ನು ಬಿಸಾಡುವುದಾದರೂ  ಹೇಗೆ! ಕಡೆಗೊಂದು ಉಪಾಯ ಮನಸ್ಸಿಗೆ ಹೊಳೆಯಿತು. ಪಕ್ಕದಲ್ಲಿ ಕುಳಿತ ಹುಡುಗನ ಕಡೆ ನೋಡಿದರು. ಅವನ ಜೇಬು ಹೊಟ್ಟೆಗಿಲ್ಲದೆ ಬಾಯಿ ತೆರೆದುಕೊಂಡಿದೆಯೋ ಎಂಬಂತೆ ಅಗಲವಾಗಿ ತೆರೆದಿದ್ದಿತು. ಇದ್ದಇದ್ದ ಹೊಳಿಗೆಯನ್ನೆಲ್ಲಾ ಅವನ ಕಿಸಿಬಾಯಿ ಜೇಬಿಗೆ ಹಾಕಿ ಧೈರ್ಯವಾಗಿ ಕುಳಿತುಕೊಂಡರು!

ಮೇಷ್ಟರು ತಮ್ಮ ಖೈದಿಗೆ ವಿಧಿಸಬೇಕಾದ ಶಿಕ್ಷೆಗಳನ್ನೆಲ್ಲಾ ವಿಧಿಸಿ ಕಡೆಗೆ ಅವನನ್ನು ಕುರಿತು “ಇನ್ನು ಮೇಲೆ ಚಾಡಿ ಹೇಳ್ತೀಯೇನೋ?” ಎಂದರು.

ಆ ಹುಡುದನು “ಇಲ್ಲ, ಮೇಷ್ಟ್ರೇ, ಅವನು ಹೋಳಿಗೆ ತಂದಿದ್ದು ಹೌದು!” ಎಂದು ಬಿಕ್ಕಿಬಿಕ್ಕಿ ನುಡಿದನು. ಆ ಹುಡುಗನು ಚಾಡಿ ಎಂದರೆ ಸುಳ್ಳು ಹೇಳುವುದು ಎಂದು ತಿಳಿದುಕೊಂಡಿದ್ದನೆಂದು ತೋರುತ್ತದೆ. ಮೇಷ್ಟರು ಅವನನ್ನು ತನ್ನ ಸ್ಥಳಕ್ಕೆ ಹೋಗುವಂತೆ ಹೇಳಿ, ನನ್ನ ಮಿತ್ರರನ್ನು ಕುರಿತು “ಏ ಇಲ್ಲಿ ಬಾರೊ” ಎಂದರು. ನನ್ನ ಮಿತ್ರರು ನಿರ್ಭಯರಾಗಿ ಹೋದರು. ಜೇಬನ್ನೆಲ್ಲಾ ಅಜಮಾಯಿಸೆ ಮಾಡಿ “ಗೆದ್ದೆ ಹೋಗು, ಮುಂಡೇದೆ!” ಎಂದರು.

ಉಳಿದ ಹುಡುಗರೆಲ್ಲರೂ ತಮ್ಮ ಹತ್ತಿರ ಎಲ್ಲಿಯಾದರೂ ತಿಂಡಿ ಇದೆಯೋ ಏನೋ ಎಂಬ ಭಯದಿಂದ ತಮ್ಮ ತಮ್ಮ ಜೇಬುಗಳಿಗೆ ಕೈಹಾಕಿ ನೋಡಿಕೊಂಡರು. ಸಿದ್ದುವೂ ತನ್ನ ಜೇಬಿಗೆ ಕೈ ಹಾಕಿಕೊಂಡ! ಮುಖ ಬೆಳ್ಳಗಾಯಿತು. ಕಣ್ಣು ಚಲಿಸಲೇ ಇಲ್ಲ. ಕಳೆದ ಬಾಯನ್ನು ಮುಚ್ಚಲೇ ಇಲ್ಲ. ರಾತ್ರಿ ಯಾರಾದರೂ ಒಬ್ಬರೇ ಹೋಗುತ್ತಿದ್ದಾಗ, ಪಿಶಾಚದ ವಿಚಾರ ಯೋಚಿಸಿಕೊಂಡು, ಹಿಂತಿರುಗಿದರೆ ಪಿಶಾಚವನ್ನೆಲ್ಲಿ ನೋಡುವೆನೋ ಏನೋ ಎಂಬ ಭಯದಿಂದ ಹಿಂತಿರುಗಿ ಕೂಡ ನೋಡದೆ ಹೋಗುತ್ತಿರುವರೆಂದು ಭಾವಿಸೋಣ. ಇದ್ದಕಿದ್ದಹಾಗೆ ಏನೋ ಬಂದು ಅವರನ್ನು ಹಿಂದುಗಡೆಯಿಂದ ಹಿಡಿದರೆ ಅವರಿಗೆ ಯಾವ ಅನುಭವ ಉಂಟಾಗುವುದೋ ಅದೇ ಅನುಭವ ನಮ್ಮ ಸಿದ್ದುಗೂ ಆಯಿತು. ಅವನು ಅಳಲಾರಂಭಿಸಿದ. ನನ್ನ ಮಿತ್ರರು ಅವನನ್ನು ಸುಮ್ಮನಿರಿಸಲು ಎಷ್ಟೋ ಪ್ರಯತ್ನಪಟ್ಟರು. ಆದರೆ ಪ್ರಯತ್ನವೆಲ್ಲ ವ್ಯರ್ಥವಾಯಿತು

ಮೇಷ್ಟರು ಅವನನ್ನು ಕುರಿತು “ಯಾಕೋ ಅಳುತ್ತೀಯಾ?” ಎಂದರು. ಅವನು ನಡುಕುದನಿಯಿಂದ “ನೋಡಿ ಸಾರ್, ನನ್ನ ಜೇಬಿಗೆ ಹೋಳಿಗೆ ಹಾಕಿ ಬಿಟ್ಟಿದ್ದಾರೆ!” ಎಂದು ಗಟ್ಟಿಯಾಗಿ ಅತ್ತನು.

ನನ್ನ ಮಿತ್ರರೇ ಅದನ್ನು ಮಾಡಿದರೆಂಬುದೇನೋ ರುಜುವಾತಾಯಿತು. ಸಿದ್ದು ಇನ್ನೂ ಅಳಲಾರಂಭಿಸಿದನು. ಏಕೆಂದರೆ ನನ್ನ ಸ್ನೇಹಿತರು ಶೂದ್ರರು; ಅವನು ಸಾಂಪ್ರದಾಯದ ಬ್ರಾಹ್ಮಣ! ಶೂದ್ರದ ಮನೆಯ ಹೋಳಿಗೆ! ಅದರಲ್ಲಿಯೂ ಶೂದ್ರನು ತಿಂದು ಬಿಟ್ಟ ಎಂಜಲು! ಇದನ್ನೆಲ್ಲಾ ಯೋಚಿಸಿಕೊಂಡು ಅವನ ದುಃಖ ಇಮ್ಮಡಿಯಾಯಿತು. ಬ್ರಾಹ್ಮಣರಾದ ಗುಂಡಪ್ಪವನರಂತೂ ರೌದ್ರಾವೇಶ ಪರವಶರಾದರು!

ಹುಡುಗರೆಲ್ಲ ನನ್ನ ಮಿತ್ರರಿಗಾಗಬಹುದಾದ ಶಿಕ್ಷೆಯ ವಿಚಾರವಾಗಿ ಮಾತನಾಡಲಾರಂಭಿಸಿದನು. ಶಾಲೆಯನ್ನೆಲ್ಲ ಒಂದು ವಿಧವಾದ ಬೆಬ್ಬರ ಮುಸುಗಿತು!

“ಡಿಸ್‌ಮಿಸ್‌ಆಗಿಯೇ ಹೋಗುತ್ತೆ. ಬೇಕಾದರೆ ನೋಡು”

“ಹೋಗೊ, ಹೋಗೊ ಇದಕ್ಕೆಲ್ಲಾ ಡಿಸ್‌ಮಿಸ್‌ಅಂತೆ, ‘ದ್ವಾದಶ ಪೂಜೆ’ ಮಾಡಿಬಿಡಬಹುದು.”

“ನೀನೆಲ್ಲೊ ಶುದ್ಧ ಪೂಲ್! ಫರಂಗಿಮಣೆ ಕೂರಿಸಿ, ಬೆನ್ನಮೇಲೆ ಕಲ್ಲು ಹೊರಿಸದಿದ್ದರೆ ಆಮೇಲೆ ಹೇಳು.”

“ಬೇಕಾದ್ರೆ ಬೆಟ್ ಕಟ್ತೀನಿ, ಕೋಳದಂಡಾನೇ ಹಾಕ್ತಾರೆ.”

“ಇಲ್ಲದೆ ಇದ್ದರೆ ಮೂರು ನಾಮ ಹಾಕಿ ಮೆರವಣಿಗೆ ಮಾಡಿಸುತ್ತಾರೆ.”

“ಓಹೋ ಅದೊಂದು ಭಾರಿ ಶಿಕ್ಷೆಯೋ? ನನಗೇನೊ ಅದೊಂದು ಆಟ!”

“ದೊಡ್ಡ ಮನುಷ್ಯರ ಮಗ ಅಂತ ಹೇಳಿ ಏನಾದರೂ ರಿಯಾಯಿತಿ ತೋರಿಸಬಹುದು.”

“ಅಲ್ಲೋ ಅವನಿಗೆಷ್ಟು ಧೈರ್ಯ? ಬ್ರಾಹ್ಮಣನ ಜೇಬಿಗೆ ಎಂಜಲು ಹಾಕೋದೆ!”

ಮುಂದಾದುದನ್ನು ಸಂಕ್ಷೇಪವಾಗಿ ಹೇಳಿಬಿಡುತ್ತೇನೆ. ನನ್ನ ಮಿತ್ರರಿಗೆ ‘ದ್ವಾದಶ ಪೂಜೆ’ಯೂ ಆಯಿತು. ಮೂರು ನಾಮ ಎಳೆದು ಮೆರವಣಿಗೆಯೂ ಆಯಿತು. ಕೇಡಿ ರಿಜಿಸ್ಟರಿಗೂ ಅವರ ಹೆಸರು ದಾಖಲಾಯಿತು! ಶಾಲೆ ಮುಗಿದ ಬಳಿಕ ಗೆಳೆಯರೆಲ್ಲರೂ ಅವರನ್ನು ಸಮಾಧಾನ ಪಡಿಸಲು ಬಂದರು. ಕೆಲವರು ಮೇಷ್ಟರನ್ನು ಬೈದರು. ಕೆಲವರು ಸಿದ್ದುವನ್ನು ನಿಂದಿಸಿದರು. ಮತ್ತೆ ಕೆಲವರು ‘ಸ್ಕೂಲಿಗೆ ಬೆಂಕಿ ಹಾಕ’ ಎಂದರು. ನನ್ನ ಮಿತ್ರರು ಮಾತ್ರ ಮೂಲ ಕಾರಣವನ್ನು ವಿವೇಕದಿಂದ ಗ್ರಹಿಸಿ, ಹೋಳಿಗೆಯನ್ನು ಬಾಯಿಗೆ ಬಂದಂತೆ ಬೈದರು. ರೋಪಾವೇಶದಿಂದ ಹೋಳಿಗೆಯನ್ನು ಇನ್ನು ಮೇಲೆ ತಿನ್ನುವುದೇ ಇಲ್ಲವೆಂದು ಪ್ರತಿಜ್ಞೆಯನ್ನೂ ಮಾಡಿ ಬಿಟ್ಟರು. ಹುಡುಗರ ಭಾಗಕ್ಕೆ ಅದೇನೂ ಸಾಧಾರಣ ಪ್ರತಿಜ್ಞೆಯಲ್ಲ!

ಈ ಸಂಗತಿ ನಡೆದದ್ದು ನನ್ನ ಮಿತ್ರರು ಏಳೆಂಟು ವರ್ಷದವರಾಗಿದ್ದಾಗ. ಈಗ ಅವರಿಗೆ ಇಪ್ಪತ್ತೈದು ವಯಸ್ಸಿರಬಹುದು! ಇನ್ನೂ ಆ ಪ್ರತಿಜ್ಞೆಯನ್ನು ಪರಿಪಾಲಿಸುತ್ತಲೇ ಇದ್ದಾರೆ!

ಇದನ್ನೆಲ್ಲ ಆಲಿಸಿದ ನಾನು ಅವರನ್ನು ಕುರಿತು “ನಿಮಗೊಂದು ಭ್ರಾಂತಿ. ಹುಡುಕಾಟದ ಪ್ರತಿಜ್ಞೆಯನ್ನು ಕಟ್ಟಿಕೊಂಡು ಹೋಳಿಗೆ ತಿನ್ನುವುದನ್ನು ಬಿಡುವುದೆ?” ಎಂದೆ.

“ಹುಡುಗರಾದರೇನು? ಬಲ್ಲವರಾದರೇನು? ಪ್ರತಿಜ್ಞೆ ಪ್ರತಿಜ್ಞೆಯೇ?”

“ನೀವೇನೋ ಹೇಳ್ತೀರಿ! ನಾನೇನೋ ಎಂಥಂಥಾ ದೇವರಾಣೆಗಳನ್ನೆಲ್ಲಾ ಹಾಕಿಬಿಟ್ಟಿದ್ದೇನೆ. ಒಂದನ್ನೂ ಇದುವರೆಗೆ ನಡಿಸಲಿಲ್ಲ.!- ಅದಿರಲಿ ನಿಮ್ಮ ಪ್ರತಿಜ್ಞೆಯಿಂದ ಉಪಯೋಗವಾದರೂ ಏನು?”

“ಹೋಳಿಗೆ ತಿನ್ನುವುದು ಬಿಡುವುದರಲ್ಲಿ ಯಾವ ಮಹತ್ತೂ ಇಲ್ಲ. ಆದರೆ ಇಂದಿನವರೆಗೆ ಪ್ರತಿಜ್ಞೆಯನ್ನು ಪರಿಪಾಲಿಸಿರುವೆನೆಂಬ ಮನೋಭಾವ ನನ್ನ ಧರ್ಮಬುದ್ಧಿಗೆ ಬಲಕಾರಿಯಾಗಿರುತ್ತದೆ; ನನ್ನ ಚಿತ್ತಶುದ್ಧಿಗೆ ಸಹಕಾರಿಯಾಗಿರುತ್ತದೆ. ದೊಡ್ಡಮನಸ್ಸಿನಿಂದ ಮಾಡಿದ ಸಣ್ಣ ಕಾರ್ಯಗಳು ಸಣ್ಣ ಮನಸ್ಸಿನಿಂದ ಮಾಡಿದ ದೊಡ್ಡಕಾರ್ಯಗಳಿಗಿಂತಲೂ ಎಷ್ಟೋ ಶ್ರೇಷ್ಠವಾದುವುಗಳೆಂದು ನನ್ನ ನಿಶ್ಚಲವಾದ ಅಭಿಪ್ರಾಯ. ಮಹಿಮೆ ಕಾರ್ಯಗಳಲ್ಲಿಲ್ಲ; ಕಾರ್ಯ ಮಾಡಿಸುವ ಚಿತ್ತವೃತ್ತಿಯಲ್ಲಿದೆ.”

ನಾನು ಆಲೋಚನಾಪರನಾಗಿ ಕುಳಿತೆ. ಅವರಲ್ಲಿ ನನಗೊಂದು ಗೌರವ ಉಂಟಾಗಿ, ಅವರನ್ನು ಮನದಲ್ಲಿಯೆ ಹೊಗಳಿದೆ