ಡಾಖಾ ನಗರದ ಪ್ರಧಾನ ವೈದ್ಯನಾದ ಸುರೇಂದ್ರಬಾಬು ತನ್ನ ಮನೆಯ ಆಫೀಸು ಕೋಣೆಯಲ್ಲಿ ಕುಳಿತುಕೊಂಡು ಆ ದಿನ ನಡೆದ ಒಂದು ಸಂಗತಿಯನ್ನು ಕುರಿತು ಆಲೋಚಿಸುತ್ತಿದ್ದನು. ತನ್ನ ಹಣದಾಸೆಯಿಂದ ಒಬ್ಬ ಬಡ ವಿಧವೆಯ ಮಗನು ಆ ದಿನ ಸತ್ತನೆಂಬ ಚಿಂತೆ ಅವನನ್ನು ಬಾಧಿಸುತ್ತಿತ್ತು. ಕೈ ಮುಗಿದುಕೊಂಡು ಅಂಗಲಾಚಿ ಮೊರೆಯಿಡುತ್ತಾ ಮನೆಗೆ ಬಂದು ಮಗನನ್ನು ಉಳುಹಬೇಕೆಂದು ತನ್ನನ್ನು ಕರೆಯುತ್ತಾ ನಿಂತಿದ್ದ ಮುದಿಯಳ ಕನಿಕರಣೀಯವಾದ ಮೂರ್ತಿ ಆತನ ಕಣ್ಣಮುಂದೆ ಕಟ್ಟಿದಂತೆ ತೋರುತ್ತಿತ್ತು. ತಾನು ಮಾತ್ರ ಫೀಜು ಕೊಟ್ಟರೆ ಬರುವೆನೆಂದು ಹೇಳಿ ಆಕೆಯನ್ನು ತಿರಸ್ಕರಿಸಿದ್ದು ಅವನಿಗೆ ಪಶ್ಚಾತ್ತಾಪವನ್ನುಂಟು ಮಾಡುತ್ತಿತ್ತು. ಸಂಜೆಯಲ್ಲಿ ತಾನು ಮನೆಗೆ ಬರುತ್ತಿದ್ದಾಗ ಆ ವಿಧವೆ ತನ್ನ ಮಗನ ಹೆಣದೊಡನೆ ಗೋಳಾಡುತ್ತಾ ಶ್ಮಶಾನಾಭಿಮುಖವಾಗಿ ಬಂಧುಗಳೊಡನೆ ಹೋಗುತ್ತಿದ್ದುದನ್ನು ನೋಡಿ, ತಾನು ಮಾಡಿದ್ದು ಧರ್ಮ ದೃಷ್ಟಿಯಿಂದ ಅನ್ಯಾಯವಾದುದೆಂದು ಚಿಂತಿಸುತ್ತಿದ್ದನು. ಅಷ್ಟು ಹೊತ್ತಿಗೆ ಗಡಿಯಾರದಲ್ಲಿ ಗಂಟೆ ಹೊಡೆಯಿತು. ಬಾಬು ತಲೆಯೆತ್ತಿ ನೋಡಿದನು. ರಾತ್ರಿ ಹತ್ತು ಘಂಟೆಯಾಗಿತ್ತು.

ತಾನು ಓದಲು ಎದುರಿನಲ್ಲಿ ಬಚ್ಚಿಟ್ಟುಕೊಂಡಿದ್ದ ಪುಸ್ತಕವನ್ನು ಮುಚ್ಚಿ ಮಲಗುವ ಕೊಠಡಿಗೆ ಹೋಗಲು ಅನುವಾಗುತ್ತಿದ್ದನು. ಅಷ್ಟರಲ್ಲಿ ಆಕಸ್ಮಿಕವಾಗಿ ಅವನ ಕಣ್ಣು ಕೊಠಡಿಯ ಒಂದು ಕಿಟಕಿಯ ಕಡೆಗೆ ಬಿತ್ತು. ದೂರ ಬೀದಿಯಲ್ಲಿ ತನ್ನ ಮನೆಯ ಕಡೆಗೆ ಬರುತ್ತಿದ್ದ ಒಂದು ಕುದುರೆಗಾಡಿಯ ಎರಡು ದೀಪಗಳು ಹೊಳೆಯುತ್ತಿದ್ದುದನ್ನು ಕಂಡು ಅವುಗಳನ್ನೇ ನೋಡುತ್ತಾ ನಿಂತನು. ಸ್ವಲ್ಪ ಹೊತ್ತಿನಲ್ಲಿಯೆ ಗಾಡಿ ಮನೆಯ ಮುಂದುಗಡೆ ಬಂದು ನಿಂತಿತು. ಅದನ್ನು ಕಂಡು ಸುರೇಂದ್ರಬಾಬು ಹಿಂತಿರುಗಿ ಹೋಗಿ ತನ್ನ ಕುರ್ಚಿಯ ಮೇಲೆ ಕುಳಿತುಕೊಂಡನು.

ಸೇವಕನೊಬ್ಬನು ಬಂದು “ಯಾರೋ ಬಂದಿದ್ದಾರೆ” ಎಂದನು.

“ಒಳಕ್ಕೆ ಬರಹೇಳು.”

ಉತ್ತರ ಕ್ಷಣದಲ್ಲಿಯೆ ಉಡುಪಿನಿಂದ ಧನಿಕನೆಂದು ತೋರುತ್ತಿದ್ದ ಮಧ್ಯ ವಯಸ್ಕನಾದ ಪುರುಷನೊಬ್ಬನು ಕೊಠಡಿಯೊಳಗೆ ಬಂದು ನಮಸ್ಕಾರ ಮಾಡಿದನು. ಬಾಬುವೂ ಕೈಮುಗಿದು ಬಳಿಯಲ್ಲಿದ್ದ ಒಂದು ವೇತ್ರಾಸನದ ಮೇಲೆ ಕೂತುಕೊಳ್ಳುವಂತೆ ಹೇಳಿದನು. ನೂತನ ಪುರುಷನು ಅಪರಿಚಿತನಿಗೆ ತಕ್ಕ ನಮ್ರತೆಯನ್ನು ಪ್ರದರ್ಶಿಸುವ ಯೋಗ್ಯಾಭಿನಯಗಳಿಂದ ಕುಳಿತುಕೊಂಡನು.

ಬಾಬು ಸುರೇಂದ್ರನು “ತಾವು ಯಾರು? ಇಷ್ಟು ರಾತ್ರಿಯಲ್ಲಿ ಬಂದ ಕಾರ್ಯವೇನು?” ಎಂದನು.

ಅದಕ್ಕೆ ಆ ಅಪರಿಚಿತ ವ್ಯಕ್ತಿ ಮುಖದಲ್ಲಿ ಶೋಕವನ್ನು ತೋರುತ್ತಾ “ನನ್ನ ಹೆಸರು ವಿಪಿನಚಂದ್ರಬಾಬು. ನನ್ನ ಪತ್ನಿ ಪ್ರಸವ ವೇದನೆಯಿಂದ ಬಹಳವಾಗಿ ನರಳುತ್ತಿದ್ದಾಳೆ. ಆಕೆಯ ಸ್ಥಿತಿ ಅತಿ ವಿಷಯವಾಗಿದೆ. ತಾವು ದಯವಿಟ್ಟು ಬಂದು ನೋಡಬೇಕು. ತಮ್ಮಿಂದ ಬಹಳ ಉಪಕಾರವಾಗುತ್ತದೆ” ಎಂದನು.

“ಅಯ್ಯೋ ಮಹಾಶಯ. ಇಷ್ಟು ರಾತ್ರಿ ಹೇಗೆ ಬರುವುದು? ನಾಳೆ ಪ್ರಾತಃಕಾಲ ಅಷ್ಟು ಹೊತ್ತಿಗೇ ಬಂದು ನೋಡುತ್ತೇನೆ.”

“ವೇದನೆಯ ಸ್ಥಿತಿ ಹಾಗಿಲ್ಲ. ನೀವು ಕೇಳಿದ ಫೀಜು ಕೊಡುತ್ತೇನೆ. ಈಗಲೇ ಬಂದು ನೋಡಬೇಕು. ನೀವು ಇಬ್ಬರನ್ನು ಕಾಪಾಡಿದ ಹಾಗಾಗುತ್ತದೆ.”

“ಹೌದು, ಅದೇನೋ ಸರಿಯೆ” ಹೀಗೆಂದು ಸುರೇಂದ್ರನು ಸ್ವಲ್ಪ ಹೊತ್ತು ಏನನ್ನೊ ಆಲೋಚಿಸುವಂತೆ ನಟಿಸಿ “ಆಗಲಿ, ಇನ್ನೇನು ಮಾಡುವುದು, ಬರುತ್ತೇನೆ” ಎಂದು ಹೇಳಿ ಬೇಗಬೇಗ ತನ್ನ ಪೋಷಾಕು ತೊಟ್ಟು ವೈದ್ಯಕ್ಕೆ ಬೇಕಾದ ಸಾಮಾನುಗಳನ್ನೆಲ್ಲ ತೆಗೆದುಕೊಂಡು, ತನ್ನ ಸೇವಕನನ್ನು ಕೂಗಿದನು. ಸೇವಕನು ಬಂದನು.

“ಬಾರೋ ಸ್ವಲ್ಪ, ಇವರ ಮನೆಯವರೆಗೆ ಹೋಗಿಬರೋಣ.”

ವಿಪಿನಚಂದ್ರನು ಇದನ್ನು ಕೇಳಿ “ಅವನೇಕೆ? ನಮ್ಮಲ್ಲಿ ಬೇಕಾದಷ್ಟು ಸೇವಕರಿದ್ದಾರೆ. ನಿಮಗೆ ಯಾವ ತೊಂದರೆಯೂ ಆಗುವುದಿಲ್ಲ. ಬೇಕಾದ ಸಹಾಯ ಕೊಡುತ್ತೇನೆ. ಕುದುರೆ ಗಾಡಿಯೂ ಇದೆ” ಎಂದನು.

“ಹಾಗಾದರೆ ನೀನು ಇರೋ” ಎಂದು ಹೇಳಿ ಸುರೇಂದ್ರಬಾಬು ವಿಪಿನಚಂದ್ರನೊಡನೆ ಮನೆಯಿಂದ ಹೊರಟನು.

ಅಮಾವಾಸ್ಯೆಯ ರಾತ್ರಿ ಕಗ್ಗತ್ತಲು. ಮುನಿಸಿಪಾಲಿಟಿಯ ದೀಪಗಳು ಅಲ್ಲಲ್ಲಿ ನಾಚಿಕೆಯಿಂದ ಮಿಣುಕುತಿದ್ದುವು. ಜನವಿಹೀನವಾದ ಬೀದಿಯಲ್ಲಿ ನಿಂತಿದ್ದ ಕುದುರೆಗಾಡಿಯನ್ನು ಹತ್ತಿ ಕುಳಿತರು. ಪಕ್ಕದ ಮರದಲ್ಲಿ ಒಂದು ಗೂಬೆ ‘ಗೂ ಗೂ’ ಎಂದು ವಿಕಾರ ಧ್ವನಿ ಮಾಡಿತು. ಗಾಡಿ ಹೊಡೆಯುವವನ ಚಾಟಿಯ ಸದ್ದು; ಕುದುರೆಯ ಖುರಪುಟ ಧ್ವನಿ; ಚಕ್ರನೇಮಿಗಳ ಶಬ್ದ,-ಗಾಡಿ ಬಹು ವೇಗವಾಗಿ ಚಲಿಸತೊಡಗಿತು.

ಸುರೇಂದ್ರಬಾಬು ವಿಪಿನಚಂದ್ರನನ್ನು ಕುರಿತು “ತಮ್ಮ ಪತ್ನಿಯವರಿಗೆ ಏನಾದರೂ ರೋಗವಿತ್ತೋ? ಅಥವಾ ಬರಿಯ ಪ್ರಸವ ವೇದನೆಯೋ?” ಎಂದು ಹೇಳಿದರು.

“ರೋಗವಿತ್ತು.”

“ಎಷ್ಟು ದಿನಗಳಿಂದ?”

“ಐದಾರು ದಿನಗಳಿಂದ.”

“ಯಾರ ಬಳಿ ಔಷಧಿ ಕೊಡಿಸಿದಿರಿ?”

“ಯಾರಾರೋ ವೈದ್ಯರು ನೋಡಿದರು, ಯಾರಿಂದಲೂ ಗುಣಮುಖವಾಗಲಿಲ್ಲ. ನಿಮ್ಮ ಖ್ಯಾತಿಯನ್ನು ಕೇಳಿ ಕಡೆಗೆ ನಿಮ್ಮಲ್ಲಿಗೆ ಬಂದೆ.”

“ರೋಗದ ಹೆಸರನ್ನು ಯಾರಾದರೂ ಹೇಳಿದರೇ?”

“ಹೇಳಿದರು. ಆದರೆ ನನಗೆ ಅದು ಸರಿಯಾಗಿ ನೆನಪಿಲ್ಲ.”

“ಎಷ್ಟು ದೂರ ನಿಮ್ಮ ಮನೆ?”

“ಮೂರುವರೆ ಮೈಲಿ”

“ಯಾವ ಭಾಗದಲ್ಲಿ?”

“ದಕ್ಷಿಣ ಮೋಷಂಡಿಯಲ್ಲಿ.”

ಸುರೇಂದ್ರಬಾಬು ಮಾತಾಡಲಿಲ್ಲ. ದಕ್ಷಿಣ ಮೋಷಂಡಿಯ ಹೆಸರನ್ನು ಕೇಳಿ ಅವನ ಮನಸ್ಸಿನಲ್ಲಿ ಏನೇನೋ ಚಿಂತೆ ಮೂಡಿದುವು, ಅಲ್ಲಿರುವ ಒಂದು ಮನೆಯ ವಿಚಾರವಾಗಿ ಜನರು ಏನೇನ್ನೋ ಮಾತಾಡಿಕೊಳ್ಳುತ್ತಿದ್ದರು. “ಭೂತಗಳ ಬೀಡು” ಎಂದು ಅದನ್ನು ಕರೆಯುತ್ತಿದ್ದರು. ಆ ಮನೆಯಲ್ಲಿ ವಾಸ ಮಾಡಲು ಯಾರೂ ಧೈರ್ಯಮಾಡುತ್ತಿರಲಿಲ್ಲ. ಅದರಲ್ಲಿಯೂ ರಾತ್ರಿ ದಕ್ಷಿಣ ಮೋಷಂಡಿ ಎಂದರೆ ಜನರ ಬಿಳುಪೇರುತ್ತಿತ್ತು. ಇವೆಲ್ಲ ಯೋಚನೆಗಳು ಬಂದರೂ ಸುರೇಂದ್ರಬಾಬು ಎದೆಗೆಡಲಿಲ್ಲ. ಏಕೆಂದರೆ ಜೊತೆಯಲ್ಲಿ ವಿಪಿನಚಂದ್ರನೂ ಗಾಡಿಯವನೂ ಇರುವಾಗ ಅವನಿಗೇಕೆ ಹೆದರಿಕೆ? ಗಾಡಿ ವೇಗವಾಗಿ ಓಡುತ್ತಿತ್ತು. ಮನೆಗಳು, ಮರಗಳು, ಬೀದಿಯ ಲಾಂದ್ರದ ಕಂಬಗಳು ಇವುಗಳೆಲ್ಲ ಒಂದನ್ನೊಂದು ಹಿಂಬಾಲಿಸಿ ಪ್ರತಿಕೂಲವಾಗಿ ಹರಿದುವು. ದಕ್ಷಿಣ ಮೋಷಂಡಿ! ಗಾಡಿ ನಿಂತಿತು.

“ವೈದ್ಯಮಹಾಶಯ, ಇದೇ ನಮ್ಮ ಮನೆ; ಇಳಿಯಿರಿ” ಎಂದನು ವಿಪಿನಚಂದ್ರ.

ಸುರೇಂದ್ರಬಾಬು ಇಳಿದನು. ತನಗೆ ಬೇಕಾದ ಸಾಮಾನುಗಳನ್ನೆಲ್ಲ ಗಾಡಿಯಿಂದ ಒಂದೊಂದನ್ನಾಗಿ ತೆಗೆದುಕೊಳ್ಳುತ್ತ ವಿಪಿನಚಂದ್ರನ ಮನೆಯ ಕಡೆ ನೋಡಿದನು. ದೊಡ್ಡದಾದ ಸೌಧವೊಂದು ವಿಶಾಲವಾದ ಅಂಗಣದ ನಡುವೆ ನಿಶ್ಯಬ್ದವಾಗಿ ನಿಂತಿತ್ತು. ಅಂಗಣದ ಸುತ್ತಲೂ ಒಂದು ಕುಬ್ಜ ಭಿತ್ತಿ ಇತ್ತು. ಮನೆಯ ಸುತ್ತಲೂ ಅಲ್ಲಲ್ಲಿ ಫಲವೃಕ್ಷಗಳು ಮೌನವಾಗಿ ನಿಂತು ತಪಸ್ಸು ಮಾಡುತ್ತಿದ್ದುವು. ಮನೆಯಲ್ಲಿ ಅಲ್ಲಲ್ಲಿ ದೀಪಗಳು ಉರಿಯುತ್ತಿದ್ದು ಕಿಟಕಿಗಳು ಕೆಂಡದ ಕಣ್ಣುಗಳಾಗಿದ್ದುವು. ಅದೇ ಮನೆಯನ್ನೇ ದೆವ್ವಗಳ ಬೀಡು ಎಂದು ಊರಿನವರೆಲ್ಲ ಕರೆಯುತ್ತಿದ್ದುದು. ಸುರೇಂದ್ರನ ಎದೆಯಲ್ಲಿ ತಳಮಳ ಉಂಟಾಯಿತು. ಅದನ್ನು ಪ್ರವೇಶಮಾಡಲು ಅವನಿಗೆ ಇಷ್ಟವೂ ಇರಲಿಲ್ಲ; ಧೈರ್ಯವೂ ಸಾಲದಾಗಿತ್ತು. ಏನು ಮಾಡುವುದೆಂದು ಹಿಂದೆ ಮುಂದೆ ನೋಡಲಾರಂಭಿಸಿದನು.

ಅಷ್ಟರಲ್ಲಿ ವಿಪಿನನು “ಮಹಾಶಯ, ಒಳಗೆ ದಯಮಾಡಿಸಿ” ಎಂದು ಅತಿ ವಿನಯದಿಂದ ನುಡಿದು ಮುಂದೆ ನಡೆಯತೊಡಗಿದನು.

ಸುರೇಂದ್ರಬಾಬು ಮನೆಯ ಯಜಮಾನದ ವಿಪಿನಬಾಬು ಇರುವನಲ್ಲಾ ಎಂಬ ಧೈರ್ಯದಿಂದ ಅವನೊಡನೆ ಹೋದನು. ಮನೆಯಲ್ಲಿ ಜನರ ಸುಳಿವೇ ಇರಲಿಲ್ಲ. ದೀಪಗಳು ಮಾತ್ರ ಉರಿಯುತ್ತಿದ್ದುವು. ವೈದ್ಯನಿಗೆ ಎಲ್ಲಾ ಏನೋ ವಿಚಿತ್ರವಾಗಿ ಕಂಡಿತು. ಆದರೆ ರೋಗಿಗಳಿದ್ದ ಮನೆಯಲ್ಲಿ ನಿಶ್ಯಬ್ದವಾಗಿರುವುದು ಸ್ವಾಭಾವಿಕವೆಂದು ಬಗೆದು ಶಾಂತನಾದನು. ಬಾಗಿಲನ್ನು ದಾಟಿ ಒಳಗಿನ ಮಂದರಕ್ಕೆ ಹೋದನು. ವಿಪಿನನ ಐಶ್ವರ್ಯಕ್ಕೆ ಅಲ್ಲಿದ್ದ ಒಂದೊಂದು ವಸ್ತವೂ ಸಾಕ್ಷಿಯಾಗಿತ್ತು. ಆದರೆ ಸೇವಕರ ಸುಳಿವೇ ಅಲ್ಲಿರದಿರುವುದನ್ನು ನೋಡಿ ಸುರೇಂದ್ರಬಾಬುವಿಗೆ ಆಶ್ಚರ್ಯವಾಯಿತು. ಇದ್ದಕಿದ್ದಂತೆ ವಿಪಿನನು ಅಲ್ಲಿದ್ದ ಒಂದು ಮಹಡಿಯ ಸೋಪಾನಗಳನ್ನು ಏರತೊಡಗಿದನು. ಸುರೇಂದ್ರನೂ ಹತ್ತಿದನು. ಇಬ್ಬರೂ ಮಹಡಿಯ ನಿಶ್ಯಬ್ದವಾದ ಒಂದು ಮಂದಿರಕ್ಕೆ ಬಂದರು. ಅಲ್ಲಿ ರೋಗಿಗಳಿರುವ ಕೊಠಡಿಯ ಯಾವ ಚಿಹ್ನೆಯು ಇರಲಿಲ್ಲ. ಇನ್ನಾವುದೋ ಬೇರೊಂದು ಚಿಕ್ಕ ಕೋಣೆಗಳಲ್ಲಿ ರೋಗಿ ಮಲಗಿರಬಹುದೆಂದು ವೈದ್ಯನು ಯೋಚಿಸುತ್ತಿದ್ದನು.

ಅಷ್ಟರಲ್ಲಿ ವಿಪಿನನು ಮಂದಿರದಲ್ಲಿದ್ದ ಒಂದು ಮಂಚದ ಬಳಿಗೆ ಹೋಗಿ “ಮಹಾಶಯ, ಈಕೆಯೇ ನನ್ನ ಪತ್ನಿ; ಬಂದು ನೋಡಿ; ಪರೀಕ್ಷೆಮಾಡಿ” ಎಂದನು.

ಸುರೇಂದ್ರನು ಮಂಚದ ಕಡೆಗೆ ನೋಡಿದನು. ಯಾವುದೋ ಒಂದು ವ್ಯಕ್ತಿ ಬಿಳಿಯ ಬಟ್ಟೆ ಮುಸುಕು ಹಾಕಿಕೊಂಡು ಮಲಗಿದ್ದಂತೆ ತೋರಿತು. ಮುಸುಗಿನಿಂದ ನರಳುವ ಧ್ವನಿಯೂ ಹೊರಡತೊಡಗಿತು. ಧ್ವನಿ ಅತ್ಯಂತ ಕನಿಕರವಾಗಿತ್ತು.

ವೈದ್ಯನು ಮಂಚದ ಬಳಿ ಹೋಗಿ ಮುಸುಕು ತೆರೆದನು. ಒಬ್ಬ ಸುಂದರಿಯಾದ ಸ್ತ್ರೀವ್ಯಕ್ತಿ ಯಾತನೆಯಿಂದ ನರಳುತ್ತ ಹೊರಳುತ್ತ ಮಲಗಿದ್ದಳು. ಆಕೆಗೆ ಮಾತನಾಡುವಷ್ಟು ಕೂಡ ಶಕ್ತಿ ಇರಲಿಲ್ಲ. ಸುರೇಂದ್ರನು ರೋಗಪರೀಕ್ಷೆ ಮಾಡತೊಡಗಿದನು. ವಿಪಿನಬಾಬು ಬಳಿಯಲ್ಲಿಯೆ ನಿಂತು ಅತ್ಯಂತ ಉದ್ವೇಗ ಕುತೂಹಲಗಳಿಂದ ನೋಡುತ್ತಿದ್ದನು. ಸ್ವಲ್ಪ ಹೊತ್ತಿನಲ್ಲಿ ವೈದ್ಯನು ತನ್ನ ಪರೀಕ್ಷೆಯನ್ನು ಪೂರೈಸಿ ನಿಟ್ಟುಸಿರುಬಿಡುತ್ತ ನೆಟ್ಟಗೆ ನಿಂತನು.

“ಮಹಾಶಯ, ರೋಗ ಹೇಗಿದೆ? ಅಷ್ಟೇನೂ ಗಾಬರಿ ಇಲ್ಲವಷ್ಟೆ?” ಎಂದನು ವಿಪಿನಚಂದ್ರನು.

“ಬಾಬು, ಹಾಗಲ್ಲ, ರೋಗ ಪ್ರಬಲವಾಗಿದೆ. ಹೆರಿಗೆಯ ವಿಷಯವಾದ್ದರಿಂದ ವೈದ್ಯಳನ್ನು ಆದಷ್ಟು ಜಾಗ್ರತವಾಗಿ ಕರೆದುಕೊಂಡು ಬರುವುದು ಮೇಲು!”

“ಈ ರಾತ್ರಿ ಯಾವ ವೈದ್ಯಳು ಸಿಕ್ಕುತ್ತಾಳೆ? ನೀವೇನೊ ಮಹಾತ್ಮರಾದ್ದರಿಂದ ಬಂದಿರಿ!”

“ನನ್ನ ಕೈಕೆಳಗಿನ ವೈದ್ಯಳೊಬ್ಬಳಿದ್ದಾಳೆ. ನಾನು ಹೇಳಿದೆನೆಂದು ಹೇಳಿದರೆ ಆಕೆ ಕೂಡಲೆ ಹೊರಟುಬರುತ್ತಾಳೆ.

“ಆಕೆಯ ಹೆಸರೇನು? ಇರುವುದೆಲ್ಲಿ?”

“ಆಕೆಯ ಹೆಸರು ಶಶಿಮುಖಿ. ನಾನಿರುವ ಬೀದಿಯಲ್ಲಿಯೆ ೫೭೮ನೆಯ ನಂಬರಿನ ಮನೆಯಲ್ಲಿದ್ದಾಳೆ.”

“ಆಗಲಿ ಆಕೆಯನ್ನು ಕರೆತರುತ್ತೇನೆ. ತಾವು ಈ ಕೋಣೆಯಲ್ಲಿ ಕೂತುಕೊಂಡಿರಿ.” ಎಂದು ಹೇಳಿ ವಿಪಿನಬಾಬು ಸುರೇಂದ್ರನನ್ನು ಮಂದಿರದ ಬಲದಿಕ್ಕಿನಲ್ಲಿರುವ ಒಂದು ಕೋಣೆಗೆ ಕರೆದುಕೊಂಡು ಹೋದನು.

ಅಲ್ಲಿ ಕುರ್ಚಿ ಮೇಜುಗಳು ಸಾಲುಸಾಲಾಗಿ ಇಡಲ್ಪಟ್ಟಿದ್ದುವು. ಮೇಜಿನ ಮೇಲೆ ಪುಸ್ತಕಗಳು, ಬರೆಯುವ ಕಾಗದ, ಮಸಿಕುಡಿಕೆ, ಲೇಖನಿ, ಮೊದಲಾದ ಸಲಕರಣೆಗಳೆಲ್ಲವೂ ಸಿದ್ಧವಾಗಿದ್ದುವು.

ವಿಪಿನಚಂದ್ರನು ವೈದ್ಯನನ್ನು ಒಂದು ಆಸನದಲ್ಲಿ ಕೂರಿಸಿ “ತಮಗೆ ಯಾರಾದರೂ ಸೇವಕರು ಬೇಕೇನು? ಕರೆಯುತ್ತೇನೆ” ಎಂದನು.

“ಸೇವಕರೇಕೆ? ಬೇಡ!” ಎಂದನು ಸುರೇಂದ್ರಬಾಬು.

“ಹಾಗಾದರೆ ನಾನು ಬೇಗ ಬರುತ್ತೇನೆ” ಎಂದು ಹೇಳಿ ವಿಪಿನರು ಬಾಗಿಲು ಹಾಕಿಕೊಂಡು ಹೊರಟು ಹೋದನು.

ಸ್ವಲ್ಪ ಹೊತ್ತಿನಲ್ಲಿ ಕುದುರೆಗಾಡಿ ಬೀದಿಯಲ್ಲಿ ಚಲಿಸುವ ಸದ್ದು ಕೇಳಿಸಿತು. ಸುರೇಂದ್ರನು ಕಿಟಕಿಯಿಂದ ಇಣಿಕಿನೋಡಿದನು. ತಾನು ಕುಳಿತುಕೊಂಡು ಬಂದಿದ್ದ ಗಾಡಿಯೇ ಪುರಾಭಿಮುಖವಾಗಿ ಅತಿ ವೇಗದಿಂದ ಸಾಗುತ್ತಿತ್ತು.

ಮನೆಯ ಸುತ್ತಲೂ ಕಗ್ಗತ್ತಲೆ. ನಟ್ಟಿರುಳ ನಿಶ್ಯಬ್ದ! ನೆರೆಮನೆಗಳು ಎಂದರೆ ಎರಡು ಮೂರು ಫರ್ಲಾಂಗುಗಳ ಆಚೆ. ಮನೆಯಲ್ಲಿಯೇ ಎಂದರೆ ಪಾಲುಮನೆಯ ನಿಶ್ಯಬ್ದ! ತಿರುಗಾಡುವ ಹೆಜ್ಜೆಯ ಸದ್ದು ಕೂಡ ಇಲ್ಲ. ಸುರೇಂದ್ರನು ಮೇಜಿನ ಮೇಲಿದ್ದ ಒಂದು ಪುಸ್ತಕವನ್ನು ತೆಗೆದುಕೊಂಡನು. ಅದರ ಭಾಷೆ ಅವನಿಗೆ ಅರ್ಥವಾಗಲಿಲ್ಲ. ಮತ್ತೊಂದನ್ನು ತೆಗೆದುಕೊಂಡನು. ಅದೂ ಹಾಗೆಯೇ! ಇನ್ನೊಂದನ್ನು ತೆಗೆದುಕೊಂಡು ನೋಡಿದನು. ಅದೂ ಯಾವುದೋ ಒಂದು ಲಿಪಿ! ಕಡೆಗೆ ನಿರಾಶನಾಗಿ ಸುಮ್ಮನೆ ಕುಳಿತನು.

ಅಷ್ಟರಲ್ಲಿ ಮಹಡಿಯ ನಡುಮನೆಯಲ್ಲಿ ಯಾರೋ ತಿರುಗಾಡುವ ಶಬ್ದ ಕೇಳಿಸಿತು. ಬಳೆಗಳ ಸದ್ದು! ಹೆಂಗಸರಿರಬೇಕೆಂದು ಬಾಬು ಸುಮ್ಮನಾದನು. ಯಾರೋ ಬಂದು ರೋಗಿಯನ್ನು ಮಾತನಾಡಿಸುವಂತೆ ಕೇಳಿಸಿತು. ಕಂಠ ಧ್ವನಿಗಳಿಂದ ಇಬ್ಬರು ಮೂವರು ಸ್ತ್ರೀಯರೆಂದು ಗೊತ್ತಾಯಿತು.

“ಈಗ ಹೇಗಿದೆ, ವಿಮಲೆ?”

“ಮಾತಾಡಿಸಬೇಡ, ಆಕೆಗೆ ಶಕ್ತಿಯಿಲ್ಲ.”

“ಪಾಪ ಬೆಳಗಿನಿಂದ ಏನೂ ಹೊಟ್ಟೆಗಿಲ್ಲ.”

ಇದ್ದಕಿದ್ದ ಹಾಗೆ ಭಾಷೆಯನ್ನು ಬದಲಾಯಿಸಿ ಮಾತನಾಡತೊಡಗಿದರು. ಸುರೇಂದ್ರನಿಗೆ ಅದರ ತಲೆ ಬುಡ ತಿಳಿಯಲಿಲ್ಲ. ಅಷ್ಟರಲ್ಲಿ ಯಾರೋ ಮಹಡಿಯ ಕೆಳಗೆ ಗಹಗಹಿಸಿ ನಕ್ಕರು. ಸುರೇಂದ್ರಬಾಬುವಿಗೆ ಮನೆಯಲ್ಲಿ ಅನೇಕ ಜನರಿದ್ದಾರೆಂದು ಗೊತ್ತಾಯಿತು. ಹಾಗೆಯೇ ಕುಳಿತಿದ್ದನು. ಸ್ವಲ್ಪ ಹೊತ್ತಿನಲ್ಲಿ ಶಶಿಮುಖಿಯನ್ನು ತರಲು ಹೋಗಿದ್ದ ಗಾಡಿ ಬಂದಿತು. ಶಶಿಮುಖಿಯ ಮಾತುಗಳೂ ಕೇಳಿಬಂದುವು. ವಿಪಿನಚಂದ್ರನು ಅವಳೊಡನೆ ಸೋಪಾನಗಳನ್ನು ಏರುತ್ತಿದ್ದ ಸದ್ದು ಕೇಳಿಸಿತು. ನಡುಮನೆಯ ಸಂಭಾಷಣೆ ಇದ್ದಕಿದ್ದಹಾಗೆ ನಿಂತುಹೋಯಿತು. ಶಶಿಮುಖಿ ಸುರೇಂದ್ರಬಾಬುವಿಗೆ ನಮಸ್ಕಾರ ಮಾಡಿದಳು. ವಿಪಿನಚಂದ್ರನು ಆಕೆಯ ಹಿಂಭಾಗದಲ್ಲಿ ಸುರೇಂದ್ರಬಾಬುವಿಗೆ ನಮಸ್ಕಾರ ಮಾಡಿದಳು. ವಿಪಿನಚಂದ್ರನು ಆಕೆಯ ಹಿಂಭಾಗದಲ್ಲಿ ನಿಂತಿದ್ದನು.

ಸುರೇಂದ್ರಬಾಬು ಶಶಿಮುಖಿಯನ್ನು ಕುರಿತು “ರೋಗಿಯನ್ನು ಸ್ವಲ್ಪ ಪರೀಕ್ಷೆಮಾಡು, ರೋಗ ಬಹಳ ಭಯಂಕರವಾಗಿದೆ ಎಂದು ತೋರುತ್ತದೆ” ಎಂದನು ಇಂಗ್ಲೀಷಿನಲ್ಲಿ.

ಎಲ್ಲರೂ ನಡುಮನೆಯಲ್ಲಿದ್ದ ಮಂಚದ ಬಳಿಗೆ ಹೋದರು. ಸ್ತ್ರೀ ಬಿಳಿಯ ಮುಸುಕು ಹಾಕಿಕೊಂಡು ಮಲಗಿದ್ದಳು. ಆದರೆ ನರಳುತ್ತಿರಲಿಲ್ಲ. ನಿದ್ದೆ ಮಾಡುವಂತಿದ್ದಳು. ವಿಪಿನಚಂದ್ರನೂ ಸುರೇಂದ್ರಬಾಬುವೂ ಮಂಚದ ಬಳಿ ನಿಂತರು. ಶಶಿಮುಖಿ ಸ್ವಲ್ಪ ಬಗ್ಗಿ ರೋಗಿಯನ್ನು ಪರೀಕ್ಷೆಮಾಡಲೋಸುಗ ಆಕೆ ಹೊದ್ದುಕೊಂಡಿದ್ದ ಮುಸುಕನ್ನು ಮೆಲ್ಲನೆ ಓಸರಿಸಿದಳು. ಅಲ್ಲಿ ಯಾವ ರೋಗಿಯೂ ಇರಲಿಲ್ಲ! ಆಕೆ ಬೆರಗಾಗಿ ನಿಂತಳು! ಬಳಿಯಿದ್ದ ಸುರೇಂದ್ರನೂ ಬೆಚ್ಚಿದನು. ಕಣ್ಣುಮುಚ್ಚಿ ಬಿಡುವುದರಲ್ಲಿ ವಿಪಿನಚಂದ್ರನೂ ಕರಗಿ ಮಾಯವಾದನು! ರೋಗಿ ಮಲಗಿದ್ದ ಮಂಚವೂ ಮಾಯವಾಯಿತು. ಅಲ್ಲಿದ್ದ ಐಶ್ವರ್ಯಸೂಚಕವಾದ ವಸ್ತುಗಳೆಲ್ಲಾ ಒಂದೊಂದಾಗಿ ಕಣ್ಮರೆಯಾದುವು. ಸಾವಿರಾರು ಜನರು ಒಂದೇಸಾರಿ  ಗಹಗಹಿಸಿ ನಗುವಂತೆ ಒಂದು ಮಹಾಶಬ್ದವು ಜನಿಸಿ ಸುರೇಂದ್ರ ಶಶಿಮುಖಿಯರ ನೆತ್ತರು ಹೆಪ್ಪುಗಟ್ಟುವಂತಾಯಿತು. ಅವರಿಬ್ಬರೂ ಭಯದಿಂದ ಚಿಟ್ಟನೆ ಕಿರಿಚಿಕೊಂಡರು. ಅವರಿಗೆ ಏನು ಮಾಡಬೇಕೆಂಬುದೂ ತೋರಲಿಲ್ಲ. ನೋಡುತ್ತಿದ್ದಹಾಗೆ ಹಾಗೆ ಆ ಮಂದಿರದ ನಾಲ್ಕು ದಿಕ್ಕಿನ ಗೋಡೆಗಳೂ ಚಲಿಸಿದಂತಾಗಿ ಅವುಗಳಿಂದ ಸಾವಿರಾರು ಕೈಗಳು ಮೂಡಿದುವು! ಪ್ರತಿಯೊಂದು ಹಸ್ತದಲ್ಲಿಯೂ ತುಂಬಾ ರೂಪಾಯಿಗಳು ಝಣಝಣ ಶಬ್ದ ಮಾಡುತ್ತಿದ್ದುವು. ನಾಲ್ಕು ದಿಕ್ಕಿನ ಭಿತ್ತಿಗಳೂ ನೀಡಿದ ಭಯಂಕರ ಹಸ್ತಗಳನ್ನು ಕಂಡು ಶಶಿಮುಖಿ ಸುರೇಂದ್ರರು ಗಟ್ಟಿಯಾಗಿ ಕೂಗುತ್ತಾ, ಮಹಡಿಯ ಏಣಿಗಂಡಿಯನ್ನು ಹುಡುಕುತ್ತಾ, ಗಾಬರಿಯಲ್ಲಿ ಅದನ್ನು ಕಾಣದೆ ಹುಚ್ಚರಂತೆ ಓಡಾಡತೊಡಗಿದರು. ಅಷ್ಟರಲ್ಲಿ ಲಕ್ಷಾಂತರ ಜನರು ಒಟ್ಟಿಗೆ “ವೈದ್ಯರೆ ಫೀಜು! ವೈದ್ಯರೆ ಫೀಜು!” ಎಂದು ಕೂಗಿದಹಾಗಾಯಿತು. ಜೊತೆಗೆ ಅಲ್ಲಿ ಉರಿಯುತ್ತಿದ್ದ ದೀಪಗಳೂ ನಂದಿಹೋದುವು. ಕಗ್ಗತ್ತಲು ಕವಿಯಿತು. ಶಶಿಮುಖಿ ಭಯದಿಂದ ಕೆಳಗೆ ಧುಮುಕಿದಳು. ಕೆಳಗೆ ಬಂದು ನೋಡಲು ಮನೆಯ ಎಲ್ಲಾ ಬಾಗಿಲುಗಳೂ ಬಂಧಿಸಲ್ಪಟ್ಟಿದ್ದವು. ಮನೆ ಶತಮಾನಗಳಿಂದ ಹಾಳುಬಿದ್ದಿದ್ದ ಮನೆಯಂತಿತ್ತು. ಸುರೇಂದ್ರನೂ ಗಟ್ಟಿಯಾಗಿ ಅರಚಿಕೊಂಡು ಮೂರ್ಛಿತನಾದನು.

ನೆರೆಹೊರೆಯರು ಆ ಗದ್ದಲವನ್ನು ಕೇಳಿ ಓಡಿಬಂದು, ಮನೆಗೆ ಹಾಕಿದ್ದ ಬೀಗಗಳನ್ನು ಒಡೆದು, ಮೂರ್ಛಿತರಾಗಿ ಬಿದ್ದಿದ್ದ ಸುರೇಂದ್ರಬಾಬು ಶಶಿಮುಖಿಯರನ್ನು ಎತ್ತಿಕೊಂಡು ಹೋದರು.