ಪಡುವಣ ಬಾನಕೆರೆಯಲ್ಲಿ ಬೈಗುಗೆಂಪು ಆಗತಾನೆ ಒಯ್ಯೊಯ್ಯನೆ ಇಳಿಯುತ್ತಿತ್ತು. ಇರುಳದೇವಿಯ ಕರಿಯುಡೆಯ ನೆಳಲ ಜವನಿಕೆ ಗಿಡ ಮರ ಬಳ್ಳಿಗಳಿಂದ ಕಿಕ್ಕಿಂದ ದಟ್ಟವಾದ ಮಲೆನಾಡಿನ ಬನಬೆಟ್ಟಗಳನ್ನು ಮುಸುಗುತ್ತಿತ್ತು. ಬಿಸಿಲ ಬೇಗೆಯಿಂದ ಬಲಲಿದ ಬೇಸಗೆಯ ಸಮೀರಣನು ಕೆಲಸವಿಲ್ಲದ ಆಲಸಗಾರನಂತೆ ನಿರಿದಳಿರ ನಡುವೆ ಅಲ್ಲಲ್ಲಿ ತೊಳಲುತ್ತಿದ್ದನು. ಎಲ್ಲೆಲ್ಲಿಯೂ ಸದ್ದಡಗಿ ಮೌನವು ತುಳುಕಾಡುತ್ತಿತ್ತು.

ಇಂತಹ ಹೊತ್ತಿನಲ್ಲಿ ಜೋಡೆತ್ತಿನ ಸಾರೋಟು ಬಂಡಿಯೊಂದು ತೀರ್ಥಹಳ್ಳಿಯಿಂದ ಕೊಪ್ಪಕ್ಕೆ ಹೋಗುವ ಹೆದ್ದಾರಿಯಲ್ಲಿ ಬೇಗ ಬೇಗನೆ ಸಾಗುತ್ತಿತ್ತು. ಜವ್ವನದ ಜೋರಿನಲ್ಲಿದ್ದ ಎತ್ತುಗಳು ಹಗುರವಾದ ಆ ಬಂಡಿಯನ್ನು ಬಳಲಿಕೆಯಿಲ್ಲದೆ ಎಳೆದುಕೊಂಡು ಓಡುತ್ತಿದ್ದುವು ಎಂಬುದು ಅವುಗಳ ಪದಗತಿಯ ಠೀವಿಯಿಂದ ಗೊತ್ತಾಗುತ್ತಿತ್ತು. ಆ ಬಂಡಿಯಲ್ಲಿ ಗಾಡಿ ಹೊಡೆಯುವವನಲ್ಲದೆ ಮೂರು ಜನರು ಕುಳಿತಿದ್ದರು. ಅವರಲ್ಲಿ ಇಬ್ಬರು ಪೋಲಿಸಿನವರು. ಮೂರನೆಯ ವ್ಯಕ್ತಿ ಉಡುಪಿನಿಂದಲೂ ಮುಖಭಾವದಿಂದಲೂ ಧನಿಕನಾದ ದೊಡ್ಡ ಮನುಷ್ಯನಂತೆ ತೋರುತ್ತಿದ್ದನು. ಆತನೆ ನವಿಲೂರಿನ ರಂಗರಾಯರು. ಗಾಡಿ ಹೊಡೆಯುವವನು, ನೋಡುವುದಕ್ಕೆ ಅಷ್ಟೇನೂ ಕೂಲಿಯಾಳಿನಂತೆ ಕಾಣುತ್ತಿರಲಿಲ್ಲ. ಸಾಧಾರಣವಾದ ಬಟ್ಟೆಗಳನ್ನು ಉಟ್ಟಿದ್ದನು. ತಲೆಗೆ ಸುತ್ತಿದ್ದ ಅವನ ಕೆಂಪುವಸ್ತ್ರ ಅವನು ದಕ್ಷಿಣಕನ್ನಡ ಜಿಲ್ಲೆಯವನೆಂಬುದನ್ನು ಸಾರಿ ಹೇಳುವಂತ್ತಿತ್ತು. ಅವನು ಚಪ್ಪರಿಸಿ ಚಾವಟಿಯನ್ನೆತ್ತಿದಂತೆಲ್ಲ ಎತ್ತುಗಳು ಭರದಿಂದ ಸಾಗುತ್ತಿದ್ದುವು.

“ಮುತ್ತಣ್ಣ, ನಿನ್ನೆಯೂ ಕಲ್ಲು ಬಿದ್ದುವೇನು?”

ಪ್ರಶ್ನೆಮಾಡಿದ ರಂಗರಾಯರ ಕಡೆಗೆ, ಬಂಡಿ ಹೊಡೆಯುತ್ತಿದ್ದ ಮುತ್ತಣ್ಣನು ತ್ರಿಕ್ಕನೆ ತಿರುಗಿ “ಹೌದು” ಎಂದನು.

ಇದನ್ನು ಆಲಿಸಿದ ಪೋಲೀಸನೊಬ್ಬನು ಕೇಳಿದನು “ರಾತ್ರಿ ಎಷ್ಟು ಹೊತ್ತಿನಿಂದ ಕಲ್ಲು ಬೀಳಲು ಪ್ರಾರಂಭವಾಗುತ್ತದೆ?”

“ಇಂತಿಷ್ಟೇ ಹೊತ್ತಿಗೆ ಬೀಳುತ್ತವೆಂದು ಹೇಳುವುದಕ್ಕಾಗುವುದಿಲ್ಲ. ಒಂದು ದಿವಸ ಹತ್ತು ಗಂಟೆಗೆ ಬೀಳುತ್ತವೆ. ಒಂದು ದಿವಸ ಬೆಳಗಿನ ಜಾವ ನಾಲ್ಕು ಗಂಟೆಗೆ ಬೀಳುತ್ತವೆ. ನಿನ್ನೆ ಮಾತ್ರ ರಾತ್ರಿ ಎರಡು ಗಂಟೆಗೇ ಷುರುವಾಯ್ತು” ಎಂದು ಮುತ್ತಣ್ಣ ಎತ್ತಿನ ಬೆನ್ನು ಚಪ್ಪರಿಸಿದನು.

“ನೀವೆಲ್ಲಾ ಮಲಗಿದ್ದಿರೋ ಅಥವಾ-” ಎಂದು ರಂಗರಾಯರು ವಾಕ್ಯವನ್ನು ಪೂರ್ತಿಮಾಡುವುದಕ್ಕೆ ಮುನ್ನವೇ ಮುತ್ತಣ್ಣ ನಡುವೆ ಬಾಯಿ ಹಾಕಿ ಹೇಳತೊಡಗಿದನು.

“ಮಲಗುವುದೇ ಸರಿ! ಮಲಗುವುದಾದರೂ ಹೇಗೆ? ಕಲ್ಲು ಬೀಳುವ ಹೆದರಿಕೆಯಲ್ಲಿ ನಿದ್ದೆ ಬರುವುದೇ? ನಾನೇನೋ ನಿನ್ನೆ ರಾತ್ರಿ ಕಣ್ಣು ಮುಚ್ಚಲಿಲ್ಲ. ಬೇಲರ ಮಾದನಂತೂ ಕೋವಿ ಹಿಡಿದುಕೊಂಡು ಅವನ ಬಿಡಾರದಲ್ಲಿ ಕಾದೇ ಕೂತಿದ್ದ. ನಿನ್ನೆ ಕಾವಲಿಗೆ ಬಂದಿದ್ದ ಪೋಲೀಸ್ ಸುಬ್ಬಣ್ಣನವರಂತೂ ಕಂಗೆಟ್ಟು ಹೋದರು. ಅವರಿಗೊಂದೂ ಬಗೆಹರಿಯಲಿಲ್ಲ. ಕಲ್ಲು ಬೀಳುವುದೆಂದರೇನು? ಆನೆಗಲ್ಲು ಬಿದ್ದಹಾಗೆ! ಹೆಂಚುಗಳು ಒಡೆದು ಒಡೆದು ಚೂರು! ಕಣ್ಣಿಗೆ ಮಾತ್ರ ಒಬ್ಬರೂ ಕಾಣಿಸಲಿಲ್ಲ. ಅಷ್ಟೆ ಏಕೆ? ಕಲ್ಲು ಎತ್ತ ಕಡೆಯಿಂದ ಬರುತ್ತಿದ್ದವೆಂದು ಗೊತ್ತುಮಾಡಲು ಕೂಡ ನಮ್ಮಿಂದಾಗಲಿಲ್ಲ, ಒಂದು ಸಾರಿ ತೋಟದ ಕಡೆಯಿಂದ ರೊಂಯ್ಯೆಂದು ಸದ್ದು ಬರುತ್ತಿತ್ತು. ಒಂದು ಸಲ ಕೆಮ್ಮಣ್ಣು ದಿಣ್ಣೆ ಕಡೆಯಿಂದ ಬಂದಂತಾಗುತ್ತಿತ್ತು. ದೇವರ ದಯದಿಂದ ನಮ್ಮ ಮೈಗೆ ತಗಲಲಿಲ್ಲ. ಒಂದು ಕಲ್ಲಂತೂ ಪೋಲೀಸು ಸುಬ್ಬಣ್ಣನವರ ತಲೆಯ ಪಕ್ಕದಲ್ಲಿಯೆ ಸವರಿಕೊಂಡು ಹೋಯಿತಂತೆ.

ಆಲಿಸುತ್ತ ಕುಳಿತಿದ್ದ ಪೋಲೀಸು ರಾಮಣ್ಣನಿಗೆ ಸ್ವಲ್ಪ ದಿಗಿಲಾಯಿತು. ಆತನಿಗೆ ದೆವ್ವಗಳಲ್ಲಿ ನಂಬಿಕೆ ಹೆಚ್ಚು. ರಂಗರಾಯರ ಮನೆಗೆ ನಿತ್ಯವೂ ರಾತ್ರಿ ಕಲ್ಲು ಎಸೆಯುವುದು. ಯಾವುದೋ ದೆವ್ವದ ಕಾಟವೆಂದೇ ಅವನ ಮನಸ್ಸಿನಲ್ಲಿ ನಿರ್ಧರಿಸಿಬಿಟ್ಟಿದ್ದನು. ಆದ್ದರಿಂದ ಪೋಲೀಸಿನವರು ಹೋದರೂ ಒಂದೇ ಬಿಟ್ಟರೂ ಒಂದೇ, ರಂಗರಾಯರ ಮನೆಯೇನೋ, ಅವರು ತಕ್ಕ ಪರಿಹಾರ ಮಾಡದಿದ್ದರೆ, ಉಳಿಯುವುದಿಲ್ಲವೆಂದು ಅವನ ಸೂಕ್ಷ್ಮಚಿತ್ತಕ್ಕೆ ವೇದ್ಯವಾಗಿತ್ತು. ಆದ್ದರಿಂದ ಅವನು ತನ್ನದೊಂದು ಮಾತನ್ನು ರಾಯರ ಕಿವಿಯ ಮೇಲೆ ಹಾಕಿಬಿಡುವುದೇ ಲೇಸೆಂದು ಬಗೆದು ಹೀಗೆಂದನು:

“ರಾಯರು ಸರಕಾರ, ಪೋಲೀಸು ಇವನ್ನೇ ನಂಬಿದರೆ ಆಗದು. ಮುತ್ತಣ್ಣ ಹೇಳುವುದನ್ನೆಲ್ಲಾ ಕೇಳಿದರೆ ಯಾವುದೋ ಕಲ್ಕುಟಿಗ ದೆವ್ವದ ಕಾಟವಿರಬೇಕೆಂದೇ ತೋರುತ್ತದೆ. ಏನಾದರೂ ಹರಕೆ ಹೊತ್ತುಕೊಂಡು ಬಲಿಕೊಟ್ಟರೆ ಎಲ್ಲ ಸುಖವಾಗಬಹುದು. ಇಲ್ಲದಿದ್ದರೆ ಯಾರಾದರೂ ಮಂತ್ರವಾದಿಗಳನ್ನು ಕರೆಸಿ ಆ ದೆವ್ವವನ್ನು ತಡೆಗಟ್ಟಿಸಿದರೆ ಎಲ್ಲ ನಿಲ್ಲುತ್ತದೆ. ಹಿಂದೆ ಮುಳುಬಾಗಿಲ ಕಿಟ್ಟಯ್ಯನವರ ಮನೆಯಲ್ಲಿ ಹಿಂಗೇ ಆಗುತ್ತಿತ್ತು. ಆದರೆ ಅವರ ಗೋಳು ನಿಮ್ಮದಕ್ಕಿಂತಲೂ ಸಾವಿರಪಾಲು ಹೆಚ್ಚಾಗಿತ್ತು!”

ಆಗಲೇ ನಿಶಾಚರರ ಕಲ್ಮಳೆಯ ಪೀಡೆಯನ್ನು ಸಹಿಸಿ ಬೇಸತ್ತಿದ್ದ ರಂಗರಾಯರು ಯಾರು ಏನು ಹೇಳಿದರೂ ಕೇಳುವಂತಿದ್ದರು. ಪೋಲೀಸು ರಾಮಣ್ಣನ ಮಾತುಗಳು ಅವರಿಗೆ ಯಾವುದೋ ಒಂದು ಹೊಸ ಬೆಳಕನ್ನು ತಂದಂತಾಯಿತು. ಅವರು ಅವನನ್ನು ಕುರಿತು ಕುತೂಹಲದಿಂದ “ಕಿಟ್ಟಯ್ಯನವರ ಮನೆಯಲ್ಲಿ ಏನಾಗಿತ್ತು?” ಎಂದರು.

ರಾಯರು ತನ್ನ ಮಾತಿಗೆ ಕಿವಿಗೊಟ್ಟುರೆಂದು ತಿಳಿದ ರಾಮಣ್ಣ ಉತ್ಸಾಹದಿಂದ ಬಾಯಿತುಂಬಾ ಗಳಪತೊಡಗಿದನು:

“ಅವರಿಗೂ ಹೀಂಗೆಯೇ ಒಂದು ಕಲ್ಕುಟಿಗ ದೆವ್ವದ ಕಾಟ ಹಿಡಿದಿತ್ತು. ಮೊದಮೊದಲು ಹೀಂಗೆಯೇ ಮನೆಗೆ ರಾತ್ರಿಯೆಲ್ಲ ಕಲ್ಲು ಹಾಕುತ್ತಿತ್ತು. ಕಡೆಗೆ ದಿನವೂ ಅವರ ಕೊಟ್ಟಿಗೆಯ ಕಾಲ್ನಡೆಗಳ ಬಾಲ ಕತ್ತರಿಸತೊಡಗಿತು. ಕಡೆಗೆ ಮನೆಯಲ್ಲಿಟ್ಟಿದ್ದ ಅರುವೆ ಬಟ್ಟೆಗಳಿಗೆ ಬೆಂಕಿ ಹಾಕತೊಡಗಿತು. ನೀರಿನಲ್ಲಿ ಆಗತಾನೆ ಅದ್ದಿಟ್ಟ ಬಟ್ಟೆಗಳೂ ಕೂಡ ಸೀಮೆಯೆಣ್ಣೆಯಲ್ಲಿ ಅದ್ದಿದಂತೆ ಉರಿಯತೊಡಗಿದುವು. ಕಟ್ಟಕಡೆಗೆ ಅವರ ಮನೆಯಲ್ಲಿ ಏನು ಪಾಕ ಮಾಡಿದರೂ ಅದರಲ್ಲಿ ಹೆಸಿಗೆಯನ್ನು ತಂದುಹಾಕತೊಡಗಿತು. ಹಾಂಗೆಯೇ ಹೇಳುತ್ತಾ ಹೋದರೆ ಪುರಾಣವಾಗುತ್ತದೆ. ಕಡೆಗೆ ಒಬ್ಬ ಮಲೆಯಾಳದ ಮಂತ್ರವಾದಿಯಿಂದ ಅದರ ಆಟ ನಿಂತಿತು. ಅಲ್ಲಿಯೂ ದಿನವೂ ಪೋಲೀಸಿನವರ ಹಿಂಡೇ ಕಾಯುತ್ತಿತ್ತು. ಅವರಿಂದ ಏನೂ ಆಗಲಿಲ್ಲ!”

ರಾಯರಿಗೆ ಗಾಬರಿಯಾಯಿತು. ಮುಂದೆ ತನಗೂ ಎಲ್ಲಿ ಅದೇ ಗತಿಯಾಗುತ್ತದೆಯೋ ಎಂದು ಚಿಂತಿಸತೊಡಗಿದರು.

ರಂಗರಾಯರ ವಾಸಸ್ಥಾನ ತೀರ್ಥಹಳ್ಳಿ. ಅವರಿಗೆ ನವಿಲೂರಿನಲ್ಲಿ ಒಂದು ದೊಡ್ಡ ಜಮೀನು ಇತ್ತು. ಅಲ್ಲಿ ಒಂದು ಹೆಂಚಿನ ಮನೆಯೂ ಸಂಸಾರಕ್ಕೆ ಬೇಕಾದ ಸಕಲ ಸಲಕರಣೆಗಳೂ ಇದ್ದವು. ತೀರ್ಥಹಳ್ಳಿಯಿಂದ ಅವರು ಆಗಾಗ್ಗೆ ಹಳ್ಳಿಗೆ ಹೋಗಿ ಅಲ್ಲಿಯ ಗದ್ದೆ ತೋಟಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದರು. ಕೆಲವು ಸಮಯಗಳಲ್ಲಿ ಹಳ್ಳಿಯಲ್ಲಿ ಒಂದೆರಡು ದಿನಗಳ ಮಟ್ಟಿಗೆ ಇರುತ್ತಲೂ ಇದ್ದರು.

ಮುತ್ತಣ್ಣ ಅವರ ನೆಚ್ಚಿನ ಆಳು. ಅವನು ಚಿಕ್ಕಂದಿನಿಂದಲ್ಲಿಯೆ ಕನ್ನಡ ಜಿಲ್ಲೆಯಿಂದ ಘಟ್ಟದ ಮೇಲಕ್ಕೆ ಬಂದು ರಂಗರಾಯರ ಮನೆಯಲ್ಲಿ ಕೆಲಸಕ್ಕೆ ನಿಂತಿದ್ದನು. ರಂಗರಾಯರು ಅವನ ವಿನಯ ಕುಶಲತೆ ಬುದ್ದಿಗಳನ್ನು ನೋಡಿ ಕ್ರಮ ಕ್ರಮೇಣ ಅವನಿಗೆ ಮನೆಯ ಆಡಳಿತಕ್ಕೆ ಸೇರಿದ್ದ ಜವಾಬ್ದಾರಿಯನ್ನೂ ವಹಿಸತೊಡಗಿದರು. ಸಂಕ್ಷೇಪವಾಗಿ ಹೇಳುದೆಂದರೆ ಮುತ್ತಣ್ಣನು ಸಾರಥಿತನದಿಂದ ಹಿಡಿದು ನರ್ಮಸಚಿವನಾಗಿ ಕೊನೆಗೆ ಅಮಾತ್ಯಪದವಿಗೂ ಏರಿದನು.

ರಂಗರಾಯರು ನವಿಲೂರಿಗೆ ಹೋಗುವಾಗಲೆಲ್ಲಾ ಮುತ್ತಣ್ಣನೆ ಗಾಡಿ ಹೊಡೆಯುತ್ತಿದ್ದನು. ರಾಯರಿಗೆ ಗದ್ದೆ ತೋಟಗಳ ವಿಷಯದಲ್ಲಿ ಆಗಾಗ ಸಲಹೆಗಳನ್ನೂ ಕೊಡಲಾರಂಭಿಸಿದನು. ರಾಯರ ಜಮೀನಿನ ವಿಷಯದಲ್ಲಿ ತುಂಬಾ ಶ್ರದ್ಧೆಯನ್ನೂ ನೈಪುಣ್ಯವನ್ನೂ ತೋರಿದನು. ಇದನ್ನೆಲ್ಲ ನೋಡಿ ರಾಯರು ಕೃಪಾಪೂರ್ಣರಾಗಿ, ಅವನನ್ನು ತಮ್ಮ ಪ್ರತಿನಿಧಿಯನ್ನಾಗಿ ಮಾಡಿ ನವಿಲೂರಿನ ಎಲ್ಲ ಜಮೀನುಗಳನ್ನೂ ಮುತುವರ್ಜಿಯಿಂದ ನೋಡಿಕೊಳ್ಳುವಂತೆ ನೇಮಿಸಿದರು. ಅಂತೂ ಮುತ್ತಣ್ಣ ಒಂದು ದೃಷ್ಟಯಿಂದ ನವಿಲೂರಿನ ಜಮೀನುದಾರನೆ ಆಗಿಬಿಟ್ಟನು.

ಹೀಗಿರುತ್ತಿರಲು ಒಂದು ಸಂಗತಿ ನಡೆಯಿತು. ಒಂದು ಮಾರಿಮಳೆಗಾಲದಲ್ಲಿ ತುಂಗಾನದಿಯ ಪ್ರವಾಹ ಮೇರೆದಪ್ಪಿ ತೀರ್ಥಹಳ್ಳಿ ಕೆಲವು ಮನೆಮಠಗಳನ್ನು ಕೊಚ್ಚಿಬಿಟ್ಟಿತು. ಆಗ ತೇಲಿಹೋದ ಮನೆಗಳಲ್ಲಿ ರಂಗರಾಯರ ಮನೆಯ ಭಾಗವೂ ಒಂದಾಗಿತ್ತು.

ಇದಾದ ಮೇಲೆ ರಾಯರು ಪಟ್ಟಣವನ್ನು ಬಿಟ್ಟು ಹಳ್ಳಿಯನ್ನೇ ಸೇರುವುದು ಲೇಸೆಂದು ಬಗೆದು ನವಿಲೂರಿನಲ್ಲಿದ್ದ ತಮ್ಮ ಮನೆಗೆ ಸಂಸಾರ ಸಮೇತವಾಗಿ ಒಕ್ಕಲು ಹೋದರು.

ಮುತ್ತಣ್ಣನೇ ಸ್ವತಃ ತೀರ್ಥಹಳ್ಳಿಗೆ ಹೋಗಿ ರಾಯರನ್ನು ಸಂಸಾರದೊಂದಿಗೆ ನವಿಲೂರಿಗೆ ಕರೆತಂದನು. ಆತನ ವಿನಯವನ್ನು ನೋಡಿ ರಾಯರು ಮುಗ್ಧವಾದರು. ಇಂತಹ ಸೇವಕನನ್ನು ಪಡೆದ ಧಣಿಯೇ ಧನ್ಯ ಎಂದುಕೊಂಡರು. ಮುತ್ತಣ್ಣನ ಮೇಲ್ವಿಚಾರಣೆಯ ಪ್ರಭಾವದಿಂದ ನಳನಳಿಸುತ್ತಿದ್ದ ಗದ್ದೆ ತೋಟಗಳನ್ನು ನೋಡಿ ಪ್ರಸನ್ನಚಿತ್ತರಾದರು.

ರಾಯರು ನವಿಲೂರಿಗೆ ಒಕ್ಕಲು ಬಂದ ಎರಡು ದಿನಗಳಲ್ಲಿ ಒಂದು ವಿಚಿತ್ರ ಘಟನೆ ಸಂಭವಿಸಿತು. ರಾತ್ರಿ ಸುಮಾರು ಗಂಟೆಯ ಸಮಯದಲ್ಲಿ ಮುತ್ತಣ್ಣನು ಅವರ ಕೋಣೆಯ ಬಾಗಿಲನ್ನು ಬಡಿದು “ಅಯ್ಯಾ! ಅಯ್ಯಾ!” ಎಂದು ಕೂಗಿದನು.

ರಾಯರು ಹೊರಗೆ ಬಂದು “ಕರೆದದ್ದೇಕೊ?” ಎಂದು ಕೇಳಿದರು.

ಮುತ್ತಣ್ಣ ಗಾಬರಿಯಿಂದ “ನಿಮಗೆ ಕೇಳಿಸಲಿಲ್ಲವೆ?” ಎಂದನು.

ರಾಯರು “ಏನು? ಏನು?” ಎಂದರು.

“ಯಾರೋ ಮನೆಯ ಮೇಲೆ ಕಲ್ಲು ಹಾಕುತ್ತಿದ್ದಾರೆ!”

ಇಬ್ಬರೂ ನಿಂತು ಸ್ವಲ್ಪ ಹೊತ್ತು ಆಲಿಸಿದರು. ಮಲೆನಾಡಿನ ನಿಬಿಡಾರಣ್ಯ ವೇಷ್ಟಿತ ಗಿರಿಕಂದರಗಳ ಭೀಷಣ ನಿಶ್ಯಬ್ದತೆ ಕರ್ಣಗೋಚರವಾಗುವಂತೆ ಇತ್ತು. ಹೆಪ್ಪುಗಟ್ಟಿದ ನಟ್ಟಿರುಳ ಅಂಧಕಾರವು ವಿಶ್ವಸಮಸ್ತವನ್ನೂ ಮುಚ್ಚಿಮುಸುಗಿತ್ತು. ಜಗತ್ತೆಲ್ಲವೂ ಶಬ್ದಬ್ರಹ್ಮದೊಡನೆ ತಿಮಿರಬ್ರಹ್ಮದಲ್ಲಿ ಕರಗಿ ಲೀನವಾಗಿ ಹೋಗಿತ್ತು. ಕಗ್ಗತ್ತಲಲ್ಲಿ ಬಟ್ಟೆಗೆಟ್ಟ ದಾರಿಹೋಕರಂತೆ ತಾರೆಗಳು ಬಾನೆಡೆಯೊಳಲ್ಲಲ್ಲಿ ಕರಗಿ ಲೀನವಾಗಿ ಹೋಗಿತ್ತು. ಕಗ್ಗತ್ತಲಲ್ಲಿ ಬಟ್ಟೆಗೆಟ್ಟ ದಾರಿಹೋಕರಂತೆ ತಾರೆಗಳು ಬಾನೆಡೆಯೊಳಲ್ಲಲ್ಲಿ ಮಿಣುಕುತ್ತಿದ್ದುವು.

ಮುತ್ತಣ್ಣ ಮನೆಯೊಳಗೆ ಹೋಗಿ ರಾಯರ ತೋಟಾ ಕೋವಿ ಹಿಡಿದುಕೊಂಡುಬಂದನು. ರಾಯರು ಲಾಂದರ ತೆಗೆದುಕೊಂಡರು. ಇಬ್ಬರೂ ಹೆಜ್ಜೆಯ ಮೇಲೆ ಹೆಜ್ಜೆಯಿಡುತ್ತ ಮನೆಯ ಸುತ್ತಮುತ್ತಲೂ ಒಂದು ಸಲ ತಿರುಗಿ ನೋಡಿದರು. ಯಾರೂ ಕಾಣಿಸಲಿಲ್ಲ; ಯಾವ ಸದ್ದೂ ಕೇಳಿಸಲಿಲ್ಲ. ದೂರದ ಹಳ್ಳಿಯಲ್ಲಿ ಆಗಾಗ ಬೊಗಳುತ್ತಿದ್ದ ನಾಯಿಯ ಮಬ್ಬುದನಿಯೊಂದು ಮಾತ್ರ ಘನ ತಿಮಿರವನ್ನು ಭೇದಿಸಲಾರದೆ ತೊಳಲಿ ಸೋತು ಬರುತ್ತಲಿತ್ತು. ರಾಯರು ಮುತ್ತಣ್ಣನ ಕಡೆಗೆ ನೋಡಿದರು.

ಅವರ ಮುಖದ ಮೇಲೆ ಬಿಚ್ಚಿ ತೋರುತ್ತಿದ್ದ ಪ್ರಶ್ನೆಯ ಭಾಗವನ್ನು ಅರಿತು ಮುತ್ತಣ್ಣನು “ನಾಕ್ಕೈದು ಕಲ್ಲುಗಳು ಹೆಂಚಿನ ಮೇಲೆ ಬಿದ್ದುದನ್ನು ಕಿವಿಯಾರ ಕೇಳಿದೆ!” ಎಂದನು.

ಮತ್ತೊಂದು ಸಾರಿ ಸುತ್ತಲೂ ತಿರುಗಿ ಪರೀಕ್ಷೆಮಾಡಿಕೊಂಡು ಬರೋಣ ಎಂದು ಹೇಳಿ ರಾಯರು ಎರಡು ಹೆಜ್ಜೆ ಮುಂದೆ ಸರಿದರು. ಒಡನೆಯೇ ಎರಡು ದಪ್ಪವಾದ ಕಲ್ಲುಗುಂಡುಗಳು ಹಂಚಿನ ಮೇಲೆ ಬಿದ್ದ ಸದ್ದಾಯಿತು. ಆ ಘೋರ ನೀರವತೆಯಲ್ಲಿ ಅದು ಭಯಂಕರವಾಗಿತ್ತು. ರಾಯರ ಹಿಂತಿರುಗಿ ಮುತ್ತಣ್ಣನನ್ನು ನೋಡಿ. ಕೈಸನ್ನೆ ಮಾಡಿ. ಕಲ್ಲು ಎತ್ತಕಡೆಯಿಂದ ಬಂದುವೆಂದು ಕೇಳಿದರು. ಮುತ್ತಣ್ಣನೂ ಗಾಬರಿಯಿಂದ ತೋಟದ ಕಡೆಗೆ ಕೈ ತೋರಿದನು. ಇಬ್ಬರೂ ಆ ಕಡೆಗೆ ಸರಿದರು. ಪುನಃ ಕಲ್ಲೊಂದು ಮನೆಗೆ ಹೊದಿಸಿದ ಸತುವಿನ ತಗಡುಗಳ ಮೇಲೆ ಢಣಢಣ ಎಂದು ಉರುಳಿತು. ಮುತ್ತಣ್ಣ ಸ್ವಲ್ಪವೂ ವಿಳಂಬ ಮಾಡದೆ  ಒಮದು ಬೆದರುಗುಂಡು ಹಾರಿಸಿದನು.! ಆ ಇರುಳಿನ ಮೂಕ ಮೌನದಲ್ಲಿ ಈಡಿನ ಸದ್ದು ಸಿಡಿಲಿಗೆ ನೂರ್ಮಡಿಯಾಗಿ ಮೊಳಗಿ, ಬೆಟ್ಟಗುಡ್ಡಗಳಿಂದ ಪ್ರತಿಧ್ವನಿತವಾಯಿತು. ನಿಶ್ಯಬ್ದತೆಯಲ್ಲಿ ಮುಳುಗಿದ ಎಲ್ಲರೂ ಎಚ್ಚತ್ತರು.

ಸಮಿಪದ ಬಿಡಾರದಲ್ಲಿ ಮಲಗಿ ನಿದ್ರಿಸುತ್ತಿದ್ದ ಮಾದನು ಓಡಿಬಂದನು. ಮನೆಯಲ್ಲಿ ಮಲಗಿದ್ದ ಆಳುಗಳೆಲ್ಲರೂ ಕೂಗುತ್ತ ಹೊರಗೆ ನುಗ್ಗಿದರು. ಹೆಂಗಸರು ಮಕ್ಕಳೆಲ್ಲ ಎಚ್ಚತ್ತು ಗಲಭೆ ಮಾಡಿದರು. ಕೊಟ್ಟಿಗೆಯಲ್ಲಿ ಶಾಂತಿಯಿಂದ ಮಲಗಿದ್ದ ದನಕರುಗಳೂ ಬೆದರಿ ಗುಡುಗಾಡಿದವು.

ಎರಡು ಮೂರು ಲಾಟೀನು ಬಂದುವು. ಎಲ್ಲರೂ ಹುಡುಕಿದರು. ಆದರೆ ಯಾರೊಬ್ಬರೂ ಗೋಚರವಾಗಲಿಲ್ಲ.

ಮರುದಿನ ರಾತ್ರಿಯೂ ಕಲ್ಲು ಬಿದ್ದುವು. ಅದರ ಮರುದಿನವೂ ಹಿಂದಿನ ದಿನಕ್ಕಿಂತ ಸ್ವಲ್ಪ ಹೆಚ್ಚಾಗಿಯೇ ಕಲ್ಲು ಮಳೆಗೆರೆಯಿತು. ಹೆಂಗಸರು ಮಕ್ಕಳೆಲ್ಲ ಭಯದಿಂದ ನಿದ್ದೆಮಾಡಲಾರದವರಾದರು. ಬಳ್ಳಿಯ ಹಳ್ಳಿಯ ಇಬ್ಬರು ಪ್ರಸಿದ್ಧರಾದ ಬೇಟೆಗಾರರು ಮಾದ ಮುತ್ತಣ್ಣ ಇವರೊಡನೆ ಕಾವಲು ಕೂತರು. ಆದರೂ ಶಿಲಾವರ್ಷ ತಪ್ಪಲಿಲ್ಲ. ಕಳ್ಳರು ಕಣ್ಣಿಗೆ ಬೀಳಲೂ ಇಲ್ಲ. ಮುತ್ತಣ್ಣ ಒಂದು ದಿನ ಯಾರೋ ಕಣ್ಣಿಗೆ ಕಾಣಿಸಿದಂತಾಗಲು ಗುಂಡು ಹೊಡೆದನು. ಆದರೆ ಅದೂ ಗುರಿತಪ್ಪಿ ನಿಷ್ಪ್ರಯೋಜಕವಾಯಿತು. ದೂರು ಪೋಲೀಸು ಇಲಾಖೆಯವರೆಗೂ ಹೋಯಿತು.

ರಾಯರು ಹೆಂಗಸರು ಮಕ್ಕಳನ್ನೆಲ್ಲ ಮರಳಿ ಪೇಟೆಯ ಮನೆಗೆ ಕಳುಹಿಸಿಬಿಟ್ಟರು.

ಮರುದಿನ ಪೊಲೀಸಿನವನೊಬ್ಬನು ನವಿಲೂರಿಗೆ ಬಂದನು. ತೀರ್ಥಹಳ್ಳಿಯ ಪೋಲೀಸು ಇನ್‌ಸ್ಪೆಕ್ಟರ ಆಗಿದ್ದ ಮಹಮ್ಮದ್ ಹುಸೇನ್ ಸಾಹೇಬರು ಅವನನ್ನು ಮನೆಯ ಕಾವಲಿಗಾಗಿಯೂ ಕಳ್ಳರ ಪತ್ತೆಗಾಗಿಯೂ ಕಳುಹಿಸಿದ್ದರು. ರಾಯರು ಪೋಲೀಸಿನವನನ್ನು ಆದರದಿಂದ ಬರಮಾಡಿಕೊಂಡು ಅಂದಿನ ರಾತ್ರಿಗಳಲ್ಲಿ ನಡೆದ ವಿಷಯಗಳನ್ನೆಲ್ಲ ತಿಳಿಸಿದರು. ಪೋಲೀಸಿನವರಿಗೆ ಅತ್ಯಾಶ್ಚರ್ಯವಾಯಿತು.

ನವಿಲೂರಿನಲ್ಲಿ ಇರುವುದು ರಾಯರ ಮನೆಯೊಂದೆ. ಸುತ್ತ ಮುತ್ತಲೂ ಕಾಡು ಬೆಟ್ಟ. ಬೇರೆ ಹಳ್ಳಿಗಳೆಂದರೆ ಬೆಟ್ಟಗಳಾಚೆ ಇರುವುವು. ನವಿಲೂರಿನಲ್ಲಿ ಇರುವಜನಸಂಖ್ಯೆಯೋ, ಕೆಲಸಗಾರರನ್ನು ಗಣನೆಗೆ ತಂದುಕೊಂಡರೂ, ಇಪ್ಪತ್ತಕ್ಕೆ ಮೇಲಾಗುತ್ತಿದ್ದಿಲ್ಲ. ಹೀಗಿರುವಾಗ ಅಲ್ಲಿಗೆ ಹೊರಗಿನಿಂದ ಯಾವ ಕಳ್ಳನು ಬರಬೇಕು? ಇದನ್ನೆಲ್ಲ ತನ್ನಲ್ಲಿಯೆ ಚಿಂತಿಸಿ ಪೋಲೀಸಿನವನು “ಸ್ವಾಮಿ, ತಮಗೆ ಆಗದವರು ಯಾರಾದರೂ ಇದ್ದಾರೆಯೆ ಇಲ್ಲಿ?” ಎಂದನು.

“ಹಾಗೆಂದರೇನಯ್ಯಾ? ಇರುವವರೆಲ್ಲ ನನ್ನ ಆಳುಗಳೇ. ಅವರಲ್ಲಿ ನನಗೆ ಆಗದವರು ಯಾರಿದ್ದಾರೆ?”

“ತಮಗೆ ಯಾರ ಮೇಲೆಯೂ ಗುಮಾನಿ ಇಲ್ಲವೆ?”

“ಇಲ್ಲ.”

“ಬೇಲರ ಮಾದನ ಮೇಲೆ?”

“ಛೇ! ಛೇ! ಬಡಪಾಯಿ! ಅವನು ಬಹಳ ಸಭ್ಯ!”

“ನಿಮ್ಮ ಗಾಡಿಯ ಮುತ್ತಣ್ಣ?”

“ಸರಿಹೋಯ್ತು ಬಿಡಯ್ಯ! ಇನ್ನು, ನವಿಲೂರು ರಂಗರಾಯರ ಮೇಲೆಯೇ ಏನಾದರೂ ಗುಮಾನಿ ಇದೆಯೇ ಎಂದು ಕೇಳುವಿಯೋ ಏನೋ!”

“ಹಾಗಲ್ಲ, ಸ್ವಾಮಿ. ಕಳ್ಳರನ್ನು ಪತ್ತೆ ಮಾಡಬೇಕಾದರೆ ಇಂತಹ ಪ್ರಶ್ನೆಗಳನ್ನೆಲ್ಲ ಕೇಳದಿದ್ದರೆ ಆಗುತ್ತದೆಯೇ?”

“ಅಲ್ಲವಯ್ಯಾ, ಮುತ್ತಣ್ಣನ ಮೇಲೆ ಗುಮಾನಿ ಇದೆಯೇ ಎಂದು ಕೇಳಿಬಿಟ್ಟೆಯಲ್ಲ! ಮುತ್ತಣ್ಣ ನಮ್ಮ ಮನೆ ಹುಡುಗ. ಮನೆಯ ಆಡಳಿತವೆಲ್ಲ ಹೆಚ್ಚು ಕಡಿಮೆ ಅವನದೇ ಆಗಿದೆ. ಹೀಗಿರುವಾಗ ಅವನೆಲ್ಲಿಯಾದರೂ ಅಂಥಾ ಕೆಲಸಕ್ಕೆ ಕೈಹಾಕುವ ಸಂಭವವುಂಟೇ?”

“ಏನಾದರೂ ಆಗಲಿ. ಈ ದಿನ ರಾತ್ರಿ ನನ್ನ ಕೈಕೆಳಗೆ ಮೂರು ನಾಲ್ಕು ಜನರನ್ನು ಕೊಡಿ, ಕಳ್ಳರನ್ನು ಪತ್ತೆಮಾಡಿಯೇ ಬಿಡುತ್ತೇನೆ. ಒಬ್ಬೊಬ್ಬರಿಗೆ ಒಂದು ಬಂದೂಕವೂ ಬೇಕು.”

“ಓಹೋ ಅದಕ್ಕೇನು? ಎಷ್ಟು ಜನ ಬೇಕು ಅಂದರೆ ಅಷ್ಟು ಜನ ಕೊಡುತ್ತೇನೆ. ನೆರೆಯ ಹಳ್ಳಿಯ ರಾಮಣ್ಣ, ನಾಗಣ್ಣ ಇಬ್ಬರೂ ಸಾಯಂಕಾಲದ ಹೊತ್ತಿಗೆ ಬರುತ್ತಾರೆ. ಪಾಪ! ಅವರಿಬ್ಬರೂ ರಾತ್ರಿಯೆಲ್ಲ ನಿದ್ದೆಯಿಲ್ಲದೆ ಕಾಯುತ್ತಾರೆ. ಮುತ್ತಣ್ಣನೂ ಕಾಯುತ್ತಾನೆ. ಮಾದ ಇದ್ದಾನೆ.”

ಸಂಜೆಯಾಯಿತು. ಪೋಲೀಸಿನವನು ರಾತ್ರಿಯಲ್ಲಿ ಯಾರೂ ಮಾತಾಡದೆ, ದೀಪವಿಲ್ಲದೆ, ಹೊರಗೆ ಸಂಚರಿಸಬಾರದೆಂದು ನವಿಲೂರಿನವರಿಗೆಲ್ಲ ಕಟ್ಟಪ್ಪಣೆ ಮಾಡಿದನು. ಕತ್ತಲಾಯಿತು. ಮನೆಯ ನಾಲ್ಕು ಭಾಗಗಳಲ್ಲಿ ನಾಲ್ಕು ಜನರು ಕೋವಿಗಳನ್ನು ಹಿಡಿದುಕೊಂಡು ಕುಳಿತರು. ಪೂರ್ವದಿಕ್ಕಿನ ಮಾವಿನ ಮರದ ಬಳಿ ರಾಮಣ್ಣನೂ, ಪಶ್ಚಿಮ ದಿಕ್ಕಿನ ಕೊಟ್ಟಿಗೆಯ ಅಟ್ಟದಮೇಲೆ ನಾಗಣ್ಣನೂ, ಉತ್ತರದಿಕ್ಕಿನ ಹಿತ್ತಲಬೇಲಿಯ ಬಳಿ ಮಾದನೂ ಅಲ್ಲಿಗೆ ಸ್ವಲ್ಪದೂರದಲ್ಲಿ ಮುತ್ತಣ್ಣನೂ ಕುಳಿತರು.

ಸದ್ದಿಲ್ಲದಿರುಳು. ಕಣ್ಣಿರಿನ ಕತ್ತಲೆ. ಮಿಣುಕುವ ಅಸಂಖ್ಯ ತಾರೆಗಳ ಮಬ್ಬಾದ ಬೆಳಕು ಕೂಡ, ಮರಗಳ ಕೊಬ್ಬಿದ ತಳಿರ ನಡುವೆ ಸಿಕ್ಕಿ ಎಲ್ಲಿಯೋ ಅಡಗಿಹೋಗಿದೆ. ಕೊಟ್ಟಿಗೆಯ ಅಟ್ಟದಮೇಲೆ ಕುಳಿತ ರಾಮಣ್ಣನು ಚೀಲವೆಲ್ಲ ಬರಿದಾಗುವತನಕ ಎಲೆಯಡಕೆ ಹಾಕಿಬಿಟ್ಟನು. ಆದರೂ ನಿದ್ರೆ ಹರಿಯಲಿಲ್ಲ. ಮೆಲ್ಲಗೆ ಮಲಗಿದನು. ಬೇಲರ ಮಾದನಂತೂ ಕುಡಿದ ಕಳ್ಳಿನ ಮತ್ತಿನಲ್ಲಿ ಮೈಮರೆತುಬಿಟ್ಟನು. ಪೋಲೀಸಿನವನು ಮನೆಯ ಚಾವಡಿಯಲ್ಲಿಯೆ ಕುಳಿತಿದ್ದನು. ಸುಮಾರು ಹನ್ನೆರಡು ಗಂಟೆಯ ಸಮಯವಿರಬಹುದು. ಆಗ ಸದ್ದಿಲ್ಲದಿರುಳಿನ ಕರುಳನ್ನು ಬಗೆದುಕೊಂಡು ಬಂದೂಕಿನ ‘ಢಂ’ಕಾರವೊಂದು ನಾಡೆಲ್ಲವನ್ನೂ ನಡುಗಿಸಿ ಬಿಟ್ಟಿತು.

ಎಲ್ಲರೂ ಎಚ್ಚತ್ತರು. ಗುಂಪು ಸೇರಿದರು. ಗಜಿಬಿಜಿಯಾಯಿತು. ಕಡೆಗೆ ಮುತ್ತಣ್ಣನು ಎಲ್ಲರನ್ನೂ ಕರೆದುಕೊಂಡು ಒಂದೆಡೆಗೆ ಹೋದನು. ಲಾಟೀನು ಅವನ ಕೈಯಲ್ಲಿಯೆ ಇತ್ತು. ಅದರ ಬೆಳಕಿನಲ್ಲಿ ಏನನ್ನೊ ಹುಡುಕಿದನು. ಸ್ವಲ್ಪ ಗಾಬರಿಯಾಗಿ ಬೆಚ್ಚಿನಿಂತು “ಬನ್ನಿ! ಇಲ್ಲಿ ನೋಡಿ” ಎಂದನು. ಎಲ್ಲರೂ ಒಬ್ಬರ ಮೇಲೆ ಒಬ್ಬರು ನುಗ್ಗಿ ನೋಡಿದರು. ರಕ್ತ! ಗುಂಡಿನ ಪೆಟ್ಟಿನಿಂದ ಸೋರಿದ ನೆತ್ತರು. ತೊಟ್ಟಿಕ್ಕುತ್ತಾಹೋಗಿತ್ತು. ಎಲ್ಲರೂ ಅದರ ಜಾಡನ್ನೇ ಹಿಡಿದು ಮುಂಬರಿದರು. ನೆತ್ತರು ಸುಮಾರು ಒಂದು ಫರ್ಲಾಂಗಿನವರೆಗೂ ಕಂಡುಬಂದು, ಅಲ್ಲಿ ಹರಿಯುತ್ತಿದ್ದ ತೊರೆಯ ನೀರಿನಲ್ಲಿ ನಿಂತುಬಿಟ್ಟಿತ್ತು. ಗಾಯವಾದ ಕಳ್ಳನನ್ನು ಉಳಿದ ಕಳ್ಳರು ಹೊತ್ತುಕೊಂಡೇ ಹೋದರೆಂದು ಎಲ್ಲರೂ ಸಿದ್ಧಾಂತಮಾಡಿ ನಿಟ್ಟುಸಿರೆಳೆಯುತ್ತಾ ಹಿಂತಿರುಗುದರು. ಇನ್ನು ಮೇಲೆ ಕಳ್ಳರ ಗಲಾಟೆ ತಪ್ಪುವುದೆಂದು ಎಲ್ಲರೂ ಊಹಿಸಿದರು.

ಆದರೆ ಮರುದಿನವೂ ಮನೆಯಮೇಲೆ ಕಲ್ಲುಬಿತ್ತು.

ದಿನದಿನವೂ ಕಾದರು. ಬೆದರುಗುಂಡು ಹೊಡೆದರು. ಪೋಲೀಸಿನವರು ಬಂದರು; ಹೋದರು. ಕಳ್ಳರು ಮಾತ್ರ ಕಲ್ಲೆಸೆಯುತ್ತಲೇ ಇದ್ದರು. ಗುಲ್ಲು ಎಲ್ಲೆಲ್ಲಿಯೂ ಹಬ್ಬಿತು.

ಒಂದು ದಿನ ರಾತ್ರಿ. ಎಲ್ಲರೂ ಕಾವಲು ಕುಳಿತಿದ್ದಾರೆ. ಬೇಲರ ಮಾದನೂ ತನ್ನ ಗುಡಿಸಲಿನ ಮುಂಭಾಗದಲ್ಲಿ ಎವೆಯಿಕ್ಕದೆ ಕಗ್ಗತ್ತಲನ್ನು ನೋಡುತ್ತಾ ಇದ್ದಾನೆ. ಕೋವಿಯನ್ನು ಕೆಳಗಿಟ್ಟಿದ್ದಾನೆ. ಎಲೆಯಡಕೆ ಹಾಕಿಕೊಳ್ಳುವುದಕ್ಕೆಂದು ಚೀಲವನ್ನು ಬಿಚ್ಚುತ್ತದ್ದಾನೆ. ಇದ್ದಕಿದ್ದ ಹಾಗೆ ಚೀಲವನ್ನು ಕೆಳಗೆಸೆದು ಕೋವಿಯನ್ನು ಕೈಗೆ ತೆಗೆದುಕೊಂಡನು. ವಿಳಂಬಮಾಡದೆ ಗುರಿಯಿಟ್ಟನು. “ಯಾರದು?” ಎಂದು ಕೂಗಿದನು. ಮಾತೇ ಇಲ್ಲ. ಆದರೆ ಯಾರೋ ಒಂದು ಮರದಡಿ ನಿಂತಹಾಗೆ ತೋರಿತು. ಪುನಃ “ಯಾರದು?” ಎಂದನು. ಉತ್ತರವಿಲ್ಲ. ಹಿಂದೆ ಮುಂದೆ ನೋಡದೆ ಇಡು ಹೊಡೆದೇಬಿಟ್ಟನು.

“ಅಯ್ಯೋ ಕೊಂದೆಯೇನೋ?” ಎಂಬ ಪರಿಚಿತ ಧ್ವನಿಯೊಂದಾಯಿತು. ಮಾದ ನಡುಗಿದನು. ಮುಂದೆ ನುಗ್ಗಿ ಓಡಿದನು. ಅಷ್ಟರಲ್ಲಿ ಅನೇಕರು ದೀಪಗಳನ್ನು ಹೊತ್ತಿಸಿಕೊಂಡು ಅಲ್ಲಿಗೆ ಓಡಿಬಂದರು. ನೋಡುವಲ್ಲಿ ಕಾಲಿಗೆ ಚರೆಯ ಪೆಟ್ಟುಬಿದ್ದು ಮುತ್ತಣ್ಣನು ನೋವಿನಿಂದ ಕೆಳಗೆ ಬಿದ್ದು ನರಳುತ್ತಿದ್ದಾನೆ! ರಂಗರಾಯರೂ ಅಲ್ಲಿಗೆ ಬಂದರು.

“ಯಾರೋ ಈಡು ಹೊಡೆದದ್ದು?” ಎಂದರು.

ಮಾದ “ನಾನು ಅಯ್ಯಾ?” ಎಂದನು.

“ನಿನಗೇನು ಕಣ್ಣಿರಲಿಲ್ಲವೇನೋ?”

“ನಾನೇನು ಮಾಡಲಿ, ಅಯ್ಯಾ? ಎರಡು ಸಾರಿ ಕೂಗಿ ಕರೆದೆ. ಮಾತಾಡಲಿಲ್ಲ. ಕಳ್ಳರೆಂದೇ ಹೊಡೆದುಬಿಟ್ಟೆ?”

ರಾಯರು ಮುತ್ತಣ್ಣನನ್ನು ಗದರಿಸಲಿಲ್ಲ. ಏಕೆಂದರೆ ಅವನು ಆಗಲೇ ನೋವಿನಿಂದ ನರಳುತ್ತಿದ್ದನು. ಒಂದು ಕಾಲಿನ ಎಲುಬು ಒಡೆದು ಹೋಗಿತ್ತು.

ರಾಯರು ಮುತ್ತಣ್ಣನನ್ನು ಕರೆದುಕೊಂಡು ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ಹೋದರು. ಅಲ್ಲಿ ಕೆಲವು ದಿನಗಳಿದ್ದು ಅವನ ಕಾಲು ಗುಣವಾದ ಮೇಲೆ ಮರಳಿದರು. ಈ ಮಧ್ಯೆ ನವಿಲೂರಿನಲ್ಲಿ ಕಳ್ಳರ ಗಲಾಟೆ ಇರಲಿಲ್ಲ.

ಪುನಃ ಮನೆಯ ಮೇಲೆ ಕಲ್ಲಿನ ಮಳೆಗರೆಯಲು ಪ್ರಾರಂಭವಾಯಿತು. ರಂಗರಾಯರಿಗೆ ಯಾವ ತೋರಲಿಲ್ಲ. ಎಲ್ಲರೂ ಅಪಾರ್ಥಿವ ಕಾರಣಗಳನ್ನೆ ಕೊಡಲಾರಂಭಿಸಿದರು. ನವಿಲೂರಿಗೆ ಬಂದ ಪೋಲೀಸಿನವರಂತೂ ಕಲ್ಲೆಸೆಯುವವರು ದೆವ್ವಗಳಲ್ಲದೆ ಮನುಷ್ಯರಲ್ಲವೇ ಅಲ್ಲವೆಂದು ಸಾರಿ ಸಾರಿ ಹೇಳಿದರು. ಮನುಷ್ಯರಾಗಿದ್ದರೆ ಸರ್ವಾಂರ್ಯಾಮಿಗಳಾದ ಪೋಲೀಸಿನವರಿಂದ ತಪ್ಪಿಸಿಕೊಳ್ಳುವರೇ? ಏನು ಮಾತು!

ಮಂತ್ರವಾದಿಗಳನ್ನು ಕರೆಯಿಸಿ ತಡೆಕಟ್ಟಿಸಿ ನೋಡಿದರು; ಏನೂ ಪ್ರಯೋಜನವಾಗಲಿಲ್ಲ. ಕಡೆಗೆ ನೆರೆಯೂರಿನ ಮಂಗನಹಳ್ಳಿಯ ಸಿಂಗಾ ಜೋಯಿಸರು ತಾವು ಮಂತ್ರಬಲದಿಂದ ಕಲ್ಲೆಸೆಯುವ ಕಳ್ಳರನ್ನು ನಿಂತಲ್ಲಿಂದ ಅಲುಗಾಡದಂತೆ ಮಾಡಬಲ್ಲೆನೆಂದು ಹೇಳಿದರು. ರಂಗರಾಯರುರಿಂದ ಅವರಿಗೆ ಆಗ ತಾನೆ ಸ್ವಲ್ಪ ಸಾಲ ಬೇಕಾಗಿತ್ತು! ರಾಯರೂ ಒಪ್ಪಿದರು.

ಸರಿ, ಜೋಯಿಸರು ಬಂದರು. ಆ ದಿನವೇನು ನವಿಲೂರಿನಲ್ಲಿ ಅನೇಕ ಜನರು ನೆರೆದಿದ್ದರು! ಮುತ್ತಣ್ಣನೇ ಜೋಯಿಸರಿಗೆ ಬೇಕಾದ ಮಂತ್ರದ ರಂಗವಲ್ಲಿಯ ಸಲಕರಣೆಗಳನ್ನೆಲ್ಲಾ ಒದಗಿಸಿಕೊಟ್ಟನು. ಅದ್ಭುತ ಕಾರ್ಯವನ್ನು ನೋಡುವೆವೆಂದು ಎಲ್ಲರಿಗೂ ಉತ್ಸಾಹ, ಉದ್ವೇಗ!

ಜೋಯಿಸರು ಅಂಗಳದಲ್ಲಿ ರಂಗವಲ್ಲಿ ಬರೆಯತೊಡಗಿದರು. ವಿಚಿತ್ರ ವಿಚಿತ್ರವಾದ ಚಿತ್ರಜಾಲವನ್ನು ಬರೆದರು. ಘೋರಾಕೃತಿಗಳನ್ನು ಕೆತ್ತಿದರು. ಹಣ್ಣು, ತೆಂಗಿನಕಾಯಿ, ಧೂಪಗಳನ್ನು ಹೊತ್ತಿಸಿ ಪೂಜೆ ಮಾಡಿದರು. ನಿರರ್ಗಳವಾಗಿ, ಹತ್ತಿರವಿದ್ದವರಿಗೆ ಯಾರಿಗೂ ಸ್ಪಷ್ಟವಾಗಿ ಕೇಳದ ರೀತಿಯಿಂದ ಬೇಕಾದಷ್ಟು ಮಂತ್ರಘೋಷಣ ಮಾಡಿದನು. ಅಲ್ಲಲ್ಲಿ ಸಣ್ಣ ಮೊಳೆಗಳನ್ನು ನೆಲಕ್ಕಿಳಿಸಿದರು. ಅಂತೂ ನೋಟವೇನೊ ಅದ್ಭುತವಾಗಿಯೆ ಇತ್ತು. ಹಳ್ಳಿಯ ಜನರು ಬೆಪ್ಪುಬೆರಗಾಗಿ ಹೋದರು.

ಕತ್ತಲಾಯಿತು. ಮುತ್ತಣ್ಣನು ಕೆಂಗೊಳು, ಬಣ್ಣದ ನೀರು, ಕಕ್ಕಡಗಳನ್ನು ತಂದುಕೊಟ್ಟನು. ಜೋಯಿಸರು ಇದ್ದಕಿದ್ದಹಾಗೆ ಗಂಭೀರರಾದರು.ಅವರ ವಾಣಿ ಮೊಳಗತೊಡಗಿತು. ಏನೋ ಒಂದು ಮಹಾಕಾರ್ಯವು ನಡೆಯುವುದೆಂದು ಎಲ್ಲರೂ ಮೌನವಾಗಿ ಮೂಕರಾಗಿ ನಿಂತಿದ್ದರು.

ರಾತ್ರಿ ಒಂಬತ್ತು ಗಂಟೆಯಾಯಿತು. ಎಲ್ಲೆಲ್ಲಿಯೂ ಮುಟ್ಟಿ ಅನುಭವುಸಬಹುದಾದ ಮೌನ ಹಬ್ಬಿತ್ತು. ನೆರೆದಿದ್ದ ಜನರೆಲ್ಲರೂ ಇದ್ದಕಿದ್ದ ಹಾಗೆ ಬೆಚ್ಚಿದರು. ನಾಲ್ಕೈದು ಕಲ್ಲುಗಳು ಮನೆಯ ಹೆಂಚುಗಳ ಮೇಲೆ ಬಿದ್ದು ಢಣ್ ಢಣ್ ಢಣ್ ಎಂದು ಸದ್ದುಮಾಡಿದುವು. ಒಂದು ಕಲ್ಲು ರೊಂಯ್ಯೆಂದು ಬಂದು ಜೋಯಿಸರ ಮುಂದೆಯೇ ಬಿತ್ತು. ಜೋಯಿಸರು ಎದ್ದುನಿಂತು, ಸುತ್ತಲೂ ಕತ್ತಲು ಮುತ್ತಿದ್ದ ಬಾಂದಳವನ್ನು ನಿಟ್ಟಿಸಿ ನಾಲ್ದೆಸೆಗಳಿಗೂ ಕೈಮುಗಿದು, ಒಂದು ದೊಡ್ಡ ಮೊಳೆಯನ್ನು ತೆಗೆದುಕೊಂಡು ನೆಲದಮೇಲೆ ತಾವು ಬರೆದಿದ್ದ ಒಂದು ಮನುಷ್ಯನ ಎದೆಗೆ ಸರಿಯಾಗಿ ಹೊಡೆದಿಳಿಸಿದರು. ಬಾಯಲ್ಲಿ ತಮ್ಮಷ್ಟಕ್ಕೆ ತಾವೇ “ಹಾಗೆ! ಅಲ್ಲಿ ನಿಂತಿರು!” ಎಂದು ಹೇಳುತ್ತಿದ್ದರು.

ಸ್ವಲ್ಪ ಹೊತ್ತಾದ ಮೇಲೆ ನೆರೆದಿದ್ದವರ ಕಡೆಗೆ ತಿರುಗಿ “ನೀವಿನ್ನು ಧೈರ್ಯವಾಗಿ ಹೋಗಿ ಮಲಗಿ. ನಾಳೆ ಹೊತ್ತಾರೆ ಹೋಗಿ ಅವನನ್ನು ಎಳೆದುಕೊಂಡು ಬಂದರಾಯ್ತು! ಅವನು ಎಲ್ಲಿದ್ದನೋ ಅಲ್ಲಿಂದ ಒಂದು ಹೆಜ್ಜೆಯನ್ನೂ ಕೀಳದಂತೆ ಮಾಡಿಬಿಟ್ಟಿದ್ದೇನೆ” ಎಂದರು.

ರಂಗರಾಯರು ಕುತೂಹಲದಿಂದ “ಜೋಯಿಸರೇ, ಅದಕ್ಕೇನಂತೆ ಈಗಲೇ ಹೋಗಿ ಎಳೆದುಕೊಂಡು ಬರೋಣ” ಎಂದರು.

ಜೋಯಿಸರು ಅಧಿಕಾರವಾಣಿಯಿಂದ “ಬೇಡ” ಎಂದರು. ಜೋಯಿಸರ ಮಾತೆಂದು ತಿಳಿದು ಎಲ್ಲರೂ ಸುಮ್ಮನಾದರು; ಮಲಗಿದರು.

ಬೆಳಗಾಯ್ತು. ಜೋಯಿಸರು ಪವಾಡ ಮಾಡುವರೆಂಬ ಶುಭವಾರ್ತೆ ಅಕ್ಕಪಕ್ಕದ ಹಳ್ಳಿಗಳಲೆಲ್ಲ ತಂತಿಲಿ ಸುದ್ದಿಯಂತೆ ಹಿಂದಿನ ದಿನವೇ ಹಬ್ಬಿಬಿಟ್ಟಿತ್ತು. ಆದ್ದರಿಂದ ಹೊತ್ತುಮೂಡುವುದಕ್ಕೆ ಮುಂಚಿತವಾಗಿಯೆ ನವಿಲೂರಿನಲ್ಲಿ ಜನರು ಕಿಕ್ಕಿರಿದರು. ನಿರುದ್ವಿಗ್ನ ಜೀವಿಗಳಾದ ಗ್ರಾಮನಿವಾಸಿಗಳಿಗೆ ಇಂಥಾದ್ದು ಏನಾದರೊಂದು ನಡೆದರೆ ಪರಮಾನಂದ.

ಸುಮಾರು ಐವತ್ತು ಅರವತ್ತು ಜನರೊಡಗೂಡಿ ರಂಗರಾಯರು ಜೋಯಿಸರನ್ನು ಮುಂದಿಟ್ಟುಕೊಂಡು ಮಂತ್ರಮುಗ್ಧನಾಗಿ ಅಚಲನಾಗಿದ್ದ ಕಳ್ಳನನ್ನು ಎಳೆದುಕೊಂಡು ಬರಲು ಹೊರಟರು. ಉಳಿದ ಕಡೆಗಳಲ್ಲೆಲ್ಲ ನಿಬಿಡ ಸುಂದರ ಶ್ಯಾಮಲದ್ರುಮಮಯ ಅರಣ್ಯ ಶ್ರೇಣಿ. ಒಬ್ಬೊಬ್ಬರು ಇಬ್ಬಿಬ್ಬರು ಮೂರು ಮೂರು ಜನರು ಹೀಗೆ ಸಣ್ಣ ಸಣ್ಣ ದೊಡ್ಡ ದೊಡ್ಡ ಗುಂಪುಗಳಾಗಿ ನೆರೆದವರೆಲ್ಲರೂ ಕಳ್ಳರನ್ನು ಹುಡುಕಿದರು. ಪೊದೆಗಳಲ್ಲಿ, ಬಂಡೆಯ ಸಂದಿಗಳಲ್ಲಿ, ಹೆಮ್ಮರಗಳ ನಿರಿದಳಿರ ಗುಂಪಿನಲ್ಲಿ, ಎಲ್ಲೆಲ್ಲಿಯೂ ಹುಡುಕಿದರು. ಯಾರೋ ಒಂದಿಬ್ಬರು ಅವರಂತೆಯೇ ಹುಡುಕುತ್ತಿದ್ದ ಮತ್ತಿಬ್ಬರನ್ನು ಕಂಡು ಭ್ರಾಂತಿಯಿಂದ “ಸಿಕ್ಕಿದರು ಕಳ್ಳರು ಸಿಕ್ಕಿದರು!” ಎಂದು ಕೂಗಿಕೊಂಡರು. ಎಲ್ಲರೂ ಆಯೆಡೆಗೆ ನುಗ್ಗಿದರು. ಆದರೇನು? ನಿಷ್ಪ್ರಯೋಜನ! ಕೆಲವರು ಬೈದರು, ಕೆಲವರು ನಕ್ಕರು, ಕೆಲವರು ಕೈ ಚಪ್ಪಾಳೆ ಹೊಡೆದರು; ಮತ್ತೆ ಕೆಲವರು ತಮ್ಮ ತಮ್ಮಲ್ಲಿಯೆ ಜೋಯಿಸರು ಮೋಸಗಾರನೆಂದು ಗುಸುಗುಸು ಮಾತಾಡಿಕೊಂಡರು. ಮನುಷ್ಯರಂತೆಯೇ ಬೇಟೆಯನ್ನು ಹುಡುಕಿಹುಡುಕಿ ಬಳಲಿದ ಬೇಟೆಯ ನಾಯಿಗಳೂ ಜೋಯಿಸರನ್ನೂ ಬೈಯುವಂತೆ ಬೊಗಳಿದುವು. ಅಂತೂ ಮಧ್ಯಾಹ್ನ ಹನ್ನೆರಡು ಗಂಟೆಯ ಮೇಲೆ ಹೊತ್ತಾಯ್ತು. ಜೋಯಿಸರು ಜನರನ್ನು ಕಾಡಿನಿಂದ ಕಾಡಿಗೆ ತೊಳಲಿಸಿದರು; ಬಳಲಿಸಿದರು. ಕಡೆಗೆ ಎಲ್ಲರೂ ಹಸಿದು ಬೇಸತ್ತು ಹಿಂತಿರುಗಿದರು.

ಜೋಯಿಸರು ಮಾತ್ರ “ಕಳ್ಳನು ನಿಜವಾಗಿಯೂ ಬಂದಿಯಾಗಿದ್ದಾನೆ. ಎಲ್ಲಿಯೋ ನಿಂತಿದ್ದಾನೆ. ಹುಡುಕುವವರು ಸರಿಯಾಗಿ ಹುಡುಕಲಿಲ್ಲ” ಎಂದು ಗೊಣಗುತ್ತ ಹೋದರು.

ಪೋಲೀಸ್ ಇನ್‌ಸ್ಪೆಕ್ಟರ್ ಮಗಮದ್ ಹುಸೇನ್ ಸಾಹೇಬರಿಗೆ ನವಿಲೂರಿನ ವಿಚಿತ್ರ ವಾರ್ತೆಗಳೆಲ್ಲ ತಲುಪಿದುವು. ಅವರೂ ಚೋರರೂ ಅಮಾನುಷ ವ್ಯಕ್ತಿಗಳಾಗಿರಬೇಕೆಂದೇ ಊಹಿಸಿದರು. ಏಕೆಂದರೆ ಇಷ್ಟೊಂದು ಜನ ಪೋಲೀಸಿವನರಿಗೆ, ರಂಗರಾಯರಿಗೆ, ಹಳ್ಳಿಯ ವೀರರಿಗೆ ಎಲ್ಲರಿಗೂ ಮಂಕುಬೂದಿ ಎರಚಿದ ಚೋರರು ಅಸಾಧಾರಣ ವ್ಯಕ್ತಿಗಳಲ್ಲದೆ ಮತ್ತೇನು? ಆದ್ದರಿಂದ ತಾವೇ ‘ಖುದ್ದಾಗಿ’ ನವಿಲೂರಿಗೆ ಹೋಗಿ ವಿಷಯವನ್ನು ವಿಮರ್ಶೆಮಾಡಬೇಕೆಂದು ನಿರ್ಧರಿಸಿದರು. ಅದನ್ನು ರಂಗರಾಯರಿಗೂ ತಿಳಿಸಿದರು. ರಾಯರಿಗೆ ಪರಮ ಸಂತೋಷವಾಯಿತು. ತಮ್ಮ ಜೋಡೆತ್ತಿನ ಸಾರೋಟು ಬಂಡಿಯನ್ನು ಮುತ್ತಣ್ಣನೊಡನೆ ಕಳುಹಿಸಿ ಇನ್‌ಸ್ಪೆಕ್ಟರ್ ಸಾಹೇಬರನ್ನು ಕರೆಯಿಸಿಕೊಂಡರು.

ಮಹಾನಗರವಾದ ತೀರ್ಥಹಳ್ಳಿಯ ಪೋಲೀಸ್ ಇನ್‌ಸ್ಪೆಕ್ಟರ್ ಸಾಹೇಬರು ಕುಗ್ರಾಮವಾದ ನವಿಲೂರಿಗೆ ಬಿಜಯ ಮಾಡುವರೆಂಬ ವರ್ತಮಾನ ನಿದಾಘವನ ವಹ್ನಿಯಂತೆ ಪ್ರಸರಿತು. ಜನರು ತಂಡೋಪ ತಂಡವಾಗಿ (ಅಂದರೆ ಇಬ್ಬಿಬ್ಬರಾಗಿ, ಮೂವರು ಮೂವರಾಗಿ!) ನವಿಲೂರಿನಲ್ಲಿ ನೆರೆದರು. ಅವರೆಲ್ಲರೂ ಆ ದಿನ ರಾತ್ರಿ ನವಿಲೂರಿನಲ್ಲಿಯೇ ತಂಗಿಬಿಟ್ಟು ಕಳ್ಳರನ್ನು ಪತ್ತೆ ಮಾಡಬೇಕೆಂದು ನಿಶ್ಚಯಿಸಿದ್ದರು. ಆದರೆ ಇನ್‌ಸ್ಪೆಕ್ಟರ್ ಸಾಹೇಬರು ಅವರೆಲ್ಲರನ್ನೂ ದಯೆದಾಕ್ಷಿಣ್ಯಗಳಿಲ್ಲದೆ ಹಿಂದಕ್ಕೆ ಕಳುಹಿಸಿಬಿಟ್ಟರು! ಎಬ್ಬಿ ಬಿಟ್ಟರು! ಎಲ್ಲರೂ, ತಮ್ಮ ತಮ್ಮ ಧೈರ್ಯಸಾಹಸಗಳನ್ನು ತೋರಿ ಸಾಹೇಬರಿಂದ ಸಿಫಾರಸು ಪಡೆಯಬೇಕೆಂದು ಹಾರೈಸಿಕೊಂಡು ಬಂದಿದ್ದ ಅವರೆಲ್ಲರೂ, ಪೆಚ್ಚುಮೋರೆ ಹಾಕಿಕೊಂಡು ಹೊರಟು ಹೋದರು. ಆ ದಿನ ರಾತ್ರಿ ಮನೆಯಮೇಲೆ ಕಲ್ಲು ಬೀಳಲೇ ಇಲ್ಲ! ಪಾಪ, ಮುಸಲ್ಮಾನರನ್ನು ಕಂಡರೆ ದೆವ್ವಗಳಿಗೆ ಭಯವಿಲ್ಲವೇ? ಹಾಗೆಂದೇ ಹಳ್ಳಿಯವರೆಲ್ಲಾ ಭಾವಿಸಿದರು.

ಮರುದಿನ ರಾತ್ರಿ ಇನ್‌ಸ್ಪೆಕ್ಟರು ಪಕ್ಕದ ಹಳ್ಳಿಯ ನಾಗಣ್ಣ, ರಾಮಣ್ಣ ಇವರಿಬ್ಬರನ್ನು ಕಾವಲಿರುವಂತೆ ಹೇಳಿ ತಾವು ಮಲಗಿಕೊಂಡರು. ನಡುರಾತ್ರಿಯ ಹೊತ್ತಿನಲ್ಲಿ ಮನೆಯ ಮೇಲೆ ಕಲ್ಲು ಬೀಳತೊಡಗಿದುವು. ಇನ್‌ಸ್ಪೆಕ್ಟರು ಎದ್ದರು. ರಂಗರಾಯರೂ ಎಚ್ಚತ್ತು ಹೊರಗೆ ಬಂದರು. ಮುತ್ತಣ್ಣ ಲಾಟೀನು ತಂದನು. ಎಲ್ಲರೂ ಸೇರಿ ಕಲ್ಲು ಬಿದ್ದಕಡೆಗೆ ಹೋದರು. ಬೇಲರ ಮಾದನೂ ಗುಡಿಸಲ ಕಡೆಯಿಂದ ಬಂದು ಗುಂಪನ್ನು ಸೇರಿದರನು.

ಗುಂಪು ಹೋಗುತ್ತಿರುವಾಗಲೇ ಕಲ್ಲೊಂದು ಮನೆಯ ಹೆಂಚಿನ ಮೇಲಿಂದ ಢಣ ಢಣ ಎಂದು ಉರುಳಿತು. ಎಲ್ಲರೂ ಚಕಿತರಾದರು. ಇನ್‌ಸ್ಪೆಕ್ಟರು ಸುತ್ತಲೂ ನೋಡಿದರು. ಎಲ್ಲೆಲ್ಲಿಯೂ ನಿಶ್ಯಬ್ದ! ಜನ್ಮತಃ ಪತ್ತೆದಾರರಾಗಿದ್ದ ಅವರ ಮನಸ್ಸಿನಲ್ಲಿ ಪ್ರತಿಭೆ ಮಿಂಚಿತು!

“ಎಲ್ಲರೂ ನಿಂತಲ್ಲಿಯೇ ನಿಲ್ಲಿ! ಅಲುಗಾಡದೆ ನಿಲ್ಲಿ!” ಎಂದರು ಇನ್‌ಸ್ಪೆಕ್ಟರು.

ರಂಗರಾಯರು ಬೆಚ್ಚಿದರು. ರಾಮಣ್ಣ, ನಾಗಣ್ಣ, ಮುತ್ತಣ್ಣ, ಮಾದ ಎಲ್ಲರೂ ನಿಷ್ಪಂದರಾಗಿ ನಿಂತುಬಿಟ್ಟರು. ಯಾರಿಗೂ ಏನೊಂದೂ ಬಗೆ ಹರಿಯಲಿಲ್ಲ!

“ನಿಮ್ಮೆಲ್ಲರನ್ನೂ ನಾನೀಗ ಜಡ್ತಿಮಾಡಿ ನೋಡಬೇಕು” ಎಂದರು ಇನ್‌ಸ್ಪೆಕ್ಟರ್ ಸಾಹೇಬರು.

ರಂಗರಾಯರು “ಇದೇನು, ಸಾಹೇಬರೆ?” ಎಂದರು.

ನಾಗಣ್ಣನ ಜೇಬನ್ನು ಪೂರೈಸಿ, ಪಕ್ಕದಲ್ಲಿ ಲಾಟೀನು ಹಿಡಿದು ನಿಮತಿದ್ದ ಮುತ್ತಣ್ಣನ ಜೇಬಿಗೆ ಕೈಹಾಕಿದರು. ಮುತ್ತಣ್ಣನು ಬೆಚ್ಚಿಬಿದ್ದು ಬೆಳ್ಳಗಾಗಿ ಮೈ ಬೆವರಿ ನಡುಗತೊಡಗಿದನು.ಇನ್‌ಸ್ಪೆಕ್ಟರು ಕೈಯನ್ನು ಹೊರಗೆ ತೆಗೆದು ರಂಗರಾಯರನ್ನು ಸಂಬೋಧಿಸಿ “ಇಲ್ಲಿ ನೋಡಿ, ರಂಗರಾಯರೆ!” ಎಂದರು.

ರಂಗರಾಯರು ನೋಡುತ್ತಾರೆ: ಮುತ್ತಣ್ಣನ ಜೇಬಿನಲ್ಲಿ ಕಲ್ಲಿನ ರಾಶಿ! ಪಾಪ! ಅವನದೇನು ತಪ್ಪು? ಎಲ್ಲಾ ಕಲ್ಲುಕುಟಿಗ ದೆವ್ವದ ಕಾಟ!

ಸರಳಹೃದಯನೂ ವಿನಯಸಂಪನ್ನನೂ ಆಗಿದ್ದ ಮುತ್ತಣ್ಣ ಕೈಗೆ ದರ್ಪ ಸಿಕ್ಕಿದ ಮೇಲೆ ಸ್ವಲ್ಪ ಅಹಂಕಾರಿಯಾಗಿದ್ದನು. ಹಳ್ಳಿಯಲ್ಲೆಲ್ಲ ಇವನು ಆಡಿದ್ದೇ ಆಟ, ಮಾಡಿದ್ದೇ ಮಾಟ ಎಂಬ ಹಾಗಾಗಿತ್ತು. ಬರಬರುತ್ತಾ ಗ್ರಾಮ ಚಕ್ರಾಧಿಪತ್ಯದ ರುಚಿ ಬಲವಾಯಿತು. ಆದ್ದರಿಂದ ರಾಯರು ಹಳ್ಳಿಗೆ ಬಂದು ನೆಲಸುತ್ತಾರೆ ಎಂಬ ವರ್ತಮಾನ ಹಬ್ಬಿದ ಕೂಡಲೆ ಅವನಿಗೆ ಚಿಂತೆ ಹತ್ತಿತು. ಏಕೆಂದರೆ ರಾಯರು ಹಳ್ಳಿಯಲ್ಲಿಯೆ ನಿಂತುಬಿಟ್ಟರೆ ಇದುವರೆಗೂ ಅರಸಾಗಿದ್ದ ತಾನು ಆಲಾಗಬೇಕಾಗುವುದಲ್ಲಾ ಎಂದು ಬಹಳವಾಗಿ ಚಿಂತಿಸಿ, ಕಡೆಗೆ ಏನಾದರೂ ಒಂದು ಉಪಾಯದಿಂದ ರಾಯರು ನವಿಲೂರಿನಲ್ಲಿ ನೆಲೆಯಾಗಿರದಂತೆ ಮಾಡಿಯೇ ಬಿಡಬೇಕೆಂದು ನಿಶ್ಚಯಿಸಿದ್ದನು. ಅದಕ್ಕಾಗಿ ಕೋಳಿ ಕೊಯ್ದು ಮನೆಯೆಡೆಯಿಂದ ಹಳ್ಳದ ದಂಡೆಯವರೆಗೆ ನೆತ್ತರು ತೊಟ್ಟಿಕ್ಕಿ ಚೆಲ್ಲುವಂತೆ ಮಾಡಿದ್ದರೂ ಆಶೆ ಕೈಗೂಡಲಿಲ್ಲ!