ಸದ್ದಿಲ್ಲದ ಶಾಂತಿ ಎಲ್ಲೆಲ್ಲಿಯೂ ಹಬ್ಬಿತ್ತು. ಹುಣ್ಣಿಮೆಯ ತಣ್ಗದಿರನ ತುಂಬು ಬಿಂಬವು ಬಿತ್ತರದ ಬಾಂದಳದಲ್ಲಿ ಬೆಳಗಿ ತೇಲುತ್ತ ಮೋಡಗಳ ತೆರೆಮರೆಯಲ್ಲಿ ಮರೆಯಾಗಿ ಮರಳಿ ಮೈದೋರಿ, ತನ್ನ ತುದಿಯರಿಯದ ಚಂಚಲ ಲೀಲೆಯಲ್ಲಿ ತೊಡಗಿತ್ತು. ಮನೋಹರವಾದ ತಿಂಗಳ ಬೆಳಕು ಗಂಗೆ ಯಮುನೆಯರ ಸಂಗಮದೊಡನೆ ತಾನೂ ಸಂಗಮಿಸಿ ತೆರೆತರೆಗೂ ಹಬ್ಬಿ, ತನ್ನ ಸೊಬಗಿನ ವಯ್ಯಾರಕ್ಕೆ ತಾನೆ ಹಿಗ್ಗಿ, ಹೆಮ್ಮೆಯಿಂದ ನಲಿಯುತ್ತಿತ್ತು. ಪ್ರಯಾಗ ಕ್ಷೇತ್ರದ ವನಗಳು ಕೌಮುದಿಯ ಕಡಲಿನಲ್ಲಿ ಮುಳುಗಿ ಮಲಗಿದ್ದುವು. ತಂಬೆಲರು ಮೆಲ್ಲಮೆಲ್ಲನೆ ತಳಿರು ಹೂಗಳನ್ನು ಮುದ್ದಿಸಿ ಅಲ್ಲಲ್ಲಿ ಸುಳಿಸುಳಿದು ತನ್ನಿನಿಯಳನ್ನು ಅರಸುವ ವಿರಹಿಯಂತೆ ತೊಳಲುತ್ತಿತ್ತು.

ಗಂಗೆ ಯಮುನೆಯರ ಸಂಗಮಸ್ಥಳದ ಬಳಿ, ಮರಳಿನಲ್ಲಿ ಮಲಗಿದ್ದ ಒಂದು ದೊಡ್ಡ ಬಂಡೆಯ ಮೇಲೆ ಬ್ರಹ್ಮಚಾರಿ ಚೈತನ್ಯನು ಪದ್ಮಾಸನ ಹಾಕಿ ಕುಳಿತುಕೊಂಡು, ತಿಳಿಯಾಳದಾಗಸದ ವೈಭವ ವೈಚಿತ್ರ್ಯ ಸೌಂದರ್ಯಗಳನ್ನು ದಿಟ್ಟಿಸುತ್ತಿದ್ದನು. ಆಗತಾನೆ ಧ್ಯಾನವನ್ನು ಪೂರೈಸಿದ್ದ ಆತನ ಮನಸ್ಸು ಹೃದಯ ಎರಡೂ ಹೊರಗಡೆ ಹರಡಿದ್ದ ಶಾಂತಿ ಸೌಂದರ್ಯಗಳನ್ನು ಇಮ್ಮಡಿಯಾಗಿ ಪಡೆದಿದ್ದುವು. ಗಗನದಲ್ಲಿ ಗಣನೆಯಿಲ್ಲದೆ ಮಿಣುಕುತ್ತಿದ್ದ ಚುಕ್ಕಿಗಳನ್ನೂ, ಮೋಹದ ಮುದ್ದೆಯಂತೆ ರಂಜಿಸುತ್ತಿದ್ದ ತಿಂಗಳನ್ನೂ, ಚಂದ್ರಿಕೆಯಲ್ಲಿ ಕೆನೆಯ ತುಂಡುಗಳಂತೆ ತೇಲುತ್ತಿದ್ದ ಮುಗಿಲಿನ ಗುಂಪನ್ನೂ, ಬಳಸಿದ್ದ ಬನಗಳ ಮಾಲೆಯನ್ನೂ ಗಂಗೆ ಯಮುನೆಯರಿಬ್ಬರೂ ಒಬ್ಬರನೊಬ್ಬರು ಆಲಿಂಗಿಸಿ ಪ್ರವಹಿಸುತ್ತಿದ್ದ ಗಂಭೀರ ಗಮನವನ್ನೂ ನೋಡಿ ನೋಡಿ, ಜಗದೊಡೆಯನ ದೇಹದ ಪೆಂಪು ಸೂಚಿಸುವ ಆತನ ಆತ್ಮದ ಭವ್ಯ ವೈಭವವನನು ನೆನೆದು ಮೈಮರೆಯುತ್ತಿದ್ದನು.

ಕುಳಿತಿದ್ದ ಹಾಗೆಯೆ ಆತನು ಅಂತರ್ಮುಖಿಯಾಗಿ, ಜೀವಮಾನದಲ್ಲಿ ತಾನು ಅಡರಿ ಬಂದ ಮೆಟ್ಟಲುಗಳನ್ನು ಹಿಂತಿರುಗಿ ನೋಡತೊಡಗಿದನು. ಅನೇಕಾನೇಕ ಚಿತ್ರಗಳು ಚಿತ್ತಭಿತ್ತಿಯಲ್ಲಿ ಹೊಳೆದಳಿದುವು. ಕೆಲವು ಸ್ಪಷ್ಟವಾಗಿ ತೋರಿದುವು; ಮತ್ತೆ ಕೆಲವು ಮಬ್ಬು ಮಬ್ಬಾಗಿ ಕಂಡು ಬಂದವು; ಇನ್ನು ಕೆಲವು ಎಲ್ಲಿಯೋ ಎಂದೋ ನೋಡಿದ ಬಹುದೂರದ ಕನಸುಗಳಂತೆ ಮುಂದೆ ಸುಳಿದವು. ಎರಡು ವರುಷಗಳಾಚೆ ತಾನು ಮನೆಯನ್ನು ಬಿಟ್ಟು, ಗುರುವನ್ನು ಹುಡುಕಿಕೊಂಡು ಊರಿಂದೂರಿಗೆ ಅಲೆದು, ಪ್ರಯಾಗಕ್ಷೇತ್ರಕ್ಕೆ ಬಂದು, ಸ್ವಾಮಿ ಪ್ರೇಮಾನಂದರ ಶಿಷ್ಯನಾಗಿ ಸನ್ಯಾಸ ಸ್ವೀಕಾರ ಮಾಡಿದ್ದರವರೆಗೂ ಸ್ಮರಿಸಿಕೊಂಡನು.

ಮುಂದೆ ಇನ್ನಾವ ಚಿತ್ರಗಳು ಮನಸ್ಸಿನಲ್ಲಿ ಸುಳಿಯುತ್ತಿದ್ದುವೋ ಏನೋ? ಅಷ್ಟರಲ್ಲಿ ಯಾರೋ ಹಿಂದಿನಿಂದ ಕೇಳಿದರು: “ಏನು, ಚೈತನ್ಯ,_ ಬಹಳ ಹೊತ್ತಿನಿಂದ ಕುಳಿತುಬಿಟ್ಟಿದ್ದೀಯೆ?”

ಚೈತನ್ಯನು ದನಿಯಿಂದ ಗುರುತು ಹಿಡಿದು ಮೆಲ್ಲನೆ ಹಿಂತಿರುಗಿ ನೋಡಿ “ಬಾ ಮುಕುಂದಾ!” ಎಂದು ಮುಗುಳುನಗೆ ನಕ್ಕನು.

“ಧ್ಯಾನಮಾಡುತ್ತಿದ್ದಿಯೋ ಏನೋ?”

“ಸೃಷ್ಟಿ ಸೌಂದಯ್ವನ್ನು ನೋಡುತ್ತಿದ್ದೆ. ಎಷ್ಟು ಶಾಂತವಾಗಿದೆ ಈ ರಾತ್ರಿ?” “ಹೌದು ಅತ್ಯಂತ ರಮಣೀಯವಾಗಿದೆ. ಆದರೆ ಸನ್ಯಾಸಿಯಲ್ಲಿ ಕವಿ ಇರುವನೆಂದು ನನಗೆ ಭಾವನೆ ಇರಲಿಲ್ಲ!”

“ಇದೇನು ಹೀಗೆನ್ನುವೆ? ಸನ್ಯಾಸಿ ಎಂದರೇನು ಕಗ್ಗಲ್ಲೆ?”

“ಯೋಗವೆಂದರೆ ಚಿತ್ತವೃತ್ತಿ ನಿರೋಧ ಎಂದು ನೀನು ಹೇಳಿದೆ.”

“ಚಿತ್ತವೃತ್ತಿ ನಿರೋಧವೆಂದರೆ ಅಭಾವ ಎಂದು ತಿಳಿದೆಯಾ? ಯೋಗವೆಂದರೆ ಆತ್ಮಹತ್ಯವಲ್ಲ, ಮುಕುಂದ! ಮೊನ್ನೆ ಗುರುಗಳು ‘ಸಮತ್ವಂ ಯೋಗ ಉಚ್ಯತೇ’ ಎಂಬುದರ ಮೇಲೆ ಮಾಡಿದ ವ್ಯಾಖ್ಯಾನವನ್ನು ಕೇಳಲಿಲ್ಲವೆ ನೀನು? ನಿಂತುಕೊಂಡಿರುವೆ ಏಕೆ? ಬಾ, ಕುಳಿತುಕೋ.”

ಮುಕುಂದನು ಬಂದು ಹತ್ತಿರ ಕುಳಿತುಕೊಂಡು ಚೈತನ್ಯನನ್ನೆ ಎವೆಯಿಕ್ಕದೆ ನೋಡತೊಡಗಿದನು. ಸನ್ಯಾಸಿಯ ಮುಖ ಯಾವುದೊ ಒಂದು ಅಲೋಕಜ್ಯೋತಿಯಿಂದ ಕಂಗೊಳಿಸುತ್ತಿತ್ತು. ಕಣ್ಣುಗಳು ಅನಂತವನ್ನು ಭೇದಿಸುವಂತೆ ಮಿಂಚುತ್ತಿದ್ದುವು. ಗುಲಾಬಿ ಬಣ್ಣದ ಕಾವಿಯನ್ನುಟ್ಟಿದ್ದ ಆತನ ಗಂಭೀರಾಕಾರವು ಇಹಲೋಕದ್ದಲ್ಲದ ಸೌಂದರ್ಯದಿಂದ ದಿವ್ಯ ಪುರುಷನ ನೆನಪನ್ನು ತರುತ್ತಿತ್ತು. ಮುಕುಂದನ ಎದೆ ಹಾರತೊಡಗಿ ಕಣ್ಣುಗಳಿಂದ ಒಂದೆರಡು ಬಿಂದುಗಳು ಸೂಸಿದವು. ಆದರೆ ಚೈತನ್ಯನು ಕಾಣದಂತೆ ಮುಖವನ್ನು ತಿರುಗಿಸಿಕೊಂಡು ಅವುಗಳನ್ನು ವಸ್ತ್ರದ ಸೆರಗಿನಿಂದ ಒರಸಿಬಿಟ್ಟನು.

ಸ್ವಾಮಿ ಪ್ರೇಮಾನಂದರ ಆಶ್ರಮಕ್ಕೆ ಎಷ್ಟೋ ಜನ ಭಕ್ತರು ಶಾಂತಿಲಾಭಕ್ಕೆ ಬಂದು ಹೋಗುವ ವಾಡಿಕೆ. ಮುಕುಂದನೂ ಅವರಲ್ಲಿ ಒಬ್ಬನು. ಚೈತನ್ಯನು ತಾನು ಸನ್ಯಾಸ ಸ್ವೀಕಾರ ಮಾಡಿದ ಒಂದೂವರೆ ವರ್ಷದ ಮೇಲೆ ಮುಕುಂದವನ್ನು ಭಕ್ತರ ಗುಂಪಿನಲ್ಲಿ ಕಂಡನು. ಅಂದಿನಿಂದ ಅವರಿಬ್ಬರ ಗೆಳೆತನವೂ ಬೆಳೆಯಿತು. ಆತನು ಎಷ್ಟೋಬಾರಿ ಚೈತನ್ಯನೊಡನೆ ತತ್ತ್ವಶಾಸ್ತ್ರದ ಗಹನ ವಿಚಾರಗಳನ್ನು ಕುರಿತು ಚರ್ಚಿಸಿ ತಿಳಿದುಕೊಂಡಿದ್ದನು. ಆತನೊಡನೆ ಅನೇಕ ಸಾರಿ ಹೊಳೆಯ ಬಳಿ ಸಂಚಾರ ಮಾಡಿ ವಿನೋದವಾಗಿ ಕಾಲಕಳೆದಿದ್ದನು. ಆದ್ದರಿಂದಲೆ ಅವರಿಬ್ಬರಿಗೂ ತುಂಬಾ ಸಲಿಗೆ. ಚೈತನ್ಯನು ಅಸಾಧಾರಣ ವ್ಯಕ್ತಿ ಎಂದು ಮುಕುಂದನಿಗೆ ಗೊತ್ತು. ಅದರಿಂದ ಅವನಿಗೆ ಆತನಲ್ಲಿ ಬಹಳ ಗೌರವ. ಚೈತನ್ಯನಿಗೂ ಮುಕುಂದನನ್ನು ಕಂಡಂದಿನಿಂದ ಆತನಲ್ಲಿ ಏನೋ ಅನಿರ್ವಚನೀಯವಾದ ಪ್ರೇಮ. ಆತನ ಸರಳತೆ ಹೃದಯವನ್ನು ಸೂರೆಗೊಂಡುಬಿಟ್ಟಿತ್ತು. ಪ್ರೇಮಾನಂದರಿಗೂ ಮುಕುಂದನಲ್ಲಿ ಬಹಳ ವಿಶ್ವಾಸ: ಅವನು ಬಹಳ ಕಾಲವನ್ನೆಲ್ಲ ಆಶ್ರಮದಲ್ಲಿಯೆ ಕಳೆಯುತ್ತಿದ್ದನು.

ಚೈತನ್ಯನು ಮುಕುಂದನ ಊರು ತಂದೆತಾಯಿಗಳ ವಿಚಾರ ಕೇಳಿದಾಗಲೆಲ್ಲಾ “ಇಂದು ಬೇಡ; ಎಂದಾದರೂ ಒಂದು ದಿವಸ ತಿಳಿಸುತ್ತೇನೆ” ಎನ್ನುವರು. ಆಮೇಲೆ ಚೈತನ್ಯನು ಆ ಪ್ರಸ್ತಾಪವನ್ನೆ ಎತ್ತುತ್ತಿರಲಿಲ್ಲ. ಏಕೆಂದರೆ, ಆ ಪ್ರಶ್ನೆಯನ್ನು ಕೇಳಿದಾಗಲೆಲ್ಲ ಮುಕುಂದನು ಮಗುವಿನಂತೆ ಅತ್ತು ಬಿಡುತ್ತಿದ್ದನು.

ಪ್ರತಿದಿನವೂ ಸಾಯಂಕಾಲ ಗುರುದೇವನ ಉಪದೇಶವಾದ ಮೇಲೆ ಭಕ್ತ ಮಂಡಲಿಯೆಲ್ಲ ಸಾಧುವರ್ಯನ ಅಡಿದಾವರೆಗಳಿಗೆ ಅಡ್ಡಬಿದ್ದು ಆಶ್ರಮದಿಂದ ಹೊರಟುಹೋಗುವರು. ಮುಕುಂದನ ಮಾತ್ರ ಚೈತನ್ಯನೊಡೆನೆ ಹೊಳೆಯ ತಡಿಯ ಬನಗಳಲ್ಲಿ ಬಹಳ ಹೊತ್ತು ಅಡ್ಡಾಡಿ ಕತ್ತಲಾದ ಮೇಲೆ ಮನೆಗೆ ಹೋಗುವನು. ಈ ದಿನ ಚೈತನ್ಯನು ತಿರುಗಾಡಲು ಹೊರಡುವಾಗ ಮುಕುಂದನನ್ನು ಕರೆದನು. ಆದರೆ ಅವನು ತಾನು ಹಿಂದಿನಿಂದ ಬರುವುದಾಗಿಯೂ, ಗುರುದೇವನೊಡನೆ ಕೆಲವು ರಹಸ್ಯ ಸಂಗತಿಗಳನ್ನು ತಿಳಿದುಕೊಳ್ಳಬೇಕಾಗಿದೆ ಎಂದೂ ಹೇಳಿದನು. ಚೈತನ್ಯನು ಒಬ್ಬನೆ ಹೊಳೆಯ ಬಳಿ ಅಲ್ಲಲ್ಲಿ ಅಡ್ಡಾಡಿ. ಕಡೆಗೆ ಬಂಡೆಯ ಮೇಲೆ ಬಂದು ಕುಳಿತಿದ್ದನು.

ಆ ಪ್ರಶಾಂತವಾದ ರಾತ್ರಿಯಲ್ಲಿ ಬೆಳ್ದಿಂಗಳನ್ನು ಹೊದೆದುಕೊಂಡು ಸುತ್ತಲೂ ಹಬ್ಬಿದ್ದ ವಿಶಾಲವಾದ ಬಿಳಿಯ ಮಳಲುರಾಶಿಯ ನಡುವೆ, ಚೈತನ್ಯನೂ ಮುಕುಂದನೂ ಸ್ವಪ್ನವ್ಯಕ್ತಿಗಳಂತೆ ಬಹಳ ಹೊತ್ತು ಮೌನವಾಗಿ ಕುಳಿತರು. ಬಳಿಯಲ್ಲಿ ಮಂಜುಳ ರವದಿಂದ ನದಿ ನಿರಂತರವಾಗಿ ಪ್ರವಹಿಸುತ್ತಿತ್ತು; ಮನೋಹರವಾದ ಸಾಂದ್ರಚಂದ್ರಿಕೆಯಲ್ಲಿ ಗಿರಿವನ ಪ್ರದೇಶಗಳೆಲ್ಲ ಜೊನ್ನಿನ ಕಡಲಿನಲ್ಲಿ ಮುಳುಗಿ ಮೈಮರೆಯುತ್ತಿದ್ದುವು; ಗಗನಾಂಗಣದಲ್ಲಿ ತಾರೆಗಳು ಮಿಣುಕುತ್ತಿದ್ದವು; ಚಂದರನು ಅವಾಙ್ಮನಾತೀತವಾದ ತನ್ನ ಅನಂತ ಪ್ರಯಾಣದಲ್ಲಿ ಮಗ್ನನಾಗಿದ್ದನು.

“ಇದೇನು ಇಷ್ಟು ಮೌನವಾಗಿರುವೆ, ಮುಕುಂದಾ?”

“ಇಂದು ನನ್ನ ಹೃದಯದ ಅಂತರಾಳದಲ್ಲಿ ಇದುವರೆಗೂ ಮಲಗಿ ನಿದ್ರಿಸಿದ್ಧ ಯಾವುದೋ ಒಂದು ಅಪ್ರಮೇಯವಾದ ಯಾತನೆ ಪ್ರಬುದ್ಧವಾಗಿದೆ!”

“ಏನು! ಇಂಥಾ ಶಾಂತ ಸೌಂದರ್ಯದಲ್ಲಿದ್ದರೂ ಯಾತನೆ?”

“ಹೌದು, ಚೈತನ್ಯ, ನನ್ನ ಮನಸ್ಸಿನಲ್ಲಿ ಶಾಂತಿಯಿಲ್ಲ. ತತ್ತ್ವದಿಂದ ಶಾಂತಿ ಲಭಿಸುತ್ತದೆ ಎಂದು ತಿಳಿದಿದ್ದೆ. ಆದರೆ ಅದು ಹುಸಿಯಾಯ್ತು. ಶಾಂತಿ ನನ್ನಿಂದ ದಿನದಿನವೂ ದೂರವಾಗುತ್ತಿದೆ.”

“ಹಾಗೆನ್ನಬೇಡ. ಪರಮಾತ್ಮನಲ್ಲಿ ಭಕ್ತಿಯನ್ನಿಡು. ಶಾಂತಿ ದೊರಕುತ್ತದೆ.”

“ಭಕ್ತಿಯನ್ನಿಟ್ಟುರುವೆ. ಆದರೂ ದೊರಕಲಿಲ್ಲ! ನನಗೇನೂ ಕೆಲವು ಸಂದೇಹಗಳಿವೆ. ನೀನು ಪರಿಹರಿಸಬಲ್ಲೆಯಾ?”

“ಒಂದಲ್ಲದೆ ಎರಡಿಲ್ಲ ಎಂದು ಅನೇಕಸಾರಿ ನೀನು ನನಗೆ ಹೇಳಿದೆಯಲ್ಲಾ ಅದರ ಗೂಡಾರ್ಥವೇನು? ವಿವಿಧ ವಸ್ತುಗಳಿಂದ ತುಂಬಿದ ಈ ಜಗತ್ತು ಒಂದೇ ಎಂದು ಹೇಳುವುದು ಹೇಗೆ? ಹಾಗೆ ಹೇಳಿದರೆ ನಮ್ಮ ಬುಡಕ್ಕೆ ನಾವು ಕೊಡಲಿ ಹಾಕಿದಂತೆ ಆಗುವುದಿಲ್ಲವೆ?”

“ಮುಕುಂದ, ವಸ್ತುಗಳು ಬೇರೆಬೇರೆಯಾಗಿ ಕಂಡರೂ ಅಂತರ್ಯಾಮಿಯಾಗಿರುವ ಅಂತರಾತ್ಮವು ಒಂದೇ. ಗುಪ್ತಗಾಮಿಯಾದ ಚೈತನ್ಯವಾಹಿನಿ ಎಲ್ಲೆಲ್ಲಿಯೂ ತುಂಬಿ ಮರೆಯಾಗಿ ಹರಿಯುತ್ತದೆ. ಇದನ್ನೇ ‘ಏಕಮೇವಾದ್ವಿತೀಯಂ’ ಎನ್ನುವುದು.”

“ಹಾಗಾದರೆ ಸೃಷ್ಟಿಯ ಉದ್ದೇಶವೇನು?”

“ಭಗವಂತನ ಲೀಲೆಗೆ ಉದ್ದೇಶವಿಲ್ಲ. ಇದ್ದರೂ ಅಸಂವೇದ್ಯ.”

“ಲೀಲೆ ಎಂದ ಮೇಲೆ ನಾವು ವಿರೋಧವಾಗಿ ನಡೆಯುವುದು ತಪ್ಪಲ್ಲವೆ?”

“ಹೌದು.”

“ಹಾಗಾದರೆ ‘ಏಕಮೇವಾದ್ವಿತೀಯಂ’ ಎನ್ನುವುದು ಲೀಲೆಯಿಂದ ಹೊರಗೆ ನಿಂತು ನೋಡುವವನಿಗೇ ಹೊರತು ನಮಗಲ್ಲ”

“ನಿಶ್ಚಯ.”

“ಸನ್ಯಾಸ ಎನ್ನುವುದು ಲೀಲೆಗೆ ವಿರೋಧವಾದುದಲ್ಲವೆ?”

“ಇಲ್ಲ, ಅದೊಂದು ಕಠಿನತರವಾದ ಲೀಲೆ?”

“ಹಾಗಾದರೆ ಅದೊಂದು ಬರಿಯ ಸಾಹಸವೆಂದು ಅರ್ಥವೆ?”

ಚೈತನ್ಯನು ಮಾತನಾಡಲಿಲ್ಲ. ವಿಚಾರಮಗ್ನನಾದನು. ಸ್ವಲ್ಪ ಹೊತ್ತಿನ ಮೇಲೆ “ಮುಕುಂದ, ಸೃಷ್ಟಿಯ ಸಮಸ್ಯೆ ಬರಿಯ ಮಾತಿಗೆ ಸಿಲುಕತಕ್ಕದಲ್ಲ. ಅನುಭವವೇದ್ಯವಾದದ್ದು. ಹೀಗೆಂದು ಗುರುದೇವನ ಉಪದೇಶ” ಎಂದನು.

“ಚೈತನ್ಯ, ಈ ಹುಣ್ಣಿಮೆಯ ರಾತ್ರಿಯ ಸುರಸೌಂದರ್ಯ ನಿಜವಾಗಿಯೂ ನಿನ್ನ ಎದೆಯನ್ನು ಮುಟ್ಟುವುದೆ?”

“ಹೌದು, ಸೌಂದರ್ಯ ಪರಮಾತ್ಮನ ಒಮದು ಅಂಶವಲ್ಲವೆ?”

“ಸಂನ್ಯಾಸಿಯ ಹೃದಯ ಸೌಂದರ್ಯಕ್ಕೆ ಸೆರೆಯಾಗಬಹುದೆ?”

“ಆನಂದಕ್ಕೆ ಸೆರೆಯಾಗಬಹುದಾದರೆ ಸೌಂದರ್ಯಕ್ಕೆ ಸೆರೆಯಾಗಬಾರದೇಕೆ? ಆದರೆ ಸನ್ಯಾಸಿಯ ಭಾವಕ್ಕೆ ಸೌಂದರ್ಯ ಪರಬ್ರಹ್ಮನ ಅಂಶವೇ ಹೊರತು ಅಹಂಕಾರಪೋಷಕವಾದ ಭೋಗವಲ್ಲ! ಆತನು ಸೊಬಗಿಗೆ ಶರಣಾಗತನಾಗನು; ಅದರಲ್ಲಿ ತಲ್ಲೀನನಾಗನು!”

“ಹಾಗಾದರೆ ನೀನು ನಿನ್ನ ಮೇಲೆಯೇ ಕೂತಿಲ್ಲವಷ್ಟೆ?”

ಚೈತನ್ಯನು ಕೆಳಗೆ ನೋಡಿ “ಇಲ್ಲ, ನಾನು ಅಚೇತನವಾದ ಶಿಲೆಯಲ್ಲ!” ಎಂದು ಮುಗುಳುನಗೆ ನಕ್ಕನು.

“ನೀನು ಅನೇಕಸಾರಿ ನನ್ನ ಊರು ತಂದೆತಾಯಿಗಳ ವಿಚಾರ ಕೇಳಿದೆ. ನಾನು ಇದುವರೆಗೂ ಹೇಳಲಿಲ್ಲ.”

“ಏನೊ, ನಿನಗೆ ಮನಸ್ಸು ಬರಲಿಲ್ಲ.”

“ನಿನ್ನ ಊರು ತಂದೆತಾಯಿಗಳ ವಿಚಾರವಾಗಿ ನನ್ನೊಡನೆ ಹೇಳಬಾರದೇಕೆ?”

“ಸನ್ಯಾಸಿ ಪೂರ್ವಾಶ್ರಮದ ವಿಚಾರವನ್ನು ಯಾರೊಡನೆಯೂ ಹೇಳಬಾರದೆಂದು ಕಟ್ಟಪ್ಪಣೆ.”

“ಆಗಲಿ; ಇಂದು ನಾನು ನಿನಗೆಲ್ಲ ಹೇಳಿಬಿಡಲೆ?”

“ನನಗೇನೂ ಕುತೂಹಲವಿದೆ.”

“ಆದರೆ ನನಗೊಂದು ಭಯ.”

“ಯಾಕೆ?”

“ನೀನೆಲ್ಲಿ ನೆನ್ನನ್ನು ತಿರಸ್ಕರಿಸುವಿಯೋ ಎಂದು.”

“ಸನ್ಯಾಸಿ ಯಾರನ್ನೂ ತಿರಸ್ಕರಿಸನು. ಅದರಲ್ಲಿಯೂ ಪ್ರಿಯಸ್ನೇಹಿತನನ್ನು ತಿರಸ್ಕರಿಸುವುದು ಹೇಗೆ?”

“ಸನ್ಯಾಸಿ ಯಾರನ್ನೂ ತಿರಸ್ಕರಿಸನೇ?”

“ಇಲ್ಲ.”

“ನಿಜವಾಗಿಯೂ?”

“ನಿಜವಾಗಿಯೂ ಇಲ್ಲ.”

“ಕಾಮಿನಿಯನ್ನು?”

ಚೈತನ್ಯನು ಸ್ವಲ್ಪಹೊತ್ತು ಸುಮ್ಮನಿದ್ದು “ನಾನು ಆ ಅವಸ್ಥೆಯನ್ನು ದಾಟಿದ್ದೇನೆ?”

“ನಾನಿಂದು ಗುರುದೇವನ ಬಳಿಗೆ ಹೋಗಿದ್ದೆ: ಇಲ್ಲಿಗೆ ಬರುವುದಕ್ಕಿಂತ ಮುಂಚೆ.”

“ಏತಕ್ಕಾಗಿ?”

“ಏನೋ ಒಂದು ಭಿಕ್ಷೆ ಬೇಡಲು.”

“ಸನ್ಯಾಸಿಯ ಹತ್ತಿರ ಭಿಕ್ಷೆ ಬೇಡುವುದೆ?”

“ಹೌದು, ಬೇಡಿದೆ.”

“ನೀಡಿದರೇನು?”

“ನೀಡಿದರು: ಅವರು ಮಹಾತ್ಮರು!”

“ಯಾವಭಿಕ್ಷೆ? ನಿನಗೂ ಸನ್ಯಾಸವನ್ನು ಕೊಡಬೇಕೆಂದೆ?”

“ಆದರೆ ನೀನು ನೀಡದ ಹೊರತು ಅವರ ಭಿಕ್ಷೆ ಸಂಪೂರ್ಣವಾಗಲಾರದು! ಸಾರ್ಥಕವಾಗಲಾರದು!”

“ಅವರು ನೀಡಿದಮೇಲೆ ನಾನೂ ನೀಡಿದಂತೆಯೇ?”

“ನೀನೂ ನೀಡಿದೆಯಾ?”

“ಹೌದು! ಯಾವ ಭಿಕ್ಷೆ?”

ಆ ದಿನ ಸಾಯಂಕಾಲ ಉಪದೇಶ ಮುಗಿದನಂತರ ಭಕ್ತಮಂಡಲಿಯೆಲ್ಲ ಗುರುವಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆದು ತೆರಲಿದ ಮೇಲೆ ಆಶ್ರಮದಲ್ಲಿ ಗುರುಗಳು ಒಬ್ಬರೆ ಕುಳಿತ್ತಿದ್ದರು. ಮುಕುಂದನು ಬಂದು ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದನು.

ಗುರುದೇವನು ಆಶೀರ್ವದಿಸಿ ಕೇಳಿದರು: “ಕ್ಷಮವೇ, ಮುಕುಂದಾ?”

ಮುಕುಂದನೆಂದನು “ಹೌದು, ಗುರುದೇವ, ತಮ್ಮ ಕೃಪೆಯಿಂದ.”

“ನಿನ್ನ ಧ್ಯಾನ ಜಪ ಸಾಂಗವಾಗಿ ನಡೆಯುತ್ತಿವೆಯೇ?”

“ಇಲ್ಲ, ಗುರುದೇವ; ಹೃದಯದಲ್ಲಿ ಏನೋ ಅಶಾಂತಿ!”

“ಕಾರಣ?”

“ಅದಕ್ಕಾಗಿ ನನ್ನ ತಪ್ಪನ್ನು ಮನ್ನಿಸಬೇಕೆಂದು ಕೇಳಿಕೊಳ್ಳಲು ಬಂದಿದ್ದೇನೆ.”

“ತಪ್ಪಾದರೂ ಏನು?”

“ನಾನು ಪಾಪಿ.”

“ಏನು ಪಾಪ ನಿನ್ನದು?”

“ನಾನು ಕಪಟವೇಷಧಾರಿ.”

“ನೀನೊಬ್ಬನೇ ಅಲ್ಲ; ಸಮಸ್ತ ಜಗತ್ತೂ ಕಪಟವೇಷಧಾರಿ! ಭಗವಂತನನ್ನೇ ಕಪಟನಾಟಕಸೂತ್ರಧಾರಿ ಎನ್ನುವುದಿಲ್ಲವೇ?”

“ಹಾಗಲ್ಲ, ಗುರುದೇವ; ನನ್ನ ಕಪಟವೇಷದ ರೀತಿಯೇ ಬೇರೆ.”

“ಅದೇನು ಹೇಳಬಾರದೆ?”

ಮುಕುಂದನು ಬಿಕ್ಕಿಬಿಕ್ಕಿ ಅಳತೊಡಗಿದನು. ಗುರು ಅವನನ್ನು ನಾನಾ ಮಾತುಗಳಿಂದ ಸಂತೈಸಲೆಳಸಿದನು.

ಆದರೆ ಮುಕುಂದನು “ಗುರುದೇವ, ಬರಿಯ ಮಾತುಗಳಿಂದ ನನ್ನ ದುಃಖ ಶಮನವಾಗುವುದಿಲ್ಲ” ಎಂದನು.

“ಹಾಗಾದರೆ ನಿನಗೇನು ಬೇಕು?”

“ಒಂದು ಭಿಕ್ಷೆ ಬೇಡಲು ಬಂದಿದ್ದೇನೆ.”

“ಯಾವ ಭಿಕ್ಷೆ?”

“ಎಲ್ಲ ಭಂಗವಾಗುವುದೋ ಎಂದು ಹೆದರಿಕೆ! ನಾನು ಹತಾಶನಾದರೆ ನನಗೆ ಮರಣವೇ ಗತಿ.”

“ಹೆದರಬೇಡ, ಧೈರ್ಯವಾಗಿಯೆ ಹೇಳು.?”

“ಗುರುದೇವ, ಆರುತಿಂಗಳ ಹಿಂದೆ ನಾನು ಇಲ್ಲಿಗೆ ಬಂದೆ. ನಿಮ್ಮ ಚರಣ ಸನ್ನಿಧಿಯಲ್ಲಿ ಶಾಂತಿಯನ್ನು ಪಡೆಯಲೆಳೆಸಿದೆ. ಎಷ್ಟೋ ಪ್ರಯತ್ನ ಮಾಡಿದೆ. ಆದರೆ ಸಾಧ್ಯವಾಗಲಿಲ್ಲ. ನನ್ನ ಹೃದಯ ಬಲಶಾಲಿಯಲ್ಲ. ಬಲು ಹೇಡಿ. ಇಂದು ತಮ್ಮೆದುರು ನಿಜವನ್ನು ಹೇಳಿ, ನನ್ನ ಜೀವಮಾನದ ಕಡೆಯ ತೀರ್ಪನ್ನು ಪಡೆಯಬೇಕೆಂದು ಬಂದಿದ್ದೇನೆ. ನೀವು ಅನುಗ್ರಹಿಸಿದರೆ ನಾನು ಉಳಿಯುತ್ತೇನೆ; ಇಲ್ಲದಿದ್ದರೆ ಅಳಿಯುತ್ತೇನೆ.”

ಗುರುದೇವನು ಪ್ರಸನ್ನ ದೃಷ್ಟಿಯಿಂದ ಮುಕುಂದನನ್ನೆ ನೋಡುತ್ತಾ ಇದ್ದನು. ಮುಕುಂದನು ಇದ್ದಕಿದ್ದಹಾಗೆ ತನ್ನ ರುಮಾಲನ್ನು ಕಳಚಿ ಗುರುವಿಗೆ ಸಾಷ್ಟಾಂಗ ನಮಸ್ಕಾರ ಮಾಡಿದನು. ನೀಳವಾದ ಕೇಶಪಾಶ, ಬೈತಲೆ! ಮುಕುಂದನು ಸ್ತ್ರೀಯಂತೆ ತೋರಿದನು.

ಗುರುದೇವನು ಚಕಿತನಾಗದೆ ಶಾಂತಚಿತ್ತದಿಂದ “ಇದೇನು ಮುಕುಂದ?”

“ನಾನು ಮುಕುಂದನಲ್ಲ? ರಮೇಶನ ಇಂದಿರೆ.”

“ಚೈತನ್ಯ ನಿನಗೇನಾಗಬೇಕು?”

“ಚೈತನ್ಯನಲ್ಲ ರಮೇಶ ನನಗೆ ಪತಿ! ಗುರುದೇವ, ಆತನು ನನ್ನನ್ನು ಮದುವೆಯಾಗಿ ಸ್ವಲ್ಪ ದಿವಸಗಳಲ್ಲಿಯೆ ಮಾಯವಾದನು. ಅತ್ತೆ ಮಾವಂದಿರು ಶೋಕದಿಂದ ತೀರಿಹೋದರು. ಇದು ರಮೇಶನ ತಪ್ಪೆಂದು ನಾನು ಎಣಿಸಲಾರೆ. ಆತನು ವಿವಾಹಕ್ಕೆ ಒಪ್ಪಿರಲಿಲ್ಲ. ವಿರಕ್ತಿ ಮಾರ್ಗವೆ ಆತನ ಧ್ಯೇಯವಾಗಿತ್ತು. ಆದರೆ ಆತನ ತಂದೆತಾಯಿಗಳು ಆತನು ಎಲ್ಲಿ ಸನ್ಯಾಸಿಯಾಗಿಬಿಡುವನೋ ಎಂಬ ಹೆದರಿಕೆಯಿಂದ ಆತನಿಗೆ ಬಲಾತ್ಕಾರವಾಗಿ ಮದುವೆ ಮಾಡಿದರು. ಆತನು ಹೇಳದೇ ಕೇಳದೆ ಬಂದುಬಿಟ್ಟನು. ನನ್ನ ಬಾಳು ಮರುಭೂಮಿಯಾಯಿತು. ಎಲ್ಲರೂ ನನ್ನನ್ನು ಕಡೆಗಣ್ಣಿನಿಂದ ನೋಡತೊಡಗಿದರು. ನಾನು ರಮೇಶನ ನೆಲೆಯನ್ನು ತಿಳಿಯಬೇಕೆಂದು ಈ ವೇಷವನ್ನು ಧರಿಸಿ ಅಲೆದು ಕಡೆಗೆ ತಮ್ಮ ಸನ್ನಿಧಿಯಲ್ಲಿ ನನ್ನ ಇಷ್ಟದೇವತೆಯನ್ನು ಕಂಡೆ. ಇಷ್ಟು ದಿನವೂ ಆತನೊಡನೆ ಇದ್ದು ಆತನ ಸ್ನೇಹವನ್ನು ಸಂಪಾದಿಸಿದ್ದೇನೆ. ಆದರೆ ಆತನು ಈಗ ಗುರುದೇವನ ಚೈತನ್ಯ. ಮುಕುಂದನ ಗೆಳೆಯ. ಇಂದಿರೆಯ ಇನಿಯನಾಗಿಲ್ಲ. ಅನಾಥಳಾದ ನಾನು, ಪತಿಭಿಕ್ಷೆಯನ್ನು ಬೇಡುತ್ತೇನೆ. ತಾವು ಸರ್ವಜ್ಞರು; ಮಹಾತ್ಮರು; ನನಗೆ ಜೀವದಾನ ಮಾಡಬೇಕು.”

“ಮಗಳೆ ಚೈತನ್ಯನಿಗೆ ಈ ಸಂಗತಿ ಗೊತ್ತೆ?”

“ಗೊತ್ತಿಲ್ಲ, ಗುರುದೇವ,”

“ಸನ್ಯಾಸಿಯಾದವನು ಪುನಃ ಸಂಸಾರಿಯಾಗುವುದು ಮಹಾ ಪಾಪ! ಚೈತನ್ಯನಿಗೆ ಅನಿಷ್ಟ.”

“ಕೈಹಿಡಿದವಳನ್ನು ದುಃಖಸಾಗರಕ್ಕೆ ಕಲ್ಲುಕಟ್ಟಿ ಎಸೆಯುವುದಕ್ಕಿಂತ ಮಹಾಪಾಪವೆ? ಅದಕ್ಕಿಂತ ಹೆಚ್ಚಿನ ಅನಿಷ್ಟವುಂಟಾಗುವುದೆ?”

“ಅಲ್ಲದೆ ಚೈತನ್ಯನು ತೀವ್ರ ವೈರಾಗಿ.”

“ರಮೇಶನ ಹೃದಯವು ಇನ್ನೂ ಕಗ್ಗಲ್ಲಾಗಿಲ್ಲ. ಗುರುದೇವ, ನಾನು ಬಲ್ಲೆ. ತಮ್ಮ ಆಜ್ಞೆಯಾದರೆ ಸಾಕು. ತಮ್ಮ ಆಶೀರ್ವಾದ ಬಲವೊಂದು ಇದ್ದರೆ ಎಂಥಾ ಪಾಪವಾಗಲಿ ಅನಿಷ್ಟವಾಗಲಿ ಎಲ್ಲ ಭಸ್ಮವಾಗುವುದು. ಭಕಲ್ತಿಯಿಂದ ಸೆರೆಗೊಡ್ಡಿ ಬೇಡುವೆನು.”

“ಮಗಳೆ, ನನ್ನ ಅನುಜ್ಞೆಯಿದೆ. ನನ್ನ ಆಶೀರ್ವಾದವಿದೆ. ನಾಣು ಕಗ್ಗಲ್ಲು ಎಂದು ಎಣಿಸಬೇಡ. ಹೋಗು, ನಿನ್ನ ಸಾಹಸದಿಂದ ನೀನು ಗೆಲ್ಲು. ನಿನ್ನ ಜೀವಮಾನದ ಮಧುರ ಸ್ವಪ್ನವನ್ನು ನಾನೇಕೆ ಒಡೆದುಹಾಕಲಿ? ಅದು ತನಗೆ ತಾನೆ ಒಡೆದಮೇಲೆಯೆ ನೀವಿಬ್ಬರೂ ನನ್ನೆಡೆಗೆ ಬನ್ನಿ. ಸ್ವಪ್ನವಾದರೂ ಮಾಧುರ್ಯ ಎಂದಿಗೂ ಮಾಧುರ್ಯವೆ. ಎಂದು ನೀವು ಸ್ವಪ್ನದಿಂದ ಎಚ್ಚತ್ತಾಗ ಮಾಧುರ್ಯವೂ ಬಿಸಿಲ್ಗುದುರೆಯಾಗಿ ಕಹಿಯಾಗುವುದೋ ಅಂದು ಇಲ್ಲಿಗೆ ಬನ್ನಿ. ಆಗ ನಿಮ್ಮ ಹೃದಯಮಂದಿರಗಳಲ್ಲಿ ಶಾಂತಿಯನ್ನು ನೆಲೆಗೊಳಿಸುವುದೂ ಸುಲಭ. ನಿನ್ನ ಸಾಹಸಕ್ಕೆ ನನ್ನ ಸಮ್ಮತವಿದೆ; ಹೋಗು, ಮಗಳೆ.”

ಇಂದಿರೆ ರುಮಾಲನ್ನು ಸುತ್ತಿಕೊಂಡು ಗುರುದೇವನ ಪಾದಧೂಳಿಯನ್ನು ತನ್ನ ತಿಲಕದಲ್ಲಿಟ್ಟು ಹೊರಕ್ಕೆ ಹೋದಳು. ಗುರುದೇವನು ಜಗತ್ತಿನ ಮಾಯೆಯನ್ನು ನೆನೆದು ಮಂದಸ್ಮಿತನಾದನು.

“ಆದರೆ ನೀನೂ ನೀಡಿದ ಹೊರತು ಅವರ ಭಿಕ್ಷೆ ಸಂಪೂರ್ಣವಾಗಲಾರದು. ಸಾರ್ಥಕವಾಗಲಾರದು!”

“ಅವರು ನೀಡಿದ ಮೇಲೆ ನಾನು ನೀಡಿದಂತೆಯೇ!”

“ನೀನೂ ನೀಡಿದೆಯಾ?”

“ಹೌದು, ಯಾವ ಭಿಕ್ಷೆ?”

“ಪ್ರತಿಭಿಕ್ಷೆ! ರಮೇಶನ ಭಿಕ್ಷೆ! ನಿನ್ನ ಭಿಕ್ಷೆ!”

ಹೀಗೆಂದು ಹೇಳಿದ ಮುಕುಂದನು ಇಂದಿರೆಯಾಗಿ ಚೈತನ್ಯನ ಎದುರಿನಲ್ಲಿ ನಿಂತಳು. ಚೈತನ್ಯನು ಬೆಚ್ಚಿಬಿದ್ದು ಎದ್ದು ನಿಂತು, ತನ್ನೆದುರಿನಲ್ಲಿ ಬಿತ್ತರದ ಮರುಳುರಾಶಿಗೆ ಎದುರಾಗಿ  ಮನೋಹರವಾದ ಕೌಮುದಿಯ ಕಾಂತಿಯಲ್ಲಿ ನಿಂತಿದ್ದ ವ್ಯಕ್ತಿಯನ್ನು ಎವೆಯಿಕ್ಕದೆ ನೋಡಿದನು. ನೋಡುತ್ತ ನೋಡುತ್ತ ಮುಕುಂದನು ಮನಸ್ಸಿನ ದಿಗಂತದಲ್ಲಿ ದೂರದೂರ ಸರಿದು ಅನಂತದಲ್ಲಿ ಐಕ್ಯವಾದನು. ಆದರೆ ಮುಕುಂದನಿಗೆ ಬದಲಾಗಿ ಮೊದಮೊದಲು ದರ್ಶನ ಚಿತ್ರದಂತೆ ಮಬ್ಬುಮಬ್ಬಾಗಿ, ಬರಬರುತ್ತಾ ತಿಳಿಯಾಗಿ, ಕಟ್ಟಕಡೆಗೆ ಸ್ಪಷ್ಟವಾಗಿ ಇಂದಿರೆ ಸಮೀಪಕ್ಕೆ ಬಂದು ನಿಂತಳು. ಆ ಚಂದ್ರಕಾಂತಿಯಲ್ಲಿ, ಆ ರಾತ್ರಿಯ ಮಹಾ ಶಾಂತಿಯಲ್ಲಿ, ಗಂಗೆ ಯಮುನೆಯರ ಆ ದಿವ್ಯ ಸಂಗಮಸ್ಥಳದಲ್ಲಿ, ಆ ವಿಸಾಲವಾದ ಶ್ವೇತಸೈಕತ ರಾಶಿಯಲ್ಲಿ ಅನಂತವು ಸಾಂತವನ್ನೂ ಅವ್ಯಕ್ತವು ವ್ಯಕ್ತವನ್ನೂ ದಿಟ್ಟಿಸುವ ಹಾಗೆ ಚೈತನ್ಯನು ಇಂದಿರೆಯನ್ನು ಎವೆಯಿಕ್ಕದೆ ನೋಡಿದರು. ಕಾಲವು ಅವರನ್ನೇ ನೊಡುತ್ತಾ ತನ್ನ ಗಮನವನ್ನು ಮರೆತುಬಿಟ್ಟಿತು. ನಕ್ಷತ್ರಗಳು ಅವರನ್ನೇ ನೋಡಿದುವು. ಹರಿಯುವ ನದಿಗಳೆರಡೂ ನಿಂತು ನೋಡಿದುವು. ಚಂದ್ರನೂ ನಿಂತನು. ಸಮಸ್ತ ವಿಶ್ವವೂ ಮುಂದೇನಾಗುವುದೋ ಎಂದು ಕಾತರಗೊಂಡು ನಿಂತುಬಿಟ್ಟಿತು.

ಸ್ವಲ್ಪ ಹೊತ್ತಾದ ಮೇಲೆ ಇಮದಿರೆ ಕರೆದಳು: “ರಮೇಶ!”

“ಮುಕುಂದ, ನಾನು ರಮೇಶನಲ್ಲ; ಚೈತನ್ಯ!”

“ರಮೇಶ, ನಾನೂ ಮುಕುಂದನಲ್ಲ; ಇದಿರೆ! ಭಿಕ್ಷೆ ಬೇಡಲು ಬಂದಿದ್ದೇನೆ. ಭಿಕ್ಷೆ ನೀಡಲು ಮಾತು ಕೊಟ್ಟಿದ್ದೀಯೆ!”

“ಭಿಕ್ಷೆ ನೀಡಲು ಎದ್ದು ನಿಂತಿದ್ದೇನೆ! ಮುಕುಂದನು ಭಿಕ್ಷೆ ಬೇಡಲಿ!”

“ರಮೇಶ ನೀನು ನಿಜವಾಗಿಯೂ ನನ್ನನ್ನು ಪ್ರೀತಿಸುವೆಯಾ?”

“ಹೌದು, ಮುಕುಂದನು ಚೈತನ್ಯನ ಪ್ರಾಣಸ್ನೇಹಿತ.”

“ರಮೇಶ ನಿನಗಾಗಿ ತೊಳಲಿ ತೊಳಲಿ ಬಳಲಿದ್ದೇನೆ. ನನ್ನವರು ನಿನ್ನನ್ನು ಬಲಾತ್ಕಾರದಿಂದ ಕರೆದುಕೊಂಡು ಹೋಗಲು ಬಂದಾಗ ಅವರನ್ನು ತಡೆದೆ!”

“ಚೈತನ್ಯನ ನಿರ್ಜೀವ ದೇಹವನ್ನು ಸ್ಮಶಾನವಾಗಿ ಎಳೆದೊಯ್ಯುತ್ತಿದ್ದರು! ಇರಲಿ, ಆ ಸಹಾಯ ಮಾಡಿದ್ದಕ್ಕಾಗಿ ಮುಕುಂದನಿಗೆ ಚೈತನ್ಯನ ಅಭಿನಂದನ!”

“ಸಮಸ್ತ ಪ್ರಪಂಚವೂ ಐಕ್ಯಾಪೇಕ್ಷಿಯಾಗಿರಲು ರಮೇಶನು ಮಾತ್ರ ಕೃಪಣನಂತೆ ಅನೈಕ್ಯಕ್ಕೆ ಎಳಸಬಾರದು. ಗಂಗೆ ಯಮುನೆಯರ ಸಂಗಮ ಸ್ಥಳವು ರಮೇಶ ಇಂದಿರೆಯರ ಸಂಗಮಸ್ಥಳವಾಗಲಿ!”

“ಸಿದ್ದನಾಗಿದ್ದೇನೆ, ನನಗೆ ಮರಣ ಭೀತಿಯಿಲ್ಲ. ಚೈತನ್ಯನು, ಮುಕುಂದನು ಇಚ್ಛೆಪಟ್ಟರೆ, ಅವನೊಡನೆ ನದಿಗೆ ಹಾರಲು ಹಿಂಜರಿಯನು.”

“ರಮೇಶ, ಇದೇನು ವಿಪರೀತ? ನದಿಗೆ ಹಾರುವುದು ನನ್ನ ಭಾವವಲ್ಲ.”

“ಹಾಗಾದರೆ ಮತ್ತೇನು? ಚೈತನ್ಯನು ಇದುವರೆಗೂ ಮುಕುಂದನನ್ನು ಬೇರೆ ಎಂದು ತಿಳಿದಿರಲಿಲ್ಲ. ಇನ್ನು ಮುಂದೆಯೆ ಹಾಗೆ ತಿಳಿಯುವುದಿಲ್ಲ.”

“ನಾನು ನಿನ್ನ ಕೈಹಿಡಿದ ಹೆಂಡತಿ!”

“ನೀನು ನನ್ನ ಜೀವನ ಗೆಳೆಯ!”

“ಇಂದಿರೆಯನ್ನು ನೀನು ಪ್ರೀತಿಸಿರಲಿಲ್ಲವೆ?”

“ಇಲ್ಲ ಮುಕುಂದನನ್ನು ಮಾತ್ರ ಪ್ರೀತಿಸುತ್ತಿದ್ದೆ!”

“ರಮೇಶ, ಗುರುವಿನ ಅಪ್ಪಣೆಯನ್ನೂ ಆಶೀರ್ವಾದವನ್ನೂ ಪಡೆದುಕೊಂಡು ಬಂದಿದ್ದೇನೆ.”

“ಏನು? ಗುರುದೇವನೂ ಒಪ್ಪಿದನೇ!”

“ಹೌದು; ಆತನು ಮಹಾತ್ಮನು. ನಿನು ಒಪ್ಪದಿದ್ದರೆ ನನಗೆ ಸಂಗಮಸ್ಥಳವೇ ಗತಿ.”

“ಆಮೇಲೆ ನನಗೂ ಅದೇ ಗತಿ!”

“ನೋಡು, ರಮೇಶ, ತಿಂಗಳ ಬೆಳಕು ಎಷ್ಟು ರಮಣೀಯವಾಗಿದೆ!”

“ಹೌದು, ಮುಕುಂದ, ಅತ್ಯಂತ ಶಾಂತವಾಗಿದೆ.”

“ನಾನು ಅಬಲೆ!”

“ಮುಕುಂದನು ಹಾಗೆನ್ನುವುದು ಉಚಿತವಲ್ಲ.”

“ರಮೇಶ, ಹತಭಾಗಿನಿಯಾದ ನನ್ನನ್ನು ಕಾಪಾಡು. ಮರುಭೂಮಿಯಾದ ನನ್ನನ್ನು ಉದ್ಯಾನವನವನ್ನಾಗಿ ಮಾಡು. ನನ್ನನ್ನು ತಿರಸ್ಕರಿಸಬೇಡ! ನಾನು ನಿನ್ನ ಸಹಧರ್ಮಿಣಿ! ನಿನ್ನ ವೀರತ್ವ ನನಗಿಲ್ಲ. ನಾನು ಅಬಲೆ! ಕಾಪಾಡು!ಕಾಪಾಡು!”

ಹೀಗೆಂದು ಇಂದಿರೆ ಚೈತನ್ಯನಿಗೆ ಅಡ್ಡಬಿದ್ದು, ಕಾಲುಹಿಡಿದುಕೊಂಡು ಕಣ್ಣೀರು ಸುರಿಸಿ ಹೊರಳಾಡಿ ಗೋಳಿಟ್ಟಳು. ಚೈತನ್ಯನು ಎದೆಯಮೇಲೆ ಕೈಕಟ್ಟಿಕೊಂಡು ವಿಶಾಲವಾದ ಗಗನದೆಡೆ ಶೂನ್ಯದೃಷ್ಟಿಯಿಂದ ನೋಡುತ್ತಾ ಆಲೋಚನಾಮಗ್ನನಾದನು. ಅವನ ಮನದಿಂದ ಇಂದಿರೆಯ ಹೊರತು ಸಮಸ್ತ ವಿಶ್ವವೂ ಮರೆಯಾಯಿತು. ಚಂದ್ರ, ತಾರೆ, ಗಗನ, ನದಿ, ವನ ಎಲ್ಲವೂ ಕನಸಿನಂತೆ ಕಂಪಿಸಿ ಅಳಿದುಹೋದವು.ಅವನ ಭಾಗಕ್ಕೆ ಎಲ್ಲವೂ ಕಗ್ಗತ್ತಲಾಯಿತು. ತನ್ನಷ್ಟಕ್ಕೆ ತಾನೆ “ಗುರುದೇವ! ಗುರುದೇವ!” ಎಂದು ಗಟ್ಟಿಯಾಗಿ ಕೂಗಿಕೊಂಡನು.

“ಏನು, ಚೈತನ್ಯ?” ಎಂದು ಯಾರೋ ಹೇಳಿದ ಹಾಗಾಯಿತು.

ಹಿಂತಿರುಗಿ ನೋಡಿದನು. ಪ್ರೇಮಾನಂದಸ್ವಾಮಿ ಮರಳುದಿಣ್ಣೆಯ ಮೇಲೆ ಮೂರ್ತಿಮತ್ತಾದ ಮಹಿಮೆಯಂತೆ ಆಜಾನುಬಾಹುವಾಗಿ ನಿಂತಿದ್ದನು. “ಏನು, ಚೈತನ್ಯ?” ಎಂದು ಬಳಿಗೆ ಬಂದು ಪದತಳದಲ್ಲಿ ನಿರಾವಲಂಬವಾಗಿ ಬಳ್ಳಿಯಂತೆ ತೋರಿದ ಇಂದಿರೆಯನ್ನೂ, ಯಾವ ಬಿರುಗಾಳಿಗೂ ಕಂಪಿಸಿದೆ ನಿಂತ ಮಹೀರುಹದಂತೆ ಕೈಕಟ್ಟಿಕೊಂಡುನಿಂತಿದ್ದ ಚೈತನ್ಯವನ್ನೂ ನೋಡಿದನು!

ಚೈತನ್ಯನು ಗುರುವಿಗೆ ಕೈಮುಗಿದು ಸ್ವಲ್ಪ ಶೋಕಮಿಶ್ರವಾದ ಧ್ವನಿಯೆಂದ “ಗುರುದೇವ” ಎಂದನು.

ಗುರುದೇವನು “ಚೈತನ್ಯ, ಇದೇ ಸೃಷ್ಟಿಯ ಸಮಸ್ಯೆ: ಒಬ್ಬನು ಮುಕ್ತ, ಒಬ್ಬನು ಮುಮುಕ್ಷು, ಒಬ್ಬನು ಬುದ್ಧ! ಒಂದು ಅವ್ಯಕ್ತ, ಒಂದು ವ್ಯಕ್ತ, ಒಂದು ಮಾಯೆ! ಇದೇ ಭಗವಂತನ ಲೀಲೆ.”

“ಗುರುದೇವ, ಮುಂದೇನು ಮಾಡಲಿ?”

“ನೀನು ಸ್ವತಂತ್ರನು. ನನ್ನ ಅನುಜ್ಞೆಯಿದೆ. ನನ್ನ ಆಶೀರ್ವಾದವಿದೆ. ಏನುಬೇಕಾದರೂ ಮಾಡು! ಏನು ಮಾಡಿದರೂ ನೀನು ಹಾಳಾಗುವುದಿಲ್ಲ; ನೀನು ಒಪ್ಪದಿದ್ದರೆ ಇಂದಿರೆಯ ಜನ್ಮ ಸಾರ್ಥಕವಾಗುವುದಿಲ್ಲ!”

ಹೀಗೆಂದು ಗುರುದೇವನು ಹಿಂದಿರುಗಿ ಹೊರಟುಹೋದನು. ಚೈತನ್ಯನು ಕೆಳಗೆ ಬಿದ್ದಿದ್ದ ಇಂದಿರೆಯನ್ನು ನೋಡಿದನು. ಅವಳನ್ನು ಮೆಲ್ಲಗೆ ಹಿಡಿದೆತ್ತಿ “ಇಂದಿರಾ, ಏಳು? ರಮೇಶ ನಿನ್ನವನು!” ಎಂದನು.

ಗಂಗೆ ಯಮುನೆಯರು ಹರಿಯತೊಡಗಿದರು. ನಿಂತಿದ್ದ ಚಂದ್ರನು ಇಮ್ಮಡಿಯಾದ ಕಾಂತಿಯಿಂದ ಬೆಳಗಿ ಸಂಚರಿಸತೊಡಗಿದನು. ತಾರೆಗಳು ಆನಂದದಿಂದ ಮಿಣುಕಿದವು. ಕೌಮುದಿಯ ಸಾಂದ್ರತೆ ಹೆಚ್ಚಿತು. ಸೃಷ್ಟಿಚಕ್ರ ಎಂದಿನಂತೆ ತಿರುಗತೊಡಗಿತು.

ಇಂದಿರೆ ಕಂಬನಿಗರೆಯುತ್ತಿದ್ದ ರಮೇಶನನ್ನು ಅಪ್ಪಿ ಹೇಳಿಕೊಂಡಳು: “ನೀನೀಗ ನಿಜವಾಗಿಯೂ ಸನ್ಯಾಸಿ!”