ನಾನವನ ಹೆಸರು ಹೇಳೆನು. ಅವನೀಗ ಹೆಸರಿಲ್ಲದವನಾಗಿದ್ದಾನೆ. ಈ ಜಗತ್ತಿನಲ್ಲಿ ಅವನ ಹೆಸರು ಹೇಳುವವರೇ ಇಲ್ಲ. ಹಿಂದಿದ್ದ ತನ್ನ ಉಜ್ಜ್ವಲ ಪುರುಷಕಾರವನ್ನೆಲ್ಲ ಕಳೆದುಕೊಂಡ ಅವನು ಈಗ ಬರಿಯ ಶೂನ್ಯ!

ಎಂಟು ವರ್ಷಗಳ ಹಿಂದೆ ಮಹಾರಾಜಾ ಕಾಲೇಜಿನಲ್ಲಿ ಅವನ ಹೆಸರು ಕೇಳುವವರೇ ಇರಲಿಲ್ಲ. ಅವನ ವಿಷಯವಾಗಿ ಮಾತನಾಡದವರೇ ಇರಲಿಲ್ಲ. ಅವನನ್ನು ಗಗನಕ್ಕೆತ್ತದವರೇ ಇರಲಿಲ್ಲ. ಅವನ ಭವಿಷ್ಯತ್ತು ಇಹಳ ತೇಜೋಮಯವಾಗುವುದೆಂದು ಹಿಗ್ಗದವರೇ ಇರಲಿಲ್ಲ. ದೇಶಕ್ಕೆ ಇವನಿಂದ ಕೀರ್ತಿ ಬರುವುದೆಂದು ನಂಬದವರೇ ಇರಲಿಲ್ಲ. ಇದು ನನ್ನ ಸ್ವಂತ ಅನುಭವ. ಕಣ್ಣಾರೆ ಕಂಡದ್ದು; ಕಿವಿಯಾರ ಕೇಳಿದ್ದು. ಅಂಥಾ ವ್ಯಕ್ತಿ ಈಗ ಹೆಸರಿಲ್ಲದೆ “ಅವನು” ಆಗಿಬಿಟ್ಟಿದ್ದಾನೆ.

ಅವನು ನನ್ನ ಸಹ ಪಾಠಿ, ನನ್ನ ಗೆಳೆಯ. ನನ್ನ ಅಂತರಂಗದ ಗುರುವೂ ಆಗಿದ್ದನು. ಅವನು ಉನ್ನತಾದರ್ಶಗಳೆಂಬ ತನ್ನ ರೆಕ್ಕೆಗಳ ಸಹಾಯದಿಂದ ಅಂತರಿಕ್ಷದಲ್ಲಿಯೆ ಸಂಚರಿಸುತ್ತಿದ್ದನು. ಭುಮಿಯ ಮೇಲೆ ಒಂದು ಅರೆಕ್ಷಣವೂ ಹರಿದಾಡಲೊಲ್ಲನು. ಅವನನ್ನು ಕಂಡರೆ ವಿದ್ಯಾರ್ಥಿಗಳಿಗೆಲ್ಲ ಗೌರವ. ಅವನ ಶೀಲ, ಅಮಲತೆ, ಬುದ್ಧಿಶಕ್ತಿ, ಪ್ರತಿಭೆ, ತೇಜಸ್ಸು ಇವುಗಳನ್ನು ನೋಡಿ ಪ್ರೊಫೆಸರುಗಳು ಕೂಡ ಅವನನ್ನು ಅತ್ಯಾದರದಿಂದ ಕಾಣುತ್ತಿದ್ದರು. ಕಾಲೇಜಿನ ಸಂಘಗಳಲ್ಲಿ ಅವನು ಉಪನ್ಯಾಸ ಮಾಡುವನೆಂದರೆ ಬಹಳ ಮಂದಿ ಸೇರುತ್ತಿದ್ದರು.

ಅವನು ಓದಿದ ಜೀವನಚರಿತ್ರೆಗಳಿಗೆ ಲೆಕ್ಕವೇ ಇಲ್ಲ. ಮಹಾತ್ಮರು, ಋಷಿಗಳು, ಸಾಧುಗಳು, ಕವಿಗಳು, ಶಿಲ್ಪಿಗಳು, ಚಿತ್ರಗಾರರು, ಯೋಧರು ಮೊದಲಾದವರ ಜೀವಮಾನಗಳನ್ನೆಲ್ಲ ಓದಿ ಮನನ ಮಾಡಿದ್ದನು. ಆಂಗ್ಲೇಯ ಕವಿಗಳನ್ನೆಲ್ಲ ಓದಿ ಅವರ ಉನ್ನತಾದರ್ಶಗಳನ್ನೆ ಅನುಸರಿಸುತ್ತಿದ್ದನು. ತನ್ನ ಜೀವಮಾನವನ್ನೆಲ್ಲ ದೇಶಸೇವೆಗಾಗಿ ಧಾರೆ ಎರೆಯುವೆನೆಂದು ಅವನೆ ಹೇಳುತ್ತಿದ್ದುದನ್ನು ಕೇಳಿ ಹಿಗ್ಗುತ್ತಿದ್ದನು. ಬಾರತಮಾತೆಯ ಸೇವೆಗಾಗಿ ಸದಾ ಬ್ರಹ್ಮಚಾರಿಯಾಗಿರುವೆನೆಂದು ಅವನು ಸಿಂಹ ಕಂಠದಿಂದ ನುಡಿಯುತ್ತಿದ್ದುದನ್ನು ಕೇಳಿ ನನಗೆ ರೋಮಾಂಚನವಾಗುತ್ತಿತ್ತು. ಅವನ ಮುಂದೆ ನಮ್ಮ ಪುರುಷಕಾರಗಳ ಮೂಲೆ ಸೇರುತ್ತಿದ್ದುವು. ಅವನದು ಒಂದು ವಿಧವಾದ ನಾಯಕ ವ್ಯಕ್ತಿತ್ವವಾಗಿತ್ತು.

ಕ್ರೈಸ್ತ ಪಾದ್ರಿಗಳನ್ನೂ ಕ್ರಿಸ್ತಮತ ಪ್ರಚಾರಕರನ್ನೂ ಕಂಡರೆ ಮಾತ್ರ ಅವನಿಗೆ ಸ್ವಲ್ಪವೂ ಆಗುತ್ತಿರಲಿಲ್ಲ. ಅವರು ಮೋಸಗಾರರೆಂದು ನಿಂದಿಸುತ್ತಿದ್ದನು. ಇದು ಅವನಲ್ಲಿ ಬೇರೂರಿಬಿಟ್ಟಿದ್ದಿತು. ಹಿಂದೂ ಸಮಾಜವನ್ನು ಸುಧಾರಿಸಬೇಕೆಂದೂ ಅದರ ಕುಂದು ಕೊರತೆ ನ್ಯೂನತೆಗಳನ್ನು ಬೇರು ಸಹಿತ ಕೀಳಬೇಕೆಂದೂ ಕ್ರೈಸ್ತರಾದ ಹಿಂದುಗಳನ್ನು ಶುದ್ಧಿಮಾಡಿ ಹಿಮದಕ್ಕೆ ತೆಗೆದುಕೊಳ್ಳಬೇಕೆಂದೂ ಕ್ರೈಸ್ತ ಪಾದ್ರಿಗಳ ಹಾವಳಿಯನ್ನು ನಿಲ್ಲಿಸಬೇಕೆಂದೂ ಅವನ ಧ್ಯೇಯ.

ಅವನು ಆಗಲೇ ಮಾಸಪತ್ರಿಕೆಗಳಿಗೆ ಅನೇಕ ಲೇಖನಗಳನ್ನು ಬರೆದಿದ್ದನು. ಆ ಲೇಖನಗಳನ್ನು ಓದಿದವರು ಅವುಗಳ ಶೈಲಿ, ಶಬ್ದಸಮುದಾಯಗಳ ಸರಳತೆ, ವಿಷಯಗಳನ್ನು ಹೇಳುವ ರೀತಿ, ಮೊದಲಾದವುಗಳನ್ನು ನೋಡಿ ಬೆರಗಾಗುತ್ತಿದ್ದರು. ಅವನೊಬ್ಬ ಪ್ರತಿಭಾಶಾಲಿಯೆಂದು ಎಲ್ಲರೂ ತಿಳಿದಿದ್ದರು. ಅಂಥ ಮಹನೀಯನ ವ್ಯಕ್ತಿತ್ವ ಶೂನ್ಯವಾದುದೇ ಅತ್ಯಾಶ್ಚರ್ಯ.

ಎಂ.ಎ. ಡಿಗ್ರಿ ತೆಗೆದುಕೊಂಡಮೇಲೆ ಅವನೂ ನಾನೂ ಅಗಲಿದೆವು. ಆದರೇನು? ಅವನ ಲೇಖನಗಳನ್ನು ಮಾಸಪತ್ರಿಕೆಗಳಲ್ಲಿ ಓದಿ ಆನಂದಿಸುತ್ತಿದ್ದೆ. ಆಗಾಗ್ಗೆ ಅವನ ಅಮೂಲ್ಯವಾದ ಕಾಗದಗಳೂ ಬರುತ್ತಿದ್ದುವು. ಹೀಗೆ ಮೂರು ವರ್ಷ ಜಾರಿದುವು. ಆಮೇಲೆ ಅವನ ಪತ್ರಗಳು ಬರುವುದು ವಿರಳವಾಗಿ ಕಡೆಗೆ ನಿಂತೇಹೋದುವು. ಮಾಸಪತ್ರಿಕೆಗಳಲ್ಲಿ ಲೇಖನಗಳು ಬರುವುದೂ ನಿಂತುಹೋಯಿತು. ನಾನು ಯಾರು ಯಾರನ್ನೋ ವಿಚಾರಿಸಿದೆ. ಆದರೆ ಅವನ ಸುದ್ಧಿ ತಿಳಿಯದೆಯೆ ಹೋಯಿತು. ಕ್ರಮೇಣ ಅವನ ನೆನಪೂ ಮನಸ್ಸಿನ ದಿಗಂತದ ಮಬ್ಬಿನಲ್ಲಿ ಮಾಸಿಹೋಯಿತು.

ಕೆಲವು ದಿನಗಳ ಹಿಂದೆ ಗೇರುಸೊಪ್ಪೆ ಜಲಪಾತದ ಸೊಬಗನ್ನು ನೋಡಿಕೊಂಡು, ಆಗುಂಬೆ ಘಾಟಿಯಿಂದ ಅರಬ್ಬೀ ಸಮುದ್ರದಲ್ಲಾಗುವ ಸೂರ್ಯಾಸ್ತದ ವೈಭವವನ್ನು ನೋಡಬೇಕೆಂಬ ಕುತೂಹಲದಿಂದ ಶಿವಮೊಗ್ಗೆಯಲ್ಲಿ ಮೋಟಾರು ಹತ್ತಿ ಹೊರಟಿದ್ದೆ. ರಸ್ತೆಯ ಪಕ್ಕದಲ್ಲಿಯೂ ದೂರದಲ್ಲಿಯೂ ರಮಣಿಯವಾದ ಸಹ್ಯಾದ್ರಿ ಪರ್ವತಗಳು ನನಗೆ ಸುಖಾಗಮನ ಬಯಸುತ್ತಿದ್ದುವು. ಅವುಗಳ ಸೊಬಗನ್ನು ನೋಡಿ ಕಣ್ಣಿಗೆ ಹಬ್ಬವಾಯಿತು. ಹೃದಯ ಆನಂದದಿಂದ ಉಬ್ಬಿತು. ಆನಂದ ಆವೇಶಗಳ ಭರದಲ್ಲಿ “ಸಹ್ಯಾದ್ರಿ” ಎಂಬ ಐನೂರು ಅಥವಾ ಆರುನೂರು ಪಂಕ್ತಿಗಳುಳ್ಳ ಪದ್ಯವನ್ನು ರಚಿಸಬೇಕೆಂದು ಮನಸ್ಸಾಗಿ ಒಂದೆರಡು ಪಂಕ್ತಿಗಳನ್ನೂ ರಚಿಸಿ, ಮೆಲ್ಲಗೆ,

ಸಹ್ಯಾದ್ರಿಗಳ ಸಾಲು ಮೆರೆಯುತಿದೆ ನೋಡು,
ಸ್ವಾತಂತ್ಯ್ರತ್ರ್ಯಲೋಲರಿಗೆ ಇದು ಸೊಗದ ಬೀಡು.
ದುರ್ಗಗಳ ರಚಿಸಿದರು ವೀರವರರಿಲ್ಲ,
ಸ್ವರ್ಗನು ಯೋಗಿಗಳು ಸಾಧಿಸಿದರಲ್ಲಿ!

ಎಂಬುದಾಗಿ ಹಾಡಿಕೊಂಡೆ.

ಮೋಟಾರು ಮಧ್ಯೆ ಒಂದೂರಿನಲ್ಲಿ ನಿಂತಿತು. ಆ ಊರಿನ ಹೆಸರು ನಾನು ಹೇಳೆನು. ಹೆಸರಿಲ್ಲದವನ ಊರಿನ ಹೆಸರು “ಒಂದೂರು” ಎಂದಿರಲಿ! ಅಂತೂ “ಅವನು” ಆ “ಒಂದೂರಿನ” ನಿವಾಸಿ. ಮೋಟಾರು ನಿಂತದ್ದು ಒಂದು ಜವಳಿ ಅಂಗಡಿಯ ಪಕ್ಕದಲ್ಲಿ; ಅಂದರೆ ಒಂದು ಹೋಟಲಿನ ಎದುರಿನಲ್ಲಿ. ನಾನು ಆ ಊರಿಗೆ ಹೊಸಬನಾದ್ದರಿಂದ ಕುತೂಹಲದಿಂದ ಎಲ್ಲವನ್ನೂ ದೃಷ್ಟಿಸಿ ನೋಡುತ್ತಿದ್ದೆ. ಆಗ ಹೋಟಲಿನಲ್ಲಿ ಕಾಫಿ ಕುಡಿಯುತ್ತಿದ್ದ ಒಂದು ವ್ಯಕ್ತಿ ನನ್ನನ್ನೆ ದುರದುರನೆ ನೋಡುತ್ತಿದ್ದುದನ್ನೂ ಕಂಡೆ. ನಾನೂ ಅವನನ್ನು ಚೆನ್ನಾಗಿ ಪರೀಕ್ಷಿಸಿ ನೋಡುತ್ತಿದ್ದೆ. ಆದರೆ ಅಪರಿಚಿತನಾದವನನ್ನು ಎವೆಯಿಕ್ಕದೆ ನೋಡುವುದು ಸರಿಯಲ್ಲವೆಂದು ಬೇರೆ ಕಡೆಗೆ ಮುಖ ತಿರುಗಿಸಿದೆ.

ಪ್ರಯಾಣಿಕರೆಲ್ಲರೂ ಮೋಟಾರಿನಿಂದ ಇಳಿದುಹೋಗಿ ಕಾಫಿ ಕುಡಿಯುವುದೋ ತಿಂಡಿ ತಿನ್ನುವುದೋ, ನಶ್ಯ ಹಾಕಿಕೊಳ್ಳುವುದೋ, ಬೀಡಿ ಸಿಗರೇಟು ತೆಗೆದುಕೊಳ್ಳುವುದೋ ಇವೇ ಮೊದಲಾದ ಅನಿವಾರ್ಯ ಕಾರ್ಯಗಳಲ್ಲಿ ತೊಡಗಿದ್ದರು. ಡ್ರೈವರು ಕೂಡ ಮೋಟಾರಿನಲ್ಲಿರಲಿಲ್ಲ. ನಾನೊಬ್ಬನೇ ಕೂತಿದ್ದೆ.

ಅಷ್ಟರಲ್ಲಿ ಯಾರೋ ನನ್ನನ್ನು ಎಡಗಡೆಯಿಂದ ಕರೆದ ಹಾಗಾಗಿ, ಬಲಗಡೆ ನೋಡುತ್ತಿದ್ದವನು ಆ ಕಡೆಗೆ ತಿರುಗಿದೆ. ಹೋಟೆಲಿನಲ್ಲಿ ಕುಳಿತಿದ್ದ ಅಪರಿಚಿತ ವ್ಯಕ್ತಿ ಮೋಟಾರಿನ ಪಕ್ಕದಲ್ಲಿ ಬಂದು ನಿಂತಿದ್ದನು.

ನಾನು ಅವನ ಕಡೆ ತಿರುಗಲು “ಸ್ವಾಮಿ, ದಯವಿಟ್ಟು ಕ್ಷಮಿಸಬೇಕು; ತಮ್ಮೂರು ಯಾವುದು?” ಎಂದನು.

ನನ್ನ ಊರಿನ ಹೆಸರು ಹೇಳಿದೆ. ಅದನ್ನು ಕೇಳಿ ಅವನು ವಿಸ್ಮಯಪಟ್ಟನಾದರೂ ಉತ್ತರ ಕ್ಷಣದಲ್ಲಿಯೆ ನಗುಮುಖವಾದನು. ಮತ್ತೆ ನೆಲದ ಕಡೆ ನೋಡುತ್ತಾ ಏನನ್ನೊ ಯೋಚಿಸುತ್ತಾ ನಿಂತನು. ಅದುವರೆಗೆ ನಾನು ಅವನನ್ನು ಚೆನ್ನಾಗಿ ದೃಷ್ಟಿಸಿರಲಿಲ್ಲ; ನನ್ನೊಡನೆ ಸಂಭಾಷಿಸುವಾಗ ಹಾಗೆ ಮಾಡಲು ಸಮಯ ಸಿಕ್ಕಿತು.

ವ್ಯಕ್ತಿಯನ್ನು ಮೊದಲು ನೋಡಿದಾಕ್ಷಣ ಜನಿಸಿದ ಭಾವವು ಅಸಹ್ಯ ಎಂದು ತೋರಿತು. ಅವನು ಸಾಧಾರಣ ಮನುಷ್ಯನಷ್ಟೂ ಎತ್ತರವಿದ್ದರೂ ಸೊರಗಿ ಕೃಶವಾಗಿದ್ದನು. ಅವನ ಮುಖದಲ್ಲಿ ತೇಜಸ್ಸು ತಿಲಮಾತ್ರವಾದರೂ ಇರಲಿಲ್ಲ. ಕಣ್ಣುಗಳಲ್ಲಿ ಸುಳಿವೇ ಇಲ್ಲದೆ ಹೆಣದ ಕಣ್ಣುಗಳಂತಾಗಿದ್ದುವು; ಕೆನ್ನೆ ಕಣಿವೆಗಳಾಗಿದ್ದುವು; ಚರ್ಮ ಸುಕ್ಕು ಬಿದ್ದಿತು; ಕಣ್ಣುಗುಡ್ಡೆ ಒಳಹೊಕ್ಕು ಹೋಗಿದ್ದವು. ತುಟಿ ಕರಗಿದ್ದುವು; ಬಾಚಿ ಶುಚಿ ಮಾಡದ ಅವನ ‘ಕ್ರಾಪಿ’ನಿಂದ ದುರ್ವಾಸನೆ ಹೊರಡುತ್ತಿತ್ತು; ಅವನು ಉಟ್ಟಿದ್ದ ಉಡುಪು ಕೊಳಕಾಗಿತ್ತು. ಪಂಚೆಯೊಂದನ್ನು ಅಡ್ಡ ಸುತ್ತಿ ಬನಿಯರ್ನ ಹಾಕಿಕೊಂಡಿದ್ದನು. ಅದೂ ಹರಕಲು!

ನೆಲದ ಕಡೆ ನೋಡುತ್ತಿದ್ದವನು ತಲೆಯೆತ್ತಿ “ನೀವು ಮೈಸೂರಿನಲ್ಲಿ ಮಹಾರಾಜಾ ಕಾಲೇಜಿನಲ್ಲಿ ಓದುತ್ತಿರಲಿಲ್ಲವೆ?” ಎಂದನು.

ನನಗೆ ಸ್ವಲ್ಪ ಆಶ್ಚರ್ಯವಾಯಿತು. “ಹೌದು” ಎಂದೆ.

“ನಿಮಗೆ ನನ್ನ ಪರಿಚಯವುಂಟೆ?”

“ಇಲ್ಲವಲ್ಲ!”

“ಎಲ್ಲಾದರೂ ನೋಡಿದ ನೆನಪುಂಟೆ?”

ನನಗೆ ತುಂಬಾ ಬೇಸರವಾಯಿತು. “ಇವನಿಗೇಕೆ ನನ್ನ ಚರಿತ್ರೆ? ಇವನ ಪರಿಚಯದಿಂದ ನನಗೆ ಆಗಬೇಕಾಗುದೇನು?” ಎಂದು ಮನಸ್ಸಿನಲ್ಲಿಯೆ ಯೋಚಿಸಿ “ಇಲ್ಲ, ಎಲ್ಲಿಯೂ ನೋಡಿದ ನೆನಪಿಲ್ಲ” ಎಂದೆ.

“ಹೋಗಲಿ, ನಿಮ್ಮ ರೂಂಮೇಂಟಿನ ಜ್ಞಾಪಕವಿದೆಯೆ?” ಎಂದನು.

‘ರೂಮೇಂಟ್’ ಅನ್ನುವಾಗ ಅವನ ಬೆಳಕಿಲ್ಲದ ಕಣ್ಣುಗಳು ಥಳಥಳ ಬೆಳಗಿದುವು. ಮಿಂಚಿನಂತೆ ಎಲ್ಲಿಂದಲೊ ಕ್ಷಣಮಾತ್ರ ಅವುಗಳಿಗೆ ಕಾಂತಿ ಬಂದು ತೊಲಗಿತು.

ವ್ಯಕ್ತಿಯ ಮುಖದ ಕಡೆ ನೊಡಿದೆನು. ಎದೆ ನಿಷ್ಕಾರವಾಗಿ ತಳಮಳಿಸಿತು.

“ಓಹೋ! ಅವನ ಜ್ಞಾಪಕವಿಲ್ಲದೆ ಏನು? ಅವನ-ಎಂ.ಧ….’ ಎಂದು ಹೆಸರನ್ನು ಪೂರ್ತಿಮಾಡುವ ಆ ವಿಲಕ್ಷಣ ಪುರುಷನು “ಬೇಡ! ಬೇಡ! ಆ ಹೆಸರನ್ನು ಉಚ್ಚರಿಸಬೇಡಿ?” ಎಂದು ಕೂಗಿಕೊಂಡನು. ಅವನ ಮುಖದ ಮೇಲೆ ತೇಜಸ್ಸು ಕ್ಷಣಮಾತ್ರ ಮಿಂಚಿ ಮಾಯವಾಯಿತು. ನನಗೆ ಯಾವುದೋ ಪೂರ್ವಸ್ಮರಣೆಯಾದಂತಾಗಿ ಬೆಚ್ಚಿದನು. ಆ ವ್ಯಕ್ತಿಯ ಸೊರಗಿದ ಮುಖವನ್ನು ತೀಕ್ಷ್ಣ ದೃಷ್ಟಿಯಿಂದ ನೋಡಿದೆನು. ಸ್ಮೃತಿ ಎಚ್ಚತ್ತಂತಾಗಿ ಮನಸ್ಸಿನಲ್ಲಿಯೆ “ಅವನೇ ಇವನೇ? ಅವನೇ ಇವನು!” ಎಂದಂದುಕೊಂಡೆ. ಮತ್ತೆ ಆ  ರುಚಿಸದ ಆಲೋಚನೆಯನ್ನು ದೂರಮಾಡುವುದಕ್ಕಾಗಿ “ಛೇ ಅವನೆಲ್ಲಿ, ಇವನೆಲ್ಲಿ? ಸಿಂಹವೆಲ್ಲಿ, ಶುನಕವೆಲ್ಲಿ?” ಎಂದು ಆಲೋಚಿಸಿದೆ.

ಸ್ವಲ್ಪ ಹೊತ್ತು ಮೌನವಾಗಿದ್ದ ಅವನು “ಅವನು ಸತ್ತುಹೋದ!” ಅಂದನು.

ನನ್ನ ಎದೆಗೆ ಸಿಡಿಲು ಬಡಿದಂತಾಗಿ “ಯಾರು?” ಎಂದೆ.

“ಅವನೇ ನಿಮ್ಮ ಗೆಳೆಯ.”

“ಯಾವಾಗ? ಎಲ್ಲಿ? ಏನು ಕಾಯಿಲೆಯಾಗಿತ್ತು? ಮೇಲೆ ಬಾರಪ್ಪ ಕೂತುಕೋ.” ಅವನೂ ಮೋಟಾರಿನಲ್ಲಿ ಕುಳಿತನು.

“ಸುಮಾರು ನಾಲ್ಕು ವರ್ಷದ ಹಿಂದೆ; ಇದೇ ಊರಿನಲ್ಲಿ ಖೂನಿ ಮಾಡಿದರು.”

ನಾನು ಉಗ್ವೇಗದ ಪ್ರವಾಹವನ್ನು ಸಹಿಸಲಾರದವನಾಗಿ “ಯಾರಪ್ಪಾ ಖೂನಿ ಮಾಡಿದವರು? ಏಕೆ? ಎಲ್ಲಾ ವಿಶದವಾಗಿ ತಿಳಿಸಪ್ಪಾ” ಎಂದು ಕಾತರನಾಗಿ ನುಡಿದೆ.

ಅವನು ಕಣ್ಣೀರು ಸುರಿಸುತ್ತಾ “ಕೆಲವು ಜನ ಕ್ರೈಸ್ತರು! ಅವರ ಮತಕ್ಕೆ ವಿರೋಧಿಯೆಂದು” ಎಂದನು.

ಗೆಳೆಯನ ಮರಣವಾರ್ತೆಯನ್ನು ಕೇಳಿ ನನಗೂ ಕಣ್ಣಿನಲ್ಲಿ ಬಳಬಳ ನೀರು ಬಂದಿತು! ಸಾಧಾರಣ ಮನುಷ್ಯನಾಗಿದ್ದರೆ ಅಷ್ಟು ದುಃಖವಾಗುತ್ತಿರಲಿಲ್ಲ; ಅಸಾಧಾರಣ ಪ್ರತಿಭಾಶಾಲಿ ಹೋದನಲ್ಲಾ ಎಂದು ಮರುಗಿದೆ.

ಪಕ್ಕದಲ್ಲಿ ಕುತಿದ್ದ ಪರಕೀಯನು ಸ್ವಲ್ಪ ಹೊತ್ತಾದಮೇಲೆ “ಆದರೆ ಅವನು ಇನ್ನೂ ಬದುಕಿದ್ದಾನೆ!” ಎಂದನು.

ನನಗೆ ಹುಚ್ಚು ಹಿಡಿದಂತಾಗಿ ಕೋಪದಿಮದ “ಏನು ನೀನು ಹೇಳುವುದು? ಅರ್ಥವಿಲ್ಲದ ಹರಟೆ!” ಎಂದು ಕೂಗಿದೆ.

ಅದಕ್ಕವನು ಸ್ವಲ್ಪವೂ ಕಾತರನಾಗದೆ ಉದ್ವೇಗಪಡದೆ “ಹೌದು ಜೀವಿಸಿದ್ದಾನೆ. ಸಾವಿನ ಬಾಳು” ಎಂದನು.

ಅವನನ್ನೇ ಕೇಳಿದರೆ ವಿಚಾರವೆಲ್ಲಾ ತಿಳಿಯುವುದೆಂದು ಭಾವಿಸಿ “ಈಗ ಎಲ್ಲಿದ್ದಾನೆ?” ಎಂದೆ

ಅವನು ಮೋಟಾರಿನ ಯಂತ್ರವನ್ನೇ ನಟ್ಟ ದಿಟ್ಟಿನಿಂದ ನೋಡುತ್ತಾ “ಇಲ್ಲಿಯೇ” ಎಂದನು.

“ಎಲ್ಲಿ? ಬಾ ಹೋಗೋಣ. ನಿನಗೇನಾದರೂ ಕೊಡುತ್ತೇನೆ” ಎಂದು ಎದ್ದೆ.

ಅವನು ಕೂತ ಜಾಗದಿಂದ ಕದಲದೆ “ಇಲ್ಲಿಯೇ! ನಿಮ್ಮ ಪಕ್ಕದಲ್ಲಿ!” ಎಂದನು. ನಾನು ತಿರುಗಿ ನೋಡಿದೆ. “ಅವನೇ ನಾನು. ಚಂದೂ, ನಿನಗಿನ್ನೂ ಗುರುತು ಸಿಕ್ಕಲಿಲ್ಲವೇ!” ಎಂದನು.

ನಾನು ಅವನ ಮಾತನ್ನು ನಂಬಲಾರದೆ ಹೋದೆ. ಅವನ ಮುಖದ ಕಡೆ ಪುನಃ ದುರದುರನೆ ನೋಡಿದೆ. ಸಂದೇಹ ನಿವೃತ್ತಿಯಾಗಲಿಲ್ಲ. “ನಿಜವಾಗಿಯೂ ನೀನು ಅವನೇ?” ಎಂದು ಕೇಳಿದೆ.

“ಹೌದು, ಚಂದೂ, ಅವನೇ? ಆ ಮಹಾತ್ಮನೇ! ಆ ಪ್ರತಿಭಾಶಾಲಿಯೇ! ಆ ದೇಶಭಕ್ತನೇ! ಆ ಸಮಾಜೋದ್ಧಾರಕನೇ! ಆ ಸದಾ ಬ್ರಹ್ಮ ಚಾರಿಯೇ!-ನಾನು, ಈ ದುರಾತ್ಮ! ಈ ಬುದ್ಧಿವಿಹೀನ! ಈ ದೇಶದ್ರೋಹಿ! ಈ ಸಮಾಜಘಾತುಕ! ಈ ವಿಷಯಲಂಪಟ!”

ಹೇಳುವಾಗ ಅವನ ದೇಹವೆಲ್ಲಾ ಕಂಪಿಸಿತು. ಕಂಠ ಗದ್ಗದವಾಯಿತು. ನಯನಗಳು ನಕ್ಷತ್ರಗಳಾದುವು. ವದನವು ತೇಜಸ್ವಿಯಾಯಿತು. ವಾಕ್ಯವನ್ನು ಮುಗಿಸಿದ ಮೇಲೆ ಬಿಕ್ಕಿ ಬಿಕ್ಕಿ ಅತ್ತನು. ನನ್ನ ಸಂದೇಹ ನಿವೃತ್ತಿಯಾಯಿತು. ಆದರೆ ಗೆಳೆಯನನ್ನು ಆ ಸ್ಥಿತಿಯಲ್ಲಿ ಕಂಡು ಹೃದಯ ಬೆಂದುಹೋಯಿತು. ಸಿಂಹ ಶುನಕವಾದುದು ಹೇಗೆಂಬುದು ಮಾತ್ರ ಬಗೆಹರಿಯದೆ ಹೋಯಿತು. ಮೊದಲು ಹೇಳಿದ ಮರಣವಾರ್ತೆಯೆ ಸತ್ಯವಾಗಿದ್ದಿದ್ದರೆ ಸಾವಿರಪಾಲು ಮೇಲಾಗುತ್ತಿತ್ತಲ್ಲಾ ಎನ್ನಿಸಿತು!

ಅವನ ಕೈ ಹಿಡಿದುಕೊಂಡು, ಹಿಂದೆ ಕರೆಯುತ್ತಿದ್ದ ಅಡ್ಡ ಹೆಸರಿನಿಂದ ಸಂಬೋಧಿಸಿ “ಯೋರ್ಗಿ, ಇದೇನಿದು? ಮುಖದಲ್ಲಿ ಮೊದಲಿನ ತೇಜಸ್ಸಿಲ್ಲ, ಕಣ್ಣುಗಳಲ್ಲಿ ಆಗಿನ ಕಾಂತಿಯಿಲ್ಲ. ನೋಡಿದರೆ ನಿನ್ನ ಗುರುತೇ ಸಿಕ್ಕುವುದಿಲ್ಲ. ನಿನಗೇಕಪ್ಪಾ ಈ ದುರ್ಗತಿ ಬಂತು?” ಎಂದು ಕೇಳಿದೆ.

ಅದಕ್ಕವನು ಮುಖ ಕೆಳಗೆ ತಗ್ಗಿಸಿ “ನಾನು ಕ್ರೈಸ್ತನಾದೆ” ಎಂದನು.

ನನಗೆ ಅತ್ಯಾಶ್ಚರ್ಯವಾಯಿತು. ಕ್ರೈಸ್ತ ಪಾದ್ರಿಗಳನ್ನೂ ಕ್ರಿಸ್ತಮತ ಪ್ರಚಾರಕರನ್ನೂ ನಿರ್ಮೂಲ ಮಾಡಬೇಕು ಎನ್ನುತ್ತಿದ್ದವನು ಕ್ರೈಸ್ತನಾದುದು ಹೇಗೆಂದು ನನಗೆ ಗೊತ್ತಾಗಲಿಲ್ಲ.

“ಯೋರ್ಗಿ, ಕ್ರೈಸ್ತ ಪಾದ್ರಿಗಳ ಬೋಧನೆಗೆ ನೀನೂ ಮರುಳಾದೆಯಾ? ಅವರ ಬಲೆಯಿಂದ ತಪ್ಪಿಸಿಕೊಳ್ಳುವುದಕ್ಕೆ ನಿನಗೂ ಅಸಾಧ್ಯವಾಯಿತೇ?” ಎಂದೆ.

“ಚಂದೂ, ಬಡಪಾಯಿಗಳ ಬೋಧನೆಗೆ ನಾನು ಮರುಳಾಗುವೆನೇ! ಆ ಹುಲುಮನುಜರಿಂದ ಏನಾದೀತು?” ಎಂದನು.

“ಪಾದ್ರಿಗಳಲ್ಲದಿದ್ದರೆ ಕ್ರಿಸ್ತನಾಗಿರಬೇಕು ನಿನ್ನನ್ನು ಕ್ರೈಸ್ತನನ್ನಾಗಿ ಮಾಡಿದವನು! ಕ್ರಿಸ್ತನ ಆದರ್ಶವೇ ಅತ್ಯುತ್ತಮವಾದುದೆಂದು ಮನಗಂಡೆಯೇನು?” ಎಂದೆನು.

“ಏನೂ ಚಂದೂ, ಹೀಗೆನ್ನುವೆ? ವೇದಾಂತ ಕೇಸರಿಯ ಗರ್ಜನೆಯ ಮುಂದೆ ಕ್ರಿಸ್ತನ ಕೇಕೆಯಂತೆ!” ಎಂದನು. ಅವನ ಹಿಂದಿನ ಗರ್ವ ಸುಳಿಸುಳಿದು ಅಡಗಿತು.

“ಹಾಗಾದರೆ ನೀನು ಕ್ರೈಸ್ತನಾದುದು ಏಕೆ? ಜಾತಿಗೆ ಸೇರಿಸಿದವರು ಯಾರು?”

ಅದಕ್ಕವನು ದೈನ್ಯಭಾವದಿಂದ ಹೇಳಿದನು: “ಚಂದೂ, ನಾನು ಕ್ರೈಸ್ತನಾದ ರಹಸ್ಯ ಬೇರೆ! ನನ್ನನ್ನು ಕ್ರೈಸ್ತಜಾತಿಗೆ ಸೇರಿಸಿದ್ದು ಕ್ರಿಸ್ತನಲ್ಲ, ಪಾದ್ರಿಯ ಮಗಳು!”

ಅವನ ಕತೆಯನ್ನು ಇನ್ನೂ ವಿಶದವಾಗಿ ತಿಳಿಯಬೇಕೆಂದು ಇಚ್ಛಿಸಿ “ಅದೇನು ಸಂಗತಿ, ಯೋಗಿನ್?” ಎಂದೆ.

ಅಷ್ಟರಲ್ಲಿಯೆ ಮೋಟಾರು ಕೂಗಿತು. ಜನಗಳೆಲ್ಲ ಮುಂದೆ ಬಂದರು. ಮೋಟಾರು ಹೊರಡುವ ಸಮಯವಾಯಿತು. ಅವನಿಗೆ ನನ್ನ ವಿಳಾಸ ಕೊಟ್ಟು, ಕಾಗದದಲ್ಲಿ ವಿಷಯವೆಲ್ಲವನ್ನೂ ತಿಳಿಸುವಂತೆ ಹೇಳಿದೆ. ಅವನೂ ಒಪ್ಪಿದ. ಅವನ ವಿಳಾಸವನ್ನೂ ತೆಗೆದುಕೊಂಡೆ.

ಹೊರಡುವಾಗ “ಯೋಗಿನ್, ದೇವರು ನಡೆಸಿದರೆ ಮುಮದೆ ಎಲ್ಲ ಸುಖವಾಗುತ್ತದೆ. ನೀನಿನ್ನೂ ವೇದಾಂತಿ. ವೇದಾಂತಿಗೆ ವಿನಾಶವಿಲ್ಲ! ನಾನು ನಿನಗೆ ಸಹಾಯ ಮಾಡುತ್ತೇನೆ. ‘ಶುದ್ಧಿ’ ಇದೆಯಷ್ಟೆ? ನಮಸ್ಕಾರ” ಎಂದು ಕೈಮುಗಿದೆ.

ಅವನೂ ಕೈಮುಗಿದ. ಮೋಟಾರು ತುತ್ತೂರಿ ಊದುತ್ತಾ ವೇಗವಾಗಿ ಸಾಗಿತು. ಅವನು ನಿರಾಶೆಯ ದೃಷ್ಟಿಯಿಂದ ನನ್ನನ್ನೆ ನೋಡುತ್ತಾ ಬೀದಿಯಲ್ಲಿ ನಿಂತಿದ್ದನು. ತುಸು ಹೊತ್ತಿನಲ್ಲಿಯೆ ಕಣ್ಮರೆಯಾದನು. ಆದರೆ ಮನಸ್ಸಿನಿಂದ ಮಾತ್ರ ಮರೆಯಾಗಲಿಲ್ಲ.

ನನ್ನ ವಿಹಾರಯಾತ್ರೆ ಪೂರೈಸಿ ಊರು ಸೇರಿ ಎರಡು ದಿನಗಳಾಗಿದ್ದುವು. ಆ ದಿನ ಮಧ್ಯಾಹ್ನ ಸುಮಾರು ಎರಡು ಗಂಟೆಯ ಸಮಯ. ಡೈರಿಯಲ್ಲಿ ಬರೆದಿದ್ದ ವಿಹಾರಯಾತ್ರೆಯ ವಿಚಾರ ಕುರಿತು ಓದುತ್ತಿದ್ದೆ. ಅದರಲ್ಲಿ ಹಠಾತ್ತಾಗಿ ಅವನನ್ನು ಕಂಡ ಸಂಗತಿಯನ್ನೂ ಕುರಿತು ಹೀಗೆಂದು ಬರೆದಿದ್ದೆ:-

“ಇಂದು ಚಿರಸ್ಮರಣೀಯವಾದ ದಿನ. ಏಕೆಂದರೆ ಎಂಟು ವರ್ಷಗಳಿಂದ ನೋಡದೆ ಇದ್ದ ಒಬ್ಬ ಸ್ನೇಹಿತನ ದರ್ಶನವಾಯಿತು! ಆದರೆ ಅದು ದುಃಖಮಯವಾದ ದರ್ಶನ! ಗಗನದ ನಿರ್ಮಲವಾದ ಗಾಳಿಯಲ್ಲಿ ಸ್ವತಂತ್ರವಾಗಿ ಯಾರನ್ನೂ ಲೆಕ್ಕಿಸದೆ   ಸಂಚರಿಸುತ್ತಿದ್ದ ಗರುಡನು ಹುಳುವಾಗಿ ದುರ್ವಾಸನೆಯಿಂದ ಕೊಳೆತು ನಾರುವ ರೊಚ್ಚೆಯಲ್ಲಿ ಒದ್ದಾಡುತ್ತಿದ್ದುದನ್ನು ಕಂಡೆ! ಅವನಿಷ್ಟು ಅಧೋಗತಿಗೆ ಇಳಿಯುವನೆಂದು ನಾನು ಕನಸಿನಲ್ಲಿಯೂ ಕಂಡಿರಲಿಲ್ಲ. ಅವನೊಡನೆ ಸ್ವಲ್ಪ ಹೊತ್ತು ಸಂಭಾಷಿಸಿದೆ. ಸಂಭಾಷಣೆಯಿಂದ ಅವನ ವಿಚಿತ್ರ ಕಥೆಯ ಸಂವಿಧಾನ ಮಾತ್ರ ತಿಳಿಯಿತು. ಕತೆಯ ವಿವರವನ್ನು ಕೂಲಂಕುಷವಾಗಿ ಬರೆದು ಕಳುಹಿಸುತ್ತೇನೆಂದು ಭಾಷೆ ಕೊಟ್ಟಿದ್ದಾನೆ. ಯಾರು ಏನಾಗುವರೆಂದು ಹೇಳಬಲ್ಲವರಾರು? ವಿಶ್ವನಿಯಮದ ವೈಚಿತ್ಯ್ರತ್ರ್ಯವನ್ನು ಗ್ರಹಿಸುವರಾರು?”

ಇದನ್ನು ಓದಿದವನು ಡೈರಿಯನ್ನು ಮುಚ್ಚಿ ಅವನ ವಿಷಯವಾಗಿ ಚಿಂತಿಸುತ್ತಾ ಕುಳಿತೆ. ಅವನೊಡನೆ ಕಳೆದ ಕಾಲೇಜಿನ ದಿನಗಳೆಲ್ಲ ಚಿತ್ತಭಿತ್ತಿಯಲ್ಲಿ ಒಂದೊಂದಾಗಿ ಹೊಳೆದು ಅಳಿದುವು. ಆದರೆ ಅವನು ಇಂಥ ನಿಕೃಷ್ಟಾವಸ್ಥೆಗೆ ಇಳಿದ ರಹಸ್ಯವನ್ನು ಮಾತ್ರ ಭೇದಿಸಲಾರದೆ ಹೋದೆ. ಅವನು “ಕ್ರಿಸ್ತನಲ್ಲ, ಪಾದ್ರಿಯ ಮಗಳು!” ಎಂದು ಹೇಳಿದ ಮಾತಿನ ಗರ್ಭದಲ್ಲಿ ಏನೇನು ಅಡಗಿರಬಹುದೋ ಎಂದು ವಿಸ್ಮಿತನಾದೆ. ಹಾಗೆಯೆ ಯೋಚಿಸುತ್ತಾ ಅವನ ವಿಷಯವಾದ ಚಿಂತೆ ಹಗಲುಗನಸಾಗಿ ಪರಿಣಮಿಸಿತು.

ನನ್ನ ತಮ್ಮನ ಬರುವಿಕೆಯಿಂದ ಹಗಲುಗನಸಿನಿಂದ ಎಚ್ಚತ್ತೆ. ಅವನು ಅಂಚೆಯ ಜವಾನನು ಕೊಟ್ಟ ಕೆಲವು ಕಾರ್ಡುಗಳನ್ನೂ ಒಂದು ಲಕೋಟೆಯನ್ನೂ ಮೇಜಿನಮೇಲಿಟ್ಟು ಮಹಡಿಯಿಂದ ಕೆಳಗಿಳಿದು ಹೋದ. ಕಾರ್ಡುಗಳನ್ನೆಲ್ಲಾ ಓದಿದ ತರುವಾಯ ಲಕ್ಕೋಟೆ ಒಡೆದು ನೋಡಿದೆ. ಅದು ಅವನಿಂದಲೆ ಬಂದ ಲಕ್ಕೋಟೆಯಾಗಿತ್ತು. ನನಗೆ ಸಂತೋಷಕ್ಕಿಂತ ಉದ್ವೇಗ ಕಕುಲತೆ ಹೆಚ್ಚಿದುವು. ಕುತೂಹಲಕ್ಕಿಂತಲೂ ವ್ಯಾಕುಲತೆ ಮಿತಿಮೀರಿತು. ಪತ್ರವು ಉದ್ದವಾಗಿಯೆ ಇತ್ತು. ಅದನ್ನು ಓದಲಾರಂಭಿಸಿದೆ. ಅದಕ್ಕೆ ಊರಿನ ಹೆಸರು; ತಾರೀಖೂ ಒಂದೂ ಇರಲಿಲ್ಲ.

“ಪ್ರೀತಿಯ ಗೆಳೆಯ ಚಂದೂಗೆ,

“ಎಲ್ಲಕ್ಕೂ ಮೊದಲು ನಿನ್ನಲ್ಲಿ ನನ್ನದೊಂದು ಬಿನ್ನಹ. ಅದೇನೆಂದರೆ, ನೀನು ಯಾವಾಗಲಾಗಲಿ, ಯಾವ ನೆವದಿಂದಾಗಲಿ ಎಂದೆಂದಿಗೂ ನನ್ನ ಹೆಸರನ್ನು ಬಹಿರಂಗಪಡಿಸಿ ಕೂಡದು! ನನ್ನ ಈ ಆತ್ಮಕಥೆಯನ್ನು ಮಾತ್ರ ನಿನ್ನಿಷ್ಟ ಬಂದಂತೆ ಉಪಯೋಗಿಸಬಹುದು.

“ನನ್ನೀ ಕಥೆಯನ್ನು ವಿಸ್ತಾರವಾಗಿ ಬರೆಯಲು ನನಗೆ ಇಷ್ಟವೂ ಇಲ್ಲ; ತಾಳ್ಮೆಯೂ ಇಲ್ಲ. ಆದ್ದರಿಂದ ಆದಷ್ಟು ಸಂಕ್ಷೇಪ್ತವಾಗಿ ಬರೆದು ಮುಗಿಸುತ್ತೇನೆ. ಕ್ಷಮಿಸು, ಪ್ರಿಯಗೆಳೆಯ! ಅಲ್ಲದೆ ನಿರ್ಭಾಗ್ಯನಾದ ನನ್ನ ಈ ಅಮಂಗಳಕರವಾದ ಚರಿತ್ರೆಯನ್ನು ಉದ್ದವಾಗಿ ಬರೆದು ನಿನ್ನ ಅಮೂಲ್ಯವಾದ ಕಾಲವನ್ನು ಕಳೆಯಬೇಕೆಂದರೆ ನನಗಿನಿತೂ ಸಮಾಧಾನವಿಲ್ಲ.

“ನಾವಿಬ್ಬರೂ ಎಂ.ಎ. ಡಿಗ್ರಿ ಪ್ಯಾಸುಮಾಡಿ ಅಗಲಿದೆವಷ್ಟೆ! ಅಲ್ಲಿಂದ ಮೂರು ವರ್ಷಗಳವರೆಗೆ ಉನ್ನತಾದರ್ಶಜೀವಿಯಾಗಿಯೆ ಇದ್ದೆ. ಅಲ್ಲಲ್ಲಿ ಸಮಾಜ ಸುಧಾರಕ ಸಂಘಗಳನ್ನು ಸ್ಥಾಪಿಸಿದೆ. ಉಪನ್ಯಾಸಗಳನ್ನು ಕೊಟ್ಟೆ. ನೀತಿಯನ್ನೂ ಬೋಧಿಸುತ್ತಿದ್ದೆ. ಉತ್ತಮವಾದ ಲೇಖನಗಳನ್ನೂ ಬರೆಯುತ್ತಿದ್ದೆ. ಅವುಗಳನ್ನು ನೀನೂ ಓದಿರಬಹುದು. ನನ್ನ ಹೆಸರೂ ಪ್ರಖ್ಯಾತವಾಯಿತು. ಕ್ರೈಸ್ತ ಪಾದ್ರಿಗಳ ಹಾವಳಿ ಅಡಗಿಸಲು ಎಷ್ಟೋ ಪ್ರಯತ್ನಪಟ್ಟೆ. ಅವರ ಕಿರುಕುಳವೂ ಕಡಿಮೆಯಾಗುತ್ತಾ ಬಂದಿತು. ಈ ವಿಷಯಗಳನ್ನೆಲ್ಲ ನಿನಗೆ ನನ್ನ ಪತ್ರೆಗಳ ಮೂಲಕ ತಿಳಿಸುತ್ತಿದ್ದೆ.

“ನನ್ನ  ಮನೆಯವರು ಲಗ್ನಮಾಡಿಕೊಳ್ಳೆಂದು ಎಷ್ಟೋ ಹೇಳಿದರು. ನಾನು ಸದಾ ಬ್ರಹ್ಮಚಾರಿಯಾಗುವೆನೆಂಬ ಹೆಮ್ಮೆಯಿಂದ ಒಪ್ಪಲಿಲ್ಲ. ಅತ್ಯಂತ ಸುಂದರಿಯರಾದ ಬಾಲೆಯರನ್ನು ತೋರಿಸಿದರು. ಆದರೂ ನಾನು ಅವರ ಬಲೆಗೆ ಬೀಳಲಿಲ್ಲ. ಭಾರತಮಾತೆಯ ಸೇವೆಗಾಗಿ ಜೀವಮಾನವನ್ನೆಲ್ಲ ಧಾರೆ ಎರೆಯಬೇಕೆಂಬ ನನಗಿದ್ದ ಭಾವ ಇನ್ನೂ ಅಳಿಸಿಹೋಗಿರಲಿಲ್ಲ. ನನ್ನ ಆಚರಣೆ ನಮ್ಮ ಮನೆಯವರಿಗೆ ಸರಿಬೀಳಲಿಲ್ಲ. ನನ್ನನ್ನು ಕೆಲಸಕ್ಕೆ ಸೇರಲು ಹೇಳಿದರು. ಸ್ವಾತಂತ್ಯ್ರಾಭಿಲಾಷಿಯಾಗಿದ್ದ ನಾನು ಅದಕ್ಕೆ ಸಮ್ಮತಿಸಲಿಲ್ಲ. ಲಾಯರಾಗು ಎಂದರು. ವಕೀಲಿ ಕೆಲಸ ಅಧರ್ಮಕಾರ್ಯವೆಂದು ಭಾವಿಸಿದ್ದ ನಾನು ಅದಕ್ಕೂ ಒಪ್ಪಲಿಲ್ಲ. ನನ್ನಿಂದ ಕುಟುಂಬವು ಸಂಪದಭ್ಯುದಯಗಳಿಂದ ತುಂಬಿ ತುಳುಕುವುದೆಂದು ಎಲ್ಲರೂ ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತಿದ್ದರು. ಆದರೆ ಅವರ ಆಸೆ ಆಕಾಶದ ಅಂಬುಜವಾಯಿತು. ಈ ನನ್ನ ನಡತೆಗಳಿಂದ ಕುಟುಂಬದವರ ತಾಳ್ಮೆಯನ್ನು ಶೋಷಿಸಿದೆ. ಕಡೆಗೆ ನನ್ನ ಪಾಲಿಗೆ ಬರಬೇಕಾದ ಆಸ್ತಿಯನ್ನು ಹಂಚಿಕೊಟ್ಟು ನನ್ನನ್ನು ಮನೆಯಿಂದ ಹೊರಡಿಸಿದರು. ಅದಕ್ಕೂ ನಾನು ಅಂಜಲಿಲ್ಲ. ಜಮೀನನ್ನು ಒಕ್ಕಲ ಸಾಗುವಳಿಗೆ ಕೊಟ್ಟು ನಿಶ್ಚಿಂತನಾದೆ.

“ಸ್ವಂತ ಕಷ್ಟಗಳು ನನ್ನನ್ನು ಎಷ್ಟೇ ಪೀಡಿಸಿದರೂ ಲೋಕ ಹಿತಾರ್ಥವಾದ ಕಾರ್ಯಗಳನ್ನು ಮಾತ್ರ ಬಿಡಲಿಲ್ಲ. ಆದುದರಿಂದ ನಾನು ಮನೆಯವರ ಆಗ್ರಹಕ್ಕೆ ಪಾತ್ರನಾದೆನೇ ಹೊರತು ಇತರರ ಪ್ರೀತಿ ಗೌರವಗಳಿಂದ ದೂರ ದೂರವಾಗಲಿಲ್ಲ. ನನಗೆ ಎಲ್ಲೆಲ್ಲಿಯೂ ಸನ್ಮಾನ ದೊರೆಯುತ್ತಿತ್ತು. ನನ್ನನ್ನು ಕಂಡರೆ ಎಲ್ಲರಿಗೂ ಅದರ. ಸಭೆಗಳಿಗೆಲ್ಲ ನಾನೇ ಅಧ್ಯಕ್ಷನಾಗುತ್ತಿದ್ದೆ. ನನ್ನ ಖಾದಿಯ ಉಡುಪೇ ನನಗೆ ಅತಿ ಗೌರವಕಾರಿಯಾಗಿತ್ತು. ಎಷ್ಟೋ ಜನರು ನನಗೆ ಋಷಿ ಪದವಿಯನ್ನೂ ಆಗಲೇ ದಯಪಾಲಿಸಿಬಿಟ್ಟಿದ್ದರು!

“ಹೀಗೆ ನನ್ನ ಸೌಭಾಗ್ಯರವಿ ಮೇಲೇಳುತ್ತಿರುವಾಗಲೆ ಹಠಾತ್ತಾಗಿ ನನ್ನ ಅಧೋಗತಿಗೂ ಪೀಠಿಕೆಯಾಯಿತು. ಅಯ್ಯೋ, ಗೆಳೆಯನೆ, ಆಗ ನನ್ನ ನಿತ್ಯಾನಿತ್ಯ ವಿವೇಕ ವಿಚಾರಜ್ಞಾನ ಎಲ್ಲಿಗೆ ಓಡಿತ್ತೋ ಏನೋ? ನಾನು ಆರಿಸಲು ಹೋದ ಬೆಂಕಿಯೇ ನನ್ನನ್ನು ದಹಿಸುವಂತಾಯಿತು. ನಮ್ಮೂರಿನಲ್ಲಿ ವರ್ಷಕ್ಕೊಂದು ಸಾರಿ ಒಂದು ಜಾತ್ರೆ ನಡೆಯುತ್ತದೆ. ಆಗ ಪಾದ್ರಿಗಳ ಉಪದೇಶಾವಳಿಯಲ್ಲ, ಉಪದೇಶದ ಹಾವಳಿ ಮಿತಿಮೀರುವುದು. ನಾನು ಒಬ್ಬ ಪಾದ್ರಿಗೆ ಎದುರಾಗಿಯೇ ನಿಂತು ಧರ್ಮಶಾಸ್ತ್ರ, ವೇದಾಂತ, ಭಕ್ತಿ ಮುಂತಾದವುಗಳನ್ನು ಕುರಿತು ಉಪದೇಶಮಾಡಲು ಪ್ರಾರಂಭಿಸಿದೆ. ಹೀಗೆ ಮೊದಲನೆಯ ದಿನ ಕಳೆಯಿತು. ಪುನಃ ಎರಡನೆಯ ದಿನವೂ ಬಂತು. ಆ ದಿವಸ ಆ ಪಾದ್ರಿ ಮಾಯೆಯನ್ನು ಕರೆತರುವಂತೆ ತನ್ನ ಜತೆಯಲ್ಲಿ ಹದಿನಾರು ವರ್ಷದ ತನ್ನ ಮಗಳನ್ನು ಕರೆದುಕೊಂಡು ಬಂದಿದ್ದನು. ಉಪದೇಶ ಜಯಿಸದವರನ್ನು ಸೌಂದರ್ಯ ಜಯಿಸುವುದೆಂಬ ತತ್ವವನ್ನು ಪಾದರಿ ಚೆನ್ನಾಗಿ ಅರಿತಿದ್ದ. ಆ ದಿವಸವೂ ಉಪದೇಶಮಾಡಿದೆ. ಆದರೆ ಮನಸ್ಸೆಲ್ಲಾ ಪಾದ್ರಿಯ ಮಗಳ ಮೇಲಿತ್ತು.

“ಪ್ರಿಯ ಗೆಳೆಯ, ಮುಮದೆ ನಡೆದುದನ್ನು ಸಂಕ್ಷೇಪ್ತವಾಗಿ ಹೇಳಿಬಿಡುತ್ತೇನೆ. ಸದಾ ಬ್ರಹ್ಮಚಾರಿಯಾಗಬೇಕು ಎಂದಿದ್ದ ನಾನು ಪಾದ್ರಿಯ ಮಗಳಿಗೆ ಮೋಹಿತನಾದೆ. ನಾನು ಕಂಡೂ ಕಂಡೂ ಬಿದ್ದ ಬಾವಿಯ ಆಳಕ್ಕೆ ಪಾರವಿದೆಯೇ, ಚಂದು? ಅವಳಿಗಾಗಿ ಎಷ್ಟೊ ಹಣವನ್ನೂ ಖರ್ಚುಮಾಡಿದೆ. ಆ ಪಾದ್ರಿ ನಾನು ಕ್ರೈಸ್ತನಾದರೆ ಮಗಳನ್ನು ಕೊಡುವುದಾಗಿ ಹೇಳಿದನು. ನನ್ನನ್ನು ವಂಚಿಸಿ ಧನಸಂಪಾದನೆ ಮಾಡಿದ. ನನ್ನ ಆಸ್ತಿಯೆಲ್ಲವು ಕೆಲ ವರ್ಷಗಳಲ್ಲಿಯೆ ಪರವಶವಾಯಿತು. ಕಂಗೆಟ್ಟು ಕ್ರೈಸ್ತನಾಗಲು ಒಪ್ಪಿದೆ. ನನ್ನ ಹಿಂದಿನ ಪವಿತ್ರನಾಮ ಅಳಿಸಲ್ಪಟ್ಟಿತು. ನಾನು “ರ್ಜಾ ವಿಲಿಯಂ” ಆದೆ. ಗೆಳೆಯ, ಅದನ್ನು ಯೋಚಿಸಿಕೊಂಡರೆ ಈಗಲೂ ನನ್ನ ಮೈ ನಡಗುತ್ತದೆ. ಅಂತೂ ನಾನು ಕ್ರೈಸ್ತನಾದೆ! ಹಿಂದಿನ ನನ್ನ ಪ್ರಶಂದಕರೆಲ್ಲರೂ ದೂರವಾದುದು. ಸ್ನೇಹಿತರೆಲ್ಲರೂ ತಿರಸ್ಕರಿಸಿಬಿಟ್ಟರು. ಹಣ ಕಳೆದುಕೊಂಡೆ: ಗೆಳೆಯರು, ಹಿತಚಿಂತಕರೆಲ್ಲರನ್ನೂ ಕಳೆದುಕೊಂಡೆ; ಪಾತಾಳಕ್ಕೆ ಇಳಿದೆ; ಎಲ್ಲಾ ಪಾದ್ರಿಯ ಮಗಳಿಗಾಗಿ! ಇನ್ನೇನು ದೇವರು ಕೈಬಿಟ್ಟ ಮೇಲೆ ಸೈತಾನನೇ ಗತಿ ಎಂಬಂತೆ ಪಾದ್ರಿಯನ್ನೇ ಆಶ್ರಯಿಸಿದೆ.

“ನನ್ನಲ್ಲಿ ಹಣವಿರುವವರೆಗೂ ಪಾದ್ರಿ ನನ್ನನ್ನು ಬಹಳವಾಗಿ  ಗೌರವಿಸುತ್ತಿದ್ದನು; ಪಾದ್ರಿಯ ಮಗಳೂ ಪ್ರೀತಿಸುತ್ತಿದ್ದಳು. ನಾನು ಬಡವನಾಗಿ ಗತಿಹೀನನಾಗಲು ಅವರೂ ನನ್ನನ್ನು ತಿರಸ್ಕರಿಸತೊಡಗಿದರು. ಗೆಳೆಯ, ಆ ಕಷ್ಟ, ನಿಷ್ಠುರ, ನಿಂದೆ, ತಿರಸ್ಕಾರ ಇವುಗಳನ್ನು ಅನುಭವಿಸಿದ ಪರುಟವಣೆ ನಿನಗೇಕೆ?

“ಕಡೆಗೂ ಪಾದ್ರಿಯ ಮಗಳು ಕಾಸಿಲ್ಲದ ನನ್ನನ್ನು ಮದುವೆಯಾಗುವುದಿಲ್ಲ ಎಂದಳು. ನನ್ನ ಎದೆಯೊಡೆಯಿತು. ಯಾವುದಕ್ಕೋಸುಗ ನಾನು ಸಕಲ ಸೌಭಾಗ್ಯವನ್ನೂ ತ್ಯಜಿಸಿ ಪಾತಾಳಕ್ಕೆ ಧುಮುಕಿದೆನೋ ಆ ವಸ್ತುವೇ ನನಗೆ ಲಭಿಸದೆ ಹೋಯಿತು. (ಲಭಿಸದ್ದುದೂ ಒಳ್ಳೆಯದಾಯಿತು!) ಅವಳು ತನ್ನ ಬಲೆಗೆ ಬಿದ್ದ ಇನ್ನಾವನೋ ನಿರ್ಭಾಗ್ಯನನ್ನು ಕಟ್ಟಿಕೊಂಡು ಓಡಿಹೋದಳು. ನಾನು ನೈರಾಶ್ಯ ಪಶ್ಚಾತ್ತಾಪಗಳ ದಾವಾಗ್ನಿಯಲ್ಲಿ ಬೆಂದು ಬೂದಿಯಾದೆ. ನನಗಿನ್ನು ಶುಭವಾಗುತ್ತದೆ, ನಾನು ಉತ್ತಮ ಸ್ಥಿತಿಗೇರುತ್ತೇನೆ ಎಂಬ ಅಳಿಯಾಸೆಗಳನ್ನೆಲ್ಲಾ ತೊರೆದೆ. ನನಗಿನ್ನು ನಾಶವೇ ಉತ್ತಮಗತಿಯೆಂದು ತಿಳಿದೆ. ಮಾನಮರ್ಯಾದೆಗಳನ್ನೂ ತೊರೆದೆ. ದುಃಖಶಮನಕ್ಕಾಗಿ ಸಾರಾಯಿ ಅಫೀಮು ಇವುಗಳನ್ನು ಸೇವಿಸಲಾರಂಭಿಸಿದೆ. ಕ್ರಮೇಣ ನಾನಿಳಿದಿದ್ದ ಪಾತಾಳವೇ ಘೋರ ನರಕವಾಯಿತು! ನನ್ನ ಜೀವನದ ನಾವೆ ಬಂದರನ್ನು ಸೇರುವುದರೊಳಗೆ ಪಾದ್ರಿಯ ಮಗಳೆಂಬ ಮಾರಿ ಬಂಡೆಗೆ ಬಡಿದು ಪುಡಿಪುಡಿಯಾಯಿತು. ನಾನು ಕಡಲ ಪಾಲಾದೆ. ಇನ್ನೆಂದಿಗೂ ತೀರವನ್ನು ಸೇರಲಾರೆ: ಏಕೆಂದರೆ ನಾನಿರುವುದು ನಡುಗಡಲಿನಲ್ಲಿ! ಅಲ್ಲಿಂದ ತೀರದ ಕ್ಷಣಿಕ ದರ್ಶನವನ್ನು ಕೂಡ ಕನಸಿನಲ್ಲಿಯೂ ಹಾರೈಸೆ. ಹೋಗಲಿ, ಪ್ರಿಯ ಗೆಳೆಯ. ಆದುದೆಲ್ಲಾ ಆಗಿಹೋಯಿತು. ಇನ್ನು ನನಗೆ ದಡವನ್ನು ಸೇರಬೇಕೆಂಬ ಇಚ್ಛೆಯೂ ಇಲ್ಲ. ಒಡೆದ ಹಡಗಿಗೆ ದಡವೇನು ಕಡಲೇನು? ನನಗೀಗ ಹಾಳಿನ ದುಮ್ಮಾನವೆ ಬಾಳಿನ ಸುಮ್ಮಾನಕ್ಕಿಂತಲೂ ಹಿತಕರ! ನನ್ನ ಭಾಗಕ್ಕೆ ಅಳಿವಿನ ಖೇದವೇ ಉಳಿವಿನ ಮೋದಕ್ಕಿಂತಲೂ ಅತಿಶಯ. ತಳವಿಲ್ಲದ ಪಾತಾಳಕ್ಕೆ ಹಾರಿದ್ದೇನೆ! ಇನ್ನು ಯಾರೂ ನನ್ನನ್ನು ಎತ್ತಲಾರರು. ಎತ್ತುವುದೂ ಬೇಡ.

“ಇದೇ, ಗೆಳೆಯ, ಈ ನಿರ್ಭಾಗ್ಯನ ಸಂಕ್ಷೇಪ ಚರಿತ್ರೆ. ನಿನ್ನ ಅಭ್ಯುದಯವನ್ನು ಕಂಡು ನನಗೆ ಪರಮಾನಂದವಾಯಿತು. ನಾನು ಪಾತಾಳದಲ್ಲಿದ್ದರೂ, ಗಗನಕ್ಕಡರುವವರನ್ನು ಕಂಡು ಆನಂದಿಸುವ ಹೃದಯ ಇನ್ನೂ ಹೋಗಿಲ್ಲ. ಇನ್ನು ಮುಂದೆ ನೀನು ಎಂದೆಂದಿಗೂ ಎಲ್ಲೆಲ್ಲಿಯೂ ನನ್ನನ್ನು ನೋಡಲಾರೆ. ನನ್ನ ಸುದ್ಧಿಯನ್ನು ಯಾರೂ ಎಂದಿಗೂ ನಿನಗೆ ಹೇಳಲಾರರು. ಇಗೋ ನನ್ನ ಕಡೆಯ ನಮಸ್ಕಾರ!

ಇತಿ
ನಿನ್ನ ಅಯೋಗ್ಯ ಮಿತ್ರ,
‘ಯೋಗಿನ್’

ಕಾಗದ ಓದಿ ನಿಟ್ಟುಸಿರು ಬಿಟ್ಟೆ. ಅವನನ್ನು ಎತ್ತುವ ಆಸೆ ಮೂಲೆ ಸೇರಿತು. ಶೋಕ, ಕನಿಕರ, ವಿಸ್ಮಯ ಇವುಗಳಿಂದ ಹೃದಯ ಉಲ್ಲೋಲಕಲ್ಲೋಲವಾಯಿತು.

“ಅಯ್ಯೋ ವಿಧಿವಿಲಾಸವೆ” ಎಂದಂದುಕೊಂಡು ಕಿಟಕಿಯಿಂದ ಹೊರಗೆ ನೋಡಿದೆ.

ಪಶ್ಚಿಮ ಗಗನದಲ್ಲಿ ಸಂಜೆಯ ಸೂರ್ಯನು ರಂಜಿಸುತ್ತ ಸಹ್ಯಾದ್ರಿ ಪರ್ವತಗಳ ಹಿಂದೆ ಇಳಿದಿಳಿದು ಅಡಗುತ್ತಿದ್ದನು. ಆತನ ಮನೋಹರವಾದ ವಿಶಾಲ ಬಿಂಬ ಸ್ವಲ್ಪಸ್ವಲ್ಪವಾಗಿ ಮರೆಯಾದ ಹಾಗೆಲ್ಲ ನನ್ನ ಗೆಳೆಯನ ಆತ್ಮವಿನಾಶದ ನೆನಪಾಗುತ್ತಿತ್ತು. ತುಸು ಹೊತ್ತಿನಲ್ಲಿಯೆ ಅವನೂ ಮರೆಯಾದನು. ನಾನೂ ಮನಸ್ಸಿನ ಶಾಂತಿಗಾಗಿ ಗದ್ದೆಗಳಲ್ಲಿ ಅಡ್ಡಾಡಲು ಮಹಡಿಯಿಂದ ಇಳಿದುಹೋದೆ. ಅನಿರ್ವಚನೀಯವಾದ ವ್ಯಾಕುಲತೆಯೊಂದು ಮಾತ್ರ ಹೃದಯವನ್ನು ಪೀಡಿಸುತ್ತಲೇ ಇತ್ತು.