ಆ ದಿನ ಭಾನುವಾರ. ನಾಗರಾಜನ ಆಫೀಸಿಗೆ ರಜ. ಏನಾದರೂ ವೃತ್ತಪತ್ರಿಕೆಗಳನ್ನು ಓದಬೇಕೆಂದು ಪ್ರಾತಃಕಾಲ ಮುಂಚಿತವಾಗಿಯೆ ಎದ್ದು ‘ಸುಖನಿವಾಸ’ದಲ್ಲಿ ದೋಸೆ ಕಾಫಿ ತೆಗೆದುಕೊಂಡು ಸಯ್ಯಾಜಿರಾವ್ ರೋಡಿನಲ್ಲಿರುವ ಪಬ್ಲಿಕ್ ಲೈಬ್ರರಿಗೆ ಹೋಗುತ್ತಿದ್ದನು. ಕೃಷ್ಣರಾಜೇಂದ್ರ ಆಸ್ಪತ್ರೆಯ ಮುಂಭಾಗಕ್ಕೆ ಬರಲು ಒಂದು ಕಾಗೆ ಬಲದಿಂದ ಎಡಕ್ಕೆ ಹಾದುಹೋಯಿತು. ಅವನಿಗೆ ಶಕುನಗಳಲ್ಲಿ ಅಷ್ಟೇನೂ ಪರಿಚಯವಿರಲಿಲ್ಲ. ಅಲ್ಲದೆ ಹೆಚ್ಚು ನಂಬುಗೆಯೂ ಇರಲಿಲ್ಲ. ಕಾಗೆ ಯಾವ ಕಡೆಯಿಂದ ಯಾವ ಕಡೆಗೆ ಹೋದರೆ ಶುಭ, ಯಾವ ಕಡೆಯಿಂದ ಯಾವ ಕಡೆಗೆ ಹೋದರೆ ಅಶುಭ ಎಂಬುದು ಎಷ್ಟು ಪ್ರಯತ್ನಿಸಿದರೂ ಅವನ ಬುದ್ಧಿಗೆ ಹೊಳೆಯಲಿಲ್ಲ. ಆದ್ದರಿಂದ ನಡೆದ ಸಂಗತಿ ಶುಭವೆಂದೇ ದೃಢ ಮಾಡಿಕೊಂಡು ಮುಂದುವರಿದನು. ಅವನು ಹೋಗುತ್ತಿದ್ದುದು ಯಾವ ಮಹಾ ಕಾರ್ಯಾರ್ಥವಾಗಿಯೂ ಆಗಿರಲಿಲ್ಲ. ಸುಮ್ಮನೆ ವೃತ್ತಪತ್ರಿಕೆಗಳನ್ನು ಓದುವುದಷ್ಟೇ. ಆದರೆ ಶುಭಾಶುಭಗಳನ್ನು ನಿರ್ಣಯಿಸುವುದು ಮನಷ್ಯರಲ್ಲಿ ಸಾಮಾನ್ಯ ಗುಣವಷ್ಟೆ? ಅದರಂತೆಯೆ ನಾಗರಾಜನೂ ಭಾವಿಸಿ ಲೈಬ್ರರಿಗೆ ಹೋದನು.

ಅಲ್ಲಿ ‘ಹಿಂದೂ’ ಪತ್ರಿಕೆಯನ್ನು ಓದುತ್ತಾ, ಸೈಮನ್ ಸಮಿತಿಯ ವಿಚಾರ, ದಕ್ಷಿಣ ಆಫ್ರಿಕಾದಲ್ಲಿ ಭಾರತೇಯರ ಸ್ಥಿತಿಗತಿಗಳು, ಶಾಸ್ತ್ರಿಗಳ ಉಪನ್ಯಾಸ-ಇವೇ ಮೊದಲಾದವುಗಳನ್ನು ಮುಗಿಸಿ, ಇನ್ನೇನು ಅದನ್ನು ಬಿಟ್ಟು ‘ಸ್ವರಾಜ್ಯ’ ಪತ್ರಿಕೆಗೆ ಹೋಗಬೇಕು ಅಷ್ಟರಲ್ಲಿ ಅವನ ದೃಷ್ಟಿ “ಒಬ್ಬ ವರನು ಬೇಕಾಗಿದೆ” ಎಂದು ದಪ್ಪ ಅಕ್ಷರದಲ್ಲಿ ಬರೆದಿದ್ದ ಒಂದು ಪ್ರಕಟಣೆಯ ಮೇಲೆ ಬಿತ್ತು. ಅದನ್ನೂ ಓದಿದನು; ಮತ್ತೂ ಓದಿದನು; ಇನ್ನೂ ಓದಿದನು. ಎಷ್ಟು ಒದಿದರೂ ಅವನಿಗೆ ತೃಪ್ತಿಯೇ ಆದಂತೆ ಕಾಣಲಿಲ್ಲ. ಅದರಲ್ಲಿ ಸತ್ಕುಲ ಪ್ರಸೂತೆಯಾದ ಒಬ್ಬ ಹನ್ನೆರಡು ವರುಷದ ಬ್ರಾಹ್ಮಣ ಕನ್ಯೆಗೆ ತಿಂಗಳಿಗೆ ೫೦ ರೂಪಾಯಿದೆ ಕಡಿಮೆಯಿಲ್ಲದೆ ಸಂಪಾದನೆ ಮಾಡುವ ವರನು ಬೇಕಾಗಿದೆ ಎಂದು ಬರೆದಿತ್ತು. ಕನ್ಯೆಯ ಊರು ಧಾರವಾಡ. ಆಕೆಯ ದಾತಾರನಾದ ಶ್ಯಾಮರಾಯರ ವಿಳಾಸವೂ ಅದರಲ್ಲಿತ್ತು. ನಾಗರಾಜನ ಎದೆ ಹಿಗ್ಗಿತು. ಬೇಗಬೇಗನೆ ಶ್ಯಾಮರಾಯರ ವಿಳಾಸವನ್ನು ಡೈರಿಯಲ್ಲಿ ಬರೆದುಕೊಂಡನು. ಬರೆದುಕೊಳ್ಳುವಾಗ ಯಾರಾದರೂ ನೋಡುವರೋ ಏನೋ ಎಂದು ಅತ್ತ ಇತ್ತ ನೋಡುತ್ತಿದ್ದನು.

ಅಷ್ಟು ಹೊತ್ತಿಗೆ ಲೈಬ್ರರಿಗೆ ಬಂದ ಅವನ ಸ್ನೇಹಿತ ಕೃಷ್ಣರಾಯನು “ಅದೇನು ಬರೆದುಕೊಳುತ್ತಿದ್ದಿಯೋ, ನಾಗರಾಜ?” ಎಂದು ಕೇಳುತ್ತಾ ಹತ್ತಿರ ಬಂದನು. ನಾಗರಾಜನು ಬೇಗಬೇಗ ಕಾಗದವನ್ನು ಮಡಿಸಿ ಜೇಬಿಗೆ ಹಾಕಿಕೊಂಡು “ಏನೂ ಇಲ್ಲ ಕಣೋ. ಆಮೇಲೆ ಹೇಳ್ತೀನಿ” ಎಂದನು.

ನಾಗರಾಜನು ಭಿಕ್ಷಾನ್ನದಿಂದ ಹೊಟ್ಟೆ ಹೊರೆದುಕೊಂಡು ವಿದ್ಯಾಭ್ಯಾಸ ಮಾಡಿ ಈಗ ರೆವಿನ್ಯೂ ಇಲಾಖೆಯಲ್ಲಿ ಅರವತ್ತು ರೂಪಾಯಿ ಸಂಬಳದ ಗುಮಾಸ್ತೆಯ ಕೆಲಸದಲ್ಲಿ ಇರುವ ಮೂವತ್ತು ವರುಷದ ತರುಣನು. ಅವನಿಗೆ ಇನ್ನೂ ಮದುವೆಯಾಗಿರಲಿಲ್ಲ. ನೋಡುವುದಕ್ಕೆ ಸ್ವಲ್ಪ ಕುರೂಪಿ. ಅದರ ಜೊತೆಗೆ ಬಲಗಡೆಯ ಕಿವಿಯೇ ಇರಲಿಲ್ಲ. ಆದ್ದರಿಂದ ಅವನಿಗೆ ಯಾರೂ ಹೆಣ್ಣು ಕೊಡಲಿಲ್ಲ. ಪಾಪ, ಎಷ್ಟು ದಿನ ತಾನೇ ಏಕಾಂಗಿಯಾಗಿದ್ದಾನು? ಹುಡುಗನಾಗಿರುವಾಗಂತೂ ಭಿಕ್ಷಾನ್ನ; ಆಮೇಲೆ ಕೂಡ ಜೀವಮಾನವೆಲ್ಲಾ ಹೋಟಲಿನ ಹಾಳನ್ನ ತಿಂದು ಬದುಕುವುದಾದರೂ ಹೇಗೆ? ಇದಕ್ಕಾಗಿ ಅವನು ಎಷ್ಟೋಸಾರಿ ಚಿಂತಿಸಿ ವ್ಯಥೆಪಟ್ಟಿದ್ದನು. ಆದ್ದರಿಂದಲೆ ಪತ್ರಿಕೆಯಲ್ಲಿ ಪ್ರಕಟನೆಯನ್ನು ನೋಡಿದಾಗ ಅವನಿಗೆ ನೆಚ್ಚುಮೂಡಿ ಎದೆಯರಳಿದ್ದು!

ಆ ದಿನ ಅವನು ಇನ್ನಾಔ ಪತ್ರಿಕೆಯನ್ನೂ ಓದದೆ ಹಿಂತಿರುಗಿ ತನ್ನ ರೂಮಿಗೆ ಬಂದುಬಿಟ್ಟನು. ಕೊಠಡಿಯ ಬಾಗಿಲನ್ನು ಹಾಕಿಕೊಂಡು ಮುಂದೆ ಮಾಡಬೇಕಾದ ಕಾರ್ಯಾಲೋಚನೆ ಮಾಡತೊಡಗಿದನು. ಧಾರವಾಡ ದೂರದ ಊರು. ಅಲ್ಲಿ ಯಾರಿಗೂ ತನ್ನ ವಿಚಾರ ಗೊತ್ತಿಲ್ಲ. ತಾನು ಕಿವಿಹರುಕನೆಂಬ ಸಂಗತಿ ಹೆಣ್ಣಿನವರಿಗೆ ಗೊತ್ತಾದರೆ ಹೆಣ್ಣು ದೊರಕುವುದು ಸುಳ್ಳುಮಾತು. ಹೇಗಾದರೂ ಮಾಡಿ ತನ್ನ ಅವಲಕ್ಷಣವನ್ನು ಮರೆಮಾಚಿಕೊಂಡು ಮದುವೆಗೆ ಸನ್ನಾಹ ಮಾಡಬೇಕು. ಎಂತಿದ್ದರೂ ಹೆಣ್ಣಿನವರ ಅಪೇಕ್ಷೆಯಮತೆ ತನಗೆ ೫೦ ರೂಪಾಯಿಗಳಿಗೆ ಕಡಮೆಯಿಲ್ಲದಂತೆ ಸಂಪಾದನೆ ಇದೆ. ಮೊದಲು ಯಾರಿಗೂ ತಿಳಿಯದಂತೆ ಕಾಗದದ ಮೂಲಕ ಹೆಣ್ಣಿನ ಸಾಕುತಂದೆಯಾದ ಶ್ಯಾಮರಾಯರೊಡನೆ ವ್ಯವಹಾರ ನಡೆಸಿ, ಅವರ ಒಪ್ಪಿಗೆಯನ್ನು ಪದೆದುಕೊಂಡು, ತರುವಾಯ ತನ್ನ ಸ್ನೇಹಿತರಿಗೂ ಬಂಧುಗಳಿಗೂ ವಿಷಯವನ್ನು ತಿಳಿಸಿ ವಿವಾಹ ಸಾಂಗವಾಗಿ ನೆರವೇರುವಂತೆ ಮಾಡಬೇಕು. ಇಲ್ಲದೆ ಇದ್ದರೆ ನಾಚಿಕೆಗೇಡಾಗುವುದು. ಏನೋ ತನ್ನ ಪ್ರಯತ್ನ ಮಾಡುವುದು; ಮುಂದೆ ದೈವಚಿತ್ತ:

ನಾಗರಾಜನು ಶ್ಯಾಮರಾಯರಿಗೆ ಒಂದು ಕಾಗದ ಬರೆದ. ಬರೆದ ಎನ್ನುವುದಕ್ಕಿಂತಲೂ ರಚಿಸಿದ ಎನ್ನುವುದೇ ಮೇಲು. ಏಕೆಂದರೆ ಕಾಗದ ಬರೆಯುವುದಕ್ಕೆ ಸುಮಾರು ಮೂರು ಗಂಟೆ ಹೊತ್ತಾಯಿತು! ಆ ಸಂಭ್ರಮದಲ್ಲಿ ಊಟವನ್ನೂ ಮರೆತುಬಿಟ್ಟನು. ಕಾಗದದಲ್ಲಿ ತನ್ನ ಸಂಬಳ ವಿದ್ಯಾಭ್ಯಾಸ ಮೊದಲಾದ ತನಗೆ ನೆರವಾಗುವ ಸಮಾಚಾರಗಳನ್ನೆಲ್ಲಾ ಬರೆದನು. ವಯಸ್ಸನ್ನು ಮಾತ್ರ ಮುವತ್ತರಿಂದ ಇಪ್ಪತ್ತೈದಕ್ಕೆ ಇಳಿಸಿಬಿಟ್ಟನು. ಅಂತೂ ಕಾಗದಕ್ಕೆ ಮಾಡಬೇಕಾದ ಸಂಸ್ಕಾರಗಳನ್ನೆಲ್ಲ ಮಾಡಿ, ದಿಗ್ದೇವತೆಗಳಿಗೆ ನಮಸ್ಕಾರಮಾಡಿ, ಅದನ್ನು ಟಪ್ಪಾಲು ಪೆಟ್ಟಿಗೆಗೆ ಇಳಿಬಿಟ್ಟನು.

ಶ್ಯಾಮರಾಯರ ಉತ್ತರವನ್ನೆ ಹಾರೈಸುತ್ತಾ ಎರಡು ಮೂರು ದಿನಗಳನ್ನು ಕಳೆದನು. ಒಂದು ಕಡೆ ಆಶಾಭಂಗವಾಗುವುದೇನೊ ಎಂದು ಭಯ. ಇನ್ನೊಂದು ಕಡೆ ಸಕಲವೂ ಕೈಗೂಡುವುದೆಂಬ ಸವಿಗನಸಿನ ಸಂತೋಷ. ಹೀಗೆ ದಿನದ ಮೇಲೆ ದಿನ ಕಳೆಯಿತು.

ಶ್ಯಾಮರಾಯರು ಧಾರವಾಡದ ಒಬ್ಬ ಬಡ  ಕುಟುಂಬಿ. ಮದುವೆಗೆ ಬಂದ ಲಲಿತಮ್ಮನು ಅವರ ಮಗಳು ಅಲ್ಲ; ಹತ್ತಿರದ ಸಂಬಂಧಿಯೂ ಅಲ್ಲ. ಆಕೆ ಅವರ ಹೆಂಡತಿಯ ತಂಗಿಯ ಗಂಡನ ತಮ್ಮನ ಪತ್ನಿಯ ನಾದಿನಿ. ಆಕೆಗೆ ಯಾರೂ ದಿಕ್ಕಿರಲಿಲ್ಲ. ಆದ್ದರಿಂದ ಚಿಕ್ಕಂದಿನಿಂದಲೂ ಆಕೆಯನ್ನು ಮುದ್ದಿನಿಂದ ಸಾಕಿದರು. ಹೆಸರು ಲಲಿತಮ್ಮನಾದರೂ ರೂಪ ಅಷ್ಟೇನೂ ಲಲಿತವಾಗಿರಲಿಲ್ಲ. ಅಲ್ಲದೆ ಆಕೆಯ ಎಡಗೈ ಬಹಳ ಮೋಟಾಗಿ ಡೊಂಕಾಗಿ ದೇಹಕ್ಕೊಂದು ಕೆಲಸಕ್ಕೆ ಬಾರದ ಕೊಂಬೆಯಾಗಿತ್ತು. ವರಾನ್ವೇಷಣಗಾಗಿ ಅವರು ಎಷ್ಟು ಬಳಲಿದರೂ ಫಲಕಾರಿಯಾಗಲಿಲ್ಲ. ಆಕೆಯನ್ನು ಮದುವೆಯಾಗಲು ಯಾವ ಯುವಕನೂ ಒಪ್ಪಲಿಲ್ಲ. ವರದಕ್ಷಿಣೆಯನ್ನು ಹೆಚ್ಚಿಸಿದ್ದರೆ ಯಾರಾದರೂ ಒಪ್ಪುತ್ತಿದ್ದರು, ಆದರೆ ಶ್ಯಾಮರಾಯರಿಗೆ ಅಷ್ಟು ಸಾಮರ್ಥ್ಯವಿರಲಿಲ್ಲ.

ನಾಗರಾಜನ ಕಾಗದ ನೋಡಿದ ಕೂಡಲೆ ಅವರಿಗೆ ಪರಮಾನಂದವಾಯಿತು. ಹೇಗಾದರೂ ಮಾಡಿ ಹುಡುಗಿಯ ಅವಲಕ್ಷಣ ಹುಡುಗನಿಗೆ ತಿಳಿಯದಂತೆ ಲಗ್ನ ಮಾಡಿಬಿಟ್ಟರೆ ಪುಣ್ಯಕಟ್ಟಿಕೊಂಡ ಹಾಗಾಗುತ್ತದೆ, ಎಂದು ಯೋಚಿಸಿ, ನಾಗರಾಜನಿಗೆ ಕಾಗದ ಬರೆದರು. ಆ ಕಾಗದದಲ್ಲಿ ಅವರ ಒಪ್ಪಿಗೆಯನ್ನು ಸೂಚಿಸಿ, ನಾಗರಾಜನ ಫೋಟೋವನ್ನು ಲಗ್ನ ನಿಶ್ಚಯ ಮಾಡುವುದಕ್ಕೆ ಮುಂಚೆಯೆ ಕಳುಹಿಸಬೇಕೆಂದೂ, ಹುಡುಗಿಯ ಕಡೆಯವರು ಅದನ್ನು ನೋಡಲಿಚ್ಚಿಸುವರೆಂದೂ ನಾಗರಾಜನಂಥ ಅಳಿಯಂದಿರನ್ನು ಪಡೆಯಲು ಯಾರಿಗೆ ತಾನೆ ಇಷ್ಟವಿರುವುದಿಲ್ಲವೆಂದೂ, ಇನ್ನೂ ಮೊದಲಾದ ನಾನಾ ಉಪಚಾರದ ಮಾತುಗಳನ್ನು ಪೋಣಿಸಿದರು.

ಕಾಗದ ನಾಗರಾಜನ ಕೈ ಸೇರಿತು. ಮರಭೂಮಿಯಲ್ಲಿ ಬಾಯಾರಿ ನೀರನ್ನು ಹುಡುಕಿ ಹುಡುಕಿ ಬೆಂದು ಬೇಗುದಿಗೊಂಡು ತಿರುಗಾಡುವ ಸಂಚಾರಿಗೆ ದೊಡ್ಡ ತಿಳಿಗೊಳ ಮೈದೋರಿದಂತಾಯಿತು. ಅವನ ಆನಂದಕ್ಕೆ ಪಾರವೆ ಇಲ್ಲದಂತಾಯಿತು. ತನ್ನ ಸ್ನೇಹಿತರ ಮನೆಮನೆಗೂ ತಿರುಗಿ ಬೆಲೆಯುಳ್ಳ ಉಡುಪುಗಳನ್ನು ಶೇಖರಿಸಿ ನೀಟಾಗಿ ಪೋಷಾಕು ಹಾಕಿಕೊಂಡನು. ಬಹಳ ಎಚ್ಚರಿಕೆಯಿಂದ ತನ್ನ ಹರಕು ಕಿವಿ ಕಾಣದಂತೆ ರುಮಾಲನ್ನು ಸುತ್ತಿಕೊಂಡು ಮೈಸೂರಿನಲ್ಲಿ ಪ್ರಸಿದ್ಧರಾದ ತಸ್ಪೀರುಗಾರರೊಬ್ಬರ ಕಾರ್ಯಾಲಯಕ್ಕೆ ಹೋಗಿ ಪೋಟೋ ತೆಗೆಸಿಕೊಂಡನು. ಪೋಟೋವನ್ನು ಮರುದಿನವೇ ಕೊಡುವಂತೆ ಅವರಿಗೆ ಸಾರಿಸಾರಿ ಹೇಳಿ ಅಲ್ಲಿಂದ ಹೊರಟು ಸ್ವಲ್ಪ ದೂರ ಬಂದಮೇಲೆ ಪುನಃ ಹಿಂದಕ್ಕೆ ಹೋದನು.

ತಸ್ಪೀರುಗಾರನು “ಇನ್ನೇನು? ಮತ್ತೇಕೆ ಬಂದಿರಿ?” ಎಂದನು.

“ಏನು ಇಲ್ಲ. ಒಂದು ಮಾತು ಹೇಳಬೇಕಾಗಿತ್ತು, ಮರೆತು ಬಿಟ್ಟೆ.”

“ಏನು?”

“ಇನ್ನೇನೂ ಇಲ್ಲ. ಚಿತ್ರದಲ್ಲಿ ಮುಖದ ಮೇಲೆ ಇರುವ ಕಲೆಗಳೆಲ್ಲಾ ಬಿದ್ದರೆ ವಿಕಾರವಾಗುವುದಿಲ್ಲವೆ?”

“ಅದಕ್ಕೇನು ಮಾಡೋದು, ಸ್ವಾಮಿ? ಮುಖ ಇದ್ದಹಾಗೆ ಚಿತ್ರ ಬೀಳುತ್ತೆ. ಕ್ಯಾಮರಾದ ತಪ್ಪೇನು ಅದರಲ್ಲಿ?”

“ಹಾಗಲ್ಲ; ನೀವು ಸ್ವಲ್ಪ ‘ಟಚ್’ ಮಾಡಿಬಿಡಿ.”

“ಅದಕ್ಕೇನು ಬೇಕಾದಹಾಗೆ ಮಾಡುತ್ತೇವೆ!”

ಮರುದಿನವೇ ನಾಗರಾಜನು ತನ್ನ ಫೋಟೊ ತೆಗೆದುಕೊಂಡು ಬರಲು ‘ಸ್ಟೂಡಿಯೊ’ಕ್ಕೆ ಹೋದನು. ತಸ್ಪೀರುಗಾರನು ತಸ್ಪೀರಿನ ಮುರು ಪ್ರತಿಗಳನ್ನು ನಾಗರಾಜನ ಕೈಲಿಟ್ಟನು.

ನಾಗರಾಜನು “ಸ್ವಾಮಿ, ಫೋಟೋ ಬದಲಾವಣೆಯಾಗಿದೆ ಅಂತ ಕಾಣುತ್ತದೆ” ಎಂದನು.

“ಇಲ್ಲ ಸ್ವಾಮಿ; ಬದಲಾವಣೆಯಾಗಿಲ್ಲ. ‘ಟಚ್’ ಮಾಡಿ ಎಂದು ನೀವೇ ಹೇಳಿದ್ದಿರಲ್ಲ. ಅದಕ್ಕೆ ಸ್ವಲ್ಪ ಚೆನ್ನಾಗಿಯೆ ‘ಟಚ್’ ಮಾಡಿದ್ದೇನೆ!” ಅಂತೂ ಫೋಟೋಗೆ ‘ಗೋರ್ಲ್ಡಟಚ್’ ಆಗಿಬಿಟ್ಟಿತ್ತು.

“ಸರಿ ಗೊತ್ತಾಯ್ತು” ಎಂದು ಹೇಳಿ ನಾಗರಾಜನ ಹೊರಟನು.

ತನ್ನ ರೂಮಿಗೆ ಹೋದಮೇಲೆ ತಸ್ಪೀರನ್ನು ಮತ್ತೆ ಮತ್ತೆ ನೋಡುತ್ತಾ  ‘ನಾನು ಇಷ್ಟು ಸುಂದರಪುರುಷನೆ?’ ಎಂದು ಹಿಗ್ಗಿದನು. ಕನ್ನಡಿಯಲ್ಲಿ ತನ್ನ ಮುಖವನ್ನು ನೋಡಿ, ಅದನ್ನು ಫೊಟೋದೊಡನೆ ಹೋಲಿಸಿದನು. ಒಂದಕ್ಕೊಂದು ಸಂಬಂಧವೇ ಇರಲಿಲ್ಲ. ಕನ್ನಡಿಯೇ ಮೋಸಗಾರನೆಂದು ಅದನ್ನು ಬಯ್ದು, ತಸ್ಪೀರನು ಪೆಟ್ಟಿಗೆಯನ್ನು ಭಕ್ತಿಯಿಂದ ಸ್ತುತಿಸಿ. ತಸ್ಪೀರನ್ನು ಕಾಗದದೊಡನೆ ಶಾಮ್ಯರಾಯರಿಗೆ ಕಳುಹಿಸಿದನು. ಪತ್ರದಲ್ಲಿ ಹುಡುಗಿಯ ಚಿತ್ರವನ್ನು ನಾನು ನೋಡಬೇಕು. ಅವಳ ಫೋಟೋ ಕಳುಹಿಸಿಕೊಡಿ ಎಂದು ‘ಮ.ಮಾ.’ ಬರೆದನು. (‘ಮ.ಮಾ.’ ಎಂದರೆ ಮರೆತ ಮಾತು.)

ನಾಗರಾಜನಂತೆಯೆ ಶ್ಯಾಮರಾಯರೂ ಕನ್ಯೆಗೆ ನಾನಾ ವಿಧವಾದ ಅಲಂಕಾರಗಳನ್ನು ತೊಡಿಸಿ, ಪಿತಾಂಬರವನ್ನು ಉಡಿಸಿ, ಆಕೆಯ ಕೈಯ ಕೊರತೆ ಕಾಣದಂತೆ ಅದನ್ನು ಸೀರೆಯ ಸೆರಗಿನಿಂದ ಮುಚ್ಚಿಸಿ, ಫೋಟೋ ತೆಗೆಯಿಸಿ ‘ಟಚ್’ ಮಾಡಿಸಿಯೇ ಕಳುಹಿಸಿದರು.

ನಾಗರಾಜನು ಲಲಿತಮ್ಮನ ಚಿತ್ರಗಳನ್ನು ನೋಡಿ ಮೈಮರೆತುಬಿಟ್ಟನು. ಅವನು ಕೆಲವು ಕನ್ನಡ ಗ್ರಂಥಗಳಲ್ಲಿ ಸ್ತ್ರೀವರ್ಣನೆಯನ್ನು ಓದಿದ್ದನು. ಆದರೆ ಯಾವ ವರ್ಣನೆಯೂ ಅವನಿಗೆ ಸಮರ್ಪಕವಾಗಿ ಕಾಣಲಿಲ್ಲ. ಅವನ ಕಣ್ಣಿಗೆ ಲಲಿತಮ್ಮನು ಸಾಕ್ಷಾತ್ ರತಿಯಂತೆ ರಂಜಿಸಿದಳು. ಅವನು ಆ ಚಿತ್ರವನ್ನು ಮುದ್ದಿಸಿ, ರವಿಯೂ ಕಾಣದ ಎಷ್ಟೋ ವಿಧವಾದ ಸರಸ ರಸಿಕತೆಯನ್ನು ಪ್ರದರ್ಶಿಸಿ, ತನ್ನ ಭಾಗ್ಯಲಕ್ಷ್ಮಿಯನ್ನು ಕೊಂಡಾಡಿದನು. ಲಲಿತಮ್ಮನೂ ನಾಗರಾಜನ ಚಿತ್ರವನ್ನು ಕಂಡು ಮೋಹದಿಂದ ಮೈಮರೆತಳು. ಅವನ ಜರಿಯ ಪೇಟ, ಬೂಟ್ಸ್, ಷರಾಯಿ, ನೆಕ್‌ಟೈ ಮೊದಲಾದವುಗಳನ್ನು ನೋಡಿ, ಮನ್ಮಥನೆಂದೇ ಭಾವಿಸಿ, ತನ್ನನ್ನು ಕೈಹಿಡಿಯಲೊಪ್ಪಿದ ಮಹಾತ್ಮನಿಗೆ ಭಕ್ತಿಯಿಂದ ನಮಸ್ಕರಿಸಿದಳು.

ಮದುವೆ ಧಾರವಾಡದಲ್ಲಿಯೆ ಜರುಗಿತು. ಗಂಡಿನ ಕಡೆಯವರಿಗೆ ಏನು ಸಮಾಧಾನ ಎಂದರೆ: ಪಾಪ! ಹುಡುಗನಿಗೆ ಕಿವಿಹರುಕನೆಂದು ಯಾರೂ ಹೆಣ್ಣು ಕೊಡುತ್ತಿರಲಿಲ್ಲ; ನಿಜಸ್ಥಿತಿಯನ್ನು ಹೊರತುಪಡಿಸಿ ಅವನ ಆಸೆಗೆ ಮಣ್ಣುಹಾಕುವುದು ದೊಡ್ಡ ಪಾಪ; ಕಲ್ಯಾಣಕ್ಕಾಗಿ ಮೋಸಪಡಿಸಿದರೂ ಪಾಪವಿಲ್ಲ ಎಂದು. ಹೆಣ್ಣಿನವರಿಗೂ ಹಾಗೆಯೆ. ಅಂತೂ ಎಲ್ಲರೂ ಗೊತ್ತಿದ್ದರೂ ಗೊತ್ತಿಲ್ಲದವರಂತೆ ಸುಮ್ಮನಾದರು.

ನಾಗರಾಜನೂ ಲಲಿತಮ್ಮನೂ ಒಬ್ಬರನ್ನೊಬ್ಬರು ನೋಡಿದಾಗ ಇಬ್ಬರೂ ಸ್ವಲ್ಪ ಚಕಿತರಾದರು. ಆದರೆ ಆಗಲೇ ಇಬ್ಬರ ಹೃದಯದಲ್ಲಿಯೂ ಪರಸ್ಪರ ಅನುರಾಗ ಅಂಕುರಿಸಿದ್ದರಿಂದ ಇಬ್ಬರಿಗೂ ಸೌಂದರ್ಯ ತೋರಿತೇ ಹೊರತು ಕುರೂಪ ಕಾಣಲೇ ಇಲ್ಲ. ಕಣ್ಣಿಗೆ ಕೂಡ ಕನಿಕರವಿಲ್ಲವೆ? ಅಂತೂ ತನ್ನ ಹೆಂಡತಿಗೆ ಕೈಯಿಲ್ಲ ಎಂಬ ವಿಚಾರವೂ, ತನ್ನ ಗಂಡನಿಗೆ ಕಿವಿಯಿಲ್ಲ ಎಂಬುದೂ ಇಬ್ಬರಿಗೂ ಗೊತ್ತಾಗಲಿಲ್ಲ. ಪ್ರೇಮಾನುರಾಗವು ಬಲವಾಗಿ ಅಂಕುರಿಸುವುದಕ್ಕೆ ಮುಂಚೆ ಸೌಂದರ್ಯ, ಸೌಭಾಗ್ಯ, ಸುಖ ಇವುಗಳ ಮೇಲೆ ದೃಷ್ಟಿ. ಅನುರಾಗ ಅಂಕುರಿಸಿತೆಂದರೆ ಕೋಡಗ ಕೂಡ ಕಣ್ಣಿನ ಮುದ್ದಾಗುವುದೇನೂ ಆಶ್ಚರ್ಯವಲ್ಲ.

ಮದುವೆ ಮುಗಿದುಹೋಯಿತು. ನಾಗರಾಜನು ತಾನು ಧನ್ಯನಾದೆನೆಂದು ಹರ್ಷಚಿತ್ತನಾಗಿ ಮೈಸೂರಿಗೆ ಬಂದನು. ಲಲಿತಮ್ಮನೂ ತನ್ನ ಪುಣ್ಯಕ್ಕೆ ಎಣೆಯಿಲ್ಲವೆಂದು ತಿಳಿದು ಹೆಮ್ಮೆಯಿಂದ ಹಿಗ್ಗಿಹೋದಳು. ಗಂಡು ಮತ್ತು ಹೆಣ್ಣಿನ ಕಡೆಯವರಿಗೆ ಒಂದು ಅಸಾಧ್ಯ ಸಾಧನೆಯಾದಂತಾಗಿ ತಂತಮ್ಮ ಮನೆಗಳಿಗೆ ಹೋದರು.

ನಾಗರಾಜನು ಮೈಸೂರಿಗೆ ಬಂದವನು ಕೃಷ್ಣಮೂರ್ತಿಪುರದಲ್ಲಿ ಒಂದು ಸಣ್ಣ ಮನೆಯನ್ನು ಬಾಡಿಗೆಗ ತೆಗೆದುಕೊಂಡು, ಸಂಸಾರಕ್ಕೆ ಬೇಕಾದ ಪದಾರ್ಥಗಳನ್ನೆಲ್ಲಾ ಒದಗಿಸಿದನು. ಅಂದಿನಿಂದ ಅವನಿಗೆ ಪ್ರಪಂಚದಲ್ಲಿ ಕಾಂತಿ ಹಚ್ಚಿದಂತಾಯಿತು. ಸೂರ್ಯನೂ ಚಂದ್ರನೂ ಇಮ್ಮಡಿಯಾಗಿ ಪ್ರಕಾಶಿಸತೊಡಗಿದರು. ಹಕ್ಕಿಗಳ ಗಾನ ಮೊದಲಿಗಿಂತಲೂ ಮಧುರವಾಗಿ ಪರಿಣಮಿಸಿತು. ಪ್ರಪಂಚದ ಜೀವನವು ನಿಜವಾಗಿಯೂ ಅಷ್ಟೇನೂ ವ್ಯರ್ಥವಲ್ಲ ಎಂದು ಯೋಚಿಸಿದನು. ತನ್ನ ಫೋಟೋವನ್ನೂ ಲಲಿತಮ್ಮನ ಪೋಟೋವನ್ನೂ ಜೊತೆಜೊತೆಯಾಗಿ ಅಂಟಿಸಿ ಕಟ್ಟುಹಾಕಿಸಿ, ಮಲಗುವ ಮನೆಯ ಗೋಡೆಯ ಮೇಲೆ ಅದನ್ನು ಸ್ಥಾಪಿಸಿದನು.

ಕೆಲವು ದಿನಗಳ ಮೇಲೆ ಲಲಿತಮ್ಮನನ್ನು ಮೈಸೂರಿಗೆ ಕರೆದುಕೊಂಡು ಬಂದನು. ಆಗಲೂ ಕೂಡ ಲಲಿತಮ್ಮನ ಜೊತೆಯಲ್ಲಿ ಆಕೆಯ ಬಂಧುಗಳು ಇದ್ದುದರಿಂದ ಇಬ್ಬರಿಗೂ ಪರಸ್ಪರ ಅವಲಕ್ಷಣಗಳು ಗೊತ್ತಾಗಲಿಲ್ಲ.

ಆ ದಿನ ಹುಣ್ಣಿಮೆ. ಅದರಲ್ಲಿಯೂ ವಸಂತಮಾಸ! ಹೀಗಿರಲು ನವ ನೀರ ನೀರೆಯರ ಸಂತಸಕ್ಕೆ ಮೇರೆಯುಂಟೆ? ನಾಗರಾಜನೂ ಲಲಿತಮ್ಮನೂ ಮಲಗುವ ಮನೆಯಲ್ಲಿ ಇಬ್ಬರೇ ಕುಳಿತಿದ್ದಾರೆ. ಜನವಿಹೀನವಾದ ನೀರವ ರಾತ್ರಿ. ಹಾಲ್ಗಡಲ ತೆರೆಯ ನೊರೆಯಂತೆ ಬಿಳಿದಾಗ ಕೋಮಲವಾದ ಶಾಂತವಾದ ಬೆಳ್ದಿಂಗಳು ದೊಡ್ಡದಾದ ಎರಡು ಕಿಟಕಿಗಳಿಂದ ಕೋಣೆಯೊಳಗೆ ಪ್ರವಾಹದಂತೆ ನುಗ್ಗಿ ಬಂದು ಲಲಿತಮ್ಮನನ್ನೂ ನಾಗರಾಜನನ್ನೂ ಗೋಡೆಯ ಮೇಲಿದ್ದ ಸತಿಪತಿಯರ ಚಿತ್ರಗಳನ್ನೂ ತನ್ನ ಜ್ಯೋತ್ಸ್ನೆಯಿಂದ ಮುಳುಗಿಸಿಬಿಟ್ಟಿತ್ತು. ಇಬ್ಬರೂ ಮಾತಾಡದೆ ಬಹು ಹೊತ್ತು ಒಬ್ಬರನ್ನೊಬ್ಬರು ನೋಡುತ್ತಾ ಮೌನವಾಗಿದ್ದರು. ಇಬ್ಬರ ಮನಸ್ಸಿನಲ್ಲಿಯೂ ಏನೇನೋ ಆಲೋಚನೆ.

ಲಲಿತಮ್ಮನಿಗೆ ನಾಗರಾಜನಂಥಾ ಪತಿ ಸಿಕ್ಕಿದನಲ್ಲಾ ಎಂಬ ಸಂತೋಷ ಒಂದು ಕಡೆ. ಇನ್ನೊಂದು ಕಡೆ ನಿಜಸ್ಥಿತಿಯನ್ನು ತಿಳಿಸದೆ ಅವರನ್ನು ಮೋಸಪಡಿಸಿದರಲ್ಲಾ ಆ ಮೋಸದಲ್ಲಿ ತಾನೂ ಭಾಗಿಯಾಗಿರುವೆನಲ್ಲಾ ಎಂಬ ಎದೆಯ ಯಾತನೆ . ನಗರಾಜನಿಗೆ ತನ್ನ ಮೊಸಕ್ಕೆ ಎಲ್ಲರೂ ಒಳಗಾದರಲ್ಲಾ ಎಂದು ಒಳಗೊಳಗೇ ನಗು. ಲಲಿತಮ್ಮನಿಗೆ ಇನ್ನೊಂದು ಭೀತಿ. ಏನೆಂದರೆ, ತನ್ನ ಅವಲಕ್ಷಣ ಗೊತ್ತಾಗದೆ ಮುಂದೆ ಏನಾಗಿಬಿಡುವುದೋ ತಾನು ಬಹಳ ದಿವಸಗಳಿಂದಲೂ ನಿರ್ಮಿಸಿಕೊಂಡಿದ್ದ ಸವಿಗನಸು ಎಲ್ಲಿ ಇಂದು ಬೆಳ್ದಿಂಗಳಲ್ಲಿ ಒಡೆದು ಪುಡಿಯಾಗುವುದೋ ಎಂದು. ಕಡೆಗೆ ಆಕೆ ಏನಾದರೂ ಆಗಲಿ ನಿಜವನ್ನು ತಿಳಿಸಬಿಡಬೇಕೆಂದು ಮೆಲ್ಲಗೆ ಮಾತಾಡಿದಳು.

“ಅಂತೂ ನೀವು ನನ್ನಂಥ ನಿರ್ಭಾಗ್ಯೆಯನ್ನು ಕೈಹಿಡಿದರಲ್ಲಾ” ಎಂದಳು. ಅವಳ ಕಣ್ಣಿನಿಂದ ಒಂದೆರಡು ಬಿಂದುಗಳು ಸೂಸಿದುವು.

ನಾಗರಾಜನು ಅದನ್ನು ನೋಡಿ ಸಹಿಸಲಾರದೆ “ಇದೇನು ಲಲಿತಾ, ಈ ಬೆಳ್ದಿಂಗಳಲ್ಲಿ ಅಳುವುದೇ? ನೀನು ನಿರ್ಭಾಗ್ಯಯಲ್ಲ, ನನ್ನ ಭಾಗ್ಯದ ಲಕ್ಷ್ಮಿ!” ಎಂದನು.

ಲಲಿತಮ್ಮನು ನಾಗರಾಜನನ್ನೆ ನೋಡುತ್ತಾ ಮೆಲ್ಲಗೆ ತನ್ನ ಸೆರಗನ್ನು ಓರೆಮಾಡಿದಳು. ನಾಗರಾಜನು ಆಕೆಯ ವಕ್ರವಾದ ಕೈಯನ್ನು ನೋಡಿದನು. ಚಕಿತನಾಗದೆ ತಾನೂ ತನ್ನ ತಲೆಯುಡುಪನ್ನು ಮೆಲ್ಲಗೆ ತೆಗೆದಿಟ್ಟನು. ಲಲಿತಮ್ಮ ಅವನ ಹರಿದುಹೋದ ಕಿವಿಯನ್ನು ನೋಡಿದಳು. ಇಬ್ಬರ ಮನಸ್ಸೂ ಏಕೋ ಶಾಂತವಾಯಿತು. ನಾಗರಾಜ ನಕ್ಕನು. ಲಲಿತಮ್ಮನೂ ನಕ್ಕಳು. ಅದನ್ನು ನೋಡಿ ಚಂದ್ರನೂ ನಕ್ಕನು. ತಾರೆಗಳೂ ನಕ್ಕವು. ಬಾನ್ದೇವಿ ಮಂದಹಸಿತೆಯಾದಳು. ಗೋಡೆಯ ಮೇಲೆ ಬೆಳ್ದಿಂಗಳಲ್ಲಿ ವಿರಾಜಿಸುತ್ತಿದ್ದ ದಂಪತಿಗಳ ಚಿತ್ರಪಟಗಳೂ ಗಹಗಹಿಸಿ ನಕ್ಕುಬಿಟ್ಟವು? ಇಶ್ವರ ಎನ್ನುವ ಪುರುಷೋತ್ತಮನು ಇರುವುದು ಹೌದಾದರೆ ಅವನೂ ನಕ್ಕಿರಬೇಕು!