ತೋಟಗಾರಿಕೆ ಬೆಳೆಗಳ ಬೇಸಾಯದಲ್ಲಿ ಕೆಲವು ಮುಖ್ಯಾಂಶಗಳು:

೧) ನಂಬಿಕೆಗೆ ಅರ್ಹವಿರುವ ಮೂಲಗಳಿಂದ ಮಾತ್ರವೇ ಸಸಿಗಳನ್ನು ಪಡೆದುಕೊಳ್ಳಬೇಕು.

೨) ಹೊಸದಾಗಿ ತೋಟ ಎಬ್ಬಿಸುವವರು ಹತ್ತಿರದ ತಜ್ಞರ ನೆರವನ್ನು ಪಡೆದು ಅನಂತರ ಕೆಲಸವನ್ನು ಪ್ರಾರಂಭಿಸಬಹುದು. ಹತ್ತಿರದ ತೋಟಗಳನ್ನು ಒಮ್ಮೆ ನೋಡುವುದು ಒಳ್ಳೆಯದು.

೩) ತೋಟದಲ್ಲಿನ ಮಣ್ಣು ಮತ್ತು ನೀರುಗಳನ್ನು ಪರೀಕ್ಷಿಸಿ ಕೊಳ್ಳುವುದು ಉತ್ತಮ.

೪) ತೋಟದ ಸುತ್ತ ಗಾಳಿ ತಡೆ ಎಬ್ಬಿಸುವುದು ಅಗತ್ಯ.

೫) ಸಸಿಗಳನ್ನು ಪ್ರಾರಂಭದಲ್ಲಿ ನೆಟ್ಟಿದ್ದೇ ಆದರೆ ಅವು ಮಳೆಗಾಲ ಮುಗಿಯುವ ಹೊತ್ತಿಗೆ ಚೆನ್ನಾಗಿ ಬೇರುಬಿಟ್ಟು ಸ್ಥಿರಗೊಳ್ಳುತ್ತವೆ. ಹಾಗಾಗಿ ಮಳೆಗಳ ಸಂಪೂರ್ಣಲಾಭ ಸಿಕ್ಕಂತಾಗುತ್ತದೆ.

೬) ಸಾಧ್ಯವಾದಷ್ಟೂ ಮಳೆಯ ನೀರು ತಾಕುಗಳಲ್ಲಿ ಉಳಿಯುವಂತೆ ಮಾಡಬೇಕು.

೭) ಹಸಿರುಗೊಬ್ಬರ ಮುಂತಾದವುಗಳನ್ನು ಹೆಚ್ಚಾಗಿ ಬಳಸಿ ಖರ್ಚನ್ನು ಕಡಿಮೆ ಮಾಡಿಕೊಳ್ಳುವುದು ಲಾಭದಾಯಕ. ಅವುಗಳನ್ನು ಮುಂಗಾರಿನ ಪ್ರಾರಂಭದಲ್ಲಿ ಬಿತ್ತಿ, ಹೂವು ಬಿಡುವ ಮುಂಚೆ ಮಣ್ಣಿಗೆ ಸೇರಿಸಬೇಕು.

೮) ಜೈವಿಕ ಗೊಬ್ಬರಗಳ ಬಳಕೆ ಹೆಚ್ಚಾಗುವಂತೆ ನೋಡಿಕೊಳ್ಳಬೇಕು.

೯) ತೋಟದಲ್ಲಿನ ಮಣ್ಣು ಕೊಚ್ಚಿ ಹೋಗುವುದನ್ನು ತಪ್ಪಿಸಬೇಕು.

೧೦) ಕಾಲಕಾಲಕ್ಕೆ ಅಂತರ ಬೇಸಾಯಮಾಡಿ ಕಳೆಗಳು ಬಾರದಂತೆ ಮಾಡುವುದು ಅಗತ್ಯ. ಅಂತರಬೇಸಾಯ ಹಗುರವಾಗಿರಬೇಕು.

೧೧) ಸೂಕ್ತ ಅಂತರ ಬೆಳೆಗಳನ್ನು ಬೆಳೆದು ಲಾಭ ಹೊಂದಬಹುದು.

೧೨) ಮಾವು, ಸಪೋಟ ಮುಂತಾದವುಗಳ ನಡುವಣ ಖಾಲಿ ಜಾಗದಲ್ಲಿ ಸೀಬೆಯನ್ನು ನೆಟ್ಟು ಹೆಚ್ಚಿನ ಲಾಭ ಪಡೆದುಕೊಳ್ಳಬಹುದು.

೧೩) ಮಿಶ್ರ ಬೆಳೆಗಳನ್ನು ಬೆಳೆದರೆ ಹೆಚ್ಚಿನ ಲಾಭ ಸಾಧ್ಯ.

೧೪) ಕಸಿಗಿಡಗಳನ್ನು ನೆಡುವಾಗ ಕಸಿಗಂಟು ನೆಲ ಮಟ್ಟದಿಂದ ೧೫ ಸೆಂ.ಮೀ. ಎತ್ತರದಲ್ಲಿರುವುದು ಅಗತ್ಯ.

೧೫) ಗಿಡಗಳನ್ನು ಹೆಪ್ಪು ಸಮೇತ, ತಂಪು ಹೊತ್ತಿನಲ್ಲಿ ನೆಡುವುದು ಒಳ್ಳೆಯದು.

೧೬) ಅವುಗಳಿಗೆ ಸೂಕ್ತ ಆಹಾರ ಒದಗಿಸಬೇಕು.

೧೭) ಕಾಲಕಾಲಕ್ಕೆ ಪೋಷಣೆ ಮತ್ತು ನೀರು ಒದಗಿಸುವುದನ್ನು ಮರೆಯಬಾರದು.

೧೮) ತೋಟದಲ್ಲಿ ಶುಚಿತ್ವ ಅಗತ್ಯ.

೧೯) ಗಿಡಗಳ ಬುಡಭಾಗದಿಂದ ಹಾಗೂ ಬೇರು ಸಸಿಯಲ್ಲಿ ಮೂಡುವ ಚಿಗುರವನ್ನು ಕೂಡಲೇ ಚಿವುಟಿಹಾಕಬೇಕು. ಅದೇ ರೀತಿ ನೀರ್ಚಿಗುರನ್ನೂ ಸಹ ಸವರಿ ತೆಗೆಯಬೇಕು.

೨೦) ಗಿಡಗಳ ಎಲ್ಲಾ ರೆಂಬೆಗಳಿಗೆ ಬಿಸಿಲು ಬೆಳಕು ಸಿಗುವಂತೆ ಮಾಡಬೇಕು.

೨೧) ಸೂಕ್ಷ್ಮ ಪೋಷಕಾಂಶಗಳ ಕೊರತೆ ಕಂಡುಬಂದಲ್ಲಿ ತಜ್ಞರ ಸಲಹೆಯನ್ನು ಪಡೆದುಕೊಳ್ಳುವುದು ಉತ್ತಮ.

೨೨) ಪ್ರಾರಂಭದ ಒಂದು ಇಲ್ಲವೇ ಎರಡು ವರ್ಷಗಳವರೆಗೆ ಬಿಟ್ಟ ಹೂವನ್ನು ಕಿತ್ತು ಹಾಕಿದರೆ, ಗಿಡಗಳು ಹೆಚ್ಚು ಕಸುವಿನಿಂದ ಬೆಳೆಯಬಲ್ಲವು.

೨೩) ವರ್ಷದ ಉದ್ದಕ್ಕೆ ಅಲ್ಪಸ್ವಲ್ಪ ಫಸಲನ್ನು ತೆಗೆದುಕೊಳ್ಳುವುದರ ಬದಲಾಗಿ ಯಾವುದಾದರೂ ಒಂದು ಲಾಭದಾಯಕ ಫಸಲನ್ನು ತೆಗೆದುಕೊಳ್ಳುವುದು ಉತ್ತಮ. ಅದರಿಂದ ಗಿಡಗಳು ಆರೋಗ್ಯವಾಗಿರಬಲ್ಲವು.

೨೪) ಹೀಚು ಬಹಳಷ್ಟು ಉದುರುತ್ತಿದ್ದಲ್ಲಿ ಸೂಕ್ತ ಸಾಮರ್ಥ್ಯದ ಪ್ಲಾನೋಫಿಕ್ಸ್‌ಸಿಂಪಡಿಸಿ, ಹಾಗಾಗುವುದನ್ನು ನಿಲ್ಲಿಸಬಹುದು.

೨೫) ಅಗತ್ಯವಿದ್ದಲ್ಲಿ ಮಾತ್ರ ರೆಂಬೆಗಳನ್ನು ಬಿಲ್ಲಿನಂತೆ ಬಗ್ಗಿಸಿ ಕಟ್ಟಬೇಕು. ಅದರಿಂದ ಹೆಚ್ಚು ಚಿಗುರು ಮತ್ತು ಫಸಲು ಸಾಧ್ಯ.

೨೬) ತೋಟದಲ್ಲಿ ಒಂದೆರಡು ಜೇನು ಹುಟ್ಟುಗಳಿದ್ದರೆ ಪರಾಗಸ್ಪರ್ಶಕ್ಕೆ ಅನುಕೂಲ.

೨೭) ಹಣ್ಣನ್ನು ಜೋಪಾನವಾಗಿ ಕಿತ್ತು ಸಾಗಿಸಬೇಕು.

೨೮) ಅವುಗಳನ್ನು ವಿವಿಧ ದರ್ಜೆಗಳನ್ನಾಗಿ ವಿಂಗಡಿಸಿ ಮಾರಾಟಮಾಡುವುದು ಸೂಕ್ತ.

೨೯) ಫಸಲಿನ ಭಾರಕ್ಕೆ ರೆಂಬೆಗಳು ನೆಲದ ಕಡ ಬಾಗಿ ಮುರಿದುಬೀಳುವ ಸಾಧ್ಯತೆ ಇರುತ್ತದೆ. ಅದನ್ನು ತಪ್ಪಿಸಲು ಆಸರೆ ಒದಗಿಸಿ ಕಟ್ಟಬೇಕಕು.

೩೦) ಉದುರಿಬಿದ್ದ ಹಣ್ಣುಗಳನ್ನು ಆರಿಸಿ ಹೂತಿಡಬೇಕು.

೩೧) ಸಸ್ಯ ಸಂರಕ್ಷಣೆ ಅತ್ಯಗತ್ಯ, ಸಕಾಲದಲ್ಲಿ ಮಾಡಬೇಕು.

೩೨) ಜೈವಿಕ ಕೀಟನಾಶಕ ಹಾಗೂ ರೋಗನಾಶಕಗಳನ್ನು ಬಳಸುವುದು ಒಳ್ಳೆಯದು.

೩೩) ಫಸಲಿಗೆ ನಿರೀಕ್ಷಿಸಿದ ಬೆಲೆ ಸಿಗದೇ ಇದ್ದಾಗ ಹೆಚ್ಚು ಆದಾಯ ಕೊಡುವ ಪದಾರ್ಥಗಳನ್ನು ತಯಾರಿಸಬಹುದು.

೩೪) ಉತ್ತಮ ಗುಣಮಟ್ಟದ ಹಾಗೂ ಹೆಚ್ಚು ಫಸಲುಬಿಡುವ ಮರಗಳನ್ನು ಸಸ್ಯಾಭಿವೃದ್ಧಿಗೆ ಬಳಸಿಕೊಳ್ಳಬಹುದು.

೩೫) ಸಾಗಾಣಿಕೆಯಲ್ಲಿ ಹಣ್ಣು ಹಾಳಾಗದಂತೆ ನೋಡಿಕೊಳ್ಳಬೇಕು.

೩೬) ತೋಟದ ಯಾವುದೇ ಕೆಲಸ ಕಾರ್ಯಗಳನ್ನು ಮಾಡಿದನಂತರ ದಿನಚರಿಯನ್ನು ಬರೆದಿಡುವುದು ಒಳ್ಳೆಯ ಕ್ರಮ.