ಹೊಸದಾಗಿ ತೋಟವನ್ನು ಮಾಡುವಾಗ ಬೇಲಿಯ ನಿರ್ಮಾಣ, ಗಾಳಿ ತಡೆಯನ್ನು ಎಬ್ಬಿಸುವುದು ಮತ್ತು ಭೂಮಿಯ ಸಿದ್ಧತೆ ಮುಂತಾದವುಗಳಿಗೆ ರೈತರು ಹೆಚ್ಚು ಗಮನ ಕೊಡಬೇಕು. ಸುಭದ್ರವಾದ ಬೇಲಿ ದನಕರುಗಳಿಗಷ್ಟೇ ಅಲ್ಲದೆ ದಾರಿಹೋಕರಿಂದಲೂ ರಕ್ಷಣೆ ದೊರಕಿಸಿಕೊಡುತ್ತದೆ. ಬೇಲಿಯ ಒಳ ಅಂಚಿನ ಉದ್ದಕ್ಕೆ ಮೀಟರ್ ಅಂತರದಲ್ಲಿ ಎಬ್ಬಿಸಿದ ಗಾಳಿ ತಡೆ, ಬಿಸಿಗಾಳಿ ಮತ್ತ್ತು ಶೈತ್ಯ ಹವೆಯಿಂದ ಗಿಡಗಳನ್ನು ರಕ್ಷಿಸುತ್ತದೆ. ಅಲ್ಲದೆ ಸಿಲ್ವರ್ ಓಕ್, ಸರ್ವೆ, ನೇರಳೆ ಮುಂತಾದ ಮರಗಳನ್ನು ಗಾಳಿ ತಡೆಯಾಗಿ ಎಬ್ಬಿಸಿದಾಗ, ಅವು ಕಟಾವಿಗೆ ಬಂದಾಗ ರೈತನಿಗೆ ಸಾಕಷ್ಟು ಆದಾಯವನ್ನು ತರಬಲ್ಲವು. ತೋಟದ ನಿರ್ಮಾಣಕ್ಕೆ ಬುನಾದಿಯಾದ ಎರಡು ಪದ್ಧತಿಗಳ ಜೊತೆಗೆ ಭೂಮಿಯನ್ನು ಸಿದ್ಧಗೊಳಿಸುವುದು, ಗಿಡಗಳ ಆಯ್ಕೆ ಮತ್ತು ಅವುಗಳನ್ನು ನೆಡುವ ಕ್ರಮಗಳ ಪ್ರಾಮುಖ್ಯತೆ ಬಗ್ಗೆ ಪ್ರಸ್ತುತ ಅಧ್ಯಾಯದಲ್ಲಿ ಚರ್ಚಿಸಲಾಗಿದೆ.

ಬೇಲಿಯನಿರ್ಮಾಣ

ಸಪೋಟ ಗಿಡಗಳನ್ನು ನೆಡುವ ಮುಂಚೆ ತೋಟದ ಸುತ್ತ ಬಲವಾದ ಬೇಲಿಯನ್ನು ಎಬ್ಬಿಸುವುದು ಅಗತ್ಯ. ಅದು ಸಜೀವ ಬೇಲಿಯಾಗಿರಬಹುದು ಇಲ್ಲವೇ ಮುಳ್ಳು ತಂತಿಯ ಬೇಲಿಯಾಗಿರಬಹುದು. ಭದ್ರವಾದ ಹಾಗೂ ಎತ್ತರವಿರುವ ಬೇಲಿಯಾದರೆ ದನಕರು, ಕುರಿ, ಮೇಕೆ, ದಾರಿಹೋಕರು ಮುಂತಾಗಿ ತೋಟದೊಳಗೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಅದರಿಂದ ತೋಟದೊಳಗಿನ ಗಿಡಗೆಂಟೆ, ಫಸಲು ಸುರಕ್ಷಿತವಾಗಿರಬಲ್ಲವು.

ಈ ಉದ್ದೇಶಕ್ಕೆ ಸೀಮೆ ಹುಣಸೆ, ಕತ್ತಾಳೆ, ಕಳ್ಳಿ ಮುಂತಾದುವುಗಳನ್ನು ನೆಟ್ಟು ಬೆಳೆಸುವುದುಂಟು. ಅದೇ ರೀತಿ ಟಿಕೋಮ, ವಿಷಮದಾರಿ, ಸರ್ವೆ, ಬೋಗೆನ್‌ವಿಲ್ಲಿಯ ಮುಂತಾಗಿ ಸಹ ನೆಟ್ಟು ಬೆಳೆಸಬಹುದು. ಅಂತಹ ಗಿಡಗಳನ್ನು ಸೂಕ್ತ ಎತ್ತರಕ್ಕೆ ಮೊಟಕು ಮಾಡಿ ಒಪ್ಪಮಾಡಿದರೆ ನೋಡಲು ಚೆನ್ನಾಗಿರುತ್ತದೆ.

ಮುಳ್ಳು ತಂತಿಯ ಬೇಲಿಗೆ ಕಲ್ಲು ಕಂಬ ಅಥವಾ ಸಿಮೆಂಟ್ ಇಲ್ಲವೇ ಮರದ ಕಂಬಗಳು ಬೇಕಾಗುತ್ತವೆ. ಅವುಗಳಿಗೆ ಬೆಲೆ ಜಾಸ್ತಿ. ತೋಟದ ಸುತ್ತ ಸಾಲಾಗಿ ಪ್ರತಿ ೩ ಮೀ. ಗೊಂದರಂತೆ ಅವುಗಳನ್ನು ನೆಟ್ಟು ೪-೫ ಎಳೆ ಮುಳ್ಳು ತಂತಿಯನ್ನು ಅಡ್ಡಲಾಗಿ ಬಿಗಿಯಬಹುದು. ಕಂಬಗಳನ್ನು ೦. ೬ ಮೀ. ಆಳಕ್ಕೆ ನೆಟ್ಟರೆ ಅವು ಜಗ್ಗುವುದಿಲ್ಲ. ಮುಳ್ಳುತಂತಿಯ ಎಳೆಗಳನ್ನು ಒಂದರ ಮೇಲೊಂದರಂತೆ ತಡಕೆ ರೂಪದಲ್ಲಿ ೩೦ ಸೆಂ. ಮೀ. ಅಂತರ ಕೊಟ್ಟು ಬಿಗಿದಲ್ಲಿ, ಭದ್ರವಾಗಿರುತ್ತದೆ. ಇನ್ನೂ ಕೆಲವರು ಮುಳ್ಳು ತಂತಿಗಳನ್ನು ಹೊರ ಅಂಚಿನಲ್ಲಿ ಉದ್ದಕ್ಕೆ ಚುಚ್ಚಿ ಬೇಲಿ ನಿರ್ಮಿಸುರ್ತ್ತಾರೆ.

ಗಾಳಿಯತಡೆ

ತೋಟದೊಳಗಿನ ಗಿಡಮರಗಳು ಗಾಳಿಯಿಂದ ಸುರಕ್ಷಿತವಾಗಿರಬೇಕಾದರೆ ಸುತ್ತ ಬಲವಾದ ಹಾಗೂ ಎತ್ತರವಿರುವ ಗಾಳಿ ತಡೆಯನ್ನು ಎಬ್ಬಿಸಬೇಕು. ಬೇಲಿಯ ಒಳ ಅಂಚಿನಲ್ಲಿ ಉದ್ದಕ್ಕೆ ಗಾಳಿ ತಡೆ ಇದ್ದಲ್ಲಿ ಬಿಸಿಗಾಳಿ, ಶೈತ್ಯ ಹವೆ ಹಾಗೂ ಬಲವಾದ ಗಾಳಿಗಳಿಂದ ಸಪೋಟ ಮರಗಳಿಗೆ ಅಗತ್ಯ ರಕ್ಷಣೆ ಸಾಧ್ಯವಾಗುತ್ತದೆ. ಈ ಉದ್ದೇಶಕ್ಕೆ ಮಾವು, ನೇರಳೆ, ಹುಣಿಸೆ, ಸಿಲ್ವರ್ಓಕ್, ಸರ್ವೆ ಮುಂತಾದುವು ಸೂಕ್ತವಿರುತ್ತವೆ. ಅವು ಬೀಜ ಊರಿ ಬೆಳೆದ ಸಸಿಗಳಾದಲ್ಲಿ ಉತ್ತಮ. ಒಂದು ವೇಳೆ ತೋಟದ ಸುತ್ತ ಅದು ಸಾಧ್ಯವಾಗದೇ ಹೋದಲ್ಲಿ ಕಡೇ ಪಕ್ಷ ಬಲವಾದ ಗಾಳಿ ಬೀಸುವ ದಿಕ್ಕಿನಲ್ಲಾದರೂ ಅವುಗಳನ್ನು ನೆಟ್ಟು ಬೆಳೆಸಬೇಕು. ಅವುಗಳ ಎತ್ತರದ ಮೂರು ನಾಲ್ಕು ಪಟ್ಟು ದೂರದವರೆಗೆ ಅವು ರಕ್ಷಿಸಬಲ್ಲವು.

ಬೇಲಿಯ ಒಳ ಅಂಚಿನ ಉದ್ದಕ್ಕೆ ೨-೩ ಮೀ. ಅಂತರದಲ್ಲಿ ಗಾಳಿ ತಡೆಯ ಗಿಡಗಳನ್ನು ನೆಟ್ಟು ಬೆಳೆಸಬೇಕು. ಒಂದು ಸಾಲಿಗಿಂತ ಅವುಗಳನ್ನು ಎರಡು ಸಾಲುಗಳಲ್ಲಿ ತ್ರಿಕೋನಾಕಾರದಲ್ಲಿ ನೆಟ್ಟು ಬೆಳೆಸಿದ್ದೇ ಆದರೆ ಇನ್ನೂ ಹೆಚ್ಚಿನ ರಕ್ಷಣೆ ಸಾಧ್ಯ. ಅವು ಬೆಳೆದಂತೆಲ್ಲಾ ರೆಂಬೆಗಳು ದಟ್ಟವಾಗಿ ಹರಡುತ್ತವೆ. ಅವುಗಳ ಬೇರು ಸಮೂಹ ಸಪೋಟ ಮರಗಳ ಬೇರು ಸಮೂಹದೊಂದಿಗೆ ತೇವ, ಬಿಸಿಲು-ಬೆಳಕು ಹಾಗೂ ಪೋಷಕಾಂಶಗಳಿಗೆ ಸ್ಪರ್ಧಿಸಬಾರದು. ಸಪೋಟ ಗಿಡಗಳ ಸಾಲಿಗೂ ಮತ್ತು ಗಾಳಿ ತಡೆ ಸಾಲಿಗೂ ಮಧ್ಯೆ ಸಾಕಷ್ಟು ಅಂತರವಿರಬೇಕು. ಒಂದು ವೇಳೆ ಅಗತ್ಯವೆನಿಸಿದರೆ ಅವುಗಳ ನಡುವೆ ಉದ್ದಕ್ಕೆ ಕಿರಿದಾದ ಹಾಗೂ ೬೦-೯೦ ಸೆಂ. ಮೀ. ಆಳದ ಕಾಲುವೆ ತೆಗೆಯಬೇಕಾಗುತ್ತದೆ. ಹೀಗೆ ಮಾಡಿದಲ್ಲಿ ಅವುಗಳ ಬೇರುಗಳಿಂದ ಅಪಾಯವಿರುವುದಿಲ್ಲ. ಮಳೆಗಾಲದ ಪ್ರಾರಂಭದಲ್ಲಿ ಗಾಳಿ ತಡೆ ಸಸಿಗಳನ್ನು ಸಿದ್ಧಗೊಳಿಸಿದ ತಗ್ಗು ಕಾಲುವೆ ಅಥವಾ ಗುಂಡಿಗಳಲ್ಲಿ ನೆಟ್ಟಿದ್ದೇ ಆದರೆ ಅವು ಬೇರು ಬಿಟ್ಟು ಚೆನ್ನಾಗಿ ಬೆಳೆಯಬಲ್ಲವು. ಒಂದು ವೇಳೆ ಒಣ ಹವೆಯೇನಾದರೂ ಇದ್ದರೆ ಅವುಗಳಿಗೆ ಪಾತಿ ಮಾಡಿ ಕೈ ನೀರು ಕೊಡಬೇಕು.

ಭೂಮಿಯಸಿದ್ಧತೆ

ಭೂಮಿಯನ್ನು ಒಂದೆರಡು ಸಾರಿ ಆಳವಾಗಿ ಉಳುಮೆ ಮಾಡಿ ಗಿಡ ಗೆಂಟೆಗಳನ್ನು ಬೇರು ಸಹಿತ ಕಿತ್ತು ಹಾಕಿ, ಸಮ ಮಾಡಬೇಕು. ಮೇಲ್ಮಣ್ಣು ಫಲವತ್ತಾಗಿರುತ್ತದೆಯಾದ್ದರಿಂದ ಅದನ್ನು ಜೋಪಾನ ಮಾಡಿಡುವುದು ಅಗತ್ಯ. ಒಂದು ವೇಳೆ ಬಹಳಷ್ಟು ಇಳಿಜಾರು ಇದ್ದದ್ದೇ ಆದರೆ ಸೂಕ್ತ ಅಂತರದಲ್ಲಿ ಸಮಪಾತಳಿ ಬದುಗಳನ್ನು ಇಲ್ಲವೇ ಜಗಲಿ ಕಟ್ಟೆಗಳನ್ನು ನಿರ್ಮಿಸಬೇಕು. ಅದರಿಂದ ಮೇಲ್ಮಣ್ಣು ಕೊಚ್ಚಿಹೋಗುವುದು ತಪ್ಪುತ್ತದೆ. ಅದೇ ರೀತಿ ಬಿದ್ದ ಮಳೆಯ ನೀರು ಆಯಾ ತಾಕುಗಳಲ್ಲಿಯೇ ಸಂಗ್ರಹಗೊಂಡು ಗಿಡಗಳಿಗೆ ಬಹುಕಾಲ ತೇವವನ್ನು ಒದಗಿಸಬಹುದು.

ಗಿಡಗಳನ್ನು ನೆಡುವುದಕ್ಕಿಂತ ಒಂದು ತಿಂಗಳ ಮುಂಚೆ ಶಿಫಾರಸು ಮಾಡಿದ ಅಂತರದಲ್ಲಿ ಒಂದು ಘನ ಮೀಟರ್ ಗಾತ್ರದ ಗುಂಡಿಗಳನ್ನು ತೆಗೆದು ಬಿಸಿಲಿಗೆ ಬಿಡಬೇಕು. ಈ ಕೆಲಸಕ್ಕೆ ಮೇ ತಿಂಗಳು ಸೂಕ್ತವಿರುತ್ತದೆ. ಸಪೋಟ ಗಿಡಗಲಿಗೆ ೧೦ ಮೀ. ಅಂತರವನ್ನು ಕೊಡಬೇಕಾಗುತ್ತದೆ. ಈ ಅಂತರದಲ್ಲಿ ಹೆಕ್ಟೇರಿಗೆ ೧೦೦ ಗಿಡಗಳು ಹಿಡಿಸುತ್ತವೆ. ಈ ಹಣ್ಣಿನ ಬೆಳೆಯಲ್ಲಿ ಸಾಮಾನ್ಯವಾಗಿ ಗಿಡಗಳನ್ನು ಚೌಕಾಕಾರದಲ್ಲಿ ನೆಡುತ್ತಾರೆ.

ಗುಂಡಿಗಳನ್ನು ತೆಗೆಯುವಾಗ ೩೦ ಸೆಂ. ಮೀ. ಅಳದ ಮೇಲ್ಮಣ್ಣನ್ನು ಒಂದು ಮಗ್ಗುಲಲ್ಲಿಯೂ ಮತ್ತು ಉಳಿದ ಕೆಳಪದರಗಳ ಮಣ್ಣನ್ನು ಇನ್ನೊಂದು ಮಗ್ಗುಲಲ್ಲಿಯೂ ಹಾಕಬೇಕು. ಗುಂಡಿಗಳು ಬಿಸಿಲಿಗೆ ಸಿಕ್ಕಿ ಚೆನ್ನಾಗಿ ಒಣಗಿದನಂತರ ಅವುಗಳನ್ನು ಮೇಲ್ಮಣ್ಣು ಮತ್ತು ಗೊಬ್ಬರಗಳ ಮಿಶ್ರಣದಿಂದ ತುಂಬಿ ಅನಂತರ ಒಳಮಣ್ಣನ್ನು ಹರಡಬೇಕು. ಕೆಲವರು ಪ್ರತಿ ಗುಂಡಿಗೆ ೫-೬ ಕೆಜಿಗಳಷ್ಟು ಹಸಿರೆಲೆ ಗೊಬ್ಬರ ಸೇರಿಸುತ್ತಾರೆ. ಹೀಗೆ ತುಂಬಬಿದಾಗ ಮಿಶ್ರಣ ನೆಲಮಟ್ಟದಿಂದ ೧೦-೧೫ ಸೆಂ. ಮೀ. ಎತ್ತರದಲ್ಲಿರುವುದು ಒಳ್ಳೆಯದು. ಹೀಗೆ ಭರ್ತಿ ಮಾಡಿದನಂತರ ತೆಳ್ಳಗೆ ನೀರು ಕೊಟ್ಟರೆ ಇಲ್ಲವೇ ಮಳೆ ಬಿದ್ದರೆ ಅದು ಚೆನ್ನಾಗಿ ಕುಳಿತುಕೊಳ್ಳುತ್ತದೆ.

ಮಹಾರಾಷ್ಟ್ರದಲ್ಲಿ ಪ್ರತಿ ಗುಂಡಿಗೆ ೩೦ ಕೆಜಿ ಕುರಿಗೊಬ್ಬರ ಮತ್ತು ೧. ೨೫ ಕೆಜಿ ಮೂಳೆಗೊಬ್ಬರ ಹಾಕುವ ರೂಢಿ ಇದೆ. ಕರ್ನಾಟಕದಲ್ಲಿ ಪ್ರತಿ ಗುಂಡಿಗೆ ೪೦ ಕೆಜಿ ಕೊಟ್ಟಿಗೆ ಗೊಬ್ಬರ ಹಾಕುತ್ತಾರೆ.

ಗಿಡಗಳಆಯ್ಕೆಮತ್ತುನೆಡುವಿಕೆ

ಸಪೋಟ ಗಿಡಗಳ ಆಯ್ಕೆ ಬಹುಮುಖ್ಯವಾದುದು ಕಸಿ ಹಾಗೂ ಗೂಟಿ ಗಿಡಗಳೆರಡೂ ಬಳಕೆಯಲ್ಲಿವೆ. ಕಸಿ ಗಿಡಗಳಾದಲ್ಲಿ ಬೇರುಸಸಿ ಮತ್ತು ಕಸಿ ಕೊಂಬೆಗಳು ಒಂದಕ್ಕೊಂದು ಚೆನ್ನಾಗಿ ಬೆಸೆದುಕೊಂಡಿರಬೇಕು. ಗಿಡಗಳ ಕಾಂಡ ನೆಟ್ಟಗಿದ್ದು ನಯವಾಗಿರಬೇಕು. ಅವುಗಳಲ್ಲಿ ಸಾಕಷ್ಟು ಕವಲು ರೆಂಬೆಗಳಿದ್ದು, ಅಧಿಕ ಸಂಖ್ಯೆಯ ದಟ್ಟ ಹಸುರಿನ ಎಲೆಗಳಿರಬೇಕು. ಗಿಡಗಳ ವಯಸ್ಸು ನೆಡುವ ಸಮಯಕ್ಕೆ ಒಂದು ವರ್ಷದಷ್ಟಾದರೂ ಇರಬೇಕು. ದೃಢವಾದ ಹಾಗೂ ಆರೋಗ್ಯದಿಂದ ಕೂಡಿದ ಗಿಡಗಳನ್ನು ಮಾತ್ರವೇ ಆರಿಸಬೇಕು. ಆ ಸಮಯಕ್ಕೆ ಕಾಂಡ ೧ ಸೆಂ. ಮೀ. ಗಿಂತ ದಪ್ಪವಿರುತ್ತದೆ. ಗೂಟಿ ಗಿಡಗಳಾದಲ್ಲಿ ಅವು ದೃಢವಾಗಿ, ನೆಟ್ಟಗಿದ್ದು ಒಳ್ಳೆಯ ಬೇರು ಸಮೂಹದಿಂದ ಕೂಡಿರಬೇಕು. ಅವುಗಳಲ್ಲಿ ಸಾಕಷ್ಟು ಎಲೆಗಳಿರುವುದು ಅಗತ್ಯ. ಬಹಳಷ್ಟು ಹಳೆಯ ಗಿಡಗಳಾದಲ್ಲಿ ಅವುಗಳ ಬೇರು ಸಮೂಹ ಪೊದೆಯಂತಾಗಿ, ಸುತ್ತಿಕೊಂಡಿರುತ್ತದೆ.

ಕಾಲ : ಗಿಡಗಳನ್ನು ನೆಡಲು ಮಳೆಗಾಲದ ಪ್ರಾರಂಭ ಅಂದರೆ ಜೂನ್ ತಿಂಗಳು ಉತ್ತಮ. ಮಳೆಗಾಲದ ಪ್ರಾರಂಭದಲ್ಲಿ ನೆಟ್ಟಿದ್ದೇ ಆದರೆ ಗಿಡಗಳು ಮಳೆ ನೀರಿನ ಲಾಭ ಹೊಂದಿ ಚೆನ್ನಾಗಿ ಬೇರು ಬಿಟ್ಟು ಸ್ಥಿರಗೊಳ್ಳಲು ಅನುಕೂಲ. ನೆಡುವ ಮುಂಚೆ ಮಳೆಯಾಗದೇ ಇದ್ದಲ್ಲಿ ಗುಂಡಿಗಳಿಗೆ ತೆಳ್ಳಗೆ ನೀರು ಕೊಡಬೇಕು. ಗಿಡಗಳನ್ನು ತಂಪು ಹೊತ್ತಿನಲ್ಲಿ ನೆಡಬೇಕು. ಮಳೆಯಾಗುವ ಅಥವಾ ಮೋಡ ಕವಿದ ವಾತಾವರಣವಿದ್ದಾಗ ದಿನದ ಯಾವ ಹೊತ್ತಿನಲ್ಲಾದರೂ ನೆಡಬಹುದು. ಸಂಜೆಯ ಇಳಿ ಹೊತ್ತಿನಲ್ಲಿ ನೆಡುವುದು ಒಳ್ಳೆಯದು. ಹೀಗೆ ಮಾಡಿದಲ್ಲಿ ಗಿಡಗಳು ಬಾಡುವುದಿಲ್ಲ. ಗಿಡಗಳನ್ನು ಹೆಪ್ಪುಸಮೇತ ನೆಡಬೇಕು. ಪ್ರತಿ ಗುಂಡಿಗೆ ಒಂದರಂತೆ ಗಿಡಗಳನ್ನು ನೆಡಬೇಕು. ನೆಡುವ ಮುಂಚೆ ಗುಂಡಿಯ ಮಧ್ಯಭಾಗದಲ್ಲಿ ಹೆಪ್ಪು ಹಿಡಿಸುವಷ್ಟೇ ತಗ್ಗು ತೆಗೆದು, ಕುಂಡ ಅಥವಾ ಪ್ಲಾಸ್ಟಿಕ್ ಚೀಲದಿಂದ ಹೊರತೆಗೆದ ಗಿಡವನ್ನು ತಗ್ಗಿನಲ್ಲಿ ನೆಟ್ಟಗೆ ನಿಲ್ಲಿಸಿ, ಬುಡದ ಸುತ್ತ ಹಸಿಮಣ್ಣನ್ನು ಹರಡಿ ಚೆನ್ನಾಗಿ ಅದುವಿ ಅನಂತರ ಸುತ್ತ ತುಳಿಯಬೇಕು. ಕಸಿಗಿಡಗಳಾದಲ್ಲಿ ಕಸಿ ಗಂಟು ನೆಲಮಟ್ಟದಿಂದೆ ೧೫ ಸೆಂ. ಮೀ. ಎತ್ತರದಲ್ಲಿರುವಂತೆ ಎಚ್ಚರ ವಹಿಸಬೇಕು. ಗಿಡಗಳನ್ನು ನೆಟ್ಟನಂತರ ಬಾಧೆ ಇದ್ದಲ್ಲಿ ಪ್ರತಿಗುಂಡಿಗೆ ೧೦ ಗ್ರಾಂ ಹೆಪ್ಟಾಕ್ಲೋರ್ ಪುಡಿ ಇಲ್ಲವೇ ೫೦ ಗ್ರಾಂ ಬೇವಿನ ಹಿಂಡಿಯನ್ನು ಹಾಕಬೇಕು.