ಸಪೋಟದಲ್ಲಿ ಅಧಿಕ ಇಳುವರಿ ಪಡೆಯಲು ಉತ್ತಮ ಗುಣಮಟ್ಟದ ಸಸಿಯ ಆಯ್ಕೆ ಅತಿ ಮುಖ್ಯ. ಸಸಿಗಳನ್ನು ಪಡೆಯಲು ಇರುವ ಎರಡು ಮುಖ್ಯ ವಿಧಾನಗಳೆಂದರೆ : ಬೀಜ ಪದ್ಧತಿ ಮತ್ತು ನಿರ್ಲಿಂಗ ಪದ್ಧತಿ. ಮೊದಲನೆಯ ವಿಧಾನದಿಂದ ನಿಧಾನವಾಗಿ ಫಲಕ್ಕೆ ಬರುವ ದೊಡ್ಡ ಮರಗಳನ್ನು ಪಡೆಯಬಹುದಾದರೆ ಎರಡನೆಯ ವಿಧಾನದಲ್ಲಿ ತಾಯಿ ಗಿಡಗಳನ್ನೇ ಹೋಲುವ, ಹೆಚ್ಚು ಇಳುವರಿ ಕೊಡಬಲ್ಲ, ಗಿಡ್ಡ ಮರಗಳನ್ನು ಪಡೆಯಬಹುದು. ಗೂಟಿ ಪದ್ಧತಿಯಲ್ಲಿ ರೆಂಬೆಗಳಲ್ಲಿ ಬೇರು ಬರುವಂತೆ ಮಾಡಲು ರೆಂಬೆಗಳನ್ನು ಬಗ್ಗಿಸಿ ನೆಲದಲ್ಲಿ ಊರಲಾಗುವುದು ಕಸಿ ಪದ್ಧತಿಯಲ್ಲಿ ಸಾಮೀಪ್ಯ ಕಸಿ, ಪಾರ್ಶ್ವಕಸಿ, ಮೆತು ಕಟ್ಟಿಗೆ ಕಸಿ ಬಳಕೆಯಲ್ಲಿವೆ. ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ. ಇದರೊಂದಿಗೆ ಬೇರು ಸಸಿಗಳನ್ನು ಎಬ್ಬಿಸುವ ವಿಧಾನ, ಗೂಟಿ ಮತ್ತು ಕಸಿ ಗಿಡಗಳ ಜಯಾಪಜಯದ ಬಗ್ಗೆಯೂ ಸಹ ಅಧ್ಯಾಯದಲ್ಲಿ ಚರ್ಚಿಸಲಾಗಿದೆ.

ಸಪೋಟ ಬೆಳೆಯನ್ನು ಬೀಜಬಿತ್ತಿ ಇಲ್ಲವೇ ನಿರ್ಲಿಂಗ ವಿಧಾನಗಳಲ್ಲಿ ವೃದ್ಧಿಮಾಡಬಹುದು. ವಾಣಿಜ್ಯವಾಗಿ ಅನುಸರಿಸುವುದು ನಿರ್ಲಿಂಗ ವಿಧಾನಗಳನ್ನೇ. ಬೀಜ ಪದ್ಧತಿಯಲ್ಲಿ ಹಲವಾರು ಅನಾನುಕೂಲಗಳಿವೆ.

ಬೀಜಪದ್ಧತಿ

ಹಿಂದೆ ಬೀಜ ಸಸಿಗಳನ್ನು ನೆಟ್ಟು ಬೆಳೆಸುತ್ತಿದ್ದರು. ಆದರೆ ಅಂತಹ ಸಸಿಗಳು ಬೇಗ ಬೆಳೆದು ಫಸಲು ಬಿಡುವುದಿಲ್ಲ. ಚೊಚ್ಚಲ ಫಸಲು ಬಿಡಲು ೮-೧೦ ವರ್ಷ ಬೇಕು. ಅಂತಹ ಮರಗಳು ಗಾತ್ರದಲ್ಲಿ ಬಲು ದೊಡ್ಡವಿದ್ದು ಬಹಳಷ್ಟು ಎತ್ತರಕ್ಕೆ ಬೆಳೆಯುತ್ತವೆ. ಅವು ತಾಯಿ ಪೀಳಿಗೆಯಂತೆ ಇರುವುದಿಲ್ಲ.

ಉತ್ತಮ ಗುಣಮಟ್ಟದ, ದೊಡ್ಡಗಾತ್ರದ ಹಣ್ಣನ್ನು ಬಿಡುವ ಹಾಗೂ ಅಧಿಕ ಫಸಲನ್ನು ಬಿಡುವ ತಾಯಿ ಮರಗಳನ್ನು ಗುರುತಿಸಿ, ಅವುಗಳಿಂದ ಕೊಯ್ಲು ಮಾಡಿದ ಹಣ್ಣುಗಳಿಂದ ಬೇರ್ಪಡಿಸಿದ ಗಟ್ಟಿ ಬೀಜವನ್ನು ಮರಳು ಮತ್ತು ಮಣ್ಣುಗಳನ್ನು ತುಂಬಿದ ಮಣ್ಣಿನ ಪಾತ್ರೆಗಳಲ್ಲಿ ಇಲ್ಲವೇ ಎತ್ತರಿಸಿದ ಒಟ್ಲು ಪಾತಿಗಳಲ್ಲಿ ಬಿತ್ತಿ ನೀರು ಕೊಡುತ್ತಿದ್ದಲ್ಲಿ ಅವು ಮೊಳೆತು ಬೆಳೆಯುತ್ತವೆ. ಬೀಜಕವಚ ಬಲು ಗಡುಸು. ಆದ್ದರಿಂದ ಬೀಜವನ್ನು ನೀರಿನಲ್ಲಿ ಒಂದೆರಡು ದಿವಸಗಳವರೆಗೆ ನೆನೆಸಿಟ್ಟು ಇಲ್ಲವೇ ಮರಳು ಕಾಗದದ ಮೇಲೆ ಹಗುರವಾಗಿ ಉಜ್ಜಿ ಬಿತ್ತಿದರೆ ಬೇಗ ಮೊಳೆಯುತ್ತವೆ. ಸೂಕ್ತ ಸಾಮರ್ಥ್ಯದ ಜಿಬ್ಬೆರೆಲ್ಲಿಕ್ ಆಮ್ಲದ ದ್ರಾವಣದಲ್ಲಿ ಬೀಜವನ್ನು ನೆನೆಸಿಟ್ಟು ಬಿತ್ತಿದಲ್ಲಿ ಅವು ಅಧಿಕ ಸಂಖ್ಯೆಯಲ್ಲಿ ಮೊಳೆಯುವುದಾಗಿ ತಿಳಿದುಬಂದಿದೆ. ಅಷ್ಟೇ ಅಲ್ಲದೆ ಅಂತಹ ಸಸಿಗಳ ಬೆಳವಣಿಗೆ ತೀವ್ರವಿರುತ್ತದೆ. ತೀರಾ ಹಳೆಯ ಬೀಜವನ್ನು ಬಿತ್ತಬಾರದು. ಅವುಗಳ ಮೊಳೆಯುವ ಸಾಮರ್ಥ್ಯ ಕಡಿಮೆ ಇರುತ್ತದೆ. ಸಾಕಷ್ಟು ಬೇರು ಬಂದಾಗ ಅವುಗಳನ್ನು ಜೋಪಾನವಾಗಿ ಹೆಪ್ಪುಸಮೇತ ಕಿತ್ತು ಗುಂಡಿಗಳಿಗೆ ವರ್ಗಾಯಿಸಬಹುದು.

ನಿರ್ಲಿಂಗವಿಧಾನ

ಇದು ಹೆಚ್ಚು ರೂಢಿಯಲ್ಲಿರುವ ವಿಧಾನ. ಇದರಲ್ಲಿ ಹಲವಾರು ಅನುಕೂಲಗಳಿವೆ. ಅವುಗಳೆಂದರೆ ಈ ರೀತಿಯಲ್ಲಿ ವೃದ್ಧಿಪಡಿಸಿದ ಗಿಡಗಳು ತಾಯಿ ಪೀಳಿಗೆಯಂತೆ ಇರುವುದು, ಬೇಗ ಫಸಲು ಬಿಡುವುದು, ಗಿಡ್ಡ ಮರಗಳನ್ನು ಉತ್ಪಾದಿಸುವುದು, ಸುಲಭ ನಿರ್ವಹಣೆ ಸೂಕ್ತವಿರುವ ಮರಗಳ ಗಾತ್ರ, ಸೂಕ್ತ ಬೇರು ಸಸಿಯ ಮೇಲೆ ಕಸಿಮಾಡಿದಾಗ ಅದರ ಪ್ರಚೋದನೆಯ ಲಾಭ ಲಭ್ಯವಿರುವುದು. ಆದರೆ ಈ ವಿಧಾನದಲ್ಲಿ ವೃದ್ಧಿಮಾಡಲು ಹೆಚ್ಚಿನ ಸವಲತ್ತುಗಳು ಹಾಗೂ ಅನುಭವ ಅಗತ್ಯ. ನಿರ್ಲಿಂಗ ವಿಧಾನದಲ್ಲಿನ ಮುಖ್ಯ ಪದ್ಧತಿಗಳೆಂದರೆ ೧) ರೆಂಬೆಗಳಿಂದ ಬೇರು ಬರಿಸುವ ಪದ್ಧತಿ, ೨) ಕಸಿ ಪದ್ಧತಿ ಮತ್ತು ೩) ಊತಕ ಸಾಕಣೆ.

. ರೆಂಬೆಗಳಿಂದ ಬೇರು ಬರಿಸುವ ಪದ್ಧತಿ

ಇದಕ್ಕೆ ಇಂಗ್ಲೀಷ್‌ನಲ್ಲಿ ಲೇಯರಿಂಗ್ ಎನ್ನುತ್ತರೆ. ಇದರಲ್ಲಿನ ಮುಖ್ಯ ಪದ್ಧತಿಗಳೆಂದಾರೆ (i) ಗೂಟಿ (ii) ರೆಂಬೆಗಳನ್ನು ಬಗ್ಗಿಸಿ ನೆಲದಲ್ಲಿ ಊರುವುದು ಮತ್ತು (iii) ರೆಂಬೆಗಳನ್ನು ಕುಂಡಗಳಲ್ಲಿ ಊರಿ, ಬೇರು ಬಿಡುವಂತೆ ಮಾಡುವುದು.

(i) ಗೂಟಿ ಪದ್ಧತಿ : ಇದಕ್ಕೆ ಏರ್ ಲೇಯರಿಂಗ್, ಮಾರ್ಕಟ್ಟೇಜ್, ಚೈನೀಸ್ ಲೇಯರಿಂಗ್ ಎಂದೂ ಕರೆಯುತ್ತಾರೆ. ಸಪೋಟ ಸುಲಭವಾಗಿ ಬೇರು ಬಿಡದಂತಹ ಮರ. ಈ ಪದ್ಧತಿಯಿಂದ ತೀರಾ ಕಡಿಮೆ ಅವಧಿಯಲ್ಲಿ ಒಳ್ಳೆಯ ಗಾತ್ರದ ಸಸಿಗಳನ್ನು ಪಡೆಯಬಹುದು. ನೆಲಮಟ್ಟಕ್ಕೆ ಬಗ್ಗಿಸಲು ಸಾಧ್ಯವಿಲ್ಲದ ರೆಂಬೆಗಳಲ್ಲೂ ಸಹ ಬೇರು ಬರುವಂತೆ ಮಾಡಬಹುದು. ಎತ್ತರದಲ್ಲಿರುವ ರೆಂಬೆಗಳ ತೊಗಟೆ ಸುಲಿದು ತೇವದಿಂದ ಕೂಡಿದ ಮಾಧ್ಯಮ ಹೊದಿಸಿ, ಪ್ಲಾಸ್ಟಿಕ್ ಹಾಳೆ ಸುತ್ತಿ ಗಾಳಿಯಾಡದಂತೆ ತುದಿಗಳಲ್ಲಿ ಬಿಗಿದು ಕಟ್ಟಿದರೆ ಸಾಕು. ಆದರೆ ಈ ರೀತಿಯಲ್ಲಿ ವೃದ್ಧಿಮಾಡಿ ಬೆಳೆದ ಗಿಡಗಳ ಬೇರುಸಮೂಹ ಮಣ್ಣಿನಲ್ಲಿ ಆಳವಾಗಿ ಇಳಿಯುವುದಿಲ್ಲ ಹಾಗೂ ಬಲವಾದ ಗಾಳಿ ಬೀಸಿದಲ್ಲಿ ಅಂತಹ ಗಿಡಗಳು ಬೇರುಸಮೇತ ಮುರಿದು ಸಾಯುವ ಸಂಭವವಿರುತ್ತದೆ. ಇಂತಹ ಸಮಸ್ಯೆ ಮರಳು ಮಣ್ಣಿನ ಭೂಮಿಗಳಲ್ಲಿ ಜಾಸ್ತಿ. ಕೆಲವೊಂದು ತಳಿಗಳ ರೆಂಬೆಗಳಲ್ಲಿ ಬೇರು ಸುಲಭವಾಗಿ ಮೂಡುವುದಿಲ್ಲ. ಗೂಟಿ ಮರಗಳ ಹಣ್ಣಿನ ತಿರುಳು ತಿನ್ನಲು ಹರಳುಗಳಂತಿರುತ್ತದೆ ಎಂಬ ನಂಬಿಕೆ ಮಹಾರಾಷ್ಟ್ರದಲ್ಲಿದೆ.

ಗೂಟಿ ಪದ್ಧತಿಗೆ ಮಳೆಗಾಲದ ಪ್ರಾರಂಭ ಬಲುಸೂಕ್ತ. ಈ ಅವಧಿಯಲ್ಲಿ ಗಾಳಿಯಲ್ಲಿ ಹೆಚ್ಚಿನ ಆರ್ದ್ರತೆ ಇರುವುದರ ಜೊತೆಗೆ ಉಷ್ಣತೆ ಅನುಕೂಲವಿರುತ್ತದೆ. ಬೇರು ಬಿಡಲು ರೆಂಬೆಗಳ ಕಸುವೂ ಸಹ ನೆರವಾಗುತ್ತದೆ. ಸಾಕಷ್ಟು ಸಂಖ್ಯೆಯ ಎಲೆಗಳಿಂದ ಕೂಡಿದ; ಆರೋಗ್ಯಕರವಿರುವ, ಒಂದರಿಂದ ಎರಡು ವರ್ಷಗಳ ವಯಸ್ಸಿನ, ೧ ರಿಂದ ೧. ೫ ಸೆಂ. ಮೀ. ಗಾತ್ರದ, ೪೫ ರಿಂದ ೬೦ ಸೆಂ. ಮೀ. ಉದ್ದದ ಬಲಿತ ರೆಂಬೆಗಳನ್ನು ಆರಿಸಿಕೊಳ್ಳಬೇಕು. ದಪ್ಪ ರೆಂಬೆಗಳಾದಲ್ಲಿ ತೊಗಟೆ ಸುಲಭವಾಗಿ ಕಿತ್ತು ಬರುವುದಿಲ್ಲ. ಅವುಗಳ ತುದಿಯಿಂದ ೩೦-೪೫ ಸೆಂ. ಮೀ. ಕೆಳಗೆ ೨. ೫-೫. ೦ ಸೆಂ. ಮೀ. ಅಗಲದ ತೊಗಟೆಯನ್ನು ಉಂಗುರಕಾರದಲ್ಲಿ ಬಿಡಿಸಿ ತೆಗೆಯಬೇಕು. ಈ ಕೆಲಸಕ್ಕೆ ಹರಿತವಿರುವ ಚಾಕುವನ್ನು ಬಳಸುವುದು ಒಳ್ಳೆಯದು. ತೊಗಟೆ ಮತ್ತು ಕಟ್ಟಿಗೆಗಳ ನಡುವೆ ಲೋಳೆಯಂತಹ ಜಾರು ಪದಾರ್ಥವಿರುತ್ತದೆ. ಇದೇ ಕೇಂಬಿಯಂ ಅಥವಾ ಕೂಡು ಪದರ. ಅದನ್ನು ಒರೆಸಿ ಹಾಕಬೇಕು. ತೊಗಟೆ ಬಿಡಿಸುವಾಗ ಕಟ್ಟಿಗೆ ಭಾಗಕ್ಕೆ ಹಾನಿಯಾಗದಂತೆ ಎಚ್ಚರ ವಹಿಸುವುದು ಅಗತ್ಯ. ಅನಂತರ ನೀರಲ್ಲಿ ತೊಯ್ಯಿಸಿ ಒದ್ದೆ ಮಾಡಿದ ಸ್ಫ್ಯಾಗ್ನಂಮಾಸ್, ವರ್ಮಿಕ್ಯುಲೈಟ್ ಅಥವಾ ಮತ್ತಾವುದಾದರೂ ಸೂಕ್ತ ಮಾಧ್ಯಮವನ್ನು ತೊಗಟೆಗಾಯದ ಉದ್ದಕ್ಕೆ ಹೊದಿಸಿ ಉರುಳೆಯಂತೆ ಮಾಡಿ ಪ್ಲಾಸ್ಟಿಕ್ ಹಾಳೆಯಿಂದ ಸುತ್ತಿ ಎರಡೂ ತುದಿಗಳಲ್ಲಿ ಬಿಗಿದು ಕಟ್ಟಬೇಕು. ಹೀಗೆ ಗೂಟಿ ಕಟ್ಟಿದ ಸುಮಾರು ಮೂರು ತಿಂಗಳಲ್ಲಿ ತೊಗಟೆ ಕಚ್ಚಿನ ಮೇಲ್ಭಾಗದಲ್ಲಿ ಬೇರು ಕಾಣಿಸಿಕೊಳ್ಳುತ್ತವೆ. ತೊಗಟೆ ಗಾಯದ ಮೇಲ್ಭಾಗಕ್ಕೆ ಸೂಕ್ತ ಪ್ರಮಾಣದ ಇಂಡೋಲ್ ಬ್ಯುಟೈರಿಕ್ ಆಮ್ಲ, ನ್ಯಾಪ್ತಲಿನ್ ಅಸೆಟಿಕ್ ಆಮ್ಲ ಅಥವಾ ಮತ್ತಾವುದಾದರೂ ಚೋದಕವನ್ನು ಹಚ್ಚಿದರೆ ಅಧಿಕ ಸಂಖ್ಯೆಯಲ್ಲಿ ಬೇರು ಬಿಡುತ್ತವೆ. ಸಾಮಾನ್ಯವಾಗಿ ೧೦೦೦ ಪಿಪಿಎಂ ಸಾಮರ್ಥ್ಯದ ಚೋದಕವನ್ನು ಬಳಸುತ್ತಾರೆ. ಅಂತಹ ಬೇರು ಬಲಿಷ್ಟವಿರುತ್ತವೆ. ಕೆಲವೊಮ್ಮೆ ಮಾಧ್ಯಮ ಒಣಗುವುದುಂಟು. ಅಂತಹ ಸಂದರ್ಭಗಳಲ್ಲಿ ಹಾಳೆಯನ್ನು ಜೋಪಾನವಾಗಿ ಬಿಚ್ಚಿ, ನೀರು ಚಿಮುಕಿಸಿ ಮತ್ತೆ ಕಟ್ಟಬೇಕು. ಕೆಲವೊಮ್ಮೆ ಕಾಗೆ ಮುಂತಾದುವು ಪ್ಲಾಸ್ಟಿಕ್ ಹಾಳೆಯನ್ನು ಕುಕ್ಕಿ ತೂತು ಮಾಡುವುದುಂಟು. ಆಗಿಂದಾಗ್ಗೆ ಕಣ್ಣಾಡಿಸಿ ಅವುಗಳನ್ನು ಸರಿಪಡಿಸಬೇಕು.

ಸಾಕಷ್ಟು ಬೇರು ಮೂಡಿದನಂತರ ರೆಂಬೆಗಳ ಬುಡಭಾಗದ ಕಚ್ಚಿನಿಂದ ಸ್ವಲ್ಪ ಕೆಳಕ್ಕೆ ಕಚ್ಚು ಕೊಡಬೇಕು. ಅದನ್ನು ಎರಡು ಮೂರು ಹಂತಗಳಲ್ಲಿ ಆಳ ಮಾಡಿ ತಾಯಿ ಮರದಿಂದ ಬೇರ್ಪಡಿಸಬೇಕು. ಅನಂತರ ಪ್ಲಾಸ್ಟಿಕ್ ಸುರುಳಿಯನ್ನು ಬಿಚ್ಚಿ ತೆಗೆದು, ಗೊಬ್ಬರ ಮತ್ತು ಮಣ್ಣುಗಳ ಮಿಶ್ರಣ ತುಂಬಿದ ಕುಂಡಗಳಲ್ಲಿ ನೆಟ್ಟು, ನೀರು ಕೊಡಬೇಕು. ಅವುಗಳನ್ನು ನೆರಳಲ್ಲಿಟ್ಟು ನೀರು ಕೊಡುತ್ತಿದ್ದಲ್ಲಿ, ಚೇತರಿಸಿಕೊಂಡು ಬೆಳೆಯಲು ಪ್ರಾರಂಭಿಸುತ್ತವೆ. ಸುಮಾರು ಒಂದು ವರ್ಷದಲ್ಲಿ ಅವು ಸೂಕ್ತ ಎತ್ತರಕ್ಕೆ ಬೆಳೆದು, ನೆಡಲು ಸಿದ್ದವಿರುತ್ತವೆ. ಗೂಟಿ ಕಟ್ಟದ ರೆಂಬೆಗಳಲ್ಲಿ ಹೂವು, ಕಾಯಿಗಳಿದ್ದರೆ ಅವುಗಳನ್ನು ಕಿತ್ತು ಹಾಕಬೇಕು.

ii) ರೆಂಬೆಗಳನ್ನು ಬಗ್ಗಿಸಿ, ನೆಲದಲ್ಲಿ ಊರುವುದು (ಗ್ರೌಂಡ್ ಲೇಯರಿಂಗ್) : ಇದು ವಾಣಿಜ್ಯ ಪದ್ಧತಿಯಲ್ಲ. ಆದಾಗ್ಯೂ ಮಹಾರಾಷ್ಟ್ರದಲ್ಲಿ ಸ್ವಲ್ಪ ಮಟ್ಟಿಗೆ ಅನುಸರಿಸುತ್ತಾರೆ. ನೆಲಮಟ್ಟಕ್ಕೆ ತೀರಾ ಹತ್ತಿರವಿರುವ ಉದ್ದನಾದ ರೆಂಬೆಗಳನ್ನು ಬಗ್ಗಿಸಿ, ತುದಿಯಿಂದ ೩೦-೪೫ ಸೆಂ. ಮೀ. ಕೆಳಗೆ ಕಚ್ಚು ಮಾಡಿ ನಾಲಿಗೆಯನ್ನು ಬಿಡಿಸಲಾಗುತ್ತದೆ. ಹೀಗೆ ನಾಲಿಗೆ ಕಚ್ಚು ಬಿಡಿಸುವಾಗ ಚಾಕು ರೆಂಬೆಗಳ ತುದಿಯತ್ತ ಇಳಿಜಾರಾಗಿ ಇಳಿಯಬೇಕು. ಈ ಕಚ್ಚುಗಳು ಒಂದರಲ್ಲೊಂದು ಕೂಡಿ ಬೆಸೆಯದಂತಿರಲು ಅವುಗಳ ಮಧ್ಯೆ ಅಡ್ಡಲಾಗಿ ಒಣ ಕಡ್ಡಿಯ ತುಂಡು ಇಲ್ಲವೇ ತೆಳ್ಳನೆಯು ಚಕ್ಕೆಯ ಚೂರನ್ನಿಟ್ಟರೆ ಸಾಕು. ನಾಲಿಗೆ ಕಚ್ಚು ಸುಮಾರು ೫ ಸೆಂ. ಮೀ. ಉದ್ದವಿರುತ್ತದೆ. ಅನಂತರ ಆ ಭಾಗವನ್ನು ಹಸಿಮಣ್ಣಿನಲ್ಲಿ ಊರಿ ಅದರ ಮೇಲೆ ಮತ್ತಷ್ಟು ಹಸಿ ಮಣ್ಣನ್ನು ಹರಡಿ ಅನಂತರ ತೆಳ್ಳನೆಯ ಕಲ್ಲನ್ನಿಟ್ಟರೆ ಅದು ಗಾಳಿಗೆ ಅಲುಗಾಡುವುದಿಲ್ಲ. ಇದಕ್ಕೆ ಜೂನ್-ಜುಲೈ ಸೂಕ್ತ ಕಾಲ, ಸೆಪ್ಟೆಂಬರ್‌ವರೆಗೂ ಮುಂದುವರೆಸಬಹುದು. ಸುಮಾರು ೨-೩ ತಿಂಗಳುಗಳಲ್ಲಿ ಸಾಕಷ್ಟು ಬೇರು ಮೂಡುತ್ತವೆ. ಸುಮಾರು ಒಂದು ತಿಂಗಳ ನಂತರ ರೆಂಬೆಗಳನ್ನು ತಾಯಿಮರದಿಂದ ಬೇರ್ಪಡಿಸಿ ಕುಂಡಗಳಿಗೆ ವರ್ಗಾಯಿಸಬಹುದು. ಹೀಗೆ ಕುಂಡಗಳಿಗೆ ವರ್ಗಾಯಿಸಿದನಂತರ ಅವುಗಳನ್ನು ನೆರಳಲ್ಲಿಟ್ಟು ನೀರು ಹಾಕುತ್ತಿದ್ದಲ್ಲಿ ಅವು ಚೇತರಿಸಿಕೊಂಡು ಬೆಳೆಯಲು ಪ್ರಾರಂಭಿಸುತ್ತವೆ. ಮುಂದಿನ ಮುಂಗಾರಿನಲ್ಲಿ ಅವು ನೆಡಲು ಸಿದ್ಧವಿರುತ್ತವೆ.

iii) ರೆಂಬೆಗಳನ್ನು ಕುಂಡದಲ್ಲಿ ಊರಿ ಬೇರು ಬರಿಸುವಿಕೆ (ಪಾಟ್ ಲೇಯರಿಂಗ್) : ಅಗಲಬಾಯಿಯ ಹಾಗೂ ಗಿಡ್ಡನಾದ ಮಣ್ಣಿನ ಪಾತ್ರೆಯ ಕಂಠಭಾಗದಲ್ಲಿ ಎದುರುಬದುರಾಗಿ “V” ಆಕಾರದ ಕಚ್ಚುಗಳನ್ನು ಮಾಡಲಾಗಿರುತ್ತದೆ. ಇಂತಹ ಪಾತ್ರೆಗೆ “ಪರಲಿ” ಎಂದು ಹೆಸರು. ಚೆನ್ನಾಗಿ ಸುಟ್ಟ ಮಣ್ಣಿನ ಪಾತ್ರೆಗಳನ್ನು ಬಳಸಬೇಕು.

. ಕಸಿ ಪದ್ಧತಿ

ಕಸಿಗಿಡಗಳು ಬೀಜಸಸಿಗಳಿಗಿಂತ ಬೇಗ ಹೂವು ಬಿಟ್ಟು ಕಾಯಿ ಕಚ್ಚುತ್ತವೆ. ಅವು ಬೇರು ಸಸಿಯ ಕೆಲವೊಂದು ಅಮೂಲ್ಯ ಗುಣಗಳನ್ನು ಹೊಂದಿದ್ದು ಪ್ರತಿಕೂಲ ಪರಿಸ್ಥಿತಿಗಳು ಇಲ್ಲವೇ ಉತ್ತಮ ಗುಣಮಟ್ಟ ಹಾಗೂ ಅಧಿಕ ಪ್ರಮಾಣದ ಫಸಲನ್ನು ಬಿಡುವ ಗುಣಗಳನ್ನು ಹೊಂದಿರುತ್ತವೆ. ಈ ಪದ್ಧತಿಗೆ ಸೂಕ್ತ ಬೇರು ಸಸಿಯನ್ನು ಆರಿಸಿಕೊಂಡು ಅತ್ಯುತ್ತಮ ವಿಧಾನದಲ್ಲಿ ಕಸಿ ಮಾಡುವುದು ಅಗತ್ಯ. ಇದರಲ್ಲಿ ಇನ್ನೂ ಹಲವಾರು ಲಾಭಗಳಿವೆ. ಕಸಿ ಪದ್ಧತಿ ಜನಪ್ರಿಯ ಹಾಗೂ ವಾಣಿಜ್ಯವಾಗಿ ಅನುಸರಿಸುವ ಪದ್ಧತಿಯಾಗಿದೆ. ಗೂಟಿ ವಿಧಾನದಲ್ಲಿ ಬೇರು ಮೂಡಲು ಹೆಚ್ಚು ಸಮಯ ಹಿಡಿಸುತ್ತದೆಯಲ್ಲದೆ ಕೆಲವೊಂದು ತಳಿಗಳಲ್ಲಿ ಅವು ಹೆಚ್ಚಿನ ಸಂಖ್ಯೆಯಲ್ಲಿ ಸಾಯುತ್ತವೆ. ಹಾಗಾಗಿ ಕಸಿ ಪದ್ಧತಿಯನ್ನೇ ಹೆಚ್ಚಾಗಿ ಅನುಸರಿಸುತ್ತಾರೆ. ಇದರಲ್ಲಿ ಬೇರು ಸಸಿಯ ಲಾಭ ಸಾಧ್ಯ. ಅವು ಆಳವಾಗಿ ಇಳಿಯುವ ಬೇರು ಸಮೂಹವನ್ನು ಹೊಂದಿದ್ದು ಮಣ್ಣಿನ ತಳಪದರಗಳಿಂದ ತೇವವನ್ನು ಹೀರಿಕೊಳ್ಳಬಲ್ಲವು. ಬರಗಾಲದ ಪರಿಸ್ಥಿತಿಗಳನ್ನು ಗೂಟಿ ಗಿಡಗಳಿಗಿಂತ ಹೆಚ್ಚು ಸಮರ್ಥವಾಗಿ ಎದುರಿಸಬಲ್ಲವು. ಕಸಿ ಪದ್ಧತಿಯಲ್ಲಿ ಸಾಮೀಪ್ಯ ಕಸಿ, ಪಾರ್ಶ್ವಕಸಿ, ಮೆತುಕಡ್ಡಿ ಕಸಿ, ಕಣ್ಣು ಕೂಡಿಸಿ ಕಸಿ ಮಾಡುವುದು ಮುಂತಾದ ವಿಧಗಳಿವೆ.

(i) ಸಾಮೀಪ್ಯ ಕಸಿ (ಇನಾರ್ಚ್ ಕಸಿ) : ಈ ಪದ್ಧತಿ ಸುಮಾರು ಐವತ್ತು ವರ್ಷಗಳಿಗೂ ಮೇಲ್ಪಟ್ಟು ರೂಢಿಯಲ್ಲಿದೆ. ಇಂಗ್ಲೀಷ್‌ನಲ್ಲಿ ಇನಾರ್ಚಿಂಗ್ ಅಥವಾ ಅಪ್ರೋಚ್ ಗ್ರ್ಯಾಫ್ಟಿಂಗ್ ಎನ್ನುತ್ತಾರೆ. ಇದು ವಾಣಿಜ್ಯ ವಿಧಾನ. ಕುಂಡಗಳಲ್ಲಿ ಅಥವಾ ಪ್ಲಾಸ್ಟಿಕ್ ಚೀಲಗಳಲ್ಲಿ ಎಬ್ಬಿಸಿದ ಹಾಗೂ ಒಂದು ವರ್ಷ ವಯಸ್ಸಿನ ಬೀಜ ಸಸಿಗಳನ್ನು ಬೇರು ಸಸಿಗಳಾಗಿ ಬಳಸುತ್ತಾರೆ. ಈ ಬೇರು ಸಸಿಗಳನ್ನು ಕಸಿ ಕೊಂಬೆಗಳ ಪಕ್ಕಕ್ಕೆ ತರಲಾಗುವುದು. ಅವು ಒಂದೇ ದಪ್ಪ ಇದ್ದರೆ ಅನುಕೂಲ. ಒಂದು ವೇಳೆ ಕಸಿ ಕೊಂಬೆಗಳು ಎತ್ತರದಲ್ಲಿ ಇದ್ದದ್ದೇ ಆದರೆ ಅಟ್ಟಗಳನ್ನು ನಿರ್ಮಿಸಿ ಅವುಗಳ ಮೇಲೆ ಬೇರುಸಸಿಗಳನ್ನು ಇಡಲಾಗುವುದು.

ಬೇರುಸಸಿಯ ಕಾಂಡದಲ್ಲಿ ಸುಮಾರು ೫ ಸೆಂ. ಮೀ. ಉದ್ದದ ತೊಗಟೆ ಚಕ್ಕೆಗಳನ್ನು ಎಬ್ಬಿಸಬೇಕು. ಹರಿತವಿರುವ ಕಸಿ ಚಾಕುವನ್ನು ಬಳಸಿದರೆ ಈ ಕೆಲಸ ಸುಲಭಗೊಳ್ಳುತ್ತದೆ. ಅಷ್ಟೇ ಉದ್ದದ ಕಚ್ಚುಗಳನ್ನು ಕೊಟ್ಟು ಕಸಿ ಕೊಂಬೆಯಲ್ಲಿ ಸಹ ತೊಗಟೆ ಚಕ್ಕೆಗಳನ್ನು ಎಬ್ಬಿಸಿ, ಅವುಗಳನ್ನು ಎದುರು ಬದುರಾಗಿ ಜೋಡಿಸಿ ಪ್ಲಾಸ್ಟಿಕ್ ಪಟ್ಟಿಯಿಂದ ಬಿಗ್ಗಿಯಾಗಿ ಸುತ್ತಿ ಕಟ್ಟಬೇಕು. ಹೀಗೆ ಮಾಡಿದ ಸುಮ್ಕಾರು ೩೦-೪೫ ದಿನಗಳಲ್ಲಿ ಗಾಯಗಳು ಒಂದರಲ್ಲೊಂದು ಬೆಸೆದುಕೊಳ್ಳುತ್ತವೆ. ಹೀಗೆ ಕಸಿ ಕೊಂಬೆ ಮತ್ತು ಬೇರು ಸಸಿಗಳು ಚೆನ್ನಾಗಿ ಬೆಸೆದು ಒಂದಾದನಂತರ ಬೇರುಸಸಿಯ ತಲೆಯನ್ನು ಕಸಿ ಗಂಟಿನ ಸ್ವಲ್ಪ ಮೇಲೆ ಮತ್ತು ಕಸಿಕೊಂಬೆಯ ಬುಡವನ್ನು ಕಸಿ ಗಂಟಿನ ಸ್ವಲ್ಪ ಕೆಳಗೆ ಎರಡು ಮೂರು ಹಂತಗಳಲ್ಲಿ ಕಚ್ಚು ಕೊಟ್ಟು ಕತ್ತರಿಸಬೇಕು. ಹೀಗೆ ಮಾಡಿದಲ್ಲಿ ಗಿಡಗಳಿಗೆ ಆಘಾತವಿರುವುದಿಲ್ಲ. ಅನಂತರ ಅವುಗಳನ್ನು ನೆರಳಲ್ಲಿಟ್ಟು ನೀರು ಹಾಕುತ್ತಿದ್ದಲ್ಲಿ ಅವು ಬೇಗ ಚೇತರಿಸಿಕೊಂಡು ಬೆಳೆಯಲು ಅನುಕೂಲವಾಗುತ್ತದೆ. ಒಂದು ವರ್ಷದನಂತರ ಅವುಗಳನ್ನು ಗುಂಡಿಗಳಲ್ಲಿ ನೆಡಲು ಬಳಸಬಹುದು. ಕಸಿ ಮಾಡುವ ಎತ್ತರ ಬುಡದಿಂದ ೧೫ ಸೆಂ. ಮೀ. ಗಿಂತ ಮೇಲ್ಪಟ್ಟಿರಬೇಕು. ಈ ಕೆಲಸಕ್ಕೆ ಜೂನ್‌ನಿಂದ ಆಗಸ್ಟ್‌-ಸೆಪ್ಟೆಂಬರ್ ಸೂಕ್ತವಿರುತ್ತವೆ.

ಈ ಪದ್ಧತಿಯಲ್ಲಿ ಮತ್ತೊಂದು ವಿಧಾನವಿದೆ. ಬೇರುಸಸಿಯ ತಲೆಯನ್ನು ಸುಮಾರು ೩೦-೪೦ ಸೆಂ. ಮೀ. ಎತ್ತರದಲ್ಲಿ ಸವರಿ, ಮೇಲ್ಮುಖನಾಗಿ ಇಳಿಜಾರು ಕಚ್ಚುಕೊಟ್ಟು ಚೂಪಾಗುವಂತೆ ಮಾಡುವುದು. ಆಗ ಅದರ ತುದಿ ಬೆಣೆಯಂತೆ ಕಾಣುವುದು. ಅಷ್ಟೇ ಉದ್ದಗಲಗಳ ಕಚ್ಚನ್ನು ಕಸಿಕೊಂಬೆಯಲ್ಲಿ ಮೇಲ್ಮುಖನಾಗಿ ಕೊಟ್ಟು ನಾಲಿಗೆಯನ್ನು ಎಬ್ಬಿಸಬೇಕು. ಬೇರು ಸಸಿಯ ಚೂಪು ತುದಿಯನ್ನು ಕಸಿಕೊಂಬೆಯ ನಾಲಿಗೆ ಕಚ್ಚುಗಳ ನಡುವೆ ತೂರಿಸಿ ಬಿಗಿದು ಕಟ್ಟಬೇಕು. ಬೇರುಸಸಿ ಮತ್ತು ಕಸಿ ಕೊಂಬೆಗಳು ಪರಸ್ಪರ ಬೆಸೆದು ಒಂದಾದನಂತರ ಕಸಿ ಕೊಂಬೆಯ ಬುಡವನ್ನು ಕಸಿ ಗಂಟಿನ ಸ್ವಲ್ಪ ಕೆಳಕ್ಕೆ ಕಚ್ಚು ಕೊಟ್ಟು ಸವರಬೇಕು. ಆಗ ಅದು ಬೇರ್ಪಡುತ್ತದೆ. ಅನಂತರ ಅವುಗಳನ್ನು ನೆರಳಲ್ಲಿಟ್ಟು ನೀರು ಹಾಕುತ್ತಿದ್ದರೆ ಅವು ಚೇತರಿಸಿಕೊಂಡು ಬೆಳೆಯಲು ಪ್ರಾರಂಭಿಸುತ್ತವೆ.

(ii) ಪಾರ್ಶ್ವ ಕಸಿ : ಇದರಲ್ಲಿ ಕಸಿ ಮಾಡುವ ಮುಂಚೆ ಬೇರುಸಸಿಯ ತಲೆಯನ್ನು ಸವರಬೇಕಾಗಿಲ್ಲ. ಕಸಿ ಕೊಂಬೆಯ ಉದ್ದ ೯ ರಿಂದ ೧೨ ಸೆಂ. ಮೀ. ಇದ್ದರೆ ಸಾಕು. ಪೆನ್ಸಿಲ್ ಗಾತ್ರದ ಕಸಿಕೊಂಬೆಗಳನ್ನು ಆರಿಸಿಕೊಳ್ಳಬೇಕು. ಅದರ ತುದಿಯಲ್ಲಿ ಎರಡು ಅಥವಾ ಮೂರು ಚೆನ್ನಾಗಿ ಉಬ್ಬಿದ ಮೊಗ್ಗುಗಳಿರಬೇಕು. ಕಸಿ ಕೊಂಬೆಯ ಎಲೆಗಳನ್ನು ೮-೧೦ ದಿನಗಳ ಮೊದಲೇ ಸವರಿ ತೆಗೆದರೆ ಮೊಗ್ಗುಗಳು ಉಬ್ಬಲು ಅನುಕೂಲವಾಗುತ್ತದೆ. ಕಸಿ ಕೊಂಬೆಯ ಬುಡಭಾಗದ ಎರಡೂ ಮಗ್ಗುಲಲ್ಲಿ ಸುಮಾರು ೨. ೫-೫. ೦ ಸೆಂ. ಮೀ. ಉದ್ದದ ಇಳಿಜಾರು ಕಚ್ಚುಕೊಟ್ಟು ಚೂಪಾಗುವಂತೆ ಮಾಡಬೇಕು. ಒಳಮಗ್ಗುಲ ಕಚ್ಚು ಸ್ವಲ್ಪ ಉದ್ದನಾಗಿಯೂ ಮತ್ತು ಹೊರಮಗ್ಗುಲ ಕಚ್ಚು ಸ್ವಲ್ಪ ಗಿಡ್ಡನಾಗಿಯೂ ಇರುವುದು ಅಗತ್ಯ. ಅದೇ ರೀತಿ ಬೇರುಸಸಿಯ ಕಾಂಡದಲ್ಲಿ, ಸೂಕ್ತ ಎತ್ತರದಲ್ಲಿ, ೨೦-೨೫ ಡಿಗ್ರಿ ಕೋನದಲ್ಲಿ ಕೆಳಮುಖನಾಗಿ ಇಳಿಜಾರು ಕಚ್ಚುಕೊಟ್ಟು ಈ ಸೀಳುಗಳ ನಡುವೆ ಸಿದ್ಧಗೊಳಿಸಿದ ಕಸಿ ಕೊಂಬೆಯ ಚೂಪು ಭಾಗವನ್ನು ಇಳಿಸಿ, ಪ್ಲಾಸ್ಟಿಕ್ ಪಟ್ಟಿಯಿಂದ ಸುತ್ತಿ ಬಿಗಿದು ಕಟ್ಟಬೇಕು. ಕಸಿಭಾಗಕ್ಕೆ ಕಸಿ ಮೇಣ ಮೆತ್ತಿದರೆ ಗಾಳಿ ಒಳನುಗ್ಗುವುದಿಲ್ಲ. ಸುಮಾರು ಒಂದು ತಿಂಗಳಲ್ಲಿ ಕಸಿ ಕೊಂಬೆ ಮತ್ತು ಬೇರು ಸಸಿಗಳು ಒಂದರಲ್ಲೊಂದು ಬೆಸೆದುಕೊಳ್ಳುತ್ತವೆ. ಅನಂತರ ಬೇರುಸಸಿಯ ತಲೆಯನ್ನು ಕಸಿಗಂಟಿನ ಸ್ವಲ್ಪ ಮೇಲೆ ಸವರಿ ತೆಗೆದಲ್ಲಿ ಕಸಿಕೊಂಬೆ ಬೆಳೆಯಲು ಅನುಕೂಲವಾಗುತ್ತದೆ. ಈ ಪದ್ಧತಿಯಲ್ಲಿನ ಕೆಲವು ಲಾಭಗಳೆಂದರೆ : (೧) ಕಸಿ ಕೊಂಬೆಯನ್ನು ಎಷ್ಟು ದೂರದಿಂದಲಾದರೂ ತಂದು ಬಳಸಬಹುದು, (೨) ಈ ಪದ್ಧತಿಗೆ ಹೆಚ್ಚು ಸಸ್ಯ ಸಾಮಗ್ರಿ ಬೇಕಾಗಿಲ್ಲ, (೩) ಇದರಲ್ಲಿ ಅಧಿಕ ಯಶಸ್ಸು ಸಾಧ್ಯ, (೪) ಒಂದು ಕಸಿ ಕೊಂಬೆ ಹಾಳಾದರೆ ಮತ್ತೊಂದನ್ನು ಬಳಸಬಹುದು, ಇತ್ಯಾದಿ.

ಈ ಪದ್ಧತಿಗೆ ಜುಲೈ ತಿಂಗಳಾದರೆ ಹೆಚ್ಚು ಸೂಕ್ತ. ಕಸಿ ಗಂಟಿನ ಕೆಳಗೆ ಬಹಳಷ್ಟು ಚಿಗುರು ಬರುತ್ತಿರುತ್ತವೆ. ಅವುಗಳನ್ನು ಆಗಿಂದಾಗ್ಗೆ ಚಿವುಟಿ ಹಾಕಬೇಕು. ಹೀಗೆ ಸಿದ್ಧಗೊಳಿಸಿದ ಗಿಡಗಳನ್ನು ನೆರಳಲ್ಲಿಟ್ಟು ನೀರು ಹಾಕುತ್ತಿದ್ದಲ್ಲಿ ಅದರ ಮುಂದಿನ ವರ್ಷ ನೆಡಬಹುದು.

(iii) ಮೆತುಕಡ್ಡಿ ಕಸಿ : ಇತ್ತೀಚೆಗೆ ಈ ಪದ್ಧತಿಯನ್ನು ಹೆಚ್ಚಾಗಿ ಅನುಸರಿಸುತ್ತಾರೆ. ಇದು ಬಹಳ ಸುಲಭದ ಪದ್ಧತಿಯಾಗಿದೆ. ಕುಂಡ ಅಥವಾ ಪ್ಲಾಸ್ಟಿಕ್ ಚೀಲಗಳಲ್ಲಿ ಎಬ್ಬಿಸಿದ ಬೇರುಸಸಿಗಳ ಸೀಳುಗಳ ನಡುವೆ ಸಿದ್ಧಗೊಳಿಸಿದ ಕಸಿ ಕೊಂಬೆಯ ಬುಡಭಾಗವನ್ನು ಇಳಿ ಬಿಟ್ಟು ಕಸಿಮಾಡಲಾಗುತ್ತದೆ. ಆ ಸಮಯಕ್ಕೆ ಬೇರು ಸಸಿಗಳ ವಯಸ್ಸು ಒಂದು ವರ್ಷ ಅಥವಾ ಅದಕ್ಕೂ ಮೇಲ್ಪಟ್ಟು ಇದ್ದರೆ ಸೂಕ್ತ. ಅವುಗಳ ಕಾಂಡ ಒಂದು ಸೆಂ. ಮೀ. ದಪ್ಪ ಇರುವುದು ಅಗತ್ಯ. ಆಯ್ಕೆ ಮಾಡಿದ ತಾಯಿ ಮರದಲ್ಲಿ ಕಸಿ ಕಡ್ಡಿಗಳನ್ನು ಗುರುತಿಸಿ ಕಸಿ ಮಾಡುವುದಕ್ಕೆ ೧೦-೨೦ ದಿನ ಮುಂಚಿತವಾಗಿ ಅವುಗಳಲ್ಲಿನ ಎಲೆಗಳನ್ನು ಸವರಿ ತೆಗೆಯಬೇಕು. ಹೀಗೆ ಸವರಿದಾಗ ಎಲೆ ತೊಟ್ಟುಗಳ ಕೂಳೆಗಳಷ್ಟೇ ಇರಬೇಕು. ಈ ಅವಧಿಯಲ್ಲಿ ಕಸಿಕಡ್ಡಿಯ ತುದಿಯಲ್ಲಿನ ಮೊಗ್ಗುಗಳು ಚೆನ್ನಾಗಿ ಉಬ್ಬುತ್ತವೆ. ಎಲೆ ತೊಟ್ಟುಗಳ ಕೂಳೆಗಳು ತಮ್ಮಷ್ಟಕ್ಕೆ ತಾವೇ ಉದುರಿಬೀಳುತ್ತವೆ. ೧೦-೨೦ ಸೆಂ. ಮೀ. ಉದ್ದ ಇರುವಂತೆ ಕಸಿ ಕಡ್ಡಿಗಳನ್ನು ಕತ್ತರಿಸಿ ತೇವದ ಬಟ್ಟೆಯಲ್ಲಾಗಲ್ಲೀ ಇಲ್ಲವೆ ಗೋಣಿ ತಾಟಿನಲ್ಲಾಗಲೀ ಸುತ್ತಿಟ್ಟು ಕಸಿ ಮಾಡುವ ಜಾಗಕ್ಕೆ ತರಬೇಕು. ಅನಂತರ ಅವುಗಳ ಬುಡಭಾಗದ ಎರಡೂ ಕಡೆ ೨-೨. ೫ ಸೆಂ. ಮೀ. ಉದ್ದದ ಇಳಿಜಾರು ಕಚ್ಚುಕೊಟ್ಟು ಚೂಪಾಗುವಂತೆ ಮಾಡಬೇಕು.

ಬೇರು ಸಸಿಯ ತಲೆಯನ್ನು ೩೦-೪೫ ಸೆಂ. ಮೀ. ಎತ್ತರದಲ್ಲಿ ಅಡ್ಡಕ್ಕೆ ಸವರಿ, ಮಧ್ಯೆ ೨. ೫ ಸೆಂ. ಮೀ. ಆಳದ ಇಳಿಕಚ್ಚು ಮಾಡಿ, ಕಸಿ ಕಡ್ಡಿಯ ಚೂಪಾದ ಭಾಗವನ್ನು ಸೀಳುಗಳ ನಡುವೆ ಇಳಿಸಿ, ಕಚ್ಚುಗಳು ಒಂದಕ್ಕೊಂದು ಆತುಕೊಳ್ಳುವಂತೆ ಪ್ಲಾಸ್ಟಿಕ್ ಪಟ್ಟಿಯಿಂದ ಬಿಗಿಯಾಗಿ ಸುತ್ತಿ ಕಟ್ಟಬೇಕು. ಈ ಭಾಗಕ್ಕೆ ಸೂಕ್ಷ್ಮ ಹವೆ ಸಿಗುವಂತೆ ಮಾಡಿದಲ್ಲಿ ಅದು ಬಾಡುವುದಿಲ್ಲ. ಅಲ್ಲದೆ ಬೇರು ಸಸಿಯೊಂದಿಗೆ ಬೇಗ ಬೆಸೆದು ಚಿಗುರೊಡೆಯುತ್ತದೆ. ಅದಕ್ಕಾಗಿ ಕಸಿ ಮಾಡಿದ ಕೂಡಲೇ ಕಸಿ ಕಡ್ಡಿಯ ಮೇಲೆ ಪ್ಲಾಸ್ಟಿಕ್ ಹಾಳೆಯ ಕೊಳವೆಯನ್ನು ಅಥವಾ ಚೀಲವನ್ನು ಇಳಿಸಿ ಕಸಿಭಾಗದಿಂದ ಸ್ವಲ್ಪ ಕೆಳಗೆ ಕಟ್ಟಬೇಕು. ಸುಮಾರು ೩-೪ ವಾರಗಳಲ್ಲಿ ಅವೆರಡೂ ಬೆಸೆದು ಒಂದಾಗುತ್ತವೆ. ಸಾಕಷ್ಟು ಚಿಗುರು ಕಾಣಿಸಿಕೊಂಡಾಗ ಈ ಕೊಳವೆ ಅಥವಾ ಚೀಲವನ್ನು ಬಿಚ್ಚಿ ತೆಗೆಯಬೇಕು. ಈ ಕೆಲಸಕ್ಕೆ ಜೂನ್‌ನಿಂದ ಸೆಪ್ಟೆಂಬರ್ ಸೂಕ್ತವಿರುತ್ತದೆ. ಈ ಅವಧಿಯಲ್ಲಿ ನೂರಕ್ಕೆ ನೂರರಷ್ಟು ಯಶಸ್ಸು ಸಾಧ್ಯ. ನುರಿತ ಮಾಲಿ ದಿನಕ್ಕೆ ೪೦೦-೫೦೦ ಕಸಿಗಳನ್ನು ಕಟ್ಟಬಲ್ಲ. ಕುಳಿತಲ್ಲಿಯೇ ಕೆಲಸ ಮಾಡಬಹುದು ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕಸಿ ಕಟ್ಟಲು ಸಾಧ್ಯ. ಗುಣಿಗಳಲ್ಲಿಯೂ ಸಹ ಬೇರುಸಸಿ ಎಬ್ಬಿಸಿ, ಕಸಿ ಮಾಡಲಾಗುತ್ತದೆ. ಇನ್‌ಸಿಟು ಗ್ರ್ಯಾಫ್ಟಿಂಗ್‌ನಲ್ಲಿ ಗುಂಡಿಗಳನ್ನು ತಯಾರಿಸಿ, ತಲಾ ಒಂದರಂತೆ ಬೇರುಸಸಿಗಳನ್ನು ಎಬ್ಬಿಸಿ ಅವು ಸೂಕ್ತ ಎತ್ತರಕ್ಕೆ ಬೆಳೆದಾಗ ಮೆತುಕಡ್ಡಿ ಕಸಿ ವಿಧಾನ ಅನುಸರಿಸಿ ಕಸಿ ಮಾಡುತ್ತಾರೆ. ಇದರಲ್ಲಿ ಅನುಕೂಲವೆಂದರೆ ಕಸಿ ಮಾಡುವ ಹೊತ್ತಿಗೆ ಬೇರುಸಸಿ ಚೆನ್ನಾಗಿ ಬೇರು ಬಿಟ್ಟು ಸ್ಥಿರಗೊಂಡಿರುತ್ತದೆ.

ಪುನರುಜ್ಜೀವನ : ಕೆಲವೊಮ್ಮೆ ಸಪೋಟ ಮರಗಳ ಕಾಂಡದ ಬುಡಭಾಗದಲ್ಲಿನ ತೊಗಟೆ ಶಿಥಿಲಗೊಂಡು ಹಾಳಾಗುವುದುಂಟು. ಮೊಲ, ಹೆಗ್ಗಣಗಳು ತೊಗಟೆಯನ್ನು ಕಚ್ಚಿ ಹಾಳು ಮಾಡುವ ಸಾಧ್ಯತೆ ಇರುತ್ತದೆ. ಅದೇ ರೀತಿ ಕೀಟ ಅಥವಾ ರೋಗಾಣುಗಳೂ ಸಹ ಈ ರೀತಿಯ ಶಿಥಿಲಕ್ಕೆ ಕಾರಣವಾಗಬಹುದು. ಅಂತಹ ಸಂದರ್ಭಗಳಲ್ಲಿ ಶಿಥಿಲಗೊಂಡ ಗಿಡಮರಗಳಿಗೆ ಹೊಸಜೀವವನ್ನು ತುಂಬಬಹುದು. ಬುಡದಿಂದ ಸ್ವಲ್ಪ ದೂರದಲ್ಲಿ ಬೇರು ಸಸಿಗಳನ್ನು ನೆಟ್ಟು ಬೆಳೆಸಬೇಕು. ಶಿಥಿಲಗೊಂಡ ತೊಗಟೆಯನ್ನು ಒಂದೇ ಮಟ್ಟಕ್ಕೆ ಸವರಿ ಒಪ್ಪ ಮಾಡಿ, ೨. ೫-೫. ೦ ಸೆಂ. ಮೀ. ಆಳಕ್ಕೆ ಸಡಿಲ ಮಾಡಬೇಕು. ಅನಂತರ ಬೇರು ಸಸಿಗಳ ತಲೆಯನ್ನು ಸವರಿ, ಚೂಪು ಭಾಗವನ್ನು ತೊಗಟೆ ಮತ್ತು ಕಟ್ಟಿಗೆಗಳ ನಡುವೆ ತೂರಿಸಿ, ಬಿಗಿದು ಕಟ್ಟಬೇಕು. ಸುಮಾರು ಮೂರು ನಾಲ್ಕು ವಾರಗಳಲ್ಲಿ ಅವು ಬೆಸೆದು ಒಂದಾಗುತ್ತವೆ. ಹೀಗೆ ಮಾಡುವುದರಿಂದ ಶಿಥಿಲಗೊಂಡ ಮರಗಳಿಗೆ ಹೊಸ ಬಲ ಸಿಕ್ಕಂತಾಗುತ್ತದೆ. ಇದಕ್ಕೆ ಸೇತುವೆ. ಕಸಿ ಅಥವಾ ದುರಸ್ತಿ ಕಸಿ ಎನ್ನುತ್ತಾರೆ.

(iv) ಕಣ್ಣು ಕೂಡಿಸಿ ಕಸಿ ಮಾಡುವುದು (ಬಡ್ಡಿಂಗ್ ಅಥವಾ ಬಡ್‌ಗ್ರ್ಯಾಫ್ಟಿಂಗ್) : ಈ ಪದ್ಧತಿ ಕಡಿಮೆ ಖರ್ಚಿನಿಂದ ಕೂಡಿದ್ದು ಸುಲಭವಾಗಿ ಅನುಸರಿಸಬಹುದು. ಇಡೀ ಕಸಿ ಕೊಂಬೆಯ ಬದಲಾಗಿ ಒಂದೇ ಒಂದು ಕಸಿ ಮೊಗ್ಗನ್ನು ಬಳಸಿ ಕಸಿ ಮಾಡಬಹುದು. ಶ್ರೀಲಂಕಾದಲ್ಲಿ ಖಿರ್ನಿ ಬೇರು ಸಸಿಯನ್ನು ಬಳಸಿಕೊಂಡು ಈ ಪದ್ಧತಿಯನ್ನು ಅನುಸರಿಸುತ್ತಾರೆ. ತೀರ ಪ್ರದೇಶಗಳಿಗೆ ಬಲು ಸೂಕ್ತವಿರುವ ಪದ್ಧತಿ ಇದಾಗಿದೆ. ಹೆಚ್ಚು ಮಳೆಯಾಗುವ ಹಾಗೂ ಆರ್ದ್ರ ಹವೆ ಇರುವ ಪ್ರದೇಶಗಳಲ್ಲಿ ಈ ಪದ್ಧತಿಯನ್ನು ಅನುಸರಿಸಬಹುದು. ಈ ಕೆಲಸಕ್ಕೆ ಮೇ ತಿಂಗಳು ಸೂಕ್ತವಿರುತ್ತದೆ.

ಕಸಿಕಡ್ಡಿಯಲ್ಲಿನ ಚೆನ್ನಾಗಿ ಉಬ್ಬಿದ ಮೊಗ್ಗನ್ನು ತೊಗಟೆಯೊಂದಿಗೆ ಬಿಡಿಸಿ ತಿಗಿದು, ಬೇರುಸಸಿಯ ಕಾಂಡದಲ್ಲಿ ಕಚ್ಚು ಕೊಟ್ಟು ನಾಲಿಗೆಯಾಕಾರದಲ್ಲಿ ತೊಗಟೆಯನ್ನು ಸಡೆಲಗೊಳಿಸಿ, ಅವುಗಳ ನಡುವೆ ಕಸಿಮೊಗ್ಗನ್ನು ಇಳಿಸಿ, ಬಿಗಿದು ಕಟ್ಟಬೇಕು. ಕಸಿ ಮೊಗ್ಗು ಸ್ವಲ್ಪವಾಗಿ ಕಾಣುವಂತಿದ್ದರೆ ಉತ್ತಮ. ಕಸಿ ಮೊಗ್ಗು ಬೇರು ಸಸಿಯೊಂದಿಗೆ ಬೆಸೆದು ಒಂದಾದನಂತರ ಬೇರು ಸಸಿಯ ತಲೆಯನ್ನು ಕಸಿಗಂಟಿನ ಸ್ವಲ್ಪ ಮೇಲೆ ಸವರಿ ತೆಗೆಯಬೇಕು. ಸಾಮಾನ್ಯವಾಗಿ ತೇಪೆ ಪದ್ಧತಿಯನ್ನು ಹೆಚ್ಚಾಗಿ ಅನುಸರಿಸುತ್ತಾರೆ. ಆದರೆ ಇದು ವಾಣಿಜ್ಯ ವಿಧಾನವಲ್ಲ. ಎರಡು ವಾರಗಳನಂತರ ಪ್ಲಾಸ್ಟಿಕ್ ಪಟ್ಟಿಯ ಸುರುಳಿಯನ್ನು ಬಿಚ್ಚಿ ನೋಡಿದಲ್ಲಿ ಅದು ಕೂಡಿಕೊಂಡಿರುವುದನ್ನು ಕಾಣಬಹುದು. ಅದು ಕೂಡಿಕೊಂಡಿದ್ದಲ್ಲಿ ಹಸಿರಾಗಿರುತ್ತದೆ. ಹೀಗೆ ಪಟ್ಟಿಯನ್ನು ಬಿಚ್ಚಿತೆಗೆದ ಕೂಡಲೇ ಅದು ಚಿಗುರೊಡೆದು ಬೆಳೆಯಲು ಪ್ರಾರಂಭಿಸುತ್ತದೆ.

. ಊತಕ ಸಾಕಣೆ

ಇದಕ್ಕೆ ಅಂಗಾಂಶ ವಿಧಾನ ಟಿಷ್ಯೂಕಲ್ಚರ್ ಎನ್ನುತ್ತಾರೆ. ಸಸ್ಯದ ಯಾವುದೇ ಭಾಗದ ಸ್ವಲ್ಪ ಭಾಗ (ಅಂಗಾಂಶ)ವನ್ನು ತಾಯಿ ಮರದಿಂದ ಬೇರ್ಪಡಿಸಿ, ಸೂಕ್ತ ಮಾಧ್ಯಮದಲ್ಲಿಟ್ಟು ಜೋಪಾನ ಮಾಡಿದಲ್ಲಿ ಅದರಂತೆಯೇ ಇರುವ ಸಸಿಗಳು ಸಾಧ್ಯ. ಈ ವಿಧಾನದಲ್ಲಿ ವೃದ್ಧಿ ಮಾಡುವ ಪ್ರಯತ್ನಗಳು ಅಲ್ಲಲ್ಲಿ ನಡೆದಿವೆಯಾದರೂ ತೃಪ್ತಿಕರ ಯಶಸ್ಸು ಇನ್ನೂ ದೊರೆತಿಲ್ಲ.

ಬೇರುಸಸಿಗಳನ್ನುಎಬ್ಬಿಸುವವಿಧಾನ

ಕಸಿ ಮಾಡುವಲ್ಲಿ ಸೂಕ್ತ ಬೇರುಸಸಿಯನ್ನು ಬಳಸುವುದು ಬಹಳ ಅಗತ್ಯ. ಬೇರು ಸಸಿ ಮತ್ತು ಕಸಿ ಕೊಂಬೆಗಳು ಬೆಸೆದು ಒಂದಾಗಿ ಬೆಳೆದು ತೃಪ್ತಿಕರ ಬೆಳವಣಿಗೆ ಹೊಂದಿದ್ದು ಮತ್ತು ಫಸಲುಗಳನ್ನು ಬಿಡಬೇಕು. ಅವುಗಳ ನಡುವೆ ಸಮಂಜಸ ಹೊಂದಾಣಿಕೆ ಇರಬೇಕು ಹಾಗೂ ಅಂತಹ ಫಸಲಿನ ಗುಣಮಟ್ಟ ಅತ್ಯುತ್ತಮವಿರಬೇಕು. ಮಂದಗತಿಯಲ್ಲಿ ಬೆಳೆಯುವ ಬೀಜ ಸಸಿಗಳನ್ನು ಬೇರುಸಸಿಗಳನ್ನಾಗಿ ಬಳಸಿದ್ದೇ ಆದರೆ ತ್ವರಿತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕಸಿ ಗಿಡಗಳನ್ನು ಸಿದ್ಧಗೊಳಿಸಲು ಸಾಧ್ಯವಾಗುವುದಿಲ್ಲ.

ಬೇರುಸಸಿಗಳ ಬಳಕೆಯಲ್ಲಿ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಅವುಗಳೆಂದರೆ ಅಸಮಂಜಸತ್ವ ಅಥವಾ ಸರಿಯಾದ ಹೊಂದಾಣಿಕೆ ಇಲ್ಲದಿರುವುದು, ಫಸಲಿನ ಗುಣಮಟ್ಟ ಕುಸಿಯುವಂತೆ ಮಾಡುವುದು, ತೀರಾ ಮಂದಗತಿಯಲ್ಲಿ ಇಲ್ಲವೇ ಶೀಘ್ರಗತಿಯಲ್ಲಿ ಬೆಳೆಯುವಂತೆ ಪ್ರಚೋದಿಸುವುದು ಮುಂತಾಗಿ. ಕೆಲವೊಮ್ಮೆ ಗಿಡಗಳು ಬೇಗ ಅಸಮಂಜಸತ್ವ ತೋರಿದರೆ ಮತ್ತೆ ಕೆಲವೊಮ್ಮೆ ಈ ಸಮಸ್ಯೆ ದೊಡ್ಡ ಮರಗಳಲ್ಲಿ ಕಾಣಿಸಿಕೊಳ್ಳುವುದುಂಟು. ಅದರ ಲಕ್ಷಣಗಳು ಎಂದರೆ ಬೇರು ಸಸಿಗಿಂತ ಕಸಿ ಕೊಂಬೆಯ ಕಾಂಡ ದಪ್ಪನಾಗುವುದು, ಕಸಿ ಕೊಂಬೆಯ ಕಾಂಡಕ್ಕಿಂತ ಬೇರು ಸಸಿ ದಪ್ಪಗೊಳ್ಳುವುದು ಇತ್ಯಾದಿ.

ಬಳಕೆಯಲ್ಲಿರುವ ಬೇರುಸಸಿಗಳು, ೧) ಸಪೋಟ ಬೀಜಸಸಿಗಳು, ೨) ಹಿಪ್ಪೆ ಬೀಜಸಸಿಗಳು, ೩) ಕಾಡು ಹಿಪ್ಪೆ ಬೀಜಸಸಿಗಳು, ೪) ಖಿರ್ನಿ ಬೀಜಸಸಿಗಳು.

) ಸಪೋಟ ಬೀಜಸಸಿಗಳು : ಕೆಲವೆಡೆಗಳಲ್ಲಿ ಇದರ ಬೀಜಸಸಿಗಳನ್ನು ಬೇರು ಸಸಿಗಳನ್ನಾಗಿ ಬಳಸುತ್ತಾರಾದರೂ ಅವು ಸೂಕ್ತ ಗಾತ್ರಕ್ಕೆ ಬೆಳೆಯಲು ಬಹಳಷ್ಟು ಸಮಯ ಹಿಡಿಯುತ್ತದೆ.

) ಹಿಪ್ಪೆ ಬೀಜಸಸಿಗಳು : ಹಿಪ್ಪೆ ದೊಡ್ಡದಾಗಿ, ಎತ್ತರಕ್ಕೆ ಬೆಳೆಯುವ ಮರ; ರಸ್ತೆಗಳ ಅಂಚಿನ ಉದ್ದಕ್ಕೆ ಸಾಲು ಮರವಾಗಿ ಬೆಳೆಯುತ್ತಾರೆ. ಇವು ಬಹು ಬೇಗ ಬೆಳೆಯುವ ಸ್ವಭಾವ ಹೊಂದಿವೆ; ಬೇರು ಸಮೂಹ ಆಳವಾಗಿ ಇಳಿಯಬಲ್ಲದು. ಆದರೆ ಹೊಂದಾಣಿಕೆ ಕಡಿಮೆ. ಇದನ್ನು ಬಳಸಿದಾಗ ದೊಡ್ಡ ಗಿಡಗಳು ಸಾಧ್ಯ. ಅಂತಹ ಕಸಿ ಗಿಡಗಳಲ್ಲಿನ ಬೇರುಸಸಿ ಕಸಿ ಕೊಂಬೆಗಿಂತ ದಪ್ಪಗೊಳ್ಳುತ್ತದೆ. ಅಂತಹ ಕಸಿ ಗಿಡದ ಹಣ್ಣುಗಳಲ್ಲಿ ಸ್ಯಾಪೊನಿನ್ ಎಂಬ ಆಲ್ಕಲಾಯ್ಡ್ (ಕ್ಷಾರ ವಸ್ತು) ಇದ್ದು, ತೃಪ್ತಿಕರವಾಗಿರುವುದಿಲ್ಲ.

) ಕಾಡುಹಿಪ್ಪೆ : ಇದಕ್ಕೆ ಮೀಟ್ರೀ ಎಂಬ ಹೆಸರಿದೆ. ಇದರ ಬೀಜಸಸಿಗಳು ಬಹುಬೇಗ ಬೆಳೆದು ಉದ್ದನಾದ ಬೇರು ಸಮೂಹವನ್ನು ಬಿಡಬಲ್ಲವು. ಆದರೆ ಅವುಗಳನ್ನು ಬೇರು ಸಸಿಗಳನ್ನಾಗಿ ಬಳಸಿದಾಗ ಅಸಮಂಜಸತ್ವ ಕಾಣಿಸಿಕೊಳ್ಳುತ್ತದೆ. ಬೇರುಸಸಿಯು ಕಸಿ ಕಾಂಡಕ್ಕಿಂತ ದಪ್ಪಗೊಳ್ಳುವುದು. ಈ ಬೇರುಸಸಿಯ ಬಳಕೆ ಶ್ರೀಲಂಕಾದಲ್ಲಿ ಜಾಸ್ತಿ.

) ಖಿರ್ನಿ ಬೀಜಸಸಿಗಳು : ಹೆಚ್ಚು ಬಳಕೆಯಲ್ಲಿರುವ ಬೇರು ಸಸಿಯೆಂದೆರೆ ಖಿರ್ನಿ. ಇದಕ್ಕೆ ರೆಯಾನ್, ಪಾಲ್, ಯಾಡಮ್ಸ್ ಆಯ್‌ಪಲ್ ಮುಂತಾದ ಹೆಸರುಗಳಿವೆ. ಬೇರು ಸಸಿಗಳ ಪೈಕಿ ಇದು ಹೆಚ್ಚು ಸೂಕ್ತವಿರುವ ಹಾಗೂ ಚೆನ್ನಾಗಿ ಹೊಂದಿಕೊಳ್ಳುವಂತದ್ದು. ಇದೂ ಸಹ ತಿನ್ನಲು ಸೂಕ್ತವಿರುವ ಹಣ್ಣುಗಳನ್ನು ಬಿಡುತ್ತದೆ. ಹಣ್ಣು ತೀರಾ ಸಣ್ಣವಿದ್ದು, ಸಿಹಿಯಾಗಿರುತ್ತವೆ. ಇದರ ಬೀಜಸಸಿಗಳನ್ನು ಬೇರುಸಸಿಗಳನ್ನಾಗಿ ಬಳಸಿದಾಗ ಇತರ ಬೇರು ಸಸಿಗಳಿಗಿಂತ ಇವು ಚೆನ್ನಾಗಿ ಕಂಡುಬಂದ್ದಾಗಿ ವರದಿಯಗಿದೆ. ಬೇರುಸಸಿಗಳ ಬೆಳವಣಿಗೆಯಲ್ಲಿ ವ್ಯತ್ಯಾಸ ಕಂಡುಬರುವುದುಂಟು. ಕೆಲವೊಂದು ಹೆಚ್ಚು ಕಸುವಿನಿಂದ ಕೂಡಿದ್ದರೆ ಮತ್ತೆ ಕೆಲವು ಮಂದಗತಿಯಲ್ಲಿ ಬೆಳೆದಿದ್ದಾಗಿ ತಿಳಿದುಬಂದಿದೆ.

ಗುಜರಾತಿನ ಸೂರತ್ ಜಿಲ್ಲೆಯ ಗಾಂಡೇವಿ ಹಣ್ಣು ಸಂಶೋಧನಾ ಕೇಂದ್ರದಲ್ಲಿ ಕೈಗೊಂದ ಅಧ್ಯಯನಗಳಲ್ಲಿ ಸಪೋಟ ಬೀಜಸಸಿಗಿಂತ ಖಿರ್ನಿಬೀಜಸಸಿ ಹೆಚ್ಚು ಸೂಕ್ತವಾಗಿ ಕಂಡುಬಂದಿತು. ಅಂತಹ ಮರಗಳಲ್ಲಿ ಶೇ. ೫೦ ಕ್ಕೂ ಮೇಲ್ಪಟ್ಟು ಹೆಚ್ಚು ಇಳುವರಿ ಸಾಧ್ಯವಾಗಿದೆ. ಹೀಗೆ ಬೆಳೆಸಿದ ಮರಗಳು ನಾಲ್ಕು ದಶಕಗಳ ನಂತರವೂ ಸಹ ದೃಢವಾಗಿ, ಆರೋಗ್ಯವಾಗಿದ್ದು, ಬಲಿಷ್ಠವಾಗಿದ್ದುವು. ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಕನಾರ್ಟಕಗಳಲ್ಲಿ ಈಗ ಹೆಚ್ಚಾಗಿ ಬಳಸುವುದು ಖಿರ್ನಿ ಬೇರುಸಸಿಯನ್ನೇ.

ಬೇರುಸಸಿಗಳನ್ನು ಎಬ್ಬಿಸುವ ವಿಧಾನ : ಪೂರ್ಣಬಲಿತ ಹಾಗೂ ಮರದಲ್ಲಿಯೇ ಪಕ್ವಗೊಂಡ ಹಣ್ಣುಗಳನ್ನು ಬಿಡಿಸಿ ತಂದು ನೀರಿಗೆ ಸುರಿಯಬೇಕು. ಚೆನ್ನಾಗಿ ಊಜ್ಜಿ ತೊಳೆದಲ್ಲಿ ಸಿಪ್ಪೆ ಮತ್ತು ತಿರುಳು ಬೇರ್ಪಟ್ಟು ಬೀಜ ತಳಭಾಗದಲ್ಲಿ ಸಂಗ್ರಹಗೊಳ್ಳುತ್ತವೆ. ಗಟ್ಟಿ ಬೀಜ ತಳ ಸೇರಿದರೆ ಜೊಳ್ಳು ಮೇಲೆ ತೇಲುತ್ತಿರುತ್ತವೆ. ಸಿಪ್ಪೆ, ತಿರುಳು ಮತ್ತು ಜೊಳ್ಳು ಬೀಜಗಳನ್ನು ಹೊರಹಾಕಿ, ಗಟ್ಟಿ ಬೀಜವನ್ನು ಮಾತ್ರವೇ ನೆರಳಲ್ಲಿ ತೆಳ್ಳಗೆ ಹರಡಿ ಒಣಗಿಸಬೇಕು. ಬೀಜವನ್ನು ಕೂಡಲೇ ಬಿತ್ತಿದರೆ ಅವು ಹೆಚ್ಚಿನ ಸಂಖ್ಯೆಯಲ್ಲಿ ಮೊಳೆಯುತ್ತವೆ. ಬೀಜದ ಸಿಪ್ಪೆ ಮೆತ್ತಗಾಗಲು ಅವುಗಳನ್ನು ಒಂದು ರಾತ್ರಿಯ ಮಟ್ಟಿಗೆ ನೀರಲ್ಲಿ ನೆನೆಸಿಡಬಹುದು.

ಸಮಪ್ರಮಾಣದ ಮಣ್ಣು ಮತ್ತು ಮರಳುಗಳ ಮಿಶ್ರಣವನ್ನು ಅಗಲಬಾಯಿಯ ಮಣ್ಣಿನ ಪಾತ್ರೆಗಳು, ಪ್ಲಾಸ್ಟಿಕ್ ಚೀಲಗಳು ಇಲ್ಲವೇ ಎತ್ತರಿಸಿದ ಒಟ್ಲು ಪಾತಿಗಳಲ್ಲಿ ಬೀಜಬಿತ್ತಿ, ಮೇಲೆ ಮರಳನ್ನು ಹರಡಿ ನೀರು ಕೊಡುತ್ತಿದ್ದಲ್ಲಿ ಅವು ಸುಮಾರು ನಾಲ್ಕು ವಾರಗಳಲ್ಲಿ ಮೊಳೆಯುತ್ತವೆ. ಅವುಗಳಿಗೆ ಹದವರಿತು ನೀರು ಕೊಡಬೇಕು. ಸಸಿಗಳು ಸುಮಾರು ೧೫ ಸೆಂ. ಮೀ. ಎತ್ತರಕ್ಕೆ ಬೆಳೆದಾಗ ಅವುಗಳನ್ನು ಜೋಪಾನವಾಗಿ ಕಿತ್ತು ಬೇರೆ ಕುಂಡಗಳಿಗೆ ಇಲ್ಲವೇ ಪ್ಲಾಸ್ಟಿಕ್ ಚೀಲಗಳಿಗೆ ವರ್ಗಾಯಿಸಬೇಕು. ಅವು ಸೂಕ್ತ ಗಾತ್ರಕ್ಕೆ ಬೆಳೆದಾಗ ಕಸಿ ಮಾಡುವ ಉದ್ದೇಶಕ್ಕೆ ಬಳಸಬಹುದು.

ತಮ್ಮಷ್ಟಕ್ಕೆ ತಾವೇ ಉದುರಿಬಿದ್ದು ಮೊಳೆವಂತಹ ಬೀಜ ಸಸಿಗಳು ನಿಸರ್ಗದಲ್ಲಿ ಹೇರಳವಾಗಿ ಲಭಿಸುತ್ತವೆ. ಅವುಗಳನ್ನು ಜೋಪಾನವಾಗಿ ಕಿತ್ತು ತಂದು ಕುಂಡ ಅಥವಾ ಪ್ಲಾಸ್ಟಿಕ್ ಚೀಲಗಳಿಗೆ ವರ್ಗಾಯಿಸಿ ಅನಂತರ ಬೇರುಸಸಿಗಳನ್ನಾಗಿ ಬಳಸುವ ರೂಢಿ ಗುಜರಾತಿನ ಸೂರತ್ ಮತ್ತು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಗಳಲ್ಲಿ ಇದೆ. ಅವುಗಳ ಪಕ್ಕ ಮೋಸುಗಳನ್ನು ಸುಮಾರು ೩೦ ಸೆಂ. ಮೀ. ಎತ್ತರದವರೆಗೆ ಸವರಿ ತೆಗೆದು, ಕಾಂಡ ನೆಟ್ಟಗೆ ನಯವಾಗಿರುವಂತೆ ನೋಡಿಕೊಳ್ಳಲಾಗುತ್ತದೆ. ಅದರಿಂದ ಬಲಿಷ್ಠ ಕಾಂಡ ಸಾಧ್ಯ. ಸಸಿಗಳ ಕಾಂಡ ಸುಮಾರು ೧ ಸೆಂ. ಮೀ. ದಪ್ಪವಿದ್ದಾಗ ಕಸಿ ಮಾಡಲು ಬಳಸುತ್ತಾರೆ.

ಗೂಟಿಮತ್ತುಕಸಿಗಿಡಗಳಜಯಾಪಜಯ

ಗೂಟಿ ಗಿಡಗಳ ಬೇರು ಸಮೂಹ ಆಳವಾಗಿ ಇಳಿಯುವುದಿಲ್ಲ. ಬಹುತೇಕ ಬೇರುಗಳು ಮಣ್ಣಿನ ೩೦-೪೫ ಸೆಂ. ಮೀ. ಮೇಲ್ಪದರಕ್ಕೆ ಸೀಮಿತಗೊಂಡಿರುತ್ತವೆ. ಅಂತಹ ಗಿಡಗಳನ್ನು ಆಳವಿರುವ ಮಣ್ಣಿನ ಭೂಮಿಯಲ್ಲಿ ನೆಟ್ಟು ಬೆಳೆಸಿದರೆ ಚೆನ್ನಾಗಿ ಫಲಿಸುತ್ತವೆ. ಆದರೆ ಮರಳುಮಣ್ಣಿನ ಅಥವಾ ಬಲವಾದ ಗಾಳಿ ಬೀಸುವ ಕರಾವಳಿ ಪ್ರದೇಶಗಳಲ್ಲಿ ನೆಟ್ಟು ಬೆಳೆಸಿದಾಗ ಹಾನಿ ಖಂಡಿತ. ಬೇಸಿಗೆಯಲ್ಲಿ ಅವು ಒಣಗಿ ಸಾಯುವ ಸಾಧ್ಯತೆ ಇರುತ್ತದೆ. ಅಂತಹ ಮರಗಳಲ್ಲಿನ ಹಣ್ಣು ಬಲು ಸಿಹಿಯಾಗಿರುವುದಾಗಿ ತಿಳಿದುಬಂದಿದೆ. ಕಸಿಗಿಡಗಳ ಬೇರು ಸಮೂಹ ೬೦ ರಿಂದ ೯೫ ಸೆಂ. ಮೀ. ಆಳಕ್ಕೆ ಇಳಿಯಬಲ್ಲದು. ಖಿರ್ನಿ ಬೇರು ಸಸಿಗಳಾದಲ್ಲಿ ಮಣ್ಣಿನ ಆಳ ೯೦ ಸೆಂ. ಮೀ. ಗಿಂತ ಹೆಚ್ಚಾಗಿರಬೇಕು. ಹಾಗಿದ್ದಲ್ಲಿ ಗಿಡಗಳ ಬೆಳವಣಿಗೆ ಚೆನ್ನಾಗಿರುತ್ತದೆ. ಅಧಿಕ ತೇವದಿಂದ ಕೂಡಿದ ಮಣ್ಣುಗಳಲ್ಲಿ ನೆಟ್ಟು ಬೆಳೆಸಿದ ಕಸಿಗಿಡಗಳು ಗೂಟಿ ಗಿಡಗಳಿಗಿಂತ ಹೆಚ್ಚು ಫಸಲು ಕೊಡುತ್ತಿರುವುದಾಗಿ ತಿಳಿದುಬಂದಿದೆ. ಬೇರುಸಸಿಯ ತಾಯಿಬೇರು ಹಾಗೂ ಇತರ ಬೇರುಗಳು ಆಳಕ್ಕೆ ಇಳಿದು ಮಣ್ಣಿನ ತಳಪದರಗಳಲ್ಲಿನ ತೇವವನ್ನು ಹೀರಿಕೊಂಡು ಬೆಳೆಯಲು ಸಮರ್ಥವಿರುವ ಕಾರಣ ಅನಾವೃಷ್ಟಿಯನ್ನು ತಡೆದುಕೊಳ್ಳಬಲ್ಲವು. ಅಲ್ಲದೆ ಬಲವಾದ ಗಾಳಿ ಬೀಸಿದರೂ ಸಹ ಅಷ್ಟೊಂದು ಹಾನಿಯಾಗದು. ಪುಣೆಯಲ್ಲಿನ ಒಣ ಹಾಗೂ ಕಡಿಮೆ ಮಳೆಯಾಗುವ ಪ್ರದೇಶಗಳಲ್ಲಿ ಖಿರ್ನಿ ಬೇರುಸಸಿಯ ಮೇಲೆ ಕಸಿಮಾಡಿ ಬೆಳೆದ ಗಿಡಗಳನ್ನು ನೆಟ್ಟು ಬೆಳೆಸಿದಾಗ ಪ್ರಾರಂಭದ ವರ್ಷಗಳಲ್ಲಿ ಅವು ಬಲು ಕಸುವಿನಿಂದ ಕೂಡಿದ್ದು ಅನಂತರದ ವರ್ಷಗಳಲ್ಲಿ ಎಲ್ಲೆಲ್ಲಿ ಸುಣ್ಣಕಲ್ಲುಗಳ ತಳಪದರವಿತ್ತೋ ಅಲ್ಲಿ ಎಲೆಗಳು ತೆಳುಹಸಿರು ಬಣ್ಣಕ್ಕೆ ಮಾರ್ಪಟ್ಟಿದ್ದಾಗಿ ತಿಳಿದುಬಂದಿದೆ ಮತ್ತು ಗುಜರಾತಿನ ಕಡಿಮೆ ಮಳೆಯಾಗುವ ಹಾಗೂ ಗೋಡು ಮಣ್ಣಿನ ಭೂಮಿಗಳಲ್ಲಿ ಗೂಟಿಗಿಡಗಳಿಗಿಂತ ಖಿರ್ನಿ ಬೇರುಸಸಿಯ ಮೇಲೆ ಕಸಿ ಮಾಡಿ ಬೆಳೆದ ಗಿಡಗಳು ಹೆಚ್ಚು ಫಸಲನ್ನು ಕೊಟ್ಟಿವೆ. ಮಹಾರಾಷ್ಟ್ರದಲ್ಲಿ ಕಸಿಗಿಡಗಳಿಗಿಂತ ಗೂಟಿ ಗಿಡಗಳನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಅದಕ್ಕೆ ಕಾರಣ ಕಸಿಗಿಡಗಳ ಹಣ್ಣಿನ ತಿರುಳು ಹರಳುಗಳಂತಿರುವುದು.