ಬೇಸಾಯ ಕ್ರಮಗಳಲ್ಲಿ ಗೊಬ್ಬರಗಳ ಪೂರೈಕೆ, ನೀರಾವರಿ, ಮಧ್ಯಂತರ ಬೆಳೆಗಳು, ಅಂತರ ಬೇಸಾಯ, ಕಳೆಹತೋಟಿ, ಗಿಡಗಳ ಆಕಾರ ನಿರ್ವಹಣೆ, ಸವರುವಿಕೆ ಮತ್ತು ಸಂಖ್ಯಾವೃದ್ಧಿಗೆ ಚೋದಕಗಳ ಬಳಕೆ ಮುಖ್ಯವಾದ ಪದ್ಧತಿಗಳು. ಮಣ್ಣಿನ ಫಲವತ್ತೆತೆಯ ಆಧಾರದ ಮೇಲೆ ಗಿಡಗಳಿಗೆ ಕೊಡಬೇಕಾದ ರಾಸಾಯನಿಕ ಗೊಬ್ಬರಗಳ ಪ್ರಮಾಣದಲ್ಲಿ ಹೆಚ್ಚುಕಡಿಮೆ ಮಾಡಿಕೊಳ್ಳಬಹುದಾದರೂ, ಸಪೋಟ ಗಿಡಗಳಿಗೆ ಸಾಮಾನ್ಯ ಪರಿಸ್ಥಿತಿಯಲ್ಲಿ ಶಿಫಾರಸ್ಸು ಮಾಡಿರುವ ಒಂದು ನಿರ್ದಿಷ್ಟ ಪ್ರಮಾಣವಿದೆ. ಗೊಬ್ಬರಗಳನ್ನು ಪ್ರಮಾಣದಲ್ಲಿ ಸರಿಯಾದ ಪದ್ಧತಿಯಲ್ಲಿ ಗಿಡಗಳ ಸುತ್ತಲೂ ಉಂಗುರಾಕಾರದಲ್ಲಿ ಕೊಡಬೇಕು.

ಸಪೋಟ ಗಿಡಗಳನ್ನು ಚಿಕ್ಕದರಿಂದಲೇ ಕ್ರಮಬದ್ಧವಾಗಿ ಸವರಿ ಒಂದು ಮೀಟರ್ ಎತ್ತರದಿಂದ ಹರಡಿ ಬೆಳೆಯುವಂತೆ ನೋಡಿಕೊಳ್ಳಬೇಕು. ಸಪೋಟ ಬೆಳೆಯಲ್ಲಿ ವರ್ಷಾದ್ಯಂತ ಹೂ ಬಿಡುತ್ತಿದ್ದರೂ ಜೂನ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಬಿಡುವ ಹೂವುಗಳಿಂದ ಹೆಚ್ಚು ಕಾಯಿಗಳು ಬರುತ್ತವೆ. ಹೂವು ಕಾಯಿಗಳ ವೃದ್ಧಿಬೆಳವಣಿಗೆಗೆ ಸಸ್ಯ ಚೋದಕ ಅಥವಾ ವೃದ್ಧಿಕಾರಕಗಳ ಬಳಕೆಯೂ ಕೆಲವು ರೈತರಲ್ಲಿ ಜಾರಿಯಲ್ಲಿದೆ. ಎಲ್ಲಾ ಬೇಸಾಯ ಕ್ರಮಗಳ ಸಮಗ್ರ ಚಿತ್ರಣ ಅಧ್ಯಾಯದಲ್ಲಿದೆ.

ಸಪೋಟ ಹಣ್ಣಿನ ಬೆಳೆಗೆ ಅಷ್ಟೊಂದು ಫಲವತ್ತು ಬೇಕಾಗಿಲ್ಲ. ಹಾಗೆಂದ ಮಾತ್ರಕ್ಕೆ ಬೇಜವಾಬ್ದಾರಿ ಸಲ್ಲದು. ಒಳ್ಳೆಯ ಬೆಳವಣಿಗೆ ಮತ್ತು ಉತ್ತಮ ಫಸಲುಗಳಿಗೆ ಪ್ರತಿವರ್ಷ ಸಾಕಷ್ಟು ಪ್ರಮಣದಲ್ಲಿ ಗೊಬ್ಬರಗಳನ್ನು ಕೊಡುವುದು ಅಗತ್ಯ. ಗಿಡಗಳು ಬೆಳೆದು ದೊಡ್ಡವಾದಂತೆಲ್ಲಾ ಹೆಚ್ಚು ಹೆಚ್ಚಾಗಿ ಗೊಬ್ಬರಗಳನ್ನು ಕೊಡಬೇಕಾಗುತ್ತದೆ. ಕೊಟ್ಟಿಗೆ ಗೊಬ್ಬರದ ಜೊತೆಗೆ ಸೂಕ್ತ ಪ್ರಮಾಣದ ರಾಸಾಯನಿಕ ಗೊಬ್ಬರಗಳನ್ನು ಕೊಡಬೇಕು. ಅವುಗಳನ್ನು ವರ್ಷದಲ್ಲಿ ಎರಡು ಸಮ ಕಂತುಗಳಲ್ಲಿ ಕೊಡುವುದು ಲಾಭದಾಯಕ. ಅವುಗಳೆಂದರೆ ಮಳೆಗಾಲದ ಪ್ರಾರಂಭ ಅಂದರೆ ಜೂನ್-ಜುಲೈ ಮತ್ತು ಮಳೆಗಾಲದ ಕಡೆ ಅಂದರೆ ಸೆಪ್ಟೆಂಬರ್-ಅಕ್ಟೋಬರ್.

ಗೊಬ್ಬರಗಳ ಪೂರೈಕೆ

ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಪ್ರಮಾಣಗಳಲ್ಲಿ ಗೊಬ್ಬರಗಳನ್ನು ಕೊಡುತ್ತಾರೆ. ಹಾಗಾಗಿ ರಾಜ್ಯದಿಂದ ರಾಜ್ಯಕ್ಕೆ ಅವುಗಳ ಪ್ರಮಾಣ ವ್ಯತ್ಯಾಸಗೊಳ್ಳುತ್ತದೆ. ಆಂಧ್ರಪ್ರದೇಶದಲ್ಲಿ ಮರವೊಂದಕ್ಕೆ ವರ್ಷಕ್ಕೆ ೧೦೦ ಕೆಜಿ ಕೊಟ್ಟಿಗೆ ಗೊಬ್ಬರ, ೬ ಕೆಜಿ ಹರಳೆಣ್ಣೆಯ ಹಿಂಡಿ ಮತ್ತು ೨ ಕೆಜಿ ಸೂಪರ್‌‍ಫಾಸ್ಫೇಟ್‌ಗಳನ್ನು ಕೊಟ್ಟರೆ ಮಹಾರಾಷ್ಟ್ರದಲ್ಲಿ ಒಂದು ವರ್ಷದ ಗಿಡಕ್ಕೆ ೧೦ ಕೆಜಿ ಕೊಟ್ಟಿಗೆ ಗೊಬ್ಬರ ಮತ್ತು ೪೦೦ ಗ್ರಾಂ ಹರಳು ಹಿಂಡಿಯನ್ನು ಕೊಡುತ್ತಾರೆ. ಈ ಗೊಬ್ಬರಗಳ ಪ್ರಮಾಣವನ್ನು ಪ್ರತಿ ವರ್ಷ ತಲಾ ೪ ಕೆ. ಜಿ ಮತ್ತು ೪೦೦ ಗ್ರಾಂಗಳಂತೆ ಹೆಚ್ಚಿಸುತ್ತಾ ಹೋಗುತ್ತಾರೆ. ಹಾಗಾಗಿ ೧೦ ವರ್ಷದ ಮರವೊಂದಕ್ಕೆ ೪೦ ಕೆ. ಜಿ. ಕೊಟ್ಟಿಗೆ ಗೊಬ್ಬರ ಮತ್ತು ೪ ಕೆ. ಜಿ. ಹಿಂಡಿಗಳನ್ನು ಕೊಟ್ಟಂತಾಗುತ್ತದೆ. ಇವುಗಳ ಜೊತೆಗೆ ಪ್ರತಿ ವರ್ಷ ಮರವೊಂದಕ್ಕೆ ೨ ಕೆ. ಜಿ. ಮೂಳೆ ಗೊಬ್ಬರ ಕೊಡುವುದು ಲಾಭದಾಯಕ. ಸೂಪರ್ ಫಾಸ್ಫೇಟ್ ರಾಸಾಯನಿಕ ಗೊಬ್ಬರ ಕೊಡುವುದರಿಂದ ರಂಜಕಾಂಶ ಲಭಿಸುತ್ತದೆ. ಹಾಗಾಗಿ ಹಳೆಯ ತೋಟಗಳಲ್ಲಿನ ಹಣ್ಣುಗಳ ಗಾತ್ರ ಹೆಚ್ಚುತ್ತದೆ. ಸಪೋಟ ಬೆಳೆಗೆ ಶಿಫಾರಸ್ಸು ಮಾಡಿದ ರಸಗೊಬ್ಬರಗಳ ಪ್ರಮಾಣವನ್ನು ಕೋಷ್ಟಕ – ೨ರಲ್ಲಿ ಕೊಟ್ಟಿದೆ.

ಕೋಷ್ಟಕ . ಶಿಫಾರಸು ಮಾಡಿರುವ ಗೊಬ್ಬರಗಳ ಪ್ರಮಾಣ

 ಪ್ರಧಾನ ಪೋಷಕಾಂಶಗಳನ್ನು ಅಮೋನಿಯಂ ಸಲ್ಫೇಟ್, ಸೂಪರ್ ಫಾಸ್ಫೇಟ್ ಮತ್ತು ಮ್ಯೂರೇಟ್ ಆಫ್ ಪೊಟ್ಯಾಷ್‌ಗಳ ಮೂಲಕ ಕೊಡಬೇಕಾದಲ್ಲಿ ಅವುಗಳ ಪ್ರಮಾಣವನ್ನು ಕೋಷ್ಟಕ -೩ರಲ್ಲಿ ಕೊಟ್ಟಿದೆ.

ಕೋಷ್ಟಕ . ಮರದ ವಯಸ್ಸು, ಅಮೋನಿಯಂ ಸಲ್ಫೇಟ್, ಸೂಪರ್ ಫಾಸ್ಫೇಟ್ ಮತ್ತು ಮ್ಯೂರೇಟ್ ಆಫ್ ಪೊಟ್ಯಾಷ್ಗಳ ಪ್ರಮಾಣ

 

ಸಾರಜನಕವು ಮರಗಳ ಬೆಳವಣಿಗೆ ಮತ್ತು ಇಳುವರಿಗಳನ್ನು ಹೆಚ್ಚಿಸುವಲ್ಲಿ ನೆರವಾಗುತ್ತದೆ. ಮಣ್ಣಿನಲ್ಲಿನ ಸಾರಜನಕದ ಅಂಶವನ್ನು ಅನುಸರಿಸಿ ಈ ಪೋಷಕಾಂಶವನ್ನು ಸಾಕಷ್ಟು ಪ್ರಮಾಣದಲ್ಲಿ ಒದಗಿಸಬೇಕು. ಹತ್ತು ವರ್ಷ ವಯಸ್ಸಿನ ಪ್ರಾಯದ ಮರವೊಂದಕ್ಕೆ ವರ್ಷಕ್ಕೆ ೧. ೫ ಕೆ. ಜಿ. ಸಾರಜನಕ, ೦. ೪೫ ಕೆ. ಜಿ. ರಂಜಕ ಮತ್ತು ೦. ೫೮ ಕೆ. ಜಿ. ಪೊಟ್ಯಾಷ್ ಸತ್ವಗಳನ್ನು ಒದಗಿಸುವುದು ಅಗತ್ಯವೆಂದು ಕೆಲವ ತಜ್ಞರು ಸೂಚಿಸಿದ್ದಾರೆ. ರಂಜಕಾಂಶದ ಕೊರತೆ ಇದ್ದಲ್ಲಿ ಹಣ್ಣುಗಳ ಗಾತ್ರ ಕುಸಿಯುತ್ತದೆ ಹಾಗೂ ಅವು ಗಟ್ಟಿಗೊಳ್ಳುತ್ತವೆ.

ಈ ಪೋಷಕಾಂಶಗಳ ಪ್ರಮಾಣವನ್ನು ತಿಳಿಯಲು ಎಲೆಗಳ ರಾಸಾಯನಿಕ ವಿಶ್ಲೇಷಣೆ ಸಹಾಯಕವಾಗುತ್ತದೆ. ಸಾರಜನಕ, ಪೊಟ್ಯಾಷ್, ಮೇಗ್ನೀಷಿಯಂ ಮತ್ತು ಮ್ಯಾಂಗನೀಸ್ ಧಾತುಗಳ ವಿಶ್ಲೇಷಣೆಗೆ ಜುಲೈ ತಿಂಗಳು ಮತ್ತು ರಂಜಕ, ಸುಣ್ಣ, ಕಬ್ಬಿಣ ಹಾಗೂ ಸತುಗಳಿಗೆ ಎಪ್ರಿಲ್-ಜನವರಿ ತಿಂಗಳುಗಳು ಸೂಕ್ತವಿರುವುದಾಗಿ ತಿಳಿದುಬಂದಿದೆ.

ಗೊಬ್ಬರಗಳನ್ನು ಹಾಕುವ ವಿಧಾನ : ಗೊಬ್ಬರಗಳನ್ನು ಹಾಕುವ ವಿಧಾನ ಬಲು ಮುಖ್ಯವಾದುದು. ಅವುಗಳನ್ನು ಪಾತಿಗಳ ಅಗಲಕ್ಕೆ ಇಲ್ಲವೇ ಬುಡದಲ್ಲಿ ಹರಡುವುದರಿಂದ ಅಷ್ಟೊಂದು ಪ್ರಯೋಜನವಿರುವುದಿಲ್ಲ. ಅವುಗಳನ್ನು ಗಿಡಮರಗಳ ಬುಡದಿಂದ ೯೦-೧೨೦ ಸೆಂ. ಮೀ. ದೂರದಲ್ಲಿ ೧೫ ಸೆಂ. ಮೀ. ಅಗಲ ಮತ್ತು ಅಷ್ಟೇ ಆಳದ ಉಂಗುರಾಕಾರದ ತಗ್ಗು ತೆಗೆದು, ಸಮನಾಗಿ ಹರಡಿ ಮಣ್ಣು ಮುಚ್ಚಿ ನೀರು ಕೊಡಬೇಕು. ಪ್ರತಿ ವರ್ಷ ಅಂದರೆ ಸುಮಾರು ೧೦ ವರ್ಷಗಳವರೆಗೆ ಈ ತಗ್ಗು ಕಾಲುವೆಯನ್ನು ೧೫ ಸೆಂ. ಮೀ. ಮುಂದಕ್ಕೆ ಸಾಗಿಸಬೇಕು. ಪೋಷಕ ಬೇರುಗಳು ಬುಡದಿಂದ ದೂರಕ್ಕೆ ಚಾಚಿ ಹರಡುತ್ತವೆ. ಬಹುತೇಕ ಪೋಷಕ ಬೇರುಗಳು ಮಣ್ಣಿನ ಮೇಲ್ಪದರದ ೧೫ ಸೆಂ. ಮೀ. ಆಳದಲ್ಲಿ ಸೀಮಿತಗೊಂಡಿರುತ್ತವೆ. ಮಣ್ಣು ಸಾಕಷ್ಟು ಹಸಿಯಾಗಿರುವಾಗ ಗೊಬ್ಬರಗಳನ್ನು ಕೊಟ್ಟರೆ ಅವು ಕರಗಿ ಪೋಷಕಾಂಶಗಳನ್ನು ಬೇರುಗಳಿಗೆ ಒದಗಿಸಬಲ್ಲವು.

ನೀರಾವರಿ

ಸಪೋಟ ಕಡಿಮೆ ನೀರಿದ್ದರೂ ಫಲಿಸುವಂತಹ ಹಣ್ಣಿನ ಬೆಳೆ. ಎಳೆಯ ಗಿಡಗಳಿಗೆ ನೀರು ಕೊಟ್ಟರೆ ಅವು ಬೇಗ ಬೆಳೆದು ಫಸಲು ಬಿಡಲು ಪ್ರಾರಂಭಿಸುತ್ತವೆ. ಅನಿಶ್ಚಿತ ಮಳೆ ಅಥವಾ ಬಹುಕಾಲ ಮಳೆ ಇಲ್ಲದೆ ಒಣ ಹಬೆ ಇರುವಂತಹ ಸಂದರ್ಭಗಳಲ್ಲಿ ಗಿಡಗಳಿಗೆ ಮೊದಲ ಒಂದೆರಡು ವರ್ಷಗಳವರೆಗೆ ಕೈ ನೀರು ಕೊಡುವುದು ಲಾಭದಾಯಕ. ಮಣ್ಣಿನಲ್ಲಿ ತೇವಾಂಶವಿದ್ದರೆ ಹೂವು ಉದುರುವುದು ತಪ್ಪುತ್ತದೆ. ಮರಗಳ ಬುಡದ ಸುತ್ತ ತಗ್ಗು ಮಾಡಿ ಮಳೆಯ ನೀರು ನಿಲ್ಲುವಂತೆ ಮಾಡಿದರೆ ಸಾಕು. ಅದೇ ರೀತಿ ಪಾತಿಗಳನ್ನು ಹಿಗ್ಗಿಸುವುದರ ಜೊತೆಗೆ, ಚೌಕಾಕಾರದಲ್ಲಿ ಎತ್ತರದ ಬದುಗಳನ್ನು ಹಾಕಿದಾರೂ ಸಹ ಬಿದ್ದ ಮಳೆಯ ನೀರು ಹೊರಹೋಗದೆ ಅಲ್ಲಿಯೇ ಹಿಂಗಿ ಗಿಡಗಳಿಗೆ ತೇವವನ್ನು ಒದಗಿಸಬಲ್ಲದು. ಈ ಬೆಳೆಗೆ ಕ್ರಮಬದ್ಧ ನೀರಾವರಿ ಕೊಡುವ ರೂಢಿ ಇಲ್ಲ.

ಮಧ್ಯಂತರಬೆಳೆಗಳು:

ಸಪೋಟ ಮಂದಗತಿಯಲ್ಲಿ ಬೆಳೆಯವ ಹಣ್ಣಿನ ಮರ. ಲಾಭದಾಯಕ ಫಸಲನ್ನು ಕೊಡಬೇಕಾದಾರೆ ೮-೧೦ ವರ್ಷಗಳ ಅವಧಿ ಹಿಡಿಸುತ್ತದೆ. ಪ್ರಾರಂಭದಲ್ಲಿ ಗಿಡಗಳ ನೆತ್ತಿ ಅಷ್ಟಾಗಿ ಹರಡಿರುವುದಿಲ್ಲ. ಹಾಗಾಗಿ ಸಾಲುಗಳ ನಡುವೆ ಬಹಳಷ್ಟು ಜಾಗ ಖಾಲಿಯಾಗಿ ಉಳಿಯುತ್ತದೆ. ಅದನ್ನು ಹಾಗೇ ಬಿಡುವುದರ ಬದಲು ಸೂಕ್ತ ಬೆಳೆಗಳನ್ನು ಬೆಳೆದು ಲಾಭ ಹೊಂದಬಹುದು. ಮಧ್ಯಂತರ ಬೆಳೆಗಳಾಗಿ ಬೇಗ ಫಸಲು ಕೊಡುವ ಪರಂಗಿ, ಬಾಳೆ, ತರಕಾರಿ ಮುಂತಾದವನ್ನು ಬೆಳೆಯಬಹುದು. ಅದೇ ರೀತಿ ನುಗ್ಗೆ, ಕರಿಬೇವು, ಅಲಸಂದೆ, ಗೋರಿಕಾಯಿ, ಲೈಮಾ ಅವರೆ, ಬಟಾಣಿ, ತೊಗರಿ, ಕಲ್ಲಂಗಡಿ ಮುಂತಾದವುಗಳನ್ನೂ ಸಹ ಬೆಳೆಯಬಹುದು. ಇದೇನಿದ್ದರೂ ಹೆಚ್ಚುಮಳೆಯಾಗುವಂತಿದ್ದರೆ ಇಲ್ಲವೇ ನೀರಾವರಿ ಸೌಲಭ್ಯಗಳಿದ್ದಲ್ಲಿ ಮಾತ್ರ ಸಾಧ್ಯ. ಕೆಲವೆಡೆಗಳಲ್ಲಿ ಸಪೋಟ ಗಿಡಗಳ ಸಾಲುಗಳ ನಡುವೆ ಸೀಬೆ, ದಾಳಿಂಬೆ, ಅಂಜೂರ ಮುಂತಾದವುಗಳನ್ನು ಬೆಳೆಯಲಾಗುತ್ತಿದೆ. ಈ ಬೆಳೆಗಳು ಮುಖ್ಯ ಬೆಳೆಯೊಂದಿಗೆ ತೇವಾಂಶ, ಪೋಷಕಾಂಶಗಳು, ಬಿಸಿಲು, ಬೆಳಕು, ಗಾಳಿ ಮುಂತಾಗಿ ಸ್ಪರ್ಧಿಸಬಾರದು.

ಸಪೋಟ ಗಿಡಗಳ ಮಧ್ಯೆ ಮಾವು, ತೆಂಗು, ಹುಣಿಸಿ, ಗೋಡಂಬಿ ಮುಂತಾದುವುಗಳನ್ನು ಬೆಳೆಯಲು ಪ್ರಾರಂಭಿಸಲಾಗಿದೆ. ಆದರೆ ಇದು ಸರಿಯಾದ ಪದ್ಧತಿಯಲ್ಲ. ಆದರಿಂದ ಯಾವೊಂದು ಬೆಳೆಯೂ ಸರಿಯಾಗಿ ಫಲಿಸಲಾರದು. ಅಂತರ ಅಥವಾ ಮಿಶ್ರ ಬೆಳೆಗಳೇನಿದ್ದರೂ ಕಡಿಮೆ ಅವಧಿಯುವಿದ್ದು ಮುಖ್ಯ ಬೆಳೆ ಲಾಭದಾಯಕ ಫಸಲು ಬಿಡುವ ಹೊತ್ತಿಗೆ ತೆಗೆದುಹಾಕುವಂತಿದ್ದರೆ ಉತ್ತಮ.

ಹಸಿರು ಗೊಬ್ಬರದ ಹಾಗೂ ಹೊದಿಕೆ ಬೆಳೆಗಳು : ಮಣ್ಣಿನ ಫಲವತ್ತನ್ನು ಹೆಚ್ಚಿಸಲು ಹಸಿರುಗೊಬ್ಬರದ ಬೆಳೆಗಳನ್ನು ಬೆಳೆಯುವುದು ಲಾಭದಾಯಕ. ಈ ಉದ್ದೇಶಕ್ಕೆ ಅಲಸಂದೆ, ಅಪ್ಸೆಣಬು, ಧೈಯಂಚ, ಉದ್ದು, ಹೆಸರು, ಅವರೆ, ಹುರುಳಿ ಮುಂತಾದ ದ್ವಿದಳ ಧಾನ್ಯ ಬೆಳೆಗಳನ್ನು ಬಿತ್ತಬಹುದು. ಇವುಗಳನ್ನು ಮುಂಗಾರಿನ ಪ್ರಾರಂಭದಲ್ಲಿ ಬಿತ್ತಿ ಅವು ಹೂವು ಬಿಡುವ ವೇಳೆಗೆ ಉಳುಮೆ ಮಾಡಿ ಮಣ್ಣಿಗೆ ಸೇರಿಸಬೇಕು. ಅಲಸಂದೆ, ನೆಲಗಡಲೆ ಮುಂತಾದುವು ಒಳ್ಳೆಯ ಹೊದಿಕೆಯನ್ನು ಒದಗಿಸುತ್ತವೆ. ಈ ಹೊದಿಕೆಯಿಂದಾಗಿ ಮೇಲ್ಮಣ್ಣು ಕೊಚ್ಚಿ ಹೋಗುವುದಿಲ್ಲ ಹಾಗೂ ಕಳೆಗಳೂ ಸಹ ಹತೋಟಿಗೊಳ್ಳುತ್ತವೆ. ತೇವಾಂಶ ಬಹುಕಾಲ ಮಣ್ಣಲ್ಲಿಯೇ ಉಳಿದು ಗಿಡಗಳಿಗೆ ಲಭಿಸುತ್ತದೆ. ಇಳಿಜಾರು ಪ್ರದೇಶಗಳಲ್ಲಿ ತಪ್ಪದೇ ಈ ಬೆಳೆಗಳನ್ನು ಬೆಳೆಯಬೇಕು.

ಅಂತರಬೇಸಾಯಮತ್ತುಕಳೆಹತೋಟಿ

ನೀರು ಮತ್ತು ಗೊಬ್ಬರಗಳಿರುವ ಕಾರಣ ಹಲವಾರು ಬಗೆಯ ಕಳೆಗಳು ಹುಟ್ಟಿಕೊಳ್ಳುತ್ತವೆ. ಅವುಗಳನ್ನು ಹಾಗೆಯೇ ಬೆಳೆಯಲು ಬಿಟ್ಟರೆ ತೇವ, ಪೋಷಕಾಂಶಗಳು ಮುಂತಾಗಿ ಬಳಸಿಕೊಂಡು ಮುಖ್ಯ ಬೆಳೆ ನಶಿಸುವಂತೆ ಮಾಡುತ್ತವೆ. ಕೆಲವೊಂದು ಕಳೆಗಳು ಕೀಟ ಮತ್ತು ರೋಗಗಳಿಗೆ ಆಸರೆ ಒದಗಿಸುತ್ತವೆ. ಆದ್ದರಿಂದ ಅವುಗಳನ್ನು ಮೊಳೆತ ಕೂಡಲೇ ಕಿತ್ತು ತೆಗೆಯುವುದು ಒಳ್ಳೆಯ ಕ್ರಮ. ಸಾಲುಗಳ ನಡುವೆ ಒಂದೆರಡು ಸಾರಿ ಹಗುರವಾಗಿ ಕುಂಟೆ ಹಾಯಿಸುವುದು ಅಥವಾ ಉಳುಮೆ ಮಾಡುವುದು ಒಳ್ಳೆಯದು. ವರ್ಷದಲ್ಲಿ ಎರಡು ಸಾರಿ ಅಂದರೆ ಮುಂಗಾರಿನ ಪ್ರಾರಂಭದಲ್ಲಿ ಮತ್ತು ಮಳೆಗಾಲದ ಕಡೆಯಲ್ಲಿ ಈ ಕೆಲಸ ಮಾಡಿದಲ್ಲಿ ಸಾಕು. ಹಸಿರು ಗೊಬ್ಬರದ ಬೆಳೆಗಳನ್ನು ಬಿತ್ತಿದರೂ ಸಹ ಕಳೆ ಹತೋಟಿ ಸುಲಭವಿರುತ್ತದೆ.

ಆಗಿಂದಾಗ್ಗೆ ಪಾತಿಗಳಲ್ಲಿ ಕೈಯ್ಯಾಡಿಸಿ, ಮಣ್ಣನ್ನು ಮೇಲ್ಮೇಲೆ ಸಡಿಲಿಸುವುದರಿಂದ ತೇವ ಹೆಚ್ಚುಕಾಲ ಉಳಿಯುತ್ತದೆ. ಅದರಿಂದ ಕಳೆ ಹತೋಟಿ ಸುಲಭ. ಮಣ್ಣಲ್ಲಿನ ಹುಳ, ಹುಪ್ಪಟೆಗಳು, ಮೊಟ್ಟೆ, ಕೋಶ, ಮರಿಗಳು ಬಿಸಿಲಿಗೆ ಸಿಕ್ಕಿ ಸಾಯುತ್ತವೆ ಇಲ್ಲವೇ ಹಕ್ಕಿ ಮುಂತಾದುವು ತಿಂದು ನಾಶಪಡಿಸುತ್ತವೆ.

ಕೂಲಿಯಾಳುಗಳ ಅಭಾವ, ಅಧಿಕ ಖರ್ಚು ಮತ್ತು ಕಳೆ ತೆಗೆಯಲು ಹೆಚ್ಚು ಸಮಯ ಹಿಡಿಯುವುದು ಮುಂತಾದುವುಗಳಿಂದಾಗಿ ಕಳೆ ಹತೋಟಿ ಕಷ್ಟವಾಗುತ್ತಿದೆ. ಈಗ ಹಲವಾರು ಕಳೆನಾಶಕಗಳು ಬಳಕೆಗೆ ಬಂದಿವೆ. ತಜ್ಞರ ನೆರವನ್ನು ಪಡೆದು ಸೂಕ್ತ ಕಳೆನಾಶಕ ಬಳಸಿದಲ್ಲಿ ಹೆಚ್ಚಿನ ಲಾಭ ಸಾಧ್ಯ.

ಆಕಾರಮತ್ತುಸವರುವಿಕೆ

ಸಪೋಟ ಗಿಡಗಳಲ್ಲಿ ದೃಢವಾದ ಹಾಗೂ ಬಲಿಷ್ಠವಿರುವ ಕಾಂಡ ಅಗತ್ಯ. ಸಮತೋಲವಿರುವ ಚೌಕಟ್ಟು, ಸೂಕ್ತ ಆಕಾರ ಹಾಗೂ ಎತ್ತರಗಳಿಗೆ ಗಿಡಗಳನ್ನು ಪ್ರಾರಂಭದಿಂದಲೇ ಸವರಿ ಸರಿಪಡಿಸಬೇಕಾಗುತ್ತದೆ. ಗೂಟಿ ಗಿಡಗಳಲ್ಲಿ ಬಹುತೇಕ ರೆಂಬೆಗಳು ನೆಲಮಟ್ಟದಲ್ಲಿ ಹರಡಿ ಬೆಳೆಯುವುದು ಸಾಮಾನ್ಯ. ಪ್ರಾರಂಭದಲ್ಲಿ ಪ್ರಧಾನ ಕಾಂಡವು ಬಲಿಷ್ಟವಾಗಿ ಬೆಳೆಯುವಂತೆ ಮಾಡಲು ಪಕ್ಕ ರೆಂಬೆಗಳು ಅಗತ್ಯ. ಅನಂತರದ ದಿನಗಳಲ್ಲಿ ಅವುಗಳನ್ನು ಒಂದು ಮೀಟರ್ ಎತ್ತರದವರೆಗೆ ಸವರಿ ತೆಗೆಯುವುದು ಒಳ್ಳೆಯದು. ಒಂದು ವೇಳೆ ಅವುಗಳನ್ನು ಹಾಗೆಯೇ ಬೆಳೆಯಲು ಬಿಟ್ಟರೆ ಭಾರದಿಂದಾಗಿ ನೆಲದತ್ತ ಇಳಿಬೀಳುತ್ತವೆ. ಹಾಗೂ ಮರದ ನೆತ್ತಿಯ ನೆರಳಿನಿಂದಾಗಿ ಸರಿಯಾಗಿ ಫಸಲು ಬಿಡುವುದಿಲ್ಲ.

ಈ ಮರಗಳಲ್ಲಿ ರೆಂಬೆಗಳು, ಕಾಂಡದಲ್ಲಿ ನಿರ್ದಿಷ್ಟ ಅಂತರದಲ್ಲಿ ಮೂಡಿ ಬೆಳೆಯುವುದು ಸಹಜ. ಅವು ಕ್ರಮಬದ್ಧ ರೀತಿಯಲ್ಲಿ ವ್ಯವಸ್ಥಿತಗೊಂಡಿರುತ್ತವೆ. ಕಸಿ ಗಿಡಗಳಲ್ಲೂ ಸಹ ಪ್ರಧಾನ ಕಾಂಡವು ನೆಟ್ಟಗೆ, ಬಲಿಷ್ಟವಿರುವಂತೆ ನೋಡಿಕೊಳ್ಳಬೇಕು. ಸುಮಾರು ಒಂದು ಮೀಟರ್ ಎತ್ತರದವರೆಗೆ ಪಕ್ಕ ಕವಲುಗಳು ಇಲ್ಲದಿದ್ದರೆ ಸಾಕು. ಸಪೋಟ ಮರಗಳು ಪೂರ್ಣ ಬೆಳೆದಾಗ ನೋಡಲು ಆಕರ್ಷಕವಾಗಿದ್ದು ಸಮತೋಲ ಚೌಕಟ್ಟನ್ನು ಹೊಂದಿರುತ್ತವೆ. ಪ್ರತಿವರ್ಷ ಸವರುವ ಅಗತ್ಯವಿಲ್ಲ.

ಕಸಿ ಗಿಡಗಳಲ್ಲಿ ಬೇರು ಸಸಿಯ ಚಿಗುರು ಕಾಣಿಸಿಕೊಳ್ಳುತ್ತಿರುತ್ತವೆ. ಅವುಗಳನ್ನು ಆಗಿಂದಾಗ್ಗೆ ಚಿವುಟಿ ಹಾಕಬೇಕು. ಕೆಲವೊಮ್ಮೆ ಬೇಜವಾಬ್ದಾರಿಯಿಂದಾಗಿ ಬೇರುಸಸಿ ಚಿಗುರುಗಳು ಬೆಳೆದು ದೊಡ್ಡವಾಗಿ ಸಪೋಟ ಕಸಿಕೊಂಬೆ ನಶಿಸಿ ಹೋಗುವಂತೆ ಮಾಡುವುದುಂಟು. ಅದೇ ರೀತಿ ದಟ್ಟ ನೆರಳಿನಿಂದ ಕೂಡಿದ ರೆಂಬೆಗಳನ್ನು ಸವರಿದಲ್ಲಿ ಮಿಕ್ಕ ರೆಂಬೆಗಳು ದೃಢವಾಗಿ ಬೆಳೆಯಬಲ್ಲವು. ಸಪೋಟ ಮರಗಳಲ್ಲಿ ಹೊಸ ಚಿಗುರು ಮತ್ತು ಹೂವು ಒಟ್ಟಾಗಿ ಕಾಣಿಸಿಕೊಳ್ಳುವ ಕಾರಣ ಸವರುವಿಕೆ ತೀರಾ ಮಿತವಾಗಿರಬೇಕು. ಮುರಿದು ಹಾಳಾದ ರೆಂಬೆಗಳನ್ನೂ ಸಹ ಸವರಿ ತೆಗೆಯಬೇಕು.

ಕಾಯಿಗಳವೃದ್ಧಿಗೆಚೋದಕಗಳಬಳಕೆ

ಸಪೋಟ ಗಿಡಗಳಲ್ಲಿ ನೆಟ್ಟ ಮೊದಲನೇ ವರ್ಷದಲ್ಲಿಯೇ ಹೂವು ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಮೊದಲ ಒಂದೆರಡು ವರ್ಷಗಳವರೆಗೆ ಬಿಟ್ಟ ಹೂವನ್ನೆಲ್ಲಾ ಚಿವುಟಿ ಹಾಕುವುದು ಒಳ್ಳೆಯದು. ಅದರಿಂದ ಗಿಡಗಳು ಸಾಕಷ್ಟು ಕಸುವನ್ನು ಪಡೆಯಲು ಸಾಧ್ಯವಾಗುತ್ತದೆ. ಲಾಭದಾಯಕ ಫಸಲು ಸಿಗುವುದು ಸಸಿಗಳನ್ನು ನೆಟ್ಟ ಏಳು ವರ್ಷಗಳಿಂದಾಚೆಗೆ. ವರ್ಷಾದ್ಯಂತ ಹೂವು ಬಿಡುತ್ತಿರುತ್ತವೆ.

ಸಪೋಟ ಹೂವು ದ್ವಿಲಿಂಗಿಗಳಿರುತ್ತವೆ. ಆದಾಗ್ಯೂ ಕೆಲವೊಮ್ಮೆ ಬಂಜೆ ಮರಗಳು ಇಲ್ಲವೇ ಭಾಗಶಃ ಬಂಜೆ ಮರಗಳು ಕಂಡುಬರುತ್ತವೆ. ಅವು ಫಲ ಕಚ್ಚುವುದಿಲ್ಲ. ಪರಾಗಸ್ಪರ್ಶವಿಲ್ಲದೆ ಕಾಯಿ ಕಚ್ಚುವುದಿಲ್ಲ. ಹೀಗೆ ಪರಾಗಸ್ಪರ್ಶಗೊಳ್ಳದ ಹೂವು ಕಳಚಿ ಬೀಳುತ್ತವೆ. ಈ ಹಣ್ಣಿನ ಬೆಳೆಯಲ್ಲಿ ಸ್ವ-ಬಂಜೆತನ ವರದಿಯಾಗಿದೆ.

ಧಾರವಾಡ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಕಾಲಿಪತ್ತಿ, ಕ್ರಿಕೆಟ್ ಬಾಲ್, ಕಲ್ಕತ್ತಾ ರೌಂಡ್ ಮತ್ತು ಓವಲ್ ತಳಿಗಳ ಮರಗಳಲ್ಲಿ ಹೂಗಳ ರಚನೆ, ಪರಾಗಸ್ಪರ್ಶ ಮುಂತಾಗಿ ಅಧ್ಯಯನ ಮಾಡಿದ್ದು ಜೂನ್, ಅಕ್ಟೋಬರ್ ಮತ್ತು ಮಾರ್ಚ್ ತಿಂಗಳುಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಹೂವು ಬಿಟ್ಟಿದ್ದಾಗಿ ವರದಿ ಮಾಡಿದ್ದಾರೆ. ಅವುಗಳ ಪೈಕಿ ಜೂನ್ ತಿಂಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿಯೂ ಮತ್ತು ಅಕ್ಟೋಬರ್ ಮತ್ತು ಮಾರ್ಚ್ ತಿಂಗಳುಗಳಲ್ಲಿ ಸ್ವಲ್ಪ ಕಡಿಮೆ ಪ್ರಮಾಣದಲ್ಲಿಯೂ ಹೂವು ಕಾಣಿಸಿಕೊಂಡವು. ಅದೇ ರೀತಿಯಾಗಿ ಹೂವು ಬೆಳಿಗ್ಗೆ ನಾಲ್ಕು ಘಂಟೆ ಸಮಯದಲ್ಲಿ ಗರಿಷ್ಟ ಪ್ರಮಾಣದಲ್ಲಿ ಬಿರಿದುವೆಂದೂ ಮತ್ತು ಅದಾದ ಮರುದಿವಸ ಶಲಾಕಾಗ್ರಗಳು ಗರಿಷ್ಟ ಪ್ರಮಾಣದಲ್ಲಿ ರಸಮಯವಿದ್ದುವೆಂದೂ ವರದಿಯಾಗಿದೆ.

ಮತ್ತೊಂದು ಅಧ್ಯಯನದಲ್ಲಿ ಮಿನ್‌ಹಾಸ್ ಎಂಬುವರು ಸಪೋಟ ಹೂವು ಮುಂಜಾನೆ ಐದು ಘಂಟೆ ಸಮಯದಲ್ಲಿ ಅರಳಲು ಪ್ರಾರಂಭಿಸಿ ಏಳು ಘಂಟೆಯ ಹೊತ್ತಿಗೆ ಗರಿಷ್ಟ ಮಟ್ಟಕ್ಕೆ ಏರಿದ್ದಾಗಿ ತಿಳಿಸಿದ್ದಾರೆ. ಅವು ತಮ್ಮ ಅಧ್ಯಯನದಲ್ಲಿ ಗರಿಷ್ಟ ಪ್ರಮಾಣದ ಪರಾಗಕೋಶಗಳು ಏಳರಿಂದ ಎಂಟು ಘಂಟೆಗಳ ನಡುವೆ ಬಿರಿದು ಪರಾಗವನ್ನು ಹೊರಹಾಕಿದ್ದಾಗಿ ತಿಳಿಸಿದ್ದಾರೆ. ಇದು ಬಹುಮಟ್ಟಿಗೆ ಅನ್ಯ-ಪರಾಗಸ್ಪರ್ಶದ ಬೆಳೆ. ಪರಾಗಸ್ಪರ್ಶವಾಗಿ, ಗರ್ಭಧರಿಸಿದ ನಂತರವೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಹೂವು-ಹೀಚುಗಳು ಉದುರಿ ಬೀಳುತ್ತವೆ. ಅದಕ್ಕೆ ಸ್ವ-ಅಸಮಂಜಸತ್ವ ಕಾರಣವಿರುತ್ತದೆ. ಗೊಂಚಲುಗಳ ಬುಡಭಾಗದಲ್ಲಿನ ಹೂವು ಹೆಚ್ಚಿನ ಸಂಖ್ಯೆಯಲ್ಲಿ ಕಾಯಿ ಕಚ್ಚಿದ್ದಾಗಿ ತಿಳಿದುಬಂದಿದೆ.

ಸ್ವ-ವಿಫಲತೆಯಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಕಾಯಿ ಕಚ್ಚುವುದಿಲ್ಲ; ಪರಾಗಸ್ಪರ್ಶಕ್ಕೆ ಅಡ್ಡಿಯಾಗುವುದೇ ಅದಕ್ಕೆ ಕಾರಣ. ಅಂತಹ ಸಂದರ್ಭಗಳಲ್ಲಿ ಚೋದಕಗಳನ್ನು ಬಳಸಿ ಈ ಸಮಸ್ಯೆಯನ್ನು ದೂರಗೊಳಿಸಬಹುದು. ಹೂವು ಮತ್ತು ಹೀಚು ಉದುರುವುದನ್ನು ತಪ್ಪಿಸಬಹುದು. ಚೋದಕಗಳನ್ನು ಬಳಸಿ ಈ ಚೋದಕಗಳನ್ನು ದ್ರಾವಣರೂಪದಲ್ಲಿ ಸಿಂಪಡಿಸಬೇಕು. ದ್ರಾವಣವು ಸೂಕ್ತ ಸಾಮರ್ಥ್ಯದ್ದಾಗಿರಬೇಕು. ಈ ಉದ್ದೇಶಕ್ಕೆ ಜಿಬ್ಬೆರೆಲ್ಲಿಕ್ ಆಮ್ಲ್, ಎಥ್ರೆಲ್, ಪ್ಲಾನೊಫಿಕ್ಸ್ ಮುಂತಾದವು ಸೂಕ್ತವಿರುತ್ತವೆ. ಈ ಚೋದಕಗಳನ್ನು ಹೂವು ಬಿಡುವ ಮುನ್ನ ಹಾಗೂ ಹೂವು ಬಿಟ್ಟು ಕಾಯಿ ಕಚ್ಚಿದ ನಂತರ ಅಂದರೆ ಸಣ್ಣ ಹೀಚು ಬಟಾಣಿ ಕಾಳುಗಳಷ್ಟು ಗಾತ್ರಕ್ಕೆ ಬಂದಾಗ ಸಿಂಪಡಿಸಿದಾಗ ೧೦೦ ಪಿಪಿಎಂ ಎಸ್ ಎಡಿ ಎಚ್ ಚೋದಕವು ಅತ್ಯಧಿಕ ಕಾಯಿ ಕಚ್ಚುವಿಕೆಯಲ್ಲಿಯೂ ಮತ್ತು ೩೦೦ ಪಿಪಿಎಂ ಪ್ಲಾನೊಫಿಕ್ಸ್ ಅತ್ಯಧಿಕ ಕಾಯಿ ಹಿಡಿಯುವಲ್ಲಿಯೂ ನೆರವಾಗಿದ್ದಾಗಿ ಪ್ರಯೋಗಗಳಿಂದ ತಿಳಿದುಬಂದಿದೆ. ನ್ಯಾಫ್ತಲಿನ್ ಅಸೆಟಿಕ್ ಆಮ್ಲವನ್ನೂ ಸಹ ಈ ಉದ್ದೇಶಕ್ಕೆ ಬಳಸಿಕೊಳ್ಳಬಹುದು.

ಗುಜರಾತ್ ಕೃಷಿ ವಿಶ್ವವಿದ್ಯಾನಿಲಯದ ನವಸಾರಿಯಲ್ಲಿ ಕೈಗೊಂಡ ಅಧ್ಯಯನಗಳಲ್ಲಿ ಜಿಬ್ಬೆರೆಲ್ಲಿಕ್ ಆಮ್ಲ್ ಕ್ಕಿಂತ ೨೫ ರಿಂದ ೧೦೦ ಪಿಪಿಎಂ ನ್ಯಾಫ್ತಲಿನ್ ಅಸೆಟಿಕ್ ಆಮ್ಲವು ಹೆಚ್ಚು ಪರಿಣಾಮಕಾರಿಯಾಗಿ ಕಂಡುಬಂದಿದೆ.

ಕಾಯಿಗಳ ವೃದ್ಧಿ : ಸಪೋಟದಲ್ಲಿ ಹೀಚುವೃದ್ಧಿ ಹೊಂದುವಾಗ ಹಲವಾರು ಹಂತಗಳಿರುತ್ತವೆ. ಅವುಗಳ ಪೈಕಿ ಕೆಲವು ಹಂತಗಳು ತೀವ್ರಗತಿಯಲ್ಲಿದ್ದರೆ ಮತ್ತೆ ಕೆಲವು ಮಂದಗತಿಯಲ್ಲಿರುತ್ತವೆ. ಇಂತಹ ಒಂದು ಅಧ್ಯಯನವನ್ನು ಧಾರವಾಡ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಕಾಲಿಪತ್ತಿ ತಳಿಯಲ್ಲಿ ಕೈಗೊಂಡಾಗ ಕಾಯಿಗಳು ಮೂರು ಹಂತಗಳಲ್ಲಿ ವೃದ್ಧಿಯಾಗಿದ್ದು ಕಂಡುಬಂದಿತು. ಈ ಹಂತಗಳ ಪೈಕಿ ಎರಡು ತೀವ್ರಗತಿಯಲ್ಲಿಯೂ ಮತ್ತು ಇನ್ನೊಂದು ಮಂದಗತಿಯಲ್ಲಿಯೂ ಸಂಭವಿಸಿದುವು.

ಪ್ರಾರಂಭದಿಂದ ಹದಿನೈದನೇ ಪಾಕ್ಷಿಕದವರೆಗೆ ಶೇ. ೨೩.೬ ರಷ್ಟು, ಎರಡನೆಯ ಹಂತದಲ್ಲಿ ಶೇ. ೧೪.೪ ಹಾಗೂ ಮೂರನೆಯ ಹಂತದಲ್ಲಿ ಶೇ. ೬೨ರಷ್ಟು ಹೆಚ್ಚಳಗಳು ಕಂಡುಬಂದಿದ್ದಾಗಿ ವರದಿಯಾಗಿದೆ. ಮೂರನೆಯ ಹಂತವು ಹದಿನೇಳನೆಯ ಪಕ್ಷದಿಂದ ಇಪ್ಪತ್ತೊಂದನೆಯ ಪಕ್ಷದವರೆಗೆ ವಿಸ್ತರಿಸಿದ್ದು ಅದು ಗರಿಷ್ಠ ಪ್ರಮಾಣದ್ದಾಗಿತ್ತು.

ಈ ಬೆಳೆಯಲ್ಲಿ ಹೂವು ಬಿಟ್ಟು ಕಾಯಿ ಕಚ್ಚಿದ ದಿನದಿಂದ ಕೊಯ್ಲಾಗುವವರೆಗೆ ಸುಮಾರು ಹತ್ತರಿಂದ ಹತ್ತೂವರೆ ತಿಂಗಳುಗಳ ಅವಧಿ ಹಿಡಿಸುತ್ತದೆ. ಈ ಅವಧಿಯಲ್ಲಿ ಕಾಯಿಗಳ ಗಾತ್ರ, ತೂಕ, ತಿರುಳಿನ ಪ್ರಮಾಣ, ಬೀಜ ಮುಂತಾಗಿ ದಿನೇ ದಿನೇ ವೃದ್ಧಿ ಹೊಂದುತ್ತಿರುತ್ತವೆ. ಅದೇ ರೀತಿ ಅವುಗಳಲ್ಲಿನ ಒಟ್ಟು ಘನಪದಾರ್ಥಗಳ ಪ್ರಮಾಣ, ಸಕ್ಕರೆ, ಪಿಎಚ್, ಟ್ಯಾನಿನ್ ಮುಂತಾದವುಗಳ ಪ್ರಮಾಣವೂ ಸಹ ಸುಧಾರಿಸುತ್ತದೆ. ಬೇಸಿಗೆಯಲ್ಲಿ ಅಂದರೆ ಮಾರ್ಚ್-ಮೇ ತಿಂಗಳುಗಳಲ್ಲಿ ಪಕ್ವಗೊಂಡು ಕೊಯ್ಲಿಗೆ ಬರುವ ಹಣ್ಣು ಹೆಚ್ಚು ಸಿಹಿಯಾಗಿದ್ದು ಉತ್ತಮ ಗುಣಮಟ್ಟ ಹೊಂದಿರುತ್ತವೆ.

ಹಣ್ಣುಗಳ ವೃದ್ಧಿಯಲ್ಲಿ ಬೀಜಗಳ ಪಾತ್ರ : ಸಪೋಟ ಹಣ್ಣುಗಳ ಆಕಾರದಲ್ಲಿ ಬಹಳಷ್ಟು ವ್ಯತ್ಯಾಸವಿರುತ್ತದೆ. ಉದಾಹರಣೆಗೆ ಕಲ್ಕತ್ತಾ ರೌಂಡ್, ಕ್ರಿಕೆಟ್‌ಬಾಲ್ ಮುಂತಾದ ತಳಿಗಳ ಹಣ್ಣು ಗುಂಡಗಿದ್ದು, ಸ್ವಲ್ಪ ಅದುವಿದಂತೆ ಕಾಣುತ್ತವೆ. ಆದರೆ ಕಾಲಿಪತ್ತಿ, ಛತ್ರಿ ಮುಂತಾದ ತಳಿಗಳ ಹಣ್ಣು ಉದ್ದನಾಗಿ, ಮೊಟ್ಟೆಯ ಆಕಾರ ಹೊಂದಿರುತ್ತವೆ. ಕೆಲವೊಮ್ಮೆ ಒಂದೇ ಮರದಲ್ಲಿ ಎರಡೂ ಆಕಾರಗಳ ಹಣ್ಣನ್ನು ಕಾಣಬಹುದು. ಹಣ್ಣುಗಳ ಆಕಾರಕ್ಕೆ ಅವುಗಳಲ್ಲಿನ ಬೀಜಗಳ ಸಂಖ್ಯೆ ಕಾರಣವಿರುತ್ತದೆ. ಗುಂಡಗಿನ ಹಣ್ಣುಗಳಲ್ಲಿ ಹೆಚ್ಚು ಬೀಜ ಇರುವುದು ಸಾಮಾನ್ಯ ಉದ್ದ ಹಣ್ಣುಗಳಿಗಿಂತ ಗುಂಡಗಿನ ಹಣ್ಣುಗಳು ಹೆಚ್ಚು ಭಾರವಿರುತ್ತವೆ. ಅವುಗಳಲ್ಲಿ ಬೀಜಗಳು ಮಧ್ಯದಿಂಡಿನ ಸುತ್ತ ಸಮನಾಗಿ ಹಂಚಿಕೆಯಾಗಿರುತ್ತವೆ. ಹಣ್ಣುಗಳಲ್ಲಿನ ಬೀಜಗಳ ಸಂಖ್ಯೆಯಲ್ಲಿ ವ್ಯತ್ಯಾಸವಿರುತ್ತದೆ. ಕೆಲವೊಂದರಲ್ಲಿ ಕೃಶವಾದ ಹಾಗೂ ಪೂರ್ಣವಾಗಿ ವೃದ್ಧಿಹೊಂದಿಲ್ಲದ ಬೀಜ ಸಹ ಕಂಡುಬರುವುದುಂಟು.

ಬೇಸಾಯಕ್ರಮಗಳಪಟ್ಟಿ

ಸಪೋಟ ಹಣ್ಣಿನ ತೋಟದಲ್ಲಿ ಮಾಡಬೇಕಾದ ಬೇಸಾಯ ಕ್ರಮಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಅದರಿಂದ ಪ್ರತಿ ತಿಂಗಳು ಕ್ರಮಬದ್ಧವಾಗಿ ಹಾಗೂ ಸಕಾಲದಲ್ಲಿ ವಿವಿಧ ಕೆಲಸಗಳನ್ನು ಮಾಡಿದ್ದೇ ಆದಲ್ಲಿ ಬೇಸಾಯಕ್ಕೆ ತಗಲುವ ಖರ್ಚನ್ನು ಗಣನೀಯವಾಗಿ ಉಳಿಸಬಹುದು. ಅಂತಹ ಕಾರ್ಯವಿಧಾನಗಳನ್ನು ಕೆಳಗೆ ಕೊಡಲಾಗಿದೆ.

ಜೂನ್ : ಗುಂಡಿಗಳಲ್ಲಿ ಗಿಡಗಳನ್ನು ನೆಡಲು ಸಕಾಲ. ಬೆಳೆದ ಗಿಡಮರಗಳಿಗೆ ಮೊದಲ ಕಂತಿನ ಗೊಬ್ಬರಗಳನ್ನು ಕೊಡಬೇಕು. ಪಾತಿಗಳ ಮಣ್ಣನ್ನು ಸಡಲಿಸಬೇಕು. ಅದೇ ರೀತಿ ಸಾಲುಗಳ ನಡುವೆ ಹಗುರವಾಗಿ ಉಳುಮೆ ಮಾಡಿ, ಹಸಿರುಗೊಬ್ಬರದ ಬೆಳೆಯನ್ನು ಬಿತ್ತಬೇಕು. ಹೊಸತಾಗಿ ನೆಟ್ಟ ಗಿಡಗಳಿಗೆ ಆಸರೆ ಕೋಲು ಸಿಕ್ಕಿಸಿ ಕಟ್ಟಬೇಕು. ಅವುಗಳ ಬುಡದ ಸುತ್ತ ಹೆಪ್ಟಾಕ್ಲೋರ್ ಪುಡಿಯನ್ನು ಉದುರಿಸಿದಲ್ಲಿ ಗೆದ್ದಲಿನ ಕಾಟ ಇರುವುದಿಲ್ಲ.

ಜುಲೈ : ಸಸಿಗಳನ್ನು ನೆಡುವ ಮತ್ತು ಹಸಿರುಗೊಬ್ಬರದ ಬೆಳೆಯನ್ನು ಬಿತ್ತುವ ಕೆಲಸವನ್ನು ಮುಂದುವರೆಸಬಹುದು. ಗೂಟಿ ಮತ್ತು ಕಸಿ ಕಟ್ಟಲು ಇದು ಸೂಕ್ತಕಾಲ. ಚಿಗುರೆಲೆಗಳಲ್ಲಿ ಸುರಂಗ ಕೊರೆಯುವ ಹುಳುಗಳು ಕಾಣಿಸಿಕೊಳ್ಳುತ್ತವೆ. ಸೂಕ್ತ ಸಸ್ಯ ಸಂರಕ್ಷಣೆಯನ್ನು ಕೈಗೊಳ್ಳಬೇಕು. ತಾಕುಗಳಲ್ಲಿನ ನೀರು ಹೊರ ಹೋಗದಂತೆ ಬಲವಾದ ಬದುಗಳನ್ನು ಹಾಕಬೇಕು.

ಆಗಸ್ಟ್ : ಕಳೆಗಳನ್ನು ಕಿತ್ತು ತೆಗೆಯಬೇಕು. ಸಸ್ಯಾಭಿವೃದ್ಧಿ ಕೆಲಸಗಳನ್ನು ಮುಂದುವರೆಸಬೇಕು. ಬೇರು ಸಸಿಗಳಲ್ಲಿ ಮೂಡುವ ಚಿಗುರನ್ನು ಚಿವುಟಿ ಹಾಕಬೇಕು. ಹಸಿರು ಗೊಬ್ಬರವನ್ನು ಮಣ್ಣಿಗೆ ಸೇರಿಸಬೇಕು. ಕೀಟ ಮತ್ತು ರೋಗಗಳ ಬಗ್ಗೆ ನಿಗಾವಹಿಸಬೇಕು.

ಸೆಪ್ಟೆಂಬರ್ : ಹೊಸದಾಗಿ ನೆಟ್ಟ ಗಿಡಗಳ ಪಾತಿಗಳಲ್ಲಿ ಅಧಿಕ ಮಳೆಯ ನೀರು ನಿಂತಲ್ಲಿ ಅದನ್ನು ಹೊರಹಾಕಬೇಕು. ಎರಡನೆಯ ಕಂತಿನ ಗೊಬ್ಬರಗಳನ್ನು ಕೊಡಲು ಸಕಾಲ. ಸಸ್ಯ ಸಂರಕ್ಷಣೆಯನ್ನು ಮುಂದುವರೆಸಬಹುದು.

ಅಕ್ಟೋಬರ್ : ಮಳೆಗಾಲ ಮುಗಿಯುತ್ತದೆ. ಹಣ್ಣನ್ನು ಕೊಯ್ಲು ಮಾಡಬಹುದು. ಸಾಲುಗಳ ನಡುವೆ ಹಗುರವಾಗಿ ಉಳುಮೆ ಮಾಡಿದಲ್ಲಿ ಕಳೆ ಕಸಗಳು ಮಣ್ಣೊಳಗೆ ಸೇರಿ ಕೊಳೆಯುತ್ತವೆ. ಪಾತಿಗಳನ್ನು ಸ್ವಚ್ಛವಾಗಿಡಬೇಕು. ಎರಡನೆಯ ಕಂತಿನ ಗೊಬ್ಬರಗಳನ್ನು ಕೊಡುವ ಕೆಲಸವನ್ನು ಮುಂದುವರೆಸಬಹುದು.

ನವೆಂಬರ್ : ಚಳಿಗಾಲದ ಪ್ರಾರಂಭ. ಕಪ್ಪುಬೂಷ್ಟು ನಿವಾರಣೆಗೆ ಸಕಾಲ. ಹೊಸದಾಗಿ ನೆಟ್ಟ ಗಿಡಗಳಿಗೆ ನೀರು ಕೊಡಬೇಕು.

ಡಿಸೆಂಬರ್ : ಮಧ್ಯಂತರ ಬೆಳೆಗಳಿದ್ದಲ್ಲಿ ಕೊಯ್ಲು ಮಾಡಬಹುದು. ಎಳೆಯ ಗಿಡಗಳಿಗೆ ನೀರು ಕೊಡಬೇಕು.

ಜನವರಿ : ಹಣ್ಣು ಬಲಿತು ಪಕ್ವಗೊಳ್ಳುವ ಸಮಯ. ಬಲಿತ ಹಣ್ಣುಗಳನ್ನು ಬಿಡಿಸಿ ತೆಗೆಯುವ ಕೆಲಸವನ್ನು ಪ್ರಾರಂಭಿಸಬಹುದು. ಪಾತಿಗಳನ್ನು ಹಸನಾಗಿಡಬೇಕು. ಎಳೆಯ ಗಿಡಗಳಿಗೆ ನೀರು ಕೊಡುವುದು ಅಗತ್ಯ.

ಫೆಬ್ರುವರಿ : ಕೊಯ್ಲು ಮುಂದುವರೆಯುತ್ತದೆ. ಗಿಡಗಳಿಗೆ ನೀರು ಕೊಡಬೇಕು.

ಮಾರ್ಚ್, ಏಪ್ರಿಲ್ : ಕೊಯ್ಲು ಭರದಿಂದ ಸಾಗುತ್ತದೆ. ಹೊಸದಾಗಿ ತೋಟ ಎಬ್ಬಿಸುವುದಿದ್ದಲ್ಲಿ ಸೂಕ್ತ ಜಾಗವನ್ನು ಆಯ್ಕೆ ಮಾಡಿ ಗುಂಡಿಗಳನ್ನು ತೆಗೆದು ಬಿಸಿಲಿಗೆ ಬಿಡಬೇಕು.

ಮೇ : ಇದು ಹೆಚ್ಚು ಬಿಸಿಲು ಇರುವ ತಿಂಗಳು. ಗಿಡಗಳಿಗೆ ನೀರು ಹಾಕುವ ಹಾಗೂ ಕೊಯ್ಲು ಮಾಡುವ ಕೆಲಸಗಳನ್ನು ಮುಂದುವರೆಸಬೇಕು. ಕೊಯ್ಲು ಕಡೆಯ ಹಂತದಲ್ಲಿ ಇರುತ್ತದೆ. ಹೊಸದಾಗಿ ತೆಗೆದ ಗುಂಡಿಗಳನ್ನು ಮೇಲ್ಮಣ್ಣು ಮತ್ತು ಗೊಬ್ಬರಗಳ ಮಿಶ್ರಣದಿಂದ ತುಂಬಿ ಮುಚ್ಚಬೇಕು. ತೆಳ್ಳಗೆ ನೀರು ಕೊಟ್ಟರೆ ಇಲ್ಲವೇ ಮಳೆಯಾದರೆ ಅದು ಚೆನ್ನಾಗಿ ಕಳಿತುಕೊಳ್ಳುತ್ತದೆ.