ಬಲಿತ ಕಾಯಿಗಳನ್ನು ಸಕಾಲದಲ್ಲಿ ಕೊಯ್ಲು ಮಾಡುವುದರೊಂದಿಗೆ ಅವುಗಳನ್ನು ಹಣ್ಣು ಮಾಡುವ ವಿಧಾನ, ವಿವಿಧ ದರ್ಜೆ ವರ್ಗೀಕರಣಗಳೂ ಮುಖ್ಯವಾಗಿರುತ್ತವೆ. ಹೀಗೆ ದೊರೆತ ಉತ್ತಮ ಇಳುವರಿ ಮೇರೆಗೆ ಬೆಳೆಗಾರನಿಗೆ ತಗುಲಿದ ಅಂದಾಜು ವೆಚ್ಚದ ಪ್ರಮಾಣದೊಂದಿಗೆ ದೊರಕಿದ ವರಮಾನವನ್ನು ಪರಿಗಣಿಸಬೇಕಾಗುತ್ತದೆ. ಇವುಗಳ ವಿವರವಾದ ಚಿತ್ರಣ ಇಲ್ಲಿದೆ.

ಗಿಡಗಳನ್ನು ನೆಟ್ಟ ವರ್ಷವೇ ಸ್ವಲ್ಪ ಹೂವು ಕಾಣಿಸಿಕೊಳ್ಳುತ್ತವೆ. ಅವುಗಳನ್ನು ಕಿತ್ತು ಹಾಕಬೇಕು. ಅಪಕ್ವ ಕಾಯಿಗಳನ್ನು ಕೊಯ್ಲು ಮಾಡಬಾರದು. ಒಂದು ವೇಳೆ ಹಾಗೇನಾದರು ಕೊಯ್ಲು ಮಾಡಿದ್ದೇ ಆದರೆ ಅವು ಸರಿಯಾಗಿ ಪಕ್ವಗೊಳ್ಳುವುದಿಲ್ಲ ಮತ್ತು ತಿನ್ನಲು ರುಚಿಯಾಗಿರುವುದಿಲ್ಲ. ಪೂರ್ಣಬಲಿತ ಕಾಯಿಗಳನ್ನು ಮಾತ್ರವೇ ಕೊಯ್ಲು ಮಾಡಬೇಕು. ಸಪೋಟ ಹಣ್ಣು ಕೊಯ್ಲಿನ ನಂತರ ಪಕ್ವಗೊಳ್ಳಬಲ್ಲವು. ಕಾಯಿ ಬಲಿತು ಕೊಯ್ಲಿಗೆ ಸಿದ್ಧವಾಗಿವೆಯೇ ಅಥವಾ ಇಲ್ಲವೇ ಎಂಬುದನ್ನು ಕೆಳಗಿನ ಲಕ್ಷಣಗಳಿಂದ ತಿಳಿಯಬಹುದು :

೧. ಪೂರ್ಣಬಲಿತ ಕಾಯಿಗಳ ಬಣ್ಣ ಮಾಸಲು ಕಿತ್ತಳೆ ಅಥವಾ ಆಲೂಗೆಡ್ಡೆಯ ಬಣ್ಣದಂತಿರುತ್ತದೆ.

೨. ಕಾಯಿಗಳ ಸಿಪ್ಪೆಯನ್ನು ಉಗುರಿನಿಂದ ಕೆರೆದಾಗ ಹಳದಿ ಗೆರೆ ಕಾಣಿಸಿಕೊಂಡರೆ ಅವು ಬಲಿತಿವೆಯೆಂದು ಅರ್ಥ. ಒಂದು ವೇಳೆ ಗೆರೆ ಹಸಿರು ಬಣ್ಣದ್ದಿದ್ದರೆ ಅವು ಇನ್ನೂ ಬಲಿತಿಲ್ಲವೆಂದು ಅರ್ಥ.

೩. ಅಪಕ್ವ ಕಾಯಿಗಳ ಮೇಲೆ ದಟ್ಟವಾದ ಚುಂಡು ಅಥವಾ ಪುಡಿ ಇರುತ್ತದೆ. ಆದರೆ ಅವು ಬಲಿತು ಕೊಯ್ಲಿಗೆ ಸಿದ್ಧಗೊಂಡಂತೆಲ್ಲಾ ಈ ಪುಡಿ ಉದುರಿಬೀಳುತ್ತದೆ.

೪. ಕಾಯಿ ಬಲಿತು ಕೊಯ್ಲಿಗೆ ಸಿದ್ಧಗೊಂಡಾಗ ಅವುಗಳಲ್ಲಿನ ಹಾಲು ಕಡಿಮೆಯಾಗುತ್ತದೆ.

೫. ಅಪಕ್ವ ಕಾಯಿಗಳ ತುದಿಯಲ್ಲಿನ ಶಲಾಕಾ ಕೂಳೆ ಬಲವಾಗಿರುತ್ತದೆ. ಆದರೆ ಬಲಿತು ಕೊಯ್ಲಿಗೆ ಬರುವ ಹೊತ್ತಿಗೆ ಈ ಕೂಳೆ ಉದುರಿಬೀಳುತ್ತದೆ

೬. ತೋಟದಲ್ಲಿ ಕಾಯಿ ಪಕ್ವಗೊಂಡಂತೆಲ್ಲಾ ಗಿಳಿ, ಕಾಗೆ, ಅಳಿಲು ಮುಂತಾದುವು ಗಾಯ ಮಾಡಿದ ಹಣ್ಣು ಅಲ್ಲಲ್ಲಿ ಬಿದ್ದಿರುತ್ತವೆ.

ವರ್ಷದಾದ್ಯಂತ ಹೂವು ಬಿಟ್ಟು ಕಾಯಿ ಕಚ್ಚುತ್ತಿರುತ್ತವೆಯಾದ್ದರಿಂದ ಎಲ್ಲಾ ಹಣ್ಣು ಒಮ್ಮೆಲೇ ಕೊಯ್ಲಿಗೆ ಸಿದ್ಧವಿರುವುದಿಲ್ಲ. ಅವು ಬಲಿತು ಪಕ್ವಗೊಂಡಂತೆಲ್ಲಾ ಕೊಯ್ಲು ಮಾಡಬೇಕಾಗುತ್ತದೆ. ಮರದಲ್ಲಿಯೇ ಹಣ್ಣಾಗಲು ಬಿಡಬಾರದು. ದೋರೆಗಾಯಿಗಳನ್ನು ತೊಟ್ಟು ಸಮೇತ ಕೈಯಲ್ಲಿ ಹಿಡಿದು ತಿರುವಿದಲ್ಲಿ ಅವು ಸುಲಭವಾಗಿ ಕಿತ್ತು ಬರುತ್ತವೆ. ಒಂದು ವೇಳೆ ಹಣ್ಣು ಕೈಗೆ ಎಟುಕದಿದ್ದಲ್ಲಿ ರೆಂಬೆಗಳ ಮೇಲೆ ಹತ್ತದೆ, ಮಡಚುವ ಏಣಿಗಳ ನೆರವಿನಿಂದ ಕೊಯ್ಲು ಮಾಡಬೇಕು. ಕಿತ್ತ ಹಣ್ಣನ್ನು ಬುಟ್ಟೆ ಅಥವಾ ಗೋಣಿ ಚೀಲಗಳಲ್ಲಿ ಸಂಗ್ರಹಿಸಿ ನೆರಳಲ್ಲಿ ಹಾಸಿದ ಈಚಲು ಚಾಪೆಗಳ ಮೇಲೆ ತೆಳ್ಳಗೆ ಹರಡಬೇಕು. ಬೆಳಿಗ್ಗೆ ತಂಪು ಹೊತ್ತಿನಲ್ಲಿ ಹಣ್ಣನ್ನು ಬಿಡಿಸುವುದು ಒಳ್ಳೆಯದು.

ಕರ್ನಾಟಕದಲ್ಲಿ ಮಾರ್ಚ್-ಮೇ ಮತ್ತು ಸೆಪ್ಟೆಂಬರ್-ಅಕ್ಟೋಬರ್ ಪ್ರಮುಖ ಕೊಯ್ಲುಗಾಲಗಳಾದರೆ ಮಹಾರಾಷ್ಟ್ರ ಮತ್ತು ಪಶ್ಚಿಮ ಕರಾವಳಿಗಳಲ್ಲಿ ಜನವರಿ-ಫೆಬ್ರುವರಿ ಮತ್ತು ಮೇ-ಜೂನ್ ಪ್ರಧಾನ ಕೊಯ್ಲುಗಾಲಗಳು. ಆಂಧ್ರ ಪ್ರದೇಶದಲ್ಲಿ ಸಹ ಮಾರ್ಚ್-ಮೇ ಮತ್ತು ಸೆಪ್ಟೆಂಬರ್-ಅಕ್ಟೋಬರ್ ಪ್ರಧಾನ ಕೊಯ್ಲುಗಾಲಗಳು.

ಇಳುವರಿಯು ಮರಗಳ ವಯಸ್ಸು, ತಳಿ, ಹವಾ ಮತ್ತು ಭೂಗುಣ, ಆರೈಕೆ ಮತ್ತು ಪೋಷಣೆ, ಸಸ್ಯ ಸಂರಕ್ಷಣೆ ಮುಂತಾದುವುಗಳನ್ನನುಸರಿಸಿ ವ್ಯತ್ಯಾಸಗೊಳ್ಳುತ್ತದೆ. ಇಳುವರಿ ಮೂವತ್ತು ವರ್ಷಗಳವರೆಗೆ ಏರುತ್ತಲೇ ಇರುತ್ತದೆ. ಕ್ರಿಕೆಟ್ ಬಾಲ್, ಕಲ್ಕತ್ತಾ ರೌಂಡ್ ಮುಂತಾದ ತಳಿಗಳ ಹಣ್ಣು ದೊಡ್ಡದಿರುತ್ತವೆಯಾದರೂ ಅವುಗಳ ಸಂಖ್ಯೆ ಕಡಿಮೆ ಇರುತ್ತದೆ. ಆದರೆ ಕಾಲಿಪತ್ತಿ, ಪಾಲ, ಓವಲ್, ಛತ್ರಿ ಮುಂತಾದ ತಳಿಗಳ ಹಣ್ಣು ಗಾತ್ರದಲ್ಲಿ ಸಣ್ಣವಿರುತ್ತವೆಯಾದರೂ, ಸಂಖ್ಯೆ ಜಾಸ್ತಿ ಇರುತ್ತದೆ. ವಯಸ್ಸನ್ನನುಸರಿಸಿ ಮರಗಳ ಸರಾಸರಿ ಇಳುವರಿ (ಹಣ್ಣುಗಳ ಸಂಖ್ಯೆ) ಮತ್ತು ಅವುಗಳ ತೂಕವನ್ನು ಕೋಷ್ಟಕ ೪ ರಲ್ಲಿ ಕೊಟ್ಟಿದೆ.

ಕೋಷ್ಟಕ . ಮರದ ವಯಸ್ಸು, ಹಣ್ಣುಗಳ ಸಂಖ್ಯೆ ಮತ್ತು ಅವುಗಳ ತೂಕ

 

ಸಪೋಟ ಮರಗಳು ಉತ್ತಮ ನಿರ್ವಹಣೆಯಿದ್ದಲ್ಲಿ ಸುಮಾರು ೭೫ ವರ್ಷಗಳವರೆಗೆ ಒಳ್ಳೆಯ ಫಸಲನ್ನು ಕೊಡಬಲ್ಲವು. ಕೆಲವೆಡೆಗಳಲ್ಲಿ ೧೦೦ ವರ್ಷಗಳಿಗೂ ಮೇಲ್ಪಟ್ಟ ವಯಸ್ಸಿನ ಮರಗಳಿದ್ದು ಯಥೇಚ್ಛವಾಗಿ ಹಣ್ಣು ಬಿಡುತ್ತಿವೆ.

ಸಂಗ್ರಹಣೆ

ಕೊಯ್ಲು ಮಾಡಿದ ಫಸಲನ್ನು ಜೋಪಾನವಾಗಿ ಸಾಗಿಸಿ ಸಂಗ್ರಹಿಸಬೇಕು. ಸಾಗಾಣಿಕೆಯಲ್ಲಿ ಅವು ಜಜ್ಜಿ ಹಾಳಾಗಬಾರದು. ಮೆತ್ತನೆಯ ಹುಲ್ಲನ್ನು ಇಲ್ಲವೇ ಕಾಗದದ ಚೂರುಗಳನ್ನು ಹರಡಿದ ಬುಟ್ಟಿಗಳಲ್ಲಿ ಜೋಪಾನವಾಗಿ ತುಂಬಿ ಸಾಗಿಸುವುದು ಬಹು ಮುಖ್ಯ. ಪ್ಲಾಸ್ಟಿಕ್ ಬುಟ್ಟಿಗಳಾದರೆ ಅವುಗಳನ್ನು ಒಂದರ ಮೇಲೊಂದಿಟ್ಟರೂ ಹಣ್ಣು ಜಜ್ಜುವುದಿಲ್ಲ ಅಲ್ಲದೆ ಹಣ್ಣುಗಳ ನಡುವೆ ಗಾಳಿಯಾಡಲು ಅವಕಾಶವಿರುತ್ತದೆ.

ಪೂರ್ಣ ಮಾಗಿದ ಹಣ್ಣುಗಳ ಸಂಗ್ರಹಣಾ ಅವಧಿ ಅವುಗಳ ಉಸಿರಾಟ, ಸಾಪೇಕ್ಷ ಆರ್ದ್ರತೆ, ಉಷ್ಣತೆ, ಕಿಣ್ವಗಳ ಕ್ರಿಯೆ ಮತ್ತು ಇಂಗಾಲಾಮ್ಲಗಳ ಪ್ರಮಾಣಗಳನ್ನನುಸರಿಸಿ ವ್ಯತ್ಯಾಸಗೊಳ್ಳುತ್ತದೆ. ಕೊಯ್ಲಾದ ಒಂದೆರಡು ದಿನಗಳಲ್ಲಿ ಅತ್ಯಧಿಕ ಪ್ರಮಾಣದ ಎಥಿಲಿನ್ ಬಿಡುಗಡೆಯಾಗುತ್ತದೆ. ಆಗ ಗರಿಷ್ಠ ಉಸಿರಾಟವಿರುತ್ತದೆ. ಹೀಗೆ ಹೊರಬಿದ್ದ ಎಥಿಲಿನ್ ಅನ್ನು ಹೊರದೂಡಿ ಶೇ. ೫-೧೦ ರಷ್ಟು ಇಂಗಾಲಾಮ್ಲವನ್ನು ಸಂಗ್ರಹಣಾ ಕೋಣೆಗಳಿಗೆ ಹೊಗಿಸಿದರೆ ಅವುಗಳ ಸಂಗ್ರಹಣಾವಧಿ ಹೆಚ್ಚುತ್ತದೆ. ಈ ಅವಧಿಯಲ್ಲಿ ಅತೀ ಹೆಚ್ಚಿನ ಸಾಪೇಕ್ಷ ಆರ್ದ್ರತೆ ಇಲ್ಲವೇ ಇಂಗಾಲಾಮ್ಲ ಇದ್ದದ್ದೇ ಆದರೆ ಹಣ್ಣುಗಳ ಗುಣಮಟ್ಟ ಕೆಡುತ್ತದೆ. ಹಣ್ಣು ಪಕ್ವಗೊಂಡಂತೆಲ್ಲ ಅವುಗಳಲ್ಲಿನ ಅಸ್ಕಾರ್ಬಿಕ್ ಆಮ್ಲದ ಪ್ರಮಾಣ ಕುಸಿಯುತ್ತದೆ.

ಸಾಮಾನ್ಯ ಪರಿಸ್ಥಿಗಳಲ್ಲಿ ಕೊಯ್ಲು ಮಾಡಿದ ನಂತರ ಹಣ್ಣುಗಳನ್ನು ಏಳೆಂಟು ದಿನಗಳವರೆಗೆ ಸಂಗ್ರಹಿಸಿಡಬಹುದಾದರೂ ೧೨-೧೪ ಡಿಗ್ರಿ ಸೆ. ಉಷ್ಣತೆಯಲ್ಲಿ ಜೋಪಾನ ಮಾಡಿಟ್ಟರೆ ಅವು ಸುಮಾರು ಐದುವಾರಗಳವರೆಗೆ ಸುಸ್ಥಿತಿಯಲ್ಲಿರಬಲ್ಲವು. ಪಕ್ವಗೊಂಡ ಹಣ್ಣುಗಳನ್ನು ೨-೩ ಡಿಗ್ರಿ ಸೆ. ಉಷ್ಣತೆ ಮತ್ತು ಶೇ. ೮೫-೯೦ ಡಿಗ್ರಿ ಸಾಪೇಕ್ಷ ಆರ್ದ್ರತೆಗಳಲ್ಲಿ ಸಂಗ್ರಹಿಸಿಟ್ಟಾಗ ಅವು ಸುಮಾರು ಆರು ವಾರಗಳವರೆಗೆ ಹಾಗೂ ಸ್ವಲ್ಪ ಬಿಗಿಯಾಗಿರುವ ದೋರೆಗಾಯಿಗಳನ್ನು ೩ ರಿಂದ ೫ ಡಿಗ್ರಿ ಸೆ. ಉಷ್ಣತೆಯಲ್ಲಿ ಸಂಗ್ರಹಿಸಿಟ್ಟಾಗ ಅವು ಎಂಟು ವಾರಗಳವರೆಗೆ ಚೆನ್ನಾಗಿದ್ದುದಾಗಿ ವರದಿಯಾಗಿದೆ.

ಪಕ್ವಗೊಳಿಸಿವಿಕೆ

ಚೆನ್ನಾಗಿ ಬಲಿತ ದೋರೆಗಾಯಿಗಳನ್ನು ಕಿತ್ತು ಕೊಠಡಿಯ ಉಷ್ಣತೆಯಲ್ಲಿ ಸಂಗ್ರಹಿಸಿಟ್ಟರೆ ಅವು ನಾಲ್ಕೈದು ದಿನಗಳಲ್ಲಿ ಪಕ್ವಗೊಳ್ಳುತ್ತವೆ. ಅವು ಪಕ್ವಗೊಳ್ಳುತ್ತಿದ್ದಂತೆ ಕೊಠಡಿಯಲ್ಲೆಲ್ಲಾ ಮಧುರವಾದ ವಾಸನೆ ಹರಡುತ್ತದೆ. ಕಾಲಿಪತ್ತಿ ತಳಿಯ ಹಣ್ಣು ಬೇಗ ಪಕ್ವಗೊಂಡರೆ ಕ್ರಿಕೆಟ್ ಬಾಲ್ ಹಣ್ಣು ನಿಧಾನವಾಗಿ ಪಕ್ವಗೊಳ್ಳುತ್ತವೆ. ಅದೇ ರೀತಿ ಚಳಿಗಾಲ ಮತ್ತು ಮಳೆಗಾಲಗಳಲ್ಲಿ ತಡವಾಗಿ ಪಕ್ವಗೊಂಡರೆ ಬೇಸಿಗೆಯಲ್ಲಿ ಬೇಗ ಪಕ್ವಗೊಳ್ಳುತ್ತವೆ. ಕಿತ್ತ ಎಲ್ಲಾ ಹಣ್ಣು ಏಕಕಾಲಕ್ಕೆ ಪಕ್ವಗೊಳ್ಳುವಂತೆ ಮಾಡಲು ಸೂಕ್ತ ಸಾಮರ್ಥ್ಯದ ಚೋದಕವನ್ನು ಬಳಸಬಹುದು. ಈ ಉದ್ದೇಶ್ಕ್ಕೆ ೫೦೦೦ ಪಿಪಿಎಂ ಎಥೆಫಾನ್ ಇಲ್ಲವೇ ೫ ರಿಂದ ೧೫ ಪಿಪಿಎಂ ೨. ೪-ಡಿ ಯನ್ನು ದ್ರಾವಣ ರೂಪದಲ್ಲಿ ಹಣ್ಣುಗಳ ವೇಲೆ ಸಿಂಪಡಿಸಿದಲ್ಲಿ ಸಾಕು. ಈ ರೀತಿಯಲ್ಲಿ ಅವು ಕೇವಲ ಎರಡು ದಿನಗಳಲ್ಲಿ ಪಕ್ವಗೊಳ್ಳುತ್ತವೆ.

ವರ್ಗೀಕರಣಮತ್ತುಮಾರಾಟ

ಸಪೋಟ ಹಣ್ಣುಗಳನ್ನು ವರ್ಗೀಕರಿಸಿ ಮಾರಾಟ ಮಾಡುವ ರೂಢಿ ನಮ್ಮಲ್ಲಿಲ್ಲ. ಅಂದಾಜಿನ ಮೇಲೆ ಕೈಯ್ಯಲ್ಲಿ ಆರಿಸಿ ವಿಂಗಡಿಸುವುದುಂಟು. ಹಾಗಾಗಿ ಅವು ಒಂದೇ ತೆರನಾಗಿ ಇರುವುದಿಲ್ಲ. ತೂಕದ ಆಧಾರದ ಮೇಲೆ ವರ್ಗೀಕರಿಸುವುದು ಸರಿಯಾದ ಪದ್ಧತಿಯಾಗಿರುತ್ತದೆ. ಅಂತಹ ಹಣ್ಣುಗಳಿಗೆ ಬೇರೆ ಬೇರೆ ಬೆಲೆಗಳನ್ನು ನಿರ್ಧರಿಸಬಹುದು. ಮೊದಲ ದರ್ಜೆಯ ಹಣ್ಣುಗಳಿಗೆ ಒಳ್ಳೆಯ ಬೆಲೆ ಸಾಧ್ಯ. ಹಣ್ಣುಗಳನ್ನು ಸಹಕಾರ ಸಂಘಗಳ ಮೂಲಕ ಮಾರಾಟ ಮಾಡಿದ್ದೇ ಆದರೆ ಹೆಚ್ಚಿನ ಲಾಭ ಸಾಧ್ಯ.

ಅಂದಾಜುವೆಚ್ಚಮತ್ತುಆದಾಯ

ಸಪೋಟ ಒಳ್ಳೆಯ ವರಮಾನ ತರುವ ಹಣ್ಣಿನ ಬೆಳೆ. ಲಾಭದಾಯಕ ಫಸಲು ಸಿಗಬೇಕಾದರೆ ಸಸಿಗಳನ್ನು ನೆಟ್ಟ ಏಳು ವರ್ಷಗಳವರೆಗೆ ಕಾಯಬೇಕು. ಅದರ ಬೇಸಾಯಕ್ಕೆ ತಗುಲುವ ಅಂದಾಜು ಖರ್ಚು ಮತ್ತು ನಿರೀಕ್ಷಿತ ಆದಾಯಗಳನ್ನು ಕೋಷ್ಟಕ : ೫ ರಲ್ಲಿ ಕೊಟ್ಟಿದೆ.

ಕೋಷ್ಟಕ : ಒಂದು ಹೆಕ್ಟೇರು ಸಪೋಟ ಬೇಸಾಯಕ್ಕೆ ತಗುಲುವ ಅಂದಾಜು ಖರ್ಚು ಮತ್ತು ನಿರೀಕ್ಷಿತ ಆದಾಯ (ರೂ.ಗಳಲ್ಲಿ)