ಚಿತ್ರ ೪ : ಸಪೋಟದಲ್ಲಿ ಎಲೆ ಚುಕ್ಕೆ ರೋಗದ ಲಕ್ಷಣಗಳು

ಸಪೋಟ ಗಡುಸಾದ ಮರ. ಇದಕ್ಕೆ ಕೀಟರೋಗಗಳ ಬಾಧೆ ಅಷ್ಟೇನೂ ಅಧಿಕವಾಗಿ ಕಂಡುಬರುವುದಿಲ್ಲ. ಅದರೂ ಸಹ ಯಾವುದೇ ಒಂದು ನಿರ್ದಿಷ್ಟವಾದ ಕೀಟ ಅಥವಾ ರೋಗದ ಬಾಧೆ ಕಾಣಿಸಿಕೊಂಡಾಗ, ಅದನ್ನು ಸರಿಯಾಗಿ ಗುರುತಿಸಿ ನಿಯಂತ್ರಣ ಕ್ರಮಗಳನ್ನು ಅನುಸರಿಸಬೇಕು. ಉದಾಹರಣೆಗೆ, ಸಪೋಟ ಎಲೆಗಳ ಮೇಲೆ ಮೊದಲು ರಸ ಹೀರುವ ಹುಳುಗಳು ಕಾಣಿಸಿಕೊಂಡು. ಅವುಗಳು ಎಲೆಗಳಿಂದ ಹೇರಳವಾಗಿ ರಸವನ್ನು ಹೀರಿ ಜೇನಿನಂತಹ ಪದಾರ್ಥವನ್ನು ಬಿಡುತ್ತವೆ. ಇದರ ಮೇಲೆ ಕಪ್ಪುಬೂಷ್ಟು ಬೆಳೆದು ಎಲೆ ಹಣ್ಣುಗಳೆಲ್ಲ ಮಾಸಲು ಬಣ್ಣಕ್ಕೆ ತಿರುಗುತ್ತವೆ. ಇಂತಹ ಕೀಟ ರೋಗಗಳ ಬಾಧೆ ಅವುಗಳನ್ನು ಗುರುತಿಸುವ ರೀತಿ ನೀತಿಗಳು ಹಾಗೂ ಅವುಗಳ ಹತೋಟಿ ಕ್ರಮಗಳನ್ನು ಕುರಿತು ಇಲ್ಲಿ ವಿವರಿಸಲಾಗಿದೆ.

ಸಪೋಟ ಹಣ್ಣಿನ ಬೆಳೆಗೆ ಹಲವಾರು ಕೀಟ ಮತ್ತು ರೋಗಗಳು ಹಾನಿಯನ್ನುಂಟು ಮಾಡುತ್ತವೆ. ಅವುಗಳನ್ನು ಸಕಾಲದಲ್ಲಿ ಹತೋಟಿ ಮಾಡಬೇಕು.

ಕೀಟಗಳುಮತ್ತುಅವುಗಳನಿಯಂತ್ರಣ

ಕೀಟಗಳಲ್ಲಿ ಕಾಂಡ ಕೊರೆಯುವ ಹುಳು, ಶಲ್ಕ, ಹಿಟ್ಟಿನ ತಗಣೆ, ಎಲೆ ಕೊರೆಯುವ ಹುಳು, ಹೂ ಮೊಗ್ಗು ಕೊರೆಯುವ ಹುಳು, ತೊಗಟೆ ತಿನ್ನುವ ಹುಳು, ಹಣ್ಣು ಕೊರೆಯುವ ಹುಳು, ಗೆದ್ದಲು ಮುಂತಾದವು ಮುಖ್ಯವಾದುವು. ಅವುಗಳ ಹಾನಿಯ ವಿಧಾನ ಮತ್ತು ಹತೋಟಿ ಕ್ರವಗಳು ಕೆಳಗಿನಂತಿವೆ.

) ಕಾಂಡ ಕೊರಿಯುವ ಹುಳು : ಇದು ಸಣ್ಣ ಗಾತ್ರದ ದುಂಬಿ. ಇದರ ಮರಿಹುಳುಗಳು ದಪ್ಪನಾಗಿದ್ದು ಕಾಂಡದ ತೊಗಟೆಯಲ್ಲಿ ಸುರಂಗಗಳನ್ನು ಕೊರೆದು ಅಂಗಾಂಶವನ್ನು ತಿನ್ನಲು ಪ್ರಾರಂಭಿಸುತ್ತವೆ. ಅವುಗಳಿಂದ ಹಿಕ್ಕೆ, ಮರದ ಪುಡಿ ಮುಂತಾದವು ಹೊರಬೀಳುತ್ತಿರುತ್ತವೆ. ಅದರಿಂದ ಅವು ಒಳಗೆ ಇವೆಯೆಂದು ತಿಳಿಯಬಹುದು. ಹರಿತವಿರುವ ಚಾಕುವಿನಿಂದ ಆ ಭಾಗವನ್ನು ಕೆತ್ತಿ ತೆಗೆದಲ್ಲಿ ಸುರಂಗಗಳು ಹಾಗೂ ಕೀಟಗಳು ಕಂಡುಬರುತ್ತವೆ.

ಉದ್ದನಾದ ಸಣ್ಣ ತಂತಿಯ ತುಂಡನ್ನು ರಂಧ್ರಗಳೊಳಕ್ಕೆ ತೂರಿಸಿ ಚುಚ್ಚಿದಲ್ಲಿ ಅವು ಸಾಯುತ್ತವೆ. ಕೀಟಗಳು ಬಹಳಷ್ಟು ಒಳಗಿದ್ದರೆ ಪೆಟ್ರೋಲ್ ಎಣ್ಣೆಯಲ್ಲಿ ಅದ್ದಿದ ಹತ್ತಿಯ ಸಿಂಬಿಯನ್ನು ರಂಧ್ರಗಳೊಳಕ್ಕೆ ತೂರಿಸಿ ಮೇಲೆ ಕೆಸರು ಮಣ್ಣನ್ನು ಮೆತ್ತಿದರೆ ಅವು ಉಸಿರುಕಟ್ಟಿ ಸಾಯುತ್ತವೆ.

) ಶಲ್ಕ (ಸ್ಕೇಲ್) : ಇವು ತೆಳು ಶರೀರ, ಹಸಿರು ಇಲ್ಲವೇ ಕಂದುಬಣ್ಣ ಹಾಗೂ ಅಂಡಾಕಾರವಿರುತ್ತವೆ. ಎಲೆಗಳ ಮಧ್ಯನರದ ಉದ್ದಕ್ಕೆ, ಚಿಗುರುಗಳಲ್ಲಿ ಮುಂತಾಗಿ ಗುಂಪುಗುಂಪಾಗಿದ್ದು ರಸ ಹೀರುತ್ತವೆ. ಇವುಗಳ ಹತೋಟಿಗೆ ೧೮ ಲೀಟರ್ ನೀರಿಗೆ ೩೬ ಮಿ. ಲೀ. ಡೈಮಿಥೊಯೇಟ್ ಅಥವಾ ಮ್ಯಾಲಾಥಿಯಾನ್ ಕೀಟನಾಶಕ ಬೆರೆಸಿ ಸಿಂಪಡಿಸಬೇಕು. ಹೀಗೆ ವರ್ಷದಲ್ಲಿ ಎರಡು ಮೂರು ಸಿಂಪರಣೆಗಳನ್ನು ಕೊಡಬೇಕಾಗುತ್ತದೆ.

) ಹಿಟ್ಟಿನ ತಗಣೆ : ಇದಕ್ಕೆ ಬೂಷ್ಟು ತಗಣೆ ಎಂಬ ಹೆಸರಿದೆ. ಇದ ಮೆತು ಶರೀರದ ಸಣ್ಣ ಕೀಟ; ಮೊಟ್ಟೆಯಾಕಾರವಿದ್ದು ಮೈಮೇಲೆಲ್ಲಾ ಬೆಳ್ಳನೆಯ ಮೇಣದಂತಹ ಹೊದಿಕೆ ಇರುತ್ತದೆ. ಈ ಹೊದಿಕೆ ಹತ್ತಿಯಂತೆ ಕಾಣುವುದು. ಇವು ಎಲೆ, ಚಿಗುರು, ಹೀಚು ಮುಂತಾಗಿ ಗುಂಪು ಗುಂಪಾಗಿ ಮುತ್ತಿ ರಸವನ್ನು ಹೀರುತ್ತವೆ. ಅವು ವಿಸರ್ಜಿಸಿದ ಜೋನಿ ಅಂಟಂಟಾಗಿರುತ್ತದೆ. ಹಾನಿಗೀಡಾದ ಭಾಗಗಳು ವಿಕಾರಗೊಳ್ಳುತ್ತವೆ. ಇವುಗಳ ಹತೋಟಿಗೆ ೧೮ ಲೀಟರ್ ನೀರಿಗೆ ೩೬ ಮಿ. ಲೀ. ಡೈಮಿಥೊಯೇಟ್ ಇಲ್ಲವೇ ಮೆಟಾಸಿಸ್ಟಾಕ್ಸ್‌ಅನ್ನು ಬೆರೆಸಿ ಸಿಂಪಡಿಸಬೇಕು.

) ಎಲೆ ಕೊರೆಯುವ ಹುಳು : ಇದನ್ನು ಎಲೆ ಸುರಂಗದ ಹುಳು ಎಂದೂ ಸಹ ಕರೆಯುತ್ತಾರೆ. ಇದು ಸೂಕ್ಷ್ಮ ಗಾತ್ರದ ಕಂಬಳಿ ಹುಳು. ಈ ಹುಳುಗಳು ಚಿಗುರೆಲೆಗಳಲ್ಲಿ ಸುರಂಗ ಕೊರೆದು ಅವು ವಿಕಾರಗೊಳ್ಳುವಂತೆ ಮಾಡುತ್ತವೆ. ಈ ಸುರಂಗಗಳನ್ನು ಹತ್ತಿರದಿಂದ ನೋಡಿದಲ್ಲಿ ಒಳಗೆ ಸೂಕ್ಷ್ಮ ಗಾತ್ರದ ಕಂಬಳಿ ಹುಳುಗಳು ಕಂಡುಬರುತ್ತವೆ ಹಾನಿಗೀಡಾದ ಭಾಗಗಳಲ್ಲಿ ಎಲೆಗಳ ಮೇಲ್ಪದರವು ತೆಳ್ಳಗೆ ಉಬ್ಬಿರುತ್ತದೆ. ಹಾನಿ ಹೆಚ್ಚಿನ ಪ್ರಮಾಣದಲ್ಲಿದ್ದಗ ಅಂತಹ ಎಲೆಗಳು ಬೇಗ ಉದುರುತ್ತವೆ.

ಇವುಗಳ ಹತೋಟಿಗೆ ೧೮ ಲೀ. ನೀರಿಗೆ ೩೬ ಮಿ. ಲೀ. ಡೈಮಿಥೊಯೇಟ್ ಇಲ್ಲವೇ ಮತ್ತಾವುದಾದರೂ ಕೀಟನಾಶಕವನ್ನು ಬೆರೆಸಿ ಸಿಂಪಡಿಸಬೇಕು. ಒಂದೆರಡು ಸಿಂಪರಣೆಗಳನ್ನು ಕೊಟ್ಟಲ್ಲಿ ಸಂಪೂರ್ಣ ಹತೋಟಿ ಸಾಧ್ಯ.

) ಹೂ ಮೊಗ್ಗು ಕೊರೆಯುವ ಹುಳು : ಈ ಕಂಬಳಿ ಹುಳುಗಳು ಹೂ ಮೊಗ್ಗುಗಳನ್ನು ಕೊರೆದು ತಿನ್ನುತ್ತವೆ. ಹಾಗಾಗಿ ಬಹಳಷ್ಟು ಹೂಮೊಗ್ಗು ಉದುರಿಬೀಳುತ್ತವೆ. ಇವುಗಳ ಹತೋಟಿ ಎಲೆ ಕೊರೆಯುವ ಹುಳುಗಳಲ್ಲಿ ಇದ್ದಂತೆ.

) ತೊಗಟೆ ತಿನ್ನುವ ಹುಳು : ಈ ತೊಗಟೆಯಲ್ಲಿ ರಂಧ್ರಗಳನ್ನು ಕೊರೆಯುತ್ತವೆ. ಅವು ತಿಂದು ವಿಸರ್ಜಿಸಿದ ಹಿಕ್ಕೆ, ಮರದ ಪುಡಿ ಮುಂತಾದುವು ರಂಧ್ರಗಳ ಮೂಲಕ ಹೊರಬೀಳುತ್ತಿರುತ್ತವೆ. ಇವುಗಳ ಹತೋಟಿ ಕಾಂಡ ಕೊರೆಯುವ ಹುಳದಲ್ಲಿ ಇದ್ದಂತೆ.

) ಹಣ್ಣು ಕೊರಿಯುವ ಹುಳು : ಇವು ಸಣ್ಣ ಗಾತ್ರದ ಕಂಬಳಿ ಹುಳುಗಳಿದ್ದು ಹೀಚು ಮತ್ತು ಕಾಯಿಗಳನ್ನು ಕೊರೆದು ರಂಧ್ರಗಳನ್ನುಂಟು ಮಾಡುತ್ತವೆ. ಈ ರಂಧ್ರಗಳಿಂದ ಹೊರಬಂದ ಹಾಲು ಗಟ್ಟಿಯಾಗುತ್ತದೆ. ತೀವ್ರ ಹಾನಿಯಿದ್ದಲ್ಲಿ ಅವು ಉದುರಿ ಬೀಳುತ್ತವೆ. ಇದರ ಹತೋಟಿ ಎಲೆ ಕೊರೆಯುವ ಹುಳುದಲ್ಲಿ ಇದ್ದಂತೆ.

) ಎಲೆ ಹೆಣೆಯುವ ಕೀಟ : ಈ ಕೀಟಗಳು ಚಿಗುರು, ಎಲೆ, ಮೊಗ್ಗು, ಎಳೆಯ ಹೀಚು ಮುಂತಾಗಿ ತಿಂದು, ಬಲೆಯ ಗೂಡುಗಳನ್ನು ಹೆಣೆಯುತ್ತವೆ. ಇವುಗಳ ಹತೋಟಿ ಎಲೆ ಕೊರೆಯುವ ಹುಳುದಲ್ಲಿ ಇದ್ದಂತೆ.

) ಗೆದ್ದಲು : ಗಿಡಗಳು ಎಳೆಯವಿದ್ದಾಗ ಗೆದ್ದಲಿನ ಬಾಧೆ ಹೆಚ್ಚು. ಮಳೆಗಾಲ ಮುಗಿಯುತ್ತಿದ್ದಂತೆ ಇವುಗಳ ಹಾವಳಿ ಹೆಚ್ಚಾಗುತ್ತದೆ. ಒಣ ಎಲೆ, ಕಸಕಡ್ಡಿ ಮುಂತಾಗಿ ಇದ್ದರೆ ಇವು ಹೆಚ್ಚುತ್ತವೆ. ಕೆಲವೊಮ್ಮೆ ಬೇರು, ತೊಗಟೆ ಹಾಗೂ ಕಾಂಡಭಾಗಗಳನ್ನು ತಿಂದು ಗಿಡಗಳು ಬಲಹೀನಗೊಳ್ಳುವಂತೆ ಮಾಡುತ್ತವೆ. ಪಾತಿಗಳಿಗೆ ನೀರು ಹಾಯಿಸುತ್ತಿದ್ದಲ್ಲಿ ಮಣ್ಣು ಹಸಿಯಾಗಿರುತ್ತದೆ ಹಾಗಾಗಿ ಗೆದ್ದಲಿನ ಬಾಧೆ ಇರುವುದಿಲ್ಲ. ಪ್ರತಿ ಪಾತಿಗೆ ೨೫ ರಿಂದ ೫೦ ಗ್ರಾಂ ಹೆಪ್ಟಾಕ್ಲೋರ್ ಪುಡಿಯನ್ನು ಉದುರಿಸಬೇಕು.

೧೦) ಥ್ರಿಪ್ಸ್ : ಇವು ಸೂಕ್ಷ್ಮ ಗಾತ್ರದ ಕೀಟಗಳಿದ್ದು ಚಿಗುರು ಹಾಗೂ ಎಳಸಾದ ಭಾಗಗಳ ಮೇಲ್ಭಾಗವನ್ನು ಕೆರೆದು ತಿನ್ನುತ್ತವೆ. ಹಾನಿಗೀಡಾದ ಭಾಗಗಳು ಒರಟಾಗಿ, ಕರಟುಗೊಳ್ಳುತ್ತವೆ. ತೀವ್ರ ಹಾನಿಯಿದ್ದಾಗ ಬೆಳವಣಿಗೆ ಕುಸಿಯುತ್ತದೆ. ಅವುಗಳ ಹತೋಟಿ ಎಲೆ ಕೊರೆಯುವ ಹುಳುವಿನಲ್ಲಿ ಇದ್ದಂತೆ.

೧೧) ಜಿಗಿಹುಳು (ಹಾಪ್ಪರ್ಸ್) : ಈ ಹುಳುಗಳು ಎಲ್ಲಾ ಹಂತಗಳಲ್ಲಿ ಕಂಡುಬರುತ್ತವೆ. ಪಾತಿಗಳ ಮಣ್ಣಿನ ಬಿರುಕುಗಳಲ್ಲಿ, ತೊಗಟೆ ಸಂದುಗಳಲ್ಲಿ, ರೆಂಬೆ ಹಾಗೂ ಎಲೆಗಳ ಮೇಲೆ ಇದ್ದು ಚಿಗುರುಗಳ ರಸವನ್ನು ಹೀರುತ್ತವೆ. ಬುಡದ ಹತ್ತಿರ ಓಡಾಡಿದಾಗ ಇಲ್ಲವೇ ರೆಂಬೆಗಳನ್ನು ಅಲುಗಾಡಿಸಿದಾಗ ಶಬ್ದದೊಂದಿಗೆ ಅವು ಹಾರಾಡುವುದು ಕಂಡುಬರುತ್ತದೆ. ಅವು ಹೆಚ್ಚಿನ ಸಂಖ್ಯೆಯಲ್ಲಿದ್ದಾಗ ಎಲೆಗಳ ಮೇಲೆ ಅವು ವಿಸರ್ಜಿಸಿದ ಜೋನಿ ಕಂಡುಬರುವುದು. ತೋಟದಲ್ಲಿ ಶುಚಿತ್ವ ಅಗತ್ಯ. ನುವಾಕ್ರಾನ್ ಅಥವಾ ಡೈಮಿಥೊಯೇಟ್ ಕೀಟನಾಶಕವನ್ನು ೧೮ ಲೀ. ನೀರಿಗೆ ೩೬ ಮಿ. ಲೀ. ನಂತೆ ಬೆರೆಸಿ ಸಿಂಪಡಿಸಬೇಕು. ಒಂದೆರಡು ಸಿಂಪರಣೆಗಳಾದರೆ ಸಾಕು.

೧೨) ಹಣ್ಣಿನ ನೊಣ : ಈ ನೊಣಗಳು ಗಾತ್ರದಲ್ಲಿ ಮನೆ ನೊಣಕ್ಕಿಂತ ಸಣ್ಣವಿದ್ದು ನೋಡಲು ಆಕರ್ಷಕವಾಗಿರುತ್ತವೆ. ದೋರೆಗಾಯಿಗಳ ಹಾಗೂ ಪಕ್ವಗೊಂಡು ಮೆತ್ತಗಾದ ಹಣ್ಣುಗಳ ಸಿಪ್ಪೆಯಲ್ಲಿ ಹೆಣ್ಣು ನೊಣಗಳು ತಮ್ಮ ಅಂಡಾಶಯವನ್ನು ಚುಚ್ಚಿಮೊಟ್ಟೆಯಿಡುತ್ತವೆ. ಮೊಟ್ಟೆಯೊಡೆದು ಹೊರಬಂದ ಮರಿ ಹುಳುಗಳು ತಿರುಳನ್ನು ತಿಂದು ಆ ಭಾಗ ಕೊಳೆಯುವಂತೆ ಮಾಡುತ್ತವೆ. ಹೀಗೆ ಕೊಳೆತ ಹಣ್ಣು ಉದುರಿಬಿದ್ದು ಮತ್ತಷ್ಟು ಕೀಟಗಳಿಗೆ ಅವಕಾಶ ಮಾಡಿಕೊಡುತ್ತವೆ. ಅವುಗಳನ್ನು ಆರಿಸಿ ನಾಶಗೊಳಿಸಬೇಕು. ಈ ನೊಣಗಳನ್ನು ಆಕರ್ಷಿಸಿ ಸಾಯುವಂತೆ ಮಾಡಲು ಯಾವುದಾದರೂ ಕೀಟನಾಶಕವೊಂದನ್ನು ತಟ್ಟೆಗಳಿಗೆ ಸುರಿದು ಅದರೊಂದಿಗೆ ಹಲವು ತೊಟ್ಟು ಮೀಥೈಲ್ ಯೂಜೆನಾಲ್‌ಅನ್ನು ಬೆರೆಸಿದರೆ ಸಾಕು. ನೊಣಗಳು ಆ ಮಿಶ್ರಣವನ್ನು ಕುಡಿದು ಸಾಯುತ್ತವೆ.

ರೋಗಗಳುಮತ್ತುಅವುಗಳನಿಯಂತ್ರಣ

ರೋಗಗಳಲ್ಲಿ ಎಲೆಚುಕ್ಕೆ, ಕಪ್ಪುಬೂಷ್ಟು, ಚಪ್ಪಟೆ ರೆಂಬೆಗಳು, ಹಣ್ಣು ಕೊಳೆಯುವುದು ಮತ್ತು ಸೊರಗು ಮುಖ್ಯವಾದುವು. ಅವುಗಳ ಲಕ್ಷಣಗಳು ಮತ್ತು ಹತೋಟಿ ಕೆಳಗಿನಂತಿವೆ.

) ಎಲೆಚುಕ್ಕೆ : ಇದು ಶಿಲೀಂಧ್ರ ರೋಗ. (ಚಿತ್ರ ೪)

ಚಿತ್ರ ೪ : ಸಪೋಟದಲ್ಲಿ ಎಲೆ ಚುಕ್ಕೆ ರೋಗದ ಲಕ್ಷಣಗಳು

ಕಾಲಿಪತ್ತಿ ಕೊ-೧ ಮತ್ತು ಕ್ರಿಕೆಟ್ ಬಾಲ್, ತಳಿಗಳು ಈ ರೋಗಕ್ಕೆ ನಿರೋಧಕವಿರುತ್ತವೆ. ಆದರೆ ಕಲ್ಕತ್ತಾ ರೌಂಡ್ ತಳಿ ಬಹು ಸುಲಭವಾಗಿ ರೋಗಕ್ಕೆ ತುತ್ತಾಗುತ್ತದೆ. ಎಲೆಗಳ ಮೇಲೆಲ್ಲಾ ಸಣ್ಣ ಸಣ್ಣ ಕೆನ್ನೀಲಿ ಇಲ್ಲವೇ ಕೆಂಪು ಕಂದು ಬಣ್ಣದ ಚುಕ್ಕೆಗಳ ಮಧ್ಯಭಾಗ ಬೆಳ್ಳಗಿರುತ್ತದೆ. ತೀವ್ರಹಾನಿ ಇದ್ದಾಗ ಚುಕ್ಕೆಗಳ ಒಂದರಲ್ಲೊಂದು ವಿಲೀನಗೊಂಡು, ಗಾತ್ರದಲ್ಲಿ ಹಿಗ್ಗುತ್ತವೆ. ಅಂತಹ ಎಲೆಗಳು ಅಕಾಲಿಕವಾಗಿ ಉದುರಿಬೀಳುತ್ತವೆ. ಇದರ ಹತೋಟಿಗೆ ೧೮ ಲೀ. ನೀರಿಗೆ ೩೬ ಗ್ರಾಂ ಡೈಥೇನ್ ಎಂ-೪೫ ಇಲ್ಲವೇ ಟಾಪ್ಸಿನ್ ಅನ್ನು ಬೆರೆಸಿ ಸಿಂಪಡಿಸಬೇಕು.

) ಕಪ್ಪುಬೂಷ್ಟು : ಇದೂ ಸಹ ಶಿಲೀಂಧ್ರ ರೋಗವೇ. ಇಂಗ್ಲೀಷ್‌ನಲ್ಲಿ ಇದಕ್ಕೆ ಸೂಟಿಮೋಲ್ಡ್ ಎನ್ನುತ್ತಾರೆ. ಶಲ್ಕ ಕೀಟಗಳು ಹಾಗೂ

ಬೂಷ್ಟು ತಿಗಣೆಗಳು ವಿಸರ್ಜಿಸಿದ ಸಿಹಿ ಅಂಟಿನ ಮೇಲೆ ಈ ಶಿಲೀಂಧ್ರಗಳು ವೃದ್ಧಿ ಹೊಂದಿ ಎಲೆ, ಹೂವು, ಕಾಯಿ ಮತ್ತು ಕೊಂಬೆಗಳು ಕಪ್ಪಾಗುವಂತೆ ಮಾಡುತ್ತವೆ. ಎಲೆಗಳ ಮೇಲೆ ಕೆರೆದಾಗ ತೆಳ್ಳನೆಯ ಪದರ ಕಿತ್ತು ಬರುತ್ತದೆ. ಈ ಬೂಷ್ಟು ಎಲೆಗಳ ದ್ಯುತಿ ಸಂಶ್ಲೇಶಣೆಗೆ ಅಡ್ಡಿಯನ್ನುಂಟು ಮಾಡುತ್ತದೆ. ಕಾಯಿ ಮತ್ತು ಹಣ್ಣು ಸರಿಯಾಗಿ ವೃದ್ಧಿ ಹೊಂದುವುದಿಲ್ಲ. ಅವು ಕಪ್ಪಗಾಗಿ ಆಕರ್ಷಣೆಯನ್ನು ಕಳೆದುಕೊಳ್ಳುತ್ತವೆ. ಇದರ ಹತೋಟಿಗೆ ೨೮ ಲೀ. ನೀರಿಗೆ ೪೦೦ ಗ್ರಾಂ. ಎಣ್ಣೆ ರಾಳದ ಸಾಬೂನನ್ನು ಬೆರೆಸಿ ಸಿಂಪಡಿಸಬೇಕು. ಅದಿಲ್ಲದಿದ್ದಲ್ಲಿ ೧೮ ಲೀ. ನೀರಿಗೆ ೧೦೦ಗ್ರಾಂ ಪಿಷ್ಟವನ್ನು ಬೆರೆಸಿ ಸಿಂಪಡಿಸಬಹುದು. ಒಣಗಿದಾಗ ಪಿಷ್ಟವು ಶಿಲೀಂಧ್ರ ಪರೆಯೊಂದಿಗೆ ಕಿತ್ತು ಬರುತ್ತದೆ. ಪಿಷ್ಟದ ಜೊತೆಗೆ ೪೦ ಗ್ರಾಂ ಜೈನೆಬ್ ಅನ್ನು ಸೇರಿಸಿ ಸಿಂಪಡಿಸಿದಲ್ಲಿ ಇನ್ನೂ ಉತ್ತಮ.

) ಚಪ್ಪಟೆ ರೆಂಬೆ : ಕೆಲವೊಮ್ಮೆ ಎಳೆಯ ರೆಂಬೆಗಳು ಮಾಮೂಲು ರೀತಿಯಲ್ಲಿ ಬೆಳೆಯದೆ ಅದುವಿದಂತೆ ಚಪ್ಪಟೆಯಾಗಿ ವೃದ್ಧಿ ಹೊಂದುವುದುಂಟು. ಅವು ನೋಡಲು ಬಣ್ಣ ಬಳೆಯುವ ಕುಂಚಕದಂತೆ ಕಾಣುವುವು. ಆಕಾರದಲ್ಲಿ ಬೀಸಣಿಗೆಯಂತಿರುತ್ತವೆ. ಈ ರೋಗವು ದಕ್ಷಿಣ ಭಾರತ, ಮಹಾರಾಷ್ಟ್ರ ಮತ್ತು ಗುಜರಾತಗಳಲ್ಲಿ ಕಾಣಿಸಿಕೊಂಡಿದೆ. ಅಂತಹ ರೆಂಬೆಗಳಲ್ಲಿ ಹೂವು, ಕಾಯಿ ಬಿಡುವುದಿಲ್ಲ. ಒಂದು ವೇಳೆ ಅಲ್ಪ ಸ್ವಲ್ಪ ಕಾಯಿ ಬಿಟ್ಟರೂ ಅವು ಸರಿಯಾಗಿ ವೃದ್ಧಿಗೊಳ್ಳದೆ ತೀರಾ ಸಣ್ಣವಿದ್ದು, ಸುಕ್ಕು ಗಟ್ಟಿ, ಗಟ್ಟಿಯಾಗಿರುತ್ತವೆ. ಅಂತಹ ರೆಂಬೆಗಳನ್ನು ಸವರಿ ತೆಗೆಯಬೇಕು. ಇದಕ್ಕೆ ಸೂಕ್ತ ಹತೋಟಿ ಕ್ರಮ ಇನ್ನೂ ವರದಿಯಾಗಿಲ್ಲ.

) ಹಣ್ಣು ಕೊಳೆಯುವುದು : ದೋರೆಗಾಯಿಗಳನ್ನು ಕಿತ್ತು ಪಕ್ವಗೊಳಿಸುವಾಗ ಕೆಲವು ಕೊಳೆತು ಹಾಳಾಗುತ್ತವೆ. ಹಣ್ಣನ್ನು ಬಿಡಿಸುವಾಗ ಎಚ್ಚರಿಕೆ ಅಗತ್ಯ. ಅದೇ ರೀತಿ ಸಾಗಾಣಿಕೆ ಮತ್ತು ಸಂಗ್ರಹಣೆಗಳು ಚೆನ್ನಾಗಿರಬೇಕು. ಹಣ್ಣನ್ನು ತುಂಬುವಾಗ ಹಾಗೂ ಸಾಗಿಸುವಾಗ ಅವು ಜಜ್ಜಿ ಹಾಳಾಗದಂತೆ ನೋಡಿಕೊಳ್ಳಬೇಕು. ಹಣ್ಣುಗಳ ನಡುವೆ ಗಾಳಿಯಾಡುವಂತೆ ಮಾಡುವುದು ಒಳ್ಳೆಯದು, ಶುಚಿತ್ವ ಬಹು ಮುಖ್ಯ.

) ಸೊರಗು : ಕೆಲವೊಮ್ಮೆ ಗಿಡಗಳು ಇದ್ದಕ್ಕಿದ್ದಂತೆ ಬಾಡಿ ಒಣಗುತ್ತವೆ. ಇದಕ್ಕೆ ಶಿಲೀಂಧ್ರಗಳು ಕಾರಣವಿರಬಹುದು. ತಾಮ್ರಯುಕ್ತ ಶಿಲೀಂಧ್ರ ನಾಶಕವೊಂದನ್ನು ನೀರಲ್ಲಿ ಕಲಸಿ ಸಿಂಪಡಿಸುವುದರ ಜೊತೆಗೆ ಅದೇ ದ್ರಾವಣವನ್ನು ಬುಡದ ಬೇರುಗಳಿಗೆ ಸುರಿಯಬೇಕು.