ಸಪೋಟ ಸಸ್ಯದ ಬೇರು, ಹೂವು, ಕಾಯಿ ಎಲ್ಲವೂ ವಿಶಿಷ್ಟ. ಸುಮಾರು ರಿಂದ ೨೦ ಮೀ. ಎತ್ತರ ಬೆಳೆಯುವ ಸಪೋಟ ಮರದ ಬೇರು ಮತ್ತು ಕಾಂಡಗಳು ಬಲಿಷ್ಠ. ಸರಳವಾದ ಎಲೆಗಳು ಗುಂಪು ಗುಂಪಾಗಿದ್ದು ಸಣ್ಣದಾದ ಹೂವುಗಳು ಬಿಡಿ ಬಿಡಿಯಾಗಿರುತ್ತವೆ. ಹಣ್ಣು ಉದ್ದ ಅಂಡಾಕಾರ ಅಥವಾ ಗುಂಡಗೆ. ತಳಿಗಳು ನೆಟ್ಟಗೆ ಬೆಳೆಯುವ ಅಥವಾ ಇಳಿಬಿದ್ದ ಅಥವಾ ಹರಡಿ ಬೆಳೆಯುವ ರೆಂಬೆಗಳನ್ನು ಹೊಂದಿವೆ. ಬೇಸಾಯಕ್ಕೆ ಬಿಡುಗಡೆ ಮಾಡಿದ ಸುಮಾರು ೨೧ ತಳಿಗಳು ಹಾಗೂ ಮಿಶ್ರ ತಳಿಗಳನ್ನು ಇಲ್ಲಿ ವಿವರಿಸಲಾಗಿದೆ. ಬೀಜ ಕಡಿಮೆ ಇದ್ದು ಬಾಯಲ್ಲಿಟ್ಟ ಹಣ್ಣು ಕರಗುವಂತಹ ದೊಡ್ಡ ಗಾತ್ರದ ತಳಿಗಳು ಬೆಳೆಗಾರರಿಗೂ ಲಾಭದಾಯಕ. ತಳಿಗಳ ವಿಶಿಷ್ಟತೆ, ಆಯ್ಕೆ ಮತ್ತು ಅವುಗಳ ಅಪೂರ್ವ ಗುಣಗಳ ಪರಿಚಯ ಪ್ರಸ್ತುತ ಅಧ್ಯಾಯದ ವಿಷಯ.

ಸಪೋಟ ಸಪೋಟೇಸೀ ಕುಟುಂಬಕ್ಕೆ ಸೇರಿದ ಮಧ್ಯಮ ಗಾತ್ರದ ನಿತ್ಯ ಹಸುರಿನ ಮರ. ಈ ಕುಟುಂಬದಲ್ಲಿ ೪೦ ಉಪವರ್ಗಗಳು ಮತ್ತು ೬೦೦ ಪ್ರಭೇದಗಳಿವೆ. ಇದು ಮಂದಗತಿಯಲ್ಲಿ ಬೆಳೆಯುವ ಹಾಗೂ ಗಡುತರವಿರುವ ಮರ. ಪೂರ್ಣ ಬೆಳೆದಾಗ ಮರದ ಎತ್ತರ ೫ ರಿಂದ ೨೦ಮೀ. ಇರುತ್ತದೆ.

ಬೇರುಕಾಂಡ

ಬೇರು ಸಮೂಹ ಬಲಿಷ್ಟವಿದ್ದು ತಾಯಿಬೇರು ಆಳವಾಗಿ ಇಳಿದಿರುತ್ತದೆ. ಪಕ್ಕ ಹಾಗೂ ಕವಲು ಬೇರುಗಳು ಬುಡದಿಂದ ದೂರಕ್ಕೆ ಹರಡಿರುತ್ತವೆ. ಕಾಂಡದಲ್ಲಿ ಚಿಕ್ಕ ರೆಂಬೆಗಳು ಸುತ್ತ ವರ್ತುಲಗಳಲ್ಲಿ ಹರಡಿ ದೂರ ಚಾಚಿರುತ್ತವೆ. ಕಾಂಡದ ತೊಗಟೆ ದಪ್ಪ; ಅದರ ಮೇಲ್ಮೈ ಒರಟಾಗಿದ್ದು ದಟ್ಟ ಕಂದು ಬಣ್ಣದ್ದಿರುತ್ತದೆ. ಮರದ ನೆತ್ತಿ ಪಿರಮಿಡ್ ಅಥವಾ ಗೋಲಾಕಾರವಿದ್ದು ನೋಡಲು ಆಕರ್ಷಕವಾಗಿರುತ್ತದೆ.

ಎಲೆಗಳು ರೆಂಬೆಗಳ ತುದಿಯಲ್ಲಿ ಗುಂಪುಗುಂಪಾಗಿರುತ್ತವೆ. ಅವು ಸರಳವಿದ್ದು, ಸಂಯೋಗ ಪ್ರತ್ಯೇಕವಿರುತ್ತವೆ. ಎಲೆಗಳಿಗೆ ತೊಟ್ಟು ಇರುತ್ತದೆ. ಪರ್ವ ಪುಚ್ಛಗಳು ಇರುವುದಿಲ್ಲ. ಎಲೆಗಳು ಉದ್ದವಾಗಿ ಅಂಡಾಕಾರವಿರುತ್ತವೆ. ಅಂಚು ಒಡೆದಿರುವದಿಲ್ಲ. ತುದಿ ಚೂಪಾಗಿರುತ್ತದೆ. ಚಿಗುರೆಲೆಗಳ ಬಣ್ಣ ಮಾಸಲು ಕೆಂಪು, ಬಲಿತ ಎಲೆಗಳ ಬಣ್ಣ ಹೊಳಪು ಹಸಿರು. ಚಿಗುರೆಲೆಗಳ ಮೇಲೆ ನವಿರಾದ ಪುಡಿಯ ಹೊದಿಕೆ ಇರುತ್ತದೆ. ಪೂರ್ಣ ಬಲಿತಾಗ ಎಲೆಗಳು ಸುಮಾರು ೭. ೫ ಸೆಂ. ಮೀ. ಉದ್ದ ಮತ್ತು ೫ ಸೆಂ. ಮೀ. ಅಗಲ ಇರುತ್ತವೆ. ಎಲೆಗಳ ತಳಭಾಗದಲ್ಲಿನ ಮಧ್ಯನರ ಸ್ಫುಟವಾಗಿರುತ್ತದೆ.

ಹೂವುಕಾಯಿ

ಹೂವು ಬಿಡಿ ಬಿಡಿಯಾಗಿ ಎಲೆ ತೊಟ್ಟು ಮತ್ತು ರೆಂಬೆಗಳ ನಡುವಣ ಕಂಕುಳಲ್ಲಿ ಮೂಡುತ್ತವೆ. ಗಾತ್ರದಲ್ಲಿ ಸಣ್ಣವಿದ್ದು ದ್ವಿಲಿಂಗಿಗಳಿರುತ್ತವೆ. ವಾಸನೆ ಇರುವದಿಲ್ಲ; ತೊಟ್ಟು ಕೃಶ. ಅರಳಿದಾಗ ೧-೨ ಸೆಂ. ಮೀ. ಉದ್ದ ಮತ್ತು ೧-೧. ೫ ಸೆಂ. ಮೀ. ಅಗಲ ಇರುತ್ತವೆ. ಪುಷ್ಪಪೀಠದ ಎಸಳುಗಳ ಸಂಖ್ಯೆ ಆರು. ಅವು ಎರಡು ವರ್ತುಲಗಳಲ್ಲಿ ವ್ಯವಸ್ಥಿತಗೊಂಡಿರುತ್ತವೆ. ಪ್ರಾರಂಭದಲ್ಲಿ ಹಸಿರು ಬಣ್ಣವಿದ್ದು ದಿನಕಳೆದಂತೆ ಕಪ್ಪು ಕಂದು ಬಣ್ಣಕ್ಕೆ ಮಾರ್ಪಡುತ್ತವೆ. ಕಡೆಯವರೆಗೂ ಅವು ತೊಟ್ಟಿಗೆ ಅಂಟಿಕೊಂಡೇ ಇರುತ್ತವೆ. ಹೂದಳಗಳ ಸಂಖ್ಯೆ ಆರು. ಅವು ಬುಡಭಾಗದಲ್ಲಿ ಒಂದಕ್ಕೊಂದು ಅಂಟಿಕೊಂಡು ಕೊಳವೆಯಂತೆ ಕಾಣುತ್ತವೆ.

ಅವುಗಳ ಬಣ್ಣ ಹಳದಿ ಬಿಳುಪು. ಒಳವರ್ತುಲದಲ್ಲಿ ಆರು ಕೇಸರಗಳ ದಳಗಳಿದ್ದು ಅನಂತರ ವರ್ತುಲದಲ್ಲಿ ಆರು ಕೇಸರಗಳು ಇರುತ್ತವೆ. ಕೇಸರ ತಂತುಗಳು ಗಿಡ್ಡ. ಪರಾಗ ಕೋಶಗಳ ಬಣ್ಣ ಹಳದಿ ಕಂದು. ಅಂಡಾಶಯ ಉಚ್ಛ ಸ್ಥಿತಿಯದು. ಅದರಲ್ಲಿ ೧೦-೧೨ ಕೋಶಗಳಿರುತ್ತವೆ. ಹೂದಳಗಳಿಗಿಂತ ಶಾಲಾಕಾಗ್ರ ಮುಂದಕ್ಕೆ ಚಾಚಿರುತ್ತದೆ. ಕಾಯಿಗಳು ಬಲಿತು ಹಣ್ಣಾಗುವವರೆಗೆ ಶಲಾಕಾ ಕೂಳೆ ತುದಿಗೆ ಅಂಟಿಕೊಂಡೇ ಇರುತ್ತದೆ. ಎಳೆಯ ಕಾಯಿಗಳ ಬಣ್ಣ ಹಸಿರು; ಅವು ವೃದ್ಧಿಹೊಂದಿ ಬಲಿತಂತೆಲ್ಲಾ ಕಂದು ಬಣ್ಣ ಉಂಟಾಗುತ್ತದೆ. ಪೂರ್ಣ ಬಲಿತ ಕೊಯ್ಲಿಗೆ ಸಿದ್ದಗೊಂಡಾಗ ಸಿಪ್ಪೆಯ ಬಣ್ಣ ಆಲೂಗಡ್ಡೆಯ ಬಣ್ಣದಂತಾಗುತ್ತದೆ. ಹಣ್ಣು ಆಕಾರದಲ್ಲಿ ಮೊಟ್ಟೆಯಂತೆ ಉದ್ದನಾಗಿ ಇಲ್ಲವೆ ಗುಂಡಗೆ ಇರುತ್ತವೆ. ಹಣ್ಣುಗಳ ಗಾತ್ರದಲ್ಲಿ ವ್ಯತ್ಯಾಸವಿರುತ್ತದೆ; ಪೂರ್ಣ ಬಲಿತಾಗ ೩ ರಿಂದ ೮ ಸೆಂ. ಮೀ. ಉದ್ದ ಮತ್ತು ೩ ರಿಂದ ೬ ಸೆಂ. ಮೀ. ಅಥವಾ ಅದಕ್ಕೂ ಮೇಲ್ಪಟ್ಟು ದಪ್ಪ ಇರುತ್ತವೆ. ಕಾಯಿಗಳು ಬಲಿತು ಪಕ್ವಗೊಳ್ಳುವ ಸಮಯಕ್ಕೆ ಸಿಪ್ಪೆಯ ಮೇಲಿನ ಪುಡಿ ಉದುರಿ ಬೀಳುತ್ತದೆ. ಅದೇ ರೀತಿ ಅವುಗಳಲ್ಲಿನ ಹಾಲಿನ ಅಂಶ ಕುಸಿಯುತ್ತದೆ. ತಿರುಳು ಮೃದುವಾಗಿದ್ದು, ಹಳದಿ ಕಂದುಬಣ್ಣದಂತಿರುತ್ತದೆ. ಹಣ್ಣುಗಳಲ್ಲಿನ ಬೀಜಗಳಸಂಖ್ಯೆ ೩ರಿಂದ ೭ರಷ್ಟಿರುತ್ತದೆ. ಕೆಲವೊಂದರಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿರುತ್ತವೆ. ಬೀಜ ಸುಮಾರು ೨ ಸೆಂ. ಮೀ. ಉದ್ದವಿದ್ದು, ಪಾರ್ಶ್ವಗಳಲ್ಲಿ ಅದುಮಿದಂತೆ ಓರೆಯಾಗಿರುತ್ತವೆ. ಬೀಜಸಿಪ್ಪೆ ನಯವಾಗಿ, ಹೊಳಪು ಕಪ್ಪು ಬಣ್ಣದ್ದಿರುತ್ತದೆ. ಗಡುಸಾದ ಬೀಜ ಸಿಪ್ಪೆಯನ್ನು ಬಿಡಿಸಿದರೆ ಕಾಣವುದೇ ಪಪ್ಪು. ಅದನ್ನು ಬಿಡಿಸಿದರೆ ಎರಡು ಬೆಳ್ಳನೆಯ ಬೇಳೆಗಳು ಕಂಡುಬರುತ್ತವೆ. ಸಪೋಟ ಹಣ್ಣನ್ನು ಬೆರ್ರಿ ಎನ್ನುತ್ತಾರೆ. (ಚಿತ್ರ – ೧)

ಹೂವು ಬಿಡುವ ವೈಖರಿ

 ತಳಿಗಳವರ್ಗೀಕರಣ :

ಸಪೋಟದಲ್ಲಿ ಹಲವಾರು ತಳಿಗಳು ಹಾಗೂ ಮಿಶ್ರ ತಳಿಗಳಿವೆ. ಮರಗಳ ಸ್ವಭಾವ, ಎಲೆಗಳ ಬಣ್ಣ ಮುಂತಾದ ಲಕ್ಷಣಗಳ ಆಧಾರದ ಮೇಲೆ ಅವುಗಳನ್ನು ವಿವಿಧ ಗುಂಪುಗಳಾಗಿ ವರ್ಗೀಕರಿಸಿದೆ.

. ನೆಟ್ಟಗೆ ಬೆಳೆಯುವ ಸ್ವಭಾವದ ತಳಿಗಳು : ಈ ಗುಂಪಿಗೆ ಸೇರಿದ ಮರಗಳಲ್ಲಿ ರೆಂಬೆಗಳು ವರ್ತುಲಾಕಾರದಲ್ಲಿ ಮೂಡಿ ಬೆಳೆಯುತ್ತವೆ. ಎಲೆಗಳು ಅಂಡಾಕರವಿದ್ದು, ಹಸಿರು ಬಣ್ಣದ್ದಿರುತ್ತವೆ. ಹಣ್ಣು ಗಾತ್ರದಲ್ಲಿ ದೊಡ್ಡವು, ಅವುಗಳ ಸಿಪ್ಪೆ ನುಣ್ಣಗಿದ್ದು ಹಳದಿ ಬಣ್ಣದ್ದಿರುತ್ತದೆ. ತಿರುಳು ಬೆಣ್ಣೆಯಂತಿದ್ದು ತಿನ್ನಲು ಸಿಹಿಯಾಗಿರುತ್ತದೆ.

. ಇಳಿಬಿದ್ದಿರುವ ರೆಂಬೆಗಳಿಂದ ಕೂಡಿದ ತಳಿಗಳು : ಈ ಗುಂಪಿಗೆ ಸೇರಿದ ಮರಗಳಲ್ಲಿ ಸಹ ರೆಂಬೆಗಳು ವರ್ತುಲಗಳಲ್ಲಿ ಮೂಡಿ ಹರಡುತ್ತವೆ. ಅವು ಇಳಿಬಿದ್ದಂತೆ ಕಾಣುವುವು. ಎಲೆಗಳ ಬಣ್ಣ ತೆಳು ಹಸಿರು, ಅವು ಸಣ್ಣಗೆ, ಉದ್ದನಾಗಿರುತ್ತವೆ. ಹಣ್ಣು ಗಾತ್ರದಲ್ಲಿ ಸಣ್ಣವು. ಸಿಪ್ಪೆ ಒರಟಾಗಿದ್ದು ಕಂದು ಬಣ್ಣದ್ದಿರುತ್ತದೆ. ತಿರುಳು ಗುಣಮಟ್ಟದಲ್ಲಿ ಕೆಳದರ್ಜೆಯದಿರುತ್ತದೆ.

. ಹರಡಿ ಬೆಳೆಯುವ ರೆಂಬೆಗಳಿಂದ ಕೂಡಿದ ತಳಿಗಳು : ಇದರಲ್ಲಿ ಎರಡು ವಿಧ. ಈ ಎರಡೂ ವಿಧಗಳಲ್ಲಿ ರೆಂಬೆಗಳು ಕ್ರಮಬದ್ಧವಾಗಿ ಮೂಡಿ ಬೆಳೆದಿರುವುದಿಲ್ಲ. ಒಂದರಲ್ಲಿ ಎಲೆಗಳು ದಟ್ಟ ಹಸಿರು ಬಣ್ಣವಿದ್ದು, ಅಂಡಾಕಾರವಿದ್ದು ಅಗಲವಾಗಿದ್ದರೆ ಮತ್ತೊಂದರಲ್ಲಿ ಎಲೆಗಳು ತೆಳು ಹಸಿರು ಬಣ್ಣವಿದ್ದು, ಸಣ್ಣಗೆ ಉದ್ದನಾಗಿದ್ದು ಅದುಮಿದಂತಿರುತ್ತವೆ. ಒಂದರಲ್ಲಿನ ಹಣ್ಣಿನ ಸಿಪ್ಪೆ ನಯವಾಗಿದ್ದು ಹಳದಿ ಬಣ್ಣದ್ದಿದ್ದರೆ ಮತ್ತೊಂದರಲ್ಲಿ ಅದು ಒರಟಾಗಿರುತ್ತದೆ. ಒಂದರಲ್ಲಿ ಹಣ್ಣನ ತಿರುಳು ಬೆಣ್ಣೆಯಂತೆ ಮೃದುವಾಗಿದ್ದು ತಿನ್ನಲು ಸಿಹಿಯಗಿದ್ದರೆ ಮತ್ತೊಂದರಲ್ಲಿ ತಿರುಳಿನ ಗುಣಮಟ್ಟ ಕೆಳ ದರ್ಜೆಯದಿರುತ್ತದೆ. ಹಣ್ಣುಗಳ ಆಕಾರವನ್ನನುಸರಿಸಿ ಅವುಗಳನ್ನು ಉದ್ದನಾದ ಅಥವಾ ಅಂಡಾಕಾರದ ಹಣ್ಣಿನ ಬಗೆ ಮತ್ತು ಗುಂಡಗಿನ ಹಣ್ಣಿನ ಬಗೆ ಎಂದು ವರ್ಗೀಕರಿಸಲಾಗಿದೆ.

ಸಪೋಟದಲ್ಲಿ ತಳಿಗಳು ಹಲವಾರು. ಕೆಲವೊಂದು ಪ್ರದೇಶಗಳಲ್ಲಿ ನಿರ್ದಿಷ್ಟ ತಳಿಗಳ ಹಣ್ಣನ್ನೇ ಇಷ್ಟಪಡುತ್ತಾರೆ. ಆದರೆ ವಾಣಿಜ್ಯವಾಗಿ ಕೆಲವು ತಳಿಗಳು ಮಾತ್ರವೇ ಸೂಕ್ತವಿರುತ್ತವೆ. ಶ್ರೇಷ್ಠ ದರ್ಜೆಯ ಹಣ್ಣುಗಳಲ್ಲಿ ಕೆಲವೇ ಬೀಜವಿದ್ದು, ತಿರುಳು ಬಾಯಲ್ಲಿಟ್ಟುಕೊಂಡರೆ ಕರಗುವಂತಿರಬೇಕು. ರುಚಿಯಲ್ಲಿ ಸಿಹಿಯಾಗಿದ್ದು, ಮಧುರವಾದ ಪರಿಮಳ ಹೊಂದಿರಬೇಕು. ಹಣ್ಣು ಗಾತ್ರದಲ್ಲಿ ದೊಡ್ಡದಿರಬೇಕು. ಫಸಲೂ ಹೆಚ್ಚಾಗಿರಬೇಕು.

ನಮ್ಮ ದೇಶದಲ್ಲಿ ಬೇಸಾಯದಲ್ಲಿರುವ ವಿವಿಧ ತಳಿ ಹಾಗೂ ಮಿಶ್ರ ತಳಿಗಳ ಗುಣ್ಣ ವಿಶೇಷಗಳು ಹೀಗಿವೆ :

. ಕಾಲಿಪತ್ತಿ : ಇದು ಮಹಾರಾಷ್ಟ್ರ, ಗುಜರಾತ್ ಮತ್ತು ಉತ್ತರ ಕರ್ನಾಟಕಗಳಲ್ಲಿ ಹೆಸರಾಂತ ತಳಿಯಾಗಿದೆ. ರೆಂಬೆಗಳು ಮುಂದಕ್ಕೆ ಚಾಚಿ ಹರಡಿರುತ್ತವೆ. ಎಲೆಗಳು ಅಗಲವಿದ್ದು, ಮಂದವಾಗಿರುತ್ತವೆ. ಅವುಗಳ ಬಣ್ಣ ದಟ್ಟ ಹಸಿರು. ಹಣ್ಣು ಆಕಾರದಲ್ಲಿ ಮೊಟ್ಟೆಯಂತೆ, ಬಿಡಿ ಬಿಡಿಯಾಗಿರುತ್ತವೆ (ಚಿತ್ರ ೨).

ಚಿತ್ರ ೨ : ಕಾಲಿಪತ್ತಿ ತಳಿ

ವಾಸನೆ ಹಿತಕರ, ತಿರುಳು ಸಿಹಿಯಾಗಿ, ಮೃದುವಾಗಿರುತ್ತದೆ. ಬಾಯಲ್ಲಿಟ್ಟುಕೊಂಡರೆ ಕರಗುತ್ತದೆ. ಗುಣಮಟ್ಟದಲ್ಲಿ ಶ್ರೇಷ್ಠ. ಬೀಜಗಳ ಸಂಖ್ಯೆ ಕಡಿಮೆ. ಒಂದು ಹಣ್ಣಿಗೆ ನಾಲ್ಕು ಬೀಜಗಳು ಇರುತ್ತವೆ. ಸಾಗಾಣಿಕೆಯಲ್ಲಿ ಬೇಗ ಕೆಡುವುದುಂಟು. ಗೂಟಿ ಕಟ್ಟಿದಾಗ ಶೇ. ೫೦ರಷ್ಟು ಯಶಸ್ಸು ಸಾಧ್ಯ ಪ್ರಧಾನ ಕೊಯ್ಲು ಚಳಿಗಾಲದಲ್ಲಿ.

. ಛತ್ರಿ : ಇದರ ಮರಗಳು ಬಹುಮಟ್ಟಿಗೆ ಕಾಲಿಪತ್ತಿ ಮರಗಳಂತೆ ಇರುತ್ತವೆಯಾದರೂ ರೆಂಬೆಗಳು ಸುತ್ತ ಹರಡಿ ನೆಲ ಮುಖನಾಗಿ ಇಳಿಬಿದ್ದಿರುತ್ತವೆ. ಅವು ಸಮತಲವಾಗಿ ಹರಡಿಬೆಳೆದು ದೂರಕ್ಕೆ ಬಿಚ್ಚಿ ಹರಡಿದ ಛತ್ರಿಯಂತೆ ಕಾಣುವುವು. ಎಲೆಗಳ ಬಣ್ಣ ತೆಳು ಹಸಿರು. ಹಣ್ಣು ನೋಡಲು ಕಾಲಿಪತ್ತಿಯ ಹಣ್ಣುಗಳಂತೆಯೇ ಇರುತ್ತವೆಯಾದರೂ ಗುಣಮಟ್ಟದಲ್ಲಿ ಕಡಿಮೆ. ಇದರ ಬೇಸಾಯ ಮಹಾರಾಷ್ಟ್ರದಲ್ಲಿ ಹೆಚ್ಚು. ಫಸಲು ಸಾಕಷ್ಟಿರುತ್ತದೆಯಾದರೂ ಕಾಲಿಪತ್ತಿಯಷ್ಟು ಇರುವುದಿಲ್ಲ.

. ಢೋಳಾದಿವಾನಿ : ಇದು ಮಹಾರಾಷ್ಟ್ರದ ತಳಿ. ಎಲೆಗಳ ಬಣ್ಣ ತೆಳು ಹಸಿರು. ಹಣ್ಣು ಆಕಾರದಲ್ಲಿ ಮೊಟ್ಟೆಯಂತೆ. ಹಣ್ಣುಗಳ ಬಣ್ಣ ತೆಳು ಹಳದಿ. ಗುಣಮಟ್ಟದಲ್ಲಿ ಉತ್ತಮ. ಫಸಲು ಅಧಿಕ ಬೇಸಿಗೆಯಲ್ಲಿ ಕೊಯ್ಲಿಗೆ ಬರುತ್ತವೆ.

. ಉದ್ದ ಸಪೋಟ : ಮಹಾರಾಷ್ಟ್ರದಲ್ಲಿ ಕಂಡುಬರುವ ಮತ್ತೊಂದು ತಳಿ. ಎಲೆಗಳು ಸಣ್ಣಗೆ ಉದ್ದನಾಗಿರುತ್ತವೆ. ಅವುಗಳ ಬಣ್ಣ ತೆಳು ಹಸಿರು. ಇದರ ಹಣ್ಣು ಉದ್ದನಾಗಿರುತ್ತವೆ. ಸಿಪ್ಪೆ ತೆಳು, ತಿನ್ನಲು ಸಿಹಿಯಾಗಿರುತ್ತವೆ. ಹಣ್ಣು ಕಡಿಮೆ ಸಂಖ್ಯೆಯಲ್ಲಿರುತ್ತವೆಯಾದ್ದರಿಂದ ವಾಣಿಜ್ಯವಾಗಿ ಬೆಳೆಯಲು ಸೂಕ್ತವಿರುವುದಿಲ್ಲ. ಗೂಟಿ ರೆಂಬೆಗಳಲ್ಲಿ ಸಾಕಷ್ಟು ಬೇರು ಬಿಡುತ್ತವೆ.

. ಭೂರಿ : ಇದನ್ನು ಭೂರಿಪತ್ತಿ ಎಂದೂ ಸಹ ಕರೆಯುತ್ತಾರೆ. ಎಲೆಗಳು ಒತ್ತಾಗಿರುತ್ತವೆ ಹಾಗೂ ಗಾತ್ರದಲ್ಲಿ ಸಾಧಾರಣ ದೊಡ್ಡವು. ಹಣ್ಣು ಗಾತ್ರದಲ್ಲಿ ದೊಡ್ಡವಿದ್ದು, ಸಿಹಿಯಾಗಿರುತ್ತವೆ. ಹಣ್ಣಿನ ಗುಣಮಟ್ಟ ಶ್ರೇಷ್ಠ.

. ಜಿಂಗಾರ್ : ಇದರ ಮರಗಳು ಮಧ್ಯಮ ಗಾತ್ರದ್ದಿರುತ್ತವೆ. ಎಲೆಗಳು ಬಲು ಸಣ್ಣವು. ಹಣ್ಣು ಗೊಂಚಲಲ್ಲಿ ಬಿಡುತ್ತವೆ. ಗೂಟಿ ಕಟ್ಟಿದಾಗ ಬೇರು ಬೇಗ ಕಾಣಿಸಿಕೊಳ್ಳುತ್ತವೆ.

. ವಾಂಜೆಟ್ : ಇದು ಗಂಡು ಬಗೆಯ ಸಪೋಟ. ಮಂದಗತಿಯಲ್ಲಿ ಬೆಳೆಯುವಂತಾದ್ದು. ರೆಂಬೆಗಳ ಮೇಲೆಲ್ಲಾ ಗಂಟುಗಳಿರುತ್ತವೆ. ಈ ಗಂಟುಗಳಿಂದ ಬೇರು ಮೂಡುವುದುಂಟು. ಫಸಲು ತೀರಾ ಕಡಿವೆ. ಹಣ್ಣು ಗುಣಮಟ್ಯ್ಟದಲ್ಲಿ ಶ್ರೇಷ್ಠ. ಘೂಟಿ ಕಟ್ಟಿದಾಗ ಬೇರು ಬೇಗ ಕಾಣಿಸಿಕೊಳ್ಳುತ್ತವೆ. ಈ ತಳಿಯ ಮರಗಳು ಮಹಾರಾಷ್ಟ್ರದಲ್ಲಿ ಕಂಡುಬರುತ್ತವೆ.

. ಪಾಲ : ಇದು ಆಂಧ್ರಪ್ರದೇಶ ಮತ್ತು ತಮಿಳುನಾಡುಗಳಲ್ಲಿ ಹೆಸರಾಂತ ತಳಿ. ಹಣ್ಣು ಗಾತ್ರದಲ್ಲಿ ಸಣ್ಣದರಿಂದ ಸಾಧಾರಣ ದೊಡ್ಡವಿರುತ್ತವೆ. ಆಕಾರದಲ್ಲಿ ಮೊಟ್ಟೆಯಂತೆ, ಗೊಂಚಲುಗಳಲ್ಲಿ ಬಿಡುತ್ತವೆ. ಸಿಪ್ಪೆ ತೆಳು. ರುಚಿಯಲ್ಲಿ ಅತಿ ಮಧುರ, ವಾಸನೆ ಹಿತವಾಗಿರುತ್ತದೆ. ಫಸಲು ಸಮೃದ್ಧ.

. ಕೀರ್ತಭಾರತಿ : ಇದು ಆಂಧ್ರಪ್ರದೇಶದ ಜನಪ್ರಿಯ ತಳಿ. ಹಣ್ಣುಗಾತ್ರದಲ್ಲಿ ಸಣ್ಣದರಿಂದ ಸಾಧಾರಣ ದೊಡ್ಡವಿರುತ್ತವೆ. ಆಕಾರದಲ್ಲಿ ಮೊಟ್ಟೆಯಂತೆ. ಸಿಪ್ಪೆಯ ಮೇಲೆ ನಾಲ್ಕರಿಂದ ಆರು ಉದ್ದ ಏಣುಗಳಿರುತ್ತವೆ. ಹಣ್ಣಿನ ಮೇಲ್ಮೈ ಒರಟು, ಸಿಪ್ಪೆ ಮಂದವಾಗಿರುತ್ತದೆ; ಮಾಸಲು ಬಣ್ಣ ಹಣ್ಣಿನ ತುದಿ ಗುಂಡಗಿರುತ್ತದೆ. ತಿರುಳು ಸಿಹಿಯಾಗಿರುತ್ತದೆ. ದೂರದ ಮಾರುಕಟ್ಟೆಗಳಿಗೆ ಸಾಗಿಸಲು ಸೂಕ್ತವಿರುವ ತಳಿ.

೧೦. ದ್ವಾರಾಪುಡಿ : ಇದರ ಹಣ್ಣು ಕ್ರಿಕೆಟ್ ಬಾಲ್ ತಳಿಯಲ್ಲಿದ್ದಂತೆ. ಆದರೆ ಗಾತ್ರದಲ್ಲಿ ಅಷ್ಟು ದೊಡ್ಡವಿರುವುದಿಲ್ಲ. ಇದು ಆಂಧ್ರಪ್ರದೇಶದಲ್ಲಿ ಹೆಸರಾಂತ ತಳಿ. ತಿರುಳು ಸಿಹಿಯಾಗಿರುತ್ತದೆ. ಇದರ ಹಣ್ಣುಗಳಿಗೆ ಒಳ್ಳೆಯ ಬೇಡಿಕೆ ಇದೆ.

೧೧. ಜೊನ್ನವಲಸ ರೌಂಡ್ : ಇದನ್ನು ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಹಣ್ಣು ಗಾತ್ರದಲ್ಲಿ ಸಣ್ಣದರಿಂದ ಸಾಧಾರಣ ದೊಡ್ಡದಿರುತ್ತವೆ. ಆಕಾರದಲ್ಲಿ ಗುಂಡಗೆ, ತೊಟ್ಟಿನ ಸುತ್ತ ಕುಳಿ ಇರುತ್ತದೆ. ಹಣ್ಣುಗಳ, ಮೇಲೆ ೧೦ ರಿಂದ ೧೧ ಉದ್ದ ಏಣುಗಳಿರುತ್ತವೆ. ತಿರುಳು ಬಿಗುವಾಗಿರುತ್ತದೆ. ಕೆನೆ ಬಣ್ಣವಿದ್ದು ತಿನ್ನಲು ಸಿಹಿಯಾಗಿರುತ್ತದೆ.

೧೨. ಕ್ರಿಕೆಟ್ ಬಾಲ್ : ಇದರ ಮತ್ತೊಂದು ಹೆಸರು ಕಲ್ಕತ್ತಾ ಲಾರ್ಜ್ ಎಂದು. ತಮಿಳುನಾಡು, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶಗಳಲ್ಲಿ ಇದರ ಬೇಸಾಯ ಹೆಚ್ಚಾಗಿ ಕಂಡುಬರುತ್ತದೆ. ಎಲೆಗಳ ಬಣ್ಣ ತೆಳು ಹಸಿರು. ಹಣ್ಣು ಗುಂಡಗಿದ್ದು ಗಾತ್ರದಲ್ಲಿ ದೊಡ್ಡದಿರುತ್ತದೆ. ತಿರುಳು ಗಟ್ಟಿ; ತಿನ್ನಲು ಸಕ್ಕರೆ ಹರಳುಗಳಂತಿರುತ್ತದೆ. ಸಿಹಿಯಲ್ಲಿ ಸಾಧಾರ. ಹಣ್ಣುಗಳ ಸಂಖ್ಯೆ ಕಡಿಮೆ. (ಚಿತ್ರ -೩)

ಚಿತ್ರ ೩: ಕ್ರಿಕೆಟ್ ಬಾಲ್ ತಳಿ

 

ಒಣ ಹಾಗೂ ಕಡಿಮೆ ಮಳೆಯಾಗುವ ಪ್ರದೇಶಗಳಿಗೆ ಒಪ್ಪುವ ತಳಿ ಇದಾಗಿದೆ. ಗೂಟಿ ಕಟ್ಟಿದಾಗ ಸಂಖ್ಯೆಗಳಲ್ಲಿ ಬೇರು ಬೇಗ ಮೂಡುವುದಿಲ್ಲ. ಸಮುದ್ರ ಮಟ್ಟದಿಂದ ೩೦೦ ಮೀ. ಎತ್ತರದವರೆಗೆ ಚೆನ್ನಾಗಿ ಫಲಿಸುತ್ತದೆ. ಇದರ ಹಣ್ಣು ದೂರದ ಮಾರುಕಟ್ಟೆಗಳಿಗೆ ಸಾಗಿಸಲು ಅನುಕೂಲ.

೧೩. ಓವಲ್ : ಇದರ ಹಣ್ಣು ಗಾತ್ರದಲ್ಲಿ ಸಣ್ಣದರಿಂದ ಸಾಧಾರಣ ದೊಡ್ಡವು. ಆಕಾರದಲ್ಲಿ ಮೊಟ್ಟೆಯಂತೆ. ತಿರುಳು ಒರಟಾಗಿದ್ದು ಸಕ್ಕರೆ ಹರಳುಗಳಂತಿರುತ್ತದೆ. ರುಚಿಯಲ್ಲಿ ಸಾಧಾರಣ ಸಿಹಿ. ಫಸಲು ಕಡಿಮೆ.

೧೪. ವಾವಿ ವಲಸ : ಆಂಧ್ರಪ್ರದೇಶದ ತೀರ ಪ್ರದೇಶದಲ್ಲಿ ಇದರ ಬೇಸಾಯವಿದೆ. ಹಣ್ಣು ಉದ್ದನಾಗಿ, ಆಕಾರದಲ್ಲಿ ಮೊಟ್ಟೆಯಂತಿರುತ್ತವೆ. ತೊಟ್ಟಿನ ಕಡೆಯಿಂದ ತುದಿಯತ್ತ ಒಂಬತ್ತು ಉದ್ದ ಗೇಣುಗಳಿರುತ್ತವೆ. ತಿರುಳಿನ ಬಣ್ಣ ಹೊಂಬಣ್ಣ, ಅದು ಬಹುಮಟ್ಟಿಗೆ ಕರಬೂಜ ಹಣ್ಣಿನ ತಿರುಳಿನಂತಿರುತ್ತದೆ. ರುಚಿಯಲ್ಲಿ ಸಾಧಾರಣ ಸಿಹಿ.

೧೫. ಕಲ್ಕತ್ತಾ ರೌಂಡ್ : ಹೆಚ್ಚಾಗಿ ಪಶ್ಚಿಮ ಬಂಗಾಳ, ಕರ್ನಾಟಕ ಹಾಗೂ ಇತರ ಭಾಗಗಳಲ್ಲಿ ಕಂಡುಬರುತ್ತದೆ. ಇದು ವಾಣಿಜ್ಯ ತಳಿಯೂ ಹೌದು. ಎಲೆಗಳ ಬಣ್ಣ ತೆಳು ಹಸಿರು. ಹಣ್ಣುಗಾತ್ರದಲ್ಲಿ ದೊಡ್ಡದಿದ್ದು ಗುಂಡಗಿರುತ್ತವೆ. ತಿರುಳು ಗಟ್ಟಿ, ತಿನ್ನಲು ಸಕ್ಕರೆ ಹರಳುಗಳಂತಿರುತ್ತದೆ. ರುಚಿಯಲ್ಲಿ ಸಾಧಾರಣ ಸಿಹಿ. ತಿರುಳು ಕೆನೆ ಬಣ್ಣದ್ದಿರುತ್ತದೆ. ಹಣ್ಣನ್ನು ದೂರದ ಮಾರುಕಟ್ಟೆಗಳಿಗೆ ಸಾಗಿಸಬಹುದು. ಇದು ಎಲೆ ಚುಕ್ಕೆ ರೋಗಕ್ಕೆ ಸುಲಭವಾಗಿ ತುತ್ತಾಗುತ್ತದೆ.

೧೬. ಜೊನ್ನವಲಸ : ಆಂಧ್ರಪ್ರದೇಶದ ತಳಿ. ಹಣ್ಣುಗಾತ್ರದಲ್ಲಿ ಸಾಧಾರಣ ದೊಡ್ಡವು. ಸಿಪ್ಪೆ ತೆಳು; ಮೇಲ್ಮೈ ಒರಟು. ತಿರುಳು ಕೆನೆ ಬಣ್ಣದ್ದಿದ್ದು ತಿನ್ನಲು ಸಿಹಿಯಾಗಿರುತ್ತದೆ.

೧೭. ಜೊನ್ನವಲಸ : ಇದೂ ಸಹ ಆಂಧ್ರಪ್ರದೇಶದ ತಳಿಯೇ. ಹಣ್ಣು ಗಾತ್ರದಲ್ಲಿ ಸಾಧಾರಣ ದೊಡ್ಡದಿದ್ದು, ಆಕಾರದಲ್ಲಿ ಮೊಟ್ಟಯಂತಿರುತ್ತವೆ. ತೊಟ್ಟಿನ ಸುತ್ತ ಕುಳಿ ಇರುತ್ತದೆ. ಸಿಪ್ಪೆ ಮಾಸಲು ಬಣ್ಣದ್ದಿರುತ್ತದೆ. ಮೇಲೆಲ್ಲಾ ಬಿಳಿಯ ಹೊಟ್ಟಿರುತ್ತದೆ. ಹಣ್ಣಿನ ಉದ್ದಕ್ಕೆ ಎಂಟು ಏಣುಗಳಿರುತ್ತವೆ. ತಿರುಳಿನ ಬಣ್ಣ ಕರಬೂಜ ಹಣ್ಣಿನ ತಿರುಳಿನಂತೆ. ಮಧ್ಯಭಾಗದಲ್ಲಿ ಹೊಂಬಣ್ಣದ ಛಾಯೆ ಕಂಡುಬರುತ್ತದೆ.

೧೮. ಬಾರಾಮಸಿ : ಇದು ಪಶ್ಚಿಮ ಬಂಗಾಳ ಹಾಗೂ ಉತ್ತರ ಪ್ರದೇಶಗಳಲ್ಲಿ ಜನಪ್ರಿಯ ತಳಿಯಾಗಿದೆ. ಹಣ್ಣು ಗುಂಡಗಿದ್ದು ಸಾಧಾರಣ ದೊಡ್ಡದಿರುತ್ತದೆ. ಬಾರಾಮಸಿ ಅಂದರೆ ವರ್ವಿಡೀ ಹಣ್ಣು ಬಿಡುವುದು ಎಂದು ಅರ್ಥ. ಆದರೆ ವಾಸ್ತವವಾಗಿ ಇದಕ್ಕೆ ತದ್ವಿರುದ್ಧವಿರುವ ತಳಿ ಇದು.

೧೯. ಪಾಟ್ ಸಪೋಟ : ಗಿಡಗಳು ಕುಂಡಗಳಲ್ಲಿ ಇರುವಾಗಲೇ ಹಣ್ಣು ಬಿಡುವ ಕಾರಣ ಈ ಹೆಸರು ಬಂದಿದೆ. ಹಣ್ಣು ಸಣ್ಣವಿದ್ದು ಮೊಟ್ಟೆಯಾಕಾರವಿರುತ್ತವೆ. ತುದಿ ಚೂಪು. ಸಿಪ್ಪೆ ನಯುವಾಗಿರುತ್ತದೆ. ರುಚಿ ಮತ್ತು ವಾಸನೆಗಳು ಹಿತವಾಗಿರುತ್ತವೆ.

೨೦. ಗವರಯ್ಯ : ಹಣ್ಣು ಗಾತ್ರದಲ್ಲಿ ಸಣ್ಣವು. ಹಣ್ಣಿನ ಒಂದು ಭುಜ ಕುಸಿದಿದ್ದರೆ ಮತ್ತೊಂದು ಭುಜ ಉಬ್ಬಿರುತ್ತದೆ. ಹಣ್ಣಿನ ಉದ್ದಕ್ಕೆ ೮-೧೦ ಏಣುಗಳಿರುತ್ತವೆ. ತಿರುಳು ಮೃದು. ಬಾಯಲ್ಲಿಟ್ಟುಕೊಂಡರೆ ಕರಗುತ್ತದೆ. ರುಚಿಯಲ್ಲಿ ಸಿಹಿ. ಆಂಧ್ರಪ್ರದೇಶ ಮತ್ತು ತಮಿಳುನಾಡುಗಳಲ್ಲಿ ಸ್ವಲ್ಪಮಟ್ಟಿಗೆ ಬೆಳೆಯುತ್ತಾರೆ.

೨೧. ತಗರಂಪೂಡಿ : ಇದರ ಹಣ್ಣು ಮೊಟ್ಟೆಯಾಕಾರವಿದ್ದು ಸಾಧಾರಣ ದೊಡ್ಡವಿರುತ್ತವೆ. ತೊಟ್ಟು ಭಾಗದತ್ತ ಸಪಾಟಾಗಿರುತ್ತದೆ. ಸಿಪ್ಪೆ ತೆಳು; ತಿರುಳಿನ ಬಣ್ಣ ಮಾಸಲು. ಅದರಲ್ಲಿ ಉದ್ದನೆಯ ಗೆರೆಗಳಿರುತ್ತವೆ. ಅದು ಮೃದುವಾಗಿದ್ದು, ಬಾಯಲ್ಲಿಟ್ಟುಕೊಂಡರೆ ಕರಗುವಂತಾದ್ದು. ತಿರುಳು ರಸವತ್ತಾಗಿರುತ್ತದೆ. ರುಚಿಯಲ್ಲಿ ಸಿಹಿ. ರಫ್ತಿಗೆ ಸೂಕ್ತವಿರುವ ತಳಿ ಇದಾಗಿದೆ. ಇದರ ಬೇಸಾಯ ತಮಿಳುನಾಡಿನಲ್ಲಿ ಸ್ವಲ್ಪಮಟ್ಟಿಗೆ ಕಂಡುಬರುತ್ತದೆ.

೨೨. ಅಯ್ಯಂಗಾರ್ : ಹಣ್ಣು ಗಾತ್ರದಲ್ಲಿ ದೊಡ್ಡವು, ಗುಂಡಗೆ ಇಲ್ಲವೇ ಸ್ವಲ್ಪ ಓರೆಯಾಗಿರುತ್ತವೆ. ತೊಟ್ಟೆನ ಸುತ್ತ ಕುಳಿ ಇರುತ್ತದೆ. ಹಣ್ಣಿನ ಉದ್ದಕ್ಕೆ ಏಣುಗಳಿರುತ್ತವೆಯಾದರೂ ಅವು ಅಸ್ಪಷ್ಟ. ಸಿಪ್ಪೆ ಮಂದ, ಮಾಸಲು ಬಣ್ಣದ್ದಿರುತ್ತದೆ. ತಿರುಳಿನ ಬಣ್ಣ ಕೆನ್ನೀಲಿ. ಪರಿಮಳ ಪನ್ನೀರಿನಂತೆ. ಇದರ ಬೇಸಾಯ ತಮಿಳುನಾಡಿನಲ್ಲಿ ಕಂಡುಬರುತ್ತದೆ.

ಮಿಶ್ರತಳಿಗಳು

ಸಪೋಟದಲ್ಲಿ ಹಲವಾರು ತಳಿಗಳಿವೆಯಾದರೂ ಯಾವುದೇ ಒಂದರಲ್ಲಿ ಎಲ್ಲಾ ಉತ್ಕೃಷ್ಟ ಗುಣಗಳು ಕಂಡುಬರುವುದಿಲ್ಲ. ಗಾತ್ರ, ತಿರುಳಿನ ರಚನೆ, ಸಿಹಿಯ ಅಂಶ, ಬೀಜಗಳ ಸಂಖ್ಯೆ, ರುಚಿ ಮತ್ತು ಪರಿಮಳ, ಇಳುವರಿ, ಸಾಗಾಣಿಕೆ ಹಾಗೂ ಸಂಗ್ರಹಣಾ ಗುಣಗಳು ಮುಂತಾದುವು ವ್ಯತ್ಯಾಸಗೊಳ್ಳುತ್ತವೆ. ಹಲವಾರು ಉತ್ತಮ ಗುಣಗಳನ್ನು ಒಂದೇ ತಳಿಯಲ್ಲಿ ಕ್ರೋಢೀಕರಿಸುವ ಉದ್ದೇಶಕ್ಕೆ ಮಿಶ್ರತಳಿ ಉತ್ಪಾದನೆ ಅತ್ಯಗತ್ಯ. ತಮಿಳುನಾಡಿನ ಕೊಯಮತ್ತೂರು ಮತ್ತು ಪೆರಿಯಾಕುಳಂ ಹಾಗೂ ಕನಾರ್ತಕದ ಧಾರವಾಡಗಳಲ್ಲಿ ಈ ಕಾರ್ಯ ನಡೆದಿದ್ದು ಕೆಲವೊಂದು ಮಿಶ ತಳಿಗಳನ್ನು ಉತ್ಪಾದಿಸಿ ಬೇಸಾಯುಕ್ಕೆ ಬಿಡುಗಡೆ ಮಾಡಲಾಗಿದೆ. ಅವು ಹೀಗಿವೆ :

) ಕೊ : ಈ ಮಿಶ್ರತಳಿಯನ್ನು ಕೊಯಮತ್ತೂರಿನ ಕೃಷಿ ಕಾಲೇಜಿನಲ್ಲಿ ಉತ್ಪಾದಿಸಲಾಯಿತು. ಕ್ರಿಕೆಟ್ ಬಾಲ್ ಮತ್ತು ಓವಲ್ ತಳಿಗಳನ್ನು ಸಂಕರಿಸಿ ಇದನ್ನು ಉತ್ಪಾದಿಸಲಾಯಿತು. ಈ ಎರಡೂ ತಳಿಗಳು ಅಲ್ಲಿ ವಾಣಿಜ್ಯವಾಗಿ ಬೆಳೆಯಲ್ಪಡುತ್ತಿವೆ. ಕ್ರಿಕೆಟ್ ಬಾಲ್ ತಳಿಯ ಹಣ್ಣು ದೊಡ್ಡವು. ಅದೇ ರೀತಿ ಓವಲ್ ತಳಿಯ ಹಣ್ಣು ರುಚಿಯಲ್ಲಿ ಬಲು ಸಿಹಿ. ಹೀಗೆ ಈ ಎರಡೂ ಗುಣಗಳು ಮಿಶ್ರ ತಳಿಯಲ್ಲಿ ಇರುವಂತೆ ಮಾಡಲಾಯಿತು. ಹೀಗೆ ಉತ್ಪಾದಿಸಿದ ಬೀಜ ಸಸಿಗಳನ್ನು ೧೯೫೪ರಲ್ಲಿ ನೆಟ್ಟು ಬೆಳೆಸಿದಾಗ ನಾಲ್ಕು ವರ್ಷಗಳನಂತರ ಅವು ಫಸಲನ್ನು ಬಿಡಲು ಪ್ರಾರಂಭಿಸಿದುವು. ಕೊ-೧ ಮಿಶ್ರತಳಿಯ ಹಣ್ಣು ಉದ್ದನಾಗಿದ್ದು ಗಾತ್ರದಲ್ಲಿ ದೊಡ್ಡವಿದ್ದುವು. ಬಿಡಿ ಹಣ್ಣುಗಳ ತೂಕ ೧೨೫ ಗ್ರಾಂಗಳಷ್ಟಿದ್ದು, ತಿರುಳು ಕೆಂಪು ಕಂದು ಬಣ್ಣದ್ದಿತ್ತು. ತಿನ್ನಲು ಸಕ್ಕರೆ ಹರಳುಗಳಂತಿದ್ದು ಬಲು ಸಿಹಿಯಾಗಿತ್ತು. ಅದರಲ್ಲಿನ ಒಟ್ಟು ಕರಗಿದ ಘನ ಪದಾರ್ಥಗಳ ಪ್ರಮಾಣ ಶೆ. ೧೮ ಹಣ್ಣುಗಳಲ್ಲಿನ ಬೀಜ ಮೂಲ ತಳಿಗಳ ಹಣ್ಣುಗಳಲ್ಲಿದ್ದಂತೆ ಇದ್ದುವಾದರೂ ಗಾತ್ರದಲ್ಲಿ ಸ್ವಲ್ಪ ದೊಡ್ಡವಿದ್ದು ತುದಿಯತ್ತ ಬಾಗಿದ್ದುವು. ಈ ಮಿಶ್ರತಳಿ ಮರಗಳ ಬೆಳವಣಿಗೆ ಹಾಗೂ ಹೂಬಿಡುವಿಕೆ ಮೂಲ ತಳಿಗಳಲ್ಲಿ ಇದ್ದಂತೆ ಇರುತ್ತದೆ.

) ಕೊ : ಇದೂ ಸಹ ಕೊಯಮತ್ತೂರಿನ ಕೃಷಿ ಕಾಲೇಜಿನ ಕೊಡುಗೆಯೇ. ಓವಲ್ ಮತ್ತು ಕ್ರಿಕೆಟ್ ಬಾಲ್ ತಳಿಗಳನ್ನು ಸಂಕರಿಸಿ ಇದನ್ನು ಉತ್ಪಾದಿಸಲಾಯಿತು. ಈ ಸಂಕರಣವು ಮೂಲ ಪೀಳಿಗೆಗಳಿಗಿಂತ ಉತ್ತಮವಾಗಿ ಕಂಡುಬಂದಿದೆ.

) ಪಿ. ಕೆ. ಎಂ. – : ತಮಿಳುನಾಡಿನ ಪೆರಿಯಾಕುಳಂ ಸಂಶೋಧನಾ ಕೇಂದ್ರದ ಕೊಡುಗೆ ಇದಾಗಿದೆ. ದೊಡ್ಡಗಾತ್ರದ ಹಣ್ಣನ್ನು ಬಿಡುವುದರ ಜೊತೆಗೆ ಅಧಿಕ ಫಸಲನ್ನು ಕೊಡುವ ಮಿಶ್ರತಳಿ ಇದಾಗಿದೆ, ಇದರ ಮರಗಳು ಸ್ವಲ್ಪ ಎತ್ತರಕ್ಕೆ ಬೆಳೆಯುವ ಸ್ವಭಾವ ಹೊಂದಿವೆ, ತಿರುಳಲ್ಲಿ ಶೇ. ೧೦. ೬೮ ರಷ್ಟು ಸಕ್ಕರೆ ಇರುತ್ತದೆ.

) ಪಿ. ಕೆ. ಎಂ : ಗುತ್ತಿ ಮತ್ತು ಕೀರ್ತಭಾರತಿ ತಳಿಗಳನ್ನು ಸಂಕರಿಸಿ ೧೯೯೨ರಲ್ಲಿ ಇದನ್ನು ಉತ್ಪಾದಿಸಲಾಯಿತು. ಇದರಲ್ಲಿ ಗುತ್ತಿ ತಳಿಯ ಅಧಿಕ ಇಳುವರಿ ಮತ್ತು ಉತ್ತಮ ಗುಣಮಟ್ಟ ಹಾಗೂ ಕೀರ್ತಭಾರತಿಯ ಹಣ್ಣುಗಳ ಗಾತ್ರವನ್ನು ಅಳವಡಿಸಲಾಗಿದೆ. ಇದು ಪಿಕೆಎಂ-೧ ತಳಿಗಿಂತ ಶೇ. ೪೨. ೬ರಷ್ಟು ಅಧಿಕ ಫಸಲನ್ನು ಕೊಡಬಲ್ಲದು. ಪ್ರಾಯದ ಮರವೊಂದು ವರ್ಷಕ್ಕೆ ಸರಾಸರಿ ೧೪೦೦ ಹಣ್ಣುಗಳನ್ನು ಬಿಡಬಲ್ಲದು. ಹಣ್ಣುಗಳ ಸರಾಸರಿ ತೂಕ ೯೩. ೪ ಗ್ರಾಂ. ಅವುಗಖ ತಿರುಳಲ್ಲಿ ೨೬. ೫” ಬ್ರಿಕ್ಸ್ ಅಂದರೆ ಕರಗಿದ ಘನ ಪದಾರ್ಥಗಳಿರುತ್ತವೆ. ಹಣ್ಣು ಆಕಾರದಲ್ಲಿ ಮೊಟ್ಟೆಯಂತೆ. ಮಳೆ ಆಸರೆಯಲ್ಲಿ ಬೆಳೆಯಲು ಒಪ್ಪುವ ಮಿಶ್ರ ತಳಿ ಇದಾಗಿದೆ.

) ಧಾರವಾಡ ಕೃಷಿ ವಿಶ್ವವಿದ್ಯಾನಿಲಯದ ತಳಿಗಳು : ಇಲ್ಲಿ ಡಿಎಚ್‌ಎಸ್-೨ ಎಂಬ ಎರಡು ಮಿಶ್ರ ತಳಿಗಳನ್ನು ಬೇಸಾಯಕ್ಕೆ ಬೆಡುಗಡೆ ಮಾಡಲಾಗಿದೆ. ಕಾಲಿಪತ್ತಿ, ಕ್ರಿಕೆಟ್ ಬಾಲ್, ಕಲ್ಕತ್ತಾ ರೌಂಡ್ ಮತ್ತು ಓವಲ್ ತಳಿಗಳನ್ನು ಸಂಕರಣ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ. ಇವುಗಳ ಬೆಳವಣಿಗೆ ಮತ್ತು ಫಸಲುಗಳನ್ನು ಪರಿಶೀಲಿಸಲಾಗುತ್ತಿದೆ.

ಕೆಲವೊಂದು ತಳಿ ಹಾಗೂ ಮಿಶ್ರ ತಳಿಗಳ ರಾಸಾಯನಿಕ ಸಂಯೋಜನೆಯನ್ನು ಕೊಯಮುತ್ತೂರಿನ ಕೃಷಿ ಕಾಲೇಜಿನಲ್ಲಿ ವಿಶ್ಲೇಷಿಸಲಾಗಿದೆ. ಅವುಗಳ ವಿವರಗಳನ್ನು ಕೋಷ್ಟಕ ೧ರಲ್ಲಿ ಕೊಟ್ಟಿದೆ.

ಕೋಷ್ಟಕ : ವಿವಿಧ ತಳಿ ಹಾಗೂ ಮಿಶ್ರತಳಿ ಹಣ್ಣುಗಳ ರಾಸಾಯನಿಕ ಸಂಯೋಜನೆ