ಕಡಿಮೆ ಮಳೆ ಬೀಳುವ ಹಾಗೂ ಶುಷ್ಕ ಪ್ರದೇಶಗಳಲ್ಲಿಯೂ ಸಹ ಬೆಳೆಯಬಹುದಾದ ಸಪೋಟ ನೂರುವರ್ಷಗಳಿಗೂ ಹೆಚ್ಚು ಕಾಲ ಜೀವಿಸಿ ಫಸಲು ನೀಡುತ್ತದೆ. ಇದು ಒಂದು ಪೌಷ್ಟಿಕ ಮತ್ತು ಸ್ವಾದಿಷ್ಟ ಹಣ್ಣು. ಇದು ಉತ್ತರ ಅಮೆರಿಕದಲ್ಲಿ ಉಗಮವಾಗಿ ಉಷ್ಣವಲಯದ ಎಲ್ಲ ದೇಶಗಳಲ್ಲಿ ಹಬ್ಬಿದೆ. ಭಾರತದಲ್ಲಿ ಇದರ ಸಾಗುವಳಿ ಮಹಾರಾಷ್ಟ್ರದಲ್ಲಿ ಪ್ರಾರಂಭವಾಗಿ ಇಂದು ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ (ಗುಜರಾತ್, ಆಂಧ್ರಪ್ರದೇಶ, ಕರ್ನಾಟಕ, ತಮಿಳನಾಡು, ಕೇರಳ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಪಂಜಾಬ, ಹರಿಯಾಣ) ಕಂಡುಬರುತ್ತದೆ. ಇದು ಉಷ್ಣವಲಯದ ಬೆಳೆ. ಸಮುದ್ರತೀರ ಪ್ರದೇಶದ ಹವಾಗುಣ ಇದರ ಬೇಸಾಯಕ್ಕೆ ಅತ್ಯುತ್ತಮ. ಮೋಡ ಕವಿದ ವಾತವರಣವಿದ್ದರೂ ಕಾಯಿಕಚ್ಚುವಿಕೆಗೆ ತೊಂದರೆಯಾಗುವುದಿಲ್ಲ. ಸಪೋಟವನ್ನು ಎಲ್ಲ ತರದ ಮಣ್ಣುಗಳಲ್ಲಿ ಬೆಳೆಯಬಹುದು. ನೀರು ಬಸಿಯುವ, ಸಾಕಷ್ಟು ಆಳವಿರುವ ಮರಳು ಮಿಶ್ರಿತಗೋಡು, ಕೆಂಪು ಮಣ್ಣು ಹಾಗೂ ಸಾಧಾರಣ ಕಪ್ಪು ಮಣ್ಣುಗಳಲ್ಲಿ ಇದು ಚೆನ್ನಾಗಿ ಬೆಳೆಯುತ್ತದೆ. ಒಟ್ಟಿನಲ್ಲಿ ಸಪೋಟ ವಿವಿಧ ಹವಾಮಾನ, ಭೂಗುಣ, ಮಳೆ ಏರುಪೇರು ಹಾಗೂ ಶುಷ್ಕ ಪರಿಸ್ಥಿತಿಗಳಿಗೆ ಹೊಂದಿಕೊಂಡು ಬೆಳೆಯಬಲ್ಲ, ನೂರು ವರ್ಷಗಳ ಕಾಲ ಸತತವಾಗಿ ಫಲ ನೀಡಬಲ್ಲ ಗಡುಸಾದ ಬೆಳೆ.

ಸಪೋಟ (ಅಕ್ರಾಸ್ ಸಪೋಟ) : ದೊಡ್ಡಗಾತ್ರದ ಸ್ವಾದಯುಕ್ತ ಹಣ್ಣು. ಪೂರ್ಣ ಮಾಗಿದಾಗ ಮಧುರವಾದ ವಾಸನೆಯಿಂದ ಕೂಡಿದ್ದು ತಿನ್ನಲು ಸಿಹಿಯಾಗಿರುತ್ತದೆ. ಇದಕ್ಕೆ ಸಪೋಡಿಲ್ಲ, ಚಿಕು, ನೇಸ್ ಬೆರ್ರಿ ಮುಂತಾದ ಹೆಸರುಗಳಿವೆ. ನಮ್ಮ ದೇಶದಲ್ಲಿ ಇದನ್ನು ಹಣ್ಣುಗಳಿಗಾಗಿ ಬೆಳೆದರೆ ಮೆಕ್ಸಿಕೊ, ಗ್ವಾಟಿಮಾಲ, ಬ್ರಿಟಿಷ್ ಹಾಂಡುರಾಸ್ ಮುಂತಾದ ದೇಶಗಳಲ್ಲಿ ’ಚಿಕಲ್’ ಎಂಬ ವಾಣಿಜ್ಯ ಪದಾರ್ಥಕ್ಕಾಗಿ ಬೆಳೆಯುತ್ತಾರೆ. ತೊಗಟೆ, ಕಾಯಿ ಮುಂತಾದ ಭಾಗಗಳಲ್ಲಿ ಗಾಯಮಾಡಿದಾಗ ಹಾಲಿನಂತಹ ದ್ರವ ಪದಾರ್ಥ ಹೊರಬಂದು ಗಾಳಿ ಮತ್ತು ಬಿಸಿಲಿಗೆ ಗಟ್ಟಿಯಾಗುತ್ತದೆ. ಇದು ಚಿಕಲ್ ತಯಾರಿಕೆಗೆ ಬೇಕಾದ ಮೂಲವಸ್ತು. ಇಂದು ಅಂಟಾಗಿದ್ದು ಜಗ್ಗಿ ಎಳೆದರೆ ನಾರಾಗಿ ರಬ್ಬರಿನಂತೆ ಸಾಗುತ್ತದೆ. ಇದನ್ನು ಚ್ಯೂಯಿಂಗ್ ಗಮ್ ತಯಾರಿಕೆಯಲ್ಲಿ ಬಳಸುತ್ತಾರೆ.

ಕಾಯಿ ರುಚಿಯಲ್ಲಿ ಒಗರು. ಅದನ್ನು ತಿಂದಲ್ಲಿ ಅದರ ಹಾಲು ಬಾಯಿಗೆ ಅಂಟಿಕೊಳ್ಳುತ್ತದೆ. ಕಾಯಿ ಬಲಿತು ಪಕ್ವಗೊಂಡಲ್ಲಿ ಮೆತ್ತಗಾಗಿ ಮಧುರವಾದ ಪರಿಮಳವನ್ನು ಹರಡುತ್ತವೆ. ಹಣ್ಣನ್ನು ಹಾಗೆಯೇ ತಿನ್ನುವುದು ರೂಢಿಯಲ್ಲಿದೆ. ಸಿಪ್ಪೆಯಲ್ಲಿ ಹೆಚ್ಚು ಪೋಷಕಾಂಶಗಳಿರುತ್ತವೆ. ಹಣ್ಣುಗಳಿಂದ ಜಾಮ್, ಜೆಲ್ಲಿ, ಗ್ಲುಕೋಸ್, ಪೆಕ್ಟಿನ್ ಮುಂತಾದವುಗಳನ್ನು ತಯಾರಿಸುತ್ತಾರೆ. ತಿರುಳಿನಿಂದ ಹಲ್ವ, ಷರಬತ್ತು ತಯಾರಿಸಬಹುದು. ಈ ಹಣ್ಣನ್ನು ಹೋಳುಹೋಳಾಗಿ ಮಾಡಿ, ಒಣಗಿಸಿ ಜೋಪಾನ ಮಾಡಿಟ್ಟು ಪ್ರವಾಸ, ಸಭೆ, ಸಮಾರಂಭಗಳು, ಹಬ್ಬ ಹರಿದಿನಗಳು ಮುಂತಾದ ಸನ್ನಿವೇಶಗಳಲ್ಲಿ ಬಳಸಲು ಪ್ರಾರಂಭಿಸಿದ್ದಾರೆ. ಹೀಗೆ ಜೋಪಾನ ಮಾಡಿಟ್ಟಾಗ ಅವು ಕೆಡುವುದಿಲ್ಲ. ತಿರುಳನ್ನು ಉದ್ದಕ್ಕೆ ಸೀಳಿ ಹೋಳುಗಳನ್ನಾಗಿ ಮಾಡಿ ಸಕ್ಕರೆ ಪಾಕದಲ್ಲಿ ಜೋಪಾನ ಮಾಡಿಟ್ಟು ಅನಂತರ ತಿಂದಲ್ಲಿ ಬಹಳ ರುಚಿಯಾಗಿರುತ್ತದೆ. ಡಚ್ ಈಸ್ಟ್ ಇಂಡೀಸ್‌ನಲ್ಲಿ ಇದರ ಚಿಗುರೆಲೆಗಳನ್ನು ಹಾಗೆಯೇ ಅಥವಾ ಅವರೆ ಮುಂತಾದ ತರಕಾರಿಗಳೊಂದಿಗೆ ಬೆರೆಸಿ ಬೇಯಿಸಿ ತಿನ್ನುತ್ತಾರೆ.

ಈ ಹಣ್ಣಿಗೆ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಹೆಸರುಗಳಿವೆ. ಅಮೆರಿಕನ್ ಬುಲ್ಲಿ, ಆಸ್ಟ್ರೇಲಿಯನ್ ಕ್ರಾನ್ ಬೆರ್ರಿ, ಬುಲ್ಲಿಟ್ರೀ, ನೇಸ್ ಬೆರ್ರಿ, ರಫ್‌ಚಾಫ್, ಸಪೋಡಿಲ್ಲ, ಸಪೋಡಿಲ್ಲಪ್ಲಮ್, ಸಪೋಟಪ್ಲಮ್, ಚಿಕ್ಕೂ, ಝುಪೋಟಿಲ್ಲ, ಡಿಲ್ಲು ಸಪೋಟ, ಡಿಲ್ಲಿ ಮುಂತಾದವು ಇದರ ಇಂಗ್ಲೀಷ್ ಹೆಸರುಗಳು. ಮಲೇಷ್ಯಾದಲ್ಲಿ ಸಾವೊಮನಿಲಾ ಎಂದು ಕರೆದರೆ ಜಾವಾದಲ್ಲಿ ಸಾವೊಲಂಡ, ಸಾವೊಮನಿಲಾ ಎಂದು ಕರೆಯುತ್ತಾರೆ. ಮಡಗಾಸ್ಕರ್‌ನಲ್ಲಿ ಸಾಬೂಮನಿಲಾ ಎಂಬ ಹೆಸರಿನಿಂದ ಕರೆಯುತ್ತಾರೆ. ಈ ಹಣ್ಣಿನ ಬೆಳೆಯನ್ನು ಈಗ ವಾಣಿಜ್ಯವಾಗಿ ಬೆಳೆಯಲು ಪ್ರಾರಂಭಿಸಲಾಗಿದ್ದು ಇದು ಒಂದು ಲಾಭದಾಯಕ ಬೆಳೆಯಾಗಿದೆ. ಕಡಿಮೆ ಮಳೆಯಾಗುವ ಹಾಗೂ ಬರಗಾಲ ಪೀಡಿತ ಪ್ರದೇಶಗಳಿಗೆ ಸೂಕ್ತವಾಗಿದೆ. ಜಲಾನಯನ ಪ್ರದೇಶಗಳಿಗೆ ಬಹುವಾಗಿ ಒಪ್ಪುತ್ತದೆ. ಒಮ್ಮೆ ನೆಟ್ಟು ಬೆಳೆಸಿದ್ದೇ ಆದರೆ ನೂರು ವರ್ಷಗಳಿಗೂ ಮೇಲ್ಪಟ್ಟು, ಪ್ರತಿವರ್ಷ ಯಥೇಚ್ಛ ಫಸಲನ್ನು ಬಿಡುವ ಸಾಮರ್ಥ್ಯ ಈ ಹಣ್ಣಿನ ಮರಗಳಿಗೆ ಇದೆ. ಮೊದಲ ಒಂದೆರಡು ವರ್ಷಗಳವರೆಗೆ ಚೆನ್ನಾಗಿ ನೋಡಿಕೊಂಡಿದ್ದೇ ಆದಲ್ಲಿ ಅದರ ಮುಂದಿನ ವರ್ಷಗಳಲ್ಲಿ ಯಾವುದೇ ನೀರಾವಾರಿಯ ಅಗತ್ಯವಿಲ್ಲದೆ, ಕೇವಲ ಮಳೆ ಆಸರೆಯಲ್ಲಿಯೇ ಬೆಳೆದು ಫಸಲನ್ನೀಯಬಲ್ಲದು.

ಹಣ್ಣಿನ ಪೌಷ್ಟಿಕ ಮತ್ತು ಔಷಧೀಯ ಗುಣಗಳು

ಮಾಗಿದ ಹಣ್ಣಿನಲ್ಲಿ ಶರೀರಕ್ಕೆ ಅಗತ್ಯವಿರುವ ವಿವಿಧ ಪೋಷಕಾಂಶಗಳು ಸಾಕಷ್ಟು ಪ್ರಮಾಣದಲ್ಲಿ ಇರುತ್ತವೆ. ಪಕ್ವಗೊಂಡಂತೆಲ್ಲ ಅದರಲ್ಲಿನ ಪಿಷ್ಟ ಪದಾರ್ಥವು ಸಕ್ಕರೆಯಾಗಿ ಮಾರ್ಪಡುತ್ತದೆ. ತಿರುಳಿನಲ್ಲಿ ಶೇ. ೧೨ ರಿಂದ ೧೪ರಷ್ಟು ಸಕ್ಕರೆ ಇರುತ್ತದೆ. ೧೦೦ಗ್ರಾಂ ತಿರುಳಿನಲ್ಲಿನ ಪೋಷಕಾಂಶಗಳು : ತೇವಾಂಶ ೭೩. ೭ ಗ್ರಾಂ, ಶರ್ಕರ ಪಿಷ್ಟಗಳು ೨೧. ೪ ಗ್ರಾಂ, ಪ್ರೊಟೀನ್ ೦. ೭ ಗ್ರಾಂ, ಜಿಡ್ಡು ೧. ೧ ಗ್ರಾಂ, ಬೂದಿ ೫೭ ಮಿ. ಗ್ರಾಂ, ಸುಣ್ಣ ೨೮ ಮಿ. ಗ್ರಾಂ, ರಂಜಕ ೨೭ ಮಿ. ಗ್ರಾಂ, ಕಬ್ಬಿಣ ೨ ಮಿ. ಗ್ರಾಂ, ಅಸ್ಕಾರ್ಬಿಕ್ ಆಮ್ಲ ೬ ಮಿ. ಗ್ರಾಂ.

ಸಪೋಟ ಸಿಹಿಯಾದ ಪೌಷ್ಟಿಕ ಹಣ್ಣು ಮಾತ್ರವಲ್ಲದೆ ಉತ್ತಮ ಔಷಧಿಯೂ ಹೌದು. ಇದರಲ್ಲಿನ ಪ್ರೊಟೀನ್ ಅಂಶ ಮಾಂಸ ಖಂಡಗಳನ್ನು ಬಲಪಡಡಿಸಬಲ್ಲದು. ತಿರುಳು ಮತ್ತು ಸಿಪ್ಪೆಗಳು ಪಚನ ಕಾರ್ಯದಲ್ಲಿ ನೆರವಾಗಿ ತಿಂದ ಆಹಾರ ಕರುಳಿನಲ್ಲಿ ಚಲಿಸಲು ಅನುಕೂಲವಾಗುತ್ತದೆ. ಇದರಿಂದ ಮಲಬದ್ಧತೆ ನಿವಾರಣೆ ಸಾಧ್ಯ. ಕಬ್ಬಿಣದ ಅಂಶ ರಕ್ತ ವೃದ್ಧಿಗೆ ನೆರವಾಗಬಲ್ಲದು. ಸುಣ್ಣ ಮತ್ತು ರಂಜಕಗಳು, ಮೂಳೆ ಮತ್ತು ಹಲ್ಲುಗಳು ದೃಢಗೊಳ್ಳಲು ಸಹಾಯಕವಾಗುತ್ತವೆ. ತೀರ ಪ್ರದೇಶದಲ್ಲಿ ಇದರ ಹಣ್ಣನ್ನು ಸೇವಿಸುವ ಬಗೆಯೇ ಬೇರೆ. ಚೆನ್ನಾಗಿ ಮಾಗಿದ ಹಣ್ಣನ್ನು ಸಿಪ್ಪೆ ಬಿಡಿಸಿ, ಬೀಜ ತೆಗೆದು, ತಿರುಳನ್ನು ತುಪ್ಪದಲ್ಲಿ ಒಂದೆರಡು ರಾತ್ರಿಗಳ ಕಾಲ ಚೆನ್ನಾಗಿ ನೆನೆಸಿಟ್ಟು ಮರುದಿವಸ ತಿನ್ನುತ್ತಾರೆ. ಹೀಗೆ ತಿನ್ನುವುದರಿಂದ ಪಿತ್ತರಸ ಬಾಧೆ ಹಾಗೂ ಜ್ವರ ದೂರಗೊಳ್ಳುತ್ತವೆ. ವೆಸ್ಟ್‌ ಇಂಡೀಸ್‌ನಲ್ಲಿ ಹಸಿವನ್ನು ಹೆಚ್ಚಿಸಲು ಇದರ ಬೀಜವನ್ನು ತಿನ್ನುವುದುಂಟು. ಬೀಜಗಳಲ್ಲಿ ಮೂತ್ರೋತ್ಪಾದಕ ಗುಣಗಳಿವೆ. ಭೇದಿ ಮತ್ತು ಆಮಶಂಕೆಗಳಿದ್ದಲ್ಲಿ ದೋರೆಗಾಯಿಗಳನ್ನು ತಿನ್ನುವುದು ಉಪಯುಕ್ತ. ಗಿನಿ ದೇಶದಲ್ಲಿ ತೊಗಟೆಯನ್ನು ಪುಷ್ಟಿದಾಯಕವಾಗಿ ಬಳಸುತ್ತಾರೆ. ಕಂಪೂಚಿಯಾದಲ್ಲಿ ತೊಗಟೆಯನ್ನು ಒಗರು ಪದಾರ್ಥವಾಗಿ ಹಾಗೂ ಬೆವರೋತ್ಪಾದಕವಾಗಿ ಬಳಸುವುದುಂಟು. ಇದರಿಂದ ತಯಾರಿಸಿದ ಕಷಾಯವನ್ನು ವಿರೇಚನಗಳಲ್ಲಿ ನಿರ್ದೇಶಿಸುತ್ತಾರೆ.

ಉಗಮ ಮತ್ತು ಹಂಚಿಕೆ

ಮೆಕ್ಸಿಕೊ ಮತ್ತು ಉತ್ತರ ಅಮೇರಿಕ ಸಪೋಟದ ತವರು. ಈಗ ಉಷ್ಣವಲಯದ ಎಲ್ಲಾ ಕಡೆ ಇದರ ಬೇಸಾಯ ಮತ್ತು ಬಳಕೆಗಳು ಕಂಡುಬರುತ್ತವೆ. ದಕ್ಷಿಣ ಹಾಗೂ ಮಧ್ಯ ಅಮೇರಿಕ, ದಕ್ಷಿಣ ಫ್ಲೋರಿಡ, ಜಮೈಕ, ಫಿಲಿಪೈನ್ಸ್, ಶ್ರೀಲಂಕ, ಭಾರತ ಈ ಬೆಳೆಯನ್ನು ಹೆಚ್ಚಾಗಿ ಬೆಳೆಯುವ ದೇಶಗಳು. ವೆಸ್ಟ್ ಇಂಡೀಸ್‌ನಲ್ಲಿ ಇದರ ಬೇಸಾಯ ಬಹು ಹಿಂದಿನಿಂದಲೂ ಇದೆ. ಕ್ರಿ. ಶ. ೧೫೧೩ ರಿಂದ ೧೫೨೫ ರವರಗೆ ಅಲ್ಲಿ ಇದ್ದ ಓವಿಯೊಡೊ ಎಂಬುವರ ಪ್ರಕಾರ ಹಣ್ಣುಗಳ ಪೈಕಿ ಸಪೋಟ ಬಹಳ ಶ್ರೇಷ್ಠವೆಂದು ಪರಿಗಣಿಸಲಾಗಿತ್ತು. ಫಿಲಿಪ್ಪೈನ್ಸ್‌ಗೆ ಇದನ್ನು ಕೊಂಡೊಯ್ದವರು ಸ್ಪ್ಯಾನಿಷ್ ಜನಾಂಗದವರು. ಅಲ್ಲಿಂದ ಪಶ್ಚಿಮಾಭಿಮುಖವಾಗಿ ಮಲೇಷ್ಯಾ ಮತ್ತಿತರ ದೇಶಗಳಿಗೆ ಹರಡಿತು, ಭಾರತಕ್ಕೆ ಅದು ಯಾವಾಗ ಬಂದಿತು ಎಂಬುದರ ಬಗ್ಗೆ ಖಚಿತವಾಗಿ ತಿಳಿದುಬಂದಿಲ್ಲ. ಇದನ್ನು ಭಾರತಕ್ಕೆ ಪೋರ್ಚುಗೀಸರು ತಂದಿರಬಹುದೆಂದು ಅಂದಾಜು. ಮಹಾರಾಷ್ಟ್ರದ ಪೋಲ್‌ವಾಡ್ ಎಂಬ ಹಳ್ಳಿಯಲ್ಲಿ ಕ್ರಿ. ಶ. ೧೮೯೮ ರಲ್ಲಿ ಇದರ ಸಸಿಗಳನ್ನು ನೆಟ್ಟು ಬೆಳೆಸಿದ್ದಾಗಿ ತಿಳಿದುಬಂದಿದೆ.

ಭಾರತದಲ್ಲಿ ಇದನ್ನು ಹೆಚ್ಚಾಗಿ ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶ, ಕನಾರ್ಟಕ, ತಮಿಳುನಾಡು, ಕೇರಳ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಪಂಜಾಬ್ ಮತ್ತು ಹರಿಯಣ ರಾಜ್ಯಗಳಲ್ಲಿ ಬೆಳೆಯುತ್ತಾರೆ. ೧೯೯೩-೯೪ರಲ್ಲಿ ದೇಶಗಳಲ್ಲಿ ಒಟ್ಟು ೨೪,೦೦೦ ಹೆಕ್ಟೇರು ಕ್ಷೇತ್ರದಲ್ಲಿ ಈ ಬೆಳೆ ಇದ್ದು ಸುಮಾರು ನಾಲ್ಕು ಲಕ್ಷ ಟನ್ನುಗಳಷ್ಟು ಹಣ್ಣನ್ನು ಉತ್ಪಾದಿಸಲಾಯಿತು. ಇದೇ ಅವಧಿಯಲ್ಲಿ ಕರ್ನಾಟಕದಲ್ಲಿ ಸಪೋಟ ಹಣ್ಣಿನ ಬೆಳೆ ಇದ್ದ ವಿಸ್ತೀರ್ಣ ಮತ್ತು ಉತ್ಪಾದನೆಗಳು ಕ್ರಮವಾಗಿ ೧೫, ೯೪೯ ಹೆಕ್ಟೇರು ಮತ್ತು ೨, ೯೨, ೪೭೪ ಟನ್ನುಗಳಾಗಿದ್ದವು. ಇತ್ತೀಚಿನ ವರ್ಷಗಳಲ್ಲಿ ಅವುಗಳ ಪ್ರಮಾಣ ಇನ್ನೂ ಹೆಚ್ಚಾಗಿದೆ.

ಅಧಿಕ ಮಳೆಯಾಗುವ ತೀರಪ್ರದೇಶದಿಂದ ಹಿಡಿದು ಕಡಿಮೆ ಮಳೆಯಾಗುವ ಕೋಲಾರ, ಚಿತ್ರದುರ್ಗ, ತುಮಕೂರು, ಗುಲ್ಬರ್ಗ, ಬೀದರ್ ಮುಂತಾದ ಪ್ರದೇಶಗಳಲ್ಲಿ ಇದನ್ನು ಬೆಳೆಯಬಹುದು. ಅನಾವೃಷ್ಟಿಯನ್ನು ತಡೆದುಕೊಳ್ಳುವ ಸಾಮರ್ಥ್ಯ ಈ ಮರಗಳಿಗೆ ಇದೆ. ಆದ್ದರಿಂದ ಈ ಬೆಳೆ ಕಡಿಮೆ ಮಳೆಯಾಗುವ ಪ್ರದೇಶಗಳಿಗೆ ಸೂಕ್ತ ಹಾಗೂ ಹೆಚ್ಚಿನ ಆರೈಕೆಯೂ ಬೇಕಾಗಿಲ್ಲ.

ಹವಾಮಾನ

ಸಪೋಟ ಉಷ್ಣವಲಯದ ಹಣ್ಣಿನ ಬೆಳೆ. ಆದಾಗ್ಯೂ ಸಮಶೀತೋಷ್ಣ ವಲಯದಲ್ಲಿ ಚೆನ್ನಾಗಿ ಫಲಬಿಡುತ್ತದೆ. ಒಣ ಹಾಗೂ ಆರ್ದ್ರತೆಯಿಂದ ಕೂಡಿದ ಹವೆ ಇದ್ದಲ್ಲಿ ತೊಂದರೆಯೇನೂ ಆಗುವುದಿಲ್ಲ. ಬೆಚ್ಚಗಿನ ಹವೆ ಇದ್ದಲ್ಲಿ ಉತ್ತಮ. ತೀರ ಪ್ರದೇಶದ ಹವಾಗುಣ ಇದರ ಬೇಸಾಯಕ್ಕೆ ಅತ್ಯುತ್ತಮ. ಸಮುದ್ರ ಮಟ್ಟದಿಂದ ೧೨೦೦ ಮೀ. ಎತ್ತರದವರೆಗೆ ಚೆನ್ನಾಗಿ ಫಲಿಸುತ್ತದೆ. ದಕ್ಷಿಣ ಭಾರತದ ಬೆಟ್ಟಪ್ರದೇಶಗಳಲ್ಲಿ ಸುಮಾರು ೧೦೦೦ ಮೀ. ಎತ್ತರದವರೆಗೆ ಇದನ್ನು ಬೆಳೆಯುತ್ತಾರಾದರೂ ಹೆಚ್ಚು ಎತ್ತರಕ್ಕೆ ಹೋದಂತೆಲ್ಲಾ ಮರಗಳ ಆರೋಗ್ಯ ಹಾಗೂ ಹಣ್ಣಿನ ಗುಣಮಟ್ಟಗಳು ಕುಸಿಯುತ್ತವೆ. ವಾರ್ಷಿಕ ಮಳೆ ೧೨೫-೨೫೦ ಸೆಂ. ಮೀ. ಇರುವ ಪ್ರದೇಶಗಳು ಈ ಬೆಳೆಗೆ ಸೂಕ್ತ. ವರ್ಷದ ಯಾವುದೇ ಕಾಲದಲ್ಲಿ ಮಳೆಯಾಗುವುದು ಇಲ್ಲವೇ ಮೋಡ ಕವಿದ ವಾತಾವರಣವಿದ್ದರೂ ಕಾಯಿ ಕಚ್ಚುವಿಕೆಗೆ ಅಡ್ಡಿಯಾಗಲಾರದು. ಈ ಬೆಳೆಗೆ ೧೧ ರಿಂದ ೩೪ ಡಿಗ್ರಿ ಸೆ. ಉಷ್ಣತೆ ಇದ್ದಲ್ಲಿ ಅನುಕೂಲಕರ. ಇದು ಸ್ವಲ್ಪಮಟ್ಟಿಗೆ ಅನಾವೃಷ್ಟಿಯನ್ನು ತಡೆದುಕೊಳ್ಳಬಲ್ಲದು. ಆದಾಗ್ಯೂ ನೀರಾವರಿ ಇದ್ದಲ್ಲಿ ಸಸ್ಯ ಬೆಳವಣಿಗೆ ಹಾಗೂ ಫಸಲು ತೃಪ್ತಿಕರವಾಗಿರುತ್ತವೆ.

ಉತ್ತರ ಭಾರತದಲ್ಲಿ ಚಳಿಗಾಲದ ಹಿಮದಿಂದಾಗಿ ಎಳೆಯ ಸಸಿಗಳು ಹಾನಿಗೊಳಗಾಗುತ್ತವೆ. ಪ್ರಾಯದ ಮರಗಳು ಸಾಧಾರಣ ಮಟ್ಟದ ಹಿಮವನ್ನು ಸ್ವಲ್ಪಕಾಲ ತಡೆದುಕೊಳ್ಳಬಲ್ಲವು. ಹಾಗಾಗಿ ಅಲ್ಲಿ ಕೇವಲ ಸುರಕ್ಷಿತ ಪ್ರದೇಶಗಳಲ್ಲಿ ಮಾತ್ರ ಸಪೋಟ ಬೆಳೆಯನ್ನು ಬೆಳೆಯಬಹುದು. ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶಗಳಲ್ಲಿ ಇದರ ಬೇಸಾಯ ಸ್ವಲ್ಪಮಟ್ಟಿಗೆ ಕಂಡುಬರುತ್ತದೆ. ಉತ್ತರ ಭಾರತದ ಮೈದಾನಪ್ರದೇಶಗಳಲ್ಲಿ ಎಲ್ಲೆಲ್ಲಿ ನೀರಾವರಿ ಹಾಗೂ ರಕ್ಷಣೆಗಳು ಇವೆಯೋ ಅಲ್ಲಿ ಇದನ್ನು ಬೆಳೆಯುತ್ತಾರೆ. ಬೇಸಿಗೆಯಲ್ಲಿ ಉಷ್ಣತಾಮಾನ ೪೦ ಡಿಗ್ರಿ ಸೆ. ಗಿಂತ ಮೇಲ್ಪಟ್ಟು ಇದ್ದರೆ ಈ ಬೆಳೆಗೆ ಹಾನಿ ಖಂಡಿತ. ಅದರಿಂದ ಶಲಾಕಾಗ್ರಗಳಲ್ಲಿನ ದ್ರವಪದಾರ್ಥ ಆರಿಹೋಗುತ್ತದೆಯಲ್ಲದೆ ಬಹಳಷ್ಟು ಹೂವು ಉದುರಿಬೀಳುತ್ತವೆ. ಒಟ್ಟಾರೆ ಕಾಯಿ ಕಚ್ಚುವ ಪ್ರಮಾಣ ಬಹಳಷ್ಟು ಕುಸಿಯುತ್ತದೆ. ಎಲ್ಲಾ ಹಂತದ ಕಾಯಿಬಿಸಿಲಿನ ಝಳಕ್ಕೆ ಸಿಕ್ಕಿದರೆ ಸುಟ್ಟಂತಾಗುತ್ತವೆ. ಒಣ ಹಾಗೂ ಸುಡುಗಾಳಿ ಬೀಸುತ್ತಿದ್ದಲ್ಲಿಯೂ ಸಹ ಹಾನಿ ತಪ್ಪದು; ಸೂಕ್ತ ರಕ್ಷಣೆ ಅಗತ್ಯ.

ಭೂಗುಣ

ಸಪೋಟ ಹಣ್ಣಿನ ಬೆಳೆಗೆ ಇಂತಹುದೇ ಮಣ್ಣಿನ ಭೂಮಿ ಇರಬೇಕೆಂಬ ನಿಯಮವೇನೂ ಇಲ್ಲ. ಸಪೋಟ ಗಡುತರ ಸಸ್ಯ. ಅನಾನುಕೂಲ ಭೂ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯ ಸಫೋಟ ಬೆಳೆಗೆ ಇದೆ. ಹಾಗಾಗಿ ಎಲ್ಲಾ ತರದ ಮಣ್ಣುಗಳಲ್ಲಿ ಬೆಳೆಯಬಹುದು. ನೀರು ಬಸಿಯುವುದು ಬಹಳ ಮುಖ್ಯ. ಮಣ್ಣಿನ ತಳಪದರಗಳಲ್ಲಿ ಬಂಡೆ ಇರಬಾರದು. ಮರಳು ಮಣ್ಣಿನ ಭೂಮಿಯಲ್ಲಿ ಬೇರುಗಳಿಗೆ ಸಾಕಷ್ಟು ಬಲ ಸಿಗಲಾರದು. ಹಾಗಾಗಿ ಬಲವಾದ ಗಾಳಿ ಬೀಸಿದಲ್ಲಿ ಅವು ಬೇರು ಸಮೇತ ಉರುಳಿಬೀಳುವ ಸಾಧ್ಯತೆ ಹೆಚ್ಚು. ಆಳವಿರುವ ಹಾಗೂ ಸಡಿಲ ಮಣ್ಣಿನ ಭೂಮಿಯಾದಲ್ಲಿ ಸೂಕ್ತ. ತಳಪದರಗಳಲ್ಲಿ ೬೦-೯೦ ಸೆಂ. ಮೀ. ಆಳಗಲ್ಲಿ ಗರಜು ಇದ್ದರೆ ಮೊದಲ ಏಳೆಂಟು ವರ್ಷಗಳವರೆಗೆ ಗಿಡಗಳು ಚೆನ್ನಾಗಿ ಬೆಳೆದು ಅನಂತರ ಬೇರು ಸಮೂಹ ಗಟ್ಟಿ ತಳಪದರವನ್ನು ತಾಕಿದ ಕೂಡಲೇ ಎಲೆಗಳು ಬಿಳಿಚಿಕೊಂಡು, ಹಣ್ಣು ಗಾತ್ರದಲ್ಲಿ ಸಣ್ಣಗಾಗುತ್ತವೆ. ದಿನಕಳೆದಂತೆ ಮರಗಳ ಬೆಳವಣಿಗೆ ಕುಸಿಯುತ್ತದೆ. ಮಣ್ಣಿನ ಆಳ ಕನಿಷ್ಠ ಪಕ್ಷ ೬೦ ಸೆಂ. ಮೀ. ಗಳಷ್ಟಾದರೂ ಇರಬೇಕು.

ಕಪ್ಪು ಜಿಗುಟು ಅಥವಾ ಜೇಡಿ ಮಣ್ಣಿನಲ್ಲಿ ನೀರು ಸರಿಯಾಗಿ ಬಸಿಯುವುದಿಲ್ಲ. ಅದರಿಂದ ಬೇರುಗಳಿಗೆ ಉಸಿರಾಡಲು ಕಷ್ಟವಾಗುತ್ತದೆ. ಮಳೆಗಾಲದಲ್ಲಿ ನೀರು ನಿಂತು ಬೇರುಗಳು ಕೊಳೆಯುವ ಸಾಧ್ಯತೆ ಇರುತ್ತದೆ. ಬೇಸಿಗೆಯಲ್ಲಿ ಅಂತಹ ಮಣ್ಣಿನಲ್ಲಿ ಬಿರುಕುಗಳುಂಟಾಗಿ ಸಣ್ಣಪುಟ್ಟ ಬೇರುಗಳು ಹರಿದು ತುಂಡಾಗುತ್ತವೆ. ಮಣ್ಣು ಅಥವಾ ಹಾಯಿಸುವ ನೀರಿನಲ್ಲಿ ಸ್ವಲ್ಪಮಟ್ಟಿನ ಲವಣಾಂಶಾವಿದ್ದರೂ ಹಾನಿಯಾಗದು. ಸಾಕಷ್ಟು ಆಳವಿರುವ ಮರಳುಮಿಶ್ರಿತಗೋಡು, ಕೆಂಪು ಮಣ್ಣು ಸಾಧಾರಣ ಕಪ್ಪು ಮಣ್ಣು, ಮರಳು ಮಿಶ್ರಿತ ರೇವೆ ಮಣ್ಣು ಹಾಗೂ ಗರಜು ಮಿಶ್ರಿತ ಕೆಂಪು ಮಣ್ಣು ಈ ಬೆಳೆಗೆ ಅತ್ಯಂತ ಸೂಕ್ತವಿರುತ್ತವೆ. ಕೆಲವಡೆಗಳಲ್ಲಿ ನದಿ ದಂಡೆಗಳ ರೇವೆ ಮಿಶ್ರಿತ ಮರಳು ಮಣ್ಣಿನ ಭೂಮಿಗಳಲ್ಲಿ ಇದನ್ನು ಬೆಳೆಸಿದ್ದಾರೆ.

ಗಟ್ಟಿ ತಳ ಪದರವಿರುವ, ಸುಣ್ಣಕಲ್ಲುಗಳಿಂದ ಕೂಡಿದ, ಹಳದಿ ಬಣ್ಣದ ಹಾಗೂ ಜಿಗುಟು ಮಣ್ಣುಗಳು ಯೋಗ್ಯವಿರುವುದಿಲ್ಲ. ತೀರಾ ನಿಸ್ಸಾರವಿರುವ ಭೂಮಿಯನ್ನು ಫಲವತ್ತಾಗಿಸಿ ಅನಂತರ ಈ ಬೆಳೆಯನ್ನು ಬೆಳೆಯಬೇಕು. ಮಣ್ಣಿನಲ್ಲಿ ಅಧಿಕ ಸುಣ್ಣಾಂಶವಿದ್ದರೆ ಎಲೆಗಳು ತಮ್ಮ ನೈಜ ಹಸಿರುಬಣ್ಣವನ್ನು ಕಳೆದುಕೊಳ್ಳುತ್ತವೆ. ಅಂತಹ ಗಿಡಗಳು ಒಂದರೆಡು ವರ್ಷಗಳಲ್ಲಿ ಸತ್ತುಹೋಗುತ್ತವೆ. ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿನ ಗರಜು ಮಣ್ಣಿನಲ್ಲಿ ಈ ಬೆಳೆ ಚೆನ್ನಾಗಿ ಫಲಿಸುತ್ತಿದೆ.