ಚೆನ್ನಾಗಿ ಮಾಗಿದ ಹಣ್ಣನ್ನು ಹಾಗೆಯೇ ತಿನ್ನಬಹುದು ಇಲ್ಲವೇ ವಿವಿಧ ಉತ್ಪನ್ನಗಳನ್ನಾಗಿ ತಯಾರಿಸಿ ತಿನ್ನಬಹುದು. ಮಾಗಿದ ಹಣ್ಣು ಹೆಚ್ಚು ಕಾಲ ಇಡಲು ಬರುವುದಿಲ್ಲ. ಆದರೆ ಅವುಗಳಿಂದ ತಯಾರಿಸಿದ ಪದಾರ್ಥಗಳನ್ನು ಹೆಚ್ಚು ಕಾಲ ಸಂಗ್ರಹಿಸಿಟ್ಟು ಬೇಕಾದಾಗ ಬಳಸಬಹುದು. ಹೀಗೆ ತಯಾರಿಸಿದ ಪದಾರ್ಥಗಳು ತಿನ್ನಲು ರುಚಿಯಾಗಿರುತ್ತವೆ. ಸಪೋಟ ಹಣ್ಣಿನ ಪದಾರ್ಥಗಳಲ್ಲಿ ಜಾಮ್, ಜೆಲ್ಲಿ, ಸಾಲಡ್, ಒಣ ಹೋಳು ಮುಖ್ಯವಾದುವು. ಅವುಗಳನ್ನು ತಯಾರಿಸಲು ಬೇಕಾಗುವ ಸಾಮಗ್ರಿ ಸಲಕರಣೆಗಳು ಹಾಗೂ ವಿಧಾನಗಳ ಬಗ್ಗೆ ಸಹ ಅಧ್ಯಾಯದಲ್ಲಿ ಮಾಹಿತಿ ನೀಡಲಾಗಿದೆ.

ಜಾಮ್

ಇದನ್ನು ತಯಾರಿಸಲು ಬೇಕಾಗುವ ಸಾಮಗ್ರಿಗಳೆಂದಾರೆ ಚೆನ್ನಾಗಿ ಮಾಗಿದ ಹಣ್ಣು, ಸಕ್ಕರೆ, ನೀರು ಮತ್ತು ಸಿಟ್ರಿಕ್ ಆಮ್ಲ ಇಲ್ಲವೇ ನಿಂಬೆಹಣ್ಣಿನ ಹೋಳುಗಳು.

ತಯಾರಿಸುವ ವಿಧಾನ : ಹಣ್ಣುಗಳನ್ನು ನೀರಿನಲ್ಲಿ ತೊಳೆದು, ಸಿಪ್ಪೆ ಬಿಡಿಸಿ ತೆಗೆಯಬೇಕು. ಅನಂತರ ತಿರುಳನ್ನು ಉದ್ದಕ್ಕೆ ಸಣ್ಣ ಹೋಳುಗಳಾಗಿ ಮಾಡಿ ಬೀಜವನ್ನು ಹೊರ ಹಾಕಿ, ಹೋಳುಗಳನ್ನು ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆಯೊಳಕ್ಕೆ ಸುರಿಯಬೇಕು. ಹೋಳುಗಳು ಮುಳುಗುವಷ್ಟು ನೀರನ್ನು ಸುರಿದು ಒಲೆ ಅಥವಾ ಸ್ಟೌವಿನ ಮೇಲಿಟ್ಟು ಚೆನ್ನಾಗಿ ಬೇಯಿಸಬೇಕು. ಹೋಳುಗಳು ಬೇಯುವ ಸಮಯದಲ್ಲಿ ಸೌಟಿನ ನೆರವಿನಿಂದ ಕಲೆ ಹಾಕಬೇಕು. ಹಾಗೆ ಮಾಡದಿದ್ದಲ್ಲಿ ತಳ ಸೀಯುವ ಸಾಧ್ಯತೆ ಇರುತ್ತದೆ. ಹೋಳುಗಳು ಬೆಂದು ಮೆತ್ತಗಾದಾಗ ಸಮಪ್ರಮಾಣದ ಸಕ್ಕರೆಯನ್ನು ಸೇರಿಸಿ ಬೇಯಿಸುವ ಕೆಲಸವನ್ನು ಮುಂದುವರೆಸಬೇಕು. ಕುದಿಯುತ್ತಿರುವ ಮಿಶ್ರಣಕ್ಕೆ ಒಂದೆರಡು ಚಮಚೆ ಸಿಟ್ರಿಕ್ ಆಮ್ಲ ಇಲ್ಲವೇ ನಿಂಬೆ ಹಣ್ಣಿನ ಹೋಳುಗಳ ರಸವನ್ನು ಸೇರಿಸಬೇಕು. ಮಿಶ್ರಣವು ಚೆನ್ನಾಗಿ ಬೆಂದು ಏಕರೀತಿಯಾದಾಗ ಪಾತ್ರೆಯನ್ನು ಕೆಳಗಿಳಿಸಿ ತಣ್ಣಗಾಗಿಸಬೇಕು.

ಬಿಸಿನೀರಿನಲ್ಲಿ ಅದ್ದಿ ತೊಳೆದ ಗಾಜಿನ ಬಾಟಲಿಗಳಲ್ಲಿ ಈ ಮಿಶ್ರಣವನ್ನು ಸುರಿದು, ಅವುಗಳನ್ನು ಸುಡು ನೀರಿನಲ್ಲಿಟ್ಟರೆ ಅವುಗಳೊಳಗಿನ ಗಾಳಿಹೊರಬೀಳುತ್ತದೆ. ಮಿಶ್ರಣ ಉಗುರು ಬೆಚ್ಚಗಿದ್ದಾಗ ಮುಚ್ಚಳ ಬಿಗಿದು, ಮೊಹರು ಮಾಡಿ ತಣ್ಣನೆಯ ಜಾಗದಲ್ಲಿ ಜೋಪಾನ ಮಾಡಿಡಬೇಕು. ಹೀಗೆ ಮಾಡಿದಲ್ಲಿ ಪದಾರ್ಥವು ಬಹುಕಾಲ ಚೆನ್ನಾಗಿರುತ್ತದೆ. ಅದನ್ನು ಬ್ರೆಡ್, ಚಪಾತಿ, ಪೂರಿ, ರೊಟ್ಟಿಗಳಿಗೆ ಹಚ್ಚಿ ತಿಂದಲ್ಲಿ ರುಚಿಯಾಗಿರುತ್ತದೆ. ಇದು ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ಎಲ್ಲರಿಗೂ ಪ್ರಿಯವಾದ ಪದಾರ್ಥ.

ಜೆಲ್ಲಿ

ಜೆಲ್ಲಿ ತಯಾರಿಸಲು ಬೇಕಾಗುವ ಸಾಮಗ್ರಿಗಳೆಂದರೆ ಚೆನ್ನಾಗಿ ಮಾಗಿದ ಹಣ್ಣು, ಸಕ್ಕರೆ, ನೀರು, ಸಿಟ್ರಿಕ್ ಆಮ್ಲ ಇಲ್ಲವೇ ನಿಂಬೆ ಹೋಳುಗಳ ರಸ ಮತ್ತು ಪೆಕ್ಟಿನ್ ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆ, ಮುಚ್ಚಳ, ಸೌಟು, ಚಮಚೆ, ಸೋಸುವ ಚೀಲ ಇಲ್ಲವೇ ತೆಳ್ಳಗಿನ ಶುಭ್ರವಿರುವ ಬಟ್ಟೆ.

ತಯಾರಿಸುವ ವಿಧಾನ : ಹಣ್ಣುಗಳನ್ನು ನೀರಿನಲ್ಲಿ ತೊಳೆದು, ಸಿಪ್ಪೆಬಿಡಿಸಿ, ಬೀಜಗಳನ್ನು ಹೊರ ಹಾಕಾಬೇಕು. ಅನಂತರ ತಿರುಳನ್ನು ಸಣ್ಣಗೆ ಕತ್ತರಿಸಿ ಪಾತ್ರೆಯೊಳಕ್ಕೆ ಸುರಿದು ಅವು ಮುಳುಗುವಷ್ಟೇ ನೀರನ್ನು ಸೇರಿಸಿ ಒಲೆ ಅಥವಾ ಸ್ಟೌವ್‌ನ ಮೇಲಿಟ್ಟು ಬೇಯಿಸಬೇಕು. ಅವು ಬೇಯುತ್ತಿದ್ದಂತೆ ಒಂದು ಕೆ. ಜಿ. ಹೋಳುಗಳಿಗೆ ೨-೩ ಗ್ರಾಂ. ಗಳಂತೆ ಸಿಟ್ರಿಕ್ ಆಮ್ಲ ಇಲ್ಲವೇ ನಿಂಬೆ ಹಣ್ಣಿನ ಹೋಳುಗಳ ರಸ ಸೇರಿಸಬೇಕು. ಹೋಳುಗಳು ಬೇಯುತ್ತಿರುವಾಗ ಪದೇ ಪದೇ ಸೌಟಿನಿಂದ ಕಲಕಿ, ನೊರೆಯನ್ನು ಹೊರಹಾಕಬೇಕು. ಹಾಗೆ ಕಲಕದೇ ಹೋದಲ್ಲಿ ತಳ ಸೀಯುವ ಸಾಧ್ಯತೆ ಇರುತ್ತದೆ. ಸುಮಾರು ಅರ್ಧ ಗಂಟೆಯಲ್ಲಿ ಅವು ಬೆಂದು ಮೆತ್ತಗಾಗಿ ಅಂಟಂಟಾಗುತ್ತವೆ. ಆಗ ಪಾತ್ರೆಯನ್ನು ಕೆಳಗಿಳಿಸಿ ಜೆಲ್ಲಿ ಚೀಲ ಇಲ್ಲವೇ ತೆಳ್ಳನೆಯ ಶುಭ್ರವಿರುವ ಬಟ್ಟೆಯೊಳಕ್ಕೆ ಸುರಿದು ಸೋಸಬೇಕು ರಸವೆಲ್ಲಾ ಕೆಳಗಿಳಿದು ಪಾತ್ರೆಯಲ್ಲಿ ಸಂಗ್ರಹಗೊಳ್ಳುತ್ತದೆ. ಅನಂತರ ಪೆಕ್ಟಿನ್‌ಗಾಗಿ ಪರೀಕ್ಷಿಸಲಾಗುವುದು. ರಸದಲ್ಲಿ ಪೆಕ್ಟಿನ್ ಅಂಶ ಕಡಿಮೆ ಇದ್ದಲ್ಲಿ ಸೂಕ್ತ ಪ್ರಮಾಣದ ವಾಣಿಜ್ಯ ಪೆಕ್ಟಿನ್ ಅನ್ನು ಸೇರಿಸಬೇಕಾಗುತ್ತದೆ.

ಹೀಗೆ ಸೋಸಿದ ರಸವನ್ನು ಅಳತೆ ಮಾಡಿ ಪುನಃ ಒಲೆಯ ಮೇಲಿಟ್ಟು ಕಾಯಿಸಬೇಕು. ಅದು ಕುದಿಯುವಾಗ ನೊರೆ ಬರುತ್ತಿರುತ್ತದೆ. ಅದನ್ನು ಪದೇ ಪದೇ ತೆಗೆದು ಹೊರಹಕಬೇಕು. ಸೋಸಿದ ರಸದ ಮುಕ್ಕಾಲು ಭಾಗದಷ್ಟು ಸಕ್ಕರೆಯನ್ನು ತೆಳ್ಳಗೆ ಉದುರಿಸಿ, ಕಲಕುತ್ತಿದ್ದಲ್ಲಿ ಸುಮಾರು ಅರ್ಧ ಗಂಟೆಯಲ್ಲಿ ಅದು ಮಂದಗೊಳ್ಳುತ್ತದೆ. ಒಂದು ಚಮಚೆಯಲ್ಲಿ ಕುದಿಯುತ್ತಿರುವ ಮಿಶ್ರಣವನ್ನು ಹೊರತೆಗೆದು, ತಣ್ಣಗಾಗಿಸಿ ಮೇಲಿಂದ ಇಳಿಬಿಟ್ಟರೆ ಅದು ದಾರದಂತೆ ಇಲ್ಲವೇ ಹಾಳೆಯಂತೆ ಕೆಳಕ್ಕೆ ಇಳಿಯುತ್ತದೆ. ಆಗ ಬೇಯಿಸುವುದನ್ನು ನಿಲ್ಲಿಸಿ, ಪಾತ್ರೆಯನ್ನು ಕೆಳಗಿಳಿಸಿ ಮಿಶ್ರಣವನ್ನು ಬಿಸಿ ನೀರಿನಲ್ಲಿ ಅದ್ದಿಟ್ಟ ಸ್ವಚ್ಛ ಗಾಜಿನ ಬಾಟಲಿಗಳಲ್ಲಿ ಸುರಿದು, ತಣ್ಣನೆಯ ನೀರಲ್ಲಿಟ್ಟರೆ ಅದು ಗಟ್ಟಿಗೊಳ್ಳುತ್ತದೆ. ಅನಂತರ ಮುಚ್ಚಳ ಬಿಗಿದು ಭದ್ರ ಮಾಡಿಡಬೇಕು. ಈ ಪದಾರ್ಥವು ಪಾರದರ್ಶಕವಿದ್ದು ಕತ್ತರಿಸಿದರೆ ಚಾಕುವಿನ ಅಲಗಿಗೆ ಅಂಟಿಕೊಳ್ಳುವುದಿಲ್ಲ ಹಾಗೂ ಅಲುಗಾಡಿಸಿದಲ್ಲಿ ಅದು ಬಳಕುತ್ತದೆ. ಈ ಪದಾರ್ಥವನ್ನೂ ಸಹ ಬ್ರೆಡ್, ಬನ್, ಬಿಸ್ಕತ್ತು, ರೊಟ್ಟಿ, ಚಪಾತಿ, ದೋಸೆಗಳಿಗೆ ಹಚ್ಚಿ ತಿಂದಲ್ಲಿ ರುಚಿಯಾಗಿರುತ್ತದೆ.

ಸಕ್ಕರೆಹೋಳುಗಳು

ಚೆನ್ನಾಗಿ ಮಾಗಿದ ಹಣ್ಣುಗಳನ್ನು ನೀರಿನಲ್ಲಿ ತೊಳೆದು ಸಿಪ್ಪೆ ಬಿಡಿಸಿ ಹೋಳುಗಳಾಗಿ ಮಾಡಬೇಕು. ಬೀಜವನ್ನು ಹೊರ ಹಾಕಿ ಹೋಳುಗಳನ್ನು ಸ್ವಲ್ಪ ಹೊತ್ತು ಸಣ್ಣ ಉರಿಯ ಮೇಲೆ ಬೇಯಿಸಬೇಕು. ಅನಂತರ ಅವುಗಳನ್ನು ಬಿಸಿ ಸಕ್ಕರೆ ಪಾಕದಲ್ಲಿ ಇಳಿಬಿಟ್ಟು ಮತ್ತೆ ಬೇಯಿಸಿದಲ್ಲಿ ಸಕ್ಕರೆ ಅಂಶ ಹೋಳುಗಳಲ್ಲಿ ತುಂಬಿಕೊಳ್ಳುತ್ತದೆ. ಈ ಮಿಶ್ರಣವನ್ನು ಬಿಸಿ ನೀರಿನಲ್ಲಿ ತೊಳೆದ ಗಾಜಿನ ಬಾಟಲಿಗಳಲ್ಲಿ ಸುರಿದು, ಮುಚ್ಚಳ ಬಿಗಿದು, ಮೊಹರು ಮಾಡಿಟ್ಟಲ್ಲಿ ಬಹುಕಾಲ ಉಳಿಯುತ್ತದೆ. ಈ ಪದಾರ್ಥ ತಿನ್ನಲು ಜೇನುತುಪ್ಪದಂತೆ ಇರುತ್ತದೆ.

ಹಣ್ಣಿನಸಲಾಡ್

ವಿವಿಧ ಹಣ್ಣುಗಳನ್ನು ಆರಿಸಿ, ನೀರಿನಲ್ಲಿ ತೊಳೆದು, ಸಿಪ್ಪೆ ಬಿಡಿಸಿ ಸಣ್ಣ ಸಣ್ಣ ಹೋಳುಗಳನ್ನಾಗಿ ಮಾಡಿ ಪಾತ್ರೆಯೊಳಕ್ಕೆ ಸುರಿದು, ಸಾಕಷ್ಟು ಸಕ್ಕರೆ ಉದುರಿಸಿ ಚೆನ್ನಾಗಿ ಮಿಶ್ರ ಮಾಡಿದರೆ ಮಿಶ್ರಹಣ್ಣುಗಳ ಸಲಾಡ್ ತಯಾರಾದಂತೆಯೇ. ಈ ಮಿಶ್ರಣಕ್ಕೆ ಕಸ್ಟರ್ಡ್ ಪೌಡರ್ ಅನ್ನು ಉಗುರು ಬೆಚ್ಚಗಿನ ನೀರಿಗೆ ಬೆರೆಸಿ, ಸೇರಿಸುವುದುಂಟು. ಕೆಲವರು ಅದಕ್ಕೆ ಗಟ್ಟಿ ಹಾಲು, ಏಲಕ್ಕಿ ಪುಡಿ ಮತ್ತು ಎಸ್ಸೆನ್ಸ್‌ಗಳನ್ನು ಸೇರಿಸಿ ಅದರ ರುಚಿ ಮತ್ತು ಪರಿಮಳ ಹೆಚ್ಚುವಂತೆ ಮಾಡುವುದುಂಟು. ಇತರ ಹಣ್ಣುಗಳು ಸಿಗದೇ ಇದ್ದಲ್ಲಿ ಸಪೋಟ ಒಂದನ್ನೇ ಬಳಸಿ ಸಲಾಡ್ ತಯಾರಿಸಬಹುದು. ಅಗತ್ಯವಿದ್ದಲ್ಲಿ ಒಂದೆರಡು ಬರ್ಫದ ತುಣುಕುಗಳನ್ನು ಸೇರಿಸಿಕೊಳ್ಳಬಹುದು.

ಒಣಗಿದಹೋಳುಗಳು

ಸಪೋಟ ಹಣ್ಣನ್ನು ಒಣಗಿಸಿ ಜೋಪಾನ ಮಾಡಿಡುವ ತಾಂತ್ರಿಕತೆ ಇತ್ತೀಚೆಗೆ ಬಳಕೆಗೆ ಬಂದಿದೆ. ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಈ ಪ್ರಯತ್ನವನ್ನು ಕೈಗೊಂಡು ಸಾಕಷ್ಟು ಯಶಸ್ಸನ್ನು ಹೊಂದಲಾಗಿದೆ. ಚೆನ್ನಾಗಿ ಮಾಗಿದ ಹಣ್ಣುಗಳನ್ನು ನೀರಿನಲ್ಲಿ ತೊಳೆದು, ಶುಭ್ರ ಬಟ್ಟೆಯಲ್ಲಿ ಒರೆಸಿ ಉದ್ದಕ್ಕೆ ಸೀಳಿ ಹೋಳುಗಳಾಗಿ ಮಾಡಬೇಕು. ಬೀಜವನ್ನು ಮಾತ್ರ ಹೊರಹಾಕಿ, ಈ ಹೋಳುಗಳನ್ನು ತೆಳ್ಳನೆಯ ಬಟ್ಟೆಯ ಮೇಲೆ ಹರಡಿ ಬಿಸಿಲಿನಲ್ಲಿ ಒಣಗಿಸಬೇಕು. ಒಂದು ವೇಳೆ ಕೃತಕ ಬಿಸಿಯಲ್ಲಿ ಒಣಗಿಸುವುದಿದ್ದಲ್ಲಿ ಹೋಳುಗಳನ್ನು ತಂತಿ ಜಾಲರಿಯ ತಬಕಗಳ ಮೇಲೆ ತೆಳ್ಳಗೆ ಹರಡಿ, ಕೆಳಭಾಗದಿಂದ ಮೇಲಕ್ಕೆ ಬಿಸಿ ಹಬೆ ಹಾದು ಹೋಗುವಂತೆ ಮಾಡಬೇಕು. ಅವುಗಳಲ್ಲಿನ ತೇವಾಂಶ ಬಿಸಿ ಹಬೆಯಿಂದಾಗಿ ಹೊರಬೀಳುತ್ತದೆ. ಆಗಾಗ್ಗೆ ಅವುಗಳನ್ನು ಮಗುಚುತ್ತಿದ್ದಲ್ಲಿ ಅವು ಒಣಗಿ ಗರಿಗರಿಯಂತಾಗುತ್ತವೆ. ಹೀಗೆ ಒಣಗಿಸಿದ ಸಪೋಟ ಹಣ್ಣಿನ ಹೋಳುಗಳನ್ನು ಹೆಚ್ಚುಕಾಲ ಸಂಗ್ರಹಿಸಿಡಬಹುದು. ಅವುಗಳ ಪ್ರಮಾಣ ೩. ೪ ರಿಂದ ೧. ೦ ಕ್ಕೆ ಕುಸಿಯುತ್ತದೆ.

ಸಪೋಟಹಣ್ಣುಗಳಹಿಟ್ಟು

ತಿರುಳನ್ನು ಒಣಗಿಸಿ ಹಿಟ್ಟು ಮಾಡುವ ತಾಂತ್ರಿಕತೆ ಮಹಾರಾಷ್ಟ್ರದ ಕೊಂಕಣ್ ಕೃಷಿ ವಿದ್ಯಾಪೀಠದಲ್ಲಿ ರೂಪಿತಗೊಂಡಿದೆ. ಹಣ್ಣಿನ ತಿರುಳನ್ನು ಸಣ್ಣ ಹೋಳುಗಳನ್ನಾಗಿ ಮಾಡಿ, ಚೆನ್ನಾಗಿ ಒಣಗಿಸಿ, ಗಿರಣಿಗೆ ಕೊಟ್ಟು ಹಿಟ್ಟು ಮಾಡಿ ೨೫೦ ಗೇಜ್ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಮೊಹರು ಮಾಡಲಾಗುತ್ತಿದೆ. ಅದನ್ನು ಹಾಲಿನೊಂದಿಗೆ ಬೆರೆಸಿ ಕುಡಿಯಲು ಹಾಗೂ ಬರ್ಫಿ ಮುಂತಾದ ಸಿಹಿ ಪದಾರ್ಥಗಳನ್ನು ತಯಾರಿಸಲು ಬಳಸಬಹುದಾಗಿದೆ. ಇದರಲ್ಲಿ ಶೇ. ೬. ೨ ರಷ್ಟು ಪ್ರೊಟೀನ್ ಮತ್ತು ೧. ೩೯ ಹುಳಿ ಅಂಶಗಳಿದ್ದುದಾಗಿ ತಿಳಿದುಬಂದಿದೆ.