ಸೀಬೆ ಹಣ್ಣಿನ ಬೆಳೆಗಯಲ್ಲಿ ಹಲವಾರು ಕೀಟ ಮತ್ತು ರೋಗಗಳು ಹಾನಿಯನ್ನುಂಟು ಮಾಡುತ್ತವೆ. ಅದರಿಂದ ಫಸಲು ಕುಗ್ಗುತ್ತದೆ. ಕೀಟರೋಗಗಳನ್ನು ಸಕಾಲದಲ್ಲಿ ಹತೋಟಿ ಮಾಡುವುದು ಅಗತ್ಯ . ಅಂತಹ ಪ್ರಮುಖ ಕೀಟಗಳು ಮತ್ತು ಹಣ್ಣು ಕೊಳೆಯುವ ರೋಗ ಅತಿ ಮುಖ್ಯವಾದವುಗಳು. ಟೀ ಸೊಳ್ಳೆ, ಹಣ್ಣಿನ ನೊಣ, ಬೂಷ್ಟು ತಗಣೆ, ಚಿಬ್ಬುರೋಗ ಮತ್ತು ಹಣ್ಣು ಕೊಳೆಯುವ ರೋಗ ಅತಿ ಮುಖ್ಯವಾದವುಗಳು. ಟೀ ಸೊಳ್ಳೆ ಹಣ್ಣನ್ನು ಬಾಧಿಸುವ ಪೀಡೆ. ಇದರ ಹಾವಳಿಯಿಂದ ಹಣ್ಣು ವಿಕಾರಗೊಂಡು ಅವುಗಳ ಮೇಲೆಲ್ಲಾ ಕಪ್ಪು ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಕಾರಣದಿಂದ ಮಾರುಕಟ್ಟೆಯಲ್ಲಿ ಸೀಬೆಗೆ ಬೆಲೆ ಕಡಿಮೆಯಾಗುತ್ತದೆ. ರೋಗಗಳಲ್ಲಿ ಬೂಷ್ಟು ರೋಗ ಸರ್ವೇ ಸಾಮಾನ್ಯವಾಗಿ ಕಂಡುಬರುತ್ತದೆ. ರೋಗ ಕೀಟಗಳ ಹತೋಟಿಗೆ ಸಮಗ್ರ ನಿರ್ವಹಣಾ ಕ್ರಮಗಳನ್ನು ಅನುಸರಿಸುವುದು ಮುಖ್ಯ. ಇಂತಹ ಕೀಟ ರೋಗಗಳನ್ನು ಗುರುತಿಸುವ ಕ್ರಮ, ಹಾವಳಿ ಲಕ್ಷಣಗಳು ಹಾಗೂ ಹತೋಟಿ ಕ್ರಮಗಳನ್ನು ಇಲ್ಲಿ ವಿವರವಾಗಿ ಚಿತ್ರಿಸಲಾಗಿದೆ.

ಕೀಟಗಳುಮತ್ತುಅವುಗಳನಿಯಂತ್ರಣ

. ಟೀಸೊಳ್ಳೆ : ಇದಕ್ಕೆ ಕಜ್ಜಿ ತಗಣಿ ಎನ್ನುತ್ತಾರೆ. ಇದು ಸಾಮಾನ್ಯ ಸೊಳ್ಳೆಗಿಂತ ಸ್ವಲ್ಪ ದೊಡ್ಡದಿದ್ದು ಆಂಬರ್ ಬಣ್ಣದ್ದಿರುತ್ತದೆ. ಕಾಲು ಮತ್ತು ಮೀಸೆಗಳು ಉದ್ದ. ಹೊಟ್ಟೆಯ ತಳಭಾಗದಲ್ಲಿ ಬಿಳಿಪಟ್ಟಿ ಇರುತ್ತದೆ. ಬೆನ್ನಿನ ಮೇಲೆ ಬಲವಾದ ಗೂಟ ಇರುವುದು ಇದರ ವೈಶಿಷ್ಟ್ಯತೆ. ಗೂಟದ ತುದಿಯಲ್ಲಿ ಬಟ್ಟಲಿನ ಆಕಾರವಿರುತ್ತದೆ. ಮೂತಿಯಲ್ಲಿನ ಸೊಂಡಿಲನ್ನು ಮೃದುವಾದ ಚಿಗುರು, ಹೂವು, ಹೀಚು ಮುಂತಾಗಿ ಚುಚ್ಚಿ, ಕಾಲುಗಳ ನಡುವೆ ಹುದುಗಿರುತ್ತದೆ. ರಸಹೀರಿದ ನಂತರ ಇನೋಂದೆಡೆ ಈ ಕೆಲಸವನ್ನು ಮುಂದುವರೆಸುತ್ತದೆ. (ಚಿತ್ರ-೧೦)

ಚಿತ್ರ : ೧೦ ಟೀ ಸೊಳ್ಳೆ

ಒಂದು ತಗಣೆ ಸುಮಾರು ೫೦ ಕಡೆ ಚುಚ್ಚಿ ಗಾಯಮಾಡಬಲ್ಲದು. ಈ ಗಾಯಗಳು ಕಂದು ಬಣ್ಣವಿದ್ದು. ಗುಳ್ಳೆಗಳಂತಾಗುತ್ತವೆ. ದಿನ ಕಳೆದಂತೆ ಅವು ಒಂದರಲ್ಲೊಂದು ವಿಲೀನಗೊಂಡು, ದೊಡ್ಡವಾಗಿ, ಕಡೆಗೆ ಸೀಳುತ್ತವೆ. ಎಳೆಯ ಚಿಗುರು ಮತ್ತು ಎಲೆಗಳಲ್ಲಿ ಸಣ್ಣ ಗಾತ್ರದ ಕೆಂಪು ಗೆರೆಗಳು ಕಾಣಿಸಿಕೊಳ್ಳುತ್ತವೆ. ಹಾನಿಗೀಡಾದ ಹೀಚು ಸರಿಯಾಗಿ ವೃದ್ಧಿ ಹೊಂದದೆ ವಿಕಾರಗೊಳ್ಳುತ್ತವೆ. ಚಿಗುರು ಮತ್ತು ಎಲೆಗಳು ಮುರುಟಿಕೊಳ್ಳುತ್ತವೆ. ಕಾಯಿಗಳಮೇಲೆ ಕಲೆಗಳೇರ್ಪಟ್ಟು ಹಣ್ಣು ಆಕರ್ಷಣೆಯನ್ನು ಕಳೆದುಕೊಳ್ಳುತ್ತದೆ. ಅದರ ಜೊತೆಗೆರುಚಿ ಸಹ ಕೆಡುತ್ತದೆ. ಈ ಕೀಟಕ್ಕೆ ಗೋಡಂಬಿ ಮತ್ತಿತರ ಹಲವಾರು ಆಸರೆ ಸಸ್ಯಗಳಿವೆ.

ಹತೋಟಿ : ತೋಟದಲ್ಲಿ ಶುಚಿತ್ವವನ್ನು ಕಾಪಾಡಬೇಕು. ಗಿಡಗಳ ಬುಡದ ಪಾತಿಯ ಮಣ್ಣನ್ನು ಹಗುರವಾಗಿ ಕೆದಕಿ ಸಡಿಲಗೊಳಿಸಬೇಕು. ಎಲ್ಲಾ ರೆಂಬೆಗಳಿಗೆ ಬಿಸಿಲು ಬೆಳಕುಗಳು ಸಿಗುವಂತೆ ಮಾಡಿ ಒತ್ತಾದ ಚಿಗುರು ರೆಂಬಗಳನ್ನು ಸವರಬೇಕು. ತೀವ್ರ ಹಾನಿಗೀಡಾದ ಭಾಗಗಳನ್ನು ಸವರಿ ತೆಗೆದು, ಸವರು ಗಾಯಗಳಿಗೆ ಬೋರ್ಡೊಸರಿಯನ್ನು ಹಚ್ಚಬೇಕು. ಹೂವು ಬಿಡುವ ಅವಧಿಯಲ್ಲಿ ೧೦ಲೀ. ನೀರಿಗೆ ೨೦ ಮಿ. ಲೀ. ಮ್ಯಾಲಾಥಿಯಾನ್ ೫೦ ಇ. ಸಿ. ಅಥವಾ ೧೭ ಮಿ. ಲೀ. ಥೈಮೆಥೊಯೇಟ್ ೩೦ ಇ. ಸಿ. ಇಲ್ಲವೇ ೧೦ಮಿ. ಲೀ. ಆಕ್ಸಿಮೆಟಾನ್ ಮೀಥೈಲ್ ೨೫ ಇ. ಸಿ. ಯನ್ನು ಬೆರೆಸಿ ಸಿಂಪಡಿಸಬೇಕು. ಎರಡು ಮೂರು ಸಿಂಪರಣೆಗಳನ್ನು ೧೦-೩೦ ದಿನಗಳ ಅಂತರದಲ್ಲಿ ಮಾಡಿದರೆ ಸಾಕು.

. ಹಣ್ಣಿನ ನೊಣ : ಇವು ಮನೆನೊಣದಷ್ಟೇ ದೊಡ್ಡವಿರಿತ್ತವೆ. ಇವು ತೀಕ್ಷ್ಣ ಬಿಸಿಲನ್ನು ಸಹಿಸಲಾರವು. ತಂಪು ಹೊತ್ತಿನಲ್ಲಿ ಹಣ್ಣುಗಳಿಗೆ ಹಾರಾಡುತ್ತಿರುತ್ತವೆ. ಪ್ರಾಯದ ಹೆಣ್ಣು ನೊಣಗಳು ದೋರೆಗಾಯಿಗಳಲ್ಲಿ ತಮ್ಮ ಅಂಡನಾಳವನ್ನು ಚುಚ್ಚಿ ಮೊಟ್ಟೆಯಿಡುತ್ತವೆ. ಮೊಟ್ಟೆಯೊಡೆದು ಹೊರಬಂದ ಮರಿ ಹುಳುಗಳು ಬೆಳ್ಳಗಿದ್ದು, ತಿರುಳನ್ನು ತಿನ್ನಲು ಪ್ರಾರಂಭಿಸುತ್ತವೆ. ಅಂತಹ ಹಣ್ಣು ಕೊಳೆತು ಉದುರಿಬೀಳುತ್ತವೆ.

ಹತೋಟಿ : ಹಾನಿಗೀಡಾದ ಹಣ್ಣುಗಳನ್ನು ಆರಿಸಿ ತೆಗೆದು, ಆಳವಾಗಿ ಹೂತಿಡಬೇಕು ಇಲ್ಲವೇ ಸುಡಬೇಕು. ಸಾಲುಗಳ ನಡುವಣ ಹಾಗೂ ಪಾತಿಗಳಲ್ಲಿನ ಮಣ್ಣನ್ನು ಸಡಲಿಸಬೇಕು. ಆಸರೆ ಗಿಡಗಳನ್ನು ಕಿತ್ತು ಹಾಕಬೇಕು. ಇವು ಅಂಬೆಬಹಾರ್ ಫಸಲನ್ನು ಹೆಚ್ಚಾಗಿ ಬಾಧಿಸುತ್ತವೆ. ತೋಟದಲ್ಲಿ ಶುಚಿತ್ವ ಬಹುಮುಖ್ಯ. ೧೦ಲೀ. ನೀರಿಗೆ ೧೦. ಮಿ. ಲೀ. ಮೀಥೈಲ್ ಯೂಜಿನಾಲ್ ಮತ್ತು ೨೦ಮಿ. ಲೀ. ಮ್ಯಾಲಾಥಿಯಾನ್ ೫೦ಇ. ಸಿ. ಗಳನ್ನು ಬೆರೆಸಿ ಅದರ ೧೦೦ ಮಿ. ಲೀ. ದ್ರಾವಣವನ್ನು ಪಾತ್ರೆಗೆ ಸುರಿದು, ಅದನ್ನು ರೆಂಬೆಯಲ್ಲಿ ತೂಗುಹಾಕಬೇಕು. ಹೀಗೆ ಅಲ್ಲಲ್ಲಿ ಮಿಶ್ರಣವನ್ನಿಟ್ಟರೆ ಅವು ಕುಡಿದು ಸಾಯುತ್ತವೆ. ಅದಿಲ್ಲದಿದ್ದಲ್ಲಿ ೧೦. ಲೀ. ನೀರಿಗೆ ೪೦ ಗ್ರಾಂ ಕಾರ್ಬರಿಲ್ ಇಲ್ಲವೇ ೧೦ಮಿ. ಲೀ. ಡೈಮೆಥೊಯೇಟ್ ಅನ್ನು ಬೆರೆಸಿ ಅದಕ್ಕೆ ೧೦೦ ಗ್ರಾಂ ಬೆಲ್ಲ ಸೇರಿಸಿ ಬೆಳೆಯ ಮೇಲೆ ಸಿಂಪಡಿಸಬಹುದು.

. ಬೂಷ್ಟ ತಗಣೆ : ಇದಕ್ಕೆ ಹಿಟ್ಟು ತಗಣೆ ಎಂಬ ಹೆಸರಿದೆ. ಇದು ಮೆತು ಶರೀರದ ಸಣ್ಣಕೀಟ. ಮೈಮೇಲೆಲ್ಲಾ ಹಿಟ್ಟಿನಂತಹ ಬೂಷ್ಟು ಇರುತ್ತದೆ. ಇವು ರೆಂಬೆ, ಎಲೆ, ಚಿಗುರು, ಹೂವು, ಹೀಚು ಮುಂತಾಗಿ ಮುತ್ತಿ ರಸ ಹೀರುತ್ತವೆ. ತೀವ್ರಹಾನಿಯಿದ್ದಲ್ಲಿ ಅಂತಹ ಭಾಗಗಳು ಒಣಗಿ ಸಾಯುತ್ತವೆ. ಕೂಡಲೇ ಹತೋಟಿಮಾಡದಿದ್ದಲ್ಲಿ ಇಳುವರಿ ಬಹಳಷ್ಟು ಕುಸಿಯುತ್ತದೆ.

ಚಿತ್ರ : ೧೧ ಕಪ್ಪು ಬೂಷ್ಟು ಪೀಡಿತ ಸೀಬೆ ಎಲೆಯಲ್ಲಿ ಹಿಟ್ಟು ತಗಣೆ

ಹತೋಟಿ : ಗಿಡಗಳ ಬುಡಭಾಗದಲ್ಲಿ ಮಣ್ಣನ್ನು ಸಡಿಲಿಸಬೇಕು. ಅನಂತರ ೧೦ಲೀ ನೀರಿಗೆ ೧೦ ಮಿ. ಲೀ. ಮೆಟಾಸಿಸ್ಟಾಕ್ಸ್ ಇಲ್ಲವೇ ಪ್ಯಾರಾಥಿಯಾನ್ ಕೀಟನಾಶಕವನ್ನು ಬೆರೆಸಿ, ಸಿಂಪಡಿಸಬೇಕು. ೧೫ ದಿನಗಳ ಅಂತರದಲ್ಲಿ ಎರಡು-ಮೂರು ಸಿಂಪರಣೆಗಳಾದಲ್ಲಿ ಸಾಕಾಗುತ್ತವೆ.

. ಶಲ್ಕ : ಇದನ್ನು ಸ್ಕೇಲ್ ಎನ್ನುತ್ತಾರೆ. ಇವು ತೆಳು ಶರೀರದ, ಹಸಿರು ಬಣ್ಣದ ಹಾಗೂ ಮೊಟ್ಟೆಯಾಕಾರದ ಕೀಟಗಳಿರುತ್ತವೆ. ಇವು ಗುಂಪುಗುಂಪಾಗಿ ಎಲೆಗಳ ಮಧ್ಯ ನರದ ಎರಡೂ ಪಾರ್ಶ್ವಗಳಲ್ಲಿ ರೆಂಬೆಗಳ ಮೇಲೆ, ಎಳೆಯ ಚಿಗುರುಗಳಲ್ಲಿ ಮುಂತಾಗಿದ್ದು ರಸಹೀರುತ್ತವೆ. ಅಂತಹ ಭಾಗಗಳು ನಿಸ್ತೇಜಗೊಳ್ಳುತ್ತವೆ.

ಹತೋಟಿ : ಇವುಗಳ ಹತೋಟಿಗೆ ೧೦ಲೀ ನೀರಿಗೆ ೧೦ ಮಿ. ಲೀ. ಲೆಬಾಸಿಡ್ ಅಥವಾ ಮತ್ತಾವುದಾದರೂ ಕೀಟನಾಶಕ ಬೆರೆಸಿ ಎರಡು ಮೂರು ಸಾರಿ ಸಿಂಪಡಿಸಿದರೆ ಅವು ಹತೋಟಿಗೊಳ್ಳುತ್ತವೆ.

. ಕಾಂಡಕೊರೆಯುವ ಹುಳು : ಇದು ಕಾಂಡದಲ್ಲಿ ತೂತುಕೊರೆದು ಒಳಗೆ ವಾಸಿಸುತ್ತದೆ. ಹಿಕ್ಕೆ, ಮರದಪುಡಿ ಮುಂತಾಗಿ ಹೊರಬೀಳುತ್ತಿದ್ದಲ್ಲಿ ಒಳಗೆ ಕೀಟ ಇದೆ ಎಂದು ಅರ್ಥ. ಬಹಳಷ್ಟು ಹಾನಿ ಇದ್ದಾಗ ಮರಗಳು ಬಲಹೀನಗೊಂಡು, ಸಾಕಷ್ಟು ಫಸಲನ್ನು ಬಿಡುವುದಿಲ್ಲ. ಅಂತಹ ಮರಗಳು ಸಾಯಲೂಬಹುದು.

ಹತೋಟಿ : ಪೆಟ್ರೊಲ್ ಅದ್ದಿದ ಹತ್ತಿಯ ಸಿಂಬಿಯನ್ನು ರಂಧ್ರದೊಳಕ್ಕೆ ತೂರಿಸಿ, ರಂಧ್ರದ ಬಾಯನ್ನು ಕೆಸರು ಮಣ್ಣಿನಿಂದ ಮೆತ್ತಬೇಕು. ಈ ರಿತಿಯಲ್ಲಿ ಕೀಟ ಒಳಗೇ ಉಸಿರುಕಟ್ಟಿ ಸಾಯುತ್ತದೆ.

. ತೊಗಟೆ ತಿನ್ನುವ ಕಂಬಳಿ ಹುಳು : ಈ ಪತಂಗಗಳು ರಾತ್ರಿ ಹೊತ್ತಿನಲ್ಲಿ ಹಾರಾಡುತ್ತವೆ. ಪ್ರಾಯದ ಹೆಣ್ಣು ಪತಂಗಗಳು ಸಡಿಲವಿರುವ ತೊಗಟಿಯಲ್ಲಿ ಮೊಟ್ಟೆಯಿಡುತ್ತವೆ. ಮೊಟ್ಟೆಯೊಡೆದು ಹೊರಬಂದ ಕಂಬಳಿ ಹುಳುಗಳು ತೊಗಟೆಯನ್ನು ತಿಂದು ಹಾಳುಮಾಡುತ್ತವೆ. ಜೀರ್ಣಗೊಂಡ ತೊಗಟೆಯ ಪುಡಿ, ಹಿಕ್ಕೆ ಮುಂತಾದವು ಅಂಟಿಕೊಂಡು ರಂಧ್ರದ ಹೊರಗೆ ನೇತಾಡುತ್ತಿರುತ್ತವೆ.

ಹತೋಟಿ : ಸಣ್ಣ ತಂತಿಯ ತುಂಡನ್ನು ರಂಧ್ರದೊಳಕ್ಕೆ ತೂರಿಸಿ, ಚುಚ್ಚಿದಲ್ಲಿ ಅವು ಸಾಯುತ್ತವೆ. ಅದಿಲ್ಲದಿದ್ದಲ್ಲಿ ಸೀಮೆ ಎಣ್ಣೆ ಅಥವಾ ಪೆಟ್ರೋಲ್ ಅನ್ನು ರಂಧ್ರಗಳೊಳಕ್ಕೆ ಪಿಚಕಾರಿ ಮಾಡಿ, ಕೆಸರು ಮಣ್ಣನ್ನು ಮೆತ್ತಿದಲ್ಲಿ ಅವು ಉಸಿರುಕಟ್ಟಿ ಸಾಯುತ್ತವೆ. ೧೦ಲೀ ನೀರಿಗೆ ೧೦ ಮಿ. ಲೀ. ಪ್ಯಾರಾಥಿಯಾನ್ ಅಥವಾ ಮತ್ತಾವುದಾದರೂ ಸೂಕ್ತ ಕೀಟನಾಶಕವನ್ನು ಬೆರೆಸಿ ೧೫ ದಿನಗಳಿಗೊಮ್ಮೆ ಸಿಂಪಡಿಸುವುದು ಒಳ್ಳೆಯದು. ಹೀಗೆ ಎರಡು ಮೂರು ಸಿಂಪರಣೆಗಳನ್ನು ಮಾಡಬೇಕಾಗುತ್ತದೆ.

. ಹಣ್ಣಿನ ರಸ ಹೀರುವ ಪತಂಗ : ಇವು ಸಂಜೆ ಕತ್ತಲಾದ ಕೂಡಲೇ ಹಾರಾಡಲು ಪ್ರಾರಂಭಿಸುತ್ತವೆ. ಇವು ತಮ್ಮ ಗರಗಸದಂತಹ ಉದ್ದ ಹೀರುಕೊಳವೆ ಅಥವಾ ಸೊಂಡಿಲನ್ನು ಪಕ್ವಗೊಳ್ಳುತ್ತಿರುವ ಹಣ್ಣುಗಳೊಳಕ್ಕೆ ಚುಚ್ಚಿ ರಸಹೀರುತ್ತವೆ. ಸ್ವಲ್ಪ ನಿಗಾ ಇಟ್ಟು ನೋಡಿದರೆ ಅವು ಚುಚ್ಚಿಮಾಡಿರುವ ರಂಧ್ರಗಳು ಕಣ್ಣಿಗೆ ಬೀಳುತ್ತವೆ. ರಂಧ್ರಗಳ ಸುತ್ತ ಮಾಸಲು ಬಣ್ಣ ಏರ್ಪಟ್ಟು, ಕೊಳೆಯಲು ಪ್ರಾರಂಭಿಸುತ್ತದೆ. ಅಂತಹ ಹಣ್ಣು ಉದುರಿಬೀಳುತ್ತವೆ. ಒಮ್ಮೊಮ್ಮೆ ಇದು ಬಲು ಗುರುತರ ಪೀಡೆಯಾಗಿ ಪರಿಣಮಿಸುವುದುಂಟು. ಬದನಿಕೆ ಮುಂತಾದ ಎಲೆಗಳ ಮೇಲೆ ಹಣ್ಣು ಪತಂಗಗಳು ಮೊಟ್ಟೆ ಇಡುವುದುಂಟು.

ಹತೋಟಿ : ಆಸರೆ ಗಿಡಗಳನ್ನು ಕಿತ್ತು ನಾಶಗೊಳಿಸಬೇಕು. ಹಾನಿಗೀಡಾದ ಹಣ್ಣುಗಳನ್ನೆಲ್ಲಾ ಆರಿಸಿ, ಆಳವಾಗಿ ಹೂತಿಡಬೇಕು. ಶಲ್ಕಕೀಟಗಳ ಹತೋಟಿಗೆ ಬಳಸಿದ ಕೀಟನಾಶಕಗಳನ್ನು ಸಿಂಪಡಿಸಿದಲ್ಲಿ ಉತ್ತಮ.

. ನುಶಿ : ಇವು ಸೂಕ್ಷ್ಮ ಗಾತ್ರದ ಕೀಟಗಳಿದ್ದು ಎಳೆಯ ಹೀಚುಗಳ ಸಿಪ್ಪೆಯನ್ನು ಕೆರೆದು ತಿನ್ನುತ್ತವೆ. ಅಂತಹ ಕಾಯಿಗಳು ಸರಿಯಾಗಿ ವೃದ್ಧಿ ಹೊಂದುವುದಿಲ್ಲ ಅಲ್ಲದೆ ಅವುಗಳ ಸಿಪ್ಪೆ ಮಾಸಲು ಬಣ್ಣಕ್ಕೆ ಮಾರ್ಪಟ್ಟು, ಆಕರ್ಷಣೆಯನ್ನು ಕಳೆದುಕೊಳ್ಳುತ್ತವೆ.

ಹತೋಟಿ : ಇವುಗಳ ಹತೋಟಿಗೆ ೧೦ಲೀ ನೀರಿಗೆ ೧೦ ಮಿ. ಲೀ. ಮೆಟಾಸಿಡ್ ಅಥವಾ ಮತ್ತಾವುದಾದರು ಕೀಟನಾಶಕ ಬೆರೆಸಿ, ಬೆಳೆಯಮೇಲೆ ಸಿಂಪಡಿಸಬಹುದು.

ರೋಗಗಳುಮತ್ತುಅವುಗಳನಿಯಂತ್ರಣ

ಸೀಬೆ ಬೆಳೆಯನ್ನು ಕಾಡಿಸುವ ರೋಗಗಳಲ್ಲಿ ಬಾಡುವರೋಗ, ಚಿಬ್ಬುರೋಗ, ಹಣ್ಣುಕೊಳೆಯುವುದು, ಅಣುಜೀವಿರೋಗ, ಪೋಷಕಾಂಶಗಳ ನ್ಯೂನತೆಯಿಂದ ಸಂಭವಿಸುವರೋಗ, ಎಲೆಚುಕ್ಕೆ, ಕಪ್ಪುಬೂಷ್ಟು, ಬಿಳಿಮಚ್ಚೆರೋಗ, ಸಂಗ್ರಹಣೆಯಲ್ಲಿ ಹಣ್ಣು ಕೊಳೆಯುವುದು ಮುಂತಾಗಿ ಮುಖ್ಯವಾದುವು. ಅವುಗಳನ್ನು ಕೂಡಲೇ ಹತೋಟಿ ಮಾಡಬೇಕು.

. ಬಾಡುವರೋಗ : ಇದಕ್ಕೆ ವಿಲ್ಟ್ ಎನ್ನುತ್ತಾರೆ. ಇದು ಶಿಲೀಂಧ್ರಗಳಿಂದ ಉಂಟಾಗುವ ರೋಗ, ಮಾರಕವಾದುವು.

ಹತೋಟಿ : ಬಾಡಿದ ರೆಂಬೆಗಳನ್ನು ಸವರಿ ತೆಗೆಯಬೇಕು. ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಹಾಗೇನಾದರೂ ಆಗುವುದಿದ್ದರೆ ಬಸಿಕಾಲುವೆಗಳನ್ನು ತೆಗೆದು ನೀರನ್ನು ಹೊರಹಾಕಬೇಕು. ಚೌಳು ಮಣ್ಣಿನ ಭೂಮಿಯಲ್ಲಿ ಸೀಬೆಯನ್ನು ಬೆಳೆಯಬಾರದು. ತೀವ್ರ ಹಾನಿಗೆ ಗುರಿಯಾದ ಗಿಡಗಳನ್ನು ಬೇರು ಸಮೇತ ಕಿತ್ತು ಸುಡಬೇಕು. ಹೊಸದಾಗಿ ನೆಡುವುದಿದ್ದಲ್ಲಿ ರೋಗರಹಿತವಿರುವ ಗಿಡಗಳನ್ನು ಆರಿಸಿ ನೆಡಬೇಕು. ಗಿಡಗಳ ಬುಡದಲ್ಲಿನ ಮಣ್ಣನ್ನು ಕೆದಕಿ, ಸಡಿಲಗೊಳಿಸಿ, ಸೂಕ್ತ ಪ್ರಮಾಣದ ಬ್ರಾಸ್ಸಿಕಾಲ್ ದ್ರಾವಣ ಸುರಿದು ಚೆನ್ನಾಗಿ ತೊಯ್ಯಿಸಬೇಕು. ಅದರ ಜೊತೆಗೆ ೧೫ ದಿನಗಳಿಗೊಮ್ಮೆ ೧೦ಲೀ. ನೀರಿಗೆ ೧೦ಗ್ರಾಂ ಬ್ಯಾವಿಸ್ಟಿನ್ ಅನ್ನು ಬೆರೆಸಿ ಸಿಂಪಡಿಸಬೇಕು. ಪಾತಿಗಳಲ್ಲಿನ ಮಣ್ಣಿಗೆ ಸುಣ್ಣ ಅಥವಾ ಜಿಪ್ಸಂ ಅನ್ನು ಸೇರಿಸಿ, ಬೆರೆಸಬೇಕು. ಪಾತಿಯೊಂದಕ್ಕೆ ೧. ೫ ಕಿ. ಗ್ರಾಂ ಆದಲ್ಲಿ ಸಾಕು. ಬನಾರಸಿ, ಡೀಲ್ಕ, ಸಿಂಧ್, ನಾಸಿಕ್, ಮೆಟ್ ಗೋವ ನಂಬರ್ ೬೨೯೯, ಸುಪ್ರೀಂ, ಕ್ಲೋನ್ ೩೨-೧೨, ವೆಬ್ಬರ್, ಪೊಪೆನೊ, ಹಾರ್ಟ್, ರಾಲ್ಫ್, ರಿವರ್ ಸೈಡ್, ಸಫೇದ ಮುಂತಾದ ತಳಿಗಳು ಬಾಡುವ ರೋಗಕ್ಕೆ ನಿರೋಧಕವಿರುತ್ತದೆ.

. ಚಿಬ್ಬುರೋಗ : ಇದೂ ಸಹ ಶಿಲೀಂಧ್ರ ರೋಗವೇ. ಉತ್ತರ ಪ್ರದೇಶದ ತಾರೈಪ್ರಾಂತ್ಯದಲ್ಲಿ ಇದರ ಹಾವಳಿ ಬಹಳಷ್ಟಿರುವುದಾಗಿ ತಿಳಿದುಬಂದಿದೆ. ಹಾನಿಗೀಡಾದ ಗಿಡಗಳು ಸುಳಿಯ ಕಡೆಯಿಂದ ಬುಡದತ್ತ ಒಣಗುತ್ತಾ ಹೋಗುತ್ತವೆ. ಎಲೆ ಮತ್ತು ಕಾಯಿಗಳು ಇದಕ್ಕೆ ಸುಲಭವಾಗಿ ತುತ್ತಾಗುತ್ತವೆ. ಹಾನಿಗೀಡಾದ ಭಾಗಗಳು ಕ್ರಮೇಣ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಹಣ್ಣುಗಳ ಮೇಲೆ ಮಾಸಲು ಬಣ್ಣದ ಮಚ್ಚೆಗಳುಂಟಾಗಿ, ಅನಂತರ ಕೊಳೆಯಲು ಪ್ರಾರಂಭಿಸುತ್ತವೆ. ಹಾಗಾಗಿ ಹಣ್ಣು ಆಕರ್ಷಣೆಯನ್ನು ಕಳೆದುಕೊಳ್ಳುತ್ತವೆ. ಅವುಗಳ ಗುಣಮಟ್ಟ ಕುಸಿಯುತ್ತದೆ.

ಹತೋಟಿ : ತೋಟದಲ್ಲಿ ಶುಚಿತ್ವ ಬಹುಮುಖ್ಯ. ಶೇ. ೧ ಬೋರ್ಡೊ ದ್ರಾವಣ ಇಲ್ಲವೇ ತಾಮ್ರದ ಆಕ್ಸಿಕ್ಲೋರೈಡ್ ಅನ್ನು ಸಿಂಪಡಿಸಿ ಈ ರೋಗವನ್ನು ತಡೆಗಟ್ಟಬಹುದು. ಹೂವು ಬಿಟ್ಟು ಕಾಯಿಕಚ್ಚುವ ದಿನಗಳಲ್ಲಿ ಒಂದೆರಡು ಸಿಂಪರಣೆ ಕೊಟ್ಟಲ್ಲಿ ಸಾಕು.

. ಹಣ್ಣು ಕೊಳೆಯುವ ರೋಗ : ಇದು ಶಿಲೀಂಧ್ರರೋಗವಿದ್ದು ಹಣ್ಣುಗಳ ಮೇಲೆ ಮಚ್ಚೆಗಳುಂಟಾಗಿ, ಅನಂತರ ಅವು ಕೊಳೆಯುತ್ತವೆ.

ಹತೋಟಿ : ೧೦ ಲೀ. ನೀರಿಗೆ ೨೦ ಗ್ರಾಂ ಜೈನೆಬ್ ೭೫ ಡಬ್ಲೂಪಿ ಅಥವಾ ೧೦ ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಇಲ್ಲವೇ ೩೦ ಗ್ರಾಂ ಡೈಥೇನ್ ಎಂ-೪೫ನ್ನು ಬೆರೆಸಿ ಸಿಂಪಡಿಸಬೇಕು.

. ಅಣುಜೀವಿಗಳಿಂದ ಉಂಟಾಗುವ ರೋಗ : ಬಹಳಷ್ಟು ಆರ್ದ್ರತೆ ಇದ್ದಲ್ಲಿ ಇದರ ಹಾವಳಿ ಜಾಸ್ತಿ ಕಾಯಿಗಳ ಮೇಲೆಲ್ಲಾ ಕಜ್ಜಿಯಂತಹ ಗಾಯಗಳುಂಟಾಗಿ, ಅನಂತರ ವಿಕಾರಗೊಂಡು ಆಕರ್ಷಣೆಯನ್ನು ಕಳೆದುಕೊಳ್ಳುತ್ತವೆ. ಮಳೆಗಾಲದ ಫಸಲಿನ ಬದಲಾಗಿ ಮೃಗ್ ಬಹಾರ್ ಫಸಲನ್ನು ತೆಗೆದುಕೊಳ್ಳುವುದು ಲಾಭದಾಯಕ.

ಹತೋಟಿ : ಇದರ ಹತೋಟಿಗೆ ಶೇ. ೧ ಬೋರ್ಡೊ ದ್ರಾವಣವನ್ನು ಸಿಂಪಡಿಸಬೇಕು.

. ಎಲೆಚುಕ್ಕಿ : ಇದಕ್ಕೆ ಸರ್ಕೊಸ್ಪೋರ ಪ್ರಭೇದದ ರೋಗಾಣುಗಳು ಕಾರಣವಿರುತ್ತವೆ. ಎಲೆಗಳ ತಳಭಾಗದಲ್ಲಿ ನೀರಿನಲ್ಲಿ ತೊಯ್ಯಿಸಿದಂತಹ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ಹಾನಿ ತೀವ್ರವಿದ್ದಾಗ ಎಲೆಗಳು ಉದುರಿಬೀಳು ತ್ತವೆ.

ಹತೋಟಿ : ಸುಣ್ಣ ಮತ್ತು ಗಂಧಕಗಳನ್ನು ೧ : ೩೦ರಂತೆ ಬೆರೆಸಿ ಸಿಂಪಡಿಸಬೇಕು. ಅದಿಲ್ಲದಿದ್ದಲ್ಲಿ ಶೇ. ೦. ೩ ತಾಮ್ರದ ಆಕ್ಸಿಕ್ಲೋರೈಡ್ ದ್ರಾವಣವನ್ನು ಸಿಂಪಡಿಸಬೇಕು.

. ಕಪ್ಪುಬೂಷ್ಟು : ಶಿಲೀಂಧ್ರ ರೋಗ, ಇಂಗ್ಲೀಷ್ ನಲ್ಲಿ ಸೂಟಿವೋಲ್ಡ್ ಎನ್ನುತ್ತಾರೆ. ಎಲೆ, ಕಾಂಡ ಹಾಗೂ ಕಾಯಿಗಳ ಮೇಲೆ ಕಪ್ಪು ಬಣ್ಣದ ಪರೆ ಏರ್ಪಡುತ್ತದೆ. ಅದರಿಂದಾಗಿ ಎಲೆಗಳ ದ್ಯುತಿಸಂಶ್ಲೇಷಣಾ ಕ್ರಿಯೆಗೆ ಅಡ್ಡಿಯುಂಟಾಗುತ್ತದೆ.

ಹತೋಟಿ : ಇದರ ಹತೋಟಿಗೆ ೪೦೦ ಗ್ರಾಂ ಎಣ್ಣೆರಾಳದ ಸಾಬೂನನ್ನು ೨೦ ಲೀ. ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು. ಅಲ್ಲದಿದ್ದಲ್ಲಿ ಅಷ್ಟೇ ಪ್ರಮಾಣದ ಕಚ್ಚಾ ತೈಲ ದ್ರವವನ್ನು ನೀರಿಗೆ ಬೆರೆಸಿ ಸಿಂಪಡಿಸಬಹುದು. ಅದರ ನಂತರ ೩೬ ಲೀ. ನೀರಿಗೆ ೬೦೦ ಗ್ರಾಂ ಪಿಷ್ಟವನ್ನು ಬೆರೆಸಿ ಸಿಂಪಡಿಸಿದರೆ ಅದು ಕಿತ್ತು ಉದುರುತ್ತದೆ.

. ಬಿಳಿಮಚ್ಚೆ ರೋಗ : ಶಿಲೀಂಧ್ರರೋಗ ಪ್ರಾರಂಭಕ್ಕೆ ಕಡುಗೆಂಪು ಬಣ್ಣದ ಮಚ್ಚೆಗಳು ಕಾಣಿಸಿಕೊಂಡು, ದಿನಕಳೆದಂತೆ ಅವು ಬೆಳ್ಳಗಾಗುತ್ತವೆ.

ಹತೋಟಿ : ಇದರ ಹತೋಟಿಗೆ ೧೦ ಲೀ. ನೀರಿಗೆ ೩೦ ಗ್ರಾಂ. , ಜೈನೆಬ್ ಅನ್ನು ಬೆರೆಸಿ ಸಿಂಪಡಿಸಬೇಕು.

. ಸಂಗ್ರಹಣೆಯಲ್ಲಿ ಹಣ್ಣು ಕೊಳೆಯುವಿಕೆ : ಹಲವಾರು ಬಗೆಯ ಶಿಲೀಂಧ್ರ ರೋಗಾಣುಗಳಿಂದ ಹಣ್ಣು ಕೊಳೆಯುತ್ತವೆ. ಪ್ರಾರಂಭಕ್ಕೆ ನೀರಿನಲ್ಲಿ ತೊಯ್ದಂತೆ ಮಚ್ಚೆಗಳುಂಟಾಗಿ, ಅನಂತರ ಕೊಳೆಯಲು ಪ್ರಾರಂಭಿಸುತ್ತವೆ.

ಹತೋಟಿ : ಶುಚಿತ್ವ ಬಹುಮುಖ್ಯ, ಹಣ್ಣುಗಳಿಗೆ ಗಾಯಗಳಾಗದಂತೆ ನೋಡಿಕೊಳ್ಳಬೇಕು. ಕೊಯ್ಲಿಗೆ ಮುಂಚೆ ಯಾವುದಾದರೂ ಸೂಕ್ತ ಶಿಲೀಂಧ್ರ ನಾಶಕವನ್ನು ನೀರಿನಲ್ಲಿ ಕರಗಿಸಿ, ಸಿಂಪಡಿಸಬೇಕು.

. ಪೋಷಕಾಂಶಗಳ ಕೊರತೆಯಿಂದ ಉಂಟಾಗುವ ರೋಗಗಳು : ಮೆಗ್ನೀಷಿಯಂ, ಸತು ಮುಂತಾದ ಪೋಷಕಾಂಶಗಳು ಸಾಕಷ್ಟು ಪ್ರಮಾಣದಲ್ಲಿ ಲಭಿಸದಿದ್ದಾಗ, ಗಿಡಗಳ ಬೆಳವಣಿಗೆ ಕುಗ್ಗಿ, ಎಲೆಗಳು ಸಣ್ಣವಾಗಿ, ಫಸಲು ಕುಸಿಯುತ್ತದೆ. ಎಲೆಗಳ ಬಣ್ಣಬದಲಾಗುತ್ತದೆ.

ಹತೋಟಿ : ಆಯಾ ಧಾತುವಿನ ಸಲ್ಫೇಟ್ ಮತ್ತು ಸುಣ್ಣಗಳನ್ನು ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು.