ಸೀಬೆಯನ್ನು ಇಡೀ ಬೆಳೆಯಾಗಿ ಅಥವಾ ಸಪೋಟ, ಮಾವು ಮುಂತಾದ ತೋಟಗಾರಿಕೆ ಬೆಳೆಗಳ ಮಧ್ಯೆ ಮಿಶ್ರಬೆಳೆಯಾಗಿ ತೆಗೆಯಬಹುದು. ಇದರಲ್ಲಿ ಭೂಮಿಯ ಸಿದ್ಧತೆ, ಗಿಡಗಳನ್ನು ನೆಡಬೇಕಾದ ಅಂತರ, ಗೊಬ್ಬರಗಳ ಪೂರೈಕೆ, ಕಳೆ ಹತೋಟಿ, ಮಧ್ಯಂತರ ಬೆಳೆಗಳ ಬಗ್ಗೆ ವಿವರಗಳನ್ನು ಕೊಡಲಾಗಿದೆ. ಇದನ್ನು ಕುಷ್ಕಿಯಲ್ಲಿ ಬೆಳೆದಾಗ ಮಳೆನೀರಿನ ಸಂರಕ್ಷಣೆ ಅತಿ ಮುಖ್ಯ. ಅಂತೆಯೇ ಗಿಡಗಳನ್ನು ಸರಿಯಾದ ಹಂತದಲ್ಲಿ ಸವರಿ ಸಮತೋಲನ ಬೆಳವಣಿಗೆ ಹಾಗೂ ಫಲ ಬಿಡಲು ಅನುವು ಮಾಡಿಕೊಡಬೇಕು. ಸೀಬೆ ಮೂರು ಋತು(ಅಂಬೆ ಬಹರ್, ಮೃಗ್ ಬಹರ್, ಹಸ್ತ ಬಹರ್)ಗಳಲ್ಲಿ ಹೂವು ಬಿಡುತ್ತದೆ. ಎಲ್ಲಾ ವಿಶಿಷ್ಟ ಬೇಸಾಯ ಕ್ರಮಾಗಳನ್ನು ಅನುಸರಿಸುವುದು ಅಗತ್ಯ.

ಭೂಮಿಯ ಸಿದ್ಧತೆ

ಗಿಡಗಳನ್ನು ನೆಡುವ ಮುಂಚೆ ಭೂಮಿಯನ್ನು ಒಂದೆರಡು ಸಾರಿ ಉಳುಮೆಮಾಡಿ, ಸಮ ಮಾಡಬೇಕು. ಅನಂತರ ಸಾಲುಗಳ ಹಾಗೂ ಸಸಿಗಳ ನಡುವೆ ೫ ಮೀ. ಇಲ್ಲವೇ ೭. ೫ಮೀ ಅಂತರದಲ್ಲಿ ೧ ಘನ ಮೀಟರ್ ಗಾತ್ರದ ಗುಂಡಿಗಳನ್ನು ತೆಗೆದು ಬಿಸಿಲಿಗೆ ಬಿಡಬೇಕು ಈ ಕೆಲಸಕ್ಕೆ ಮಾರ್ಚ್-ಎಪ್ರಿಲ್ ಸೂಕ್ತವಿರಿತ್ತವೆ. ಮೇಲ್ಪದರದ ೩೦ಸೆಂ. ಮೀ. ಮಣ್ಣನ್ನು ಒಂದು ಮಗ್ಗುಲಲ್ಲಿಯು ಮತ್ತು ತಳಪದರಗಳ ೬೦ಸೆಂ. ಮೀ. ಮಣ್ಣನ್ನು ಮತ್ತೊಂದು ಮಗ್ಗುಲಲ್ಲಿಯು ಹಾಕಬೇಕು. ಗುಂಡಿಗಳ ಒಳಭಾಗ ಬಿಸಿಲಿಗೆ ಸಿಕ್ಕಿ ಚನ್ನಾಗಿ ಒಣಗಿತ್ತದೆ.

ಮೇ ತಿಂಗಳ ಸುಮಾರುಗೆ ಗುಂಡಿಗಳನ್ನು ಭರ್ತಿಮಾಡಬೇಕು. ಮೊದಲು ಮೇಲ್ಮಣ್ಣನ್ನು ಮತ್ತು ಅನಂತರ ತಳಪದರಗಳ ಮಣ್ಣನ್ನು ಹರಡಿ ತುಂಬುವುದು ಸರಿಯಾದ ವಿಧಾನ. ಮೇಲ್ಮಣ್ಣಿನೊಂದಿಗೆ ಸಾಕಷ್ಟು ಹಸಿರೆಲೆಗೊಬ್ಬರ ಇಲ್ಲವೆ ಕೊಟ್ಟಿಗೆ ಗೊಬ್ಬರ ಸೇರಿಸುವುದು ಅಗತ್ಯ. ಪ್ರತಿ ಗುಂಡಿಗೆ ೨೫ಕಿ. ಗ್ರಾಂಗಳಷ್ಟು ಹಸಿರೆಲೆ ಗೊಬ್ಬರ ಅಥವಾ ಕೊಟ್ಟಿಗೆ ಗೊಬ್ಬರ ಸೇರಿಸಬೇಕು. ಕೊಟ್ಟಿಗೆ ಗೊಬ್ಬರ ಚೆನ್ನಾಗಿ ಕಳಿತಿರುವುದು ಅಗತ್ಯ ಅವುಗಳನ್ನು ತುಂಬುವಾಗ ನೆಲಮಟ್ಟದಿಂದ ೧೦-೧೫ಸೆಂ. ಮೀ ಎತ್ತರದವಿದ್ದದ್ದೇ ಅದರೆ ಮಳೆ ಬಂದಾಗ ಅದು ಕುಸಿಯುತ್ತದೆ. ಒಂದುವೇಳೆ ಮಳೆಯಾಗದಿದ್ದರೆ ತೆಳ್ಳಗೆ ನೀರು ಕೊಡಬೇಕು.

ಸೀಬೆ ತೋಟ ಎಬ್ಬಿಸುವ ಮೊದಲೇ ದಟ್ಟವಿದ್ದು, ಎತ್ತರಕ್ಕೆ ಬೆಳೆಯುವ ಗಿಡಗಳನ್ನು ಒಂದು ಇಲ್ಲವೆ ಎರಡು ಸಾಲುಗಳಂತೆ ಸುತ್ತ ನೆಟ್ಟು ಬೆಳೆಸುವುದನ್ನು ಮರೆಯಬಾರದು. ಇದನ್ನೇ”ಗಾಳಿತಡೆ” ಎನ್ನುವುದು. ಈ ಉದ್ದೆಶಕ್ಕೆ, ಸರ್ವೆ, ಸಿಲ್ವರ್ ಓಕ್, ಜಂಬುನೇರಳೆ, ಮಾವು ಮುಂತಾದವುಗಳ ಬೀಜ ಸಸಿಗಳನ್ನು ಬಳಸಬಹುದು. ಅದರಿಂದ ಎಷ್ಟೇ ಬಲವಾದ ಗಾಳಿ ಬೀಸಿಯಾದರು ಸಹ ಸೀಬೆ ಗಿಡಗಳಿಗೆ ಹಾನಿ ಇರುವುದಿಲ್ಲ. ಆದರೆ ಕಡೆಯ ಸಾಲಿನ ಹಣ್ಣಿನ ಗಿಡಗಳಿಂದ ಗಾಳಿ ತಡೆಯ ಸಾಲು ಸಾಕಷ್ಟು ದೂರದಲ್ಲಿರಬೇಕು. ಗಾಳಿತಡೆ ತನ್ನ ಎತ್ತರದ ಸುಮಾರು ನಾಲ್ಕು ಪಟ್ಟು ದೂರದ ವರೆಗೆ ಪರಿಣಾಮಕಾರಕವಿರುತ್ತದೆ. ಒಂದು ವೇಳೆ ಸೀಬೆ ತೋಟ ಹೆಚ್ಚು ವ್ಯಾಪಕವಾಗಿದ್ದರೆ, ಗಳಿ ತಡೆಗಳನ್ನು ಅಲ್ಲಲ್ಲಿ ಬದುಗಳ ಮೇಲೆ ನೆಟ್ಟು ಬೆಳೆಸಬಹುದು.

ಗಿಡಗಳನ್ನು ನೆಡಲು ಜೂನ್-ಜುಲೈಸೂಕ್ತಕಾಲ. ಅವುಗಳನ್ನು ಹೆಪ್ಪು ಸಮೇತನೆಡುವುದು ಒಳ್ಳೆಯದು. ಮೋಡ ಕವಿದ ಇಲ್ಲವೇ ಸಂಜೆಯ ತಂಪು ಹೊತ್ತಿನಲ್ಲಿ ನೆಟ್ಟರೆ ಗಿಡಗಳು ಬಾಡುವುದಿಲ್ಲ. ಪ್ರತಿಗುಂಡಿಯ ಮಧ್ಯಬಾಗದಲ್ಲಿ ಹೆಪ್ಪು ಹಿಡಿಸುವಷ್ಟೇ ಗಾತ್ರದ ತಗ್ಗು ತೆಗೆದು ಅದರಲ್ಲಿ ಗಿಡವನ್ನು ನೆಟ್ಟಗೆ ನಿಲ್ಲಿಸಿ ಬುಡದ ಸುತ್ತ ಹಸಿ ಮಣ್ಣನ್ನು ಹರಡಿ ಅದುಮಿ ಚೆನ್ನಾಗಿ ತುಳಿಯಬೇಕು. ಕಸಿಗಿಡಳಾದಲ್ಲಿ ಕಸಿಗಂಟು ನೆಲಮಟ್ಟದಿಂದ ೧೦-೧೫ ಸೆಂ. ಮೀ. ಎತ್ತರದಲ್ಲಿರುವುದು ಅಗತ್ಯ. ಅದಾದನಂತರ ಕೈ ನೀರು ಹಾಕಿ, ಆಸರೆ ಕೋಲು ಸಿಕ್ಕಿಸಿ ಕಟ್ಟಬೇಕು. ಒಂದು ವೇಳೆ ಗೆದ್ದಲಿನ ಬಾಧೆ ಇದ್ದಲ್ಲಿ ಪ್ರತಿ ಗುಂಡಿಗೆ ೧೦-೨೦ಗ್ರಾಂ ಹೆಪ್ಟಾಕ್ಲೊರ್ ಪುಡಿ ಇಲ್ಲವೇ ೧೦೦ ಗ್ರಾಂ ಬೇವಿನ ಹಿಂಡಿಯನ್ನು ಉದುರುಸಬೇಕು. ಹೆಕ್ಟೇರಿಗೆ ೧೭೭ರಿಂದ ೨೭೭ಗಿಡ ಹಾಕಬಹುದು.

ಗೊಬ್ಬರಗಳಪೂರೈಕೆ

ಸೀಬೆಗೆ ಅಷ್ಟೊಂದು ಪಲವತ್ತತೆ ಬೇಕಾಗಿಲ್ಲ. ಹಾಗೆಂದ ಮಾತ್ರಕ್ಕೆ ಬೇಜವಾಬ್ದಾರಿ ಸಲ್ಲದು. ಗಿಡಗಳು ಬೆಳೆದು ದೊಡ್ದವಾದಂತೆಲ್ಲಾ ಅವುಗಳಿಗೆ ಹೆಚ್ಚಿನ ಪ್ರಮಾನದಲ್ಲಿ ಗೊಬ್ಬರಗಳನ್ನು ಕೊಡಬೇಕಾಗುತ್ತದೆ. ಗಿಡಗಳ ವಯಸ್ಸು ಹಾಗೂ ಭೂಗುಣಗಳನ್ನನುಸರಿಸಿ ಗೊಬ್ಬರಗಳ ಪ್ರಮಾಣವನ್ನು ಹೆಚ್ಚಿಸಬೇಕಾಗುತ್ತದೆ. ಗೊಬ್ಬರಗಳನ್ನು ಮಳೆಗಾಲದಲ್ಲಿ ಕೊಡುವುದು ಸೂಕ್ತ. ಸಾಕಷ್ಟು ಪ್ರಮಾಣದ ಸಾವಯುವ ಹಾಗೂ ರಾಸಾಯನಿಕ ಗೊಬ್ಬರಗಳನ್ನು ಕೊಡುವುದು ಲಾಭದಾಯಕ. ಸಾವಯುವ ಗೊಬ್ಬರಗಳನ್ನು ಮಳೆಗಾಲದ ಪ್ರಾರಂಭದಲ್ಲಿ ಮತ್ತು ರಾಸಾಯನಿಕ ಗೊಬ್ಬರಗಳನ್ನು ಎರಡು ಸಮ ಕಂತುಗಳಾಗಿ ಮಾಡಿ, ಮೊದಲನೆಯ ಕಂತನ್ನು ಜೂನ್-ಜುಲೈನಲ್ಲಿ ಮತ್ತು ಎರಡನೆಯ ಕಂತನ್ನು ಮಳೆಗಾಲದ ಕಡೆಯಲ್ಲಿ ಅಂದರೆ ಸಪ್ಟೆಂಬರ್-ಅಕ್ಟೋಬರ್ ನಲ್ಲಿ ಕೊಡಬೇಕು.

ಸಾವಯವ ಗೊಬ್ಬರ ಕೊಟ್ಟಿಗೆ ಗೊಬ್ಬರವಾಗಿರಬಹುದು ಅಲ್ಲವೇ ಕಾಂಪೋಸ್ಟ್ ಆಗಿರಬಹುದು. ಒಟ್ಟಾರೆ, ಅದು ಚನ್ನಾಗಿ ಕಳಿತಿರಬೆಕು. ಹಸಿಸಗಣಿಯನ್ನಾಗಲಿ ಇಲ್ಲವೇ ಹಸಿಕೋಳಿ ಗೊಬ್ಬರವನ್ನಾಗಲೀ ಹಾಕಬಾರದು. ಅವುಗಳನ್ನು ಚನ್ನಾಗಿ ಕಳಿಸಿ, ಮುಗುಚಿ ಅನಂತರ ಹಾಕಬಹುದು. ಒಂದು ವೇಳೆ ಹಿಂಡಿ ಗೊಬ್ಬರ ಹಾಕುವುದಿದ್ದಲ್ಲಿ ಬೇವಿನ ಹಿಂಡಿ, ಹೊಂಗೆ ಹಿಂಡಿ, ಹರಳೆಣ್ಣೆ ಹಿಂಡಿ ಅಥವಾ ಹಿಪ್ಪೆ ಬೀಜಗಳ ಹಿಂಡಿಗಳನ್ನು ಬಳಸಬಹುದು.

ಗ್ಲಿರಿಸಿಡಿಯ, ಹೊಂಗೆ, ಎಕ್ಕ, ತಂಗಡಿ ಮುಂತಾದವುಗಳ ಹಸಿರು ಸೊಪ್ಪನ್ನು ಸಣ್ಣಗೆ ಕತ್ತರಿಸಿ ಹಸಿರೆಲೆ ಗೊಬ್ಬರವಾಗಿ ಬಳಸಬಹುದು. ಹೊಸ ಚಿಗುರಿನಲ್ಲಿ ಸರಿಯಾದ ಸಮಯಕ್ಕೆ ಗೊಬ್ಬರಗಳನ್ನು ಕೊಟ್ಟಿದ್ದೇ ಆದರೆ ಹೆಚ್ಚು ಫಸಲು ಸಾಧ್ಯ. ಅದರಿಂದ ಹಣ್ಣುಗಳ ಗಾತ್ರ ಮತ್ತು ರುಚಿ ಸುಧಾರಿಸುತ್ತವೆ;ಮರಗಳ ಆರೋಗ್ಯ ಸಹ ಚೆನ್ನಾಗಿರುತ್ತದೆ.

ಸೀಬೆ ಗಿಡಗಳಿಗೆ ಪ್ರತಿವರ್ಷ ಗೊಬ್ಬರಗಳನ್ನು ಕೊಡಬೇಕು. ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಕೊಡುವ ಗೊಬ್ಬರಗಳ ಪ್ರಮಾಣ ವ್ಯಾತ್ಯಾಸಗೊಳ್ಳುತಾದೆ. ಉಧಾಹರಣೆಗೆ ಆಂಧ್ರಪ್ರದೇಶದಲ್ಲಿ ಪ್ರಾಯದ ಮರವೊಂದಕ್ಕೆ ವರ್ಷಕ್ಕೆ ೧೦೦ಕಿ. ಗ್ರಾಂ ಕೊಟ್ಟಿಗೆ ಗೊಬ್ಬರ, ೨೦೦ಗ್ರಾಂ ಹರಳು ಹಿಂಡಿ ಮತ್ತು ಒಂದು ಕಿ. ಗ್ರಾಂ ಸೂಪರ್ ಫಾಸ್ಫೇಟ್ ಗಳನ್ನು ಕೊಟ್ಟರೆ ಬಂಗಾಳದಲ್ಲಿ ಕೊಟ್ಟಿಗೆ ಗೊಬ್ಬರದ ಜೊತೆಗೆ ೨೮೦ಗ್ರಾಂ ಸಾರಜನಕ, ೩೨೦ಗ್ರಾಂ ರಂಜಕ ಮತ್ತು ೨೮೦ಗ್ರಾಂ ಪೊಟ್ಯಾಷ್ ಸತ್ವಗಳಿರುವ ರಾಸಾಯನಿಕ ಗೊಬ್ಬರಗಳನ್ನು ಕೊಡುತ್ತಾರೆ. ಅಲ್ಲಿ ಅವಿಗಳನ್ನು ಎರಡು ಸಮ ಕಂತುಗಳಾಗಿ ಮಾಡಿ, ಮೊದಲನೆಯ ಕಂತನ್ನು ಜನವರಿಯಲ್ಲಿಯೂ ಮತ್ತು ಎರಡನೆಯ ಕಂತನ್ನು ಆಗಸ್ಟ್ ನಲ್ಲಿಯೂ ಕೊಡುತ್ತಾರೆ. ತಮಿಳುನಾಡಿನಲ್ಲಿ ಗಿಡವೊಂದಕ್ಕೆ ವರ್ಷಕ್ಕೆ ೧ಕಿ. ಗ್ರಾಂ ಸಾರಜನಕ, ೧ಕಿ. ಗ್ರಾಂ ರಂಜಕ ಮತ್ತು ೧ಕಿ. ಗ್ರಾಂ ಪೊಟ್ಯಾಷ್ ಸತ್ವಗಳನ್ನು ಕೊಡುವುದುಂಟು.

ಕರ್ನಾಟಕದಲ್ಲಿ ಪ್ರತಿ ಗಿಡಕ್ಕೆ ವರ್ಷಕ್ಕೆ ೨೫ಕಿ. ಗ್ರಾಂ ಕೊಟ್ಟಿಗೆ ಗೊಬ್ಬರದ ಜೊತೆಗೆ ಶಿಫಾರಸು ಮಾಡಿರುವ ರಾಸಾಯನಿಕ ಗೊಬ್ಬರಗಳ ಪ್ರಮಾಣವನ್ನು ಕೋಷ್ಟಕ ೭ರಲ್ಲಿ ಕೊಟ್ಟಿದೆ.

ಕೋಷ್ಟಕ ಸೀಬೆಗೆ ಕೊಡಬೇಕಾದ ಪೋಷಕಾಂಶಗಳ ಪ್ರಮಾಣ

ಗೊಬ್ಬರಗಳನ್ನು ಹಾಕುವ ವಿಧಾನ ಸಹ ಮುಖ್ಯವೇ, ಅವುಗಲನ್ನು ಮೇಲ್ಮೇಲೆ ಎರಚಿದರೆ ಪ್ರಯೋಜನವಾಗದು. ಬಹುತೇಕ ಬೇರು ಸಮೂಹ ಮಣ್ನಿನ ೧೦-೧೫ ಸೆಂ. ಮೀ. ಮೆಲ್ಪದರದಲ್ಲಿ ಹರಡಿರುತ್ತದೆ. ಗಿಡಗಳು ಬೆಳೆದು ದೊಡ್ಡವಾದಂತ್ತೆಲ್ಲಾ ಅವುಗಳ ಬೇರುಗಳು ದೂರದೂರಕ್ಕೆ ಹರಡುತ್ತವೆ. ಅವುಗಳನ್ನು ಪಾತಿಗಳ ಅಗಲಕ್ಕೆ ಎರಚುವುದರ ಬದಲಾಗಿ ಬುಡದಿಂದ ೧ ಮೀ ದೂರದಲ್ಲಿ ೧೫ಸೆಂ. ಮೀ. ಅಗಲ ಮತ್ತು ೧೫ಸೆಂ. ಮೀ ಆಳ ಇರುವಣ್ತೆ ಉಂಗುರಾಕಾರದ ತಗ್ಗು ತೆಗೆದು ಅದರಲ್ಲಿ ಸಮನಾಗಿ ಹರಡಿ, ಮಣ್ಣಿನಲ್ಲಿ ಬೆರೆಸಬೇಕು. ಗೊಬ್ಬರಗಳನ್ನು ಹಾಕುವ ಕಾಲಕ್ಕೆ ಮಣ್ಣು ಹಸಿಯಾಗಿರುವುದು ಬಹುಮುಖ್ಯ. ಕರಗುವ ರಸಗೊಬ್ಬರಗಳನ್ನು ನೀರಿನೊಂದಿಗೆ ಕೊಡಬಹುದು.

ಶೇ. ೦. ೩ ಯೂರಿಯಾ, ೦. ೧ ಕ್ಯಾಲ್ಸಿಯಂ ಫಾಸ್ಫೇಟ್ ಮತ್ತು ೦. ೧ರ ಮ್ಯೂರಿಯೇಟ್ ಆಫ್ ಪೊಟ್ಯಾಷ್ ಗಳನ್ನು ದ್ರಾವಣ ರೂಪದಲ್ಲಿ ಎಲೆಗಳ ಮೇಲೆ ಸಿಂಪಡಿಸಿದಾಗ ಹೆಚ್ಚಿನ ಫಸಲು ಸಿಕ್ಕಿದ್ದಾಗಿ ತಿಳಿದುಬಂದಿದೆ. ಕೆಲವೆಡೆಗಳಲ್ಲಿ ಅಂದರೆ ನೀರು ನಿಂತ ಪ್ರದೇಶಗಳಲ್ಲಿನ ಮರಗಳಲ್ಲಿ ಎಲೆಗಳು ಗಾತ್ರದಲ್ಲಿ ಸಣ್ಣವಿದ್ದು, ನರಗಳ ನಡುವಣ ಭಾಗಗಳು ಹಳದಿ ಬಣ್ಣಕ್ಕೆ ಮಾರ್ಪಟ್ಟು ಕಡಿಮೆ ಫಸಲನ್ನು ಕೊಟ್ಟಿವೆ. ಅದಕ್ಕೆ ಸತುವಿನ ನ್ಯೂನತೆ ಕಾರಣವಿದ್ದುದಾಗಿ ತಿಳಿದುಬಂದಿದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ೪೫೦ ಗ್ರಾಂ ಸತುವಿನ ಸಲ್ಫೇಟ್ ಮತ್ತು ೩೪೦ಗ್ರಾಂ ಸುಣ್ಣಗಳನ್ನು ೭೨ ಲೀ. ನೀರಿನಲ್ಲಿ ಕರಗಿಸಿ ಎಲೆಗಳ ಮೇಲೆ ಸಿಂಪಡಿಸಬೇಕು.

ಕರ್ನಾಟಕದ ಕೆಲವೆಡೆ ಮೆಗ್ನೀಷಿಯಂ ಧಾತುವಿನ ಕೊರತೆ ಉಂಟಾಗಿ ಅಂತಹ ಮರಗಳಲ್ಲಿನ ಎಲೆಗಳು ತಾಮ್ರ ವರ್ಣಕ್ಕೆ ಮಾರ್ಪಟ್ಟು ಕಡಿಮೆ ಇಳುವರಿಯಿಂದ ಕೂಡಿದ್ದಾಗಿ ವರದಿಯಾಗಿದೆ. ಅದಕ್ಕೆ ಬ್ರಾಂಜಿಂಗ್ ಎನ್ನುತ್ತಾರೆ. ಈ ನ್ಯೂನತೆಯನ್ನು ಸರಿಪಡಿಸಲು ಸೂಕ್ತ ಪ್ರಮಾಣದ ಮೆಗ್ನೀಷಿಯಂ ಸಲ್ಫೇಟ್ ಮತ್ತು ಸುಣ್ಣನೀರಿನಲ್ಲಿ ಕರಗಿಸಿ ಎಲೆಗಳಮೇಲೆ ಸಿಂಪಡಿಸಬೇಕು. ಹೂವುಬಿಡುವ ಮುಂಚೆ ಶೇ. ೦. ೪ರ ಬೋರಿಕ್ ಆಮ್ಲ ಮತ್ತು ಶೇ . ೦. ೩ರ ಸತುವಿನ ಸಲ್ಫೇಟ್ ಗಳನ್ನು ದ್ರಾವಣ ರೂಪದಲ್ಲಿ ಎಲೆಗಳ ಮೇಲೆ ಸಿಂಪಡಿಸಿದಾಗ ಹಣ್ಣುಗಳ ಗಾತ್ರ ಮತ್ತು ಇಳುವರಿಗಳು ಹೆಚ್ಚುವುದಾಗಿ ತಿಳಿದುಬಂದಿದೆ. ಸಸ್ಯ ಬೆಳವಣಿಗೆಯನ್ನು ಹೆಚ್ಚಿಸುವಲ್ಲಿ ಶೇ. ೦. ೨ರಿಂದ ೦. ೪ ಮೈಲುತುತ್ತದ ದ್ರಾವಣವನ್ನು ದ್ರಾವಣವನ್ನು ಸಿಂಪಡಿಸಬಹುದು.

ಸಾಕಷ್ಟು ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ ಮುಂತಾಗಿ ಕೊಡುತ್ತಿದ್ದಲ್ಲಿ ಈ ಸಮಸ್ಯೆ ಇರಲಾರದು. ಸೂಕ್ಷ್ಮ ಪೋಷಕಾಂಶಗಳನ್ನು ಪೂರೈಸಲು ಸೂಕ್ತ ಪ್ರಮಾಣದ ಮಲ್ಟಿಪ್ಲೆಕ್ಸ್, ಟ್ರೇಸೆಲ್ ಮುಂತಾದವುಗಳನ್ನು ಮಣ್ಣಿಗೆ ಹಾಕಬಹುದು. ಇಲ್ಲವೇ ದ್ರಾವಣ ರೂಪದಲ್ಲಿ ಎಲೆಗಳಮೇಲೆ ಸಿಂಪಡಿಸಬಹುದು. ಗೊಬ್ಬರಗಳನ್ನು ಮಣ್ಣಿಗೆ ಹಾಕುವಾಗ ಉಂಗುರದ ತಗ್ಗು ಕಾಲುವೆಯನ್ನು ಗಿಡಗಳ ವಯಸ್ಸು ಹೆಚ್ಚಾದಂತೆಲ್ಲಾ ದೂರದೂರಕ್ಕೆ ಮಾಡಬೇಕು.

ನೀರಾವರಿ

ಸೀಬೆ ಅನಾವೃಷ್ಟಿಯನ್ನು ಸ್ವಲ್ಪಮಟ್ಟಿಗೆ ತಡೆದುಕೊಳ್ಳಬಲ್ಲದು. ಆದರೆ ಮಳೆ ಇಲ್ಲದ ಹಾಗೂ ದೀರ್ಘ ಒಣಹವೆ ಇರುವ ದಿನಗಳಲ್ಲಿ ನೀರನ್ನು ಕೊಡುತ್ತಿದ್ದಲ್ಲಿ ಗಿಡಗಳ ಬೆಳವಣಿಗೆ ಚೆನಾಗಿದ್ದು ಹೆಚ್ಚಿನ ಇಳುವರಿ ಸಾಧ್ಯವಾಗುತ್ತದೆ. ಮಳೆಗಾಲದಲ್ಲಿ ಗಿಡಗಳ ಬೆಳವಣಿಗೆ ಚೆನ್ನಾಗಿದ್ದು ಹೆಚ್ಚಿನ ಇಳುವರಿ ಸಾಧ್ಯವಾಗುತ್ತದೆ. ಮಳೆಗಾಲದಲ್ಲಿ ಅಷ್ಟಾಗಿ ನೀರುಕೊಡಬೇಕಾಗಿಲ್ಲ. ಬೇಸಿಗೆ ಮತ್ತು ಚಳಿಗಾಲಗಳಲ್ಲಿ ನೀರು ಕೊಡುವುದು ಲಾಭಾದಾಯಕ.

ಪ್ರಾರಂಭದ ದಿನಗಳಲ್ಲಿ ಅಂದರೆ ಮೊದಲ ಒಂದೆರಡು ವರ್ಷಗಳವರೆಗೆ ಕೈನೀರು ಕೊಡುವುದು ವಾಡಿಕೆ. ಗಿಡಗಳು ಬೆಳೆದು ದೊಡ್ಡವಾದಂತೆಲ್ಲಾ ಅವುಗಳ ಬೇರು ಸಮೂಹ ಹಾಗೂ ರೆಂಬೆಗಳು ದೂರದೂರಕ್ಕೆ ಹರಡುತ್ತದೆ. ಹೂವುಬಿಟ್ಟು ಕಾಯಿ ಕಚ್ಚುವ ದಿನಗಳಲ್ಲಿ ಮಣ್ಣು ಹಸಿಯಾಗದಿದ್ದಲ್ಲಿ ಬಹಳಷ್ಟು ಹೂವು ಮತ್ತು ಹೀಚು ಉದುರಿಬಿಳುತ್ತವೆ. ಅದರಿಂದಾಗಿ ಫಸಲು ನಷ್ಟಗೊಳ್ಳುತ್ತದೆ. ಒಂದು ವೇಳೆಹಾಯಿಸಲು ಸಾಕಷ್ಟು ನೀರು ಲಭ್ಯವಿಲ್ಲದಿದ್ದಲ್ಲಿ ಹನಿ ನೀರಾವರಿಯನ್ನು ಅಳವಡಿಸಬಹುದು. ಅದರೊಂದಿಗೆ ರಾಸಾಯನಿಕೆ ಗೊಬ್ಬರಗಳನ್ನೂ ಸಹ ಪೂರೈಸಬಹುದು. ನೀರು ಉತ್ತಮ ಗುಣಮಟ್ಟದ್ದಿರಬೇಕು. ಒಟ್ಟಾರೆ ಹದವರಿತು ನೀರು ಕೊಡಬೇಕಷ್ಟೆ.

ಅಂತರಬೇಸಾಯಮತ್ತುಕಳೆಹತೋಟಿ

ನೀರು ಮತ್ತು ಗೊಬ್ಬರಗಳಿರುವ ಕಾರಣ ಅನೇಕ ಬಗೆಯ ಕಳೆಗಳು ಹುಟ್ಟಿಕೊಳ್ಳುತ್ತವೆ. ಅವುಗಳಲ್ಲಿ ಹೆಚ್ಚಿನವು ವಾರ್ಷಿಕ ಕಳಿಗಳಿದ್ದು, ಋತುಮಾನದ ಕಡೆಯ ಭಾಗದಲ್ಲಿ ಬೀಜ ಕಚ್ಚಿ, ಒಣಗುತ್ತದೆ. ಮತ್ತೆ ಕೆಲವು ಒಮ್ಮೆ ಮೊಳೆತರೆ ಸಾಕು ಹಲವಾರು ವರ್ಷಗಳವರೆಗೆ ಇರಬಲ್ಲವು. ಬೆಳೆಗೆ ಲಭಿಸಬೇಕಾದ ತೇವ ತೇವ, ಬಿಸಿಲು-ಬೆಳಕು, ಪೋಷಕಾಂಶಗಳನ್ನು ಈ ಕಳೆಗಳು ಬಳಸಿಕೊಳ್ಳುತ್ತವೆ. ಅಷ್ಟೇ ಅಲ್ಲದೆ ಅವು ಹಲವಾರು ಕೀಟ ಪೀಡೆಗಳಿಗೆ ಹಾಗೂ ರೋಗಾಣುಗಳಿಗೆ ಆಸರೆಯನ್ನು ಒದಗಿಸುತ್ತವೆ. ಅವುಗಳನ್ನು ಸಕಾಲದಲ್ಲಿ ಕಿತ್ತು ನಾಶಮಾಡಬೇಕು.

ಸಾಲುಗಳ ನಡುವೆ ವರ್ಷದಲ್ಲಿ ಒಂದೆರಡು ಸಾರಿ ಹಗುರವಾಗಿ ಉಳುಮೆ ಮಾಡಿದ್ದೇ ಆದರೆ ಬಹುತೇಕ ಕಳೆಗಳು ಇಲ್ಲವಾಗುತ್ತವೆ. ಅದಾದನಂತರ ಉಳಿದ ಕಳೆಗಳನ್ನು ಕೈಯಿಂದ ಕಿತ್ತುಹಾಕಬಹುದು. ಪಾತಿಗಳಲ್ಲೂ ಸಹ ಕೈಯಾಡಿಸಿ ಮಣ್ಣನ್ನು ಮೇಲ್ಮೇಲೆ ಸಡಿಲಗೊಳಿಸಿ ಕಳೆಗಳನ್ನು ಕಿತ್ತು ಹಾಕಬೇಕು. ಅದರಿಂದ ಮಣ್ಣು ಗಡಸುಗೊಳ್ಳುವುದು ತಪ್ಪುತ್ತದೆ ಮತ್ತು ತೇವ ಹೆಚ್ಚುಕಾಲ ಉಳಿಯುವಂತಾಗುತ್ತದೆ.

ಮಳೆಗಾಲದ ಪ್ರಾರಂಭದಲ್ಲಿ ಒಮ್ಮೆ ಮತ್ತು ಮಳೆಗಾಲದ ಕಡೆಯಲ್ಲಿ ಮತ್ತೋಮ್ಮೆ ಅಂತರಬೇಸಾಯ ಮಾಡಿದಲ್ಲಿ ಸಾಕು. ಪಾರ್ಥೇನಿಯಂ ನಂತಹ ಕಳೆಗಳನ್ನು ಅವು ಹೂವು ಬಿಡುವ ಮೊದಲೇ ಕಿತ್ತು ತೆಗೆಯುವುದು ಒಳ್ಳೆಯದು. ಕೊನ್ನಾರಿ, ಗರಿಕೆ ಮುಂತಾದವುಗಳನ್ನು ಆಳವಾಗಿ ಅಳತೆ ಮಾಡಿ, ಕಿತ್ತು ತೆಗೆಯಬೇಕು.

ಕಳೆಗಳ ಹತೋಟಿಗೆ ಕಳೆನಾಶಕಗಳನ್ನು ಬಳಸಬಹುದಾದರೂ ಆ ಕೆಲಸವನ್ನು ಬಲು ಎಚ್ಚರಿಕೆಯಿಂದ ಮಾಡಬೇಕಷ್ಟೆ. ಈ ಉದ್ದೇಶಕ್ಕೆ ತಜ್ಞರ ಸಲಹೆಯನ್ನು ಪಡೆಯುವುದು ಒಳ್ಳೆಯದು. ಗಿಡಗಳು ಬೆಳೆದು ದೋಡ್ಡವಾದಂತೆಲ್ಲಾ ನೆರಳುಂಟಾಗಿ ಕಳೆಗಳು ಅಷ್ಟಾಗಿ ಬರಲಾರವು.

ಅಂತರಬೆಳೆಗಳು

ಸೀಬೆ ಗಿಡಗಳು ಎಳೆಯವಿರುವಾಗ ತೋಟದ ಬಹಳಷ್ಟು ಜಮೀನು ಖಾಲಿಯಾಗಿ ಉಳಿಯುತ್ತದೆ. ಆದ್ದರಿಂದ ಸಾಲುಗಳ ನಡುವೆ ಪ್ರಾರಂಭದ ಕೆಲವು ಮರ್ಷಗಳವರೆಗೆ ಸೂಕ್ತ ಬೆಳೆಗಳನ್ನು ಬೆಳೆದು ಲಾಭಹೊಂದಬಹುದು. ನೀರಾವರಿ ಸೌಲಭ್ಯವಿದ್ದರೆ ಪಪಾಯ, ಬಾಳೆ, ದಾಳಿಂಬೆ, ಅಂಜೂರ, ನುಗ್ಗೆ, ಕರಿಬೇವು, ತರಕಾರಿ, ಹೂವು ಮುಂತಾದ ತೋಟಗಾರಿಕೆ ಬೆಳೆಗಳನ್ನು ಬೆಳೆದು ಲಾಭಹೊಂದಬಹುದು. ಮಳೆ ಆಸರೆ ಬೆಳೆಗಳನ್ನು ಬೆಳೆಯುವಲ್ಲಿ ರಾಗಿ, ನೆಲಗಡಲೆ, ತೊಗರಿ, ಅವರೆ ಮುಂತದ ಹೊಲದ ಬೆಳೆಗಳನ್ನು ಬೆಳೆಯಬಹುದು. ಮೊದಲ ಎರಡು ಮೂರು ವರ್ಷಗಳ ವರೆಗೆ ಈ ಬೆಳೆಗಳನ್ನು ಬೆಳೆದು ಅನಂತರ ಕೈಬಿಡಬಹುದು. ಅಂತರ ಬೆಳೆಗಳನ್ನು ಬೆಳೆಯುವುದರಿಂದ ಕಳೆಗಳ ಬಾಧೆಯನ್ನು ಕಡಿಮೆಮಾಡಬಹುದು. ಈ ಬೆಳೆಗಳು ಮುಖ್ಯ ಬೆಳೆಯೊಂದಿಗೆ ಬಿಸಿಲು ಬೆಳಕು, ತೇವ, ಪೋಷಕಾಂಶಗಳು ಮುಂತಾಗಿ ಸ್ಪರ್ಧಿಸಬಾರದು. ಅವುಗಳು ಕಡಿಮೆ ಅವಧಿಯವಿರಬೇಕು. ಮುಖ್ಯಬೆಳೆ ವಾಣಿಜ್ಯ ಫಸಲನ್ನು ಬಿಡಲು ಪ್ರಾಂಭಿಸಿದಾಗ, ಅಂತರ ಬೆಳೆಗಳನ್ನು ಬೆಳೆಯುವುದನ್ನು ನಿಲ್ಲಿಸಿ ಅದರ ಕಡೆ ಹೆಚ್ಚಿನ ಗಮನಕೊಡಬೇಕು.

ಮಿಶ್ರ ಬೆಳೆಗಳು : ಸೀಬೆಯನ್ನು ಶುದ್ಧ ಬೆಳೆಯಾಗಿ ಇಲ್ಲವೇ ಇತರ ದೀರ್ಘಾವಧಿ ಬೆಳೆಗಳೊಂದಿಗೆ ಮಿಶ್ರ ಬೆಳೆಯಾಗಿ ಬೆಳೆಯಬಹುದು. ಅದರ ಉದ್ದೇಶ ಒಂದು ಬೆಳೆ ಸಾಕಷ್ಟು ಆದಾಯಕೊಡಲು ವಿಫಲಗೊಂಡಾಗ ವಿಫಲಗೊಂಡಾಗ ಮತ್ತೊಂದು ಬೆಳೆ ಕೈಗೆ ಸಿಗಲಿ ಎಂಬುದಾಗಿ ಇದರಿಂದ ಲಭ್ಯವಿರುವ ಜಾಗ, ನೀರು ಮುಂತಾಗಿ ಲಾಭದಾಯಕವಾಗಿ ಬಳಕೆಯಾಗುತ್ತವೆಯಲ್ಲದೆ ರೈತರ ಆದಾಯ ಹಲವು ಪಟ್ಟು ಹೆಚ್ಚುತ್ತದೆ.

ಸೀಬೆಯೊಂದಿಗೆ ಸೀತಾಫಲ, ಅಂಜೂರ, ಪಪಾಯ, ಫಾಲ್ಸ ಮುಂತಾಗಿ ಮಿಶ್ರಮಾಡಿ ನಾಲ್ಕು ಗಿಡಗಳ ಮಧ್ಯೆ ಒಂದರಂತೆ ಬೆಳೆಯಬಹುದು. ಈ ಉದ್ದೇಶಕ್ಕೆ ಪೈನಾಪಲ್ ಸಹ ಸೂಕ್ತವಿರುತ್ತದೆ.

ಅನೇಕ ವೇಳೆ ಸೀಬೆಯನ್ನು ಮಾವು, ಸಪೋಟ, ಹಲಸು , ಕಿತ್ತಲೆ ಜಾತಿಯ ಹಣ್ಣುಗಳು ಮುಂತಾದವುಗಳು ಸಾಲುಗಳ ನಡುವೆ ನೆಟ್ಟು ಬೆಳೆಸುವುದುಂಟು. ಈ ರೀತಿಯಾಗಿ ಮಿಶ್ರ ಬೆಳೆಗಳನ್ನು ಬೆಳೇದಾಗ ಅವು ಸಮಂಜಸವಾಗಿ ಹೊಂದಿಕೊಂಡು ಲಾಭದಾಯಕವಾಗಿ ಫಲಿಸುವುದು ಬಹುಮುಖ್ಯ.

ಹಸಿರು ಗೊಬ್ಬರದ ಬೆಳೆಗಳನ್ನು ಬೆಳೆಸುವುದು : ಮಣ್ಣಿನ ಫಲವತ್ತತೆಯನ್ನು ಸುಧಾರಿಸಲು ಹಾಗೂ ಕಳೆಗಳನ್ನು ಹತೋಟಿಯಲ್ಲಿಡಲು ಹಸಿರುಗೊಬ್ಬರದ ಬೆಳೆಗಳನ್ನು ಬೆಳೆಯುವುದು ಲಾಭದಾಯಕ. ಈ ಉದ್ದೇಶಕ್ಕೆ ಅಪ್ಸೆಣಬು, ಧೈಂಚ, ಹುರುಳಿ, ಹೆಸರು, ಅವರೆ, ಉದ್ದು ಮುಂತಾದ ದ್ವಿದಳ ಧಾನ್ಯ ಬೆಳೆಗಳನ್ನು ಮಳೆಗಾಲದ ಪ್ರಾರಂಭದಲ್ಲಿ ಸಾಲುಗಳ ನಡುವೆ ಮತ್ತು ಪಾತಿಗಳಲ್ಲಿ ಬಿತ್ತಿ, ಅವು ಹೂವು ಬಿಡುವ ಮೊದಲೇ ಕಿತ್ತು ಮಣ್ಣಿಗೆ ಸೇರಿಸಬೇಕು. ಒಂದು ವೇಳೆ ಭೂಮಿ ಇಳುಕಲಿನಿಂದ ಕೂಡಿದ್ದರೆ ಈ ಬೆಳೆಗಳನ್ನು ಇಳಿಜಾರಿಗೆ ಅಡ್ಡಲಾಗಿ ಬಿತ್ತಬೇಕು. ಅದರಿಂದ ಬಿದ್ದ ಮಳೆಯ ನೀರು ಅಲ್ಲಿಯೇ ತಡೆಯಲ್ಪಟ್ಟು ಹೆಚ್ಚಿನ ತೇವಾಂಶ ಮಣ್ಣಿನಲ್ಲಿ ಹಿಂಗಿ, ಗಿಡಗಳಿಗೆ ಸಿಗುವಂತಾಗುತ್ತದೆ ಮತ್ತು ಮೇಲ್ಮಣ್ಣು ಕೊಚ್ಚಿಹೋಗುವುದು ತಪ್ಪುತ್ತದೆ. ಈ ವಿಧದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪೋಷಕಾಂಶಗಳು ಮಣ್ಣಿಗೆ ಸೇರುತ್ತವೆಯಲ್ಲದೆ ಅದರ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಗುಣಗಳು ಬಹಳಷ್ಟು ಸುಧಾರಿಸುತ್ತವೆ. ಇವುಗಳನ್ನು ಪ್ರತಿವರ್ಷ ಬಿತ್ತಿ, ಮಣ್ಣಿಗೆ ಸೇರುವುದು ಉತ್ತಮ. ಕಳೆ ಹತೋಟಿ ಮತ್ತು ಗೊಬ್ಬರಗಳಿಗೆ ಮಾಡಬೇಕಾದ ಖರ್ಚು ಸಹ ಉಳಿಯುತ್ತದೆ. ಇವುಗಳ ಬೇರುಗಳಲ್ಲಿ ಗಂಟುಗಳಿದ್ದು ಅವು ಗಾಳಿಯಲ್ಲಿನ ಸಾರಜನಕವನ್ನು ಹೀರಿ ಹಿಡಿದಿಡುತ್ತವೆ.

ಹೊದಿಕೆ ಬೆಳೆಗಳು : ಸೀಬೆ ಸಾಲುಗಳ ನಡುವೆ ಬಹಳಷ್ಟು ಜಾಗ ಖಾಲಿ ಇರುತ್ತದೆ. ಹಾಗಾಗಿ ಹೆಚ್ಚು ಮಳೆಯಾದಾಗ ಬಹಳಷ್ಟು ನೀರು ಮುಂದಕ್ಕೆ ಹರಿದು ಸಾಗುವುದಲ್ಲದೆ ಅದರೊಂದಿಗೆ ಸಾರವತ್ತಾದ ಮೇಲ್ಮಣ್ಣೂ ಸಹ ಕೊಚ್ಚಿಹೋಗುತ್ತದೆ. ಬಿದ್ದಂತಹ ಮಳೆ ನೀರಿನ ಹೆಚ್ಚುಭಾಗ ತಾಕುಗಳಲ್ಲಿಯೇ ತಡೆಯಲ್ಪಟ್ಟು ಹಿಂಗುವಂತೆ ಮಾಡುಲು ಮತ್ತು ಮೇಲ್ಮಣ್ಣು ಕೊಚ್ಚಿ ಅದರ ಫಲವತ್ತತೆ ಕುಸಿಯುವುದನ್ನು ತಪ್ಪಿಸಲು ಸೂಕ್ತ ಹೊದಿಕೆ ಬೆಳೆಗಳನ್ನು ಬೆಳೆಯಲು ಸೂಚಿಸಿದೆ. ಈ ಉದ್ದೇಶಕ್ಕೆ ಅಲಸಂದಿಯಂತಹ ಬೆಳೆಗಳು ಸೂಕ್ತವಿರುತ್ತವೆ. ಅವುಗಳನ್ನು ಮುಂಗಾರಿನ ಪ್ರಾರಂಭದಲ್ಲಿ ಬಿತ್ತನೆಮಾಡಿದ್ದೇ ಆದರೆ ಒಂದೆರಡು ತಿಂಗಳುಗಳಲ್ಲಿ ದಟ್ಟಹೊದಿಕೆ ಏರ್ಪಡುತ್ತದೆ. ಇಳಿಜಾರಿಗೆ ಅಡ್ಡಲಾಗಿ ಸಾಲುಗಳಲ್ಲಿ ಒತ್ತಾಗಿ ಬಿತ್ತಿದಲ್ಲಿ ಬಿದ್ದಂತಹಮಳೆಯ ನೀರು ತಡೆಯಲ್ಪಡುತ್ತವೆ. ಮಳೆಗಾಲದ ಕಡೆಯಲ್ಲಿ ಅದನ್ನು ಕಿತ್ತು ಅಥವಾ ಉಳಮೆ ಮಾಡಿ ಮಣ್ಣಿಗೆ ಸೇರಿಸಬಹುಬು. ಅವುಗಳ ಜೊತೆಗೆ ಉದ್ದರಿಬಿದ್ದ ಎಲೆ, ಹೂವು, ಕಾಯಿ ಮುಂತಾಗಿ ಕೊಳೆತು ಮಣ್ಣಿಗೆ ಸೇರಿ ಅದರ ಫಲವತ್ತತೆ ಹೆಚ್ಚುಕಾಲ ಇರುತ್ತದೆ. ಇಂತಹ ಬೆಳೆಗಳನ್ನು ಬಿತ್ತುವುದರಿಂದ ದಟ್ಟ ಹೊದಿಕೆ ಏರ್ಪಟ್ಟು ಕಳೆಗಳು ಸುಲಭವಾಗಿ ಹತೋಟಿಗೊಳ್ಳುತ್ತವೆ.

ಮಳೆನೀರಿನ ಸಂರಕ್ಷಣೆ : ಮಳೆನೀರನ್ನು ತಡೆಹಿಡಿದು, ಮೇಲ್ಮಣ್ಣು ಕೊಚ್ಚಿಹೋಗುವುದನ್ನು ತಪ್ಪಿಸಲು ಸೂಕ್ತ ಅಂತರ ಬೇಸಾಯ ಕ್ರಮಗಳನ್ನು ಅನುಸರಿಸುವುದು, ಪಾತಿಗಳನ್ನು ಹಿಗ್ಗಿಸಿ ಮಣ್ಣನ್ನು ಸಡಲಿಸುವುದು, ಪಾತಿಗಳ ಅಗಲಕ್ಕೆ ಒಣ ಎಲೆಗಳು, ಕೂಳೆಗಳು, ಹುಲ್ಲು, ಹೊಟ್ಟು, ಸಿಪ್ಪೆ ಮುಂತಾಗಿ ಮಂದವಾಗಿಹರಡುವುದು, ಗಿಡಗಳ ನಾಲ್ಕೂ ಮೂಲೆಗಳಲ್ಲಿ ಸಣ್ಣ ಗುಂಡಿಗಳನ್ನು ತೋಡಿ ಮಳೆಯ ನೀರು ಸಂಗ್ರಹಗೊಳ್ಳುವಂತೆ ಮಾಡುವುದು, ತಾಕುಗಳಲ್ಲಿನ ಬದುಗಳ ಮೇಲೆ ಹುಲ್ಲನ್ನು ಬೆಳೆಸುವುದು, ಇಳಿಜಾರು ಪ್ರದೇಶಗಳಲ್ಲಿ ಸಮಪಾತಳಿ ಬದುಗಳನ್ನು ಹಾಗೂ ಜಗಲಿ ಪಾತಿಗಳನ್ನು ನಿರ್ಮಿಸುವುದು, ಗಿಡದ ಬುಡದಲ್ಲಿ ಇಳಿಜಾರಿನ ಕಡೆ ಅರ್ಧಚಂದ್ರಾಕಾರದ ಬದುಗಳನ್ನು ಹಾಕುವುದು, ಕೆರೆ ಗೋಡನ್ನು ಪಾತಿ ಹರಡುವುದು, ಹಸಿರೆಲೆ ಗೊಬ್ಬರಗಳನ್ನು ಹಾಕುವುದು ಮುಂತಾಗಿ ಮಣ್ಣು ನೀರು ಸಂರಕ್ಷಿಸುವಲ್ಲಿ ನೆರವಾಗುತ್ತವೆ. ಈಗಾಗಲೇ ಹೇಳಿದಂತೆ ಗಾಳಿ ತಡೆಯು ತೋಟದಲ್ಲಿ ಸೂಕ್ಷ್ಮ ಹವೆ ಇರುವಂತೆ ಮಾಡಬಲ್ಲದು. ಅಷ್ಟೇ ಅಲ್ಲದೆ ಚಳಿಗಾಲದಲ್ಲಿ ಸೀಬೆ ಬೆಳೆಯನ್ನು ಶೈತ್ಯಹವೆಯಿಂದ ಮತ್ತು ಬೇಸಿಗೆಯಲ್ಲಿ ಬಿಸಿ ಗಾಳಿಯಿಂದ ರಕ್ಷಿಸಬಲ್ಲದು. ಹಾಯಿಸಲು ಸಾಕಷ್ಟು ನೀರು ಇಲ್ಲದಿದ್ದಲ್ಲಿ ಮಡಕೆ ನೀರಾವರಿಯನ್ನು ಅನುಸರಿಸಬಹುದು.

ಆಕಾರ ಮತ್ತು ಸವರುವಿಕೆ : ಸೀಬೆ ಗಿಡಗಳನ್ನು ಅವುಗಳ ಪಾಡಿಗೆ ಬೆಳೆಯಲು ಬಿಟ್ಟರೆ ದೃಢವಾದ ಕಾಂಡ ಮತ್ತು ಬಲಿಷ್ಟವಿರುವ ಚೌಕಟ್ಟು ಸಾಧ್ಯವಾಗುವುದಿಲ್ಲ. ಅಂತಹ ಗಿಡಮರಗಳು ಹೇಗೆಂದರೆ ಹಾಗೆ ಬೆಳೆದು ಪೊದೆಯಂತಾಗುಗುತ್ತವೆ. ಆದ್ದರಿಂದ ಗಿಡಮರಗಳಿಗೆ ಸೂಕ್ತ ಆಕಾರ ಮತ್ತು ಸವರುವಿಕೆಗಳನ್ನು ಒದಗಿಸಿ, ಸಮತೋಲ ಚೌಕಟ್ಟು ಇರುವಂತೆ ಮಾಡಬೇಕು. ಅದರಿಂದ ಅವುಗಳ ನಿರ್ವಹಣೆ ಸುಲಭವಿರುತ್ತದೆ ಮತ್ತು ಹೆಚ್ಚಿನ ಫಸಲು ಹಾಗೂ ಒಳ್ಳೆಯ ಗುಣಮಟ್ಟ ಸಾಧ್ಯವಾಗುತ್ತದೆ.

ಪ್ರಧಾನ ಕಾಂಡ ನೆಟ್ಟಗಿದ್ದು, ನೆಲಮಟ್ಟದಿಂದ ಸುಮಾರು 1 ಮೀ. ಎತ್ತರದವರೆಗೆ ನಯವಾಗಿದ್ದು, ಪಕ್ಕ ರೆಂಬೆಗಳಿಂದ ಕೂಡಿರಬಾರದು. ಗೂಟಿ ಗಿಡಗಳಲ್ಲಿ ಬಹುತೇಕ ರೆಂಬೆಗಳು ನೆಲಮಟ್ಟದಲ್ಲಿಯೇ ಹರಡಿ ಬೆಳೆದಿರುತ್ತವೆ. ಅಂತಹ ತೋಟಗಳಲ್ಲಿ ಬೇಸಾಯ ಕೆಲಸಗಳನ್ನು ಮಾಡಲು ಕಷ್ಟವಾಗುತ್ತದೆ. ಗಿಡಗಳು ಸೂಕ್ತ ಎತ್ತರಕ್ಕೆ ಬೆಳೆದಾಗ ಅವುಗಳ ಸುಳಿ ರೆಂಬೆಯನ್ನು ಚಿವುಟಿ ಹಾಕಿ ಮೂರು-ನಾಲ್ಕು ಪಕ್ಕ ರೆಂಬೆಗಳನ್ನು ಸುತ್ತ ಹರಡಿ ಚಾಚುವಂತೆ, ಬೆಳೆಯಗೊಡಬೇಕು. ಆಗ ಅದು ಸಮತೋಲ ನೆತ್ತಿಯಾಗುತ್ತದೆ. ಆಕಾರ ಮತ್ತು ಸವರುವಿಕೆಗಳು ಒಟ್ಲು ಎಬ್ಬಿಸುವ ಹಂತದಿಂದಲೇ ಪ್ರಾರಂಭಗೊಳ್ಳುತ್ತವೆ. ಅಗತ್ಯ ಆಕಾರ ಮತ್ತು ಬಲಿಷ್ಟವಾದ ಚೌಕಟ್ಟುಗಳನ್ನು ನಿರ್ಮಿಸುವುದೇ ಇದರ ಪ್ರಮುಖ ಉದ್ದೇಶ. ಗಿಡದ ಎಲ್ಲಾ ರೆಂಬೆಗಳಿಗೂ ಬಿಸಿಲು ಬೆಳಕುಗಳು ಯಥೇಚ್ಛವಾಗಿ ಲಭಿಸುವಂತಿರಬೇಕು. ಗಿಡಗಳ ಮಧ್ಯೆ ಗಾಳಿ ಸರಾಗವಾಗಿ ಹರಿದಾಡಬೇಕು. ಬಹಳಷ್ಟು ನೆರಳಿನಿಂದ ಕೂಡಿದ ರೆಂಬೆಗಳಲ್ಲಿ ಕಾಯಿಕಚ್ಚುವುದು ಕಡಿಮೆ. ಮರದ ನೆತ್ತಿ ಹೂದಾನಿಯಂತೆ ಅಥವಾ ಬಿಚ್ಚಿ ಹರಡಿದ ಛತ್ರಿಯಂತೆ ಕಾಣಬೇಕು. ಸುಭದ್ರ ಚೌಕಟ್ಟು ಏರ್ಪಡಲು ಮೂರರಿಂದ ನಾಲ್ಕು ವರ್ಷ ಹಿಡಿಸುತ್ತವೆ.

ಗಿಡದ ಅನಗತ್ಯ ಭಾಗಗಳನ್ನು ಕತ್ತರಿಸಿ ತೆಗೆಯುವುದಕ್ಕೆ ಸವರುವುದು ಎನ್ನುತ್ತೇವೆ. ಈ ಕೆಲಸವನ್ನು ಆಗಾಗ್ಗೆ ಮಾಡಬೇಕಾಗುತ್ತದೆ. ಬಹಳಷ್ಟು ನೆರಳಿನಿಂದ ಕೂಡಿದ ಹಾಗೂ ಅಡ್ಡಾದಿಡ್ಡಿಯಾಗಿ ಬೆಳೆದ ರೆಂಬೆಗಳು, ಬುಡಭಾಗ ಹಾಗೂ ಬೇರುಗಳಿಂದ ಪುಟಿದ ನೀರ್ಚಗುರು, ಕಸಿಗಿಡಗಳಲ್ಲಿ ಕಸಿ ಗಂಟಿನ ಕೆಳಗೆ ಬೇರು ಸಸಿಯಲ್ಲಿ ಮೂಡಿದ ಚಿಗುರು, ಮುರಿದು ಹಾಳಾದ ಇಲ್ಲವೇ ಒಣಗಿ ಸತ್ತಂತಹ ಮತ್ತು ಬಹಳಷ್ಟು ಕೀಟ ಅಥವಾ ರೋಗಪೀಡಿತ ರೆಂಬೆಗಳು ಮುಂತಾಗಿ ಸವರಿ ತೆಗೆಯಬೇಕು.

ಫಸಲು ಬಿಡುತ್ತಿರುವ ಮರಗಳಲ್ಲಿ ಸವರುವ ಕೆಲಸವನ್ನು ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ. ಸೀಬೆಯಲ್ಲಿ ಹೊಸ ಚಿಗುರಿನಲ್ಲಿ ಹೂವುಬಿಟ್ಟು ಕಾಯಕಚ್ಚುತ್ತವೆ. ಹೆಚ್ಚು ಫಸಲು ಸಿಗಬೇಕಿದ್ದಲ್ಲಿ ಸ್ವಲ್ಪ ಮಟ್ಟಿನ ವಾರ್ಷಿಕ ಸವರುವಿಕೆ ಅಗತ್ಯ. ಹಣ್ಣಿನ ಕೊಯ್ಲು ಮುಗಿದ ನಂತರ, ರೆಂಬೆಗಳ ತುದಿ ಭಾಗಗಳನ್ನು ಲಘುವಾಗಿ ಮೊಟುಕುಮಾಡಬೇಕು. ಒಂದು ವೇಳೆ ತೀವ್ರ ಪ್ರಮಾಣದಲ್ಲಿ ಸವರಿದ್ದೇ ಆದರೆ ಇಳುವರಿ ಕುಸಿಯುವುದು ಖಂಡಿತ. ಸವರುವುದರಿಂದ ಹಣ್ಣುಗಳ ಗಾತ್ರದಲ್ಲಿ ಹೆಚ್ಚಳ ಕಂಡುಬರುತ್ತದೆ. ಸವರುಗಾಯಗಳಿಗೆ ಬೋರ್ಡೊಸರಿ ಅಥವಾ ಮತ್ತಾವುದಾದರೂ ತಾಮ್ರಯುಕ್ತ ಶಿಲೀಂಧ್ರನಾಶಕವನ್ನು ಬಳಿಯಬೇಕು.

ವಿಶಿಷ್ಟಬೇಸಾಯಕ್ರಮಗಳುಮತ್ತುಋತೋಪಚಾರ

ಬೀಜ ಊರಿ ಬೆಳೆದ ಗಿಡಗಳಲ್ಲಿ ರೆಂಬೆಗಳು ನೆಟ್ಟಗೆ ಬೆಳೆಯುವ ಸ್ವಭಾವ ಹೊಂದಿರುತ್ತವೆ. ಅಂತಹ ಗಿಡಗಳಲ್ಲಿ ಫಸಲು ರೆಂಬೆಗಳ ತುದಿಭಾಗಗಳಲ್ಲಿ ಬಿಡುತ್ತದೆ ಮತ್ತು ಅವುಗಳ ಬುಡಭಾಗಗಳಲ್ಲಿ ಮೊಗ್ಗುಗಳು ಚಿಗುರೊಡೆಯದೆ ಹಾಗೆಯೇ ಉಳಿಯುತ್ತವೆ. ಕಸಿ ಮತ್ತು ಗೂಟಿ ಗಿಡಗಳಲ್ಲಿ ಈ ಸಮಸ್ಯೆ ಅಷ್ಟಾಗಿ ಇರುವುದಿಲ್ಲ. ಅವುಗಳಲ್ಲಿನ ರೆಂಬೆಗಳು ನೆಲದ ಕಡೆಗೆ ಇಳಿಬಿದ್ದಿರುತ್ತವೆ. ಹಾಗಾಗಿ ಅವುಗಳಲ್ಲಿನ ಮೊಗ್ಗುಗಳೆಲ್ಲಾ ಚಿಗುರಿ, ಹೂವುಬಿಟ್ಟು, ಕಾಯಿಕಚ್ಚುತ್ತವೆ. ಅದರಿಂದ ಹೆಚ್ಚಿನ ಫಸಲು ಸಾಧ್ಯವಾಗುತ್ತದೆ.

ರೆಂಬೆಗಳನ್ನು ಬಗ್ಗಿಸಿ ಕಟ್ಟುವುದು : ಇದನ್ನು ಇಂಗ್ಲಿಷ್‌ನಲ್ಲಿ ಬೆಂಡಿಂಗ್ ಎನ್ನುತ್ತಾರೆ. ಎಲೆಗಳುದುರಿ ವಿಶ್ರಾಂತಿಯಲ್ಲಿರುವ ಗಿಡಮರಗಳು ನೆಟ್ಟಗೆ ಬೆಳೆಯುವ ರೆಂಬೆಗಳನ್ನು ಕಮಾನು ಅಥವಾ ಬಿಲ್ಲಿನಂತೆ ಬಗ್ಗಿಸಿ ಕಟ್ಟುವುದು ರೂಡಿಯಲ್ಲಿದೆ. ಪಾತಿಗಳನ್ನು ಸರಿಪಡಿಸಿ ಹಗುರವಾಗಿ ಅಗತೆಮಾಡಿ, ಗೊಬ್ಬರ ಕೊಟ್ಟು ನೀರು ಹಾಯಿಸಿದರೆ ರೆಂಬೆಗಳ ಉದ್ದಕ್ಕೆ ಇರುವ ಮೊಗ್ಗುಗಳು ಚಿಗುರು ತಳ್ಳಿ ಹೂವು ಬಿಡುತ್ತವೆ. ಸರ್ದಾರ್‌ ತಳಿಯ ಗಿಡಗಳಲ್ಲಿ ಈ ಉಪಚಾರ ಅಗತ್ಯವಿಲ್ಲ. ಏಕೆಂದರೆ ಅದು ಸ್ವಭಾವತಃ ನೆಲದತ್ತ ಬಾಗಿ ಬೆಳೆಯುವ ರೆಂಬೆಗಳನ್ನು ಹೊಂದಿರುತ್ತದೆ.

ಅದರ ಪಾಡಿಗೆ ಅದನ್ನು ಬಿಟ್ಟಿದ್ದೇ ಆದರೆ ಸೀಬೆ ವರ್ಷದಲ್ಲಿ ಮೂರು ಸಾರಿ ಹೂವು ಬಿಟ್ಟು ಕಾಯಿ ಕಚ್ಚುತ್ತದೆ. ಆದರೆ ಸಮೃದ್ಧ ಫಸಲು ಯಾವೊಂದು ಋತುವಿನಲ್ಲಿಯೂ ಸಾಧ್ಯವಾಗುವುದಿಲ್ಲ. ಅದು ಅಲ್ಪಸಲ್ಪ ಪ್ರಮಾಣದ್ದಿದ್ದು ಯಾವ ಪ್ರಯೋಜನಕ್ಕೂ ಬಾರದಂತಾಗುತ್ತದೆ. ಅದರಿಂದಾಗಿ ಮರಗಳಿಗೆ ವಿಶ್ರಾಂತಿ ಸಿಗುವ ಅವಕಾಶ ಇಲ್ಲದಂತಾಗುತ್ತದೆ. ಈ ಕಾರಣದಿಂದಾಗಿ ಅವು ಬೇಗ ನಶಿಸಿ ಹಾಳಾಗುತ್ತವೆ. ಹೀಗೆ ವರ್ಷದಲ್ಲಿ ಮೂರು ಅಲ್ಪ ಫಸಲುಗಳ ಬದಲಾಗಿ ಯಾವುದಾರೂ ಒಂದು ಸಮೃದ್ಧ ಫಸಲನ್ನು ತೆಗೆದುಕೊಳ್ಳುವುದು ಲಾಭದಾಯಕ. ದಕ್ಷಿಣ ಮತ್ತು ಪಶ್ವಿಮ ಭಾರತಗಳಲ್ಲಿ ವರ್ಷದಲ್ಲಿ ಮೂರು ಸಾರಿ ಹೂವು ಬಿಟ್ಟು ಕಾಯಿಕಚ್ಚಿದರೆ ಉತ್ತರಭಾರತದಲ್ಲಿ ವರ್ಷದಲ್ಲಿ ಎರಡು ಸಾರಿ ಹೂವುಬಿಟ್ಟು ಕಾಯಿಕಚ್ಚುತ್ತವೆ. ಆಯಾ ಪ್ರದೇಶಕ್ಕೆ ತಕ್ಕಂತೆ ಯಾವುದಾರೂ ಒಂದು ಋತುವಿನಲ್ಲಿ ಹೂವುಬಿಟ್ಟು ಫಸಲು ಕೊಯ್ಲಿಗೆ ಬರುವಂತೆ ಮಾಡುವುದಕ್ಕೆ ಋತೋಪಚಾರ ಅಥವಾ ಬಹಾರ್‌ ಟ್ರೀಟ್‌ಮೆಂಟ್ ಎನ್ನುತ್ತಾರೆ. ಅಂಬೆ ಬಹಾರ್‌, ಮೃಗ್ ಬಹಾರ್‌ ಮತ್ತು ಹಸ್ತ ಬಹಾರ್‌ – ಈ ಮೂರು ಋತುಮಾನಗಳು. ಅವುಗಳಿಗೆ ಈ ಹೆಸರುಗಳು ಬರಲು ಆಯಾ ಮಳೆ ನಕ್ಷತ್ರಗಳೇ ಕಾರಣ. ಹೂವು ಬಿಟ್ಟು ಹಣ್ಣು ಕೊಯ್ಲಿಗೆ ಬರುವ ಅವಧಿಗಳು. ಈ ರೀತಿ ಇವೆ :

ಋತುಗಳು ಹೂವು ಬಿಡುವ ಕಾಲಹಣ್ಣು ಕೊಯ್ಲಿಗೆ ಬರುವ ಕಾಲ
ಅಂಬೆ ಬಹಾರ್‌ ಫೆಬ್ರವರಿ (ವಸಂತ ಋತು) ಜುಲೈ-ಸಪ್ಟೆಂಬರ್‌
ಮೃಗ್ ಬಹಾರ್‌ ಜೂನ್-ಜುಲೈ ನವೆಂಬರ್‌-ಜನವರಿ
ಹಸ್ತ ಬಹಾರ್‌ ಅಕ್ಟೋಬರ್‌ ಫೆಬ್ರುವರಿ

ಅಂಬೆಬಹಾರ್ : ಹೂವು ಫೆಬ್ರುವರಿಯಲ್ಲಿ ಬಿಟ್ಟು, ಹಣ್ಣು ಜುಲೈನಿಂದ ಸೆಪ್ಟೆಂಬರ್‌ವರೆಗೆ ಸಿಗುತ್ತಿರುತ್ತವೆ. ಬೆಳೆಗಾರರು ಹೆಚ್ಚಾಗಿ ಇಷ್ಟಪಡುವುದು ಈ ಋತುವಿನ ಫಸಲನ್ನೇ. ಅದಕ್ಕೆ ಪ್ರಮುಖ ಕಾರಣವೆಂದರೆ ಈ ಋತುವಿನಲ್ಲಿ ಹಬ್ಬ ಹರಿದಿನಗಳೂ ಹೆಚ್ಚಾಗಿದ್ದು ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಇರುವುದು. ಫಸಲು ಮಳೆಗಳಿಗೆ ಸಿಗುವ ಕಾರಣ ಅವುಗಳ ಗುಣಮಟ್ಟ ಅಷ್ಟೊಂದು ಚೆನ್ನಾಗಿರುವುದಿಲ್ಲ ಕೊಯ್ಲು ಮಾಡಿ, ಸರಕನ್ನು ಸಾಗಿಸುವುದು ಕಷ್ಟದ ಕೆಲಸವಾಗಿರುತ್ತದೆ. ಹಣ್ಣು ನೀರು ನೀರಾಗಿದ್ದು ರುಚಿಯಲ್ಲಿ ಸ್ವಲ್ಪ ಸಪ್ಪೆ ಇರುತ್ತವೆ. ಈ ಋತುವಿನ ಹಣ್ಣುಗಳಿಗೆ ಹಣ್ಣಿನ ನೊಣದ ಹಾವಳಿ ಜಾಸ್ತಿ.

ಮೃಗ್ಬಹಾರ್ : ಈ ಋತುಮಾನವು ಜೂನ್-ಜುಲೈನಲ್ಲಿ ಅಂದರೆ ಮೃಗಶಿರ ಮಳೆ ನಕ್ಷತ್ರದೊಂದಿಗೆ ಮಿಳಿತಗೊಳ್ಳುತ್ತದೆ. ಈ ತಿಂಗಳುಗಳಲ್ಲಿ ಬಿಟ್ಟುಹೂವು ಕಾಯಿ ಕಚ್ಚಿ, ಫಸಲು ಚಳಿಗಾಲಕ್ಕೆ ಅಂದರೆ ನವೆಂಬರ್‌-ಜನವರಿ ಸಮಯಕ್ಕೆ ಕೊಯ್ಲಿಗೆ ಬರುತ್ತದೆ. ಫಸಲು ಯಥೇಚ್ಛ. ಹಣ್ಣುಗಳ ಗುಣಮಟ್ಟ ಚೆನ್ನಾಗಿರುತ್ತದೆ. ಹಣ್ಣುಗಳಿಗೆ ನೊಣದ ಬಾಧೆ ಇರುವುದಿಲ್ಲ.

ಹಸ್ತಬಹಾರ್ : ಹೂವು ಅಕ್ಟೋಬರ್‌ ತಿಂಗಳಿನಲ್ಲಿ ಅಂದರೆ ಹಸ್ತ ಮಳೆಯಲ್ಲಿಬಿಟ್ಟು, ಫಸಲು ಫೆಬ್ರುವರಿಯಲ್ಲಿ ಕೊಯ್ಲಿಗೆ ಸಿದ್ದಗೊಳ್ಳುತ್ತದೆ. ಈ ಋತುವಿನಲ್ಲಿ ಫಸಲಿಗೆ ಹೆಚ್ಚಿನ ಬೇಡಿಕೆ ಇರುವುದಾದರು ಫಸಲು ವಿರಳ. ಈ ಋತುವಿನಲ್ಲಿ ಹೂವು ಬಿಡುವುದು ಕಡಿಮೆ; ಅದೇನಿದರದರೂ ಆಕಸ್ಮಿಕವಷ್ಟೇ.

ಹೀಗೆ ವರ್ಷದಲ್ಲಿ ಒಂದರನಂತರ ಮತ್ತೊಂದರಂತೆ ಸತತವಾಗಿ ಮೂರು ಫಸಲುಗಳನ್ನು ತೆಗೆದುಕೊಂಡಿದ್ದೇ ಆದರೆ ಮರಗಳ ಆರೋಗ್ಯ ಹಾಳಾಗುವುದು ಖಂಡಿತ. ಅದರ ಬದಲಾಗಿ ವರ್ಷದಲ್ಲಿ ಒಂದೇ ಒಂದು ವಾಣಿಜ್ಯ ಫಸಲನ್ನು ತೆಗೆದುಕೊಳ್ಳುವುದು ಸರಿಯಾದ ಕ್ರಮ.

ಉಪಚಾರ : ಉದಾಹರಣೆಗೆ ಚಳಿಗಾಲದ ಫಸಲನ್ನು ಅಪೇಕ್ಷಿಸಿದಲ್ಲಿ ನವೆಂಬರ್‌ನಿಂದ ಹಿಡಿದು ಜೂನ್‌ವರೆಗೆ ಬಿಟ್ಟ ಹೂಗಳನ್ನೆಲ್ಲಾ ಕಿತ್ತುಹಾಕಬೇಕು. ಬಿಡಿಹೂಗಳನ್ನು ಒಂದೊಂದಾಗಿ ಕಿತ್ತು ತೆಗೆಯುವುದು ಪ್ರಯಾಸದ ಕೆಲಸ. ಆದ್ದರಿಂದ ಈ ಅವಧಿಯಲ್ಲಿ ನೀರು ಹಾಯಿಸುವುದನ್ನು ನಿಲ್ಲಿಸಿದರೆ ಬಿಟ್ಟಹೂವೆಲ್ಲಾ ಕಾಯಿಕಚ್ಚದೆ ಉದುರಿಬೀಳುತ್ತವೆ; ಮರಗಳು ಜಡವಾಗಿ ಉಳಿದು, ವಿಶ್ರಾಂತಿ ಪಡೆಯುತ್ತವೆ. ಕೆಲವೊಮ್ಮೆ ಬುಡದ ಪಾತಿಯಲ್ಲಿನ ಮಣ್ಣನ್ನು ಅಗೆತಮಾಡಿ, ಸಣ್ಣಪುಟ್ಟ ಬೇರುಗಳನ್ನು ಸವರಿ, ಬಿಸಿಲಿಗೆ ಬಿಡುವುದಂಟು. ಎಲೆಗಳೆಲ್ಲಾ ಉದುರಿಬಿದ್ದು ಶರ್ಕರ ಪಿಷ್ಟಗಳು ಅಧಿಕ ಪ್ರಮಾಣದಲ್ಲಿ ಸಂಗ್ರಹಗೊಳ್ಳುತ್ತವೆ. ಮರಗಳಿಗೆ ಸಾಕಷ್ಟು ವಿಶ್ರಾಂತಿ ಸಿಗುತ್ತದೆ. ಅನಂತರ ಸಾಕಷ್ಟು ಗೊಬ್ಬರ ನೀರುಗಳನ್ನು ಕೊಟ್ಟಲ್ಲಿ ಸಮೃದ್ದ ಚಿಗುರು ಮೂಡಿ ಸಾಕಷ್ಟು ಹೂವು ಬಿಟ್ಟು ಕಾಯಿಕಚ್ಚುತ್ತವೆ.

ಹೂವು ಅರಳಿ ಪರಾಗಸ್ಪರ್ಶಗೊಳ್ಳುವಿಕೆ : ಹೂವು ಮೊಗ್ಗುಗಳು ಬಿರಿದು ಅರಳುವುದು ಬೆಳಿಗ್ಗೆ ಹೊತ್ತಿನಲ್ಲಿ. ಶೇ. ೬೦ರಷ್ಟು ಹೂಮೊಗ್ಗುಗಳು ಬೆಳಿಗ್ಗೆ ೫. ೩೦ರ ಸಮಯದಲ್ಲಿ ಅರಳಿದ್ದಾಗಿ ಧಾರವಾಡದ ಕೃಷಿ ಕಾಲೇಜಿನಲ್ಲಿ ಕೈಗೊಂಡ ಸಂಶೋಧನೆಗಳಲ್ಲಿ ಕಂಡುಬಂದಿದೆ. ದೆಹಲಿಯ ಪರಿಸ್ಥಿತಿಗಳಲ್ಲಿ ಸರ್ದಾರ್, ಚಿಟ್ಟಿದಾರ್ ಮತ್ತು ರೆಡ್ ಫ್ಲೆಶ್ಡ್ ತಳಿಗಳಲ್ಲಿ ಅಧಿಕ ಸಂಖ್ಯೆ ಹೂವು ಬೆಳಿಗ್ಗೆ ೪ ರಿಂದ ೬ರ ಒಳಗೆ ಅರಳಿದರೆ ಸೀಡ್ಲೆಸ್ ಮತ್ತು ಸಫೇದ ತಳಿಗಳಲ್ಲಿ ಬೆಳಿಗ್ಗೆ ೬ ರಿಂದ ೮ ರವರೆಗೆ ಅಧಿಕ ಸಂಖ್ಯೆಯ ಹೂವು ಅರಳಿದ್ದಾಗಿ ತಿಳಿದುಬಂದಿದೆ. ಹೂವು ಬಿರಿದ ಸುಮಾರು ಒಂದು ತಾಸಿನ ನಂತರ ಪರಾಗ ಬಿರಿಯುತ್ತವೇ. ಶೇ. ೮೫ರಷ್ಟು ಪರಾಗ ಫಲಪ್ರದವಿರುತ್ತವೆ. ಇದರಲ್ಲಿ ಸ್ವ-ಪರಾಗಸ್ಪರ್ಶಕ್ಕಿಂತ ಅನ್ಯ-ಪರಾಗ ಸ್ಪರ್ಶದಲ್ಲಿ ಜೇಲುನೊಣ (ಏಪಿಸ್ ಇಂಡಿಕ)ಮತ್ತು ಆಂಡ್ರೆನ ಪ್ರಭೇದದ ಕೀಟಗಳು ನೆರವಾಗುತ್ತವೆ. ಧಾರವಾಡದ ಕೃಷಿ ಕಾಲೇಜಿನಲ್ಲಿ, ಸರ್ದಾರ್ ತಳಿಯಲ್ಲಿ ಕಂಡುಬಂದ ವಿವಿಧ ಬಗೆಯ ಪರಾಗಸ್ಪರ್ಶದಲ್ಲಿನ ಕಾಯಿಕಚ್ಚಿದ ಪ್ರಮಾಣವನ್ನು ಈ ಕೆಳಗೆ ಕೊಟ್ಟಿದೆ.

ಪರಾಗ ಸ್ಪರ್ಶದ ಬಗೆ ಶೇ. ಕಾಯಿಕಚ್ಚಿದ ಪ್ರಮಾಣ
ಹೂ ಮೊಗ್ಗುಗಳನ್ನು ಹಾಗೆಯೇ ಬಿಟ್ಟಾಗ ೩೭
ಹೂ ಮೊಗ್ಗುಗಳಲ್ಲಿ ಕಾಗದದ ಚೀಲ ಹೊದಿಸಿಟ್ಟಾಗ ೨೦
ಹೂ ಮೊಗ್ಗುಗಳಲ್ಲಿನ ಕೇಸರಗಳನ್ನು ತೆಗೆದುಹಾಕಿ, ಕೈಯಿಂದ ಪರಾಗಸ್ಪರ್ಶ ಮಾಡಿ ಕಾಗದದ ಚೀಲ ಹೊದಿಸಿ ಕಟ್ಟಿದಾಗ. – ೭೬

ಕಾಯಿ ಕಚ್ಚುವುದು ಮತ್ತು ಅವುಗಳ ವೃದ್ಧಿ : ಸೀಬೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೂವು, ಪರಾಗ ಸ್ಪರ್ಶಗೊಂಡು ಕಾಯಿಕಚ್ಚುತ್ತವೆಯಾದರು ಅವುಗಳ ಬಹುಪಾಲು ಹೀಚು ನಾನಾ ಕಾರಣಗಳಿಂದಾಗಿ ಉದುರಿಬೀಳುತ್ತವೆ. ಕಾಯಿಗಳು ಬಲಿತು ಪಕ್ವಗೊಳ್ಳುವ ಹೊತ್ತಿಗೆ ಕೇವಲ ಶೇ. ೩೪ರಿಂದ ೫೬ ರಷ್ಟು ಮಾತ್ರ ಉಳಿಯುತ್ತವೆ ಬೀಜ ರಹಿತ ಬಗೆಗಳಲ್ಲಿ ಅದರ ಪ್ರಮಾಣ ಶೇ. ೬ರಷ್ಟು ಮಾತ್ರ. ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹೀಚು ಉದುರಿಬಿದ್ದರೆ ಇಳುವರಿಯ ಪ್ರಮಾಣ ಕುಸಿಯುತ್ತದೆ. ಅದನ್ನು ತಡೆಯಲು ೧೫ ರಿಂದ ೩೦ ಪಿಪಿಎಂ ಸಾಮರ್ಥ್ಯದ ಜೆಬ್ಬಿರೆಲ್ಲಿಕ್ ಆಮ್ಲವನ್ನು ಸಿಂಪಡಿಸಬಹುದು. ಅದೇ ರೀತಿಯಾಗಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕಾಯಿಕಚ್ಚಿದ್ದೇ ಆದರೆ ಹಣ್ಣುಗಳ ಗಾತ್ರ ಕುಸಿಯುವುದು ಸಹಜ. ಹೆಚ್ಚುವರಿ ಸಂಖ್ಯೆಯ ಹೀಚುಗಳನ್ನು ತೆಳುಗೊಳಿಸಲು ೧೦೦ ಪಿಪಿಎಂ ಸಾಮರ್ಥ್ಯದ ನ್ಯಾಫ್ತಲಿನ್ ಅಸೆಟಿಕ್ ಆಮ್ಲ ಇಲ್ಲವೇ ೩೦ ಪಿಪಿಎಂ ೨, ೪-ಡಿ ಚೋದಕವನ್ನು ಸಿಂಪಡಿಸಬಹುದು.

ಸೀಬೆಯಲ್ಲಿ ಪರಾಗಸ್ಪರ್ಶವಿಲ್ಲದೆ ಕಾಯಿಕಚ್ಚುವಿಕೆ ಕಂಡುಬಂದಿಲ್ಲ. ಬೀಜರಹಿತ ಬಗೆಗಳಲ್ಲಿ ಸೂಕ್ತ ಸಾಮರ್ಥದ ಜೆಬ್ಬೆರೆಲ್ಲಿಕ್ ಆಮ್ಲವನ್ನು ಸಿಂಪಡಿಸಿದಲ್ಲಿ ಅಧಿಕ ಸಂಖ್ಯೆಯಲ್ಲಿ ಕಾಯಿಕಚ್ಚಬಲ್ಲವು. ಅಂತಹ ಹಣ್ಣು ನಿರ್ದಿಷ್ಟ ಆಕಾರ ಹೊಂದಿರದೆ ಉದ್ದನಾಗಿ, ಓರೆಯಾಗಿದ್ದು, ೬ ರಿಂದ ೮ ಉದ್ದ ಏಣುಗಳಿಂದ ಕೂಡಿರುತ್ತವೆ.

ಹೀಚು ಕ್ರಮೇಣ ವೃದ್ಧಿಹೊಂದಿ ಪಕ್ವಗೊಳ್ಳುವ ಹಂತಕ್ಕೆ ತಲಪುತ್ತವೆ. ಹಣ್ಣಿನ ವೃದ್ಧಿಯಲ್ಲಿ ತೀವ್ರಗತಿಯ ಎರಡು ಹಂತಗಳು ಮತ್ತು ಅವೆರಡರ ನಡುವೆ ಮಂದಗತಿಯ ಒಂದು ಹಂತವೂ ಇರುತ್ತವೆ. ಮೊದಲ ಹಂತದಲ್ಲಿ ಕಾಯಿಗಳ ಗಾತ್ರ ಮತ್ತು ತೂಕಗಳ ನಿಧಾನವಾಗಿ ಹೆಚ್ಚುತ್ತಾ ಹೋಗಿ ಅನಂತರ ಸ್ಥಗಿತಗೊಳ್ಳುತ್ತವೆ. ಅದರನಂತರ ಅವು ಹಣ್ಣು ಪಕ್ವಗೊಳ್ಳುವ ತನಕ ಏರುಮುಖನಾಗಿ ಇರುತ್ತವೆ.

ಕೆಲವೊಂದರಲ್ಲಿ ತಿರುಳು ಬಿಳಿ ಬಣ್ಣದಿಂದ ಕೆನ್ನೀಲಿ ಬಣ್ಣಕ್ಕೆ ಮಾರ್ಪಡುತ್ತದೆ. ಅದೇ ರೀತಿ ಅಸ್ಕಾರ್ಬಿಕ್ ಆಮ್ಲ, ಒಟ್ಟು ಕರಗಿದ ಘನ ಪದಾರ್ಥಗಳು ಮತ್ತು ಸಕ್ಕರೆಗಳ ಪ್ರಮಾಣ ಪ್ರಾರಂಭದಲ್ಲಿ ಕಡಿಮೆ ಇದ್ದು, ಕ್ರಮೇಣ ಹೆಚ್ಚುತ್ತಾ ಹೋಗುತ್ತವೆ. ಅನಂತರ ಮತ್ತೆ ಮಂದಗತಿಗೆ ಬದಲಾಗುವುವು. ದೋರೆಗಾಯಿಯಾಗಿ ಪೂರ್ಣಪಕ್ವಗೊಳ್ಳುವ ಹೊತ್ತಿಗೆ ಅವುಗಳ ಪ್ರಮಾಣ ಗರಿಷ್ಟವಿರುತ್ತದೆ.

ಬೇಸಾಯಕ್ರಮಗಳಪಟ್ಟಿ

ಜೂನ್ : ಈಗಾಗಲೇ ಫಸಲು ಬಿಡುತ್ತಿರುವ ಗಿಡಮರಗಳ ಸಾಲುಗಳ ನಡುವೆ ಉಳುಮೆ ಮಾಡಿ, ಹಸಿರು ಗೊಬ್ಬರದ ಬೆಳೆಗಳನ್ನು ಬಿತ್ತಲು ಸಕಾಲ. ಮೊದಲ ಕಂತಿನ ಗೊಬ್ಬರಗಳನ್ನು ಕೊಡುವ ಸಮಯ. ಹೊಸದಾಗಿ ತೋಟ ಎಬ್ಬಿಸುವವರು ಸೂಕ್ತ ತಳಿಯ ಗಿಡಗಳನ್ನು ಸಂಗ್ರಹಿಸಿ ನೆಡುವ ಕೆಲಸವನ್ನು ಕೈಗೊಳ್ಳಬಹುದು.

ಜುಲೈಆಗಸ್ಟ್ : ಗಿಡಗಳನ್ನು ನೆಡುವ ಕೆಲಸವನ್ನು ಮುಂದುವರಿಸಬಹುದು. ಅಂತರ ಬೆಳೆಗಳನ್ನು ಬಿತ್ತುವ ಕೆಲಸವನ್ನು ಮುಗಿಸಬಹುದು. ದೊಡ್ಡ ಗಿಡಗಳಲ್ಲಿ ಗೂಟಿ ಕಟ್ಟುವುದು ಮತ್ತು ಹೊಸಗಿಡಗಳಲ್ಲಿ ಹೂವು-ಹೀಚುಗಳನ್ನು ಕಿತ್ತು ಹಾಕುವುದು, ಬೇರು ಚಿಗುರನ್ನು ಚಿವುಟುವುದು ಮುಂತಾಗಿ ಕೈಗೊಳ್ಳಬಹುದು. ನೆಲದತ್ತ ಬಾಗಿದ ರೆಂಬೆಗಳನ್ನು ಮೇಲೆಕ್ಕೆತ್ತಿ ಕಟ್ಟಬೇಕು. ಆ ಅವಧಿಯಲ್ಲಿ ಹಣ್ಣು ಕೊಯ್ಲಿಗೆ ಬರಲು ಪ್ರಾರಂಭಿಸುತ್ತವೆ. ಪಕ್ವಕ್ಕೆ ಬಂದ ಹಣ್ಣನ್ನು ಜೋಪಾನವಾಗಿ ಬಿಡಿಸಿ ತೆಗೆಯಬೇಕು.

ಸೆಪ್ಟೆಂಬರ್ಅಕ್ಟೋಬರ್ : ಹಣ್ಣಿನ ಕೊಯ್ಲು ಭರದಿಂದ ಸಾಗುತ್ತದೆ. ಹಸಿರು ಗೊಬ್ಬರದ ಬೆಳೆಯನ್ನು ಉಳುಮೆಮಾಡಿ, ಮಣ್ಣಿನಲ್ಲಿ ಸೇರಿಸಬೇಕು. ಪಾತಿಗಳನ್ನು ಸರಿಪಡಿಸಿ ಕಳೆಗಳನ್ನು ಕಿತ್ತು ಹಾಕಬೇಕು. ಎರಡನೇ ಕಂತಿನ ಗೊಬ್ಬರಗಳನ್ನು ಕೊಡುವ ಸಮಯ.

ನವೆಂಬರ್ : ಚೆನ್ನಾಗಿ ಬೇರು ಬಿಟ್ಟ ಗೂಟಿಗಿಡಗಳನ್ನು ತಾಯಿ ಮರಗಳಿಂದ ಬೇರ್ಪಡಿಸಿ ತೆಗೆಯಲು ಸಕಾಲ. ಮಳೆಗಾಲ ಮುಗಿಯುವ ಸಮಯ. ತೇವ ಸಾಕಷ್ಟಿಲ್ಲದಿದ್ದರೆ ತೆಳ್ಳಗೆ ನೀರು ಹಾಯಿಸಬಬೇಕಾಗುತ್ತದೆ.

ಡಿಸೆಂಬರ್ : ಹಣ್ಣೆಲ್ಲಾ ಮುಗಿದಿರುತ್ತವೆ. ನೆಲ ಹಸಿ ಇದಾಗಲೇ ಹಗುರವಾಗಿ ಉಳುಮೆ ಮಾಡಬಹುದು. ಸಸ್ಯ ಸಂರಕ್ಷಣೆ ಕೈಗೊಳ್ಳಬಹುದು.

ಜನೆವರಿ : ಫಸಲು ಮುಗಿದಿರುತ್ತವೆ. ಗಿಡಗಳಿಗೆ ವಿಶ್ರಾಂತಿ ಸಿಗುವ ಸಮಯ.

ಫೆಬ್ರವರಿ : ಗಿಡಗಳು ವಿಶ್ರಾಂತಿಯಲ್ಲಿರುತ್ತವೆ. ಕಾಂಡಕೊರೆಯುವ ಹುಳುಗಳಿಗಾಗಿ ಕಣ್ಣಾಡಿಸಬೇಕು. ಕಾಂಡದಲ್ಲಿ ರಂಧ್ರಗಳಿದ್ದರೆ ಅವುಗಳೊಳಕ್ಕೆ ಪೆಟ್ರೋಲ್ ಎಣ್ಣೆಯನ್ನು ಪಿಚಕಾರಿಮಾಡಿ, ರಂಧ್ರಗಳ ಬಾಯಿಗೆ ಕೆಸರು ಮಣ್ಣನ್ನು ಮೆತ್ತಬೇಕು.

ಮಾರ್ಚ್ : ಎಲೆಗಳುದುರಿ ಮರಗಳು ಪೂರ್ಣ ವಿಶ್ರಾಂತಿಯಲ್ಲಿರುತ್ತವೆ.

ಏಪ್ರಿಲ್ : ಮರಗಳ ವಿಶ್ರಾಂತಿ ಮುಂದುವರೆಯುತ್ತದೆ. ಕೀಟಗಳಿಗಾಗಿ ಕಣ್ಣಾಡಿಸಬೇಕು. ಒಣ ರೆಂಬೆಗಳಿದ್ದಲ್ಲಿ ಸವರಿ ತೆಗೆಯಬೇಕು. ಸವರುಗಾಯಗಳಿಗೆ ಬೋರ್ಡೊಸರಿಯನ್ನು ಬಳಿಯಬೇಕು. ಬಿಸಿಲಿನ ಝಳ ಜಾಸ್ತಿ ಇರುತ್ತದೆ.

ಮೇ : ಬಿಸಿಲಿನ ತಾಪ ಗರಿಷ್ಟವಿರುತ್ತದೆ. ಒಂದೆರಡು ಮಳೆಗಳಾಗುವ ಸಂಭವ ಇರುತ್ತದೆ. ಚಿಗುರಿ ತಳ್ಳುವ ಸಮಯ. ಗೊಬ್ಬರ ಗೋಡುಗಳಿಗೆ ವ್ಯವಸ್ಥೆಮಾಡಬೇಕು. ಹೊಸ ತೋಟ ಮಾಡುವವರು ಗಿಡಗಳನ್ನು ಕಾಯ್ದಿರಿಸಬೇಕು. ಜಾಗದ ಆಯ್ಕೆಯನಂತರ ಗುಂಡಿಗಳನ್ನು ತೆಗೆದು ಬಿಸಿಲಿಗೆ ಬಿಡಬೇಕು.