ಬಹುತೇಕ ತೋಟಗಾರಿಕೆ ಬಳೆಗಳಂತೆ ಸೀಬೆಯಲ್ಲೂ ಬೀಜ ಹಾಗೂ ರೆಂಬೆಗಳಿಂದ ಸಸಿಗಳನ್ನು ಅಭಿವೃದ್ಧಿಪಡಿಸಬಹುದು. ಬೀಜಗಳಿಂದ ಪಡೆಯುವ ಸಸ್ಯಗಳು ಬಹು ಎತ್ತರಕ್ಕೆ ಬೆಳೆದು ತಡವಾಗಿಫಸಲಿಗೆ ಬರುತ್ತವೆ. ಆದರೆ ಗೂಟಿ, ಕಸಿ ಮುಂತಾದ ನಿರ್ಲಿಂಗ ಪದ್ಧತಿಗಳಿಂದ ಪಡೆಯುವ ಸಸಿಗಳು ಬೇಗ ಫಸಲಿಗೆ ಬಂದು ತಾಯಿಗಿಡಗಳನ್ನೇಹೋಲುತ್ತವೆ ಹಾಗೂ ಅಧಿಕ ಇಳುವರಿ ಕೊಡಬಲ್ಲವು.

ರೈತರು ಅಧಿಕ ಇಳುವರಿ ಕೊಡುವ ಗಿಡಗಳನ್ನು, ತಮ್ಮ ತೋಟದಲ್ಲೇ ಗುರುತಿಸಿಕೊಂಡು ವಿಧಾನಗಳಿಂದ ಸಸಿಗಳನ್ನು ಪಡೆಯಬಹುದು. ಇವುಗಳಲ್ಲಿ ರೆಂಬೆಗಳಿಂದ ಬೇರುಬರಿಸುವ ವಿಧಾನ, ಗೂಟಿ ವಿಧಾನ, ರೆಂಬೆಗಳನ್ನು ಮಣ್ಣಿನಲ್ಲಿ ಊರಿ ಬೇರು ಬರಿಸುವ ವಿಧಾನ ಹಾಗೂ ವಿವಿಧ ಬಗೆಯ ಕಸಿಕಟ್ಟುವ ಪದ್ಧತಿಗಳನ್ನು ಕುರಿತು ಪ್ರಸ್ತುತ ಅಧ್ಯಾಯದಲ್ಲಿ ಚರ್ಚಿಸಿದೆ.

ಸೀಬೆಯನ್ನು ಬೀಜ ಊರಿ ಹಾಗೂ ನಿರ್ಲಿಂಗ ವಿಧಾನಗಳಲ್ಲಿ ವೃದ್ಧಿ ಮಾಡಬಹುದು. ಬೀಜ ರಹಿತ ಬಗೆಗಳಲ್ಲಿ ನಿರ್ಲಿಂಗ ಪದ್ಧತಿಯೇ ಅಧಾರ. ಹಿಂದೆ ಬೀಜ ಪದ್ಧತಿಯನ್ನು ಹೆಚ್ಚಾಗಿ ಅನುಸರಿಸಲಾಗುತ್ತಿತ್ತು. ಆದರೆ ಅತ್ತೀಚಿನ ವರ್ಷಗಳಲ್ಲಿಅದನ್ನು ಕೈಬಿಟ್ಟು ನಿರ್ಲಿಂಗ ವಿಧಾನಗಳಲ್ಲಿ ವೃದ್ಧಿಪಡಿಸಿದ ಸಸಿಗಳಿಗಿಂತ ಹೆಚ್ಚುಕಾಲ ಬದುಕಿರಬಲ್ಲವು.

ಬೀಜಪದ್ಧತಿ

ಬೀಜ ಊರಿ ಬೆಳೆದ ಸಸಿಗಳು ತಾಯಿ ಪೀಳಿಗೆಯಂತೆ ಇರುವುದಿಲ್ಲ. ಅಂತಹ ಮರಗಳಲ್ಲಿ ಬಹಳಷ್ಟು ವ್ಯತ್ಯಾಸ ಕಂಡುಬರುತ್ತದೆ. ಅವು ದೊಡ್ಡದಾಗಿ ಹಾಗೂ ಎತ್ತರಕ್ಕೆ ಬಳೆಯುತ್ತವೆ. ಹಾಗಾಗಿ ಬೇಸಾಯ ಕೆಲಸಗಳಿಗೆ ತೊಂದರೆಯಾಗುತ್ತದೆ. ಅವು ಚೊಚ್ಚಲ ಫಸಲುಬಿಡಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತವೆ. ಈ ಎಲ್ಲಾ ಕಾರಣಗಳಿಂದಾಗಿ ನಿರ್ಲಿಂಗ ವಿಧಾನಗಳನ್ನು ಅನುಸರಿಸುವುದು ಒಳ್ಳೆಯದು. ಬೇರುಸಸಿಗಳನ್ನು ಎಬ್ಬಿಸುವುದಿದ್ದಲ್ಲಿ ಬೀಜ ಪದ್ಧತಿ ಲಾಭದಾಯಕ. ಮಿಶ್ರತಳಿಗಳನ್ನು ಉತ್ಪಾದಿಸುವಾಗ ಸಂಕರಣ ಬೀಜವನ್ನು ಬಿತ್ತಿ ಬೆಳೆದು ಅನಂತರ ಅವುಗಳನ್ನು ನಿರ್ಲಿಂಗ ವಿಧಾನಗಳಲ್ಲಿ ವ್ರುದ್ಧಿಮಾಡುಲಾಗುತ್ತದೆ. ಅದೇ ರೀತಿ ಸರ್ದಾರ್, ಬೆಹಾಟ್ ಕೋಕೋನಟ್, ಮಿರ್ಜಾಪುರ್ ಮುಂತಾದ ಆಯ್ಕೆಗಳು ಬೀಜಸಸಿಗಳಲ್ಲಿನವುಗಳೇ ಆಗಿವೆ. ಅನಂತರ ಅವುಗಳನ್ನು ನಿರ್ಲಿಂಗ ವಿಧಾನಗಳಲ್ಲಿ ವ್ರುದ್ಧಿಮಾಡಿ ಬೇಸಾಯಕ್ಕೆ ಬಿಡುಗಡೆ ಮಾಡಲಾಯಿತು.

ಹಣ್ಣುಗಳನ್ನು ಆರಿಸಿ, ಬೀಜ ಬೇರ್ಪಡಿಸುವುದು : ಈ ಉದ್ದೇಶಕ್ಕೆ ಪ್ರಸಕ್ತ ಋತುವಿನ, ರೋಗ-ಕೀಟಗಳಿಂದ ಮುಕ್ತವಿರುವ, ಪೂರ್ಣ ಬಲಿತು ಪಕ್ವಗೊಂಡ ಹಾಗೂ ದೊಡ್ಡ ಗಾತ್ರದ ಹಣ್ಣುಗಳನ್ನು ಆರಿಸಿ, ಹೋಳುಗಳಾಗಿ ಮಾಡಿ ತಿರುಳನ್ನು ಕೈಯ್ಯಲ್ಲಿ ಹಿಚುಕಿ ನೀರಿಗೆ ಸುರಿಯಬೇಕು. ಚೆನ್ನಾಗಿ ಉಜ್ಜಿ ತೊಳೆದರೆ ತಿರುಳು ಮತ್ತು ಬೀಜ ಬೇರ್ಪಡಿಸುತ್ತವೆ. ನೀರಿನ ತಳ ಭಾಗದಲ್ಲಿ ಸಂಗ್ರಹಗೊಂಡ ಬೀಜ ಗಟ್ಟಿ ಬೀಜವಾಗುತ್ತವೆ. ತೇಲುವ ಬೀಜ ಜೊಳ್ಳು ಬೀಜ. ತೇಲುತ್ತಿರುವ ತಿರಿಳು ಮತ್ತು ಜೊಳ್ಳು ಬೀಜಗಳನ್ನು ಎತ್ತಿ ಹೊರಹಾಕಿ, ನೀರನ್ನು ನಿಧಾನವಾಗಿ ಬಗ್ಗಿಸಿದರೆ, ತಳಬಾಗದಲ್ಲಿನ ಬೀಜ ಸಿಕ್ಕಂತೆಯೇ. ಅವುಗಳನ್ನು ಹೊರತೆಗೆದು, ನೆರಳಿನಲ್ಲಿ ತೆಳ್ಳಗೆ ಹರಡಿ ಒಣಗಿಸಬೇಕು. ಒಂದು ವೇಳೆ ಬಿತ್ತುವ ಕೆಲಸ ಇನ್ನೂ ತಡವಿದ್ದಲ್ಲಿ ಅವುಗಳನ್ನು ಸೂಕ್ತ ಬೀಜೋಪಚಾರಮಾಡಿ, ಗಾಳಿಯಾಡದ ಡಬ್ಬಿಗಳಿಗೆ ಸುರಿದು, ಮುಚ್ಚಳ ಬಿಗಿದು, ಜೋಪಾನ ಮಾಡಿಡಬಹುದು.

ಬೀಜ ಮಾಡುವ ಉದ್ದೇಶಕ್ಕೆ ಚಳಿಗಾಲದ ಫಸಲಿನ ಹಣ್ಣುಗಳನ್ನು ಬಳಸುವುದು ಉತ್ತಮ. ಬೀಜ ಸುಮಾರು ಒಂದು ವರ್ಷದವರೆಗೆ ಜೀವಂತವಿರುತ್ತವೆ. ಅವುಗಳ ಜೀವಂತ ಅವಧಿಯನ್ನು ಹೆಚ್ಚಿಸಲು ಸೂಕ್ತ ಸಾಮರ್ಥ್ಯದ ಫೆರೊಲಿಕ್ ಆಮ್ಲ, ಪೊಟ್ಯಾಷಿಯಂ ನೈಟ್ರೇಟ್ ಇಲ್ಲವೇ ಪ್ಯಾರಾ ಹೈಡ್ರಾಕ್ಸಿ ಬೆಂಜೋಯಿಕ್ ಆಮ್ಲ ಬಳಾಸಬಹುದು. ಬೀಜ ಬಲು ಗಡುಸು ಹಾಗಾಗಿ ಅವು ಬೇಗ ಮೊಳೆಯುವುದಿಲ್ಲ. ಬಿತ್ತುವ ಮುಂಚೆ ಅವುಗಳನ್ನು ನೀರಿನಲ್ಲಿ ಎರಡು ವಾರಗಳ ಕಾಲ ನೆನೆಸಿಟ್ಟು ಅನಂತರ ಬಿತ್ತಿದಲ್ಲಿ ಅವು ಬೇಗ ಮೊಳಕೆಯೊಡೆಯುತ್ತವೆ. ಬೀಜವನ್ನು ಎತ್ತರಿಸಿದ ಒಟ್ಲು ಪಾತಿಗಳಲ್ಲಿ ಬಿತ್ತುವುದು ಒಳ್ಳೆಯ ಕ್ರಮ.

ಒಟ್ಲು ಪಾತಿಗಳನ್ನು ಸಿದ್ಧಗೊಳಿಸಿ, ಬೀಜ ಬಿತ್ತುವುದು : ಒಟ್ಲು ಎಬ್ಬಿಸುವ ಜಾಗವನ್ನು ಚನ್ನಾಗಿ ಅಗೆತಮಾಡಿ, ಹೆಂಟೆಗಳನ್ನು ಒಡೆದು ಪುಡಿಮಾಡಿ, ಕಳೆಕಸ, ಕಲ್ಲು ಮುಂತಾದ ಆರಿಸಿ ತೆಗೆದು ಎತ್ತರಿಸಬೇಕು. ಒಟ್ಲು ಪಾತಿಗಳು ೭. ೫ ಮೀ ಉದ್ದ, ೧. ೨ ಮೀ ಅಗಲ ಮತ್ತು ೧೦-೧೫ ಸೆಂ. ಮೀ. ಎತ್ತರ ಇದ್ದರೆ ಅನುಕೂಲ. ಪ್ರತಿಪಾತಿಗೆ ೨೦-೩೦ ಕೆ. ಜಿ. ಕಳಿತ ಕೊಟ್ಟಿಗೆ ಗೊಬ್ಬರ ಹರಡಿ, ಮಣ್ಣಿನಲ್ಲಿ ಬೆರೆಸಬೇಕು. ಬೀಜ ಬಿತ್ತಲು ಜೂನ್-ಜುಲೈ ಸೂಕ್ತಕಾಲ. ಬೀಜ ಹಾಗೂ ಒಟ್ಲು ಪಾತಿಗಳನ್ನು ಯಾವುದಾದರು ಪಾದರಸಯುಕ್ತ ಶಿಲೀಂಧ್ರನಾಶಕದಿಂದ ಉಪಚರಿಸುವುದು ಅಗತ್ಯ. ಬೀಜವನ್ನು ೭. ೫ ಸೆಂ. ಮೀ. ಅಂತರದ ಅಡ್ಡಗೀರು ಸಾಲುಗಳಲ್ಲಿ ತೆಳ್ಳಗೆ ಬಿತ್ತಬೇಕು. ಬಿತ್ತುವ ಆಳ ೧. ೨೫ ಸೆಂ. ಮೀ. ಇದ್ದರೆ ಸಾಕು. ಬಿತ್ತಿದನಂತರ ತೆಳ್ಳಗೆ ಪುಡಿಮಣ್ಣು ಇಲ್ಲವೇ ಗೊಬ್ಬರ ಉದುರಿಸಿ, ನೀರು ಹನಿಸುವ ಡಬ್ಬಿಯಿಂದ ನೀರುಹಾಕಬೇಕು. ಪ್ರತಿದಿನ ನೀರು ಹಾಕುವುದು ಅಗತ್ಯ. ಬೀಜ ಸುಮಾರು ೨ ರಿಂದ ೪ ವಾರಗಳಲ್ಲಿ ಮೊಳೆಯುತ್ತವೆ. ಎಳೆಯ ಸಸಿಗಳನ್ನು ಕಿತ್ತು ಸಮತಟ್ಟಾದ ಒಟ್ಲು ಪಾತಿಗಳಲ್ಲಿ ನೆಡಬೇಕು.

ಎತ್ತರಿಸಿದ ಒಟ್ಲು ಪಾತಿಗಳಲ್ಲಿನ ಸಸಿಗಳು ಮಳೆಗಾಲದ ಕಡೆಯ ಹೊತ್ತಿಗೆ ಸುಮಾರು ೭. ೫ ಸೆಂ. ಮೀ. ಎತ್ತರಕ್ಕೆ ಬೆಳೆದಿರುತ್ತವೆ. ಆಗ ಅವುಗಳನ್ನು ಜೋಪಾನವಾಗಿ ಕಿತ್ತು, ಸಮತಟ್ಟಾದ ಒಟ್ಲು ಪಾತಿಗಳಲ್ಲಿ ೨೨. ೫ ಸೆಂ. ಮೀ. ಅಂತರದ ಸಾಲುಗಳಲ್ಲಿ ೧೦ ಸೆಂ. ಮೀ. ದೂರಕ್ಕೆ ನೆಟ್ಟು ನೀರುಕೊಡಬೇಕು. ಅವು ಮುಂದಿನ ಮಳೆಗಾಲದ ಪ್ರಾರಂಭಕ್ಕೆ ಸುಮಾರು ೩೦-೪೫ ಸೆಂ. ಮೀ. ಎತ್ತರಕ್ಕೆ ಬೆಳೆದು ೧. ೨೫ ಸೆಂ. ಮೀ. ದಪ್ಪಕಾಂಡದಿಂದ ಕೂಡಿರುತ್ತವೆ. ಆಗ ಅವುಗಳನ್ನು ಹೆಪ್ಪು ಸಮೇತ ಕಿತ್ತು ಪಾಲಿಥೀನ್ ಚೀಲಗಳಿಗೆ ಇಲ್ಲವೆ ಸಣ್ಣಗಾತ್ರದ ಕುಂಡಗಳಿಗೆ ವರ್ಗಾಯಿಸಬೇಕು. ಅವುಗಳನ್ನು ಕಸಿಮಾಡುವ ಉದ್ದೇಶಕ್ಕೆ ಬೇರು ಸಸಿಗಳನ್ನಾಗಿ ಬಳಸಿಕೊಳ್ಳಬಹುದು.

ನಿರ್ಲಿಂಗವಿಧಾನ

ಇದು ಸುಲಭದ ಪದ್ಧತಿಯಾಗಿದೆ. ಈ ಪದ್ಧತಿಯಲ್ಲಿ ವೃದ್ಧಿಪಡಿಸಿದ ಸಸಿಗಳು ತಾಯಿ ಗಿಡದಂತೆಯೇ ಇರುತ್ತವೆ. ಅವು ಎತ್ತರಕ್ಕೆ ಬೆಳೆಯದೆ ಗಿಡ್ಡನಾಗಿದ್ದು, ಬೇಸಾಯ ಕೆಲಸಗಳು ಸುಲಭವಿರುತ್ತವೆ. ನಿರ್ಲಿಂಗ ಪದ್ಧತಿಯಲ್ಲಿ ವೃದ್ಧಿಪಡಿಸಿದ ಗಿಡಗಳು ನೆಟ್ಟ ವರ್ಷವೇ ಹೂವುಬಿಟ್ಟು ಕಾಯಿಕಚ್ಚುತ್ತವೆ. ಇದರಲ್ಲಿ ಬೇರುಸಸಿಗಳ ಲಾಭವನ್ನು ಪಡೆದುಕೊಳ್ಳಬಹುದು.

ನಿರ್ಲಿಂಗ ಪದ್ಧತಿಯಲ್ಲಿ ಹಲವಾರು ವಿಧಾನಗಳಿವೆ. ಅವುಗಳೆಂದರೆ ರೆಂಬೆಯ ಚಿಗುರು ತುಂಡುಗಳನ್ನು ಸೂಕ್ತ ಮಾಧ್ಯಮದಲ್ಲಿ ಊರಿ ಬೇರು ಬರುವಂತೆ ಮಾಡುವುದು, ಗೂಟಿ ಪದ್ಧತಿ, ರೆಂಬೆಗಳನ್ನು ಬಗ್ಗಿಸಿ ನೆಲದಲ್ಲಿ ಅಥವಾ ಕುಂಡದಲ್ಲಿ ಊರಿ ಬೇರು ಬರುವಂತೆ ಮಾಡುವುದು, ಮಣೆ ಅಥವಾ ಕುಪ್ಪೆ ಪದ್ಧತಿ, ಸಾಮೀಪ್ಯ ಕಸಿ ಪದ್ಧತಿ, ವೆನೀರ್ ಪದ್ಧತಿಯಲ್ಲಿ ಕಸಿಮಾಡುವುದು, ಮೆತುಕಟ್ಟಿಗೆ ಕಸಿವಿಧಾನ, ತೇಪೆ ಪದ್ಧತಿಯಲ್ಲಿ ಕಣ್ಣುಕೂಡಿಸಿ ಕಸಿಮಾಡುವುದು, ಪೋರ್ಕರ್ಟ್ ಪದ್ಧತಿಯಲ್ಲಿ ಕಸಿಮಾಡುವುದು, ಅಂಗಾಂಶ ಕೃಷಿ ಅಥವಾ ಊತಕ ಸಾಕಣೆ ಇತ್ಯಾದಿ.

. ರೆಂಬೆಗಳಿಂದ ಬೇರುಬರಿಸುವುದು : ಈ ಉದ್ಧೇಶಕ್ಕೆ ೧೦-೧೫ ಸೆಂ. ಮೀ. ಉದ್ದ ಇರುವಂತೆ ರೆಂಬೆ ಚಿಗುರುಗಳ ತುಂಡುಗಳನ್ನು, ಸಿದ್ಧಗೊಳಿಸಿ ಸೂಕ್ತ ಮಾಧ್ಯಮದಲ್ಲಿ ಊರಬೇಕು. ಅವುಗಳ ತುದಿಭಾಗದಲ್ಲಿ ಒಂದೆರಡು ಜೊತೆ ಎಲೆಗಳಿದ್ದಲ್ಲಿ ಉತ್ತಮ. ತುಂಡುಗಳ ಬುಡಭಾಗವನ್ನು ೫೦-೧೦೦ ಪಿಪಿಎಂ ಸಾಮರ್ಥ್ಯದ ನ್ಯಾಪ್ತಲಿನ್ ಅಸೆಟಿಕ್ ಆಮ್ಲ್ ಮತ್ತು ಇಂಡೋಲ್ ಅಸೆಟಿಕ್ ಆಮ್ಲಗಳ ಚೋದಕ ಮಿಶ್ರಣದಲ್ಲಿ ಒಂದೆರಡು ನಿಮಿಷಗಳ ಕಾಲ ಅದ್ದಿ ಅನಂತರ ಸ್ವಚ್ಛ ಮರಳಿನಲ್ಲಿ ನೆಟ್ಟರೆ ಅಧಿಕ ಸಂಖ್ಯೆಯ ಬೇರು ಸಾಧ್ಯ. ಇವುಗಳಿಗೆ ಒಂದೇ ತೆರನಾದ. ಆರ್ದ್ರತೆಯನ್ನು ಒದಗಿಸುವುದರ ಜೊತೆಗೆ ಮರಳಿನಲ್ಲಿ ಸಾಕಷ್ಟು ತೇವ ಇರುವುದು ಅಗತ್ಯ. ಉಷ್ಣತೆ ಬಹಳಷ್ಟು ಇರಬಾರದು ಈ ಕೆಲಸಕ್ಕೆ ತುಷಾರಯುಕ್ತ ಸಿಂಪರಣಾ ಯಂತ್ರವಿರುವ ಗಾಜಿನ ಮನೆಯಿದ್ದಲ್ಲಿ ಅನುಕೂಲ. ಈ ಕೆಲಸಕ್ಕೆ ಜೂನ್ ನಿಂದ ಸೆಪ್ಟೆಂಬರ ಸೂಕ್ತ ಕಾಲ. ಸುಮಾರು ೪ ರಿಂದ್ ೬ ವಾರಗಳಲ್ಲಿ ಅವು ಬೇರುಬಿಟ್ಟು ಚಿಗುರುತ್ತವೆ. ಎಚ್ಚರಿಕೆಯಿಂದ ಮಾಡಿದ್ದೇ ಆದರೆ ಹೆಚ್ಚಿನ ಯಶಸ್ಸು ಸಾಧ್ಯ. ಆದರೆ ಇದು ಸ್ವಲ್ಪ ಕಷ್ಟದಿಂದ ಕೂಡಿದ ಕೆಲಸವಾಗಿದೆ. ಸಾಕಷ್ಟು ಬೇರು ಮುಡಿದಾಗ ಒಂದೊಂದೇ ತುಂಡನ್ನು ಹೆಪ್ಪು ಸಮೆತ ಕಿತ್ತು, ಮಾಧ್ಯಮ ತುಂಬಿದ ಕುಂಡಗಳಿಗೆ ವರ್ಗಾಯಿಸಿ, ನೀರು ಕೊಡುತ್ತಿದ್ದಲ್ಲಿ ಮುಂದಿನ ಮುಂಗಾರು ಹೊತ್ತಿಗೆ ಗುಂಡಿಗಳಲ್ಲಿ ನೆಡಲು ಸಿದ್ಧವಿರುತ್ತವೆ.

. ಗೂಟಿ ವಿಧಾನ : ಇದಕ್ಕೆ ಏರ್ ಲೇಯರಿಂಗ್, ಚೈನೀಸ್, ಲೇಯರಿಂಗ್, ಮಾರ್ಕಟ್ಟೇಜ್ ಮುಂತಾದ ಹೆಸರುಗಳಿವೆ. ಎತ್ತರದಲ್ಲಿನ ರೆಂಬೆಗಳನ್ನು ನೆಲಕ್ಕೆ ಬಗ್ಗಿಸಿದರೆ ಅವು ಮುರಿಯುವ ಸಾಧ್ಯತೆ ಇರುತ್ತದೆ. ಹಾಗೆ ಮಾಡುವುದರ ಬದಲಾಗಿ ಮಾಧ್ಯಮವನ್ನು ಅಲ್ಲೀಗೆ ಒಯ್ದು, ಕಟ್ಟಲಾಗುವುದು. ಸೀಬೆ ಬೆಳೆಯಲ್ಲಿ ಈ ವಿಧಾನವನ್ನು ವಾಣಿಜ್ಯವಾಗಿ ಅನುಸರಿಸುತ್ತಾರೆ. ಇದರಿಂದ ದೊಡ್ಡ ಗಿಡಗಳು ಸಾಧ್ಯ. ಹಾಗಾಗಿ ಅವು ಬೇಗ ಫಸಲು ಬಿಡುತ್ತವೆ. ಈ ಕೆಲಸಕ್ಕೆ ಮಳೆಗಾಲ ಹೆಚ್ಚುಸೂಕ್ತ.

ಈ ಉದ್ದೇಶಕ್ಕೆ ೧-೨ ಸೆಂ. ಮೀ. ದಪ್ಪ ಇರುವ ರೆಂಬೆಗಳನ್ನು ತಾಯಿಮರದಲ್ಲಿ ಆರಿಸಿಕೊಳ್ಳಬೇಕು. ಅಂತಹ ರೆಂಬೆಗಳು ಬಲಿತಿದ್ದು ಕಂದು ಬಣ್ಣಕ್ಕೆ ತಿರುಗಿ ಸಾಕಷ್ಟು ಎಲೆಗಳಿಂದ ಕೂಡಿರುವುದು ಮುಖ್ಯ. ಅವುಗಳ ತುದಿಯಿಂದ ಸುಮಾರು ೪೫ ಸೆಂ. ಮೀ. ಕೆಳಗೆ ನಯವಾದ ಭಾಗದಲ್ಲಿ ೧-೨ ಸೆಂ. ಮೀ. ಅಗಲದ ತೋಗಟೆಯನ್ನು ವರ್ತುಲಾಕಾರದಲ್ಲಿ ಸುಲಿದು ತೆಗೆಯಬೇಕು. ತೊಗಟೆ ಸುಲಿದ ಭಾಗದಲ್ಲಿ ಬೆರಳುಗಳಾಡಿಸಿ, ಜಾರು ಪದಾರ್ಥವನ್ನು ಒರೆಸಿ, ಮೇಲ್ಕಚ್ಚಿನ ಒಂದೆರದು ಸೆಂ. ಮೀ. ಗಳಷ್ಟು ಉದ್ದದವರೆಗೆ ಇಂಡೋಲ್ ಅಸೆಟಿಕ್ ಆಮ್ಲ ಅಥವಾ ಮತ್ತಾವುದಾದರು ಚೋದಕ ಹಚ್ಚಿ. ಅನಂತರ ನೀರಿನಲ್ಲಿ ತೊಯ್ಯಿಸಿದ ಸ್ಫ್ಯಾಗ್ನಂಮಾಸ್, ವರ್ಮಿಕ್ಯುಲೈಟ್ ಅಥವಾ ತೆಂಗಿನ ನಾರಿನ ಪುಡಿಯನ್ನು ಉಂಡೆಯಂತೆ ಹೊದಿಸಿ ಪ್ಲಾಸ್ಟಿಕ್ ಹಾಳೆಯಿಂದ ಸುತ್ತಿ, ಎರಡೂ ತುದಿಗಳಲ್ಲಿ ದಾರದಿಂದ ಬಿಗಿದು ಕಟ್ಟಬೇಕು. ಈ ಕೆಲಸಕ್ಕೆ ಮಳೆಗಾಲ ಹೆಚ್ಚು ಸೂಕ್ತ . (ಚಿತ್ರ – ೮)

ಇದಾದ ಸುಮಾರು ಮೂರರಿಂದ ಐದು ವಾರಗಳಲ್ಲಿ ಕಚ್ಚಿನ ಮೇಲ್ಭಾಗದಿಂದ ಬೇರು ಮೂಡಲು ಪ್ರಾರಂಭಿಸುತ್ತವೆ. ಸಾಕಷ್ಟು ಸಂಖ್ಯೆಯಲ್ಲಿ ಬೇರು ಮೂಡಿ ಬೆಳೆದಾಗ ಅವುಗಳ ಮೇಲಿನ ಮಾಧ್ಯಮವನ್ನು ಭೇದಿಸಿಕೊಂಡು ಹೊರಗೆ ಇಣುಕುವುದುಂಟು. ಆಗ ಆ ರೆಂಬೆಯನ್ನು ತಾಯಿಮರದಿಂದ ಬೇರ್ಪಡಿಸಬೇಕು. ಬುಢಬಾಗದ ಕಚ್ಚುಗಾಯದಿಂದ ಸ್ವಲ್ಪ ಕೆಳಗೆ ಹರಿತವಿರುವ ಚಾಕುವಿನಿಂದ ರೆಂಬೆಯ ಅರ್ಧದಷ್ಟು ಆಳಕ್ಕೆ ಕಚ್ಚುಮಾಡಿ, ಅದಾದ ೧೫ ದಿನಗಳನಂತರ ಆ ಕಚ್ಚನ್ನು ಮತ್ತಷ್ಟು ಆಳಮಾಡಿ ಬೇರ್ಪಡಿಸಬಹುದು.

ಹೀಗೆ ಬೇರ್ಪಡಿಸಿದ ರೆಂಬೆಗಳಲ್ಲಿನ ಪ್ಲಾಸ್ಟಿಕ್ ಹಾಳೆಯನ್ನು ಬೆಡಿಸಿ ತೆಗೆದು ಮಣ್ಣು ಮತ್ತು ಗೊಬ್ಬರಗಳ ಮಿಶ್ರಣ ತುಂಬಿದ ಕುಂಡಗಳಿಗೆ ವರ್ಗಾಯಿಸಿ, ನೆರಳಿನಲ್ಲಿಟ್ಟು ನೀರುಕೊಡಬೇಕು. ಹದವರಿತು ನೀರಕೊಡುತ್ತಿದ್ದಲ್ಲಿ ಅವು ಚೇತರಿಸಿಕೊಂಡು ಬೆಳೆಯಲು ಪ್ರಾರಂಭಿಸುತ್ತವೆ. ಮುಂದಿನ ಮುಂಗಾರಿನಲ್ಲಿ ಅವುಗಳನ್ನು ಗುಂಡಿಗಳಲ್ಲಿ ನೆಡಬಹುದು. ಗೂಟಿಗಿಡಗಳ ಬೇರು ಬೆರಳುಗಳೋಪಾದಿಯಲ್ಲಿ ಹರಡಿ, ಮಣ್ಣಿನ ಮೇಲ್ಪದರದಲ್ಲಿ ಇಳಿಯುತ್ತವೆ. ಆದ್ದರಿಂದ ಅವುಗಳಿಗೆ ಅಷ್ಟೊಂದು ಬಲ ಸಿಗಲಾರದು, ಅಲ್ಲದೆ ಬಲವಾದ ಗಾಳಿ ಬೀಸಿದರೆ ಅವು ಕಿತ್ತು ಬೀಳುವ ಸಾಧ್ಯತೆ ಇರುತ್ತದೆ. ಅಂತಹ ಸಂದರ್ಭಗಳಲ್ಲಿ ತೋಟದ ಸುತ್ತ ಎತ್ತರಕ್ಕೆ ಬೆಳೆಯುವ ಮತ್ತು ದಟ್ಟ ರೆಂಬೆಗಳಿಂದ ಕೂಡಿದ ಗಾಳಿ ತಡೆಯನ್ನು ಎಬ್ಬಿಸಬೇಕು.

. ರೆಂಬೆಗಳನ್ನು ಮಣ್ಣಿನಲ್ಲಿ ಊರಿ ಬೇರು ಬರುವಂತೆ ಮಾಡುವುದು : ಈ ಉದ್ದೇಶಕ್ಕೆ ನೆಲಮಟ್ಟಕ್ಕೆ ಹತ್ತಿರವಿರುವ ರೆಂಬೆಗಳನ್ನು ಆರಿಸಿಕೊಳ್ಳಬೇಕು. ರೆಂಬೆಗಳನ್ನು ಬಿಲ್ಲಿನಂತೆ ಬಗ್ಗಿಸಿ, ಅವುಗಳ ಮಧ್ಯಬಾಗ ನೆಲದಲ್ಲಿ ಊರುವಂತೆ ಮಾಡಿ, ಅದರ ಮೇಲೆ ಹಸಿ ಮಣ್ಣನ್ನು ಹರಡಿ, ಭಾರವಣ್ಣಿಟ್ಟರೆ ಸುಮಾರು ೩-೪ ವಾರಗಳಲ್ಲಿ ಆ ಭಾಗದಿಂದ ಬೇರುಮೂಡಿ, ಮಣ್ಣಿನಲ್ಲಿ ಇಳಿಯುತ್ತವೆ. ಅವುಗಳ ತಳಭಾಗದಲ್ಲಿ ಕಚ್ಚುಕೊಟ್ಟು, ತೊಗಟೆ ಮತ್ತು ಚಕ್ಕೆಗಳನ್ನು ನಾಲಿಗೆಯಂತೆ ಸಡಿಲಗೊಳಿಸಿದಲ್ಲಿ ಉತ್ತಮ. ಹೀಗೆ ಮಾಡುವಾಗ ಚಾಕುವಿನ ಅಲುಗು ರೆಂಬೆಯ ತುದಿಯತ್ತ ಸಾಗಬೇಕು. ಸೀಳುಗಳ ನಡುವೆ ಒಣಕಡ್ಡಿಯ ತುಂಡನ್ನು ಅಡ್ಡಲಾಗಿ ಇಟ್ಟಲ್ಲಿ ಅವು ಕೂಡಿಕೊಳ್ಳುವುದಿಲ್ಲ. ಸಾಕಷ್ಟು ಬೇರುಬಿಟ್ಟಾಗ ಮಣ್ಣನ್ನು ಪಕ್ಕಕ್ಕೆ ಸರಿಸಿ ಕಚ್ಚಿನ ಸ್ವಲ್ಪ ಹಿಂದಕ್ಕೆ ಆಳವಾಗಿ ಕಚ್ಚುಕೊಟ್ಟು, ಅದಾದ ಎರಡುವಾರಗಳ ನಂತರ ಅದನ್ನು ಮತ್ತಷ್ಟು ಆಳಮಾಡಿ, ತಾಯಿಮರದಿಂದ ಬೇರ್ಪಡಿಸಿ ತೆಗೆಯಬೇಕು. ಹೀಗೆ ಬೇರ್ಪಡಿಸಿದ ರೆಂಬೆಗಳನ್ನು ಮಣ್ಣು-ಗೊಬ್ಬರಗಳ ಮಿಶ್ರಣ ತುಂಬಿದ ಕುಂಡಗಳಿಗೆ ವರ್ಗಾಯಿಸಿ, ನೆರಳಿನಲ್ಲಿಟ್ಟು ನೀರು ಕೊಡುತ್ತಿದ್ದಲ್ಲಿ ಅವು ಕೆಲವು ದಿನಗಳಲ್ಲಿಯೇ ಚೇತರಿಸಿಕೊಂಡು ಬಳೆಯುತ್ತವೆ. ಇದನ್ನು ಗ್ರೌಂಡ್ ಲೇಯರಿಂಗ್ ಎನ್ನುತ್ತಾರೆ

ಇದರ ಬದಲಾಗಿ ಸ್ವಲ್ಪ ಮಾರ್ಪಾಟನ್ನು ಮಾಡಿ ವೃದ್ಧಿಪಡಿಸುವ ಕ್ರಮವೊಂದಿದೆ. ಅದೆಂದರೆ ರೆಂಬೆಯನ್ನು ನೆಲಮಟ್ಟಕ್ಕೆ ಬಗ್ಗಿಸಿ, ಅದರ ಮಧ್ಯಬಾಗದಲ್ಲಿ ತಳಗಡೆ ನಾಲಿಗೆ ಬಿಡಿಸಿ, ಮಣ್ಣು ಮತ್ತು ಗೊಬ್ಬರಗಳ ಮಿಶ್ರಣ ತುಂಬಿದ ಅಗಲಬಾಯಿಯ ಪರಲಿ ಮಣ್ಣಿನ ಕುಂಡದ ಎದುರುಬದುರು ಕಚ್ಚುಗಳ ನಡುವೆ ಸಿಕ್ಕಿಸಿ ಅದ್ರ ಮಧ್ಯಬಾಗ ಅದರಲ್ಲಿ ಊರುವಂತೆ ಮಾಡುವುದು. ಈ ರೀತೆಯಲ್ಲಿ ರೆಂಬೆಯು ಗಾಳಿಗೆ ಅಲುಗಾಡುವುದು ತಪ್ಪುತ್ತದೆ. ಸಾಕಷ್ಟು ಬೇರುಬಿಟ್ಟಾಗ, ರೆಂಬೆಯನ್ನು ಕಚ್ಚುಕೊಟ್ಟು ತಾಯಿ ಮರದಿಂದ ಬೇರ್ಪಡಿಸಬೇಕು. ಬೇರ್ಪಡಿಸುವ ಕೆಲಸ ಎರಡು ಮೂರು ಹಂತಗಳಲ್ಲಿ ಆಗಬೇಕು. ಅದರಿಂದ ರೆಂಬೆಗಳಿಗೆ ಆಘಾತವಾಗುವುದಿಲ್ಲ. ಅನಂತರ ಕುಂಡಗಳನ್ನು ಭಾಗಶಃ ನೆರಳಿನಲ್ಲಿಟ್ಟು, ಹದವರಿತು ನೀರು ಕೊಡುತ್ತಿದ್ದಲ್ಲಿ ಅವು ಚೇತರಿಸಿಕೊಂಡು ಬೆಳೆಯಲು ಪ್ರಾರಂಭಿಸುತ್ತವೆ. ಇದನ್ನು ಪಾಟ್ ಲೇಯರಿಂಗ್ ಎನ್ನುತಾರೆ.

. ಮಣೆ ಪದ್ಧತಿ : ಅದನ್ನು ಮೌಂಡ ಲೇಯರಿಂಗ್, ಸ್ಟೂಲ್ ಲೇಯರಿಂಗ್, ಸ್ಟೂಲಿಂಗ್ ಅಥವಾ ಕುಪ್ಪೆ ಪದ್ಧತಿ ಎನ್ನುತ್ತಾರೆ. ಈ ಪದ್ಧತಿಯಲ್ಲಿ ಅಧಿಕ ಸಖ್ಯೆಯ ಗಿಡಗಳನ್ನು ಉತ್ಪಾದಿಸಬಹುದು. ಮೂರು-ನಾಲ್ಕು ವರ್ಷ . ವಯಸ್ಸಿನ ಗಿಡಗಳನ್ನು ನೆಲಮಟ್ಟದಿಂದ ೧೦-೧೫ ಸೆಂ. ಮೀ. ಎತ್ತರದಲ್ಲಿ ಅಡ್ಡಕ್ಕೆ ಕತ್ತರಿಸಿ, ಮೋಟು ಕಾಂಡದ ಮೇಲೆ ಹಸಿ ಮಣ್ಣನ್ನು ಕುಪ್ಪೆಯಂತೆ ಏರಿಸಿದಲ್ಲಿ, ಬಹಳಷ್ಟು ಚಿಗುರು ಮೋಸುತಳ್ಳಿ ಕುಪ್ಪೆ ಮಣ್ಣನ್ನು ಮೀಟಿಕೊಂಡು ಹೊರಗಿಣುಕುತ್ತವೆ. ಸುಮಾರು ೨-೩ ತಿಂಗಳಲ್ಲಿ ಹೊಸ ಚಿಗುರು ರೆಂಬೆಗಳ ಬುಡದಲ್ಲಿ ಸಾಕಷ್ಟು ಬೇರು ಕಾಣಿಸಿಕೊಳ್ಳುತ್ತವೆ. ಆಗ ಮಣ್ಣನ್ನು ಪಕ್ಕಕ್ಕೆ ಸರಿಸಿ, ರೆಂಬೆಗಳನ್ನು ತಾಯಿ ಮರದಿಂದ ಬೇರ್ಪಡಿಸಬೇಕು. ಬೇರ್ಪಡಿಸಿದ ರೆಂಬೆಗಳನ್ನು ಕುಂಡದಲ್ಲಿ ವಾರ್ಗಾಯಿಸಿ, ಭಾಗಶಃ ನೆರಳಿನಲ್ಲಿಟ್ಟು, ಹದವರಿತು ನೀರುಕೊಡುತ್ತಿದ್ದಲ್ಲಿ ಅವು ಚೇತರಿಸಿಕೊಂಡು ಬೆಳೆಯುತ್ತವೆ.

ಚಿಗುರು ರೆಂಬೆಗಳ ಬುಡಭಾಗಕ್ಕೆ ಸೂಕ್ತ ಸಾಮರ್ಥ್ಯದ ಇಂಡೋಲ್ ಅಸೆಟಿಕ್ ಆಮ್ಲ ಅಥವಾ ಇಂಡೋಲ್ ಬ್ಯುಟೈರಿಕ್ ಆಮ್ಲವನ್ನು ಲೇಪಿಸಿದಲ್ಲಿ ಹೆಚ್ಚಿನ ಸಂಖ್ಯೆಯ ಬೇರು ಬೇಗ ಮೂಡುತ್ತವೆ.

ಕಸಿವಿಧಾನ

ಇದನ್ನು ಕಲಮು ಕಟ್ಟುವುದು ಅಥವಾ ಗ್ರ್ಯಾಫ್ಟಿಂಗ್ ಎನ್ನುತ್ತಾರೆ. ಕಸಿ ಗಿಡದಲ್ಲಿ ಬೇರು ಸಸಿ ಮತ್ತು ಕಸಿಕೊಂಬೆ ಎಂಬುದಾಗಿ ಎರಡು ಭಾಗ ಇರುತ್ತದೆ. ಬೇರು ಸಸಿ ಸಾಮಾನ್ಯವಾಗಿ ಬೀಜ ಊರಿ ಬೆಳೆದಂತಾದ್ದು. ಅದು ಗಿಡಕ್ಕೆ ಬಲವಾದ ಬೇರು ಸಮೂಹವನ್ನು ಒದಗಿಸುತ್ತದೆ ಹಾಗೂ ಅಗತ್ಯ ಪೋಷಣೆ ಮತ್ತು ನೀರುಗಳನ್ನು ಪೊರೈಸುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ಅದು ಪ್ರತಿಕೂಲ ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸಬಲ್ಲದು. ಕಸಿ ಗಿಡದ ಮೇಲ್ಭಾಗ ಅಪೇಕ್ಷಿಸಿದ ತಳಿಯದಾಗಿದ್ದು, ಫಸಲನ್ನು ಬಿಡುವ ಭಾಗವಿರುತ್ತದೆ. ಮರದ ಚೌಕಟ್ಟು ಮತ್ತು ಅದರ ನಿರ್ಮಾಣ ಕಸಿ ಕೊಂಬೆಯ ಮೇಲೆ ಆಧಾರಗೊಂಡಿರುತ್ತವೆ. ಇತರ ಪ್ರಭೇದಗಳ ಬೇರುಸಸಿಗಳನ್ನೂ ಸಹ ಬಳಸಬಹುದು. ಸಿಡಿಯಂ ಗುಯನೆನ್ಸ್ ಮುಂತಾದ ಪ್ರಭೇದಗಳು ಉಪಯುಕ್ತ ಬೇರುಸಸಿಗಳಾಗಬಲ್ಲವು. ಚೈನಾಸೀಬೆ ಬಾಡುವ ರೋಗಕ್ಕೆ ಹಾಗೂ ದುಂಡು ಜಂತುಗಳಿಗೆ ನಿರೋಧಕವಿದ್ದು, ಸೀಬೆಗೆ ಸಮಂಜಸ ಬೇರುಸಸಿಯಾಗಬಲ್ಲದು. ಅಂತಹ ಮರಗಳು ಗಿಡ್ಡವಾಗಿರುತ್ತವೆ.

ಸಿಡಿಯಂ ಕುಜವಿಲ್ಲಿಸ್ : ಈ ಬೇರು ಸಸಿ ದೊಡ್ಡ ಗಾತ್ರದ ಗಿಡಗಳನ್ನು ಕೊಡುತ್ತದೆ. ಅಂತಹ ಕಸಿ ಗಿಡಗಳ ಹಣ್ಣಿನ ಮೇಲ್ಮೈ ಒರಟಾಗಿದ್ದು ಅಸಮವಿರುತ್ತದೆ. ಪ್ಲೋರಿಡಾ ತಳಿಯ ಬೀಜ ಸಸಿಗಳನ್ನು ಬೇರುಸಸಿಗಳನ್ನಾಗಿ ಬಳಸಿದಾಗ, ಹಣ್ಣುಗಳಲ್ಲಿ ಹೆಚ್ಚಿನ ಹುಳಿ ಇದ್ದುದಾಗಿ ತಿಳಿದುಬಂದಿದೆ. ಅಲಹಾಬಾದ್ ಸಫೇದ ತಳಿಯನ್ನು ಸಿಡಿಯಂ ಪ್ಯುಮಿಲ್ಲಂ ಬೇರು ಸಸಿಯಮೇಲೆ ಕಸಿಮಾಡಿದಾಗ ಹಣ್ಣುಗಳಲ್ಲಿ ಹೆಚ್ಚಿನ ಸಿಹಿ ಅಂಶ ಕಂಡುಬಂದಿತು; ಸಿಡಿಯಂ ಕ್ಯಾಟ್ಲಿಯಾನಂ ಬೇರು ಸಸಿಯು ಹೆಚ್ಚಿನ ಆಸ್ಕಾರ್ಬಿಕ್ ಆಮ್ಲದ ಉತ್ಪಾದನೆಗೆ ಪ್ರಚೋದನೆ ನೀಡುತ್ತದೆ. ಅಧಿಕ ಇಳುವರಿಯನ್ನು ಪ್ರಚೋದಿಸುವ ಗುಣ ಸಿಡಿಯಂ ಕ್ಯಾಟ್ಲಿಯಾನಂ ಪ್ರಭೇದದ ಬೇರುಸಸಿಗಳಿಗೆ ಇದೆ. ಬಳಕೆಯಲ್ಲಿರುವ ವಿವಿಧ ಕಸಿ ವಧಾನಗಳು ಹಿಗಿವೆ :

() ಸಾಮೀಪ್ಯ ಕಸಿ ಪದ್ಧತಿ : ಒಂದು ವರ್ಷ ಅಥವಾ ಅದಕ್ಕೂ ಮೇಲ್ಪಟ್ಟ ವಯಸ್ಸಿನ, ಪೆನ್ಸಿಲ್ ಗಾತ್ರದ, ನೆಟ್ಟಗಿನ ಕಾಂಡದಿಂದ ಕೂಡಿದ್ದು ಕುಂಡ ಅಥವಾ ಪ್ಲಾಸ್ಟಿಕ್ ಚೀಲದಲ್ಲಿನ ಬೇರುಸಸಿಯನ್ನು ಕಸಿಕೊಬೆಯ (ಚಿತ್ರ ೯) ಪಕ್ಕಕ್ಕೆ ಸರಿಸಬೇಕು ಬೇರುಸಸಿ ಮತ್ತು ಕಸಿ ಕೊಂಬೆಗಳ ದಪ್ಪ ಒಂದೇ ಆಗಿದ್ದರೆ ಉತ್ತಮ.

 ಬೇರುಸಸಿಯ ಕಾಂಡದಲ್ಲಿ ೧೦-೪೫ ಸೆಂ. ಮೀ. ಎತ್ತರದಲ್ಲಿ ಹರಿತವಿರುವ ಕಸಿ ಚಾಕುವನ್ನು ಬಳಸಿ ೨. ೫ ರಿಂದ ೫. ೦ ಸೆಂ. ಮೀ. ಉದ್ದದಷ್ಟು ತೊಗಟೆ ಚಕ್ಕೆಯನ್ನು ಅಂಡಾಕಾರದಲ್ಲಿ ಕೆತ್ತಿ ತೆಗೆಯಬೇಕು. ಅಷ್ಟೇ ಗಾತ್ರದ ತೊಗಟೆ ಚಕ್ಕೆಯನ್ನು ಕಸಿಕೊಂಬೆಯಲ್ಲಿ ಕೆತ್ತಿ ತೆಗೆದು. ಎರಡೂ ಕಚ್ಚುಗಾಯಗಳನ್ನು ಎದುರುಬದುರಾಗಿರುವಂತೆ ಜೋಡಿಸಿ, ಬೆರುಗಳಿಂದ ಅದುಮಿ ಹಿಡಿದು, ಪ್ಲಾಸ್ಟಿಕ್ ಪಟ್ಟಿಯಿಂದ ಬಿಗಿಯಾಗಿ ಸುತ್ತಿ ಕಟ್ಟಬೇಕು. ಸುಮಾರು ೩೦-೪೦ ದಿನಗಳಲ್ಲಿ ಗಾಯಗಳು ಪರಸ್ಪರ ಬೆಸೆದು ಒಂದಾಗುತ್ತವೆ. ಅನಂತರ ಬೇರು ಸಸಿಯ ತಲೆಯನ್ನು ಕಸಿಗಂಟಿನ ಸ್ವಲ್ಪ ಮೇಲೆ ಸವರಬೇಕು. ಅದೇ ರೀತಿ ಕಸಿ ಕೊಂಬೆಯನ್ನು ಕಸಿಗಂಟಿನ ಸ್ವಲ್ಪ ಕೆಳಗೆ ಹಚ್ಚುಕೊಟ್ಟು, ಬೇರ್ಪಡಿಸಿ, ನೆರಳಿನಲ್ಲಿಟ್ಟು, ನೀರು ಹಾಕುತ್ತಿದ್ದಲ್ಲಿ. ಅವು ಚೇತರಿಸಿಕೊಂಡು ಬೆಳೆಯಲು ಪ್ರಾರಂಭಿಸುತ್ತವೆ.

ಈ ಪದ್ಧತಿಗೆ ಇಂಗ್ಲೀಷ್ನಲ್ಲಿ ಅಪ್ರೋಚ್ ಗ್ರ್ಯಾಫ್ಟಿಂಗ್ ಎನ್ನುತ್ತಾರೆ. ಇದಕ್ಕೆ ಮೇನಿಂದ ಸೆಪ್ಟೆಂಬರ್ ವರೆಗೆ ಸೂಕ್ತವಿರುತ್ತದೆ ಶೇ. ೯೫ರಷ್ಟು ಯಶಸ್ಸು ಸಾಧ್ಯ. ಇಅದರಲ್ಲಿ ಸ್ವಲ್ಪ ಮಾರ್ಪಾಟವನ್ನು ಮಾಡಿ ಕಸಿಮಾಡಬಹುದು. ಅದೆಂದರೆ ಬೇರು ಸಸಿಯ ತಲೆಯನ್ನು ಸವರಿ, ಒಂದು ಪಾರ್ಶ್ವ ಚೂಪಾಗಿರುವಂತೆ ಕಸಿ ಚಾಕುವಿನಿಂದ ಮೇಲ್ಮುಖವಾಗಿ ಕಚ್ಚುಕೊಟ್ಟು ಕಸಿ ಕೊಂಬೆಯಲ್ಲಿ ಅಷ್ಟೇ ಉದ್ದಗಲಗಳ ನಾಲಿಗೆಯನ್ನು ಮಾಡಿ, ಬೇರು ಸಸಿಯ ಚೂಪು ತುದುಯನ್ನು ನಾಲಿಗೆಯ ಸೀಳುಗಳ ನಡುವೆ ತೋರಿಸಿ, ಪ್ಲಾಸ್ಟಿಕ್ ಪಟ್ಟಿಯಿಂದ ಸುತ್ತಿ ಬಿಗಿಯಾಗಿ ಕಟ್ಟಿದ್ದಲ್ಲಿ ಅವು ಒಂದರೊಲ್ಲೊಂದು ಬೆಸೆದುಕೊಳ್ಳುತ್ತವೆ. ಅನಂತರ ಕಸಿಕೊಂಬೆಯನ್ನು ಕಸಿಗಂಟಿನ ಸ್ವಲ್ಪ ಕೆಳಗೆ ಕಚ್ಚುಕೊಟ್ಟು ಬೇರ್ಪಡಿಸಬೇಕು. ಆಗ ಅದು ಸ್ವತಂತ್ರವಾಗಿ ಬೆಳೆಯಬಲ್ಲದು. ಇದಕ್ಕೆ ಇನಾರ್ಚಿಂಗ್ ಎನ್ನುತ್ತಾರೆ.

() ವೆನೀರ್ ಕಸಿ ಪದ್ಧತಿ : ಇದು ಸರಳ ಹಾಗೂ ಸುಲಭದ ಪದ್ಧತಿಯಾಗಿದೆ. ಈ ಪದ್ಧತಿಯಲ್ಲಿ ತಾಯಿ ಮರದಲ್ಲಿನ ಸೂಕ್ತ ಗಾತ್ರದಕಸಿ ಕಡ್ಡಿಯಲ್ಲಿನ ಎಲೆಗಳನ್ನು ಸ್ವಲ್ಪವೇ ತೊಟ್ಟು ಇರುವಂತೆ ಸವರಿ ತೆಗೆದು ಉಪಚರಿಸಬೇಕು. ಸುಮಾರು ೧೦-೧೫ ದಿನಗಳಲ್ಲಿ ಎಲೆ ತೊಟ್ಟಿನ ಕೊಳೆಗಳು ಕಳಚಿಬೀಳುತ್ತವೆ ಹಾಗೂ ಅವುಗಳಲ್ಲಿನ ಮೊಗ್ಗುಗಳು ಉಬ್ಬುತ್ತವೆ. ಆಗ ಅವುಗಳನ್ನು ತಾಯಿಮರದಿಂದ ಬೇರ್ಪಡಿಸಿ, ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿಟ್ಟು ತರಬೇಕು.

ಕಸಿ ಕಡ್ಡಿಯ ಸುಡಭಾಗದಲ್ಲಿ ಒಂದು ಪಾರ್ಶ್ವದಲ್ಲಿ ಉದ್ದದ ಇಳಿಜಾರು ಕಚ್ಚನ್ನು ಕೆಳಮುಕನಾಗಿ ಕೊಟ್ಟು, ಅದರ ಎದುರು ಪಾರ್ಶ್ವದ ಬುಡದಲ್ಲಿ ಸ್ವಲ್ಪವೇ ಇಳಿಜಾರು ಕಚ್ಚುಕೊಟ್ಟು ಅದನ್ನು ಚೂಪಾಗಿಸಬೇಕು. ಬೇರುಸಸಿಯ ಕಾಂಡದಲ್ಲಿ ೩೦-೪೫ ಸೆಂ. ಮೀ. ಎತ್ತರದಲ್ಲಿ ೨. ೫ ರಿಂದ ೫ ಸೆಂ. ಮೀ. ಉದ್ದದ ಇಳಿಜಾರು ಕಚ್ಚನ್ನು ಕಾಂಡದ ಒಂದು ಮಗ್ಗುಲಲ್ಲಿ ಕೆಳಮುಖನಾಗಿ ಮಾಡಿ, ಆ ಸೀಳುಗಳ ತಳ ಭಾಗದಲ್ಲಿ ಸ್ವಲ್ಪ ಕೊಳೆಬಿಟ್ಟು ಅಡ್ಡಕಚ್ಚು ಕೊಡಬೇಕು. ಆಗ ಬೇರು ಸಸಿಯ ಗಾಯ ಭಾಗದಲ್ಲಿ ಸಿದ್ಧಗೊಳಿಸಿದ ಕಸಿ ಕಡ್ಡಿಯ ಉದ್ದ ಕಚ್ಚನ್ನು ಬೇರು ಸಸಿಯ ಮಗ್ಗುಲಲ್ಲಿ ಇಳಿಬಿಟ್ಟು, ಕಚ್ಚುಗಳು ಒಂದಕ್ಕೊಂದು ಆತುಕೊಳ್ಳುವಂತೆ, ಪ್ಲಾಸ್ಟಿಕ್ ಪಟ್ಟಿಯನ್ನು ಸುತ್ತಿ ಕಟ್ಟಬೇಕು. ಕಸಿಕಡ್ಡಿಯು ಬೇರುಸಸಿಯೊಂದಿಗೆ ಬೆಸೆದುಕೊಂಡದ್ದೇ ಆದರೆ ಕಸಿಕಡ್ಡಿಯಲ್ಲಿನ ಮೊಗ್ಗುಗಳು ಚಿಗುರಿ ಬೆಳೆಯುತ್ತವೆ. ಆಗ ಬೇರುಸಸಿಯ ತಲೆಯನ್ನು ಕಸಿಗಂಟಿನ ಸ್ವಲ್ಪಮೇಲೆ ಸವರಿ ತೆಗೆಯಬೇಕು. ಅವು ಚೆನ್ನಾಗಿ ಬೆಸೆದು ಬೆಳೆಯಲು ಒಂದು ತಿಂಗಳ ಅವಧಿ ಹಿಡಿಸುತ್ತದೆ. ಈ ಕೆಲಸಕ್ಕೆ ಸೂನ್-ಜುಲೈ ಸೂಕ್ತ ಕಾಲ. ಈ ಪದ್ಧತಿಯಲ್ಲಿ ಶೇ. ೮೦ ರಷ್ಟು ಫಲಿತಾಂಶ ಸಾಧ್ಯ.

() ಮೆತುಕಡ್ಡಿ ಕಸಿ ಪದ್ಧತಿ : ಇದನ್ನು ಮೃದು ಕಟ್ಟಿಗೆ ಕಸಿ ಪದ್ಧತಿ, ಸಾಫ್ಟ್ ವುಡ್ ಗ್ರ್ಯಾಫ್ಟಿಂಗ್ ಮುಂತಾಗಿ ಕರೆಯುತ್ತಾರೆ. ಬೇರುಸಸಿಯ ಕಾಂಡದ ಹಸಿರು ಭಾಗದಲ್ಲಿ ಅಡ್ಡಕಚ್ಚುಕೊಟ್ಟು ಅದರ ತಲೆಯನ್ನು ಸವರಲಾಗುತ್ತದೆ. ಅನಂತರ ಮೊದಲೇ ಎಲೆಗಳನ್ನು ಸವರಿ ಉಪಚರಿಸಿದ ಕಸಿಕಡ್ಡಿಯನ್ನು ೧೦-೧೫ ಸೆಂ. ಮೀ. ಉದ್ದಕ್ಕೆ ಕತ್ತರಿಸಿ, ಅದರ ಬುಡದ ಎರಡೂ ಮಗ್ಗುಲಲ್ಲಿ ಇಳಿಜಾರು ಕಚ್ಚುಗಳನ್ನು ೨. ೫ ಸೆಂ. ಮೀ. ಉದ್ದ ಇರುವಂತೆ ಮಾಡಬೇಕು. ಬೇರುಸಸಿಯ ಸವರಿದ ಭಾಗದಲ್ಲಿ ಮಧ್ಯಕ್ಕೆ ಕಸಿ ಚಾಕು ಇಳಿಸಿ ೨. ೫ ಸೆಂ. ಮೀ. ಆಳಕ್ಕೆ ಸೀಳಬೇಕು. ಆ ಸೀಳುಗಳ ನಡುವೆ ಕಸಿಕಡ್ಡಿಯ ಚೂಪುಭಾಗಗಳನ್ನು ನೆಟ್ಟಗೆ ಇಳಿಸಿ, ಗಾಯ ಭಾಗಗಳು ಒಂದಕ್ಕೊಂದು ಆತುಕೊಳ್ಳುವಂತೆ ಬೆರಳುಗಳಿಂದ ಬಿಗಿಯಾಗಿ ಒತ್ತಿ ಹಿಡಿದು, ಪ್ಲಾಸ್ಟಿಕ್ ಪಟ್ಟಿಯಿಂದ ಸುತ್ತಿಕಟ್ಟಬೇಕು. ಮಳೆ ನೀರು ಅಥವಾ ಹಾಕಿದ ನೀರು ಗಾಯಗಳೊಳಕ್ಕೆ ಸೇರದಂತೆ ಮಾಡಲು ಹಾಗೂ ಕಸಿಕಡ್ಡಿಗೆ ಸೂಕ್ಷ್ಮ. ಹವೆ ಲಭಿಸುವಂತೆ ಮಾಡಲು, ಪ್ಲಾಸ್ಟಿಕ್ ಚೀಲವನ್ನು ಮೇಲಿಂದ ಇಳಿಬಿಟ್ಟು, ಕೆಳಗೆ ಕಟ್ಟಬೇಕು. ಈ ಪದ್ಧತಿಯಲ್ಲಿ ನೂರಕ್ಕೆ ನೂರರಷ್ಟು ಯಶಸ್ಸು ಸಾಧ್ಯ. ಆದರೆ ಕೂಡುಪದರ (ಕೇಂಬಿಯಂ) ದಲ್ಲಿ ಜೀವರಸ ಚೆನ್ನಾಗಿ ಬೆಸೆದುಕೊಂಡು, ಕಸಿಮೊಗ್ಗು ಚಿಗುರನ್ನು ತಳ್ಳುತ್ತದೆ. ಆಗ ಮೇಲೆ ಇಳಿ ಬಿಟ್ಟಿದ್ದ ಪ್ಲಾಸ್ಟಿಕ್ ಚೀಲವನ್ನು ಬಿಚ್ಚಿತೆಗೆಯಬೇಕು. ಹಾಗೆ ಮಾಡದಿದ್ದಲ್ಲಿ ಚಿಗುರಿ ಉದ್ದಕ್ಕೆ ಬೆಳೆದು ಮುರಿದು ಹಾಳಾಗುತ್ತವೆ. ಅಂತಹ ಕಸಿಗಿಡಗಳನ್ನು ಮಳೆಗಾಲದಲ್ಲಿಯೇ ನೆಡಬಹುದು.

() ಕಣ್ಣುಕೂಡಿಸಿ ಕಸಿಮಾಡುವುದು : ಇದನ್ನು ಇಂಗ್ಲೀಷ್ ನಲ್ಲಿ ಬಡ್ಡಿಂಗ ಅಥವಾ ಬಡ್ ಗ್ರ್ಯಾಫ್ಟಿಂಗ್ ಎನ್ನುತ್ತಾರೆ. ಕಸಿ ಮೊಗ್ಗು ಮತ್ತು ಅದರೊಟ್ಟಿಗೆ ಸ್ವಲ್ಪ ಚಿಕ್ಕ ತೊಗಟೆ ಇದ್ದರೆ ಸಾಕು. ಇದು ಉಳಿತಾಯದ ಪದ್ಧತಿಯಾಗಿದೆ. ಏಕೆಂದರೆ ಒಂದು ಕಸಿಕೊಂಬೆ ಅಥವಾ ಕಸಿ ಕಡ್ಡಿಯಲ್ಲಿ ಹತ್ತಾರು ಕಣ್ಣುಮೊಗ್ಗುಗಳಿದ್ದು ಅವುಗಳನ್ನು ಜೋಪಾನವಾಗಿ ಬಿಡಿಸಿ ಹೆಚ್ಚಿನ ಸಂಖ್ಯೆಯ ಬೇರು ಸಸಿಗಳಿಗೆ ಬಳಸಬಹುದು. ಬಳಕೆಯಲ್ಲಿರುವ ವಿಧಾನಗಳೆಂದರೆ ತೇಪೆ ಪದ್ಧತಿಯಲ್ಲಿ ಕಣ್ಣುಕೂಡಿಸಿ ಕಸಿಮಾಡುವುದು, ಪೋರ್ಕರ್ಟ್ ವಿಧಾನ ಮುಂತಾಗಿ.

(i) ತೇಪೆ ವಿಧಾನ : ಇದನ್ನು ಪ್ಯಾಚ್ ಬಡ್ಡಿಂಗ್ ಎನ್ನುತ್ತಾರೆ. ಒಂದು ವರ್ಷ ವಯಸ್ಸಿನ ಹಾಗೂ ೨ ಸೆಂ. ಮೀ. ದಪ್ಪದ ಕಾಂಡ ಇರುವ ಬೇರುಸಸಿಯ ತೊಗಟೆಯಲ್ಲಿ ೧. ಸೆಂ. ಮೀ. ಉದ್ದಗಲ ಇರುವಂತೆ ಹರಿತವಿರಿವ ಕಸಿ ಚಾಕುವಿನ ಮೊನೆಯಿಂದ ಕಚ್ಚುಕೊಟ್ಟು, ಅದನ್ನು ಬಿಡಿಸಿ ತೆಗೆಯಬೇಕು. ಈ ತೇಪೆಯು ಸುಮಾರು ೧೫-೨೦ ಸೆಂ. ಮೀ. ಎತ್ತರದಲ್ಲಿ ಇದ್ದರೆ ಅನುಕೂಲ. ಅನಂತರ ಕಸಿ ಕೊಂಬೆಯಲ್ಲಿ ಚೆನ್ನಾಗಿ ಉಬ್ಬಿದ ಮೊಗ್ಗು ಇರುವ ಅಷ್ಟೇ ಉದ್ದಗಲದ ತೇಪೆ ತೊಗಟೆಯನ್ನು ಬಿಡಿಸಿತೆಗೆದು, ಬೆರು ಸಸಿಯ ಕಾಂಡದಲ್ಲಿನ ತೇಪೆಯ ಖಾಲಿ ಜಾಗದಲ್ಲಿ ಕೂಡಿಸಿ, ಪ್ಲಾಸ್ಟಿಕ್ ಪಟ್ಟಿಯಿಂದ ಬಿಗಿಯಾಗಿ ಸುತ್ತಿಕಟ್ಟಬೇಕು.

ಸುಮಾರು ಎರಡು ವಾರಗಳಲ್ಲಿ ಅವು ಬೆಸೆದುಕೊಳ್ಳುತ್ತವೆ. ಅನಂತರ ಬೇರುಸಸಿಯ ತಲೆಯನ್ನು ಕಸಿಗಂಟಿನ ಸ್ವಲ್ಪಮೇಲೆ ಕತ್ತರಿಸಿ ಹಾಕಬೇಕು. ಆಗ ಕಸಿ ಮೊಗ್ಗು ಚಿಗುರೊಡೆದು ಬೆಳೆಯಲು ಅನುಕೂಲವಾಗುತ್ತದೆ. ಈ ಕೆಲಸಕ್ಕೆ ಜೂನ್-ಜುಲೈ ಸೂಕ್ತ ಕಾಲ. ಈ ಪದ್ಧತಿಯಲ್ಲಿ ಶೇ. ೬೦ ರಿಂದ್ ೭೨ರಷ್ಟು ಯಶಸ್ಸು ಸಾಧ್ಯ.

(ii) ಫೋರ್ಕರ್ಟ್ ವಿಧಾನ : ಬೇರು ಸಸಿಯ ತೊಗಟೆಯಲ್ಲಿ ೧ ರಿಂದ ೧. ೫ ಸೆಂ. ಮೀ. ಅಗಲದ ಎರಡು ಇಳಿ ಕಚ್ಚುಗಳನ್ನು ೨. ೫ ಸೆಂ. ಮೀ. ಉದ್ದ ಇರುವಂತೆ ಕೊಟ್ಟು, ಅದರ ಮೇಲ್ಬಾಗದಲ್ಲಿ ಅಡ್ಡ ಕಚ್ಚು ಕೊಟ್ಟು ನಾಲಿಗೆಯಂತೆ ಜಗ್ಗಬೇಕು. ಅಷ್ಟೇ ಉದ್ದಗಲದ ಕಸಿಮೊಗ್ಗನ್ನು ಕಸಿಕೊಂಬೆಯಲ್ಲಿ ಬಿಡಿಸಿ ತಗೆದು, ಬೇರು ಸಸಿಯ ಕಾಂಡದ ತೊಗಟೆ ನಾಲಿಗೆ ಮತ್ತು ಕಟ್ಟಿಗೆಗಳ ನಡುವೆ ಇಳಿಬಿಟ್ಟು ಅದರಮೇಲೆ ತೊಗಟೆ ನಾಲಿಗೆಯನ್ನು ಮೇಲಕ್ಕೆಳೆದು ಹೊದಿಸಿ ಪ್ಲಾಸ್ಟಿಕ್ ಪಟ್ಟಿಯಿಂದ ಸುತ್ತಿ, ಕಟ್ಟಬೇಕು. ಅವೆರದು ಬೆಸೆದು ಒಂದಾಗಿದ್ದರೆ ಮೊಗ್ಗು ಹಸಿರಾಗುತ್ತದೆ ಎಂದು ಅರ್ಥ. ಆಗ ಪ್ಲಾಸ್ಟಿಕ್ ಪಟ್ಟಿಯನ್ನು ಬಿಚ್ಚಿ, ತೇಪೆ ತೊಗಟೆಯ ಮೇಲ್ಬಾಗವನ್ನು ಸವರಿ ಮೊಟಕುಮಾಡಬೇಕು. ಇದರಿಂದ ಕಸಿಮೊಗ್ಗು ಯಾವ ಅಡಚಣೆಯಿಲ್ಲದೆ ಚಿಗುರಿ ಬೆಳೆಯುತ್ತದೆ. ಆಗ ಬೇರು ಸಸಿಯ ತಲೆಯನ್ನು ಕಸಿಗಂಟಿನ ಸ್ವಲ್ಪ ಮೇಲೆ ಸವರಿ ತಗೆಯಬಹುದು.

ಗುರಾಣಿ ಮತ್ತು ಚಕ್ಕೆ ವಿಧಾನಗಳು ಅಷ್ಟೊಂದು ಬಳಕೆಯಲ್ಲಿಲ್ಲ.

ಅಂಗಾಂಶಕೃಷಿಅಥವಾಊತಕಸಾಕಣೆ

ಗಿಡದ ಯಾವುದೇ ಒಂದು ಅಂಗಾಂಶವನ್ನು ಬೇರ್ಪಡಿಸಿ ತಗೆದು ಸೂಕ್ತ ಮಾಧ್ಯಮದಲ್ಲಿ ವೃದ್ಧಿಮಾಡಿದ್ದೇ ಆದರೆ ತಾಯಿಗಿಡದಂತೆ ಇರುವ ಹಲವಾರು ಸಸಿಗಳು ಸಾಧ್ಯ. ಆದರೆ ಈ ಹಣ್ಣಿನ ಬೆಳೆಯಲ್ಲಿ ಈ ಪದ್ದತಿ ಇನ್ನೂ ಅಷ್ಟೊಂದು ವ್ಯಾಪಕವಾಗಿ ಬಳಕೆಗೆ ಬಂದಿಲ್ಲಾ. ಇದನ್ನು ಟಿಶ್ಯೂಕಲ್ಚರ್ ಎನ್ನುತ್ತಾರೆ.