ಸೀಬೆ ಬಲಿಷ್ಟವಾದ ಮಧ್ಯಮ ಗಾತ್ರದ ಸಸ್ಯ. ವರ್ಷದಲ್ಲಿ ಸಾರಿ ಹೂ ಬಿಟ್ಟು ಕಾಯಾಗುವ ಇದರ ಹಣ್ಣಿನ ಗಾತ್ರ, ಬಣ್ಣ, ಆಕಾರ, ರುಚಿ, ವಾಸನೆಯಲ್ಲಿ ವೈವಿಧ್ಯತೆ ಇದೆ. ೧೫೦ ಕ್ಕಿಂತ ಹೆಚ್ಚು ಪ್ರಭೇದಗಳುಳ್ಳ ಇದರಲ್ಲಿ ಕಾಡು ಸೀಬೆಯಿಂದ ಹಿಡಿದು ಅಲಹಾಬಾದ್ ಸಫೇದ, ಸರ್ದಾರ್ (ಲಕ್ನೋ೪೯) ಮುಂತಾದ ಹತ್ತಾರು ತಳಿಗಳು ಜನಪ್ರಿಯವಾಗಿವೆ. ವಿವಿಧ ರಾಜ್ಯಗಳಲ್ಲಿ ತಳಿಗಳ ಅಭಿವೃದ್ಧಿ ನಿರಂತರವಾಗಿ ನಡೆಯುತ್ತಿದ್ದು ಸೀಬೆಯಲ್ಲಿ ಅಧಿಕ ಇಳುವರಿ ಕೊಡಬಲ್ಲ ಮಿಶ್ರತಳಿಗಳ ಕಾಲ ದೂರವೇನಿಲ್ಲ. ಸೀಬೆ ಗಿಡದ ನಾನಾ ಭಾಗಗಳ ವರ್ಣನೆಯೊಂದಿಗೆ ವಿವಿಧ ತಳಿಗಳ ವೈಶಿಷ್ಟ್ಯ, ಪ್ರಭೇದಗಳ ವರ್ಣನೆ ಹಾಗೂ ಆಯ್ಕೆಮಾಡಿದ ಕೆಲವು ತಳಿಗಳ ಬಗ್ಗೆ ಪ್ರಸ್ತುತ ಅಧ್ಯಾಯದಲ್ಲಿ ವಿವರಗಳನ್ನು ಒದಗಿಸಲಾಗಿದೆ.

ಸೀಬೆ ಮಿರ್ಟೇಸೀ ಕುಟುಂಬಕ್ಕೆ ಸೇರಿದ ಮಧ್ಯಮ ಗಾತ್ರದ ಮರ. ಪೂರ್ಣ ಬೆಳೆದಾಗ ೧೦ಮಿ. ಎತ್ತರವಿರುತ್ತದೆ. ಬಹಳಷ್ಟು ರೆಂಬೆಗಳು ಕೆಳಮಟ್ಟದಲ್ಲಿಯೇ ಹರಡಿ ಚಾಚಿರುತ್ತವೆ.

ಕಾಂಡಮತ್ತುಎಲೆ

ಬಲಿತ ಕಾಂಡ ದುಂಡಗಿರುತ್ತದೆ. ತೊಗಟೆಯ ಬಣ್ಣ ಕೆಂಪುಗಂದು, ಬಲಿತಾಗ ಮೇಲ್ಮೇಲೆ ಸುಲಿದುಬರುತ್ತದೆ. ಸುಳಿಭಾಗದ ಚಿಗುರುಕಾಂಡ ಚಚ್ಚೌಕದ ಏಣುಗಳಿಂದ ಕೂಡಿರುತ್ತದೆ. ಚಿಗುರಿನ ಬಣ್ಣ ಹಸಿರು. ಕಾಂಡದ ಗೆಣ್ಣುಗಳಲ್ಲಿ ಜೋಡಿ ಎಲೆಗಳು ಎದುರುಬದುರಾಗಿ ವ್ಯವಸ್ಥಿತಗೊಂಡಿರುತ್ತವೆ. ಎಲೆ ತೊಟ್ಟುಗಳು ಸ್ಫುಟ. ಎಲೆಗಳು ಸರಳವಿದ್ದು ಹೊಳಪು ಹಸಿರು ಬಣ್ಣದ್ದಿರುತ್ತವೆ. ಚಿಗುರೆಲೆಗಳ ಮೇಲೆಲ್ಲಾ ನವಿರಾದ ತುಪ್ಪಳದ ಹೊದಿಕೆ ಇರುತ್ತದೆ. ಎಲೆಗಳಲ್ಲಿನ ನರಬಲೆಕಟ್ಟು ಎದ್ದು ಕಾಣುತ್ತದೆ. ಅವುಗಳನ್ನು ಕೈಯ್ಯಲ್ಲಿ ಹೊಸಕಿ ಮೂಸಿದರೆ ಒಂದುವಿಧವಾದ ವಿಶಿಷ್ಟ ವಾಸನೆ ಬರುತ್ತದೆ. ಬಹುಶಃ ಈ ಕಾರಣದಿಂದಾಗಿಯೇ ಅವುಗಳನ್ನು ದನಕರು ಮುಂತಾದವು ತಿನ್ನುವುದಿಲ್ಲ.

ಹೂವುಮತ್ತುಹಣ್ಣು

ಹೂವು ಹೊಸ ಚಿಗುರುನೊಟ್ಟಿಗೆ ಕಾಣಿಸಿಕೊಳ್ಳುತ್ತವೆ. ಹೂಗೊಂಚಲು ಮಧ್ಯಾರಂಭಿಯಿದ್ದು ಎಲೆ ತೊಟ್ಟು ಮತ್ತು ಸುಳಿ ಕಾಂಡದ ನಡುವಣ ಕಂಕುಳಲ್ಲಿ ಮೂಡುತ್ತವೆ. (ಚಿತ್ರ ೫)

ಚಿತ್ರ ೫. ಹೂವು ಬಿಡುವ ವೈಖರಿ

ವರ್ಷದಲ್ಲಿ ಮೂರು ಸಾರಿ ಹೂವು ಕಾಣಿಸಿಕೊಳ್ಳುತ್ತವೆ. ಅವುಗಳೆಂದರೆ ಜೂನ್-ಜುಲೈ, ಸೆಪ್ಟೆಂಬರ್‌-ಅಕ್ಟೋಬರ್‌ ಮತ್ತು ಮಾರ್ಚ-ಏಪ್ರಿಲ್. ಅವುಗಳ ಪೈಕಿ ಜೂನ್-ಜುಲೈ ಹೆಚ್ಚು ಹೂವು ಬಿಡುವ ಸಮಯವಿರುತ್ತದೆ.

ಹೂಮೊಗ್ಗು ಅಂಕುರಿಸಿ, ವೃದ್ಧಿಹೊಂದಿ, ಬಿರಿಯಲು ಸುಮಾರು ೨೫ರಿಂದ ೩೦ ದಿನ ಹಿಡಿಸುತ್ತವೆ. ಅವು ಪ್ರಾರಂಭದಲ್ಲಿ ಸಣ್ಣಗೆ ಉದ್ದನಾಗಿದ್ದು, ಹಸಿರು ಬಿಳುಪು ಬಣ್ಣದ್ದಿರುತ್ತವೆ. ಮೇಲೆಲ್ಲಾ ನವಿರಾದ ತುಪ್ಪಳವಿರುತ್ತದೆ; ಹೊಮೊಗ್ಗು ವೃದ್ಧಿಹೊಂದಿದಂತೆಲ್ಲಾ ತುದಿಯತ್ತ ದಪ್ಪನಾಗಿ ಗದೆಯ ಆಕಾರ ತಾಳುತ್ತದೆ. ಅವು ಬೆಳಗಿನ ಜಾವದಲ್ಲಿ ಬಿರಿದಾಗ ಅವುಗಳ ಅಡ್ಡಗಲ ಸುಮಾರು ೨. ೫ ಸೆಂ. ಮೀ. ಇರುತ್ತದೆ. ಪುಷ್ಪ ಪೀಠದ ಎಸಳುಗಳು ಹಲ್ಲಿನ ಆಕಾರವಿದ್ದು ಹಸಿರು ಬಿಳುಪು ಬಣ್ಣದ್ದಿರುತ್ತವೆ. ಹೂದಳಗಳು ಅಗಲವಾಗಿದ್ದು ಬೆಳ್ಳಗಿರುತ್ತವೆ. ಕೇಸರಗಳು ಅಸಂಖ್ಯಾತ. ಕೇಸರ ದಂಡಗಳು ಸಣಕಲಾಗಿ, ಉದ್ದನಾಗಿರುತ್ತದವೆ. ಪರಾಗ ಕೋಶಗಳು ಹೂಮೊಗ್ಗು ಬಿರಿದ ಸ್ವಲ್ಪ ಹೊತ್ತಿನ ನಂತರ ಸೀಳಿ, ಪರಾಗವನ್ನು ಹೊರಹಾಕುತ್ತವೆ. ಅದೇ ಸಮಯಕ್ಕೆ ಶಲಾಕಾಗ್ರ ರಸಮಯಗೊಳ್ಳುವುದು. ಅದು ಸುಮಾರು ಮೂರು ದಿನಗಳವರೆಗೆ ರಸಮಯವಿರುತ್ತದೆ. ಶಲಾಕೆ ಉದ್ದನಾಗಿ, ಕೇಸರಗಳ ನಡುವೆ ಮೂಡಿ, ಮುಂದಕ್ಕೆ ಚಾಚಿರುತ್ತದೆ. ಪರಾಗಸ್ಪರ್ಶ ಕಾರ್ಯದಲ್ಲಿ ಜೇನುನೊಣಗಳು ನೆರವಾಗುತ್ತವೆ. ಅಂಡಾಶಯ ಅಧೋಸ್ಥಿತಿಯದು. ಕಾಯಿಗಳು ಬಲಿತು ಪಕ್ಷಗೊಂಡಾಗಲೂ ಸಹ ಪುಷ್ಪ ಪೀಠದ ಎಸಳುಗಳು ತುದಿಯಲ್ಲಿ ಅಂಟಿಕೊಂಡೇ ಇರುತ್ತವೆ.

ಹಣ್ಣಿನ ಆಕಾರ, ಬಣ್ಣ, ಗಾತ್ರ, ರುಚಿ, ವಾಸನೆ, ತೂಕ, ಬೀಜಗಳ ಸಂಖ್ಯೆ ಮುಂತಾಗಿ ಬಹಳಷ್ಟು ವ್ಯತ್ಯಾಸ ಇರುತ್ತದೆ. ಹಣ್ಣು ಮೊಟ್ಟೆಯಂತೆ, ಪೇರು ಆಕಾರ ಇಲ್ಲವೇ ಗೋಲಾಕಾರ ಇರುವುದುಂಟು. ಬೀಜರಹಿತ ಬಗೆಗಳಲ್ಲಿ ಅವುಗಳಿಗೆ ನಿರ್ದಿಷ್ಟ ಆಕಾರ ಇರುವುದಿಲ್ಲ. ಹಣ್ಣುಗಳ ಸಿಪ್ಪೆ ನಯವಾಗಿರಬಹುದು ಇಲ್ಲವೇ ಒರಟಾಗಿ ಉದ್ದ ಏಣುಗಳಿಂದ ಕೂಡಿರಬಹುದು. ತಿರುಳು ಕೆಂಪು, ಕೆನ್ನೀಲಿ ಅಥವಾ ಬೆಳ್ಳಗಿರುತ್ತದೆ. ಅದರಲ್ಲಿ ಸಾಕಷ್ಟು ರಸ ಇರುತ್ತದೆ. ಕಾಯಿಗಳ ಸಿಪ್ಪೆ ಹೊಳಪು ಹಸಿರು ಇದ್ದರೆ ಪೂರ್ಣ ಮಾಗಿದ ಹಣ್ಣು ಹಾಗಲ್ಲ. ಅವು ಮಧುರವಾಗಿ, ಸಿಹಿಯಾಗಿ ಇಲ್ಲವೇ ಸಿಹಿ ಹುಳಿಗಳ ಸಮ್ಮಿಶ್ರ ರುಚಿಯಿಂದ ಕೂಡಿದ್ದು ಆಕರ್ಷಕ ಪರಿಮಳ ಬೀರುತ್ತವೆ. ಆಸ್ಟ್ರೇಲಿಯಾದಲ್ಲಿ ಹುಳಿಯಿಂದ ಕೂಡಿದ ಬಗೆಗಳಿರುವುದಾಗಿ ತಿಳಿದುಬಂದಿದೆ. ಪೂರ್ಣ ಮಾಗಿದಾಗ ಮೆತ್ತಗಿರುತ್ತವೆ ಹಣ್ಣನ್ನು ಬೆರ‍್ರಿ ಎನ್ನುತ್ತಾರೆ.

ಪ್ರಭೇದಗಳು

ಸಿಡಿಯಂ ಉಪವರ್ಗದಲ್ಲಿ ಬ್ಸುಮಾರುಬ್೧೫೦ ಪ್ರಭೇದಗಳಿರುವುದಾಗಿ ತಿಳಿದುಬಂದಿದೆ ಅವುಗಳಲ್ಲಿ ಕೆಲವು ಮಾತ್ರವೇ ತಿನ್ನಲು ಉಪಯುಕ್ತವಿರುವ ಹಣ್ಣುಗಳನ್ನು ಬಿಡುತ್ತವೆ. ಕೆಲವೊಂದು ಅಲಂಕಾರಿಕ ಗಿಡಗಳಾಗಿ ಉಪಯುಕ್ತ. ಅವು ಹೀಗಿವೆ

. ಸಿದಿಯಂ ಗುಯಜಾವ : ತಳಿ ಆರೊಮ್ಯಾಟಿಕಂ; ಸಣ್ಣ ಗಾತ್ರದ ಹಣ್ಣನ್ನು ಬಿಡುತ್ತವೆ. ಹಣ್ಣು ವಿಶಿಷ್ಟ ಪರಿಮಳದಿಂದ ಕೂಡಿರುತ್ತವೆ.

. ಸಿಡಿಯಂ ಪೋಮಿಫೇರಂ : ಹಣ್ಣು ಸಣ್ಣವಿದ್ದು, ಸೇಬು ಹಣ್ಣಿನ ಆಕಾರದ್ದಿರುತ್ತವೆ.

. ಸಿಡಿಯಂ ಪೈರಿಫಾರಂ : ಹಣ್ಣು ಪೇರು ಹಣ್ಣಿನಂತಿರುತ್ತವೆ.

. ಸಿಡಿಯಂ ಮಾಂಟಾನಂ : ಬೆಟ್ಟಗಳಲ್ಲಿ ಕಂದುಬರುತ್ತದೆ. ಸಣ್ಣ ಪೊದೆ. ಸುಮಾರು ೧. ೫ ಮೀ. ಎತ್ತರವಿರುತ್ತದೆ. ರೆಂಬೆಗಳು ದುಂಡಗಿರುತ್ತವೆ.

. ಸ್ಟ್ರಾಬೆರಿ ಸೀಬೆ (ಸಿಡಿಯಂ ಕ್ಯಾಟ್ಲಿಯಾನಂ) : ಇದಕ್ಕೆ ಕ್ಯಾಟ್ಲಿ ಸೀಬೆ ಅಥವಾ ಕೆನ್ನೀಲಿ ಸೀಬೆ ಎನ್ನುವುದುಂಟು. ಸಣ್ಣ ಪೊದೆ ಅಥವಾ ಮರವಿದ್ದು ಚಳಿಯನ್ನು ತಡೆದುಕೊಳ್ಳಬಲ್ಲದು. ಹಣ್ಣು ಸಣ್ಣವು; ಹೆಚ್ಚೆಂದರೆ ೨. ೫ ಸೆಂ. ಮೀ. ಗಾತ್ರವಿರುತ್ತವೆಯಷ್ಟೆ. ಅವು ಗೋಲಾಕಾರವಿದ್ದು, ನೀಲಿಗೆಂಪು ಇಲ್ಲವೇ ಕಡುಗೆಂಪು ಬಣ್ಣವಿರುತ್ತವೆ. ಇವುಗಳಿಂದ ಅತ್ಯುತ್ತಮ ಜಾಮ್ ಮತ್ತು ಜೆಲ್ಲಿ ತಯಾರಿಸಬಹುದು. ಸಿಡಿಯಂ ಕ್ಯಾಟ್ಲಿಯಾನಂ ತಳಿ ಲೂಸಿಡಂನಲ್ಲಿ ಗಿಡಗಳು ದೊಡ್ಡವಿರುತ್ತವೆ. ಹಣ್ಣುಗಳ ಬಣ್ಣ ಗಂಧಕ ಹಳದಿ.

. ಚೈನಾಸೀಬೆ (ಸಿಡಿಯಂ ಫ್ರಿಯೆಡ್ರಿಕ್ರಿಸ್ಟಲ್ಯಾನಂ) : ಹಣ್ಣು ಗಾತ್ರದಲ್ಲಿ ಸಣ್ಣವಿದ್ದು, ಗೋಲಾಕಾರವಿರುತ್ತವೆ; ರುಚಿಯಲ್ಲಿ ಬಲು ಹುಳಿ.

. ಗಿನಿಸೀಬೆ (ಸಿಡಿಯಂ ಗಯನೆನ್ಸ್) : ಇದಕ್ಕೆ ಬ್ರೆಜಿಲ್ ಸೀಬೆ ಎಂಬ ಹೆಸರಿದೆ. ಇದರ ಹಣ್ಣೂ ಸಹ ಗಾತ್ರದಲ್ಲಿ ಬಲು ಸಣ್ಣವು; ಅವುಗಳ ಗುಣಮಟ್ಟ ಅಷ್ಟಕಷ್ಟೆ. ಈ ಗಿಡಗಳ ರೆಂಬೆಗಳಲ್ಲಿನ ಚಿಗುರುಗಳಲ್ಲಿ ಏಣುಗಳಿರುವುದಿಲ್ಲ. ಅವು ದುಂಡಗಿರುತ್ತವೆ.

. ಪೈನಾಪಲ್ ಸೀಬೆ(ಫಿಜೋವ ಸೆಲ್ಲೋವಿಯಾನ) : ಇದಕ್ಕೆ ಫಿಜೋವ ಸೀಬೆ ಎಂಬ ಹೆಸರಿದೆ. ದಕ್ಷಿಣ ಅಮೇರಿಕಾದ ನಿವಾಸಿ. ಹೆಚ್ಚಾಗಿ ಬೆಟ್ಟಗುಡ್ಡಗಳಲ್ಲಿ ಕಂಡುಬರುತ್ತದೆ ಇದು ನಿತ್ಯ ಹಸುರಿನ ಸಣ್ಣಪೊದೆ ಸಸ್ಯ. ಎಲೆಗಳು ಮಂದವಾಗಿ, ತೊಗಲಿನಂತೆ ಇರುತ್ತವೆ. ಅಲಂಕಾರಿಕ ಸಸ್ಯವನ್ನಾಗಿ ಬೆಳೆಸುವುದಂಟು. ಹೂವು ಆಕರ್ಷಕವಿರುತ್ತವೆ. ಹಣ್ಣು ಗಾತ್ರದಲ್ಲಿ ಬಲು ಸಣ್ಣವು.

ಬಿಡಿ ಹಣ್ಣು ೨ ರಿಂದ ೮ ಸೆಂ. ಮೀ. ಉದ್ದವಿದ್ದು ಮೊಟ್ಟೆ ಅಥವಾ ಪೇರು ಆಕಾರದ್ದಿರುತ್ತವೆ. ಹಣ್ಣಿನ ತಿರುಳು ದಪ್ಪನಾಗಿದ್ದು ಬೆಳ್ಳಗಿರುತ್ತದೆ. ರುಚಿಯಲ್ಲಿ ಸಿಹಿಯಾಗಿ ಇಲ್ಲವೇ ಸಿಹಿ-ಹುಳಿಗಳ ಸಮ್ಮಿಶ್ರಣವಿದ್ದು, ಶೇ. ೯ ರಿಂದ ೧೨ರಷ್ಟು ಒಟ್ಟು ಕರಗಿಸಿದ ಘನ ಪದಾರ್ಥಗಳಿಂದ ಕೂಡಿರುತ್ತವೆ. ಸುಕ್ರೋಸ್, ಪ್ರುಕ್ಟೋಸ್ ಮತ್ತು ಗ್ಲುಕೋಸ್ ಸಕ್ಕರೆಗಳಿದ್ದು ಅವುಗಳ ಪೈಕಿ ಸುಕ್ರೋಸ್ ಪ್ರಧಾನ ಸಕ್ಕರೆಯಾಗಿರುತ್ತದೆ. ಹುಳಿಯ ಅಂಶ ಶೇ. ೧. ೧೭ರಿಂದ ೩. ೩ರಷ್ಟು ವ್ಯತ್ಯಾಸಗೊಳ್ಳುತ್ತದೆ. ೧೦೦ ಗ್ರಾಂ ತಿರಿಳಿನಲ್ಲಿ ೦. ೧೭ ರಿಂದ ೩. ೫ ಮಿ. ಗ್ರಾಂ ಅಸ್ಕಾರ್ಬಿಕ್ ಆಮ್ಲ ಇರುತ್ತದೆ. ಖನಿಜ ಪದಾರ್ಥಗಳ ಪೈಕಿ ಪೊಟ್ಯಾಷಿಯಂ ಅಂಶ ಹೆಚ್ಚಾಗಿರುತ್ತದೆ. ಈ ಹಣ್ಣುಗಳ ಸೇವನೆ ಥೈರಾಯ್ಡ್ ಗ್ರಂಥಿಗಳಿಗೆ ಸಂಬಂದಿಸಿದ ರೋಗಗಳಿಗೆ ಪರಿಣಾಮಕಾರಕ.

ಹಣ್ಣುಗಳನ್ನು ಹೊಳುಮಾಡಿ ಹಾಗೆಯೇ ತಿನ್ನಬಹುದು ಅವುಗಳಿಂದ ಜಾಮ್, ಜೆಲ್ಲಿ, ಉಪ್ಪಿನಕಾಯಿ, ಚಟ್ನಿ ಮುಂತಾಗಿ ತಯಾರಿಸವುದುಂಟು. ಅವುಗಳನ್ನು ಸಲಾಡ್, ಕೇಕ್ ಮುಂತಾಗಿ ಸಹ ಬಳಸುರತ್ತಾರೆ. ಹಣ್ಣು ವಿಶಿಷ್ಟ ಪರಿಮಳ ಮತ್ತು ರುಚಿಗಳಿಂದ ಕೂಡಿರುತ್ತದೆ. ಪೈನಾಪಲ್ ಮತ್ತು ಸ್ಟ್ರಾಬೆರಿ ಹಣ್ಣುಗಳ ಸಮ್ಮಿಶ್ರ ರುಚಿ ಮತ್ತು ವಾಸನೆಗಳಿರುತ್ತವೆ.

ಇದರಲ್ಲಿ ಅಪೊಲೊ, ಕೂಲಿಡ್ಜ್, ಈಡನ್ ವೇಲ್, ಮ್ಯಾಮ್ಮಥ್, ಟ್ರಿಂಫ್ ಮುಂತಾಗಿ ಹಲವಾರು ಬಗೆ ಅಥವಾ ತಳಿಗಳಿವೆ. ರಷ್ಯಾದ ಕಪ್ಪು ಸಮುದ್ರದ ಕರಾವಳಿಯಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಅಲ್ಲೆಲ್ಲಾ ಸಸಿಗಳನ್ನು ೨ x ೫ ಮೀ. ಅಂತರದಲ್ಲಿ ನೆಟ್ಟು ಬೆಳೆಸುವುದು ಸಾಮಾನ್ಯ. ಮೇ-ಜೂನ್ ಸಮಯದಲ್ಲಿ ಹೂವು ಬಿಡುತ್ತವೆ ಇದರ ಬೇಸಾಯಕ್ಕೆ ೨೬. ೬ರಿಂದ ೩೨. ೨0 ಸೆಂ. ಉಷ್ಣತೆ ಬಹುಸೂಕ್ತ. ಗಿಡವೂಂದಕ್ಕೆ ೬೦ ಕೆ. ಜಿವರೆಗೂ ಹಣ್ಣು ಸಿಗುತ್ತವೆ.

ಸೀಬೆಯಲ್ಲಿ ಹಲವಾರು ತಳಿಗಳಿವೆ. ಅವುಗಳ ಜೊತೆಗೆ ಕೆಲವೊಂದು ಉತ್ತಮ ಆಯ್ಕೆಗಳೂ ಸಹ ಬೇಸಾಯದಲ್ಲಿವೆ. ಇತ್ತೀಚಿನ ವರ್ಷಗಳಲ್ಲಿ ಬೇರೆ ಬೇರೆ ತಳಿಗಳನ್ನು ಸಂಕರಿಸಿ, ಮಿಶ್ರತಳಿಗಳನ್ನು ಉತ್ಪಾದಿಸಲಾಗಿದೆ. ಕೆಲವೊಂದು ಮಾತ್ರವೇ ವಾಣಿಜ್ಯವಾಗಿ ಬಳಯಲು ಸೂಕ್ತವಿರುತ್ತವೆ. ನಮ್ಮ ದೇಶದಲ್ಲಿ ಹೆಚ್ಚಾಗಿ ಇಷ್ಟಪಡುವುದು ಸಿಹಿ ಬಗೆಗಳನ್ನು ಮಾತ್ರವೇ. ಅಧಿಕ ತಿರುಳು ಮತ್ತು ಕಡಿಮೆ ಸಂಖ್ಯೆಯ ಮೆತ್ತಗಿನ ಬೀಜ ಇರುವ ಸಿಹಿಹುಳಿಗಳ ಸಮ್ಮಿಶ್ರ ರುಚಿಯಿಂದ ಕೂಡಿದ, ಆಕರ್ಷಕ ಗಾತ್ರ ಹಾಗೂ ಬಣ್ಣ ಇರುವ, ಮಧುರವಾದ ಪರಿಮಳ ಬೀರುವ ಹಣ್ಣುಗಳಾದರೆ ಅವುಗಳಿಗೆ ಸದಾ ಬೇಡಿಕೆ ಇದ್ದೇ ಇರುತ್ತದೆ.

ತಳಿಗಳನ್ನು ಗುರುತಿಸಿ, ವರ್ಣಿಸುವ ಕೆಲಸ ೧೮೬೩ರಲ್ಲಿ ಪ್ರಾರಂಭಗೊಂಡಿತು. ಕೆಲವೊಂದು ತಳಿಗಳನ್ನು ಅವುಗಳನ್ನು ಹಚ್ಚಿನ ಕ್ಷೇತ್ರದಲ್ಲಿ ಬೆಳೆದು ಬಳಸುವ ಪ್ರದೇಶಗಳ ಆಧಾರದ ಮೇಲೆ ಹೆಸರಿಸಲಾಗಿದೆ. ಉದಾಹರಣೆಗೆ ಅಲಹಾಬಾದ್ ಸಫೇದ, ಬನಾರಸಿ, ಹರಿಜ, ಬರೂಯಿಪುರ್, ಮಿರ್ಜಾಪುರ್, ನವಲೂರು ಮುಂತಾದವು. ಮತ್ತೆ ಕೆಲವೊಂದನ್ನು ಅವುಗಳ ಗಾತ್ರವನ್ನಾಧರಿಸಿ, ಹೆಸರಿಸಲಾಗಿದೆ. ಉದಾಹರಣೆಗೆ ಬೆಹಾಟ್ ಕೋಕೋನಟ್ ತಳಿ.

ಮಹಾರಾಷ್ಟ್ರದ ತಳಿಗಳನ್ನು ಚೀಮ ಮತ್ತು ದೇಶಮುಕ್ (೧೯೨೭)ವರ್ಣಿಸಿದರೆ ಉತ್ತರ ಪ್ರದೆಶದ ತಳಿಗಳನ್ನು ಸ್ಮಿಥ್ ಎಂಬುವರು ವರ್ಣಿಸಿದರು. ಈ ಕೆಲಸವನ್ನು ಟಿಯೋಷಿಯ ಹಾಗೂ ಅವರ ಸಂಗಡಿಗರು (೧೯೬೨)ಮುಂದುವರಿಸಿದರು. ಅದೇ ರೀತಿ ಆಂಧ್ರಪ್ರದೇಶದ ತಳಿಗಳನ್ನು ಇಬ್ರಾಹಿಂ(೧೯೪೩) ; ಬಿಹಾರಿನ ತಳಿಗಳನ್ನು ರಾಯ್ ಮತ್ತು ಅಹಮದ್ (೧೯೫೧); ಅಸ್ಸಾಂನ ತಳಿಗಳನ್ನು ದತ್ತ (೧೯೫೮) ಮತ್ತು ಮಧ್ಯಪ್ರದೇಶ ತಳಿಗಳನ್ನು ತ್ರಿಪಾಠಿ ಹಾಗೂ ಅವರ ಸಂಗಡಿಗರೂ (೧೯೭೧)ವರ್ಣಿಸಿದ್ದಾರೆ. ಬೇಸಾಯದಲ್ಲಿನ ಮುಖ್ಯ ತಳಿಗಳು, ಆಯ್ಕೆಗಳು ಹಾಗೂ ಮಿಶ್ರತಳಿಗಳು ಹೀಗಿವೆ:

ತಳಿಗಳು

. ಅಲಹಾಬಾದ್ ಸಫೆದ : ಇದಕ್ಕೆ ಅಲಹಾಬಾದ್ ಸೀಬೆ, ಬಿಳಿ ಸೀಬೆ ಮುಂತಾದ ಹೆಸರುಗಳಿವೆ. ಉತ್ತರ ಪ್ರದೇಶದ ಜನಪ್ರಿಯ ತಳಿ ಇದಾಗಿದೆ. ಇದರ ಮರಗಳು ಕಡುವಿನಿಂದ ಕೂಡಿದ್ದು, ೫. ೮ ರಿಂದ ೬. ೨ ಮೀ. ಎತ್ತರಕ್ಕೆ ಬೆಳೆಯುತ್ತವೆ. ರೆಂಬೆಗಳು ಉದ್ದನಾಗಿದ್ದು ಅಧಿಕ ಸಂಖ್ಯೆಯಲ್ಲಿರುತ್ತವೆ. ಎಲೆಗಳು ದಟ್ಟದಾಗಿ, ಅದುಮಿದಂತೆ ಕಾಣುವುವು. ಹಣ್ಣು ಸಾಧಾರಣ ದೊಡ್ಡವಿದ್ದು ಸರಾಸರಿ ೧೮೦ ಗ್ರಾಂ ತೂಕವಿರುತ್ತವೆ. ಹಣ್ಣು ಗುಂಡಾಗಿದ್ದು ತುದಿಯತ್ತ ಅದುಮಿದಂತಿರುತ್ತವೆ. (ಚಿತ್ರ-೬)

ಚಿತ್ರ ೬ : ಅಲಹಾಬಾದ್ ಸಫೇದ

ಸಿಪ್ಪೆ ನುಣ್ಣಗಿದ್ದು ಬಿಳಿ ಹಳದಿ ಬಣ್ಣದ್ದಿರುತ್ತದೆ. ತಿರುಳು ಮೃದು; ಬೆಳ್ಳಗಿರುತ್ತದೆ. ರುಚಿ ಮತ್ತು ವಾಸನೆಗಳು ಹಿತವಾಗಿರುತ್ತವೆ. ತಿರಿಳಿನಲ್ಲಿ ಬಹಳಷ್ಟು ಗಡುಸಾದ ಬೀಜ ಇರುತ್ತವೆ ಹಾಗಾಗಿ ತಿನ್ನ ಬಯಸುವವರು ಹಿಂಜರಿಯುವುದು ಸಹಜ. ಹಣ್ಣುಗಳ ಸಂಗ್ರಹಣಾ ಗುಣ ಮತ್ತು ಇಳುವರಿ ಉತ್ತಮ. ಕಡಿಮೆ ಮಳೆಯಾಗುವ ಪ್ರದೇಶಗಳಿಗೆ ಬಹುವಾಗಿ ಒಪ್ಪುವ ತಳಿ ಇದಾಗಿದೆ.

. ಚಿಟ್ಟಿಡಾರ್ : ಇದಕ್ಕೆ ಚುಕ್ಕೆ ಸೀಬೆ ಎನ್ನುತ್ತಾರೆ. ಇದರ ಮರಗಳು ೫ ರಿಂದ ೫. ೮ ಮೀ. ಎತ್ತರಕ್ಕೆ ಬೆಳೆಯುತ್ತವೆ. ಮರದ ನೆತ್ತಿ ದುಂಡಗಿದ್ದು ರಂಬೆಗಳು ಸುತ್ತ ಹರಡಿ ಬೆಳೆದಿರುತ್ತವೆ. ಎಲೆಗಳು ದೊಡ್ಡವು, ಅವುಗಳ ತುದಿ ಚೂಪಾಗಿರುತ್ತದೆ. ಇದರ ಹಣ್ಣು ಎಲ್ಲಾ ವಿಧದಲ್ಲಿ ಅಲಹಾಬಾದ್ ಸಫೇದ ತಳಿಯ ಹಣ್ಣಿನಂತೆ ಇರುತ್ತವೆಯಾದರೂ, ಸಿಪ್ಪೆಯ ಮೇಲೆ ಗುಂಡು ಸೂಜಿಯ ತಲೆಯಷ್ಟು ಗಾತ್ರದ ಕೆನ್ನೀಲಿ ಚುಕ್ಕೆಗಳಿರುವುದು ಈ ತಳಿಯಲ್ಲಿನ ವೈಶಿಷ್ಟ್ಯತೆ. ಇದನ್ನು ಹೆಚ್ಚಾಗಿ ದೆಹಲಿ ಹಾಗೂ ಅದರ ಸುತ್ತಮುತ್ತ ಬೆಳೆಯುತ್ತಾರೆ. ಹಣ್ಣು ಗೋಲಾಕಾರ; ಸಿಪ್ಪೆ ಮಾಸಲು ಹಳದಿ ಬಣ್ಣವಿರುತ್ತದೆ. ಹಣ್ಣುಗಳ ಸಂಗ್ರಹಣಾ ಗುಣ ಉತ್ತಮ.

. ಬನಾರಸಿ : ಸಿಹಿ ಬಗೆಗಳ ಪೈಕಿ ಅತ್ಯುತ್ತಮ ತಳಿ ಇದಾಗಿದೆ. ತಿರುಳಿನಲ್ಲಿ ಹಿಳಿಯ ಅಂಶವೇ ಇರುವುದಿಲ್ಲ. ಇದರ ಮರಗಳು ೪. ೨ ರಿಂದ ೫. ೪ಮೀ. ಎತ್ತರಕ್ಕೆ ಬೆಳೆಯುತ್ತವೆ. ಮರದ ನೆತ್ತಿ ಅಗಲಕ್ಕೆ ಹರಡಿರುತ್ತದೆ. ಹಣ್ಣು ದುಡಗಿದ್ದು ಹಳದಿ ಬಣ್ಣದ್ದಿರುತ್ತವೆ. ಅವುಗಳ ಸಂಗ್ರಹಣಾ ಗುಣ ಸಾಧಾರಣ.

. ಬರೂಯಿಪುರ : ಇದರ ಬೇಸಾಯ ಮತ್ತು ಬಳಕೆಗಳು ಪಶ್ಚಿಮ ಬಂಗಾಳದಲ್ಲಿ ವ್ಯಾಪಕ. ಮರಗಳು ಸಾಧಾರಣ ಎತ್ತರಕ್ಕೆ ಬೆಳೆದು, ಅಗಲವಿರುವ ಹಾಗೂ ಒತ್ತಾಗಿರುವ ನೆತ್ತಿಯಿಂದ ಕೂಡಿರುತ್ತವೆ. ರೆಂಬೆಗಳು ಸುತ್ತಲೂ ಹರಡಿ ಚಾಚಿರುತ್ತವೆ. ಹಣ್ಣು ಸಾಧಾರಣ ದೊಡ್ಡವಿದ್ದು ಗುಂಡಗಿರುತ್ತವೆ. ಅವುಗಳ ತುದಿ ಅದುಮಿದಂತೆ ಕಾಣುವುದು. ಸಿಪ್ಪೆಯ ಬಣ್ಣ ಹಳದಿ ಹಸಿರು. ಹಣ್ಣಿನ ಮೇಲ್ಮೈ ಒರಟು, ಉದ್ದಕ್ಕೆ ಗೀರುಗಳಿರುತ್ತವೆ. ಬಿಡಿ ಹಣ್ಣು ಸುಮಾರು ೧೫೦ ಗ್ರಾಂ ತೂಕವಿರುತ್ತವೆ. ತಿರುಳಿನಲ್ಲಿ ಬಹಳಷ್ಟು ಬೀಜ ಇರುತ್ತವೆ. ಹಣ್ಣುಗಳ ಸಂಗ್ರಹಣಾಗುಣ ಸಾಧಾರಣ.

5. ಹಬ್ಷಿ : ಇದು ಗಿಡ್ಡ ತಳಿ. ಹಣ್ಣು ದುಂಡಗಿರುತ್ತವೆ. ಅವುಗಳ ಮೇಲ್ಮೈ ನುಣ್ಣ್ಗಿರುತ್ತದೆ. ಬಿಡಿ ಹಣ್ಣು ಸುಮಾರು ೧೧೦ ಗ್ರಾಂ ತೂಗುತ್ತದೆ. ಸಿಪ್ಪೆಯ ಬಣ್ಣ ಮಾಸಲು ಹಳದಿ. ತಿರುಳು ಕೆಂಪು ಇಲ್ಲವೇ ಕೆನೆ ಬಿಳುಪು ಬಣ್ಣದ್ದಿದ್ದು ಬಹಳಷ್ಟು ಬೀಜದಿಂದ ಕೂಡಿರುತ್ತದೆ.

. ಹಸಿರು ಸೀಬೆ : ಉತ್ತರ ಪ್ರದೇಶದ ಕಾಶಿ ಹಾಗೂ ಅದರ ಸುತ್ತಮುತ್ತ ಇದರ ಬೇಸಾಯವಿದೆ. ಇದರ ವೈಶಿಷ್ಟತೆಯೆಂದರೆ ಹಣ್ಣು ಪೂರ್ಣ ಬಲಿತು ಪಕ್ವಗೊಂಡರೂ ಸಹ ಅವುಗಳ ಸಿಪ್ಪೆ ಮಾತ್ರ ಹಸಿರಾಗಿರುವುದು. ಬಿಡಿ ಹಣ್ಣುಗಳ ತೂಕ ಸುಮಾರು ೧೪೦ ಗ್ರಾಂ ಗಳಷ್ಟಿರುತ್ತದೆ. ಹಣ್ಣು ಆಕಾರ, ರುಚಿ ಮುಂತಾಗಿ ಅಲಹಾಬಾದ್ ಸಫೇದ ತಳಿಯಂತೆ ಇರುತ್ತದೆ.

. ನವಲೂರು ಸೀಬೆ : ಇದಕ್ಕೆ ಧಾರವಾಡ ಸೀಬೆ ಎಂಬ ಹೆಸರಿದೆ. ನಮ್ಮ ರಾಜ್ಯದ ಧಾರವಾಡ-ಹುಬ್ಬಳ್ಳಿಗಳಾ ಮಧ್ಯೆ ಹೆದ್ದಾರಿಗೆ ಆತುಕೊಂಡಂತೆ ನವಲೂರು ಎಂಬ ಹಳ್ಳಿ ಇದೆ. ಅಲ್ಲಿ ಈ ತಳಿ ಬಲು ಜನಪ್ರಿಯ. ಹಣ್ಣು ನೋಡಲು ಪೇರು ಹಣ್ಣಿನಂತಿದ್ದು, ಹಳದಿ ಹಸಿರು ಸಿಪ್ಪೆಯಿಂದ ಕೂಡಿರುತ್ತದೆ. ತಿರುಳಿನ ಬಣ್ಣ ಕೆನ್ನೀಲಿ. ಬೀಜ ಅಸಂಖ್ಯಾತ. ಅವು ಗಡುಸಾಗಿರುತ್ತವೆ. ತಿನ್ನಲು ಸಿಹಿಯಾಗಿದ್ದರೂ ಗಟ್ಟಿ ಬೀಜದಿಂದಾಗಿ ಅಷ್ಟೊಂದು ವಾಣಿಜ್ಯವಾಗಿ ಹರಡಿಲ್ಲ. ಹಣ್ಣುಗಳ ಸಂಗ್ರಹಣಾ ಗುಣ ಉತ್ತಮ.

. ನಾಸಿಕ್ ಸೀಬೆ : ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಸುಪ್ರಸಿದ್ಧ ತಳಿ. ಹಣ್ಣು ಆಕಾರದಲ್ಲಿ ಪೇರುಹಣ್ಣಿನಂತೆ, ಗತ್ರದಲ್ಲಿ ಸಾಧಾರಣ ದೊಡ್ಡವು. ಸಿಪ್ಪೆಯ ಮೇಲೆ ಉದ್ದನಾದ ಗೀರು ಹಳ್ಳಗಳಿರುತ್ತವೆ. ಸಿಪ್ಪೆಯ ಬಣ್ಣ ಮಾಸಲು ಹಳದಿ. ತಿರುಳು ಬೆಳ್ಳಗಿದ್ದು ಗಟ್ಟಿ ಬೀಜದಿಂದ ಕೂಡಿರುತ್ತದೆ.

. ಬೆಂಗಳೂರು ಸೀಬೆ : ಹಿಂದೆ ಬೆಂಗಳೂರು ಹಾಗೂ ಅದರ ಸುತ್ತಮುತ್ತ ಬಹಳಷ್ಟು ಹೆಸರು ಗಳಿಸಿದ್ದ ತಳಿ; ಹಣ್ಣು ಆಕಾರದಲ್ಲಿ ಪೇರು ಹಣ್ಣಿನಂತೆ. ತಿರುಳು ಬೆಳ್ಳಗಿದ್ದು, ಸಿಹಿಯಾಗಿರುತ್ತವೆ. ಬೀಜ ಬಹಳ;ಗಡುಸಾಗಿರುತ್ತದೆ.

೧೦. ಕರೇಲ ಸೀಬೆ : ಉತ್ತರ ಪ್ರದೇಶದ ಹಲವಾರು ಕಡೆಗಳಲ್ಲಿ ಇದರ ಬೇಸಾಯವಿದೆ. ಹಣ್ಣು ಆಕಾರದಲ್ಲಿ ಪೇರು ಹಣ್ಣಿನಂತೆ, ಮೇಲ್ಮೈ ಒರಟಾಗಿ ಹಾಗಲಕಾಯಿಯಲ್ಲಿದ್ದಂತೆ ಕಾಣುವುದು. ತಿರುಳು ಬೆಳ್ಳಗಿದ್ದು ತಿನ್ನಲು ಸಿಹಿಯಾಗಿರುತ್ತದೆ. ಬೀಜಗಳ ಸಂಖ್ಯೆ ಅಧಿಕ. ಫಸಲು ಯಥೇಚ್ಛ.

೧೧. ಕೆಂಪು ಸೀಬೆ : ಇದಕ್ಕೆ ಚಂದ್ರ ಸೀಬೆ ಎನ್ನುತ್ತಾರೆ. ಇದನ್ನು ಹೆಚ್ಚಾಗಿ ಅಲಹಾಬಾದ್ ಜಿಲ್ಲೆಯಲ್ಲಿ ಬೆಳೆಯುತ್ತಾರೆ. ಹಣ್ಣು ಉದ್ದನಾಗಿ, ಮೊಟ್ಟೆಯಂತಿರುತ್ತವೆ. ಹಣ್ಣುಗಳ ಬಣ್ಣ ಹಳದಿ ಹಸಿರು. ಅವುಗಳ ಮೇಲ್ಮೈ ನುಣ್ಣಗಿರುತ್ತದೆ. ಸರಾಸರಿ ಹಣ್ಣುಗಳು ತೂಕ ೧೭೦ ಗ್ರಾಂ ಫಸಲು ಸಮೃದ್ಧ. ತಿರುಳಿನಲ್ಲಿ ಬಹಳಷ್ಟು ಬೀಜ ಇರುತ್ತವೆ.

೧೨. ಸುಪ್ರೀಮ್ ಮೈಲ್ಡ್ ಫ್ಲೆಶ್ಡ್ : ಇದು ಪ್ಲೋರಿಡಾದ ತಳಿ. ಹಣ್ಣು ಅಂಡಾಕಾರ, ಗಾತ್ರದಲ್ಲಿ ಸಾಧಾರಣ ದೊಡ್ಡವು. ಸಿಪ್ಪೆ ಮತ್ತು ತಿರುಳುಗಳ ಬಣ್ಣ ಬೆಳಿ ಹಸಿರು. ರುಚುಯಲ್ಲಿ ಸಿಹಿ-ಹುಳಿಗಳ ಸಮ್ಮಿಶ್ರಣವಿದ್ದು ತಿನ್ನಲು ಬಲು ಮಧುರ. ಸರಾಸರಿ ಹಣ್ಣುಗಳ ತೂಕ ೧೨೦ ಗ್ರಾಂಗಳಷ್ಟು.

೧೩. ಹರಿಜ : ಇದರ ಬೇಸಾಯ ಬಿಹಾರ್ ನಲ್ಲಿ ಹೆಚ್ಚು. ಮರಗಳು ೩ ರಿಂದ ೫ ಮೀ ಎತ್ತರಕ್ಕೆ ಮೆಳೆಯುತ್ತದೆ ಹಾಗೂ ಸಾಧಾರಣ ಕಸುವಿನಿಂದ ಕೂಡಿರುತ್ತವೆ. ರೆಂಬೆಗಳು ವಿರಳ. ಹಣ್ಣು ಗುಂಡಗಿದ್ದು, ದಟ್ಟ ಹಸಿರು ಬಣ್ಣದ್ದಿರುತ್ತವೆ. ತಿರುಳು ಬೆಳ್ಳಗಿದ್ದು, ರುಚಿಯಲ್ಲಿ ಅತ್ಯುತ್ತಮವಿರುತ್ತದೆ. ಫಸಲು ಯಥೇಚ್ಚ; ಸಂಗ್ರಹಣಾ ಗುಣ ಹೊಂದಿರುತ್ತವೆ.

೧೪. ಸೇಬು ಬಣ್ಣದ ಸೀಬೆ : ಇದನ್ನು ಆಪಲ್ ಕಲರ್ ಎಂಬ ಹೆಸರಿದೆ. ಇದರ ಮರಗಳು ಸಾಧಾರಣ ದೊಡ್ಡವಿದ್ದು ೪ ರಿಂದ ೫. ೨ ಮೀಎತ್ತರಕ್ಕೆ ಬಳೆಯುತ್ತವೆ. ನೆತ್ತಿ ಅಗಲವಿರುತ್ತದೆ. ಹಣ್ಣು ಗುಂಡಗಿದ್ದು, ಮೇಲೆಲ್ಲಾ ಕೆಂಪು ಛಾಯೆ ಹೊಂದಿರುತ್ತವೆ. ಸಿಪ್ಪೆಯ ಮೇಲೆ ಸಣ್ಣ ಸಣ್ಣ ಚುಕ್ಕೆಗಳಿರುತ್ತವೆ. ರುಚಿಯಲ್ಲಿ ಸಿಹಿ ಇದ್ದು, ಉತ್ತಮ ಸಂಗ್ರಹಣಾ ಗುಣ ಹೊಂದಿರುತ್ತವೆ.

೧೫. ಬೀಜ ರಹಿತ ಸೀಬೆ : ಇದನ್ನು ಸೀಡ್ಲೆಸ್ ಗೋವಾ ಎನ್ನುತ್ತಾರೆ. ಇದು ಅಷ್ಟಾಗಿ ಬೇಸಾಯದಲ್ಲಿ ಇಲ್ಲ. ಹಣ್ಣಿನ ತೋಟಗಳಲ್ಲಿ ಒಂದೆರಡು ಮರಗಳಿದ್ದರೆ ಹೆಚ್ಚು. ಫಸಲು ಕಡಿಮೆ. ಹಣ್ಣುಗಳಿಗೆ ನಿರ್ದಿಷ್ಟ ಆಕಾರ ಇರುವುದಿಲ್ಲ. ಅವು ಗಾತ್ರದ ಸಾಧಾರಣ ದೊಡ್ಡವಿದ್ದು ಪೂರ್ಣಹಣ್ಣಾದಾಗ ಹಸಿರು ಬಿಳುಪು ಬಣ್ಣದ್ದಿರುತ್ತವೆ. ಹಣ್ಣನ್ನು ಎರಡಾಗಿ ಹೋಳುಮಾಡಿದರೆ ಮಧ್ಯೆ ಪೊಳ್ಳುಭಾಗ ಇದ್ದು ಒಂದೆರಡು ಬೀಜ ಕಂಡುಬರುವುದುಂಟು. ತಿರಿಳಿನ ಬಣ್ಣ ಬಿಳುಪು. ರುಚಿಯಲ್ಲಿ ಸಾಧಾರಣ ಸಿಹಿ. ಸಂಗಹಣಾ ಗುಣ ಅಷ್ಟಕ್ಕಷ್ಟೆ. ಇಅದರಲ್ಲಿ ನಾಗಪುರ ಸೀಡ್ಲೆಸ್, ಸಹರಾನ್ ಪುರ ಸೀಡ್ಲೆಸ್ ಮುಂತಾದ ಬಗೆಗಳಿವೆ.

ಆಯ್ಕೆಗಳು

. ಲಕ್ನೋ೪೯ : ಇದಕ್ಕೆ ಸರ್ದಾರ್ ಸೀಬೆ ಎನ್ನುತ್ತಾರೆ. ಅಲಹಾಬಾದ್ ಸಫೇದ ತಳಿಯ ಬೀಜ ಸಸಿಗಳಿಂದ ಆರಿಸಿ, ನಿರ್ಲಿಂಗ ವಿಧಾನದಲ್ಲಿ ವೃದ್ಧಿಪಡಿಸಲಾಯಿತು. ಇದು ಪುಣೆಯ ಹಣ್ಣು ಸಂಶೋಧನಾ ಕೇಂದ್ರದ ಕೊಡುಗೆ. ಇದರ ಮರಗಳು ಅರೆಗಿಡ್ದ. ಕಸುವಿನಿಂದ ಕೊಡಿದ್ದು ಸುಮಾರು ೨. ೩ ರಿಂದ ೩. ೪ ಮೀ ಎತ್ತರವಿರುತ್ತವೆ. ರೆಂಬೆಗಳು ಬಹಳಷ್ಟಿದ್ದು ನೆಲದತ್ತ ಬಾಗಿರುತ್ತವೆ. ನೆತ್ತಿ ಸಮತಟ್ಟಾಗಿರುತ್ತದೆ. ಹಣ್ಣು ದುಂಡಗೆ ಗೋಲಾಕಾರವಾಗಿರುತ್ತವೆ. (ಚಿತ್ರ-೭)

 

ಚಿತ್ರ ೭ : ಸರ್ದಾರ್ ತಳಿ

 

ಹಣ್ಣುಗಳ ಮೇಲ್ಮೈ ಒರಟು. ಸಿಪ್ಪೆಯ ಬಣ್ಣ ಪ್ರಿಮ್ ರೋಸ್ ಹಳದಿ. ಕೆಲವೊಮ್ಮೆ ಸಿಪ್ಪೆಯ ಮೇಲೆ ಕೆಂಪು ಚುಕ್ಕೆಗಳಿರುವುದುಂಟು. ತಿರುಳು ಬೆಳ್ಳಗಿದ್ದು ರುಚಿಯಲ್ಲಿ ಮಧುರವಾಗಿರುತ್ತದೆ. ಬೀಜ ವಿರಳ, ಮೃದುವಾಗಿರುತ್ತವೆ. ಬಿಡಿಹಣ್ಣು ಸುಮಾರು ೨೦೦ ಗ್ರಾಂ ತೂಕವಿರುತ್ತವೆ. ಫಸಲು ಯಥೇಚ್ಛ, ಸಂಗ್ರಹಣಾ ಗುಣ ಅತ್ಯುತ್ತಮ.

. ಬೆಹಾಟ್ ಕೋಕೊನಟ್ : ಇದೂ ಸಹ ಅಲಹಾಬಾದ್ ಸಫೇದ ತಳಿಯ ಬೀಜ ಸಸಿಗಳಿಂದ ಆರಿಸಿ ವೃದ್ಧಿಪಡಿಸಲ್ಪಟ್ಟಿದ್ದೇ. ನಿರ್ಲಿಂಗ ವಿಧಾನದಲ್ಲಿ ವೃದ್ಧಿಪಡಿಸಿ, ಬೇಸಾಯಕ್ಕೆ ಬಿಡುಗಡೆ ಮಾಡಲಾಯಿತು. ಇದರ ಮರಗಳು ೪. ೬ರಿಂದ ೫. ೬ ಮೀ. ಎತ್ತರಕ್ಕೆ ಬೆಳೆಯುತ್ತವೆ. ರೆಂಬೆಗಳು ದಟ್ಟವಿದ್ದು, ನೆತ್ತಿ ಸಮತಟ್ಟಾಗಿರುತ್ತದೆ. ಹಣ್ಣು ದೊಡ್ಡವು ಗುಂಡಗಿದ್ದು ತುದಿಯತ್ತ ಅದುಮಿದಂತೆ ಇರುತ್ತವೆ. ಸಿಪ್ಪೆಯ ಮೇಲ್ಮೈ ಒರಟಾಗಿದ್ದು, ಬಿಳಿ ಹಸಿರು ಹಳದಿ ಬಣ್ಣದ್ದಿರುತ್ತದೆ. ಮೇಲೆಲ್ಲಾ ಸಣ್ಣ ಸಣ್ಣ ಚುಕ್ಕೆಗಳಿರುತ್ತವೆ. ತಿರುಳು ಬೆಳ್ಳಗಿದ್ದು ತಿನ್ನಲು ಮಧುರವಾಗಿರುತ್ತದೆ. ಬೀಜಗಳ ಸಂಖ್ಯೆ ಅಧಿಕ. ಫಸಲು ಯಥೇಚ್ಛ, ಬಿಡಿಹಣ್ಣು ಸುಮಾರು ೨೭೦ ಗ್ರಾಂ ತೂಗುತ್ತವೆ. ಹಣ್ಣಿನ ಸಂಗ್ರಹಣಾ ಗುಣ ಉತ್ತಮ.

. ಮಿರ್ಜಾಪುರ್ : ಇದೂ ಸಹ ಅಲಹಾಬಾದ್ ಸಫೇದ ತಳಿಯ ಬೀಜಸಸಿಗಳಲ್ಲಿನ ಆಯ್ಕೆಯೇ. ನಿರ್ಲಿಂಗ ವಿಧಾನಗಳಲ್ಲಿ ವೃದ್ಧಿಪಡಿಸಿ ಬೇಸಾಯಕ್ಕೆ ತರಲಾಯಿತು. ಹಣ್ಣು ದುಂಡಗಿದ್ದು. ಒರಟು ಮೆಲ್ಮೈಯಿಂದ ಕೂಡಿರುತ್ತವೆ. ಹಣ್ಣುಗಳ ಬಣ್ಣ ಹಳದಿ. ತಿರುಳು ಬೆಳ್ಳಗಿದ್ದು, ಸಿಹಿ-ಹಿಳಿಗಳ ಸಮ್ಮಿಶ್ರ ರುಚಿಯಿಂದ ಕೂಡಿರುತ್ತದೆ. ಬೀಜಗಳ ಸಂಖ್ಯೆ ಹಚ್ಚು. ಬಿಡಿಹಣ್ಣು ೧೭೦ ಗ್ರಾಂ ತೂಕವಿರುತ್ತದೆ.

ಮಿಶ್ರತಳಿಗಳು

ಸೀಬೆಯಲ್ಲಿ ಮಿಶ್ರತಳಿ ಅಭಿವೃದ್ಧಿ ಕೆಲಸ ಅಲ್ಲಲ್ಲಿ ನಡೆಯುತ್ತಿದ್ದು, ಕೆಲವೊಂದನ್ನು ಬೇಸಾಯಕ್ಕೆ ಬಿಡುಗಡೆ ಮಾಡಲಾಗಿದೆ. ಬಸ್ತಿ ಹಣ್ಣು ಸಂಶೋಧನಾ ಕೇಂದ್ರದಲ್ಲಿ ಸೀಡ್ಲೆಸ್ ಮತ್ತು ಅಲಹಾಬಾದ್ ಸಫೇದ, ಸೀಡ್ಲೆಸ್ ಮತ್ತು ಲಕ್ನೋ-೪೯, ಅಲಹಾಬಾದ್ ಸಫೇದ ಮತ್ತು ಪ್ಯಾಟಿಲ್ಲೊ, ಅಪಲ್ ಕಲರ್ ಮತ್ತು ರೆಡ್ ಫ್ಲೆಶ್ಡ್ ಹಾಗೂ ಆಪಲ್ ಕಲರ್ ಮತ್ತು ಕೊಥ್ರುಡ್ ತಳಿಗಳನ್ನು ಸಂಕರಿಸಿ, ಅವುಗಳಿಂದ ಉತ್ಪತ್ತಿಯಾದ ಮಿಶ್ರ ತಳಿಗಳನ್ನು ಮೌಲ್ಯಮಾಪಣ ಮಾಡಲಾಗುತ್ತಿದೆ. ಆಂಧ್ರಪ್ರದೇಶದ ಸಂಗಾರೆಡ್ಡಿ ಹಣ್ಣು ಸಂಶೋಧನಾ ಕೇಂದ್ರದಿಂದ ಸಫೇದ್ ಜಾಮ್ ಮತ್ತು ಕೊಹಿರ್ ಸಫೇದ ಎಂಬ ಮಿಶ್ರ ತಳಿಗಳನ್ನು ಉತ್ಪಾದಿಸಿ ಬೇಸಾಯಕ್ಕೆ ಬಿಡುಗಡೆ ಮಾಡಲಾಗಿದೆ. ಸಫೇದ್ ಜಾಮ್ ಮಿಶ್ರ ತಳಿಗಳನ್ನು ಅಲಹಾಬಾದ್ ಸಫೇದ ಮತ್ತು ಕೊಹಿರ್ ತಳಿಗಳನ್ನು ಸಂಕರಿಸಿ, ವೃದ್ಧಿ ಪಡಿಸಲಾಯಿತು. ಇದರ ಮರಗಳು ಸಾಧಾರಣ ದೊಡ್ದವಿರುತ್ತವೆ. ರೆಂಬೆಗಳು ನೆಲದತ್ತ ಇಳಿಬಿದ್ದಿರುತ್ತವೆ. ಫಸಲು ಯಥೇಚ್ಛ. ಗುಣಮಟ್ಟದ ಮೂಲ ತಳಿಗಳ ಹಣ್ಣುಗಳಲ್ಲಿ ಇರುವುದಕ್ಕಿಂತ ಉತ್ತಮ. ಕೋಹಿರ್ ಸಫೇದ್ ಮಿಶ್ರ ತ್ಅಳಿಯ ಉತ್ಪಾದನೆ ಕೋಹಿರ್ ತಳಿಯಲ್ಲಿ ಆರಿಸಿ ವೃದ್ಧಿಪಡಿಸಿದ ಬಗೆ ಮತ್ತು ಅಲಹಾಬಾದ್ ಸಫೇದ್ ತಳಿಗಳನ್ನು ಬಳಸಿಕೊಳ್ಳಲಾಯಿತು. ಈ ಮಿಶ್ರ ತಳಿಯನ್ನು ನಿರ್ಲಿಂಗ ನಿಧಾನದಲ್ಲಿ ವೃದ್ಧಿಪಡಿಸಿ ಬೇಸಾಯಕ್ಕೆ ಬಿಡುಗಡೆ ಮಾಡಲಾಯಿತು. ಇದರ ಮರಗಳು ದೊಡ್ಡವಿದ್ದು ಗೋಪುಕಾರದ ನೆತ್ತಿಯಿಂದ ಕೂಡಿರುತ್ತವೆ. ಇದರ ಹಣ್ಣು ಮೂಲ ತಳಿಗಳ ಹಣ್ಣುಗಳಿಂದ ಗಾತ್ರದಲ್ಲಿ ದೊಡ್ಡವಿರುತ್ತವೆ. ಆ ರಾಜ್ಯದ ಅರೆ ಉಷ್ಣ ಪ್ರದೇಶಗಳಾದ ತೆಲಂಗಾಣ, ರಾಯಲ ಸೀಮ ಮುಂತಾಗಿ ಶಿಫಾರಸುಮಾಡಿದೆ.

ಕೋಹಿರ್, ಡೋಲ್ಕ, ಸಿಂದ್ ಮುಂತಾದ ತಳಿಗಳು ಅಲ್ಲಲ್ಲಿ ಕಂಡುಬರುತ್ತವೆಯಾದರೂ ಅವು ವಾಣಿಜ್ಯವಾಗಿ ಅಷ್ಟೊಂದು ಮುಖ್ಯವಾದುವಲ್ಲ. ಹವಾಯ್ ಮತ್ತು ಪ್ಲೋರಿಡಾಗಳಲ್ಲಿ ಹೆಚ್ಚು ಹಿಳಿಯಿಂದ ಕೂಡಿದ ಬಗೆಗಳಿರುವುದಾಗಿ ತಿಳಿದುಬಂದಿದೆ. ಅವುಗಳ ಹಣ್ಣು ಬೇಯಿಸಲು ಹಾಗೂ ಜೆಲ್ಲಿ ತಯಾರಿಸಲು ಸೂಕ್ತವಿರುತ್ತವೆ.

ಕೆಲವೊಂದು ತಳಿ ಹಾಗೂ ಆಯ್ಕೆಗಳ ಹಣ್ಣುಗಳ ಭೌತಿಕ ಗುಣಗಳು ಮತ್ತು ರಾಸಾಯನಿಕ ಸಂಯೊಜನೆಗಳನ್ನು ಕೋಷ್ಟಕ ೬ರಲ್ಲಿ ಕೊಟ್ಟಿದೆ.

ಕೋಷ್ಟಕ : ಕೆಲವು ಸೀಬೆ ತಳಿಗಳ ಭೌತಿಕ ಗುಣಗಳು ಮತ್ತು ರಾಸಾಯನಿಕ ಸಂಯೋಜನೆ