ಸೀಬೆ ಹಣ್ಣುಗಳನ್ನು ಹಾಗೆಯೇ ತಿನ್ನುವುದರ ಜೊತೆಗೆ ಅವುಗಳಿಂದ ಸ್ವಾದಿಷ್ಟ ಪದಾರ್ಥಗಳನ್ನು ತಯಾರಿಸಿ, ಬೇಕೆಂದಾಗ ತಿನ್ನಬಹುದು. ಪದಾರ್ಥಗಳಿಗೆ ಒಳ್ಳೆಯ ಬೇಡಿಕೆ ಇದೆ. ಮಕ್ಕಳಿಂದ ಹಿಡಿದು ಇಳಿ ವಯಸ್ಸಿನವರಿಗೆ ಎಲ್ಲರೂ ಇಷ್ಟಪಡುವ ಪದಾರ್ಥಗಳು ಇವಾಗಿವೆ. ಹಣ್ಣು ಅಗ್ಗವಾಗಿ ಲಭಿಸುವ ದಿನಗಳಲ್ಲಿ ಹಾಗೂ ಮಾರಾಟಕ್ಕೆ ಯೋಗ್ಯವಲ್ಲದ ತೀರಾ ಸಣ್ಣ ಗಾತ್ರದ ಹಣ್ಣುಗಳನ್ನು ಸಂಸ್ಕರಣೆಗೆ ಬಳಸಬಹುದು. ಪದಾರ್ಥಗಳನ್ನು ಬ್ರೆಡ್, ಬನ್, ಬಿಸ್ಕತ್, ರೊಟ್ಟಿ, ಚಪಾತಿ, ಪೂರಿ ಮುಂತಾಗಿ ಸೇರಿಸಿ ತಿಂದಲ್ಲಿ ರುಚಿಯಾಗಿರುತ್ತದೆ. ಅವುಗಳ ಪರಿಮಳ ಆಹ್ಲಾದಕರ. ಅವುಗಳನ್ನು ಬಹುದೀರ್ಘಕಾಲ ಜೋಪಾನ ಮಾಡಿಡಬಹುದು. ಪದಾರ್ಥಗಳಲ್ಲಿ ಮುಖ್ಯವಾದುವುಗಳೆಂದರೆ ಜೆಲ್ಲಿ, ಚೀಸ್, ಜಾಮ್, ನೆಕ್ಟರ್, ರಸ ಮುಂತಾಗಿ ಅವುಗಳನ್ನು ತಯಾರಿಸಲು ಬೇಕಾಗುವ ಸಾಮಗ್ರಿ ಸಲಕರಣೆಗಳು, ವಿಧಾನ ಮತ್ತು ಜೋಪಾಸನೆಗಳು ಕೆಳಗಿನಂತಿರುತ್ತವೆ :

 . ಜೆಲ್ಲಿ

 

ಅಗತ್ಯವಿರುವ ಸಾಮಗ್ರಿಗಳು : ದೋರೆಗಾಯಿ ಹಣ್ಣುಗಳು, ಸಕ್ಕರೆ, ಸಿಟ್ರಿಕ್ ಆಮ್ಲ, ಅಗಲವಿರುವಿಕೆ ಸ್ಟೇನ್ ಲೆಸ್ ಸ್ಟೀಲ್ ತಟ್ಟೆ, ಅಗಲ ಬಾಯಿಯ ಸ್ಟೇನ್ ಲೆಸ್ ಸ್ಟೀಲ್ ಪಾತ್ರೆ, ಟೇಬಲ್ ಚಮಚೆ, ಉದ್ದ ಹಿಡಿಯ ಸೌಟು, ಚಾಕು, ಸೋಸಲು ಜೆಲ್ಲಿ ಚೀಲ ಅಥವಾ ತೆಳ್ಳನೆಯ ಶುಭ್ರವಿರುವ ಬಟ್ಟೆ ಉರಿಯುವ ಸ್ಟೌವ್ ಅಥವಾ ಒಲೆ ಮುಂತಾಗಿ.

ತಯಾರಿಸುವ ವಿಧಾನ : ಚೆನ್ನಾಗಿರುವ ದೋರೆಗಾಯಿಗಳನ್ನು ಮತ್ತು ಒಂದೆರಡು ಪಕ್ವಗೊಂಡ ಹಣ್ಣುಗಳನ್ನು ಆರಿಸಿ ತೆಗೆದು, ತಣ್ಣೀರಲ್ಲಿ ಚೆನ್ನಾಗಿ ತೊಳೆದು, ಚಾಕುವಿನಿಂದ ಸಣ್ಣ ಸಣ್ಣ ಬಿಲ್ಲೆಗಳನ್ನಾಗಿ ಕತ್ತರಿಸಿ ಪಾತ್ರೆಯೊಳಕ್ಕೆ ಸುರಿದು ಅವು ಮುಳುಗುವಷ್ಟೇ ನೀರನ್ನು ಹಾಕಿ, ಒಂದು ಕಿ. ಗ್ರಾಂ ಹಣ್ಣಿನ ಹೋಳುಗಳಿಗೆ ೧. ೫ ರಿಂದ ೨ ಗ್ರಾಂಗಳಷ್ಟು ಸಿಟ್ರಿಕ್ ಆಮ್ಲದ ಹರಳುಗಳನ್ನು ಉದುರಿಸಬೇಕು. ಅನಂತರ ಪಾತ್ರೆಯನ್ನು ಸ್ಟೌವ್ ಇಲ್ಲವೇ ಒಲೆಯ ಮೇಲಿಟ್ಟು ಸಣ್ಣ ಉರಿಯಲ್ಲಿ ಅವು ಮೆತ್ತಗಾಗುವ ತನಕ ಬೇಯಿಸಬೇಕು. ತಳ ಸೀಯದಂತೆ ಸೌಟಿನಿಂದ ಆಗಾಗ್ಗೆ ಕಲಕುತ್ತಿರಬೇಕು. ಸುಮಾರು ಅರ್ಧ ತಾಸಿನಲ್ಲಿ ಅವು ಬೆಂದು ಮೆತ್ತಗಾಗಿ ಅಂಟಂಟಾಗುತ್ತವೆ. ಆಗ ಪಾತ್ರೆಯನ್ನು ಒಲೆಯ ಮೇಲಿಂದ ಕೆಳಕ್ಕಿಳಿಸಿಕೊಂಡು ಜೆಲ್ಲಿ ಚೀಲ ಅಥವಾ ಬಟ್ಟೆಯ ಮೇಲೆ ಇಳಿಬಿಟ್ಟು, ತಿಳಿ ರಸವನ್ನು ಇನ್ನೊಂದು ಪಾತ್ರೆಯೊಳಕ್ಕೆ ಸೋಸಿಕೊಳ್ಳಬೇಕು. ಪಾತ್ರೆಯಲ್ಲಿನ ಹೋಳುಗಳ ಮೇಲೆ ಒಂದಷ್ಟು ನೀರು ಚಿಮುಕಿಸಿ ಮತ್ತೊಮ್ಮೆ ಜೆಲ್ಲಿ ಚೀಲಕ್ಕೆ ಸುರಿದು, ತಿಳಿರಸದೊಂದಿಗೆ ಸೇರಿಸಬೇಕು.

ಪೆಕ್ಟಿನ್ ಗಾಗಿ ಪರೀಕ್ಷೆ : ಹಿಗೆ ಸೋಸಿ ಸಂಗ್ರಹಿಸಿದ ದ್ರವ ಪದಾರ್ಥದಲ್ಲಿ ಸಾಕಷ್ಟು ಪೆಕ್ಟಿನ್ ಅಂಶ ಇದೆಯೇ ಎಂಬುದನ್ನು ಮನದಟ್ಟು ಮಾಡಿಕೊಳ್ಳುವುದು ಅಗತ್ಯ. ಏಕೆಂದರೆ ಶ್ರೇಷ್ಠ ದರ್ಜೆಯ ಜೆಲ್ಲಿ ಮಾಡುವಲ್ಲಿ ಸಾಕಷ್ಟು ಪೆಕ್ಟಿನ್ ಇರಬೇಕು. ಬೇಯಿಸಿ ಸೋಸಿದ ಒಂದು ಚಮಚೆ ದ್ರವ ಪದಾರ್ಥಕ್ಕೆ ಎರಡು ಚಮಚೆಗಳಷ್ಟು ಮಧ್ಯಸಾರ ಬೆರೆಸಿದಾಗ ಆ ಮಿಶ್ರಣ ಹೆಪ್ಪುಗಟ್ಟಿದರೆ ಅದರಲ್ಲಿ ಸಾಕಷ್ಟು ಪೆಕ್ಟಿನ್ ಇದೆ ಎಂದು ಅರ್ಥ. ಹಾಗಾಗದೆ ಅದು ನೀರುನೀರಾಗಿದ್ದರೆ ಅದರಲ್ಲಿ ಸಾಕಷ್ಟು ಪೆಕ್ಟಿನ್ ಇರುವುದಿಲ್ಲ. ಅದನ್ನು ಮತ್ತೆ ಒಲೆಯ ಮೇಲಿಟ್ಟು ಕಾಯಿಸಬೇಕು. ಅಗತ್ಯವಿದ್ದಲ್ಲಿ ಪೇಟೆಯಲ್ಲಿ ಸಿಗುವ ಪೆಕ್ಟಿನ್ ಅನ್ನು ಸೇರಿಸಬೇಕು.

ಸಕ್ಕರೆ ಬೆರೆಸಿ ಕಾಯಿಸುವುದು : ಸೋಸಿದ ದ್ರವ ಪದಾರ್ಥವನ್ನು ಅಳತೆಮಾಡಿಕೊಂಡು ಒಂದು ಬಟ್ಟಲು ತಿಳಿರಸಕ್ಕೆ ಮುಕ್ಕಾಲು ಬಟ್ಟಲು ಸಕ್ಕರೆ ಸೇರಿಸಿ, ಪುನಃ ಕಾಯಿಸಬೇಕು ಹೀಗೆ ಮಿಶ್ರಣ ಕುದಿಯುತ್ತಿರುವಾಗ ನೊರೆ ಬರುತ್ತಿರುತ್ತದೆ ಅದನ್ನು ಆಗಿಂದಾಗ್ಗೆ ಸೌಟಿನಿಂದ ತೆಗೆದುಹಾಕಬೇಕು. ಸುಮಾರು ಅರ್ಧ ತಾಸಿನಲ್ಲಿ ಮಿಶ್ರಣ ಮಂದಗೊಳ್ಳುತ್ತದೆ. ಚಮಚೆಯಲ್ಲಿ ಸ್ವಲ್ಪ ಮಿಶ್ರಣವನ್ನು ಹೊರತೆಗೆದು ಮೇಲಿಂದ ಕೆಳೆಕ್ಕೆ ಸಣ್ಣಗೆ ಇಳಿಬಿಡಬೇಕು. ಅದು ದಾರದಂತೆ ಅಥವಾ ತೆಳ್ಳಗೆ ಹಾಳೆಯಂತೆ ಇಳಿಬಿದ್ದರೆ ಬೇಯಿಸುವ ಕೆಲಸ ಮುಗಿದಂತೆ. ಆಗ ಪಾತ್ರೆಯನ್ನು ಒಲೆಯ ಮೇಲಿಂದ ಕೆಳಕ್ಕಿಳಿಸಬೇಕು. ಬಿಸಿ ನೀರಿನಲ್ಲಿ ಅದ್ದಿತೊಳೆದ ಸ್ವಚ್ಛ ಗಾಜಿನ ಜಾಡಿಗಳಿಗೆ ಅಥವಾ ಬಾಟಲಿಗಳಿಗೆ ಈ ಬಿಸಿ ಪದಾರ್ಥವನ್ನು ಸುರಿದು, ತಣ್ಣಗಾದನಂತರ ಮುಚ್ಚಳ ಬಿಗಿದು, ಗಾಳಿಯಾಡದಂತೆ ಭದ್ರಪಡಿಸಬೇಕು. ಚೆನ್ನಾಗಿ ತಯಾರದ ಜೆಲ್ಲಿ ಪಾರದರ್ಶಕವಾದ್ದು, ಸ್ಫಟಿಕದಂತೆ ಕಾಣುವುದು. ಹರಿತವಿರುವ ಚಾಕುವಿನಿಂದ ಅದನ್ನು ಹೋಳುಮಾಡಿದಲ್ಲಿ ಅವು ಸಲೀಸಾಗಿ ಬೇರ್ಪಡುತ್ತವೆ. ಅವುಗಳನ್ನಿಟ್ಟ ತಟ್ಟೆಯನ್ನು ಅಲುಗಾಡಿಸಿದಲ್ಲಿ ಅದು ಬಳುಕುವುದು.

. ಸೀಬೆಗಿಣ್ಣು

ಅಗತ್ಯವಿರುವ ಸಾಮಗ್ರಿಗಳು : ಸೀಬೆ ಹಣ್ಣಿನ ತಿರುಳು ೧ ಕಿ. ಗ್ರಾಂ, ಸಕ್ಕರೆ ೧. ೫ ಕಿ. ಗ್ರಾಂ, ಬೆಣ್ಣೆ ೧೨೫ ಗ್ರಾಂ, ಸಿಟ್ರಿಕ್ ಆಮ್ಲ ೨ ಗ್ರಾಂ ಅಡುಗೆ ಉಪ್ಪು ೧ ಟೀ ಚಮಚೆಯಷ್ಟು ಕೆಂಪು ಬಣ್ಣ ಅಗತ್ಯಕ್ಕೆ ತಕ್ಕಂತೆ.

ತಯಾರಿಸುವ ವಿಧಾನ : ಆರಿಸಿಟ್ಟ ಹಣ್ಣುಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆದು, ನಂತರ ಸಣ್ಣಗೆ ಕತ್ತರಿಸಿ, ಪಾತ್ರೆಗೆ ಸುರಿದು ಅವು ಮುಳುಗುವಷ್ಟೇ ನೀರನ್ನು ಹಾಕಿ, ಒಲೆಯಮೇಲಿಟ್ಟು ಸಣ್ಣ ಉರಿಯಮೇಲೆ ಬೇಯಿಸಬೇಕು. ಅವು ಬೆಂದು ಮೆತ್ತಗಾದಾಗ ಜೆಲ್ಲಿ ಚೀಲಕ್ಕೆ ಸುರಿದು ಸೋಸಬೇಕು. ಸೋಸಿ ತೆಗೆದ ತಿಳಿರಸಕ್ಕೆ ಸಕ್ಕರೆ ಮತ್ತು ಬೆಣ್ಣೆಗಳನ್ನು ಸೇರಿಸಿ ಚೆನ್ನಾಗಿ ಕಾಯಿಸಬೇಕು. ನೊರೆಯನ್ನು ಸೌಟಿನಿಂದ ಆಗಾಗ್ಗೆ ತೆಗೆದು ಹಾಕುತ್ತಿರಬೇಕು. ಮಿಶ್ರಣ ಸೀಯದಂತೆ ಪದೇ ಪದೇ ಕಲಕುತ್ತಿರಬೇಕು. ಅದು ಮಂದಗೊಳ್ಳುವ ಸಮಯದಲ್ಲಿ ಬಣ್ಣವೊಂದರ ಹೊರತಾಗಿ ಉಳಿದೆಲ್ಲ ಸ್ವಲ್ಪ ನೀರಿನಲ್ಲಿ ಕರಗಿಸಿ, ಮಿಶ್ರಣಕ್ಕೆ ಸೇರಿಸಿದರೆ ಅದು ಒಂದೇ ತೆರನಾಗಿ ಹರಡಿ ಬೆರಯುತ್ತದೆ.

ಅಗಲಬಾಯಿಯ ಪಿಂಗಾಣಿ ಪಾತ್ರೆ ಅಥವಾ ಸ್ಟೇನ್ ಲೆಸ್ ಸ್ಟೀಲ್ ತಟ್ಟೆಯ ಒಳ ಪಾರ್ಶ್ವಕ್ಕೆ ಅಡುಗೆ ಎಣ್ಣೆ ಸವರಿ, ಬಿಸಿ ಮಿಶ್ರಣವನ್ನು ಅದರಲ್ಲಿ ೦. ೫ ರಿಂದ ೦೬. ಸೆಂ. ಮೀ. ದಪ್ಪ ಇರುವಂತೆ ಅಗಲಕ್ಕೆ ಸುರಿದು ತಣ್ಣಗಾಗಲು ಬಿಡಬೇಕು. ಎಣ್ಣೆ ಸವರುವುದರಿಂದ ಅದು ತಟ್ಟೆಗೆ ಅಂಟಿಕೊಳ್ಳುವುದಿಲ್ಲ. ತಣ್ಣಗಾದನಂತರ ಅದನ್ನು ಬೇಕಾದ ಆಕಾರಕ್ಕೆ ಸಣ್ಣ ಸಣ್ಣ ಬಿಲ್ಲೆಗಳನ್ನಾಗಿ ಕತ್ತರಿಸಿ, ಬೆಣ್ಣೆ ಕಾಗದದಲ್ಲಿ ಸುತ್ತಿಟ್ಟು ಗಾಜಿನ ಜಾಡಿಗಳಲ್ಲಿಟ್ಟು ಭದ್ರಪಡಿಸಬೇಕು.

. ಸೀಬೆಹಣ್ಣಿನನೆಕ್ಟರ್

ಅಗತ್ಯವಿರುವ ಸಾಮಗ್ರಿಗಳು : ಸೀಬೆ ಹಣ್ಣಿನ ಹೋಳುಗಳು ೪೦೦ ಗ್ರಾಂ, ಸಕ್ಕರೆ ೧೭೫ ಗ್ರಾಂ. , ನೀರು ೪೨೫ ಮಿ. ಲೀ. ಮತ್ತು ಸಿಟ್ರಿಕ್ ಆಮ್ಲ ೨ ಗ್ರಾಂ.

ತಯಾರಿಸುವ ವಿಧಾನ : ಹಣ್ಣುಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ನಂತರ ಸಣ್ಣ ಸಣ್ಣ ಹೋಳುಗಳಾಗಿ ಕತ್ತರಿಸಿ ಪಾತ್ರೆಯೊಳಕ್ಕೆ ಸುರಿದು, ಅಷ್ಟೇ ಪ್ರಮಾಣದ ನೀರನ್ನು ಸೇರಿಸಿ, ಪಾತ್ರೆಯನ್ನು ಒಲೆಯಮೇಲಿಟ್ಟು ಅವು ಮೆತ್ತಗಾಗುವ ತನಕ ಬೇಯಿಸಬೇಕು. ಆಗಾಗ್ಗೆ ಕಲಕುತ್ತಿದ್ದಲ್ಲಿ ತಳ ಸೀಯುವುದಿಲ್ಲ ಅದಾದನಂತರ ಪಾತ್ರೆಯನ್ನು ಕೆಳೆಕ್ಕಿಳಿಸಿ, ಮಿಶ್ರಣವನ್ನು ತಂತಿಯ ಜರಡಿ ಇಲ್ಲವೇ ಸೊಳ್ಳೆ ಪರದೆಯ ಮೂಲಕ ಸೋಸಿ ಅನಗತ್ಯ ಪದಾರ್ಥಗಳನ್ನು ಬೇರ್ಪಡಿಸಬೇಕು. ಹೀಗೆ ಸೋಸಿದ ತಿಳಿ ಮಿಶ್ರಣಕ್ಕೆ ಸಕ್ಕರೆ, ನೀರು ಮತ್ತು ಸಿಟ್ರಿಕ್ ಆಮ್ಲಗಳನ್ನು ಸೇರಿಸಿ, ಪಾತ್ರೆಯನ್ನು ಪುನಃ ಒಲೆಯ ಮೇಲಿಟ್ಟು ಕಾಯಿಸಬೇಕು. ಅದು ಕಾಯುತ್ತಿರುವಾಗ ನೊರೆ ಬರುತ್ತಿರುತ್ತದೆ. ಅದನ್ನು ಸೌಟ್ ನಿಂದ ಆಗಾಗ್ಗೆ ತೆಗೆದುಹಾಕಬೇಕು. ಸುಮಾರು ಅರ್ಧ ತಾಸಿನಲ್ಲಿ ಮಿಶ್ರಣ ಮಂದಗೊಳ್ಳುತ್ತದೆ. ಆಗ ಪಾತ್ರೆಯನ್ನು ಒಲೆಯ ಮೇಲಿನಿಂದ ಕೆಳೆಗಿಳಿಸಿ, ಬಿಸಿ ನೀರಿನಲ್ಲಿ ಅದ್ದಿ ತೊಳೆದ ಸ್ವಚ್ಛ ಗಾಜಿನ ಜಾಡಿಗಳಿಗೆ ಸುರಿದು ಅದು ತಣ್ಣಗಾದನಂತರ ಮುಚ್ಚಳ ಬಿಗಿದು ಮೊಹರುಮಾಡಬೇಕು. ಈ ಪದಾರ್ಥವನ್ನು ಹೆಚ್ಚುಕಾಲ ಇಡಲು ಆಗುವುದಿಲ್ಲ. ಪೂರ್ಣಗೊಂಡಾಗ ಅದರ ರುಚಿ ಮತ್ತು ಪರಿಮಳ ಹಿತವಾಗಿರುತ್ತದೆ.

. ಜಾಮ್

ಅಗತ್ಯವಿರುವ ಸಾಮಗ್ರಿಗಳು : ದೋರೆಗಾಯಿ ಹಣ್ಣುಗಳು, ಸಕ್ಕರೆ, ಸಿಟ್ರಿಕ್ ಆಮ್ಲ.

ತಯಾರಿಸುವ ವಿಧಾನ : ಹಣ್ಣುಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ನಂತರ ಸಣ್ಣ ಸಣ್ಣ ಹೋಳುಗಳಾಗಿ ಕತ್ತರಿಸಿ, ಬೀಜವನ್ನು ಬೇರ್ಪಡಿಸಿ ಪಾತ್ರೆಗೆ ಸುರಿದು, ಅವು ಮುಳುಗುವಷ್ಟೇ ನೀರನ್ನು ಹಾಕಬೇಕು. ಪಾತ್ರೆಯನ್ನು ಒಲೆಯ ಮೇಲಿಟ್ಟು ಸಣ್ಣ ಉರಿಯಮೇಲೆ ಚನ್ನಾಗಿ ಬೇಯಿಸಬೇಕು ಹೋಳುಗಳು ಬೆಂದು ಮೆತ್ತಗಾದಾಗ ಸಮಪ್ರಮಾಣದ ಸಕ್ಕರೆ ಸೇರಿಸಬೇಕು. ಅರ್ಧ ತಾಸಿನಲ್ಲಿ ಮಿಶ್ರಣ ಹದವಾಗಿ ಬೆಂದು ಮೆತ್ತಗಾಗುತ್ತದೆ. ಆಗ ಅದಕ್ಕೆ ಸಿಟ್ರಿಕ್ ಆಮ್ಲವನ್ನು ಸೇರಿಸಿ ಚೆನ್ನಾಗಿ ಕಲಕಬೇಕು. ಅನಂತರ ಮಿಶ್ರಣವನ್ನು ಸೌಟಿನಲ್ಲಿ ಚೆನ್ನಾಗಿ ಮಸೆದರೆ. ಹೋಳುಗಳು ಕರಗಿ ಒಂದೇ ತೆರನಾದ ಮಂದವಿರುವ ಪದಾರ್ಥ ತಯಾರಾಗುತ್ತದೆಆಗ ಪಾತ್ರೆಯನ್ನು ಒಲೆಯ ಮೇಲಿನಿಂದ ಕೆಳಕ್ಕಿಳಿಸಿ, ಬಿಸಿ ನೀರಿನಲ್ಲಿ ಅದ್ದಿ ತೊಳೆದ ಗಾಜಿನ ಜಾಡಿಗಳಲ್ಲಿ ತುಂಬಿ, ತಣ್ಣಗಾದನಂತರ ಮುಚ್ಚಳ ಬಿಗಿದು ಮೊಹರು ಮಾಡಿಟ್ಟಲ್ಲಿ ಅದು ಬಹುಕಾಲ ಕೆಡುವುದಿಲ್ಲ.

. ಸೀಬೆಹಣ್ಣಿನರಸ

ಇದರ ತಯಾರಿಕೆ ಮತ್ತು ಬಳಕೆಗಳು ಅಷ್ಟೊಂದಿಲ್ಲ. ಆದರೆ ಸರಿಯಾದ ರೀತಿಯಲ್ಲಿ ತಯಾರಿಸಿದ್ದೇ ಆದರೆ ಅದು ಉತ್ತಮ ದರ್ಜೆಯ ಪೇಯವಾಗಬಲ್ಲದು. ರಸ ಹಿಂಡುವ ವಿದ್ಯುತ್ ಚಾಲಿತ ಯಂತ್ರವಿದ್ದಲ್ಲಿ ಅನುಕೂಲ. ಎರಡು ಮೂರು ನಿಮಿಷಗಳಲ್ಲಿ ಎಲ್ಲವೂ ಸಿದ್ಧ. ಬೀಜ ಮತ್ತು ಇತರ ಅನಗತ್ಯ ಭಾಗಗಳನ್ನು ಸೋಸಿ ತೆಗೆದು, ನಂತರ ತಿಲಿರಸಕ್ಕೆ ಸಕ್ಕರೆ ಸೇರಿಸಿ ಕುಡಿಯಬಹುದು. ರಸವನ್ನು ತೆಲ್ಲಗೆ ಮಾಡುವುದಿದ್ದಲ್ಲಿ ಅಗತ್ಯವಿರುವಷ್ಟು ಸಕ್ಕರೆ ಮತ್ತು ನೀರುಗಳನ್ನು ಬೆರೆಸಿ, ಅನಂತರ ಕುಡಿಯಲು ಬಳಸಬಹುದು.

. ಸೀಬೆಹೋಳುಗಳು

ಚೆನ್ನಾಗಿ ಮಾಗಿದ ಹಾಗೂ ಬಿಗಿಯಾಗಿರುವ ಹಣ್ಣುಗಳನ್ನು ಆರಿಸಿ ತೆಗೆದು, ನೀರಿನಲ್ಲಿ ತೊಳೆದು, ಹೊಳುಗಳನ್ನಾಗಿ ಕತ್ತರಿಸಿ, ಬೀಜ ಹಾಗೂ ಸಿಪ್ಪೆಗಳನ್ನು ಬೇರ್ಪಡಿಸಬೇಕು. ಅವು ಸಣ್ಣ ಹೋಳುಗಳಾಗಿದ್ದರೆ ಉತ್ತಮ. ಅವುಗಳನ್ನು ಶೇ. ೨ರ ಉಪ್ಪು ದ್ರಾವಣದಲ್ಲಿ ಸ್ವಲ್ಪಕಾಲ ಅದ್ದಿ ಇಡಬೇಕು. ಸಕ್ಕರೆ ಪಾಕವನ್ನು ೪೦ ಬ್ರಿಕ್ಸ್ ಇರುವುವಂತೆ ತಯಾರಿಸಿ ಅದಕ್ಕೆ ಶೇ. ೨ ಸಿಟ್ರಿಕ್ ಆಮ್ಲ ಬೆರೆಸಿ, ಒಲೆಯ ಮೇಲಿಟ್ಟು, ಸಣ್ಣ ಉರಿಯಲ್ಲಿ ಬೇಯಿಸಬೇಕು. ಅದು ಕುದಿಯುವಾಗ ನೊರೆ ಬರುತ್ತಿರುತ್ತದೆ. ಅದನ್ನು ಆಗಿಂದಾಗ್ಗೆ ತೆಗೆದುಹಾಕಬೇಕು.

ಬಿಸಿಪಾಕವನ್ನು ತೆಳ್ಳನೆಯ ಶುಭ್ರವಿರುವ ಬಟ್ಟೆಯ ಮೂಲಕ ಸೋಸಿ, ಈ ಮೊದಲು ಸಿದ್ಧಗೊಳಿಸಿದ ಹಣ್ಣಿನ ಹೋಳುಗಳನ್ನು ನೀರಿನಲ್ಲಿ ತೂಳೆದು, ಡಬ್ಬಿಗಳಲ್ಲಿ ಹರಡಿ, ಅವುಗಳ ಮೇಲೆ ಬಿಸಿ ಪಾಕವನ್ನು ಸುರಿಯಬೇಕು, ಹೀಗೆ ತುಂಬುವಾಗ ಕಂಠಭಾಗದಲ್ಲಿ ೧. ೨೫ ಸೆಂ. ಮೀ ಖಾಲಿ ಇರುವುದು ಅಗತ್ಯ. ಅನಂತರ ಡಬ್ಬಿಗಳನ್ನು ಸುಡು ನೀರಿನಲ್ಲಿಟ್ಟು ಅವುಗಳ ಒಳಗುಣ ಗಾಳಿಯಲ್ಲಾ ಹೊರಹೋಗುವಂತೆ ಮಾಡಬೇಕು. ಮಿಶ್ರಣದ ಮಧ್ಯಭಾಗದಲ್ಲಿ ೮೫ಸೆಂ. ಬಿಸಿ ಇದ್ದಾಗ, ಡಬ್ಬಿಗಳಿಗೆ ಮುಚ್ಚಳ ಬಿಗಿದು, ಮೊಹರುಮಾಡಿ ಮತ್ತೆ ಬಿಸಿ ನೀರಿನಲ್ಲಿಟ್ಟು , ಅದು ತಣ್ಣಗಾದನಂತರ ಹೊರತೆಗೆದು ಭದ್ರಮಾಡಿಡಬೇಕು. ಹಣ್ಣಿನ ಹೋಳುಗಳು ಸಕ್ಕರೆ ಅಂಶವನ್ನು ಸಾಕಷ್ಟು ಪ್ರಮಾಣದಲ್ಲಿ ಹೀರಿಕೊಂಡಿದ್ದು ತಿನ್ನಲು ರುಚಿಯಾಗಿರುತ್ತವೆ.