ಪಕ್ವತೆಗೆ ಬಂದ ಕಾಯಿಗಳನ್ನು ಸೂಕ್ತ ಸಮಯದಲ್ಲಿ ಕೊಯ್ಲು ಮಾಡುವ ವಿಧಾನ, ಸೂಕ್ತ ನಿರ್ವಹಣೆಯಿಂದ ದೊರಕುವ ಇಳುವರಿ ಪ್ರಮಾಣ, ವರ್ಗೀಕರಣ, ಸಂಗ್ರಹಣಾ ವಿಧಾನ, ಮಾರಾಟ ಅನುಕೂಲತೆಗಳು, ಪ್ರತಿ ಹೆಕ್ಟೇರು ಇಳುವರಿ ಪ್ರಮಾಣ ಮತ್ತು ಅಂದಾಜು ಬೇಸಾಯ ವೆಚ್ಚದ ಅಂಶಗಳನ್ನು ಕುರಿತು ಅಧ್ಯಾಯದಲ್ಲಿ ಚರ್ಚಿಸಲಾಗಿದೆ.

ಸೀಬೆಯಲ್ಲಿ ಹೂವು ಬಿಟ್ಟದಿನದಿಂದಹಣ್ಣು ಕೊಯ್ಲಿಗೆ ಬರಲು ಸುಮಾರು ೧೫೦ ದಿನ ಹಿಡಿಸುತ್ತದೆ. ಈ ಅವಧಿ ಸಫೇದ ತಳಿಯಲ್ಲಿ ೧೩೭ ಮತ್ತು ಪೇರು ಆಕಾರದ ತಳಿಯಲ್ಲಿ ೧೧೦ ದಿನಗಳಷ್ಟಿದ್ದರೆ ಸರ್ದಾರ್ ತಳಿಯಲ್ಲಿ ೧೦೬ ರಿಂದ ೧೩೮ ದಿನಗಳಷ್ಟಿರುವುದಾಗಿ ಅಧ್ಯಯನಗಳಿಂದ ತಿಳಿದುಬಂದಿದೆ. ಕಾಯಿಗಳು ಬಲಿತು, ದಟ್ಟ ಹಸುರಿನಿಂದ ಹಳದಿ ಹಸಿರು ಬಣ್ಣಕ್ಕೆ ತಿರುಗಿದಾಗ ಅವು ಪಕ್ವಕ್ಕೆ ಬಂದಿವೆಯೆಂದು ಅರ್ಥ. ಬಣ್ಣದ ತಳಿಗಳಾದಲ್ಲಿ ಈ ಕೆಲಸ ಸುಲಭವಿರುತ್ತದೆ. ಪಕ್ವಗೊಂಡಂತೆಲ್ಲಾ ಅವು ಸ್ಪರ್ಶಕ್ಕೆ ಮೆದುವಾಗಿ, ವಿಶಿಷ್ಟ ಪರಿಮಳವನ್ನು ಬೀರುತ್ತವೆ. ಹಣ್ಣು ಪೂರ್ತಿ ಮಾಗುವತನಕ ಮರದಲ್ಲಿಯೇ ಇರಲು ಬಿಡಬಾರದು. ಅವುಗಳನ್ನು ಹಾಗೇನಾದರೂ ಬಿಟ್ಟಿದ್ದೇ ಆದಲ್ಲಿ ಗಿಳಿ, ಕಾಗೆ, ಅಳಿಲು ಮುಂತಾದುವು ತಿಂದು ಹಾಳು ಮಾಡುತ್ತವೆ. ಬಣ್ಣಕ್ಕೆ ತಿರುಗಿ, ಪೂರ್ಣ ಬಲಿತ ಹಣ್ಣುಗಳನ್ನು ಮಾತ್ರವೇ ಜೋಪಾನವಾಗಿ ಬಿಡಿಸಿ ತೆಗೆಯಬೇಕು. ತೊಟ್ಟು ಭಾಗವನ್ನು ಹಿಡಿದು ಸವರುಗತ್ತರಿಯಿಂದ ಅವುಗಳನ್ನು ಸ್ವಲ್ಪವೂ ಹಾನಿಯಾಗದೆ ಕೊಯ್ಲು ಮಾಡಬಹುದು. ಒಂದು ವೇಳೆ ಹಣ್ಣು ಕೈಗೆ ಎಟುಕದೆ, ಎತ್ತರದಲ್ಲಿದ್ದರೆ ಮಡಚುವ ಏಣಿಗಳನ್ನು ಬಳಸಿ ಕೊಯ್ಲು ಮಾಡಬೇಕೇ

ಹೊರತು ಒರಟಾಗಿ ರೆಂಬೆಗಳ ಮೇಲೆ ಹತ್ತುವುದಾಗಲೀ ಅಥವಾ ಅವುಗಳನ್ನು ಹಿಡಿದು, ಜಗ್ಗಿ ಅಲ್ಲಾಡಿಸುವುದಾಗಲೀ ಮಾಡಕೂಡದು. ಬಿಡಿಸಿ ತೆಗೆದ ಹಣ್ಣಗಳನ್ನು ಗೋಣಿ ತಾಟು ಇಲ್ಲವೇ ಬಟ್ಟೆ ಚೀಲಗಳ್ಲಿ ತುಂಬಿ ಕೆಳಕ್ಕಿಳಿಸಿಕೊಳ್ಳಬೇಕು. ತಂಪು ಹೊತ್ತಿನಲ್ಲಿ ಕೊಯ್ಲು ಮಾಡಿದರೆ, ಬಿಸಿಯುಂಟಾಗುವುದಿಲ್ಲ. ಮಳೆ, ಮಂಜು ಅಥವಾ ಇಬ್ಬನಿ ಸುರಿಯುವಾಗ ಕೊಯ್ಲು ಮಾಡಬಾರದು. ಅವುಗಳನ್ನು ಈಚಲು ಚಾಪೆ ಅಥವಾ ಪ್ಲಾಸ್ಟಿಕ್ ಹಾಳೆ ಹರಡಿ, ಅದರ ಮೇಲೆ ತೆಳ್ಳಗೆ ಹರಡಬೇಕು.

ಗೂಟಿ ಹಗೂ ಕಸಿ ಗಿಡಗಳಲ್ಲಿ ನೆಟ್ಟ ವರ್ಷವೇ ಹೂವು ಬಿಟ್ಟು ಕಾಯಿ ಕಚ್ಚುತ್ತವೆ. ಮೊದಲ ಒಂದೆರಡು ವರ್ಷಗಳವರೆಗೆ ಬಿಟ್ಟ ಹೂಗಳನ್ನೆಲ್ಲಾ ಕಿತ್ತು ಹಾಕಬೇಕು. ಹಾಗೆ ಮಾಡಿದಲ್ಲಿ ಗಿಡಗಳು ಕಸುವಿನಿಂದ ಕೂಡಿದ್ದು, ಬಲವಾಗಿ ಬೆಳೆಯಲು ಅನುಕೂಲವಾಗುತ್ತದೆ. ಮೂರನೆಯ ವರ್ಷದಿಂದ ಫಸಲನ್ನು ತೆಗೆದುಕೊಳ್ಳಬಹುದು. ವಾಣಿಜ್ಯ ಫಸಲು ಸಸಿಗಳನ್ನು ನೆಟ್ಟ ಸುಮಾರು ಎಂಟು ವರ್ಷಗಳಿಂದಾಚೆಗೆ ಪ್ರಾರಂಭಗೊಂಡು ಮೂವತ್ತು ವರ್ಷಗಳವರೆಗೆ ಒಂದೇ ತೆರನಾಗಿ ಸಿಗುತ್ತಿರುತ್ತದೆ. ಉತ್ತಮ ನಿರ್ವಹಣೆ ಇದ್ದಲ್ಲಿ ಸುಮಾರು ೫೦ ವರ್ಷಗಳವರೆಗೆ ಲಾಭದಾಯಕ ಫಸಲು ಸಿಗುತ್ತಿರುತ್ತದೆ. ಅನಂತರ ಅವುಗಳನ್ನು ಕಿತ್ತು ಹಾಕಿ, ಹೊಸದಾಗಿ ತೋಟ ಎಬ್ಬಿಸುವುದು ಒಳ್ಳೆಯದು.

ಇಳುವರಿ

ಮರಗಳ ಇಳುವರಿಯು ತಳಿ, ವಯಸ್ಸು, ಅಂತರ, ನಿರ್ವಹಣೆ ಮುಂತಾದ ಅಂಶಗಳ ಮೇಲೆ ಆಧಾರಗೊಂಡು ವ್ಯತ್ಯಾಸಗೊಳ್ಳುತ್ತದೆ. ಬೀಜ ಸಸಿಗಳಲ್ಲಿ ಗಿಡವೊಂದಕ್ಕೆ ವರ್ಷಕ್ಕೆ ೫೦ ಕಿ. ಗ್ರಾಂ ಮತ್ತು ಕಸಿ ಗಿಡಗಳಲ್ಲಿ ೩೫೦ ಕಿ. ಗ್ರಾಂ ಹಣ್ಣು ಸಿಗುವುದರಲ್ಲಿ ಸಂದೇಹವಿಲ್ಲ. ಪಶ್ಚಿಮ ಬಂಗಾಳದಲ್ಲಿ ಹೆಕ್ಟೇರಿಗೆ ೧೧. ೨೫ ಟನ್‌ಗಳಷ್ಟು ಹಣ್ಣು ಸಿಕ್ಕಿದ್ದಾಗಿ ತಿಳಿದುಬಂದಿದೆ. ಅಲ್ಲಿ ಮಳೆಗಾಲದಲ್ಲಿ ಹೆಚ್ಚು ಫಸಲೂ ಮತ್ತು ಚಳಿಗಾಲದಲ್ಲಿ ಕಡಿಮೆ ಫಸಲೂ ಸಿಕ್ಕಿವೆ. ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ ಮೂರು ವರ್ಷ ವಯಸ್ಸಿನ ಸರ್ದಾರ್ ತಳಿಯ ಗಿಡಗಳಲ್ಲಿ ಸರಾಸರಿ ೫೦-೬೦ ಕಿ. ಗ್ರಾಂ ಹಣ್ಣು ಸಿಕ್ಕಿದ್ದಾಗಿ ತಿಳಿದುಬಂದಿದೆ. ೮-೧೦ ವರ್ಷ ವಯಸ್ಸಿನ ಬೀಜ ಸಸಿಯೊಂದರಲ್ಲಿ ೪೦೦-೫೦೦ ಹಣ್ಣು ಮತ್ತು ಕಸಿ ಅಥವಾ ಗೂಟಿ ಗಿಡದಲ್ಲಿ ೧೦೦೦-೧೫೦೦ ಹಣ್ಣು ಸಾಧ್ಯ ಬೀಜ ರಹಿತ ಬಗೆಗಳಲ್ಲಿ ಗಿಡವೊಂದಕ್ಕೆ ಸರಾಸರಿ ೧೫೦ ಹಣ್ಣು ಸಿಗುತ್ತವೆ. ಒಳ್ಳೆಯ ಆರೈಕೆ ಇದ್ದಲ್ಲಿ ಹೆಕ್ಟೇರಿಗೆ ೨೫ ರಿಂದ ೩೭. ೫ ಟನ್ ಹಣ್ಣು ಸಾಧ್ಯ.

ಹಣ್ಣುಗಳವರ್ಗೀಕರಣ

ನಮ್ಮಲ್ಲಿ ಸೀಬೆಹಣ್ಣುಗಳನ್ನು ವಿವಿಧ ವರ್ಗ ಅಥವಾ ದರ್ಜೆಗಳನ್ನಾಗಿ ವಿಂಗಡಿಸಿ ಮಾರಾಟ ಮಾಡುವ ವ್ಯವಸ್ಥೆ ಇಲ್ಲ. ಅವುಗಳನ್ನು ಗಾತ್ರ ತೂಕ ಮತ್ತು ಪಕ್ವತೆಯ ಹಂತಗಳನ್ನನುಸರಿಸಿ ವರ್ಗೀಕರಿಸಿ ಮಾರಾಟ ಮಾಡಿದಲ್ಲಿ ಒಳ್ಳೆಯ ಲಾಭ ಸಾಧ್ಯ. ತೀರ ಸಣ್ಣ ಗಾತ್ರದ ಹಾಗೂ ನಿರ್ದಿಷ್ಟ ಆಕಾರವಿಲ್ಲದ ಹಣ್ಣುಗಳನ್ನು ಸಂಸ್ಕರಣೆಗೆ ಬಳಸಬಹುದು. ಹವಾಯಿಯಲ್ಲಿ ಸೀಬೆ ಹಣ್ಣುಗಳನ್ನು ಕ್ರಮಬದ್ಧವಾಗಿ ವಿವಿಧ ದರ್ಜೆಗಳಾಗಿ ವಿಂಗಡಿಸಿ, ಆಕರ್ಷಕ ರೀತಿಯಲ್ಲಿ ತುಂಬಿ ಮಾರಾಟ ಮಡುತ್ತಾರೆ. ಅವ್ರು ಸೀಬೆ ಹಣ್ಣುಗಳನ್ನು ವರ್ಗೀಕರಿಸುವಾಗ ಈ ಅಂಶಗಳನ್ನು ಗಮನದಲ್ಲಿಟ್ಟುಕೊಡಿರುತ್ತಾರೆ.

೧. ಬಿಡಿ ಹಣ್ಣು ಕನಿಷ್ಟ ಪಕ್ಷ ೭. ೫ ಸೆಂ. ಮೀ. ದಪ್ಪ ಇರಬೇಕು.

೨. ಬೀಜಗಳಿರುವ ಮಧ್ಯದ ತಿರುಳು ಕನಿಷ್ಟ ೩. ೭೫ ಸೆಂ. ಮೀ ಅಡ್ಡಗಲ ಇರಬೇಕು

೩. ಹಣ್ಣುಗಳ ತೂಕ ೧೯೬. ೪೫ ರಿಂದ ೨೬೩. ೫ ಗ್ರಾಂ ಇರಬೇಕು

೪. ಬೀಜಗಳ ಸಂಖ್ಯೆ ಕಡಿಮೆ ಇದ್ದು ಅವು ಹಣ್ಣಿನ ತೂಕದ ಶೇ. ೧ ರಿಂದ ೨ ರಷ್ಟಿರಬೇಕು

೫. ಕರಗಿದ ಒಟ್ಟು ಘನಪದಾರ್ಥಗಳ ಪ್ರಮಾಣ ಶೇ. ೮ ರಿಂದ ೧೨ ಇರಬೇಕು

೬ “ಸಿ” ಜೀವ ಸತ್ವ ೧೦೦ ಗ್ರಾಂ ತಿರುಳಿಗೆ ೩೦೦ ಮಿ. ಗ್ರಾಂಗಳಷ್ಟು ಇರಬೇಕು

೭. ತಿರುಳು ಸ್ವಲ್ಪ ಗಟ್ಟಿ ಇರಬೇಕು.

ಹಣ್ಣುಗಳನ್ನು ಮೆತ್ತಗಿನ ಒಣಹುಲ್ಲು ಹರಡಿದ ಸಡಿಲವಿರುವ ಬಿದಿರಿನ ಬುಟ್ಟಿಗಳಲ್ಲಿ ಪದರಪದರವಾಗಿ ಹರಡಿ ಮೇಲೆ ಸಹ ಅದೇ ಹುಲ್ಲನ್ನು ಹರಡಿ, ಮುಚ್ಚಳ ಹೊದಿಸಿ ಕಟ್ಟಬೇಕು. ಒಣಹುಲ್ಲಿನ ಬದಲಾಗಿ ಮೆತ್ತನೆಯ ಕಾಗದದ ಚೂರುಗಳನ್ನು ಮೆತ್ತೆಯಾಗಿ ಬಳಸಬಹುದು. ಬಿಡಿ ಹಣ್ಣುಗಳನ್ನು ತೆಳ್ಳನೆಯ ಕಾಗದದಲ್ಲಿ ಸುತ್ತಿಟ್ಟು, ಕಾಗದದ ಚೂರುಗಳ ಮಧ್ಯೆ ಜೋಡಿಸಿ, ಪ್ಲಾಸ್ಟಿಕ್ ಕ್ರೇಟ್‌ಗಳಲ್ಲಿಟ್ಟು ಸಾಗಿಸುವುದುಂಟು. ಹಣ್ಣು ಸಾಗಾಣಿಕೆಯಲ್ಲಿ ಒತ್ತಬಾರದು.

ಸಂಗ್ರಹಣೆಮತ್ತುಮಾರಾಟ

ಸೀಬೆ ಬಹುಬೇಗ ಪಕ್ವಗೊಂದು ಹಾಳಾಗುವಂತಾದ್ದು. ಅವುಗಳನ್ನು ಹೆಚ್ಚುಕಾಲ ಜೋಪಾನ ಮಾಡಿಡಲು ಆಗುವುದಿಲ್ಲ. ಕೊಠಡಿಯ ಉಷ್ಣತೆಯಲ್ಲಿ ೨ ರಿಂದ ೪ ದಿನಗಳವರೆಗೆ ಜೋಪಾನ ಮಾಡಿಡಬಹುದು. ಕೊಯ್ಲು ಮಾಡಿದ ಕೊಡಲೇ ಮಾರಾಟ ಮಾಡುವುದು ಒಳ್ಳೆಯದು. ಅಲಹಾಬಾದ್ ಸಫೇದ ತಳಿಯ ಹಣ್ಣುಗಳನ್ನು ೬. ೫ ರಿಂದ ೧೪ಡಿಗ್ರಿ ಸೆ. ಉಷ್ಣತೆಯಲ್ಲಿ ಶೀತಲ ಮಳಿಗೆಗಳಲ್ಲಿ ಸಂಗ್ರಹಿಸಿಟ್ಟಾಗ ಅವು ೪ ವಾರಗಳವಾರೆಗೆ ಸುಸ್ಥಿತಿಯಲ್ಲಿ ಇರಬಲ್ಲವು. ಆದರೆ ಅವುಗಳನ್ನು ಹೊರಕ್ಕೆ ತೆಗೆದ ಕುಡಲೇ ಅವುಗಳ ಹೊಳಪು ಮಾಯವಾಗಿ, ಆಕರ್ಷಣೆಯನ್ನು ಕಳೆದುಕೊಳ್ಳುತ್ತವೆ. ಅದರಿಂದಾಗಿ ಅವುಗಳನ್ನು ಶೀತಲ ಮಳಿಗೆಗಳಲ್ಲಿ ಸಂಗ್ರಹಿಸಿಡಬಾರದು. ಹಣ್ಣುಗಳನ್ನು ಶೇ. ೦. ೬ ರಿಂದ ೦. ೮ ಮೇಣದ ದ್ರಾವಣದಲ್ಲಿ ಅದ್ದಿ ಜೋಪಾನ ಮಾಡಿದರೆ ಅವು ಒಂದು ತಿಂಗಳವರೆಗೆ ಚೆನ್ನಾಗೆರಬಲ್ಲವು. ಪೂರ್ಣ ಬಲಿತ ಆದರೆ ಇನ್ನೂ ಹಸಿರಾಯೇ ಇರುವ ಹಣ್ಣುಗಳನ್ನು ೧೦೦ ರಿಂದ ೨೦೦ ಪಿಪಿಎಂ ಸಾಮರ್ಥ್ಯದ ೨, ೪-ಡಿ ಇಲ್ಲವೆ೨, ೪, ೫-ಟಿ ದ್ರಾವಣದಲ್ಲಿ ಅದ್ದಿ ಸಹ ಇಡಬಹುದು. ಅದೇ ರೀತಿ ಹಣ್ಣುಗಳನ್ನು ಅರಿಯೋಫಂಜಿನ್, ಎಥಿಲಿನ್‌ಕ್ಲೋರೋ ಹೈಡ್ರಿನ್ ಮತ್ತು ಕ್ಯಾಲ್ಷಿಯಮ್ ಕಾರ್ಬೊನೇಟ್‌ಗಳ ದ್ರಾವಣಗಳಲ್ಲಿ ಅದ್ದಿ ಉಪಚರಿಸಿ ಕೊಠಡಿಯ ಉಷ್ಣತೆಯಲ್ಲಿ ಸಂಗ್ರಹಿಸಿಟ್ಟಲ್ಲಿ ಅವು ಸುಮಾರು ಐದು ವಾರಗಳವರೆಗೆ ಸುಸ್ಥಿತಿಯಲ್ಲಿರಬಲ್ಲವು. ಹಣ್ಣುಗಳ ಮಾರಾಟ ವ್ಯವಸ್ಥೆ ಸರಿಯಿಲ್ಲ. ಕೆಲವರು ಬೆಳೆಯ ಫಸಲನ್ನು ಮಧ್ಯವರ್ತಿಗಳಿಗೆ ಒಂದು ಇಲ್ಲವೇ ಎರಡು ವರ್ಷಗಳಾವರೆಗೆ ಗುತ್ತಿಗೆಗೆ ಕಡಿಮೆ ದರದಲ್ಲಿ ಕೊಡುವುದುಂಟು. ಅದರಿಂದ ಹೆಚ್ಚಿನ ಲಾಭ ಮಧ್ಯವರ್ತಿಯ ಕೈಸೇರುತ್ತದೆ. ಕಷ್ಟಪಟ್ಟು ಬೆಳೆದ ರೈತನಿಗಾಗಲೀ ಇಲ್ಲ ಗ್ರಾಹಕರಿಗಾಗಲೀ ಇದರಿಂದ ಪ್ರಯೋಜನವಾಗದು. ಹಾಗೆ ಮಾಡುವುದರ ಬದಲಾಗಿ ಬೆಳೆಗಾರರು ಸಹಕಾರ ಸಂಘಗಳ ಮೂಲಕ ಮಾರಾಟ ಮಾಡುವುದು ಒಳ್ಳೆಯದು. ಅಂತಹ ಹಲವಾರು ಮಾರಾಟ ಮಳಿಗೆಗಳನ್ನು ಕರ್ನಾಟಕ ರಾಜ್ಯದ ತೋಟಗಾರಿಕೆ ಇಲಾಖೆ ಈಗಾಗಲೇ ತೆರೆದು ನೆರವಾಗುತ್ತಿದೆ.

ಅಂದಾಜು ಖರ್ಚು ಮತ್ತು ಆದಾಯ : ಸೀಬೆ ಒಳ್ಳೆಯ ಆದಾಯಕೊಡುವ ಹಣ್ಣಿನ ಬೆಳೆಯೇನೋ ನಿಜ. ಆದರೆ ಅದರ ಬೇಸಾಯಕ್ಕೆ ತಗಲುವ ಖರ್ಚು ಸ್ವಲ್ಪ ಹೆಚ್ಚೇ ಎನ್ನಬಹುದು. ಪ್ರಾರಂಭದ ಒಂದೆರಡು ವರ್ಷಗಳಲ್ಲಿ ಫಸಲು ಇಲ್ಲದಿರುವ ಕಾರಣ ಬೆಳೆಗಾರು ಬರಿಗೈಯಲ್ಲಿ ಇರಬೇಕಾಗುತ್ತದೆ. ಫಸಲೇನಿದ್ದರೂ ಸಸಿಗಳನ್ನು ನೆಟ್ಟ ಮೂರನೆಯ ವರ್ಷದಿಂದಾಚೆಗಷ್ಟೇ. ವಾಣಿಜ್ಯ ಫಸಲು ಏಳೆಂಟು ವರ್ಷಗಳಲ್ಲಿ ಸಿಗುತ್ತದೆ. ಹತ್ತು ವರ್ಷ ವಯಸ್ಸಿನ ಒಂದು ಹೆಕ್ಟೇರು ತೋಟದಿಂದ ವರ್ಷಕ್ಕೆ ಸುಮಾರು ಒಂದು ಲಕ್ಷ ರೂಪಾಯಿಗಳಷ್ಟು ನಿವ್ವಳ ಆದಾಯ ಸಾಧ್ಯ. ಬಹುತೇಕ ರೈತರು ಬೇಸಾಯ ಕೆಲಸಗಳನ್ನು ತಾವೇ ಮಾಡಿಕೊಳ್ಳುವ ಅಭ್ಯಾಸವಿದೆ. ಆಯಾ ಕುಟುಂಬದವರೇ ಮಾಡುವುದರಿಂದ ಅನಗತ್ಯ ವೆಚ್ಚ ತಪ್ಪುತ್ತದೆ. ಅದೇ ರೀತಿ ಹಣ್ಣುನ್ನು ಕೀಳುವುದು, ಬುಟ್ಟಿಗಳಿಗೆ ತುಂಬ ಸಾಗಿಸುವುದು, ಗಾಡಿಯಿಂದ ಇಳಿಸುವುದು ಮುಂತಾಗಿ ಆಗುವ ಖರ್ಚನ್ನೂ ಸಹ ಉಳಿಸಬಹುದು. ಪ್ರಾರಂಭ್ಯದ ದಿನಗಳಲ್ಲಿ ಗಿಡಗಳು ಸಣ್ಣವಿದ್ದು, ಸಾಲುಗಳ ನಡುವೆ ಇತರ ಬೆಳೆಗಳನ್ನು ಬೆಳೆದು ಖರ್ಚನ್ನು ಸ್ವಲ್ಪಮಟ್ಟಿಗೆ ಸರಿದೂಗಿಸಬಹುದು. ದಿನಕಳೆದಂತೆಲ್ಲಾ ಗಿಡಗಳು ದೊಡ್ಡವಾಗಿ, ಅವುಗಳ ನೆತ್ತಿ ಸುತ್ತ ಹರಡುವುದರಿಂದ ಇತರ ಬೆಳೆಗಳನ್ನು ಬೆಳೆಯುವುದು ಸೂಕ್ತವಲ್ಲ. ಪ್ರತಿವರ್ಷ ಫಸಲಿನ ಪ್ರಮಾಣ ಹೆಚ್ಚುತ್ತಾ ಹೋಗುತ್ತದೆ. ಅದೇ ರೀತಿ ಪೋಷಕಾಂಶಗಳು, ನೀರು ಮುಂತಾಗಿ ಸಾಕಷ್ಟು ಪ್ರಮಾಣದಲ್ಲಿ ಒದಗಿಸಬೇಕಾಗುತ್ತದೆ. ಖರ್ಚು ಮತ್ತು ಆದಾಯಗಳ ಬಗ್ಗೆ ತಿಳಿದಿರುವುದು ಬಹು ಮುಖ್ಯ. ಹಾಗೆ ಪ್ರತಿಯೊಂದನ್ನು ಬರೆದಿಟ್ಟು, ಅವಲೋಕಿಸಿದಾರೆ ಬೆಳೆ ಲಾಭದಾಯಕವೇ ಆಥವಾ ಇಲ್ಲವೇ ಎಂಬುದು ಗೊತ್ತಾಗುತ್ತದೆ. ಈ ಮಾಹಿತಿಯಿಂದ ಹೊಸದಾಗಿ ತೋಟ ಎಬ್ಬಿಸುವವರಿಗೆ ಮಾರ್ಗದರ್ಶನ ಸಿಕ್ಕಂತಾಗುತ್ತದೆ. ಹಾಗೆ ಮಾಡಬೇಕಾದ ಖರ್ಚು ಮತ್ತು ಸಿಗಬಹುದಾದ ಅಂದಾಜು ಆದಾಯಾಗಳನ್ನು ಕೋಷ್ಟಕ ೮ ರಲ್ಲಿ ಕೊಟ್ಟಿದೆ.

ಕೋಷ್ಟಕ ೮: ಒಂದು ಹೆಕ್ಟೇರು ಸೀಬೆ ತೋಟ ಮಾಡಲು ತಗಲುವ ಅಂದಾಜು ಖರ್ಚು ಮತ್ತು ಅದರಿಂದ ಸಿಗಬಹುದಾದ ಆದಾಯ