ಸೀಬೆ ಒಂದು ಸ್ವಾದಿಷ್ಟ ಪೂರ್ಣ ಹಣ್ಣು. ಇದರಲ್ಲಿ ಹೇರಳವಾದ ಸಿ ಜೀವಸತ್ವ ಇದ್ದು ಮಕ್ಕಳಿಂದ ಹಿಡಿದು ವೃದ್ಧರವರೆಗೂ ಇಷ್ಟಪಡುವ ಹಣ್ಣು. ಸಪೋಟ ಮುಖ್ಯ ಬೆಳೆಯ ಜೊತೆ ಮೊದಲ ಕೆಲವು ವರ್ಷಗಳು ಮಿಶ್ರ ಬೆಳೆಯಾಗಿ ತೆಗೆಯಲು ಸೀಬೆ ಅತಿ ಸೂಕ್ತ ಬೆಳೆ. ಸೀಬೆ ಹಣ್ಣಿನ ವಿಶಿಷ್ಟ ರುಚಿಯೊಂದಿಗೆ ಅದರ ಪೌಷ್ಟಿಕ ಗುಣವೂ ಮಹತ್ವದ್ದಾಗಿದೆ. ಸೀಬೆ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಇದನ್ನು ಮುಖ್ಯವಾಗಿ ವಸಡುಗಳ ತೊಂದರೆ, ಅಪಸ್ಮಾರ, ಸಂಧಿವಾತ ನಿವಾರಣೆಗೆ ಬಳಸುತ್ತಾರೆ. ಬಹುಬೇಗ ಫಸಲಿಗೆ ಬಂದು ಆದಾಯ ತರುವ ಬೆಳೆ. ಸೀಬೆ ಉಷ್ಣವಲಯದ ಬೆಳೆ. ಕಡಿಮೆ ಮಳೆಯಾಗುವ ಒಣಹವೆ ಇರುವ ಪ್ರದೇಶ ಇದರ ಬೇಸಾಯಕ್ಕೆ ಸೂಕ್ತ. ನೀರು ಬಸಿಯುವ ಮರಳು ಮಿಶ್ರಿತ ಮಣ್ಣು ಸೀಬೆ ಬೇಸಾಯಕ್ಕೆ ಅತ್ಯುತ್ತಮ. ಬೆಳೆಯ ಉಗಮ, ಹವಾಮಾನ ಹಾಗೂ ಭೂಗುಣಗಳ ಅಗತ್ಯತೆಗಳನ್ನು ಕುರಿತು ಅಧ್ಯಾಯದಲ್ಲಿ ಚರ್ಚಿಸಲಾಗಿದೆ.

ದೇಶದ ಹಲವಾರು ಕಡೆ ಸೀಬೆಯನ್ನು ಬೆಳೆಯುತ್ತಾರಾದರೂ ಅಲಹಾಬಾದ್ ಸೀಬೆ ಹೆಸರುವಾಸಿ. ಈ ಬೆಳೆಯನ್ನು ಬೆಳೆಯುತ್ತಿರುವ ಕ್ಷೇತ್ರ ಮತ್ತು ಉತ್ಪಾದನೆಗಳ ದೃಷ್ಟಿಯಿಂದ ನಮ್ಮ ದೇಶದ ಪ್ರಧಾನ ಹಣ್ಣುಗಳಲ್ಲಿ ಇದಕ್ಕೆ ನಾಲ್ಕನೇ ಸ್ಥಾನ ಇದೆ.

ಬಹುಬೇಗ ಫಸಲು ಬಿಡುವ ಹಣ್ಣಿನ ಬೆಳೆ ಇದಾಗಿದೆ. ಕೆಲವರು ಇದನ್ನು ಶುದ್ಧ ಬೆಳೆಯಾಗಿ ಬೆಳೆದರೆ ಮತ್ತೆ ಕೆಲವರು ಇತರ ಹಣ್ಣಿನ ಗಿಡಗಳ ಸಾಲುಗಳ ನಡುವೆ ಇಲ್ಲವೇ ನಾಲ್ಕು ಗಿಡಗಳ ಮಧ್ಯೆ ಒಂದರಂತೆ ಮಿಶ್ರಬೆಳೆಯಾಗಿ ಅಥವಾ ಪೂರಕ ಬೆಳೆಯಾಗಿ ಬೆಳೆದು ಮುಖ್ಯ ಬೆಳೆ ವಾಣಿಜ್ಯ ಫಸಲು ಬಿಡುವ ಪ್ರಾರಂಭಿಸಿದಾಗ ಇದನ್ನು ಕೀಳುತ್ತಾರೆ. ಇದನ್ನು ಮಳೆ ಆಸರೆಯಲ್ಲಿ ಸಹ ಬೆಳೆಯಬಹುದು. ಆದರೆ ನೀರಾವರಿ ಇದ್ದರೆ ಲಾಭದಾಯಕ. ಸಣ್ಣ ಹಿಡುವಳಿಗಳಲ್ಲಿ, ಅಂಚು ಭೂಮಿಗಳಲ್ಲಿ ಸಹ ಬೆಳೆಯಬಹುದು. ಇದು ಒಳ್ಳೆಯ ಆದಾಯ ಕೊಡುವ ಹಣ್ಣಿನ ಬೆಳೆಯಾಗಿದೆ. ಇದರ ಹಣ್ಣುಗಳಿಂದ ತಯಾರಿಸಿದ ಪದಾರ್ಥಗಳಿಗೆ ಒಳ್ಳೆಯ ಬೇಡಿಕೆ ಇದೆ. ಅವುಗಳನ್ನು ಸಂಸ್ಕರಿಸುವ ಘಟಕಗಳು ಹಲವಾರು ಇದ್ದು ಬಹಳಷ್ಟು ಜನರಿಗೆ ಉದ್ಯೋಗಾವಕಾಶ ಲಭಿಸುವಂತಾಗಿದೆ.

ಸೀಬೆ ‘ಸಿ’ ಜೀವಸತ್ವದ ಒಳ್ಳೆಯ ಮೂಲ. ಹಣ್ಣನ್ನು ಬೇಯಿಸಿದಾಗಲೂ ಸಹ ಅದು ಹಾಗೆಯೇ ಉಳಿಯುತ್ತದೆ. ತಿರುಳನ್ನುಹೋಳುಮಾಡಿ, ಬೀಜವನ್ನು ಬೇರ್ಪಡಿಸಿ ಹಣ್ಣಿನ ಸಲಾಡಗಳಲ್ಲಿ ಬೆರೆಸುವುದುಂಟು.

ಎರಡನೇ ಮಹಾಯುದ್ಧದಲ್ಲಿ ಸೈನಿಕರಿಗೆ ಸೀಬೆ ಹಣ್ಣಿನ ಒಣಪುಡಿಯನ್ನು ಪೂರೈಸಿ ‘ಸಿ’ ಜೀವಸತ್ವದ ಕೊರತೆಯನ್ನು ಹೋಗಲಾಡಿಸಿದ್ದುಂಟು ಸೀಬೆಗೆ ಹಲವಾರು ಹೆಸರುಗಳಿವೆ. ಸಂಸ್ಕೃತದಲ್ಲಿ ಅಮೃತಫಲ, ಮಧುರಾಮ್ಲ, ಹಿಂದಿಯಲ್ಲಿ ಅಮ್ರೂದ್, ಕನ್ನಡದಲ್ಲಿ ಸೀಬೆ, ಚೇಪೆ, ಪೇರಲ, ಬಿಕ್ಕೆ, ತೆಲುಗಿನಲ್ಲಿ ಜಾಮಪಂಡು, ತಮಿಳಿನಲ್ಲಿ ಕೊಯ್ಯಾಪಳಂ ಮತ್ತು ಇಂಗ್ಲೀಷ್‌ನಲ್ಲಿ ಗೋವಾ ಎಂಬ ಹೆಸರುಗಳಿವೆ. ಸೀಬೆಯನ್ನು ಉಷ್ಣವಲಯದ ಸೇಬು ಎನ್ನುವುದುಂಟು. ಈ ಮರದ ತೊಗಟೆಯಲ್ಲಿ ಶೇ. ೧೧ ರಿಂದ ೨೭ ರಷ್ಟು ಟ್ಯಾನಿನ್ ಅಂಶವಿರುತ್ತದೆ. ತೊಗಟೆ ಮತ್ತು ಈ ಎಲೆಗಳನ್ನು ಚರ್ಮ ಹದಮಾಡುವಲ್ಲಿ ಬಳಸುತ್ತಾರೆ. ಅವುಗಳಿಂದ ಬಣ್ಣ ಸಹ ತಯಾರಿಸುವುದುಂಟು. ಮರದ ಕಟ್ಟಿಗೆ ಕೆತ್ತನೆ ಕೆಲಸಕ್ಕೆ ಉಪಯುಕ್ತ. ಉದುರಿ ಬಿದ್ದ ಎಲೆಗಳು ಒಳ್ಳೆಯ ಭೂಮಿ ಹೊದಿಕೆಯಾಗಬಲ್ಲವು. ಅವು ಕೊಳೆತರೆ ಒಳ್ಳೆಯ ಗೊಬ್ಬರ ಸಿಕ್ಕಂತೆ. ಸೌದೆ ಉರುವಲಿಗೆ ಬರುತ್ತದೆ.

ಹಣ್ಣಿನಪೌಷ್ಟಿಕತೆ

ಸೀಬೆ ಹಣ್ಣುಗಳಲ್ಲಿ ನಮ್ಮ ಶರೀರಕ್ಕೆ ಅಗತ್ಯವಿರುವ ವಿವಿಧ ಪೋಷಕಾಂಶಗಳು ಸಾಕಷ್ಟು ಪ್ರಮಾಣದಲ್ಲಿವೆ. ಹಣ್ಣು ಸಿಗುವ ಕಾಲದಲ್ಲಿ ಯಥೇಚ್ಚ ಪ್ರಮಾಣದಲ್ಲಿ ತಿಂದು ಅವುಗಳ ಲಾಭ ಪಡೆದುಕೊಳ್ಳಬೇಕು. ಈ ಹಣ್ಣುಗಳಲ್ಲಿ ಅಧಿಕ ಪ್ರಮಾಣದ ಶರ್ಕರಪಿಷ್ಟ, ಪ್ರೋಟೀನ್, ನಾರು, ಸುಣ್ಣ, ರಂಜಕ, ಕಬ್ಬಿಣ, ಜಿಡ್ಡು, ಜೀವಸತ್ವಗಳು, ಕ್ಯಾಲರಿ ಸತ್ವ ಇರುತ್ತದೆ. ದೋರೆಗಾಯಿಗಳಲ್ಲಿ ಹೆಚ್ಚಿನ ಪೆಕ್ಟಿನ್ ಅಂಶ ಇರುತ್ತದೆ ಕೆಲವೊಂದು ತಳಿಗಳ ಹಣ್ಣುಗಳಲ್ಲಿ ಹುಳಿಯ ಅಂಶ ಹೆಚ್ಚಾಗಿರುತ್ತದೆ. ಸೀಬೆ ಹಣ್ಣುಗಳ ಪೌಷ್ಟಿಕ ಮೌಲ್ಯಗಳಲ್ಲಿ ತೇವಾಂಶ ೭೬. ೧ ರಿಂದ ೮೨. ೫ ಗ್ರಾಂ, ಶರ್ಕರ ಪಿಷ್ಟ ೧೪. ೫ ಗ್ರಾಂ, ಅಪಕರ್ಷಕಸಕ್ಕರೆ ೪. ೪೫, ಅಪಕರ್ಷಕವಲ್ಲದ ಸಕ್ಕರೆ ೫. ೨೪ ಗ್ರಾಂ, ಪ್ರೊಟೀನ್ ೧. ೫ ಗ್ರಾಂ, ನಾರು ೬. ೯ ಗ್ರಾಂ ಜಿಡ್ಡು, ೦. ೨ ಗ್ರಾಂ, ಕಬ್ಬಿಣ ೧. ೦ ಗ್ರಾಂ, ರಂಜಕ ೦. ೦೪ ಗ್ರಾಂ, ಸುಣ್ಣ ೦. ೦೧ ಗ್ರಾಂ, ರೈಬೊಫ್ಲೇವಿನ್ ೩೦. ಮಿ. ಗ್ರಾಂ, “ಬಿ” ಜೀವಸತ್ವ ೩೦ ಮಿ. ಗ್ರಾಂ, “ಎ” ಜೀವಸತ್ವ, ಸ್ವಲ್ಪ “ಸಿ” ಜೀವಸತ್ವ ೧೦೦-೨೬೦ ಮಿ. ಗ್ರಾಂ, ಕ್ಯಾಲರಿಗಳು ೬೬, ಬೂದಿ ೦. ೪೮ ಗ್ರಾಂ, ಹುಳಿಯ ಅಂಶ ೨. ೫ ಗ್ರಾಂಗಳಷ್ಟು ಇರುತ್ತದೆ.

ಕಿತ್ತಲೆ ಜಾತಿಯ ಹಣ್ಣುಗಳಲ್ಲಿ ಇರುವುದಕ್ಕಿಂತ ಆರು ಪಟ್ಟು ಹೆಚ್ಚು “ಸಿ” ಜೀವಸತ್ವ ಸೀಬೆ ಹಣ್ಣುಗಳಲ್ಲಿದೆ. ಕೆನ್ನೀಲಿ ಹಣ್ಣುಗಳಲ್ಲಿ “ಸಿ” ಜೀವಸತ್ವ ಕಡಿಮೆ ಇದ್ದು, ಬಿಳಿ ಹಣ್ಣುಗಳಲ್ಲಿ ಅದು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಬೀಜಗಳು ಕಬ್ಬಿಣದಂಶದ ಒಳ್ಳೆಯ ಮೂಲ.

ಔಷಧೀಯ ಗುಣಗಳು : ಸೀಬೆ ಹಣ್ಣುಗಳಲ್ಲಿ ಹೆಚ್ಚಿನ ಪ್ರೊಟೀನ್ ಅಂಶವಿರುತ್ತದೆ. ಆದ್ದರಿಂದ ಅವುಗಳನ್ನು ಸೇವಿಸುತ್ತಿದ್ದಲ್ಲಿ ಮಾಂಸಖಂಡಗಳು ಬಲಗೊಳ್ಳುತ್ತವೆ. ಅವುಗಳಲ್ಲಿ ನಾರಿನ ಅಂಶ ಜಾಸ್ತಿ ಇರುವ ಕಾರಣ, ತಿಂದ ಆಹಾರ ಕರಳುಗಳಲ್ಲಿ ಸುಲಭವಾಗಿ ಚಲಿಸಿ, ಮಲಬದ್ದತೆಯನ್ನು ಹೋಗಲಾಡಿಸಬಲ್ಲದು. ಮಲಬದ್ದತೆಯಿಂದ ನರಳುವವರು ಈ ಹಣ್ಣುಗಳನ್ನು ಬೀಜಸಮೇತ, ರಾತ್ರಿ ಮಲಗುವ ಮುಂಚೆ ತಿನ್ನುತ್ತಿದ್ದಲ್ಲಿ, ಮರುದಿವಸ ಬೆಳಿಗ್ಗೆ ಸುಲಭವಾಗಿ ಮಲವಿಸರ್ಜನೆ ಮಾಡಬಹುದು. ಇವುಗಳಲ್ಲಿನ ಕಬ್ಬಿಣದ ಅಂಶ ಶರೀರದಲ್ಲಿ ಶುದ್ದ ರಕ್ತ ಹೆಚ್ಚುವಂತೆ ಮಾಡುತ್ತದೆ. ಇವುಗಳಲ್ಲಿನ “ಸಿ” ಜೀವಸತ್ವದಿಂದ ಒಸಡುಗಳು ಗಟ್ಟಿಗೊಳ್ಳುತ್ತವೆ ಮತ್ತು ಸ್ಕರ್ವಿಕಾಯಿಲೆ ವಾಸಿಯಾಗುತ್ತದೆ. ಅಪಕ್ವ ಕಾಯಿ ರುಚಿಯಲ್ಲಿ ಒಗರು. ಅವುಗಳಲ್ಲಿ ಹೆಚ್ಚಿನ ಪೆಕ್ವಿನ್ ಅಂಶವಿರುತ್ತದೆ. ಈ ಅಂಶಗಳಿಂದಾಗಿ, ತಿಂದಾಗ ಕರಳುಗಳಲ್ಲಿ ಸ್ತಂಭಕ ಗುಣಗಳನ್ನುಂಟುಮಾಡುತ್ತವೆ. ಶೀತ ಪ್ರಕೃತಿ ಇರುವವರು ಈ ಹಣ್ಣುಗಳನ್ನು ತಿನ್ನಲು ಇಷ್ಟಪಡುವುದಿಲ್ಲ. ಏಕೆಂದರೆ ಇದರಿಂದ ಕೆಮ್ಮು, ನೆಗಡಿ ಮುಂತಾಗಿ ಕಾಣಿಸಿಕೊಳ್ಳುತ್ತವೆ. ಅಂತಹವರು ಸ್ವಲ್ಪ ಉಪ್ಪು ಸೇರಿಸಿ ತಿಂದರೆ ಈ ಸಮಸ್ಯೆ ಇರುವುದಿಲ್ಲ. ಸೀಬೆ ಹಣ್ಣುಗಳ ಸೇವನೆ ವಾತ ಮತ್ತು ಪಿತ್ತರಸ ಬಾಧೆಗಳಿಗೂ ಸಹ ಒಳ್ಳೆಯದು.

ಹವಾಯಿಯಲ್ಲಿ ಮಕ್ಕಳಿಗೆ ಕಿತ್ತಲೆ ಮತ್ತು ಟೊಮ್ಯಾಟೊ ಹಣ್ಣುಗಳ ರಸದ ಬದಲಾಗಿ ಸೀಬೆ ಹಣ್ಣಿನ ರಸವನ್ನು ಕುಡಿಸುವುದುಂಟು. **ಹೂವುಗಳಲ್ಲಿನ ಪರಾಗ ಕೋಶಗಳನ್ನು ನುಣ್ಣಗೆ ಅರೆದು ಪಟ್ಟು ಹಾಕಿದಲ್ಲಿ ಗಾಯಗಳು ವಾಸಿಯಾಗುತ್ತವೆ. ಅಧಿಕ ಉಷ್ಣವನ್ನು ಹೋಗಲಾಡಿಸುವ ಗುಣ ಸೀಬೆ ಹೂಗಳಿಗಿದೆ. ಸೀಬೆ ಹೂಗಳನ್ನು ನುಣ್ಣಗೆ ಅರೆದು ಗಾಯ ಹಾಗೂ ವ್ರಣಗಳಿಗೆ ಪಟ್ಟು ಹಾಕಿದಲ್ಲಿ ಶೀಘ್ರ ಉಪಶಮನ ಸಾಧ್ಯ. ಅವುಗಳನ್ನು ತಿಂದರೆ ಕರಳುಗಳಲ್ಲಿ ಒಗರುಂಟಾಗುತ್ತದೆ. ಜಾವಾದಲ್ಲಿ ಎಲೆಗಳನ್ನು ಅರೆದು ತಯಾರಿಸಿದ ರಸವನ್ನು ಪಾನೀಯವಾಗಿ ಬಳಸುತ್ತಾರೆ. ಚಿಗುರು ಕುಡಿಗಳನ್ನು ನೀರಿನಲ್ಲಿ ಕುದಿಸಿ ತಯಾರಿಸಿದ ಕಷಾಯವನ್ನು ಜ್ವರ ಪೀಡಿತರಿಗೆ ಕುಡಿಸುವುದಂಟು. ನುಣ್ಣಗೆ ಕುಟ್ಟಿ ಪುಡಿಮಾಡಿದ ಎಲೆಗಳನ್ನು ಸಂಧಿವಾತ ನಿವಾರಣೆಗೆ ಬಳಸುತ್ತಾರೆ. ಅವುಗಳ ತಿಳಿ ರಸದ ಸೇವನೆ ಅಪಸ್ಮಾರಕ್ಕೆ ಒಳ್ಳೆಯದು. ಎಲೆಗಳನ್ನು ಕುದಿಸಿದ ನೀರನ್ನು ಮುಕ್ಕಳಿಸುತ್ತಿದ್ದಲ್ಲಿ ಒಸಡುಗಳ ಊತ ಮತ್ತು ಹಲ್ಲುನೋವು ಕಡಿಮೆಯಾಗುತ್ತವೆ. ಬೇಧಿ ಮತ್ತು ಆಮಶಂಕೆಗಳಲ್ಲಿ ಎಲೆಗಳನ್ನು ತಿನ್ನಲು ಸೂಚಿಸುವುದುಂಟು. ಹಸಿ ತೊಗಟೆಯನ್ನು ಕುದಿಸಿ ತಯಾರಿಸಿದ ಕಷಾಯ ಕುಡಿದಲ್ಲಿ ವಿರೇಚನಗಳು ನಿಲ್ಲುತ್ತವೆ.

ಉಗಮಮತ್ತುಹಂಚಿಕೆ

ಸೀಬೆಯ ತವರೂರು ಅಮೇರಿಕಾದ ಉಷ್ಣ ಪ್ರದೇಶಗಳು ಅಂದರೆ, ವೆಸ್ಟ್, ಇಂಡೀಸ್‌ನಿಂದ ಹಿಡಿದು ಪೆರುವರೆಗಿನ ಪ್ರದೇಶ ಹಾಗೂ ಮೆಕ್ಸಿಕೊ. ಅಲ್ಲೆಲ್ಲಾ ಇದು ಕಾಡು ಸಸಿಯಾಗಿಯೇ ಉಳಿದಿದೆ. ಜಗತ್ತಿನಲ್ಲಿ ಈ ಹಣ್ಣಿನ ಬೆಳೆಯನ್ನು ಹೆಚ್ಚಾಗಿ ಬೆಳೆಯುತ್ತಿರುವ ದೇಶಗಳೆಂದರೆ ಏಷ್ಯಾದ ದಕ್ಷಿಣ ದೇಶಗಳು, ಹವಾಯ್, ಕರ‍್ಯಾಬಾ ಮತ್ತು ಭಾರತ, ಶ್ರೀಲಂಕಾ ಮತ್ತು ಬರ್ಮಾಗಳಲ್ಲಿ ಸಹ ಇದರ ಬೇಸಾಯ ಹಾಗೂ ಬಳಕೆ ಇದೆ.

ವೆಸ್ಟ್ ಇಂಡೀಸ್‌ನ ಅನೇಕ ಭಾಗಗಳಲ್ಲಿ ಕಂಡು ಸಿಗುವ ಸಾಮಾನ್ಯ ಹಣ್ಣಿನ ಬೆಳೆಯೆಂದರೆ ಸೀಬೆ ಎಂಬುದಾಗಿ ಓವಿಯೆಡೊ ಎಂಬಾತ ೧೫೨೮ರಲ್ಲಿ ಬರೆದಿಟ್ಟಿದ್ದಾನೆ. ಇದನ್ನು ಸ್ಪೇನ್ ಜನರು ಫಿಲಿಪ್ಪೈನ್ಸ್ ದ್ವೀಪಗಳಿಗೆ ಶಾಂತಸಾಗರದ ಮೂಲಕ ಬಹು ಹಿಂದೆಯೇ ಒಯ್ದಿದ್ದರೆಂದು ತಿಳಿದುಬಂದಿದೆ. ಭಾರತಕ್ಕೆ ೧೭ನೇ ಶತಮಾನದಲ್ಲಿ ಪಶ್ಚಿಮದ ಕಡೆಯಿಂದ ಪ್ರವೇಶವಾಯಿತೆಂದು ತಿಳಿದುಬಂದಿದೆ. ಕ್ಯೂಬಾದಲ್ಲಿ ಸೀಬೆ ಹಣ್ಣುಗಳಿಗೆ ಈವತ್ತಿಗೂ ಕಾಡುಗಳೇ ಆಧಾರ. ಫ್ಲೋರಿಡಾದಲ್ಲಿ ಮೊಟ್ಟಮೊದಲಿಗೆ ಸೀಬೆ ತೋಟವನ್ನು ಎಬ್ಬಿಸಿದ್ದು ೧೮೧೨ರಲ್ಲಿ. ಇಸ್ರೇಲ್‌ನಲ್ಲಿ ಇದನ್ನು ಇತ್ತೀಚೆಗಷ್ಟೇ ನೆಟ್ಟು ಬೆಳೆಸಲಾಗಿದೆ.

ನಮ್ಮ ದೇಶದಲ್ಲಿ ಈ ಹಣ್ಣಿನ ಬೆಳೆಯನ್ನು ವ್ಯಾಪಕವಾಗಿ ಬೆಳೆಯುವ ರಾಜ್ಯಗಳೆಂದರೆ ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಇತ್ಯಾದಿ. ಉತ್ತರ ಪ್ರದೇಶದ ಅಲಹಾಬಾದ್ ಸೀಬೆ ಇಡೀ ಜಗತ್ತಿನಲ್ಲಿಯೇ ಹೆಸರುವಾಸಿ.

ಕರ್ನಾಟಕದಲ್ಲಿ ಒಟ್ಟು ಸುಮಾರು ೧೧, ೫೯೬ ಹೆ. ಪ್ರದೇಶದಲ್ಲಿ ಈ ಹಣ್ಣಿನ ಬೆಳೆ ಇದ್ದು ಅದರಿಂದ ವರ್ಷಕ್ಕೆ ೧, ೪೩, ೮೨೨ ಟನ್ನುಗಳಷ್ಟು ಹಣ್ಣು ಲಭಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಸೀಬೆ ಬೆಳೆಯನ್ನು ಹೆಚ್ಚು ಹೆಚ್ಚಾಗಿ ಬೆಳೆಯಲು ಪ್ರಾರಂಭಿಸಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸೀಬೆಯನ್ನು ಬೆಳೆಯುತ್ತಿರುವ ಕ್ಷೇತ್ರ ೧೫೮೮ ಹೆಕ್ಟೇರು ಇದ್ದು ಉತ್ಪಾದನೆ ೨೪೩೮೫ ಟನ್ನುಗಳಷ್ಟು ದೊರೆಯುತ್ತಿದೆ.

ಹವಾಮಾನ

ಸೀಬೆ ಉಷ್ಣವಲಯದ ಹಣ್ಣಿನ ಬೆಳೆಯಾದಾಗ್ಯೂ ಸಹ ಸಮಶೀತೋಷ್ಣ ಪ್ರದೇಶಗಳಲ್ಲಿ ಕೂಡ ಯಶಸ್ವಿಯಾಗಿ ಫಲಿಸಬಲ್ಲದು. ಕಡಿಮೆ ಮಳೆಯಾಗುವ ಹಾಗೂ ಒಣ ಹವೆ ಇರುವ ಪ್ರದೇಶಗಳು ಇದರ ಬೇಸಾಯಕ್ಕೆ ಬಲು ಸೂಕ್ತ. ವಾರ್ಷಿಕ ಮಳೆ ೧೦೦ ಸೆಂ. ಮೀ. ಗಿಂತ ಕಡಿಮೆ ಇದ್ದಲ್ಲಿ ಉತ್ತಮ. ಮಳೆ ಜೂನ್‌ನಿಂದ ಸೆಪ್ಟೆಂಬರ್‌‌‌‌‌‌‌‌ವರೆಗೆ ಸಮನಾಗಿ ಹಂಚಿಕೆಯಾಗಬೇಕು. ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಮರಗಳು ಬಲು ಸೊಂಪಾಗಿ ಬೆಳೆದು ಸಾಕಷ್ಟು ಫಸಲನ್ನು ಬಿಡುತ್ತವೆ. ಆದರೆ ಅಂತಹ ಹಣ್ಣು ತಿನ್ನಲು ರುಚಿಯಾಗಿರುವುದಿಲ್ಲ. ಅವು ತೀರ ಸಪ್ಪೆ ಇರುತ್ತವೆ. ಅವುಗಳ ಸಂಗ್ರಹಣಾ ಗುಣ ಸಹ ತೃಪ್ತಿಕರವಿರುವುದಿಲ್ಲ. ಅಂತಹ ಕಡೆ ಕೀಟ ಮತ್ತು ರೋಗಗಳ ಬಾಧೆ ಹೆಚ್ಚು; ಫಸಲು ಕ್ರಮಬದ್ಧವಾಗಿರುವುದಿಲ್ಲ.

ಸೀಬೆ ಸಮುದ್ರಮಟ್ಟದಿಂದ ೧೨೦೦ ಮೀ. ಎತ್ತರದವರೆಗೆ ಚೆನ್ನಾಗಿ ಬೆಳೆದು ಫಲಿಸುತ್ತದೆ. ದೀರ್ಘಕಾಲ ಅನಾವೃಷ್ಟಿಯಿದ್ದರೂ ಹಾನಿಯಾಗದು. ಆದರೆ ಹೆಚ್ಚು ಸಮಯ ಶೈತ್ಯ ಹವೆ ಇದ್ದರೆ ಮಾತ್ರ ಇದಕ್ಕಾಗದು. ಹೆಪ್ಪುಗಟ್ಟುವ ಚಳಿ ಇದ್ದರೆ ಗಿಡಗಳು ಸಾಯುವುದು ಖಂಡಿತ. ಸೀಬೆಗೆ ನಿರ್ದಿಷ್ಟ ಚಳಿಗಾಲ ಅಥವಾ ಸೌಮ್ಯವಿರುವ ತಂಪು ಹವೆ ಇದ್ದರೆ ಹಣ್ಣಿನ ಗುಣಮಟ್ಟ ಅತ್ಯುತ್ತಮವಿರುತ್ತದೆ. ಬೇಸಿಗೆಯಲ್ಲಿ ೪೦ ಸೆ. ಮತ್ತು ಚಳಿಗಾಲದಲ್ಲಿ ೪ ಸೆ., ಉಷ್ಣತೆ ಇದ್ದಲ್ಲಿ ಸಾಕು. ಹೂವು ಬಿಟ್ಟು ಕಾಯಿಕಚ್ಚುವ ದಿನಗಳಲ್ಲಿ ಒಣಹವೆ ಇದ್ದರೆ ಅನುಕೂಲವಿರುವುದಿಲ್ಲ. ಅದರಿಂದ ಹೂವು ಮತ್ತು ಹೀಚು ಉದುರುತ್ತವೆ.

ಭೂಗುಣ

ಸೀಬೆ ಹಣ್ಣಿನ ಬೆಳೆಗೆ ಇಂತಹುದೇ ಮಣ್ಣಿನ ಭೂಮಿ ಇರಬೇಕು ಎಂದು ನಿಯಮವಿಲ್ಲ. ವಾಸ್ತವವಾಗಿ ಸೀಬೆ ಮರಗಳು ಗಡುತರವಿದ್ದು ಕಠಿಣ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯ ಹೊಂದಿವೆ. ಕ್ಷಾರಯುತ ಹಾಗೂ ಚೌಳು ಮಣ್ಣಿನ ಭೂಮಿ ಸಹ ಸೂಕ್ತವೇ. ಸರಿಯಾಗಿ ನೀರು ಬಸಿಯದ ಮತ್ತು ಆಳವಿಲ್ಲದ ಮಣ್ಣಿನ ಭೂಮಿಯಾದರು ಅಡ್ಡಿಯಿಲ್ಲ.

ಹೆಚ್ಚು ತೇವ ಹಿಡಿದಿಡುವ ಕಪ್ಪು ಜಿಗುಟು ಮಣ್ಣು ಸೂಕ್ತವಿರುವುದಿಲ್ಲ. ಮಳೆಗಾಲದಲ್ಲಿ ಬಹಳಷ್ಟು ತೇವವನ್ನು ಹಿಡಿದಿಡುತ್ತದೆ ಹಾಗಾಗಿ ಬೇರುಗಳು ಉಸಿರಾಡಲು ಅಡ್ಡಿಯಗುತ್ತದೆ. ಪರಿಣಾಮವಾಗಿ ಬೇರುಗಳು ಕೊಳೆಯುತ್ತವೆ. ಅಂತಹ ಪರಿಸ್ಥಿತಿಗಳಲ್ಲಿ ರೋಗಗಳ ಹಾವಳಿ ಹೆಚ್ಚಾಗುತ್ತದೆ. ಅಂತಹ ಜಿಗುಟು ಮಣ್ಣಿನಲ್ಲಿ ಬೇಸಿಗೆಯಲ್ಲಿ ಬಿರುಕುಗಳುಂಟಾಗಿ ಸಣ್ಣಪುಟ್ಟ ಬೇರುಗಳು ಕಿತ್ತು ಹಾಳಾಗಾತ್ತವೆ. ಅದೇ ರೀತಿ ಮರಳು ಮಣ್ಣಿನ ಭೂಮಿ ಆದಲ್ಲಿ ತೇವ ಹಿಡಿದಿಡುವ ಸಾಮರ್ಥ್ಯ ಕಡಿಮೆ ಇದ್ದು, ಪದೇ ಪದೇ ನೀರನ್ನು ಹಾಯಿಸಬೇಕಾಗುತ್ತದೆ. ಬಲವಾದ ಗಾಳಿ ಬೀಸಿದಾಗ ಮರಗಳು ಬೇರು ಸಮೇತ ಕಿತ್ತುಬರುವ ಸಾಧ್ಯತೆ ಇರುತ್ತದೆ.

ತಳ ಪದರಗಳಲ್ಲಿ ಬಂಡೆ ಇರಬಾರದು. ಕಲ್ಲುಗುಂಡುಗಳಿಂದ ಕೂಡಿದ, ಗರಜು ಭೂಮಿ, ಸುಣ್ಣ ಕಲ್ಲುಗಳಿಂದ ಕೂಡಿದ, ತೀರಾ ನಿಸ್ಸಾರವಿರುವ ಹಾಗೂ ತಗ್ಗು ಪ್ರದೇಶಗಳಲ್ಲಿನ ಭೂಮಿಯನ್ನು ಆರಿಸಿಕೊಳ್ಳಬಾರದು. ನೀರು ನಿಲ್ಲುವ ಅಥವಾ ನೀರು ಬಸಿಯದ ಭೂಮಿ ಸಹ ಸೂಕ್ತವಿರುವುದಿಲ್ಲ.

ನೀರು ಬಸಿಯುವ, ಮರಳು ಮಿಶ್ರಿತ ಗೋಡು ಮಣ್ಣು, ಮೆಕ್ಕಲು ಮಣ್ಣು ಹಾಗೂ ಕೆಂಪು ಗೋಡು ಮಣ್ಣು ಅತ್ಯುತ್ತಮವಿರುತ್ತವೆ. ಮಣ್ಣು ಒಂದು ಮೀ. ಗಿಂತ ಆಳವಿದ್ದು, ಸಾರವತ್ತಾಗಿದ್ದಲ್ಲಿ ಒಳ್ಳೆಯದು. ಸೀಬೆ ಗಿಡಮರಗಳ ಬಹುತೇಕ ಬೇರುಗಳು ಮಣ್ಣಿನ ಮೇಲ್ಪದರದ ೨೦ ಸೆಂ. ಮೀ. ಆಳಕ್ಕೆ ಸೀಮಿತಗೊಂಡಿರುತ್ತವೆ. ಮಣ್ಣಿನ ಪಿ. ಎಚ್. ೪. ೫ ರಿಂದ ೭. ೫ ರವರೆಗೆ ಇರಬಹುದು. ಅಂತರ್ಜಲ ಒಂದೇ ತೆರನಾಗಿರಬೇಕೇ ಹೊರತು ಇದ್ದಕ್ಕಿದ್ದಂತೆ ಕುಸಿಯುವಾದಾಗಲೀ ಅಥವಾ ಮೇಲೇರುವುದಾಗಲೀ ಇರಕೂಡದು. ಒಂದು ವೇಳೆ ಹಾಗೇನಾದರೂ ಆಗಿದ್ದೇ ಆದರೆ ಹಾನಿ ತಪ್ಪದು. ಬೆಳೆ ಇಡುವ ಮುಂಚೆ ತಜ್ಞರ ಸಲಹೆ ಪಡೆಯುವುದು ಲಾಭದಾಯಕ. ಅಗತ್ಯವಿದ್ದಲ್ಲಿ ಮಣ್ಣು ಮತ್ತು ನೀರುಗಳನ್ನು ಪರೀಕ್ಷೆ ಮಾಡಿಸಬೇಕು.