ಕೃಷಿ ಜ್ಞಾನ ಭಂಡಾರ ರೈತರ ಜನಮನವನ್ನು ತಲುಪುವ ಉನ್ನತವಾದ ಉದ್ದೇಶದಿಂದ ಪ್ರಾರಂಭವಾದ ಒಂದು ಅಪೂರ್ವ ಜ್ಞಾನವಾಹಿನಿ. ಕೃಷಿತೋ ನಾಸ್ತಿ ದುರ್ಭಿಕ್ಷಂ ಇದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಲಾಂಛನದ ಹೊನ್ನುಡಿ. ಕೃಷಿ ವಿಜ್ಞಾನ ಪ್ರಗತಿಯಾದಂತೆ ನಾಡಿನಲ್ಲಿ ಸುಭಿಕ್ಷತೆ ನೆಲೆಯಾಗುತ್ತದೆ. ರೈತ ಸಂಸ್ಕೃತಿ ಬೆಳೆದಂತೆಲ್ಲಾ ಕೃಷಿ ವಿಜ್ಞಾನ ಭಂಡಾರವೂ ತುಂಬಿ ಹರಿಯುತ್ತದೆ. ಇದರಲ್ಲಿ ಕೃಷಿ ವಿಜ್ಞಾನಿಗಳ, ಚಿಂತಕರ ಪಾತ್ರ ಅಪಾರ. ವಿಶ್ವವಾಹಿನಿಯಾದ ವಿಚಾರ, ಚಿಂತನೆಗಳು ಮಾನವನ ಮುನ್ನಡೆಯ ದ್ಯೋತಕ. ಇದಕ್ಕೆ ಪೂರಕವಾದ ವೈಜ್ಞಾನಿಕ ಕಿರುಪುಸ್ತಕಗಳನ್ನು ಸರಳ, ಸುಂದರ, ವಿಚಾರ ಪೂರ್ಣ ಶೈಲಿಯಲ್ಲಿ ರೈತರಿಗೆ ಒದಗಿಸಿಕೊಡುವ ವಿಶಿಷ್ಟ ಕಾರ್ಯವನ್ನು ಕೃಷಿ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದಲ್ಲಿ ಕೈಗೊಳ್ಳಲಾಗಿದೆ.

ತೋಟಗಾರಿಕೆ ಹಣ್ಣಿನ ಬೆಳೆಗಳಲ್ಲಿ ಸಪೋಟ ಮತ್ತು ಸೀಬೆ ಪ್ರಮುಖವಾದವುಗಳು. ಇವು ಹಲವಾರು ವರ್ಷಗಳು ಜೀವಿಸಿ ರೈತನಿಗೆ ನಿರಂತರ ಆದಾಯ ತರುತ್ತವೆ. ಅಲ್ಲದೇ ಮೊದಲ ಕೆಲವು ವರ್ಷಗಳು ಈ ಬೆಳೆಗಳ ಮಧ್ಯೆ ವಾರ್ಷಿಕ ಕೃಷಿ ಬೆಳೆಗಳನ್ನು ಬೆಳೆದು ಅಲ್ಪ ಸ್ವಲ್ಪ ಆದಾಯವನ್ನು ಸಹ ಮಾಡಿಕೊಳ್ಳಬಹುದು.

ಸಪೋಟ ಮತ್ತು ಸೀಬೆ ಪುಸ್ತಕ ಕೃಷಿ ಜ್ಞಾನಭಂಡಾರ ಮಾಲಿಕೆಯ ಮೂರನೇ ಕೊಡುಗೆ. ತೋಟಗಾರಿಕೆ ವಿಜ್ಞಾನದಲ್ಲಿ ನುರಿತ ತಜ್ಞರಾದ ಡಾ ಎಂ. ಎ. ನಾರಾಯಣ ರೆಡ್ಡಿ ಅವರು ಇದನ್ನು ರಚಿಸಿದ್ದಾರೆ. ಇದರಲ್ಲಿ ಬೆಳೆ ಪರಿಚಯ, ಸಸ್ಯವರ್ಣನೆ, ತಳಿಗಳು, ಸಸ್ಯಾಭಿವೃದ್ಧಿ, ತೋಟದ ನಿರ್ಮಾಣ, ಬೇಸಾಯ ಕ್ರಮಗಳು, ಸಸ್ಯ ಸಂರಕ್ಷಣೆ, ಇಳುವರಿ, ಹಣ್ಣಿನ ವಿವಿಧ ಉತ್ಪನ್ನಗಳು ಮುಂತಾದ ಅಧ್ಯಾಯಗಳಲ್ಲಿ ಬೆಳೆಗಾರರಿಗೆ ಉಪಯುಕ್ತವಾಗುವಂತಹ ಮಾಹಿತಿಯನ್ನು ಎರಡೂ ಬೆಳೆಗಳಲ್ಲಿ ನಿರೂಪಿಸಿದ್ದಾರೆ. ಈ ಪುಸ್ತಕದ ಮೊದಲ ಮುದ್ರಣದ ಪ್ರತಿಗಳು ಮುದ್ರಣವಾದ ವರ್ಷವೇ ತೀರಿಹೋಗಿದ್ದು ಅತಿ ಶೀಘ್ರದಲ್ಲಿ ಈ ದ್ವಿತೀಯ ಮುದ್ರಣವನ್ನು ಹೊರತರಲಾಗುತ್ತಿದೆ. ಈ ದ್ವಿತೀಯ ಮುದ್ರಣವೂ ಸಹ ಹಿಂದಿನಂತೆ ರೈತರು, ತೋಟದ ಬೆಳೆಗಾರರು ಮತ್ತು ವಿಸ್ತರಣಾ ಕಾರ್ಯಕರ್ತರಿಗೆ ಹೆಚ್ಚಿನ ಉಪಯುಕ್ತ ಮಾಹಿತಿಗಳನ್ನು ಒದಗಿಸುವುದೆಂದು ಆಶಿಸಲಾಗಿದೆ.

ಡಾ ಬಿ. ಎಸ್. ಸಿದ್ಧರಾಮಯ್ಯ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಹಾಗೂ
ಕನ್ನಡ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ
ಕನ್ನಡ ಅಧ್ಯಯನ ವಿಭಾಗ
ಕೃಷಿ ವಿಶ್ವವಿದ್ಯಾನಿಲಯ
ಬೆಂಗಳೂರು-೫೬೦ ೦೨೪