ಸಬ್ಬಸಿಗೆ ಅಥವಾ ಸಬ್ಬಕ್ಷಿ ವಿಶಿಷ್ಟ ಸೊಪ್ಪು ತರಕಾರಿಯಾಗಿದೆ. ಅದರ ಆಕರ್ಷಕ ಪರಿಮಳ ವಿಶೇಷವಾದದ್ದು. ಅತಿ ಶೀಘ್ರದಲ್ಲಿ ಕಿತ್ತು ಬಳಸಬಹುದು. ಇದರ ಬಳಕೆ ದಕ್ಷಿಣ ಭಾರತದಲ್ಲಿ ಹೆಚ್ಚು.

ಪೌಷ್ಟಿಕ ಗುಣಗಳು: ಸಬ್ಬಸಿಗೆ ಸೊಪ್ಪಿನಲ್ಲಿ ಶರೀರದ ಬೆಳವಣಿಗೆಗೆ ಬೇಕಾದ ಶರ್ಕರಪಿಷ್ಟ, ಪ್ರೊಟೀನ್, ಖನಿಜ ವಸ್ತುಗಳು ಮುಂತಾಗಿ ಅಧಿಕ ಪ್ರಮಾಣದಲ್ಲಿ ಇರುತ್ತವೆ. ಬೇಯಿಸಿದ ಸೊಪ್ಪು ಸುಲಭವಾಗಿ ಜೀರ್ಣವಾಗುತ್ತದೆ.

೧೦೦ ಗ್ರಾಂ ಪಡವಲಕಾಯಿಯಲ್ಲಿರುವ ವಿವಿಧ ಪೋಷಕಾಂಶಗಳು

ತೇವಾಂಶ ೩.೭ ಗ್ರಾಂ
ನಾರು ೦.೮ ಗ್ರಾಂ
ರಂಜಕ ೮೦ ಮಿ.ಗ್ರಾಂ
ಕಬ್ಬಿಣ ೪೧ ಮಿ.ಗ್ರಾಂ
ನಯಾಸಿನ್ ೦.೬ ಮಿ.ಗ್ರಾಂ  
ಕೊಬ್ಬು ೦.೪ ಗ್ರಾಂ
ನಾರು ೦.೮ ಗ್ರಾಂ  
ಕ್ಯಾಲ್ಸಿಯಂ ೧೫೦ ಮಿ.ಗ್ರಾಂ  
’ಸಿ’ ಜೀವಸತ್ವ ೩೫ ಮಿ.ಗ್ರಾಂ

ಔಷಧೀಯ ಗುಣಗಳು : ಬೇಯಿಸಿದ ಸೊಪ್ಪು ಸೇವನೆಯಿಂದ ಹಸಿವು ಹೆಚ್ಚುತ್ತದೆ. ವಾತಕ್ಕೆ ಒಳ್ಳೆಯದು ಹಾಗೂ ನಿದ್ದೆ ಚೆನ್ನಾಗಿ ಬರುತ್ತದೆ. ಈ ಸೊಪ್ಪಿನಲ್ಲಿ ನಾರಿನ ಅಂಶ ಹೆಚ್ಚಾಗಿದ್ದು ಮಲಬದ್ಧತೆಗೆ ಉಪಯುಕ್ತ. ಇದರ ಸೊಪ್ಪು ಮತ್ತು ಅರಿಶಿನಗಳನ್ನು ಅರೆದು ಗಾಯಗಳ ಮೇಲೆ ಪಟ್ಟು ಹಾಕಿದರೆ ಉಪಶಮನ ಸಿಗುತ್ತದೆ. ಇದರ ಕಾಳುಗಳನ್ನು ಅರೆದು, ಬಿಸಿಮಾಡಿ ನೋವಿರುವ ಭಾಗಗಳಿಗೆ ಹಚ್ಚುವುದರಿಂದ ನೋವು ಕಡಿಮೆಯಾಗಿ ಊತ ಇಳಿಯುತ್ತದೆ. ಅಜೀರ್ಣದ ತೊಂದರೆಗಳಲ್ಲಿ ಕಾಳುಗಳ ಪುಡಿಯನ್ನು ಮಜ್ಜಿಗೆಯೊಂದಿಗೆ ಬೆರೆಸಿ ಕುಡಿಯಲು ನಿರ್ದೇಶಿಸುತ್ತಾರೆ. ಅದರಿಂದ ಭೇದಿ ನಿಲ್ಲುತ್ತದೆ. ಕಾಲುಗಳನ್ನು ಬೇಯಿಸಿ ತಯಾರಿಸಿದ ಕಷಾಯ ಮತ್ತು ಜೇನುತುಪ್ಪಗಳನ್ನು ಬೆರೆಸಿ ಸೇವಿಸಿದರೆ ನೆಗಡಿ ಮತ್ತು ಕೆಮ್ಮು ದೂರವಾಗುತ್ತವೆ ಇದರ ಸೇವನೆ ಸಂಧಿವಾತಕ್ಕೂ ಸಹ ಒಳ್ಳೆಯದೇ. ಇದರ ಕಾಳುಗಳಿಂದ ತೆಗೆದ ಎಣ್ಣೆ ಮತ್ತು ನೀರುಗಳಲ್ಲಿ ಸಹ ಔಷಧೀಯ ಗುಣಗಳಿವೆ.

ಉಗಮ ಮತ್ತು ಹಂಚಿಕೆ : ಇದರ ತವರೂರು ಯೂರೋಪ್. ಈಗ ಜಗತ್ತಿನ ಹಲವಾರು ದೇಶಗಳಲ್ಲಿ ಇದನ್ನು ಬೆಳೆದು ಬಳಸುತ್ತಾರೆ. ದಕ್ಷಿಣ ಭಾರತದ ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಕೇರಳಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ.

ಸಸ್ಯ ವರ್ಣನೆ : ಇದು ಏಪಿಯೇಸೀ ಕುಟುಂಬಕ್ಕೆ ಸೇರಿದ ಏಕವಾರ್ಷಿಕ ಮೂಲಿಕೆ. ಸಸಿಗಳು ಸಣಕಲಾಗಿ ೩೦-೯೦ ಸೆಂ.ಮೀ. ಎತ್ತರವಿರುತ್ತವೆ. ಕಾಂಡಭಾಗ ದುಂಡಗೆ ಹಸುರು ಬಣ್ಣದ್ದಿರುತ್ತದೆ. ಪ್ರತಿಗೆಣ್ಣಿನಲ್ಲಿ ಒಂದರಂತೆ ಎಲೆಗಳಿರುತ್ತವೆ. ಎಲೆಗಳ ತೊಟ್ಟು ಭಾಗ ಅಗಲಗೊಂಡು ಕಾಂಡವನ್ನು ಬಳಸಿರುತ್ತದೆ. ಎಲೆತೊಟ್ಟು ಉದ್ದನಾಗಿರುತ್ತದೆ. ಎಲೆ ಬಲು ಸೂಕ್ಷ್ಮವಾಗಿ ಒಡೆದಿರುತ್ತದೆ. ಎಲೆಗಳ ಬಣ್ಣ ಹಸುರು. ಹೂವು ಛತ್ರಿಯಾಕಾರದ ಗೊಂಚಲುಗಳಲ್ಲಿ ಬಿಡುತ್ತವೆ. ಅವು ಗಾತ್ರದಲ್ಲಿ ಬಲು ಸಣ್ಣವು. ಬೀಜ ಜೀರಿಗೆಯಂತೆ ಸಣ್ಣವು. ಸಸ್ಯಭಾಗಗಳಲ್ಲಿ ಆರುವ ತೈಲವಿದ್ದು ವಿಶಿಷ್ಟ ಕಂಪನ್ನು ಬೀರುತ್ತವೆ. ಬೇರು ಸಮೂಹ ಮಣ್ಣಿನಲ್ಲಿ ಆಳಕ್ಕೆ ಇಳಿದಿದ್ದು ಕವಲುಗಳಿಂದ ಕೂಡಿರುತ್ತದೆ.

ಹವಾಗುಣ : ಇದನ್ನು ವರ್ಷದ ಯಾವ ಕಾಲದಲ್ಲಾದರೂ ಬೆಳೆಯಬಹುದು. ಆದರೆ ಮಳೆಗಾಲದ ಕಡೆಯಭಾಗ ಮತ್ತು ಚಳಿಗಾಲಗಳಾದರೆ ಉತ್ತಮ. ತಂಪು ಹವೆಯಲ್ಲಿ ಬೆಳೆದಾಗ ಸೊಪ್ಪಿನ ಕಂಪು ಮತ್ತು ಗುಣಮಟ್ಟಗಳು ಉತ್ತಮವಿರುತ್ತವೆ.

ಭೂಗುಣ : ನೀರು ಬಸಿಯುವ ಮರಳು ಮಿಶ್ರಿತ ಕೆಂಪು  ಗೋಡು, ಸಾಧಾರಣ ಕಪ್ಪು ಮಣ್ಣು, ಮರಳು ಗೋಡು ಮುಂತಾದುವುಗಳಲ್ಲಿ ಬೆಳೆಯಬಹುದು.

ಭೂಮಿ ಸಿದ್ಧತೆ ಮತ್ತು ಬಿತ್ತನೆ : ಅನುಕೂಲಕ್ಕೆ ತಕ್ಕ ಉದ್ದ ಮತ್ತು ೦.೫ ರಿಂದ ೧.೦ ಮೀಟರ್ ಅಗಲ ಇರುವಂತೆ ಸಮತಟ್ಟಾದ ಮಡಿಗಳನ್ನು ತಯಾರಿಸಿ ಪೂರ್ಣಪ್ರಮಾಣದ ತಿಪ್ಪೆಗೊಬ್ಬರವನ್ನು ಸಮನಾಗಿ ಹರಡಿ ಮಣ್ಣಿನಲ್ಲಿ ಬೆರೆಸಬೇಕು. ಸಬ್ಬಸಿಗೆ ಬೀಜ ಬಲು ಸಣ್ಣವು. ಅವು ಸಮನಾಗಿ ಬಿತ್ತನೆಯಾಗಲು ಪುಡಿ ಮಾಡಿದ ತಿಪ್ಪೆಗೊಬ್ಬರ ಅಥವಾ ಮರಳಿನೊಂದಿಗೆ ಬೆರೆಸಿ ಬಿತ್ತಬೇಕು. ಪ್ರತಿಸಾರಿ ಬಿತ್ತನೆಗೆ ಹೊಸಬೀಜವನ್ನು ಬಳಸುವುದು ಒಳ್ಳೆಯದು. ಬಿತ್ತುವ ಆಳ ಹೆಚ್ಚೆಂದರೆ ಅರ್ಧ ಸೆಂ.ಮೀ. ಅಷ್ಟೆ. ಮಡಿಗಳಲ್ಲಿ ತೆಳ್ಳನೆಯ ಗೀರು ಕಾಲುವೆಗಳನ್ನು ಮಾಡಿ ಬೀಜ ಬಿತ್ತುವುದು ಒಳ್ಳೆಯ ಪದ್ಧತಿ. ಬಿತ್ತಿದ ನಂತರ ಅವುಗಳ ಮೇಲೆ ಪುಡಿ ಗೊಬ್ಬರ ಉದುರಿಸಿ, ನೀರು ಹನಿಸುವ ಡಬ್ಬಿಯಿಂದ ನೀರು ಕೊಡಬೇಕು. ಹೆಕ್ಟೇರಿಗೆ ೫ ರಿಂದ ೧೦ ಕಿ.ಗ್ರಾಂ ಬೀಜ ಬೇಕಾಗುತ್ತವೆ. ಬಿತ್ತನೆ ಮಾಡಿದ ೪-೫ ದಿನಗಳಲ್ಲಿ ಅವು ಮೊಳೆಯುತ್ತವೆ. ನಂತರದ ದಿನಗಳಲ್ಲಿ ತೆಳ್ಳಗೆ ನೀರು ಹಾಯಿಸಬಹುದು.

ಗೊಬ್ಬರ : ಹೆಕ್ಟೇರಿಗೆ ೧೫-೨೦ ಟನ್ ತಿಪ್ಪೆಗೊಬ್ಬರ ಕೊಡಬೇಕಾಗುತ್ತದೆ. ಈ ಬೆಳೆಗೆ ರಾಸಾಯನಿಕ ಗೊಬ್ಬರಗಳನ್ನು ಕೊಡುವ ರೂಢಿ ಇಲ್ಲ. ಸ್ವಲ್ಪ ಭಾಗ ಸಾರಜನಕವನ್ನು ಮೇಲುಗೊಬ್ಬರವಾಗಿ ಕೊಟ್ಟರೆ ಸೊಪ್ಪು ಬೇಗ ಬೆಳೆಯುತ್ತದೆ.

ಕೊಯ್ಲು ಮತ್ತು ಇಳುವರಿ : ಬಿತ್ತನೆಯಾದ ಸುಮಾರು ಒಂದು ತಿಂಗಳಲ್ಲಿ ಸೊಪ್ಪನ್ನು ಕಿತ್ತು ಬಳಸಬಹುದು. ಬೆಳೆ ಚೆನ್ನಾಗಿ ಆದಲ್ಲಿ ಹೆಕ್ಟೇರಿಗೆ ೫ ರಿಂದ ೬ ಟನ್ ಸೊಪ್ಪು ಸಿಗುತ್ತದೆ.

ಕೀಟ ಮತ್ತು ರೋಗಗಳು : ಈ ಬೆಳೆಗೆ ಹಾನಿಯನ್ನುಂಟು ಮಾಡುವ ಕೀಟ ಮತ್ತು ರೋಗಗಳು ಕಡಿಮೆ.

ಬೀಜೋತ್ಪಾದನೆ : ಇದು ಪರಕೀಯ ಹಾಗೂ ಸ್ವಪರಾಗಸ್ಪರ್ಶ ಎರಡೂ ಇರುವ ಬೆಳೆ. ಬೆಳೆ ಚೆನ್ನಾಗಿ ಆದರಲ್ಲಿ ಹೆಕ್ಟೇರಿಗೆ ೫ ರಿಂದ ೬ ಕ್ವಿಂಟಾಲ್ ಬೀಜ ಸಿಗುತ್ತದೆ.

* * *