ಎಲವೊ ಗೋಪಕುಮಾರ ಕಂಸನ
ಲಲನೆಯರ ವೈಧವ್ಯ ದುಃಖಾ
ನಲನ ನಂದಿಸಲಾಯ್ತು ನಿನ್ನಯ ರುಧಿರ ಜಲಧಾರೆ
ಅಳಿದ ಕಂಸನ ಕಾಲಯವನನ
ಕಳನ ಹರಿಬವ ಗೆಲಿದು ದೈತ್ಯಾ
ವಳಿಯ ಬಂಧುತ್ವವನು ಬಳಸುವೆನೆಂದನಾ ಮಗಧ ೮೨

ಗೋವಳರು ನಿರ್ಲಜ್ಜರದರೊಳು
ನೀವು ಗರುವರು ರಾಜಪುತ್ರರು
ಸಾವ ಬಯಸುವನೊಡನೆ ಬಂದಿರಿ ತಪ್ಪ ಮಾಡಿದಿರಿ
ನೀವು ಮಕ್ಕಳು ನಿಮ್ಮ ಹಿರಿಯರ
ಠಾವಿನಲಿ ಬುಧರಿಲ್ಲಲಾ ನಿಮ
ಗಾವ ಹದನಹುದೆನುತ ನುಡಿದನು ಭೀಮ ಫಲುಗುಣರ ೮೩

ಸಾಕಿದೇತಕೆ ಹೊಳ್ಳು ನುಡಿಗೆ ವಿ
ವೇಕಿಗಳು ಮೆಚ್ಚುವರೆ ಯುದ್ಧ
ವ್ಯಾಕರಣ ಪಾಂಡಿತ್ಯವುಳ್ಳರೆ ತೋರಿಸುವುದೆಮಗೆ
ಈ ಕಮಲನೇತ್ರಂಗೆ ಫಡ ನೀ
ನಾಕೆವಾಳನೆ ಶಿವಶಿವಾ ಜಗ
ದೇಕದೈವದ ಕೂಡೆ ದಂಡಿಯೆಯೆಂದನಾ ಭೀಮ ೮೪

ದಿಟ್ಟರಹಿರೋ ಸಾವನರಿಯದೆ
ಕೆಟ್ಟಿರಕಟಾ ಕಾಳುಗೋಪನ
ಗೊಟ್ಟಿಯಾಟಕೆ ಗುರಿಗಳಾದಿರಿ ನಿಮ್ಮ ಗುರುಸಹಿತ
ಚಟ್ಟಳೆಯ ಚತುರಾಸ್ಯನಿವರೊಡ
ಹುಟ್ಟಿದರ ಸಮಜೋಳಿ ಗಡ ಜಗ
ಜಟ್ಟಿಗಳು ತಾವಿವರೆನುತ ತಲೆದೂಗಿದನು ಮಗಧ ೮೫

ಬೈದು ಫಲವೇನೆಮಗೆ ಮೇಳದ
ಮೈದುನರು ನೀವಲ್ಲಲೇ ದಳ
ವೈದೆ ನೂಕಲಿ ನಿಮ್ಮ ಮೂವರು ಸಹಿತ ನಮ್ಮೊಡನೆ
ಕೈದುವುಂಟೇ ತರಿಸಿಕೊಡಿಸುವೆ
ನೈದಿ ನೀವಾಳಾಗಿ ನಿಮ್ಮೊಡ
ನೈದುವೆನು ಬಲರಾಮನುಳಿದಾನೆಂದನಾ ಮಗಧ ೮೬

ಎಲವೊ ಬಾಹಿರ ಮಗಧ ಹಲಧರ
ನುಳಿಯೆ ಪಾಂಡವನೃಪರು ಪರಿಯಂ
ತಳವು ನಿನಗೊಬ್ಬಂಗೆ ಸೇರುವುದೇ ಮಹಾದೇವ
ಅಳಿವು ತಪ್ಪದು ನುಡಿಯೊಳಲ್ಪವ
ಬಳಸಲೇತಕೆ ವೀರನಹೆ ನ
ಮ್ಮೊಳಗೆ ಮೂವರೊಳೊಬ್ಬನನು ವರಿಸೆಂದನಸುರಾರಿ ೮೭

ಅಕಟ ನಿಮಗೀ ಸಮರವಾವ
ಶ್ಯಕವೆ ನಮಗಖ್ಯಾತಿಯಲ್ಲಿದು
ಸಕಲ ಜನವರಿದಿರೆಯೆನುತ ನೋಡಿದನು ತನ್ನವರ
ಪ್ರಕಟವೈ ನಿಮ್ಮಾಳುತನ ಯದು
ನಿಕರಕಾವಂಜುವೆವು ರಣ ನಾ
ಟಕಪಲಾಯನ ಪಂಡಿತರು ನೀವೆಂದನಾ ಮಗಧ ೮೮

ಪಾರ್ಥ ನೀ ಮಗುವೆಮ್ಮೊಡನೆ ರಣ
ದರ್ಥಿಯಾದರೆ ಭೀಮಸೇನ ಸ
ಮರ್ಥನಹನಾತಂಗೆ ಕೊಟ್ಟೆನು ಕಳನ ಕಾಳಗವ
ವ್ಯರ್ಥವಿದು ತಾ ಹೋಗಲಿನ್ನು ಪ
ರಾರ್ಥ ಕಂಟಕವಾಗಲೇತಕೆ
ತೀರ್ಥವೈಸಲೆ ಶಸ್ತ್ರಧಾರೆಯಿದೆಂದನಾ ಮಗಧ ೮೯

ತರಿಸಿದನು ಚಂದನದ ಸಾದಿನ
ಭರಣಿಗಳ ಕರ್ಪೂರ ವರಕ
ತ್ತುರಿ ಜವಾಜಿಪ್ರಮುಖ ಬಹುವಿಧ ಯಕ್ಷಕರ್ದಮವ
ಹರಿವೃಕೋದರ ಪಾರ್ಥರಿದಿರಲಿ
ಭರಣಿಗಳ ನೂಕಿದನು ಮಾಲ್ಯಾಂ
ಬರ ವಿಲೇಪನದಿಂದಲಂಕರಿಸಿದರು ನಿಜತನುವ ೯೦
ಅಂಕಕಿಬ್ಬರು ಭಟರು ತಿಲಕಾ
ಲಂಕರಣ ಶೋಭೆಯಲಿ ರಣ ನಿ
ಶ್ಶಂಕರನುವಾದರು ಸುಕರ್ಪುರ ವೀಳೆಯಂಗೊಂಡು
ಬಿಂಕದುಬ್ಬಿನ ರೋಮ ಪುಳಕದ
ಮುಂಕುಡಿಯ ಸುಮ್ಮಾನದಂಕೆಯ
ಝಂಕೆಗಳ ಭರ ಭುಲ್ಲವಿಸಿದುದು ಭೀಮ ಮಾಗಧರ ೯೧

ರಣದೊಳಾವುದು ಕೈದು ಹಿರಿಯು
ಬ್ಬಣವೊ ಪರಿಘವೊ ಸುರಗಿಯೋ ಡೊಂ
ಕಣಿಯೊ ಗದೆಯೋ ಭಿಂಡಿವಾಳವೊ ಪರಶು ತೋಮರವೊ
ಕಣೆ ಧನುವೊ ಕಕ್ಕಡೆಯೊ ಮುಷ್ಟಿಯೊ
ಹಣಿದಕಾವುದು ಸದರವದರಲಿ
ಕೆಣಕಿ ನೋಡಾ ತನ್ನನೆಂದನು ಭೀಮ ಮಾಗಧನ ೯೨

ಆಯುಧಂಗಳಲೇನು ನೀ ನಾ
ಗಾಯುತದ ಬಲನೆಂಬರಾ ನುಡಿ
ವಾಯವೋ ಕಲಿಭೀಮ ದಿಟವೋ ನೋಡ ಬೇಹುದಲೆ
ಆಯಿತೇ ಸಮಜೋಳಿ ನಿನಗದು
ಪಾಯವೋ ಚೊಕ್ಕೆಯವೊ ನುಡಿ ಮನ
ದಾಯತವನೆನಗೆನುತ ಹತ್ತಾಹತ್ತಿಗನುವಾದ ೯೩

ಧರಣಿಪತಿ ಕೇಳ್ಮಾಗಧನ ಮಂ
ದಿರದ ರಾಜಾಂಗಣದೊಳವನೀ
ಸುರರು ನೋಟಕರಾದರಿಲ್ಲಿ ಮುರಾರಿ ಫಲುಗುಣರು
ಎರಡು ಬಲ ಮೋಹರಿಸಿ ನಿಂದುದು
ಪುರದ ಹೊರ ಬಾಹೆಯಲಿ ಕೃತ ಸಂ
ಚರಣ ಕಾರ್ತಿಕಶುದ್ಧಪಾಡ್ಯದೊಳಾಹವಾರಂಭ ೯೪

ಸಿಡಿಲು ಬೊಬ್ಬಿಡುವಂತೆ ಹೊಯ್ದರು
ಮುಡುಹುಗಳ ಮಝ ಪೂತು ಮಲ್ಲೆನು
ತಡಿಗಡಿಗೆ ನೂಕಿದರು ಲವಣಿಯ ನೀಡಿ ಸಾರದಲಿ
ತುಡುಕಲೀಯದೆ ತಿರುಗಿದರು ಗಡ
ಬಡಿಸಿ ದಂಡೆಯೊಳೊತ್ತಿದರು ಸಮ
ಚಡಿಸಿ ನಿಂದರು ನೀಲ ನಿಷಧಾಚಲಕೆ ಮಲೆವಂತೆ ೯೫

ಸಿಕ್ಕರೊಬ್ಬರಿಗೊಬ್ಬರುರೆ ಕೈ
ಮಿಕ್ಕು ಹರಿಯರು ಕೊಂಡ ಹೆಜ್ಜೆಯ
ಠಕ್ಕಿನಲಿ ಮೈಗೊಡರು ತಿರಿಮುರಿವುಗಳ ಮಂಡಿಗಳು
ಇಕ್ಕಿದರು ಗಳಹತ್ತದಲಿ ಸಲೆ
ಮಿಕ್ಕು ಸತ್ರಾಣದಲಿ ಮಿಗೆ ಸರಿ
ವೊಕ್ಕು ಹಿಡಿದರು ಬಿನ್ನಣದ ಚೊಕ್ಕೆಯದ ಜೋಡಿಯಲಿ ೯೬

ಬಿಡಿಸಿ ಗಳಹತ್ತವನು ಡೊಕ್ಕರ
ಕೊಡೆಮುರಿವ ಸಕುಟುಂಬ ಡೊಕ್ಕರ
ಕಡಸಿ ಕತ್ತರಿ ಘಟ್ಟಿಸುವ ಗಳಹತ್ತಡೊಕ್ಕರವ
ತಡೆವ ಚೌವಂಗುಲ ದುವಂಗುಲ
ಕೊಡೆಮುರಿವ ಪಟ್ಟಸಕೆ ಚಾಚುವ
ಝಡಿತೆಗೊದಗುವ ಭಟರು ಹೆಣಗಿದರರಸ ಕೇಳೆಂದ ೯೭

ಎಳೆದು ದಣುವಟ್ಟೆಯಲಿ ಬೊಪ್ಪರ
ದೊಳಗೆ ಜಾಳಿಸಿ ಚಿಮ್ಮಿ ಝಡಿತೆಯ
ಸೆಳೆದು ಮುಡುಹಿನಲೌಕಿ ಬಿಗಿದರು ಪಟ್ಟ ಮುಡುಹಿನಲಿ
ಸುಳಿದು ಮರ್ಕಟ ಬಂಧದಲಿ ಕರ
ವಳಯದಲಿ ಕೈದುಡುಕಿ ಶಿರವ
ಟ್ಟಳೆಯ ಚಲ್ಲಣ ಪಟ್ಟಿಯವರೊದಗಿದರು ಪಟುಭಟರು ೯೮

ಅಗಡಿಯಲಿ ಲೋಟಿಸಿ ನಿರಂತರ
ಲಗಡಿಯಲಿ ಲಾಗಿಸಿ ನಿಬಂಧದ
ಬಿಗುಹುಗಳ ಕುಮ್ಮರಿಯ ಕುಹರದ ನಾಗಬಂಧಗಳ
ತೆಗಹುಗಳ ತೊಡಕುಗಳ ತುಳುಕಿನ
ಜಗಳುಗಳ ಜೋಡಣೆಯ ನಿಡು ಸು
ಯ್ಲುಗಳ ಸೌರಂಭದ ಸಗಾಢರು ಹೊಕ್ಕು ಹೆಣಗಿದರು ೯೯

ಧೂಳಿ ಕುಡಿದುದು ಬೆಮರನಾ ಕೆಂ
ಧೂಳಿ ನೆನೆದುದು ಬೆವರಿನಲಿ ತಳ
ಮೇಲು ನಿಮಿಷಕೆ ಮೇಲು ತಳ ಬಿಡುಹುಗಳ ಬಿಗುಹುಗಳ
ಸೂಳು ನಾಸಾಪುಟದ ಪವನನ
ತಾಳಿಗೆಯ ಕರ್ಪುರದ ಕವಳದ
ತೋಳ ತೆಕ್ಕೆಯ ತವಕಿಗರು ಹೆಣಗಿದರು ಪುಟಭಟರು ೧೦೦

ತೀರದಿಬ್ಬರ ಸತ್ವವವನಿಯ
ಸಾರದಿಬ್ಬರ ಬಲುಹುಗಾಣದು
ಪಾರುಖಾಣೆಯವದಟರಿಬ್ಬರ ಭುಜಬಲಾಟೋಪ
ಸಾರವಳಿಯದು ಮುಳಿಸು ದರ್ಪದ
ಧಾರೆ ಮುರಿಯದು ಜಯದ ತೃಷ್ಣೆಯ
ತೋರಹತ್ತರು ಹೆಣಗಿದರು ಕಲಿಭೀಮ ಮಾಗಧರು ೧೦೧

ಪೂತು ಮಝ ಜಗಜಟ್ಟಿ ಧಣು ಧಣು
ವಾತಸುತ ಪರಬಲ ಭಯಂಕರ
ಸೋತನೋ ಪ್ರತಿಮಲ್ಲನೆಂದರು ಕೃಷ್ಣ ಫಲುಗುಣರು
ಭೀತನಾದನು ಭೀಮನಹಿತ ವಿ
ಘಾತಿ ಮಾಗಧರಾಯ ಮಲ್ಲ
ವ್ರಾತ ಕುಲಗಿರಿ ವಜ್ರನೆಂದುದು ಮಗಧ ಪರಿವಾರ ೧೦೨

ಅಲಸಿದರು ಬಿನ್ನಣಕೆ ಬಿಗುಹಿನ
ಕಳಿವುಗಳ ಬೇಸರಿಕೆಯಲಿ ಕಡು
ಲುಳಿ ಮಸಗಿ ಡಾವರಿಸಿ ಮನವನುಪಾಯ ಡಾವರಕೆ
ತೂಲಗಿ ನಿಂದರು ಕರ್ಪುರದ ತನಿ
ಹಳುಕನಣಲೊಳಗಡಸಿ ದಂಡೆಯ
ಬಲಿದು ಬರಸಿಡಿಲೆರಕವೆನೆ ತಾಗಿದರು ಬಳಸಿನಲಿ ೧೦೩

ಬಾಳ ಹೋಯ್ಲೋ ಸಿಡಿಲ ತೊಡರಿನ
ಸೂಳುಗಳೊ ಸಿಡಿದಲೆಯ ಗಿರಿಗಳ
ಬೀಳುಗಳೊ ಬಿರು ಹೊಯ್ಲ ಧಾರೆಯ ಕಿಡಿಯ ತುಂಡುಗಳೊ
ತೋಳ ನೆಗಹಿನ ಮುಷ್ಟಿ ಘಾತದ
ಮೇಲು ಘಾಯದ ಲುಳಿಯ ಘೋಳಾ
ಘೋಳಿಗಳನಾರೆಣಿಸುವರು ಕಲಿಭೀಮ ಮಾಗಧರ ೧೦೪

ಕುಸಿದು ಘಾಯವ ಕಳೆದು ವಕ್ಷದ
ಬೆಸುಗೆ ಬಿಡೆ ಸಿಡಿದೆದ್ದು ಹೊಯ್ಲಿಗೆ
ಮುಸುಡ ತಿರುಹುವ ಮೈಯನೊಡ್ಡಿ ದಡೌಕಿ ಧಟ್ಟಿಸುವ
ಅಸಮಸೆಗೆ ಮೈಯಳುಕದೆರಗುವ
ಹುಸಿವ ಜಾರುವ ಹೊಳೆವ ಹಣುಗುವ
ಬೆಸುವ ಬಿಡಿಸುವ ದಿಷ್ಟಿವಾಳರು ಹೊಕ್ಕು ಹೆಣಗಿದರು ೧೦೫

ಪವನಜನ ರಾವಣನ ಝಾಡಿಯ
ತಿವಿತಗಳು ಚಾಣೂರ ಕೃಷ್ಣರ
ಜವಳಿ ಹೊಯ್ಲಿವರೊಳಗೆ ಜೋಡಿಸವೇನ ಹೇಳುವೆನು
ಶಿವನ ಡಮರುಗದಾಟವೋ ಭೈ
ರವನ ಫಣೆಗಣ್ಣಾಟವೋ ಬಿರು
ದಿವಿಗುಳಿನ ದೆಖ್ಖಾಳ ಮಸಗಿತು ಭೀಮ ಮಾಗಧರ ೧೦೬

ಕುಣಿದವಿಬ್ಬರ ಮುಷ್ಟಿಯಿಬ್ಬರ
ಹಣೆಯಲೆದೆಯಲಿ ಮೋರೆಯಲಿ ಭುಜ
ದಣಸಿನಲಿ ಕಂದದಲಿ ಶಿರದಲಿ ಬದಿಯಲುದರದಲಿ
ಝಣು ವಿರೋಧಿ ವಿಭಾಡ ಝಣು ಝಣು
ಝಣು ಜಗತ್ರಯ ಜಟ್ಟಿ ಝಣು ಝಣು
ಝಣು ಝಣೆಂಬಬ್ಬರಣೆ ಮಸಗಿದುದೆರಡು ಬಾಹೆಯಲಿ ೧೦೭

ಹೊಯ್ಲ ಹೊದರೆದ್ದವು ವಿಘಾತದ
ಕಯ್ಲುಳಿಯ ಕಡುಘಾಯ ಘಾಯಕೆ
ಮೆಯ್ಲವಣೆ ಲಂಬಿಸಿತು ಕಡುಹಿನ ಖತಿಯ ಕೈಮಸಕ
ಹೊಯ್ಲ ಹೊಗೆಗಳ ಹೋರಟೆಯ ವೇ
ಗಾಯ್ಲ ಮುಷ್ಟಾಮುಷ್ಟಿ ಗತಿಯ ದೃ
ಢಾಯ್ಲ ರಪ್ಪಳಿಸಿದರು ಪದ ಘಟ್ಟಣೆಗೆ ನೆಲ ಕುಸಿಯೆ ೧೦೮

ಆವ ಸಾಧನೆಯೋ ವಿಘಾತಿಯ
ಲಾವಣಿಗೆಗದ್ರಿಗಳು ಬಿರಿದವು
ಮೈವಳಿಯಲುಕ್ಕಿದುದು ಕಡುಹಿನ ಖತಿಯ ಕೈಮಸಕ
ತಾವರೆಯ ತೆತ್ತಿಗನ ಕುಮುದದ
ಜೀವಿಗನ ಮಿಗೆ ಮೇಲು ನೋಟದೊ
ಳಾ ವಿಗಡರುಗಳಡಸಿ ತಿವಿದಾಡಿದರು ಬೇಸರದೆ ೧೦೯

ತೆಗೆಯರರ್ಜುನ ಕೃಷ್ಣರೀತನ
ನುಗಿಯರವನವರವನನಿರುಳಿನ
ಹಗಲ ವಿವರಣೆಯಿಲ್ಲ ಮಜ್ಜನ ಭೋಜನಾದಿಗಳ
ಬಗೆಗೆ ತಾರರು ಬಾಹು ಸತ್ವದ
ಹೊಗರು ಹೋಗದು ಮನದ ಖಾತಿಯ
ತೆಗಹು ತಗ್ಗದು ಹೊಕ್ಕು ತಿವಿದಾಡಿದರು ಬೇಸರದೆ ೧೧೦

ಸತ್ವ ಸವೆಯದು ಮನದ ಮುಳಿಸಿನ
ಬಿತ್ತು ಬೀಯದು ಜಯದ ಬಯಕೆಯ
ಸುತ್ತು ಸಡಿಲದು ಬಿಂಕ ಬೀಯದು ನೋಯದಾಟೋಪ
ತೆತ್ತ ಕೈ ಕಂಪಿಸದು ಮುಷ್ಟಿಯ
ಹತ್ತುಗೆಗೆ ಮನ ಝೋಂಪಿಸದು ಮದ
ವೆತ್ತಿ ಮೆಟ್ಟಿದರೊಬ್ಬರೊಬ್ಬರ ಮರ್ಮಘಾತದಲಿ ೧೧೧

ಅರಸ ಕೇಳೈದನೆಯ ದಿವಸದೊ
ಳುರುಭಯಂಕರವಾಯ್ತು ಕದನದ
ಭರದೊಳೆಡೆದೆರಹಿಲ್ಲ ವಿಶ್ರಮವಿಲ್ಲ ನಿಮಿಷದಲಿ
ಎರಡು ದೆಸೆಯಲಿ ವೀಳೆಯದ ಕ
ರ್ಪುರದ ಕವಳದ ಕೈ ಚಳಕದಲಿ
ತೆರಹನಲ್ಲದೆ ಮತ್ತೆ ಕಾಣೆನು ಯುದ್ಧರಂಗದಲಿ ೧೧೨

ಭರದ ಭಾರಣೆಯಲಿ ಚತುರ್ದಶಿ
ಯಿರುಳು ಮಗಧನ ಬಾಹುಸತ್ವದ
ಮುರಿವು ಮೊಳೆತುದು ಶೌರ್ಯ ಸೆಡೆದುದುಭಯದಬಿಗುಹಿನಲಿ
ಉರುಪರಾಕ್ರಮ ತೇಜ ಪಡುವಣ
ತರಣಿಯಾದುದು ಧಟ್ಟಣೆಯ ಧರ
ಧುರಕೆ ನಿರ್ದ್ರವ ಜಿಹ್ವೆಯಾದುದು ನಿಮಿಷ ನಿಮಿಷದಲಿ ೧೧೩

ಬೇಸರಿಕೆ ಬೇರೂರಿದುದು ಜಯ
ದಾಸೆ ಜಾರಿತು ದಿಟ್ಟತನದ ವಿ
ಳಾಸ ಹಾರಿತು ಸುಪ್ರತಾಪದ ಕೆಂಪು ಕರಿದಾಯ್ತು
ಮೀಸಲಳಿದುದು ಮುಳಿಸು ಶೌರ್ಯದ
ವಾಸಿ ಪೈಸರವಾಯ್ತು ರಣದಾ
ವೇಶವಿಳಿದುದು ಮಗಧಪತಿಗಿದನರಿದನಸುರಾರಿ ೧೧೪

ಹೊರಗೆ ಬಲಿದೊಳಡಿಳ್ಳವನು ಪರ
ರರಿಯದಂತಿರೆ ತಿವಿದ ಮಗಧನ
ಪರಿಯನರಿದನು ದನುಜರಿಪು ಪರರಿಂಗಿತಜ್ಜನಲೆ
ಅರಿವುದರಿದೆ ಚರಾಚರಂಗಳ
ಹೊರಗೊಳಗು ತಾನದಿಲ್ಲಿದ
ನರಿಯನೇ ಶಿವಯೆಂದನಾ ಜನಮೇಜಯನು ನಗುತ ೧೧೫

ಎಲೆಲೆ ಪವನಜ ಮಾಗಧೇಶ್ವರ
ನಳವನರಿದಾ ನಿನ್ನ ತಂದೆಯ
ಬಲುಹು ಕೊಂಡೀ ರಿಪುವ ಮುರಿ ನೆನೆ ನೆನೆ ಸಮೀರಣನ
ಬಲುಮುಗಿಲು ಬಿರುಗಾಳಿಯೊಡ್ಡಿ ನೊ
ಳಳುಕದೇ ಫಡ ಬೇಗ ಮಾಡೆನೆ
ಕಲಿವೃಕೋದರನನಿಲರೂಪ ಧ್ಯಾನಪರನಾದ ೧೧೬

ಧ್ಯಾನದಲಿ ತನ್ಮಯತೆಯಾಗಲ
ನೂನ ಸಾಹಸನಾಗಿ ಮಗಧ ಮ
ಹಾ ನರೇಂದ್ರನ ತುಡುಕಿ ಹಿಡಿದನು ಮಲ್ಲಗಂಟಿನಲಿ
ಆ ನಗೆಯನೇ ವಣ್ಣಿಸುವೆನನು
ಮಾನಿಸದೆ ಬೀಸಿದನು ಬವಣೆಯ
ಭಾನುಮಂಡಲದಂತೆ ತಿರುಗಿದನಾ ಜರಾಸಂಧ ೧೧೭

ಬರಸೆಳೆದು ಕರದಿಂದ ಮಾಗಧ
ನೆರಡು ಕಾಲನು ಹಿಡಿದು ಸೀಳಿದು
ಧರೆಗೆ ಬಿಸುಟನು ಸಂಧಿಸಿದವಾ ಸೀಳ್ ತತುಕ್ಷಣಕೆ
ಮರಳಿ ಪವನಜ ಹಿಡಿದು ಸೀಳುವ
ನಿರದೆ ಮಗುಳವು ಸಂಧಿಸುವವೀ
ಪರಿ ಹಲವು ಸೂಳಿನಲಿ ಭೀಮನೊಳೊದಗಿದನು ಮಗಧ೧೧೮

ಮುರಮಥನನದನರಿತು ನಿಜಕರ
ವೆರಡ ಪಲ್ಲಟವಾಗಿ ಸಂಧಿಸ
ಲರಿವಿದಾರಣಭೀಮ ನೋಡುತ ಮರಳಿ ಮಾಗಧನ
ಎರಡು ಸೀಳನು ಮಾಡಿ ಹೊಯ್ದ
ಬ್ಬರಿಸಿ ಪಲ್ಲಟವಾಗಿ ಸೇರಿಸಿ
ತಿರುಗಿಸಿದನೇನೆಂಬೆನುನ್ನತ ಬಾಹು ಸತ್ವದಲಿ ೧೧೯

ತಿರುಹಿದನು ನೂರೆಂಟು ಸೂಳನು
ಧರೆಯೊಳಪ್ಪಳಿಸಿದನು ಬಳಿಕಾ
ಪುರ ಜನದ ಪರಿಜನದ ಹಾಹಾ ರವದ ರಹಿ ಮಸಗೆ
ತೆರಳಿತಲ್ಲಿಯದಲ್ಲಿ ಮಾಗಧ
ನರಸಿಯರು ಬಿಡುಮುಡಿಯ ಜಠರದ
ಕರದ ಬಿರುಹೊಯ್ಲಿನಲಿ ಹೊರವಂಟರು ನಿಜಾಲಯವ ೧೨೦

ಮನೆಮನೆಯ ಕದವಿಕ್ಕಿದವು ನೃಪ
ವನಿತೆಯರು ಹೊರವಂಟರಲ್ಲಿಯ
ಮನುಜರಡಗಿದರದ್ರಿ ಗುಹೆಯಲಿ ಬೇಹ ಬೇಹವರು
ಜನದ ಕೋಲಾಹಲವನಾತನ
ತನುಜರೋಟವನವನ ಸತಿಯರ
ನಿನದವನು ಕಂಡಸುರಹರ ಸಾರಿದನು ಕೈ ನೆಗಹಿ ೧೨೧

ಅಂಜದಿರಿ ಪುರದವರು ವನಿತೆಯ
ರಂಜದಿರಿ ಮಾಗಧನ ಪರಿಜನ
ವಂಜದಿರಿ ಮಂತ್ರಿ ಪ್ರಧಾನ ಪಸಾಯ್ತರಾದವರು
ಅಂಜದಿರಿ ಕರೆಯಿವನ ಮಗನನು
ಭಂಜಿಸುವುದಿಲ್ಲಕಟ ಭೀಮ ಧ
ನಂಜಯರು ಕೊಟ್ಟಭಯವೆಂದನು ನಗುತ ಮುರವೈರಿ ೧೨೨

ಮುರಿದು ಕೆಡಹಿದರರಿಯನಲ್ಲಿಯ
ಸೆರೆಯ ಮನೆಗಳ ಹೊಕ್ಕು ರಾಯರ
ಸೆರೆಗಳನು ಬಿಡಿಸಿದನು ನಾನಾ ದ್ವೀಪಪಾಲಕರ
ಮೆರೆವ ಮಣಿಮಯ ರಶ್ಮಿವಳಯದ
ಮಿರುಪ ರಥವನು ಕೊಂಡು ನಗರದ
ಹೊರವಳಯದಲಿ ಬಂದು ಹೊಕ್ಕರು ತಮ್ಮ ಪಾಳೆಯವ ೧೨೩

ಪೌರಜನ ಕಾಣಿಕೆಗಳಲಿ ಕಂ
ಸಾರಿ ಭೀಮಾರ್ಜುನರ ಕಂಡುದು
ಧಾರುಣೀಪಾಲಕರು ಬಂದರು ಬೆನ್ನಲಿವರುಗಳ
ಘೋರವಡಗಿದುದೆಮ್ಮ ಕಾರಾ
ಗಾರ ಬಂಧವಿಮುಕ್ತವಾಯ್ತುಪ
ಕಾರವೆಮ್ಮಿಂದಾವುದೆಂದರು ನೃಪರು ಕೈಮುಗಿದು ೧೨೪

ನವೆದಿರತಿ ದುಃಖದಲಿ ಬಿಡುಗಡೆ
ಪವನಸುತನಿಂದಾಯ್ತು ನಿಜ ರಾ
ಜ್ಯವನು ಹೊಗುವುದು ಪೌರಜನ ಪರಿಜನವ ಸಲಹುವುದು
ಎವಗೆ ಮಾಳ್ಪುಪಕಾರ ಬೇರಿ
ಲ್ಲವನಿಪನ ವರ ರಾಜಸೂಯಕೆ
ನಿವನಿವಗೆ ಮುಂಕೊಂಡು ಬಹುದೆಂದನು ಮುರಾಂತಕನು ೧೨೫

ನಗರಜನ ಮಂತ್ರಿಪ್ರಧಾನಾ
ದಿಗಳು ಸಹಿತ ಕುಮಾರನೈತಂ
ದಗಧರನ ಪದಕೆರಗಿದನು ಭೀಮಾರ್ಜುನಾಂಘ್ರಿಯಲಿ
ಮಗಗೆ ತಂದೆಯ ಮಾರ್ಗದಲಿ ನಂ
ಬುಗೆಯೊ ಕರುಣಾರಕ್ಷಣದ ನಂ
ಬುಗೆಯೊ ಚಿತ್ತವಿಸೆಂದರಾ ಮಂತ್ರಿಗಳು ಕೈಮುಗಿದು ೧೨೬

ಶವವ ಸಂಸ್ಕರಿಸುವುದು ಮಾಗಧ
ನವನಿಯಲಿ ಸಹದೇವಗಭಿಷೇ
ಕವನು ಮಾಡಿಸಿದಲ್ಲದೆತ್ತಲು ಮುರಿವುದಿಲ್ಲೆಂದು
ಅವರಿಗಭಯವನಿತ್ತು ಪರಿವಾ
ರವನು ಕಳುಹಿದರಿತ್ತಲಾತನ
ಯುವತಿಯರು ಬೇಡಿದರು ವಹ್ನಿಯ ಪಡೆದು ಮರಳಿದರು೧೨೭

ಅವನ ಸಂಸ್ಕಾರದಲಿ ನಾರೀ
ನಿವಹ ಸಹಗತವಾಯ್ತು ವೈದಿಕ
ವಿವಿಧ ವಿಧಿಯಲಿ ಮಾಡಿದರು ಶೇಷಕ್ರಿಯಾದಿಗಳ
ಅವನ ಮಗ ಸಹದೇವನಾತಂ
ಗವನಿಯಲಿ ಪಟ್ಟಾಭಿಷೇಕೋ
ತ್ಸವವ ಮಾಡಿಸಿ ಕೊಟ್ಟನಭಯವನಾ ಪರಿಗ್ರಹಕೆ ೧೨೮

ತೇರುಗಳ ತೇಜಿಗಳನಾ ಭಂ
ಡಾರವನು ಗಜಘಟೆ ಸಹಿತ ವಿ
ಸ್ತಾರ ವಿಭವವನೊಪ್ಪುಗೊಂಡರು ಮಗಧ ನಂದನನ
ಧಾರುಣಿಯನವಗಿತ್ತು ಸಕಳ ಮ
ಹೀರಮಣರನು ಕಳುಹಿ ಬಂದನು
ವೀರನಾರಾಯಣನು ಶಕ್ರಪ್ರಸ್ಥಪುರವರಕೆ ೧೨೯