ಎರಡನೆಯ ಸಂಧಿ

ಸೂ. ಬಲಿಮಥನ ಫಲುಗುಣರು ಸಹಿತ
ಗ್ಗಳೆಯನೇಕಾಂಗದಲಿ ರಣದಲಿ
ಕಲಿ ಜರಾಸಂಧನನ ಸೀಳಿದು ಬಿಸುಟನಾ ಭೀಮ

ಕೇಳು ಜನಮೇಜಯ ಧರಿತ್ರೀ
ಪಾಲ ಮಂತ್ರಾಳೋಚನೆಗೆ ಭೂ
ಪಾಲ ಕರೆಸಿದನನುಜರನು ಧೌಮ್ಯಾದಿ ಮಂತ್ರಿಗಳ
ಮೇಳವದ ತನಿವೆಳಗುಗಳ ಮಣಿ
ಮೌಳಿ ಮಂಡಿತರುಪ್ಪರದ ಪಡಿ
ಸೂಳು ಪಾಯವಧಾರಿನಲಿ ಹೊಕ್ಕರು ಸಭಾ ಸ್ಥಳವ ೧

ದ್ರುಪದ ಧೈಷ್ಟದ್ಯುಮ್ನ ಮತ್ಸ್ಯಾ
ಧಿಪತಿ ಕೇಕಯ ಪಾಂಡವಾತ್ಮಜ
ರು ಪತಿಕಾರ‍್ಯ ವಿಚಾರನಿಷ್ಠರು ಬಂದರೋಲಗಕೆ
ನೃಪತಿ ಹದನೇನಮರ ಮುನಿಪರ
ನುಪಚರಿತ ಮಂತ್ರಾರ್ಥ ಸಿದ್ಧಿಗೆ
ರಪಣ ನಮಗುಂಟೀಗ ಬೆಸಸೆಂದರು ಯುಧಿಷ್ಠಿರಗೆ ೨

ಧರೆ ನಮಗೆ ವಶವರ್ತಿ ಖಂಡೆಯ
ಸಿರಿ ನಮಗೆ ಮೈವಳಿ ಯುಧಿಷ್ಠಿರ
ನರಸುತನ ನಳ ನಹುಷ ನೃಗ ಭರತಾದಿ ಭೂಮಿಪರ
ಮರೆಸಿತೆಂಬುದು ಲೋಕವೀ ನಿ
ಬ್ಬರದ ಹೆಸರೆಮಗಿಂದು ಬೊಪ್ಪನ
ಸಿರಿಯನೇವಣ್ಣಿಸುವೆನೆಂದನು ಸುಯ್ದು ಯಮಸೂನು ೩

ಅಲ್ಲಿ ಸುರರಲಿ ಸುಪ್ರತಿಷ್ಠಿತ
ನಲ್ಲಗಡ ಪಾಂಡು ಕ್ಷಿತೀಶ್ವರ
ನಿಲ್ಲಿ ವೈಭವಕೇನು ಫಲ ನಾವವರ ಸದ್ಗತಿಗೆ
ಇಲ್ಲಿ ರಚಿಸಿದ ರಾಜಸೂಯದಿ
ನೆಲ್ಲವಹುದಯ್ಯಂಗೆ ಮಖವಿದು
ದುರ್ಲಭವು ಕೈಕೊಂಡೆವಾವುದು ಮಂತ್ರವಿದಕೆಂದ ೪

ಆಗಲಿದಕೇನರಸ ದೀಕ್ಷಿತ
ನಾಗು ನಿರುಪಮ ರಾಜಸೂಯಕೆ
ಭಾಗ ಧನವನು ಭೂಮಿಪರ ಸದೆದೆಳೆದು ತಹೆವೆಂದು
ಆ ಗರುವರುಬ್ಬೇಳೆ ತಪ್ಪೇ
ನಾಗಲೀ ಗೋವಿಂದ ಮತದಲಿ
ತೂಗಿ ನೋಡುವೆವಿದರ ತೂಕವನೆಂದನಾ ಭೂಪ ೫

ಕಳುಹಿದನು ಸಾರಥಿಯನಾ ರಥ
ಕೆಲವು ದಿವಸಕೆ ಕೃಷ್ಣಭವನ
ಸ್ಥಳದ ಹೊರ ಬಾಹೆಯಲಿ ಚಾಚಿತು ಚಪಳ ಗಮನದಲಿ
ಒಳಗೆ ಬಂದನು ಪಾವುಡವ ಮುಂ
ದಿಳುಹಿದನು ಕೃಷ್ಣಂಗೆ ಪಾಂಡವ
ತಿಲಕನಟ್ಟಿದ ಹದನ ಬಿನ್ನಹ ಮಾಡಿದನು ಬಳಿಕ ೬

ತಿಳಿದನಲ್ಲಿಯ ರಾಜಕಾರ್ಯದ
ನೆಲೆಯನಕ್ರೂರಾದಿ ಸಚಿವರ
ತಿಳುಹಿದನು ಶಿಶುಪಾಲ ಕಂಸನ ಮಾವನಿಂತಿವರ
ಕೊಲುವಡಿದು ಹದ ನಮ್ಮ ಭಾವನ
ನಿಳಯದುತ್ಸಹ ಸೌಮನಸ್ಯವ
ಬಳಸುವರೆ ಹೊತ್ತಿದು ಮನೋರಥ ಸಿದ್ಧಿ ನಮಗೆಂದ ೭

ಎಂದು ವಸುದೇವಾದಿ ಯಾದವ
ವೃಂದವನು ಬಲಭದ್ರರಾಮನ
ಹಿಂದಿರಿಸಿ ಬಳಿಕಿಂದ್ರಸೇನನ ಕೂಡೆ ವೊಲವಿನಲಿ
ಬಂದನಿಂದ್ರಪ್ರಸ್ಥ ಪಟ್ಟಣ
ಕಂದು ವೊಸಗೆಯ ಗುಡಿಯ ತೋರಣ
ದಿಂದ ಕನ್ನಡಿ ಕಳಶದಲಿ ಕೊಂಡಾಡಿದರು ಹರಿಯ ೮

ಪುರಕೆ ಬಿಜಯಂಗೈಸಿ ತಂದರು
ಹರಿಯನರಮನೆಗನಿಬರಂತಃ
ಪುರದ ಕಾಣಿಕೆಗೊಂಡು ಬಾಂಧವ ಜನವನುಚಿತದಲಿ
ಹರಸಿ ಮಧುರ ಪ್ರೀತಿಯಿಂದಾ
ದರಿಸಿ ಮಂತ್ರಾಳೋಚನೆಯ ಮಂ
ದಿರದೊಳೇಕಾಂತದಲಿ ಭೂಪತಿಗೆಂದನಸುರಾರಿ ೯

ಏನು ಕರೆಸಿದಿರೈ ಪ್ರಯೋಜನ
ವೇನು ನಿಮ್ಮುತ್ಸಾಹ ಶಕ್ತಿಯೊ
ಳೇನು ದುರ್ಘಟವೇನು ಶಂಕಿತವೇನು ಸಂಸ್ಖಲಿತ
ದಾನವರ ಕೌರವರ ವೈರದೊ
ಳೇನು ವಿಗ್ರಹವಿಲ್ಲಲೇ ಹದ
ನೇನೆನಲು ಕೃಷ್ಣಂಗೆ ಬಿನ್ನಹ ಮಾಡಿದನು ನೃಪತಿ ೧೦

ದನುಜರಲಿ ಕುರುಸೇನೆಯಲಿ ಭಯ
ವೆನಗೆ ಭಾರಿಯೆ ನಿಮ್ಮ ಘನ ಪದ
ವನಜವಿದು ಸೀಸಕವಲೇ ತನ್ನುತ್ತಮಾಂಗದಲಿ
ಮುನಿಯ ಹೇಳಿಕೆ ಬೊಪ್ಪಗಮರೇಂ
ದ್ರನಲಿ ಸಮರಸವಿಲ್ಲ ಗಡ ನ
ಮ್ಮಿನಿಬರಲಿ ಸಾಮರ್ಥ್ಯವಿದ್ದುದಕೇನು ಫಲವೆಂದ ೧೧

ಪಿತನ ಪರಮಪ್ರೀತಿಗುನ್ನತ
ಗತಿಗೆ ನಿರ್ಮಳ ರಾಜಸೂಯ
ಕ್ರತುವೆ ಸಾಧನವೆಂದು ಮುನಿಯುಪದೇಶಿಸಿದ ತನಗೆ
ಕ್ರತು ಮಹಾಕ್ರತು ಸಕಲಧರಣೀ
ಪತಿಗಳರ್ಥವ ಗುಣದಲೀಯರು
ವ್ರತವೆನಗೆ ಸಂಕಲ್ಪವಾಯ್ತಿದಕೇನು ಹದನೆಂದ ೧೨

ತಿರುಗಿದರೆ ಸಂಕಲ್ಪ ಹಾನಿಯ
ಪರಮ ಪಾತಕವಿದು ಮಹಾ ನಿ
ಷ್ಠುರದ ಮಖವಿನ್ನಮರ ಮುನಿಪತಿ ದೇವಲೋಕದಲಿ
ಹರಹುವನು ಪರಿಹಾಸ್ಯಮಯ ಸಾ
ಗರವ ದಾಟಿಸು ಜೀಯ ಭವ ಸಾ
ಗರದಿನಿದು ಮಿಗಿಲೇ ಮುರಾಂತಕಯೆಂದನಾ ಭೂಪ ೧೩

ನಕ್ಕನಸುರವಿರೋಧಿ ಮುನಿ ಹಾ
ಯಿಕ್ಕಿದನಲಾ ಬಲೆಯನಕಟಾ
ಸಿಕ್ಕಿದಿರಲಾ ಸ್ವಾಮಿ ದ್ರೋಹರು ಸದರವೇ ನೃಪರು
ಅಕ್ಕಜರ ಮಖವಿದರ ಚೂಣಿಗೆ
ಚುಕ್ಕಿಯಾಯಿತು ಮನ ಮಹೀಶನ
ಮಕ್ಕಳಾಟಿಕೆಯಾಯ್ತೆನುತ ತೂಗಿದನು ಸಿರಿಮುಡಿಯ ೧೪

ಕೆದರಿ ಸಪ್ತದ್ವೀಪ ಪತಿಗಳ
ಸದೆದು ರಚಿಸುವ ರಾಜಸೂಯದ
ಹದನನಂಗೈಸುವನದಾರೀ ವರ್ತಮಾನದಲಿ
ಸುದತಿಯರ ಸೂಳೆಯರ ಮುಂದು
ಬ್ಬಿದೆಯಲಾ ನಾರದನ ಘಲ್ಲಣೆ
ಗಿದು ಸುದುರ್ಘಟವಿಂದು ಬಿದ್ದ ವಿಘಾತಿ ಬಲುಹೆಂದ ೧೫

ಮೊದಲಲೇ ನಿಮ್ಮವರು ನಿಮ್ಮ
ಭ್ಯುದಯವನು ಸೇರುವರೆ ಕೌರವ
ರದರೊಳಗ್ಗದ ಕರ್ಣ ಶಕುನಿ ಜಯದ್ರಥಾದಿಗಳು
ಕುದುಕುಳಿಗಳೀಚೆಯಲಿ ಕಂಸನ
ಮದಮುಖನ ಪರಿವಾರವಿದೆ ದೂ
ರದಲಿ ಮಗಧನ ಹೊರೆಯಲದನೇ ಬಣ್ಣಿಸುವೆನೆಂದ ೧೬

ಕಾಲ ಯವನಾ ದಂತವಕ್ರ ನೃ
ಪಾಲರಲಿ ದುರುದುಂಬಿಯೈ ಶಿಶು
ಪಾಲ ಪೌಂಡ್ರಕರೆಂಬರಿಗೆ ಸಮದಂಡಿಯೆಮ್ಮೊಡನೆ
ಖೂಳರೀರ್ವರು ಹಂಸ ಡಿಬಿಕರು
ಸಾಲುವನ ಮುರ ನರಕರಾಳನ
ಮೇಳವವನೇನೆಂಬೆನೈ ಭೂಪಾಲ ಕೇಳೆಂದ ೧೭

ಕೆಲವರಿದರೊಳು ನಮ್ಮ ಕೈಯಲಿ
ಕೊಲೆಗೆ ಭಂಗಕೆ ಬಂದು ಬಿಟ್ಟರು
ಕೆಲಕೆ ಸರಿವವನಲ್ಲ ಮಲೆವರ ಮಾರಿ ಮಾಗಧನು
ಬಳಿಕೆಮಗೆ ಬಲವದ್ವಿರೋಧದ
ತೊಳಸು ಬಿದ್ದುದು ತೋಟಿಗಾರದೆ
ಜಲಧಿ ಮಧ್ಯದಲೂರ ಕಟ್ಟಿದೆವರಸ ಕೇಳೆಂದ ೧೮

ಮಾವದೇವನ ಮುರಿದಡಾತನ
ದೇವಿಯರು ಬಳಿಕೆಮ್ಮ ದೂರಿದ
ರಾ ವಿಗಡ ಮಗಧಂಗೆ ಮಧುರೆಯ ಮೇಲೆ ದಂಡಾಯ್ತು
ನಾವು ನಾನಾ ದುರ್ಗದಲಿ ಸಂ
ಭಾವಿಸಿದೆವಾತನನು ನಿಮ್ಮೊಡ
ನಾವು ಕೂಡಿದಡಾತ ಮುನಿಯನೆ ಭೂಪ ಕೇಳೆಂದ ೧೯

ಅರಸ ಕೇಳ್ನೂರೊಂದು ವಂಶದ
ಧರಣಿಪರು ಮಾಗಧನ ಮನೆಯಲಿ
ಸೆರೆಯಲೈದರೆ ಬಿಡಿಸಬೇಕು ನಿರಂತರಾಯದಲಿ
ದುರುಳನವ ಭಗದತ್ತ ಬಾಹ್ಲಿಕ
ನರಕ ವೃದ್ಧಕ್ಷತ್ರ ಮೊದಲಾ
ದರಸುಗಳು ಬಲಗರ್ವಿತರಸಂಖ್ಯಾತರಹರೆಂದ ೨೦

ಅವರಿರಲಿ ಮತ್ತಿತ್ತಲುತ್ತರ
ದವನಿಪರು ಧಕ್ಕೆಡರು ಧರಣೀ
ಧವರೊಳಧಿಕ ದೊಠಾರರಗ್ಗದ ಚೀನ ಬೋಟಕರು
ರವಿಯುದಯಗಿರಿ ಶಿಖರದಲಿ ಪಾ
ರ್ಥಿವರು ದಕ್ಷಿಣ ಚೋಳ ಪಾಂಡ್ಯ
ಪ್ರವರರದೆ ವಿಕ್ರಮ ಹಿರಣ್ಯ ಮದಾಂಧರವರೆಂದ ೨೧

ಔಕಿ ಚತುರಂಗದ ನೃಪಾಲರ
ನೂಕಬಹುದಿದಕೇನು ಯಾಗ
ವ್ಯಾಕರಣಕಿವರಿಬ್ಬರೇ ದೂಷಕರು ಧರಣಿಯಲಿ
ಈ ಕುಠಾರರು ಕದನ ಮುಖದವಿ
ವೇಕಿಗಳು ಶಿಶುಪಾಲ ಮಾಗಧ
ರಾಕೆವಾಳರು ವೈರಿರಾಯರೊಳರಸ ಕೇಳೆಂದ ೨೨

ಅಧಿಕರಿವರಿಬ್ಬರೊಳಗಾ ಮಾ
ಗಧನೆ ಬಲುಗೈ ರಾಜಸೂಯಕೆ
ಸದರವನು ನಾ ಕಾಣೆನಾತನ ಖಂಡೆಯದ ಮೊನೆಗೆ
ನಿಧನವಲ್ಲದೆ ಧನವ ನೆರಹುವ
ಹದನ ನೀನೇ ಕಾಂಬೆಯಾತನ
ವಧೆಯು ಹರಿಯದು ನಮ್ಮ ಕೈಯಲಿ ರಾಯ ಕೇಳೆಂದ ೨೩

ಕಂಸನನು ಕೆಡಹಿದೆವು ಮುರಿದೆವು
ಹಂಸ ಡಿಬಿಕರ ಪೌಂಡ್ರಕರ ನಿ
ರ್ವಂಶವೆನೆ ಸವರಿದೆವು ಮುರ ನರಕಾದಿ ದಾನವರ
ಹಿಂಸೆಯಿವನಲಿ ಹರಿಯದಿವ ನಿ
ಸ್ಸಂಶಯನು ವಿಜಯದಲಿ ಯಾಗ
ಧ್ವಂಸಕನ ನೆರೆ ಮುರಿವುಪಾಯವ ಕಾಣೆ ನಾನೆಂದ ೨೪

ಈಸು ಘನವೇ ಕೃಷ್ಣ ಯಾಗ
ದ್ವೇಷಿಗಳು ಪಿರಿದಾಗಲೆವಗಿ
ನ್ನೈಸಲೇ ವರ ರಾಜಸೂಯಾಧ್ವರಕೆ ಸಂನ್ಯಾಸ
ಈಸು ದೈತ್ಯರು ನಿನ್ನ ಕೈಯಲಿ
ಘಾಸಿಯಾದರು ಮಗಧನೊಬ್ಬನು
ಮೀಸಲಳಿಯನು ಗಡ ಮಹಾದೇವೆಂದನಾ ಭೂಪ ೨೫

ಅಹಹ ಯಾಗವ್ರತಕೆ ಭಂಗವ
ತಹುದೆ ಜೀಯ ಮುರಾರಿ ಕೃಪೆ ಸ
ನ್ನಿಹಿತವಾಗಲಿ ಸಾಕು ನೋಡಾ ತನ್ನ ಕೈಗುಣವ
ಬಹಳ ಬಲನೇ ಮಾಗಧನು ನಿನ
ಗಹಿತನೇ ತಾ ವೀಳೆಯವ ಸುರ
ಮಹಿಳೆಯರ ತೋಳಿನಲಿ ತೋರುವೆನೆಂದನಾ ಭೀಮ ೨೬

ಮುರುಕಿಸುವ ಮನ್ನೆಯರ ನಾಳವ
ಮುರಿವೆನಖಿಳ ದ್ವೀಪಪತಿಗಳ
ತೆರಿಸುವೆನು ಹೊರಿಸುವೆನು ನೆತ್ತಿಯಲವರ ವಸ್ತುಗಳ
ಕರುಬನೇ ಮಾಗಧನು ರಣದಲಿ
ತರಿವೆನಾತನ ನಿಮ್ಮ ಯಾಗದ
ಹೊರಿಗೆ ತನ್ನದು ಕರೆಸು ಋಷಿಗಳನೆಂದನಾ ಭೀಮ ೨೭

ಅಹುದಲೇ ಬಳಿಕೇನು ಯಾಗೋ
ಪಹರಣಕೆ ಸಂನ್ಯಾಸ ಗಡ ವಿ
ಗ್ರಹದಲಧಿಕರು ಗಡ ಜರಾಸಂಧಾದಿ ನಾಯಕರು
ಮಹಿಯ ಮನ್ನೆಯರಧ್ವರವ ನಿ
ರ್ವಹಿಸಲೀಯರು ಗಡ ಶಿವಾ ಶಿವ
ರಹವ ಮಾಡಿದನರಸನೆಂದನು ನಗುತ ಕಲಿಪಾರ್ಥ ೨೮

ಏಕೆ ಗಾಂಡಿವವಿದು ಶರಾವಳಿ
ಯೇಕೆ ಇಂದ್ರಾಗ್ನೇಯ ವಾರುಣ
ವೇಕೆ ರಥವಿದು ರಾಮಭೃತ್ಯಧ್ವಜ ವಿಳಾಸವಿದು
ಲೋಕರಕ್ಷಾ ಶಿಕ್ಷೆಗಿಂತಿವು
ಸಾಕು ಹುಲುಮಂಡಳಿಕರಿವದಿರ
ನೂಕಲರಿಯದೆ ಜೀಯ ಜಂಜಡವೇಕೆ ಬೆಸಸೆಂದ ೨೯

ನೆರಹು ಹಾರುವರನು ದಿಗಂತಕೆ
ಹರಹು ನಮ್ಮನು ಬಂಧುವರ್ಗವ
ಕರೆಸು ರಚಿಸಲಿ ಕಾಣಬೇಹುದು ಕದನ ಕಾಮುಕರ
ಸೊರಹಲರಿಯೆನು ಸಾಧುಗಳನಾ
ದರಿಸುವೆನು ಚಾವಟೆಯರನು ಚಿ
ಮ್ಮುರಿಯ ಬಿಗಿಸುವೆನಮರಿಯರ ಕಡೆಗಣ್ಣ ಕಣ್ಣಿಯಲಿ ೩೦

ಅಹುದು ಭೀಮಾರ್ಜುನರ ನುಡಿ ನಿ
ರ್ವಹಿಸದೇ ಬಳಿಕೇನು ನಿಜಕುಲ
ವಿಹಿತವಲ್ಲಾ ವಿನಯ ವಿಕ್ರಮ ವಿದ್ಯೆ ನೃಪನೀತಿ
ಗಹನವೇ ಗಂಡುಗರಿಗಿದಿರಾ
ರಹಿತ ಬಲವಿನ್ನರಸ ಚಿಂತಾ
ಮಹಿಳೆಗವಸರವಲ್ಲ ಮನ ಮಾಡೆಂದನಸುರಾರಿ ೩೧

ಎಮಗೆ ಭೀಮಾರ್ಜುನರ ಕೊಡು ರಿಪು
ರಮಣಿಯರ ಸೀಮಂತ ಮಣಿಗಳ
ನಿಮಿಷದಲಿ ತರಿಸುವೆನು ಹರಿಸುವೆನಹಿತ ಭೂಮಿಪರ
ಸಮರ ಜಯವಿನ್ನಾಯ್ತು ಯಜ್ಞೋ
ದ್ಯಮಕೆ ನಿಷ್ಪ್ರತ್ಯೂಹವಿನ್ನು
ಭ್ರಮೆಯ ಮಾಡದಿರೆಂದು ನೃಪತಿಗೆ ನುಡಿದನಸುರಾರಿ ೩೨

ಕಂಗಳನುಜರ ಚಿತ್ರ ನೀವೆ
ನ್ನಂಗವಣೆಗಿನ್ನೇನು ಭಯವಾ
ವಂಗದಲಿ ನಂಬಿಹೆವಲೇ ನಿಮ್ಮಂಘ್ರಿ ಪಂಕಜವ
ಸಂಗರದ ಜಯ ನಿನ್ನದಲ್ಲಿಯ
ಭಂಗ ನಿನ್ನದು ಭಕ್ತ ಜನದನು
ಸಂಗಿ ನೀನಿರಲೇನು ನಮಗರಿದೆಂದನಾ ಭೂಪ ೩೩

ವಿಗಡ ಯಾಗಕೆ ಸಕಲ ರಾಯರು
ಹಗೆ ಮರುತ್ತನು ಕಾರ್ತವೀರ‍್ಯಾ
ದಿಗಳು ಕೆಲವರಶಕ್ತರಾದರು ರಾಜಸೂಯದಲಿ
ಬಗೆಯಲಿದು ದುಷ್ಕಾಲವಸುರರೊ
ಳಗಡು ಮಾಗಧನವನ ಮುರಿದರೆ
ಸುಗಮ ನಿಮ್ಮಯ್ಯಂಗೆ ಸುರಪದವೆಂದನಸುರಾರಿ ೩೪

ಆರವನು ಹಿರಿದಾಗಿ ನೀ ಕೈ
ವಾರಿಸುವೆ ಕಮಲಾಕ್ಷ ಮಾಗಧ
ನಾರುಭಟೆ ತಾನೇನು ವರವೋ ಸಹಜ ವಿಕ್ರಮವೊ
ವೀರರಿಗೆ ಸಿಡಿಲಂತೆ ಸಕಲ ಮ
ಹೀ ರಮಣರಿದರೊಳಗೆ ನೃಪಮಖ
ವೈರಿ ಗಡ ಬೆಸಸೆಂದಡೆಂದನು ನಗುತ ಮುರವೈರಿ ೩೫

ಧರಣಿಪತಿ ಕೇಳೈ ಬೃಹದ್ರಥ
ನರಸು ಮಾಗಧಮಂಡಲಕೆ ತ
ತ್ಪುರಿ ಗಿರಿವ್ರಜಮೆಂಬುದಲ್ಲಿ ಸಮಸ್ತ ವಿಭವದಲಿ
ಧರೆಯ ಪಾಲಿಸುತಿದ್ದ ನಾತಂ
ಗರಸಿಯರು ಸೇರಿದರು ಕಾಶೀ
ಶ್ವರನ ತನುಜೆಯರಿಬ್ಬರದು ಭುತ ರೂಪು ಗುಣಯುತರು ೩೬

ಅವರೊಡನೆ ಸುಖ ಸತ್ಕಥಾ ಸಂ
ಭವ ವಿನೋದದಲಿದ್ದನೀ ವೈ
ಭವ ಫಲವಪುತ್ರರಿಗೆ ಬಹು ದುಃಖೋಪಚಯವೆಂದು
ಅವನಿಪತಿ ವೈರಾಗ್ಯದಲಿ ರಾ
ಜ್ಯವನು ಬಿಸುಟು ತಪಃಪ್ರಭಾವ
ವ್ಯವಹರಣೆಯಲಿ ತನುವ ನೂಕುವೆನೆನುತ ಹೊರವಂಟ ೩೭

ಊರ ಹೊರವಡುವುತ್ತ ಕಂಡನು
ಪಾರಿಕಾಂಕ್ಷಿಯನೊಬ್ಬನನು ಮುನಿ
ವೀರಕಾಂಕ್ಷಿಯನಾಂಗಿರಾತ್ಮಜ ಚಂಡ ಕೌಶಿಕನ
ನಾರಿಯರು ಸಹಿತವನ ಚರಣಾಂ
ಭೋರುಹಕ್ಕಭಿನಮಿಸಲತಿ ವಿ
ಸ್ತಾರಿಸಿದನಾಶಿರ್ವಚನವನು ಮುನಿ ನೃಪಾಲಂಗೆ ೩೮

ಏನಿದರಸನೆ ವದನದಲಿ ದು
ಮ್ಮಾನವೆನಲನಪತ್ಯತಾ ಚಿಂ
ತಾನುರೂಪದ ದುಗುಡವಿದು ನಿಮ್ಮಂಘ್ರಿ ಸೇವೆಯಲಿ
ಹಾನಿ ದುಷ್ಕೃತಕಹುದಲೇ ಸುತ
ಹೀನ ರಾಜ್ಯವ ಬಿಸುಟೆನೆನಗೀ
ಕಾನನದ ಸಿರಿ ಸಾಕೆನುತ ಬಿಸುಸುಯ್ದನಾ ಭೂಪ ೩೯
ಐಸಲೇ ಸುತಹೀನ ರಾಜ್ಯ ವಿ
ಳಾಸ ನಿಷ್ಫಲವಹುದಲೇ ಸಂ
ತೋಷವೇ ಸುತಲಾಭವಾದರೆ ಹೊಲ್ಲೆಯೇನಿದಕೆ
ಆ ಸಮರ್ಥ ಮುನೀಂದ್ರನಂತ
ರ್ಭಾಸಿತಾತ್ಮ ಧ್ಯಾನಸುಖ ವಿ
ನ್ಯಾಸದಿರಲಂಕದಲಿ ಬಿದ್ದುದು ಮಧುರ ಚೂತಫಲ ೪೦