ಕಂದೆರೆದು ಮುನಿ ಬಳಿಕ ಭೂಪತಿ
ಗೆಂದನಿದ ಕೋ ಪುತ್ರಸಂತತಿ
ಗೆಂದು ಸಾಧನವಿದನು ಕೊಡು ನೀನೊಲಿದು ವಧುಗೆನಲು
ಕಂದಿದಾನನನ ಉಜ್ವಲ ಪ್ರಭೆ
ಯಿಂದ ಬೆಳಗಿತು ರಾಣಿಯರು ಸಹಿ
ತಂದು ಮುನಿ ಪದಕೆರಗಿ ಪರಿತೋಷದಲಿ ನಿಂದಿರ್ದ ೪೧

ವರವನೊಂದನು ಹೆಸರುಗೊಂಡೀ
ಧರಣಿಪತಿಗಾ ಮುನಿಪ ಕೊಟ್ಟನು
ಪುರಕೆ ಮರಳಿದನರಸನಾ ಮುನಿ ತೀರ್ಥಯಾತ್ರೆಯಲಿ
ಸರಿದನತ್ತಲು ಚೂತಫಲವಿದ
ನೆರಡು ಮಾಡಿ ಬೃಹದ್ರಥನು ತ
ನ್ನರಸಿಯರಿಗಿತ್ತನು ಯುಧಿಷ್ಠಿರ ಕೇಳು ಕೌತುಕವ ೪೨

ಬಲಿದುದವರಿಗೆ ಗರ್ಭ ಜನನದ
ನೆಲೆಯ ಕಾಲಕೆ ಸತಿಯರುದರದೊ
ಳಿಳಿದುದೊಂದೊಂದವಯವದ ಸೀಳೆರಡು ಸಮವಾಗಿ
ಬಳಿಕ ಕಂಡವರಕಟ ದುಷ್ಕೃತ
ಫಲವೆ ಸುಡಲಿವನೆನುತ ಬಿಸುಟರು
ಹೊಳಲ ಹೊರ ಬಾಹೆಯಲಿ ನಡುವಿರುಳರಸ ಕೇಳೆಂದ ೪೩

ನಡುವಿರುಳು ಜರೆಯೆಂಬ ರಕ್ಕಸಿ
ಯಡಗನರಸುತ ಬಂದು ಕಂಡಳು
ಮಿಡುಕುವೀ ಸೀಳೆರಡವನು ಹೊರ ಹೊಳಲ ಬಾಹೆಯಲಿ
ತುಡುಕಿದಳು ಸೀಳ್ದೇಕೆ ತಿನ್ನದೆ
ಮಡಗಿದರೊ ಕೌತುಕವದೇನೀ
ಯೆಡಬಲನಿದೆಂದಸುರೆ ದಿಟ್ಟಿಸಿ ನೋಡಿದಳು ಶಿಶುವ ೪೪

ಶಿಶುವನಾರೋ ಸೀಳ್ದು ತಿನ್ನದೆ
ಬಿಸುಟು ಹೋದರೆನುತ್ತ ಜರೆ ಸಂ
ಧಿಸಿದಳಾಕಸ್ಮಿಕದ ಸೀಳೆರಡನು ವಿನೋದದಲಿ
ಪಸರಿಸಿದುದಸು ಮೇಘರವ ಘೂ
ರ್ಮಿಸುವವೋಲ್ ಚೀರಿದನು ಗಿರಿಗಳ
ಬೆಸುಗೆ ಬಿಡೆ ನಡುವಿರುಳು ಕೋಳಾಹಳಸಿತಾ ರಭಸ ೪೫

ಊರ ಹೊರವಳಯದಲಿದೇನು ಮ
ಹಾ ರಭಸವಿರುಳೆನುತ ಹರಿದುದು
ಪೌರಜನ ಝೋಂಪಿಸುವ ಕೈದೀವಿಗೆಯ ಬೆಳಗಿನಲಿ
ಆರಿವಳು ತಾನೆನುತ ಕಂಡುದು
ದೂರದಲಿ ದಾನವಿಯನವಳ ಘ
ನೋರುಗಳ ಸೋಗಿನಲಿ ಕೈದೊಟ್ಟಿಲ ಕುಮಾರಕನ ೪೬

ನಿಂದುದಲ್ಲಿಯದಲ್ಲಿ ರಕ್ಕಸಿ
ಯೆಂದು ಭಯದಲಿ ಬಳಿಕ ಕರುಣದ
ಲೆಂದಳವಳಂಜದಿರಿ ಹೋಹೋಯೆನುತ ಕೈ ನೆಗಹಿ
ಇಂದಿನವನು ಮಗನೆನಗೆ ಭೂಪತಿ
ಬಂದನಾದರೆ ಕೊಡುವೆನೀತನ
ನೆಂದಡಾಕ್ಷಣ ಕೇಳಿ ಹರಿತಂದನು ಮಹೀಪಾಲ ೪೭

ಅರಸ ಕೋ ನಿನ್ನವನನೀ ಮುನಿ
ವರ ಕುಮಾರನನೆನ್ನ ಹೆಸರಲಿ
ಕರೆವುದಿತನ ಸೀಳ ಬೆಚ್ಚವಳಾನು ಬೆದರದಿರು
ಜರೆಯೆ ನಿಪುದಭಿಧಾನವೆನ್ನದು
ವರ ಜರಾಸಂಧಕನಿವನು ಸುರ
ನರರೊಳಗೆ ಬಲುಗೈಯನಹನೆಂದಿತ್ತಳರ್ಭಕನ ೪೮

ಅಸುರೆಯನು ಮನ್ನಿಸಿದನಾಕೆಯ
ಪೆಸರ ಮಗನಿವನೆಂದು ಲೋಕ
ಪ್ರಸರವರಿಯಲು ನಲವಿನಲಿ ಸಾಕಿದನು ಮಾಗಧನ
ಅಸುರರಲಿ ಮರ್ತ್ಯರಲಿ ಸುರರಲಿ
ಯೆಸಕವುಳ್ಳವನೆನಿಸಿದನು ಸಾ
ಹಸದ ಜೋಡಣೆ ಜಡಿದುದವನಲಿ ರಾಯ ಕೇಳೆಂದ ೪೯

ಅದರಿನಾ ಮಾಗಧನ ಮುರಿದ
ಲ್ಲದೆ ನೃಪಾಲಕರಂಜಿ ಕಪ್ಪದೊ
ಳೊದಗಲರಿಯರು ಮೆರೆಯಲೀಯರು ಯಾಗ ಮಂಟಪವ
ಇದು ನಿಧಾನವು ಭೀಮ ಪಾರ್ಥರಿ
ಗಿದು ಮುಹೂರ್ತವು ವೀಳೆಯವ ತಾ
ಕದನ ವಿಜಯದ ವೀರ ಸೇಸೆಯನಿಕ್ಕಿ ಕಳುಹೆಂದ ೫೦

ಮರೆಯದೇತಕೆ ರಾಜಸೂಯದ
ಹೊರಿಗೆ ನಿನ್ನದು ರಾಣಿಕವ ನಾ
ನರಿಯೆನೆಮ್ಮರ್ಥಾಭಿಮಾನ ಪ್ರಾಣದೊಡೆಯನೆಲೆ
ಕಿರಿಯರಿವದಿರು ರಾಜಸೂಯದ
ಕರುಬರತಿ ಬಲ್ಲಿದರು ಕೃಪೆಯನು
ಮೆರೆವುದೆಂದಸುರಾರಿಯಂಘ್ರಿಗೆ ಚಾಚಿದನು ಶಿರವ ೫೧

ಎತ್ತಿದನು ಮುರವೈರಿ ರಾಯನ
ಮಸ್ತಕವ ನಸುನಗುತ ಕರೆ ಸುಮು
ಹೂರ್ತಿಕರನಕ್ಷೋಹಿಣಿಯ ಬರಹೇಳು ದಳಪತಿಯ
ಸುತ್ತಣರಸರಿಗೋಲೆಯುಡುಗೊರೆ
ಯಿತ್ತು ದೂತರ ಕಳುಹು ಬಳಿಕಿನೊ
ಳುತ್ತರೋತ್ತರಸಿದ್ಧಿ ನಿನಗಹುದೆಂದನಸುರಾರಿ ೫೨

ರೂಢಿಸಿದ ಸುಮುಹೂರ್ತದಲಿ ಹೊರ
ಬೀಡು ಬಿಟ್ಟುದು ದಧಿಯ ದೂರ್ವೆಯ
ಕೂಡಿದಕ್ಷತೆಗಳ ಸುಲಾಜಾವಳಿಯ ಮಂಗಳದ
ಜೋಡಿಗಳ ಜಯರವದ ದೈತ್ಯ ವಿ
ಭಾಡ ಸೂಕ್ತದ ವಿಗಡ ಬಿರುದು ಪ
ವಾಡಗಳ ಪಾಠಕರ ಗಡಬಡೆ ಗಾಡಿಸಿತು ನಭವ ೫೩

ಆಳು ನಡೆಯಲಿ ಮಗಧರಾಯನ
ಮೇಲೆ ದಂಡು ಮುಕುಂದ ದಳಪತಿ
ಹೇಳಿಕೆಗೆ ಭೀಮಾರ್ಜುನರ ಬರಹೇಳು ಹೇಳೆನುತ
ಆಳು ಸಾರಿದರವನಿಪತಿಗಳು
ಮೇಳದಲಿ ಹೊರವಂಟು ಬರೆ ದೆ
ಖ್ಖಾಳವನು ನೋಡಿದರು ನಡೆದರು ಪಯಣಗತಿಗಳಲಿ ೫೪

ಜನಪ ಕೇಳೈ ಕೃಷ್ಣ ಭೀಮಾ
ರ್ಜುನರು ವಿಮಳ ಸ್ನಾತಕವ್ರತ
ಮುನಿಗಳಾದರು ನಡೆದು ಪಯಣದ ಮೇಲೆ ಪಯಣದಲಿ
ಜನದ ಕಾಣಿಕೆಗೊಳುತ ನಾನಾ
ಜನಪದಂಗಳ ಕಳೆದು ಗಂಗಾ (೫೫

ವಿನುತ ನದಿಯನು ಹಾಯ್ದು ಬಂದರು ಪೂರ್ವಮುಖವಾಗಿ
ಬರುತ ಕಂಡರು ಕೂಡೆ ಕೊಬ್ಬಿದ
ಸಿರಿಯನೂರೂರುಗಳ ಸೊಂಪಿನ
ಭರಿತವನು ಗೋಧನ ಸಮೃದ್ಧಿಯ ಧಾನ್ಯ ರಾಶಿಗಳ
ವರನದಿಯ ಕಾಲುವೆಯ ತೋಟದ
ತೆರಳಿಕೆಯ ಪನಸಾಮ್ರ ಪೂಗೋ
ತ್ಕರದ ರಮ್ಯಾರಾಮ ಮಂಡಿತ ಮಗಧ ಮಂಡಲವ ೫೬

ಮೆಳೆಗಳೇ ದ್ರಾಕ್ಷೆಗಳು ವೃಕ್ಷಾ
ವಳಿಗಳೇ ಸಹಕಾರ ದಾಡಿಮ
ಫಲಿತ ಪನಸಕ್ರಮುಕ ಜಂಬೂ ಮಾತುಳಂಗಮಯ
ಕಳವೆ ಶಾಲೀಮಯವು ಹೊನಲ
ಸ್ಖಳಿತ ಲಕ್ಷ್ಮೀಮಯವು ನಗರಾ
ವಳಿಗಳೆನೆ ಶೋಭಿಸಿತು ಜನಪದವಿವರ ಕಣುಮನಕೆ ೫೭

ದೇಶ ಹಗೆವನದೆಂದು ಕಡ್ಡಿಯ
ಘಾಸಿ ಮಾಡದೆ ಮಿಗೆ ವಿನೋದದ
ಲೈಸು ಪಡೆ ನಡೆತಂದು ಬಿಟ್ಟುದು ಗಿರಿಯ ತಪ್ಪಲಲಿ
ಆ ಸರೋರರುಹಬಂಧು ಚರಮಾ
ಶಾ ಸತಿಯ ಚುಂಬಿಸೆ ಗಿರಿವ್ರಜ
ದಾ ಶಿಖರವನು ಹತ್ತಿದರು ಹರಿ ಭೀಮ ಫಲುಗುಣರು ೫೮

ವೃಷಭ ಚರ್ಮ ನಿಬದ್ಧ ಭೇರಿಗ
ಳೆಸೆದವಕ್ಷತೆ ಗಂಧಮೌಲ್ಯ
ಪ್ರಸರದಲಿ ಶೈಲಾಗ್ರದಲಿ ಸಂಪನ್ನ ಪೂಜೆಯಲಿ
ಅಸುರರಿಪು ಭೀಮಾರ್ಜುನರು ತ
ದ್ವಿಷಮ ಭೇರೀತ್ರಯವ ಹೊಯ್ದೆ
ಬ್ಬಿಸಿದರದುಭುತ ರವ ಮಿಗಿಲು ಕೆಡೆದುದು ಧರಿತ್ರಿಯಲಿ ೫೯

ಏನಿದದುಭುತವೆಂದು ನಡುವಿರು
ಳಾ ನರೇಶ್ವರನಮಳವೇದ ವಿ
ಧಾನದಲಿ ತಚ್ಛಾಂತಿಗೋಸುಗ ಕರೆಸಿ ಭೂಸುರರ
ದಾನದಲಿ ವಿವಿಧಾಗ್ನಿಕಾರ್ಯವಿ
ಧಾನದಲಿ ವಿಪ್ರೌಘವಚನಸ
ಘಾನದಲಿ ಮಗಧೇಶನಿದ್ದನು ರಾಯ ಕೇಳೆಂದ ೬೦

ಇವರು ಗಿರಿಯಿಂದಿಳಿದು ರಾತ್ರಿಯೊ
ಳವನ ನಗರಿಯ ರಾಜಬೀದಿಯ
ವಿವಿಧ ವಸ್ತುವ ಸೂರೆಗೊಂಡರು ಹಾಯ್ದು ದಳದುಳವ
ತಿವಿದರಡ್ಡೈಸಿದರನುಬ್ಬಿದ
ತವಕಿಗರು ಮಗಧೇಂದ್ರ ರಾಯನ
ಭವನವನು ಹೊಕ್ಕರು ವಿಡಂಬದ ವಿಪ್ರವೇಷದಲಿ ೬೧

ಉರವಣಿಸಿದರು ಮೂರು ಕೋಟೆಯ
ಮುರಿದರಾ ದ್ವಾರದಲಿ ರಾಯನ
ಹೊರೆಗೆ ಬಂದರು ಕಂಡರಿದಿರೆದ್ದನು ಜರಾಸಂಧ
ಧರಣಿಯಮರರಪೂರ್ವಿಗರು ಭಾ
ಸುರರು ಭದ್ರಾಕಾರರೆಂದಾ
ದರಿಸಿ ಮಧುಪರ್ಕಾದಿಗಳ ಮಾಡಿದನು ಭಕ್ತಿಯಲಿ ೬೨

ಕೇಳಿದನು ಕುಶಲವನು ಕುಶಲವ
ಹೇಳಿದರು ಕುಳ್ಳಿರಿಯೆನಲು ಭೂ
ಪಾಲಕರು ಕುಳ್ಳಿರ್ದರೆವೆಯಿಕ್ಕದೆ ನಿರೀಕ್ಷಿಸುತ
ಹೇಳಿರೈ ನಿಮಗಾವ ದೇಶ ವಿ
ಶಾಲಗೋತ್ರವದಾವುದೆನುತ ವಿ
ಲೋಲ ಮತಿ ಚಿಂತಿಸಿದನಿವದಿರು ವಿಪ್ರರಲ್ಲೆಂದು ೬೩

ಸ್ನಾತಕವ್ರತ ವೇಷದಲಿ ಬಂ
ದಾತಗಳು ತಾವಿವರು ಶಸ್ತ್ರ
ವ್ರಾತದಲಿ ಶಿಕ್ಷಿತರು ಕರ್ಕಶ ಬಾಹುಪಾಣಿಗಳು
ಕೈತವದಿನೈತಂದರರ್ಥವ
ನೀತಗಳು ಬಯಸರು ವಿರೋಧ
ಪ್ರೀತಿಮುಖರಿವರಾರೊ ಶಿವಶಿವಯೆನುತ ಚಿಂತಿಸಿದ ೬೪

ಆರಿವರು ದೇವತ್ರಯವೊ ಜಂ
ಭಾರಿ ಯಮ ಮಾರುತರೊ ರವಿ ರಜ
ನೀ ರಮಣ ಪಾವಕರೊ ಕಟಪಸ್ನಾತಕವ್ರತದ
ಧಾರುಣೀಶ್ವರರೊಳಗೆ ಧಿಟ್ಟರ
ದಾರು ತನ್ನೊಳು ತೊಡಕಿ ನಿಲುವ ವಿ
ಕಾರಿಗಳ ನಾ ಕಾಣೆನೆಂದನು ತನ್ನ ಮನದೊಳಗೆ ೬೫

ಈಗ ಮಿಡುಕುಳ್ಳವರು ಮಹಿಯಲಿ
ನಾಗಪುರದರಸುಗಳು ನಮ್ಮವ
ರಾಗಿಹರು ಪಾಂಡುವಿನ ಮಕ್ಕಳು ಮೀರಿ ಖಳರಲ್ಲ
ಸಾಗರೋಪಾಂತ್ಯದ ನರೇಂದ್ರರು
ಭೋಗಿಸಿದ ಮುತ್ತುಗಳು ಭಾವಿಸ
ಲೀ ಗಯಾಳರ ಗರ್ವವೇನು ನಿಮಿತ್ತವಾಯ್ತೆಂದ ೬೬

ಯಾದವರು ಹಿಂದೆಮ್ಮೊಡನೆ ಹಗೆ
ಯಾದವರು ಬಳಿಕವರೊಳಗೆ ತುರು
ಗಾದವನ ಕರುಗಾದವನ ಮಾಧವನ ಮಾತೇನು
ಮೇದಿನಿಯ ಮಂಡಳಿಕ ಮನ್ನೆಯ
ರಾದವರು ನಮ್ಮೊಡನೆ ಸೆಣಸುವ
ರಾದಡಿದು ದುಷ್ಕಾಲ ವಶವಿದು ಚಿತ್ರವಾಯ್ತೆಂದ ೬೭

ಬವರಿಗರು ನೀವ್ ವಿಪ್ರವೇಷದ
ಜವನಿಕೆಯ ಜಾಣಾಯ್ಲತನದಿಂ
ದವಗಡಿಸಿ ಹೊಕ್ಕಿರಿಯಪದ್ವಾರದಲಿ ನೃಪಸಭೆಯ
ನಿವಗಿದೇನೀ ವಸನ ಕಪಟ
ವ್ಯವಹರಣೆ ಕೃತ್ರಿಮವೊ ಸಹಜವೊ
ರವಣ ಮತ್ತೇನುಂಟು ಹೇಳಿನ್ನಂಜ ಬೇಡೆಂದ ೬೮

ಸ್ನಾತಕವ್ರತವೇನು ಪಾರ್ಥಿವ
ಜಾತಿಗಿಲ್ಲಲೆ ವೈಶ್ಯ ಕುಲಕಿದು
ಪಾತಕವು ನಾವಿಂದು ಪಾರ್ಥಿವ ಜಾತಿ ಸಂಭವರು
ಸ್ನಾತಕರು ನಾವ್ ವೈರಿ ಗೃಹದಲಿ
ಭೀತರದ್ವಾರಪ್ರವೇಶವ
ನೀತಿಯಲ್ಲ ಪುರಾಣಸಿದ್ಧವಿದೆಂದನಸುರಾರಿ ೬೯

ವೈರಿ ಭವನವೆ ನಮ್ಮದಿದು ನಾವ್
ವೈರಿಗಳೆ ನಿಮಗೆಮಗೆ ಜನಿಸಿದ
ವೈರಬಂಧ ನಿಮಿತ್ತವಾವುದು ನಿಮ್ಮ ಪಕ್ಷದಲಿ
ಆರು ನೀವೀ ಬ್ರಾಹ್ಮಣರು ನಿಮ
ಗಾರುಪಾಧ್ಯರು ಹೇಳಿ ನಿಮ್ಮ ವಿ
ಕಾರ ಬರಿದೇ ಹೋಗದೆಂದನು ಮಗಧಪತಿ ನಗುತ ೭೦

ಮುರಿದು ಹಲಬರಿಳಾಧಿನಾಥರ
ಸೆರೆಯಲಿಕ್ಕಿದೆ ರಾಜ್ಯ ಮದದಲಿ
ಮರೆದು ಮಾನ್ಯರನಿರಿದು ಹೆಚ್ಚಿಸಿಕೊಂಡೆ ಭುಜಬಲವ
ಅರಿಯದಳುಪಿದ ಪಾತಕಕೆ ಬಿಡು
ಸೆರೆಯ ಪ್ರಾಯಶ್ಚಿತ್ತವಿದು ನಾ
ವುರುವ ವೇಷದುಪಾಧ್ಯರೆಂದನು ನಗುತ ಮುರಹರನು ೭೧

ಆ ನೃಪಾಲರ ಮಗನೊ ಮೊಮ್ಮನೊ
ನೀನವರ ಬಾಂಧವನೊ ಭೃತ್ಯನೊ
ನೂನವಕ್ಷನೊ ಬೆರಳ ಬದೆಗನೊ ಕುರುಳ ಕೋಮಳನೊ
ಏನು ನಿನ್ನಂಘವಣೆ ನೀನಾ
ರಾ ನರೇಂದ್ರರ ಸೆರೆಯ ಬಿಡುಗಡೆ
ಗೇನನೆಂಬೆನು ರಹವನೆಂದನು ತೂಗಿ ಮಣಿಶಿರವ ೭೨

ಎಲವೊ ಧರೆಯಲಧರ್ಮಶೀಲರ
ತಲೆಯ ಚೆಂಡಾಡುವೆವು ಧರ್ಮವ
ನೊಲಿದು ಕೊಂಡಾಡುವೆವು ಶಿಕ್ಷಾ ರಕ್ಷಣ ವ್ಯಸನ
ನೆಲೆ ನಮಗೆ ನೀನರಿಯೆ ರಾಜಾ
ವಳಿಯ ಬಿಡು ಫಡ ಭಂಡ ವಿದ್ಯೆಯ
ಬಳಸುವಾ ನಮ್ಮೊಡನೆಯೆಂದನು ದಾನವಧ್ವಂಸಿ ೭೩

ಇವರು ಗಡ ಗಜದವನ ಶಿಕ್ಷಾ
ಸವನದಲಿ ದೀಕ್ಷಿತರು ಗಡ ಕೈ
ತವದ ಭಂಡರು ನೀವೊ ನಾವೋ ಸಾಕದಂತಿರಲಿ
ಕವಡುತನದಲಿ ದಿಟ್ಟರಹಿರಂ
ಘವಣೆಯೊಳ್ಳಿತು ನಿಮ್ಮ ನಿಜವನು
ವಿವರಿಸಿರೆ ನೀವಾರು ಹೇಳೆಂದನು ಜರಾಸಂಧ ೭೪

ಕೇಳಿ ಮಾಡುವುದೇನು ತಾನಸು
ರಾಳಿ ಧೂಳೀಪಟಲ ವೈರಿ ನೃ
ಪಾಲ ಚೌಪಟ ಮಲ್ಲನೀತನು ಭೀಮಸೇನ ಕಣಾ
ಭಾಳನೇತ್ರನ ಭುಜಬಲದ ಸಮ
ಪಾಳಿಯರ್ಜುನನೀತನೇಳಾ
ಕಾಳಗವ ಕೊಡು ನಮ್ಮೊಳೊಬ್ಬರಿಗೆಂದನಸುರಾರಿ ೭೫

ಕೇಳಿ ಕೆದರಿದ ಕಡುನಗೆಯಲಡ
ಬೀಳುತೇಳುತ ಬಿರುವನಿಯ ಕ
ಣ್ಣಾಲಿಗಳ ಝೊಮ್ಮೆದ್ದ ರೋಮದ ಜಡಿವ ಬಿಡುದಲೆಯ
ಸೂಳುನಗೆ ಬಿಳಿನಗೆಯಲಡಿಗಡಿ
ಗಾಳಿ ಮುಸುಗುಬ್ಬಸದಲಿದ್ದು ಕ
ರಾಳಮತಿ ಸಂತೈಸಿ ನೆರೆ ತನ್ನವರಿಗಿಂತೆಂದ ೭೬

ಈತನಾರೆಂದರಿವಿರೈ ನ
ಮ್ಮಾತನೀತನು ನಮ್ಮ ಕಂಸಂ
ಗೀತನಳಿಯನು ನಮಗೆ ಮೊಮ್ಮನು ಮಗನು ದೇವಕಿಗೆ
ಈತ ಕಾಣಿರೆ ಹಿಂದೆ ಚೌರಾ
ಶೀತಿ ದುರ್ಗದೊಳೋಡಿ ಬದುಕಿದ
ನೀತ ಬಲುಗೈ ಬಂಟನೆಂದನು ಮಗಧಪತಿ ನಗುತ ೭೭

ಕೊಳಲ ರಾಗದ ರಹಿಯೊ ಕಲ್ಲಿಯ
ಕಲಸುಗೂಳೋ ಹಳ್ಳಿಕಾತಿಯ
ರೊಳಗುಡಿಯ ಹಾದರವೊ ತುರಗಾಹಿಗಳ ತೋಹುಗಳೊ
ಬಲು ಸರಳ ಸರಿವಳೆಯ ಮಿದುಳೊಡೆ
ಗಲಸುಗಳಡಾಯುಧದ ತಳುಕಿನ
ಕೊಳುಗುಳದ ಜಯಸಿರಿಯ ಕಾಹಿನೊಳಾರು ನೀನೆಂದ ೭೮

ಹೋರಿ ಹೆಂಗುಸು ಬಂಡಿ ಪಕ್ಷಿ ಸ
ಮೀರಣಾಶ್ವಾಜಗರ ಗಾರ್ದಭ
ವೀರರೀತನ ಘಾತಿಗಳುಕಿತು ಕಂಸಪರಿವಾರ
ಆರುಭಟೆಯುಳ್ಳವನು ಕಂಸನ
ತೋರಹತ್ತನ ತೊಡಕಿದನು ಗಡ
ಭಾರಿಯಾಳಹನುಂಟು ಶಿವಶಿವಯೆಂದನಾ ಮಗಧ ೭೯

ಎಲವೊ ಗೋವಳ ನಿನ್ನ ಕಂಸನ
ನಿಳಯವೋ ಪೌಂಡ್ರಕನ ಕದನದ
ಕಳನೊ ಹಂಸನ ಹೋರಟೆಯೊ ಮೇಣ್ ಡಿಬಿಕನಡುಪಾಯೊ
ಹುಲಿಗೆ ಮೊಲನಭ್ಯಾಗತನೆ ಕರಿ
ಕಳಭ ಸಿಂಹಕೆ ಸರಿಯೆ ನೀ ನಿ
ನ್ನಳವನರಿಯದೆ ಹೊಕ್ಕು ಕೆಣಕಿದೆ ಕೆಟ್ಟೆ ಹೋಗೆಂದ ೮೦

ಇದುವೆ ಪಿತ್ತದ ವಿಕಳವೋ ಮ
ದ್ಯದ ವಿಕಾರವೊ ಭಂಗಿ ತಲೆಗೇ
ರಿದುದೊ ಭಟನಾದರೆ ವಿಘಾತದಲೇಳು ಕಾಳಗಕೆ
ಸದನ ನಿನ್ನದು ಸೂಳೆಯರ ಮುಂ
ದೊದರಿ ಫಲವೇನೆದ್ದು ಬಾ ಭಾ
ಳದಲಿ ಬರೆದುದ ತೊಡೆವೆನೆಂದನು ದಾನವಧ್ವಂಸಿ ೮೧