ಏಳನೆಯ ಸಂಧಿ

ಸೂ. ಸಕಲಋಷಿ ಮುಖ್ಯರು ಮಹೀ ಪಾ
ಲಕರು ನೆರೆದರು ವಿಶ್ವ ಭೂತ
ಪ್ರಕರ ದಣಿದುದು ಧರ‍್ಮ ಪುತ್ರನ ರಾಜಸೂಯದಲಿ

ಕೆಳು ಜನಮೇಜಯ ಧರಿತ್ರೀ
ಪಾಲ ದೂತರು ಹರಿದರವನೀ
ಪಾಲರಿಗೆ ಋಷಿಗಳಿಗೆ ಭೂಸುರ ವೈಶ್ಯ ಶೂದ್ರರಿಗೆ
ಹೇಳಲೇನದುಬುತವನಂಬುಧಿ
ವೇಲೆಯಲಿ ಮಧ್ಯದ ಸಮಸ್ತ ಜ
ನಾಳಿ ನೆರೆದುದು ವಿಲಸದಿಂದ್ರಪ್ರಸ್ಥ ನಗರಿಯಲಿ ೧

ಚೋಳ ಸಿಂಹಳ ಪಾಂಡ್ಯ ಕೇರಳ
ಮಾಳವಾಂಧ್ರ ಕರೂಷ ಬರ್ಬರ
ಗೌಳ ಕೋಸಲ ಮಗಧ ಕೇಕಯ ಹೂಣ ಸೌವೀರ
ಲಾಳ ಜೋನೆಗ ಜೀನ ಕುರು ನೇ
ಪಾಳ ಶಿಖಿ ಕಾಶ್ಮೀರ ಬೋಟ ವ
ರಾಳ ವರ ದೇಶಾಧಿಪತಿಗಳು ಬಂದರೊಗ್ಗಿನಲಿ ೨

ಭೂರಿ ಭೂರಿಶ್ರವನು ಬಾಹ್ಲಿಕ
ಶೂರಸೇನ ಕಳಿಂಗ ಸಲೆ ಗಾಂ
ಧಾರ ಸೌಬಲ ಸೋಮದತ್ತ ಸುಷೇಣ ಭಗದತ್ತ
ವೀರಪೌಂಡ್ರಕನೇಕಲವ್ಯ ಸು
ರಾರಿಗಳು ಶಿಶುಪಾಲ ಯವನ ಕು
ಮಾರ ಪೌರವ ದಂತವಕ್ರರು ಬಂದರೊಗ್ಗಿನಲಿ ೩

ಸಕಳದಳ ಮೇಳಾಪದಲಿ ಭೀ
ಷ್ಮಕನು ರುಕ್ಮನು ಚಿತ್ರರಥ ಸಾ
ಲ್ವಕನು ರೋಹಿತ ರೋಚಮಾನ ಸಮುದ್ರ ಸೇನಕರು
ಪ್ರಕಟ ಬಲರುತ್ತರ ದಿಶಾ ಪಾ
ಲಕರು ಕುರು ಪರಿಯಂತ ರಾಜ
ಪ್ರಕರ ನೆರೆದರು ವಿಳಸದಿಂದ್ರಪ್ರಸ್ಥ ನಗರಿಯಲಿ ೪

ದ್ರುಪದ ಧೃಷ್ಟದ್ಯುಮ್ನ ರಣಲೋ
ಲುಪ ಯುಧಾಮನ್ಯೂತ್ತಮೌಂಜಸ
ರುಪಚಿತರು ಬಂದರು ಸಗಾಢದಲಿ ವರ ಬಾಂಧವರು
ಕೃಪ ಜಯದ್ರಥ ಭೀಷ್ಮ ಮಾದ್ರಾ
ಧಿಪತಿ ಕರ್ಣ ದ್ರೋಣ ಮೊದಲಾ
ದಪರಿಮಿತ ಬಲ ಸಹಿತ ಕೌರವರಾಯ ನಡೆತಂದ ೫

ಗುರುತನೂಜ ಸುಶರ್ಮ ವಂಗೇ
ಶ್ವರ ಬೃಹದ್ರಥ ಭೀಮರಥ ದು
ರ್ಮರುಷಣರು ವರ ಭಾನುದತ್ತ ವಿಕರ್ಣ ದುಸ್ಸಹರು
ವರ ವಿವಿಂಶತಿ ದೀರ್ಘಭುಜ ದು
ರ್ದರುಶ ದುರ್ಜಯ ಶಂಕು ಕರ್ಣಾ
ದ್ಯರು ಸಹಿತ ದುಶ್ಶಾಸನನು ಹೊರವಂಟನರಮನೆಯ ೬

ಬಂದರೈ ಚತುರಂಗದವನಿಪ
ವೃಂದವವರವರುಚಿತ ಮಿಗಿಲಿದಿ
ರ್ವಂದು ಭೀಷ್ಮ ದ್ರೋಣ ಕೃಪ ಧೃತರಾಷ್ಟ್ರರಿಗೆ ನಮಿಸಿ
ವಂದನೀಯರಿಗೆರಗಿ ಸಮರಿಗೆ
ನಿಂದು ಕುಶಲಕ್ಷೇಮ ಸಂಗತಿ
ಯಿಂದ ಸತ್ಕರಿಸಿದನು ನೃಪ ವಿದುರಾದಿ ಬಾಂಧವರ ೭

ಜನಪ ಕೇಳೀಚೆಯಲಿ ಬಂದುದು
ಮುನಿಗಳಾಂಗಿರ ಕಣ್ವ ಭೃಗು ಜೈ
ಮಿನಿ ಸುಮಂತ ವಸಿಷ್ಠ ಶೌನಕ ಗಾರ್ಗ್ಯ ಬೃಹದಶ್ವ
ಸನಕ ಶುಕ ಜಾಬಾಲಿ ತಿತ್ತಿರಿ
ವಿನುತ ಮಾರ್ಕಂಡೇಯ ಮುದ್ಗಲ
ತನಯ ರೋಮಶ ಕುತ್ಸವತ್ಸರು ಶೈಬ್ಯ ನಾರದರು ೮

ಚ್ಯವನ ಗೌತಮ ವೇಣುಜಂಘ
ಪ್ರವರ ಕೌಶಿಕ ಸತ್ಯತಪ ಭಾ
ರ್ಗವ ಸುಮಾಲಿ ಸುಮಿತ್ರ ಕಾಶ್ಯಪ ಯಾಜ್ಜವಲ್ಕ್ಯ ಋಷಿ
ಪವನ ಭಕ್ಷಕ ದೀರ್ಘ ತಪ ಗಾ
ಲವನು ಶಿತ ಶಾಂಡಿಲ್ಯ ಮಾಂಡ
ವ್ಯ ವರರೆಂಬ ಮಹಾ ಮುನೀಂದ್ರರು ಬಂದರೊಗ್ಗಿನಲಿ ೯

ದೇಶ ದೇಶಾಂತರದ ವಿದ್ಯಾ
ಭ್ಯಾಸಿಗಳು ಮೊದಲಾಗಿ ವರ್ಣ ನಿ
ವಾಸಿಗಳು ಫಲಮೂಲ ದಧಿ ಘೃತ ದುಗ್ಧ ಭಾರದಲಿ
ಆ ಸಮಸ್ತ ಮಹೀತಳದ ಧನ
ರಾಶಿ ಜನ ಸಂತತಿಯನೇಕ ನಿ
ವಾಸದಲಿ ನೆರೆ ಕಾಣಲಾಯಿತು ನೃಪತಿ ಕೇಳೆಂದ ೧೦

ವಿಕಳ ವಾಮನ ಮೂಕ ಬಧಿರಾಂ
ಧಕರು ಮಾಗಧ ಸೂತ ವಂದಿ
ಪ್ರಕರ ಮಲ್ಲ ಮಹೇಂದ್ರಜಾಲಿ ಮಹಾಹಿ ತುಂಡಿತರು
ಸುಕವಿ ತಾರ್ಕಿಕ ವಾಗ್ಮಿ ವೈತಾ
ಳಿಕ ಸುಗಾಯಕ ಕಥಕ ಮಾರ್ದಂ
ಗಿಕರು ನೆರೆದುದು ನಿಖಿಳ ಯಾಚಕ ನಿಕರ ಸಂದಣಿಸಿ ೧೧

ಕರೆಸಿ ಭೀಷ್ಮಂಗೆರಗಿ ನುಡಿದನು
ಧರಣಿಪತಿ ಬಾಲಕರು ನಾವ
ಧ್ವರವಿದಗ್ಗದ ರಾಜಸೂಯ ಮಹಾ ಮಹೀಶ್ವರರು
ನೆರೆದುದಖಿಳದ್ವೀಪಜನವಾ
ದರಿಸಲರಿಯೆನು ಹೆಚ್ಚು ಕುಂದಿನ
ಕುರುಡನೀಕ್ಷಿಸಲಾಗದೆಂದನು ಮುಗಿದು ಕರಯುಗವ ೧೨

ಚಿಂತೆಯೇಕೈ ಕೃಷ್ಣ ನಾರೆಂ
ದೆಂತು ಕಂಡೆ ಚತುರ್ದಶಾಂಶದ
ತಂತು ರೂಪನು ತಾನೆಯೆನ್ನದೆ ನಿನಗೆ ಶ್ರುತಿವಚನ
ತಂತುವಿನ ಪಟ ಮೃತ್ತಿಕೆಯ ಘಟ
ದಂತೆ ಜಗವೀತನಲಿ ತೋರ್ಕು ಮು
ರಾಂತಕನ ಸುಯ್ಧಾನ ನಿನಗಿರಲಂಜಲೇಕೆಂದ ೧೩

ಕರೆಸು ಧೌಮ್ಯಾದಿಗಳನಿಲ್ಲಿಯ
ಪರುಠವವ ಮಾಡೆಂದು ಭೀಷ್ಮನು
ಗುರುಸಹಿತ ಕೈಕೊಂಡನೆಲ್ಲರ ಮೇಲು ನೋಟವನು
ಅರಸ ಕೇಳ್ ಧೃತರಾಷ್ಟ್ರ ಬಾಹ್ಲಿಕ
ವರಬೃಹದ್ರಥ ಸೋಮದತ್ತರು
ಪರಮಪೂಜ್ಯರು ಮಾನನೀಯರು ಯಜ್ಞ ವಾಟದಲಿ ೧೪

ಸವನ ಸಾಧನ ಸರ್ವ ಸಂಭಾ
ರವನು ಧೌಮ್ಯನು ತರಿಸಿ ಕೊಡಿಸುವ
ನವನಿಪತಿಗಳ ಪಾರುಪತ್ಯದ ನೋಟ ಸಂಜಯಗೆ
ವಿವಿಧ ಋಷಿ ಯಾಜ್ಞಿಕರು ಮಾಂತ್ರಿಕ
ನಿವಹ ಸಹದೇವಂಗೆ ಭೋಜ್ಯ
ಪ್ರವರದಧಿಕಾರದ ನಿಯೋಗ ಯುಯುತ್ಸು ವಿನ ಮೇಲೆ ೧೫

ನೆರೆದ ಭೂಸುರ ತತಿಯ ನೋಟಕೆ
ಕರೆಸಿ ಕುಳ್ಳಿರಿಸುವನು ಸಾತ್ಯಕಿ
ಭರದಿನೆಂಜಲ ತೆಗೆಸಿ ಸಾರಿಸುವುದು ವಿಕರ್ಣಂಗೆ
ಅರಸ ಕೇಳ್ ಭೋಜನದ ಸಮನಂ
ತರದ ವೀಳೆಯ ಗಂಧ ಮಾಲ್ಯಾಂ
ಬರವನೀವಧಿಕಾರ ದುಶ್ಶಾಸನನ ವಶವಾಯ್ತು ೧೬

ವಿತತ ಭುಸುರ ದಕ್ಷಿಣೆಗೆ ಗುರು
ಸುತ ನಿಯೋಗ ಸಮಸ್ತ ರತ್ನ
ಪ್ರತತಿಗಳನಾರೈದು ತರಿಸುವನಾ ಕೃಪಾಚಾರ್ಯ
ಘೃತವು ದಧಿ ಮಧು ತೈಲ ಕತ್ತುರಿ
ಸಿತ ಲವಣ ಸಂಭಾರ ಶಾಕೋ
ಚಿತ ಸುವಸ್ತುವ ಕೊಡುವ ಕೊಂಬಾರೈಕೆ ವಿದುರಂಗೆ ೧೭

ಅರಸ ಕೇಳೈ ಪಾಕಶಾಲೆಯ
ಹಿರಿಯ ಹಂತಿಗಳಲಿ ಚತುರ್ದಶ
ಕರಿ ಘಟೆಗಳೆಡೆಯಾಡುವವು ಸಂಭಾರವನು ಹೇರಿ
ಹರಿವ ರಜತ ದ್ರೋಣಿಯಲಿ ಸುರಿ
ಸುರಿದು ಸೇದುವ ರಾಟಳಂಗಳೊ
ಳೆರೆವ ಘೃತ ಮಧು ತೈಲ ಧಾರಾ ರಚನೆ ಚೆಲುವಾಯ್ತು ೧೮

ಧರಣಿಪತಿ ಕೇಳ್ ಶೂದ್ರ ಮೊದಲಾ
ಗಿರೆ ಸಮಸ್ತ ಪ್ರಜೆ ವಿಧಾವಂ
ತರಿಗೆ ಭೋಜನ ಗಂಧ ಮಾಲ್ಯಾಂಬರ ವಿಲೇಪನದ
ಉರು ನಿಯೋಗಿಗಳಿಂದ್ರಸೇನನು
ವರ ವಿಶೋಕನು ರುಗ್ಮ ನತಿ ಬಂ
ಧುರ ಸಮೀರ ಪತಾಕಸೇನನು ಸೂತರೈವರಿಗೆ ೧೯

ಅರಸ ಕೇಳೈ ಬಳಿಕ ಪೃಥ್ವೀ
ಶರರಿಗಭಿನವ ಗಜ ರಥಾವಳಿ
ತುರಗ ಶಸ್ತ್ರಾಸ್ತ್ರ ಗಳನೀವ ನಿಯೋಗ ಕರ್ಣನದು
ಕರೆಕರೆದು ಯೋಗ್ಯಾತಿಶಯವರಿ
ವರಿದು ಯೋಷಿಜ್ಜನಕೆ ಮಾದ್ರೇ
ಶ್ವರನು ಕೊಡುವವನಾದನಧಿಕೋತ್ಸವದ ಸಿರಿಮಿಗಿಲು ೨೦

ಸಕಲ ಮಣಿ ಕಾಂಚನ ದುಕೂಲ
ಪ್ರಕರವೀ ದುರಿಯೋಧನ ವಶ
ನಕುಲನವರವರುಚಿತ ವೃತ್ತಿಯ ಮಧುರ ವಚನದಲಿ
ಪ್ರಕಟಿಸುವನವನಿವರ ಸೇನಾ
ನಿಕರದಾರೈಕೆಗಳು ಪಾಂಚಾ
ಲಕನಿಗಾದುದು ರಂಜಿಸಿತು ಪರಿಪಾಟಿಯೊಡ್ಡವಣೆ ೨೧

ಆದುದನುಪಮ ಕುಂಡವಂತ
ರ್ವೇದಿಯ ಸಮೀಪದಲಿ ಹೊರೆಗಳ
ಶೋಧಿಸಿದ್ಮ ಕುಶಂಗಳಾ ಸ್ಥಂಡಿಲದ ಸೀಮೆಯಲಿ
ಆದರಿಸಿ ಪರಿಚಾರಕರು ಸಂ
ಪಾದಿಸಿದ ಘೃತ ಚರು ಪುರೋಡಾ
ಶಾದಿ ಸಂಭಾರೌಘವನುವಾಯಿತ್ತು ನಿಮಿಷದಲಿ ೨೨

ಕರೆಸಿದರು ಋತ್ವಿಕ್ಕುಗಳನ
ಧ್ವರಿಯನಾದನು ಯಾಜ್ಜವಲ್ಕ್ಯನು
ವರಸುಮಿತ್ರಾಂಗಿರಸರುಗಳುದ್ಗಾತೃ ಹೋತೃಗಳು
ಪರಮ ಜೈಮಿನಿ ಕಣ್ವ ಕಠ ತಿ
ತ್ತಿರಿಗಳಾಗ್ನೀಧ್ರಾದಿ ರಾಜಾ
ಧ್ವರ ನಿಯೋಗಿಗಳಾಯ್ತು ವೇದವ್ಯಾಸನಾಜ್ಜೆಯಲಿ ೨೩

ಆ ದಸಸ್ಯತ್ವವನು ವೇದ
ವ್ಯಾಸ ಕೈಕೊಂಡನು ಮುನೀಂದ್ರ ಮ
ಹಾಸಮಾಜದ ಬಯಕೆಗಾ ಶಾಂಡಿಲ್ಯ ನಾರದರು
ಭೂಸುರರು ಸಾಮಾಜಿಕರು ಧರ
ಣೀತ ಯಜ್ಞೋಪಕ್ರಮದ ವಿ
ನ್ಯಾಸದಲಿ ಬಂದನು ಯುಧಿಷ್ಠಿರನಚ್ಯುತನ ಹೊರೆಗೆ ೨೪

ದೇವ ನಿನ್ನಯ ಕರುಣದಲಿ ಸಕ
ಳಾವದನೀಪತಿ ವಿಜಯ ಬಹಳಾ
ರ್ಥಾವಲಂಬನವೀ ಮಖ ಪ್ರಾರಂಭ ವಿಸ್ತಾರ
ಈ ವಿಜಯ ವೈಭವವೆಮಗೆ ಸಂ
ಭಾವಿತವೆ ವರ ರಾಜಸೂಯಕೆ
ದೇವ ದೀಕ್ಷಿತನಾಗು ನೀನೆಂದೆರಗಿದನು ಪದಕೆ ೨೫

ಮಣಿದು ಹಿಡಿದೆತ್ತಿದನು ರಾಯನ
ಹಣೆಯನನುಪಮ ಕರುಣನಿಧಿ ಕಡು
ಗುಣಿಯೆ ಬಾಯೆನ್ನಾನೆ ಬಾಯೆಂದಪ್ಪಿ ಮೈದಡವಿ
ಗುಣವಹುದು ನಿನಗಿಂದು ಕುಲ ದಿನ
ಮಣಿಯೆ ದೀಕ್ಷಿತನಾಗು ಮದವಾ
ರಣನೆ ದೀಕ್ಷಿತನಾಗೆನುತ ಬೋಳೈಸಿದನು ಹರಸಿ ೨೬

ಎನೆ ಹಸಾದವೆನುತ್ತ ಯಮನಂ
ದನನು ವೈಶಾಖದ ಚತುರ್ದಶಿ
ದಿನದಲುತ್ತರ ಪೂರ್ವವೇದಿ ವರಾಭ್ಯುದೈಕ್ಯದಲಿ
ವಿನುತ ಪುಣ್ಯಾಹದ ಮಹಾವಾ
ಚನೆಯ ನಿಗಮಪವಿತ್ರ ಜಲ ಪಾ
ವನನು ಮರುದಿನ ಯಜ್ಜ ದೀಕ್ಷಿತನಾದನೊಲವಿನಲಿ ೨೭

ಹುದಿದ ನವನೀತಾನುಲೇಪದ
ಹೊದೆದ ಕೃಷ್ಣಾಜಿನದ ಹಸ್ತಾ
ಗ್ರದಲೆಸೆವ ಸಾರಂಗ ಶೃಂಗದ ಯಾಜಮಾನ್ಯದಲಿ
ಉದಧಿಗೊರೆಗಟ್ಟುವ ಚತುರ್ವೇ
ದದ ಮಹಾಘೋಷದಲಿ ಮಖ ಕುಂ
ಡದ ತದಂತರ್ವೇದಿಗೈತಂದನು ಮಹೀಪಾಲ ೨೮

ನೆರೆದುದವನೀಪಾಲ ಜನ ಸಾ
ಗರ ಬಹಿರ್ವೇದಿಯ ಮಹಾ ಚ
ಪ್ಪರದೊಳಗೆ ತಂತಮ್ಮ ಸಿಂಹಾಸನ ಸಗಾಢದಲಿ
ಪರಮ ಋಷಿಗಳ ವೇದಘೋಷೋ
ತ್ಕರ ನೃಪಾಧ್ವರ ವಿಷಯ ತರ್ಕ
ಸ್ಫುರಣ ಕೋಳಾಹಳದ ಕಳಕಳ ತುಂಬಿತಂಬರವ ೨೯

ಚರು ತಿಲದ ರಾಶಿಗಳ ಸ್ರುಕ್‌ಸ್ರುವ
ಬರುಹಿಗಳ ಬಲು ಹೊರೆಗಳಾಜ್ಯೋ
ತ್ಕರದ ಪತ್ರಾವಳಿಯ ನಿರ್ಮಳ ಸಾರ ಸಮಿಧೆಗಳ
ಪರಿವಳೆಯದಾಮೀಕ್ಷೆಗಳ ಪರಿ
ಕರದ ವಿವಿಧ ದ್ರವ್ಯಮಯ ಬಂ
ಧುರದಲೆಸೆದುದು ಯಜ್ಞವಾಟಿಕೆ ರಾಜಸೂಯದಲಿ ೩೦

ಬಳಸಿದರು ಪರಿಮಧ್ಯಮಾನಾ
ನಳನನಗ್ಗದ ಸುಪ್ರಣೀತಾ
ನಳನನಾಹವ ನೀಯ ಗಾರುಹಪತ್ಯ ದಕ್ಷಿಣದ
ಜ್ವಲಿತವೆನೆ ಮೃಗಚರ್ಮವೀ ಜನ
ವಳಯದೊಳು ಪ್ರಾಗ್ವಂಶದಲಿ ಪರಿ
ಮಿಳಿತವಾಯ್ತು ಸದಸ್ಯ ಋತ್ವಿಜ್ಜರ ವಿಧಾನದಲಿ ೩೧

ಏವಮೇವಾಸ್ಮಾತ್ತದಿತಿ ಸಂ
ಭಾವನೀಯಮಿದಂ ಚ ನೈತ
ನ್ನೈವಮಿದಮೇವಂ ಚ ಶ್ರುತಿ ಸಂಸಿದ್ಧ ಮಿದಮೆನಲು
ಕೋವಿದರ ಕಳಕಳಿಕೆಯನ್ಯೋ
ನ್ಯಾವಮರ್ದದ ರಭಸವೀ ಭೂ
ಪಾವಳಿಗಳುಪಹಾಸ್ಯ ಘೋಷಕೆ ಕವಚವಾಯ್ತೆಂದ ೩೨

ವ್ಯಾಹೃತಿಯ ಶಿಕ್ಷಾಕ್ಷತದ ವಿಮ
ಳಾಹುತಿ ಸ್ವಾಹಾವ ಷಟ್ಕೃತಿ
ಸೋಹಿ ತಂದುದು ಸುರರ ಸುಹವಿರ್ಭಾಗ ಭೋಗಿಗಳ
ಲೋಹಿತಾಶ್ವನ ರಚನೆಯೊಳು ಹರಿ
ಸಾಹರಿಯೊಳುಬ್ಬೆದ್ದವರ್ಚಿಗ
ಳಾಹ ಸಪ್ತಕವೋ ಸಹಸ್ರಕವೆನಿಸಿ ಪೊಸತಾಯ್ತು ೩೩

ತ್ರಿದಿವವನು ತುಡುಕಿತು ಹವಿರ್ಗಂ
ಧದ ಗಢಾವಣೆ ಧೂತ ಧೂಮನ
ತುದಿ ತಪೋಲೋಕದಲಿ ತಳಿತುದು ಸತ್ಯಲೋಕದಲಿ
ತ್ರಿದಶರುರೆ ಬಾಯಾಡಿಸಿದರ
ಗ್ಗದ ಧ್ರುವಾದಿಗಳನು ಸುತೃಪ್ತಿಯ
ಹೊದರುದೇಗಿನ ಹೊಟ್ಟೆ ನೂಕಿತು ಹರಿ ಹಯಾದಿಗಳ ೩೪

ದಣಿದುದಲ್ಲಿ ಸುರೌಘವೀ ದ
ಕ್ಷಿಣೆಯಲೂಟದಲಾದರಣೆ ಮ
ನ್ನಣೆಯಲವನೀ ಸುರರು ಹಿಗ್ಗಿದರಿಲ್ಲಿ ಪಿರಿದಾಗಿ
ಎಣಿಸಬಹುದೇ ಭೋಜನದ ಸಂ
ದಣಿಯನೀಸೈಸೆಂದು ಭಾರಾಂ
ಕಣದ ಭೂರಿಯ ವಿವರವನು ಬಣ್ಣಿಸುವನಾರೆಂದ ೩೫

ವೇದ ವೇದಾಂಗದ ರಹಸ್ಯ ವಿ
ವಾದ ತರ್ಕಸ್ಮೃತಿಗಳಂತ
ರ್ವೇದಿಯಲಿ ಘನ ಲಹರಿ ಮಸಗಿತು ತಂತ್ರ ಸಂತತಿಯ
ಆದುದತ್ತಲು ಗದ್ಯ ಪದ್ಯ ವಿ
ನೋದ ನರ್ತನ ವಾದ್ಯ ಸಂಗೀ
ತಾದಿ ಸಕಲ ಕಲಾನುರಂಜನೆ ರಾಜವರ್ಗದಲಿ ೩೬

ಆ ಋಷಿಗಳಾ ಕ್ಷತ್ರ ಜನದಾ
ಭೂರಿ ನಿಕರದ ವೇದಶಾಸ್ತ್ರ ವಿ
ಚಾರಣರ ಚಾರಣರ ಸಂಗೀತಾದಿ ಕಳಕಳದ
ಆರುಭಟೆ ಮಥಿತಾಂಬುನಿಧಿಯೊಡ
ನಾರುವವೊಲುಬ್ಬೆದ್ದ ಬಲು ಜ
ರ್ಝರವೆನೆ ಜಡಿದುದು ಯುಧಿಷ್ಠಿರ ರಾಜಸೂಯದಲಿ ೩೭

ಏಳು ದಿನ ಪರಿಯಂತ ಗಳಿಗೆಗೆ
ಮೇಲೆ ಮೇಲಧ್ವರದ ಲಕ್ಷ್ಮಿ ಛ
ಡಾಳಿಸಿತು ಜಾಳಿಸಿ ಚತುರ್ದಶ ಲೋಕ ಚೇತನವ
ಕೇಳಿದೈ ಜನಮೇಜಯ ಕ್ಷಿತಿ
ಪಾಲ ಸುರಲೋಕದಲಿ ಪಾಂಡುವಿ
ನೋಲಗಕೆ ಬಹ ಬಣಗು ಸುರರಿಗೆ ಸಮಯವಿಲ್ಲೆಂದ ೩೮

ಎವಗೆ ತವಗೆಂದೀ ಹವಿರ್ಭಾ
ಗವನು ಮುತ್ತಿತು ದೇವತತಿ ಸುರ
ಯುವತಿಯರೊಳೂರ್ವಸಿ ತಿಲೋತ್ತಮೆ ರಂಭೆ ಮೇನಕೆಯು
ದಿವಿಜರೊಳ ಹಸುಗೆಗಳ ಲೆಕ್ಕದ
ಸವಬೆಸನ ಸವಿವಾಯ ತುತ್ತಿನ
ತವಕಿಗರು ಹೊಯ್ದಾಡಿದರು ಸಭೆಯಲಿ ಸುರೇಶ್ವರನ ೩೯

ಈತನಾರೈ ಪಾಂಡುನಂದನ
ನೀತ ಕಾಣಿರೆ ಪಾಂಡುವಿನ ಸುತ
ನೀತನೇ ದಿಟ ಪಾಂಡುವಿನ ಮಗನೀತನೇಯೆನುತ
ಪೂತು ಧರ್ಮಜ ಪೂತು ಧರ್ಮಜ
ಪೂತು ಧರ್ಮಜಯೆನುತ ರಾಜ
ವ್ರಾತ ಹೊಗಳಿತು ನಹುಷ ನಳ ನೃಗ ದಶರಥಾದಿಗಳು ೪೦

ಏನ ಹೇಳುವುದರಸ ಯಜ್ಞ ವಿ
ಧಾನದಭಿಷೇಕಾದಿ ಸಮಯೋ
ದ್ದಾನವಾಯ್ತ ರಸಂಗೆ ಸುರ ದುಂದುಭಿಯ ರಭಸದಲಿ
ಆ ನಿರಂತರ ತುಷ್ಟಿಗಳ ವೈ
ಮಾನಿಕರ ಸಂದಣಿ ನವೀನ ವಿ
ತಾನವಾಯಿತು ಭೂರಿ ಭಾರತ ವರುಷದಗಲದಲಿ ೪೧

ವರಸದಸ್ಯಾದಿಗಳ ದಕ್ಷಿಣೆ
ಬರಹಕಿಮ್ಮಡಿ ನೂರು ಮಡಿ ಸಾ
ವಿರದ ಮಡಿ ವರ ಹೇಮ ವಸ್ತ್ರಾಭರಣ ಗೋವ್ರಜವ
ಅರಸನಿತ್ತನು ಮಖ ನಿಯೋಗೋ
ತ್ಕರರಿಗನುಪಮ ಭೂರಿ ಜನಕಾ
ದರಿಸಿ ಕೊಟ್ಟನು ಹೊತ್ತು ನಡೆದುದು ಸಕಲ ಜನ ಧನವ ೪೨

ತಲೆಹೊರೆಯಲಡಕಿದರು ಹೆಗಲಲಿ
ಕೆಲರು ಶಿಷ್ಯರ ನೆತ್ತಿಯಲಿ ಕೆಲ
ಕೆಲರು ಹೊರಿಸಿತು ದೇಶ ದೇಶದ ಸಕಲ ಭೂಸುರರು
ಲಲಿತ ರತ್ನಾಭರಣ ಗೋ ಸಂ
ಕುಲದ ಸೂರೆಯನೇನನೆಂಬೆನು
ಸಲೆ ದಣಿದುದಾ ಸಕಲ ಜಾತಿ ಜನೇಶ ಯಜ್ಜದಲಿ ೪೩

ಕಳೆದವಗಣಿತ ಕಲ್ಪವಿದರೊಳ
ಗಳಿವನರಿಯದರಿಬ್ಬರೇ ಮುನಿ
ತಿಲಕ ಮಾರ್ಕಂಡೇಯ ರೋಮಶರೀ ಮಹಾಧ್ವರದ
ಸುಳಿವನಾರಲಿ ಕಂಡರವನಿಪ
ರೊಳಗೆನುತ ಮನವುಕ್ಕಿ ನಾರದ
ನೊಲಿದು ನುಡಿದನು ತನ್ನ ಹೇಳಿಕೆ ಸಫಲವಾಯ್ತೆಂದು ೪೪

ಸುರರಿಗಾದುದು ತುಷ್ಟಿ ಧರಣೀ
ಸುರ ಮುನೀಂದ್ರರಿಗಾಯ್ತು ಶೂದ್ರರ
ನೆರವಿಗಾ ಚಂಡಾಲ ಪರಿಯಂತಾಯ್ತು ಸತ್ಕಾರ
ಧರಣಿಪಾಲಕರಿದೆ ಚತುಸ್ಸಾ
ಗರದ ತಡಿ ಪರಿಯಂತ ವಿಶ್ವಂ
ಭರೆಯ ಮಾನ್ಯರ ಮನ್ನಿಸೆಂದನು ಭೂಪತಿಗೆ ಭೀಷ್ಮ ೪೫

ಸ್ನಾತಕ ಪ್ರಿಯ ಋತ್ವಿಗಾಚಾ
ರ್ಯಾತಿಶಯ ಗುರು ನೃಪರು ಸಹಿತೀ
ಭೂತಳದೊಳಿಂತಾರು ಮಾನಿಸರರ್ಘ್ಯಯೋಗ್ಯರಲೆ
ಪ್ರೀತಿಯಲಿ ನೀನರ್ಘ್ಯವನು ವಿ
ಖ್ಯಾತರಿಗೆ ಮಾಡೆನಲು ಮನ್ನಣೆ
ಯಾತನಾರೆನೆ ವೀರನಾರಾಯಣನ ತೋರಿಸಿದ ೪೬