ಒಂಬತ್ತನೆಯ ಸಂಧಿ

ಸೂ.ದೇವ ದೇವನನುಪನಿಷತ್ಕಾಂ
ತಾವಳಿಯ ಕಮನೀಯನನು ರಾ
ಜೀವಪೀಠನ ಪಿತನನಭಿವರ್ಣಿಸಿದನಾ ಭೀಷ್ಮ

ಕೇಳು ಜನಮೇಜಯ ಧರಿತ್ರೀ
ಪಾಲ ವಿರಚಿತ ಪದಯುಗಪ್ರ
ಕ್ಷಾಳನಾಚಮನೀಯ ತತ್ಪರಿಶುದ್ಧ ಭಾವದಲಿ
ಆ ಲಲಿತ ತಲ್ಪದ ಯಶೋದಾ
ಬಾಲಕಂಗಭಿನಮಿಸಿ ನಿಮಿಷ ನಿ
ಮೀಲಿತಾಕ್ಷನು ಕಂದೆರೆದು ಮುನಿಜನಕೆ ಕೈ ಮುಗಿದು ೧

ವರ ಋಷಿಗಳಾಜ್ಞೆಯಲಿ ವಿಶ್ವಂ
ಭರನ ವಿಷಯೀಕರಿಸಿ ರಾಜಾ
ಧ್ವರ ಸಮರ್ಥನ ಭವ ವಿನಾಶನ ಸುಪ್ರಯೋಜಕನ
ಅರಿವ ತೆರದಿಂದೆನ್ನ ಮತಿ ಗೋ
ಚರಿಸಿದುದ ಹೇಳುವೆನು ಕೃಷ್ಣನ
ಪರಮ ಲೀಲಾ ಲಲಿತ ಚರಿತವನೆಂದನಾ ಭೀಷ್ಮ ೨

ಘನರಜೋಗುಣದಲ್ಲಿ ಚತುರಾ
ನನ ತಮೋ ಗುಣದಲ್ಲಿ ಶಂಕರ
ನೆನಿಸಿ ಸತ್ವಗುಣಾನುಗತಿಯಲಿ ವಿಷ್ಣುವೆಂದೆನಿಸಿ
ಘನ ಜಗನ್ಮಯನಾಗಿ ಸರ್ವಾ
ತ್ಮನು ಮಹೇಶ್ವರನೆನಿಪನೀತನ
ನೆನಹನೀತನ ನಿಜವನರಿವ ಮಹಾತ್ಮರಾರೆಂದ ೩

ಈತನವ್ಯಕ್ತನು ವಿಚಾರಿಸ
ಲೀತನಮಲವ್ಯಕ್ತಲಿಂಗನ
ಜಾತನವ್ಯಯನಪ್ರಮೇಯನಗಮ್ಯನದ್ವಿತಯ
ಈತ ಚೈತನ್ಯಾತ್ಮ ನಿರ್ಗುಣ
ನೀತ ಗುಣಸಂಯೋಗಿ ಸರ್ವಗ
ನೀತ ಚಿನ್ಮಯನೀತನಾ ಹರಿಯೆಂದನಾ ಭೀಷ್ಮ ೪

ಜಲನಿಧಿಯ ಬುದ್ಬುದ ತರಂಗಾ
ವಳಿಗಳಾ ಜಲಧಿಯಲಿ ತೋರುವ
ವಳಿವವೀ ವೈಕುಂಠ ವಿಮಲಜ್ಞಾನ ಜಲಧಿಯಲಿ
ಹೊಳೆವುದಳಿವುದು ವಿಶ್ವವೀತನ
ಸುಳಿವು ತೋರುವದಿಲ್ಲ ಮಾಯಾ
ಲಲನೆಯಿಕ್ಕಿದ ಮದ್ದು ಜೀವರಿಗೆಂದನಾ ಭೀಷ್ಮ ೫

ಭೂತ ಜನನಸ್ಥಿತಿಗೆ ಕಾರಣ
ನೀತನೀತಂಗಿಲ್ಲ ಕಾರಣ
ನೀತ ಜಾಗ್ರತ್ ಸ್ವಪ್ನ ಸುಪ್ತಿಗಳೆಂಬವಸ್ಥೆಗಳ
ಆ ತುರಿಯ ನಾತುರಿಯ ತುರಿಯಾ
ತೀತ ಲಕ್ಷಣ ನಿತ್ಯನಿರ್ಮಳ
ನೀತನಮಳವ್ಯಕ್ತಿ ಚಿನ್ಮಯನೆಂದನಾ ಭೀಷ್ಮ ೬

ಭ್ರಾಮಕದೊಳೀ ವಿಷಯ ಸೌಖ್ಯದ
ರಾಮಣೀಯಕದೊಳಗೆ ಮುಳುಗಿ ನಿ
ರಾಮಯನು ಪರತತ್ವಮಯನಚ್ಯುತನು ತಾನಾದ
ಈ ಮುಕುಂದನ ಮರೆದು ಕರ್ಮವಿ
ರಾಮದಲಿ ಕುದಿದವರು ಮಾಯಾ
ಕಾಮಿನಿಯ ಕೈ ಮಸಕದಲಿ ಮರುಳಾಗದಿರರೆಂದ ೭

ಇರದೆ ತಿಲದಲಿ ತೈಲ ಕಾಷ್ಠದೊ
ಳೆರವ ತಹರೇ ಹುತವಹನನೇ
ನರಿಯಬಾರದೆ ವಿಷ್ಣು ಚೈತನ್ಯಾತ್ಮನೆಂಬುದನು
ಹೊರಗೊಳಗೆ ಸಂಸ್ಥೂಲ ಸೂಕ್ಷ್ಮೋ
ತ್ಕರದೊಳಗೆ ಹರಿಯುಳಿಯೆ ವಿಶ್ವವ
ಹೊರೆವ ಹೊಂದಿಪರುಂಟೆ ಹೊರಬಿಗರೆಂದನಾ ಭೀಷ್ಮ ೮

ಹೂಹೆಗಳು ಹೊಯ್ದಾಡವೇ ನಿ
ರ್ವಾಹ ಸೂತ್ರದ ಕುಣಿಕೆಗಾರನ
ಗಾಹಿನಲಿ ತಜ್ಜಗದಜೀವದ ಸುಕೃತ ದುಷ್ಕೃತವ
ಓಹರಿಕೆಯಲಿ ತಂದು ಭವದಲಿ
ಸೋಹಿಸುಳಿಸುವನೀ ಚರಾಚರ
ಜೋಹವಿದು ನಿಜಲೀಲೆಯೀ ಹರಿಗೆಂದನಾ ಭೀಷ್ಮ ೯

ಈತನಚ್ಯುತನಲ್ಲೆನಿಸಿ ವಿಪ
ರೀತ ಮಿಥ್ಯಾಜ್ಞಾನ ತೋರಿದ
ಡೀತನಲಿ ತಪ್ಪೇನು ನಿಜ ಪರಮಾತ್ಮನೆನಿಸಿದರೆ
ಭಿತನೊಬ್ಬನು ಕನಸಿನಲಿ ತ
ನ್ನಾ ತಲೆಯ ತಾನರಿದು ಪಿಡಿದುದ
ನೇತರಿಂದಲಿ ಕಂಡನೈ ಶಿಶುಪಾಲ ಕೇಳೆಂದ ೧೦

ಭ್ರಮೆಯ ಭುಜಗನೆ ರಜ್ಜುವೊ ಜಂ
ಗಮವೊ ಕಲ್ಪಿತ ಪುರುಷನಾತ್ಮನೊ
ವಿಮಲ ಸಂವಿದ್ರೂಪನಾತ್ಮನೊ ಜೀವ ಪರಮನಲಿ
ಕಮಲನಾಭನೆ ನಿಜವೊ ವಿಶ್ವ
ಕ್ರಮವೆ ನಿಜವೋ ಚೈದ್ಯ ಭೂಪತಿ
ಕುಮತಿ ಕಪಿಗೇಕಮಲ ಮಾಣಿಕವೆಂದನಾ ಭೀಷ್ಮ ೧೧

ತೋರುವೀ ಮಹದಾದಿ ಭೂತದೊ
ಳೋರು ಗುಡಿಸದೆ ನಿಂದ ಮುವ್ವ
ತ್ತಾರು ತತ್ವದೊಳೀತನೇ ಮಣಿಗಣದ ಗುಣದಂತೆ
ತೋರುವೀ ತೋರಿಕೆಯ ತುಷವನು
ತೂರಿದರೆ ಮೇಣ್ ವಿಶ್ವಮುಖದಲಿ
ತೋರಿ ತೋರದೆ ಮೆರೆವನೀ ಹರಿಯೆಂದನಾ ಭೀಷ್ಮ ೧೨

ಸ್ವೇದಜಾಂಡೋದ್ಭಿಜ ಜರಾಯುಜ
ಭೇದವಾದ ಚತುರ್ವಿಧದ ಭೂ
ತೋದರನ ತದ್ಭೂತಮಯ ತದ್ಭೂತ ಭಾವನನ
ವಾದಗೊಳ್ಳದ ಬಹಳ ವಸ್ತುವ
ನೀ ದುರಾತ್ಮಕನೆತ್ತ ಬಲ್ಲನು
ಬೀದಿಯಲಿ ಬಿದ್ದವನು ಬೊಮ್ಮವಿದೆಂದನಾ ಭೀಷ್ಮ ೧೩

ನೆಳಲು ಜಲದಲಿ ನಡುಗಲಿನಮಂ
ಡಲಕೆ ಕಂಪದೆ ಧೂಮಶಿಖಿ ಕು
ಪ್ಪಳಿಸಿದರೆ ಕಂದುವದೆ ನಭ ಕೆಂಧೂಳಿಯೊಡೆ ಮುರಿದು
ಸುಳಿದರನಿಲನ ತೊಳೆವರೇ ನರ
ರೊಳಗೆ ನರರೂಪದಲಿ ಜನಿಸಿದ
ರೊಳಗು ಡಿಳ್ಳವೆ ಪರಮ ಸುಖನಿಧಿಗೆಂದನಾ ಭೀಷ್ಮ ೧೪

ಗುಣಮಯದ ಗರುವಾಯಿಯಲಿ ಝೇ
ವಣಿಗೆಗೊಂಬನು ಭೂತದಿಂದ್ರಿಯ
ಗಣದೊಡನೆ ನಿಜ ಪೌರುಷದಲೊದಗಿದ ಪವಾಡಿಗಳ
ಗುಣವ ಝಾಡಿಸಿದರೆ ಸಮಷ್ಟಿಯ
ಹಣಿತದಲಿ ಮುರಿದಿದಿರನಗಲಕೆ
ಕುಣಿವ ಚೌಪಟ ಬೊಮ್ಮ ಗಜವಿದನರಿವರಾರೆಂದ ೧೫

ಕೊಲೆಯ ಕವತೆಯ ಕನಸಿನಲಿ ಕಳ
ವಳಿಸಿದರೆ ದಿಟವೇ ಮನೋರಥ
ಫಲವನನುಭವಿಸಿದರೆಯನುಭವಸಿದ್ಧವೇ ತನಗೆ
ಹೊಳೆವ ಜಗದಲಿ ಹೊಳೆದು ತನ್ನೊಳ
ಗಳಿದು ತಾನಾಗುಳಿದು ಬೊಮ್ಮಕೆ
ಹಳಿವು ಹೊರುವುದೆ ನಿತ್ಯಶುದ್ಧನೊಳೆಂದನಾ ಭೀಷ್ಮ ೧೬

ನೋಟ ಸುತ್ತಲು ಬೇಹುದೇ ಹರಿ
ದಾಟವಗಲಕೆ ಬಳಕೆಯಲಿ ಮಾ
ತಾಟ ಸುಳಿವಿನೊಳಗ್ಗಳದ ಹಿಡಿಬಂಧಿ ಹರಹಿನಲಿ
ಬೇಟದಲಿ ಮೂವಣ್ಣದಾಬೆಯ
ಕೂಟದಲಿ ಕುರುಹಾಗಿ ಮಿಗೆ ನಿ
ರ್ಲೋಟಿಸುವ ನಿಜ ದಿಟ್ಟ ಬೊಮ್ಮವಿದೆಂದನಾ ಭೀಷ್ಮ ೧೭

ಭೂತ ಭವ್ಯ ಭವತ್ಪ್ರಧಾನ
ಖ್ಯಾತ ತತ್ವಪ್ರಕೃತಿ ಪೂರುಷ
ನೀತ ಸಚ್ಚಿನ್ಮಾತ್ರನೀತನು ಪರಶಿವಾತ್ಮಕನು
ಸೋತ ನುಡಿ ಮನದೊಡನೆ ಮರಳಿದ
ಡಾತ ಸತ್ಯಜ್ಞಾನಮಯ ನಿ
ರ್ಧೂತ ಮಾಯಾತೀತನೀ ಹರಿಯೆಂದನಾ ಭೀಷ್ಮ ೧೮

ಯಜ್ಞದಧಿಪತಿಯೀತನೀತನು
ಯಜ್ಞಪುರುಷನು ಸ್ರುಕ್‌ಸ್ರುವಾದೀ
ಯಜ್ಞಸಾಧನನೀತನೀತನು ಮಂತ್ರಕಾಲಾತ್ಮ
ಯಜ್ಞವೀತನು ಕರ‍್ಮವೀತನು
ಯಜ್ಞದಲಿ ಯಜಮಾನನೀತನು
ಯಜ್ಞಫಲವೀ ದೇವಕೀ ಸುತನೆಂದನಾ ಭೀಷ್ಮ ೧೯

ದೆಸೆ ಪರಿಚ್ಛೇದಿಸದ ನುಡಿ ಹವ
ಣಿಸದ ಕಲ್ಪ ಸಹಸ್ರಕೋಟಿಯೊ
ಳಸಮಸೆಯ ಮಾಡದ ಮಹತ್ವದೊಳುರು ಮಹತ್ವದಲಿ
ಎಸೆವನಣುವಿಂಗಣುವೆನಿಸಿ ನಿ
ರ್ಮಿಸಿ ವಿಭಾಡಿಸಿ ಬರವಳಿದು ಹೆ
ಚ್ಚಿಸಿ ಮುರಿದನೀ ಜಗವನೀ ಹರಿಯೆಂದನಾ ಭೀಷ್ಮ ೨೦

ಒಂದೆನಿಸಿ ತೋರುವನು ಎರಡರೊ
ಳೊಂದಿ ಮರೆವನು ಮೂರು ನೆಲೆಯಲಿ
ನಿಂದು ನಾಲ್ಕನು ಬಳಸಿ ವಿಭುವಾಗೈದು ಠಾಣದಲಿ
ಹಿಂದೆ ಮುಂದೆಡಬಲದ ಬಹು ವಿಧ
ದಿಂದ ಮಾಯಾಗುಪ್ತನಾಗಿ ಮು
ಕುಂದ ತೋರುವನೀತನಂತೆಯನರಿವರಾರೆಂದ ೨೧

ದ್ವಿಜರು ಮುಖದಲಿ ಭೂಪರೀತನ
ಭುಜದಲಾದರು ನಿಖಿಳ ವೈಶ್ಯ
ವ್ರಜ ಘನೋರುಗಳಿಂದ ಶೂದ್ರರು ಪಾದಪದ್ಮದಲಿ
ದ್ವಿಜಪತಿಸ್ಸ್ವಾಂತದಲಿ ವರವಾ
ರಿಜಸಖನು ಕಣ್ಣಿನಲಿ ವದನಾಂ
ಬುಜದಲಿಂದ್ರಾದಿಗಳು ಜನಿಸಿದರೆಂದನಾ ಭೀಷ್ಮ ೨೨

ಗಗನವೀತನನಾಭಿ ದಶದಿ
ಕ್ಕುಗಳು ಕಿವಿ ಫಣಿಲೋಕ ವಿಮಳಾಂ
ಘ್ರಿಗಳು ಧ್ರುವನಿಂಮೇಲು ಭಾಗ ಮುರಾಂತಕನ ಮುಕುಟ
ಗಗನ ಮಣಿ ಶಂಕರ ವಿರಿಂಚಾ
ದಿಗಳು ದೇವನ ರೋಮ ಕೂಪದೊ
ಳಗಣಿತಾಮರ ನಿಕರವಿಹುದಿದನರಿವರಾರೆಂದ ೨೩

ಪ್ರಳಯದಲಿ ಧರೆ ಕರಗುವುದು ಜಲ
ದೊಳಗೆ ತಜ್ಜಲವಡಗುವುದು ಶಿಖಿ
ಯೊಳಗೆ ತತ್ಪಾವಕನು ಪವನನೊಳಾತನಭ್ರದಲಿ
ಬಳಿಕ ಹಂಸತ್ವದಲಿ ಗಗನವೆ
ನಿಲುಗು ಹಮ್ಮು ಮಹತ್ವದಲಿ ಮಹ
ದಳಿವು ಮಾಯೆಯೊಳಾಕೆಯಡಗುವಳೀತನಂಘ್ರಿಯಲಿ ೨೪

ಧರಣಿ ತಾನೈವತ್ತು ಕೋಟಿಯ
ಹರಹು ಭೂಮಿಗೆ ಹತ್ತು ಮಡಿ ಖ
ರ್ಪರ ಕಟಾಹವದಕ್ಕೆ ದಶಗುಣ ದಶಗುಣೋತ್ತರದ
ಪರಿವಿಡಿಯಲುದಕಾಗ್ನಿ ರವಿ ಪು
ಷ್ಕರದ ಹಮ್ಮು ಮಹತ್ವ ಸಪ್ತಾ
ವರಣವೀ ಬ್ರಹ್ಮಾಂಡವೀತನ ರೋಮ ರೋಮದಲಿ ೨೫

ದೇವರಂಗೋಪಾಂಗದಲಿ ವೇ
ದಾವಳಿಗಳುಚ್ಛ್ವಾಸದಲಿ ತೀ
ರ್ಥಾವಳಿಗಳಂಘ್ರಿದ್ವಯಾಂಬುಜ ಮಾಕರಂದದಲಿ
ಪಾವನಕೆ ಪಾವನನು ಜೀವರ
ಜೀವನನು ಮೃತ್ಯುವಿಗೆ ಮೃತ್ಯುವಿ
ದಾವ ಲೆಕ್ಕ ದೊಳೀತನಹನೆಂದರಿವರಾರೆಂದ ೨೬

ವಿಶ್ವಶಿಲ್ಪದ ಕುಶಲಹಸ್ತನು
ವಿಶ್ವರಕ್ಷೆಯ ಮಂತ್ರವಾದಿಯು
ವಿಶ್ವ ಸಮಿಧೆಗಳಗ್ನಿ ಕಾರ್ಯದ ಬೊಮ್ಮಚಾರಿ ವಟು
ವಿಶ್ವನಾಟಕ ಸೂತ್ರಧಾರನು
ವಿಶ್ವ ವಿಸ್ಮಯದೈಂದ್ರಜಾಲಕ
ವಿಶ್ವದಂತಸ್ಸ್ಯೂತ ಚೇತನನೀತ ನೋಡೆಂದ ೨೭

ಇರಲಿರಲು ಕಲ್ಪಾವಸಾನಕೆ
ಬಿರಿದುದೀ ಬ್ರಹ್ಮಾಂಡ ಬಹಿರಾ
ವರಣ ಜಲವೀ ಜಲದೊಳೊಂದಾಯ್ತೇಕ ರೂಪಾಗಿ
ಹರಿವಿನೋದದಲೊಬ್ಬನೇ ಸಂ
ಚರಿಸುತಿದ್ದನು ಬಳಿಕ ಕಾಲಾಂ
ತರದೊಳಗೆ ಮಧು ಕೈಟಭರು ಜನಿಸಿದರು ಕರ್ಣದಲಿ ೨೮

ಲೀಲೆಯಲಿ ಬಳಿಕವದಿರೊಡನೆ ವಿ
ತಾಳಿಸಿತು ಮನ ಕಾದಿದರು ಬಲು
ಕಾಳಗವನವರಿತ್ತ ವರದಲಿ ಹಿಡಿದು ದಾನವರ
ಸೀಳಿ ಬಿಸುಟನು ಖಳರ ಮೇದ
ಸ್ಸಾಳಿ ಮುಳುಗಿತು ಜಲದೊಳದರಿಂ
ಮೇಲುವೆಸರಾಯ್ತಿಳೆಗೆ ಮೇದಿನಿಯೆಂಬ ನಾಮದಲಿ ೨೯

ಆ ಮಧುವನಾ ಕೈಟಭನ ಮುರಿ
ದೀ ಮಹಾತ್ಮಕನೊಡನೆ ವಾದಿಸು
ವೀ ಮರುಳನೇನೆಂಬೆನೈ ಶಿಶುಪಾಲ ಬಾಲಕನ
ಕಾಮರಿಪು ಕಲ್ಪಾಂತವಹ್ನಿ
ವ್ಯೋಮರೂಪನುದಾರ ಸಗುಣ ಸ
ನಾಮ ಚಿನ್ಮಯನೀತನೀತನನರಿವರಾರೆಂದ ೩೦