ಅಡರಿತೀ ಬಲವಿದರ ಬೊಬ್ಬೆಯ
ಗಡಬಡೆಗೆ ಪದಘಟ್ಟಣೆಗೆ ಹುಡಿ
ಹುಡಿಯಲಾ ಗಿರಿಕೋಟೆ ಕೋಳಾಹಳದ ಕೊಬ್ಬಿನಲಿ
ನಡೆದು ಬಿಟ್ಟುದು ಗಿರಿಯ ತುದಿಯಲಿ
ತುಡುಕಿದುದು ನಾನಾ ದಿಗಂತವ
ತಡೆಯದದುಭುತವಾದ್ಯ ಗಜಹಯ ರಥದ ನಿರ್ಘೋಷ ೩೪

ಹೇಮಕೂಟದ ಗಿರಿಯ ಗಂಧ
ರ್ವಾಮರರ ಝೋಂಪಿಸಿದನವರು
ದ್ದಾಮ ವಸ್ತುವ ಕೊಂಡನಿಳಿದನು ಬಳಿಕ ಪರ್ವತವ
ಆ ಮಹಾ ಹರಿವರುಷದಲ್ಲಿಯ
ಸೀಮೆಯೋಜನ ನವ ಸಹಸ್ರ ವಿ
ರಾಮವದರೊಳಗೆಲ್ಲ ವಿವರಿಸಲರಿಯೆ ನಾನೆಂದ ೩೫

ಉತ್ತರೋತ್ತರ ದೇವ ಭೂಮಿಗ
ಳೆತ್ತಣವರೀ ದಳನಿಚಯ ತಾ
ನೆತ್ತ ಭೂರಿದ್ವನಿಯನೀ ಗಜಬಜವನೀ ಜನವ
ಎತ್ತಲೆಂದರಿಯರು ವಿನೋದಕೆ
ತೆತ್ತರಲ್ಲಿಯ ಪಕ್ಷಿಮೃಗ ಹಯ
ವುತ್ತಮಾಂಗನೆಯರನು ಮನ್ನಿಸಿ ಕಂಡು ಫಲುಗುಣಗೆ ೩೬

ಎರಡು ಕಡೆಯಂಬುಧಿಯ ಪಾರ್ಶ್ವದ
ದುರುಳರನು ಧಟ್ಟಿಸಿ ತದೀಯರು
ವೆರಸಿ ಬಡಗಲು ನಡೆದುದಲ್ಲಿಯ ನಿಷಧ ಪರ್ವತಕೆ
ಎರಡು ಸಾವಿರ ಯೋಜನದ ತುದಿ
ವರೆಗೆ ಹತ್ತಿತು ಬಿಟ್ಟಿತಾ ಗಿರಿ
ಬಿರಿಯೆ ಬಿರು ಸೂಳೈಸಿದವು ನಿಸ್ಸಾಳ ಕೋಟಿಗಳು ೩೭

ಮೇಲೆ ನಿಷಧಾಚಲದ ಸುತ್ತಲು
ಧಾಳಿ ಹರಿದುದು ದೆಸೆದೆಸೆಯ ದೈ
ತ್ಯಾಳಿ ಹೆಚ್ಚಿದ ದುಷ್ಟದಾನವ ಮಂಡಲೇಶ್ವರರ
ಶೈಲ ಶಿಖರದೊಳುಳ್ಳ ದೊರೆಗಳ
ತಾಳು ಬಾಗಿಲ ಕುತ್ತರಲಿ ಕಾ
ಲಾಳು ಹೊಕ್ಕುದು ಹೊಯ್ದು ಕಟ್ಟಿತು ಕೂಡೆ ಸೂರೆಗಳ ೩೮

ಗಿರಿಯ ಶಿಖರದ ಮೇಲ್ಕಡೆಯನಾ
ಚರಿಸಿ ನಿಷಧಾಚಲವನಿಳಿದುದು
ನರನ ಪಾಳೆಯ ಬಿಟ್ಟುದಾಗಲಿಳಾ ವ್ರತದ ಮೇಲೆ
ಅರಸ ಕೇಳೊಂಬತ್ತು ಸಾವಿರ
ಪರಿಗಣಿತ ಯೋಜನದ ನೆಲ ಸುರ
ಗಿರಿಯ ಸುತ್ತಣ ದೇಶವತಿ ರಮಣೀಯ ತರವೆಂದ ೩೯

ಚೂಣಿಗಾನುವರಿಲ್ಲ ಪಾರ್ಥನ
ಬಾಣಕಿದಿರಾರುಂಟು ವಾದ್ಯ
ಶ್ರೇಣಿ ಚಾತುರ್ಬಲದ ಘಲ್ಲಣೆಗಿಲ್ಲ ಗರ್ವಿತರು
ಹೂಣೆ ಹೊಕ್ಕನು ಕನಕಶೈಲ
ದ್ರೋಣಿಗಳ ದುರ್ಬಲ ಸುರೌಘವ
ನಾಣೆಗಂಜಿಸಿ ಕಳೆದುಕೊಂಡನು ಸಕಲವಸ್ತುಗಳ ೪೦

ಹರಿದು ಹತ್ತಿತು ಗಂಧಮಾದನ
ಗಿರಿಯ ಸುತ್ತಣ ಯಕ್ಷ ವಿದ್ಯಾ
ಧರರನಂಜಿಸಿ ಕೊಂಡನಲ್ಲಿಯ ಸಾರ ವಸ್ತುಗಳ
ಗಿರಿಯನಿಳಿದರು ಜಂಬು ನೇರಿಲ
ಮರನ ಕಂಡರು ಗಗನಚುಂಬಿತ
ವೆರಡು ಸಾವಿರ ಯೋಜನಾಂತದೊಳತಿ ವಿಳಾಸದಲಿ ೪೧

ಅದರ ಫಲ ಹೇರಾನೆಗಳ ತೋ
ರದಲಿಹವು ಗಿರಿಸಾರ ಶಿಲೆಗಳ
ಹೊದರಿನಲಿ ಬಿದ್ದೊಡೆದು ಹೊಳೆಯಾದುದು ಮಹಾರಸದ
ಅದು ಸುಧಾಮಯವಾಯ್ತು ಜಂಬೂ
ನದಿ ಜಲಸ್ಪರ್ಶದಲಿ ಜಾಂಬೂ
ನದ ಸುವರ್ಣವೆಯಾದುದಾನದಿಯೆರಡು ತಡಿವಿಡಿದು ೪೨

ಆ ರಸೋದಕ ಪಾನವೇ ಸಂ
ಸಾರ ಸೌಖ್ಯದ ಸಿದ್ಧಿಯಿತರಾ
ಹಾರವಿಂಧನ ತಂಡುಲಾಗ್ನಿಕ್ರಮ ವಿಧಾನವದು
ನಾರಿಯರು ಸಹಿತಲ್ಲಿ ಸಿದ್ಧರು
ಚಾರಣರು ರಮಣೀಯ ತೀರ ವಿ
ಹಾರಿಗಳು ಬಹುರತ್ನದಿಂ ಮನ್ನಿಸಿದರರ್ಜುನನ ೪೩

ಕೇಳಿ ಸೊಗಸಿದ ವಸ್ತುವಿಗೆ ಕ
ಣ್ಣಾಲಿ ಬಿದ್ದಣವಾಯ್ತಲಾ ಸುರ
ಪಾಲ ಪದವಿದರೊರೆಗೆ ಬಹುದೇ ತೀರವಾಸಿಗಳ
ಧಾಳಿ ಧಟ್ಟಣೆಗಳನು ಮಾಣಿಸಿ
ಪಾಳೆಯವನು ಪವನ ಸರೋವರ
ವೇಲೆಯಲಿ ಬಿಡಿಸಿದನು ಜಂಬೂನದಿಯ ತೀರದಲಿ ೪೪

ಲಲಿತ ದಿವ್ಯಾಭರಣ ರತ್ನಾ
ವಳಿಯನನುಕರಿಸಿದನು ಪಾಳೆಯ
ಸುಳಿದುದಮರಾಚಲದ ಕೇಸರ ಶಿಖರಿಗಳ ಕಳೆದು
ಹೊಳೆ ಹೊಳೆವ ಮೇರುವಿನ ಸುತ್ತಣ
ವಳಯದರ್ಧವನಾಕರಿಸಿ ಕೈ
ವಳಿಸಿ ಬಿಟ್ಟನು ಹೊಕ್ಕಿಳಾವೃತವರುಷ ಸೀಮೆಯಲಿ ೪೫

ಸೇನೆ ಪಡುವಲು ತಿರುಗಿ ಸುತ್ತಣ
ವಾನುಪೂರ್ವಿಯ ಗಂಧಮಾದನ
ಸಾನುವನು ವೆಂಠಣಿಸಿಯಡರಿತು ಚೂಣಿಶೃಂಗದಲಿ
ಆ ನಗೇಂದ್ರನನಿಳಿದು ಪಡುವಣ
ಕಾನನಂಗಳ ಕಳೆದು ಬಿಟ್ಟುದು ಸೇನೆ ಬಳಸಿನಲಿ ೪೬

ಅಲ್ಲಿ ಸಾಗರ ತೀರ ಪರಿಯಂ
ತೆಲ್ಲಿ ಗಜಹಯವೆಲ್ಲಿ ಸುದತಿಯ
ರೆಲ್ಲಿ ಮಣಿಗಣವೆಲ್ಲಿ ಬಹುಧನವೆಲ್ಲಿ ರಮಣೀಯ
ಅಲ್ಲಿಗಲ್ಲಿಗೆ ನಡೆದು ಸಾಧಿಸಿ
ಕೆಲ್ಲೆ ಕುಹರದ ಕೋಣೆ ಬಾಗುಗ
ಳೆಲ್ಲವನು ಹೊಕ್ಕರಿಸಿ ತೆರಳಿಚಿದನು ಮಹಾಧನವ ೪೭

ಎಡಕಡೆಯಲೊಂಬತ್ತು ಸಾವಿರ
ನಡು ನೆಲನನಾಕರಿಸಿ ಮೂಡಣ
ಕಡೆಗೆ ತಿರುಗಿತು ಗಂಧಮಾದನ ಗಿರಿಯನೇರಿಳಿದು
ನಡೆದಿಳಾವೃತದೊಳಗೆ ಬಿಟ್ಟುದು
ಪಡೆ ಸುರಾದ್ರಿಯನುಳುಹಿ ಬಲದಲಿ
ನಡೆಯಲತಿ ದೂರದಲಿ ಕಂಡರು ಮಂದರಾಚಲವ ೪೮

ಇದುವೆ ಕಡೆಗೋಲಾಯ್ತು ಕಡೆವಂ
ದುದಧಿಯನು ತಾನಿದು ಮಹಾಗಿರಿ
ಯಿದರ ಬಿಂಕವ ನೋಡಬೇಕೆಂದರ್ಜುನನ ಸೇನೆ
ಒದರಿ ಹತ್ತಿತು ನಡುವಣರೆ ದು
ರ್ಗದಲಿ ಬೆಟ್ಟಂಗಳಲಿ ನೃಪರಿ
ದ್ದುದು ಮಹಾಹವವಾಯ್ತು ಪಾರ್ಥನ ಚೂಣಿಯವರೊಡನೆ ೪೯

ಇಳುಹಿದರು ಚೂಣಿಯನು ಮುಂದರೆ
ನೆಲೆಯ ಭಟರೌಕಿದರು ಭಾರಿಯ
ತಲೆವರಿಗೆಗಳಲೊತ್ತಿದರು ಹೊಗಿಸಿದರು ದುರ್ಗವನು
ಕಲುವಳೆಯ ಕೋಲಾಹಲಕ್ಕಿವ
ರಳುಕದಿರಿದರು ಸುರಗಿಯಲಿ ತೆನೆ
ವಳಿಯ ಹಿಡಿದರು ಹೊಯ್ದು ಕೇಶಾಕೇಶಿ ಯುದ್ಧದಲಿ ೫೦

ಶಕರು ಖದ್ಯೋತ ಪ್ರತಾಪರು
ವಿಕಳ ಚಿಂಘರು ದೀರ್ಘಮಯವೇ
ಣಿಕರು ಪಶುಪಾಲಕ ಪುಳಿಂದರು ಕಂಕಣಾಹ್ವಯರು
ಸಕಲ ದಸ್ಯುಗಳೈದೆ ಸೋತುದು
ವಿಕಳ ಬಲವೊಪ್ಪಿಸಿತು ಸರ್ವ
ಸ್ವಕವ ಸಂಧಾನದಲಿ ನೆಲೆಯಾಯ್ತಲ್ಲಿಯರ್ಜುನಗೆ ೫೧

ಶೋಧಿಸಿದನಾ ಗಿರಿಯನಾಚೆಯ
ಹಾದಿಯಲಿ ಹೊರವಂಟು ಬರೆ ಮರಿ
ಯಾದೆಗಿಕ್ಕಿದ ಬೆಟ್ಟವಿದ್ದುದು ಮಾಲ್ಯವಂತಗಿರಿ
ಭೇದಿಸಿದನದರೊಳಗು ಹೊರಗಿನ
ಲಾದ ವಸ್ತುವ ಕೊಂಡು ತಚ್ಛೈ
ಲೋದರವನೇರಿಳಿದು ಭದ್ರಾಶ್ವಕ್ಕೆ ನಡೆತಂದ ೫೨

ಅದು ಮಹಾ ರಮಣೀಯತರವಂ
ತದರೊಳಿದ್ದುದು ಶುದ್ಧಭೋಗಾ
ಸ್ಪದರು ಯಕ್ಷೋರಕ್ಷಗಂಧರ್ವಾಪ್ಸರೋ ನಿಕರ
ಕುದುರೆ ರಥ ಗಜ ಪತ್ತಿ ನಿರ್ಘೋ
ಷದಲಿ ಬೆಬ್ಬಳೆಯಾಯ್ತು ಬೇಳಂ
ಬದ ವಿಘಾತಿಗೆ ಸಿಲುಕಿ ತೆತ್ತುದು ಸಕಲ ವಸ್ತುಗಳ ೫೩

ದೊರಕಿತಲ್ಲಿಯಪೂರ್ವ ವಸ್ತೂ
ತ್ಕರ ಸಮುದ್ರದ್ವೀಪ ಪರಿಯಂ
ತರ ನಡೆದನೊಂಬತ್ತು ಸಾವಿರ ಯೋಜನಾಂತರವ
ತಿರುಗಿದನು ಭದ್ರಾಶ್ವಕವನಾ
ಕರಿಸಿ ಬಡಗಲು ನಡೆದರಲ್ಲಿಯ
ಗಿರಿಯ ಕಂಡರು ಹತ್ತಿದರು ಹರುಷದಲಿ ಬೊಬ್ಬಿಡುತ ೫೪

ನೀಲ ಗಿರಿಯಗ್ರದಲಿ ಬಿಟ್ಟುದು
ಪಾಳೆಯವು ಬೊಬ್ಬೆಯಲಿ ದಿಕ್ಕಿನ
ಮೂಲೆ ಬಿರಿದುದು ಜರಿದವದ್ರಿಗಳೇನನುಸುರುವೆನು
ಮೇಲು ದುರ್ಗದ ಸಂಧಿಗೊಂದಿಯೊ
ಳಾಳು ಹರಿದುದು ಸೂರೆಗೊಂಡು ವಿ
ಶಾಳ ವಸ್ತುವ ತಂದರಲ್ಲಿದ್ದ ರಸುಗಳ ಗೆಲಿದು ೫೫

ಎರಡು ಸಾವಿರದುದ್ದವದು ಮ
ತ್ತೆರಡು ಸಾವಿರದಗಲವದನಾ
ಕರಿಸಿ ರಮ್ಯಕ ಭೂಮಿಗಿಳಿದರು ಹೊಕ್ಕರಾ ನೆಲನ
ಅರಸ ಕೇಳಲ್ಲಲ್ಲಿ ಸುಮನೋ
ಹರದ ವಸ್ತುವ ಕೊಂಡು ನವ ಸಾ
ವಿರವನಗಲಕೆ ಸುತ್ತಿ ಬಂದರು ಗೆಲಿದು ಗರ್ವಿತರ ೫೬

ಅರಸ ಕೇಳಲ್ಲಿಂದ ಬಡಗಲು
ಹರಿದು ಬಿಟ್ಟರು ಹತ್ತಿದರು ಬೇ
ಸರದೆ ಕಲುದರಿಗಳಲಿ ಬಹಳ ಶ್ವೇತಪರ್ವತವ
ಗಿರಿಯ ತುದಿಗಳ ತೋಟದಲಿ ಗ
ಹ್ವರದ ಕೊಳ್ಳದ ಕೋಹಿನಲಿ ಹೊ
ಕ್ಕಿರಿದು ಶೋಧಿಸಿಕೊಂಡರಲ್ಲಿಯ ಸಾರವಸ್ತುಗಳ ೫೭

ಇಳಿದನಾ ಗಿರಿಯನು ಹಿರಣ್ಮಯ
ದೊಳಗೆ ಬಿಟ್ಟನು ಪಾಳೆಯವ ತ
ದ್ವಲಯ ಮಿಗಿಲೊಂಬತ್ತು ಸಾವಿರ ಯೋಜನಾಂತರವ
ಬಳಸಿ ಬಂದನು ವಿಮಲ ಸೌಧಾ
ವಳಿಯ ನೆಲೆಯುಪ್ಪರಿಗೆಗಳ ವರ
ಲಲನೆಯರು ಕಂಡೀತನನು ಹೊಗಳಿದರು ತಮತಮಗೆ ೫೮

ಈತ ಭಾರತ ವರುಷಪತಿಯನು
ಜಾತ ಗಡ ತತ್ಕರ್ಮ ಭೂಮಿಯ
ಲೀತನಧಿಪತಿ ಗೆಲಿದನಿತ್ತಲು ದೇವ ಭೂಮಿಪರ
ಈತ ಗೌರೀಸುತನವೋಲ್ ಪುರು
ಹೂತ ತನಯನವೋಲು ಭುವನ
ಖ್ಯಾತನೆಂದಾ ಸ್ತ್ರೀಕಟಕ ಕೊಂಡಾಡಿತರ್ಜುನನ ೫೯

ತನತನಗೆ ತರುಣಿಯರು ಹೂವಿನ
ತನಿವಳೆಯ ಕರೆದರು ಕನತ್ಕಾಂ
ಚನ ವಿಭೂಷಣ ರತ್ನಚಯ ಪೂರಿತದ ಪೆಟ್ಟಿಗೆಯ
ವನಿತೆಯರನಾ ದೇಶದಲಿ ಮೀ
ಟೆನಿಪರನು ಮೃಗಪಕ್ಷಿ ಕೃಷ್ಣಾ
ಜಿನವನಂತವನಿತ್ತು ಸತ್ಕರಿಸಿದರು ಫಲುಗುಣನ ೬೦

ಧಾರುಣೀಪತಿ ಕೇಳು ದಳ ನಡು
ದಾರಿ ಬಡಗಣ ಶೃಂಗಪರ್ವತ
ದೋರೆಯಲಿ ದೊರೆಗಳನು ಧಟ್ಟಿಸಿ ಸೆಳೆದು ಬಹುಧನವ
ಭಾರಣೆಯ ಮುಂಗುಡಿಯ ಕೊಳ್ಳೆಗ
ಳೋರಣಿಸಿ ತುದಿಗೇರಿ ಸಿದ್ಧರ
ಚಾರಣರ ವಿದ್ಯಾಧರರ ಮುತ್ತಿದರು ಮನ್ನಿಸದೆ ೬೧

ಅರಸು ಮೋಹರ ಹತ್ತಿತಾಗಿರಿ
ಎರಡು ಸಾವಿರದಗಲವದರಲಿ
ತುರುಗಿ ಬಿಟ್ಟಿತು ಸೇನೆ ಸೂಳೈಸಿದವು ನಿಸ್ಸಾಳ
ಬಿರಿದುದಾ ಗಿರಿ ಕೆಳಗಣುತ್ತರ
ಕುರುಗಳೆದೆ ಜರ್ಝರಿತವಾಯ್ತ
ಬ್ಬರಕೆ ಬಡಗಣ ಕಡಲು ಕದಡಿತು ತಳದ ತಾಯ್ಮಳಲ ೬೨

ನೆರೆದರಲ್ಲಿಯ ನೃಪರು ದೂತರ
ಹರಿಯ ಬಿಟ್ಟರು ಪಾರ್ಥನಿದ್ದೆಡೆ
ಗರಸ ಕೇಳವರುಗಳು ಬಂದರು ಕಂಡರರ್ಜುನನ
ಗಿರಿಯ ನಿಳಿಯದಿರಿತ್ತಲುತ್ತರ
ಕುರುಗಳಿಹ ಸಂಸ್ಥಾನವಿದು ಗೋ
ಚರಿಸಲರಿಯದು ನರರ ಕಾಲ್ದುಳಿಗೆಂದರವರಂದು ೬೩

ಅಲ್ಲದಾಕ್ರಮಿಸಿದರೆ ನಿನಗವ
ರಲ್ಲಿ ಕಾಣಿಕೆ ದೊರಕಲರಿಯದು
ಬಲ್ಲಿದವರುತ್ತರದ ಕುರುಗಳು ನಿನಗೆ ಬಾಂಧವರು
ಗೆಲ್ಲದಲಿ ಫಲವಿಲ್ಲ ಸಾಹಸ
ವಲ್ಲಿ ಮೆರೆಯದು ಮರ್ತ್ಯ ದೇಹದೊ
ಳಲ್ಲಿ ಸುಳಿವುದು ಭಾರವೆಂದರು ಚರರು ಫಲುಗುಣಗೆ ೬೪

ಮಾಣಲದು ನಮಗವರು ಬಂಧು
ಶ್ರೇಣಿಗಳು ಗಡ ಹೋಗಲದು ಕ
ಟ್ಟಾಣಿಯಾವುದು ನಿಮ್ಮ ದೇಶದೊಳ್ಳುಳ್ಳ ವಸ್ತುಗಳ
ವಾಣಿಯವ ಮಾಡದೆ ಸುಯಜ್ಞದ
ಕಾಣಿಕೆಯನೀವುದು ಯುಧಿಷ್ಠಿರ
ನಾಣೆ ನಿಮಗೆನೆ ತಂದು ಕೊಟ್ಟರು ಸಕಲ ವಸ್ತುಗಳ ೬೫

ತಿರುಗಿತಲ್ಲಿಂದಿತ್ತ ಪಾಳೆಯ
ಮುರಿದು ಬಿಟ್ಟು ಹಿರಣ್ಮಯವನಾ
ಕರಿಸಿ ರಮ್ಯಕದಿಂದಿಳಾವೃತದಿಂದ ದಕ್ಷಿಣಕೆ
ಭರದಿನೈದುತ ಹರಿವರುಷ ಕಿಂ
ಪುರುಷವನು ದಾಟುತ ಹಿಮಾನ್ವಿತ
ಗಿರಿಯನೇರಿದುದಿಳಿದು ಬಂದುದು ತೆಂಕ ಮುಖವಾಗಿ ೬೬

ಕಳುಹಿ ಕಳೆದನು ಹಿಂದೆ ಕೂಡಿದ
ಬಲವನವರವರೆಲ್ಲ ಯಾಗ
ಸ್ಥಳಕೆ ಬಹ ನೇಮದಲಿ ಹರಿದುದು ನಿಜಪುರಂಗಳಿಗೆ
ನೆಲನನಗಲದ ವಸ್ತುವಿದನೆಂ
ತಳವಡಿಸಿದನೊ ಶಿವಯೆನುತ ಸುರ
ರುಲಿಯೆ ಹೊಕ್ಕನು ಪಾರ್ಥನಿಂದ್ರಪ್ರಸ್ಥ ಪುರವರವ ೬೭