ಮೂರನೆಯ ಸಂಧಿ

ಸೂ. ಭೂಪತಿಯ ನೇಮದಲಿ ಜಂಬೂ
ದ್ವೀಪ ನವ ಖಂಡದಲಿ ಸಕಳಮ
ಹೀಪತಿಗಳನು ಗೆಲಿದು ಕಪ್ಪವ ತಂದನಾ ಪಾರ್ಥ

ಕೇಳು ಜನಮೇಜಯ ಧರಿತ್ರೀ
ಪಾಲ ಪಾಂಡವಪುರಿಗೆ ಲಕ್ಷ್ಮೀ
ಲೋಲ ಬಿಜಯಂಗೈದು ಭೀಮಾರ್ಜುನರ ಗಡಣದಲಿ
ಬಾಲೆಯರ ಕಡೆಗಣ್ಣ ಮಿಂಚಿನ
ಮಾಲೆಗಳ ಲಾಜಾಭಿವರುಷದ
ಲಾಲನೆಯ ರಚನೆಯಲಿ ಹೊಕ್ಕನು ರಾಜಮಂದಿರವ ೧

ಕಂಡು ಕೃಷ್ಣನನಿವರ ಕಾಣಿಸಿ
ಕೊಂಡನರಸು ಕ್ಷೇಮ ಕುಶಲವ
ಕಂಡು ಬೆಸಗೊಳಲೇಕೆ ಬಹು ಮಾತಿನಲಿ ಫಲವೇನು
ಕಂಡೆವೈ ನಿನ್ನಮಳ ಕರುಣಾ
ಖಂಡ ಜಲಧಿಯ ಭಕ್ತ ಜನಕಾ
ಖಂಡಲದ್ರುಮವೆಂದು ತಕ್ಕೈಸಿದನು ಹರಿಪದವ ೨

ನಡೆದ ಪರಿಯನು ರಿಪು ಪುರವನವ
ಗಡಿಸಿ ಹೊಕ್ಕಂದವನು ಮಗಧನ
ತೊಡಕಿ ತೋಟಿಯ ಮಾಡಿ ಭೀಮನ ಕಾದಿಸಿದ ಪರಿಯ
ಬಿಡದೆ ಹಗಲಿರುಳೊದಗಿ ವೈರಿಯ
ಕಡೆಯ ಕಾಣಿಸಿ ನೃಪರ ಸೆರೆಗಳ
ಬಿಡಿಸಿ ಬಂದಂದವನು ವಿಸ್ತರಿಸಿದನು ಮುರವೈರಿ ೩

ಎಲೆ ಮಹೀಪತಿ ನಿನ್ನ ಯಜ್ಜ
ಸ್ಥಲಕೆ ಬಾಧಕರಿಲ್ಲ ವನದಲಿ
ಪುಲಿಯಿರಲು ಗೋಧನ ಕುಲಕೆ ಯವಸಾಂಬು ಗೋಚರವೆ
ನೆಲನ ಗರುವರ ಗೊಂದಣವನಂ
ಡಲೆವನಖಿಳ ದ್ವೀಪಪತಿಗಳ
ನೆಳಲ ಸೈರಿಸನಳಿದನವನಿನ್ನೇನು ನಿನಗೆಂದ ೪

ರಚಿಸು ಯಜ್ಜಾರಂಭವನು ನೃಪ
ನಿಚಯವನು ದಾಯಾದ್ಯರನು ಬರಿ
ಸುಚಿತ ವಚನದಲೆಮ್ಮ ಕರೆಸಿದರಾ ಕ್ಷಣಕೆ ಬಹೆವು
ಸಚಿವರಾವೆಡೆ ಕಳುಹು ಬದರಿಯ
ರುಚಿರ ಋಷಿಗಳ ಕರೆಸು ನಿನ್ನಭಿ
ರುಚಿಗೆ ನಿಷ್ಪ್ರತ್ಯೂಹವೆಂದನು ದಾನವಧ್ವಂಸಿ ೫

ಎಂದು ಕಳುಹಿಸಿಕೊಂಡು ದೋರಕಿ
ಗಿಂದಿರಾಪತಿ ಮಾಗಧನ ರಥ
ದಿಂದ ಬಿಜಯಂಗೈದನಿನಿಬರು ಕಳುಹಿ ಮರಳಿದರು
ಬಂದ ವೇದವ್ಯಾಸ ಧೌಮ್ಯರ
ನಂದು ಕರೆಸಿ ಯುಧಿಷ್ಠಿರನು ನಿಜ
ಮಂದಿರದೊಳೊಪ್ಪಿದನು ಪರಿಮಿತ ಜನ ಸಮೂಹದಲಿ ೬

ಅಕಟ ನಾರದನೇಕೆ ಯಜ್ಜ
ಪ್ರಕಟವನು ಮಾಡಿದನು ನಮಗೀ
ಸಕಲ ಧರಣೀಕ್ಷತ್ರ ವರ್ಗದ ವಿಜಯ ಕಿರುಕುಳವೆ
ವಿಕಟ ಜಂಬೂದ್ವೀಪ ಪರಿಪಾ
ಲಕರು ನಮ್ಮಿನಿಬರಿಗೆ ಸದರವೆ
ಸುಕರವೇ ವರ ರಾಜಸೂಯವೆನುತ್ತ ಚಿಂತಿಸಿದ ೭

ಮಣಿವರಲ್ಲರಸುಗಳು ಮಾಡದೆ
ಮಣಿದೆವಾದರೆ ಕೀರ್ತಿಕಾಮಿನಿ
ಕುಣಿವಳೈ ತ್ರೈಜಗದ ಜಿಹ್ವಾರಂಗ ಮಧ್ಯದಲಿ
ಬಣಗುಗಳು ನಾವೆಂದು ನಾಕದ
ಗಣಿಕೆಯರು ನಗುವರು ಸುಯೋಧನ
ನಣಕವಾಡುವಡಾಯ್ತು ತೆರನೆಂದರಸ ಬಿಸುಸುಯ್ದ ೮

ಎನಲು ಧಿಮ್ಮನೆ ನಿಂದು ಭುಗಿಲೆಂ
ದನು ಕಿರೀಟಿ ವೃಥಾಭಿಯೋಗದ
ಮನಕತಕೆ ಮಾರಾಂಕವಾಯ್ತೇ ಹರ ಮಹಾದೇವ
ನಿನಗಕೀರ್ತಿ ವಧೂಟಿ ಕುಣಿವಳೆ
ಜನದ ಜಿಹ್ವಾ ರಂಗದಲಿ ಹಾ
ಯೆನುತ ತಲೆದೂಗಿದನು ಘನಶೌರ್ಯಾನುಭಾವದಲಿ ೯

ಮಣಿಯರೇ ಮನ್ನೆಯರು ನಾಕದ
ಗಣಿಕೆಯರು ನಗುವರೆ ಸುಯೋಧನ
ನಣಕವಾಡುವನೇ ಶಿವಾ ತಪ್ಪೇನು ತಪ್ಪೇನು
ಕಣಿಗಳಿವು ನಾಳಿನಲಿ ಕಬ್ಬಿನ
ಕಣಿಗಳೋ ಗಾಂಢೀವವಿದು ನಿ
ರ್ಗುಣವೊ ತಾನರ್ಜುನ ಮಹೀರುಹವೆಂದನಾ ಪಾರ್ಥ ೧೦

ಸಕಲ ಜಂಬೂದ್ವೀಪ ಪರಿಪಾ
ಲಕರ ಭಂಡಾರಾರ್ಥಕಿದೆ ಸು
ಪ್ರಕಟವೆಂದುಂಗುರವನಿತ್ತನು ನೃಪನ ಹಸ್ತದಲಿ
ಸುಕರ ದುಷ್ಕರವೆಂಬ ಚಿಂತಾ
ವಿಕಳತೆಗೆ ನೀ ಪಾತ್ರನೇ ಸಾ
ಧಕರನೇ ಸಂಹರಿಪೆ ತಾ ವೀಳೆಯವನೆನಗೆಂದ ೧೧

ಪೂತು ಫಲುಗುಣ ನಿನ್ನ ಕುಲಕಭಿ
ಜಾತ ಶೌರ್ಯಕೆ ಗರುವಿಕೆಗೆ ಸರಿ
ಮಾತನಾಡಿದೆ ಸಲುವುದೈ ನಿನಗೆನುತ ಕೊಂಡಾಡಿ
ಈತನುತ್ತರದೆಸೆಗೆ ಭೀಮನು
ಶಾತಮನ್ಯುವದೆಸೆಗೆ ಯಮಳರ
ಭೀತರಿದ್ದೆಸೆಗೆಂದು ವೇದವ್ಯಾಸ ನೇಮಿಸಿದ ೧೨

ನೆರಹಿ ಬಲವನು ನಾಲ್ಕು ದಿಕ್ಕಿಗೆ
ಪರುಠವಿಸಿದರು ಫಲುಗುಣನನು
ತ್ತರಕೆ ಮೂಡಲು ಪವನಸುತ ದಕ್ಷಿಣಕೆ ಸಹದೇವ
ವರುಣ ದಿಕ್ಕಿಗೆ ನಕುಲನೀನಾ
ಲ್ವರಿಗೆ ಕೊಟ್ಟನು ವೀಳೆಯವ ಹಿರಿ
ಯರಸಿ ತಂದಳು ತಳಿಗೆ ತಂಬುಲ ಮಂಗಳಾರತಿಯ ೧೩

ಪರಮ ಲಗ್ನದೊಳಿಂದು ಕೇಂದ್ರದೊ
ಳಿರಲು ಗುರು ಭಾರ್ಗವರು ಲಗ್ನದೊ
ಳಿರೆ ಶುಭಗ್ರಹದೃಷ್ಟಿ ಸಕಳೇಕಾದಶಸ್ಥಿತಿಯ
ಕರಣ ತಿಥಿ ನಕ್ಷತ್ರವಾರೋ
ತ್ಕರದಲಭಿಮತ ಸಿದ್ಧಿ ಯೋಗದೊ
ಳರಸನನುಜರು ದಿಗ್ವಿಜಯಕನುವಾದರೊಗ್ಗಿನಲಿ ೧೪

ಅರಸ ವೇದವ್ಯಾಸ ಧೌಮ್ಯಾ
ದ್ಯರಿಗೆ ಬಲವಂದೆರಗಿ ಕುಂತಿಯ
ಚರಣ ಧೂಳಿಯ ಕೊಂಡು ವಿಪ್ರವ್ರಜಕೆ ಕೈಮುಗಿದು
ಅರಸಿಯರು ದೂರ‍್ವಾಕ್ಷತೆಯ ದಧಿ
ವಿರಚಿತದ ಮಾಂಗಲ್ಯವನು ವಿ
ಸ್ತರಿಸೆ ಬಹುವಿಧ ವಾದ್ಯದಲಿ ಹೊರವಂಟರರಮನೆಯ ೧೫

ಅರಸ ಕೇಳೈ ಮೊದಲಲರ್ಜುನ
ಚರಿತವನು ವಿಸ್ತರದಲರುಪುವೆ
ನುರುಪರಾಕ್ರಮಿ ನಡೆದು ಬಿಟ್ಟನು ಸಾಲ್ವ ದೇಶದಲಿ
ಪುರಕೆ ದೂತರ ಕಳುಹಲವನಿವ
ರುರವಣಿಗೆ ಮನವಳುಕಿ ಕೊಟ್ಟನು
ತುರಗಗಜ ರಥಧನ ವಿಲಾಸಿನಿ ಜನವನುಚಿತದಲಿ ೧೬

ಅವನ ಕಾಣಿಸಿಕೊಂಡು ರಾಜ್ಯದೊ
ಳವನ ನಿಲಿಸಿ ತದೀಯ ಸೇನಾ
ನಿವಹ ಸಹಿತಲ್ಲಿಂದ ನಡೆದನು ಮುಂದೆ ವಹಿಲದಲಿ
ಅವನಿಪತಿ ಕಟದೇವನೆಂಬವ
ನವಗಡಿಸಿ ಸರ್ವಸ್ವವನು ಕೊಂ
ಡವನ ಬಲಸಹಿತಾ ದ್ಯುಮತ್ಸೇನಕನ ಝೋಂಪಿಸಿದ ೧೭

ಆತನನು ಗೆಲಿದನು ಸುನಾಭನ
ನೀತಿಗೆಡಿಸಿ ತದೀಯ ಸೇನಾ
ವ್ರಾತ ಸಹಿತಲ್ಲಿಂದ ಪ್ರತಿವಿಂಧ್ಯಕನನಪ್ಪಳಿಸಿ
ಆತನರ್ಥವಕೊಂಡು ತತ್ಪ್ರಾ
ಗ್ಜ್ಯೋತಿಷಕೆ ಧಾಳಿಟ್ಟನಲ್ಲಿ ಮ
ಹಾತಿಬಲನವನೊಡನೆ ಬಲುಹಾಯ್ತರ್ಜುನನ ಸಮರ ೧೮

ಜೀನಕರ ಬೋಟಕ ಕಿರಾತರ
ನೂನಬಲ ಸಹಿತೀ ಮಹೀಪತಿ
ಸೂನು ಕಾದಿದನೀತನಲಿ ಭಗದತ್ತನೆಂಬವನು
ಈ ನರನ ಶರಜಾಲವದು ಕ
ಲ್ಪಾನಲನ ಕಾಲಾಟವಿದರೊಡ
ನಾನಲಿಂದ್ರಾದ್ಯರಿಗೆ ಸದರವೆ ರಾಯ ಕೇಳೆಂದ ೧೯

ಮುರಿಯದಾ ಬಲವೀತನುರುಬೆಗೆ
ಹರಿಯದೀ ಬಲವುಭಯ ಬಲದಲಿ
ಕುರಿದರಿಯ ಕುಮ್ಮರಿಯ ಕಡಿತಕೆ ಕಾಣೆನವಧಿಗಳ
ಅರಿಯದೀತನ ದುರ್ಗವೀ ಬಲ
ದಿರಿವುಗಳ ಬೇಳಂಬವನು ಬೇ
ಸರದೆ ಕಾದಿದನೆಂಟು ದಿನ ಭಗದತ್ತ ನೀತನಲಿ ೨೦

ಆವನೈ ನೀನಧಿಕತರ ಸಂ
ಭಾವಿತನು ಹೇಳೆನೆ ಯುಧಿಷ್ಠಿರ
ದೇವನನುಜ ಕಣಾ ಧನಂಜಯನೆನಲು ಮಿಗೆ ಮೆಚ್ಚಿ
ನಾವು ನಿಮ್ಮಯ್ಯಂಗೆ ಸಖರಿಂ
ದಾವು ನಿನ್ನವರೇನು ಬೇಹುದು
ನೀವೆಮಗೆ ಕಡು ಮಾನ್ಯರೆಂದನು ಕಂಡನರ್ಜುನನ ೨೧

ಆದರೆಮಗೆಯು ದಿವಿಜಪತಿಯೋ
ಪಾದಿ ನೀವೆಮ್ಮಣ್ಣದೇವನ
ಮೇದಿನಿಯ ಸಾಮ್ರಾಜ್ಯಪದವಿಯ ರಾಜಸೂಯವನು
ಆದರಿಸಿ ಸಾಕೆನಲು ಗಜಹಯ
ವಾದಿಯಾದ ಸಮಸ್ತ ವಸ್ತು ವ
ನೈದೆ ಕೊಟ್ಟನು ಫಲುಗುಣಂಗೆ ಸುಮಿತ್ರಭಾವದಲಿ ೨೨

ಒಂದು ತಿಂಗಳು ಪಲವು ಮನ್ನಣೆ
ಯಿಂದ ಮನ್ನಿಸಿ ತನ್ನ ಸೇನಾ
ವೃಂದವನು ಹೇಳಿದನು ಬಳಿಯಲಿ ಕಳುಹಿದನು ನರನ
ಮುಂದೆ ನಡೆದನು ರಾಮಗಿರಿಯಲಿ
ನಿಂದು ಕಪ್ಪವಕೊಂಡು ನಡೆದನು
ಮುಂದಣೀಶಾನ್ಯದಲಿ ಹೊಕ್ಕನು ಭುವನಪರ್ವತವ ೨೩

ಆ ಗಿರೀಂದ್ರ ನಿವಾಸಿಗಳ ಸರಿ
ಭಾಗ ಧನವನು ಕೊಂಡು ಬಳಿಕ ಮ
ಹಾಗಜಾಶ್ವನ ಸೂರೆಗೊಂಡನು ಮುಂದೆ ದಂಡೆತ್ತಿ
ಆ ಗಯಾಳರ ಗಾವಿಲರ ನಿ
ರ್ಭಾಗಧೇಯರ ಮಾಡಿಯುತ್ತರ
ಭಾಗದಲಿ ತಿರುಗಿತ್ತು ಪಾಳೆಯವರಸ ಕೇಳೆಂದ ೨೪

ಗಿರಿಯ ತಪ್ಪಲ ವನಚರರ ಸಂ
ಹರಿಸಿ ಮುಂದೆ ಬೃಹಂತಕನ ಕಾ
ತರಿಸಿ ಕಾಣಿಸಕೊಂಡು ಸೇನಾಬಿಂದು ನಗರಿಯಲಿ
ಇರವ ಮಾಡಿ ಸುದಾಮ ದೈತ್ಯರ
ನುರೆ ವಿಭಾಡಿಸಿ ಪಾರ್ವತೇಯರ
ಪುರವ ಕೊಂಡು ವುಲೂಕರನು ಪೌರವರ ಭಂಗಿಸಿದ ೨೫

ಮುಂದೆ ದಸ್ಯುಗಳೇಳುವನು ಕ್ಷಣ
ದಿಂದ ಕಾಶ್ಮೀರಕರ ಸಾಧಿಸಿ
ಬಂದು ದಶಮಂಡಲದ ಲೋಹಿತರನು ವಿಭಾಡಿಸಿದ
ತಂದ ಕಪ್ಪದಲಾ ತ್ರಿಗರ್ತರ
ನಂದು ಹದುಳಿಸಿ ಗರುವಿತರನಾ
ಟಂದು ತೆಂಕಣದಾಭಿಚಾರಕ ರೂಷಕರ ಗೆಲಿದ ೨೬

ಧಾಳಿಯಿಟ್ಟನು ರೋಚಮಾನನ
ಮೇಲೆ ಕಪ್ಪವಕೊಂಡು ಬಿಟ್ಟುದು
ಪಾಳೆಯವು ಚಿತ್ರಾಯುಧನ ನರಸಿಂಹನಗರಿಯಲಿ
ಮೇಲೆ ವಂಗರ ಮುರಿದು ವರನೇ
ಪಾಳಕರ‍್ಪರ ಹೂಣಿಯರನು ವಿ
ಶಾಲ ಕಾಂಬೋಜಾದಿಗಳನಪ್ಪಳಿಸಿದನು ತಿರುಗಿ ೨೭

ಪಾರಶೀಕ ಕಿರಾತ ಬರ‍್ಬರ
ಪಾರಿಯಾತ್ರರ ಮುರಿದು ಸರ‍್ವ ವಿ
ಹಾರವನು ಮಾಡಿದನು ಮ್ಲೇಚ್ಛ ಸಹಸ್ರಕೋಟಿಗಳ
ಕ್ಷಾರಕರ ಹೂಣಕರ ಡೊಕ್ಕರ
ಪಾರಕರ ಬುರಸಹಣ ಭೂಪರೊ
ಳಾರುಭಟೆಯಲಿ ಕಾದಿ ಕೊಂಡನು ಸಕಲ ವಸ್ತುಗಳ ೨೮

ಬೆದರಿಸಿದನಾ ಹಿಮಗಿರಿಯ ಪಾ
ರ್ಶ್ವದ ಕಿರಾತರ ಮುಂದೆ ವಾಯ
ವ್ಯದಲಿ ಶೋಧಿಸಿ ಮರಳಿದನು ಹಿಮಗಿರಿಯ ಕುಕ್ಷಿಯಲಿ
ಪುದಿದ ನಾನಾ ದ್ರೋಣಿಗಳ ಮ
ಧ್ಯದ ಕಿರಾತ ಪುಳಿಂದ ನಿಚಯವ
ಸದೆದು ಹತ್ತಿದನಗ್ರಶಿಖರಕೆ ಪಾರ್ವತೀಪಿತನ ೨೯

ಎರಡು ಸಾವಿರ ಯೋಜನವು ಹಿಮ
ಗಿರಿಯ ಬಹಳೋತ್ಸೇಧ ಶಿಖರಕೆ
ಸರಿಸದಲಿ ಹತ್ತಿದುದು ಪಾಳಯವೇನ ಹೇಳುವೆನು
ಕರಿ ತುರಗ ವರ ರಥ ಪದಾತಿಗೆ
ಪರಿಗಣನೆಯೆಲ್ಲಿಯದು ಹಿಮಗಿರಿ
ಯೆರಡು ಸಾವಿರದಗಲ ತಿರುಗಿತು ರಾಯ ಕೇಳೆಂದ ೩೦

ಗಿರಿಯ ಕೋಣೆಯ ಕುಹರ ಗುಹೆಗಳ
ಗರುವರುಂಟೆಂದಾ ಪುಳಿಂದರ
ನೊರಸಿ ಕಾಣಿಸಿಕೊಂಡು ಕೊಂಡನು ಸಕಲ ವಸ್ತುಗಳ
ಗಿರಿಯನಿಳಿದುದು ನಡೆದು ಬಲ ಕಿಂ
ಪುರುಷ ಖಂಡದ ಬಹಳ ನದಿಗಳ
ಲೆರಡು ತಡಿಯಲಿ ತಳಿತು ಬಿಟ್ಟುದು ವನ ವನಂಗಳಲಿ ೩೧

ಅದು ಗಣನೆಗೊಂಬತ್ತು ಸಾವಿರ
ವದರೊಳಿದ್ದುದು ಯಕ್ಷಕಿನ್ನರ
ಸುದತಿಯರು ಕಿಂಪುರುಷರತಿರಾಗಿಗಳು ಸುಖಮಯರು
ಇದರ ಘಲ್ಲಣೆಗಾನಲೇನ
ಪ್ಪುದುತದೀಯ ಜನಂಗಳಿತ್ತುದು
ಸುದತಿಯರನಾ ಮಂಡಲಕೆ ಮೀಟಾದ ವಸ್ತುಗಳ ೩೨

ಅಲ್ಲಿ ಕೆಲಕಡೆಯಲ್ಲಿ ಗಿರಿ ಗುಹೆ
ಯಲ್ಲಿ ನೆರೆದ ಕಿರಾತವರ್ಗವ
ಚೆಲ್ಲ ಬಡಿದಪಹರಿಸಿದನು ಬಹುವಿಧ ಮಹಾಧನವ
ಮೆಲ್ಲಮೆಲ್ಲನೆ ಹೇಮ ಕೂಟದ
ಕಲ್ಲನಡರಿದನಾ ಮಹಾದ್ರಿಗ
ಳೆಲ್ಲ ಹಿಮಶೈಲದ ಮಹೋನ್ನತಿ ಬಹಳ ವಿಸ್ತಾರ ೩೩