ಕಳವು ಪುಸಿ ಹಾದರ ವಿರೋಧ
ಸ್ಖಲಿತವಾರಡಿಬಂದಿ ದಳವುಳ
ಬೆಳುಗವಿತೆಯನ್ಯಾಯ ಪರಿಭವ ಠಕ್ಕು ಡೊಳ್ಳಾಸ
ಪಳಿವು ವಂಚನೆ ಜಾತಿ ಸಂಕರ
ಕೊಲೆ ವಿರೋಧವು ವಿಕೃತ ಮಾಯಾ
ವಳಿಗಳೆಂಬಿವು ನಿನ್ನೊಳಿಲ್ಲಲೆ ರಾಯ ಕೇಳೆಂದ ೪೫

ರಣಮುಖದೊಳಂಗನೆಯಲಾರೋ
ಗಣೆಯಲರಿಗಳ ಕೂಟದಲಿ ವಾ
ರಣ ತುರಗದೇರಾಟದಲಿ ವಿವಿಧಾಯುಧಂಗಳಲಿ
ಎಣೆ ನೃಪರ ಸೋಂಕಿನಲಿ ಸೆಜ್ಜೆಯ
ಲಣೆಯ ಮಜ್ಜನದಲಿ ಮಹಾಮೃಗ
ಗಣನೆಯೊಳಗೆಚ್ಚರಿಕೆಯುಂಟೇ ರಾಯ ನಿನಗೆಂದ ೪೬

ನುಡಿದೆರಡನಾಡದಿರು ಕಾರ್ಯವ
ಬಿಡದಿರಾವನೊಳಾದರೆಯು ನಗೆ
ನುಡಿಯ ಕುಂದದಿರೊಡೆಯದಿರು ಹೃದಯವನು ಕಪಟದಲಿ
ಬಡ ಮನವ ಮಾಡದಿರು ಮಾರ್ಗದೊ
ಳಡಿಯಿಡದಿರನುಜಾತ್ಮಜರೊಳೊ
ಗ್ಗೊಡೆಯದಿರು ನೃಪನೀತಿಯಿದು ಭೂಪಾಲ ಕೇಳೆಂದ ೪೭

ನೀತಿವಿಡಿದರಸಂಗೆ ಬಹಳ
ಖ್ಯಾತವದು ಜನರಾಗ ರಾಗ
ವ್ರಾತದಿಂ ಧನ ಧನದಿ ಪರಿಕರ ಪರಿಕರದಿ ಜಯವು
ಆತ ಜಯದಿಂ ಧರ್ಮ ಧರ್ಮ ಸ
ಮೇತದಿಂ ಸುರತುಷ್ಟಿ ತುಷ್ಟಿಯ
ನೀತಿಯಿಂದಿಹಪರವ ಗೆಲುವೈ ರಾಯ ನೀನೆಂದ ೪೮

ಮಂತ್ರವುಳ್ಳವನವನೆ ಹಿರಿಯನು
ಮಂತ್ರವುಳ್ಳವನವನೆ ರಾಯನು
ಮಂತ್ರವುಳ್ಳವನವನೆ ಸಚಿವ ನಿಯೋಗಿಯೆನಿಸುವನು
ಮಂತ್ರವಿಲ್ಲದ ಬರಿಯ ಬಲು ತಳ
ತಂತ್ರದಲಿ ಫಲವಿಲ್ಲವೈ ಸ್ವಾ
ತಂತ್ರ್ಯವೆನಿಸಲ್ಕರಿವುದೇ ಭೂಪಾಲ ಕೇಳೆಂದ ೪೯

ಸತ್ಯವುಳ್ಳರೆ ಧರಣಿ ಸಾರುಗು
ಸತ್ಯವುಳ್ಳರೆ ಪದವಿ ಸಾರುಗು
ಸತ್ಯವುಳ್ಳರೆ ಸಕಲರಾಜ್ಯದ ವೀರಸಿರಿ ಸಾರ್ಗು
ಸತ್ಯವೇ ಬೇಹುದು ನೃಪರಿಗಾ
ಸತ್ಯಭುಜಬಲಗೂಡಿ ಮಂತ್ರದ
ಸತ್ಯವೇ ಸತ್ವಾಧಿಕವು ಭೂಪಾಲ ಕೇಳೆಂದ ೫೦

ಮೇಲನರಿಯದ ನೃಪನ ಬಾಳಿಕೆ
ಗಾಳಿಗೊಡ್ಡಿದ ಸೊಡರು ನೀರದ
ಜಾಲದೊಡ್ಡಣೆ ಸುರಧನುವಿನಾಕಾರ ತವದುಡಿಗೆ
ಬಾಳಿಗೌಕಿದ ಕೊರಳು ಭುಜಗನ
ಹೇಳಿಗೆಯಲಿಕ್ಕಿದ ಕರವು ಬೆ
ಳ್ಳಾರ ಹಬ್ಬುಗೆಯವನ ಸಿರಿ ಭೂಪಾಲ ಕೇಳೆಂದ ೫೧

ಆಯವಿಲ್ಲದ ಬೀಯವನು ಪೂ
ರಾಯವಿಲ್ಲದ ಗಾಯವನು ನಿ
ರ್ದಾಯವಿಲ್ಲದ ಮಂತ್ರವನು ಲೇಸಾಗಿ ಮಿಗೆ ರಚಿಸಿ
ನಾಯ್ಯವಿಲ್ಲದ ನಡವಳಿಯನ
ನ್ಯಾಯ ಹೊದ್ದುವ ಪಾತಕವ ನಿಜ
ಕಾಯದಲಿ ನೀ ಧರಿಸೆಯೆಲೆ ಭೂಪಾಲ ಕೇಳೆಂದ ೫೨

ಫಲವಹುದ ಕೆಡಲೀಯದಳಿ ಪರಿ
ಮಳವ ಕೊಂಬಂದದಲೆ ನೀನಾ
ಳ್ವಿಕೆಯ ಕರದರ್ಧವನು ತೆಗೆವೈ ಪ್ರಜೆಯ ನೋಯಿಸದೆ
ಹಲವು ಸನ್ಮಾನದಲಿ ನಯದಲಿ
ಚಲಿಸದಿಪ್ಪಂದದಲಿ ರಾಜ್ಯವ
ನಿಲಿಸುವಭಿಮತ ಮಂತ್ರಿಯುಂಟೇ ರಾಯ ನಿನಗೆಂದ ೫೩

ಸೂಕರನ ತುಂಬಿಯ ಮರಾಳನ
ಭೇಕವೈರಿಯ ಕಾರುರಗ ಕಪಿ
ಕೋಕಿಲನ ಬರ್ಹಿಯ ಸುಧಾಕಿರಣನ ದಿನಾಧಿಪನ
ಆಕಸದ ದರ್ಪಣದ ಬಕ ರ
ತ್ನಾಕರನಲೊಂದೊಂದು ಗುಣವಿರ
ಬೇಕು ನೃಪರಿಗೆ ನಿನ್ನೊಳುಂಟೇ ರಾಯ ಹೇಳೆಂದ ೫೪

ನೆಚ್ಚದಿರು ಸಿರಿಯನು ವೃಥಾ ಮದ
ಗಿಚ್ಚಿನುರಿಯಲಿ ಬೇಯದಿರು ಮಿಗೆ
ಬೆಚ್ಚಿ ಬೆದರದಿರೆಡರಿನಲಿ ಸತ್ಯವನು ಚಲಿಸದಿರು
ಮೆಚ್ಚದಿರಸತ್ಯವನು ಗುಣವನು
ಮುಚ್ಚದಿರು ಅಪಕೀರ್ತಿನಾರಿಯ
ಮೆಚ್ಚದಿರು ಮರುಳಾಗದಿರು ಭೂಪಾಲ ಕೇಳೆಂದ ೫೫

ಹಲವು ವಿನಿಯೋಗದಲಿ ಸುದತಿಯ
ರೊಲುಮೆಯಲಿ ಸಕಲಾಂಗದಲಿ ನಿ
ಸ್ಖಲಿತ ನಿಜವನೆ ಧರಿಸುವಾಶ್ರಮ ವರ್ಣ ಭೇದದಲಿ
ಹಳಿವು ನಿನಗಾವಂಗದಲಿ ಬಳಿ
ಸಲಿಸದಲೆ ಪರತತ್ವದಲಿ ವೆ
ಗ್ಗಳಿಸದಲೆ ವೈರಾಗ್ಯಮತ ಭೂಪಾಲ ನಿನಗೆಂದ ೫೬

ಪರಿಜನಕೆ ದಯೆಯನು ಪರ ಸ್ತ್ರೀ
ಯರಲಿ ಭೀತಿಯ ಹಗೆಗಳಲಿ ನಿ
ಷ್ಕರುಣತೆಯ ಬಡವರಲಿ ದಾನವ ದೈವ ಗುರುದ್ವಿಜರ
ಚರಣ ಸೇವೆಯಲಾರ್ತತೆಯ ಪಿಸು
ಣರ ನುಡಿಗಳಲಿ ಮೂರ್ಖತೆಯ ನೀ
ವಿರಚಿಪೆಯೊ ಬೇಸರುವೆಯೋ ಭೂಪಾಲ ಕೇಳೆಂದ ೫೭

ಮೋಹದವಳಲಿ ವೈದ್ಯರಲಿ ಮೈ
ಗಾಹಿನವರಲಿ ಬಾಣಸಿಗರಲಿ
ಬೇಹ ಮಂತ್ರಿಗಳಲಿ ವಿಧಾವಂತರಲಿ ಹಿರಿಯರಲಿ
ದೇಹರಕ್ಷಕರಲಿ ಸದೋದಕ
ವಾಹಿಯಲಿ ಹಡಪಾಳಿಯಲಿ ಪ್ರ
ತ್ಯೂಹವನು ವಿರಚಿಸೆಯಲೇ ಭೂಪಾಲ ಕೇಳೆಂದ ೫೮

ತರುಣಿಯಲಿ ಹಗೆಗಳಲಿ ಬಹಳೈ
ಶ್ವರಿಯದಲಿ ಶಸ್ತ್ರಾಂಗಿಯಲಿ ಸಂ
ಸ್ತರಣದಲಿ ಮದ್ಯಪನಲಬಲಾರ್ಥಿಯಲಿ ಶೃಂಗಿಯಲಿ
ಉರಗನಲಿ ನದಿಯಲಿ ಸಖಿಯರಾ
ತುರಿಯದಲಿ ದುರ್ಮಂತ್ರಿಯಲಿ ದು
ಶ್ಚರಿತನಲಿ ವಿಶ್ವಾಸಿಸೆಯಲೇ ಭೂಪ ಕೇಳೆಂದ ೫೯

ಢಾಳರನು ಢವಳರನು ಠಕ್ಕಿನ
ಠೌಳಿಕಾರರ ಕೃತಕ ಮಾಯಾ
ಜಾಲರನು ಕಾಹುರರನಂತರ್ದಾಹಕರ ಶಠರ
ಖೂಳರನು ಖಳರನು ವಿಕಾರಿಯ
ಜಾಳು ನುಡಿಗಳ ಜಡಮತಿಯನೀ
ನಾಳಿಗೊಂಬೆಯೊ ಲಾಲಿಸುವೆಯೋ ರಾಯ ಹೇಳೆಂದ ೬೦

ಆವ ಕಾಲದೊಳಾವ ಕಾರ್ಯವ
ದಾವ ನಿಂದಹುದವನ ಮನ್ನಿಪ
ಠಾವಿದೆಂಬುದನರಿದಿಹೈ ಮೃಗಜೀವಿಯಂದದಲಿ
ಲಾವಕರ ನುಡಿ ಕೇಳಿ ನಡೆದರೆ
ಭೂವಳಯದೇಕಾಧಿಪತ್ಯದ
ಠಾವು ಕೆಡವುದನರಿದಿಹೈ ಭೂಪಾಲ ಕೇಳೆಂದ ೬೧

ಅರಸು ರಾಕ್ಷಸ ಮಂತ್ರಿಯೆಂಬುವ
ಮೊರೆವ ಹುಲಿ ಪರಿವಾರ ಹದ್ದಿನ
ನೆರವಿ ಬಡವರ ಬಿನ್ನಪವನಿನ್ನಾರು ಕೇಳುವರು
ಉರಿವುರಿವುತಿದೆ ದೇಶ ನಾವಿ
ನ್ನಿರಲು ಬಾರದೆನುತ್ತ ಜನ ಬೇ
ಸರಿನ ಬೇಗೆಯಲಿರದಲೇ ಭೂಪಾಲ ಕೇಳೆಂದ ೬೨

ಧನದಲುರು ಧಾನ್ಯದಲಿ ನೆರೆದಿಂ
ಧನದಲುದಕದ ಹೆಚ್ಚುಗೆಯಲಂ
ಬಿನಲಿ ಶಸ್ತ್ರೌಘದಲಿ ಶಿಲ್ಪಿಗಳಲಿ ಶಿಲಾಳಿಯಲಿ
ವನವಳಯ ಗಿರಿವಳಯ ದುರ್ಗಮ
ವೆನಿಪ ದುರ್ಗಾವಳಿ ಸಮಗ್ರವೆ ಭೂಪ ಕೇಳೆಂದ ೬೩

ಕೃಷಿ ಮೊದಲು ಸರ್ವಕ್ಕೆ ಕೃಷಿಯಿಂ
ಪಸರಿಸುವುದಾ ಕೃಷಿಯನುದ್ಯೋ
ಗಿಸುವ ಜನವನು ಪಾಲಿಸುವುದಾ ಜನಪದದ ಜನದಿ
ವಸು ತೆರಳುವುದು ವಸುವಿನಿಂ ಸಾ
ಧಿಸುವಡಾವುದಸಾಧ್ಯವದರಿಂ
ಕೃಷಿವಿಹೀನನ ದೇಶವನು ದುರ್ದೇಶ ಕೇಳೆಂದ ೬೪

ಸತಿಯರೊಲುಮೆಯ ವಿಟರುಗಳನಾ
ಸತಿಯರ ಸ್ಥಿತಿಗತಿಗೆ ತಾನೆಂ
ದತಿಶಯೋಕ್ತಿಯ ನುಡಿವವರನರಮನೆಯ ಕಾಹಿಂಗೆ
ಪತಿಕರಿಸಿದರೆ ಜಗವರಿಯಲಾ
ಕ್ಷಿತಿಪರಭಿಮಾನವು ಮುಹೂರ್ತಕೆ
ಗತವಹುದು ನೀನರಿದಿಹೈ ಭೂಪಾಲ ಕೇಳೆಂದ ೬೫

ಖಡುಗ ಧಾರೆಯ ಮಧು ಮಹಾಹಿಯ
ಹೆಡೆಯ ಮಾಣಿಕ ವಜ್ರದಿಂಬಿಗಿ
ದೊಡಲಿಗೊಡ್ಡಿದ ಸುರಗಿ ಕಡುಗೆರಳಿದ ಮೃಗಾಧಿಪನ
ನಡು ಗುಹೆಯೊಳಿಹ ಸುಧೆಯ ಘಟವೀ
ಪೊಡವಿಯೊಡೆತನ ಸದರವೇ ಕಡು
ಬಡವರಿಗೆ ದೊರೆಕೊಂಬುದೇ ಭೂಪಾಲ ಕೇಳೆಂದ ೬೬

ಮಗಗೆ ಮುನಿವನು ತಂದೆ ತಂದೆಗೆ
ಮಗ ಮುನಿವನೊಡಹುಟ್ಟಿದರು ಬಲು
ಪಗೆ ಕಣಾ ತಮ್ಮೊಳಗೆ ಭೂಪರ ಕುಲದ ವಿದ್ಯವಿದು
ಬಗೆಯೆ ನಿನ್ನೊಡಹುಟ್ಟಿದರು ಮಂ
ತ್ರಿಗಳೊಳಾಪ್ತರ ಖಿನ್ನರೇ ದಾ
ಯಿಗರೊಳಂತರ್ಬದ್ಧವುಂಟೇ ರಾಯ ನಿನಗೆಂದ ೬೭

ಮಲೆವ ರಾಯರ ಬೆನ್ನ ಕಪ್ಪವ
ನಲಗಿನಲಿ ಕೊಂಡಾಂತ ಮನ್ನೆಯ
ಕುಲದ ತಲೆ ಚೆಂಡಾಡಿ ಗಡಿಗಳ ದುರ್ಗದಲಿ ತನ್ನ
ಬಲು ಸಚಿವರನು ನಿಲಿಸಿ ತಾ ಪುರ
ದಲಿ ವಿನೋದದಲಿರುತ ಹರುಷದ
ಲಿಳೆಯ ಪಾಲಿಸುವವನರಸು ಭೂಪಾಲ ಕೇಳೆಂದ ೬೮

ಮನ್ನಣೆಯೊಳಲ್ಪತೆಯ ನುಡಿಯೊಳ
ಗುನ್ನತಿಯನೆಸಗುವುದು ಪರರಿಗೆ
ತನ್ನವರಿಗುಗ್ಗಡದ ಪರಿಕರಣೆಯನು ಮಾತಿನಲಿ
ಭಿನ್ನವನು ತೋರುವುದು ರಾಯರ
ಗನ್ನಗತಕ ಕಣಾ ವಿಪುಳ ಸಂ
ಪನ್ನಮತಿ ನಿನಗುಂಟೆ ಭೂಮೀಪಾಲ ಕೇಳೆಂದ ೬೯

ಧನದಿ ಪಂಡಿತರಶ್ವ ತತಿಯಾ
ಧನದಿ ಧಾರುಣಿಮಾನ ಮೇಣಾ
ಧನದಿ ಕಾಂತೆಯರಖಿಳ ವಸ್ತುಗಳೈದೆ ಸೇರುವುದು
ನೆನಹು ತೃಪ್ತಿಯೊಳೈದದದರಿಂ
ಧನವೆ ಸಾಧನವರಸಿಗಾ ಧನ
ವನಿತು ದೊರಕೊಳಲಿದರದಾರೈ ಧಾತ್ರಿಪತಿಗಳಲಿ ೭೦

ಶೂರ ಧೀರನುದಾರ ಧರ‍್ಮೋ
ದ್ಧಾರ ವಿವಿಧ ವಿಚಾರ ಸುಜನಾ
ಧಾರ ರಿಪುಸಂಹಾರ ಚತುರೋಪಾಯ ಸಾಕಾರ
ಸಾರಮಂತ್ರ ವಿಚಾರ ಭುವನಾ
ಧಾರ ಸುಜನಸ್ವಾಮಿ ಕಾರ‍್ಯಾ
ಗಾರನೆನಿಸುವ ಮಂತ್ರಿಯುಂಟೇ ರಾಯ ನಿನಗೆಂದ ೭೧

ತಿಳಿದವನ ಮತಿವಿದನ ಭಾಷಾ
ವಳಿ ಲಿಪಿಜ್ಜನ ಸಾಕ್ಷರಿಕ ಮಂ
ಡಲಿಕ ಸಾವಂತರನಶೇಷರನಿಂಗಿತವನರಿತು
ಸಲೆ ಕರೆವ ಕಳುಹಿಸುವ ನಿಲಿಸುವ
ಬಲುಹನುಳ್ಳನ ಸುಕೃತ ದುಷ್ಕೃತ
ಫಲಿತ ಕಾರ‍್ಯಕೆ ಮಂತ್ರಿಯುಂಟೇ ರಾಯ ನಿನಗೆಂದ ೭೨

ಜರೆ ನರೆಯ ಮೈ ಸಿರಿಯ ಕುಲ ವೃ
ದ್ಧರನು ಹೀನಾಂಗರನು ಹಿಂಸಾ
ಚರಿತರನು ಜಾತ್ಯಂಧರನು ಧನದಾಸೆಯಳಿದವರ
ಅರಮನೆಯ ಸಂರಕ್ಷಣಾರ್ಥದೊ
ಳಿರಿಸಿದರೆ ಮಾನೋನ್ನತಿಕೆ ವಿ
ಸ್ತರಣವಹುದಿದನರಿದಿಹೈ ಭೂಪಾಲ ಕೇಳೆಂದ ೭೩

ಗುಳಿ ತೆವರನೀಕ್ಷಿಸುತ ಬಟ್ಟೆಯ
ಮೆಳೆ ಮರಂಗಳ ಹೊಯ್ಲ ತಪ್ಪಿಸಿ
ನೆಳಲನರಸುತ ವೇಗಗತಿ ಸಾಮಾನ್ಯ ಗತಿಗಳಲಿ
ಬಳಿವಿಡಿದು ಭೂಭುಜರ ಯಾನಂ
ಗಳೊಳಗಳುಕದೆ ಢಗೆಯ ಸೈರಿಸಿ
ಬಳಸುವವನೇ ಛತ್ರಧಾರಕನರಸ ಕೇಳೆಂದ ೭೪

ಬೇಸರದೆ ಕಾಳೋರಗನನ
ಡ್ಡೈಸಿ ಕಟ್ಟಿರುವೆಗಳು ಮಿಗೆ ವೇ
ಡೈಸಿ ಕಡಿದರೆಯುಟ್ಟುವಂದದಲಹಿತ ಬಲದೊಳಗೆ
ಓಸರಿಸದೊಳ ಹೊಕ್ಕು ಸಮರ ವಿ
ಳಾಸವನು ನೆರೆಮೆರೆದು ಕೇಶಾ
ಕೇಶಿಯಲಿ ಹಿಡಿದಿರಿವವನೆ ಕಾಲಾಳು ಕೇಳೆಂದ ೭೫

ಬಿಟ್ಟ ಸೂಠಿಯಲರಿನೃಪರ ನೆರೆ
ಯಟ್ಟಿ ಮೂದಲಿಸುತ್ತ ಮುಂದಣ
ಥಟ್ಟನೊಡೆ ಹಾಯ್ದ ಹಿತ ಬಲದೊಳಗಾನೆವರಿವರಿದು
ಹಿಟ್ಟುಗುಟ್ಟುತ ಹೆಣನ ಸಾಲುಗ
ಳೊಟ್ಟು ಮೆರೆಯಲು ಕಳನ ಚೌಕದ
ಲಟ್ಟಿಯಾಡಿಸಬಲ್ಲವನೆ ರಾವುತನು ಕೇಳೆಂದ ೭೬

ಹೆಬ್ಬಲವನೊಡತುಳಿದು ಧರಣಿಯ
ನಿಬ್ಬಗಿಯ ಮಾಡಿಸುತ ಪಾಯ್ದಳ
ದೊಬ್ಬುಳಿಯ ಹರೆಗಡಿದು ಕಾದಿಸುತಾನೆಗಳ ಮೇಲೆ
ಬೊಬ್ಬಿರಿದು ಶರಮಳೆಯ ಕರೆವುತ
ಲಬ್ಬರಿಸಿ ಬವರದಲಿ ರಿಪುಗಳಿ
ಗುಬ್ಬ ಸವನೆಸಗುವನೆ ಜೋಧನು ರಾಯ ಕೇಳೆಂದ ೭೭

ಒಂದು ಕಡೆಯಲಿ ದಳ ಮುರಿದು ಮ
ತ್ತೊಂದು ದಿಕ್ಕಲಿ ಮನ್ನೆಯರು ಕವಿ
ದೊಂದು ದೆಸೆಯಲಿ ಬಲದೊಳೊಂದನೆಯಧಿಕಬಲವೆನಿಸಿ
ಬಂದು ಸಂತಾಪದಲಿ ಕಾಳಗ
ದಿಂದ ಪುರದಲಿ ನಿಂದು ಕರಿಕರಿ
ಗುಂದುವ ಕ್ಷಿತಿಪಾಲನೇ ಭೂಪಾಲ ಕೇಳೆಂದ ೭೮

ಕುದುರೆಗಳನಾರೈದು ರಥವನು
ಹದುಳಿಸುತ ಸಾರಥಿಯನೋವುತ
ಲಿದಿರ ಮುರಿಪುತ ತನ್ನ ಕಾಯಿದುಕೊಳುತ ಕೆಲಬಲನ
ಸದೆದು ಮರಳುವ ಲಾಗುವೇಗದ
ಕದನ ಕಾಲಾನಲನವನು ತಾ
ಮೊದಲಿಗನಲೈ ರಥಿಕರಿಗೆ ಭೂಪಾಲ ಕೇಳೆಂದ ೭೯

ದೊರೆಯ ಕಾಣುತ ವಂದಿಸುತ್ತಂ
ಕರಿಸುತಂತರಿಸುತ್ತ ಮಿಗೆ ಹ
ತ್ತಿರನೆನಿಸದತಿ ದೂರನೆನಿಸದೆ ಮಧ್ಯಗತನೆನಿಸಿ
ಪರಿವಿಡಿಯಲೋಲೈಸುತರಸನ
ಸಿರಿಮೊಗವನೀಕ್ಷಿಸುತ ಬೆಸಸಲು
ಕರ ಯುಗವನಾನುವನೆ ಸೇವಕನರಸ ಕೇಳೆಂದ ೮೦

ನರಕ ಕರ್ಮವ ಮಾಡಿಯಿಹದೊಳು
ದುರಿತ ಭಾಜನರಾಗಿ ಕಡೆಯಲಿ
ಪರಕೆ ಬಾಹಿರರಾಗಿ ನಾನಾ ಯೋನಿಯಲಿ ಸುಳಿದು
ಹೊರಳುವರು ಕೆಲಕೆಲರು ಭೂಪರು
ಧರಿಸುವರಲೈ ರಾಜ ಧರ್ಮದ
ಹೊರಿಗೆಯನು ಮರೆದಿರೆಯಲಾ ಭೂಪಾಲ ಕೇಳೆಂದ ೮೧

ನೃಗನ ಭರತನ ದುಂದುಮಾರನ
ಸಗರನ ಪುರೂರನ ಯಯಾತಿಯ
ಮಗನ ನಹುಷನ ಕಾರ್ತವೀರ್ಯನ ನಳನ ದಶರಥನ
ಹಗಲಿರುಳು ವಲ್ಲಭರ ವಂಶದ
ವಿಗಡರಲಿ ಯಮಸೂನು ಸರಿಯೋ
ಮಿಗಿಲೊ ಎನಿಸುವ ನೀತಿಯುಂಟೇ ರಾಯ ನಿನಗೆಂದ ೮೨

ಆ ಮುನೀಂದ್ರನ ವಚನ ರಚನಾ
ತಾಮರಸ ಮಕರಂದ ಕೇಳಿಯ
ಲೀ ಮಹೀಶ ಮನೋಮಧುವ್ರತವುಬ್ಬಿತೊಲವಿನಲಿ
ರೋಮ ಪುಳಕದ ರುಚಿರ ಭಾವ
ಪ್ರೇಮ ಪೂರಿತ ಹರುಷ ರಸದು
ದ್ದಾಮ ನದಿಯಲಿ ಮುಳುಗಿ ಮೂಡಿದನರಸ ಕೇಳೆಂದ ೮೩

ಎಲೆ ಮುನಿಯೆ ನೀವ್ ರಚಿಸಿದೀ ನಿ
ರ್ಮಳ ನೃಪಾಲ ನಯಪ್ರಪಂಚವ
ಬಳಸಿದೆನು ಕೆಲ ಕೆಲವನಿನ್ನುರೆ ಬಳಸುವೆನು ಕೆಲವ
ಇಳಿದು ಧರಣಿಗೆ ಸುಳಿದು ನೀತಿ
ಸ್ಖಲಿತ ಜಡರನು ತಿದ್ದಿ ತಿಳುಹುವ
ಸುಲಭತನದಲಿ ದೇವಮುನಿ ನಿನಗಾರು ಸರಿಯೆಂದ ೮೪

ಮುನಿಯೆ ಬಿನ್ನಹವಿಂದು ನೀವಿಂ
ದ್ರನ ವಿರಿಂಚಿಯ ಯಮನ ವರುಣನ
ಧನಪತಿಯ ಶೇಷನ ಸಭಾಮಧ್ಯದಲಿ ಸುಳಿವಿರಲೆ
ಇನಿತು ರಚನೆಗೆ ಸರಿಯೊ ಮಿಗಿಲೋ
ಮನುಜ ಯೋಗ್ಯಸ್ಥಾನವೋ ಮೇ
ನೆನಲು ನಗುತೆಂದನು ಮುನೀಶ್ವರನಾ ಯುಧಿಷ್ಠಿರಗೆ ೮೫

ಜನಪ ಕೇಳುತ್ಸೇದ ಶತ ಯೋ
ಜನತದರ್ಧದೊಳಗಲದಳತೆಯಿ
ದೆನಿಪುದಿಂದ್ರ ಸ್ಥಾನವಲ್ಲಿಹುದಖಿಳ ಸುರನಿಕರ
ಜನಪರಲ್ಲಿ ಯಯಾತಿಯಾತನ
ಜನಕ ನೃಗ ನಳ ಭರತ ಪೌರವ
ರೆನಿಪರಖಿಳ ಕ್ರತುಗಳಲಿ ಸಾಧಿಸಿದರಾ ಸಭೆಯ ೮೬

ವೈದಿಕೋಕ್ತಿಗಳಲಿ ಹರಿಶ್ಚಂ
ದ್ರಾದಿರಾಯರು ರಾಜಸೂಯದೊ
ಳಾದರನಿಬರೊಳಗ್ಗಳೆಯರಿಂದ್ರಂಗೆ ಸರಿ ಮಿಗಿಲು
ಆದೊಡಾ ಪುರುಹೂತ ಸಭೆಯೋ
ಪಾದಿ ಯಮನಾಸ್ಥಾನವಲ್ಲಿ ವಿ
ಷಾದದಲಿ ನಿಮ್ಮಯ್ಯನಿಹನಾತನ ಸಮೀಪದಲಿ ೮೭

ವರುಣ ಸಭೆಯೊಳಗಿಹವು ಭುಜಗೇ
ಶ್ವರ ಸಮುದ್ರ ನದೀ ನದಾವಳಿ
ಗಿರಿ ತರು ವ್ರಜವೆನಿಪ ಸಂಖ್ಯಾರಹಿತ ವಸ್ತುಗಳು
ಅರಸ ಕೇಳು ಕುಬೇರ ಸಭೆಯಾ
ಪರಿಯಗಲವೆಂಭತ್ತು ಯೋಜನ
ಹರಸಖನ ಸಿರಿ ಸದರವೇ ಭೂಪಾಲ ಕೇಳೆಂದ ೮೮

ಬಗೆಯೊಳಗೆ ಮೊಳೆವುದು ಚತುರ್ದಶ
ಜಗವೆನಲು ಜಾವಳವೆ ತಸ್ಯೋ
ಲಗದ ಸಿರಿ ಪರಮೇಷ್ಠಿಗೇನರಿದೈ ಮಹೀಪತಿಯೆ
ಸುಗಮಗಾನಿಯರುಪನಿಷದ ವಿ
ದ್ಯೆಗಳು ವೇದಕ್ರತು ಪುರಾಣಾ
ದಿಗಳು ಬಿರುದಾವಳಿಯ ಪಾಠಕರಾತನಿದಿರಿನಲಿ ೮೯

ಮುನಿಗಳೇ ಮಾಣಿಯರು ಮಂತ್ರಾಂ
ಗನೆಯರೋಲೆಯಕಾತಿಯರು ಸುರ
ಎನವೆ ಕಿಂಕರಜನವು ಸೂರ್ಯಾದಿಗಳೆ ಸಹಚರರು
ಘನಚತುರ್ದಶ ವಿದ್ಯೆ ಪಾಠಕ
ಜನವಲೈ ಪಾಡೇನು ಪದುಮಾ
ಸನನ ಪರುಠವವಾ ಸಭೆಗೆ ಸರಿ ಯಾವುದೈ ನೃಪತಿ ೯೦

ಇನಿಬರಾಸ್ಥಾನದಲಿ ಸುಕೃತಿಗ
ಳೆನಿಪ ತೇಜಸ್ವಿಗಳು ಗಡ ಸುರ
ಮುನಿ ಹರಿಶ್ಚಂದ್ರಂಗೆ ಸೇರಿದ ಸುಕೃತ ಫಲವೇನು
ಜನಪನಪದೆಸೆಗೇನು ದುಷ್ಕೃತ
ವೆನಲು ನಕ್ಕನು ರಾಜಸೂಯದ
ಘನವನರಿಯಾ ಧರ್ಮನಂದನಯೆಂದನಾ ಮುನಿಪ ೯೧

ಈ ಮಹಾಕ್ರತುವರವ ನೀ ಮಾ
ಡಾ ಮಹೀಶ್ವರ ಪಂಕ್ತಿಯಲ್ಲಿ ನಿ
ರಾಮಯನು ನಿಮ್ಮಯ್ಯನಿಹನು ಸತೇಜದಲಿ ಬಳಿಕ
ಸೋಮವಂಶದ ರಾಯರೊಳಗು
ದ್ದಾಮರಹ ಬಲುಗೈ ಕುಮಾರ
ಸ್ತೋಮ ನೀವಿರಲಯ್ಯಗೇನರಿದೆಂದನಾ ಮುನಿಪ ೯೨

ಮುನಿಯ ಮಾತಿನ ಬಲೆಗೆ ಸಿಲುಕಿತು
ಜನಪತಿಯ ಚೈತನ್ಯಮೃಗವೀ
ತನ ವಚೋ ವರುಷದಲಿ ನೆನೆದವು ಕರಣವೃತ್ತಿಗಳು
ಮನದಲಂಕುರವಾಯ್ತು ನಾಲಿಗೆ
ಗೊನೆಯಲೆರಡೆಲೆಯಾಯ್ತು ಉಜ್ಜದ
ನೆನವು ಭಾರವಣೆಯಲಿ ಬಿದ್ದುದು ಧರ‍್ಮನಂದನನ ೯೩

ಕಳುಹಿದನು ಸುರಮುನಿಯನುದರದೊ
ಳಿಳಿದುದಂತಸ್ತಾಪ ಯಜ್ಜದ
ಬಲುಹ ನೆನೆದಡಿಗಡಿಗೆ ಕಂಪಿಸಿ ಕೈಯ ಗಲ್ಲದಲಿ
ಒಲೆದೊಲೆದು ಭಾವದಲಿ ಮಿಗೆ ಕಳ
ವಳಿಸಿ ಪದುಳಿಸಿಕೊಳುತ ಭೂಪತಿ
ತಿಲಕ ಚಿಂತಿಸಿ ನೆನೆವುತಿದ್ದನು ವೀರ ನರಯಣನ ೯೪