ಮೊದಲನೆಯ ಸಂಧಿ

ಸೂ. ಸಭೆಯೊಳೋಲಗದೊಳು ವಿರಿಂಚಿ
ಪ್ರಭವನನುಮತದಿಂದ ಧರಣೀ
ವಿಭು ಮಹಾಕ್ರತು ರಾಜಸೂಯವನೊಲಿದು ಕೈಕೊಂಡ

ಕೇಳು ಜನಮೇಜಯ ಧರಿತ್ರೀ
ಪಾಲ ಖಾಂಡವ ವನದ ವಹ್ನಿ
ಜ್ವಾಲೆ ತೆಗೆದುದು ಕೂಡೆ ಹೊಗೆದುದು ಹೊದರಹೊಸಮೆಳೆಯ
ಮೇಲುಗಾಳಗದುಬ್ಬಿನಲಿ ಸಿರಿ
ಲೋಲ ಸಹಿತರ್ಜುನನು ವಿಕ್ರಮ
ದೇಳಿಗೆಯ ಪರಿತೋಷದಲಿ ತಿರುಗಿದನು ಪಟ್ಟಣಕೆ ೧

ದೂತರೈದಿದರಿವರ ಸೂರೆಯ
ಕೈತವಕಿಗರು ಕೃತಕವಾರ್ತಾ
ಭೀತಪುರಜನ ಮುಖದ ದುಗುಡದ ದಡ್ಡಿಗಳನುಗಿದು
ಬೀತುದಿಂದ್ರನ ಬಲುಹು ವಿಗಡನ
ನೀತಿಹೋತ್ರನ ವಿಲಗ ತಿದ್ದಿ ವಿ
ಧೂತರಿಪುಬಲ ಬಂದನಿದೆಯೆಂದರು ಮಹಪತಿಗೆ ೨

ಹೂತುದರಸನ ಹರುಷಲತೆ ಪುರು
ಹೂತ ವಿಜಯದ ವಿಜಯ ವಾರ್ತಾ
ಶ್ರೋತ್ರಸುಖಸಂಪ್ರೀತಿ ನಯನ ಜಲಾಭಿಷೇಕದಲಿ
ಮಾತು ಹಿಂಚಿತು ಮುಂಚಿದುದು ನಯ
ನಾತಿಥಿವ್ರಜ ಮುಸುಕಿತಸುರ ವಿ
ಘಾತಿ ಪಾರ್ಥನನನಿಲಸುತ ನಕುಲಾದಿ ಬಾಂಧವರ ೩

ತಳಿತ ಗುಡಿಗಳು ಸಾಲ ಕಲಶದ
ನಿಳಯ ನಿಳಯದ ಬೀದಿ ಬೀದಿಯ
ತಳಿರದೋರಣದೋರಣದ ನವಮಕರತೋರಣದ
ತಳಿಗೆ ತಂಬುಲದಾರತಿಯ ಮಂ
ಗಳಿತ ರಭಸದೊಳಖಿಳ ರಾಜಾ
ವಳಿಗಳೊಸಗೆಯೊಳಿವರು ಹೊಕ್ಕರು ರಾಜಮಂದಿರವ ೪

ಹಿರಿಯರಂಘ್ರಿದ್ವಯಕೆ ಮಣಿದರು
ಕಿರಿಯರುಚಿತ ಕ್ಷೇಮ ಕುಶಲದಿ
ಪರಿ ರಚಿತ ಪರಿರಂಭ ಮಧುರ ವಚೋ ವಿಳಾಸದಲಿ
ಅರಸನಿವರನು ಮನ್ನಿಸಿದನಾ
ದರಿಸಿತನ್ಯೋನ್ಯಾನುರಾಗ
ಸ್ಫುರಿತ ತೇಜೋಭಾವ ವಿಭ್ರಮ ಭೂಪತಿವ್ರಾತ ೫

ಅರಸ ಕೇಳೈ ಬಳಿಕ ಹರಿ ನಿಜ
ಪುರಕೆ ಬಿಜಯಂಗೆಯ್ವ ವಾರ್ತೆಯ
ನೊರೆದನವನೀಪತಿಗೆ ಭೀಮ ಧನಂಜಯಾದ್ಯರಿಗೆ
ಅರಸಿಯರಿಗಭಿಮನ್ಯು ಧರ್ಮಜ
ನರ ವೃಕೋದರಸೂನು ಮೊದಲಾ
ಗಿರೆ ಸಮಸ್ತಜನಂಗಳನು ಮನ್ನಿಸಿದನುಚಿತದಲಿ ೬

ವರಮುಹೂರ್ತದೊಳಮೃತ ಯೋಗೋ
ತ್ಕರ ಶುಭಗ್ರಹ ದೃಷ್ಟಿಯಲಿ ಹಿಮ
ಕರ ಶುಭಾವಸ್ಥೆಯಲಿ ಕೇಂದ್ರಸ್ಥಾನ ಗುರುವಿನಲಿ
ಧರಣಿಸುರರಾಶೀರ್ವಚನ ವಿ
ಸ್ತರಣದಧಿ ದೂರ್ವಾಕ್ಷತೆಗಳು
ಬ್ಬರದ ವಾದ್ಯ ಗಡಾವಣೆಯಲಸುರಾರಿ ಹೊರವಂಟ ೭

ಕರಯುಗದ ಚಮ್ಮಟಿಕೆ ವಾಘೆಯ
ಲರಸ ರಥವೇರಿದನು ಮುಕ್ತಾ
ಭರದ ಭಾರದ ಸತ್ತಿಗೆಯ ಪಲ್ಲವಿಸಿದನು ಭೀಮ
ಹರಿಯುಭಯ ಪಾರ್ಶ್ವದಲಿ ಸಿತಚಾ
ಮರವ ಚಿಮ್ಮಿ ದನರ್ಜುನನು ಬಂ
ಧುರದ ಹಡಪದ ಹೆಗಲಲೈದಿದರರ್ಜುನಾನುಜರು ೮

ಪೌರಜನ ಪುರಜನ ನೃಪಾಲ ಕು
ಮಾರ ಸಚಿವ ಪಸಾಯ್ತು ಭಟ ಪರಿ
ವಾರ ಧೌಮ್ಯಪ್ರಮುಖ ಸೂರಿ ಸಮಾಜರೊಗ್ಗಿನಲಿ
ತೇರ ಬಳಿವಿಡಿದೈದಿದರು ಮುರ
ವೈರಿ ವಿರಹ ವಿಧೂತ ವದನಾಂ
ಭೋರುಹರ ಸಂತೈಸಿ ಬೀಳ್ಕೊಟ್ಟನು ಕೃಪಾಜಲಧಿ ೯

ಅರಿನೃಪರು ಕುಹಕಿಗಳು ನೀವೇ
ಸರಸಹೃದಯರಧರ್ಮಶೀಲರು
ಪರರು ನೀವತಿ ಧರ್ಮನಿಷ್ಠರು ಹಾನಿಯುಂಟದಕೆ
ಅರಸನಾರೋಗಣೆ ವಿಹಾರದೊ
ಳಿರುಳು ಹಗಲು ಮೃಗವ್ಯಸನದೆ
ಚ್ಚರಿನೊಳಿಹುದೆಂದನಿಬರನು ಬೀಳ್ಕೊಟ್ಟನಸುರಾರಿ ೧೦

ನಾಲಗೆಗಳಸುರಾರಿ ಗುಣ ನಾ
ಮಾಳಿಯಲಿ ತುರುಗಿದವು ಕಂಗಳು
ನೀಲಮೇಘಶ್ಯಾಮನಲಿ ಬೆಚ್ಚವು ವಿಹಾರದಲಿ
ಬಾಲಕೇಳೀ ಕಥನ ಸುಧೆಯೊಳ
ಗಾಳಿ ಮುಳುಗುತ ಕಳುಹುತನಿಬರು
ಸಾಲಭಂಜಿಕೆಯಂದವಾದರು ಕೃಷ್ಣವಿರಹದಲಿ ೧೧

ಕಳುಹಿ ಕಂಗಳು ಮರಳಿದವು ಮನ
ಕಳುಹದಾ ದ್ವಾರಾವತಿಗೆ ಮಂ
ಗಳ ಮಹೋತ್ಸವದೊಸಗೆ ನುಡಿಯಲಿ ಹೊಕ್ಕನಸುರಾರಿ
ಬಳಿಕಿವರು ನಿಜ ರಾಜಭವನ
ಸ್ಥಳಕೆ ಬಂದರು ಸೌಮನಸ್ಯದ
ಲಿಳೆಯ ಪಾಲಿಸುತಿರ್ದರವನೀಪಾಲ ಕೇಳೆಂದ ೧೨

ಮುರಹರನ ನೇಮದಲಿ ಮಯ ವಿ
ಸ್ತರಿಸಿದನು ಪದಿನಾಲ್ಕು ತಿಂಗಳು
ವರ ಸಭಾಮಂಟಪವನನಿಬರಿಗಿವ ಕೃತಜ್ಜನಲೆ
ಕಿರಣಲಹರಿಯ ವಿವಿಧ ರತ್ನೋ
ತ್ಕರದ ರಚನಾಶಿಲ್ಪವಿದು ದೇ
ವರಿಗಸಾಧ್ಯವು ಶಿವಶಿವಾಯೆನೆ ಮೆರೆದುದಾಸ್ಥಾನ ೧೩

ಹತ್ತು ಸಾವಿರ ಕೈ ಪ್ರಮಾಣದ
ಸುತ್ತುವಳಯದ ಮಣಿಯ ಶಿಲೆಗಳ
ತತ್ತವಣೆಗಳ ತೆಕ್ಕೆವೆಳಗಿನ ಲಳಿಯ ಲಹರಿಗಳ
ಸುತ್ತು ವಳಯದ ಪದ್ಮರಾಗದ
ಭಿತ್ತಿಗಳ ವೈಡೂರ್ಯ ಶಿಲೆಗಳ
ಮತ್ತ ವಾರಣ ವರ ವಿಧಾನದಲೆಸೆದುದಾಸ್ಥಾನ ೧೪

ಕರೆಸಿದನು ಮಯನೆಂಟು ಸಾವಿರ
ಸರಿಗ ರಕ್ಕಸ ಕಿಂಕರರ ನಿಜ
ಶಿರದೊಳಾಂತರು ತಂದರಿಂದ್ರಪ್ರಸ್ಥಪುರವರಕೆ
ಅರಸ ಕಾಣಿಸಿಕೊಂಡನದನಾ
ದರಸಿದನು ಭೀಮಂಗೆ ಭಾರಿಯ
ವರಗದಾದಂಡವನು ಕಾಣಿಕೆಯಿತ್ತು ಪೊಡವಂಟು ೧೫

ಇದು ಪುರಾತನ ಸಗರವಂಶಾ
ಭ್ಯುದಯ ದುರ್ಜಯ ಯೌವನಾಶ್ವನ
ಗದೆ ಕೃತಾಂತನ ಕರದ ದಂಡವನಂಡಲೆವ ಬಲದ
ಮದದಲೊಪ್ಪುವುದೆನುತ ಮಯನತಿ
ಮುದದಿ ಬಳಿಕಾ ದೇವದತ್ತಾ
ಖ್ಯದ ಮಹಾಶಂಖವನು ಪಾರ್ಥಗೆ ಕೊಟ್ಟು ಕೈ ಮುಗಿದ ೧೬

ಒಸಗೆ ಮೆರೆದುದು ಮಯನ ಮಿಗೆ ಮ
ನ್ನಿಸಿದನವನಿಪನಂಗಚಿತ್ತದೊ
ಳಸುರ ಕಿಂಕರರನಿಬರನು ಸನ್ಮಾನ ದಾನದಲಿ
ಒಸೆದು ಕಳುಹಿದನಾತನನು ದೆಸೆ
ದೆಸೆಯ ಯಾಚಕ ನಿಕರ ನೂಕಿತು
ಮುಸುಕಿತೈ ಧರ‍್ಮಜನ ಕೀರ್ತಿಯ ಝಾಡಿ ಮೂಜಗವ ೧೭

ದಿವಸ ದಿವಸದೊಳುಂಡುದವ ನೀ
ದಿವಿಜ ಸಂತತಿ ಹತ್ತು ಸಾವಿರ
ವವರನೇನೆಂದೆಣಿಸುವೆನು ಮಾರ್ಗಣ ಮಹೋದಧಿಯ
ವಿವಿಧ ರತ್ನಾಭರಣ ಕಾಂಚನ
ನವದುಕೂಲದ ದಿಂಡಿನಲಿ ಬುಧ
ನಿವಹ ದಣಿದುದನಂತ ಕೃಪಣಾನಾಥ ಜನಸಹಿತ ೧೮

ಆ ಮಹೋತ್ಸವವೇಳು ದಿನವಭಿ
ರಾಮರಂಜಿತವಾಯ್ತು ಶುಭದಿನ
ರಾಮಣೀಯಕ ಲಗ್ನದಲಿ ಹೊಕ್ಕನು ಮಹಾಸಭೆಯ
ಭೂಮಿಪಾಲರನಂತ ಸುಜನ
ಸ್ತೋಮವನುಜರಮರ‍್ತ್ಯರೆನಿಪ ಸ
ನಾಮರಿದ್ದರು ರಾಯನೆಡಬಲವಂಕದಿದಿರಿನಲಿ ೧೯

ಹೊಳೆ ಹೊಳೆದುದಾಸ್ಥಾನ ಕಾಂತಾ
ವಳಿಯ ಕಂಗಳ ಬೆಳಕಿನಲಿ ತನಿ
ಮುಳುಗಿತೋಲಗ ಲಲಿತ ರಸಲಾವಣ್ಯಲಹರಿಯಲಿ
ವಿಲಸದಖಿಳಾಭರಣ ರತ್ನಾ
ವಳಿಯ ರಶ್ಮಿಯಲಡಿಗಡಿಗೆ ಪ್ರ
ಜ್ವಲಸಿತಾ ಸಭೆ ದೀಪ್ತಿಮಯ ವಿವಿಧಾನುಭಾವದಲಿ ೨೦

ಮೇಳದಲಿ ಗಂಧರ್ವರಿಪ್ಪ
ತ್ತೇಳು ತುಂಬುರ ಸಹಿತ ಶುದ್ಧದ
ಸಾಳಗದ ಸಂಕೀರ್ಣದೇಶಿಯ ವಿವಿಧ ರಚನೆಗಳ
ಬಾಳೆಯರ ಸುರಗಣಿಕೆಯರ ಮುಖ
ಚಾಳೆಯರ ಸಂಗೀತತಾಳದ
ತೂಳುವರೆ ತುಂಬಿದುದು ಕುಸುಮಾಯುಧನ ಕಳಕಳವ ೨೧

ಆ ಮಹಾಸಭೆಯಲಿ ಯುಧಿಷ್ಠಿರ
ಭೂಮಿಪತಿ ದೂರದಲಿ ಕಂಡನು
ತಾಮರಸದಳ ನಯನ ಸಂನಿಭ ಭಾವಭಾವಿತನ
ಹಾ ಮಹಾದೇವೆತ್ತಣದುಭುತ
ಧಾಮವಿದು ದಿನಮಣಿಯ ತೇಜ
ಸ್ತೋಮವೆರಡರ ಧಾತುಯೆನುತೀಕ್ಷಿಸಿದರಾ ದೆಸೆಯ ೨೨

ಲಲಿತತೇಜಃಪುಂಜ ಮಿಗೆ ಥಳ
ಥಳಿಸಿತತಿ ದೂರದಲಿ ಬೆಳಗಿನ
ಗೊಳಸನುಡಿದಂತಾದುದಾಗಳೆ ತೋರಿತಾಕಾರ
ತಳಿತುದವಯವ ಶುದ್ಧ ವರ್ಣ
ಸ್ಥಳವು ನಿಮಿಷಕೆ ಮುನಿವರಾಕೃತಿ
ಹೊಳೆದುದಾಕ್ಷಣವೀತ ನಾರದನೆಂದುದಖಿಳಜನ ೨೩

ದಣಿಯದಾತನ ಬೆರಳು ನಾರಾ
ಯಣ ರವದ ವೀಣೆಯಲಿ ಹೃದಯಾಂ
ಗಣದ ಸೀಮೆಗೆ ಬಿಡಯವಾಗದು ಕೃಷ್ಣಪದ ಕೇಳಿ
ಪ್ರಣವರೂಪದ ಭಾವಶುದ್ಧಿಯ
ಕಣಿ ಮುರಾರಿಯ ತನ್ಮಯದ ನಿ
ರ್ಗುಣ ಮುನೀಶ್ವರನಿಳಿದನಿಂದ್ರಪ್ರಸ್ಥ ಪುರವರಕೆ ೨೪

ಬಂದನರಮನೆಗಾ ಮುನಿಯನಭಿ
ವಂದಿಸಿದುದಾಸ್ಥಾನವಿದಿರಲಿ
ನಿಂದು ಬಿಜಯಂಗೈಸಿ ತಂದರು ಸಿಂಹವಿಷ್ಟರಕೆ
ಸಂದ ಮಧುಪರ್ಕಾದಿ ಸತ್ಕೃತಿ
ಯಿಂದ ಪೂಜಿಸಿ ವಿನಯ ಮಿಗೆ ನಗು
ತೆಂದನವನೀಪಾಲನುಚಿತೋಕ್ತಿಯಲಿ ನಾರದನ ೨೫

ಕುಶಲವೇ ನಿಮ್ಮಂಘ್ರಿಗಳಿಗಿಂ
ದೊಸಗೆಯಾಯಿತು ನಮಗೆ ದರುಶನ
ವಸಮ ಸಂಸೃತಿವಹ್ನಿದಗ್ಧರಿಗಮೃತ ವರ್ಷವಲೆ
ಪಶುಪತಿಯ ಪರಮೇಷ್ಠಿಯಾ ಮುರ
ದ್ವಿಷನ ಸಾಮರ್ಥ್ಯದ ಸಗಾಢದ
ದೆಸಕ ನಿಮಗುಂಟೆಂದು ಕೊಂಡಾಡಿದನು ನಾರದನ ೨೬

ಕುಶಲವೆಮಗಿಂದೈದೆ ನೀನೀ
ವಸುಮತೀವಧುಗೊಳ್ಳಿದನೆ ಶೋ
ಭಿಸುವುದೇ ಭವದಾಜ್ಜೆಯಲಿ ವರ್ಣಾಶ್ರಮಾಚಾರ
ದೆಸೆ ದೆಸೆಗಳಮಳಾಗ್ನಿ ಹೋತ್ರ
ಪ್ರಸರಧೂಮಧ್ವಜಗಳೇ ನಿಂ
ದಿಸರಲೇ ದುರ್ಜನರು ಸುಜನರನೆಂದನಾ ಮುನಿಪ ೨೭

ಅರ್ಥದಿಂ ಧರ್ಮವನು ಧರ್ಮದಿ
ನರ್ಥವನು ಧರ್ಮಾರ್ಥವೆರಡನು
ವ್ಯರ್ಥಕಾಮದಲಳಿಯಲೇ ರಾಜ್ಯಾಭಿಲಾಷೆಯಲಿ
ಅರ್ಥಸಾಧನ ಧರ್ಮಸಾಧನ
ವರ್ಥ ಧರ್ಮದಲುಭಯ ಲೋಕಕ
ನರ್ಥ ಸಾಧನ ಕಾಮವೆಂದನು ಮುನಿ ನೃಪಾಲಂಗೆ ೨೮

ಮಾನ್ಯರನು ಧಿಕ್ಕರಿಸೆಯೆಲೆಯವ
ಮಾನ್ಯರನು ಮನ್ನಿಸೆಯಲೇ ಸಂ
ಮಾನ್ಯರನು ಸತ್ಕರಿಸುವಾ ಹಳಿವಾ ವಿಕಾರಿಗಳ
ಅನ್ಯರನು ನಿನ್ನವರ ಮಾಡಿಯ
ನನ್ಯರನು ಬಾಹಿರರ ಮಾಡಿವ
ದಾನ್ಯರನು ನಿಗ್ರಹಿಸೆಯೆಲೆ ಭೂಪಾಲ ಕೇಳೆಂದ ೨೯

ಖಳರ ಖಂಡಿಸುವಾ ಮದ ವ್ಯಾ
ಕುಲರ ದಂಡಿಸುವಾ ದರಿದ್ರರ
ನೊಲಿದು ರಕ್ಷಿಸುವಾ ಸುಮಾಯಾವಿಗಳ ಶಿಕ್ಷಿಸುವ
ಕುಲಯುತರ ಕೊಂಡಾಡುವಾ ರಿಪು
ಬಲದ ತಲೆ ಚೆಂಡಾಡುವಾ ದು
ರ್ಬಲರನತಿ ಬಾಧಿಸೆಯಲೇ ಭೂಪಾಲ ಕೇಳೆಂದ ೩೦

ಜಾತಿ ಸಂಕರವಿಲ್ಲಲೇ ಜನ
ಜಾತದಲಿ ಹೀನೋತ್ತಮರು ನಿ
ರ್ಣೀತರೇ ನಿಜಮಾರ್ಗದಲಿ ಕುಲವಿಹಿತ ಧರ್ಮದಲಿ
ಖ್ಯಾತರೇ ಸತ್ಪುರುಷರಧಿಕ
ದ್ಯೂತಕೇಳಿಗಳಿಲ್ಲಲೇ ಮೃಗ
ಯಾತಿರೇಕವ್ಯಸನ ಕಿರಿದೇ ರಾಯ ನಿನಗೆಂದ ೩೧

ಗಸಣಿಯಿಲ್ಲೆಲೆ ನಿನಗೆ ಸಪ್ತ
ವ್ಯಸನದಲಿ ನಿನ್ನನುಜ ತನುಜರ
ಮುಸುಡಧರ್ಮದಲಿರದಲೇ ವೈದಿಕ ವಿಧಾನದಲಿ
ಸಸಿನವೇ ನಿನ್ನರಿತ ಖಳರಿಗೆ
ಹುಸಿಕರಿಗೆ ಡಂಬಕರಿಗಜ್ಜರಿ
ಗುಸುರುವಾ ನಿನ್ನಂತರಂಗವನೆಂದನಾ ಮುನಿಪ ೩೨

ಹುರುಡಿಗರನೇಕಾಂತದೊಳಗಾ
ದರಿಸುವರು ಭೇದಕರ ಬುದ್ಧಿಗೆ
ತೆರಹುಗೊಡುವರು ಕುಟಿಲರಿಗೆ ವಿಶ್ವಾಸಹೀನರಿಗೆ
ಮರುಳುಗೊಂಬರು ಖೂಳರಿಗೆ ಭಂ
ಡರಿಗೆ ತೆರುವರು ಧನವನೀ ಧರೆ
ಯರಸುಗಳಿಗಿದು ಸಹಜ ನಿನ್ನಂತಸ್ಥವೇನೆಂದ ೩೩

ಒಳಗೆ ಕುಜನರು ಹೊರಗೆ ಧರಣೀ
ವಳೆಯ ಮಾನ್ಯರು ಛತ್ರ ಚಮರದ
ನೆಳಲು ಖೂಳರಿಗಾತಪದ ಬಲುಬೇಗೆ ಬುಧಜನಕೆ
ಒಳಗೆ ರಾಜದ್ರೋಹಿಗಳು ಹೊರ
ವಳಯದಲಿ ಪತಿಕಾರ್ಯ ನಿಷ್ಠರು
ಬಳಸಿಹುದು ನೃಪಚರಿತ ನಿನ್ನಂತಸ್ಥವೇನೆಂದ ೩೪

ಖೂಳರೊಡನೆ ವಿನೋದ ಭಂಡರೊ
ಳಾಳಿ ಸ್ವಾಮಿದ್ರೋಹರೊಡನೆ ಸ
ಮೇಳ ನಂಬುಗೆ ಡಂಭರೊಡನೆ ವಿಕಾರಿಯೊಡನಾಟ
ಸೂಳೆಯರು ಸಮಜೀವಿಗಳು ಕುಲ
ಬಾಲಕಿಯರೋಗಡಿಕೆಯವರು ನೃ
ಪಾಲಜನಕಿದು ಸಹಜ ನಿನ್ನಂತಸ್ಥವೇನೆಂದ ೩೫

ಆರು ಗುಣದೊಳುಪಾಯ ನಾಲ್ಕರೊ
ಳೇರಿಹುದೆ ಮನ ರಾಜಧರ್ಮದ
ಮೂರು ವರ್ಗದೊಳೆಚ್ಚರುಂಟೇ ನಯವಿಧಾನದಲಿ
ಮೂರು ಶಕ್ತಿಗಳೊಳಗೆ ಮನ ಬೇ
ರೂರಿಹುದೆ ಸಪ್ತಾಂಗದಲಿ ಮೈ
ದೋರಿಹೈ ಬೇಸರೆಯಲೇ ಭೂಪಾಲ ನೀನೆಂದ ೩೬

ಪ್ರಜೆಗಳನುರಾಗಿಗಳೆ ಸುಭಟ
ವ್ರಜಕೆ ಜೀವಿತ ಸಂದಿಹುದೆ ವರ
ಸುಜನರಿಗೆ ಸಂತೋಷವೇ ಮಧುರೋಕ್ತಿ ರಚನೆಯಲಿ
ವಿಜಯ ಭೀಮರು ಯಮಳರಿವರ
ಗ್ರಜರೊಳನುಜರಭಿನ್ನರೇ ಗಜ
ಬಜಿಕೆಯಂತಃಪುರದೊಳಿಲ್ಲಲೆ ರಾಯ ಕೇಳೆಂದ ೩೭

ವಿಹಿತ ಕಾಲದ ಮೇಲೆ ಸಂಧಿಯ
ನಹಿತರೊಳು ವಿರಚಿಸುವ ಮೇಣ್ವೆ
ಗ್ರಹದ ಕಾಲಕೆ ವಿಗಡಿಸುವುದೆಂಬರಸು ನೀತಿಯಲಿ
ವಿಹಿತವೇ ಮತಿ ವೈರಿ ರಾಯರ
ವಿಹರಣವನವರಾಳು ಕುದುರೆಯ
ಬಹಳತೆಯನಲ್ಪತೆಯನರಿವೈ ರಾಯ ನೀನೆಂದ ೩೮
ಒಂದರಾಯಕೆ ಬೀಯ ಸರಿ ಮ
ತ್ತೊಂದು ಕಡೆಯಲಿ ಹೀನ ಫಲವಿ
ನ್ನೊಂದು ಕಾರ್ಯದುಪೇಕ್ಷತೆಗೆ ಮೊದಲಿಲ್ಲ ಕಡೆಯಿಲ್ಲ
ಒಂದು ದುರ್ಘಟ ದೈವ ಸಾಧಿತ
ವೊಂದು ಶಂಕಿತ ಫಲವೆನಿಪ್ಪವ
ಹಿಂದುಗಳೆವೈ ಮಂತ್ರದಲಿ ಭೂಪಾಲ ಕೇಳೆಂದ ೩೯

ನೆನೆದ ಮಂತ್ರವ ನಿನ್ನೊಳಾಲೋ
ಚನೆಯ ನಿಶ್ಚಯವಿಲ್ಲದಿರಲೊ
ಬ್ಬನಲಿ ಮೇಣ್ ಹಲಬರಲಿ ಜಡರಲಿ ಮತಿ ವಿಹೀನರಲಿ
ಮನಬರಡರಲಿ ಸಲೆ ವಿಧಾವಂ
ತನಲಿ ಮಂತ್ರಾಲೋಚನೆಯ ಸಂ
ಜನಿಸಿ ಹರಹಿನೊಳಳಿಯೆಲೇ ಭೂಪಾಲ ಕೇಳೆಂದ ೪೦

ಕಿರಿದುಪೇಕ್ಷೆಯ ಬಹಳ ಫಲವನು
ಹೊರೆವುದಿದು ಮೇಣಲ್ಪ ಭೇದಕೆ
ಮುರಿವುದಿದು ವಿಕ್ರಮಕೆ ವಶವಿದು ನೀತಿ ಸಾಧ್ಯವಿದು
ಹರಿವುದಿದು ನಯ ಶಕ್ತಿಗೆಂಬುದ
ನರಿದು ನಡೆವೈ ರಾಜಧರ್ಮದ
ಹೊರಿಗೆಯನು ಮರೆದಿರೆಯೆಲೇ ಭೂಪಾಲ ಕೇಳೆಂದ ೪೧

ಪರರು ಮಾಡಿದ ಸದ್ಗುಣಂಗಳ
ಮರೆಯೆಯಲೆ ಪರರವಗುಣಂಗಳ
ಮರೆದು ಕಳೆವಾ ಮಾನ್ಯರಿಗೆ ನೀ ಮಾಡಿದವಗುಣವ
ಮೆರೆಯೆಯಲೆ ನೀ ಮಾಡಿದುಚಿತವ
ಮರೆದು ಕಳೆವಾಚಾರವಿದು ಸ
ತ್ಪುರುಷರಭಿಮತವಿದು ಕಣಾ ಭೂಪಾಲ ಕೇಳೆಂದ ೪೨

ಭಜಿಸುವಾ ಭಕ್ತಿಯಲಿ ದೈವ
ದ್ವಿಜ ಗುರುಸ್ಥಾನವನು ದೇಶ
ಪ್ರಜೆಯನರ್ಥಾಗಮದ ಗಡಣೆಗೆ ಘಾಸಿ ಮಾಡೆಯೆಲೆ
ಕುಜನರಭಿಮತದುಗ್ರ ದಂಡ
ವ್ಯಜನದಲಿ ಜನ ಜಠರ ವಹ್ನಿಯ
ಸೃಜಿಸೆಯೆಲೆ ಭವದೀಯ ರಾಜ್ಯ ಸ್ಥಿತಿಯ ಹೇಳೆಂದ ೪೩

ಆಣೆಗಪಜಯವಿಲ್ಲಲೇ ಕೀ
ಳಾಣಿ ಟಂಕದೊಳಿಲ್ಲಲೇ ನಿ
ಪ್ರಾಣದಲಿ ಸಂಗರವ ಹೊಗೆಯೆಲೆ ಶೌರ್ಯಗರ್ವದಲಿ
ವಾಣಿಯವನುಚಿತದಲಿ ಧರ್ಮದ
ಲೂಣೆಯವನಹಿತರಲುಪೇಕ್ಷೆಯ
ಕೇಣವನು ದಾನದಲಿ ಮಾಡೆಲೆ ರಾಯ ಕೇಳೆಂದ ೪೪