ನುಡಿಗಳಲಿ ಸದ್ಧರ್ಮ ಸಂಗತಿ
ನಡವಳಿಯಲನ್ಯಾಯವೆಂದೇ
ಕೆಡಹಿದವು ಹಂಸೆಯನು ನಾನಾ ವಿಹಗಸಂದೋಹ
ನುಡಿವುದಲ್ಲದೆ ಮೇಣು ನಯದಲಿ
ನಡೆದುದಿಲ್ಲೆಲ ಭೀಷ್ಮ ನಿನ್ನನು
ಕಡಿದು ಭೂತಕೆ ಬಡಿಸಿದರೆ ಕೃತಕೃತ್ಯನಹೆನೆಂದ ೪೧  ಕಳೆದ ಕಾಲದ ವೃದ್ಧ ಮೇಲ
ಗ್ಗಳದ ನಿಯಮವ್ರತ ಶ್ರುತಿ ಸ್ಮೃತಿ
ಗಳಲಿ ಪರಿಣತನೆಂಬೆ ಕಡೆಯಲಿ ಗೋಪನಂದನನ
ಬೆಳವಿಗೆಯ ಮಾಡಿದೆ ಮಹೀ ಮಂ
ಡಲದ ರಾಯರನಕಟ ಲಜ್ಜಾ
ಕುಳರ ಮಾಡಿದೆ ಭಂಡ ಫಡ ಹೋಗೆಂದನಾ ಚೈದ್ಯ ೪೨

ಪರಗುಣ ಸ್ತುತಿ ನಿಂದೆಗಳು ಹಿರಿ
ಯರಿಗೆ ಸಾಮ್ಯವೆ ನಿನ್ನ ಜಿಹ್ವೆಗೆ
ವರ ಗುಣಸ್ತವದಿಂದ ಮೇಣ್ಕಂಡೂತಿ ಹರವಹರೆ
ಹಿರಿಯರಿದೆಲಾ ಕಣ್ವ ಪೌಲಾಂ
ಗಿರಸ ಜೈಮಿನಿ ಯಾಜ್ಞವಲ್ಕ್ಯರು
ವರ ಸುಪೈಕದೊಳಧಿಕರಿದೆಲಾ ಭೀಷ್ಮ ಕೇಳೆಂದ ೪೩

ನಾವು ಮೊದಲಲಿ ನಮ್ಮೊಳಗೆ ಕುಂ
ದಾವುದೇತಕೆ ಹೊಗಳೆಯಿವರಲ
ದಾವಕೊರತೆ ಯುಧಿಷ್ಠಿರನ ನೀನೇಕುಪೇಕ್ಷಿಸಿದೆ
ಈ ವೃಕೋದರ ಪಾರ್ಥರನು ಸಹ
ದೇವ ನಕುಲರನೇಕೆ ಹೊಗಳೆಯ
ದಾವ ಗುಣನಿಧಿಯೆಂದು ಕೃಷ್ಣನ ಬಣ್ಣಿಸಿದೆಯೆಂದ ೪೪

ಗರುವನಲ್ಲಾ ಕೌರವೇಶ್ವರ
ನರಸಲಾ ಬಾಹ್ಲಿಕನು ರಾಯರ
ಗುರುವಲಾ ಕೊಂಡಾಡಲಾಗದೆ ಚಾಪ ಧೂರ್ಜಟಿಯ
ಗುರುಸುತನು ಸಾಮಾನ್ಯನೇ ಸಂ
ಗರ ಭಯಂಕರನಲ್ಲವೇ ವಿ
ಸ್ತರಿಸಲಾಗದೆ ನಿನ್ನ ಕೃಷ್ಣನ ಹವಣೆಯಿವರೆಂದ ೪೫

ಕವಚಕುಂಡಲ ಸಹಿತ ತಾನುದು
ಭವಿಸನೇ ಶೌರ್ಯಾದಿ ಗುಣದಲಿ
ಭುವನದಲಿ ಭಾರಾಂಕ ವೀರರು ಪಡಿಯೆ ಕರ್ಣಂಗೆ
ಇವನನೇಕಗ್ಗಳಿಸೆ ಭೂರಿ
ಶ್ರವನ ಹೊಗಳೆ ಜಯದ್ರಥನು ನಿ
ನ್ನವನ ಹವಣೇ ಶಲ್ಯ ಮುನಿಯನೆ ನಿನಗೆ ಹೇಳೆಂದ ೪೬

ಕುಲದಲಧಿಕರು ಶೌರ‍್ಯದಲಿ ವೆ
ಗ್ಗಳರು ಶೀಲದಲುನ್ನತರು ನಿ
ರ‍್ಮಲಿನರಾಚಾರದಲಿ ಕೋವಿದರಖಿಳ ಕಳೆಗಳಲಿ
ಇಳೆಯ ವಲ್ಲಭರಿನಿಬರನು ನೀ
ಕಳೆದು ನೊಣ ನೆರೆ ಹೂತ ವನವನು
ಹಳಿದು ಹಗಿನಿಂಗೆರಗುವವೊಲಾಯ್ತೆಂದನಾ ಚೈದ್ಯ ೪೭

ಘನನಲಾ ಭಗದತ್ತ ಕಾಂಭೋ
ಜನು ಪದಸ್ಥನಲಾ ವಿರಾಟನ
ತನುಜನೀ ಪಾಂಚಾಲ ಕೇಕಯರೀ ಮಹೀಭುಜರು
ವಿನುತರಲ್ಲಾ ದಂತವಕ್ರನು
ನಿನಗೆ ಕಿರುಕುಳನೇ ಜರಾಸಂ
ಧನ ಸುತನ ನೀನೇಕೆ ಬಣ್ಣಿಸೆ ಭೀಷ್ಮ ಹೇಳೆಂದ ೪೮

ದ್ರುಮನ ಕಿಂಪುರುಷಾಧಿಪನ ವಿ
ಕ್ರಮವ ಬಣ್ಣಿಸಲಾಗದೇ ಭೂ
ರಮಣರಿದೆಲಾ ಮಾಳವಂಗ ಕಳಿಂಗ ಕೌಸಲರು
ವಿಮಳರಿನಿಬರನುಳಿದು ಕೃಷ್ಣ
ಭ್ರಮೆ ಹಿಡಿದುದೈ ನಿನಗೆ ನಿನ್ನ
ಕ್ರಮದ ಭಣಿತೆಯ ಕರ್ಮಬೀಜವನರಿಯೆ ನಾನೆಂದ ೪೯

ಕುಮತಿ ಕೇಳ್ ಬೊಬ್ಬುಲಿಯ ಬನದಲಿ
ರಮಿಸುವುದೆ ಕಳಹಂಸ ಮಾಯಾ
ಭ್ರಮಿತದಲಿ ಯಾಚಿಸುವನೇ ವರಯೋಗಿ ನಿಜಪದವ
ಸಮರ ಪಟುಭಟ ದರ್ಪಪಿತ್ತ
ಭ್ರಮ ವಿಸಂಸ್ಥುಲ ಚಪಳಚಿತ್ತ
ಸ್ಥಿಮಿತ ಭೂಪರ ಬಗೆವನೇ ತಾನೆಂದನಾ ಭೀಷ್ಮ ೫೦

ಖತಿಯ ಹಿಡಿದುದು ಸಕಲ ತಾಜ
ಪ್ರತತಿಗಳು ದುರ್ಮಾರ್ಗಮಾನ
ವ್ಯಥಿಕರದೊಳುಬ್ಬೆದ್ದರನಿಬರು ಜಲಧಿ ಘೋಷದಲಿ
ಕ್ರತುವ ಜಲದಲಿ ಕದಡು ಗಂಗಾ
ಸುತನ ಹೊಯ್ ಕಟವಾಯ ಕೊಯ್ ನಿ
ಶ್ಚಿತ ಘಟಾಗ್ನಿ ಯಲಿವನ ಸುಡಿಯೆಂದುದು ನೃಪವ್ರಾತ ೫೧

ಬರಿಯ ಮಾತನೆ ಮೆರೆದು ಕಾರ್ಯದ
ಕೊರತೆಯಾದರೆ ನಾಯ್ಗಳೊರಲಿದ
ತೆರನಹುದಲೇ ತೋರಿರೈ ನೀವ್ನಿಮ್ಮ ಪೌರುಷವ
ಇರಿದು ನೀವ್ಕೊಲಲಾರದಿದ್ದರೆ
ನೆರೆ ಘಟಾಗ್ನಿಯೊಳುರುಹದಿದ್ದರೆ
ಕೆರಹು ನಿಮ್ಮಯ ಬಾಯಲೆಂದನು ಭೂಪರಿಗೆ ಭೀಷ್ಮ ೫೨

ನೆರೆದ ನರಿಗಳ ಮಧ್ಯದಲಿ ಕೇ
ಸರಿಯ ಮನ್ನಿಸುವಂತೆ ಕೃಷ್ಣನ
ಚರಣವನು ಪೂಜಿಸಿದೆವರ್ಘ್ಯಾರುಹನು ಮುರವೈರಿ
ಎರಡುಗಳು ನೀವೀ ಜನಾರ್ದನ
ನೊರೆಗೆ ಬಹರೇ ಪ್ರೀತಿಯೇನೀ
ಪರಿ ವಿಷಾದವೆ ಹೋಗಿಯೆಂದನು ಭೂಪರಿಗೆ ಭೀಷ್ಮ ೫೩

ಅಣಕಿಸುವರೆನ್ನೊಡನೆ ಹಿರಿಯು
ಬ್ಬಣವ ತೆಗೆಯಿರಿ ಈ ಮುರಾರಿಯ
ಕೆಣಕಲಾಪರೆ ಕರೆದು ನೋಡಿ ವೃಥಾಭಿಮಾನದಲಿ
ಹಣುಕಿ ಬಾಯ್ಬಡಿದೇನಹುದು ಕೈ
ಗುಣವ ತೋರಿರೆ ಸಾವಿರೊಳ್ಳೆಗೆ
ಮಣಿವನೇ ವಿಹಗೇಂದ್ರನೆಂದನು ಭೂಪರಿಗೆ ಭೀಷ್ಮ ೫೪

ಶಿವಶಿವಾ ಮುದುಗೂಗೆ ಮೆಚ್ಚದು
ರವಿಯನೆಲವೋ ಭೀಷ್ಮ ನಿಲು ಮಾ
ಧವನ ಮರ್ದಿಸಿ ನಿನಗೆ ಜೋಡಿಸುವೆನು ಮಹಾನಳನ
ಯುವತಿಯರು ಹಾರುವರು ಹುಲು ಪಾಂ
ಡವರು ಪತಿಕರಿಸಿದರೆ ನೀನಿಂ
ದೆವಗೆ ಮಾನ್ಯನೆ ಕೃಷ್ಣ ಸಿಂಹಾಸನವನಿಳಿಯೆಂದ ೫೫

ನಿನಗೆ ಮೊದಲೊಳು ನಿಶಿತ ವಿಶಿಖದ
ಮೊನೆಯೊಳರ್ಚಿಸಿ ಬಳಿಕ ಭೀಷ್ಮನ
ಘನ ಘಟಾನಳ ಕುಂಡದೊಳ್ಸ್ವಾಹಾಸ್ವಧಾಹುತಿಯ
ಅನುಕರಿಸಿ ಬಳಿಕಿನಲಿ ಕುಂತೀ
ತನಯರೈವರ ರಕುತ ಘೃತದಲಿ
ವಿನುತ ರೋಷಾಧ್ವರವ ರಚಿಸುವೆನೆಂದನಾ ಚೈದ್ಯ ೫೬

ಎಂದು ಚಾಪವ ತರಿಸಿ ಚಪ್ಪರ
ದಿಂದ ಹೊರವಡುತವನಿಪಾಲಕ
ವೃಂದವನು ಕೈವೀಸಿದನು ಕರೆ ಗೋಕುಲೇಶ್ವರನ
ಇಂದಲೇ ರಿಪು ರುಧಿರ ಪಾನಾ
ನಂದಕೃತ ಮದ ಶಾಕಿನೀ ಸ್ವ
ಚ್ಛಮದ ಲೀಲಾ ನೃತ್ಯದರ್ಶನವೆಂದನಾ ಚೈದ್ಯ ೫೭

ಡಾವರಿಸಿದುದು ವಿವಿಧ ವಾದ್ಯವಿ
ರಾವವಬುಜೋದ್ಭವನ ಭವನವ
ನಾ ವಿಗಡ ಭಟ ಕಟಕವಿದ್ದುದು ಬಲಿದ ಬೊಬ್ಬೆಯಲಿ
ಗೋವಳನ ಬರಹೇಳು ತೋರಾ
ಕಾವವರ ತಾ ಕೊಲುವೆನೆಂದೊದರಿದನು ಕಲಿ ಚೈದ್ಯ ೫೮

ಮಿನುಗುದುಟಿಗಳ ವಿಕಲ ಮಂತ್ರದ
ಬಿನುಗುಗಳ ಕೈಯಾಹುತಿಗೆ ಕರೆ
ದನಿಮಿಷರ ಪಲ್ಲಟದ ವಿಚಲಿತ ಸೂಕ್ತಿಮಯ ನಿನದ
ತನಿಭಯದ ತರಳಾಕ್ಷಿಗಳ ದು
ರ್ಮನದ ಮೋಡಿಯ ಮೊಗದ ಬರಿದೇ
ತೊನೆವ ಗಡ್ಡದ ಮುನಿಗಳಿದ್ದರು ಬಲಿದ ಬೆರಗಿನಲಿ ೫೯

ಹಲ್ಲಣಿಸಿದುದು ಯಾದವರ ಪಡೆ
ಘಲ್ಲಣೆಯ ಘರ್ಘರದ ಘೋಷದ
ಭುಲ್ಲಣೆಯ ಗಂಭೀರ ಭೇರಿಯ ಬಹಳ ರಭಸದಲಿ
ನಿಲ್ಲದಿಳೆ ಪದಹತಿಗೆನಲು ಬಲ
ವೆಲ್ಲ ಭೀಮನ ಸನ್ನೆಯಲಿ ರಣ
ಮಲ್ಲರೊಡ್ಡಿತು ಹೊರಗೆ ನೃಪಮೋಹರದ ಬಾಹೆಯಲಿ ೬೦

ಮುನಿಗಳಂಜದಿರಂಜದಿರಿ ಪರಿ
ಜನಕೆ ಗಜಬಜ ಬೇಡ ಯಾದವ
ಜನಪರುಬ್ಬಟೆ ನಿಲಲಿ ಸೈರಿಸಿ ಪಾಂಡುಸುತರೆನುತ
ಮೊನೆ ನಗೆಯ ಸಿರಿಮೊಗದ ನೆಗಹಿದ
ಜನದಭಯ ಹಸ್ತಾಂಬುಜದ ಹರಿ
ವಿನುತ ಸಿಂಹಾಸನವನಿಳಿದಾ ಧುರಕೆ ಹೊರವಂಟ ೬೧

ಅಂದಿನಲಿ ಶಿಶುಪಾಲಕನ ತಾ
ಯ್ಬಂದು ಮಗನಪರಾಧ ಶತದಲಿ
ಕಂದಲಾಗದು ಚಿತ್ತವೆಂದಳು ನಮ್ಮನನುಸರಿಸಿ
ಇಂದು ಖತಿಯಿಲ್ಲೆಮಗೆ ಸೈರಿಸ
ಬಂದುದಿಲ್ಲವಗೆರಡು ತಪ್ಪಿನೊ
ಳೆಂದು ಮುರಹರ ನಗುತ ನುಡಿದನು ನಾರದಾದ್ಯರಿಗೆ ೬೨

ಈ ಮಹಾ ಯಜ್ಞವನು ಕೆಡಿಸುವೆ
ನೀ ಮಹೀಶನ ಮುರಿವೆನೆಂದೇ
ವೈಮನಸ್ಯದಿ ಬಗೆದು ಮೊನೆ ಮಾಡಿದನು ನುಡಿಯೆರಡ
ತಾಮಸನ ತರಿದಖಿಳ ಭೂತ
ಸ್ತೋಮ ತುಷ್ಟಿಯ ಕೀರ್ತಿ ಫಲಿಸಲಿ
ಯೀ ಮಹಾಶರಕೆನುತ ಕೊಂಡನು ದಿವ್ಯಕಾರ‍್ಮುಕವ ೬೩

ಝಂಕೆ ಮಿಗೆ ಹೊರವಂಟುದೆಡಬಲ
ವಂಕದಲಿ ಯದುಸೇನೆ ಪಾಂಡವ
ರಂಕೆಯಲಿ ದಳ ಜೋಡಿಸಿತು ಝಳಪಿಸುವ ಕೈದುಗಳ
ಮುಂಕುಡಿಯ ಮೋಹರದ ದಳ ನಿ
ಶ್ಶಂಕೆಯಲಿ ಜೋಡಿಸಿತು ಭೂಪರ
ಬಿಂಕ ಬೀತುದು ಭೀತಿ ಹೂತುದು ಹುದುಗಿತಾಟೋಪ ೬೪

ತೊಲಗಿದನು ಕುರುರಾಯ ಪಾಂಡವ
ರೊಳಗೆ ತಪ್ಪಿಲ್ಲೆನುತ ಮಿಗೆ ಕುರು
ತಿಲಕನಾವೆಡೆಯೆನುತ ಬಳಿವಿಡಿದರು ನೃಪಾಲಕರು
ಕಲಿ ಜಯದ್ರಥ ಮಾದ್ರಪತಿ ಸೌ
ಬಲ ಕಳಿಂಗ ಕರೂಪ ನೃಪ ಕೌ
ಸಲರು ತಿರುಗಿತು ಬೇರೆ ಭಗದತ್ತಾದಿಗಳು ಸಹಿತ ೬೫

ಚೆಲ್ಲಿತೀ ನೃಪಯೂಥ ಜಾರಲಿ
ಜಳ್ಳುಗಳು ಜಲಜಾಕ್ಷನ ಪ್ರತಿ
ಮಲ್ಲ ತಾನೇ ಸಾಲದೇ ಹಾರುವೆನೆ ಕೆಲಬಲನ
ಖುಲ್ಲರಾಯರು ನಿಲಲಿ ಗೊಲ್ಲರ
ಹಳ್ಳಿಗಾರ ಕೂಡೆ ಬಿರುದಿನ
ಕಲ್ಲಿಗಳ ತಮ್ಮೆದೆಯಲೊತ್ತಲಿಯೆಂದನಾ ಚೈದ್ಯ ೬೬

ಎನುತ ಖಳಿನಿದಿರಾಗಿ ಮಧು ಮ
ರ್ದನನ ಹಳಚಿದನಸುರ ರಿಪುವಿನ
ಮೊನೆಗಣೆಯಲೇ ಮುಳುಗಿದನು ಬಳಿಕಾ ಮುಹೂರ್ತದಲಿ
ದನುಜ ವೈರಿಯ ಮುಸುಕಿದನು ತನ
ತನಗೆ ನೋಟಕವಾಯ್ತು ಭೂಪತಿ
ಜನ ಸುನೀತ ಮುರಾರಿಗಳ ಕೌತೂಹಲಾಹವಕೆ ೬೭

ಬಿಡುವ ತೊಡಚುವ ಸಂಧಿಸುವ ಜೇ
ವಡೆವ ಹೂಡುವ ತಾಗಿಸುವ ಹಿಳು
ಕಿಡುವ ಹರಿಕುವ ಬೆಸುವ ಭೇದಿಸುವ ಸಮ ಚಾಪಳವ
ನುಡಿವ ಕವಿ ಯಾರೈ ಬರಿಯ ಬಾ
ಯ್ಬಡಿಕನೇ ಶಿಶುಪಾಲನೀ ಪರಿ
ನಡೆವುದೇಕೈ ಹರಿಯೊಡನೆ ಸಮಬೆಸನ ಬಿಂಕದಲಿ ೬೮

ಸೋತನೈ ಹರಿಯೆಂದು ಚೈದ್ಯನ
ಬೂತುಗಳು ಬಣ್ಣಿಸಿದರೀ ನಿ
ರ್ಭೀತ ಯಾದವ ಸೈನ್ಯವಿದ್ದುದು ಹರುಷ ಕೇಳಿಯಲಿ
ಈತ ರಾವಣ ಮುನ್ನ ಭುವನ
ಖ್ಯಾತನೆಂದಮರರು ವಿಮಾನ
ವ್ರಾತದಲಿ ನೆರೆ ನೋಡುತಿರ್ದುದು ಸಮರ ಸಂಭ್ರಮವ ೬೯

ಧರಣಿಪತಿ ಕೇಳ್ ಕೃಷ್ಣ ಶಿಶುಪಾ
ಲರ ಮಹಾ ಸಂಗ್ರಾಮ ಮಧ್ಯದೊ
ಳುರಿದುದಿಳೆ ಹೊಗೆದುದು ದಿಶಾವಳಿ ಧೂಮಕೇತುಗಳು
ತರಣಿಮಂಡಲ ಮಾಲೆಗಳು ವಿ
ಸ್ತರಿಸಿತಾಕಾಶದಲಿ ಪರ್ವದ
ಲುರವಣಿಸಿದನು ರಾಹು ಚಂದ್ರಾದಿತ್ಯ ಮಂಡಲವ ೭೦

ನಡುಗಿತವನಿಯಕಾಲದಲಿ ಬರ
ಸಿಡಿಲು ಸುಳಿದುದು ಹಗಲು ತಾರೆಗ
ಳಿಡಿದವಭ್ರದಲಿಳೆಗೆ ಸುರಿದುದು ರುಧಿರಮಯ ವರ್ಷ
ಮಿಡುಕಿದವು ಪ್ರತಿಮೆಗಳು ಶಿಖರದಿ
ನುಡಿದು ಬಿದ್ದುದು ಕಳಶ ಹೆಮ್ಮರ
ವಡಿಗಡಿಗೆ ಕಾರಿದವು ರುಧಿರವನರಸ ಕೇಳೆಂದ ೭೧

ನೆಳಲು ಸುತ್ತಲು ಸುಳಿದುದಿನ ಮಂ
ಡಳಕೆ ಕಾಳಿಕೆಯಾಯ್ತು ಫಲದಲಿ
ಫಲದ ಬೆಳವಿಗೆ ಹೂವಿನಲಿ ಹೂವಾಯ್ತು ತರುಗಳಲಿ
ತಳಿತ ಮರನೊಣಗಿದವು ಕಾಷ್ಠಾ
ವಳಿಗಳುರೆ ತಳಿತವು ತಟಾಕದ
ಸಲಿಲವುಕ್ಕಿತು ಪಾಂಡುಪುತ್ರರ ಪುರದ ವಳಯದಲಿ ೭೨

ಬೆದರಿದನು ಯಮಸೂನು ಭಯದಲಿ
ಗದಗದಿಸಿ ನಾರದನ ಕೇಳಿದ
ನಿದನಿದೇನೀ ಪ್ರಕೃತಿ ವಿಕೃತಿಯ ಸಕಳ ಚೇಷ್ಟೆಗಳು
ಇದು ಕಣಾ ಚೈದ್ಯಾದಿಗಳ ವಧೆ
ಗುದುಭವಿಸಿದುದಲೇ ಮುರಾರಿಯೊ
ಳುದಯಿಸುವವುತ್ಪಾತ ಚೇಷ್ಟೆಗಳೆಂದನಾ ಮುನಿಪ ೭೩

ಈ ನೆಗಳಿದುತ್ಪಾತ ಶಾಂತಿ ವಿ
ಧಾನವೇನೆನೆ ಕೃಷ್ಣ ಚೇಷ್ಟೆಯೆ
ಹಾನಿ ವೃದ್ಧಿ ವಿನಾಶವಭ್ಯುದಯ ಪ್ರಪಂಚದಲಿ
ಮಾನನಿಧಿಯೇ ವೇದಸೂಕ್ತ ವಿ
ಧಾನದಲಿ ಪರಿಹಾರ ವಿಶ್ವ
ಕ್ಸೇನಮಯವೀ ಲೋಕ ಯಾತ್ರೆಗಳೆಂದನಾ ಮುನಿಪ ೭೪

ಆ ಹರಿಯೆ ನಿಮಗಿಂದು ಜೀವ
ಸ್ನೇಹಿತನು ನಿಮಗಾವ ಚಿಂತೆ ವಿ
ಮೋಹ ಚೇಷ್ಟೆಗಳಿವನ ವಧೆಗೋ ಬಲ್ಲರಾರಿದನು
ಊಹಿಸಲು ಬೇಡೆಂದು ಮುನಿಪತಿ
ಗಾಹಿನಲಿ ತಿಳುಹಿದನು ಘನ ಸ
ನ್ನಾ ಹರೆಚ್ಚಾಡಿದರು ಶಿಶುಪಾಲಕ ಮುರಾಂತಕರು ೭೫

ಕಾದಿದರು ವಿವಿಧಾಸ್ತ್ರ ವಿದ್ಯಾ
ಭೇದದಲಿ ರಥಭಂಗ ಚಾಪ ವಿ
ಭೇದ ಶಸ್ತ್ರಾಸ್ತ್ರೌ ಘ ಸಂಹರಣ ಪ್ರಪಂಚದಲಿ
ಈ ದುರಾತ್ಮನ ನಿಲಿಸಿ ನಿಮಿಷದೊ
ಳಾ ದಯಾಂಬುಧಿ ತುಡುಕಿದನು ತ್ರೈ
ವೇದಮಯ ಮೂರ್ತಿತ್ರಯಾತ್ಮಕ ವರ ಸುದರ್ಶನವ ೭೬

ಬೆಸಸಿದನು ಚಕ್ರವನು ಧಾರಾ
ವಿಸರ ಧೂತ ಪರಿಸ್ಫುಲಿಂಗ
ಪ್ರಸರ ತೇಜಃಕಣ ಪರಿಷ್ಕೃತನವ್ಯ ಶತಭಾನು
ದೆಸೆದೆಸೆಗೆ ದುವ್ವಾಳಿಸುವ ಬೆಳ
ಗೆಸೆಯೆ ಬಂದು ಸುನೀತ ಕಂಠದ
ಬೆಸುಗೆ ಬಿಡಲೆರಗಿದುದು ಹಾಯ್ದುದು ತಲೆ ನಭಸ್ಥಳಕೆ ೭೭

ಹರಿಗೊರಳ ಚೌಧಾರೆಯಲಿ ಧುರು
ಧುರಿಸಿ ನೂಕಿತು ರಕುತವದರೊಳು
ಮಿರುಪ ತೇಜಃಪುಂಜವುಕ್ಕಿತು ಹೊದರ ಹೊಳಹಿನಲಿ
ತುರುಗುವೆಳಗಿನ ಜೋಕೆಯಲಿ ಜಗ
ವರಿಯೆ ಬಂದು ಮುರಾರಿಯಂಘ್ರಿಯೊ
ಳೆರಗಿ ನಿಂದುದು ನಿಜ ನೆಲೆಗೆ ವಿಜಯಾಭಿಧಾನದಲಿ ೭೮

ತಗ್ಗಿ ತುರು ಕಳಕಳ ವಿಷಾದದ
ಸುಗ್ಗಿ ಬೀತುದು ರಾಯರೀಚೆಯ
ಮಗ್ಗುಲಲಿ ಮೇಳೈಸಿ ಮೆರೆದರು ಮತ್ತೆ ಬಾಂಧವರು
ನೆಗ್ಗಿದವು ನೆನಹವನ ಸಖಿಗಳು
ಮುಗ್ಗಿದರು ಹುರಡಿನ ವಿಘಾತಿಯ
ಲಗ್ಗಿಗರು ಹಣುಗಿದರು ಶಿಶುಪಾಲಾವಸಾನದಲಿ ೭೯

ಈಸು ಹಿರಿದಿಲ್ಲೆಂದು ಕೆಲಬರು
ಲೇಸ ಮಾಡಿದನಸುರ ರಿಪುವಿವ
ನೀಸು ಬಾಹಿರನೆಂದರಿಯೆವಾವೆಂದು ಕೆಲಕೆಲರು
ಐಸಲೇ ಕೃಷ್ಣಂಗೆ ಮುನಿದವ
ರೇಸು ದಿನ ಬದುಕುವರು ಲೇಸಾ
ಯ್ತಾ ಸುನೀತಂಗೆಂದು ನಗುತಿರ್ದುದು ನೃಪಸ್ತೋಮ ೮೦

ಗೋಳಿಡುತ ಬಂದೆರಗಿದರು ಶಿಶು
ಪಾಲ ತನುಜರು ಕೃಷ್ಣನಂಘ್ರಿಗೆ
ಲಾಲಿಸಿದನನಿಬರನು ಸಂತೈಸಿದನು ಕರುಣದಲಿ
ಮೇಲು ಪೋಗಿನ ವಿಧಿವಿಹಿತ ಕ
ರ್ಮಾಳಿಗಳ ಮಾಳ್ದವನ ಮಗಗೆ ಕೃ
ಪಾಳು ಪಟ್ಟದ ಸೇಸೆದಳಿದನು ವೀರನಾರಯಣ ೮೧