ಹದಿನಾರನೆಯ ಸಂಧಿ
ಸೂ. ದ್ಯೂತ ಮುಖದಲಿ ನಿಖಿಳ ರಾಜ್ಯವ
ಸೋತು ತನ್ನನುಜಾತ ಮುನಿ ಸಂ
ಘಾತ ಸಹಿತವನೀಶ ವನವಾಸಕ್ಕೆ ಹೊರವಂಟ ||
ಕೇಳು ಜನಮೇಜಯ ಧರಿತ್ರೀ
ಪಾಲ ಕುಂತಿಯ ನಂದನರು ತ
ಮ್ಮಾಳೊಡನೆ ಹೇಳಿದರು ಸೌಭದ್ರಾದಿ ತನಯರಿಗೆ
ಬಾಲಕಿಯ ಬೇಳಂಬವನು ಜೂ
ಜಾಳಿಗಳ ಜಜಾರತನವನು
ಕೇಳಿ ಬೈದುದು ಸೇನೆ ಖತಿಯಲಿ ಖಳ ಚತುಷ್ಟಯವ ೧
ಎತ್ತಿತೀ ಪಾಳಯವು ನಿಜಪುರ
ದತ್ತ ತಿರುಗಿತು ಜನಜನಿತ ರಾ
ಜೋತ್ತಮನ ಕಡೆಯಾಯ್ತು ಸತ್ಯಕ್ಷಮೆ ಪರಾಕ್ರಮಕೆ
ಇತ್ತಲಡುಪಾಯ್ಬೇಗೆ ಬಿಸುಗುದಿ
ಕಿತ್ತಡವು ಕಾರ್ಪಣ್ಯ ಕಪಟ ಖ
ಳೋತ್ತಮರ ಹೃದಯದಲಿ ಹುದುಗಿತು ನೃಪತಿ ಕೇಳೆಂದ ೨
ರವಿಯುದಯದಲಿ ಕೌರವೇಂದ್ರನ
ಭವನಕೈತಂದನು ಕುಠಾರರ
ಜವಳಿಯನು ಕರೆಸಿದನು ರಾಧಾಸುತನ ಸೌಬಲನ
ಅವನಿಪತಿ ಗಾಂಧಾರಿಯರು ಪಾಂ
ಡವರ ಮನ್ನಿಸಿ ಕಳುಹಿದರು ತ
ಮ್ಮವನಿಗೈದಿದರೆಂದನಾ ದುಶ್ಶಾಸನನು ನಗುತ ೩
ಮುರಿಮುರಿದು ಪಟ್ಟಣವ ನೋಡುತ
ನರ ವೃಕೋದರರೌಡುಗಚ್ಚುತ
ತಿರುಗಿದರು ಗಡ ಗಾಢ ಬದ್ಧಭೃಕುಟಿ ಭೀಷಣರು
ಕರಿಯ ಸೊಗಡಿನ ಮೃಗಪತಿಗೆ ಮೈ
ಹರಿದ ಹಂದಿಗೆ ನೊಂದ ಹಾವಿಂ
ಗರಸ ಮೈ ಚಾಚಿದೆಯಲಾ ನೀನೆಂದನಾ ಶಕುನಿ ೪
ಅವರ ಹೆಂಡಿರ ಮುಂದಲೆಯ ಹಿಡಿ
ದವಗಡವ ಮಾಡಿಸಿದೆ ಪಟ್ಟದ
ಯುವತಿಯಾಕೆಯ ಭಂಗಬಡಿಸಿದೆ ನಿನ್ನಲಾಪನಿತ
ಅವಳ ದೈವೋದಯವದೈಸಲೆ
ಸವಡಿ ಸೀರೆಯ ಸುತ್ತು ಸಡಿಲದು
ನಿವಗದಾಗಳೆ ಮರೆದು ಹಿಂಗಿದುದೆಂದನಾ ಕರ್ಣ ೫
ಬೊಪ್ಪನಿತ್ತನು ವರವನೆವಗದು
ತಪ್ಪಿಸಲು ತೀರುವುದೆ ಭೀಮನ
ದರ್ಪಕರ್ಜುನನುಬ್ಬಟೆಗೆ ಮಾಡಿದೆವು ಮದ್ದುಗಳ
ತಪ್ಪಿಸಿತಲೇ ದೈವಗತಿ ನ
ಮ್ಮಪ್ಪನೇ ಕೆಡಿಸಿದನು ನವಗಿ
ನ್ನಪ್ಪುದಾಗಲಿಯೆಂದು ಸುಯ್ದನು ಕೌರವರರಾಯ ೬
ಜಯವಹುದೆ ನಿರ್ವೇದದಲಿ ನಿ
ರ್ಭಯವಹುದೆ ಬಿಸುಸುಯ್ಲಿನಲಿ ನಿ
ರ್ನಯವಹುದೆ ರಿಪುನೃಪರಿಗಿದು ತಾ ನೀತಿ ಮಾರ್ಗದಲಿ
ನಿಯತವಿದು ನಿಶ್ಶೇಷ ನಿಮ್ಮ
ನ್ವಯಕೆ ನಿರ್ವಾಹವನು ಗಾಂಧಾ
ರಿಯಲಿ ನಿಮ್ಮಯ್ಯನಲಿ ಬೆಸಗೊಳ್ಳೆಂದನಾ ಶಕುನಿ ೭
ಅರಸ ಕೇಳ್ ಧೃತರಾಷ್ಟ್ರ ಭೂಪತಿ
ಯರಮನೆಗೆ ನಡೆತಂದರೀ ನಾ
ಲ್ವರು ವಿಷಾದ ವಿಡಂಬ ವಿಹ್ವಲ ಕರಣವೃತ್ತಿಯಲಿ
ಪರಿಮಿತದಿ ಕುಳ್ಳಿರಿಸಿದರು ಸಹ
ಚರನ ಶೋಧಿಸಿ ಕಡು ರಹಸ್ಯದೊ
ಳರಸಿಯನು ಬರಹೇಳಿದರು ಗಾಂಧಾರಿ ದೇವಿಯನು ೮
ಅವರ ದಾಸ್ಯವ ಬಿಡಿಸಿ ನೀ ರಾ
ಜ್ಯವನು ಕರುಣಿಸಿ ನೀತಿಯಲಿ ನಿ
ಮ್ಮವರ ಕಳುಹಿದಿರೆಂದು ಕೇಳಿದೆವಾಯ್ತು ಪರಿತೋಷ
ಅವರು ನಿವಗತಿ ಭಕ್ತರೈ ಬಾಂ
ಧವರೆಲೇ ತಪ್ಪೇನು ಧರ್ಮ
ಪ್ರವರರಿಗೆ ನೀವೊಲಿದಿರೆಂದನು ಕೌರವರರಾಯ ೯
ನಾವಲೇ ಹೊರಗವರ ಹೆಂಡಿರ
ಹೇವಗೆಡಿಸಿದೆವವರ ಸೋಲಿಸಿ
ಜೀವಮಾತ್ರವನುಳುಹಿ ಸೆಳೆದೆವು ಸಕಲ ವಸ್ತುಗಳ
ನೀವು ಕರುಣಿಸಿದಿರಿ ಕೃಪಾರಸ
ಭಾವ ಹಿರಿಯರಲುಂಟೆಲೇ ತ
ಪ್ಪಾವುದೈ ತಪ್ಪಾವುದೆನುತಲ್ಲಾಡಿದನು ಶಿರವ ೧೦
ತಾಯೆ ನೇಮವೆ ಹಗೆಯ ಕೈಯಲಿ
ಸಾಯಲಾರೆವು ಸಾಗರಾಂತದ
ರಾಯರಿಲ್ಲಾ ಹೊರೆಯಲಾಪೆವು ಬೆಂದ ಬಸುರುಗಳ
ಕಾಯಿದನು ಕರುಣದಲಿ ತಂದೆ ಸ
ಹಾಯವಹ ಪಾಂಡವರ ಕೂಡಿಯೆ
ರಾಯ ಬದುಕಿರಲೆಮ್ಮ ಕಳುಹೆಂದೆರಗಿದನು ಪದಕೆ ೧೧
ಏಕೆ ಬೆಸಗೊಳ್ಳಬಲೆ ಸುತರವಿ
ವೇಕ ವಿಷಮಗ್ರಹ ವಿಕಾರ
ವ್ಯಾಕರಣ ದುರ್ಲಲಿತ ದುಷ್ಕೃತವೀ ಪ್ರಳಾಪವಿದು
ಈ ಕುಲವನೀ ಪುರವನೀ ಲ
ಕ್ಷ್ಮೀ ಕರವನೀ ಜಗವನೀ ವಿಭ
ವಾಕೃತಿಯನಂಬುಧಿಯೊಳದ್ದುವ ನಿನ್ನ ಮಗನೆಂದ ೧೨
ಸರಿಹಸುಗೆಯಿಂದರ್ಧ ರಾಜ್ಯದ
ಸಿರಿಗೆ ಯೋಗ್ಯರು ಬಾಹುಸತ್ವಕೆ
ಸುರರು ಸರಿಯಿಲ್ಲಿವರ ಪಾಡೇ ಮನುಜ ಜಂತುಗಳು
ಚರಿತದವರಾಚರಣೆ ನಿನಗೆಂ
ತರಿ ವಿನಾಶನ ಸಿದ್ಧಿಯೆಂದನು ಮಗಗೆ ಧೃತರಾಷ್ಟ್ರ ೧೩
ಬೇಹವರು ಸರಿರಾಜ್ಯಕದು ಸಂ
ದೇಹವೇ ಮೇಲವರು ಸತ್ವದ
ಸಾಹಸದ ಸತ್ಯದ ಸದಾಚಾರದ ನಿವಾಸರಲೆ
ಸ್ನೇಹಿತರು ನಿನಗವರ ಮೇಗವ
ಗಾಹಿಸಿದೆವನ್ಯಾಯದಲಿ ಸ
ದ್ರೋಹರಾವಿನ್ನೆಮಗೆ ನೇಮವೆಯೆನುತ ಹೊರವಂಟ ೧೪
ಕಲಕಿತರಸನ ಕರಣ ಕಂಗಳ
ಕುಳಿಗಳಲಿ ನೀರೊರೆತವಕಟಕ
ಟೆಲೆಗೆ ಕರೆಯಾ ಪಾಪಿ ಮಗನನು ಕುರುಕುಲಾಂತಕನ
ಸೆಳೆದು ತಂದರು ಕರ್ಣ ಶಕುನಿಗ
ಳಳಲಿಗನ ತೆಗೆದಪ್ಪಿದನು ಕುರು
ತಿಲಕ ನಿನ್ನುಳಿದೊಡಲ ಹಿಡಿವೆನೆಯಂದನಂಧ ನೃಪ ೧೫
ಏನು ಮಾಡುವೆವವರ ಕೆಡಿಸುವ
ಡೇನು ಹದನನು ಕಂಡೆ ದೈವಾ
ಧೀನ ನಿಷ್ಠರ ಮುರಿವುದರಿದನ್ಯಾಯ ತಂತ್ರದಲಿ
ಏನು ನಿನ್ನಭಿಮತವು ನಿನ್ನೊಳ
ಗಾನು ಹೊರಗೇ ಕಂದ ನುಡಿ ದು
ಮ್ಮಾನ ಬೇಡೆನ್ನಾಣೆನುತ ಸಂತೈಸಿದನು ಮಗನ ೧೬
ನೊಂದರವರಗ್ಗಳಿಸಿ ಹೃದಯದೊ
ಳೊಂದಿ ಬೆರಸರು ಮರಹು ತೆರಹಿನೊ
ಳಂದಗೆಡಿಸುವರಲ್ಲದುಳುಹರು ನಿನ್ನ ಸಂತತಿಯ
ಒಂದು ಸತ್ತಿಗೆ ನಮ್ಮದಿಲ್ಲಿಗೆ
ನಿಂದುದೆನಿಸಲಿ ನಾವು ನಿಲಲವ
ರೊಂದು ಸತ್ತಿಗೆಯಾಗಿ ಸಲಹಲಿ ಸಕಳ ಭೂತಳವ ೧೭
ಹುದುವ ಸೈರಿಸಿ ಬಳಸಿದರು ದುರು
ಪದಿಯನವರೈವರು ಧರಿತ್ರಿಯ
ಹುದುವ ಸೈರಿಸಲಾರೆನವರೊಡನಿಂದು ಮೊದಲಾಗಿ
ಒದೆದು ಕಳೆ ನಮ್ಮಿನಿಬರನು ನೇ
ಹದಲಿ ಸಲಹೈವರನು ನೀನಿಂ
ದೊದೆವುದೈವರ ನಮ್ಮ ಹಿಡಿ ಬೇರಿಲ್ಲ ಮತವೆಂದ ೧೮
ಅನಿಲಜನ ಬಾಯ್ಬಡಿಕತನವ
ರ್ಜುನನ ಬರಿಬೊಬ್ಬಾಟ ಸಹದೇ
ವನ ಸಗರ್ವದ ಮಾತು ಮೈಯಿಕ್ಕುವವು ಬಳಿಕಿನಲಿ
ಮನೆಮೊಗವ ಕಾಣಿಸದೆ ಘನ ಕಾ
ನನದೊಳಗೆ ಸುಳಿವಂತೆ ಮಂತ್ರವ
ನೆನೆದೆನಿದು ನಿಮ್ಮಡಿಯ ಚಿತ್ತಕೆ ಬಹರೆ ಬೆಸಸೆಂದ ೧೯
ಮರುಳು ಮಗನೇ ಶಿವಶಿವಾ ಮನ
ಬರಡನೇ ತಾನಕಟ ನಿಮ್ಮೈ
ಶ್ವರಿಯ ಹಗೆ ದಾಯಾದ್ಯರುಗಳಭ್ಯುದಯದಲಿ ಸೊಗಸೆ
ದುರುಳರವದಿರು ದೈವಮುಖದೆ
ಚ್ಚರಿಕೆ ಘನಕೆಡರೆಂದು ಮೇಗರೆ
ಹೊರೆಮನದ ಸೂಸಕದ ನೇಹವನರಸುತಿಹೆನೆಂದ ೨೦
ಕರೆಸಿಕೊಡಿ ನೀವಿಲ್ಲಿಗವರೈ
ವರನು ಜೂಜಿನಲೊಂದು ಹಲಗೆಯ
ಲರಸ ನೀ ಚಿತ್ತವಿಸು ಹನ್ನೆರಡಬುದ ವಿಪಿನದಲಿ
ವರುಷವೊಂದಜ್ಞಾತವದರೊಳ
ಗರಿದೆವಾದೊಡೆ ಮರಳಿ ವಿಪಿನಕೆ
ವರುಷ ಹನ್ನೆರಡಕ್ಕೆ ಕೊಡುವೆವು ಮತ್ತೆ ವೀಳಯವ ೨೧
ಅಹುದು ಮಂತ್ರವಿದೆಂದು ಚಿತ್ತಕೆ
ಬಹರೆ ಕಳುಹಿ ಮನುಷ್ಯರನು ಕರೆ
ಸಹಿತರನು ವಿದುರಾದಿಗಳ ಕೊಂಡೆಯಕೆ ಕಿವಿಗೊಡದೆ
ಕುಹಕವುಂಟೇ ನಮ್ಮ ಕಳುಹುವು
ದೆಹ ಮತವ ಬೆಸೆಸೆನಲು ನಿಮ್ಮೊಳು
ಕುಹಕವುಂಟೇ ಮಗನೆ ಕರೆಸುವೆನೀಗ ಪಾಂಡವರ ೨೨
ಪ್ರಾತಿಕಾಮಿಕ ಬಾ ಯುಧಿಷ್ಠಿರ
ಭೂತಳೇಶನ ಕರೆದು ತಾರೈ
ತಾತ ಕಳುಹಿದನೆಂಬುದಿಂದ್ರಪ್ರಸ್ಥದಲ್ಲಿರಲಿ
ಪ್ರೀತಿಪೂರ್ವಕವಲ್ಲದಲ್ಲಿ ವಿ
ಘಾತಿಯಿಲ್ಲೆಂದುಚಿತ ವಚನದೊ
ಳಾತಗಳನೊಡಗೊಂಡು ಬಾ ಹೋಗೆಂದನಂಧನೃಪ ೨೩
ಕೇಳಿದರು ಭೀಷ್ಮಾದಿಗಳು ಬರ
ಹೇಳಿದರೆ ಪಾಂಡವರನಕಟಾ
ಹೇಳಿದರೆ ಕೌರವರ ನೂರ್ವರನಂತಕಾಲಯಕೆ
ಹೇಳಿದರೆ ಹೇಳಿಗೆಯ ಹಾವಿನ
ಮೇಲು ಮುಚ್ಚಳ ಮುರಿಯಲೆಂದಿದ
ಕೇಳಿದೆವೆ ಕೌತುಕವನೆಂದರು ಕುದಿದು ತಮ್ಮೊಳಗೆ ೨೪
ಉರುವ ಮಕ್ಕಳನಿಕ್ಕಿ ಸಾಧಿಸು
ವರಿಕೆ ಯಾವುದು ಹೇಳಲಾಗದೆ
ಕುರಿಗಳೇ ನಿನ್ನವರು ಬಲ್ಲರೆ ಮೇಲಣಪಜಯವ
ಮರುಗುವಳು ಗಾಂಧಾರಿ ಮಕ್ಕಳ
ಹರುವ ಕಂಡರೆ ಮೇಲೆ ನಿನಗೇ
ನರಿಯಬಾರದಲಾ ಮರುಳೆಯೆಂದಳಲಿದನು ಭೀಷ್ಮ ೨೫
ಕೊಂಬುದೇ ಖಳಜನಕೆ ಸಾಧುಗ
ಳೆಂಬ ಮಾತು ವಿಧಾತೃಕಲ್ಪಿತ
ವೆಂಬ ವಿಷದುಗ್ಗಡಕೆ ಗಾರುಡವೇನ ಮಾಡುವದು
ತುಂಬುವುದು ಬತ್ತುವುದು ಕಾಲನ
ಡೊಂಬಿದಾರಿಗೆ ಸಾಧ್ಯ ನಾವೇ
ನೆಂಬುದಿದಕೆಂದಳಲಿದರು ಭೀಷ್ಮಾದಿ ಸಜ್ಜನರು ೨೬
ಇವರ ವಂಚಿಸಿ ರಜನಿ ಮಧ್ಯದೊ
ಳವನ ಕಳುಹಿದಡಾತನೈತಂ
ದಿವರ ಪಾಳಯದೊಳಗೆ ಹೊಕ್ಕನು ಹಲವು ಪಯಣದಲಿ
ಅವನಿಪತಿ ಮರುದಿವಸ ಬೀಡೆ
ತ್ತುವ ನಿಧಾನವನರಿದು ರಾಯನ
ಭವನಿಕೆಯ ಹೊರಬಾಹೆಯಲಿ ದಂಡಿಗೆಯನವನಿಳಿದ ೨೭
ಕರೆದು ಹೇಳಿದನಾತ ಪಡಿಹಾ
ರಿರಿಗೆ ತಾನೈ ಪ್ರಾತಿಕಾಮಿಕ
ನರಸ ಕಳುಹಲು ಬಂದೆನಗ್ಗದ ರಾಜಕಾರಿಯಕೆ
ಧರಣಿಪಾಲಂಗರುಹಿಯೆನೆ ನೃಪ
ವರಗೆ ಬಿನ್ನಹ ಮಾಡೆ ಕರೆಸಿದ
ಡಿರದೆ ಹೊಕ್ಕನು ದೂತನಂದಾ ರಾಯನೋಲಗವ ೨೮
ದರುಶನವನಿತ್ತವನಿಪಾಲನ
ಚರಣದಲಿ ಮೈಯಿಕ್ಕಿ ನಿಂದನು
ನರ ವೃಕೋದರ ನಕುಲ ಸಹದೇವರಿಗೆ ಕೈಮುಗಿದು
ಧರಣಿಪನ ಮೊಗಸನ್ನೆಯಲಿ ಕು
ಳ್ಳಿರಲಿದೇನೈ ಪ್ರಾತಿಕಾಮಿಕ
ಬರವು ಬೇಗದೊಳಾಯ್ತೆನುತ ಬೆಸಗೊಂಡನಾ ಭೀಮ ೨೯
ಬರವು ಬೇರೇನೊಡೆಯರಟ್ಟಿದ
ರರಸನಲ್ಲಿಗೆ ಹಿಂದೆ ಜೂಜಿನೊ
ಳೊರಸೊರಸು ಮಿಗೆ ಮಸೆದುದಿತ್ತಂಡಕ್ಕೆ ಮನ ಮುನಿಸು
ಹರೆದು ಹೋಯ್ತದು ಹೃದಯ ಶುದ್ಧಿಯೊ
ಳೆರಡರಸುಗಳು ಜೂಜನಾಡಲಿ
ಮರಳಿ ಬಿಜಯಂಗೈವುದೆಂದಟ್ಟಿದನು ಧೃತರಾಷ್ಟ್ರ ೩೦
ಮರಳಿ ಕರೆಸುವುದೆಂದು ಕಂಬನಿ
ವೆರೆಸಿ ಕುರುಪತಿ ಪಿತನ ಚಿತ್ತವ
ಕರಗಿಸಿದನೋ ಮೇಣು ತಾ ಕರೆಸಿದಳೊ ಗಾಂಧಾರಿ
ಕರೆಸುವವದಿರು ಭಂಡರೋ ಮೇ
ಣ್ಮರಳಿ ಹೋಹರು ಭಂಡರೋ ನೀ
ನರಿವುದೇನೈ ಪ್ರಾತಿಕಾಮಿಕನೆಂದನಾ ಭೀಮ ೩೧
ಬೊಪ್ಪನವರಟ್ಟಿದರೆ ಶಿವ ಶಿವ
ತಪ್ಪ ನೆನೆವರೆ ಭೀಮ ಸೈರಿಸು
ತಪ್ಪನಾಡಿದೆ ನಮಗೆ ಮುನಿವಳೆ ತಾಯಿ ಗಾಂಧಾರಿ
ತಪ್ಪಲೊಮ್ಮಿಗೆ ಪಾಂಡು ಕುಂತಿಗೆ
ಮುಪ್ಪಿನಲಿ ಮರುಳಾಟವಾಗಲಿ
ತಪ್ಪುವನೆ ಧೃತರಾಷ್ಟ್ರನೆಂದನು ನಗುತ ಯಮಸೂನು ೩೨
ಖಳರು ಮೊದಲಲಿ ಕೌರವರು ಕಲಿ
ಮೊಳೆಯನಂಕುರಿಸುವ ಕುವಿದ್ಯಾ
ಕಲಿತ ಮಾಯರು ಕರ್ಣ ಶಕುನಿಗಳವರ ಸಂಗದಲಿ
ತಿಳಿದು ನಡೆವವನಲ್ಲವಿದು ನಿ
ರ್ಮಲದ ನೀತಿಗೆ ಸಲ್ಲ ನಿಜಪಿತ
ನೊಳಗು ನಿರ್ಮಳವಿಲ್ಲವೆಂದನು ನಗುತ ಕಲಿಭೀಮ ೩೩
ನೆನಹಿನಭಿಮತವಲ್ಲ ದುರ್ಯೋ
ಧನನ ಸೌಬಲ ಕರ್ಣರಭಿಮತ
ಜನಪ ಧೃತರಾಷ್ಟ್ರನಿಗೆ ಗಾಂಧಾರಿಗೆಯಲಂಘ್ಯವಿದು
ಅನುನಯದ ಹೊತ್ತಲ್ಲ ನೀವ್ ಹ
ಸ್ತಿನಪುರಿಯ ಹೊಕ್ಕಾಗ ಘನಕಾ
ನನಕೆ ಗಮಿಸುವಿರೆಂದರಾ ಧೌಮ್ಯಾದಿ ಮಂತ್ರಿಗಳು ೩೪
ಕರೆಯೆ ಕಾದುವುದಾಡುವದು ಸಂ
ಗರಕೆ ಜೂಜಿಂಗಿದು ಮಹೀಶರ
ಪರಮ ಧರ್ಮವಲೇ ನಿಧಾನಿಸೆ ವೈದಿಕಾಂಗದಲಿ
ಗುರುವಲಾ ಧೃತರಾಷ್ಟ್ರನಾತನು
ಕರೆಸಿದಲ್ಲಿ ವಿಘಾತಿ ಬಂದರೆ
ಬರಲಿ ಸೈರಿಸಬಲ್ಲೆನೆಂದನು ಧರ್ಮನಂದನನು ೩೫
ಜನಪದಾಜ್ಞಾಯ ಮೀರಿ ಬಳಸುವು
ದನುಚಿತವು ನಮಗಿನ್ನು ಭೀಮಾ
ರ್ಜುನ ನಕುಲ ಸಹದೇವರಭಿಮತವೆಮ್ಮ ಮತವೆನಲು
ಮನ ಮೊದಲು ಕರಣಂಗಳಾತ್ಮಂ
ಗನುಚರರೊ ಬಾಧಕರೊ ನಿಮ್ಮಯ
ಮನಕೆ ಚೆಮ್ಮಾವುಗೆಗಳೆಂದರು ಪವನಜಾದಿಗಳು ೩೬
ಮರಳಿ ಪಾಳೆಯ ಬಿಡಲಿ ಶಿಷ್ಟರ
ಕರೆಸಿ ಪೇಳೆನುತವನಿಪತಿ ಗಜ
ಪುರಿಗೆ ತಿರುಗಿದನರಿಯನೇ ಕೌರವನ ಕೃತ್ರಿಮವ
ಕೊರಳಲಿಕ್ಕಿದ ವಿಧಿಯ ಕಣ್ಣಿಯ
ಹುರಿ ಬಲುಹಲೇ ಧರ್ಮಸುತ ನೊಡ
ಮುರಿಚಲಾಪನೆ ಕೇಳೆ ಜನಮೇಜಯ ಮಹೀಪಾಲ ೩೭
ಸುತರು ಸಚಿವರು ಮಂತ್ರಿಗಳು ನಿಜ
ಸತಿಯರಾಪ್ತರು ಬಂಧುಗಳು ಭೂ
ಪತಿಗಳನುಜರು ಬುಧರು ಚಾತುರ್ಬಲದ ನಾಯಕರು
ಮತವು ಮರಳುವದಲ್ಲ ಧರಣೀ
ಪತಿಯನುತ್ಸಾಹಿಸುವ ಗತಿ ಸಂ
ಗತವಲೇ ನವಗೆನುತ ನಡೆದುದು ಬುಧಜನಸ್ತೋಮ ೩೮
ಭರದ ಪಯಣದಲಿವರು ಹಸ್ತಿನ
ಪುರದ ಹೊರಬಾಹೆಯಲಿ ಬಿಟ್ಟರು
ಪರಿರಚಿತ ಗಜ ತುರಗಶಾಲೆಯ ವಿಪುಳ ವೀಧಿಯಲಿ
ಬಿರಿಯೆ ನೆಲನಳ್ಳಿರಿವ ವಾದ್ಯದ
ಮೊರೆವ ಭೇರಿಯ ಬಹಳ ಕಹಳ
ಸ್ವರದ ಕಳಕಳ ತೀವಿತಬುಜ ಭವಾಂಡ ಖರ್ಪರವ ೩೯
ಏನಿದದ್ಭುತ ರಭಸವಿದೆಲಾ
ಮಾನನಿಧಿಗಳು ಮರಳಿ ಕುಂತೀ
ಸೂನುಗಳ ಬಲ ಬಂದು ಬಿಟ್ಟುದು ಪುರದ ಬಾಹೆಯಲಿ
ಏನು ಕೌರವರೊಡನೆ ಶರ ಸಂ
ಧಾನವೋ ವಿನಯಾನುಗುಣ ಸಂ
ಧಾನವೋ ತಾನೆನುತ ಗಜಬಜಿಸುದುದು ಗಜನಗರ ೪೦
ಪುರವ ಹೊಕ್ಕನು ನೃಪತಿ ಪರಿಮಿತ
ಪರಿಜನದಲಾ ರಾಜ ಬೀದಿಯ
ನೆರವಿ ನೆರವಿಯ ಜನದ ಪುನರಾಗಮನ ವಿಸ್ಮಯವ
ಪರಿಣತ ಸ್ತ್ರೀ ಬಾಲ ವೃದ್ಧರ
ವಿರಸ ವಚನವನಾಲಿಸುತ ನೃಪ
ನರಮನೆಗೆ ಬಂದೆರಗಿದನು ಧೃತರಾಷ್ಟ್ರನಂಘ್ರಿಯಲಿ ೪೧
ಸೋಲದಲಿ ಮನ ನೊಂದು ಹೋದುದು
ಹೋಲದೆಮ್ಮಭಿಮತಕೆ ನಿಮ್ಮೊಳು
ಮೇಳದಿಂದೊಂದಾಗಿ ಮಜ್ಜನ ಭೋಜನಾದಿಗಳ
ಲೀಲೆಯಲಿ ಮಾಡುವದು ಸದ್ಯೂ
ತಾಳಿಯಲಿ ರಮಿಸುವದು ಮನದ ವಿ
ಟಾಳವಿಲ್ಲದೆ ಬದುಕಿ ನಿಮ್ಮೊಳಗೆಂದನಂಧನೃಪ ೪೨
ಕೃತಕವಿಲ್ಲದೆ ಬಂದೆ ನೀನೀ
ವ್ಯಥಿಕರಕೆ ಮನಬಹರೆ ಸುಖ ಸಂ
ಗತ ಸುಹೃದ್ದ್ಯೂತದಲಿ ರಮಿಸೈ ಕಂದ ಹೋಗೆಂದು
ಸುತತನದ ಸೌಹಾರ್ದ ಸಂಭಾ
ವಿತದ ಹೊರಬಾಹೆಯಲಿ ಧರಣೀ
ಪತಿಯನುಪಚರಿಸಿದನು ಚದುರಿಗತನದಿ ಧೃತರಾಷ್ಟ್ರ ೪೩
ಸರ್ವಲೋಕ ವಿನಾಶಕರವೀ
ಗುರ್ವಣೆಯ ದೈವಾಭಿಪಾಕಕೆ
ದರ್ವಿಯಾಯಿತು ಧರ್ಮಪುತ್ರನ ಬುದ್ಧಿವಿಸ್ತಾರ
ಸರ್ವಜನವೊಂದೆಸೆ ಯುಧಿಷ್ಠಿರ
ನೋರ್ವನೊಂದೆಸೆ ಶಕುನಿ ಕೌರವ
ರೀರ್ವರೊಂದೆಸೆ ಜೂಜಿನಭಿಮತವರಸ ಕೇಳೆಂದ ೪೪
ಕಂದು ಕುಳ್ಳಿರ್ದುದು ಸಭಾಸದ
ವೃಂದ ನೆರೆದುದು ಮತ್ತೆ ಜೂಜಿನ
ದಂದುಗದ ದುರ್ವ್ಯಸನ ಮುಸುಕಿತು ಧರ್ಮನಂದನನ
ತಂದು ಮಣಿಮಯ ಸಾರಿವಲಗೆಯ
ನಂದು ಮೋಹರಿಸಿದರು ಜೂಜಿಂ
ಗಿಂದುಕುಲದ ಮಹೀಶನನುವಾದನು ಸರಾಗದಲಿ ೪೫
ಎಳ್ಳನಿತು ಖಯಖೋಡಿ ಚಿತ್ತದೊ
ಳಿಲ್ಲ ನಿಜಪಾಂಡಿತ್ಯ ಪರಿಣತಿ
ಬಿಲ್ಲ ಬಿಸುಟುದು ಬೆದರಿಹೋಯ್ತು ವಿವೇಕವಿಸ್ತಾರ
ಖುಲ್ಲರೊಡನೆಯೆ ಖೇಳಮೇಳಕೆ
ಚಲ್ಲಣವ ವೆಂಟಣಿಸಲಾ ಜನ
ವೆಲ್ಲ ಮರುಗಿತು ಧರ್ಮಜನ ಮರುಜೂಜಿನುಬ್ಬಟೆಗೆ ೪೬
ತೆಗೆದು ಸಾರಿಯ ಹೂಡಿ ಹಾಸಂ
ಗಿಗಳ ಹೊಸೆದನು ಶಕುನಿ ಧರ್ಮಜ
ಹೊಗಳು ಹೊಣೆಯನು ವಚನಿಸೊಡ್ಡವನಿದು ವಿನೋದವಲೆ
ಬಗೆವಡೊಂದೇ ಹಲಗೆ ಮೇಲಣ
ದುಗುಣ ಸಲ್ಲದು ಜೂಜುಗಾರರ
ವಿಗಡತನವಲ್ಲೆಂದು ನೃಪತಿಗೆ ಸೂಸಿದನು ನಗೆಯ ೪೭
ಲಲಿತ ರಾಗದ ರಸದ ಗೋರಿಯ
ಬಿಲುಸವಿಯ ಮೃಗದಂತೆ ವಿಷಯದ
ಕುಳಿಯೊಳಗೆ ಕಾಲ್ದೊಡಕಿ ಬಿದ್ದ ಸುಯೋಗಿಯಂದದಲಿ
ಕಲಿತ ವಿಕಳಾವೇಶದಲಿ ವಿ
ಹ್ವಲಿತ ವಿವಿಧಶ್ರೋತ್ರನಯ ಸಂ
ಕಲಿತನೆಂದನು ಶಕುನಿ ನೀ ನುಡಿಯೊಡ್ಡವೇನೆಂದು ೪೮
ಧರಣಿಪತಿ ಕೇಳ್ ನಿನ್ನ ಧಾರುಣಿ
ಕುರುಪತಿಯ ನೆಲನೊಡ್ಡ ನಿಮ್ಮೀ
ಯೆರಡರಸುಗಳೊಳಾರು ಸೋತರು ಸೋತ ಭೂಪತಿಗೆ
ವರುಷ ಹನ್ನೆರಡರಲಿ ವನದೊಳ
ಗಿರವು ಮೇಣಜ್ಞಾತವೊಂದೇ
ವರುಷ ಹದಿನಾಲ್ಕರಲಿ ಹೊಗುವುದು ತಮ್ಮ ಪಟ್ಟಣವ ೪೯
ಮರೆಯಲಿಹುದಜ್ಞಾತವಾಸದೊ
ಳರಿದರಾದೊಡೆ ಮತ್ತೆ ವನದಲಿ
ಚರಿಸುವುದು ಹನ್ನೆರಡು ವರುಷವು ಸತ್ಯಭಾಷೆಯಲಿ
ಮುರಿದು ತಪ್ಪಿದ ನೃಪನನೀಶ್ವರ
ನರಿವನೈಸಲೆ ರಾಜಧರ್ಮವ
ಮೆರೆವರಾಡುವುದೊಡ್ಡವೀ ಪರಿಯೆಂದನಾ ಶಕುನಿ ೫೦
ಅಂಜುವರೆ ನಿಲು ಜೂಜುಗಾರರ
ಭಂಜವಣೆಗೊಳಗಹರೆ ಬಾ ನೃಪ
ರೆಂಜಲಿಸಿ ಬಿಡಬಹುದೆ ಪರಮದ್ಯೂತ ರಸಸುಧೆಯ
ರಂಜಕರು ನಾವಲ್ಲ ಜೂಜಿಗೆ
ಕಂಜಭವ ತಾನೆನ್ನೊಡನೆ ಕೆಲ
ರಂಜದಿಹರಾರೆಂದು ಗರುವವ ಸೂಸಿದನು ಶಕುನಿ ೫೧
ಉಗ್ರಭಾಷೆಯದೇಕೆ ಶಿವಶಿವ
ವಿಗ್ರಹ ಪ್ರತಿಮುಖದ ವಿಷಮಾ
ವಗ್ರಹದಲಿದು ಬೆಂದುಹೋಗದೆ ಭರತಸಂತಾನ
ನಿಗ್ರಹಿಸಲೇಕಕಟ ಕುರುಕುಲ
ದಗ್ರಿಯನನೆಂದಖಿಳ ಸಚಿವರು
ದಗ್ರಚರಿತರು ಮುರಿದು ನುಡಿದರು ನೀತಿವಚನದಲಿ ೫೨
ವಿದುರ ಗುರು ಗುರುಸೂನು ಬಾಹ್ಲಿಕ
ನದಿಯ ಮಗ ಗಾಂಧಾರಿ ಕುಂತೀ
ಸುದತಿ ಭೂರಿಶ್ರವ ಯುಯುತ್ಸು ವಿಕರ್ಣ ಸೃಂಜಯರು
ಇದು ವಿಷಮವೆಂದಾ ಕೃಪ ದ್ರೌ
ಪದಿ ವೃಕೋದರ ಪಾರ್ಥ ಯಮಳರು
ಕುದಿದರೊಳಗೊಳಗಾಡಲಮ್ಮದೆ ರಾಯನಿದಿರಿನಲಿ ೫೩
ಕ್ಷಿತಿಪ ಕೇಳ್ ದುರ್ವ್ಯಸನ ವಿಷಮ
ವ್ಯತಿಕರದ ಭಾಷೆಯನು ನೃಪ ಮಿಗೆ
ಪತಿಕರಿಸಿದನು ಹೊಸೆದು ಹಾಸಂಗಿಗಳ ಹಾಯ್ಕಿದನು
ಸತಿಯ ದಕ್ಷಿಣ ನಯನವೀ ಭೂ
ಪತಿಯ ವಾಮ ಭುಜಾಕ್ಷಿಗಳು ದು
ರ್ಗತಿಯ ಸೂಚಿಸಿ ತೋರುತಿರ್ದವು ಧರ್ಮನಂದನನ ೫೪
ದಾಯವೇ ಮಝ ಪೂತು ದುಗತಿಗ
ನಾಯಸವಲೇ ಚೌಕವೊಂದೆ
ಕಾಯಲಾಗದೆ ಹಾಯ್ದು ಹಾಯ್ಕೆಂದೊದರಿ ಗರ್ಜಿಸಿದ
ರಾಯ ಸೋತನು ಧರ್ಮಸುತ ಕುರು
ರಾಯ ಗೆಲಿದನು ಕಟ್ಟು ಗುಡಿಯನು
ರಾಯನೂರೊಳಗೆಂದು ಮಿಗೆ ಬೊಬ್ಬಿರಿದನಾ ಶಕುನಿ ೫೫
ಹಣುಗಿತರಸನ ವದನ ತಾಳಿಗೆ
ಯೊಣಗಿತವನಿಗೆ ನಟ್ಟದಿಟ್ಟಿಯ
ಮಣಿದ ನೆನಹಿನ ಮುರಿದ ಮಹಿಮೆಯ ತಾಗಿದಪದೆಸೆಯ
ಜುಣುಗಿದುಬ್ಬಿನ ಸತ್ಯದಲಿ ಕೇ
ವಣಿಸಿದರಿವಿನ ವಿಕೃತ ಕರ್ಮದ
ಕುಣಿಕೆಗೊಲೆದೊಲೆದರಸನಿದ್ದನು ಹೊತ್ತ ದುಗುಡದಲಿ ೫೬
ಉಬ್ಬು ಮುರಿದುದು ತಮ್ಮೊಳೊಬ್ಬರ
ನೊಬ್ಬ ನೀಕ್ಷಿಸಿ ಕೈಯ್ಯಗಲ್ಲದ
ನಿಬ್ಬರದ ನಿಡುಸುಯ್ಲ ಖೋಡಿಯ ಮನದ ಕಳ್ಗುದಿಯ
ಜಬ್ಬುಲಿಯ ಜಾಣಿಕೆಯ ಚಿಂತೆಯ
ಹಬ್ಬುಗೆಯ ಹರವಸದ ಖೇದದ
ಮಬ್ಬಿನಲಿ ಹಣಗಿದರು ಪವನಜ ಫಲುಗುಣಾದಿಗಳು ೫೭
ಕಂಡನೇ ಧೃತರಾಷ್ಟ್ರನನು ಕೈ
ಕೊಂಡನೇ ವನ ದೀಕ್ಷೆಯನು ಪಿತ
ನಂಡಲೆದು ಕೃಷ್ಣಾಜಿನವನುಡುಗೊರೆಯನಿತ್ತನಲೆ
ಚಂಡಿಗೊಂಡರೆ ನನಗೆ ನಿನ್ನಿನ
ಭಂಡತನ ಬಾರದಲೆ ವನವಾ
ಖಂಡಲಪ್ರಸ್ಥವಲೆ ನಿನಗಿನ್ನೆಂದಳಿಂದುಮುಖಿ ೫೮
ಕಳೆದು ಬಿಸುಟರು ಮತ್ತೆ ರತ್ನಾ
ವಳಿಯ ವಿವಿಧಾಭರಣವನು ಪರಿ
ಲಲಿತ ಕೃಷ್ಣಾಜಿನವ ಹೊದೆದರು ಹಾಯ್ಕಿ ಹಚ್ಚಡವ
ನಳಿನಮುಖಿ ನಳನಳಿಪ ಮುಕ್ತಾ
ವಳಿಯಲಂಕಾರವನುಗಿದು ಸಭೆ
ಯೊಳಗೆ ಬಿಸುಟಳು ನಿಂದಳಬಲೆ ನಿಜಾಭಿರೂಪದಲಿ ೫೯
ಸಾಲದೇ ನಿಮಗಿನ್ನು ಕೌರವ
ರೋಲಗದ ಫಲವಾಯ್ತಲಾ ವನ
ಮಾಲೆ ಕೊರಳಿಂಗಲ್ಲ ಚರಣಾಭರಣವಾಯಿತೆಲೆ
ಬೀಳುಕೊಳಿರೇ ಬೊಪ್ಪನವರನು
ಮೇಲೆ ಮೋಹದ ತಾಯಲಾ ನಡೆ
ಹೇಳಿ ಕಳುಹಿಸಿಕೊಂಬೆವೆಂದನು ಭೂಪತಿಗೆ ಭೀಮ ೬೦
ಬಂದರಿವರರಮನೆಗೆ ನೇಮವೆ
ಯೆಂದು ಪದಕೆರಗಿದರೆ ಕಣು ನೀ
ರಿಂದ ನನೆದನು ತಂದೆ ಮಕ್ಕಳ ಬಿಟ್ಟು ಬದುಕುವನೆ
ಇಂದುಮುಖಿ ಮರುಗಿದಳು ನಾವಿ
ನ್ನೆಂದು ಕಾಬೆವು ನಿಮ್ಮನಕಟಕ
ಟೆಂದಳತಿ ಮೋಹಿತೆಯಲಾ ಕುಂತೀ ಕುಮಾರರಿಗೆ ೬೧
ವನದೊಳತ್ಯಾಯಾಸ ನೀವೆಂ
ತನುಭವಿಸುವಿರಿ ಪಾಪಿ ದುರ್ಯೋ
ಧನನ ದುರ್ಜನ ಸಂಗ ನಿವಗಿದು ಸಿಂಗಿಯಾದುದಲೆ
ವನಿತೆ ನಿಮ್ಮೊಡನೆಂತು ತೊಳಲುವ
ಳನವರತ ಗಿರಿ ಗುಹೆಯ ಘಟ್ಟವ
ನೆನುತ ನುಡಿದಳು ಕುಟಿಲಗರ್ಭದ ಗುಣದ ಬೆಳವಿಗೆಯ ೬೨
ಬೀಳುಕೊಡಿರೇ ಸಾಕು ಬಹಳ ಕೃ
ಪಾಳುಗಳೆಲಾ ವಿಧಿಯ ಚಿತ್ತ ವಿ
ಟಾಳ ಗತಿಗೇನಾಯ್ತು ಹದಿಮೂರಬುದವವಧಿಯಲೆ
ಮೇಲೆ ನಿಮ್ಮಾತ್ಮಜರಿಗವನೀ
ಪಾಲನೆಯ ಪರುಟವದ ಪಟ್ಟವ
ಪಾಲಿಸುವರೀದಕೇನು ಹೊಲ್ಲೆಹವೆಂದನಾ ಧೌಮ್ಯ ೬೩
ಫಲಕುಜದ ಪಲ್ಲವದ ಪದ ಕರ
ತಳದ ವಿಪುಲ ತಮಾಲ ಪತ್ರದ
ಲಲಿತ ಕೇತಕಿ ನಖದ ದಾಡಿಮ ದಂತ ಪಂಗ್ತಿಗಳ
ನಳಿನ ನಯನದ ಮಧುಪ ಕುಲ ಕುಂ
ತಳದ ವನಸಿರಿ ಸವತಿಯಾದಳು
ಜಲಜಮುಖಿ ಪಾಂಚಾಲೆಗೆಂದನು ಧೌಮ್ಯಮುನಿ ನಗುತ ೬೪
ಇವರು ಕಳುಹಿಸಿಕೊಂಡರಾ ನೃಪ
ಭವನವನು ಹೊರವಂಟರೊಡನು
ತ್ಸ ವವಿಹೀನರು ವಿದುರ ಭೀಷ್ಮ ದ್ರೋಣ ಗೌತಮರು
ಅವನಿಪತಿ ದುರ್ಯೋಧನಾದಿಗ
ಳವನ ಸಹಭವರುಳಿಯೆ ಬಂದುದು
ವಿವಿಧಜನದೊತೊತ್ತೆ ಮಸಗಿತು ರಾಜಬೀದಿಯಲಿ ೬೫
ಸಂದಣಿಸಿದುದು ಕೇರಿ ಕೇರಿಯ
ಮಂದಿ ಮನೆಮನೆ ಮೇಲೆ ಘನತರು
ವೃಂದದಲಿ ಪುರಸದನ ಶಿಖರೌಘದಲಿ ಶೋಕಿಸುತ
ನಿಂದುದಲ್ಲಿಯದಲ್ಲಿ ನೋಟಕ
ರಿಂದ ಕೆತ್ತುದು ಬೀದಿ ಪುರಜನ
ಬಂಧಿಯಲಿ ಸಿಲುಕಿದ ನೃಪಾಲರು ನಡೆದರೊಗ್ಗಿನಲಿ ೬೬
ಕುತ್ತುದಲೆಗಳ ಮೃಗದ ತೊಗಲಿನ
ಸುತ್ತು ಹೊದಕೆಗಳೆಡದ ಕೈಗಳೊ
ಳೆತ್ತಿದಾಯುಧ ತತಿಯ ಭಂಗದ ಭೂರಿ ತಾಪದಲಿ
ಹೊತ್ತು ವೆದೆಗಳ ಹೊಗೆವ ಮೋರೆಯ
ಕಿತ್ತಡದ ಕಡುಗೋಪ ಸುವತೆಗ
ಳಿತ್ತಡಿಯ ತಡವಾಯ್ವ ನೃಪರೈತಂದರೊಗ್ಗಿನಲಿ ೬೭
ಮುಂದಣಾತನು ಪಾರ್ಥನಾತನ
ಹಿಂದೆ ಭೂಪತಿ ಧರ್ಮಪುತ್ರನ
ಹಿಂದೆ ಮಾದ್ರೀತನಯರಿಬ್ಬರ ಹಿಂದೆ ಪಾಂಚಾಲೆ
ಹಿಂದೆ ಕುಂತೀದೇವಿಯಾಕೆಯ
ಹಿಂದಣಾತನು ಭೀಮನೆಂದಾ
ಮಂದಿ ತೋರಿದುದೊಬ್ಬರೊಬ್ಬರಿಗಿವರನೀಕ್ಷಿಸುತ ೬೮
ಹರನ ಜೋಡು ಮುರಾಂತಕನ ಸಮ
ದೊರೆ ವಿರಿಂಚನ ಪಾಡು ಶಕ್ರನ
ಸರಿಸದವರಿಗೆ ಭಂಗವೀ ವಿಧಿಯೀ ವಿಪತ್ತುಗಳೆ
ನರರನೀ ಕೌರವರ ಮಿಕ್ಕಿನ
ನೊರಜುಗಳ ಪಾಡೇನು ಶಿವಶಿವ
ಕರುಣಿಯಲ್ಲ ವಿಧಾತ್ರನೆಂದುದು ನೆರೆದ ಜನನಿಕರ ೬೯
ಕೇಳಿದಭಿಮನ್ಯು ಪ್ರಮುಖ ಭೂ
ಪಾಲ ತನುಜರು ಸಚಿವರಾಪ್ತರು
ಪಾಳೆಯದ ತಲ್ಲಣದ ಖಯಖೋಡಿಯ ಮನೋವ್ಯಥೆಯ
ಹೇಳಲರಿಯೆನು ಬಂದು ಕಂಡರು
ಗೋಳಿಡುತ ಪದಕೆರಗಿದರು ನೃಪ
ನಾಲಿ ನೀರೇರಿದುವು ನನೆದರು ನಯನವಾರಿಯಲಿ ೭೦
ಕರೆಸಿದನು ಪರಿವಾರವನು ನಿಮ
ಗರಸು ಕೌರವನೆಮ್ಮ ಗಜ ರಥ
ತುರಗ ಕೊಟ್ಟಿಗೆಯೆತ್ತು ಭಂಡಿ ಕೊಟಾರ ಕೊಪ್ಪರಿಗೆ
ಸರಕು ಸರ್ವಸ್ವಗಳು ಕೌರವ
ನರಮನೆಗೆ ನಡೆಯಲಿ ವನಾಂತದೊ
ಳಿರವು ನಮಗೆಂದರುಹಿದನು ಸಚಿವರಿಗೆ ಸಹದೇವ ೭೧
ಕರಿಗಳನು ಕೌರವನ ಮಾವಂ
ತರಿಗೆ ಕೈಗೊಳಿಸಿದರು ರಥ ಹಯ
ತುರುಗಳುಂ ಕೈವರ್ತಿಸಿತು ಸೂತರಿಗೆ ಗೋವರಿಗೆ
ಸರಕನವನಿಪನನುಚರರಿಗು
ತ್ತರಿಸಿದರು ಪಾರಕವನೊಪ್ಪಿಸಿ
ವರ ಸುಭಟರಳವಡಿಸಿಕೊಂಡರು ಕಾನನೋಚಿತವ ೭೨
ಹರಿದರಿಂದ್ರಪ್ರಸ್ಥ ಕಾತನ
ಚರರು ಸಚಿವರು ಹೊಕ್ಕು ಪಾಂಡವ
ರರಮನೆಯ ಮುದ್ರಿಸಿದರಲ್ಲಿಯ ನಾಡು ಬೀಡುಗಳ
ಕರೆಸಿ ಕಾಣಿಕೆಗೊಂಡು ಠಾಣಾಂ
ತರದ ನಾಯಕವಾಡಿಗಳ ಸಂ
ವರಣೆಗಳ ಸಂತವಿಸಿದರು ಕುರುರಾಜ ಮುದ್ರೆಯಲಿ ೭೩
ಅರಸ ಕೇಳಾಶ್ಚರ್ಯವನು ಗಜ
ಪುರದ ಬೀದಿಯೊಳಿವರು ಬರುತಿರೆ
ದುರುಳ ದುಶ್ಶಾಸನನು ಮಿಗೆ ಹರಿತಂದನೇಡಿಸುತ
ಬೆರಲನಾಡಿಸಿ ಹೋದರೀ ಹೋ
ದರಸು ಕಾನನದೆತ್ತು ಪುನರಪಿ
ಸರಿದವೆತ್ತುಗಳೆನುತ ಬಂದನು ಹಿಂದೆ ಪವನಜನ ೭೪
ತಿರುಗಿ ಕಂಡನು ಭೀಮನುಬ್ಬಿದ
ಹರುಷಹೃದಯನ ಮನದ ರೋಷದೊ
ಳರಸನನು ನೋಡಿದನು ಭೂಪತಿ ಮೊಗದ ಸನ್ನೆಯಲಿ
ತಿರುಹಿದನು ತಮ್ಮನನು ಗದೆಯನು
ತಿರುಗಿ ಹಾಯಿಕಿ ಹಿಡಿದು ಮಾರುತಿ
ಯಸರನಾಜ್ಞೆಯೊಳಂಜಿ ನಡೆದನು ನೃಪತಿ ಕೇಳೆಂದ ೭೫
ಪುರವ ಹೊರವಂಟಿವರು ಗಂಗಾ
ವರನದಿಯ ತೀರದಲಿ ನಿಂದರು
ಪರಿಜನವ ಕಳುಹಿದರು ಧೃತರಾಷ್ಟ್ರನ ಪಸಾಯಿತರ
ಗುರುಜನಕೆ ಪೊಡವಂಟು ಬೀಳ್ಕೊಂ
ಡರು ನದೀಜ ದ್ರೋಣ ಕೃಪರನು
ಕರೆದು ಕುಂತಿಯ ನಿಲಿಸಿದರು ವಿದುರನ ನಿವಾಸದಲಿ ೭೬
ಕಳುಹಿ ಮರಳಿದು ವಿದುರನರಸನ
ನಿಲಯಕೈತಂದನು ಕುಮಾರರ
ಕಳುಹಿ ಬಂದೈ ತಮ್ಮ ಮತವೇನಾ ಯುಧಿಷ್ಠಿರನ
ಉಳಿದವರ ಹದನೇನು ದುರುಪದಿ
ಲಲನೆಯೇನೆಂದಳು ನಿದಾನವ
ತಿಳಿದು ಬಂದೈ ಹೇಳೆನುತ ಧೃತರಾಷ್ಟ್ರ ಬೆಸಗೊಂಡ ೭೭
ಮುನಿಪ ಜಪಿಸುತ ಹೋದನಗ್ನಿಯ
ವಿನುತ ಸೂಕ್ತವನೆತ್ತುಗೈದುವಿ
ನನಿಲಜನು ದುಗುಡದಲಿ ಫಲುಗುಣ ಯಮಳರೊಂದಾಗಿ
ವನಿತೆಯನು ನಡುವಿಟ್ಟು ಹೊರವಂ
ಟನು ಯುಧಿಷ್ಠಿರ ನೃಪತಿ ನಿಯತದಿ
ನೆನೆವುತಿದ್ದನು ವೀರನಾರಾಯಣನ ಪದಯುಗವ ೭೮
ಇತಿ ಶ್ರೀಮದಚಿಂತ್ಯ ಮಹಿಮ ಗದುಗು ವೀರನಾರಾಯಣ ಚರಣಾರವಿಂದ
ಮಕರಂದ ಮಧುಪಾನ ಪುಷ್ಟವಚಃ ಷಟ್ಪದೀ ನಿಕಾಯ
ಶ್ರೀಮತ್ಕುಮಾರವ್ಯಾಸ ಯೋಗೀಂದ್ರ ವಿರಚಿತಮಪ್ಪ
ಕರ್ಣಾಟ ಭಾರತ ಕಥಾಮಂಜರಿಯೊಳ್
ಸಭಾಪರ್ವ ಸಮಾಪ್ತಮಾದುದು .