ಹದಿನಾಲ್ಕನೆಯ ಸಂಧಿ

ಸೂಚನೆ . ರಾಯ ಪಾಂಡವರರಸಿ ಕಮಲ ದ
ಳಾಯತಾಕ್ಷಿಯ ಪರಿಭವವನೆರೆ
ಕಾಯಿದುದೆಲಾ ವೀರ ನಾರಾಯಣನ ಸಿರಿನಾಮ

ಕೇಳು ಜನಮೇಜಯ ಧರಿತ್ರೀ
ಪಾಲ ವಿದುರನ ಮಾತ ಮುರಿದು ನೃ
ಪಾಲನೆಚ್ಚರಿಸಿದನು ಕಣುಸನ್ನೆಯಲಿ ಸೌಬಲನ
ಏಳು ಧರ್ಮಜ ಸೋತೆಲಾ ನಿ
ನ್ನಾಳು ಕುದುರೆಯನಿನ್ನು ಸಾಕು ದ
ಯಾಳುವಲ್ಲ ಸುಯೋಧನನು ಧನವಿಲ್ಲ ನಿನಗೆಂದ ೧

ತೆಗೆವೆನೇ ಸಾರಿಗಳ ನಿನ್ನೀ
ನಗೆಮೊಗದ ಸಿರಿ ಸೀದು ಕರಿಯಾ
ಯ್ತುಗುಳುತಿದೆ ನಿನ್ನನುಜರಿಂಗಿತ ರೋಷಪಾವಕನ
ಸೊಗಸು ಬೀಯದು ರಪಣವಿಲ್ಲದ
ಬೆಗಡು ನೋಯದು ಕ್ಷತ್ರಧರ್ಮದ
ತಗಹು ಸಾಯದು ನಿನಗೆನುತ ಗಹಗಹಿಸಿದನು ಶಕುನಿ ೨

ಎಲವೊ ಸೌಬಲ ವಿತ್ತವೀಸರ
ಲಳಿದುದೇ ನೀ ನಗುವವೋಲ್ನ
ಮ್ಮೊಳಗು ಡಿಳ್ಳವೆ ರಪಣವಿದೆಲಾ ಬಹಳ ಭಂಡಾರ
ಸುಳಿಸು ಹಾಸಂಗಿಗಳ ಮೋಹರ
ಗೊಳಿಸು ಸಾರಿಯನೊಂದು ರೇಖೆಯ
ಬಳಿಯಲೊಂದೇ ಕೋಟಿ ಧನವೆಂದೊದರಿದನು ಭೂಪ ೩

ದುಗುಣಕಿಕ್ಕಿದನರಸನಾಚೆಗೆ
ತೆಗೆದನವ ಮೂರೆಂದು ನಾಲ್ಕ
ಕ್ಕುಗಿದನವ ನಿಪನೈದ ಕಳೆದನು ಬಹಳವನು ಶಕುನಿ
ತೆಗೆದ ನಿಮ್ಮಡಿಗರಸನವನಾ
ತ್ರಿಗುಣ ಪಂಚಕ ಸಪ್ತ ನವಮ
ಪ್ರಗುಣವೆಂದನು ಶಕುನಿ ಸೋಲಿಸಿದನು ಮಹೀಪತಿಯ ೪

ಎಣಿಸಿದನು ರೇಖೆಗಳ ನಿಮ್ಮೊಡ
ಗಣಿತ ಸಂಖ್ಯಾ ಸಿದ್ಧವಸ್ತುವ
ನೆಣಿಸಲರ್ಬುದ ಸಂಖ್ಯೆಯಾಯಿತು ಹಲಗೆಯೊಂದರಲಿ
ಗುಣನಿಧಿಯೆ ಮಗುಳೊಡ್ಡಲಾಪರೆ
ಪಣವ ಸಬುದಿಸು ಕೇಳ್ವೆನೆನೆ ನೃಪ
ಗುಣ ಶಿರೋಮಣಿ ಧರ್ಮಸುತ ನಸುನಗುತಲಿಂತೆಂದ ೫

ಹೂಡು ಸಾರಿಯ ರೇಖೆ ರೇಖೆಗೆ
ಮಾಡಿದರ್ಬುದ ಧನ ಸುಯೋಧನ
ನಾಡಿ ನೋಡಲಿ ಹಾಯ್ದು ಹಾಸಂಗಿಗಳ ಹಾಯ್ಕೆನುತ
ಆಡಿದನು ಯಮಸೂನು ಖಾಡಾ
ಖಾಡಿಯಲಿ ಸಾರಿಗಳೊಡನೆ ಹೋ
ಗಾಡಿದನು ಭಂಡಾರವನು ಭೂಪಾಲ ಕೇಳೆಂದ ೬

ಸಾರಿ ಸೋತವು ಸೋಲು ನಿನಗನು
ಸಾರಿ ನೀವೈವರು ವನಾಂತಕೆ
ಸಾರಿ ಸಾಕಿನ್ನೊಡ್ಡಲಾಪರೆ ಮತ್ತೆ ನುಡಿ ಧನವ
ಭೂರಮಣ ಹೇಳೆನಲು ರೇಖೆಯ
ಭಾರಿಯೊಡ್ಡಕೆ ಪದ್ಮ ಸಂಖ್ಯೆಯ
ಭೂರಿ ಧನವಿದೆ ರಪಣವೆಂದನು ನಗುತ ಯಮಸೂನು ೭

ಬರಹಕಿಮ್ಮಡಿ ನೂರು ಮಡಿ ಸಾ
ವಿರದ ಮಡಿ ಪರಿಯಂತವಿಕ್ಕಿತು
ಹರುಷ ನನಗೆ ಕೊನೆಯಾಯ್ತು ಹೆಚ್ಚಿತು ಕಲಿಮಲಾವೇಶ
ಸ್ಥಿರವೆ ಹಿಂಗಿತು ವಾಸಿ ಪಾಡಿನ
ದುರುಳತನವುಬ್ಬೆದ್ದುದಡಿಗಡಿ
ಗರಸನೊಡ್ಡಿದ ಮೇಲೆ ಮೇಲೊಡ್ಡವನು ವಿರಚಿಸಿದ ೮

ತೀರಿತಿಂದ್ರಪ್ರಸ್ಥದುರು ಭಂ
ಡಾರ ತನ್ನರಮನೆಯ ಪೈಕದ
ವಾರಕದ ಭಂಗಾರವೊಡ್ಡಿತು ಕೋಟಿ ಸಂಖ್ಯೆಯಲಿ
ಸೇರಿತದು ಕುರುಪತಿಗೆ ರಾಯನ
ನಾರಿಯರ ವಿವಿಧಾಭರಣ ಸಿಂ
ಗಾರವೊಡ್ಡಿತು ಕೊಂಡು ಮುಳುಗಿತು ಖಡ್ಡತನ ನೃಪನ ೯

ನಕುಲ ಸಹದೇವಾರ್ಜುನರ ಮಣಿ
ಮಕುಟ ಕರ್ಣಾಭರಣ ಪದಕಾ
ದಿಕ ಸಮಸ್ತಾಭರಣವೊಡ್ಡಿತು ಹಲಗೆಯೊಂದರಲಿ
ವಿಕಟ ಮಾಯಾ ವಿಷಮ ಕರ್ಮವ
ನಕಟ ಬಲ್ಲನೆ ಸಾಧುಜನ ಸೇ
ವಕನು ಸೋತನು ಸಾಧ್ಯವಹುದೇ ವಿಧಿಯ ಮುಳಿಸಿನಲಿ ೧೦

ಸೋತೆಲಾ ಕೌಂತೇಯ ನಿಮಿಷಕೆ
ಬೀತುದೇ ನಿನ್ನಖಿಳ ಸಿರಿ ವಿ
ಖ್ಯಾತಿ ಬರತುದೆ ವೇಡೆಗೆದರಿತೆ ಮನದ ವಾಸಿಗಳ
ಪ್ರೀತಿಯುಂಟೇ ನಿಮಗೆ ಮತ್ತೀ
ದ್ಯೂತದಲಿ ಧನವಿಲ್ಲಲಾ ಗ
ರ್ವಾತಿರೇಕವ ಬೀಳುಗೊಂಡಿರೆಯೆಂದನಾ ಶಕುನಿ ೧೧

ಖಿನ್ನ ನಾದನು ರಾಜ್ಯಲಕ್ಷ್ಮಿಯ
ಬೆನ್ನ ಕಂಡನು ಬಳಚಿಹೋದ ನಿ
ಜೋನ್ನತಿಯಲವನೀಶನಿದ್ದನು ಮುರಿದ ಮಹಿಮೆಯಲಿ
ಇನ್ನು ಪಣವೇನೋ ವಿರೋಧಿಗ
ಳೆನ್ನ ಭಂಗಿಸಿ ನುಡಿದರಿದಕಿ
ನ್ನೆನ್ನನಿಕ್ಕಿ ದ್ಯೂತವಿಜಯವ ಸಾಧಿಸುವೆನೆಂದ ೧೨

ಎಲವೊ ಫಡ ಫಡ ಶಕುನಿ ಗರ್ವದ
ತಳಿ ಮುರಿವುದೇ ನಿನ್ನ ದುರ್ಮತಿ
ಗಳಿಗೆ ಹೂಡಿದ ದುರ್ಗವಿದೆ ತನ್ನಂತರಂಗದಲಿ
ಉಳಿದ ಧನವೇಗುವುದು ಜೀವ
ಸ್ಥಳವಿದೇ ಮೇಲೊಡ್ಡವೊಂದೇ
ಹಲಗೆಗೊಡ್ಡಿದೆನೆನ್ನ ನಕುಲನನೆಂದನಾ ಭೂಪ ೧೩

ವಾಸಿಗನುಜನನೊಡ್ಡಿದರೆ ನಮ
ಗೀಸರಲಿ ಭಯವೇನು ನೋಡುವೆ
ವೈಸಲೇ ನೃಪ ಹಾಯ್ದು ಹಾಸಂಗಿಗಳ ಹಾಯ್ಕೆನುತ
ಆ ಶಕುನಿ ಪೂರ್ವಾರ್ಜಿತದ ಡೊ
ಳ್ಳಾಸದಲಿ ಡಾವರಿಸಿ ಧರ್ಮ ವಿ
ನಾಶಿ ನಕುಲನ ಗೆಲಿದು ಬೊಬ್ಬಿರಿದನವನಿಪನ ಜರೆದ ೧೪

ಅರಸ ಸೋತೈ ನಕುಲನನು ಹೇ
ವರಿಸದಿರು ಹೇಳೊಡ್ಡವನು ವಿ
ಸ್ತರಿಸಲೊಂದೇ ಹಲಗೆ ಸೋಲ್ವುದು ಹೇಳು ಹೇಳೆನಲು
ವರಿಸಿದೆನು ಸಹದೇವನನು ನೆರೆ
ಮರಳಿಚುವೆನೆನನ್ನಖಿಳ ವಸ್ತೂ
ತ್ಕರವನೆಂದನು ಧರ್ಮನಂದನನರಸ ಕೇಳೆಂದ ೧೫

ಹರಿಬದಲಿ ತನ್ನಖಿಳ ವಸ್ತೂ
ತ್ಕರವ ಮರಳಿಚುವನು ಮಹೀಪತಿ
ಕಿರಿಯ ತಮ್ಮನಪೊಡ್ಡಿದನು ಮಾದ್ರೀ ಕುಮಾರಕನ
ಅರಸ ದಾಯವೆ ಬಾ ಜಯಾಂಗದ
ಸಿರಿಯೆ ಬಾ ಕುರುರಾಯ ರಾಜೋ
ತ್ಕರುಷ ಸಿದ್ಧಿಯೆ ಬಾಯೆನುತ ಗರ್ಜಿಸಿದನಾ ಶಕುನಿ ೧೬

ಏನ ಬಣ್ಣಿಸುವೆನು ವಿಕಾರಿಗ
ಳೇನ ನೆನೆಯರು ಕಪಟ ವಿಧದಲಿ
ಮಾನನಿಧಿ ತಾ ಸೋತನನುಜದ್ವಯ ಮಹಾಧನವ
ಗ್ಲಾನಿಚಿತ್ತದೊಳಿಲ್ಲಲೇ ಸುಮ
ನೋನುರಾಗವೆ ಭೀಮ ಪಾರ್ಥರು
ತಾನಿದೊಮ್ಮಿಗೆ ಬದುಕಿದರು ನಿಮಗೆಂದನಾ ಶಕುನಿ ೧೭

ಭೇದ ಮಂತ್ರವ ಮಾಡಿ ನಮ್ಮನು
ಭೇದಿಸುವ ಗಡ ಸುಬಲ ಸುತನಕ
ಟೀ ದುರಾತ್ಮನ ನೋಡಿರೈ ಸಭ್ಯರು ಶಿವಾಯೆನುತ
ಆ ದುರಾಗ್ರಹಿ ಲೋಕಜನ ಪರಿ
ವಾದ ಪದನಿರ್ಭೀತನಕ್ಷ ವಿ
ನೋದ ಕರ್ದಮ ಮಗ್ನನೊಡ್ಡಿದನಾ ಧನಂಜಯನ ೧೮

ಎಲೆ ಧನಂಜಯ ನಿನ್ನನೊಡ್ಡಿದ
ಛಲಿ ಯುಧಿಷ್ಠಿರನಿಲ್ಲಿ ಸೋತರೆ
ಬಳಿಕ ನಿನ್ನನು ಮಾರಿದನಲಾ ಕೌರವೇಶ್ವರಗೆ
ತಿಳಿದು ಭೀಮಾರ್ಜುನರು ನೀವ್ ನಿ
ಮ್ಮೊಳಗೆ ಬಲಿದಿಹುದೆನಲು ಖತಿಯಲಿ
ಮುಳಿದು ಬೈದರು ಭೀಮ ಪಾರ್ಥರು ಸುಬಲನಂದನನ೧೯

ದೇಹಿಗೆರವೇ ದೇಹವೆಲವೋ
ದೇಹಿ ಭೂಪತಿ ಧರ್ಮಪುತ್ರನ
ದೇಹವಾವಿದರೊಳಗೆ ನಿನ್ನ ಕುಮಂತ್ರಭಾವಿತದ
ಊಹೆಗೊಂಬುದೆ ಕಪಟದಿಂದವ
ಗಾಹಿಸುವೆ ಸಾಕಿನ್ನು ಮೇಲಣ
ಗಾಹುಗತಕಗಳೆಮ್ಮೊಳೆಂದರು ಜರೆದು ಸೌಬಲನ ೨೦

ಮೇಲೆ ಹೇಳುವುದೇನು ಸಾರಿಯ
ಸಾಲು ಮುರಿದುದು ಸೆರೆಯ ಕಳವಿನ
ಕಾಲು ಕೀಲ್ಗಳನಾರು ಬಲ್ಲರು ಕುಟಿಲ ಕೋವಿದರ
ಹೇಳುವದರಿಮ್ಮುನ್ನ ಶಕುನಿಗೆ
ಬೀಳುವುದು ಬೇಕಾದ ದಾಯವು
ಕೌಳಿಕದ ವಿಧಿ ಪಾಶ ತೊಡಕಿತು ನೀಗಿತರ್ಜುನನ ೨೧

ಸೋತಿರರಸರೆ ಮತ್ತೆ ಹೇಳೀ
ದ್ಯೂತ ಶಿಖಿಗಾಹುತಿಯನೆನೆ ಕುಂ
ತೀತನುಜನೊಡ್ಡಿದನು ವಿಗಡ ಬಕಾಸುರಾಂತಕನ
ಆತುದೊಂದರೆಗಳಿಗೆ ಸೌಬಲ
ಸೋತ ಧರ್ಮಜ ಗೆಲಿದ ಧರ್ಮಜ
ಸೋತ ಸೌಬಲ ಗೆಲಿದನೆಂಬವೊಲಾಯ್ತು ಘನ ರಭಸ ೨೨
ಆ ಹಲಗೆ ಸೋತುದು ಯುಧಿಷ್ಠಿರ
ನೂಹೆ ಮುರಿದುದು ಮುಂದುಗೆಟ್ಟನು
ರಾಹುಹಿಡಿದ ಹಿಮಾಂಶು ಮಂಡಲದುಳಿದ ಕಳೆಯಂತೆ
ತೋಹಿನಲಿ ತೊಟ್ಟಿಸಿದ ಮೃಗದವೊ
ಲೂಹೆಯಳಿದುದು ಯಂತ್ರಸೂತ್ರದ
ಹೂಹೆಯಂತಿರೆ ನೃಪತಿ ತೆತ್ತನು ಹಗೆಗೆ ತನುಧನವ ೨೩

ಜನಪ ಮಾರಿದೆ ಭೀಮಸೇನಾ
ರ್ಜುನರು ಸಹಿತೊಡಹುಟ್ಟಿದರ ನಿ
ರ್ಧನಿಕನಾಗಿಯು ಮತ್ತೆ ಬಿಡದೇ ದ್ಯೂತ ದುರ್ವ್ಯಸನ
ಎನಲು ಶಕುನಿಯ ಜರೆದು ತಾನೇ
ಧನವಲಾ ಸಾಕೊಂದು ಹಲಗೆಯೊ
ಳೆನಗೆ ಜಯವೀ ದಾಯವೆಂದೊಡ್ಡಿದನು ಜನನಾಥ ೨೪

ಹೇಳಲೇನದನವರು ರಚಿಸಿದ
ಬೇಳುವೆಯನಾ ಶಕುನಿಯೊಡ್ಡಿದ
ಕಾಲು ಕುಣಿಕೆಯೊಳಾರು ಬೀಳರು ನೃಪತಿ ನಿಮಿಷದಲಿ
ಬೀಳುಗೊಟ್ಟನು ತನ್ನನಾ ಜನ
ಜಾಲವಿದ್ದುದು ಬಿಗಿದ ಬೆರಗಿನೊ
ಳಾಲಿಸುವಿರೇ ಜೀಯ ಪಣವೇನೆಂದನಾ ಶಕುನಿ ೨೫

ಎಲವೊ ಸೌಬಲ ಸಾಕಿದೊಂದೇ
ಹಲಗೆ ಸರ್ವಸ್ವಾಪಹಾರವ
ನಿಳುಹುವೆನು ನೀಲಾಳಕಿಯನೊಡ್ಡುವೆನು ಬಾಲಕಿಯ
ಉಳಿದ ಧನವೆಮ್ಮೈವರಿಗೆ ನಿ
ಷ್ಖಲಿತವಿದು ಹೂಡೆನಲು ಹರುಷದ
ಲಳಿಯ ಚೌಪಟಮಲ್ಲ ಸಾರಿಯ ಸಾಲ ಜೋಡಿಸಿದ ೨೬

ಆಡಿದನು ಯಮಸೂನು ಮಿಗೆ ಹೋ
ಗಾಡಿದನು ಮನುಮಥನ ಖಾಡಾ
ಖಾಡಿ ಖಾತಿಯನಕಟ ಮದನನ ಮಂತ್ರದೇವತೆಯ
ಕೂಡೆ ತಿವಿದನು ಕಟ್ಟಿದನು ಕಳಿ
ದೋಡಿಸಿದ ಸಾರಿಗಳ ಸೋಲದ
ಖೋಡಿಯನು ಚಿತ್ರಿಸಿದನರಸನ ಚಿತ್ತ ಭಿತ್ತಿಯಲಿ ೨೭

ಬೆರಗು ಬೆಳೆದುದು ಮನದ ಮಿಡುಕಿನ
ಮರುಕ ಮುಂದಲೆಗೊಟ್ಟುದರಿವಿನ
ಸೆರಗು ಹಾರಿತು ಲಜ್ಜೆ ಬೆಳಗಿತು ಬಿಟ್ಟ ಬೀದಿಯಲಿ
ಉರುಬಿತಪದೆಸೆ ರಾಜ್ಯಲಕ್ಷ್ಮಿಯ
ತುರುಬು ಕೈದೊಳಸಾಯ್ತು ಹಗೆಗಾ
ನರಿಯೆನರಸನ ವಿರಸ ಚೇತೋಭಾವ ಭಂಗಿಗಳ ೨೮

ಮೊಳೆನಗೆಯ ಕಟಕಿಗಳ ಹದಿರಿನ
ಹಳಿವುಗಳ ಸನ್ನೆಗಳ ಸವಿ ಬೈ
ಗುಳಿನ ಜಾಣಿನ ನೋಟಗಳ ಜೊತ್ತಿನ ನವಾಯಿಗಳ
ಒಳದೆಗಹಿನುಬ್ಬುಗಳ ಮೀಸೆಯೊ
ಳಿಳಿವ ಬೆರಳ್ಗಳ ಕರ್ಣ ಸೈಂಧವ
ಖಳತಿಲಕ ದುಶ್ಶಾಸನಾದಿಗಳಿದ್ದರೀಚೆಯಲಿ ೨೯

ಕಳಕಳದ ಕಂದೆರವೆಗಳ ಕುರು
ಕುಲದ ನಿರ್ಮೂಲನದ ನಿಶ್ಚಯ
ದೊಳಗುವರಿದಾಲೋಚನೆಯ ನಿರ್ದ್ರವದ ತಾಳಿಗೆಯ
ತಳಿತ ಮೋನದ ಬೀತ ಹರುಷದ
ಜಲದ ನಯನದಲಿದ್ದರಾ ವಿ
ಹ್ವಲರು ಭೀಷ್ಮ ವಿಕರ್ಣ ವಿದುರ ದ್ರೋಣ ಗೌತಮರು ೩೦

ಇಟ್ಟ ಮೂಗಿನ ಬೆರಳ ನೆಲದಲಿ
ನಟ್ಟ ದೃಷ್ಟಿಯ ಕಳವು ಜೂಜಿನ
ದಿಟ್ಟರಾಟಕೆ ಬಲಿದ ಬೆರಗಿನ ಬಿಗಿದ ಖಾತಿಗಳ
ತಟ್ಟಿಸುವ ರಿಪುವರ್ಗ ಶಿಖಿಯಲಿ
ಸುಟ್ಟ ಕರಣ ಚತುಷ್ಟಯದ ಜಗ
ಜಟ್ಟಿಗಳು ಭೀಮಾರ್ಜುನಾದಿಗಳಿರ್ದರೀಚೆಯಲಿ ೩೧

ಹಾಸಗರ್ವದ ಮೋನದಲಿ ಸಂ
ತೋಷ ಗರ್ವದ ದುಗುಡದಲಿ ಸುವಿ
ಳಾಸ ಗರ್ವದ ಖೇದದಲಿ ಮದಗರ್ವ ಚಿಂತೆಯಲಿ
ವೈಸಿಕದ ಕಣಿ ಕುಟಿಲ ಮಂತ್ರದ
ಮಿಸಲಳಿಯದ ಕುಹಕ ವಿದ್ಯಾ
ವಾಸಗೃಹ ಧೃತರಾಷ್ಟ್ರನಿದ್ದನು ವಿಕೃತ ಭಾವದಲಿ ೩೨

ಜನಪತಿಯ ಜಾಡ್ಯವನು ಭೀಮಾ
ರ್ಜುನರ ಸೈರಣೆಗಳನು ದುರ್ಯೋ
ಧನನ ದುಶ್ಚೇಷ್ಟೆಯನು ಶಕುನಿಯ ಸಾರ ಕೃತ್ರಿಮವ
ತನತನಗೆ ಕಂಡರು ಮಹೀಸುರ
ಜನಪ ವೈಶ್ಯ ಚತುರ್ಥರುಕ್ಕಿದ
ಮನದಳಲಿನಲಿ ಬೈದರಚ್ಯುತ ಹರ ಚತುರ್ಮುಖರ ೩೩

ನ್ಯಾಯವೆಮ್ಮದು ಮುನ್ನ ಸೋತಿರಿ
ಜೀಯ ನಿಮ್ಮೊಡ ಹುಟ್ಟಿದರು ಸಹಿ
ತಾಯತಾಕ್ಷಿಯ ಬಳಿಕ ಸೋತಿರಿ ಬಲುಹ ಮಾಡೆವೆಲೆ
ರಾಯನೊಲಿದುದ ಮಾಡಲಾವ
ನ್ಯಾಯವರ್ತಿಗಳಲ್ಲಲೇ ಬೆಸ
ಸಾ ಯುಧಿಷ್ಠಿರಯೆನುತ ಕೈಗಳ ಮುಗಿದನಾ ಶಕುನಿ ೩೪

ಗೆಲಿದು ಕೊಟ್ಟೆನು ಸಕಲ ಚಾತು
ರ್ಬಲವನಾ ಭಂಡಾರ ಸಹಿತ
ಗ್ಗಳೆಯರೈವರ ಕಮಲಮುಖಿಯನು ರಾಜ್ಯ ಸಿರಿಸಹಿತ
ಕಲಶವಿಟ್ಟೆನು ಕೊಟ್ಟ ಭಾಷೆಗೆ
ಎಲೆ ಸುಯೋಧನಯೆಂದು ನಯನಾಂ
ಗುಲಿಯ ಸಂಕೇತದಲಿ ಸನ್ನೆಯ ಮಾಡಿದನು ಶಕುನಿ ೩೫

ವಿದುರ ಬಾ ನಮ್ಮಾಕೆಯಾ ದ್ರೌ
ಪದಿಯ ಕರೆ ಬೆಸಗೊಂಬೆ ತೊತ್ತಿರ
ಸದನದಿಚ್ಛೆಯೊ ರಾಣಿವಾಸದ ಮನೆಯಪೇಕ್ಷಿತವೊ
ಬೆದರಬೇಡಿನ್ನಬುಜಮುಖಿಗಾ
ವುದು ಮನೋರಥವೆಮ್ಮೊಳುಂಟೆಂ
ಬುದು ಲತಾಂಗಿಯ ಕರೆವುದೆಂದನು ಕೌರವರ ರಾಯ ೩೬

ಸಿಡಿಲ ಪೊಟ್ಟಣಗಟ್ಟಿ ಸೇಕವ
ಕೊಡುವರೇ ಹರನೇತ್ರ ವಹ್ನಿಯೊ
ಳಡಬಳವ ಸುಡಬಗೆದೆಲಾ ಮರುಳೆ ಮಹೀಪತಿಯೆ
ಹೆಡತಲೆಯ ತುರಿಸುವರೆ ಹಾವಿನ
ಹೆಡೆಯನಕಟಾ ಪಾಂಡುಪುತ್ರರ
ಮಡದಿ ತೊತ್ತಹಳೇ ಶಿವಾ ಎಂದಳಲಿದನು ವಿದುರ ೩೭

ಕಾಳಕೂಟದ ತೊರೆಗಳಲಿ ಜಲ
ಕೇಳಿಯೇ ಕಾಲಾಂತಕನ ದಂ
ಷ್ಟ್ರಾಳಿಯಲಿ ನವಿಲುಯ್ಯಲೆಯ ನೀವಾಡಲಾಪಿರಲೆ
ಕಾಲರುದ್ರನ ಲಳಿಯ ನಾಟ್ಯದ
ಕೇಳಿಕೆಗೆ ನೀವರ್ತಿಕಾರರೆ
ಹೋಲದೋ ಶಿವಯೆನುತ ಕಂಬನಿದುಂಬಿದನು ವಿದುರ ೩೮

ಬಡಗಲುತ್ತರ ಕುರುನರೇಂದ್ರರ
ನಡುಗಿಸಿದರುದಯಾದ್ರಿ ತನಕವೆ
ನಡೆದು ಮುರಿದರು ಮೂಡಣರಸುಗಳತುಳ ಭುಜಬಲರ
ಪಡುವಲಗಣಿತ ಯವನ ತೆಂಕಲು
ಗಡೆ ವಿಭೀಷಣನೀ ಮಹೀಶರ
ಬಡಿದ ಪಾಂಡವರರಸಿ ತೊತ್ತಹಳೇ ಶಿವಾಯೆಂದ ೩೯

ತಿರುವ ಕೊರಳಲಿ ತೊಡಿಸಲಾರದೆ
ತೆರಳಿದರು ಚತುರಂತ ಪೃಥ್ವೀ
ಶ್ವರರು ಮಾಗಧ ಚೈದ್ಯ ಮೊದಲಾದತುಲಭುಜಬಲರು
ತಿರುವನೇರಿಸಿ ಧನುವನುಗಿದ
ಬ್ಬರಿಸಿ ಗಗನದ ಯಂತ್ರಮತ್ಸ್ಯವ
ಮುರಿದ ಪಾಂಡವರರಸಿ ತೊತ್ತಹಳೇ ಶಿವಾಯೆಂದ ೪೦

ಬಕನ ಮುರಿದರು ವನದಲಿ ಹಿಡಿಂ
ಬಕನ ಹಣಿದರು ಮಾಗಧನ ಸು
ಪ್ರಕಟ ಬಲನಂಬುಜದ ನಾಳವನಾನೆ ಕೀಳ್ವಂತೆ
ಸಕಲಜನ ನೃಪರರಿಯೆ ಸೀಳಿದ
ರಕಟ ಮಾರಿಯ ಬೇಟವೇ ಪಾ
ತಕವಲಾ ಪಾಂಚಾಲೆ ತೊತ್ತಹಳೆ ಶಿವಾಯೆಂದ ೪೧

ಸೋಲಿಸಿದೆ ನೀನೀಗಲೀ ನರ
ಪಾಲರನು ಜೂಜಿನಲಿ ಮೇಲಣ
ಕಾಳಗದ ಕಳನೊಳಗೆ ಕವಿತಹ ಕೋಲ ತೋಹಿನಲಿ
ಸೋಲವೊಂದಕೆ ನೂರು ನೂರರ
ಮೇಲೆ ಸಾವಿರ ಸಾವಿರದ ಮೈ
ಸಾಲ ಲಕ್ಷವನಂತವಾಗಿಯೆ ತೆಗೆವರವರೆಂದ ೪೨

ಎಳೆದು ತರಿಸಾ ದ್ರೌಪದಿಯ ನೀ
ಕಳಕಳಕೆ ಕೈಗೊಟ್ಟವೋಲ
ಸ್ಖಲಿತರಿಹರಕ್ಷಮತೆಯಲಿ ತತ್ಸಮಯ ಪರಿಯಂತ
ಬಳಿಕ ನೂರ್ವರ ಸತಿಯರಕ್ಕೆಯ
ಕಳವಳದ ಬಿಡುಮುಡಿಯ ಬಸುರಿನ
ತಳದ ಬಿರುವೊಯ್ಲುಗಳ ಭಂಗವ ಕಾಂಬರಿವರೆಂದ ೪೩