ಹದಿಮೂರನೆಯ ಸಂಧಿ

ಸೂ. ವೀತರಾಗದ್ವೇಷಭಯನನ
ಜಾತ ಶತ್ರುವನಕಟ ಕಪಟ
ದ್ಯೂತದಲಿ ಕುರುರಾಯ ಗೆಲಿದನು ಧರ್ಮನಂದನನ

ಕೇಳು ಜನಮೇಜಯ ಧರಿತ್ರೀ
ಪಾಲ ಪಾಂಡವ ನೃಪರನರಮನೆ
ಬೀಳುಗೊಂಡುದು ವಿಳಸದಿಂದ್ರಪ್ರಸ್ಥಪುರ ಸಹಿತ
ಮೇಲೆ ನೆಗಳುವ ದುರ್ನಿಮಿತ್ತವ
ನಾಲಿಸಿದರೇ ದೈವದೋಷ ನಿ
ಮೀಲಿತಾಂತಃಕರಣ ಹತರೈತಂದರಿಭ ಪುರಿಗೆ ೧

ಹರಡೆ ಕೆದರಿತು ಬಲದಲುದಯದ
ಲುರಿಯಲೊದರಿತು ಹಸುಬನೆಡದಲಿ
ಕರಿಯ ಹಕ್ಕಿಯ ತಾರುಹಂಗನ ವಾಮದುಡಿಕೆಗಳ
ನರಿಗಳೊದರಿದವಿದಿರಿನಲಿ ಮೋ
ಹರವ ಮೊಲನಡಹಾಯ್ದ ವಾನೆಗ
ಳರಚಿ ಕೆಡೆದವು ಮುಗ್ಗಿದವು ರಥವಾಜಿಗಳು ನೃಪರ ೨

ಶಕುನಗತಿ ಸಾಮಾನ್ಯವಿದು ಕಂ
ಟಕದ ನೆಲೆ ಜನ್ಮದಲಿ ಸಪ್ತಾ
ಧಿಕದೊಳಿದ್ದರು ಸೌರಿ ಗುರು ಭೌಮಾಬ್ಜ ಬಾಂಧವರು
ವಿಕಳದೆಸೆ ನಿಮ್ಮಡಿಗೆ ವೈರಿ
ಪ್ರಕರಕುನ್ನತದೆಸೆ ಮಹೀ ಪಾ
ಲಕ ಶಿರೋಮಣಿ ಪುರಕೆ ಮರಳೆಂದರು ಮಹೀಸುರರು ೩

ಮರಳಲಹುದೈ ದೈವವಿಕ್ಕಿದ
ಕೊರಳುಗಣ್ಣಿಯ ಕುಣಿಕೆ ಯಾರಲಿ
ಹರಿವುದೈ ಮನ್ನಿಸಿದನೇ ಮೌಹೂರ್ತಕರ ನುಡಿಯ
ಕರೆಸುವನು ಧೃತರಾಷ್ಟ್ರ ನಮಗೀ
ನರಿ ಮೊಲಂಗಳ ಹಕ್ಕಿ ಹರಿಣೆಯ
ಕರಹವೇಗುವವೆಂದು ಜರೆದನು ಶಕುನ ಕೋವಿದರ ೪

ಹರಿದರರಸಾಳುಗಳು ರಾಯನ
ಬರವನರುಹಿದರಂಧ ಭೂಪತಿ
ಪುರದೊಳಗೆ ಗುಡಿಗಟ್ಟಿಸಿದನತ್ಯಧಿಕ ಹರ್ಷದಲಿ
ಸುರನದೀಜ ದ್ರೋಣ ಗೌತಮ
ಗುರುಜ ಕರ್ಣ ಜಯದ್ರಥಾದಿಗ
ಳುರು ವಿಭವದಿಂದಿದಿರುಗೊಂಡರು ಹೊಗಿಸಿದರು ಪುರವ ೫

ಸೇನೆ ಬಿಟ್ಟುದು ಪುರದ ಬಹಿರೋ
ದ್ಯಾನ ವೀಧಿಗಳೊಳಗೆ ಕುಂತೀ
ಸೂನುಗಳು ಸುಮ್ಮಾನ ಮಿಗೆ ನಡೆತಂದರಿಭಪುರಿಗೆ
ಆ ನಗರದೊತ್ತೊತ್ತೆಗಳನಾ
ಮಾನಿನಿಯರು ಪ್ಪಾರತಿಯನವ
ರಾನನೇಂದು ಪ್ರಭೆ ವಿಭಾಡಿಸೆ ಬಿಸಿಲ ಬೇಗೆಗಳ ೬

ಪೌರ ನಾರೀಜನದ ತಳಿಗೆಗ
ಳಾರತಿಯ ಸೇಸೆಗಳ ಲಾಜೆಯ
ತೋರಮುತ್ತಿನ ಮಳೆಯ ಮಂಗಳರವದ ಕಳಕಳದ
ಓರಣದ ತೋರಣದ ಗುಡಿಗಳ
ಚಾರು ವೀಧಿಗಳೊಳಗೆ ಬಂದರು
ಭೂರಮಣರುತ್ಸಾಹದಲಿ ಧೃತರಾಷ್ಟ್ರನರಮನೆಗೆ ೭

ಇಳಿದರಾನೆಯನಮಳ ರತ್ನಾ
ವಳಿಯ ಕಾಣಿಕೆಗಳನು ಸುರಿದರು
ಖಳ ಶಿರೋಮಣಿಗೆರಗಿದರು ಧೃತರಾಷ್ಟ್ರ ಭೂಪತಿಗೆ
ಕುಲತಿಲಕ ಬಾ ಕಂದ ಭರತಾ
ವಳಿ ವನದ ಮಾಕಂದ ಧರ್ಮ
ಸ್ಥಳ ಲತಾವಳಿ ಕಂದ ಬಾಯಂದಪ್ಪಿದನು ನೃಪನ ೮

ಬಾ ಮಗನೆ ರಿಪುರಾಯ ಮನ್ಮಥ
ಭೀಮ ಬಾರೈ ಭೀಮ ರಣ ನಿ
ಸ್ಸೀಮ ಫಲುಗುಣ ಬಾ ನಕುಲ ಸಹದೇವ ಬಾಯೆನುತ
ಪ್ರೇಮ ರಸದಲಿ ಬೇರೆ ಬೇರು
ದ್ದಾಮ ಭುಜನಪ್ಪಿದನು ಚಿತ್ತದ
ತಾಮಸದ ತನಿ ಬೀಜ ಮುಸುಕಿತು ಹರ್ಷ ರಚನೆಯಲಿ ೯

ಹರಸಿದನು ಕಾಣಿಕೆಯ ಕೊಂಡೈ
ವರ ಮಹಾ ಸತಿಯನು ಕುಮಾರರ
ನರಸಿಯರನನಿಬರ ವಚೋ ರಚನೆಯಲಿ ಮನ್ನಿಸಿದ
ಅರಸ ಗಾಂಧಾರಿಯನು ವಂದಿಸಿ
ದರುಶನವ ಕೊಡು ಹೋಗೆನಲು ಕಡು
ಹರುಷ ಮಿಗಿಲೈತಂದರಾ ಗಾಂಧಾರಿಯರಮನೆಗೆ ೧೦

ಬಂದು ಕಾಣಿಕೆ ಕೊಟ್ಟು ವಂದಿಸಿ
ನಿಂದರೈವರು ತನ್ನ ಕೆಳದಿಯ
ರಿಂದ ತರಿಸಿದಳಾರತಿಯನುಪ್ಪಾರತಿಯನೊಲಿದು
ಚಂದ ಮಿಗೆ ಸಾವಿರದ ಸಂಖ್ಯೆಯ
ರಿಂದು ಮುಖಿಯರ ತಳಿಗೆಯಾರತಿ (೧೧

ಸಂದಣಿಸಿದವು ಜಯ ಸಬುದ ಝೋಂಪಿಸಿದುದಂಬರವ
ಅರಸಿ ಕಾಣಿಸಿಕೊಂಡಳೀ ನೃಪ
ರರಸಿಯನು ಸುಕುಮಾರಕರನವ
ರರಸಿಯರ ಸಖಿಯರ ವಿಳಾಸಿನಿಯರ ಪಸಾಯ್ತೆಯರ
ತರಿಸಿ ಕೊಟ್ಟನು ಬೇರೆ ಬೇರನಿ
ಬರಿಗೆ ಉಡುಗೊರೆ ಗಂಧ ಮಾಲ್ಯಾ
ಭರಣವನು ರಾಜೋಪಚಾರ ವಿಳಾಸ ವಿಭವದಲಿ ೧೨

ಬೀಳುಕೊಟ್ಟಳು ಬಳಿಕ ಕುರು ನೃಪ
ನಾಲಯಕೆ ಕರೆದೊಯ್ದು ಕುಂತಿಯ
ಕಾಲಿಗೆರಗಿ ದನಿವರನುಚಿತೋಕ್ತಿಯಲಿ ಮನ್ನಿಸಿದ
ಬಾಲಮೃಗವೊಳಗಾಯ್ತಲಾ ತೊಡು
ಕೋಲನೆಂದರು ನಗುತ ಮನದಲಿ

ಕೌಳಿಕದ ಕುಹಕಿಗಳು ಕೌರವರಾಯ ಶಕುನಿಗಳು ೧೩
ಖಳರ ಹೃದಯದ ಕಾಳ ಕೂಟದ
ಹುಳಕು ಬಲ್ಲರೆ ಮಾನ್ಯರವದಿರ
ಲಲಿತ ಮಧುರ ವಚೋವಿಳಾಸಕೆ ಮರುಳಗೊಂಡರಲೈ
ಅಳುಪಿದರೆ ಮಧುಕರನ ಮರಿ ಬೊ
ಬ್ಬುಲಿಯ ವನದೊಳಗೇನಹುದು ನೃಪ
ತಿಲಕರಿದ್ದರು ಬೇರೆ ರಚಿಸಿದ ರಾಜಭವನದಲಿ ೧೪

ಬಂದು ಕಂಡುದು ನಿಖಿಳ ಪುರ ಜನ
ವಂದು ಕಾಣಿಕೆಗೊಟ್ಟು ಕೌರವ
ನಂದನರು ಸಚಿವರು ಪಸಾಯ್ತರು ನಿಯೋಗಿ ಮಂತ್ರಿಗಳು
ಸಂದಣಿಸಿದುದು ಕವಿ ಗಮಕಿ ನಟ
ವಂದಿ ಮಾಗಧ ಮಲ್ಲ ಗಾಯಕ
ವೃಂದ ದೀನಾನಾಥರೋಲಗಿಸಿದರು ಧರ್ಮಜನ ೧೫

ಆ ದಿವಸವನು ಮಧುರ ಗೇಯ ನಿ
ನಾನದದಲಿ ಕವಿ ವಾದಿ ವಾಗ್ಮಿ ವಿ
ನೋದದಲಿ ನೂಕಿದರು ಮಜ್ಜನ ಭೋಜನಾದಿಯಲಿ
ಆದುದುತ್ಸಹವಂದಿನಿರುಳು ದಿ
ನಾದಿಯಲಿ ಕಂಡನು ಕನಸ ಪ್ರಾ
ಸಾದ ಶಿಖರವು ಮುರಿದು ಬಿದ್ದುದನಡವಿ ಮಧ್ಯದಲಿ ೧೬

ಅರಸನುಪ್ಪವಡಿಸಿದನವನೀ
ಶ್ವರವಿಹಿತ ಸತ್ಕ್ರಿಯೆಗಳನು ವಿ
ಸ್ತರಿಸಿದನು ದುಃಸ್ವಪ್ನ ಕುಂತವಿಭಿನ್ನ ಚೇತನನು
ಕರೆಸಿ ಧೌಮ್ಯನಿಗರುಹಲತಿ ದು
ಸ್ತರದ ಕನಸಿದು ಶಾಂತಿ ಕರ್ಮವ
ಪುರದೊಳಗೆ ವಿರಚಿಸುವೆನಂಜದಿರೆಂದನಾ ಮುನಿಪ ೧೭

ಪುರದೊಳೆಲ್ಲಿಯ ಶಾಂತಿ ನಾರದ
ನೊರದನುತ್ಪಾತ ಪ್ರಬಂಧದ
ಹೊರಿಗೆಯನು ನಿಮ್ಮೈಶ್ವರಿಯ ವಿಧ್ವಂಸಕರವೆಂದು
ಇರುಳು ನಾನಾಸ್ವಪ್ನ ಕಾನನ
ಗಿರಿ ಪರಿಭ್ರಮಣೈಕ ಚಿಂತಾ
ಭರಿತನಾದೆನು ದೈವಕೃತ ಉಪಭೋಗ್ಯವೆನಗೆಂದ ೧೮

ಜನಪ ಕಳುಹಿದ ದೂತರಿವರರ
ಮನೆಗೆ ಬಂದರು ಜೀಯ ಧೃತರಾ
ಷ್ಟ್ರನ ಸಮಯವಾಯಿತ್ತು ನಿಮ್ಮಡಿ ಬಿಜಯ ಮಾಡುವದು
ಎನಲು ತನ್ನ ಕುಮಾರರನು ತ
ನ್ನನುಜರನು ಸಚಿವ ಪ್ರಧಾನರ
ನನಿಬರನು ಕರೆಸಿದನು ನೃಪ ಹೊರವಂಟನರಮನೆಯ ೧೯

ಬಂದು ಧೃತರಾಷಟ್ರನ ಪದಾಬ್ಜಕೆ
ವಂದಿಸಿದೊಡೆನ್ನಾನೆ ಬಾರೈ
ಕಂದೆ ಬಾರೆಂದೆಳೆದು ಕುಳ್ಳಿರಿಸಿದನು ಮಂಚದಲಿ
ನಂದನರು ಭೀಮಾರ್ಜುನಾದಿಗ
ಳಂದು ಪರಿವೇಷ್ಟಿಸಿದರಿತ್ತಲು
ಕಂದು ಹೃದಯದ ಕೌರವೇಂದ್ರನ ಹದನ ಕೇಳೆಂದ ೨೦

ಕರೆಸಿದನು ಶಕುನಿಯನು ಕರ್ಣಂ
ಗರುಹಿದನು ಸೈಂಧವನನೆಕ್ಕಟಿ
ಗರೆದು ಹೇಳಿದ ಕೃತ್ರಿಮದ ಹಾಸಂಗಿಗಳ ರಚಿಸಿ
ಹರಸಿಕೊಂಡರು ಗಣಪ ಯಕ್ಷೇ
ಶ್ವರಿ ಕಳಾವತಿ ದುರ್ಗಿ ಭುವನೇ
ಶ್ವರಿಗಳಿಗೆ ವಿವಿಧೋಪಚಾರದ ಬಲ ವಿಧಾನದಲಿ ೨೧

ದ್ಯೂತ ಸಿದ್ಧಿಯ ಮಂತ್ರ ವರ ವಿ
ದ್ಯಾತಿಶಯ ವಿಚ್ಛೇದ ರಕ್ಷ ವಿ
ಧೂತ ರಿಪುಮತಿ ಯಂತ್ರಪರಸನ್ಮೋಹನೌಷಧಿಯ
ಈತಗಳು ಮೇಳವಿಸಿದರು ನಿ
ರ್ಭೀತರಿವರಿದನೆತ್ತ ಬಲ್ಲರು
ಕೈತವದ ಕಣಿ ಕೌರವೇಶ್ವರ ಬಂದನರಮನೆಗೆ ೨೨

ಆತ್ತವಿಸಿದರೆ ಬೊಪ್ಪ ಮಯ ನಿವ
ಗಿತ್ತ ಸಭೆಯದು ದೇವ ನಿರ‍್ಮಿತ
ವೆತ್ತ ಮಾನವ ಕರ್ಮವೆತ್ತಲು ಸರಿಸವಲ್ಲದಕೆ
ಇತ್ತ ನಿಮ್ಮಡಿ ಮಾಡಿಸಿದ ಸಭೆ
ಯೆತ್ತ ಬಿಜಯಂಗೈದು ನೋಡಿದ
ಡುತ್ತ ಮವಲಾಯೆಂದನಾ ದುರ‍್ಯೋಧನನು ನಗುತ ೨೩

ಆ ಸಭೆಯ ನೋಡುವೆವು ಶಿಲ್ಪದ
ದೇಸಿಗಾರರ ಕೈಮೆಗಳು ಲೇ
ಸೈಸಲೇ ಬೇರೇನು ಮಾನುಷ ದೈವಕೃತಿಯೆಂದು
ಈಸು ಸಂಪ್ರಿಯ ನಮ್ಮಲುಂಟೇ
ಲೇಸೆನುತ ನೃಪನೆದ್ದು ಕೈಗೊಡ
ಲಾ ಸಭೆಗೆ ಧೃತರಾಷ್ಟ್ರ ಬಂದನು ರಾಜಗಣ ಸಹಿತ ೨೪

ಬಿಗಿದ ನೀಲದ ಸರಿಯ ನೆಲಗ
ಟ್ಟುಗಳ ವೈಢೂರಿಯದ ಮಣಿ ಭಿ
ತ್ತಿಗಳ ವಜ್ರದ ವೇದಿಗಳ ವಿದ್ರುಮದ ಲೋವೆಗಳ
ಝಗೆಯ ಲಹರಿಯ ಜಾಳಿಗೆಯ ಪ
ಚ್ಚೆಗಳ ಪಾಗಾರದ ಸುರತ್ನಾ
ಳಿಗಳಲೆಸೆದುದು ರಾಜಸಭೆ ತತ್ಕ್ರೋಶ ಮಾತ್ರದಲಿ ೨೫

ಕವಿವ ವರುಣಾಂಶುಗಳ ಲಹರಿಯ
ಲವಣಿ ಲಾವಣಿಗೆಯಲಿ ನೀಲ
ಚ್ಛವಿಯ ದೀಧಿತಿ ಝಳಪಿಸಿತು ದೆಸೆದೆಸೆಯ ಭಿತ್ತಿಗಳ
ತಿವಿದವೆಳ ಮುತ್ತುಗಳ ಚಂದ್ರಿಕೆ
ಜವಳಿಸಿದವೊಂದೊಂದನೌಕಿದ
ವವಿರಳಿತ ಮಣಿ ಕಿರಣ ವೇಣೀಬಂಧ ಬಂಧುರದಿ ೨೬

ಅಲ್ಲಿ ವಿಮಳೋದ್ಯಾನ ವೀಧಿಗ
ಳಲ್ಲಿ ತಾವರೆಗೊಳದ ರಚನೆಗ
ಳಲ್ಲಿ ಹಂಸ ಮಯೂರ ಮಧುಕರ ಶುಕಪಿಕಾನೀಕ
ಅಲ್ಲಿ ಕೇಳೀ ಶೈಲ ಹಿಮ ಗೃಹ
ವಲ್ಲಿ ವಿವಿಧ ವಿಳಾಸ ರಚನೆಗ
ಳಲ್ಲಿ ಹೊಯ್ಕೈಯೆನಿಸಿ ಮೆರೆದುದು ಪಾಂಡವರ ಸಭೆಯ ೨೭

ಸ್ಥಳವನೇ ಜಲವೆಂದು ನಿರ್ಮಳ
ಜಲವನೇ ಸ್ಥಳವೆಂದು ಬಾಗಿಲ
ನೆಳಲ ಭಿತ್ತಿಯ ಹಾಯ್ದು ಬಾಗಿಲ ಭಿತ್ತಿಯೆಂದಿಳಿದು
ಕಳವಳಿಸುವನೆ ಧರ್ಮಸುತನಾ
ಕೊಳನನೇ ಕೊಳನೆಂದು ಬಾಗಿಲ
ನೆಳಲ ಹೊಗಳುತ ಬಂದು ಹೊಕ್ಕನು ಬಹಳ ಚೌಕಿಗೆಯ ೨೮

ಕೆಲಸದಲಿ ಶಿಲ್ಪದಲಿ ರತ್ನಾ
ವಳಿಯ ಘಾಟನವಾಯಿಯಲಿ ಸಭೆ
ಯಿಳೆಗಪೂರ್ವವಲಾ ಮಹಾದೇವೆಂತು ರಚಿಸಿದರೊ
ವಿಳಸದಾಯವ್ಯಯದ ವಿಶ್ರುತ
ವಳಯದುನ್ನತ ವಾಸ್ತು ಲಕ್ಷಣ
ದೊಳಗೆ ಸೇರಿದುದೆಂದು ನೃಪ ಕೊಂಡಾಡಿದನು ಸಭೆಯ ೨೯

ಸೂಸಕದ ಮುತ್ತುಗಳು ತಾರಾ
ರಾಶಿಗಳ ಹಬ್ಬುಗೆಯ ನೀಲದ
ಹಾಸರೆಗಳು ಹೋಲುತಿದ್ದವು ಗಗನ ಮಂಡಲವ
ಸೂಸಕಂಗಳ ಮುರಿದ ಮುತ್ತಿನ
ದೇಶಿಕಾತಿಯರಾನನೇಂದುಗ
ಳಾ ಸುಧಾಕರವೆನಲು ಗೆಲಿದುದು ಸಭೆ ನಭಸ್ಥಳವ ೩೦

ಗುರು ನದೀಸುತ ಕರ್ಣ ಸೈಂಧವ
ಗುರುತನುಜ ಭಗದತ್ತ ಬಾಹ್ಲಿಕ
ನುರು ಯವನ ಸಂವೀರ ಕೌಸಲ ಚೈದ್ಯ ಮಾಗಧರು
ಅರಸುಗಳು ನಾನಾ ದಿಗಂತದ
ಧರಣಿಪರು ಸಚಿವರು ಪಸಾಯ್ತರು
ನೆರೆದುದಂದಿನ ದಿವಸದೋಲಗದೊಡ್ಡು ಚೆಲುವಾಯ್ತು ೩೧

ಧರಣಿಪತಿ ಕೇಳೊಂದು ಹರಿಯಂ
ತರ ವಿಶಾಲ ಮಹಾಸಭಾ ವಿ
ಸ್ತರಣದರಲಿ ತೆರಹ ಕಾಣೆನು ತೀವಿತವನಿಪರು
ಹೊರಗೆ ರಥಿಕರು ರಾಹುತರು ಜೋ
ಧರು ಪದಾತಿಗಳಿದ್ದುದಂದಿನ
ಸಿರಿ ಸುರೇಂದ್ರನ ಪಾಡಿಗೈಮಡಿ ಹತ್ತು ಮಡಿಯೆಂದ ೩೨

ಒಂದು ಕಡೆಯಲಿ ಕವಡಿಕೆಯ ಜೂ
ಜೊಂದು ಕಡೆಯಲಿ ಗದ್ಯಪದ್ಯವ
ದೊಂದು ಕಡೆಯಲಿ ವಾರವಧುಗಳ ಸಾರಸಂಗೀತ
ಒಂದು ಕಡೆಯಲಿ ತರ್ಕಗೋಷ್ಠಿಯ
ದೊಂದು ಕಡೆಯಲಿ ಕೌರವೇಂದ್ರನ
ಮುಂದೆ ಜಡಿದುದು ರಭಸ ಹಾಸಂಗಿಗಳ ಸಾರಿಗಳ ೩೩

ಆಡಲರಿವನು ಗಡ ಯುಧಿಷ್ಠಿರ
ನಾಡುವರೆ ಬರಹೇಳು ಮೇಣ್ತಾ
ನೋಡುತಿರಲಾವಾಡುವೆವು ಸಭೆಯಲಿ ವಿನೋದದಲಿ
ಖೋಡಿಯಿಲ್ಲದ ಸರಸ ನೆತ್ತವ
ನಾಡಲರಿಯದ ನೃಪತಿ ಮೃಗವೆಂ
ದಾಡುತಿಹ ರಿವವರು ತಾವಲ್ಲೆಂದನಾ ಶಕುನಿ ೩೪

ಅಹುದು ಹೊಲ್ಲೆಹವಾವುದಾಡಲು
ಬಹುದು ಸುಜನರ ಕೂಡೆ ನೀವೇ
ಕುಹಕ ವಿದ್ಯಾಸಾರ್ವಭೌಮರು ಶಕುನಿಕೌರವರು
ಸುಹೃದಯರಿಗತಿ ಕುಟಿಲರಲಿ ನಿ
ಸ್ಪೃಹರಿಗತಿ ರಾಗಿಗಳೊಡನೆ ದು
ಸ್ಸಹ ಕಣಾ ಸಮ್ಮೇಳವೆಂದನು ಧರ್ಮಸುತ ನಗುತ ೩೫

ನೀವು ಸುಹೃದಯರಿಂದು ದುರ್ಜನ
ರಾವು ನೀವ್ನೀರಾಗಿಗಳು ರಾ
ಗಾವಲಂಬರು ನಾವಲೇ ನೀವರಿಯರೇ ನಿಜವ
ನೀವು ನಾವೆಂಬೀ ಪೃಥಗ್ಭಾ
ವಾವಲಂಬನವೇಕೆ ನಿಮ್ಮಲಿ
ನಾವು ನಮ್ಮಲಿ ನೀವೆಯೆಂದನು ನಗುತ ಕುರುರಾಯ ೩೬

ಇರಲಿ ಬಾಂಧವರಿದರೊಳೆರಡಿ
ಟ್ಟಿರದೆ ನಿಲಲದು ಲೇಸಲಾ ವಿ
ಸ್ತರಿಸಲೇಕೈ ದ್ಯೂತ ದುರ್ವ್ಯಸನ ಪ್ರಪಂಚವಿದು
ತರುಣ ವಿಟ ಚಾರಣ ಕುಶೀಲಕ
ಭರತ ಗಣಿಕಾಯೋಗ್ಯ ವಿಷಯಕೆ
ಗರುವರೊಲಿವರೆಯೆಂದನಾ ಕುರುಪತಿಗೆ ಯಮಸೂನು ೩೭

ದ್ಯೂತವಿದು ದುರ್ವ್ಯಸನವೆಂಬವ
ನೀತಿವಿದನೇ ಶ್ರೋತ್ರಿಯರಿಗ
ಖ್ಯಾತಿಯದು ಯತಿಗಳಿಗೆ ಮೇಣ್ ರಣಭೀತ ಭೂಪರಿಗೆ
ದ್ಯೂತ ಮೃಗಯಾ ಸ್ತ್ರೀವ್ಯಸನ ನೃಪ
ಜಾತಿಗೋಸುಗರಾದವಿದರ ರ
ಸಾತಿಶಯವರಿಯದವ ನರಮೃಗವೆಂದನಾ ಶಕುನಿ ೩೮

ಅರಸ ಕೇಳ್ ಕಾಳಗಕೆ ಜೂಜಿಗೆ
ಕರೆದಡೋಸರಿಸಿದೊಡೆ ಬಳಿಕವ
ಗರುವನೇ ಕ್ಷತ್ರಿಯರೊಳಗೆ ನೃಪಧರ್ಮ ನೀನರಿಯ
ಕರೆದೆವಾವ್ ಜೂಜಿಂಗೆ ಬೇಕೇ
ಧರಣಿಪತಿ ಬಾ ರಾಜಧರ್ಮವ
ನೊರಸುವರೆ ನಿಲ್ಲೆಂದುಪೇಕ್ಷಿಸಿ ನುಡಿದನಾ ಶಕುನಿ ೩೯

ರಾಜ ಧರ್ಮವಿದಹುದು ಕಳವಿನ
ಜೂಜು ಧರ್ಮದ ಮಗನೊ ಮೊಮ್ಮನೊ
ಬೀಜವಾವುದು ನಿಮ್ಮ ಕಪಟದ್ಯೂತ ನಿರ್ಣಯಕೆ
ರಾಜ ಪರಿಪಾಟಿಗಳ ಪಂಥದ
ಜೂಜ ಬಲ್ಲರೆ ಕರೆಯಿ ಬಾರದ
ಡಾ ಜನಾರ್ದನನಾಣೆಯೆಂದನು ಧರ್ಮನಂದನನು ೪೦