ಭೂರಮಣ ಕೇಳಖಿಳ ನೃಪ ಸಂ
ಹಾರಬೀಜದ ಕರ್ಮಫಲ ಸಂ
ಸ್ಕಾರವಳ್ಳೆಯನಿರಿದು ನೂಕಿತು ಧರ್ಮನಂದನನ
ಧೀರನಲ್ಲಾ ಧರ್ಮಶಾಸ್ತ್ರ ವಿ
ಚಾರ ಸಾರಜ್ಞಾನ ನಿಷ್ಠೆಯೊ
ಳೋರೆಯುಂಟೇ ದ್ಯೂತಕೇಳಿಗೆ ಮಾಡಿದನು ಮನವ ೪೧

ಇಂದುವದನೆಗೆ ದಕ್ಷಿಣಾಕ್ಷಿ
ಸ್ಪಂದವಾಯಿತು ಭೀಮ ಪಾರ್ಥರಿ
ಗಂದು ಕೆತ್ತಿತು ಹೃದಯ ವಾಮ ಭುಜಾಕ್ಷಿಗಳು ಸಹಿತ
ಕಂದಿದುವು ಮೋರೆಗಳು ಗಂಗಾ
ನಂದನ ದ್ರೋಣಾದಿ ಸುಜನರಿ
ಗಂದವೇರಿತು ಮುಸುಡು ಶಕುನಿ ಸುಯೋಧನಾದಿಗಳ ೪೨

ಕುರುಪತಿಯ ಕೃತಪುಣ್ಯಬೀಜಾಂ
ಕುರದ ಕಾಲ ದಿಗಂತದವನೀ
ಶ್ವರ ಸಮೂಹ ಚಮೂನಿಬರ್ಹಣ ಸೂಚನಾ ಸಮಯ
ಅರಸ ಕೇಳ್ ಕುಂತೀಕುಮಾರರ
ಸಿರಿಯ ದುಗುಡದ ಹೊತ್ತು ಮಿಗೆ ಗ
ಬ್ಬರಿಸಿತೈ ಧರ್ಮಜನ ಗಾಢದ ಬುದ್ಧಿ ಪರ್ವತವ ೪೩

ವ್ಯಸನತೃಷ್ಣೆಯು ಕೀಳು ಚಿತ್ತದ
ಮಿಸುನಿಯೊಳು ಬೆರೆಸಿತು ಸುಬುದ್ಧಿಯ
ರಸವು ಹಾರಿತು ಹುದಿದ ರಾಗದ್ವೇಷ ವಹ್ನಿಯಲಿ
ಮುಸುಡ ತಿರುಹಿತು ತಿಳಿವು ಲಜ್ಜೆಯ
ದೆಸೆಗೆ ದುರ್ಘಟವಾಯ್ತು ಪರಿಭವ
ದೊಸಗೆಯನು ಸೂಚಿಸಿತು ಲಕ್ಷ್ಮಿಗೆ ಧರ್ಮಜನ ಹೃದಯ ೪೪

ಹಲವು ಮಾತಿನಲೇನು ಭೂಪತಿ
ಕೆಲಕೆ ಸಿಲುಕಿದನವದಿರೊಡ್ಡಿದ
ಬಲೆಗೆ ಬಂದನು ನೆತ್ತ ಸಾರಿಯ ಗುರಿಯ ಗದ್ದುಗೆಗೆ
ಕೆಲದಲನುಜರು ವಾಮದಲಿ ಮಣಿ
ವಳಯ ಮಂಚದಲಂಧನೃಪನಿದಿ
ರಲಿ ಸುಯೋಧನ ಕರ್ಣ ಶಕುನಿ ಜಯದ್ರಥಾದಿಗಳು ೪೫

ಹಲಗೆಯಿಕ್ಕಿತು ಹೊನ್ನ ಸಾರಿಗ
ಳಿಳುಹಿದವು ಹೇಳೊಡ್ಡವನು ಕಳ
ಕಳವ ನಿಲಹೇಳೆನುತ ಹಾಸಂಗಿಗಳ ಹೊಸೆಹೊಸೆದು
ನೆಲಕೆ ಹಾಯ್ಕಿದನಡಿಗಡಿಗೆ ಮಂ
ಡಳಿಸಿ ಸಾರಿಯ ಹೂಡಿ ಕುರುಪತಿ
ಗೆಲಿದ ಹೋಗೆಂದೊದರುತಿದ್ದನು ತೊಡೆಯನಪ್ಪಳಿಸಿ ೪೬

ಆಟವಾರಂಭಿಸದು ಬರಿ ಬೊ
ಬ್ಬಾಟವೇತಕೆ ವಿಜಯಸಿರಿ ವಾ
ಚಾಟರಿಗೆ ಮೆಚ್ಚುವಳೆ ತೋರಾ ದ್ಯೂತಕೌಶಲವ
ತೋಟಿ ಬೇಕೇ ಕೈಯ ಹೊಯ್
ಬೂತಾಟವೇತಕೆ ಧರ್ಮನಂದನ
ನಾಟವೊಳ್ಳಿತು ಬಲ್ಲೆನೆಂದನು ಶಕುನಿ ನಸುನಗುತ ೪೭

ಎನ್ನ ಲೆಕ್ಕಕೆ ಶಕುನಿ ಭೂಪತಿ
ನಿನ್ನೊಡನೆ ಕೈ ಹೊಯ್ದನೊಡ್ಡವ
ನೆನ್ನೊಡನೆ ಹೇಳೆಂದು ನುಡಿದನು ಕೌರವರರಾಯ
ನಿನ್ನೊಳಾಗಲಿ ನಿನ್ನ ಮಾವನೆ
ಮುನ್ನ ಬರಲಿದಕೇನೆನುತ ಸಂ
ಪನ್ನ ಶಠರೊಡನಳವಿಗೊಟ್ಟವನೀಶನಿಂತೆಂದ ೪೮

ಹೇಮಭಾರದ ವಿಮಲ ರತುನ
ಸ್ತೋಮವಿದೆ ಪಣವೆನಲು ಕೌರವ
ಭೂಮಿಪತಿಯೊಡ್ಡಿದನು ಧರ್ಮಜ ಹೆಸರಿಸಿದ ಧನವ
ಆ ಮಹಿಪ ಶಕುನಿಗಳು ಸಾರಿ
ಗ್ರಾಮವನು ಕೆದರಿದರು ದ್ಯೂತದ
ತಾಮಸದಲುಬ್ಬೆದುದ್ದಿಬ್ಬರ ಕರಣವೃತ್ತಿಗಳು ೪೯

ದುಗನ ಹಾಯಿತು ತನಗೆ ಹಾಯ್ಕಿ
ತ್ತಿಗನವೆಂಬಬ್ಬರದ ಹಾಸಂ
ಗಿಗಳ ಬೊಬ್ಬೆಯ ಸಾರಿಗಳ ಮಣಿ ಖಟಿಲ ನಿಸ್ವನವ
ಉಗಿವ ಸೆರೆಗಳ ಬಳಿ ದುಹಾರದ
ಬಿಗುಹುಗಳ ಬೀದಿಗಳ ತಳಿ ಸಾ
ರಿಗಳ ಧಾಳಾಧೂಳಿ ಮಸಗಿತು ಭೂಪ ಕೇಳೆಂದ ೫೦

ರಾಯ ಸೋತನು ಶಕುನಿ ಬೇಡಿದ
ದಾಯ ತಹ ಹಮ್ಮಿಗೆಯಲೊದಗಿದ
ವಾಯತದ ಕೃತ್ರಿಮವಲೇ ಕೌರವರ ಸಂಕೇತ
ಆಯಿತೀ ಹಲಗೆಯನು ಕೌರವ
ರಾಯ ಗೆಲಿದನು ಮತ್ತೆ ಪಣವೇ
ನಾಯಿತೆಂದನು ಶಕುನಿ ಯಮನಂದನನನೀಕ್ಷಿಸುತ ೫೧

ಕನಕಮಯ ರಥವೆರಡು ಸಾವಿರ
ಮೊನೆಗೆ ಹೂಡಿದವೆಂಟು ಸಾವಿರ
ವಿನುತ ವಾಜಿಗಳೊಡ್ಡವೆಂದನು ಧರ್ಮನಂದನನು
ಜನಪತಿಗೆ ತಾನೈಸಲೇ ಹಾ
ಯ್ಕೆನುತ ಸಾರಿಯ ಕೆದರಿದನು ದು
ರ್ಜನರಿಗೊಲಿದುದು ದೈವಗತಿ ಬೊಬ್ಬಿರಿದನಾ ಶಕುನಿ ೫೨

ಸೋತೆಯರಸಾ ನಿನಗೆ ಜೂಜಿನ
ಭೀತಿಯುಂಟೇ ಮಾಣು ಮೇಣ್ ನಿ
ರ್ಭೀತನೇ ನುಡಿ ಮೇಲಣೊಡ್ಡವ ಹಲವು ಮಾತೇನು
ಕಾತರಿಸಬೇಡೆನಲು ಫಡ ಪಣ
ಭೀತನೇ ತಾನಕಟೆನುತ ಕುಂ
ತೀತನುಜನೊಡ್ಡಿದನು ಸಾವಿರ ಮತ್ತಗಜ ಘಟೆಯ ೫೩

ಆದವೆಮಗಿವು ಗಜ ಘಟೆಗಳೆಂ
ದಾ ದುರಾತ್ಮಕನಾಡಿದನು ದು
ರ್ಭೇದ ವಿವದಿರ ಕಪಟ ಮಂತ್ರವನಾವನರಿವವನು
ಆದುದರಸಗೆ ಸೋಲವಿನ್ನೇ
ನಾದುದೈ ಭೂಪತಿಯೆ ಗಜಘಟೆ
ತೀದವೇ ಮೇಲೇನು ಪಣವುಂಟೆಂದನಾ ಶಕುನಿ ೫೪

ಫಡ ದರಿದ್ರನೆ ತಾನು ತನ್ನಯ
ಮಡದಿಯರ ಕೆಳದಿಯರು ಸಾವಿರ
ಮಡಿ ಸುಯೋಧನ ರಾಜಭವನದ ವಾರನಾರಿಯರ
ನುಡಿಯಬೇಕೇ ಧರ್ಮಸುತ ನಿ
ಮ್ಮಡಿಗಳೊಡ್ಡಿದ ಬಳಿಕ ಗೆಲಿದವ
ರೊಡವೆಯೈಸಲೆ ಹಾಯ್ಕು ಹಾಯ್ಕೆಂದೊದರಿದನು ಶಕುನಿ ೫೫

ಏನನಾಡಿದಡೇನು ಫಲ ದೈ
ವಾನುಕೂಲ್ಯದ ಕುಣಿಕೆ ಬೇರಹು
ದಾ ನರೇಂದ್ರನ ಸಾರಿ ಸೋತುದು ನಿಮಿಷ ಮಾತ್ರದಲಿ
ಆ ನಿರೂಢಿಯ ಹತ್ತು ಸಾವಿರ
ಮಾನಿನಿಯರನು ಮತ್ತೆ ಸೋತನು
ಮಾನನಿಧಿಯೇ ಮತ್ತೆ ಪಣವೇನೆಂದನಾ ಶಕುನಿ ೫೬

ಅರಸಿಯರ ಮೈಗಾಹುಗಳ ಕಿಂ
ಕರರು ಸಾವಿರವಿದೆ ಪಣ ನಿ
ಮ್ಮರಸನಲಿ ಪಣವೇನೆನಲು ನೀವೇನನೊಡ್ಡಿದಿರಿ
ಮರಳಿ ಬೆಸಗೊಳಬೇಡ ನಮ್ಮಲಿ
ಬರಹವದು ಹಾಯ್ಕೆನುತ ಸಾರಿಯ
ಬೆರಸಿ ತಿವಿದಾಡಿದನು ಹೆಕ್ಕಳವಿಕ್ಕಿದನು ಶಕುನಿ ೫೭

ಅರಸ ಸೋತೈ ನಾರಿಯರ ಜಯ
ಮರಳಿತಿತ್ತಲು ಮನಕೆ ಭಿತಿಯ
ಬೆರಕೆಯುಳ್ಳಡೆ ಬಿಟ್ಟು ಕಳೆ ಪೈಸರಕೆ ಸಮಯವಿದು
ಅರಸು ಪಂಥದ ವಾಸಿ ಮನಕು
ಬ್ಬರಿಸುವೊಡೆ ಪಣವೇನು ಹೇಳೈ
ಧರಣಿಪಾಲಯೆನುತ್ತ ರಿಂಗಣಗುಣಿದನಾ ಶಕುನಿ ೫೮

ಎಲವೊ ಸೌಬಲ ಪಾಂಡುವಿನ ಮ
ಕ್ಕಳು ಕಣಾ ಚತುರಂಬುನಿಧಿಮೇ
ಖಲೆಯ ಉತ್ತರ ಕುರು ನರೇಂದ್ರರ ಸೀಮೆಪರಿಯಂತ
ನೆಲವಿದೆಮ್ಮದು ನೃಪರೊಳಗೆ ನಾ
ವುಳಿಯೆ ಧರಣಿಪರಾರು ರಥ ಸಂ
ಕುಳವನೊಡ್ಡುವೆನೊಂದು ಬಾರಿಗೆ ಹತ್ತು ಸಾವಿರವ ೫೯

ಈ ರಥಕೆ ನಾಲ್ವತ್ತು ಸಾವಿರ
ವಾರುವಂಗಳ ಕೂಟವಾ ಪರಿ
ವಾರವಿದೆಲಾ ರಪಣವೆಂದನು ಸುಬಲತನಯಂಗೆ
ವೀರನಹೆಯೈ ಧರಣಿಪತಿ ತೆಗೆ
ಸಾರಿಗಳ ಬಿಡು ಸೆರೆಯ ಬಿಗಿದು ದು
ಹಾರದಲಿ ನೀ ಸೋತೆ ಹೋಗೆಂದೊದರಿದನು ಶಕುನಿ ೬೦

ಆವ ಕೌಳಿಕ ಮಂತ್ರತಂತ್ರದ
ಡಾವರದ ಡೊಳ್ಳಾಸವಿಕ್ಕಿದ
ದೀವಸದ ಬೇಳುವೆಯನೇನೆಂಬೆನು ಮಹೀಪತಿಯ
ಆವ ವಸ್ತುವನರಸನೊಡ್ಡುವ
ನಾವ ವಹಿಲದಲಾತ ಸೋಲಿಸಿ
ಕೈವಳಿಸಿದನೊ ಬಲ್ಲನಾವವನೆಂದನಾ ಮುನಿಪ ೬೧

ಅರಸ ನೀಗಿದೆ ಹತ್ತು ಸಾವಿರ
ವರ ರಥವನಿನ್ನೇನು ಸಾಕೀ
ಸರಲಿ ನಿಲುವದು ವಿತ್ತವುಂಟೇ ಮತ್ತೆ ಹೇಳೆನಲು
ಮರುಳೆ ಸೌಬಲ ಚಿತ್ರರಥನೀ
ನರಗೆ ಕೊಟ್ಟನು ತೇಜಿಗಳ ತಿ
ತ್ತಿರಿಯ ಬಣ್ಣದ ಹತ್ತು ಸಾವಿರ ತುರಗವಿವೆಯೆಂದ ೬೨

ಆಡಿದನು ನೃಪನಾ ಕ್ಷಣಕೆ ಹೋ
ಗಾಡಿದನು ಖೇಚರರ ಖಾಡಾ
ಖಾಡಿಯಲಿ ಝಾಡಿಸಿದ ಹಯವನು ಹತ್ತು ಸಾವಿರವ
ಹೂಡಿದನು ಸಾರಿಗಳ ಮರಳಿ
ನ್ನಾಡುವರೆ ಪಣವಾವುದೈ ಮಾ
ತಾಡಿಯೆನೆ ಮನದಲಿ ಮಹೀಪತಿ ಧನವ ಚಿಂತಿಸಿದ ೬೩

ಅಗಣಿತದ ಧನವುಂಟು ಹಾಸಂ
ಗಿಗಳ ಹಾಯಿಕು ಸೋತ ವಸ್ತುವ
ತೆಗೆವೆನೀಗಳೆ ಶಕುನಿ ನೋಡಾ ತನ್ನ ಕೌಶಲವ
ದುಗುಣ ಹಲಗೆಗೆ ಹತ್ತು ಮಡಿ ರೇ
ಖೆಗೆ ಗಜಾಶ್ವನಿಕಾಯ ರಥವಾ
ಜಿಗಳು ಸಹಿತಿದೆ ಸಕಲ ಸೈನಿಕವೆಂದನಾ ಭೂಪ ೬೪

ಆಯಿತಿದು ಪಣವಹುದಲೇ ನೃಪ
ಹಾಯಿಕಾ ಹಾಸಂಗಿಗಳ ಸಾ
ಹಾಯ ಕುರುಪತಿಗಿಲ್ಲ ಕೃಷ್ಣಾದಿಗಳು ನಿನ್ನವರು
ದಾಯ ಕಂದೆರೆವರೆ ಸುಯೋಧನ
ರಾಯನುಪಚಿತಪುಣ್ಯವಕಟಾ
ದಾಯವೇ ಬಾಯೆಂದು ಮಿಗೆ ಬೊಬ್ಬಿರಿದನಾ ಶಕುನಿ ೬೫

ಮತ್ತೆ ಹೇಳುವುದೇನ ಸೋಲವ
ಬಿತ್ತಿ ಬೆಳೆದನು ಭೂಪನವರಿಗೆ
ತೆತ್ತ ನೈ ಸರ್ವಸ್ವ ಧನವನು ಸಕಲ ಸೈನಿಕನ
ಮತ್ತೆ ಪಣವೇನೆನಲು ಬಳಿಕರು
ವತ್ತು ಸಾವಿರ ಕರಿಕಳಭವೆಂ
ಬತ್ತು ಸಾವಿರ ತುರಗ ಶಿಶುಗಳನೊಡ್ಡಿದನು ಭೂಪ ೬೬

ಅರಸ ಕೇಳೀ ತುರಗವೀ ರಥ
ಕರಿ ನಿಕರವೀ ಸೈನ್ಯ ಹಸ್ತಿನ
ಪುರಿಗೆ ಬಂದುದು ತಮ್ಮ ಕೂಡೆ ವಿನೋದ ಕೇಳಿಯಲಿ
ಕುರುಪತಿಯ ವಶವಾಯ್ತು ಬಳಿಕಿನ
ಮರಿಗುದುರೆ ಮರಿಯಾನೆಗಳನು
ಚ್ಚರಿಸಿ ಸಾರಿಯ ಸೋಕಿದಾಗಲೆ ಸೋತನಾ ಭೂಪ ೬೭

ಅಕಟ ಸಾಲದೆ ಜೂಜು ನಿರ್ಬಂ
ಧಕವೆ ಶಿವಶಿವ ತಾನಿದೆತ್ತಣ
ಶಕುನಿಯೆತ್ತಣ ಭರತಕುಲದ ಮಹಾ ಮಹೀಶ್ವರರು
ವಿಕಳ ಚೇಷ್ಟೆಯದೇನು ವೃದ್ಧ
ಪ್ರಕರಕಿದು ವಿಳಸವೆ ವಿಘಾತಿಗೆ
ಸಕಲಜನ ಸಮ್ಮತವೆಯೆಂದನು ಖಾತಿಯಲಿ ವಿದುರ ೬೮

ವರಪುರೂರವ ನಹುಷನವನೀ
ಶ್ವರತಿಲಕ ದುಷ್ಯಂತ ಕುರುಸಂ
ವರಣನಮಲ ಯಯಾತಿಯಾದಿ ಪರಂಪರಾಗತದ
ಭರತ ಕುಲವಿದರೊಳಗೆ ವಂಶೋ
ದ್ಧರರಿಳೆಯ ಬೆಳಗಿದರು ನೀನವ
ತರಿಸಿ ತಂದೈ ತೊಡಕನೆಂದನು ಖಾತಿಯಲಿ ವಿದುರ ೬೯

ಸೋಲ ಮಚ್ಚಿದುದಿವರನೊಡ್ಡದ
ಮೇಲೆ ಹೇರಿದುದೊಡ್ಡವೀಗಳು
ಮೇಲುಗೈ ನೀನಾದೆ ಕುಸಿದರು ಪಾಂಡು ನಂದನರು
ಸೋಲವಿದು ಕಾಲಾಂತಕನ ಮೈ
ಸಾಲ ಸಾರಿದೆನಕಟ ಸಾಕಿ
ನ್ನೇಳು ಕೌರವ ನೃಪತಿಯೆಂದನು ಖಾತಿಯಲಿ ವಿದುರ ೭೦

ಗೆಲಿದ ಧನವಕ್ಕುವುದೆ ಸೋತವ
ರಳುಕಿದವರೇ ಪಾಂಡುಪುತ್ರರ
ಬಲುಹ ಬೆಸಗೊಳ್ಳಾ ತದೀಯ ಶ್ರವಣ ದೃಷ್ಟಿಗಳ
ಎಲೆ ಸುಯೋಧನ ವಿಷದ ಮಧುರವು
ಕೊಲುವುದೋ ಮನ್ನಿಸುವುದೋ ಕ
ಕ್ಕುಲಿತೆಗಿದು ಕಡೆಹಾರವಾಗಲಿ ಸಾಕು ತೆಗೆಯೆಂದ ೭೧

ಗೆಲಿದ ದರ್ಪದ ದಡ್ಡಿ ತೆಗೆ ಸೌ
ಬಲನ ಬೀಳ್ಕೊಡು ನಿಖಿಲ ಬಾಂಧವ
ಕುಲಸಹಿತ ನೀ ಮಧುರ ವಚನದಲಿವರ ಸಂತೈಸು
ನೆಲನನೇಕಚ್ಛತ್ರದಲಿ ಹದ
ಗೊಳಿಸು ಬದುಕುವರಿದು ನಿಜಾನ್ವಯ
ದುಳಿವು ಬೆಸಗೊಳು ಬೇಹ ಹಿರಿಯರನೆಂದನಾ ವಿದುರ ೭೨

ಖೂಳನೆಂಬೆನೆ ಸಕಲ ಕಲೆಗಳ
ಬಾಳುಮನೆ ಗಡ ನಿನ್ನ ಬುದ್ಧಿ ವಿ
ಶಾಲಮತಿ ನೀನೆಂಬೆನೇ ಜಗದಜ್ಞರಧಿದೈವ
ಕೇಳಿದೊಡೆ ಮೇಣಹಿತ ಹಿತವನು
ಹೇಳುವದು ಪಾಂಡಿತ್ಯ ನಿನ್ನನು
ಕೇಳಿದವರಾರೆಂದು ಜರೆದನು ಕೌರವರ ರಾಯ ೭೩

ಹಿತವ ನೀನವರಿಗೆ ಕುಟುಂಬ
ಸ್ಥಿತಿ ವಿಡಂಬಕೆ ನಾವು ಕುಂತೀ
ಸುತರೊಡನೆ ಸಮ್ಮೇಳವೆಮ್ಮೊಳು ವೈಮನಸ್ಯಗತಿ
ಕೃತಕ ಮಾರ್ಗದ ಮೋಡಿಯಲಿ ಪರಿ
ಚಿತನು ನೀನಲ್ಲಕ್ಷ ವಿಮಲ
ಕ್ರತು ವಿಧಾನವನಕ್ಷ ದೀಕ್ಷಿತರರಿವರಿದನೆಂದ ೭೪

ನೀ ಹಿತವನೈ ಶಕುನಿ ರಾಜ
ದ್ರೋಹಿಯೈ ಹುಸಿಯಲ್ಲ ನೀನೇ
ಹೋಹುದೈ ನಿನಗಾವುದಭಿಮತವಾ ದಿಗಂತರಕೆ
ಐಹಿಕಾಮುಷ್ಠಿಕದ ವಿಭವೋ
ತ್ಸಾಹ ನಿಸ್ಪೃಹರಾವಲೇ ಸಂ
ದೇಹವೇ ನೀವರಿವಿರೆಂದನು ತೂಗಿ ತುದಿವೆರಳ ೭೫

ಗುರುಗಳುಸುರರು ಭೀಷ್ಮರೆಮ್ಮನು
ಕೆರಳಿಚರು ಕೃಪ ನುಡಿಯನಯ್ಯನ
ಕೊರಳು ಕೊಂಕದು ಬಾಹ್ಲಿಕನ ಮನ ನೋಯದಿನ್ನೆಬರ
ಹಿರಿಯರಿವರೇನಜ್ಞರೇ ನೀ
ಪರಮತತ್ವಜ್ಞಾನಿಯೇ ಕಾ
ತರಿಸದಿರು ನೀನೆಂದು ಟಕ್ಕರಿಗಳೆದನಾ ಭೂಪ ೭೬

ಇವರ ಜನಪಾಧ್ವರವನಡಹಾ
ಯ್ದವನನಾಗಳೆ ದೇವಕೀಸುತ
ಸವರಿದನು ನಮ್ಮೀ ವಿನೋದದ್ಯೂತಸಂಪದದ
ಸವನ ವಿಘ್ನ ವಿಕಾರಿಯನು ಪರಿ
ಭವಿಸುವವರನು ಕಾಣೆ ಶಿವಯೆಂ
ದವವನಿಪತಿ ನಿಜ ಹುಬ್ಬಿನಲಿ ಹೂಳಿದನು ಪರಿಚರರ ೭೭

ಮಣಿಯೆ ನೀನಿಲ್ಲೀಯನರ್ಥವ
ಕುಣಿಕೆಗೊಳಿಸಿದ ನೀ ಸಹಿತ ನಿ
ನ್ನೆಣೆಗಳಹ ಸೈಂಧವನನೀ ರಾಧೇಯ ಶಕುನಿಗಳ
ರಣದೊಳಗೆ ಭೀಮಾರ್ಜುನರ ಮಾ
ರ್ಗಣದ ಧಾರೆಗೆ ವೀರನಾರಾ
ಯಣನೆ ಸೇರಿಸಿಕೊಡುವನರಿದಿರುಯೆಂದನಾ ವಿದುರ ೭೮